ಜೀವನದಲ್ಲಿ ಆಗಾಗ ಬದಲಾವಣೆಗಳನ್ನು ತಂದಾಗ ಅದು ಖಂಡಿತ ಒಂದು ಹೊಸ ಚೈತನ್ಯವನ್ನು ಹುಟ್ಟುಹಾಕುತ್ತದೆ. ನನಗೆ ಜೀವನ ಒಂದೇ ಗತಿಯಲ್ಲಿ ಅಥವಾ ಲಯದಲ್ಲಿ ಹೋಗುತ್ತಿದ್ದರೆ ಏನೋ ಇರಿಸುಮುರುಸು! ಮತ್ತೊಂದು ಹೊಸ ಯೋಜನೆ ಶುರು ಮಾಡಿರುತ್ತೇನೆ. ಹಾಗಂತ ಏನೇನೋ ಮಾಡೋದು ಅಂತಲ್ಲ. ನನ್ನ ಗುರಿ ಮಾತ್ರ ಅದೇ ಇತ್ತು. ಆ ದಾರಿಯಲ್ಲೇ ಇದು ನನ್ನ ಮತ್ತೊಂದು ಹೆಜ್ಜೆಯಾಗಿತ್ತು. ಈ ಗ್ರಾಮ ವಾಸ್ತವ್ಯ ಎಂಬ ಬದಲಾವಣೆ ನನ್ನಲ್ಲಿ ಹೊಸ ಉತ್ಸಾಹ ತಂದಿತ್ತು. ನನ್ನ ಕಂಫರ್ಟ್ ಜೋನ್ ನಿಂದ ಎದ್ದು ಹೊರ ಬಂದಿದ್ದೆ. ಎಂದೂ ಮಾಡಲಾಗದಿದ್ದನ್ನು ಮಾಡುತ್ತಿದ್ದೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ

ಬಾಡಿಗೆ ಮನೆ ಹುಡುಕುವ ಸಲುವಾಗಿ ನಾಗಣ್ಣನ ಜೊತೆಗೆ ನಾನು ಬೆಂಗಳೂರಿನಿಂದ ಮತ್ತೆ ಹಳ್ಳಿಗೆ ಬಂದೆ. ಈ ಸಲ ನನ್ನ ಕಾರಿನಲ್ಲಿಯೇ ಕರೆದು ತಂದೆ. ನಾಗಣ್ಣನ ಜಿಪ್ಸಿ ಎಂಬ ರೋಲರ್ ಕೋಸ್ಟರ್ ರೈಡ್ ನಲ್ಲಿ ಬರಲು ಯಾರಿಗೆ ತಾನೇ ಧೈರ್ಯ ಇತ್ತು?! ಬಸ್ ಅಥವಾ ರೈಲಿನಲ್ಲಿ ಬರುವ ಅನುಕೂಲತೆ ಇತ್ತಾದರೂ, ಕಾರಿನಲ್ಲೇ ಬರುವುದಕ್ಕೆ, ಆಗಲೇ ಮಳೆ ಶುರುವಾಗಿತ್ತು ಅನ್ನೋದು ಒಂದು ನೆಪವಾಗಿತ್ತು. ಅದೂ ಅಲ್ಲದೆ ಬೆಂಗಳೂರಿನಿಂದ ಹಳ್ಳಿಗೆ ತರಲು ನಮ್ಮ ಜೊತೆಗೆ ಸಿಕ್ಕಾಪಟ್ಟೆ ಸಾಮಾನು ಸರಂಜಾಮುಗಳೂ ಇದ್ದವು. ಹಳ್ಳಿಯಲ್ಲೊಂದು ಹೊಸ ಸಂಸಾರ ಶುರು ಮಾಡಬೇಕಿತ್ತಲ್ಲ… ಅದೂ ನಾಗಣ್ಣನ ಜೊತೆ!

