ಗಂಟಿಚೋರ್ ಸಮುದಾಯದಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದ ಕ್ರೀಡಾಪಟು ಅಂದರೆ, ಅರ್ಜುನ ಬಸಪ್ಪ ಗಾಯಕವಾಡ. ಕ್ಷೇತ್ರಕಾರ್ಯದಲ್ಲಿ ರಾಯಭಾಗ ಸಮೀಪದ ಶಾಹು ಪಾರ್ಕ್ ನೋಡಲು ಹೋದಾಗ ನಮ್ಮ ಜತೆಗೆ ಎ.ಬಿ. ಗಾಯಕವಾಡ ಅವರ ಮಗ ವಿಜಯ್ ನಮ್ಮ ಜೊತೆಗೆ ಬಂದಿದ್ದರು. ತನ್ನ ತಂದೆಯ ಕ್ರೀಡಾ ಸಾಹಸವನ್ನು ವಿವರಿಸಿದರು. ಗಾಯಕವಾಡರ ರಾಯಭಾಗದ ಮನೆಗೆ ಹೋಗಿದ್ದೆವು. ಅಲ್ಲಿ ಗಾಯಕವಾಡರು ಕ್ರೀಡೆಯಲ್ಲಿ ಭಾಗವಹಿಸಿದ ಫೋಟೋ ಚಿತ್ರಗಳು ನೋಡಲು ಸಿಕ್ಕವು. ಇಂದಿರಾಗಾಂಧಿ ಅವರ ಜತೆ ಟೀ ಪಾರ್ಟಿ ಮಾಡಿದ ಚಿತ್ರವು ಗಾಯಕವಾಡರ ಅತ್ಯುನ್ನತ ಗೌರವವೆಂಬಂತೆ ಕಂಡಿತು.
ಡಾ. ಅರುಣ್ ಜೋಳದಕೂಡ್ಲಿಗಿ ಬರೆಯುವ ಗಂಟಿಚೋರರ ಕಥನ ಸರಣಿಯ ಇಪ್ಪತ್ತಮೂರನೆಯ ಕಂತು

ಗಂಟಿಚೋರ್ ಸಮುದಾಯದಲ್ಲಿ ಸಾಂಪ್ರದಾಯಿಕ ಕ್ರೀಡೆಯಾಗಿ ಕುಸ್ತಿಯನ್ನು ಒಳಗೊಂಡಂತೆ ಶಕ್ತಿ ಮತ್ತು ಯುಕ್ತಿ ಪ್ರದರ್ಶನದ ಕ್ರೀಡೆಗಳಿದ್ದವು. ಈ ಕಲೆಗಳಿಗೂ ಸಮುದಾಯದ ಪ್ರವೃತ್ತಿಯಾಗಿದ್ದ ತುಡುಗುತನಕ್ಕೂ ಒಂದು ನಂಟಿತ್ತು. ಕಾರಣ ತುಡುಗುತನಕ್ಕೆ ಹೋಗುವವರು ದೈಹಿಕವಾಗಿ ದಷ್ಟಪುಷ್ಟರಾಗಿರಬೇಕಿತ್ತು. ಅಂತೆಯೇ ತಮ್ಮ ದೇಹದ ಸ್ಥಿತಿಯಿಂದಲೇ ಎದುರಾಳಿಯನ್ನು ನಡುಗಿಸಬೇಕಿತ್ತು. ಈ ಕಾರಣಗಳಿಗಾಗಿ ಗರಡಿ ಮನೆಗಳಲ್ಲಿ ಸಾಮು ತೆಗೆಯುತ್ತಿದ್ದರು ಎಂದು ಬಿಜಾಪುರದ ಸೀತೋಳೆ ಅವರು ಹೇಳುತ್ತಾರೆ. ಇದಕ್ಕೆ ಪುರಾವೆಯಂತೆ ಅನೇಕ ಹಿರಿಯ ಪೈಲ್ವಾನರ ಚಿತ್ರಗಳನ್ನು ಗಂಟಿಚೋರರ ಮನೆಗಳಲ್ಲಿ ಕೆಲವೆಡೆ ನೋಡಲು ಸಿಕ್ಕವು. ಅಂತೆಯೇ ಕೆನಡಿ ಅವರ ಪುಸ್ತಕದಲ್ಲಿ ಅಚ್ಚಾಗಿರುವ ಗಂಟಿಚೋರ್ ಸಮುದಾಯದ ಪುರುಷರ ಚಿತ್ರಗಳನ್ನು ನೋಡುತ್ತಿದ್ದರೂ ಇದು ಅರಿವಿಗೆ ಬರುತ್ತದೆ. ಕುಸ್ತಿಗೆ ಸಂಬಂಧಿಸಿದಂತೆ ಇರುವ ಮತ್ತೊಂದು ದೇಸಿ ಆಟವೆಂದರೆ ಕಬಡ್ಡಿ ಆಟ. ಈ ಕಬಡ್ಡಿ ಆಟಕ್ಕೂ ಕುಸ್ತಿ, ಸಾಮು ಮುಂತಾದ ಚಟುವಟಿಕೆಗಳಿಗೂ ಒಂದು ನಂಟಿತ್ತು. ಹಾಗಾಗಿ ಗಂಟಿಚೋರ್ ಸಮುದಾಯದಲ್ಲಿ ಕಬಡ್ಡಿ ಆಟಗಾರರ ಸಂಖ್ಯೆಯೂ ದೊಡ್ಡದಿದೆ.

