ಅತೀತ ಲೋಕಕ್ಕೆ ಹೋದವರಂತೆ ಅದೇನೋ ಶಕ್ತಿ ಅವರನ್ನ ವಾಪಸ್ ಎಳೆದು ಹಿಂದಿರುಗಿ ಬಂದವರಂತೆ ಕಾಣುತ್ತಿದ್ದ ಹಲವರು ಈ ಕ್ಯಾಂಪ್ ಸೈಟಿನಲ್ಲಿದ್ದರು. ನಾವೇನೂ ಪ್ರತಿದಿನವೂ ಇಲ್ಲಿಯೇ ಕಾಲ ಹಾಕುತ್ತ ಹಗಲು ಹೊತ್ತಿನಲ್ಲಿ ನೊಣವನ್ನೂ, ಸಂಜೆಯಲ್ಲಿ ಸೊಳ್ಳೆಯನ್ನೂ ಓಡಿಸುತ್ತಾ ಕೂತಿರಲಿಲ್ಲ. ಆದರೂವೆ ಅದ್ಯಾಕೊ ಹೋದ ದಿನದಿಂದ ಹಿಡಿದು ಕ್ರಮೇಣ ದಿನ ಕಳೆದಂತೆ ನಮಗೆ ಕಥೆ ಹೇಳುವ ಮಂದಿ ಹೆಚ್ಚಾದರು. ಮೊತ್ತಮೊದಲ ಕಥೆ ಹೇಳಿದ್ದು, ನಂತರ ಎಲ್ಲರನ್ನೂ ಮೀರಿಸಿ ಅತಿ ಹೆಚ್ಚು ಕಥೆ ಹೇಳಿದ್ದು ಈ ಪಿಯಾನೊ ಸಂಗೀತಗಾರ. ಐದನೇ ದಿನ ಬೆಳ್ಳಂಬೆಳಗ್ಗೆ ಟಾಯ್ಲೆಟ್ ಬ್ಲಾಕ್ ಕಡೆ ನಡೆಯುತ್ತಿದ್ದರೆ ‘ರಾತ್ರಿ ನಡೆದ ಗಲಾಟೆ ಬಗ್ಗೆ ಕೇಳಿದ್ಯಾ?’ ಎಂದು ಈ ಅರೆಬರೆ ಪರಿಚಿತ ಪ್ರಶ್ನಿಸಿದಾಗ ಮುಚ್ಚಿದ್ದ ಅರ್ಧ ಕಣ್ಣನ್ನು ತೆರೆದು ಗಾಬರಿಯಿಂದ ಸುತ್ತಮುತ್ತ ತಡಕಲಾಡಿದ್ದೆ.
ಡಾ.ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಅಂಕಣ

 

‘ವೂಫರ್ಸ್’ ಅಂಥ ಒಂದು ಪದವಿದೆ ಅನ್ನೋದೆ ಗೊತ್ತಿರಲಿಲ್ಲ. ಹಣ್ಣು ಮಾಗಿದ ಕಾಲ ಬಂದಾಗ ಜನರು ತೋಟಗಳಿಗೆ ಹೋಗಿ ‘ಫ್ರೂಟ್ ಪಿಕ್ಕಿಂಗ್’ ಮಾಡುತ್ತಾರೆ ಅನ್ನೋ ವಿಷಯ ಗೊತ್ತಿತ್ತು. ಹೊರದೇಶಗಳಿಂದ ಪ್ರವಾಸಿಗರಾಗಿ ಬರುವ ಯುವಕ, ಯುವತಿಯರು ಆಸ್ಟ್ರೇಲಿಯಾ ಹುಚ್ಚು ಹತ್ತಿಸಿಕೊಂಡು ಇಲ್ಲೇ ಇನ್ನಷ್ಟು ತಿಂಗಳು ಇರಬೇಕೆಂದು ಬಯಸಿ ತಮ್ಮ ವೀಸಾ ಅವಧಿಯನ್ನ ಹೆಚ್ಚಿಸಿರೆಂದು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರೆ ಅವರಿಗೆ ಹಾಕುವ ಮೊಟ್ಟಮೊದಲ ಷರತ್ತು ಇಂತಿಷ್ಟು ತಿಂಗಳ ಕಡ್ಡಾಯ ಫಾರ್ಮ್ ಕೆಲಸ. ಎಲ್ಲರೂ ನಗರಗಳಿಗೇ ಬಂದು ಅವು ತುಂಬಿತುಳುಕಿದ್ದಲ್ಲದೆ ನಗರದಾಚೆ ಮತ್ತು ಗ್ರಾಮೀಣ ಪ್ರದೇಶಗಳು ಬಿಕೋ ಅಂದವಂತೆ. ಹಣ್ಣು, ತರಕಾರಿ ತೋಟಗಳಲ್ಲಿ, ಕುರಿ, ಆಕಳು, ಹಂದಿ ಫಾರ್ಮ್ ಗಳಲ್ಲಿ, ಕೃಷಿಭೂಮಿಯಲ್ಲಿ ಕೆಲಸ ಮಾಡಲು ಜನವಿಲ್ಲವಾಗಿ ಸರಕಾರ ಈ ನಿರ್ಧಾರಕ್ಕೆ ಬಂದಿತಂತೆ. ಮೂರರಿಂದ ಆರು ತಿಂಗಳು ಇಂಥ ಫಾರ್ಮ್ ಕೆಲಸವೆಂದರೆ ಹದಿಹರೆಯದ ಮಂದಿ ‘ಓಹ್, ಇಟ್ಸ್ ಎ ಲಾಟ್ ಆಫ್ ಫನ್’ ಅಂತಾರಂತೆ.

ಆದರೆ ವೂಫರ್ಸ್ ಅನ್ನೋದನ್ನ ಕೇಳಿರಲಿಲ್ಲ. ನನಗೊಬ್ಬಳಿಗೆ ಮಾತ್ರವಲ್ಲ ಅದು ಗೊತ್ತಿಲ್ಲದಿರುವುದು, ಸುಮಾರು ಸ್ಥಳೀಯರು ಕೂಡ ಅದನ್ನು ಕೇಳಿಯೇ ಇಲ್ಲ ಅನ್ನೋ ಸಮಾಚಾರ ತಿಳಿದು ಸಮಾಧಾನವಾಯ್ತು. ಸ್ವಲ್ಪ ಇಂಗ್ಲಿಷ್ ಅಕ್ಷರಗಳನ್ನ ಬಿಡಿಸಿ ಹೇಳಿ ಆ ಪದವನ್ನ ಸ್ಪಷ್ಟಪಡಿಸಿ ಗುರುಗಳೇ, ಎಂದು ಕೇಳಿಕೊಂಡೆ. ಬೆಬ್ಬೆಬ್ಬೆ ಅಂದರು. ಅವರಿಗೆ ಪೂರ್ತಿ ಅಕ್ಷರಗಳು ತಿಳಿದಿಲ್ಲವೋ ಅಥವಾ ಹೇಳುವುದು ಬೇಕಿಲ್ಲವೋ ಅನ್ನಿಸಿತು. ಬೇರೆಯವರಿಂದ ತಿಳಿದುಬಂದದ್ದು ಇಷ್ಟು. ಸ್ವಯಿಚ್ಛೆಯಿಂದ ಆಸ್ಟ್ರೇಲಿಯಾದ ಸಾವಯವ ಕೃಷಿ ಫಾರ್ಮುಗಳಲ್ಲಿ ಕೆಲಸ ಮಾಡುವ ಸ್ವಯಂಸೇವಕರು ವೂಫರ್ಸ್.

ತಾನು ಒಬ್ಬ ವೂಫರ್ ಎಂದು ನೋಂದಾಯಿಸಿಕೊಂಡು, ವೂಫರ್ಸ್ ಸಂಘದಿಂದ ಮಾಹಿತಿ ಪಡೆದು, ತನಗಿಷ್ಟವಾದ ಅಥವಾ ಒಗ್ಗುವ ಒಂದು ಫಾರ್ಮನ್ನು ಆರಿಸಿ, ಅರ್ಜಿ ಹಾಕಿಕೊಂಡು ಎಲ್ಲವೂ ಸರಿಹೊಂದಿದರೆ ಫಾರ್ಮಿನ ರೈತಕುಟುಂಬದೊಂದಿಗೆ ಅವರ ಮನೆಯಲ್ಲೊ ಅಥವಾ ಅವರು ಒದಗಿಸುವ ನಿವಾಸದಲ್ಲೋ ಕೆಲತಿಂಗಳು ವಾಸಿಸುವುದು. ದಿನಕ್ಕಿಷ್ಟು ಗಂಟೆಗಳ ಕಾಲ ಫಾರ್ಮ್ ಕೆಲಸ ಮಾಡುತ್ತಾ ಸಾವಯವ ಕೃಷಿ ಪದ್ಧತಿ, ವಿಧಾನಗಳನ್ನು ಕಲಿಯುವುದು. ಎಲ್ಲೋ ಸ್ವಲ್ಪ ಹೊಟ್ಟೆಕಿಚ್ಚಾಯಿತು. ನನ್ನಜ್ಜಿ ರೈತಾಪಿ ಹೆಣ್ಣಾದರೂ ನಾನು ಮಾತ್ರ ಅದೆಷ್ಟೇ ಬಯಸಿದರೂ, ಕೇಳಿಕೊಂಡರೂ, ಪ್ರಯತ್ನಿಸಿದರೂ ನನ್ನಪ್ಪನ ಹಟದಿಂದ ಕೃಷಿಕಳಾಗಲಿಲ್ಲ. ಒಂದಿಷ್ಟು ತೋಟಗಾರಿಕೆ ಮಾಡುವ ನನ್ನ ಹಂಬಲವೂ ನೆರವೇರಲಿಲ್ಲ.

