ಸಾಮಾಜಿಕ ಜಾಲತಾಣಗಳ ಅವಕಾಶಗಳು ಲಭ್ಯವಿರುವ ಈ ಸಂದರ್ಭದಲ್ಲಿ ವ್ಯಂಗ್ಯಚಿತ್ರಗಳು ಬಹುಸಂಖ್ಯೆಯಲ್ಲಿ ನೋಡಲು ಸಿಗುತ್ತಿವೆ. ವ್ಯಂಗ್ಯಚಿತ್ರಕಾರರ ಮೇಲೆ ದಾಳಿಗಳು ನಡೆದಾಗ, ಮತ್ತೆ ಚಿತ್ರಗಳನ್ನು ಬರೆಯುವ ಮೂಲಕವೇ ಅವರು ಪ್ರತಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.  ಆದರೆ  ತಮ್ಮನ್ನು ಟೀಕಿಸಿದವರನ್ನು ವಿಡಂಬನೆ ಮಾಡಿದವರನ್ನು ಬಗ್ಗುಬಡಿಯಬೇಕು ಎಂಬ ಆಶಯ, ಸುಶಿಕ್ಷಿತ ವರ್ಗದಲ್ಲಿಯೇ ಕಾಣಿಸುತ್ತಿರುವುದು ಅಚ್ಚರಿಯ ವಿಷಯ.  ಆ ರೇಖೆಗಳು ನಮ್ಮದೇ ವ್ಯಕ್ತಿತ್ವದ, ಸಮಾಜದ ಪ್ರತಿಬಿಂಬ ಅಲ್ಲವೇ.. ಅಭಿವ್ಯಕ್ತಿಯ ಒಂದು ಮಾಧ್ಯಮವಾಗಿರುವ ಈ ವ್ಯಂಗ್ಯಚಿತ್ರಗಳ ಮೇಲಿನ ದಾಳಿಯ ಹಿನ್ನೆಲೆಯಲ್ಲಿ  ಕೋಡಿಬೆಟ್ಟು ರಾಜಲಕ್ಷ್ಮಿ ಇಲ್ಲಿ ಬರೆದಿದ್ದಾರೆ. 

 

ವ್ಯಂಗ್ಯಚಿತ್ರ ಎಂಬ ಪರಿಕಲ್ಪನೆ ಯುರೋಪಿನಿಂದ ಭಾರತಕ್ಕೆ ಬಂದಿದ್ದಾಗಿರಬಹುದು. ಆದರೆ ಭಾರತದಲ್ಲಿಅದು ಮೂಡಿಸಿದ ಛಾಪು ಗಾಢವಾದುದು. ಆರ್.ಕೆ. ಲಕ್ಷ್ಮಣ್, ಶಂಕರ್ ಪಿಳ್ಳೈ, ಪಿ.ಕೆ.ಎಸ್. ಕುಟ್ಟಿ, ಬಿ.ರಾಮಮೂರ್ತಿ.. ಹೀಗೆ ಪ್ರಭುತ್ವದ ಓರೆಕೋರೆಗಳನ್ನು ಗೆರೆಗಳಲ್ಲಿ ತೋರಿಸಿದ ವ್ಯಂಗ್ಯಚಿತ್ರಕಾರರನ್ನು ಹಿಂದೆ ಸಮಾಜ ಗೌರವದಿಂದ ನಡೆಸಿಕೊಂಡಿತ್ತು.

ಸ್ವಲ್ಪ ಇತ್ತೀಚೆಗಿನ ಒಂದು ಕತೆ ಹೇಳುವುದಾದರೆ, ಗಿರೀಶ್ ಕಾರ್ನಾಡ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ, ಅದನ್ನು ಟೀಕಿಸಿ ಡಾ.ಕೆ.ವಿ. ತಿರುಮಲೇಶ್ ಅವರು ಪತ್ರಿಕೆಯೊಂದರಲ್ಲಿ ಲೇಖನವನ್ನು ಬರೆದಿದ್ದರು. ಲೇಖನಕ್ಕೆ ಪೂರಕವಾಗಿ ಕಾರ್ನಾಡ್ ಅವರ ವ್ಯಂಗ್ಯ ಚಿತ್ರವೊಂದನ್ನು ಪ್ರಕಟಿಸಲಾಗಿತ್ತು. ಕಾರ್ನಾಡರು, ಅದೇ ಚಿತ್ರವನ್ನು ಕೇಳಿ ಪಡೆದು ಕಟ್ಟು ಹಾಕಿಸಿಟ್ಟುಕೊಂಡಿದ್ದರಂತೆ. ಹೀಗೆ ವ್ಯಂಗ್ಯಚಿತ್ರಕಾರರು ತಮ್ಮನ್ನು ಹೇಗೆ ಚಿತ್ರಿಸಿದ್ದಾರೆ ಎಂದು ಗಮನಿಸಿ, ಅದನ್ನು ಸ್ವೀಕರಿಸುವ ಮನೋಭಾವ ಇಂಗ್ಲೆಂಡ್ ನ ರಾಜನಮನೆತನದ ಸದಸ್ಯರಲ್ಲಿಯೂ ಇತ್ತು. ಭಾರತದ ರಾಜಕೀಯ ಕ್ಷೇತ್ರದಲ್ಲಿಯೂ ಈ ಹಿಂದೆ ಅಂತಹ ಪದ್ಧತಿ ಇತ್ತು.

