ಏನಾದರೂ ಮಾಡಬೇಕು. ವಿಕೃತ ಜೋಕು ಕೊನೆಯಾಗಬೇಕು. ನಿಲ್ಲಿಸಬೇಕು ನಾನೇ. ತಡವಾಗುವ ಮೊದಲೇ. ಕವಿತೆ ಬರೆದರೆ, ಕಾಗದ ಬರೆದರೆ ಫಲವಿಲ್ಲ. ದೊಡ್ಡವರೆಲ್ಲ ಕಿವುಡರು. ಲೇಸು ಭದ್ರವಾಗಿ ಕಟ್ಟಿಕೊಂಡು, ಶೂಗಳನ್ನು ಕಿರುಗುಟ್ಟಿಸುತ್ತ ರಸ್ತೆಯ ಮೇಲೆ ನಡೆಯುವ ದೊಡ್ಡವರಿಗೆ ಸಣ್ಣ ನರಳಾಟದ ಕುಂಯ್ ಕುಂಯ್ ಸದ್ದು ಕೇಳಿಸುವುದೇ ಇಲ್ಲ. ಎಡ್, ಇದೆಲ್ಲ ಭೀತಮನದ ಮಾತು ಅನಿಸಬಹುದು. ನನಗೆ ಭೀತಿ ಇರಬಹುದು. ಚಿಕ್ಕಂದಿಲ್ಲಿ ರಕ್ಷಣೆಯ ಸರಿತನದ ಸಂಕೇತವಾಗಿದ್ದ ಅಮ್ಮ ಅಡುಗೆ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅಳುವುದು ಕಂಡಾಗ ಭಯ ಹಿಡಿದುಕೊಳ್ಳುತ್ತದೆ
ಪ್ರೊಫೆಸರ್ .ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಸಿಲ್ವಿಯಾ ಪ್ಲಾತ್ ದಿನಚರಿ ಬರಹಗಳ ಐದನೆಯ ಕಂತು.

 

