ಮನೆಗೆ ಬಂದವರು ಬಾ ಇಲ್ಲಿ ಎಂದು ಕರೆದರು. ಓದು ಈ ಚೀಟಿ ಎಂದು ಕೊಟ್ಟರು. ಅಲ್ಲೊಬ್ಬ ವೈದ್ಯ ಮಹಾಶಯ ಮನುಷ್ಯರ ನೆರಳಿಗೆ ‘ಟ್ರೀಟ್‌ಮೆಂಟ್’ ಕೊಡುತ್ತಿದ್ದನಂತೆ. ಅವರಿಗೆ ಚಿಕ್ಕಮಗಳೂರಿನಲ್ಲಿ ಸನ್ಮಾನವಂತೆ. ಅವರನ್ನು ನೋಡಲು ನೂಕು ನುಗ್ಗಲಾಟ ಸಂತೆಯಲ್ಲಿ. ಎಷ್ಟು ನಿಜ, ಎಷ್ಟು ಸುಳ್ಳು, ವಾಸಿಯಾಗುವುದಾದರೂ ಹೇಗೆ. ಇಂಥವರಿಗೂ ರೋಗಿಗಳ ನುಗ್ಗಾಟವಿರುತ್ತೆಲ್ಲ ಅಂದರು. ಮಾರನೆಯ ದಿನದ ಪತ್ರಿಕೆ ನೋಡಿ ಇನ್ನೂ ಕುತೂಹಲ, ಆಶ್ಚರ್ಯ, ಆ ವೈದ್ಯ ಮಹಾಶಯನಿಗೆ ಕೊಟ್ಟ ಸನ್ಮಾನದ ಬಗ್ಗೆ, ಪತ್ರಿಕೆಯಲ್ಲಿ ದೊಡ್ಡದಾಗಿ ವರದಿಯಾಗಿದೆ! ಮೂಡಿಗೆರೆ ಹ್ಯಾಂಡ್ ಪೊಸ್ಟ್ ನಲ್ಲಿ ರಾಜೇಶ್ವರಿ ತೇಜಸ್ವಿ ಬರಹ 

ಬೆಳಿಗ್ಗೆ ಮುಂಚೆ ಒಬ್ಬ ಪತ್ರಕರ್ತರು ಇವರಿಗೆ ಫೋನ್ ಮಾಡಿದರು.
‘ನಾಳೆ ನಿಮ್ಮ ಮನೆಗೆ ಬರಲೆ ಸಾರ್!’
‘ಯಾಕೆ?’
‘ಸುಮ್ಮನೆ ನಿಮ್ಮನ್ನು ಮಾತಾಡಿಸಿಕೊಂಡು ಬರಲೆಂದು.’
‘ಹಾಗಾದರೆ ಬರಬೇಡ ಮಾರಾಯ.’
‘ಇಲ್ಲ ಸರ್, ನಿಮ್ಮನ್ನು ಪತ್ರಿಕೆಗಾಗಿ ಒಂದು ಸಂದರ್ಶನ ಮಾಡಬೇಕಿತ್ತು. ಬರಲೇ ಬೇಕಾಗಿದೆ ಸರ್.’
‘ಹೋಗಲಿ ಬಾ ಮಾರಾಯ.’

ಇವರಿಗೆ ಯಾರು ಬಂದರೂ ತಾಪತ್ರಯ ಅನ್ನಿಸಲಿಕ್ಕಾಗಿತ್ತು. ಸುಖಾಸುಮ್ಮನೆ ಮಾತನಾಡುವುದು ಏಕೆ? ಎಂದು. ಈ ಪತ್ರಕರ್ತನು ಮಾರನೆದಿನ ಬಂದನು. ಪೇಪರ್ ಪೆನ್ನು ಹಿಡಿದುಕೊಂಡಿದ್ದನು. ಏನೇನೋ ಮಾತನಾಡಿದ, ಪ್ರಶ್ನೆ ಶುರುಮಾಡಿದ. ಕಾನೂರು ಹೆಗ್ಗಡತಿ ಬಗ್ಗೆಯೆಂದು ತೋರುತ್ತೆ. ಮೊದಲನೆಯ ಪ್ರಶ್ನೆಗೇ ತಿಳಿಯಿತು ಇವನು ಏನೆಂಬುದು. “‘ಕಾನೂರು ಸುಬ್ಬಮ್ಮ ಹೆಗ್ಗಡತಿ’ ಓದಿರುವಿಯೇನಯ್ಯ.” ಇವರು ಕೇಳಿದರು. ‘ಇಲ್ಲ ಸರ್.’ ‘ಮತ್ತೆ? ನಾನು ಹೇಳಿದ್ದನ್ನು ನೀನು ಗ್ರಹಿಸುವುದಾದರೂ ಎಷ್ಟನ್ನು? ಹೇಗೆ? ನೀನು ಏನು ಬರೆಯಬಲ್ಲೆ? ಮೇಲಿನವರು ನಾಲ್ಕು ಪ್ರಶ್ನೆ ಹೇಳಿರುವುದನ್ನು ಬರೆದುಕೊಂಡು ಬಂದು ಸಂದರ್ಶನ ಮಾಡ್ತಿಯಾ ನೀನು. ಮೊದಲು ಪುಸ್ತಕ ಓದಿಕೊಂಡು ಬಾ. ಈಗ ಹೊರಡು’ ಎಂದರು. ತಾಳ್ಮೆಗೆಟ್ಟು ಹೇಳಿದರು. ಹೀಗೆ….