ಜೀವನದಲ್ಲಿ ಆಗಾಗ ಬದಲಾವಣೆಗಳನ್ನು ತಂದಾಗ ಅದು ಖಂಡಿತ ಒಂದು ಹೊಸ ಚೈತನ್ಯವನ್ನು ಹುಟ್ಟುಹಾಕುತ್ತದೆ. ನನಗೆ ಜೀವನ ಒಂದೇ ಗತಿಯಲ್ಲಿ ಅಥವಾ ಲಯದಲ್ಲಿ ಹೋಗುತ್ತಿದ್ದರೆ ಏನೋ ಇರಿಸುಮುರುಸು! ಮತ್ತೊಂದು ಹೊಸ ಯೋಜನೆ ಶುರು ಮಾಡಿರುತ್ತೇನೆ. ಹಾಗಂತ ಏನೇನೋ ಮಾಡೋದು ಅಂತಲ್ಲ. ನನ್ನ ಗುರಿ ಮಾತ್ರ ಅದೇ ಇತ್ತು. ಆ ದಾರಿಯಲ್ಲೇ ಇದು ನನ್ನ ಮತ್ತೊಂದು ಹೆಜ್ಜೆಯಾಗಿತ್ತು. ಈ ಗ್ರಾಮ ವಾಸ್ತವ್ಯ ಎಂಬ ಬದಲಾವಣೆ ನನ್ನಲ್ಲಿ ಹೊಸ ಉತ್ಸಾಹ ತಂದಿತ್ತು. ನನ್ನ ಕಂಫರ್ಟ್ ಜೋನ್ ನಿಂದ ಎದ್ದು ಹೊರ ಬಂದಿದ್ದೆ. ಎಂದೂ ಮಾಡಲಾಗದಿದ್ದನ್ನು ಮಾಡುತ್ತಿದ್ದೆ.

ಈ ನಮ್ಮ ಹೊಸ ಸಂಸಾರಕ್ಕೆ ಒಂದಿಷ್ಟು ಸೂತ್ರಗಳನ್ನೂ ಮಾಡಿದ್ದೆ. ಹೆಂಡತಿ ಮಕ್ಕಳನ್ನು ಬಿಟ್ಟು ದೂರ ಇರುವ ನಾವುಗಳು ಅಂಕೆಯಿಲ್ಲದ ಹಡಗಿನಂತೆ ಆಗಬಾರದು ಎಂಬ ಉದ್ದೇಶ ಅದರ ಹಿಂದೆ ಇತ್ತು. ಯಾಕೆಂದರೆ ನನ್ನ ಜೀವನದ ನಾವೆಯನ್ನು ನಿರ್ದೇಶಿಸುವ ಕ್ಯಾಪ್ಟನ್ ಆಶಾ ಬೆಂಗಳೂರಿನಲ್ಲೇ ಇದ್ದಳಲ್ಲ!
ನಿಯಮಗಳು ಹೀಗಿದ್ದವು.

1. ಊಟಕ್ಕೆ ಮನೆಯಲ್ಲಿಯೇ ಅಡಿಗೆ ಮಾಡಿಕೊಳ್ಳುವುದು.
2. ಹೋಟೆಲ್ ಊಟಕ್ಕೆ ತುಂಬಾ ಅನಿವಾರ್ಯ ಅನಿಸಿದರೆ ಮಾತ್ರ ಹೋಗಬಹುದು.
3. ಯಾರೇ ಹುಡುಗರಿಗೆ ಬೀಡಿ-ಸಿಗರೇಟು, ತಂಬಾಕು ಚಟಾದಿಗಳು ಇದ್ದರೂ ಅದನ್ನು ರೂಮಿನಲ್ಲಿ ಮಾಡುವ ಹಾಗಿಲ್ಲ.
4. ಕುಡಿತವಂತೂ ಊಹೂಂ!
5. ನಾವಾಯ್ತು ನಮ್ಮ ಕೃಷಿ ಸಾಧನೆಯಾಯ್ತು ಅಷ್ಟೇ.
ಎಂಬಿತ್ಯಾದಿ ಸುಖ ಸಂಸಾರದ ಸೂತ್ರಗಳನ್ನು ಮಂಡಿಸಿದ್ದೆ.