16.
ಮಕ್ಕಳು ನನ್ನ ಮುಡಿಗೆ ಹೂ ಮುಡಿಸುವಂಥ ಪುಟ್ಟ ಸಂಗತಿ ಕೂಡ ನನ್ನ ಆತ್ಮವಿಶ್ವಾಸದಲ್ಲಿ ದೊಡ್ಡದಾಗಿ ಹಿಗ್ಗುತಿರುವ ಬಿರುಕುಗಳನ್ನು ಮಾಯಮಾಡುತ್ತದೆ, ಆಯಿಂಟ್ ಮೆಂಟು ಹಚ್ಚಿದ ಹಾಗೆ. ಮೆಟ್ಟಿಲ ಮೇಲೆ ಕೂತಿದ್ದೆ. ಭಯವಿತ್ತು, ಅಸಮಾಧಾನವಿತ್ತು, ಚಡಪಡಿಕೆ ಇತ್ತು. ಬೀದಿಯಾಚೆಯ ಮನೆಯ ಪುಟ್ಟ ಹುಡುಗ, ಚೂಪುಗಲ್ಲದ, ನೀಲಿ ಕಣ್ಣಿನ, ಸೂಕ್ಷ್ಮ ನಗುವಿನ ಪೀಟರ್, ಬಿಗಿಯಾಗಿ ಜಡೆ ಹೆಣೆದ ಕಂದು ಕೂದಲ ಮುದ್ದು ತಂಗಿ, ಭಾವಗೀತೆಯಂಥ ಸುಂದರ ಆಕಾರದ ಲಿಬ್ಬಿಯ ಕೈ ಹಿಡಿದುಕೊಂಡು ಬಂದ. ಇಬ್ಬರೂ ಸ್ವಲ್ಪ ಹೊತ್ತು ನಾಚಿಕೊಂಡು ನಿಂತಿದ್ದರು. ಆಮೇಲೆ, ಪೀಟರ್ ಪೆಟೂನಿಯ ಹೂವನ್ನು ಕಿತ್ತು ನನಗೆ ಮುಡಿಸಿದ. ತನ್ನಷ್ಟಕ್ಕೆ ತಾನೇ ಒಂದು ಹೊಸ ಆಟ ಶುರುವಾಯಿತು. ನಾನು ಅಲ್ಲಾಡದೆ ನಿಶ್ಚಲವಾಗಿ ಕೂತಿದ್ದೆ. ಲಿಬ್ಬಿ ಓಡಿ ಹೋಗಿ ಪೆಟೂನಿಯ ಹೂ ಒಂದೊಂದೇ ಬಿಡಿಸಿ ತರುತಿದ್ದಳು. ಪೀಟರ್ ನನ್ನ ಪಕ್ಕದಲ್ಲಿ ನಿಂತು ಆ ಹೂವುಗಳನ್ನೆಲ್ಲ ನನಗೆ ಮುಡಿಸುತಿದ್ದ. ಮಗು ಕೈಯ ನಾಜೂಕು ಸ್ಪರ್ಶ ಅನುಭವಿಸುತ್ತ ಕಣ್ಣು ಮುಚ್ಚಿ ಕೂತಿದ್ದೆ. ಮಗುವಿನ ಕೈ ನನ್ನ ಗುಂಗುರು ಕೂದಲಲ್ಲಿ ಒಂದೊಂದೇ ಹೂವನ್ನು ಮುಡಿಸುತಿತ್ತು. ‘ಈಗ ಬಿಳೀದು,’ ಮಗುವಿನ ಮೃದು ತೊದಲು ಕೇಳಿಸಿತು. ಪಿಂಕು, ಕೆಂಪು, ನೇರಿಲೆ, ಬಿಳಿ… ಪೆಟೂನಿಯ ಹೂಗಳ ಅಸ್ಪಷ್ಟ ಕಟು ಮಧುರ ಪರಿಮಳ. ನನ್ನೆಲ್ಲ ನೋವಿನ ನಿರಿಗೆಗಳನ್ನು ನೇವರಿಸಿ ನಿವಾರಿಸಿದ ಹಾಗಿತ್ತು. ಕಪಟವಿಲ್ಲದ ನೋಟ, ಚೆಲುವಾದ ಎಳೆಯ ಮೈ, ಸಾವಿನತ್ತ ಸಾಗುತ್ತಿರುವ ಹೂಗಳ ಕಿಂಚಿತ್ ಪರಿಮಳ, ಇವೆಲ್ಲ ನನ್ನನ್ನು ಸ್ವಚ್ಛ ಚೂರಿಯ ಹಾಗೆ ಇರಿದವು. ಎದೆಯನ್ನು ನೋಯಿಸುತ್ತ ಪ್ರೀತಿಯ ರಕ್ತ ಚಿಮ್ಮಿತು.

17.

ಅವನನ್ನು ನಾನಿನ್ನು ನೋಡುವುದಿಲ್ಲ. ಒಳ್ಳೆಯದೇ ಆಯಿತು ಅನಿಸತ್ತೆ. ನಿನ್ನೆ ರಾತ್ರಿ ಅವನು ನನ್ನ ಬದುಕಿನಿಂದ ಶಾಶ್ವತವಾಗಿ ನಡೆದುಬಿಟ್ಟ. ಹೊಟ್ಟೆ ತೊಳಸುವಂಥ ಖಚಿತತೆ-ಇದರಿಂದಲೇ ತಿಳಿಯುತಿದೆ, ಇದೇ ಕೊನೆ. ಎರಡೇ ಎರಡು ಸಾರಿ ಡೇಟಿಂಗ್ ಮಾಡಿದ್ದೆವು. ಅವನ ಗೆಳೆಯರೆಲ್ಲ ಬಂದಿದ್ದಾಗ ಒಂದು ಸಾರಿ, ಮತ್ತೆ ನಿನ್ನೆ ಇನ್ನೊಂದು ಸಾರಿ. ಆದರೂ… ಅವನನ್ನ ತುಂಬ ಇಷ್ಟಪಡುತಿದ್ದೆ. ತುಂಬಾ. ಇನ್ನೂ ನೋವಾಗದಿರಲಿ ಅಂತಲೇ ನನ್ನ ಮನಸಿನಿಂದ ಕಿತ್ತು ತೆಗೆದು ಹಾಕಿದೆ ಅವನನ್ನ. ಅಯಸ್ಕಾಂತದವನು ಅವನು. ಚೆಲುವ. ಅವನ ಕಣ್ಣು ನೋಡಿದರೇ ಸೋತುಬಿಡಬೇಕು. ಅವನ ಬಗ್ಗೆ ಇದ್ದ ಆಕರ್ಷಣೆ, ತಡೆಯಲಾಗದಷ್ಟು ತೀವ್ರವಾಗಿತ್ತು. ಚೆಲುವು, ವಿಶ್ವಾಸಗಳೆರಡೂ ತುಂಬಿದ್ದ ಜಾಣ ಮಾತಿನ ಮುಖವಾಡದ ಹಿಂದೆ ಇದ್ದ ಅವನ ಆಲೋಚನೆ, ವಿಚಾರಗಳನ್ನೆಲ್ಲ ತಿಳಿಯಬೇಕು ಅನಿಸಿತ್ತು.