ನಿಜಕ್ಕೂ ಈ ಸಮುದಾಯದ ಕ್ರೀಡೆಯ ಶಕ ಬದಲಾದದ್ದು ಸೆಟ್ಲಮೆಂಟ್‌ಗೆ ಸೇರಿದಾಗ. ಅಪರಾಧಿ ಬುಡಕಟ್ಟುಗಳು ಎಂದು ಹಣೆಪಟ್ಟಿ ಕಟ್ಟಿಕೊಂಡು ಸೆಟ್ಲ್‌ಮೆಂಟ್ ಸೇರಿದಾಗ ಇದನ್ನು ನೋಡಿಕೊಳ್ಳುತ್ತಿದ್ದ ಆಫೀಸರುಗಳು ಈ ಬುಡಕಟ್ಟುಗಳ ಅಭಿವೃದ್ದಿಗಾಗಿ ಅನೇಕ ಸುಧಾರಣೆಗಳನ್ನು ತಂದರು. ಇದರ ಭಾಗವಾಗಿ ಸೆಟ್ಲ್‌ಮೆಂಟ್‌ಗಳಲ್ಲಿ ಶಿಕ್ಷಣ ಕೊಡಲು ಶುರು ಮಾಡಿದರು. ಈ ಶಿಕ್ಷಣದ ಜೊತೆ ಜೊತೆಗೆ ಕ್ರೀಡೆಗಳನ್ನೂ ಕಲಿಸಿದರು. ಹೀಗಾಗಿ ಸೆಟ್ಲ್‌ಮೆಂಟ್‌ನಲ್ಲಿರುವ ಬುಡಕಟ್ಟುಗಳಿಗೆ ಆಧುನಿಕ ಕ್ರೀಡೆಗಳ ಪರಿಚಯವಾಯಿತು. ಅಂತೆಯೇ ಸಾಂಪ್ರದಾಯಿಕ ಕ್ರೀಡೆಗಳ ಹೊಸ ಚಲನೆಯೂ ಸಾಧ್ಯವಾಯಿತು. ಸ್ವತಃ ಸೆಟ್ಲ್‌ಮೆಂಟ್‌ ಬ್ರಿಟಿಷ್ ಅಧಿಕಾರಿಗಳು ಕ್ರೀಡಾಸಕ್ತಿ ಹೊಂದಿದವರಾಗಿದ್ದು, ತಮ್ಮ ಕ್ರೀಡಾ ಅಭಿರುಚಿಯನ್ನು ಉಳಿಸಿಕೊಳ್ಳಲು ಅವರು ಆಡುತ್ತಿದ್ದ ಕ್ರೀಡೆಗಳಲ್ಲಿ ಆಯಾ ಸೆಟ್ಲ್‌ಮೆಂಟ್‌ನ ಬುಡಕಟ್ಟು ಸಮುದಾಯದವರನ್ನು ಸೇರಿಸಿಕೊಳ್ಳುತ್ತಿದ್ದರು. ಇದರ ಪರಿಣಾಮವಾಗಿಯೇ ಸೆಟ್ಲ್‌ಮೆಂಟ್‌ ವಾಸಿ ಬುಡಕಟ್ಟುಗಳಲ್ಲಿ ಫುಟ್ ಬಾಲ್, ಕಬ್ಬಡ್ಡಿ, ಟೆನಿಕ್ವಾಯ್ಡ್, ಹಾಕಿ, ರನ್ನಿಂಗ್, ಜಂಪಿಂಗ್ ಮುಂತಾದ ಆಟಗಳನ್ನು ಆಡುವ ಪರಂಪರೆ ಬೆಳೆದುಕೊಂಡು ಬಂದಿದೆ.

