ಮನುಕುಲ ಕಂಡ ಘೋರ ದುರಂತಗಳ ಹಸಿ ಹಸಿ ವಿವರಗಳು ಓದುಗರ ಗಂಟಲು ಕಟ್ಟಿಸುತ್ತವೆ. ಅಧಿಕಾರ ಮಾತ್ರದಿಂದ ಒಂದು ಜನಾಂಗಕ್ಕೆ ಸೇರಿದ ಜನರೆಲ್ಲರ ಹೆಸರು, ವಿದ್ಯೆ, ಊರುಗಳನ್ನೆಲ್ಲ ತೊಡೆದು ಹಾಕಿ ಸಂಖ್ಯೆಯೊಂದರಿಂದ ಮಾತ್ರ ಅವರನ್ನೆಲ್ಲ ಸಾಮೂಹಿಕವಾಗಿ ಗುರುತಿಸುವ ಈ ಜಾಗದಲ್ಲಿ ಇರಬೇಕಾಗಿ ಬಂದವರು ಬದುಕನ್ನು ಹೇಗೆ ಕಾಪಾಡಿಕೊಳ್ಳುತ್ತಿದ್ದರು ಎಂಬ ಬಗ್ಗೆ ಜ್ವಲಂತ ವಿವರಣೆಗಳಿವೆ. ಈ ಪುಸ್ತಕದ ಮೊದಲ ಭಾಗದಲ್ಲಿ ಆಸ್ವಿಚ್ ಎಂಬ ಕುಖ್ಯಾತ ನಾಜಿ ಕ್ಯಾಂಪಿನಲ್ಲಿ ಲೇಖಕರನ್ನು ಬಂಧಿಸಿಟ್ಟಾಗ ಅವರು ಅವರ ಸಹಚರರೊಂದಿಗೆ ನಿಷ್ಕಾರಣವಾಗಿ ಅನುಭವಿಸಿದ ಪಾಡನ್ನು ದಾಖಲಿಸಿದ್ದಾರೆ.
‘ಕಾವ್ಯಾ ಓದಿದ ಹೊತ್ತಿಗೆ’ಯಲ್ಲಿ ವಿಕ್ಟರ್ ಫ್ರಾಂಕಲ್ ಬರೆದ ‘ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್’ ಕೃತಿಯ ಕುರಿತು ಬರೆದಿದ್ದಾರೆ ಕಾವ್ಯಾ ಕಡಮೆ

 

ಮನುಷ್ಯ ಅನುಭವಿಸುವ ಯಾತನೆಗೆ ಕೊನೆ ಮೊದಲಿದೆಯೇ? ಹುಟ್ಟುತ್ತ ಅಳುತ್ತಲೇ ಬುವಿಗೆ ಬರುವ ಮಗುವಿಗೆ ದಕ್ಕುವ ದುಃಖ ಯಾವುದು? ನಿಜವೋ- ಕಲ್ಪಿತವೋ, ಹೊಡೆತಗಳು ಬೀಳುತ್ತಲೇ ಇದ್ದರೂ ನಾವೇಕೆ ಮತ್ತೆ ಮತ್ತೆ ಎದ್ದು ಬದುಕುತ್ತಲೇ ಇರುತ್ತೇವೆ? ದೇವರು, ಧರ್ಮ, ದೇಶ, ಕುಟುಂಬ, ಸಂಬಂಧಗಳು, ಪ್ರೇಮ, ಸರಿ- ತಪ್ಪುಗಳ ಮೀಮಾಂಸೆ ಮುಂತಾದವುಗಳನ್ನೆಲ್ಲ ಈ ಬದುಕಿಗೊಂದು ಅರ್ಥ ಕಂಡುಕೊಳ್ಳಲೇ ನಾವು ಸೃಷ್ಟಿಸಿಕೊಂಡಿದ್ದಲ್ಲವೇ? ಎಲ್ಲ ಇರುವವರನ್ನೂ, ಏನೂ ಇಲ್ಲದವರನ್ನೂ ಸಮನಾಗಿ ಸೇರಿಸುವುದು ಈ ದುಃಖ ಎಂಬ ಸರ್ವನಿಯಾಮಕನೇ ಇರಬೇಕು! ನೋವಲ್ಲಿ ಮೀಯುತ್ತಲೇ ಮನುಷ್ಯರಾಗುವ ಈ ಸೋಜಿಗಕ್ಕೆ ಏನೆಂದು ಹೆಸರು ಕೊಡುವುದು? 1946ರಲ್ಲಿ ಬಿಡುಗಡೆಯಾದ ‘ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್’ ಪುಸ್ತಕದಲ್ಲಿ ಲೇಖಕರಾದ ವಿಕ್ಟರ್ ಫ್ರಾಂಕಲ್ ತೋರಿಸಿರುವುದು ಇಂಥದೇ ಸಂಕೀರ್ಣ ದುಃಖ ಅನಾವರಣಗೊಳ್ಳುವ ಬಗೆಯನ್ನು. ಈ ಪುಸ್ತಕ ಹೊರಡಿಸುವ ಕಂಪನಗಳಿಂದ ತಪ್ಪಿಸಿಕೊಳ್ಳುವುದು ಕಷ್ಟ.