‘ನಾನು ಬದಲಾಗಿದೇನೆ, ಮೂರು ವರ್ಷದ ಹಿಂದೆ ನೀನು ನನ್ನ ಇಷ್ಟಪಡಬಹುದಾಗಿತ್ತು. ಈಗ ನಾನು ಜಾಣ,’ ಅಂದ. ನಾವು ವೆರಾಂಡದಲ್ಲಿ ಮಾತಾಡುತ್ತ ಕೂತಿದ್ದೆವು. ಒಂದೆರಡು ಗಂಟೆ ಹೊತ್ತು. ಏನನ್ನೂ ಗಮನವಿಟ್ಟು ನೋಡದೆ.

ಘರ್ಷಣೆ ಹೆಚ್ಚಾಗಿತ್ತು. ಘರ್ಷಣೆಯ ಕೇಂದ್ರ ಮುಟ್ಟಿದ್ದೆವು. ಅವನು ಹತ್ತಿರ ಇರುವುದೇ ಶಾಕ್ ಹೊಡೆದ ಹಾಗೆ ಅನಿಸುತಿತ್ತು. ‘ನಿನಗೆ ಗೊತ್ತಾಗಲ್ಲವಾ, ನಿನಗೆ ಮುತ್ತಿಡಬೇಕು,’ ಅಂದ. ಅವನು ಕೊಟ್ಟ ಮುತ್ತಿನಲ್ಲಿ ಹಸಿವಿತ್ತು. ಅವನ ಕಣ್ಣು ಮುಚ್ಚಿದ್ದವು. ನನ್ನ ಒಡಲಿಗೊತ್ತಿದ್ದ ಅವನ ಕೈ ಸುಡುತಿತ್ತು.

‘ನಿನ್ನ ಹೇಟ್ ಮಾಡಬೇಕಾಗಿತ್ತು. ಯಾಕೆ ಬಂದೆ ನೀನು?’ ಅಂದೆ.

‘ಯಾಕೆ? ನಿನ್ನ ಜೊತೆ ಇರಬೇಕು ಅನಿಸಿತು. ಅಲ್ಬಿ, ಪೀಟರ್ ಇಬ್ಬರೂ ಬಾಲ್ ಗೇಮ್ ಆಡಲು ಹೋಗುತಿದ್ದರು. ನನಗೆ ಇಷ್ಟ ಇರಲಿಲ್ಲ. ವಾರೀ, ಜೆರ್ರಿ ಇಬ್ಬರೂ ಕುಡಿಯುವುದಕ್ಕೆ ಹೊರಟರು. ಅದೂ ನನಗೆ ಇಷ್ಟ ಇರಲಿಲ್ಲ,’ ಅಂದ.