‘ನಮ್ಮ ಬೆನ್ನು ನಮಗೆ ಕಾಣುವುದಿಲ್ಲ’ ಎಂಬೊಂದು ಮಾತಿದೆ. ಬೇರೆಯವರ ತಪ್ಪುಗಳು, ಯಡವಟ್ಟುಗಳ ಕುರಿತು ಬಿಡುಬೀಸಾಗಿ ಮಾತನಾಡುವಾಗ, ನಾವೂ ಮಾಡಿದ ತಪ್ಪುಗಳೇನಾದರೂ ಇರಬಹುದು ಎಂಬ ರಿಯಾಯಿತಿಯೊಂದನ್ನು ಕೊಟ್ಟುಕೊಳ್ಳುವುದಕ್ಕೆ ಬಳಸುವ ಮಾತಿದು. ಆದರೆ ವ್ಯಂಗ್ಯಚಿತ್ರಗಳು ನಮ್ಮ ಬೆನ್ನನ್ನು ನಮಗೆ ತೋರಿಸುವ ಸಾಮರ್ಥ್ಯ ಹೊಂದಿವೆ. ಸಾಮಾಜಿಕ ಜವಾಬ್ದಾರಿಗಳನ್ನು ನಾವು ನಿಭಾಯಿಸುವ ರೀತಿಯಲ್ಲಿರುವ ಹುಳುಕುಗಳನ್ನು ವ್ಯಂಗ್ಯಚಿತ್ರಕಾರರು ಗೆರೆಗಳ ಮೂಲಕ ತೋರಿಸಬಲ್ಲರು. ನಾಯಕತ್ವದ ಸ್ಥಾನದಲ್ಲಿರುವ ವ್ಯಕ್ತಿಗಳ ಮೇಲೆ ಇಂತಹ ಜವಾಬ್ದಾರಿಗಳು, ಕರ್ತವ್ಯಗಳ ಭಾರ ಹೆಚ್ಚಾಗಿರುವುದರಿಂದ, ವ್ಯಂಗ್ಯಚಿತ್ರಗಳನ್ನು ಅವರು ಆಸ್ಥೆಯಿಂದ ಗಮನಿಸುತ್ತಾರೆ. ಆದ್ದರಿಂದಲೇ ಬಹುಶಃ ರಾಜಕೀಯಕ್ಕೆ ಸಂಬಂಧಿಸಿದ ವ್ಯಂಗ್ಯಚಿತ್ರಗಳು ಹೆಚ್ಚು ಚರ್ಚೆಗೆ ಒಳಗಾಗುತ್ತವೆ. ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ಆಶಯವಿದ್ದಾಗಲಷ್ಟೇ ಇಂತಹ ಗಮನಿಸುವಿಕೆಯು ಹೆಚ್ಚು ನೈಜವಾಗಿರುತ್ತದೆ ಎಂಬುದನ್ನು ಮರೆಯುವಂತಿಲ್ಲ.

(ಸತೀಶ್‌ ಆಚಾರ್ಯ ಬರೆದ ಕಾರ್ಟೂನ್)

ಇತ್ತೀಚೆಗೆ ಸಂಚಾರಿ ವಿಜಯ್ ನಿಧನದ ಕುರಿತು ಸಂತಾಪವನ್ನು ವ್ಯಕ್ತಪಡಿಸುವ ನಿಟ್ಟಿನಲ್ಲಿ ಕಾರ್ಟೂನೊಂದು ಗಮನ ಸೆಳೆಯಿತು. ಯಮಲೋಕದಲ್ಲಿ ಯಮಧರ್ಮರಾಯನೂ ಬೇಸರದಿಂದ, ‘ನಾನು ಅವನಲ್ಲ ಎಂದು ಒಮ್ಮೆ ಹೇಳಿಬಿಡು’ ಎಂದು ವಿಜಯ್ ಬಳಿ ಹೇಳಿಕೊಳ್ಳುತ್ತಾನೆ. ವಿಜಯ್ ಇಷ್ಟು ಬೇಗನೇ ಬದುಕಿನ ಪಯಣ ಮುಗಿಸಬಾರದಿತ್ತು ಎಂಬ ಅರ್ಥವಿರುವ ಕಾರ್ಟೂನಿನ ಬಗ್ಗೆ ಬಹಳಷ್ಟು ಚರ್ಚೆಗಳಾದವು. ವಿರೋಧ ವ್ಯಕ್ತವಾಯಿತು.ಇದರಲ್ಲಿ ಟೀಕಿಸುವಂತಹುದೇನಿದೆ ಎಂಬ ಪ್ರಶ್ನೆಯನ್ನೂ ಅನೇಕರು ಕೇಳಿಕೊಂಡರು.