ಅದು ಎರಡನೇ ಮಹಾಯುದ್ಧದ ಸಮಯ. 1942ರಲ್ಲಿ ಆಸ್ಟ್ರಿಯಾದ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿ ಕೆಲಸ ನಿರ್ವಹಿಸುತ್ತಿದ್ದ ಫ್ರಾಂಕಲ್‌ರನ್ನು ಅವರ ಧರ್ಮದ ಆಧಾರದ ಮೇಲೆ ಕಾನ್ಸನ್ಟ್ರೇಶನ್ ಕ್ಯಾಂಪಿನಲ್ಲಿ ಇಡಲಾಗಿದೆ. ಅವರೊಟ್ಟಿಗೆ ಅವರ ತಂದೆ, ತಾಯಿ, ಹೆಂಡತಿಯನ್ನೂ ಪ್ರತ್ಯೇಕವಾಗಿ ಬಂಧಿಸಲಾಗಿದೆ. ಮನುಕುಲ ಕಂಡ ಘೋರ ದುರಂತಗಳ ಹಸಿ ಹಸಿ ವಿವರಗಳು ಓದುಗರ ಗಂಟಲು ಕಟ್ಟಿಸುತ್ತವೆ. ಅಧಿಕಾರ ಮಾತ್ರದಿಂದ ಒಂದು ಜನಾಂಗಕ್ಕೆ ಸೇರಿದ ಜನರೆಲ್ಲರ ಹೆಸರು, ವಿದ್ಯೆ, ಊರುಗಳನ್ನೆಲ್ಲ ತೊಡೆದು ಹಾಕಿ ಸಂಖ್ಯೆಯೊಂದರಿಂದ ಮಾತ್ರ ಅವರನ್ನೆಲ್ಲ ಸಾಮೂಹಿಕವಾಗಿ ಗುರುತಿಸುವ ಈ ಜಾಗದಲ್ಲಿ ಇರಬೇಕಾಗಿ ಬಂದವರು ಬದುಕನ್ನು ಹೇಗೆ ಕಾಪಾಡಿಕೊಳ್ಳುತ್ತಿದ್ದರು ಎಂಬ ಬಗ್ಗೆ ಜ್ವಲಂತ ವಿವರಣೆಗಳಿವೆ. ಈ ಪುಸ್ತಕದ ಮೊದಲ ಭಾಗದಲ್ಲಿ ಆಸ್ವಿಚ್ ಎಂಬ ಕುಖ್ಯಾತ ನಾಜಿ ಕ್ಯಾಂಪಿನಲ್ಲಿ ಲೇಖಕರನ್ನು ಬಂಧಿಸಿಟ್ಟಾಗ ಅವರು ಅವರ ಸಹಚರರೊಂದಿಗೆ ನಿಷ್ಕಾರಣವಾಗಿ ಅನುಭವಿಸಿದ ಪಾಡನ್ನು ದಾಖಲಿಸಿದ್ದಾರೆ.

