`ಚಿಲ್ಡ್ರನ್‌ ಆಫ್‌ ಹೆವನ್‌’ ಚಿತ್ರವನ್ನು ಇಡೀ ಜಗತ್ತೇ ನೋಡಿ ಮುಗಿಸಿದೆ. ಸಿನಿಹೋಕರು ಯಾರೂ ಈ ಸಿನಿಮಾ ನೋಡಿಲ್ಲ ಎಂದು ಹೇಳಲಾರರು. ಮಜೀದ್‌ ಮಜ್ದಿ ನಿರ್ದೇಶನದ ಈ ಇರಾನಿ ಸಿನಿಮಾ ಇದೀಗ ಹಿಂದಿಯಲ್ಲಿ ನಿರ್ಮಾಣವಾಗುತ್ತಿರುವ ಸುದ್ದಿ ಬಂದಿದೆ. `ತಾರೇ ಜಮೀನ್‌ ಪರ್‌’ ಚಿತ್ರದ ಗೆಲುವಿನ ನಂತರ ಬಾಲಿವುಡ್‌ನಲ್ಲಿ ಮಕ್ಕಳ ಚಿತ್ರ ನಿರ್ಮಾಣಕ್ಕೆ ದಾರಿ ಮುಕ್ತವಾಗಿದೆ.
ಹಾಗೆ ನೋಡಿದರೆ ಬಾಲಿವುಡ್‌ ಚಿತ್ರರಂಗ ಅತ್ಯಾಶ್ಚರ್ಯಕರ ರೀತಿಯಲ್ಲಿ ಫಾರ್ಮುಲಾಗಳಿಂದ ತನ್ನನ್ನು ಬಿಡಿಸಿಕೊಂಡಿದೆ. ಅಲ್ಲಿ `ಆಮೀರ್‌’, `ಎ ವೆಡ್ನೆಸ್‌ಡೇ`ಯಂಥ ಚಿತ್ರಗಳು ಬರುತ್ತಿವೆ. ವಿಷಯ, ದೃಶ್ಯಗಳಲ್ಲಿ ಬದಲಾವಣೆಗಳಾಗುತ್ತಿವೆ. ರಾಗ, ದ್ವೇಷಗಳನ್ನು ಮೀರಿದ ಚಿತ್ರಗಳು ಬರುತ್ತಿವೆ. ಹೆಚ್ಚು ಕಡಿಮೆ ಎರಡು ತಿಂಗಳ ಅವಧಿಯಲ್ಲಿ `ಆಮೀರ್‌’, `ಎ ವೆಡ್ನೆಸ್‌ಡೇ’ ಮತ್ತು `ಮುಂಬೈ ಮೇರಿ ಜಾನ್‌’ ಸಿನಿಮಾಗಳು ಭಯೋತ್ಪಾದನೆಯ ಮೇಲೆ ದೊಡ್ಡ ವ್ಯಾಖ್ಯಾನವನ್ನೇ ಬರೆದು ಹೋದವು. ಬಿಡುಗಡೆಯಾದ ಬಹಳ ದಿನಗಳ ನಂತರವೂ ಚಿತ್ರಮಂದಿರಗಳಲ್ಲಿ `ವೆಡ್ನೆಸ್‌ ಡೇ’ ಉಳಿದಿದೆ. ಪ್ರೀತಿ, ಹೊಡೆದಾಟಗಳಿಲ್ಲದ ಇಂಥ ಚಿತ್ರಗಳನ್ನೂ ಮಂದಿ ತದೇಕ ಚಿತ್ತದಿಂದ ಕುಳಿತು ನೋಡುತ್ತಿದ್ದಾರೆ.

