ಆಗಾಗ ಊರಿನ ಬಂಧುಗಳು ತಂದು ಕೊಡುವ ಕುರ್ಲಿ ಸರಿಯಾಗಿ ಸ್ವಚ್ಛಗೊಳಿಸಿ ಹದವಾದ ಮಸಾಲೆಯೊಂದಿಗೆ ಬೇಯಿಸುವ ಕೆಲಸವು ರಾತ್ರಿಯಾದೊಡನೆ ಶುರುವಾಗುತ್ತದೆ. ಜೋರು ಮಳೆ ಬೀಳುವಾಗ, ಚಳಿ ತನ್ನ ಚಹರೆಯ ತೋರಿಸುತ್ತಿರುವಾಗ ಕಾಜುವಾಡಾದ ಯಾವುದೋ ಓಣಿಯ ಮನೆಯ ಬೆಂಕಿ ಒಲೆಯಲ್ಲಿ ತನ್ನ ತಾ ಹಸಿಯಾಗಿಯೆ ಕೆಂಡದಲ್ಲಿ ಸುಟ್ಟುಕೊಳ್ಳುವ ಏಡಿ ತನ್ನ ಅಮೋಘ ಪರಿಮಳವನ್ನು ಸುತ್ತಲಿನ ಲೋಕಕ್ಕೂ ಹರಡುತ್ತದೆ. ಈ ಶರ್ವಾ ಅವರ ಮೂಗಿಗೆ ಅಂತಹ ಸುವಾಸನೆ ಬಹಳ ಬೇಗ ತಾಗುತ್ತಿದ್ದದ್ದು ಉಳಿದ ಮಾಸ್ತರರಿಗೂ ಗೊತ್ತಿದೆ.
ಅಕ್ಷತಾ ಕೃಷ್ಣಮೂರ್ತಿ ಬರೆಯುವ ‘ಕಾಳಿಯಿಂದ ಕಡಲಿನವರೆಗೆ’ ಸರಣಿಯಲ್ಲಿ ಅಣಶಿಯಲ್ಲಿ ರಾತ್ರಿ ಜರಗುವ ಒಂದಷ್ಟು ಸಂಗತಿಗಳ ಕುರಿತು ಬರೆದಿದ್ದಾರೆ

 

ಕಾಜುವಾಡಾದಲ್ಲಿ ಮುಸ್ಸಂಜೆಯಾಗುತ್ತಿದ್ದಂತೆ ಒಂದು ರೀತಿಯ ಮಹಾ ಮೌನ ಎದುರಾಗುತ್ತದೆ. ಮಳೆಗಾಲದ ರಾತ್ರಿಗಳಲ್ಲಿ ಕರೆಂಟು ಇರುವುದೇ ಕಮ್ಮಿ. ಕರೆಂಟು ಇದ್ದಾಗ ಚಾರ್ಜಿಂಗ್ ಬಲ್ಬ್‌ಗಳು ಫುಲ್ ಚಾರ್ಜು ಆದರೂ ಕೂಡ ಮುಂದಿನ ಎರಡು ಗಂಟೆ ಉರಿದು ಮತ್ತದೆ ಕತ್ತಲೆ ಬಳಿದು ಕುಳಿತು ಬಿಡುತ್ತವೆ. ದೀಪ ಹಚ್ಚುವ ಹೊತ್ತಲ್ಲಿ ಜೀರುಂಡೆಗಳ ನಾನಾ ಸದ್ದು ಕೇಳತೊಡಗುತ್ತದೆ. ಆಗ ಉಳಿದ ಹುಲುಮಾನವರ ಸದ್ದುಗಳು ತಣ್ಣಗಾಗುತ್ತದೆ. ಐದರ ನಂತರ ಊರಿಂದ ಫೋನ್ ಬಂದರೆ ಜೀರುಂಡೆಗಳ ಸದ್ದು ಊರಿಗೂ ತಲುಪುತ್ತದೆ. ಆಗ ಫೋನಿನ‌ ಅತ್ತ ಕಡೆ ಮಾತಾಡುವವರಿಗೆ ಕಾಡು ಚೂರೆ ಚೂರು ಅರ್ಥವಾಗುತ್ತದೆ. ರತ್ನಾಕರ ಕಾಜುಗಾರ ಮನೆಯ ದಾಟಿ ಚೂರು ಮುಂದೆ ಹೋದರೆ ಸಿಗುವ ಓಣಿಯ ಕೊನೆಯಂಚಿನ ಮನೆಯಲ್ಲಿ ಮುಸ್ಸಂಜೆ ಹೊತ್ತಿಗೆ ಸರಿಯಾಗಿ ರೇಡಿಯೊ ಸದ್ದು ಮಾಡುತ್ತದೆ. ಮರಾಠಿಯ ಯಾವುದೋ ಅಭಂಗ್ ದಿನವು ಕೇಳಿ ಬರುತ್ತಿರುತ್ತದೆ. ಸುತ್ತ ಮೌನ ದಾಟುತ್ತಿರುವಾಗ ಐದಾರು ಮನೆಯವರೆಗೂ ಕೇಳುವ ಭಜನೆಗೆ ಕಿವಿಗೊಟ್ಟ ಮನಸುಗಳು ತಲೆ ಕುಣಿಸುತ್ತಾ ಅಂಗಳ ದಾಟುತ್ತವೆ. ಯಾವುದೋ ಅಪೂರ್ವವಾದ ರಾಗಸಂಯೋಜನೆಯಲ್ಲಿ ಹಾಡು ಗುನುಗುತ್ತದೆ. ಸುರೇಶ ಕಾಜುಗಾರ ಮಾತ್ರ ಯಾವುದರ ಪರಿವೆಯಿಲ್ಲದೆ, ಹಂಡಿಯಲ್ಲಿ ಕಾದ ಬಿಸಿನೀರಿಗೆ ಮೈಯೊಡ್ಡುವ ಸದ್ದು ಕೂಡ ಅದರೊಟ್ಟಿಗೆ ಹರಿದುಬರುತ್ತದೆ. ಇದೇ ಸಮಯಕ್ಕೆ ಸರಿಯಾಗಿ ಶರ್ವಾ ತಾಲೂಕುದಾರ ಮನೆಯಲ್ಲಿ ಒಂದೇ ಸಮನೆ ಕುಕ್ಕರಿನ ಸೀಟಿ ಹೊಡೆದು ಕೊಳ್ಳಲಾರಂಭಿಸುತ್ತವೆ. ಐದಾರು ಶಿಕ್ಷಕರಿಗೆ ಸಾಕಾಗುವಷ್ಟು ಎರಡೆರಡು ಬಾರಿ ಕುಕ್ಕರನ್ನು ಇಟ್ಟು ಅನ್ನ ಬೇಯಿಸಬೇಕಾಗಿದೆ.

ಆಗಾಗ ಊರಿನ ಬಂಧುಗಳು ತಂದು ಕೊಡುವ ಕುರ್ಲಿ ಸರಿಯಾಗಿ ಸ್ವಚ್ಛಗೊಳಿಸಿ ಹದವಾದ ಮಸಾಲೆಯೊಂದಿಗೆ ಬೇಯಿಸುವ ಕೆಲಸವು ರಾತ್ರಿಯಾದೊಡನೆ ಶುರುವಾಗುತ್ತದೆ. ಜೋರು ಮಳೆ ಬೀಳುವಾಗ, ಚಳಿ ತನ್ನ ಚಹರೆಯ ತೋರಿಸುತ್ತಿರುವಾಗ ಕಾಜುವಾಡಾದ ಯಾವುದೋ ಓಣಿಯ ಮನೆಯ ಬೆಂಕಿ ಒಲೆಯಲ್ಲಿ ತನ್ನ ತಾ ಹಸಿಯಾಗಿಯೆ ಕೆಂಡದಲ್ಲಿ ಸುಟ್ಟುಕೊಳ್ಳುವ ಏಡಿ ತನ್ನ ಅಮೋಘ ಪರಿಮಳವನ್ನು ಸುತ್ತಲಿನ ಲೋಕಕ್ಕೂ ಹರಡುತ್ತದೆ. ಈ ಶರ್ವಾ ಅವರ ಮೂಗಿಗೆ ಅಂತಹ ಸುವಾಸನೆ ಬಹಳ ಬೇಗ ತಾಗುತ್ತಿದ್ದದ್ದು ಉಳಿದ ಮಾಸ್ತರರಿಗೂ ಗೊತ್ತಿದೆ. ಕರಾವಳಿಯ ಮೀನನ್ನು ನೆನಪಿಸಿಕೊಂಡು ಕಾಡಿನ ಊರಲ್ಲಿ ರಾತ್ರಿ ಕಳಿಯುವವರ ಮನೆಬಾಗಿಲಿಗೆ ಏಡಿ ಎಷ್ಟೇ ಹೊತ್ತಿಗೆ ಮನೆಗೆ ಬಂದರೂ ಅದಕ್ಕೆ ಭವ್ಯ ಸ್ವಾಗತ ಸಿಕ್ಕು ದೊಡ್ಡ ಬಾಡೂಟ ಏರ್ಪಡುತ್ತದೆ. “ಆಸಿಗೆ ಉಪಯೋಗ ಆಗಲಿ”ಎಂದು ಮುರುಳಿ ಸರು ಸಾವಂತನ ಮೂಲಕ ಹತ್ತಾರು ಏಡಿ ಪಾರ್ಸಲ್ ಕಳಿಸಿದ ಸಂಜೆಯನ್ನು ಯಾರೂ ಮರೆಯದೆ ಕಾಪಿಟ್ಟಿದ್ದಾರೆ.

ಶರ್ವಾ ಅವರ ಮನೆಗೆ ಹೋಗಬೇಕಾದ ಏಡಿ ದಾರಿ ತಪ್ಪಿ ದಯಾನಂದ ಸರ್ ಮನೆಗೆ ಹೋಗಿ, ಬಿಸಿತಾಗಿ, ಸಾರು ತಯಾರಾಗಿ, ಕೊನೆ ಗಳಿಗೆಯಲ್ಲಿ ಪುನಃ ಪಾರ್ಸಲ್ ಆಗಿ ಶರ್ವಾ ಮನೆ ತಲುಪುವ ಸೋಜಿಗವು ನಡೆದುಹೋಗುತ್ತದೆ. ಒಟ್ಟಾರೆ ಏಡಿ ಸಾರು ಊರಿನ ಶಿಕ್ಷಕರಿಗೆಲ್ಲ ತೀರ್ಥರೂಪಿಯಾಗಿ ಪ್ರಾಪ್ತಿಯಾಗುವುದು ಕೂಡ ನಂಬಬಹುದಾದ ಸತ್ಯವಾಗಿದೆ.

ರತ್ನಾಕರ ಕಾಜುಗಾರ ಮನೆಯ ದಾಟಿ ಚೂರು ಮುಂದೆ ಹೋದರೆ ಸಿಗುವ ಓಣಿಯ ಕೊನೆಯಂಚಿನ ಮನೆಯಲ್ಲಿ ಮುಸ್ಸಂಜೆ ಹೊತ್ತಿಗೆ ಸರಿಯಾಗಿ ರೇಡಿಯೊ ಸದ್ದು ಮಾಡುತ್ತದೆ. ಮರಾಠಿಯ ಯಾವುದೋ ಅಭಂಗ್ ದಿನವು ಕೇಳಿ ಬರುತ್ತಿರುತ್ತದೆ. ಸುತ್ತ ಮೌನ ದಾಟುತ್ತಿರುವಾಗ ಐದಾರು ಮನೆಯವರೆಗೂ ಕೇಳುವ ಭಜನೆಗೆ ಕಿವಿಗೊಟ್ಟ ಮನಸುಗಳು ತಲೆ ಕುಣಿಸುತ್ತಾ ಅಂಗಳ ದಾಟುತ್ತವೆ.

