ಸುಮಾರ ಮೂರ ವರ್ಷದ ಹಿಂದಿನ ಮಾತು, ಶ್ರಾವಣ ಮಾಸದಾಗ ಒಂದ ಸಂಡೆ ನಮ್ಮ ಚಂದಕ್ಕ ಮೌಶಿ ಮನ್ಯಾಗ ಪವಮಾನ ಹೋಮ ಮತ್ತ ಸತ್ಯನಾರಾಯಣ ಪೂಜಾ ಇಟ್ಕೊಂಡಿದ್ದರು. ಇದ ಬ್ರಾಹ್ಮಣರಾಗ ಕಾಮನ್, ಅವರಿಗೆ ಶ್ರಾವಣ-ಭಾದ್ರಪದ ಮಾಸ ಬಂದಾಗ ಗೊತ್ತಾಗೋದು ಅವರ ಬ್ರಾಹ್ಮಣರಂತ, ವರ್ಷದಾಗ ಇನ್ನ ಹತ್ತ ತಿಂಗಳ ಮರತ ಬಿಟ್ಟಿರತಾರ ಅನ್ನಸ್ತ.

ನಮ್ಮವ್ವ ಹೇಳಿದ್ಲು “ಈ ಸಲಾ ಸತ್ಯನಾರಾಯಣ ಪೂಜಾಕ್ಕ ನೀನ ಹೋಗಿ ಬಾ, ಅಕಿ ಇಷ್ಟ ಸಲಾ ಕರದಾಗೂ ಬರೇ ನಾವ ಹೋಗಿ ಬಂದೇವಿ, ನೀ ಒಮ್ಮಿನೂ ಹೋಗಿಲ್ಲಾ, ನಾವ್ ಹೋದಾಗೊಮ್ಮೆ ಎಲ್ಲಾರು ನಿನ್ನ ಕೇಳೇ ಕೇಳ್ತಾರ”.

ನಂಗ ಏನ್ ಬ್ಯಾರೆ ಕೆಲಸ ಇಲ್ಲನ ಅನ್ನೋವಿದ್ದೆ  ಆದರ ಖರೇನ ಆ ಸಂಡೆ ಏನು ಕೆಲಸ ಇದ್ದಿದ್ದಿಲ್ಲಾ, ಮಳಿ ಬ್ಯಾರೆ ಹತ್ತಿದ್ದರಿಂದ ಕ್ರಿಕೇಟ ಆಡೋದು ಡೌಟ್ ಇತ್ತ. ಅದು ಶ್ರೀ ಸತ್ಯನಾರಾಯಣ ಪೂಜಾ ಅದ ಅಂತ ಗೊತ್ತಿದ್ದಾಗ ಸುಳ್ಳ-ಸುಳ್ಳ ನೆಪಾ ಮಾಡಿ ತಪ್ಪಸ ಬ್ಯಾಡಾ ಆಂತ ನಮ್ಮವ್ವ ಅಂದದ್ದಕ್ಕ ನಾನ ಹೋಗೊದು ಅಂತ ಡಿಸೈಡ ಮಾಡಿದೆ.

“ಮಳೆಗಾಲ ಬ್ಯಾರೇ, ನಿ ಒಬ್ಬನ ಗಾಡಿ ಮ್ಯಾಲೇ ಹೋಗಿ ಬಾ, ಅಕೀ ಎನ್ ಬರಂಗಿಲ್ಲ” ಅಂದ್ಲು.

ನನಗು ಅಷ್ಟ ಬೇಕಾಗಿತ್ತು, ಇನ್ನ ನನ್ನ ಹೆಂಡತಿನ್ ಕರಕೊಂಡ ಹೊಂಟರ ಮಗನೂ ಫ್ರಿ ಬರತಾನ, ಮೂರ ಮಂದಿ ಬೈಕ್ ನಾಗ ಸಾಲಂಗಿಲ್ಲ್- ಸಾತರೂ ನನಗ ಬರೋಬ್ಬರಿ ಹೊಡ್ಯಾಕ ಬರಂಗಿಲ್ಲಾ. ಇನ್ನ ರೀಕ್ಷಾ ಮಾಡ್ಕೊಂಡ್ ಹೋದರ, ಹೊಗ್ತ ನೂರ-ಬರತ ನೂರ್. ಮದ್ಲ ತುಟ್ಟಿ ಕಾಲ, ಅವರೇನ ನನಗ ಅಲ್ಲೆ ದಕ್ಷಿಣಿ ಕೊಡುದು ಅಷ್ಟರಾಗ ಅದ ಅಂತ ಒಬ್ಬನ ಹೋಗೋದ ಛಲೋ ಅನ್ಕೋಂಡೆ.