ಇಂಥ ಸಮಯದಲ್ಲಿ `ಚಿಲ್ಡ್ರನ್ಸ್‌ ಆಫ್‌ ಹೆವನ್‌’ ಚಿತ್ರ ಪುನಃಸೃಷ್ಟಿಯಾಗುತ್ತಿದೆ. ಆದರೆ ಆ ಚಿತ್ರ ಎಷ್ಟರಮಟ್ಟಿಗೆ ಮೂಲದ ಕಂಪನ್ನು ಉಳಿಸಿಕೊಂಡೂ, ಸ್ವಯಂಭೂ ಆಗಿ, ಸ್ವಯಂ ಕಂಪನ್ನು ಬೀರುತ್ತದೆ ಎಂಬುದೇ ಇಲ್ಲಿ ಪ್ರಶ್ನೆ. ಯಾಕೆಂದರೆ ಚಿತ್ರವನ್ನು ನಿರ್ದೇಶಿಸುತ್ತಿರುವವರು ಪ್ರಿಯದರ್ಶನ್‌. ಪ್ರಿಯದರ್ಶನ್‌ ಈಗಾಗಲೇ ದೇಶಪ್ರಸಿದ್ಧಿ ಪಡೆದುಕೊಂಡಿರುವುದು ಕಾಮಿಡಿ ಚಿತ್ರಗಳನ್ನು ನಿರ್ದೇಶಿಸಿ. ಮಲೆಯಾಳಂ ಚಿತ್ರರಂಗದ ಕಾಮಿಡಿ ಚಿತ್ರಗಳನ್ನು ಹಿಂದಿಯಲ್ಲಿ ಮರುಬಳಕೆ ಮಾಡಿಕೊಂಡುಬಿಡುವ ಪ್ರಿಯದರ್ಶನ್‌, ಕಾಮಿಡಿ ಸಬ್ಜೆಕ್ಟ್‌ಗಳನ್ನು ತಕ್ಕ ಮಟ್ಟಿಗೆ ಉಣಬಡಿಸಬಲ್ಲವರು. ಎಷ್ಟೋ ಸಲ ಗಂಭೀರ ವಸ್ತುವನ್ನು ತೆಗೆದುಕೊಂಡು ಅದನ್ನೂ ಕಾಮಿಡಿ ಚಿತ್ರವನ್ನಾಗಿ ಮಾಡಿಬಿಡಬಲ್ಲ ಸಾಮರ್ಥ್ಯ ಅವರಿಗಿದೆ. ಇದಕ್ಕೆ ಇತ್ತೀಚಿನ ಅತ್ಯುತ್ತಮ ಉದಾಹರಣೆ: ಭೂಲ್‌ ಭೂಲಯಾ. ಸದ್ಯದಲ್ಲೇ ಅಂಥ `ಕ್ರಿಯೆ’ಗೆ ಇನ್ನೊಂದು ಉದಾಹರಣೆಯಾಗಬಹುದಾದ್ದು `ಬಿಲ್ಲೋ ಬಾರ್ಬರ್‌’. ಅದು `ಕಥಾ ಪರೆಯಂಬೋಲ್‌’ನ ರೀಮೇಕ್‌.