ಒಂದಿಷ್ಟು ಹಳೆಯ ಸಾಮಾನುಗಳನ್ನು ಬೆಂಗಳೂರಿನಿಂದ ತಂದಿದ್ದೆವು. ನನ್ನ ಹೆಂಡತಿ ತನಗೆ ಬೇಡವಾದ ಎಲ್ಲಾ ಪಾತ್ರೆ ಸಾಮಾನು, ಅದು ಇದು ಅಂತ.. ನನ್ನ ಜೊತೆಗೆ ಕೊಟ್ಟು ಕಳಿಸಿದ್ದಳು! ಎರಡೆರಡು ಇದ್ದ ಸಾಮಾನುಗಳಲ್ಲಿ ಒಂದನ್ನು ಕೊಟ್ಟರೆ ಸರಿ ಆದರೆ ತನಗೆ ಅಂತ ಬಳಸುತ್ತಿದ್ದ ಏಕೈಕ ಮಿಕ್ಸರ್ ಕೂಡ ನನಗೇ ಕೊಟ್ಟಳು. ನನ್ನ ಕಣ್ಣುಗಳು ತೇವಗೊಂಡವು. ಯಾಕೆ ಇಷ್ಟೊಂದು ತ್ಯಾಗ ಅಂತ ಕೇಳಲಾಗಿ ತನಗಾಗಿ ಹೊಸದಾದ ಬೇರೆ ಮಿಕ್ಸರ್ ಕೊಳ್ಳುವೆ ಅಂತ ಹೇಳಿದಳು! ಹೀಗಾಗಿ ಆಮೇಲೆ ಅವಳು ಯಾವುದಾದರೂ ವಸ್ತುವನ್ನು ನಿನ್ನ ಹಳ್ಳಿಗೆ ತೊಗೊಂಡು ಹೋಗು ಅಂದಾಗೆಲ್ಲ, ನನಗೆ ಅದರ ಅವಶ್ಯಕತೆ ಇದೆಯೇ ಇಲ್ಲವೇ ಅಂತ ಕೂಲಂಕುಶವಾಗಿ ಅಧ್ಯಯನ ಮಾಡುತ್ತಿದ್ದೆ. ಇಲ್ಲವಾದರೆ ನನ್ನ ಜೇಬಿಗೆ ಕತ್ತರಿ!

ನನ್ನ ಹಾಗೆ ನಾಗಣ್ಣನಿಗೂ ಹೆಂಡತಿ ಇದ್ದಳಲ್ಲ. ಅವರೂ ಏನೇನೋ ಕೊಟ್ಟು ಕಳಿಸಿದ್ದರು. ಹೀಗಾಗಿ ಈ ಎಲ್ಲ ಸಾಮಾನು ಸರಂಜಾಮು, ಹಳೆ ಪ್ಲಾಸ್ಟಿಕ್, ಕಬ್ಬಣ, ಬಟ್ಟೆ ಬರೆ ಎಲ್ಲ ಹೊತ್ತುಕೊಂಡು ನಾವು ಕಾರಲ್ಲೆ ಬಂದೆವು.

ಆದರೆ ಮುಂದೆ ಕೆಲ ಬದಲಾವಣೆ ಮಾಡಬೇಕು ಅನಿಸಿತು. ಹಳ್ಳಿಗೆ ಮರಳಿ ಹೋಗುವ ಎಲ್ಲರೂ ಗಮನಿಸಬೇಕಾದ ಸಂಗತಿ ಇದು. ನಾವು ಹೀಗೆ ಪದೆ ಪದೆ ಕಾರಲ್ಲಿ ಬರುತ್ತಿದ್ದುದನ್ನು ಹಳ್ಳಿಯ ನಮ್ಮ ಪರಿಚಯದವರು ಗಮನಿಸುತ್ತಿದ್ದರು. ಅವರು ಏನೆಂದುಕೊಳ್ಳುತ್ತಿದ್ದರು ಅಂದರೆ ನಾವು ಬೆಂಗಳೂರಿಗರು ತುಂಬಾ ದುಡ್ಡು ಉಳ್ಳವರು. ನಮಗೆ ದುಡ್ಡು ಎಷ್ಟಿದೆ ಅಂದರೆ ಏನು ಮಾಡಬೇಕು ಅಂತ ಗೊತ್ತಿಲ್ಲದೇ ಈ ರೀತಿ ಕಾರಲ್ಲಿ ಬರ್ತೀವಿ ಹೋಗ್ತೀವಿ. ದುಡ್ಡು ನಮ್ಮ ಹತ್ತಿರ ಕೊಳೆಯುತ್ತಿದೆ ಅಂತ ಅಂದುಕೊಳ್ಳತೊಡಗಿದ್ದು ನಮ್ಮ ಗಮನಕ್ಕೆ ಬಂತು.

ಎರಡೆರಡು ಇದ್ದ ಸಾಮಾನುಗಳಲ್ಲಿ ಒಂದನ್ನು ಕೊಟ್ಟರೆ ಸರಿ ಆದರೆ ತನಗೆ ಅಂತ ಬಳಸುತ್ತಿದ್ದ ಏಕೈಕ ಮಿಕ್ಸರ್ ಕೂಡ ನನಗೇ ಕೊಟ್ಟಳು. ನನ್ನ ಕಣ್ಣುಗಳು ತೇವಗೊಂಡವು. ಯಾಕೆ ಇಷ್ಟೊಂದು ತ್ಯಾಗ ಅಂತ ಕೇಳಲಾಗಿ ತನಗಾಗಿ ಹೊಸದಾದ ಬೇರೆ ಮಿಕ್ಸರ್ ಕೊಳ್ಳುವೆ ಅಂತ ಹೇಳಿದಳು!

