‘ನಾನಿಲ್ಲಿರೋಕೆ ಲಾಯಕ್ಕಿಲ್ಲ ಅಂತ ಬೆಂಗಳೂರಿಗೆ ಯಾವಾಗಲೋ ಗೊತ್ತಾಗಿರಬೇಕು. ಅದಕ್ಕೇ ಎಷ್ಟೇ ದಿನ  ಬೇರೆ ಊರಿಗೆ ಹೋದರೂ ಇದು ನನ್ನನ್ನ ತನ್ನತ್ತ ಎಳೆಯೋದಿಲ್ಲ. ಮನುಷ್ಯನ ಸಕಲ ಬೇಡಿಕೆಗಳಿಗೂ ಉತ್ತರದ ಗೋಡೌನಿನಂಥಾಗಿರೋ ಈ “ಎಲ್ಲ” ಇರುವ ಮಹಾನಗರಿಯಲ್ಲಿ ನನಗಂತ ಏನು ಇದೆ? ಅಂತ ಹುಡುಕುತ್ತ ಕುಳಿತಿರೋಳು ನಾನು.ಮಳೆ ಬಂದಾಗಲೂ ಮಣ್ಣ ಘಮದಿಂದ ವಂಚಿತಳನ್ನಾಗಿ ಮಾಡುವ ಈ ಬೆಂಗಳೂರು ನನ್ನನ್ನು ಅದೆಷ್ಟೇ ಬಿಗಿದಪ್ಪಿಕೊಂಡರೂ, ನನಗೆ ಮಲತಾಯಿಯ ಪ್ರೀತಿಯಂತೇ ಅನ್ನಿಸುತ್ತೆ” ರೂಪಶ್ರೀ ಕಲ್ಲಿಗನೂರು ಬರೆಯುವ ನೂತನ ಅಂಕಣ.

 

ಸುಮಾರು ದಿನದಿಂದ ಧ್ಯಾನಿಯಂತೆ ಒಂದು ಮೂಲೆ ಹಿಡಿದು ಕುಂತಿದ್ದ ಬುದ್ಧನ ಕಲಾಕೃತಿಗೆ ಕಟ್ಟು ಹಾಕಿಸಿಕೊಳ್ಳೋ ಸಮಯ ಮೊನ್ನೆಯಷ್ಟೇ ಬಂದಿತ್ತು. ವಿಳಾಸ ಹುಡುಕೋದಂದ್ರೆ ಎಲ್ಲಿಲ್ಲದ ಕಿರಿಕಿರಿ ಮಾಡಿಕೊಳ್ಳುವ ನನಗೆ, ಈಗಿದಕ್ಕೆ ಫ್ರೇಂ ಅಂಗಡಿಯನ್ನ ಎಲ್ಲಿಯಂತ ಹುಡುಕಲಿ ಅನ್ನೋ ಚಿಂತೆ ಶುರುವಾಗಿತ್ತು! ಈ ಬೆಂಗಳೂರಿನ ಟ್ರಾಫಿಕ್ಕೆಂದರೆ ಯಾರಾದರೂ ಪ್ರೀತಿಸುವಂಥದ್ದೇ? ಅದೇ ನನ್ನ ಕಿರಿಕಿರಿಗೂ ಕಾರಣ. ರಸ್ತೆಗಿಳಿದ್ರೆ ಮೈಯೆಲ್ಲ ಕಣ್ಣುಮಾಡಿಕೊಂಡೇ ಮುಂದಡಿಯಿಡಬೇಕು. ಗಾಡಿಗಳು ಅದ್ಯಾವ ದಿಕ್ಕಿನಿಂದ ನುಗ್ಗಿ ಬರುತ್ವೋ, ಒಂಚೂರೂ ಗೊತ್ತಾಗೋದಿಲ್ಲ. ಹೊಸಬರಿಗೇನು, ಇಲ್ಲಿನ ನಿವಾಸಿಗಳಿಗೂ ಇದು ಭಯದ ಸಂಗತಿಯೇ. ಹಾಗಾಗಿ ಫ್ರೇಂ ಅಂಗಡಿ ಎಲ್ಲಿರ್ಬಹುದು ಅಂತ ಕುಳಿತು ಯೋಚಿಸಿದಾಗ, ಕಾಲೇಜು ದಿನಗಳಲ್ಲಿದ್ದಾಗ ವಾರ್ಷಿಕ ಕಾರ್ಯಕ್ರಮಕ್ಕೆಂದು ಪ್ರದರ್ಶನಕ್ಕೆ ಆಯ್ಕೆಯಾದ ಕಲಾಕೃತಿಗಳಿಗೆ ಫ್ರೇಂ ಹಾಕಿಸುತ್ತಿದ್ದ ಅಂಗಡಿಯ ಥಟ್ಟನೆ ನೆನಪಾಗಿಬಿಡ್ತು. ‘ಅಬ್ಬಾ ಹುಡ್ಕೋ ಕೆಲ್ಸಾ ತಪ್ತು, ಅದೇ ಅಂಗಡೀಗೆ ಹೋದ್ರಾಯ್ತು’ ಅಂತ ಅಂದ್ಕೊಳ್ಳೋ ಹೊತ್ತಿಗೆ ‘ಅಯ್ಯೋ ಕಾಲೇಜೆಲ್ಲ ಮುಗಿದೇ ಐದಾರು ವರ್ಷ ಆಗಿರೋವಾಗ, ಆ ಅಂಗಡಿ ಅಲ್ಲೇ ಇರೋಕೆ ಹೇಗೆ ಸಾಧ್ಯ?’ ಈ ಯೋಚನೆ ಬಂದ್ದದ್ದೇ ಅಂಗಡಿ ಸಿಕ್ಕ ನಿರಾಳತೆಗೆ ಧಕ್ಕೆ ಮೂಡಿತ್ತು. ಆದ್ರೂ ಆ ಅಂಗಡಿಯ ವಿಳಾಸ ಗೊತ್ತಿರೋದ್ರಿಂದ, ಒಂದ್ಸಲಾ ನೋಡ್ಕೊಂಡು ಬಂದ್ರಾಯ್ತು, ಸಿಗ್ದೇ ಇದ್ರೆ ಮುಂದೆ ನೋಡೋಣ ಅಂತ ಹೊರಟೆದ್ದೆ.