ಈ ಕ್ಯಾಂಪುಗಳಿಗೆ ತಳ್ಳಲ್ಪಟ್ಟ ಕೆಲವೇ ದಿನಗಳಲ್ಲಿ ಫ್ರಾಂಕಲ್‌ರ ತಂದೆ, ತಾಯಿ ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಆ ಬಗ್ಗೆ ಲೇಖಕರಿಗೆ ಗೊತ್ತಾಗುವುದು ನಂತರ, ಯುದ್ಧ ಮುಗಿದು ಅವರು ಬಿಡುಗಡೆ ಆದಮೇಲೆ. ಆದರೆ ಕಾನ್ಸನ್ಟ್ರೇಶನ್ ಕ್ಯಾಂಪುಗಳು ಹುಟ್ಟಿಸುವ ನಿರಾಶಾವಾದವನ್ನು ಮೀರಲು ಬಂಧಿಗಳೆಲ್ಲ ಅವರವೇ ದಾರಿಗಳನ್ನು ಹುಡುಕಿಕೊಳ್ಳಲೇಬೇಕಾಗುತ್ತದೆ. ಮದುವೆಯಾಗಿ ಒಂಬತ್ತೇ ತಿಂಗಳಿಗೆ ಲೇಖಕರು ಪತ್ನಿಯನ್ನಗಲಿ ಈ ಕ್ಯಾಂಪಿಗೆ ಬಂದಿದ್ದಾರೆ. ಅವರನ್ನು ಜೀವಿತವಾಗಿಡುವುದು ತನ್ನ ಹೆಂಡತಿಯನ್ನು ಇನ್ನೊಂದೇ ಒಂದು ಬಾರಿ ಕಾಣಲು ಸಾಧ್ಯವಾಗಬೇಕು ಎಂಬ ಅಭೀಪ್ಸೆ. ಮತ್ತು ಕಳೆದುಕೊಂಡ ಸಂಶೋಧನಾ ಪುಸ್ತಕದ ಪ್ರತಿಯನ್ನು ಇನ್ನೊಮ್ಮೆ ರಚಿಸಬೇಕು ಎಂಬ ನಿಚ್ಚಳ ಕನಸು. ಹೀಗಾಗಿ ಕಳೆದುಹೋದ ಆ ಪುಸ್ತಕದ ಥಿಯರಿಗಳನ್ನು ಮನಸ್ಸಿನಲ್ಲೇ ನೋಟ್ ಮಾಡಿಕೊಳ್ಳುತ್ತಲೇ ಇರುತ್ತಾರೆ. ಹೆಂಡತಿ ಬದುಕಿದ್ದಾಳೋ ಇಲ್ಲವೋ ಎಂಬ ಸಂಕಟವೇ ಉರಿಯುತ್ತಿರುವಾಗ ಆ ಬೆಂಕಿಯನ್ನು ನೆನಪು ಎಂಬ ತಣ್ಣೀರಿನಿಂದ ಆರಿಸುವುದು ಹೇಗೆ? ಕ್ಯಾಂಪಿನ ಬೇಗುದಿಯಲ್ಲೂ ಅವರಿಗೆ ಹೆಂಡತಿ ಹೇಗೆ ನಿಲ್ಲುತ್ತಿದ್ದಳು, ಹೇಗೆ ಎಲ್ಲಿ ಕುಳಿತು ಏನು ಮಾತನಾಡುತ್ತಿದ್ದಳು ಎಂಬ ಸ್ಪಷ್ಟ ಚಿತ್ರಗಳು ಕಣ್ಮುಂದೆ ಬರುತ್ತವೆ. ಅವೇ ಅವರನ್ನು ಒಂದೊಂದೇ ದಿನವನ್ನು ಕ್ಯಾಂಪ್ ಎಂಬ ಆ ನರಕದಲ್ಲಿ ಜೀವ ಹಿಡಿದಿಟ್ಟುಕೊಳ್ಳುವಂತೆ ಮಾಡುತ್ತವೆ.

ಈ ಪುಸ್ತಕದಲ್ಲಿ ನನಗೆ ಬಹಳ ಇಷ್ಟವಾದ ಉಪಮೆಯೆಂದರೆ ಲೇಖಕರು ಮನುಷ್ಯನ ಸಂಕಟವನ್ನು ಒಂದು ಸಿಲೆಂಡರ್‌ನ ಒಳಗಿರಬಹುದಾದ ಅನಿಲಕ್ಕೆ ಹೋಲಿಸಿರುವುದು. ಆ ಸಿಲೆಂಡರಿನಲ್ಲಿ ಎಷ್ಟೇ ಕಡಿಮೆ ಪ್ರಮಾಣದ ಅನಿಲವಿದ್ದರೂ ಅದು ಇಡೀ ಸಿಲೆಂಡರಿನ ಒಳಗನ್ನು ಸಮನಾಗಿ ತುಂಬಿಕೊಂಡಿರುತ್ತದೆ. ಅದೇ ರೀತಿ ದುಃಖವೂ ಅಷ್ಟೇ, ಯಾವ ಪ್ರಮಾಣದಲ್ಲಿದೆ ಎಂಬುದು ನಗಣ್ಯ. ಇದೆ ಎಂಥಾದರೆ ಅದು ಮನುಷ್ಯರ ಒಳಗನ್ನು ಒಂದಿಂಚೂ ಬಿಡದೇ ಆವರಿಸಿರುತ್ತದೆ.