ಇವರು ಅತೀ ಸೂಕ್ಷ್ಮಮತಿಗಳು. ‘ಇಂಪರ್ಫೆಕ್ಷನ್’ ಕಂಡರೆ ಸಹಿಸಕ್ಕಾಗುತ್ತಿರಲಿಲ್ಲ. ಯಾವುದನ್ನೂ ತೀವ್ರವಾಗಿ ಅನುಭವಿಸುತ್ತಿದ್ದವರು. ತೀವ್ರವಾಗಿ ಜೀವಿಸುತ್ತಿದ್ದವರು. ಹಾಗಾಗಿಯೇ ಇವರ ವ್ಯಕ್ತಿತ್ವ ಅಷ್ಟೊಂದು ‘ಕಲರ್‌ಫುಲ್’ ಆಗಿದ್ದುದ್ದು. ಇವರ ಮನಸ್ಸು ಎಷ್ಟು ಸೂಕ್ಷ್ಮವಾಗಿತ್ತೋ ದೇಹವೂ ಅಷ್ಟೆ ಇತ್ತೆನ್ನುವುದಕ್ಕೆ ಇಲ್ಲಿ ಎರಡು ಘಟನೆಗಳನ್ನು ಸಂಕ್ಷಿಪ್ತವಾಗಿ ಹೇಳಲು ಪ್ರಯತ್ನಿಸುವೆನು.

ಸುಮಾರು ಹದಿನೈದು ವರ್ಷಗಳ ಹಿಂದೆ ನನಗೆ ‘ಸಯಾಟಿಕ’ ಎಂಬುದೊಂದು ಬಂದಿತ್ತು. ಅಂದರೆ ತೊಡೆ ಸಂದಿಯಲ್ಲಿನ ನೋವು. ನಾನು ಸೂರ್ಯ ನಮಸ್ಕಾರವನ್ನು ಅತಿಯಾಗಿ ಮಾಡಿ ಆ ನೋವು ತಂದುಕೊಂಡಿದ್ದೆ. ಆಗ ಕೂರಲಿಕ್ಕೂ ಆಗದೆ ನಿಲ್ಲಲಿಕ್ಕೂ ಆಗದಂತೆ ನೋವು ತೀವ್ರವಾಗಿತ್ತು. ಬೆಂಗಳೂರಿಗೆ ವೈದ್ಯರಲ್ಲಿಗೆ ಹೋಗಲೇಬೇಕಾಯಿತು. ಇವರ ಭಾವನವರಾದ ಆರ್ಥೊಪಿಡಿಕ್ ಸರ್ಜನ್‌ರಾದ ಡಾ.ಸುರೇಂದ್ರರವರಲ್ಲಿಗೆ ಹೋದೆವು. ಇವರ ಶ್ರೀಮತಿ, ತೇಜಸ್ವಿ ತಂಗಿಯಾದ ಇಂದುಕಲಾರವರಂತೂ ಅಣ್ಣ ತೇಜಸ್ವಿ ಮತ್ತು ನನ್ನನ್ನು ಅತ್ಯಂತ ಸಂಭ್ರಮದಿಂದ ಬರಮಾಡಿಕೊಂಡರು. ಅವರ ಮಕ್ಕಳಾದ ತಮಾಲಾ ಮತ್ತು ಶಾದ್ವಲಾ ಹೇಳಿದರು, ತಮ್ಮ ಮನೆಗೆ ಯಾರೋ ಒಬ್ಬ ರಾಜಕುಮಾರನನ್ನು ಬರಮಾಡಿಕೊಳ್ಳಲು ಅಮ್ಮ ಓಡಾಡುತ್ತ ಸಿದ್ಧತೆ ಮಾಡಿಕೊಂಡರಂತೆ. ಆದರೆ ರಾಜಕುಮಾರನ ಜೊತೆ ಒಬ್ಬರು ಕುಂಟುತ್ತ ಬಂದಿಳಿದರೆಂದರು.

ತಪಾಸಣೆ ನಡೆಯಿತು. ತೊಂದರೆ ಏನೂ ಇಲ್ಲೆಂದರು. ಫಿಸಿಯೋ ಥೆರಪಿ ತಗೊಂಡರೆ ಎಲ್ಲವೂ ಸರಿಹೋಗುತ್ತೆಂದು ಡಾ.ಸುರೇಂದ್ರ ಹೇಳಿದರು. ‘ಆಂಟಿಬಯೋಟಿಕ್’ ಮಾತ್ರೆಯನ್ನೂ ಕೊಟ್ಟರು. ಅಲ್ಲಿ ಒಂದು ದಿನವಿದ್ದು ಹೊರಟೆವು. ಹೊರಟು ಚೂರು ದೂರ ಸರಿಯುತ್ತಿದ್ದಂತೆ ಇವರು ಬೇರೆ ಮಾರ್ಗ ಹಿಡಿದರು. ಆ ಕ್ಷಣಕ್ಕೆ ನನಗೆ ಏನೂ ಗೊತ್ತಾಗಲಿಲ್ಲ.