ತಮಿಳುನಾಡಿನ ವ್ಯಂಗ್ಯಚಿತ್ರಕಾರ ಜಿ.ಬಾಲಕೃಷ್ಣನ್ (ಬಾಲ)ಅವರು ಬಂಧನಕ್ಕೊಳಗಾಗಿ, ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾದರು. ಸಾಲ ಮಾಡಿ ಚಕ್ರಬಡ್ಡಿಯನ್ನು ತೀರಿಸಲಾಗದ ಕುಟುಂಬವೊಂದು, ಕಲೆಕ್ಟರ್ ಕಚೇರಿ ಆವರಣದಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆಯೊಂದು ತಿರುನಲ್ವೇಲಿಯಲ್ಲಿ ನಡೆಯಿತು. ಈ ಘಟನೆ ನಿಜಕ್ಕೂ ಪ್ರಜ್ಞಾವಂತರ ಮನಕಲುಕುವಂತಿತ್ತು. ಈ ಹಿನ್ನೆಲೆಯನ್ನು ಇಟ್ಟುಕೊಂಡು ಬಾಲಾ ಅವರು, ಸುಡುತ್ತಿರುವ ಮಗುವಿನ ಮುಂದೆ ಬೆತ್ತಲಾಗಿ ನಿಂತ ತಮಿಳುನಾಡಿನ ಮುಖ್ಯಮಂತ್ರಿ, ತಿರುನಲ್ವೇಲಿಯ ಕಲೆಕ್ಟರ್ ಮತ್ತು ಅಲ್ಲಿನ ಪೊಲೀಸ್ ಕಮಿಷನರ್ ಅನ್ನು ಚಿತ್ರಿಸಿದ್ದರು. ತಿರುನಲ್ವೇಲಿಯ ಕಲೆಕ್ಟರ್ ನೀಡಿದ ದೂರಿನ ಮೇರೆಗೆ ಬಾಲಾ ಅವರು ಬಂಧನಕ್ಕೊಳಗಾಗಿದ್ದರು. ಅವರ ಮೇಲೆ ಅಶ್ಲೀಲತೆಯ ಆರೋಪ ಹೊರಿಸಲಾಗಿತ್ತು. ಹೀಗೆ ವ್ಯಂಗ್ಯಚಿತ್ರಗಳಿಗೆ ಎದುರಾದ ಪ್ರತಿರೋಧಗಳಿಗೆ ಸಂಬಂಧಿಸಿದ ಸಾಲು ಸಾಲು ಉದಾಹರಣೆಗಳು ಇತ್ತೀಚೆಗೆ ಕಾಣಿಸುತ್ತಿವೆ. ಘಟನೆಗಳ ಬೆನ್ನುಹಿಡಿದು, ತರ್ಕಗಳ ಸಿಕ್ಕುಬಿಡಿಸುವುದಕ್ಕಿಂತ, ಇಷ್ಟೊಂದು ಗಲಿಬಿಲಿಯ ವಾತಾವರಣ ಸೃಷ್ಟಿಯಾಗುವ ಪರಿಸ್ಥಿತಿ ಏಕೆ ಬಂದಿದೆ ಎಂಬುದನ್ನು ಗಮನಿಸಬಹುದು.

( ಜಿ.ಬಾಲಕೃಷ್ಣನ್ (ಬಾಲ) ಅವರ ಕಾರ್ಟೂನ್)

ಆರೋಗ್ಯವಂತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿಯ ಮಾಧ್ಯಮಗಳು ಸುರಕ್ಷಿತವಾಗಿರುತ್ತವೆ. ರಾಜಕೀಯಕ್ಕೆ ಸಂಬಂಧಿಸಿದ ವ್ಯಂಗ್ಯಚಿತ್ರಗಳು ಪ್ರಭುತ್ವದ ಓರೆಕೋರೆಗಳನ್ನು ತೋರಿಸುವ ಪ್ರತಿಪಕ್ಷದ ಕೆಲಸವನ್ನು ಮಾಡುತ್ತವೆ. ಅಥವಾ ಪ್ರತಿಭಟನೆಯನ್ನು ವ್ಯಕ್ತಪಡಿಸುವ ಕಲಾತ್ಮಕ ವಿಧಾನ ಎಂದೂ ಅವುಗಳನ್ನು ಹೇಳಬಹುದು.