ನನ್ನ ಪುಣ್ಯ ಅಂಗಡಿ ಅಲ್ಲೇ ಇದ್ದದ್ದನ್ನ ಕಂಡು ಅದೆಷ್ಟು ಸಮಾಧಾನ! ಸರಿ ಪೇಂಟಿಂಗ್ ತೋರ್ಸಿ, ಅದಕ್ಕೊಪ್ಪೋ ಕಟ್ಟು ಹುಡುಕಿ, ರೊಕ್ಕದ ಬಗ್ಗೆ ಕೇಳಿದೆ. ಅಂವಾ ಹೇಳಿದ್ದು ಸ್ವಲ್ಪ ಜಾಸ್ತೀನೇ ಅನ್ನಿಸಿದ್ರಿಂದ, ತಡಮಾಡದೇ ನಾನೂ ಚೌಕಾಶೀ ಮಾಡೋದ್ ಕಲ್ತೇನಪಾ ಮಾರಾಯಾ ಅನ್ನೋ ಧಾಟಿಯಲ್ಲಿ ಭರ್ತಿ 70 ರೂ ಕಡಿಮಿ ಮಾತಾಡಿದ ಮೇಲೆ, ಗಿರಾಕಿ ಕಾಣದೇ ನೊಣ ಹೊಡೆಯುತ್ತಿದ್ದ ಅಂವಾ ಮತ್ತೆ ನಾನು ನನ್ನ ಬೇರೇ ಕಲಾಕೃತಿಗಳಿಗೂ ಅಲ್ಲೇ ಕಟ್ಟು ಹಾಕಿಸಿಕೊಳ್ತೀನಿ ಅನ್ನೋ ಭರವಸರೆ ನೀಡಿದ್ಮೇಲೆ ‘ಸರಿ ಬುಡಿ ಮೇಡಂ’ ಅಂತ ಕಟ್ಟು ಕಟ್ಟುವ ಕೆಲಸ ಶುರುವಿಟ್ಟುಕೊಂಡ. ಅವನ ಕೈಯಲ್ಲಿ ನನ್ನ ಬುದ್ಧ ಕೂಸಿನಂತೆ ಕುಳಿತು ಕಟ್ಟು ಹಾಕಿಸಿಕೊಳ್ತಿದ್ದ.

ಸುಮಾರು ಹೊತ್ತು ತನ್ನಷ್ಟಕ್ಕೆ ಕಟ್ಟು ಹಾಕೋ ಕೆಲಸದಲ್ಲಿ ಮುಳುಗಿದ್ದ ಕಟ್ಟಪ್ಪ (ಅಂದ್ರೆ ಕಟ್ಟು ಹಾಕೋನು ಅಂತಷ್ಟೇ ಅರ್ತೈಸಿಕೊಳ್ಬೇಕು) ಕೇಳಲೋಬೇಡ್ವೋ ಅಂತ ನನ್ನ ಕೆಲಸದ ಬಗ್ಗೆ ಕೇಳ್ತಾ ಸಣ್ಣಗೆ ಮಾತು ಶುರುವಿಟ್ಟುಕೊಂಡಿದ್ದ. ನಮ್ಮ ಮಾತು ಬರೇ ಬೆಂಗಳೂರಿನ ಸುತ್ತ ಗಿರಕಿ ಹೊಡೀತಿತ್ತು. “ಅಲ್ಲಾ ಮೇಡಂ, ಈ ಜನಾ ಎಂಥಾ ಹಳ್ಳೀಲಿಂದ್ಲೇ ಬರ್ಲಿ… ಎಲ್ಡ್ ವರ್ಷಾ ಬೆಂಗ್ಳೂರ್ನಾಗಿದ್ಬಿಟ್ರೆ ಮುಗೀತ್, ಅವರ್ ಊರ್ ಮುಷಡಿನಾ ತಿರ್ಗಿ ನೋಡಲ್ಲ. ಇಲ್ಲೇ ಟೆಂಟ್ ಹಾಕ್ಕಂಬಿಡ್ತಾರೆ.” ಹೀಗಂದವನ ಮಾತಲ್ಲಿ ವಿಷಾದವೇನೂ ಇರ್ಲಿಲ್ಲ. ಅದ್ಕೆ ನಾನು “ಯಾಕ್ಸರ್; ಬೇರೆ ಊರಿಂದಾ ಜನಾ ಬರೋದು ಇಷ್ಟಾ ಇಲ್ವಾ ನಿಮ್ಗೆ?” ಅಂತ ಕಟ್ಟಪ್ಪನ ಕಷ್ಟ ಏನಪ್ಪ ಅಂತ ಕೇಳಿದೆ. “ಅಯ್ಯೋ ನಮ್ಮಪ್ಪಾ ಅಮ್ಮದೀರೇ ಬ್ಯಾರೆ ಊರಿಂದಾ ಇಲ್ಲಿಗ್ ಬಂದು ಬದ್ಕು ಮಾಡ್ಕೊಂಡಿರೋವಾಗ, ನಾ ಯಾಕ್ ಬ್ಯಾರೇ ಜನಕ್ಕೆ ಬರ್ಬ್ಯಾಡ ಅಂತೇಳಲಿ ಮೇಡಂ, ಆದ್ರೆ ಬಂದರ್ವ್ಯಾರೂ ವಾಪಾಸ್ ಓಗೋದೇ ಇಲ್ಲ, ಎಲ್ರಿಗೂ ಬೆಂಗ್ಳೂರೇ ಬೇಕು, ಮೊನ್ನೆ ನಮ್ ನೆಂಟರಿಷ್ಟರ ಮನೇಲಿ ಕಾರ್ಯ ಇತ್ತೂಂತ ಊರ್ಗೆ ಹೋಗಿದ್ದೆ. ಅಲ್ಲಿದ್ದ ಎಲ್ಡ್ ಮೂರ್ ಜನಾ ಅವ್ರ ಪಿಳ್ಳೇನ ತೋರ್ಸಿ ಇವನ್ನೂ ಬೆಂಗ್ಳೂರ್ಕೆ ಕರ್ಕೊಂಡ್ ಓಗು, ಓಗು ಅಂತ ಗಂಟ್ ಬೀಳ್ತಾರೆ” ಅಂದ. “ಅಯ್ಯೋ ನಮ್ಮೂರ್ಗೆ ಹೋದ್ರೂ ಹಂಗೇ ಅಂತಾರೆ ಬಿಡಿ. ಆದ್ರೆ ನಂಗ್ ಹಂಗೇನಿಲ್ಲ, ಬೆಂಗ್ಳೂರ್ ಬಿಟ್ಹೋಗಕೆ ಕಾಯ್ತಿದ್ದೀನಿ… ಇಲ್ಯಾರೆ ಇರ್ತಾರೆ” ಅಂತ ನಾನು ನನ್ನ ಅಭಿಪ್ರಾಯವನ್ನ ಕಟ್ಟಪ್ಪನ ಮುಂದಿಟ್ಟೆ. “ಅಯ್ಯೋ, ನೀವ್ ಹಿಂಗ್ ಅಂತೀರಾ ಅಷ್ಟೇ, ಎಲ್ಡೇ ದಿನಾ, ಈ ಪಟ್ಟಣ ಬಾ ಬಾ ಅಂತ ಕರ್ದಂಗಾಗಿ, ಬೇರೆ ಹಳ್ಳಿ ಎಲ್ಲಾ ಬೇಜಾರಾಗ್ಬಿಡತ್ತೆ, ಎಲ್ಡೇ ದಿನಕ್ಕೆ ವಾಪಾಸ್ ಬಂದ್ಬಿಡ್ತೀರಾ ನೋಡ್ರಿ” ಅಂದ.. “ಅಯ್ಯೋ ಇಲ್ಲಿಲ್ಲ.. ನಂಗೇನ್ ಹಂಗ್ ಅನ್ಸಲ್ಲಾ ಬಿಡಿ” ಅಂದರೂ ಅವ್ನು ನನ್ನ ಮಾತನ್ನ ಕೊನೆಗೂ ಒಪ್ಪಿಕೊಳಲಿಲ್ಲ. “ಓದಿದೋರ್ ಬೆಂಗ್ಳೂರ್ ಬಿಟ್ಟೋಗೋದು ಚಾನ್ಸೇ ಇಲ್ಲಾ ಬುಡಿ” ಅಂತ ಕಟ್ಟು ಬಿಗಿದ ನನ್ನ ಬುದ್ಧನನ್ನು ನನ್ನ ಕೈಗಿಟ್ಟ. ನಾನೇ ಹಾಕಿಸಿದ ಕಟ್ಟಿನೊಳಗೆ ಕಣ್ಮುಚ್ಚಿ ಕುಳಿತ ಬುದ್ಧನ ಕಂಡು, ಈ ಕಾಂಕ್ರೀಟು ಕಾಡಲ್ಲಿ ಹೀಗೆ ನೆಮ್ಮದಿಯಿಂದ ಇರಬೇಕೆಂದರೆ ನಾಲ್ಕು ಗೋಡೆಗಳ ಚೌಕಟ್ಟಿನಲ್ಲಿ ಮಾತ್ರ ಅನ್ನಿಸಿತು.