ನನಗೆ ವಿಪರೀತ ಕಾಲುನೋವಾದ್ದರಿಂದ ಯಾರದೋ ಮುಖಾಂತರ ‘ಆಕ್ಯೂಪ್ರೆಷರ್’ ಪುಸ್ತಕ ಪಡೆದು ಓದಿಕೊಂಡಿದ್ದರಂತೆ. ಆ ವೈದ್ಯ ಮಹಾಶಯರು ಬೆಂಗಳೂರಿನಲ್ಲಿ ವೈದ್ಯಕೀಯ ಉಪಚಾರ ಕೊಡುವರೆಂದು ಮಾಹಿತಿ ಪಡೆದುಕೊಂಡಿದ್ದರು. ನೇರವಾಗಿ ಕಾರನ್ನು ಅಲ್ಲಿಗೇ ತಗೊಂಡ್ಹೋಗಿ ನಿಲ್ಲಿಸಿದರು. ಒಂದು ಕಿರಿದಾದ ರಸ್ತೆಯಲ್ಲಿದ್ದುದು(ಗಲ್ಲಿಯಲ್ಲಿ) ಈ ಕ್ಲಿನಿಕ್. ಇಲ್ಲೂ ಸಾಲುಗಟ್ಟಿಕೊಂಡು ನಿಂತಿವೆ ಕಾರುಗಳು! ದುಬೈಯಿಂದ ಈ ವೈದ್ಯಕೀಯ ಉಪಚಾರಕ್ಕೆಂದೇ ಬಂದವರೂ ಇದ್ದಾರೆ!

ವೈದ್ಯರು ನನ್ನನ್ನು ಪರೀಕ್ಷಿಸಿದರು. ಅದ್ಯಾವುದೋ ನರಗಳನ್ನು ಒತ್ತಿದರು. ಏನೂ ಆಗಿಲ್ಲವೆಂದೂ ಇನ್ನೊಂದು ಸಲ ‘ಅಕ್ಯೂಪ್ರೆಷರ್’ ಮಾಡಿಸಿಕೊಂಡರೆ ಸಂಪೂರ್ಣ ವಾಸಿಯಾಗುವುದೆಂದರು. ಈಗ ಇವರು ವೈದ್ಯರಿಗೆ ಪ್ರಶ್ನೆಗಳನ್ನು ಹಾಕಿದರು. ಸಂತೋಷದಿಂದಲೇ ಅವರು ಉತ್ತರಕೊಟ್ಟರು. ‘ಡೌಟ್ಸ್’ ನಿವಾರಣೆಯಾದಂತೆ ಕಂಡರು. ಎಲ್ಲಾ ಸರಿ ಅದು ಹೇಗೆ ನರ ಒತ್ತಿ ಗೊತ್ತು ಮಾಡಿಕೊಳ್ಳುವಿರಿ ಡಾಕ್ಟರೇ ಎಂದು ಕೇಳಿದರು. ಬನ್ನಿ ಸಾರ್, ಇಲ್ಲಿ ಕುಳಿತುಕೊಳ್ಳಿ. ಬೆನ್ನಿನ ಕಡೆ ನಿಮ್ಮ ಅಂಗಿ ಎತ್ತಿ, ನಿಮಗೆ ಗೊತ್ತು ಪಡಿಸುವೆನೆಂದರು. ಇವರ ಬೆನ್ನಿನ ಮಧ್ಯದಲ್ಲಿ ಯಾವುದೋ ನರ ಮುಟ್ಟಿದರು. ಒತ್ತಿದರು ನೋಡಿ, ತಕ್ಷಣ ಯಾರೋ ಅವರನ್ನು ದೂಕಿದಂತೆ ದೂರಕ್ಕೆ ಚಿಮ್ಮಲ್ಪಟ್ಟರು. (ಸ್ವಲ್ಪ ಹೆಚ್ಚಾಗಿ ಶಾಕ್ ಹೊಡೆದಾಗ ಕರೆಂಟು ನಮ್ಮನ್ನು ದೂಕುತ್ತೆಲ್ಲ ಹಾಗೆ) ಅವರ ಆಶ್ಚರ್ಯಕ್ಕೆ ಮಿಗಿಲಿಲ್ಲದಂತಾಯ್ತು. ಸಾರ್, ಇಷ್ಟೊಂದು ಸೂಕ್ಷ್ಮವಾಗಿರುವವರನ್ನು ಇದುವರೆಗೂ ನಾನು ನೋಡಿಯೇ ಇರಲಿಲ್ಲ. ಇದೇನಿದು ಸಾರ್ ಎಂದು ಹೇಳುತ್ತಾ ಇವರಿಗೆ ಬೇಗ ಕೋಪ ಬರುತ್ತಮ್ಮ? ಕೇಳಿದರು ನನ್ನ ಕಡೆ ತಿರುಗಿ. ನಾವಿಬ್ಬರೂ ನಕ್ಕೆವು.

ಆ ವೈದ್ಯರಿಗೆ ಇವರು ಯಾರು? ಏನು? ಎತ್ತ? ತಿಳಿದುಕೊಳ್ಳುವ ಬಗ್ಗೆ ಆಸಕ್ತಿಯಿರಲಿಲ್ಲ. ಕೇಳಲೂ ಇಲ್ಲ. ಆದರೆ ನಿಮ್ಮ ಜೀವನದಲ್ಲಿ ತುಂಬ ತುಂಬಾ ಒಳ್ಳೆಯದಾಗಲಿ ಒಳ್ಳೆಯದಾಗುತ್ತೆ ಸಾರ್ ಎಂದು ಅತೀ ಉತ್ಸಾಹದಿಂದ ಸಂತೋಷದಿಂದ ‘ವಿಶ್’ ಮಾಡಿ ಇವರನ್ನು ಬೀಳ್ಕೊಟ್ಟರು.ಕೆಲವೇ ದಿನದಲ್ಲಿ ಪತ್ರಿಕೆಯಲ್ಲಿ ಓದಿದೆ. ಅಂತರಾಷ್ಟ್ರೀಯ ‘ಆಕ್ಯೂಪ್ರೆಷರ್’ ಸಮ್ಮೇಳನಕ್ಕೆ ಆ ವೈದ್ಯರೇ ಅಧ್ಯಕ್ಷರಾಗಿದ್ದರು(ಅವರ ಹೆಸರನ್ನು ಮರೆತಿರುವೆನು).