‘ಇಂತಹ ಅಭಿವ್ಯಕ್ತಿ ಈಗ ಬದಲಾಗಿದೆ ಎನ್ನುವಾಗ ನಾವು, ಪರೋಕ್ಷವಾಗಿ 70ರ ದಶಕದ ಸಂದರ್ಭವನ್ನು ಹೋಲಿಕೆ ಮಾಡುತ್ತಿದ್ದೇವೆ’ ಎಂದು ಗುರುತಿಸುತ್ತಾರೆ ವ್ಯಂಗ್ಯಚಿತ್ರಕಾರ ದಿನೇಶ್ ಕುಕ್ಕುಜಡ್ಕ. ‘ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಜ್ಞೆಯು ಮತ್ತಷ್ಟು ಜಾಗೃತವಾಗುತ್ತಿದ್ದಾಗ, ಚಳವಳಿಗಳಿಗೆ ಬಲ ಬಂದಿತ್ತು. ವ್ಯಂಗ್ಯಚಿತ್ರಗಳನ್ನೂ ಅಭಿವ್ಯಕ್ತಿಯ ಒಂದು ವಿಧಾನ ಎಂದು ಗಮನಿಸುವುದಾದರೆ, 70ರ ದಶಕದಲ್ಲಿ ದಲಿತ, ಬಂಡಾಯ ಚಳವಳಿಗಳು ಅಭಿವ್ಯಕ್ತಿಯಾಗಿಯೇ ಹುಟ್ಟಿಕೊಂಡವು. ರಂಗಭೂಮಿಯಲ್ಲಿಯೂ ಅಂತಹ ಮೊನಚು ಧಾಟಿಯು ಗೋಚರಿಸುತ್ತಿತ್ತು. ಯಾವುದೇ ಅಭಿವ್ಯಕ್ತಿಯು ಪ್ರಬಲವೆಂದು ಗೋಚರಿಸಬೇಕಾದರೆ ಅದನ್ನು ಸಮಾಜದ ಜನತೆ ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಆಗಿನ್ನೂ ಕಾರ್ಪೊರೇಟ್ ಪರಿಕಲ್ಪನೆಯು ನಮ್ಮ ಸಮಾಜದೊಳಗೆ, ನಮ್ಮ ಜೀವನದೊಳಗೆ ಪ್ರವೇಶ ಮಾಡಿರಲಿಲ್ಲ. ಆದರೆ ಈಗ ಕಾರ್ಪೊರೇಟ್ ಪರಿಕಲ್ಪನೆಯು ಜನರ ದೃಷ್ಟಿಕೋನಗಳನ್ನೇ ಬದಲಾಯಿಸಿಬಿಟ್ಟಿತು. ಅಭಿವ್ಯಕ್ತಿಯ ಉದ್ದೇಶವೂ ಹಣವನ್ನೇ ಆಧರಿಸಿದ್ದಾಗ, ಸೃಜನಶೀಲತೆಗಿಂತ ಓಲೈಕೆಗೇ ಹೆಚ್ಚು ಪ್ರಾಶಸ್ತ್ಯ ದೊರೆಯುತ್ತದೆ. ಇದೇ ಕಾರಣದಿಂದಾಗಿ, ಇವತ್ತು ಕೇವಲ ವ್ಯಂಗ್ಯಚಿತ್ರ ಮಾತ್ರವಲ್ಲ, ಎಲ್ಲ ರೀತಿಯ ಸೃಜನಶೀಲ ಚಟುವಟಿಕೆಗಳಲ್ಲಿ ಕಲುಷಿತ ಧೋರಣೆಯೊಂದು ಕಾಣುತ್ತಿದೆ’ ಎನ್ನುತ್ತಾರೆ.

ವ್ಯಂಗ್ಯಚಿತ್ರಕಾರರು ತಮ್ಮನ್ನು ಹೇಗೆ ಚಿತ್ರಿಸಿದ್ದಾರೆ ಎಂದು ಗಮನಿಸಿ, ಅದನ್ನು ಸ್ವೀಕರಿಸುವ ಮನೋಭಾವ ಇಂಗ್ಲೆಂಡ್ ನ ರಾಜನಮನೆತನದ ಸದಸ್ಯರಲ್ಲಿಯೂ ಇತ್ತು. ಭಾರತದ ರಾಜಕೀಯ ಕ್ಷೇತ್ರದಲ್ಲಿಯೂ ಈ ಹಿಂದೆ ಅಂತಹ ಪದ್ಧತಿ ಇತ್ತು.