ಹನ್ನೊಂದು ದಾಟಿತ್ತು. ಅವನ ಜೊತೆಯಲ್ಲಿ ಬಾಗಿಲಿಗೆ ಹೆಜ್ಜೆ ಹಾಕಿದೆ. ಆಗಸ್ಟ್ ತಿಂಗಳ ತಣ್ಣನೆ ರಾತ್ರಿಗೆ ಹೆಜ್ಜೆ ಇಟ್ಟೆ. ‘ಬಾ ಇಲ್ಲಿ, ನಿನ್ನ ಕಿವಿಯಲ್ಲಿ ಏನೋ ಹೇಳಬೇಕು,’ ಅಂದ. ‘ನನಗೆ ನೀನು ಇಷ್ಟ. ತುಂಬಾ ಇಷ್ಟ ಅಂತಲ್ಲ. ಯಾರನ್ನೂ ತುಂಬ ಇಷ್ಟಪಡುವುದು ನನಗೆ ಇಷ್ಟವಿಲ್ಲ,’ ಅಂದ.

ನನಗೆ ಪೆಟ್ಟಾಯಿತು. ‘ನಾನು ಜನಗಳನ್ನ ತುಂಬಾ ಇಷ್ಟಪಡುತೇನೆ ಅಥವಾ ಪಡೋದೇ ಇಲ್ಲಾ. ಜನಗಳನ್ನ ನಿಜವಾಗಿ ತಿಳಿಯುವುದಕ್ಕೆ ತುಂಬಾ ಆಳಕ್ಕೆ ಹೋಗಬೇಕು,’ ಅಂತ ವದರಿಬಿಟ್ಟೆ.
ಅವನು ಸ್ಪಷ್ಟವಾಗಿದ್ದ.

‘ನನ್ನ ಯಾರೂ ಅರ್ಥ ಮಾಡಿಕೊಳ್ಳಲ್ಲ.’
ಅಷ್ಟೆ, ಮುಗಿಯಿತು.
‘ಗುಡ್ ಬೈ,’ ಅಂದೆ.
ಕಠಿಣವಾಗಿ ನನ್ನ ನೋಡಿದ. ನಗು ಬಂದ ತುಟಿ ವಕ್ರವಾಗಿತ್ತು.

(Petunia ಹೂಗಳು)

‘ನೀನು ಅದೃಷ್ಟವಂತೆ, ಎಷ್ಟು ಅದೃಷ್ಟವಂತೆ ನಿನಗೇ ಗೊತ್ತಿಲ್ಲ.’
ಸದ್ದಿಲ್ಲದೆ ಅಳುತಿದ್ದೆ. ನನ್ನ ಮುಖ ಹಿಂಡಿಕೊಂಡಿದ್ದೆ.

‘ಸಾಕು ನಿಲ್ಲಿಸು!’ ಅವನ ಮಾತು ಚೂರಿ ಇರಿತದ ಹಾಗಿತ್ತು. ಆಮೇಲೆ ಮೃದುವಾದ. ‘ನಾನು ಮತ್ತೆ ಸಿಗತೇನೋ ಇಲ್ಲವೋ ಗೊತ್ತಿಲ್ಲ. ನಿನ್ನ ಕಾಲೇಜಿನ ಜೀವನ ಚೆನ್ನಾಗಿರಲಿ.’
‘ನಿನ್ನ ಬದುಕು ಚೆನ್ನಾಗಿರಲಿ.’

ರಸ್ತೆ ಮೇಲೆ ಬೀಸುಗಾಲು ಹಾಕಿಕೊಂಡು ಸ್ವತಂತ್ರನ ಹಾಗೆ ಹೊರಟು ಹೋದ. ಅವನು ಬಿಟ್ಟು ಹೋದಲ್ಲೇ ನಿಂತಿದ್ದೆ. ಪ್ರೀತಿ ತಳಮಳಗಳಲ್ಲಿ, ಪ್ರೀತಿ, ಬಯಕೆಗಳಲ್ಲಿ ಕುದಿಯುತ್ತಾ, ಕತ್ತಲಲ್ಲಿ ಅಳುತ್ತಾ ನಿಂತಿದ್ದೆ. ಅವತ್ತು ರಾತ್ರಿ ನಿದ್ರೆ ಬರಲಿಲ್ಲ.

18.