ಆದರೆ ಆ ಸಂಕಟಲ್ಲೊಂದು ಅರ್ಥ ದೊರಕಿಸಿಕೊಂಡ ತಕ್ಷಣ ಅನುಭವಿಸಿದ ದುಃಖಕ್ಕೂ ಒಂದು ಮಹತ್ತಾದ ಅರ್ಥ ಹುಟ್ಟಿಕೊಂಡು ಬಿಡುತ್ತದೆ. ಆ ನಂತರ ಎಂಥದೇ ಕಷ್ಟ ಬಂದರೂ ನಾವು ನೋವು ಮರೆತು ಆ ಅರ್ಥದ ಸಾಕ್ಷಾತ್ಕಾರಕ್ಕೇ ಬದುಕನ್ನು ಮುಡಿಪಾಗಿಟ್ಟು ಬಿಡುತ್ತೇವೆ. ಅದೇ ಕಾರಣಕ್ಕೆ ಮಕ್ಕಳನ್ನು ಕಷ್ಟಪಟ್ಟು ಬೆಳೆಸುವುದರಲ್ಲಿಯೋ, ಪ್ರತಿಭೆಯನ್ನು ನೆಚ್ಚಿ ಅವಕಾಶ ಅರಸುತ್ತ ಹೊರಟೋ ಜೀವನವನ್ನು ಕಳೆದುಬಿಡುತ್ತೇವೆ, ಆ ಕ್ರಿಯೆಗಳಲ್ಲೇ ಬದುಕಿನ ಅರ್ಥ ಹುಡುಕಲು ಶ್ರಮಿಸುತ್ತೇವೆ ಎನ್ನುತ್ತಾರೆ.

ಎಲ್ಲ ಇರುವವರನ್ನೂ, ಏನೂ ಇಲ್ಲದವರನ್ನೂ ಸಮನಾಗಿ ಸೇರಿಸುವುದು ಈ ದುಃಖ ಎಂಬ ಸರ್ವನಿಯಾಮಕನೇ ಇರಬೇಕು! ನೋವಲ್ಲಿ ಮೀಯುತ್ತಲೇ ಮನುಷ್ಯರಾಗುವ ಈ ಸೋಜಿಗಕ್ಕೆ ಏನೆಂದು ಹೆಸರು ಕೊಡುವುದು?

“ಫೈಂಡ್ ಯುವರ್ ಗ್ರೇಟರ್ ಕಾಸ್” ಅಂದರೆ ನೀವೇಕೆ ಬದುಕಿದ್ದೀರಿ ಎಂಬುದಕ್ಕೆ ಮಹತ್ವವಾದ ಅರ್ಥವನ್ನು ನೀವೇ ಹುಡುಕಿಕೊಳ್ಳಿ, ಆಗ ಎಲ್ಲದಕ್ಕೂ ತಂತಾನೇ ಜೀವ ಬರುತ್ತದೆ ಎಂಬುದು ಲೇಖಕರು ಬೇರೆ ಬೇರೆ ಕತೆ, ನಿದರ್ಶನಗಳ ಮೂಲಕ ಕಟ್ಟಿಕೊಡುತ್ತಾರೆ, ಬದುಕಿನಲ್ಲಿ ಸ್ವಾತಂತ್ರ್ಯದ ಮೌಲ್ಯವನ್ನೂ ಒತ್ತಿಹೇಳುತ್ತಾರೆ. ಇನ್ನೊಬ್ಬರು ನಮ್ಮ ಸ್ವಾತಂತ್ರ್ಯ ಕಸಿದುಕೊಳ್ಳುವವರೆಗೆ ಅಲ್ಲಿನ ತನಕ ನಮಗೆ ಲಭ್ಯವಿದ್ದ ಆಯ್ಕೆಗಳ ಮೇಲೆ ನಮ್ಮ ಕಣ್ಣೇ ಹರಿದಿರುವುದಿಲ್ಲವಲ್ಲ ಎಂಬ ಬಗ್ಗೆ ಆಶ್ಚರ್ಯ ಪಡುತ್ತಾರೆ. ‘ಏಕೆ?’ ಎಂಬುದಕ್ಕೊಂದು ಸರಿಯಾದ ಉತ್ತರವಿದ್ದರೆ ಏನನ್ನು ಬೇಕಿದ್ದರೂ ಜಯಿಸಬಹುದು ಎಂಬುದನ್ನು ನಿರೂಪಿಸುತ್ತಾರೆ. ಹಾಗಂತ ಇದು ‘ಮೂವತ್ತು ದಿನದಲ್ಲಿ ಬದುಕಲು ಕಲಿಯಿರಿ’ ತರಹದ ಸೆಲ್ಫ್ ಹೆಲ್ಪ್ ಪುಸ್ತಕವಲ್ಲ. ಬದಲಿಗೆ ಅನುಭವದಿಂದಲೇ ಹೊರಟ ಬದುಕುವ ಕಲೆಯ ಆಶುಗೀತೆ.

ಈ ಪುಸ್ತಕದ ಎರಡನೆಯ ಭಾಗ ಲಾಗೋಥೆರಪಿ ಎಂಬ ಚಿಕಿತ್ಸೆಗೆ ಸೇರಿದ್ದು. ಫ್ರಾಂಕಲ್ ವಿದ್ಯಾರ್ಥಿ ದೆಸೆಯಿಂದಲೇ ಸಿಗ್ಮಂಡ್ ಫ್ರೈಡ್‌ನ ಮನೋರೋಗ ಥಿಯರಿಗಳಿಗೆ ಸವಾಲೆಸೆದವರು. ಫ್ರೈಡ್ ಜಗತ್ತಿಗೆ ನೀಡಿದ ಸೈಕೋ- ಅನಾಲಿಸಿಸ್ ಮತ್ತು ಆಡ್ಲರ್‌ನ ಪ್ರಸಿದ್ಧ ಇಂಡಿವಿಜುವಲ್ ಸೈಕಾಲಜಿ ಮಾರ್ಗಕ್ಕಿಂಥ ಬೇರೆಯ ಥರದ್ದು ಈ ಲಾಗೋಥೆರಪಿ. ಈ ಪುಸ್ತಕದಲ್ಲಿ ಫ್ರಾಂಕಲ್ ನಿರೂಪಿಸಿರುವುದು ‘ಬದುಕಿನ ಅರ್ಥ’ದ ಮೇಲೆ ಮಾನವನ ಮನಃಸ್ಥೈರ್ಯವನ್ನು ಕಟ್ಟಬಹುದು ಎಂಬುದು. ಎಷ್ಟೆಲ್ಲ ಜನ ಈ ಬಗ್ಗೆ ಒಮ್ಮೆಯೂ ಯೋಚಿಸದೇ ಈ ಥೆರಪಿಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಲೇ ಇರುತ್ತಾರೆ. ಬದುಕಿಗೆ ನಿಖರವಾದ ಒಂದು ಅರ್ಥವೆಂಬುದು ಇಲ್ಲದೇ ಹೋದರೆ ಎಂಥ ಸುಖದಲ್ಲಿದ್ದರೂ ಅದು ನರಕವೇ ಸರಿ.

ಒಮ್ಮೆ ಖಿನ್ನತೆಗೆ ಒಳಗಾದ ರೋಗಿಯೊಬ್ಬರು ಫ್ರಾಂಕಲ್‌ರ ಬಳಿ ಚಿಕಿತ್ಸೆಗೆ ಬರುತ್ತಾರೆ.

“ನನ್ನ ಹೆಂಡತಿ ಇತ್ತೀಚೆಗೆ ತೀರಿ ಹೋದಳು. ಇಂಥ ಆಘಾತವನ್ನು ನಾನೆಂದೂ ಬದುಕಿನಲ್ಲಿ ಅನುಭವಿಸಿಲ್ಲ. ಈ ನೋವಿನಿಂದ ಹೇಗೆ ಹೊರಬರುವುದು?”