ಇನ್ನೊಂದು ಬಗೆಯ ಆಶ್ಚರ್ಯವನ್ನು ತಿಳಿಸುವೆನು. ೨೦೦೦ನೇ ಇಸವಿ. ಇವರು ತೂಕ ಇಳಿಸಿಕೊಳ್ಳಬೇಕಿತ್ತು. ಪ್ರಕೃತಿ ಚಿಕಿತ್ಸಾಲಯ ‘ಶಾಂತಿವನ’ ಉಜಿರೆಗೆ ಹೋದೆವು. ಈ ಚಿಕಿತ್ಸಾಲಯದ ಒಳಗೂ ಹೊರಗೂ ತುಂಬ ಸೊಗಸಾಗಿದೆ. ‘ಮನಸ್ಸಿಗೆ ಶಾಂತಿ ದೊರಕುವ ಸ್ಥಳ’ವಾಗಿದೆ. ಇಲ್ಲಿನ ಮುಖ್ಯಸ್ಥರಾದ ಡಾ.ರುದ್ರಪ್ಪನವರು, ವೈದ್ಯರು, ಸಹಾಯಕರು ಸಮರ್ಪಕವಾಗಿಯೂ ಚೇತೋಹಾರಿಯಾಗಿಯೂ ಸೇವೆಯಲ್ಲಿ ನಿರತರಾಗಿರುವರೆಂದರೆ ಉತ್ಪ್ರೇಕ್ಷೆಯ ಮಾತಲ್ಲ. ಆಡಳಿತ ವರ್ಗವೂ ಹಾಗೆಯೇ.

ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರು ಪತ್ನಿ ಪುತ್ರಿ ಸಮೇತರಾಗಿ ಇವರಲ್ಲಿಗೆ ಬಂದು ಕ್ಷೇಮ ಸಮಾಚಾರ ವಿಚಾರಿಸಿದರು. ಶುಭಕೋರಿದರು. ಸಂತೋಷವೆನ್ನಿ. ಅಲ್ಲಿನ ಆನೆಯೂ ಬಂದು ಸೊಂಡಿಲನ್ನು ನನ್ನ ಕೈಯಲ್ಲಿರಿಸಿ ನಾನು ಪುಳಕಿತಳಾಗಿದ್ದು ಮರೆಯಲಾಗದ್ದು. ಸಂತೋಷ.

ಇವರು ವಾರದೊಳಗೆ ಏಳು ಕೆ.ಜಿ. ತೂಕವನ್ನು ಇಳಿಸಿಕೊಂಡಿದ್ದರು. ಅಲ್ಲಿ ವಾರ್ಡು ರೌಂಡಿಗೆ ನಾಗಾಲ್ಯಾಂಡಿನ ವೈದ್ಯರೊಬ್ಬರು ಬರುತ್ತಿದ್ದರು. ಅವರ ರಾಜ್ಯದ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು ಇವರೊಟ್ಟಿಗೆ. ನಾಯಿ ಅವರ ಆಹಾರದಲ್ಲಿ ಸೇರಿದೆಯಂತೆ. ಅದರ ‘ಡೆಲಿಕೆಸಿ’ ಬಗ್ಗೆ ಮಾತಾಡಿದರು. ಅದರ ಭಾನುವಾರದ ರುಚಿ ನೆನೆದು ಬಾಯಿ ಚಪ್ಪರಿಸಿದರು.