ಹಾಗಾದ್ರೆ ಈ ಕ್ಯಾಂಪ್ ಸೈಟಿನಲ್ಲಿ ಆಗಾಗ ಕಾಣಿಸುವ ಕೆಲ ಯುವಕ-ಯುವತಿಯರು ವೂಫರ್ಸಾ? ಎಂದು ಗುರುಗಳನ್ನ ಮತ್ತೆ ಕೇಳಿದೆ. ಅವರನ್ನ ನಾನು ಗುರು ಎಂದು ಕರೆಯುವುದಕ್ಕೆ ಕಾರಣವಿದೆ. ಅವರು ನನಗೆ ಕ್ಯಾಂಪ್ ಸೈಟ್ ಅಡುಗೆಮನೆ ಅಂಗಳದಲ್ಲಿದ್ದ ಗ್ರಾಂಡ್ ಪಿಯಾನೊ ಬಗ್ಗೆ ತಿಳುವಳಿಕೆ ನೀಡಿ ಎರಡು ಗಂಟೆಗಳ ಕಾಲ ಉಚಿತ ಸಂಗೀತ ಪಾಠವನ್ನು ಕೊಟ್ಟವರು. ಜೀವನದಲ್ಲಿ ಆಗಾಗ್ಗೆ ಪಿಯಾನೊವನ್ನು ಕಂಡಿದ್ದರೂ, ನನ್ನ ಕೆಲ ಆಸ್ಟ್ರೇಲಿಯನ್ ಸ್ನೇಹಿತೆಯರು ಪಿಯಾನೊ ಪಟುಗಳಾಗಿದ್ದರೂ ಅದ್ಯಾಕೊ ನಾನು ಪಿಯಾನೊವನ್ನ ಯಾವತ್ತೂ ಮುಟ್ಟಿರಲಿಲ್ಲ. ಅದೇನೋ ಹೇಗೋ ಅದನ್ನು ಅವತ್ತು ನುಡಿಸಿ ಒಂದಿಷ್ಟು ತರಂಗಗಳನ್ನೆಬ್ಬಿಸಿದ್ದೆ.

ಆ ದಿನ ನಾನು ಪಿಯಾನೊವನ್ನ ಮುಟ್ಟುವ ಮುಂಚೆ ಈ ಗುರುಗಳು ತಮ್ಮ ನೀಳ ಬೆರಳುಗಳ ನರ್ತನದಿಂದ ಅರ್ಧ ಗಂಟೆ ಕಾಲ ಅದೆಂಥ ಮಾಂತ್ರಿಕ ರಾಗಗಳನ್ನು, ಸಂಗೀತದ ಅಲೆಗಳನ್ನು ಹೊರಹೊಮ್ಮಿಸಿದ್ದರೆಂದರೆ ಅದನ್ನು ಕೇಳುತ್ತ ನಾವು ಹಲವರು ಅಡುಗೆಮನೆಯಾಚೆ ಬದಿ ನೆರೆದಿದ್ದೆವು. ಒಂದಿಬ್ಬರ ಕಣ್ಣಿಂದ ನೀರು ಸುರಿಯುತ್ತಿತ್ತು. ನನ್ನ ಕಣ್ಣುಗಳಲ್ಲಿ ನೀರಿನ ಪೊರೆ ದಟ್ಟವಾಗಿ ಅದು ಇನ್ನೇನು ಕೋಡಿ ಹರಿಯುವಂತಿತ್ತು. ಕ್ಯಾಂಪ್ ಸೈಟ್ ಮ್ಯಾನೇಜರ್ ಬ್ರಾವೋ, ಒನ್ಸ್ ಮೋರ್ ಎಂದು ಚಪ್ಪಾಳೆ ಹೊಡೆದಾಗಲೇ ನಮಗೆ ಪಿಯಾನೋ ಸಂಗೀತ ನಿಂತದ್ದು ಅರಿವಿಗೆ ಬಂದದ್ದು. ಗುರುಗಳು ಕಣ್ಣುಗಳನ್ನ ಬಿಡಿಸಿ ‘ವೆಲ್, ದಟ್ಸ್ ಇಟ್,’ ಅಂದುಬಿಟ್ಟು, ಬಡಕಲು ದೇಹವನ್ನು ಅತ್ತಕಡೆ ಸಾಗಿಸಿಕೊಂಡು ಹೋಗಿ ಸಿಗರೇಟನ್ನ ಹಚ್ಚಿನಿಂತರು. ಅವರ ಕಣ್ಣು ಆಕಾಶದಲ್ಲಿ ನೆಟ್ಟಿದ್ದರೂ ಅದ್ಯಾವುದೋ ಅತೀತ ಲೋಕಕ್ಕೆ ಹೋದವರಂತೆ ಕಾಣುತ್ತಿದ್ದರು.