ಎಡ್ ಗೆ ಬರೆದ ಪತ್ರದಿಂದ: ‘ನಿನ್ನ ಕಾಗದ ಈಗ ತಾನೇ ಬಂತು. ಅದೇ, ನಗರದಲ್ಲಿ ಸುತ್ತಾಡಿದ್ದರ ಬಗ್ಗೆ, ಯುದ್ಧದ ಬಗ್ಗೆ ಬರೆದಿದ್ದೀಯಲ್ಲ, ಅದು. ನಿನ್ನ ಕಾಗದ ಓದಿ ಏನಾಯಿತು ಅನ್ನುವುದು ನಿನಗೆ ತಿಳಿಯಲಾರದು. ನನ್ನ ಮನಸಿನ ಭಯ, ಎಷ್ಟೋ ಸಾರಿ ಅದುಮಿಟ್ಟಿರುತ್ತೇನಲ್ಲ, ಅದು, ಮತ್ತೆ ತಲೆ ಎತ್ತಿತು, ಹೊಟ್ಟೆಯ ಆಳದಿಂದ ಹೊರಟು ಇಡೀ ನನ್ನನ್ನು ತುಂಬಿತು. ಹೊಟ್ಟೆ ತೊಳೆಸುತಿತ್ತು, ತಿಂಡಿ ತಿನ್ನುವುದಕ್ಕೂ ಆಗಲಿಲ್ಲ. ಹೇಳಿಬಿಡಬೇಕು. ಭಯ, ಭಯ. ಹೆಪ್ಪುಗಟ್ಟಿದೆ ಭಯ. ನನ್ನ ಬಗ್ಗೆಯೇ ಭಯ. ಆದಿ ಕಾಲದ ಮನುಷ್ಯ ಬದುಕಿ ಉಳಿಯುವುದಕ್ಕೆ ಸಹಾಯಮಾಡುತ್ತಿದ್ದ ಭಯ. ಒಂದೊಂದೂ ಕ್ಷಣವೂ ಇರಿಯುವ ಭಯ. ಮೊನ್ನೆ ರಾತ್ರಿ, ಬೋಸ್ಟನ್ ನಿಂದ ವಾಪಸ್ಸು ಬರುವಾಗ, ಕಾರಿನಲ್ಲಿ ಹಿಂದೆ ಒರಗಿ ಕೂತೆ. ಬಣ್ಣದ ದೀಪ ನನ್ನ ಕಡೆಗೆ ಧಾವಿಸಿ ಬರುತಿದ್ದವು. ರೇಡಿಯೋದಲ್ಲಿ ಸಂಗೀತ. ಡ್ರೈವ್ ಮಾಡುತಿದ್ದವನ ಮುಖ ಕನ್ನಡಿಯಲ್ಲಿ. ಎಲ್ಲಾ ಒಟ್ಟಿಗೆ ನುಗ್ಗಿ ಹರಿದು ಬಂದು ನನ್ನ ಮುಳುಗಿಸಿಬಿಟ್ಟವು. ನೆನಪಿರಲಿ, ನೆನಪಿರಲಿ, ಹೀಗೇ, ಈಗ, ಈಗ, ಈಗಲೇ. ಬದುಕು, ಅನುಭವಿಸು. ಇದುವರೆಗೆ ಸಾಮಾನ್ಯ ಅಂದುಕೊಂಡು ಸುಮ್ಮನೆ ಬಿಟ್ಟದ್ದೆಲ್ಲ ಈಗ ಉರಿ ಬೆಂಕಿಯ ಹಾಗೆ ಅರಿವಿಗೆ ಬರುತ್ತಿದೆ. ಇದು ಗುಡ್ ಬೈ ಹೇಳುವ ಕ್ಷಣ, ಕೊನೆಯ ಕ್ಷಣ ಅನಿಸಿದರೆ ಆಘಾತ ಇನ್ನೂ ಹೆಚ್ಚು.