“ಈಗ ಹೀಗೆ ಕಲ್ಪಿಸಿಕೊಳ್ಳಿ. ಒಂದು ವೇಳೆ ನೀವು ತೀರಿ ಹೋಗಿ ನಿಮ್ಮ ಹೆಂಡತಿ ಒಂಟಿಯಾಗಿ ಬದುಕಬೇಕಾದ ಪಾಡು ಬಂದಿದ್ದರೆ ಅವರಿಗೆ ಹೇಗನಿಸುತ್ತಿತ್ತು?”

“ಅವಳು ಆ ನೋವು ಪಡುವುದನ್ನು ನನಗೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅವಳಿಗೆ ಬಹಳ ದುಃಖವಾಗುತ್ತಿತ್ತು. ಅವಳೂ ನನ್ನನ್ನು ಅಷ್ಟೇ ಹಚ್ಚಿಕೊಂಡಿದ್ದಳು.”

“ಹಾಗಿದ್ದರೆ ಹೇಳಿ, ನೀವು ಬದುಕುಳಿದು ನಿಮ್ಮ ಹೆಂಡತಿ ಪಡಬಹುದಾದ ನೋವನ್ನು ನೀವು ನೀಗಿಕೊಂಡಿರಲ್ಲ. ಅವರಿಗೆ ಆ ದುಃಖವನ್ನು ಕೊಡಲಿಲ್ಲ ಅಂತ ನೆಮ್ಮದಿ ಪಡಿ.”

ಹಿರಿಯರಾದ ಅವರು ಡಾಕ್ಟರ್ ಫ್ರಾಂಕಲ್‌ರ ಮಾತಿಗೆ ತಲೆದೂಗಿ ಬದುಕನ್ನು ಹೊಸ ಕೋನದಿಂದ ನೋಡಲು ಪ್ರಾರಂಭಿಸುತ್ತಾರೆ.
ಈ ಪುಸ್ತಕದ ತುಂಬ ಇಂಥದೇ ಹಲವಾರು ಚಿಕಿತ್ಸೆಯ ಮಾರ್ಗಗಳು ದಾಖಲಾಗಿವೆ. ಮೊದಲ ಭಾಗದಲ್ಲಿ ಲೇಖಕರು ಹೇಳುವ ನಾಜಿ ರೆಜೀಮಿನ ಕತೆಗಳು ನಾಗರಿಕ ಸಮಾಜ ತಲೆ ತಗ್ಗಿಸುವಂತಿವೆ. ತಮ್ಮದಲ್ಲದ ತಪ್ಪಿಗೆ ಕೊನೆಯುಸಿರೆಳೆದ ಲಕ್ಷಾಂತರ ಜೀವಗಳ ಪಾಡನ್ನು ಹತ್ತಿರದಿಂದ ಕಂಡಂತೆ ಭಾಸವಾಗಿ ಸಂಕಟವಾಗುವುದು.

ನಮ್ಮೊಳಗಿನ ದುಃಖಕ್ಕೆ ಅರ್ಥ ಹುಡುಕಿದಷ್ಟು ತೀವ್ರವಾಗಿ ನಾವ್ಯಾರೂ ಸಂತೋಷಕ್ಕೆ ಅರ್ಥ ಹುಡುಕಲು ಪ್ರಯತ್ನಿಸಿಲ್ಲವೇನೋ. ಜೊತೆಗೆ ನೋವಿನ ಸಾಕ್ಷಾತ್ಕಾರವೇ ನಮ್ಮನ್ನು ಮನುಷ್ಯರಾಗಿಸುತ್ತ ಸಾಗುತ್ತದೆ ಎಂಬುದೂ ವಿದಿತ. ಎಲ್ಲವೂ ಸತ್ಯ ನಿಜ, ಆದರೆ ಈ ಎಲ್ಲದಕ್ಕೂ ಒಂದು ಅರ್ಥ ಬೇಕಲ್ಲ, ಅದನ್ನು ಹೇಗೆ ಕಂಡುಕೊಳ್ಳುವುದು ಎಂಬ ಗೊಂದಲದಲ್ಲಿರುವವರಿಗೆ ‘ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್’ ಎಂಬ ಈ ಪುಸ್ತಕ ದಾರಿದೀಪವಾಗಬಲ್ಲದು.