ಅತೀತ ಲೋಕಕ್ಕೆ ಹೋದವರಂತೆ ಅದೇನೋ ಶಕ್ತಿ ಅವರನ್ನ ವಾಪಸ್ ಎಳೆದು ಹಿಂದಿರುಗಿ ಬಂದವರಂತೆ ಕಾಣುತ್ತಿದ್ದ ಹಲವರು ಈ ಕ್ಯಾಂಪ್ ಸೈಟಿನಲ್ಲಿದ್ದರು. ನಾವೇನೂ ಪ್ರತಿದಿನವೂ ಇಲ್ಲಿಯೇ ಕಾಲ ಹಾಕುತ್ತ ಹಗಲು ಹೊತ್ತಿನಲ್ಲಿ ನೊಣವನ್ನೂ, ಸಂಜೆಯಲ್ಲಿ ಸೊಳ್ಳೆಯನ್ನೂ ಓಡಿಸುತ್ತಾ ಕೂತಿರಲಿಲ್ಲ. ಆದರೂವೆ ಅದ್ಯಾಕೊ ಹೋದ ದಿನದಿಂದ ಹಿಡಿದು ಕ್ರಮೇಣ ದಿನ ಕಳೆದಂತೆ ನಮಗೆ ಕಥೆ ಹೇಳುವ ಮಂದಿ ಹೆಚ್ಚಾದರು. ಮೊತ್ತಮೊದಲ ಕಥೆ ಹೇಳಿದ್ದು, ನಂತರ ಎಲ್ಲರನ್ನೂ ಮೀರಿಸಿ ಅತಿ ಹೆಚ್ಚು ಕಥೆ ಹೇಳಿದ್ದು ಈ ಪಿಯಾನೊ ಸಂಗೀತಗಾರ. ಐದನೇ ದಿನ ಬೆಳ್ಳಂಬೆಳಗ್ಗೆ ಟಾಯ್ಲೆಟ್ ಬ್ಲಾಕ್ ಕಡೆ ನಡೆಯುತ್ತಿದ್ದರೆ ‘ರಾತ್ರಿ ನಡೆದ ಗಲಾಟೆ ಬಗ್ಗೆ ಕೇಳಿದ್ಯಾ?’ ಎಂದು ಈ ಅರೆಬರೆ ಪರಿಚಿತ ಪ್ರಶ್ನಿಸಿದಾಗ ಮುಚ್ಚಿದ್ದ ಅರ್ಧ ಕಣ್ಣನ್ನು ತೆರೆದು ಗಾಬರಿಯಿಂದ ಸುತ್ತಮುತ್ತ ತಡಕಲಾಡಿದ್ದೆ.

ಏಳನೇ ದಿನ ಸಂಜೆ ಅಡುಗೆಮನೆಯಂಗಳದಲ್ಲಿ ಕೂತು ತರಕಾರಿ ಹೆಚ್ಚುತ್ತಾ ‘ಸರಿ, ನಿನ್ನೆ ನಡೆದ ಕಾರುಬಾರುಗಳನ್ನ ಹೇಳಿ’ ಎಂದು ಕೇಳಿದಾಗ ‘ನಾನೊಳ್ಳೆ ಟೀಚರ್ ಆದೆನೇ’ ಎಂದು ಜೋರಾಗಿ ನಕ್ಕರು. ‘ಯಾಕಾಗಬಾರದು? ಪ್ರತಿಯೊಬ್ಬ ಟೀಚರ್ ಕತೆ ಹೇಳುತ್ತಾರೆ. ಕಲಿಸುವುದಲ್ಲದೆ ತಾವೂ ಕಲಿಯುತ್ತಾರೆ. ಆ ಲೆಕ್ಕದಲ್ಲಿ ಪ್ರತಿ ಕತೆಗಾರನೂ/ಳೂ ಗುರುವೇ ಸರಿ’ ಎಂದೆ. ‘ದಟ್ಸ್ ರೈಟ್. ಐ ಲೈಕ್ ಇಟ್. ನಾವೆಲ್ಲರೂ ಒಬ್ಬರಿಗೊಬ್ಬರ ಕತೆಗಾರರೂ, ಗುರುಗಳೂ ಆಗಿರುತ್ತೀವಿ,’ ಅನ್ನುತ್ತಾ ವೂಫರ್ಸ್ ಕಥೆ, ಅಲ್ಲಿದ್ದ ಅಬರಿಜಿನಲ್ ಜನರ ಕಥೆ, ತಮ್ಮ ಮತ್ತು ಕ್ಯಾಂಪ್ ಸೈಟ್ ಆತ್ಮಚರಿತ್ರೆಗಳನ್ನ ಹೇಳಿದ್ದರು.

ಇಲ್ಲಿರುವ ವೂಫರ್ಸುಗಳೆಲ್ಲ ಏನನ್ನು ಬೆಳೆಯುತ್ತಿದ್ದಾರೆ? ತಲೆಯಲ್ಲಿ ಕೊರೆಯುತ್ತಿದ್ದ ಗುಮಾನಿಯನ್ನು ಹೊರಬಿಟ್ಟೆ. ಯಾವ ಹಣ್ಣು, ತರಕಾರಿ ಮಣ್ಣಂಗಟ್ಟಿಯೂ ಅಲ್ಲಿರಲಿಲ್ಲ. ಸೊಗಸಾದ ಮಣ್ಣಿತ್ತು ಅನ್ನೋದು ನಿಜ. ಆ ಮಣ್ಣಿನ ಗುಣದಿಂದಾಗಿ ಈಗಿನ ಫಾರ್ಮ್ ಮಾಲೀಕರ ಹಿರಿಯರ ಕಾಲದಲ್ಲಿ ಅದೊಂದು ಹಣ್ಣು ಮತ್ತು ಕಾಯಿಗಳನ್ನು ಬೆಳೆದು ದೊಡ್ಡಪ್ರಮಾಣದಲ್ಲಿ ಉತ್ಪಾದಿಸುತ್ತಿದ್ದ ಹೆಸರುವಾಸಿ ಸ್ಥಳವಾಗಿತ್ತು. ಹಿರೀಕರ ಕಾಲದಲ್ಲಿ ಶ್ರೀಮಂತವಾಗಿದ್ದ ಫಾರ್ಮ್ ಮತ್ತು ಕುಟುಂಬ ಮುಂದಿನ ಪೀಳಿಗೆಯ ಮಕ್ಕಳ ಕಾಲದಲ್ಲಿ ಅವರುಗಳ ಚೇಷ್ಟೆಯಿಂದ ಬಳಲಿ, ಸೊರಗಿ, ಒಣಗಿ ಅಲ್ಲಿಯ ಹಣ್ಣು, ಕಾಯಿ ಉತ್ಪಾದನೆ ನಿಂತು ಈಗಿನ ಅರೆಬರೆ ಕಾಡು-ಮೇಡು ಸ್ಥಿತಿಗೆ ಇಳಿದಿತ್ತು.