ನನ್ನ ಪುಣ್ಯ ಅಂಗಡಿ ಅಲ್ಲೇ ಇದ್ದದ್ದನ್ನ ಕಂಡು ಅದೆಷ್ಟು ಸಮಾಧಾನ! ಸರಿ ಪೇಂಟಿಂಗ್ ತೋರ್ಸಿ, ಅದಕ್ಕೊಪ್ಪೋ ಕಟ್ಟು ಹುಡುಕಿ, ರೊಕ್ಕದ ಬಗ್ಗೆ ಕೇಳಿದೆ. ಅಂವಾ ಹೇಳಿದ್ದು ಸ್ವಲ್ಪ ಜಾಸ್ತೀನೇ ಅನ್ನಿಸಿದ್ರಿಂದ, ತಡಮಾಡದೇ ನಾನೂ ಚೌಕಾಶೀ ಮಾಡೋದ್ ಕಲ್ತೇನಪಾ ಮಾರಾಯಾ ಅನ್ನೋ ಧಾಟಿಯಲ್ಲಿ ಭರ್ತಿ 70 ರೂ ಕಡಿಮಿ ಮಾತಾಡಿದ ಮೇಲೆ, ಗಿರಾಕಿ ಕಾಣದೇ ನೊಣ ಹೊಡೆಯುತ್ತಿದ್ದ ಅಂವಾ ಮತ್ತೆ ನಾನು ನನ್ನ ಬೇರೇ ಕಲಾಕೃತಿಗಳಿಗೂ ಅಲ್ಲೇ ಕಟ್ಟು ಹಾಕಿಸಿಕೊಳ್ತೀನಿ ಅನ್ನೋ ಭರವಸರೆ ನೀಡಿದ್ಮೇಲೆ ‘ಸರಿ ಬುಡಿ ಮೇಡಂ’ ಅಂತ ಕಟ್ಟು ಕಟ್ಟುವ ಕೆಲಸ ಶುರುವಿಟ್ಟುಕೊಂಡ. ಅವನ ಕೈಯಲ್ಲಿ ನನ್ನ ಬುದ್ಧ ಕೂಸಿನಂತೆ ಕುಳಿತು ಕಟ್ಟು ಹಾಕಿಸಿಕೊಳ್ತಿದ್ದ.