ಈ ಕಾರಣಕ್ಕಾಗಿ ಸ್ಪೋರ್ಟ್ಸ್‌ ಕ್ಲಬ್ಬುಗಳು ಸೆಟ್ಲ್‌ಮೆಂಟ್‌ಗಳಲ್ಲಿ ಹುಟ್ಟಿಕೊಂಡವು. ಇವು ಕಾಲಕಾಲಕ್ಕೆ ಆಯಾ ಆಟಗಳ ಸ್ಪರ್ಧೆಗಳನ್ನು ಏರ್ಪಡಿಸಿವೆ. ಇದರಿಂದಾಗಿ ಬೆಳಕಿಗೆ ಬಂದ ಕ್ರೀಡಾಪಟುಗಳಿದ್ದಾರೆ. ಹುಬ್ಬಳ್ಳಿ ಸೆಟ್ಲ್‌ಮೆಂಟ್‌ ಸ್ಪೋರ್ಟ್ಸ್‌ ಕ್ಲಬ್ ಮತ್ತು ಗದಗ ಬೆಟಗೇರಿ ಸ್ಪೋರ್ಟ್ಸ್‌ ಕ್ಲಬ್ ವತಿಯಿಂದ ನಡೆದ ಕ್ರೀಡೆಗಳಲ್ಲಿ ಅನೇಕರು ಬೆಳಕಿಗೆ ಬಂದಿದ್ದಾರೆ. ಗದಗಿನ ಸೆಟ್ಲ್‌ಮೆಂಟ್‌ನ ರಂಗಪ್ಪ ಹಂಸನೂರು, ಗುರುಸಿದ್ದಪ್ಪ ಬಾಲಪ್ಪ ಬಾಲೆಹೊಸೂರ್, ಲಕ್ಷ್ಮಣ ಹಂಸನೂರು(ಕುಡ್ ಲಕ್ಷ್ಮಣ) ಹುಬ್ಬಳ್ಳಿಯ ಡಿ.ಎಫ್. ಸೀತೋಳಿ ಹಾಗೂ ರಾಮಣ್ಣ ಹುಲಕುಂದ ಮೊದಲಾದವರು 1960ರ ಹೊತ್ತಿಗೇ ಕ್ರೀಡಾಪಟುಗಳಾಗಿ ಹೆಸರು ಮಾಡಿದ್ದರು. ಗದಗಿನ ಹನುಮಂತಪ್ಪ ಭೀಮಪ್ಪ ಹಂಸನೂರು, ಶಿವಪುತ್ರಪ್ಪ ಹಂಸನೂರು, ಶಂಕ್ರಪ್ಪ ಹಂಸನೂರು(ರೊಳ್ಳಿ ಶಂಕ್ರಪ್ಪ) ಇವರು ರೈಲ್ವೇ ಇಲಾಖೆಯಲ್ಲಿ ನೌಕರಿ ಸೇರಿ, ಸೌತ್ ಜೋನ್ ರೈಲ್ವೇ ಮತ್ತು ಸದರ್ನ್ ರೈಲ್ವೇನಲ್ಲಿ 1960-70ರ ದಶಕದಲ್ಲಿ ದೇಶದಾದ್ಯಂತ ಹಾಕಿ ಆಡಿ ಜನಪ್ರಿಯರಾಗಿದ್ದರು. ಇದರಲ್ಲಿ ಕೆಲವು ಪ್ರಮುಖ ಕ್ರೀಡಾಪಟುಗಳನ್ನು ಈ ಕೆಳಗಿನಂತೆ ಪರಿಚಯಿಸಬಹುದು.