ಆ ದಿನ ನಾನು ಪಿಯಾನೊವನ್ನ ಮುಟ್ಟುವ ಮುಂಚೆ ಈ ಗುರುಗಳು ತಮ್ಮ ನೀಳ ಬೆರಳುಗಳ ನರ್ತನದಿಂದ ಅರ್ಧ ಗಂಟೆ ಕಾಲ ಅದೆಂಥ ಮಾಂತ್ರಿಕ ರಾಗಗಳನ್ನು, ಸಂಗೀತದ ಅಲೆಗಳನ್ನು ಹೊರಹೊಮ್ಮಿಸಿದ್ದರೆಂದರೆ ಅದನ್ನು ಕೇಳುತ್ತ ನಾವು ಹಲವರು ಅಡುಗೆಮನೆಯಾಚೆ ಬದಿ ನೆರೆದಿದ್ದೆವು. ಒಂದಿಬ್ಬರ ಕಣ್ಣಿಂದ ನೀರು ಸುರಿಯುತ್ತಿತ್ತು.

ಒಂದರ್ಥದಲ್ಲಿ ನೋಡಿದರೆ ಇದು ಆಸ್ಟ್ರೇಲಿಯಾದಲ್ಲಿ ಇಪ್ಪತ್ತನೇ ಶತಮಾನದ ಎರಡನೇ ಭಾಗದಲ್ಲಾದ ಅನೇಕ ಬದಲಾವಣೆಗಳಿಗೆ ಕನ್ನಡಿ ಹಿಡಿದಿತ್ತು. ದೇಶದಾದ್ಯಂತ ಹರಡಿದ್ದ ಮೂಲನಿವಾಸಿ ಸಮುದಾಯಗಳನ್ನು ಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನಗಳ ಕಾಲಘಟ್ಟಗಳಲ್ಲಿ ಸಂಪೂರ್ಣವಾಗಿ, ಬುಡಸಮೇತ ಕಿತ್ತೆಸೆದು ಪ್ರಾದೇಶಿಕವಾಗಿ ನೆಲೆಸಿದ್ದ ಪಾಳೆಗಾರಿಕೆ ಬ್ರಿಟಿಷ್/ಯುರೋಪಿಯನ್ನರು ಸಮೃದ್ಧಿ, ಸಂಪತ್ತು ಕಂಡಿದ್ದರು. ಕೃಷಿ, ಹೈನುಗಾರಿಕೆ, ಮೀನುಸಾಗಣೆ ಮತ್ತು ತೋಟಗಾರಿಕೆ ಕ್ಷೇತ್ರಗಳಲ್ಲಿ ಒಳ್ಳೆ ಹಿಡಿತ ಸಾಧಿಸಿದ್ದರು. ಶ್ರೀಮಂತ ಕುಟುಂಬಗಳ ಮಕ್ಕಳು ಬ್ರಿಟನ್ ಮತ್ತು ಯುರೋಪಿನ ಬೋರ್ಡಿಂಗ್ ಶಾಲೆಗಳಲ್ಲಿ ಓದುತ್ತಾ ಬೆಳೆಯುತ್ತಿದ್ದರು. ವಯಸ್ಕರಾಗಿ ಆಸ್ಟ್ರೇಲಿಯಾಗೆ ವಾಪಸ್ ಬಂದ ಅನೇಕರಿಗೆ ಬ್ರಿಟನ್ ಮತ್ತು ಯೂರೋಪಿನ ಅಸ್ಮಿತೆಯಿತ್ತೆ ವಿನಃ ತವರೂರು ಆಸ್ಟ್ರೇಲಿಯಾದ ಮಣ್ಣು ಅವರಿಗೆ ಅಂಟಿಕೊಳ್ಳಲಿಲ್ಲ. ಈ ಹೊಸ ಯುವ ಪೀಳಿಗೆಯ ಕೈಗೆ ಬಂದ ತೋಟ ಮತ್ತು ಕೃಷಿಗಳನ್ನು ನಿರ್ವಹಿಸುವ, ಅವನ್ನು ಮತ್ತಷ್ಟು ಸಮೃದ್ಧಿ ಪಡಿಸುವ ಸ್ಥಳೀಯ ಗುಣಗಳು ಅವರ ಮೈಮನಸ್ಸಿನಲ್ಲಿ ಇರಲಿಲ್ಲ. ಶ್ರೀಮಂತ ಕುಟುಂಬಗಳಲ್ಲಿ ಗುಲಾಮರಾಗಿದ್ದ ಮೂಲನಿವಾಸಿಗಳ ಸಂಖ್ಯೆ ಕ್ಷೀಣಿಸಿತ್ತು. ಕಷ್ಟಪಟ್ಟು ದುಡಿಯುವವರು ಕಡಿಮೆಯಾದರು.