ವ್ಯಂಗ್ಯಚಿತ್ರಗಳಿಗೆ ವೈಭವದ ಮನ್ನಣೆ ದೊರೆಯುತ್ತಿದ್ದಸಂದರ್ಭದಲ್ಲಿ,ಮುದ್ರಣ ಮಾಧ್ಯಮವೇ ಪ್ರಧಾನವಾಗಿತ್ತು. ಪತ್ರಿಕಾ ಕಚೇರಿಯೆಂಬ ವೇದಿಕೆಯಲ್ಲಿ ಆರ್.ಕೆ. ಲಕ್ಷ್ಮಣ್, ಶಂಕರ್ ಪಿಳ್ಳೈ, ಪಿ.ಕೆ.ಎಸ್. ಕುಟ್ಟಿ , ರಾಮಮೂರ್ತಿಯಂತಹ ದಿಗ್ಗಜರು ವಿರಾಜಮಾನರಾಗಿದ್ದರು. ಆದರೆ ಇಂದು ನವ ಮಾಧ್ಯಮಗಳು ಸೃಷ್ಟಿಯಾಗಿವೆ. ಡಿಜಿಟಲ್ ಲೋಕವು ಮಾನವೀಯ ತರ್ಕವನ್ನೂ, ಆಶಯವನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ವ್ಯಂಗ್ಯಚಿತ್ರಕಾರರೂ ಆಗಿದ್ದ, ಹಿರಿಯ ಲೇಖಕ ಎಸ್. ದಿವಾಕರ್ ಈ ವಿಚಾರವನ್ನು ಇನ್ನೊಂದು ದೃಷ್ಟಿಕೋನದಿಂದ ವಿವರಿಸುತ್ತಾರೆ: ‘ಫ್ರಾನ್ಸ್ ನಲ್ಲಿ ಹುಟ್ಟಿ ಬ್ರಿಟನ್ ನಲ್ಲಿ ಬೆಳೆದ ವ್ಯಂಗ್ಯಚಿತ್ರ ಎಂಬ ಪರಿಕಲ್ಪನೆಯನ್ನು ಬ್ರಿಟನ್ ನ ರಾಜಮನೆತನದ ಸದಸ್ಯರು, ಸಾರ್ವಜನಿಕ ಅಭಿಪ್ರಾಯ ಎಂದು ಪರಿಗಣಿಸುತ್ತಿದ್ದರು. ಭಾರತದಲ್ಲಿಯೂ ವ್ಯಂಗ್ಯಚಿತ್ರದ ಪರಿಕಲ್ಪನೆ ಸಾಕಷ್ಟು ಜನಪ್ರಿಯವಾಗಿಯೇ ಇತ್ತು. ಆದರೆ ಇಂದು ಸಾಮಾಜಿಕ ಸಂವೇದನಾಶೀಲತೆಯು ಕಡಿಮೆಯಾಗುತ್ತಿದೆ. ತಾನು ಮಾಡುವ ಕೆಲಸವೊಂದು ಸಮಾಜದ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬ ನಿಟ್ಟಿನಲ್ಲಿ ಯೋಚನೆ ಮಾಡುವ ಮನಸ್ಥಿತಿಯೇ ಹೊರಟು ಹೋಗಿದೆ. ಈ ಮಾತು ವ್ಯಂಗ್ಯಚಿತ್ರ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಬರವಣಿಗೆಗೂ ಅನ್ವಯಿಸುತ್ತದೆ. ಯಾರಾದರೂ ಅತ್ಯುತ್ತಮವಾದುದನ್ನು ಬರೆದರೂ ಯಾರಿಗೂ ಏನೂ ಅನಿಸುವುದಿಲ್ಲವೇನೋ. ಕಾಲದ ಸ್ವರೂಪವೇ ಬದಲಾಗಿದೆ ಅನಿಸುತ್ತದೆ. ಹೊಸಕತೆ, ಕಾದಂಬರಿಗಳು ಬಂದರೂ ಅದರ ಪರಿಣಾಮವೇನೂ ತೋರುವುದಿಲ್ಲವಲ್ಲ. ಹಿಂದೆ ಕುವೆಂಪು, ಅಡಿಗ, ಬೇಂದ್ರೆಯವರನ್ನು ಕಾಲವೇ ರೂಪಿಸಿತು. ಇಂದು ಟೀವಿ ಮುಂತಾದ ಮಾಧ್ಯಮಗಳು ಎಲ್ಲವನ್ನೂ ಸಮಾನತೆಯ ಅಚ್ಚಿಗೆ ಹಾಕಿಬಿಡುತ್ತಿವೆ. ಅರ್ಧಗಂಟೆ ಕಾರ್ಯಕ್ರಮದ ನೆಲೆಯಲ್ಲಿಯೇ ಎಲ್ಲವನ್ನೂ ನೋಡುವುದು ವಾಡಿಕೆಯಾಗಿದೆ. ಹಿಂದಿನವರ ಪ್ರಭೆ ಈಗ ಕಾಣುತ್ತಿಲ್ಲ. ಹಾಗಾಗಿ ರಾಮಮೂರ್ತಿ ಅವರಂತಹ ವ್ಯಂಗ್ಯಚಿತ್ರಕಾರರು ಕಾಣಿಸಲಾರರು’

ಈಗೇನೂ ತುಂಬಾ ಒಳ್ಳೆಯ ಕಾರ್ಟೂನಿಸ್ಟ್ ಗಳು ಕಾಣುತ್ತಿಲ್ಲ. ನಿಜವಾದ ಕಾರ್ಟೂನಿಸ್ಟ್ ಯಾವುದೇ ಐಡಿಯಾಲಜಿ ಪರ ನಿಲ್ಲುವುದಿಲ್ಲ. ಈಗ ಕಾರ್ಟೂನುಗಳಲ್ಲಿ ಒಂದಲ್ಲ ಒಂದು ಐಡಿಯಾಲಜಿಯನ್ನು ಹೇಳುವ ತವಕ ಕಾಣಿಸುತ್ತದೆ..’ ಎಂದು ವಿವರಿಸುತ್ತಾರೆ.