ಗಂಟಿಚೋರ್ ಸಮುದಾಯದಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಪಡೆದ ಕ್ರೀಡಾಪಟು ಅಂದರೆ, ಅರ್ಜುನ ಬಸಪ್ಪ ಗಾಯಕವಾಡ. ಕ್ಷೇತ್ರಕಾರ್ಯದಲ್ಲಿ ರಾಯಭಾಗ ಸಮೀಪದ ಶಾಹು ಪಾರ್ಕ್ ನೋಡಲು ಹೋದಾಗ ನಮ್ಮ ಜತೆಗೆ ಎ.ಬಿ. ಗಾಯಕವಾಡ ಅವರ ಮಗ ವಿಜಯ್ ನಮ್ಮ ಜೊತೆಗೆ ಬಂದಿದ್ದರು. ತನ್ನ ತಂದೆಯ ಕ್ರೀಡಾ ಸಾಹಸವನ್ನು ವಿವರಿಸಿದರು. ಗಾಯಕವಾಡರ ರಾಯಭಾಗದ ಮನೆಗೆ ಹೋಗಿದ್ದೆವು. ಅಲ್ಲಿ ಗಾಯಕವಾಡರು ಕ್ರೀಡೆಯಲ್ಲಿ ಭಾಗವಹಿಸಿದ ಫೋಟೋ ಚಿತ್ರಗಳು ನೋಡಲು ಸಿಕ್ಕವು. ಇಂದಿರಾಗಾಂಧಿ ಅವರ ಜತೆ ಟೀ ಪಾರ್ಟಿ ಮಾಡಿದ ಚಿತ್ರವು ಗಾಯಕವಾಡರ ಅತ್ಯುನ್ನತ ಗೌರವವೆಂಬಂತೆ ಕಂಡಿತು.

(ಇಂದಿರಾಗಾಂಧಿಯವರೊಂದಿಗೆ ಟೀ ಪಾರ್ಟಿ)

ಗಾಯಕವಾಡರು ರಾಯಭಾಗದ ಶಿಕ್ಷಣ ಪ್ರಸಾರಕ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪದವಿ ಪಡೆದರು. ಆಗಲೇ 1500 ಮೀಟರ್ ಓಟದಲ್ಲಿ ಜಿಲ್ಲಾಮಟ್ಟದಲ್ಲಿ ಯಶ ಕಂಡು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡಕ್ಕೆ ವಿಶ್ವವಿದ್ಯಾಲಯ ಮಟ್ಟಕ್ಕೆ ಆಯ್ಕೆಯಾಗಿದ್ದರು. ಮುಂದುವರಿದು 10,000 ಮೀಟರ್ ಓಟದಲ್ಲಿಯೂ ಗೆದ್ದು ವಿಶ್ವವಿದ್ಯಾಲಯಕ್ಕೆ ಘನತೆ ತಂದರು. 1986ರಿಂದ 1989ರಲ್ಲಿ ಅಂತರ್ ವಿಶ್ವವಿದ್ಯಾಲಯಗಳ ಪಂದ್ಯದಲ್ಲಿ ಪಟಿಯಾಲದಲ್ಲಿ 1500 ಮೀಟರ್ ಓಟದಲ್ಲಿಯೂ ಗೆದ್ದರು. ನಂತರ 1989-90 ರಲ್ಲಿ ಕಲ್ಕತ್ತಾದಲ್ಲಿ ನಡೆದ 5000 ಮೀಟರ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದರು.