ಬೆಂಗಳೂರನ್ನೋ ಈ ಸಿಮೆಂಟುಗಾಡಿನ ನೆರಳಿಗೆ ಬಂದು ನಿಲ್ಲೋ ಮುನ್ನ ನಾವು ಸವಣೂರಿನಲ್ಲಿದ್ವಿ. ಅಲ್ಲಿಂದ ಇಲ್ಲಿಗೆ ಗುಳೆ ಹೊರಡೋ ಹೊತ್ತು; ನಾವು ಬೆಂಗ್ಳೂರಿಗೆ ಹೋಗ್ತೀವಿ ಅಂತ ಗೊತ್ತಾದ ಯಾರೋ ಬೆಂಗ್ಳೂರಲ್ಲಿ ಬರೀ ಇಂಗ್ಲೀಷ್ ನಲ್ಲೇ ಮಾತಾಡ್ತಾರೆ ಅಂತ ನಮ್ಮ ಕಿವಿಯೂದಿಬಿಟ್ಟಿದ್ರು. ತೊಗೋ ನಮ್ಮ ಮೂರೂ ಜನಕ್ಕೆ (ಅಕ್ಕ, ನಾನು, ತಮ್ಮ) ಅದೊಂದು ವಿಷಯ ತಲೆನೋವಾಗಿಬಿಡ್ತು. “ಏ ಬೆಂಗ್ಳೂರ್ನ್ಯಾಗ ಬರೇ ಇಂಗ್ಲೀಷ ಮಾತಾಡ್ತಾರಂತ. ನಮಗಿನ್ನೂ ಎಬಿಸಿಡಿ ಸತೇ ಚೊಲೋ ಬರಂಗಿಲ್ಲ, ಏನ್ ಮಾಡೋದು? ಅಮ್ಮಾ ಏನಾರ ತರಾಕಂತ ಅಂಗಡೀಗೆ ಕಳಸಿದ್ರ ಅಲ್ಲಿ ಹೋಗಿ ಏನಂತ ಕೇಳುದೂ?” ಅಂತೆಲ್ಲಾ ಬಹಳ ಗಂಭೀರವಾಗಿ ತಲೆಕೆಡಿಸಿಕೊಂಡೆವಾದ್ರೂ ಪರಿಹಾರದ ಸುಳಿವೂ ಸಿಕ್ಕದ ಕಾರಣ ಬಾಯ್ಮುಚ್ಚಿಕೊಂಡು ಬೆಂಗ್ಳೂರ ಹಾದಿ ಹಿಡಿಯೋದೊಂದೇ ನಮ್ಮ ಪಾಲಿಗಿದ್ದ ಆಯ್ಕೆಯಾಗಿತ್ತು. ಆಗಿನ್ನೂ ನಾನು ಮೂರನೇ ತರಗತಿಯಲ್ಲಿದ್ದರೆ, ಅಕ್ಕ ನಾಲ್ಕನೇಯ ತರಗತಿಯಲ್ಲಿದ್ದಳು. ತಮ್ಮನಂತೂ ಅಂಗನವಾಡಿಗೆ ಹೋಗುವಷ್ಟು ಪುಟ್ಟವನು. ಇಂಥಾ ನಮ್ಮ ಪುಟಾಣಿ ಬೆಟಾಲಿಯನ್ನಿಗೆ ಅದ್ಯಾರು ಬೆಂಗ್ಳೂರಲ್ಲಿ ಎಲ್ಲಾಕಡೆ ಇಂಗ್ಲಿಷಲ್ಲಿ ಮಾತಾಡ್ತಾರೆ ಅಂತ ಹೇಳಿದ್ರೋ? ಸಾವಿರ ಬಾರಿ ಯೋಚಿಸಿದ್ರೂ ನೆನಪಾಗಿಲ್ಲ. ಅದ್ರಲ್ಲೂ ಪಿಳಿಪಿಳಿ ಕಣ್ಣು ಬಿಡ್ತಿದ್ದ ಬೆಂಗಳೂರಿನ ಬೆಳಗಿನಲ್ಲಿ ತೆರೆದುಕೊಂಡಿದ್ದ ‘ಬೇಕರಿ’ಗಳಂತೂ ನನ್ನ ಮೆದುಳಿಗೆ ಕೈ ಹಾಕಿದ್ದವು. ‘ಬೇಕರಿ’ ಅಂದ್ರೆ ನಿಮಗೆ ಏನಾದ್ರೂ ಬೇಕೇನ್ರೀ ಅಂತ ಕೇಳೋದಷ್ಟೆ ನಂಗೆ ಗೊತ್ತಿದ್ದದಾದ್ದರಿಂದ, ಈ ‘ಬೇಕರಿ’ ತಲ್ಯಾಗ ಹುಳಾ ಬಿಟ್ಟಿದ್ದ್ ಖರೇ ರೀ.

ಬೆಂಗಳೂರಿನಲ್ಲಿನ ನಮ್ಮ ಮೊದಲ ಮನೆಯ ಪಕ್ಕದಲ್ಲಿ ಪಿಚ್ಚಮ್ಮ ಅನ್ನೋ ನಡುವಯಸ್ಸಿಯ ಹೆಂಗಸಿನ ಸಂಸಾರವಿತ್ತು. ತೆಲುಗು ಭಾಷಿಕರಾದ ಇವರ ಮಾತು ಕೇಳಿದ ನಮಗೆ “ಯಾಕೋ ಇದ್ ಇಂಗ್ಲೀಷ್ ಇದ್ದಂಗಿಲ್ಲಲ್ಲ” ಅನ್ನಿಸ್ತಿತ್ತು. ಅದೂ ಅಲ್ದೇ ಅವರು ನಮ್ಮನ್ನ ಮಾತನಾಡಿಸೋವಾಗ ಬಳಸುತ್ತಿದ್ದ ಕನ್ನಡ ಕೇಳಿ “ಹೊಗ್ಗೋ ಇವನೌವ, ಇಂಗ್ಲೀಷಿಲ್ಲಾಂದ್ರ ಅಡ್ಡಿಯಿಲ್ಲ. ಆದ್ರ ಕನ್ನಡಾನರ ಚೊಲೋದ್ ಇಲ್ಲಲ್ಲ ಇಲ್ಲಿ” ಅನ್ನಿಸಿತ್ತು. ಆ ಹೆಂಗಸಿನ ಕುಡಿತ, ಗಂಡನ ತಟ್ಟೆಗೆ ಹಿಡಿ ಅನ್ನ ಚೆಲ್ಲಿ, ಅದಕ್ಕೆ ನೀರು ಹಾಕಿ ಊಟಮಾಡಲು ಹೇಳುತ್ತಿದ್ದ ಪರಿ ಎಲ್ಲವೂ ಬೆಂಗಳೂರನ್ನ ಪಕ್ಕಾ ಶಿಕ್ಷಿತರ ನಗರವೆಂದು ತಿಳಿದುಕೊಂಡಿದ್ದ ನಮ್ಮ ಭ್ರಮೆಯನ್ನ ಸಲೀಸಾಗಿ ಗುಡಿಸಿಹಾಕಿತ್ತು.