(ನಳ ಪೊನ್ನಪ್ಪ ಬರೆದ ಕಾರ್ಟೂನ್)

ಅಭಿವ್ಯಕ್ತಿಯನ್ನು ಸ್ವೀಕರಿಸುವ ಮನೋಭಾವ ರೂಪಿಸುವುದು ಮುಖ್ಯ ಎಂಬುದರಲ್ಲಿ ಎರಡು ಮಾತಿಲ್ಲ ಎಂಬುದನ್ನು ಡಾ.ಜೆ.ಬಾಲಕೃಷ್ಣ ಗಮನಿಸುತ್ತಾರೆ. ಸಹಿಷ್ಣುತೆಯ ಮನೋಭಾವ, ಸ್ವೀಕಾರ ಮನೋಭಾವವು ನಿರ್ದಿಷ್ಟ ತರಗತಿಯಿಂದ ಕಲಿಯುವಂತಹುದಲ್ಲ.ಅದೊಂದು ಜೀವನ ದೃಷ್ಟಿಕೋನ. ಈ ಮಾತನ್ನು ಚಿತ್ರಕಲಾವಿದ ರವಿಕುಮಾರ್ ಕಾಶಿ ಅವರು ಒಪ್ಪುತ್ತಾರೆ. ‘ಅಲ್ಲದೆ ದಾಳಿಯು,ಕೇವಲ ವ್ಯಂಗ್ಯಚಿತ್ರಕಾರರ ಅಭಿವ್ಯಕ್ತಿಯ ಮೇಲಷ್ಟೇ ಅಲ್ಲ, ಇತರ ಅಭಿವ್ಯಕ್ತಿಯ ಮೇಲೆಯೂ ನಡೆಯುತ್ತಿದೆ’ ಎಂಬುದನ್ನು ಅವರು ಗುರುತಿಸುತ್ತಾರೆ.

ನೋಡುವಿಕೆಯ ಕ್ರಮ

ಅಕ್ಷರಗಳನ್ನು ಮಕ್ಕಳಿಗೆ ಕಲಿಸುವ ಭರಾಟೆಯಲ್ಲಿ, ನೋಡುವಿಕೆಯ ಕ್ರಮವನ್ನು ಕಲಿಸುವ ಪ್ರಯತ್ನನಡೆಯುವುದು ಬಹಳ ಕಡಿಮೆ. ಸಂಗೀತ, ನೃತ್ಯದಂತೆಯೇ ಚಿತ್ರಗಳನ್ನು ನೋಡು, ಗೆರೆಗಳನ್ನು ಓದುವ ಪಾಠಗಳ ಅಗತ್ಯವಿದೆ. ಅಕ್ಷರದ ತಾಯಿಯೇ ದೃಶ್ಯ. ಕಲೆಯನ್ನು ಆಸ್ವಾದಿಸುವವರಿಗೂ, ಕಲೆಯನ್ನು ಸೃಷ್ಟಿಸುವವರಿಗೂ ನೋಡುವಿಕೆಯ ಪಾಠದ ಅಗತ್ಯವಿದೆ. ಸಮಾಜದ ಅಥವಾ ಪ್ರಭುತ್ವದ ಓರೆಕೋರೆಗಳನ್ನು ತಿದ್ದುವ ವ್ಯಂಗ್ಯಚಿತ್ರಗಳ ಉದ್ದೇಶವಾದರೂ ಏನು. ಅವು ಚಿಕಿತ್ಸಕ ಮಾದರಿಯಲ್ಲಿರಬೇಕೇ ಅಥವಾ ಚುಚ್ಚುವಿಕೆಯ ಮಾದರಿಯಲ್ಲಿ ಇರಬೇಕೇ ಎಂಬ ಪ್ರಶ್ನೆಯೂ ಈ ಸಂದರ್ಭದಲ್ಲಿ ಎದುರಾಗುತ್ತದೆ.