ಈ ಸಮಯದಲ್ಲಿ ಇವರು ಸಣ್ಣಕೆ ಭುಜ ನೋವುತ್ತೆಂದರು. ವಾರ್ಡು ರೌಂಡಿಗೆ ಬರುತ್ತಿದ್ದ ‘ಹೌಸ್ ಸರ್ಜೆನ್ಸಿ’ ಮಾಡುತ್ತಿದ್ದ ಡಾ.ವಿನಯರವರಿಗೆ ತಿಳಿಸಿದರು. ಇವರು ಉತ್ಸಾಹಿ ತರುಣಿ, ಶ್ರದ್ಧೆ ಮೈವೆತ್ತಂತೆ, ಸಂಗೀತದಲ್ಲಿ ಅಮಿತ ಆಸಕ್ತಿ. ಸುಶ್ರಾವ್ಯವಾಗಿ ಹಾಡಬಲ್ಲವರು. ಸಾರ್, ತಮಗೆ ಭುಜಕ್ಕೆ ‘ಆಕ್ಯೂಪಂಕ್ಚರ್’ ಪ್ರಯೋಗ ಮಾಡಿದರೆ ಹೇಗೆ? ಇವರ ಮುಂದಿಟ್ಟರು, ಈ ಸಲಹೆಯನ್ನು. ಅದೂ ನಡೆಯಲಿ ಎಂದರು ಇವರು.
‘ಸ್ಟರ್‌ಲೈಸ್ಡ್’ ಸೂಜಿಗಳನ್ನು ತಂದುಕೊಂಡು ಬಂದರು ರೂಮಿಗೆ ಡಾ.ವಿನಯ. ಭುಜ ಪರೀಕ್ಷಿಸಿದರು. ಆ ಸೂಜಿಗಳನ್ನು ಭುಜದ ಸರಿಯಾದ ಪಾಯಿಂಟ್ ನೋಡಿಕೊಂಡೇ ಚುಚ್ಚಬೇಕಂತೆ. ಅದರ ಬಗ್ಗೆ ವ್ಯಾಸಂಗ ಮಾಡಿದವರು. ಅನುಭವವೂ ತಕ್ಕಮಟ್ಟಿಗೆ. ಎಡ ಭುಜಕ್ಕೆ ಒಂದು ಸೂಜಿ ಚುಚ್ಚಿದರು. ಸೂಜಿ ಗಟ್ಟಿಯಾಗಿ ಚುಚ್ಚಿಕೊಳ್ಳುವುದಂತೆ. ಹಿಡಿದು ಕೊಳ್ಳುವುದಂತೆ. ಆದರೆ ನಿಮಿಷ ಮಾತ್ರದಲ್ಲಿ ಆ ಸೂಜಿ ಟಂಗಂತ ಹಾರಿ ರೂಮಿನ ಮೂಲೆಗೆ ಬಿತ್ತು. ರೂಮು ಸಾಕಷ್ಟು ದೊಡ್ಡದಿತ್ತು. ಡಾಕ್ಟರು ಬೆಪ್ಪಾಗಿ ಹೋದರು. ಇದರ ಬಗ್ಗೆ ಎಷ್ಟೊ ಪುಸ್ತಕಗಳನ್ನು ಓದಿರುವೆನು. ಚೀನೀ ಪುಸ್ತಕವನ್ನೂ ಓದಿಕೊಂಡಿರುವೆನು. ಬಹಳ ಅಪರೂಪಕ್ಕೆ ಹೀಗಾಗಬಹುದೆಂದಿರುವರು. ಇದುವರೆಗೂ ಕಂಡಿರಲಿಲ್ಲ. ಕೇಳಿರಲಿಲ್ಲ. ಈಗ ಕಣ್ಣಲ್ಲೇ ನೋಡಿದೆ. ನನ್ನ ಕಣ್ಣನ್ನೇ ನಂಬಕ್ಕಾಗುತ್ತಿಲ್ಲ ಸಾರ್, ಎಂದರು. ಇನ್ನೊಂದು ‘ಸ್ಟರ್‌ಲೈಸ್ಡ್’ ಸೂಜಿ ತಗೊಂಡರು. ಬಲಭುಜಕ್ಕೆ ಚುಚ್ಚಿದರು. ಈ ಸೂಜಿಯೂ ಟಂಗಂತ ಇನ್ನೊಂದು ಮೂಲೆಗೆ ಹಾರಿಬಿತ್ತು. ಮತ್ತೂ ಆಶ್ಚರ್ಯಪಟ್ಟರು. ಇದು ಸೋಜಿಗವಲ್ಲದೆ ಮತ್ತೇನೆಂದರು. ಮರುದಿನ ಮತ್ತೆ ಪ್ರಯತ್ನ ನಡೆಸಿದರು. ಅಷ್ಟರಲ್ಲಿ ನೋವು ಕಡಿಮೆಯಾಗಿತ್ತು. ಇದರ ಕಾರಣಕ್ಕೆ ವಿವರಣೆ ಕೊಡಲು ಸಾಕಷ್ಟು ಅನುಭವವಾಗಬೇಕಿತ್ತೇನೋ ಅವರಿಗೆ.

ಹೇಗಿದೆ ಆಶ್ಚರ್ಯ! ಇವರ ಮನಸ್ಸಿನ ಪ್ರಕೃತಿ ದೇಹದ ಪ್ರಕೃತಿ ಬರೀ ವಿಸ್ಮಯವೇ! ನನಗೆ. ಕಣ್ಣ ಮುಂದೆ ಎರಡೂ ಚಿತ್ರಗಳು ಇವೆ. ಕಾಡುತ್ತಿವೆ.

(ಫೋಟೋ: ತೇಜಸ್ವಿ)

ಸಂತೆ, ಕೋವಿ

ನಾನು ಮೂಡಿಗೆರೆ ಸಂತೆಗೆ ಯಾವಾಗಲೋ ಒಂದೆರಡು ಸಲ ಹೋಗಿರುವೆನು. ಅದೂ ಈಶಾನ್ಯೆ ಸ್ಕೂಲಿಗೆ ಹತ್ತಿರವಿದೆಯೆಂದು. ‘ಫ್ರೆಶ್’ ತರಕಾರಿ ಸಿಕ್ಕುತ್ತೆಂದು. ಒಟ್ಟಿನಲ್ಲಿ ಒಂದು ತಿರುಗಾಟ ಅಂತ ಅಷ್ಟೆ. ಇವರಿಗೆ ಸಂತೆಗೆ ಹೋಗೋದು ಏನೇನೂ ಇಷ್ಟವಿರುತ್ತಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಸಂತೆಗೆ ಹೋಗಿ ಬರ್‍ತೀನಿ ಅಂತ ಒಂದು ಬ್ಯಾಗ್ ಹಿಡಿಕೊಂಡು ಹೋಗೋರು. ಅಲ್ಲಿ ಅದೆಂತೆಂಥ ಮೀನುಗಳು ಇರ್‍ತವೆ ಅಂತ! ನೋಡ್ತನೇ ಇರಬೇಕು! ಅನ್ನಿಸುತ್ತೆ ಅಂತಿದ್ರು. ಕಳೆದ ರಜೆಯಲ್ಲಿ ಮೊಮ್ಮಗಳು ಪುಟಾಣಿ ವಿಹಾ ಯಾರದೋ ಜೊತೆಯಲ್ಲಿ ಸಂತೆಗೆ ಹೋದವಳು ಅವಳೂ ಹಾಗೆ ‘ತ್ರಿಲ್’ ಆಗಿದ್ದಳಂತೆ. ಮೀನಿನಂಗಡಿಯಿಂದ ಬರಕ್ಕೇ ಒಪ್ಪಲಿಲ್ಲವಂತೆ.