ಹಿಂದೆ ನಾವಿದ್ದ ಸವಣೂರಲ್ಲಿ ಜನರ ನಡುವೆ ಚಂದದ ಬಾಂಧವ್ಯವಿತ್ತು. ಹಿಂದೂ-ಮುಸ್ಲಿಂ ಅನ್ನೋ ಬೇಧ ಇದ್ದದ್ದನ್ನು ನೋಡಿಯಾಗ್ಲೀ, ಕೇಳಿಯಾಗ್ಲೀ ನೆನಪಿಲ್ಲ ನನಗೆ. ನಮ್ಮನೆಯ ಮಾಲಕಿ ಮುಸ್ಲಿಂ ಸಮುದಾಯದವರು. ನಾವು ಸಸ್ಯಾಹಾರಿಗಳಾದ ಕಾರಣ ಅವರ ಮನೆಯಲ್ಲಿ ಹಬ್ಬ ಮಾಡುವ ಸಂದರ್ಭ ಬಂದ್ರೆ, “ಏ ಅನ್ನಪೂರ್ಣಿ (ಅವರಿಗೆ ನನ್ನ ಅಮ್ಮನ ಹೆಸರನ್ನು ಅನ್ನಪುರ್ಣಾ ಅಂತ ಕರ್ಯಾಕ ಬರ್ತಿದ್ದಿಲ್ಲಾ ಅಂತ ಅಮ್ಮಾ ಹೇಳ್ತಿರ್ತಾರೆ) ನಾಡದ, ನಮ್ಮನ್ಯಾಗ ಹಬ್ಬ ಐತಿ, ನೀ ಮಕ್ಕಳ್ನ ಕಟಗೊಂಡು ಮುದ್ಗಲ್ರ ಮನೀಗ್ ಹೊಂಡು. ಇಲ್ಲೇ ಇದ್ರ ಮತ್ ವ್ಯಾ ವ್ಯಾ ಮಾಡ್ತೀ.. ಯಾಕ್ ಬೇಕ ನಮ್ಮವ್ವ” ಅಂತ ಮನೇಗೆ ಬಂದು ಅಮ್ಮನಿಗೆ ಕಾಳಜಿಯ ಮಾತಾಡುತ್ತಿದ್ರು. ಅಷ್ಟು ಖುಲ್ಲಂಖುಲ್ಲಾ ಬಾಂಧವ್ಯ ಅಲ್ಲಿ. ಅವರು ಮೇಲೆ ಹೇಳಿದ ಮುದಗಲ್ಲರೂ ನಮ್ಮ ಸಂಬಂಧಿಕರಲ್ಲ. ಆದ್ರೂ ಆ ಮನೆಯ ಅನ್ನಪೂರ್ಣ ಆಂಟಿ ಅಮ್ಮನನ್ನು ತನ್ನ ಮಗಳಂತೆ ನೋಡಿಕೊಂಡು, ಅಡುಗೆಯನ್ನು ಕಲಿಸಿಕೊಟ್ಟ ದಿನಗಳು ನಮ್ಮ ನೆನಪಿನಲ್ಲಿವೆ.

ನಾವು ಬೆಂಗ್ಳೂರಿಗೆ ಹೋಗ್ತೀವಿ ಅಂತ ಗೊತ್ತಾದ ಯಾರೋ ಬೆಂಗ್ಳೂರಲ್ಲಿ ಬರೀ ಇಂಗ್ಲೀಷ್ ನಲ್ಲೇ ಮಾತಾಡ್ತಾರೆ ಅಂತ ನಮ್ಮ ಕಿವಿಯೂದಿಬಿಟ್ಟಿದ್ರು. ತೊಗೋ ನಮ್ಮ ಮೂರೂ ಜನಕ್ಕೆ (ಅಕ್ಕ, ನಾನು, ತಮ್ಮ) ಅದೊಂದು ವಿಷಯ ತಲೆನೋವಾಗಿಬಿಡ್ತು. “ಏ ಬೆಂಗ್ಳೂರ್ನ್ಯಾಗ ಬರೇ ಇಂಗ್ಲೀಷ ಮಾತಾಡ್ತಾರಂತ. ನಮಗಿನ್ನೂ ಎಬಿಸಿಡಿ ಸತೇ ಚೊಲೋ ಬರಂಗಿಲ್ಲ, ಏನ್ ಮಾಡೋದು? ಅಮ್ಮಾ ಏನಾರ ತರಾಕಂತ ಅಂಗಡೀಗೆ ಕಳಸಿದ್ರ ಅಲ್ಲಿ ಹೋಗಿ ಏನಂತ ಕೇಳುದೂ?” ಅಂತೆಲ್ಲಾ ಬಹಳ ಗಂಭೀರವಾಗಿ ತಲೆಕೆಡಿಸಿಕೊಂಡೆವಾದ್ರೂ ಪರಿಹಾರದ ಸುಳಿವೂ ಸಿಕ್ಕದ ಕಾರಣ ಬಾಯ್ಮುಚ್ಚಿಕೊಂಡು ಬೆಂಗ್ಳೂರ ಹಾದಿ ಹಿಡಿಯೋದೊಂದೇ ನಮ್ಮ ಪಾಲಿಗಿದ್ದ ಆಯ್ಕೆಯಾಗಿತ್ತು.