ಶಿಕ್ಷಣದ ಜೊತೆ ಜೊತೆಗೆ ಕ್ರೀಡೆಗಳನ್ನೂ ಕಲಿಸಿದರು. ಹೀಗಾಗಿ ಸೆಟ್ಲ್‌ಮೆಂಟ್‌ನಲ್ಲಿರುವ ಬುಡಕಟ್ಟುಗಳಿಗೆ ಆಧುನಿಕ ಕ್ರೀಡೆಗಳ ಪರಿಚಯವಾಯಿತು. ಅಂತೆಯೇ ಸಾಂಪ್ರದಾಯಿಕ ಕ್ರೀಡೆಗಳ ಹೊಸ ಚಲನೆಯೂ ಸಾಧ್ಯವಾಯಿತು. 

ಇರಾನ್ ದೇಶವು ತನ್ನ 10ನೇ ಪ್ರಜಾರಾಜ್ಯೋತ್ಸವವನ್ನು 1989ರಲ್ಲಿ ಆಚರಿಸಿತು. ಇದರ ಭಾಗವಾಗಿ ಅಂತಾರಾಷ್ಟ್ರೀಯ ಕ್ರೀಡೆಗಳನ್ನು ಆಯೋಜಿಸಿತು. ಈ ಕ್ರೀಡಾಸ್ಪರ್ಧೆಯಲ್ಲಿ 3000 ಮತ್ತು 5000 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಮೂಲಕ ಎ.ಬಿ.ಗಾಯಕವಾಡರು ದೇಶಕ್ಕೆ ಕೀರ್ತಿ ತಂದರು. ದೆಹಲಿಯಲ್ಲಿ ಎನ್.ಸಿ.ಸಿ.ಯ ಬೆಸ್ಟ್ ಕೆಡೆಟ್ ಪ್ರಶಸ್ತಿಯೂ ಲಭಿಸಿತು. ಇದರ ಫಲವಾಗಿ ಗಾಯಕವಾಡ ಅವರಿಗೆ ಮೊದಲಿಗೆ ರೈಲ್ವೇ ಇಲಾಖೆಯಲ್ಲಿ ಟಿ.ಸಿ.ಯಾಗಿ ಕೆಲಸಕ್ಕೆ ಸೇರಿಕೊಂಡರು. ನಂತರ ರೆವಿನ್ಯೂ ಇಲಾಖೆಗೆ ಸೇರಿದ್ದರು. ಇಲಾಖೆಯ ರಾಜ್ಯ, ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಗಾಯಕವಾಡರು ಆಯ್ಕೆಯಾಗಿ ಪ್ರಶಸ್ತಿಗಳನ್ನು ಪಡೆದರು. ಗಾಯಕವಾಡರು ಕೊನೆಗಾಲದಲ್ಲಿ ಅಧ್ಯಾತ್ಮದ ಕಡೆಗೆ ವಾಲಿದ್ದರು. ಅದು ಒಂದು ಹಂತದಲ್ಲಿ ಅತಿರೇಕಕ್ಕೂ ಹೋಗಿತ್ತು. ಈಗ ಅವರ ಮನೆಯಲ್ಲಿ ದೇವರು ಪ್ರತ್ಯಕ್ಷವಾದ ದೊಡ್ಡ ದೊಡ್ಡ ಕಲಾಕೃತಿಗಳನ್ನು ನೋಡಿದರೆ ಇದರ ಅರಿವಾಗುತ್ತದೆ.