ಏಡಿ ಹಿಡಿಯುವುದರಲ್ಲಿ ಶರ್ವಾ ಅವರು ಊರಿನ ಮಕ್ಕಳನ್ನು ಮೀರಿಸುತ್ತಾರೆ. ಎಲ್ಲೋ ಒಮ್ಮೆ ಅಪರೂಪಕ್ಕೆ ಹಳ್ಳದಂಚಿಗೆ ರವಿವಾರದ ದಿನ ಕಳೆಯಲು ಶರ್ವಾ ತಾಲೂಕದಾರ ಏಡಿ ಹಿಡಿಯಲು ಹೊರಟರೆ ಬರೊಬ್ಬರಿ ಹತ್ತಾರು ಏಡಿಗಳನ್ನು ಹಿಡಿದು ಹಾಕುತ್ತಾರೆ. ಏಡಿಗಳನ್ನು ಕಲ್ಲಿನ ಒಟ್ಟೆಯೊಳಗಿನಿಂದ ಹಿಡಿಯುವುದು ಒಂದು ರೀತಿಯ ಕಲೆ. ಕಲ್ಲಿನ ಒಟ್ಟೆಯೊಳಗೆ ಕೈ ಹಾಕಲು ಧೈರ್ಯ ಇರಬೇಕು. ಏಡಿಯ ಕೊಂಬುಗಳಿಂದ ರಕ್ಷಣೆ ಪಡೆಯುವ ಚಾಲೂತನವೂ ಚೂರು ತಿಳಿದಿರಬೇಕು. ಸ್ವಲ್ಪ ಏಮಾರಿದರೂ ಏಡಿ ಬೆರಳನ್ನೆ ತುಂಡು ಮಾಡುವಷ್ಟು ಶಕ್ತಿ ಹೊಂದಿದೆ ಎಂಬ ಸತ್ಯದ ಅರಿವು ಇರಲೇಬೇಕು. ಇರುಳಲ್ಲಿ ಏಡಿಯ ಬೇಟೆಗೆ ಹೋಗುವುದು ದೊಡ್ಡ ಸಾಹಸವೇ ಹೌದು. ಕತ್ತಲಿನಲ್ಲಿ ಕಾನನದ ಕಲ್ಲೊಟ್ಟೆಗಳನ್ನು ಕಾಣುವ ಕಣ್ಣಿರಬೇಕು. ಹರಿವ ಝರಿಯಲಿ ಮೈ ತೋಯಿಸುವ ರೂಢಿಯಿರಬೇಕು. ಬೀಸುವ ಮಂದಗಾಳಿಯಲಿ ಮೈ ಅರಳಿಸುವ ಮನಸ್ಸಿರಬೇಕು. ಭಯವೆಂಬುದು ಕಣದಷ್ಟು ಇರದ, ಕಾಡು ನಂಬುವ ಇರುಳು ಸಿಕ್ಕರೆ ಏಡಿಯೂ ಸಿಕ್ಕಂತೆ..

ಇಂತಹದ್ದೆ ಒಂದು ಇರುಳಲ್ಲಿ ಶಾಲೆಯ ಅಡುಗೆಯವಳು ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದು ರಾತ್ರಿ ಮನೆಗೆ ಬಂದು ತಲುಪಿದ್ದಾಳೆ. ಇರುಳಿನ ಹತ್ತು ಗಂಟೆ ಎಂದರೆ ಅಣಶಿ ಬದಿಗೆ ಮಧ್ಯರಾತ್ರಿ. ಆದರೆ ಆ ದಿನ ಅವಳ ಆಗಮನಕೆ ಇಡೀ ಕಾಜುವಾಡಾ ಎಚ್ಚರವಾಗಿ ಬಿಡುತ್ತದೆ. ಹಾಗೆ ನೋಡಿದರೆ ದಿನವು ಎಂಟು ಗಂಟೆ ಸುಮಾರಿಗೆ ಮಲಗಿಬಿಡುವ ಅಣಶಿ ಮತ್ತೆ ಏಳುವುದು ಬೆಳಿಗ್ಗೆ ಐದರ ಹೊತ್ತಿಗೆ. ಈ ರಾತ್ರಿ ಮಾತ್ರ ಎಲ್ಲ ಬದಲು. ಚಿಕಿತ್ಸೆ ಫಲಕಾರಿಯಾಗಿ ಬರುವ ರೋಗಿಯನ್ನು ಕಾಜುವಾಡ, ಕಾಡಿನ ಇರುಳ ಬದಿಗೆ ಸರಿಸಿ ದೀಪ ಬೆಳಗಿಸುತ್ತದೆ‌. ಊರಲ್ಲಿ ದೊಡ್ಡ ಕಾಯಿಲೆಗೆ ಚಿಕಿತ್ಸೆ ಪಡೆಯಲು ಯಾರಾದರೂ ಪರವೂರಿಗೆ ಹೋದರೆ ರೋಗಿಯ ಬಗ್ಗೆ ದೇವರಲ್ಲಿ ಸಾಂಗಣೆ ಮಾಡಿಕೊಳ್ಳಲು; ಎಲ್ಲರ ದುಡಿಮೆಯ ದುಡ್ಡು ಸೇರಿ ಒಂದಿಷ್ಟು ಮೊತ್ತ ರೋಗಿಯ ಉಡಿಗೆ ತುಂಬಿ ಹಾರೈಸಿ ಕಳಿಸುವ ರೀತಿ ಮನದಲ್ಲಿ ಪ್ರೀತಿ ತುಂಬುತ್ತದೆ. ಕಾಜುಗಾರ ಮನೆಗೆ ತಾಗಿಯೆ ಇದ್ದ ಲಕ್ಷ್ಮೀ ಆಪರೇಷನ್ ಮುಗಿಸಿಕೊಂಡು ಇರುಳಲ್ಲಿಯೆ ಮನೆಗೆ ಹೊಕ್ಕಿದ್ದಾಳೆ. ಅವಳಿಗಾಗಿ ಸಣ್ಣ ಒಂದು ಕೋಣೆ ಸಿದ್ಧಗೊಂಡಿದೆ. ಅಕ್ಕಪಕ್ಕದ ಮನೆಯವರು ಸೇರಿ ಆಸ್ಪತ್ರೆಯಲ್ಲಿ ಉಳಿದು ಬಂದವರ ದೇಖರೇಕಿಯಲ್ಲಿ ವ್ಯಸ್ತರಾಗಿದ್ದಾರೆ. ಆಚೆಇಚೆ ಮನೆಯ ಸಾಮಾನು ಸೇರಿಸಿ ಅಡುಗೆ ತಯಾರಾಗಿದೆ. ಹಂಡೆಯಲ್ಲಿ ಬೆಳಿಗ್ಗೆಯಿಂದ ಬಿಸಿನೀರು ಕಾದು ಕಾಯುತ್ತಿದೆ. ಈ ದಿನ ಬೆಳಕು ಎಲ್ಲರ ಮನೆಯಲ್ಲಿ ಹೊತ್ತಿಕೊಂಡು ರೋಗಿಯನ್ನು ಒಮ್ಮೆ ನೋಡಿಯೇ ಬಂದು ಮಲಗಬೇಕೆಂಬ ಮಾತುಗಳು ಕೇಳಿಬರುತ್ತಿವೆ. ಜನ ಬುಡ್ಡಿ ದೀಪ ಹಿಡಿದು ಲಕ್ಷ್ಮೀ ಮನೆಯ ಕಡೆ ಓಡಾಡುತ್ತಿದ್ದಂತೆ ಕಾಜುಗಾರ ಅವರ ಕಾಡಂಚಿನ ಮನೆಯಲ್ಲಿಯೂ ದೀಪ ಹೊತ್ತಿಕೊಳ್ಳುತ್ತದೆ. ಒಬ್ಬರ ಮನೆಯಿಂದ ಇನ್ನೊಬ್ಬರು…. ಸೇರಿ ಇಡೀ ಊರೆ ರೋಗಿಯನ್ನು ಒಮ್ಮೆ ಮಾತಾಡಿಸಿ, ನಾಳೆ ಬರುವ ಮಾತಾಡಿ ನಡೆದು ಬಿಡುತ್ತಾರೆ. ಇಂತಹ ಹೊತ್ತಲ್ಲಿ ಅಪರೂಪಕ್ಕೊಮ್ಮೆ ಚಿರತೆ ಹಾಗೂ ಇತರೆ ಪ್ರಾಣಿಗಳಿಗೆ ಇರುಳ ವಾಕಿಂಗ್ ನ ಸಮಯದಲ್ಲಿ ಸ್ವಲ್ಪ ಇರುಸು ಮುರುಸಾಗುತ್ತದೆ.