ಇನ್ನು ವಸ್ತುವಿನ ಆಯ್ಕೆಯ ವಿಷಯ. `ಚಿಲ್ಡ್ರನ್ಸ್‌ ಆಫ್‌ ಹೆವನ್‌’ ಚಿತ್ರವನ್ನು ಇರಾನಿ ಪರಿಸರದ ಹಿನ್ನೆಲೆಯಲ್ಲಿ ಸೃಷ್ಟಿಸಿದಾಗ ಆದ ಪರಿಣಾಮಕ್ಕೂ ಭಾರತದ ಹಿನ್ನೆಲೆಯಲ್ಲಿ ಚಿತ್ರಿಸಿದಾಗ ಆಗುವ ಪರಿಣಾಮಕ್ಕೂ ಬಹಳ ವ್ಯತ್ಯಾಸವಿದೆ. ಬಡತನದ ಹಿನ್ನೆಲೆಯ ಕುಟುಂಬದಲ್ಲಿ ಬದುಕುತ್ತಿದ್ದ ಅಣ್ಣ- ತಂಗಿಯರು ಶೂ ಕಳೆದುಕೊಳ್ಳುವುದು ಮತ್ತು ಅಂಥ ಶೂ ಅನ್ನು ತಂಗಿಗೆ ತಂದು ಕೊಡಲು ಅಣ್ಣ ಹರಸಾಹಸ ಪಡುವುದು `ಹೆವನ್‌’ನ ಕತೆ. ಕತೆ ಸರಳವಾಗಿದ್ದರೂ ಅದು ಹೇಳುವ ಮೌಲ್ಯ, ಬಾಲ್ಯದ ಹತಾಶೆ, ಹತಾಶೆಯ ನಡುವಲ್ಲೂ ಆ ಪಾತ್ರಗಳು ತಮ್ಮ ಮಿತಿಗಳನ್ನು ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳುವ ರೀತಿ ಅಸಾಧಾರಣವಾದುದು. ಇಡೀ ಚಿತ್ರದಲ್ಲಿ ವಿಷಾದ ಮೂಲ ದ್ರವ್ಯವೆಂದು ಕಂಡುಬಂದರೂ ನಿಜವಾದ ಸತ್ವವೆಂದರೆ ಜೀವನ ಪ್ರೀತಿ. ಶೂ ಇಲ್ಲದಿದ್ದರೂ ಒಂದೇ ಜೊತೆ ಶೂ ಅನ್ನು ಅಣ್ಣ- ತಂಗಿ ಹಂಚಿಕೊಳ್ಳುತ್ತಾರೆ. ಆ ಒಂದು ಜೊತೆ ಶೂನಿಂದ ಆಗುವ ತೊಂದರೆಯ ನಡುವೆಯೂ ಇಬ್ಬರ ವಿದ್ಯಾಭ್ಯಾಸ ಅವ್ಯಾಹತವಾಗಿ ಸಾಗುತ್ತದೆ. ಅವರಿಬ್ಬರ ಸಣ್ಣ ಪುಟ್ಟ ಜಗಳಗಳು ನಿರಂತರವಾಗುತ್ತವೆ. ತಂಗಿಗೆ ಶೂ ಕೊಡಿಸಲು ಮೂರನೇ ಬಹುಮಾನವಾಗಿ ಶೂ ಜೊತೆಯನ್ನು ಇಟ್ಟಿರುವ `ರೇಸ್‌ ಸ್ಪರ್ಧೆ’ಯಲ್ಲಿ ಪಾಲ್ಗೊಳ್ಳುತ್ತಾನೆ. ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದರೂ ಮೂರನೇ ಸ್ಥಾನ ಗೆದ್ದು ತಂಗಿಗೆ ಶೂ ಕೊಡಿಸಲಾಗಲಿಲ್ಲವಲ್ಲಾ ಎಂದು ಬೇಜಾರಾಗುತ್ತಾನೆ. ಆ ಮೂಲಕ ಹೆಚ್ಚು ಮಾನವೀಯ ವ್ಯಕ್ತಿಯಾಗುತ್ತಾನೆ. ಇಲ್ಲೆಲ್ಲಾ ಇಡೀ ಸಿನಿಮಾ ಜೀವಂತಿಕೆಯ ಪ್ರತಿರೂಪವಾಗುತ್ತದೆ.