ಅರ್ಜುನ್ ಅವರ ದೈವಿಕ ಭಕ್ತಿ ವಿಶಿಷ್ಠವಾದುದು. ಅದು ಅತಿರೇಕಕ್ಕೆ ಹೋಗಿ ಕೊನೆಗೆ ನಾನೇ ದೈವ, ನನ್ನೊಂದಿಗೆ ದೈವಗಳು ಮಾತನಾಡುತ್ತವೆ. ದೈವಗಳು ನನ್ನನ್ನು ಕರೆಯುತ್ತಿದ್ದಾರೆ ಎಂದು ಮಾತಾಡುತ್ತಿದ್ದರಂತೆ. ಪ್ರತಿ ತಿಂಗಳು ಹುಣ್ಣಿಮೆ ಅಥವಾ ಅಮವಾಸೆಯ ದಿನ ಕನಸಿನಲ್ಲಿ ದೇವರುಗಳು ಪ್ರತ್ಯಕ್ಷರಾಗುತ್ತಿದ್ದರು. ಸ್ವತಃ ಕಲಾವಿದರೂ ಕಲೆಯ ಬಗೆಗೆ ಆಸಕ್ತಿ ಇದ್ದ ಕಾರಣ, ಗಾಯಕವಾಡರು ತಾವೇ ಸೆಲ್ಪ್ ಪೋಟ್ರೇಟ್ ಜೊತೆಗೆ ಕನಸಿಗೆ ಬಂದಿದ್ದ ದೇವತೆಗಳ ಚಿತ್ರವನ್ನು ಬರೆಯುತ್ತಿದ್ದರು. ಸ್ವತಃ ಕಲಾವಿದರೂ ಆಗಿದ್ದ ಕಾರಣ ಕನಸು ಮರೆಯುವ ಮುನ್ನ ಕನಸನ್ನು ಕಲಾಕೃತಿಯಲ್ಲಿ ಮರು ರೂಪ ನೀಡುತ್ತಿದ್ದರು. ಹೀಗೆ ದೈವಗಳು ಕನಸಿಗೆ ಬಂದ ಕಲ್ಪನೆಯನ್ನು ನಾಲ್ಕು ಅಡಿ ಎತ್ತರ ನಾಲ್ಕಡಿ ಅಗಲದ ದೊಡ್ಡ ದೊಡ್ಡ ಕಲಾಕೃತಿಗಳನ್ನು ರಚಿಸಿಕೊಳ್ಳುತ್ತಿದ್ದರು. ಹೀಗೆ ರಚಿಸಿಕೊಂಡ ಆರು ಕಲಾಕೃತಿಗಳನ್ನು ಈಗ ಅರ್ಜುನ ಬಸಪ್ಪ ಅವರ ಮನೆಯಲ್ಲಿ ಕಾಣಬಹುದು.

(ಚಿತ್ರ-1)

ಶಿವನ ಲಿಂಗವು ಪಾಳಾಗಿ ಅದರಿಂದ ಶಿವ ಪಾರ್ವತಿಯರು ಅರ್ಧನಾರೀಶ್ವರ ವೇಷದಲ್ಲಿ ತನ್ನ ಮನೆಗೆ ಬಂದಿದ್ದರಂತೆ ಬಂದು ಆಶೀರ್ವದಿಸಿ ಶುಭ ಕೋರಿದರಂತೆ. ಹಾಗಾಗಿ ಅರ್ಧನಾರೀಶ್ವರ ತನ್ನ ಮನೆಗೆ ಬಂದ ನೆನಪನ್ನು ಉಳಿಸಲು ಅವರ ಕನಸಿನ ಚಿತ್ರವನ್ನೇ ಬರೆದಿದ್ದಾರೆ. ಇದರಲ್ಲಿ ಅರ್ಜುನ್ ಅವರು ಮಲಗಿಕೊಂಡು ಅರ್ಧನಾರೀಶ್ವರ ಸ್ವರೂಪವನ್ನು ನೋಡುತ್ತಿದ್ದಾರೆ.