ಅಲ್ಲಿ ನಮ್ಮ ಮನೆ ಹಾಗೂ ಮಾಲಕಿಯ ಮನೆಯ ನಡುವೆ ಇನ್ನೊಂದು ಮನೆ ಸೇರಿ ಮೂರು ಮನೆ; ಒಂದಕ್ಕೊಂದು ಹೊಂದಿಕೊಂಡಿದ್ದವು. ಮೂರೂ ಮನೆಗೂ ಸೇರಿ ಹಿಂದೆ ವಿಶಾಲವಾದ ಹಿತ್ತಲಿತ್ತು. ಅಲ್ಲೇ ಅಮ್ಮನ ಪುಟ್ಟ ತೋಟವಿದ್ದದ್ದು. ನನ್ನಿಷ್ಟದ ಹೂಗಳು, ಬಿಳಿ, ನೀಲಿ, ಕಪ್ಪು, ಬೂದು ಬಣ್ಣದ ಚಿಟ್ಟೆಗಳು, ಇವೆಲ್ಲನ್ನೂ ಮೀರಿ ಒಂಚೂರು ತಲೆ ಮೇಲೆತ್ತುತ್ತಿದ್ದಂತೆ ಅಗಾಧವಾಗಿ ತೆರೆದುಕೊಳ್ಳುತ್ತಿದ್ದ ಆಕಾಶ ಸೇರಿ ನನಗೊಂದು ಪುಟ್ಟ ಅಚ್ಚರಿಯ ಲೋಕವನ್ನು ಕಟ್ಟಿಕೊಟ್ಟಿದ್ದವು. ಅಮ್ಮ ಬಟ್ಟೆ ಒಗೆಯುವಾಗೆಲ್ಲ ಹಿತ್ತಲಿಗೋಡುತ್ತಿದ್ದ ನಾನು, ಸುಮಾರು ಹೊತ್ತು ಆಕಾಶದಲ್ಲಿ ಕಣ್ಣು ನೆಟ್ಟು ಮೋಡಗಳ ಚಲನೆಯನ್ನು ಗಮನಿಸುತ್ತಾ ಕೂತುಬಿಡುತ್ತಿದ್ದೆ. ಅದಕ್ಕೇ ಇರಬೇಕು ನೀಲಿ ನನ್ನಿಷ್ಟ ಬಣ್ಣವಾಗಿದ್ದು. ಅದ್ರಲ್ಲೂ ದಿನಾರಾತ್ರಿ ಅಪ್ಪ ಕೇಳಿಸುತ್ತಿದ್ದ  ಕ್ಯಾಸೆಟ್ಟಿನ ಹಾಡುಗಳಲ್ಲಿ ‘ಚಂದಿರನೇತಕೆ ಓಡುವನಮ್ಮ’ ಹಾಡು ಕಿವಿಗೆ ಬಿದ್ದ ದಿನದಿಂದ ಆಕಾಶದಲ್ಲಿ ಸಂಚರಿಸುತ್ತಿದ್ದ ಬೆಳ್ಳಿಯ ಮೋಡಗಳೆಲ್ಲ ಅರಳೆ(ಹತ್ತಿ)ಯ ಮುದ್ದೆಗಳೆಂದೇ ಕಾಣಿಸಲಾರಂಭಿದ್ದವು; ನಾನು ಹಾಗೆಯೇ ನಂಬಿದ್ದೆ ಕೂಡ. ಅದಕ್ಕೆ ಮೋಡಗಳು ಛಿದ್ರವಾಗುವಾಗ “ಮ್ಯಾಲ ಭಾಳ ಗಾಳಿ ಇರ್ಬೇಕು, ಅರಳಿ ಹೆಂಗೆಲ್ಲಾ ಹಿಂಜಿ ಹಿಂಜಿ ಹಾರಾಕತ್ತೇತಿ” ಅಂತ ಮನಸ್ಸಲ್ಲೇ ಅಂದುಕೊಳ್ಳುತ್ತಿದ್ದೆ.

ಸವಣೂರಿನ ಚಿತ್ರಣಗಳಲ್ಲಿ ಮುಖ್ಯವಾದ ನೆನಪೆಂದರೆ, ಆಗಲೇ ಹೇಳಿದ್ದೆನಲ್ಲ, ಆ ಮೂರು ಮನೆಗಳಲ್ಲಿ, ಮೊದಲೆರೆಡು ಮುಸಲ್ಮಾನರದ್ದು ಮತ್ತು ಮೂರನೆಯದ್ದೇ ನಮ್ಮದು. ಉತ್ತರ ಕರ್ನಾಟಕದಲ್ಲಿ ಬೆಳದಿಂಗಳ ಸಮಯದಲ್ಲಿ ಮನೆಯ ಹಜಾರದಲ್ಲಿ ಕೂತು ಒಟ್ಟಿಗೆ ಉಣ್ಣುವ ರೂಢಿಯಿರೋದ್ರಿಂದ, ಬೆಳದಿಂಗಳಿದ್ದಾಗಲೆಲ್ಲ ಈ ಮೂರೂ ಮನೆಯವರೆಲ್ಲ ಹಿತ್ತಲಲ್ಲಿ ಕೂತು ಊಟ ಮಾಡ್ತಿದ್ದೆವು. ನಮ್ಮನಮ್ಮ ಮನೆಯ ಹೊಸ್ತಿಲಲ್ಲಿ ನಮ್ಮ ಕುಟುಂಬ ಠಿಕಾಣಿ ಹಾಕಿ, ನಮ್ನಮ್ಮ ಅಡುಗೆಯನ್ನ ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಿದ್ದೆವು. ಅಪ್ಪ ಆಗೀಗ ನನಗೆ ಮೊಟ್ಟೆ ತಿನ್ನಿಸಿ ಗೊತ್ತಿದ್ದರಿಂದ, ಭಾಬಿ (ಮಾಲಕಿ) ಆಂಟಿ ನನಗೆ ಅಂತ ಒಂದು ಮೊಟ್ಟೆ ಕೊಡುತ್ತಿದ್ದದ್ದೂ ಚೆನ್ನಾಗಿ ನೆನಪಿದೆ. ಹಿಂದೂ-ಮುಸ್ಲಿಮರೆಂದರೆ ಕೋಮುವಾದಿ ಧರ್ಮವ್ಯಾದಿ ಅಂತೆಲ್ಲ ಟಿವಿಯಲ್ಲಿ ಬೊಬ್ಬಿರಿಯುವಾಗೆಲ್ಲ ನನಗೆ ಇದೇ ಚಿತ್ರಣ ಕಣ್ಮುಂದೆ ಬರುತ್ತೆ. ಈ ವ್ಯಾದಿಯ ಹುಚ್ಚೆಲ್ಲ ಮನುಷ್ಯ ಸಂಬಂಧಗಳನ್ನು ಛಿದ್ರಗೊಳಿಸಬೇಕೆಂದು ಷಡ್ಯಂತ್ರ ಹೂಡಿರುವವರು ಹಚ್ಚುವ ಕಿಚ್ಚೇ ಹೊರತು ಮತ್ತೇನಿಲ್ಲ.