ಏನಾದರೂ ಮಾಡಬೇಕು. ಈ ವಿಕೃತ ಜೋಕು ಕೊನೆಯಾಗಬೇಕು. ನಿಲ್ಲಿಸಬೇಕು ನಾನೇ. ತಡವಾಗುವ ಮೊದಲೇ. ಕವಿತೆ ಬರೆದರೆ, ಕಾಗದ ಬರೆದರೆ ಫಲವಿಲ್ಲ. ದೊಡ್ಡವರೆಲ್ಲ ಕಿವುಡರು. ಲೇಸು ಭದ್ರವಾಗಿ ಕಟ್ಟಿಕೊಂಡು, ಶೂಗಳನ್ನು ಕಿರುಗುಟ್ಟಿಸುತ್ತ ರಸ್ತೆಯ ಮೇಲೆ ನಡೆಯುವ ದೊಡ್ಡವರಿಗೆ ಸಣ್ಣ ನರಳಾಟದ ಕುಂಯ್ ಕುಂಯ್ ಸದ್ದು ಕೇಳಿಸುವುದೇ ಇಲ್ಲ. ಎಡ್, ಇದೆಲ್ಲ ಭೀತಮನದ ಮಾತು ಅನಿಸಬಹುದು. ನನಗೆ ಭೀತಿ ಇರಬಹುದು. ಚಿಕ್ಕಂದಿಲ್ಲಿ ರಕ್ಷಣೆಯ ಸರಿತನದ ಸಂಕೇತವಾಗಿದ್ದ ಅಮ್ಮ ಅಡುಗೆ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅಳುವುದು ಕಂಡಾಗ ಭಯ ಹಿಡಿದುಕೊಳ್ಳುತ್ತದೆ…

ಬೆರಿ ಹಣ್ಣು ಆರಿಸುವುದು

ಬೀದಿಯಲ್ಲಿ ಯಾರೂ ಇಲ್ಲ, ಏನೂ ಇಲ್ಲ, ಇರುವುದೆಲ್ಲ ಕಪ್ಪು ಬೆರ್ರಿ ಮಾತ್ರ
ರಸ್ತೆಯ ಎರಡೂ ಬದಿ ಬೆರ್ರಿ, ಬಲಬದಿಗೇ ಸ್ವಲ್ಪ ಹೆಚ್ಚು.
ಬೆರ್ರಿ ಬೀದಿ, ಇಳಿಜಾರಿನ ತಿರುವು ಮುರುವು ಬೀದಿ.
ಅದರ ತುದಿಯೆಲ್ಲೋ ಅಲ್ಲಿ ಉಬ್ಬಿ ಮೊರೆವ ಕಡಲು.
ನನ್ನ ಹೆಬ್ಬೆರಳ ಗಾತ್ರದ ಬೆರ್ರಿ, ಬೇಲಿಯಲ್ಲಿರುವ ಕಪ್ಪು ಹಕ್ಕಿಯ ಕುರುಡು ಕಣ್ಣಿನ ಹಾಗೆ
ನೀಲ ನೀಲ ಕೆಂಪು ಕೆಂಪು ರಸ ತುಂಬಿ ಕೊಬ್ಬಿ
ಈಗ ಅದನ್ನೆಲ್ಲ ನನ್ನ ಬೆರಳ ಮೇಲೆ ಚೆಲ್ಲಾಡುತ್ತವೆ.
ಇಂಥ ನೆತ್ತರ ಅಕ್ಕ ತಂಗಿತನ ಬಯಸಿರಲಿಲ್ಲ.
ಬೆರಿ ಹಣ್ಣಿಗೆ ನನ್ನ ಮೇಲೆ ಪ್ರೀತಿ
ಅದಕ್ಕೇ ಬದಿಗಳನ್ನು ಅವುಕಿಕೊಂಡು ಹಾಲಿನ ಬಾಟಲಿಯಲ್ಲಿ ಜಾಗಮಾಡಿಕೊಂಡಿವೆ.