(ಚಿತ್ರ-2)

ಈ ಚಿತ್ರವು ವಿಶಿಷ್ಠವಾಗಿದೆ. ಒಮ್ಮೆ ಕನಸಿಗೆ ಇಟಿಗಿ ಭೀಮಾಂಭಿಕೆ ಬಂದು ಸೆರಗೊಡ್ಡಿ ಭಿಕ್ಷೆ ಕೇಳಿದಳಂತೆ. ಆಗ ಮನೆಯಲ್ಲಿದ್ದ ಕಾಳುಕಡಿಯನ್ನೆಲ್ಲಾ ಹಾಕಿ ಭೀಮಾಂಬಿಕೆಯ ಉಡಿ ತುಂಬಿದರಂತೆ. ಆಗ ನನ್ನ ಉಡಿಗೆ ನೀನೇ ಬೇಕು ಎಂದಳಂತೆ. ಆಗ ಎಚ್ಚರವಾಯ್ತಂತೆ.

(ಚಿತ್ರ:3)

ಮತ್ತೊಮ್ಮೆ ತುಳುಜಾ ಭವಾನಿ ಹುಚ್ಚಿಯಂತಾಗಿ ಭಿಕ್ಷೆ ಬೇಡುತ್ತಾ ಕನಸಿಗೆ ಬಂದಿದ್ದಳಂತೆ. ಬಲಗಡೆಯೊಂದು, ಎಡದಲ್ಲೊಂದು ಮಕ್ಕಳನ್ನು ಕವುಚಿಕೊಂಡು, ಕೂದಲು ಕೆದರಿಕೊಂಡು, ಹಸಿವಿನಿಂದ ಬಳಲಿ, ಅಂಗಲಾಚುತ್ತಾ ಅನ್ನಕ್ಕಾಗಿ ಭಿಕ್ಷೆ ಬೇಡುತ್ತಾ ಬಂದಳಂತೆ. ಅಂಭಾ ಭವಾನಿಯ ಈ ವೇಷವನ್ನು ನೋಡಿ ರಾತ್ರಿಪೂರಾ ಎಚ್ಚರವಾಗಿ ಅರ್ಜುನ ಅವರು ಗೋಳಾಡಿದ್ದರಂತೆ. ಹಾಗಾಗಿ ಕನಸಿಗೆ ಬಂದ ಅಂಭಾ ಭವಾನಿಯ ಚಿತ್ರವನ್ನೇ ಚಿತ್ರಿಸಿ ಕಲಾಕೃತಿ ಮಾಡಿ ಮನೆಯಲ್ಲಿ ಇಟ್ಟರಂತೆ.

(ಚಿತ್ರ-4)

ನಾಗದೇವತೆಯೂ ಕನಸಿನಲ್ಲಿ ಬಂದು ಪ್ರತ್ಯಕ್ಷಳಾದಳಂತೆ. ಸ್ವತಃ ನಾಗನ ದೊಡ್ಡದಾದ ಎಡೆಯಲ್ಲಿ ಸುರಸುಂದರಿಯಾದ ನಾಗದೇವತೆ ಪ್ರತ್ಯಕ್ಷಳಾಗಿ ಮಲಗಿದ್ದ ಅರ್ಜುನ ಅವರನ್ನು ಎಚ್ಚರಿಸಿ ಮಾತನಾಡಿಸಿದಳಂತೆ. ಇನ್ನು ಮುಂದೆ ನಾನು ನಿನ್ನ ಸುತ್ತಮುತ್ತಲೇ ಸುಳಿಯುತ್ತಿರುತ್ತೇನೆ ಧೈರ್ಯದಿಂದಿರು ಎಂದು ಹೇಳಿ ಮಾಯವಾದಳಂತೆ.

(ಚಿತ್ರ:5)