ಇವರ ಸಂತೆ ಪ್ರಬಂಧ ಓದುತ್ತಿದ್ದೆ. ಮೀನಿನಂಗಡಿಯ ಆಕರ್ಷಣೆಯೇ ಹಾಗೆ. ‘ಸಂತೆಯಲ್ಲಿ ಏಡಿಗಳ ರಾಶಿಯೇ ಇತ್ತು. ಶಾರ್ಕುಗಳು, ಕಡಲ್ಗುದರೆಯ ಪುಟ್ಟ ಮರಿ, ಥ್ರಾಶರ್ ಶಾರ್ಕಿನ ಮರಿ ಇನ್ನೂ ಎಂತೆಂಥವೋ. ಕಸದಲ್ಲಿ ಬೇರೆ ಬೇರೆಯವೂ ಕಾಣ್ತವೆ. ಆದರೆ ಕಸದಲ್ಲಿ ಕೈಹಾಕಿ ಹುಡುಕುವುದು ಗೌರವತರುವ ಕೆಲಸವಲ್ಲ ಅಂತ ಸುಮ್ಮನಾದೆ. ಅವನ್ನೆಲ್ಲಾ ಚೆನ್ನಾಗಿ ನೋಡಿ ಬಂದೆ. ಯಾರೂ ಅಲ್ಲಿ ಇಲ್ಲದಿದ್ದರೆ ಅಷ್ಟನ್ನೂ ಮನೆಗೆ ಒಯ್ಯುತಿದ್ದೇನೋ ಏನೋ’ ಅಂತ ಹೇಳಿದ್ದಾರೆ.

ಇವನ್ನೆಲ್ಲ ಸಂತೆಯಲ್ಲಿ ನೋಡಿಕೊಂಡು ಬರುವಾಗ ಅಲ್ಲೊಂದು ಗುಂಪು ಜನ. ನೂಕು ನುಗ್ಗಲು. ಆ ನೂಕಾಟದಲ್ಲಿ ನುಗ್ಗೋದಾದರೂ ಹೇಗೆ. ಸಂತೆ ಎಂದರೆ ಕಿಕ್ಕಿರಿದ ಜನ ಇಕ್ಕಿರಿದ ಜಾಗ ತಾನೆ. ನೂಕಾಟ ಯಾಕಿರಬಹುದು ಎಂದು ಕುತ್ತಿಗೆ ಉದ್ದಮಾಡಿ ನಿಗ್ಗರಿಸಿ ನೋಡಿದರಂತೆ. ಸ್ಕೂಟರ್ ನಿಧಾನ ಮಾಡಲೇಬೇಕಾಯ್ತು ದಾರಿಯಿಲ್ಲದ ಪ್ರಯುಕ್ತ. ಇವರನ್ನು ಗುಂಪಿನಲ್ಲಿ ಗಮನಿಸಿದ ಒಬ್ಬಾತ ಪುಸಕ್ಕನೆ ನುಗ್ಗಿ ಬಂದು ಇವರ ಬ್ಯಾಗಿಗೆ ಒಂದು ಚೀಟಿ ತುರುಕಿ ಹೋದ.

ಮನೆಗೆ ಬಂದವರು ಬಾ ಇಲ್ಲಿ ಎಂದು ಕರೆದರು. ಓದು ಈ ಚೀಟಿ ಎಂದು ಕೊಟ್ಟರು. ಅಲ್ಲೊಬ್ಬ ವೈದ್ಯ ಮಹಾಶಯ ಮನುಷ್ಯರ ನೆರಳಿಗೆ ‘ಟ್ರೀಟ್‌ಮೆಂಟ್’ ಕೊಡುತ್ತಿದ್ದನಂತೆ. ಅವರಿಗೆ ಚಿಕ್ಕಮಗಳೂರಿನಲ್ಲಿ ಸನ್ಮಾನವಂತೆ. ಅವರನ್ನು ನೋಡಲು ನೂಕು ನುಗ್ಗಲಾಟ ಸಂತೆಯಲ್ಲಿ. ಎಷ್ಟು ನಿಜ, ಎಷ್ಟು ಸುಳ್ಳು, ವಾಸಿಯಾಗುವುದಾದರೂ ಹೇಗೆ. ಇಂಥವರಿಗೂ ರೋಗಿಗಳ ನುಗ್ಗಾಟವಿರುತ್ತೆಲ್ಲ ಅಂದರು. ಮಾರನೆಯ ದಿನದ ಪತ್ರಿಕೆ ನೋಡಿ ಇನ್ನೂ ಕುತೂಹಲ, ಆಶ್ಚರ್ಯ, ಆ ವೈದ್ಯ ಮಹಾಶಯನಿಗೆ ಕೊಟ್ಟ ಸನ್ಮಾನದ ಬಗ್ಗೆ, ಪತ್ರಿಕೆಯಲ್ಲಿ ದೊಡ್ಡದಾಗಿ ವರದಿಯಾಗಿದೆ!