ಇರುಸು ಮುರುಸು ಉಂಟು ಮಾಡುವ ವ್ಯಂಗ್ಯಚಿತ್ರಗಳು ಗದ್ದಲವನ್ನು ಎಬ್ಬಿಸಬಹುದು. ಆಗ ಚಿತ್ರದ ಉದ್ದೇಶವೂ ವಿಫಲವಾಗುತ್ತದೆ. ಗದ್ದಲವೇನಿದ್ದರೂ ಸೃಜನಶೀಲತೆಯನ್ನು ಮುರುಟಿಸಬಲ್ಲುದಷ್ಟೇ ವಿನಃ ಚಿಕಿತ್ಸಕವಾಗಿರುವುದಕ್ಕೆ ಸಾಧ್ಯವಿಲ್ಲ. ಆದರೆ ಇರುಸು ಮುರುಸು ಎನ್ನುವುದು ಕೂಡ, ಟೀಕೆಯನ್ನು ಸ್ವೀಕರಿಸಬಲ್ಲ ಸಾಮರ್ಥ್ಯವನ್ನು ಅವಲಂಬಿಸಿದೆ. ಸಾಮಾಜಿಕ ಜವಾಬ್ದಾರಿಯ ದೃಷ್ಟಿಕೋನದಿಂದ ನಮ್ಮ ಯೋಚನೆಗಳು ಸಾಗಿದಾಗ, ಆ ಸಾಮರ್ಥ್ಯವನ್ನು ಸ್ವಯಂ ಬಲಪಡಿಸಿಕೊಳ್ಳಬಹುದು.

ಸತೀಶ್ ಆಚಾರ್ಯ ಅವರ ಪ್ರಕಾರ, ‘ಓದುಗರು ರಾಜಕೀಯ ಕಾರ್ಟೂನುಗಳನ್ನು ನೋಡುವ ರೀತಿ ಬದಲಾಗಿಲ್ಲ. ಜನರು ರಾಜಕೀಯದ ಆಗುಹೋಗುಗಳನ್ನು ಸ್ವೀಕರಿಸುವ ರೀತಿ ಬದಲಾಗಿದೆ. ಮೊದಲೆಲ್ಲ ಜನ ಸಾಮಾನ್ಯರು ಸರಕಾರದ ರೀತಿ-ನೀತಿಗಳನ್ನು ತೀಕ್ಷ್ಣ ನೋಟದಿಂದ ನೋಡುತ್ತಿದ್ದರು. ಆಗ ಅವರಿಗೆ ಕಾರ್ಟೂನು ತಮ್ಮ ಧ್ವನಿಯ ಭಾಗವೆನಿಸುತ್ತಿತ್ತು. ಈಗ ರಾಜಕೀಯ ಪಕ್ಷದ ಐಟಿ ಸೆಲ್ಲಿನ ಸೋಶಿಯಲ್ ಮೀಡಿಯಾ ಕ್ಯಾಂಪೇನ್ ನಿಂದಾಗಿ ಜನ ಸಾಮಾನ್ಯರು ಕೂಡ ಪಕ್ಷಗಳ ಅನಧಿಕೃತ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ. ತಮ್ಮ ಬದುಕನ್ನೇ ಸುಡುತ್ತಿರುವ ಸಮಸ್ಯೆಗಳ ಬಗ್ಗೆ ವ್ಯಂಗ್ಯಚಿತ್ರಗಳನ್ನು ನೋಡಿದಾಗಲೂ ಅವರಿಗೆ ಇದು ಸರಕಾರದ ವಿರುದ್ಧದ ಪಿತೂರಿ ಅನಿಸುತ್ತದೆ.’

ವ್ಯಂಗ್ಯಚಿತ್ರಕಾರರು ಮುದ್ರಣ ಮಾಧ್ಯಮದ ಆಶ್ರಯದಲ್ಲಿದ್ದಾಗ, ಆ ಚಿತ್ರವು ಸಂಪಾದಕ ಮಂಡಳಿಯನ್ನು ಹಾದು ಬರುತ್ತಿತ್ತು. ಆಗ ಅದು ತಕ್ಕಮಟ್ಟಿಗೆ ಸಮೂಹದ ಒಪ್ಪಿಗೆ ಎಂಬ ಪ್ರಾಥಮಿಕ ಅಂಕಿತವನ್ನು ಪಡೆಯುತ್ತದೆ. ಇಂದು ಸಮೂಹದ ಜವಾಬ್ದಾರಿಯನ್ನು ಪಕ್ಕಕ್ಕಿಟ್ಟು, ವ್ಯಂಗ್ಯಚಿತ್ರಗಳನ್ನು ಸಮಾಜಕ್ಕೆ ಕೊಟ್ಟುಬಿಡಲು ಸಾಮಾಜಿಕ ಜಾಲತಾಣಗಳಿವೆ. ಆಗ ಚಿತ್ರದಲ್ಲಿರುವ ಮೊನಚಿಗೆ ಎದುರಾಗುವ ಪ್ರತಿಕ್ರಿಯೆಯನ್ನು ಒಂಟಿಯಾಗಿ ಎದುರಿಸಬೇಕಾಗುತ್ತದೆ.