೧೯೫೦ ರ ನಂತರದ ದಶಕಗಳಲ್ಲಿ ಹಿಪ್ಪಿ ಸಂಸ್ಕೃತಿ ಇಲ್ಲಿಗೂ ಬಂತು. ಅದೇ ವೇಳೆಗೆ ಮೂಲನಿವಾಸಿಗಳು ತಮ್ಮ ಹಕ್ಕುಗಳಿಗಾಗಿ ಎಡಬಿಡದೆ ಹೋರಾಡಿದರು. ಹಿಪ್ಪಿ ಸಂಸ್ಕೃತಿಯನ್ನಪ್ಪಿದ್ದ ಶ್ರೀಮಂತ ಕುಟುಂಬಗಳ ಕಿರಿಯರ ಕೈಹಿಡಿದು ನಡೆಸುವ ದಾರಿದೀಪಗಳು ನಂದಿದವು. ಅವರಿಗೆ ನಾನಾ ಮಾರ್ಗಗಳ ಮೂಲಕ ತಮ್ಮ ಜೀವನದರ್ಥವನ್ನು ಹುಡುಕುವ ಚಟ ಅಂಟಿಕೊಂಡಿತು. ಈ ಎಲ್ಲದರ ಚಕ್ರಸುಳಿಗೆ ಹಲವು ಫಾರ್ಮ್ ಗಳು ಬಲಿಯಾದವು. ಅವುಗಳಲ್ಲಿ ನಾವು ಬಂದಿಳಿದು ಟೆಂಟ್ ಹೂಡಿದ್ದ ಫಾರ್ಮ್ ಕೂಡ ಒಂದು. ಅದರ ಹಿಂದಿನ ಮಾಲೀಕರ ಇಂದಿನ ಮಕ್ಕಳು ಯಾವತ್ತೂ ಯಾವ ರೀತಿಯ ‘ಕೆಲಸ’ವನ್ನೂ ಮಾಡದೇ ಬೆಳೆದವರು. ಹಿರೀಕರು ಹೋದ ಮೇಲೆ ಫಾರ್ಮ್ ಪಾಳು ಬಿದ್ದು ಅದರ ಕೆಲ ಭಾಗಗಳನ್ನು ಮಾತ್ರ ಉಪಯೋಗಿಸುತ್ತಾ ಕಿರಿಯ ಪೀಳಿಗೆ ಅವರ ಜೀವನ ನಿರ್ವಹಣೆಗಾಗಿ ಹೆಣಗಾಡುತ್ತಿತ್ತು. ಅರವತ್ತರಾಚಿನ ವಯಸ್ಸಿನ ಈಗಿನ ಪೀಳಿಗೆಯ ಈ ಮಾಲೀಕರು ಮತ್ತು ಆಗಾಗ ಬದಲಾಗುವ ಅವರ ಫಾರ್ಮ್ ನಿರ್ವಹಣಾ ಸಿಬ್ಬಂದಿ ಇಲ್ಲಿಗೆ ಬರುವ ನಮ್ಮಂತಹವರಿಗೆ ‘ಒಂದಾನೊಂದು ಕಾಲದಲ್ಲಿ’ ಕಥೆಗಳನ್ನು ಹೇಳುತ್ತಾರೆ. ಆರಂಭದಲ್ಲಿ ಒಂದೆರೆಡು ಕಥೆಗಳನ್ನ ಕೇಳಿದ ನನ್ನ ಮಕ್ಕಳು ‘ಇದು ಎಂಥಾ ಲೋಕವಮ್ಮ?’ ಅಂದದ್ದಕ್ಕೆ ನಾನು ಹುಸಿಮುನಿಸು ತೋರಿ ‘ಇದುವೇ ನಿಮ್ಮ ಕರ್ಮಭೂಮಿ ಆಸ್ಟ್ರೇಲಿಯಾ ಕಣ್ರೊ,’ ಅಂದುಬಿಟ್ಟೆ. ‘ಡಿಡ್ ಯು ಸೇ ಕಾರ್ಮ?’ ಎಂದಿದ್ದರು ಪಿಯಾನೊ ಸಂಗೀತಗಾರರು.