ಈ ಇಂತಹ ಕುತೂಹಲನೇ ಇವರಿಗೆ ಸ್ವಲ್ಪ ಆರೋಗ್ಯ ಎಡವಟ್ಟು ಮಾಡಿತು. ಒಂದು ದಿನ ಮನೆ ಹತ್ತಿರದವರೊಬ್ಬರು, ಪರಿಚಯದವರು ಬಂದರು. ಅವರು ಒಳ್ಳೆಯವರೇ. ಯಾವುದೋ ಒಂದು ವಿದೇಶಿ ಕಂಪನಿಯವರು ತರಬೇತು ಕೊಟ್ಟಿರುವರೆಂದೂ, ತಾವು ಅನೇಕರಿಗೆ ಪ್ರಯೋಗ ಮಾಡಿರುವರೆಂದೂ ಹೇಳಿಕೊಂಡ. ಅದೇನು ಮಾರಾಯ ವಿವರವಾಗಿ ಹೇಳು ಎಂದರು. ಮಲೇಶಿಯಾ ಕಾಡುಕೋಣನ ಕೊಂಬಲ್ಲಿ ಮಸಾಜು ಮಾಡುವುದು. ಎಣ್ಣೆ ಕೆನಡಾದಲ್ಲಿ ತಯಾರಿಸಿದ್ದು. ಮೈಯೆಲ್ಲ ಮಸಾಜು ಮಾಡಿದರೆ ಆರೋಗ್ಯ ವೃದ್ಧಿಸುತ್ತೆ ಎಂದರು. ನಿಮಗೂ ತಿಕ್ಕಿಕೊಡುತ್ತೇನೆಂದರು. ಅಷ್ಟೆ ತಾನೆ ತಿಕ್ಕು. ನಾಳೆ ಬಾ ಎಂದರು. ಈ ಮಹಾಶಯ ತಿಕ್ಕಿ ಹೋಗುವಾಗಷ್ಟೇ ನನಗೆ ಗೊತ್ತಾದದ್ದು ಅವನು ಬಂದದ್ದು. ಮಧ್ಯ ರಾತ್ರಿ ಎಚ್ಚರಗೊಂಡು ರಾಜೇಶ್ವರಿ ನನಗೆ ಮೈಯೆಲ್ಲ ಉರಿ ಎಂದರು. ಅಲ್ಲಿಂದ ತಿಳಿಯಿತು ತಿಕ್ಕಿದ್ದು ‘ಅಲರ್ಜಿ’ ಆಗಿದೆಯೆಂದು. ಈ ಅಲರ್ಜಿಯಿಂದ ವೈದ್ಯರಲ್ಲಿಗೆ ಹೋಗಲೇಬೇಕಾಯಿತು. ಬೆಂಗಳೂರಿಗೆ ಹೋದೆವು.

ಏನೇನೋ ಟೆಸ್ಟ್‌ಗಳಾದವು. ಏನೇನೋ ಉಪಚಾರಗಳಾದವು. ಔಷಧಿಕೊಳ್ಳಬೇಕಾಯಿತು. ಅಳಿಯ ದೀಪಕ್ ಅಂಗಡಿಗೆ ಕರೆದುಕೊಂಡು ಹೋದರು. ಔಷಧಿ ಅಂಗಡಿ ಸಿಕ್ಕಿತು. ಅಲ್ಲಿ ‘ಪಾರ್ಕಿಂಗ್’ ಜಾಗವಿಲ್ಲದ್ದರಿಂದ ಸಣ್ಣ ರಸ್ತೆಗೆ ತಿರುಗಿಸಿ ನಿಲ್ಲಿಸಿದರು. ಇಬ್ಬರೂ ಇಳಿದು ಹೋದರು.

ಕಾರಿನಲ್ಲಿ ಕುಳಿತವಳು, ಆಚೆ ಕಡೆ ಮನೆ ಈಚೆ ಕಡೆ ಮನೆ ನೋಡುತ್ತ ಕೂತೆ. ಜನಗಳು ರಸ್ತೆಯಲ್ಲಿ ಓಡಾಡುವುದನ್ನು ಗಮನಿಸಲು ಖುಷಿಯೆನಿಸಿತು. ಅಷ್ಟರಲ್ಲಿ ಪಕ್ಕದಲ್ಲಿನ ಸಣ್ಣಮನೆಯ ಬಾಗಿಲು ಧಡಾರೆಂದು ತೆರೆದುಕೊಂಡಿತು. ಒಬ್ಬಳು ಮಧ್ಯ ವಯಸ್ಕ ಹೆಂಗಸು ಮತ್ತು ಒಂದು ಪುಟ್ಟ ಮಗು ಹೊರಗೆ ಬಂದರು. ಮಗುವಿಗೆ ಹೆಜ್ಜೆ ಹಾಕಲು ಬರುತ್ತಿರಲಿಲ್ಲ. ಅಷ್ಟು ಪುಟ್ಟದು. ತಾಯಿ ಕೈಯಲ್ಲಿ ಪುಟ್ಟ ತಟ್ಟೆ. ಒಂದೆರಡು ತುತ್ತು ಊಟ ಕೊಟ್ಟಳು. ಮಗುವನ್ನು ಎತ್ತಿಕೊಂಡು ಉಣ್ಣಿಸಲು ಕೈ ಹಾಕಿದಳು. ಅಷ್ಟರಲ್ಲಿ ಸುಮಾರು ಇಪ್ಪತ್ತನಾಲ್ಕು ಇಪ್ಪತೈದು ವಯಸ್ಸಿನ ಹುಡುಗ ಬಂದ. ತಮ್ಮನಿರಬಹುದು, ಮೈದುನ ಇರಬಹುದು. ಅವನ ಕೈಯಲ್ಲೊಂದು ಕೋವಿಯಿತ್ತು. ಆಟದ ಕೋವಿಯಾದರೂ ದೊಡ್ಡದಾಗೇಯಿತ್ತು. ತಮಿಳು ಮಾತನಾಡುತ್ತಿದ್ದರು ಆ ಹುಡುಗ ಆ ತಾಯಿ. ಕೋವಿಯನ್ನು ಹುಡುಗ ಮಗುವಿಗೆ ಹೊಟ್ಟೆಗೆ ಹಣೆಗೆ ತಿವಿದೂ ತಿವಿದೂ ಮಾತನಾಡಿಸುತ್ತಿದ್ದ. ತಿವಿದಾಗ ಢಂ ಎನ್ನುತ್ತಿದ್ದನು. ಢಂ ಎಂದಾಗ ಕಿಲಕಿಲ ನಗುತ್ತಿತ್ತು ಮಗು. ಬೇಗ ಬೇಗ ಊಟ ಸಾಗುತ್ತಿತ್ತು.