‘ವ್ಯಂಗ್ಯ ಚಿತ್ರಗಳು ನಿರ್ದಿಷ್ಟವಾದ ಘಟನೆಯನ್ನು ಮಾತ್ರ ಲೇವಡಿ ಮಾಡುತ್ತವೆ. ಧರ್ಮ, ರಾಜಕಾರಣದಂತಹ ವಿಷಯಗಳು ಬಂದಾಗ ಪ್ರತಿಕ್ರಿಯೆಗಳ ತೀವ್ರತೆ ಹೆಚ್ಚಿರುತ್ತದೆ. ಉದಾಹರಣೆಗೆ ಇಸ್ಲಾಮಿಕ್ ದೇಶಗಳಿಂದ ನೆದರ್ ಲ್ಯಾಂಡ್ಸ್ ಗೆ ಅನೇಕರು ವಲಸೆ ಹೋದರು. ಅವರೆಲ್ಲ ಹೊಸ ದೇಶವನ್ನು ತಮ್ಮ ದೇಶವೆಂದು ಸ್ವೀಕಾರ ಮಾಡಿದ್ದಾರೆಯೇ ಎಂದು ಪರೀಕ್ಷಿಸಲು, ಪ್ರವಾದಿ ಮಹಮ್ಮದರ ವ್ಯಂಗ್ಯಚಿತ್ರಗಳ ಸರಣಿಯನ್ನು ಸ್ಥಳೀಯ ಪತ್ರಿಕೆ ಪ್ರಕಟ ಮಾಡಿತು. ಈ ಸರಣಿ ಚಿತ್ರಗಳ ದೆಸೆಯಿಂದಾಗಿ ಉಂಟಾದ ಗಲಭೆಯಲ್ಲಿ ನೂರಾರು ಜನರು ಕೊಲೆಯಾದರು. ಹಾಂಕಾಂಗ್ ಚೀನಾದ ಸುಪರ್ದಿಗೆ ಸೇರಿದ ಬಳಿಕ, ವ್ಯಂಗ್ಯಚಿತ್ರಗಳಿಗೆ ಸಂಬಂಧಿಸಿದ ವಿವಾದಗಳು ನೆಪವಾಗಿ ಪತ್ರಿಕೆಗಳೇ ಮುಚ್ಚಿಹೋದವು’ ಎಂದು ಎಂದು ವಿಶ್ಲೇಷಿಸುತ್ತಾರೆ ಚಿತ್ರಕಲಾವಿದ ಎಚ್.ಎ. ಅನಿಲ್ ಕುಮಾರ್.

ಅವರು ಹೇಳುವಂತೆ, ‘ಎಲ್ಲಿ ಪ್ರಜಾಪ್ರಭುತ್ವ ಇರುವುದಿಲ್ಲವೋ, ಅಲ್ಲಿ ಮೊನಚಾದ ವ್ಯಂಗ್ಯಚಿತ್ರಗಳು ಮೂಡಿಬರಲು ಸಾಧ್ಯವಿಲ್ಲ. ಅಲ್ಲದೆ ಡಿಜಿಟಲ್ ಕ್ಷೇತ್ರವು ಸಬಲವಾಗುತ್ತಿದ್ದಂತೆಯೇ, ಪ್ರತಿಕ್ರಿಯೆ ಎನ್ನುವ ಪರಿಕಲ್ಪನೆಯೆ ಸಾಂಸ್ಥಿಕವಾಗಿದೆ. ಆದರೆ ವ್ಯಂಗ್ಯಚಿತ್ರವು ಒಂಟಿಯಾಗಿದೆ. ಇಂತಹ ಸಂದರ್ಭದಲ್ಲಿ ಸಾಂಸ್ಥಿಕ ನೆಲೆ ಇಲ್ಲದೆ ಇದ್ದಾಗ ವ್ಯಂಗ್ಯಚಿತ್ರಕಾರರುಕಷ್ಟ ಎದುರಿಸಬೇಕಾಗಬಹುದು. ಹಾಗಾಗಿ ಡಾ.ಯು.ಆರ್.ಅನಂತಮೂರ್ತಿ ಒಂದು ಕಡೆ ಹೇಳಿದಂತೆ, ವಿಮರ್ಶೆಯಲ್ಲಿಯೂ ಉಪಾಯವಿದ್ದರೆ ಉದ್ದೇಶವು ನೆರವೇರುವುದು. ಬಹುಶಃ ಬುದ್ಧನ ಮಧ್ಯಮ ಮಾರ್ಗವೇ ಇಲ್ಲಿ ಸೂಕ್ತವೆನಿಸುತ್ತದೆ.

ಗೆರೆಗಳಲ್ಲಿಯೂ ಸಮಗ್ರ ನೋಟವಿರಬೇಕು. ನೋಡುವವರಲ್ಲಿಯೂ ಸುಧಾರಣೆಯ ಹಂಬಲವಿರಬೇಕು.