“ನಿಮ್ಮ ತಲ್ಯಾಗ ಕೂದಲ ಕಡಿಮಿ ಅದಾವ್, ಆದರ ರೊಕ್ಕ ಮಸ್ತ್ ಮಾಡೀರಿ ತೊಗೊರಿ ನನಗ ಗೊತೈತಿ” ನಾನು ಭಾರತದಲ್ಲಷ್ಟೇ ಅಲ್ಲ ಸ್ವಿಸ್ ಬ್ಯಾಂಕಲ್ಲೂ ದುಡ್ಡು ಇಟ್ಟ ವಿಷಯ ಅವನಿಗೆ ಗೊತ್ತು ಅನ್ನುವಂತೆ ಬಸಣ್ಣ ಬಣ್ಣಿಸಿ ಹೇಳುತ್ತಿದ್ದ.

“ತಗೀರಿ ಅಮೆರಿಕಾದ ದುಡ್ಡು.. ಇಟ್ಟ ಇಟ್ಟ ಮನ್ಯಾಗ ಜಂಗ್ ಹಿಡೀತಾವು..” ಅಂತ ಹೇಳಿ ಹುಸ್ಸೇನ್ ಸಾಬ್ ನಗುತ್ತಿದ್ದ. ಆಗ ನಾನು ನಾಗಣ್ಣ ಒಬ್ಬರನ್ನೊಬ್ಬರು ನೋಡಿ ಅವರಿಗೆ ಏನು ಹೇಳಬೇಕು ಅಂತ ತಿಳಿಯದೆ ಮೊಬೈಲ್ ನಲ್ಲಿ ನಮ್ಮ ಬ್ಯಾಂಕ್ ಬ್ಯಾಲೆನ್ಸನ್ನೂ ಹಾಗೂ ಅಳಿದುಳಿದ ತಲೆ ಕೂದಲುಗಳನ್ನೂ ಪದೆ ಪದೆ ಮುಟ್ಟಿಕೊಂಡು ನೋಡುತ್ತಿದ್ದೆವು.

“ನಾಗಣ್ಣ, ನಾವು ಬೇಗ ಇಲ್ಲೊಂದು ಬೈಕು ತಂದಿಡಬೇಕು. ಕಾರಲ್ಲಿ ಹೀಗೆ ಬರ್ತಾ ಇದ್ರೆ ನಮ್ಮನ್ನ ತುಂಬಾ ರಿಚ್ ಪಾರ್ಟಿ ಅಂದುಕೊಂಡು ಇದ್ದ ಒಂದೆರಡು ಕೂದಲೂ ಉದುರಿಸ್ಕೊಳ್ಳಬೇಕಾದೀತು..” ಅಂದೆ..

“ಹೌದು ಸರ್..” ಅಂತ ನಾಗಣ್ಣ ತಲೆ ಆಡಿಸಿದರು.

ಅಲ್ಲೊಂದು ಮನೆ ಹುಡುಕುವ ಪ್ರಯತ್ನ ಮುಂದುವರಿದಿತ್ತು. ನನ್ನ ಕಾರ್ಯಕ್ಷೇತ್ರವಾಗಿದ್ದ ಬೆಳ್ಳನಕೇರಿಯಲ್ಲಿ ಬಾಡಿಗೆ ಮನೆ ಎಂಬ concept ಇರಲೇ ಇಲ್ಲ. ಹತ್ತಿರದ ಸ್ವಲ್ಪ ದೊಡ್ಡ ಊರಾದ ದಾಸನಕೊಪ್ಪದಲ್ಲಿ ಕೆಲವು ಬಾಡಿಗೆ ಮನೆಗಳಿದ್ದವಾದರೂ ಆಗ ಲಭ್ಯ ಇರಲಿಲ್ಲ. ಅಂಥದರಲ್ಲಿ ಮರೂಭೂಮಿಯಲ್ಲಿ ನೀರಿನ ಸೆಲೆಯಂತೆ ಒಂದು ಕಡೆ ಬಾಡಿಗೆ ಮನೆ ಇದೆ ಅಂತ ಗೊತ್ತಾಗಿ ನೋಡಲು ಹೋದೆವು.