ಈ ದೃಶ್ಯ ಕಂಡಾಗ ನನಗೆ ಒಂದು ರೀತಿಯ ಘಾಸಿಯಾಯಿತು. ಆ ಮಗು ಅಷ್ಟು ಪುಟ್ಟ ಮಗುವಾದರೂ ಅದರ ಪ್ರಜ್ಞೆಯಲ್ಲಿ ನಾನಾ ತರದ ಭಾವನೆಗಳು ಮೂಡುತ್ತಿರುತ್ತದೆ. ದಾಖಲಾಗುತ್ತಿರುತ್ತದೆ. ಹೀಗೆ ಮಾಡುವುದು ಸರಿಯೇ? ಹೀಗೆ ಯೋಚನೆ ಮಾಡುತ್ತ ನಾನು ಶ್ರೀಲಂಕಾಗೆ ಹೋಗಿ ಬಂದೆ. ಆಮೇಲೆ ರಷ್ಯಾ, ಚೀನಾ, ರುಮೇನಿಯಾ ದೇಶಗಳು ನೆನಪಾದವು. ಈ ದೇಶಗಳಲ್ಲಿ ಮಕ್ಕಳನ್ನು ತೀರಾ ಎಳವೆಯಲ್ಲಿಯೇ ಜಿಮಿನಾಸ್ಟಿಕ್ಸ್ ತರಬೇತಿಗೆ ಕರೆದೊಯ್ಯುವರಂತೆ. ಅಂತೆಯೇ ಈ ದೇಶದವರೇ ಒಲಂಪಿಕ್ಸ್‌ನಲ್ಲಿ ಮೊದಲ ಚಿನ್ನ ಗೆಲ್ಲುವುದು. ರುಮೇನಿಯಾ ದೇಶದ ಜಗತ್ ವಿಖ್ಯಾತ ನಾಡಿಯಾ ಯಾರಿಗೆ ತಾನೆ ಗೊತ್ತಿಲ್ಲ. ಮೊಟ್ಟಮೊದಲ ಬಾರಿಗೆ ಇವಳು ಹತ್ತಕ್ಕೆ ಹತ್ತು ಅಂಕಗಳನ್ನು ಪಡೆದು ಗೆದ್ದ ಪ್ರದರ್ಶನ ಕಣ್ಣ ಮುಂದೆ ಸುಳಿಯಿತು.

ಅಷ್ಟರಲ್ಲಿ ತೇಜಸ್ವಿ ಮತ್ತು ದೀಪಕ್ ಹಿಂತಿರುಗಿ ಬಂದು ಕಾರು ಹತ್ತಿಕೊಂಡರು. ತೇಜಸ್ವಿ ಕೈಯಲ್ಲಿ ನೀಲಿ ಬಣ್ಣದ ಕುಪ್ಪಿಯಿತ್ತು. ನೀಲಿ ನೀರು ಇದ್ದಂತಿತ್ತು. ಅದೇನೆಂದು ನನಗೆ ತಿಳಿಯಲಿಲ್ಲ. ನೋಡು ಇದನ್ನು ಎಂದು ನನ್ನ ಕೈಗಿತ್ತರು. ನಾನು ಸ್ವಲ್ಪ ಮುಂಚೆ ನೋಡಿದ ದೃಶ್ಯವನ್ನು ಹೇಳಲಿಕ್ಕೆ ಹತ್ತಿದೆ. ಅದು ಆಟವೇ ಇರಬಹುದು. ಮಗುವಿನ ಮನಸ್ಸಿನ ಮೇಲೆ ಎಂತಹ ವಾಹಕವಾಗಿ ರೂಪಿಸಬಹುದಲ್ಲವ ಎಂದೆ. ಇವರು ಮೌನವಾದರು. ಅಷ್ಟರಲ್ಲಿ ಸರ್ಕಲ್ಲಿನ ಪೋಲೀಸ್ ಸೀಟಿ ಊದಿದ. ಸ್ಪರ್ದೆಗಿಳಿದಂತೆ ಸ್ಪೀಡಿನಲ್ಲಿ ನಾವು ಮುಂದೆ ಚಲಿಸಲೇಬೇಕಿತ್ತು.