‘ಸರಿ, ಸಾವಯವ ತರಕಾರಿ ಹಣ್ಣು ಬೆಳೆವ ಜಾಗ ಯಾವುದು ಹೇಳಿ’, ಅಂತ ಮತ್ತೆ ಕೇಳಿದೆ. ಸದ್ಯಕ್ಕೆ ವೂಫರ್ಸ್ ಯಾವುದೇ ಸಾವಯವ ಕೃಷಿಯನ್ನ ಕೈಗೊಂಡಿಲ್ಲವಂತೆ. ಅತ್ತ ಕಡೆ ಪಾಸ್ತಾ ಬೇಯಿಸುತ್ತ ನಿಂತಿದ್ದ ಜೀಬಿಗೆ ನೆತ್ತಿ ಹತ್ತಿತು. ‘ಅಯ್ಯೋ ದೇವರೇ, ಅವರ ವೀಸಾ ಕಂಡಿಷನ್ ಇದೆಯಲ್ಲ?’ ಎಂದು ನಾನು ಜ್ಞಾಪಿಸಿದರೆ ಬೊಗಸೆ ಕೈಯಲ್ಲಿ ಮುಖವಿಟ್ಟು ಕೂತು ಗುರುಗಳು ಭಾವಪೂರಿತರಾದರು. ಅವರು ಹೇಗಾದರೂ ಮಾಡಿ ಹಣ ಹೊಂದಿಸಿಕೊಂಡು ಅಲ್ಲಿರುವ ವೂಫರ್ಸ್-ಗಳಿಗೆಲ್ಲಾ ಅವರ ವೀಸಾ ಅವಧಿಯನ್ನ ಮತ್ತಷ್ಟು ಹೆಚ್ಚಿಸುವುದೋ ಇಲ್ಲಾ ಅವರಿಗೆ ಖಾಯಂ ನಿವಾಸಿ ವೀಸಾವನ್ನ ಕೊಡಿಸುವ ಗುರಿಯಿದೆಯಂತೆ. ಮದುವೆ, ಹೆಂಡತಿ, ಮಕ್ಕಳಿಲ್ಲದ ಮಾಲೀಕರ ಕನಸನ್ನ ಮುಂದುವರೆಸುವ ಪೀಳಿಗೆಯವರು ಈ ಹದಿಹರೆಯದ ವೂಫರ್ಸ್-ಗಳೇ ಅಂತೆ. ಅವರಿಂದಲೇ ಕಳೆದುಹೋಗಿರುವ ಈ ಫಾರ್ಮ್, ಅನಾಥವಾಗಿರುವ ಗುಡ್ಡಬೆಟ್ಟ, ಕೆರೆ, ಕಾಡು ಎಲ್ಲವೂ ಉಳಿಯುವುದು ಎಂದು ಗುರುಗಳ ಅಂತರಾತ್ಮ ಹೇಳುತ್ತಿದೆಯಂತೆ. ಈ ವಿಷಯವನ್ನು ಮಾಲೀಕರ ಜೊತೆ ಸಾಕಷ್ಟು ಚರ್ಚಿಸಿದ್ದಾರಂತೆ.

ಅವರೇನಂದರು? ‘ಒಳ್ಳೆ ಪ್ರಶ್ನೆಯಾಯ್ತಲ್ಲ?!’ ಎಂದು ಕ್ಷಣ ಸುಮ್ಮನಾದರೂ ಕಥೆ ಮುಂದುವರೆಸಿದರು. ವಿಶಾಲವಾದ ಈ ಫಾರ್ಮಿನ ಭೂಮಿಯಲ್ಲಿ ಅಲ್ಲಲ್ಲಿ ಅಬರಿಜಿನಿಗಳು ವಾಸಿಸುತ್ತಿದ್ದಾರೆ. ಅವರಲ್ಲಿನ ಕೆಲವರ ಹಿರೀಕರು ಒಂದಾನೊಂದು ಕಾಲದಲ್ಲಿ ಇದೇ ಜಾಗದಲ್ಲೇ ಬಾಳುತ್ತಿದ್ದವರು. ಅವರಲ್ಲಿನ ಇನ್ನೂ ಹಲವರಿಗೆ ಮನೆಮಠ ಏನೂ ಇಲ್ಲ. ಹಾಗಾಗಿ ದಯಾಮಯಿ ಮಾಲೀಕರು ಅವರನ್ನ ಪ್ರಶ್ನಿಸಿಲ್ಲ. ಒಮ್ಮೊಮ್ಮೆ ಕೋಪಿಸಿಕೊಂಡು ನನ್ನ ಫಾರ್ಮ ಬಿಟ್ಟು ತೊಲಗಿ ಹಾಳಾಗಿಹೋಗಿ ಎಂದು ಕೂಗಾಡಿ ಪೊಲೀಸರಿಗೆ ದೂರು ಕೊಡುತ್ತಾರೆ. ವಿಚಾರಣೆಗೆ ಬಂದು ಕಾಟ ಕೊಡುವ ಪೊಲೀಸರಿಗೆ, ಜೋಲುಮುಖ ಹಾಕಿಕೊಂಡ ಅನಾಥ ಅಬರಿಜಿನಿಗಳಿಗಿಬ್ಬರಿಗೂ ಏಕಕಾಲದಲ್ಲಿ ಸಮಾಧಾನ ಹೇಳುತ್ತಾರೆ. ಹಾದಿಯಿಲ್ಲದ ಬದಿಗಳಲ್ಲಿ ಕಾಡುಮರಗಳೊಡನೆ ವಾಸಿಸುತ್ತಾ ಕೆಲ ಯುವಕಯುವತಿಯರು ಸಂಗೀತ, ತಪಸ್ಸು, ಧ್ಯಾನ ಮಾಡುತ್ತಾ ಜೀವಿಸುತ್ತಿದ್ದಾರೆ. ಅವರ ಕೆಲ ಸ್ನೇಹಿತರು ವರ್ಷದಲ್ಲಿ ಒಂದಿಷ್ಟು ತಿಂಗಳು ಇಲ್ಲಿ ಬಂದಿದ್ದು ಅವರ ಜೀವನಪಥವನ್ನು ಧ್ಯಾನಿಸುತ್ತ ತಮ್ಮ ಚೇತನ ಉದ್ಭೋಧ ಹುಡುಕಾಟದ ಯೋಗಿಗಳಾಗುತ್ತಾರೆ. ಇವರ್ಯಾರೂ ನಮ್ಮೆದುರಿಗೆ ಬರುವುದಿಲ್ಲ.