ಇಂಥಾ ಪ್ರೇಮದೂರಿನಿಂದ ಬಂದ ನಮಗೆ ಇಲ್ಲಿನ ಜನರ ಪ್ರಾಕ್ಟಿಕಾಲಿಟಿಯೋ, ಅಹಮ್ಮೋ ಅಥವಾ ಎಲ್ಲವನ್ನೂ ನಿರಾಕರಣಾ ಭಾವದಲ್ಲಿ ನೋಡುವ ಅಸಡ್ಡೆಯ ಮನೋಭಾವವೋ… ಯಾಕೋ ಯಾರಲ್ಲೂ ಕಂಡಾಗೊಮ್ಮೆ ಕನಿಷ್ಟ ನಗು ಹಂಚಿಕೊಳ್ಳುವಷ್ಟೂ ಆತ್ಮೀಯತೆಯ ಭಾವದ ಸುಳಿವು ಸಿಗದೇ ಮನಸ್ಸಿಗೆ ಒಂಥರಾ ಕಸಿವಿಸಿ ಅನ್ನಿಸೋದು. ಅಕ್ಕ ಪಕ್ಕದ ಯಾವುದೇ ಮನೆಯವರ ಮುಖದಲ್ಲೂ ಪ್ರೀತಿ ತುಂಬಿದ ನಗು ಕಾಣದ ನಾವು ಕೆಲವು ದಿನ ಕಂಗಾಲಾಗಿದ್ದೆವು. ಇಲ್ಲಿನ ಯಾರ ಬದುಕೂ ಸರಳ ಅಂತ ಅನ್ನಿಸುತ್ತಲೇ ಇರಲಿಲ್ಲ. ಈಗಲೂ ಅನ್ನಿಸುವುದಿಲ್ಲ. ಎಲ್ಲರೂ ಎಲ್ಲಿಗೋ ಓಡುತ್ತಿದ್ದಾರೆ, ಆದರೆ ಯಾರೂ ಎಲ್ಲಿಗೂ ಮುಟ್ಟುತ್ತಿಲ್ಲ. ಗೆದ್ದರೆ ಸಮಾಧಾನವಿಲ್ಲ, ಸೋತರೆ ಕಿಚ್ಚು ಹೊತ್ತಿಕೊಳ್ಳಲ್ಲ. ತಪ್ಪುಗಳು ಪುನರುಚ್ಚರಿಸುತ್ತಲೇ ಇರುತ್ತವೆ.

ಉತ್ತರ ಕರ್ನಾಟಕದಲ್ಲಿ ಬೆಳದಿಂಗಳ ಸಮಯದಲ್ಲಿ ಮನೆಯ ಹಜಾರದಲ್ಲಿ ಕೂತು ಒಟ್ಟಿಗೆ ಉಣ್ಣುವ ರೂಢಿಯಿರೋದ್ರಿಂದ, ಬೆಳದಿಂಗಳಿದ್ದಾಗಲೆಲ್ಲ ಈ ಮೂರೂ ಮನೆಯವರೆಲ್ಲ ಹಿತ್ತಲಲ್ಲಿ ಕೂತು ಊಟ ಮಾಡ್ತಿದ್ದೆವು. ನಮ್ಮನಮ್ಮ ಮನೆಯ ಹೊಸ್ತಿಲಲ್ಲಿ ನಮ್ಮ ಕುಟುಂಬ ಠಿಕಾಣಿ ಹಾಕಿ, ನಮ್ನಮ್ಮ ಅಡುಗೆಯನ್ನ ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಿದ್ದೆವು. ಅಪ್ಪ ಆಗೀಗ ನನಗೆ ಮೊಟ್ಟೆ ತಿನ್ನಿಸಿ ಗೊತ್ತಿದ್ದರಿಂದ, ಭಾಬಿ (ಮಾಲಕಿ) ಆಂಟಿ ನನಗೆ ಅಂತ ಒಂದು ಮೊಟ್ಟೆ ಕೊಡುತ್ತಿದ್ದದ್ದೂ ಚೆನ್ನಾಗಿ ನೆನಪಿದೆ. ಹಿಂದೂ-ಮುಸ್ಲಿಮರೆಂದರೆ ಕೋಮುವಾದಿ ಧರ್ಮವ್ಯಾದಿ ಅಂತೆಲ್ಲ ಟಿವಿಯಲ್ಲಿ ಬೊಬ್ಬಿರಿಯುವಾಗೆಲ್ಲ ನನಗೆ ಇದೇ ಚಿತ್ರಣ ಕಣ್ಮುಂದೆ ಬರುತ್ತೆ. ಈ ವ್ಯಾದಿಯ ಹುಚ್ಚೆಲ್ಲ ಮನುಷ್ಯ ಸಂಬಂಧಗಳನ್ನು ಛಿದ್ರಗೊಳಿಸಬೇಕೆಂದು ಷಡ್ಯಂತ್ರ ಹೂಡಿರುವವರು ಹಚ್ಚುವ ಕಿಚ್ಚೇ ಹೊರತು ಮತ್ತೇನಿಲ್ಲ.