ಮೇಲೆ ಕಾಗೆಗಳು, ಕರ್ಕಶ ಸದ್ದಿನ ಹಕ್ಕಿಗಳು
ಇದ್ದಿಲಾಗಿ ಆಕಾಶದಲ್ಲಿ ಹಾರಾಡುವ ಸುಟ್ಟ ಕಾಗದದ ಚೂರುಗಳು..
ಎದುರಿಸುವ ವಿರೋಧಿಸುವ ಒಂದೇ ದನಿ ಎಲ್ಲ ಕಾಗೆಯದ್ದೂ.
ಕಡಲು ಕಾಣದೋ ಏನೋ ಎಂದೂ.
ಒಳಗಿನಿಂದಲೇ ಬೆಳಗಿದ ಹಾಗೆ ಮಿರುಗುವ ಹಸಿರು ಹುಲ್ಲಿನ ಬಯಲು.
ಬೆರ್ರಿ ಹೆಣ್ಣಿನ ಪೊದೆ, ಮಾಗಿದ ಹಣ್ಣು, ಪೊದೆಯ ತುಂಬ ನೊಣದ ರಾಶಿ
ಹಸಿರು ನೀಲ ಹೊಟ್ಟೆಯ ನೊಣಕ್ಕೆಲ್ಲ ಬೆರ್ರಿ ಜೇನಿನ ಹಬ್ಬದೌತಣ.
ನೊಣಕ್ಕೆಲ್ಲ ಸ್ವರ್ಗದ ಬಗ್ಗೆ ನಂಬಿಕೆ ಮೂಡಿದೆ.
ಇನ್ನೊಂದು ಸಾರಿ ದೇಟು ಅಲ್ಲಾಡಿಸಿದರೆ ಸಾಕು ಬೆರ್ರಿ, ಪೊದೆ ಎಲ್ಲ ಮುಗಿಯುತ್ತವೆ.

ಇನ್ನು ಸಿಗಬೇಕು ಸಮುದ್ರ ಮಾತ್ರ.
ಎರಡು ಬೆಟ್ಟದ ನಡುವಿನಿಂದ ತಟ್ಟನೆ ನುಗ್ಗಿ ಬರುವ ಗಾಳಿ,
ಭೂತ ಬಟ್ಟೆಯೊಗೆದ ಹಾಗೆ ಮುಖಕ್ಕೆ ರಾಚುತಿದೆ.
ಈ ಸವಿ ಹಸಿರು ಬೆಟ್ಟಗಳಿಗೆ ಉಪ್ಪಿನ ರುಚಿ ತಿಳಿದಿರಲಾರದು.
ಬೆಟ್ಟಗಳ ನಡುವೆ ಹಾದಿರುವ ಮೇಕೆ ದಾರಿಯಲ್ಲಿ ಹೆಜ್ಜೆ ಹಾಕಿರುವೆ.
ಕೊನೆಯ ತಿರುವು. ಬೆಟ್ಟದ ಉತ್ತರ ಮುಖ ತಲುಪಿರುವೆ.
ಇಲ್ಲೊಂದು ಕಿತ್ತಳೆ ಬಂಡೆ. ಕೊನೆಯಿರದ ಬಯಲು ದಿಟ್ಟಿಸುತ ಸುಮ್ಮನಿದೆ.
ಲೋಹದ ಕಿಡಿಗಳ ಬೆಳಕು, ಮಿದಿಯಲಾರದ ಲೋಹವನ್ನು ಬಡಿಯುತಿರುವ ಕಮ್ಮಾರ ಸದ್ದು.
[ಬ್ಲಾಕ್ ಬೆರಿಯಿಂಗ್ 1960]