ಅದು ನಾಲ್ಕು ಮನೆಗಳ ಒಂದು ಸಮುಚ್ಚಯ. ಎಲ್ಲವೂ ಹಂಚಿನ ಮನೆಗಳು. ನಮಗೇನು ಅಲ್ಲಿ AC room ಬೇಕಿರಲಿಲ್ಲ. ರೈತರಾಗಬೇಕು ಎಂದು ಬಂದವರಿಗೆ ಯಾವ ಮನೆಯಾದರೇನು!? ನಮ್ಮ ಹೊಲದ ಸಮೀಪದಲ್ಲೊಂದು ಮನೆ ಸಿಕ್ಕರೆ ಅದೇ ಸ್ವರ್ಗ ಆಗಿತ್ತು!

ಆ ಚಾಳಿನ ಒಂದು ಮನೆಯಲ್ಲಿ ಈಗಾಗಲೇ ಬಾಡಿಗೆ ಇದ್ದ ಒಬ್ಬ ಹೆಣ್ಣುಮಗಳು ಖಾಲಿ ಇದ್ದ ಇತರ ಎರಡು ಮನೆಗಳನ್ನು ತೋರಿಸಲು ಕರೆದೊಯ್ದು..
“ಅಯ್ಯೋ ಇಲ್ಲೇನ್ ಇರ್ತೀರಿ ಬಿಡ್ರಿ.. ನಾವು ನಿರ್ವಾ ಇಲ್ಲ (ಅನಿವಾರ್ಯ) ಅಂತ ಅದೀವಿ. ಮ್ಯಾಲೆ ಹಂಚು ಎಲ್ಲಾ ಸೋರ್ತಾವು. ನೋಡ್ರಿ ಸಂಡಾಸ್ ಅಷ್ಟು ದೂರ ಅಯ್ತಿ.. ಹಾವು ಎಲ್ಲಾ ಅಡ್ಯಾಡ್ತಾವು..” ಅಂದಳು. ಕಾಲಾಗ ಹಾವು ಬಿಡೋದು ಅಂದ್ರೆ ಇದೇ ಇರಬಹುದು!

ಇರ್ಲಿ ಬಿಡ್ರಿ ಬ್ಯಾಟರಿ ಹಿಡಕೊಂಡು ಹೋಕ್ಕೀವಿ ಅಂತ ನಾನು ಸೋಲನ್ನೊಪ್ಪದ ಸರದಾರನಂತೆ ಉತ್ತರಿಸಿದಾಗ ಅವಳ ಮುಖದಲ್ಲಿ ನಿರಾಶೆ ಕಂಡಿತು. ಇಷ್ಟು ಹೆದರಿಸಿದರೂ ಹೆದರದ ಇವನಾರು ಎಂಬಂತೆ ನೋಡಿದಳು. ಆದರೆ ಆ ಖಾಲಿ ಇದ್ದ ಮನೆಯನ್ನು ಕೂಲಂಕುಷವಾಗಿ ನೋಡಿದಾಗ ಅಲ್ಲೊಂದಿಷ್ಟು ಕಡೆ ಬಟ್ಟೆ ಒಣ ಹಾಕಿದ್ದಳು, ಒಂದು ರೂಮಿನಲ್ಲಿ ಕುರಿಗಳಿದ್ದವು, ಕೆಲವು ಕಡೆ ಒಣ ಕಟ್ಟಿಗೆಗಳು… ನಾವಲ್ಲಿಗೆ ಬಂದರೆ ಅವಳಿಗೆ ತುಂಬಾ ಅನಾನುಕೂಲತೆ ಆಗುತ್ತದೆ ಅಂತ ನಾನು ಗಮನಿಸಿದೆ. ಪುಗಸೆಟ್ಟೆ ಅವಳಿಗೆ ಇನ್ನೊಂದು ಮನೆ ಸಿಕ್ಕಿತ್ತಲ್ಲ!

ಅದೂ ಅಲ್ಲದೆ ಒಟ್ಟಿನಲ್ಲಿ ಅಲ್ಲಿನ ವಾತಾವರಣ ಅಷ್ಟೊಂದು ಸರಿ ಕಾಣಲಿಲ್ಲ. ಹೀಗಾಗಿ ಆ ಮನೆ ಬೇಡ ಅಂತ ನಿರ್ಧರಿಸಿದೆವು. ಮುಖ್ಯ ರಸ್ತೆಯಲ್ಲಿರುವ ಅಂಚಿನಲ್ಲಿ ಒಂದು ಮನೆ ಇತ್ತಾದರೂ ಅಲ್ಲಿ ರಾತ್ರಿ ಕುಡುಕರ ಹಾವಳಿ ಇದ್ದೀತು ಅಂತ ಇನ್ನೊಬ್ಬರು ಕಾಲಲ್ಲಿ ಹಾವು ಬಿಟ್ಟರು.