ಮೊದಲಿಗೆ ಅರ್ಧನಾರೀಶ್ವರರಾಗಿ ಬಂದವರು ಇದೀಗ ಶಿವ ಮತ್ತು ಪಾರ್ವತಿ ಬೇರೆ ಬೇರೆಯಾಗಿ ಬಂದರಂತೆ. ಈ ಬಾರಿ ಸ್ವತಃ ಪಾರ್ವತಿಯೇ ಅರ್ಜುನ್ ಅವರು ಹೊದ್ದ ರಗ್ಗನ್ನು ಎತ್ತಿ, ಎಬ್ಬಿಸಿ ಅಭಯ ನೀಡಲು ಮುಂದಾದಾಗ ಶಿವನು ಪಾರ್ವತಿಯ ಕೈ ಹಿಡಿದು ಅರ್ಜುನ್ ಅವರ ನಿದ್ದೆಯನ್ನು ಭಂಗ ಮಾಡಬೇಡ ಎಂದು ಬೇಡಿಕೊಂಡನಂತೆ. ಆದರೂ ಪಾರ್ವತಿ ಹೊದ್ದ ರಗ್ಗನ್ನು ಜಗ್ಗಿ ಅರ್ಜುನ್ ಅವರನ್ನು ಎಬ್ಬಿಸಿ ಶುಭ ಹಾರೈಸಿದಳಂತೆ.

(ಚಿತ್ರ:6)

ಕಡೆಯದಾಗಿ ಸ್ವತಃ ಆದಿಶಕ್ತಿಯೇ ಪ್ರತ್ಯಕ್ಷಳಾದಳಂತೆ. ಆಗ ಅರ್ಜುನ್ ಮಲಗಿದ್ದವರು ದಿಡೀರ್ ಎದ್ದು ಕೈಮುಗಿದರಂತೆ. ಆಗ ಆದಿ ಶಕ್ತಿ ಬಂದು ನನಗೆ ದೈವೀಶಕ್ತಿಯನ್ನು ಕೊಟ್ಟಿದ್ದಾಳೆಂದು ಹೇಳುತ್ತಿದ್ದರಂತೆ. ಕೊನೆ ಕೊನೆಯ ಅವಧಿಯಲ್ಲಿ ತಾನೇ ದೇವರೆಂದೂ, ನಾನೇ ಒಂದು ಗುಡಿ ಕಟ್ಟಬೇಕೆಂದು ಗುಡಿ ಕಟ್ಟಲು ಮುಂದಾದರು. ನಂತರದಲ್ಲಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಆರೋಗ್ಯ ಕ್ಷೀಣಿಸಿ ತೀರಿದರು ಎಂದು ಅರ್ಜುನ್ ಗಾಯಕವಾಡ ಅವರ ಮಗ ವಿಜಯ ಗಾಯಕವಾಡ ಅವರು ಹೇಳುತ್ತಾರೆ.

ವಿಜಯ್ ತನ್ನ ತಂದೆಯ ಕುರಿತು ಅಭಿಮಾನದಿಂದ ಮಾತನಾಡುತ್ತಾರೆ. “ಅಪ್ಪ ಹುಬ್ಬಳ್ಳಿಯಲ್ಲಿ ಒಂದು ಸ್ವಂತ ಅಂಬಾ ಭವಾನಿ ಗುಡಿ ಕಟ್ಟಿಸಿದ್ದರು. ಕೊನೆಗಾಲದಲ್ಲಿ ಮತ್ತೊಂದು ಗುಡಿ ಕಟ್ಟುವ ಯೋಚನೆ ಇತ್ತು. ಆದರೆ ಅನಾರೋಗ್ಯದಿಂದ ತೀರಿದರು. ಅಪ್ಪ ಕನಸಿಗೆ ಬಂದ ದೇವರುಗಳನ್ನು ಸ್ವತಃ ಕೈಯಿಂದಲೇ ಚಿತ್ರ ಬಿಡಿಸಿ ಇಟ್ಟಿದ್ದಾರೆ. ಆ ಎಲ್ಲಾ ಕಲಾಕೃತಿಗಳನ್ನು ಅಪ್ಪನ ನೆನಪಿಗಾಗಿ ಕಾಯ್ದಿಟ್ಟಿದ್ದೇವೆ. ದಿನಾಲು ಪೂಜೆ ಮಾಡುತ್ತೇವೆ” ಎಂದು ತಂದೆಯ ಬಗೆಗೆ ಅಭಿಮಾನದ ಮಾತುಗಳನ್ನು ಆಡುತ್ತಾರೆ.

(ಚಿತ್ರಗಳು: ಲೇಖಕರವು)