[ನಿವೇದನೆಯ ಪದ್ಯ. ಸಿಲ್ವಿಯಾ ಮತ್ತು ಆಕೆಯ ಗಂಡ ಟೆಡ್ ಹ್ಯೂಸ್ ಇಂಗ್ಲೆಂಡಿಗೆ ಮರಳಿದ ಮೇಲೆ ಬರೆದದ್ದು. ಕ್ರಾಸಿಂಗ್ ದಿ ವಾಟರ್ಸ್ ಸಂಕಲನದಲ್ಲಿದೆ. ಮದುವೆಯಾಗಿ ಗಂಡನ ಜೊತೆ ಇಂಗ್ಲೆಂಡಿಗೆ ಹೋದದ್ದು ಸಿಲ್ವಿಯಾಳಿಗೆ ನೋವಿನ ಪಯಣವಾಗಿತ್ತು ಎನ್ನುತ್ತಾರೆ. ಈ ಪದ್ಯ ಅಂಥ ನೋವಿಗೆ ಕೊಟ್ಟ ರೂಪವೂ ಇರಬಹುದು. ಅಮೆರಿಕದ ಮಕ್ಕಳು ಬೆರಿ ಹಣ್ಣು ಸಂಗ್ರಹಿಸುವುದಕ್ಕೆ ಹೋಗುವುದು ತೀರ ಸಾಮಾನ್ಯ. ದೊಡ್ಡವಳಾದ ಸಿಲ್ವಿಯಾ ಈಗ ಅಂಥ ಕೆಲಸ ಮಾಡುತ್ತ ಮತ್ತೆ ಮಗುವಾಗಲು ಬಯಸಿದ್ದಳೋ? ಕಡಲು ಕೂಡ ಸಿಲ್ವಿಯಾಳ ಬಾಲ್ಯದಲ್ಲಿ, ಅವಳು ಬೋಸ್ಟನ್ನಿನಲ್ಲಿರುವಾಗ, ಮತ್ತೆ ಮ್ಯಾಸಚುಸೆಟ್ಸ್ ನಲ್ಲಿರುವಾಗ ಅವಳ ಸಂಗಾತಿಯಾಗಿತ್ತು. ಟೆಡ್ ಹ್ಯೂಸ್ ನನ್ನು ಮದುವೆಯಾದಮೇಲೆ ಮತ್ತೆ ಅವಳು ನಿಸರ್ಗಕ್ಕೆ ನಿಕಟವಾಗಿ ಬದುಕಲು ಆಗಲೇ ಇಲ್ಲ.

ಸುಟ್ಟ ಕಾಗದದ ಚೂರುಗಳ ಹಾಗೆ ಹಾರಾಡುವ ಕಾಗೆ, ಸತ್ತ ಶರೀರಕ್ಕೆ ಮುಕುರುವ ನೊಣಗಳ ಹಿಂಡು ನೆನಪಿಗೆ ತರುವ ಚಿತ್ರ ಇವೆಲ್ಲ ಬಾಲ್ಯದ ಮಧುರ ಸುಂದರ ನೆನಪುಗಳ ಜೊತೆಗೆ ಸಾವು ಎಂಬ ಗಭೀರ ಸಂಗತಿಯನ್ನು ಗೊತ್ತೇ ಆಗದಂತೆ ಬೆಸೆಯುತ್ತವೆ. ಹಾಲಿನ ಬಾಟಲಿ, ಜೇನುಗಳ ಪ್ರಸ್ತಾಪ ಬೈಬಲಿನಲ್ಲಿ ಬರುವ ಸ್ವರ್ಗದ ಸೂಚನೆಯನ್ನು ಒಳಗೊಂಡಿದೆ ಎಂದು ವಿಮರ್ಶಕರು ಸೂಚಿಸಿದ್ದಾರೆ. ಹೀಗೆ ಬಾಲ್ಯ, ಸಾವು, ಧರ್ಮಗಳ ಹೆಣಿಗೆಯನ್ನು ಈ ಕವಿತೆಯಲ್ಲಿ ನೋಡಬಹುದು.]

Blackberrying

Nobody in the lane, and nothing, nothing but blackberries,
Blackberries on either side, though on the right mainly,
A blackberry alley, going down in hooks, and a sea
Somewhere at the end of it, heaving. Blackberries
Big as the ball of my thumb, and dumb as eyes
Ebon in the hedges, fat
With blue-red juices. These they squander on my fingers.
I had not asked for such a blood sisterhood; they must love me.
They accommodate themselves to my milkbottle, flattening their sides.

Overhead go the choughs in black, cacophonous flocks—
Bits of burnt paper wheeling in a blown sky.
Theirs is the only voice, protesting, protesting.
I do not think the sea will appear at all.
The high, green meadows are glowing, as if lit from within.
I come to one bush of berries so ripe it is a bush of flies,
Hanging their bluegreen bellies and their wing panes in a Chinese screen.
The honey-feast of the berries has stunned them; they believe in heaven.
One more hook, and the berries and bushes end.

The only thing to come now is the sea.
From between two hills a sudden wind funnels at me,
Slapping its phantom laundry in my face.
These hills are too green and sweet to have tasted salt.
I follow the sheep path between them. A last hook brings me
To the hills’ northern face, and the face is orange rock
That looks out on nothing, nothing but a great space
Of white and pewter lights, and a din like silversmiths
Beating and beating at an intractable metal.