ಇಲ್ಲಿನ ಪ್ರತಿ ಮನೆಗೆ ಕನಿಷ್ಟ ಎರಡರಂತೆ ಬಂದ ಗಾಡಿಗಳೆಲ್ಲ ಇಲ್ಲಿದ್ದ ಗುಬ್ಬಚ್ಚಿಗಳನ್ನ, ಶುದ್ಧ ಗಾಳಿಯನ್ನ ವ್ಯಾಕ್ಯೂಮ್ ಕ್ಲೀನರಿನಂತೆ ಹೀರಿಕೊಂಡು ಮನೆಯಂಗಳವನ್ನು ಬಣಬಣ ಎನುವಂತೆ ಮಾಡಿವೆ. ಮಳೆಯನ್ನೂ ಕಲುಷಿತಗೊಳಿಸುವ ಮಾಲಿನ್ಯವನ್ನೇ ಉಸಿರಾಡುತ್ತಿರುವ ಮಕ್ಕಳಿಗೆ ಮಳೆ ಬಂದಾಗ ಮನಸ್ಸಿಚ್ಚೆ ಹೊರಗಾಡುವ ಪುಣ್ಯವೂ ಇಲ್ಲಿಲ್ಲ; ಒಂದಿಷ್ಟು ಮೈ ತೊಯ್ದರೆ ನೆಗಡಿ ಕೆಮ್ಮು ಅಟ್ಟಿಸಿಕೊಂಡು ಬರತ್ತೆ. ಹಬ್ಬಕ್ಕೆ ತೋರಣ ಕಟ್ಟಲು ಮಾವಿನೆಲೆಯನ್ನು ಕೊಂಡುತರಬೇಕಾದ ಈ ಊರಲ್ಲಿ ಇಲಾಚಿ, ಕೋರೇ‌‌ ಹಣ್ಣುಗಳನ್ನು ಯಾವ ಏರಿಯಾದಲ್ಲಿ ಹುಡುಕಿದರೆ ಸಿಕ್ಕಾವೆಂದು ಕಣ್ಣು ಮನಸ್ಸು ಸುತ್ತೆಲ್ಲ ನೋಡುತ್ತ ಸತತ ಹುಡುಕಾಟದಲ್ಲಿದೆ… ಅದೆಲ್ಲ ಹೋಗಲಿ, ಮಳೆ ಬಂದ ಹೊತ್ತಲ್ಲಿ ಮಣ್ಣ ಘಮವೇ ಮೂಗಿಗೆ ಬಡಿಯದಷ್ಟು ಈ ಊರು ಹದಗೇಡಿಯಾಗಿದೆ. ‌ಭೂಮಿಯ ಮೇಲಿರುವ ನಮಗೆ ಇಷ್ಟೂ ಭಾಗ್ಯ ಇಲ್ಲ ಅಂದಮೇಲೆ ಮತ್ತೇನ ಹೇಳಲಿ? ಪ್ರತೀ ರಸ್ತೆಯ ತಿರುವು-ಮುರುವುಗಳನ್ನು ಇಂಚಷ್ಟೂ ಬಿಡದೆ ಮನೆಗಳು ಎದ್ದು ನಿಂತಿರೋ ಊರಲ್ಲಿ ಮಣ್ಣ ನೆಲವನ್ನು ಹುಡುಕ ಹೋದ್ರೆ ಸಿಗೋದು ಸಿಮೆಂಟು ಫುಟ್ಪಾತು (ಅದೂ ಇದ್ದರೆ ಇದ್ದೀತು ಇಲ್ಲಾಂದ್ರೆ ಇಲ್ಲ ಬಿಡಿ) ಬಿಟ್ಟರೆ ಟಾರು ರಸ್ತೆ; ಅಷ್ಟೇ!

ಸವಣೂರಿನಲ್ಲಿ ಆಡಿದಂತೆ ಇಲ್ಲೂ ತಮ್ಮನ ಜೊತೆ ಸೇರಿ ಲಗೋರಿ ಆಡಿದ್ದೇನೆ. ಆದರೂ ಮಳೆ ಬಂದಾಗಲೂ ಮಣ್ಣ ಘಮದಿಂದ ವಂಚಿತಳನ್ನಾಗಿ ಮಾಡುವ ಈ ಬೆಂಗಳೂರು ನನ್ನನ್ನು ಅದೆಷ್ಟೇ ಬಿಗಿದಪ್ಪಿಕೊಂಡರೂ, ನನಗೆ ಮಲತಾಯಿಯ ಪ್ರೀತಿಯಂತೇ ಅನ್ನಿಸುತ್ತೆ. ಏನನ್ನಾದರೂ ಬರೆಯಲು ಕೂತಾಗಲೋ, ಇನ್ನೇನನ್ನೋ ಓದುವಾಗಲೋ ಎಷ್ಟೆಲ್ಲ ಅನುಭವಗಳ ಕೊರತೆಯಿದೆಯಲ್ಲ ಅನ್ನಿಸುತ್ತೆ.  ನಾನಿಲ್ಲಿರೋಕೆ ಲಾಯಕ್ಕಿಲ್ಲ ಅಂತ ಬೆಂಗಳೂರಿಗೆ ಯಾವಾಗಲೋ ಗೊತ್ತಾಗಿರಬೇಕು ಅದಕ್ಕೇ ಎಷ್ಟೇ ದಿನ  ಬೇರೆ ಊರಿಗೆ ಹೋದರೂ ಇದು ನನ್ನನ್ನ ತನ್ನತ್ತ ಎಳೆಯೋದಿಲ್ಲ. ಮನುಷ್ಯನ ಸಕಲ ಬೇಡಿಕೆಗಳಿಗೂ ಉತ್ತರ ಗೋಡೌನಿನಂಥಾಗಿರೋ ಈ “ಎಲ್ಲ” ಇರುವ ಮಹಾನಗರಿಯಲ್ಲಿ ನನಗಂತ ಏನು ಇದೆ? ಅಂತ ಹುಡುಕುತ್ತ ಕುಳಿತಿರೋಳು ನಾನು.

 

(ಮುಖಪುಟ ಚಿತ್ರ: ಉಷಾ ಬಿ.ಎನ್)