ಬಿಡುವಿಲ್ಲದೆ ಸುರಿವ ಮಳೆಯ ಇರುಳಲ್ಲಿ ಬೀಸುವ ಗಾಳಿಗೆ ಹಚ್ಚಿದ ದೀಪ ಜೋಕಾಲಿ ತೂಗಿ, ಎಣ್ಣೆ ಬೇಗ ಆರಿಬಿಡುತ್ತದೆ. ದೀಪದ ಬಾಯಿಗೆ ಎಣ್ಣೆ ಸುರಿದಷ್ಟು ಕತ್ತಲು ದಾಟುವ ಧೈರ್ಯ ಬರುತ್ತದೆ. ಇರುಳ ಎಲ್ಲ ಸದ್ದುಗಳ ದಾಟಿ ನಿದ್ದೆ ಕಣ್ಣ ರೆಪ್ಪೆ ಮೇಲೆ ಕುಳಿತಾಗ ಇದ್ದಕ್ಕಿದ್ದಲ್ಲೆ ನಡುರಾತ್ರಿ ಜನ ಮಾತಾಡಿಕೊಳ್ಳುವ ಗುಸು ಗುಸು ಸದ್ದು ಕೇಳತೊಡಗುತ್ತದೆ. ಪಕ್ಕದ ಮನೆಯ ಕೋಣೆಯೊಳಗೆ ಓಡಾಡಿದ ಸದ್ದುಗಳು ಆವರಿಸುತ್ತದೆ. ಆಕಾಶ ಕಾಜುಗಾರನ ಮನೆಯ ಮಾತುಗಳು ಸರಿಯಾಗಿ ಅರ್ಥವಾಗದೆ ಪರದಾಡುತ್ತವೆ. ಕೊನೆಗೆ ಅವರ ಓಡಾಟ ಭಯ ಹುಟ್ಟಿಸಿ ಬಾಗಿಲು ತೆರೆದು ಅವರ ಮನೆ ಹತ್ತಿರ ಹೋದರೆ ಅಲ್ಲಿ ಇಲಿ ಬೇಟೆಯ ರಾಮಾಯಣ ಶುರುವಾಗುತ್ತದೆ. ರಾತ್ರಿ ಆಕಾಶದ ಕೈ ಬೆರಳು ತಿನ್ನಲು ಬಂದ ಇಲಿಯ ಬೇಟೆ ಶುರುವಾಗುತ್ತದೆ. ಇಲಿಗಳೊಂದಿಗೆ ಚಿಮಣಿ ಬುಡ್ಡಿಗಳು ಅಲ್ಲಿ ಇಲ್ಲಿ ಓಡಾಡುತ್ತವೆ… ಕಾರ್ತಿಕೋತ್ಸವದ ದೀಪ ಪುಷ್ಕರಣಿಯಲ್ಲಿ ತೇಲಿದಂತೆ. ಮಕ್ಕಳಿರುವ ಮನೆಯಲ್ಲಿ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಇಲಿ ದಾಟುತ್ತಿದ್ದಂತೆ ಕೂಗು ಜೋರಾಗುತ್ತದೆ. ಅಕ್ಕಿ ಚೀಲ, ಮಕ್ಕಳ ಪುಸ್ತಕ, ಶಾಲೆಯ ಸಮವಸ್ತ್ರ, ಅಣಶಿ ಕ್ರಿಕೇಟ್‌ ಕ್ಲಬ್ ಹೆಸರು ಅಚ್ಚು ಹಾಕಿಸಿಕೊಂಡು ಎಂದೊ ಆಡಿದ ನೆನಪುಳಿಸುವ ಸೂರಜನ ಟೀಶರ್ಟು… ಎಲ್ಲದರ ರುಚಿ ನೋಡಿದ ಇಲಿಗೆ ತಕ್ಕ ಪಾಠ ಕಲಿಸಲು ನಿರ್ಣಯವಾಗಿದೆ. ಅಗೋ… ಅಲ್ಲಿ ಆಕಾಶನ ಮನೆಯಲ್ಲಿ ಕಸಬರಿಗೆಯಿಂದ ಏನನ್ನೊ ಹೊಡೆದ ಸದ್ದು ಕೇಳಿಬರುತ್ತದೆ.
ನಿಶ್ಯಬ್ದ ರಾತ್ರಿ ಎಲ್ಲವನ್ನು ಒಳಗೊಳ್ಳುತ್ತ ತುಂಬಿಕೊಳ್ಳುತ್ತದೆ.