ಅಂತೂ ಅವತ್ತೂ ಒಂದೂ ಮನೆ ಸಿಗದೆ, ನಾಗಣ್ಣನನ್ನು ನನ್ನ ಅತ್ತೆಯ ಮನೆಗೆ ಕರೆದೊಯ್ದೆ. ಅದೇ ನಮ್ಮ ತಾತ್ಕಾಲಿಕ ವಾಸ್ತವ್ಯ ಆಗಿತ್ತು. ಆರಾಮಾಗಿ ಇರೋದು ಬಿಟ್ಟು ಇದೆಂತಹ ಹುಚ್ಚು ಸಾಹಸ ಮಾಡುತ್ತಿದ್ದಾನೆ ತನ್ನ ಅಳಿಯ ಅಂತ ಅತ್ತೆಗೆ ಒಂದು ಅಸಮಾಧಾನ ಇತ್ತಾದರೂ ಅಳಿಯ ಒಂದಿಷ್ಟು ದಿನ ಮನೇಲಿ ಇರ್ತಾನಲ್ಲ ಎಂಬ ಖುಷಿಯಲ್ಲಿಯೇ ನನ್ನ ಉಪಚಾರ ಮಾಡುತ್ತಿದ್ದರು. ಆದರೆ ನಾಗಣ್ಣಗೆ ಸ್ವಲ್ಪ ಮುಜುಗರ ಅನಿಸುತ್ತಿತ್ತು. ಸರ್ ನಾನು ನಿಮ್ಮ ಶಿಷ್ಯ ಆಗಿ ಬಂದೆನೋ ಅತಿಥಿನೋ ಅಂತ confusion ಆಗ್ತಿದೆ ಅಂತ ತಮ್ಮ ಅಳಲು ತೋಡಿಕೊಂಡರು ಕೂಡ.

ಅಷ್ಟರಲ್ಲಿ ನನ್ನ ಹೆಂಡತಿಯ ಚಿಕ್ಕಮ್ಮನ ಮಗ ಶೇಖರ ಭಟ್ ಅವರು ತಮಗೊಬ್ಬರು ಬಿಸಲಕೊಪ್ಪದಲ್ಲಿ ಪರಿಚಯ ಇದ್ದಾರೆ ಅವರೊಂದು ಮನೆ ವ್ಯವಸ್ಥೆ ಮಾಡಿಕೊಡುತ್ತಾರೆ ಅಂತ ಹೇಳಿ ನಮಗೆ ಭರವಸೆ ಹುಟ್ಟಿಸಿದರು. ಬಿಸಲಕೊಪ್ಪ ಗ್ರಾಮ ದಾಸನಕೊಪ್ಪದಿಂದ 15 ನಿಮಿಷದ ಹಾದಿ. ಅಲ್ಲಿ ಸಿಕ್ಕರೂ ಸಧ್ಯಕ್ಕೆ ನಮಗೆ ಸಾಕಾಗಿತ್ತು. ಮುಂದೆ ದಾಸನಕೊಪ್ಪದಲ್ಲಿ ಮನೆ ಸಿಕ್ಕಾಗ ಅಲ್ಲಿಗೆ ಹೋದರಾಯ್ತು ಅಂತ ಅಂದುಕೊಂಡೆವು.

ಏನೋ ಮಾಡಬೇಕು ಅಂತ ನಾವು ಮನಸು ಮಾಡಿದರೆ ಒಂದೊಂದೇ ಸಹಾಯಗಳು ಬಂದೆ ಬರುತ್ತವೆ.. ತುಂಬಾ ಜನ ಹಿತೈಷಿಗಳು ನಮಗೆ ಸಹಕಾರ ಮಾಡಿದರು. ಅಷ್ಟೊತ್ತಿಗೆ ಶಂಭುಲಿಂಗ ಹೆಗಡೆ ಅವರ ಮನೆಯಲ್ಲಿ ಒಂದು ಬಾಡಿಗೆ ಮನೆ ಇದೆ ಎಂಬ ವಿಷಯ ತಿಳಿದು ಅವರ ಮನೆಯನ್ನು ಹುಡುಕಿ ಹೊರಟೆವು.