ಇಲ್ಲಿರುವ ಇನ್ನೊಂದಷ್ಟು ಹದಿಹರೆಯದವರು ಮಾಲೀಕರಿಗೆ ಸಹಾಯ ಮಾಡುವ ಸ್ವಯಂಸೇವಕರು, ಅವರ ಲೀಡರ್ ಎರಡು ದಿನಗಳ ಹಿಂದೆ ಮಾಲೀಕರೊಡನೆ ವಾದ ಮಾಡಿದ್ದನ್ನ ನಾವೆಲ್ಲಾ ನೋಡಿದ್ದೆವು. ಅವನ ಮೇಲೆ ಮಾಲೀಕರಿಗೆ ಮಮತೆಯೇ ವಿನಃ ಕೋಪವಿಲ್ಲ. ಅವರಲ್ಲಿನ ಯುವತಿಯೊಬ್ಬಳು ಹೆರಿಗೆಗೆಂದು ಆಸ್ಪತ್ರೆ ಸೇರಿದ್ದಾಳೆ. ಫಾರ್ಮಿನಲ್ಲಿ ವಾಸಿಸುತ್ತಿರುವ ಎಲ್ಲರೂ ಸೇರಿ ಹುಟ್ಟಲಿರುವ ಮಗುವಿಗೆ ಅದೂಇದೂ ಕೊಂಡಿದ್ದಾರೆ. ಇವರಲ್ಲದೆ, ಸ್ಥಳೀಯ ಪಟ್ಟಣಗಳಲ್ಲಿ ಮನೆಬಾಡಿಗೆ ಜಾಸ್ತಿ ಎಂದು ಮತ್ತೆ ಕೆಲವರು ಅಧಿಕೃತವಾಗಿ ಮಾಲೀಕರ ಅನುಮತಿ ಪಡೆದೇ ಇಲ್ಲಿ ಕ್ಯಾರವ್ಯಾನ್ ಹಾಕಿಕೊಂಡು ಬದುಕುತ್ತಿದ್ದಾರೆ.

ಮಾಮೂಲಿ ಜನರಂತೆ ಇವರು ಉದ್ಯೋಗಿಗಳು. ವಾಸ ಮಾತ್ರ ಈ ಹಸಿರುವನದಲ್ಲಿ. ಅಲ್ಲೊಂದು ವ್ಯಾನಿನಲ್ಲಿ ವಾಸಿಸುತ್ತಿರುವವ ಸ್ಥಳೀಯ ಅಬರಿಜಿನಲ್. ಅವನು ಕೆಲಸ ಮಾಡುತ್ತಾ ವಾಸಿಸಿದ್ದ ಪಕ್ಕದ ಊರಿನ ಫಾರ್ಮಿಗೆ ಮಾಲೀಕರು ಹಿಂದಿರುಗಿದ್ದರಿಂದ ಅವನಿಗೆ ನೆಲೆಯಿಲ್ಲದಂತಾಯ್ತು. ಕರುಣಾಮಯಿ ಈ ಮಾಲೀಕರು ಸಣ್ಣದೊಂದು ಕೆಲಸವನ್ನು ಕೊಟ್ಟರೆ ಅವನು ಇಲ್ಲಿಯೇ ಖಾಯಂ ಇರಬಹುದು.

ನಾನೂ ಕೂಡ ಯಾವುದೋ ಅತೀತ ಲೋಕಕ್ಕೆ ಹೋಗಲು ಟಿಕೆಟ್ ಪಡೆದಂತೆ ಭಾಸವಾಯಿತು. ಆಸ್ಟ್ರೇಲಿಯಾ ತನಗಿರುವ ಮುಖವಾಡಗಳನ್ನ ಮರೆಮಾಚಿ ಇಷ್ಟು ದಿನ ತನ್ನ ಚೆನ್ನಾದ ಮುದ್ದುಮುಖವನ್ನ ಮಾತ್ರ ತೋರಿಸಿ ಮೋಸಮಾಡಿದೆ ಅನ್ನಿಸಿಬಿಟ್ಟಿತು.