ರೀಮೇಕ್‌ ಮಾಡಲು ಹೊರಡುವಾಗ ಮೂಲ ಸಿನಿಮಾವನ್ನು ಆ ಸಿನಿಮಾದ ಸೂಕ್ಷ್ಮಗಳಿಂದ ಗ್ರಹಿಸಬೇಕು. ಹಾಗೆ ಗ್ರಹಿಸದೇ ಹೋದರೆ ವಾಸು ನಿರ್ದೇಶನದ `ಕುಚೇಲನ್‌’ ಆಗುತ್ತದೆ. `ಮಣಿಚಿತ್ತತಾಲ್‌’ನ ತಮಿಳು ಅವತರಣಿಕೆಯಾದ `ಚಂದ್ರಮುಖಿ’ಯೋ, ಹಿಂದಿ ಅವತರಣಿಕೆಯಾದ `ಭೂಲ್‌ ಭುಲೈಯಾ’ನೋ ಆಗಿಬಿಡುತ್ತದೆ. ನಮ್ಮಲ್ಲಿ ಅತ್ಯುತ್ತಮ ರೀಮೇಕ್‌ಗೆ ಉದಾಹರಣೆ ಯಾವುದು ಎಂದರೆ ಹೇಳುವುದು ಕಷ್ಟ. ಹಾಗೆ ನೋಡಿದರೆ ಇತ್ತೀಚೆಗೆ ಹಿಂದಿಯಲ್ಲಿ ಬಂದ `ಆಮೀರ್‌’ ಚಿತ್ರ `ಕ್ಯಾವಿಟೆ`ಎಂಬ ಫಿಲಿಪೈನ್ಸ್‌ ಚಿತ್ರದ ಅತ್ಯುತ್ತಮ ರೀಮೇಕ್‌ ರೂಪ. ಅಲ್ಲಿ ಮೂಲದ ಸತ್ವವನ್ನಷ್ಟೇ ಇಟ್ಟುಕೊಂಡು ಹಳೆ ಮುಂಬೈನ ಹಿನ್ನೆಲೆಯಲ್ಲಿ ಇಡೀ ಘಟನೆಯನ್ನು ಮರು ವ್ಯಾಖ್ಯಾನಿಸಲಾಗಿತ್ತು.

`ಚಿಲ್ಡ್ರನ್‌ ಆಫ್‌ ಹೆವನ್‌’ ಚಿತ್ರಕ್ಕೆ ಬಡತನವೇ ಹಿನ್ನೆಲೆ. ಅದನ್ನು ಭಾರತಕ್ಕೆ ಕರೆತರುವಾಗ ಬಡತನ ಢಾಳಾಗಿರುವ ರಾಜ್ಯವೊಂದು ಹಿನ್ನೆಲೆಯಾಗಬೇಕಾಗುತ್ತದೆ. ಇರಾನ್‌ ಮಾದರಿಯಲ್ಲೇ ಸಂಪನ್ಮೂಲ ಇದ್ದೂ ಬಡತನ ಢಾಳಾಗಿರುವ ಈಶಾನ್ಯ ರಾಜ್ಯಗಳು ಈ ಕತೆಗೆ ಅತ್ಯುತ್ತಮ ಹಿನ್ನೆಲೆಯಾಗಬಹುದು. `ತಾರೆ ಜಮೀನ್‌ ಪರ್‌’ನ ಹೀರೋ, ಸದ್ಯ ಸ್ಟಾರ್‌ ವ್ಯಾಲ್ಯೂ ಪಡೆದುಕೊಂಡುಬಿಟ್ಟಿರುವ ಪೋರ, ತನಗೆ ಚಿತ್ರದಲ್ಲಿ ಫುಲ್‌ ಸ್ಕೋಪ್‌ ಇರಬೇಕೆಂದು ಹಠ ಮಾಡುವ ಹುಡುಗ ದರ್ಶಿಲ್‌ ಈ ಚಿತ್ರದ ಹುಡುಗನ ಪಾತ್ರ ಮಾಡುತ್ತಿದ್ದಾನೆ. ಇಂಥ ಒಂದು ಟೀಮ್‌ ಇರಾನ್‌ನ ಸ್ವರ್ಗವನ್ನು ನಮ್ಮ ಸ್ವರ್ಗವಾಗಿ ಮಾಡುತ್ತದೆಯೇ ಎನ್ನುವುದು ಪ್ರಶ್ನೆ, ಆತಂಕ ಮತ್ತು ನಿರೀಕ್ಷೆ.