ಬಿಸಲಕೊಪ್ಪ ಗ್ರಾಮಕ್ಕೆ ಹೋಗುವ ದಾರಿಯಲ್ಲೇ, ಬಸ್ ನಿಲ್ದಾಣದಿಂದ ಕೆಲವೇ ಮಾರು ದೂರದಲ್ಲಿ ಅವರ, ಸುಂದರ ಅಡಿಕೆ ತೋಟ ಕಂಡಿತು. ಒಳಗೆ ಹೋದರೆ ಅಲ್ಲೊಂದಿಷ್ಟು ಸಾಕು ನಾಯಿಗಳು ನಮ್ಮನ್ನು ಸ್ವಾಗತಿಸಿದವು. ನನಗೆ ನಾಯಿಗಳನ್ನು ಕಂಡರೆ ಅಷ್ಟಕ್ಕಷ್ಟೆ. ಆದರೆ ನಾಗಣ್ಣನಿಗೆ ಅಚ್ಚುಮೆಚ್ಚು. ಅವುಗಳನ್ನು ಕ್ಷಣಾರ್ಧದಲ್ಲಿ ದೋಸ್ತಿ ಮಾಡಿಕೊಳ್ಳುವ ಕಲೆ ಅವರಿಗೆ ಸಿದ್ಧಿಸಿದೆ. ಅವರ ಮನೆಯಲ್ಲೂ ಒಂದು ನಾಯಿಯಿದೆ, ಅದಕ್ಕೆ ಇರಬೇಕು ಈ ಪ್ರೀತಿ. ಅಥವಾ ಅವರಿಗೆ ಹಾಗೆ ನಾಯಿಯ ಬಗ್ಗೆ ಪ್ರೀತಿಯಿರುವುದಕ್ಕೆನೇ ಮನೆಯಲ್ಲೊಂದು ನಾಯಿಯಿದೆ! ಒಟ್ಟಿನಲ್ಲಿ ನಾಗಣ್ಣ ಇದ್ದಾಗ ನನಗೂ ನಾಯಿ ಭಯ ಇರೋದಿಲ್ಲ. ಅವರನ್ನು ಮುಂದೆ ಬಿಟ್ಟು ಅವನ್ನು ಅವರು ಪಳಗಿಸಿದ ನಂತರ ನಾನು ಧೈರ್ಯದಿಂದ ಮುನ್ನುಗ್ಗುತ್ತಿದ್ದೆ!

ಕಣ್ಣ ಮುಂದೆ ಶಂಭುಲಿಂಗ ಹೆಗಡೆ ಅವರ ಮನೆ ಕಂಡಿತು. ತೋಟದಲ್ಲಿ ಇರುವ ಒಂದು concrete ಮನೆ ಅದು. ಚೆನ್ನಾಗಿಯೇ ಕಟ್ಟಿದ್ದಾರೆ. ಇಂತಹ ಮನೆ ಬಾಡಿಗೆ ಸಿಕ್ಕರೆ ಸ್ವರ್ಗಕ್ಕೆ ಕೆಲವೇ ಸೆಂಟಿಮೀಟರ್ ದೂರ ಅಂತ ನಾವು ಪುಳಕಗೊಂಡೆವು..
ತೋಟದ ಒಳಗಿಂದ ಅವರು ಬರುವುದು ಕಂಡಿತು. ನಗುಮುಖದಿಂದಲೇ ಸ್ವಾಗತಿಸಿದ ಅವರು, “ಕುಡಿಯಲೆ ಎಂತ ಅಡ್ಡಿಲ್ಲೆ” ಅಂತ ಕೇಳಿ ಉಪಚರಿಸಿದರು. ಮಲೆನಾಡಿನಲ್ಲಿ ಯಾವುದೇ ಮನೆಗೆ ಹೋದರು ಹಾಗೆ ಉಪಚರಿಸುವುದು ಅಲ್ಲಿಯವರ ಸಂಸ್ಕಾರ.

ಅವರು ಒಂದು ಪೂರ್ತಿ ತೋಳಿರುವ ಬಿಳಿ ಬನಿಯನ್ ಹಾಕಿದ್ದರು. ಒಂದು ನೀಲಿ ಬಣ್ಣದ ಜೀನ್ಸ್ shorts ಹಾಕಿದ್ದರು. ಬಿಳಿಯ ಗಡ್ಡದಲ್ಲಿ ನನಗಂತೂ ಥೇಟು ಪೂರ್ಣ ಚಂದ್ರ ತೇಜಸ್ವಿ ಅವರಂತೆಯೇ ಕಂಡರು. Concrete ಮನೆಯಲ್ಲಿ ಅವರು ವಾಸಿಸುತ್ತಿದ್ದರು. ಅವರ ಹಳೆಯ ಮನೆ ಅಲ್ಲೇ ಕೂಗಳತೆಯಲ್ಲಿ ಇತ್ತು. ಅದನ್ನು ನಮಗೆ ಬಾಡಿಗೆಗೆ ಕೊಡುವವರಿದ್ದರು. ಮನೆಯನ್ನು ನೋಡಿಕೊಂಡು ಬಂದೆವು. ಅದು ಹೆಂಚಿನ ಮನೆಯಾಗಿತ್ತು. ಒಂದು ಹಾಲ್, ಎರಡು ರೂಮು ಹಾಗೂ ಒಂದು ಅಡಿಗೆ ಮನೆ. ನಿಜ ಹೇಳಬೇಕೆಂದರೆ ನಮ್ಮಿಬ್ಬರಿಗೆ ದೊಡ್ಡದೇ. ಆದರೂ ಇನ್ನೊಬ್ಬ ಶಿಷ್ಯ ವಿನೋದ ಹಾಗೂ ನಮ್ಮ ಬಳಗದ ಇನ್ನೂ ಇಬ್ಬರು ಮೂವರು ಬಂದರೂ ಉಳಿದುಕೊಳ್ಳಲು ಜಾಗ ಇದೆ ಅಂದುಕೊಂಡೆವು. ಒಟ್ಟಿನಲ್ಲಿ ಮನೆ ನಮಗೆ ಇಷ್ಟವಾಗಿತ್ತು. ಬಾಡಿಗೆ ಕೂಡ ಹೆಚ್ಚಿರಲಿಲ್ಲ.

ಶಂಭುಲಿಂಗ ಮಾವ ಅಂತಲೇ ಅವರಿಗೆ ಸಂಬೋಧಿಸಲು ಶುರು ಮಾಡಿದ್ದೆ. ಮಲೆನಾಡಿನಲ್ಲಿ ಸ್ವಲ್ಪ ಪರಿಚಯ ಆದರೂ ಮಾವ – ಬಾವಗಳು ಉಂಟಾಗಿ ಅಲ್ಲೊಂದು ಸಲಿಗೆ ಏರ್ಪಡುತ್ತದೆ. ಕಳೆದ ೧೮ ವರ್ಷಗಳಿಂದ ಮಲೆನಾಡಿನ ಅಳಿಯನಾಗಿದ್ದ ನನಗೆ ಅಷ್ಟೂ ಗೊತ್ತಿರದಿದ್ದರೆ ಹೇಗೆ. ಅವರ ಶ್ರೀಮತಿ ಶಾರದತ್ತೆ ತುಂಬಾ ಉಪಚಾರ ಮಾಡಿದರು. ನಾವು ಮರುದಿನವೇ ಮನೆಗೆ ಬಂದು ಸ್ಥಾಪಿತರಾದೆವು. ಅವರಿಗೂ ನಾವುಗಳು ಬಂದಿದ್ದು ತುಂಬಾ ಖುಷಿಯಾಗಿತ್ತು. ನಾವು ಅಲ್ಲಿಗೆ ಬಂದ ಕೂಡಲೇ ಅವರು, “ಇದು ಬಾಡಿಗೆ ಮನೆ ಅದು ನಿಮ್ಮ ಮನೆ” ಅಂತ ತಮ್ಮ ಮನೆಯನ್ನು ತೋರಿಸುತ್ತಾ ಹೇಳಿದ್ದು ಅವರಲ್ಲಿ ತುಂಬಾ ಗೌರವ ಭಾವನೆ ಮೂಡುವಂತೆ ಮಾಡಿತ್ತು. ಅದೇನು ಋಣಾನುಬಂಧವೋ ಒಟ್ಟಿನಲ್ಲಿ ಬಂದ ತಕ್ಷಣ ನಮಗೊಂದು ಮನೆ ಸಿಕ್ಕಿತ್ತು. ಅಲ್ಲಿಂದ ನಮ್ಮ ಹೊಲ ಸ್ವಲ್ಪ ದೂರವೇ ಆದರೂ ನಮಗೆ ಸಧ್ಯಕ್ಕೆ ಒಂದು ಒಳ್ಳೆಯ ವಸತಿ ದಕ್ಕಿತ್ತು. home sick ಆಗುವ ಸಾಧ್ಯತೆಯೇ ಇರಲಿಲ್ಲ. ಯಾಕೆಂದರೆ ಅಲ್ಲಿ ಶಂಭುಲಿಂಗ ಮಾವ, ಶಾರದತ್ತೆ ಇದ್ದರಲ್ಲ!

(ಮುಂದುವರಿಯುವುದು…)