ಮುಂಜಾನೆ ಒಂಬತ್ತುವರಿ ಹತ್ತರ ಸುಮಾರಿಗೆ ಅವರ ಮನಿಗೆ ಹೋದೆ. ಎಲ್ಲಾರು ಅದ-ಇನ ಅಷ್ಟೋತ್ತರ ಮುಗಿಸಿ ಟಿಫಿನ್ ಗೆ ಕುತಿದ್ದರು. ಈ ವೈಷ್ಣವರ ಮನ್ಯಾಗ ಏನ ಕಾರ್ಯಕ್ರಮ ಇರಲಿ ಅಷ್ಟೋತ್ತರ ಇದ್ದ ಇರತದ. ಅಷ್ಟೋತ್ತರ ಅಂದರ ಒಂದ ಥರಾ ರಾಯರಿಗೆ ಅಲಾರಾಂ ಇದ್ದಂಗ. ಇವರ ಅಷ್ಟೋತ್ತರ ಮಾಡಿದಾಗ ಇಷ್ಟ ರಾಯರು ಏಳ್ತಾರ ಅಂತ ತಿಳ್ಕೋಂಡಿರತಾರ. ಓಣ್ಯಾಗ ಒಂದ ನಾಲ್ಕ ರಿಟೈರ್ಡ್ ಮಂದಿ ಸೇರಿ ಇನ್ನೊಂದ ಎಂಟ-ಹತ್ತ  ಮುಂಜಾನೆ ಖಾಲಿ ಇರೋ ಮಂದಿ ಸೇರಿಸಿಕೊಂಡ ಒಂದ ಅಷ್ಟೋತ್ತರ ಮಂಡಳಿ ಮಾಡಿರತಾರ, ಮುಂಜ-ಮುಂಜಾನೆ ಎದ್ದ “ಇವತ್ತ ನಿಮ್ಮ ಮನ್ಯಾಗ್ ಅಷ್ಟೋತ್ತರ, ನಾಳೆ ಅವರ ಮನ್ಯಾಗ್” ಅನಕೋತ ತಿಂಗಳದಾಗ ಇಪ್ಪತ್ತ ನಾಷ್ಟಾ ಅಂದರ ಬ್ರೆಕ್ ಫಾಸ್ಟ್ ಬ್ಯಾರೇವರ ಮನ್ಯಾಗ್ ಮಾಡ್ತಾರ. ಶ್ರಾವಣಮಾಸದಾಗ್ ಅಂತೂ ಇವರನ್ನ ಹಿಡಿಯೋಹಂಗ ಇಲ್ಲಾ. ಖರೇ ಹೇಳ್ಬೆಕಂದರ ಅಷ್ಟೋತ್ತರ ಶುರು ಆದಾಗ್ ನಾಲ್ಕ ಮಂದಿ ಇರತಾರ್, ಮುಂದ ತಿಂಡಿ ರೆಡಿ ಆಗೋಮಟಾ ಅಂದರ ಇನ್ನ ಎಂಟ-ಹತ್ತ ಮಂದಿ ಬಂದ ಸೇರತಾರ.

ನಾ ಇನ್ನೂ ಕಾಲ ಒಳಗ ಇಟ್ಟಿದ್ದಿಲ್ಲ ನಮ್ಮ ಉಮೇಶ್ ಮಾಮಾ ಒಳಗಿಂದ ಒದರಿದಾ  “ಬಾ ಪಾ, ರಾಜಕುಮಾರಾ ಏನ್ ಭಾಳ ಅಪರೂಪ ಆಗಿ ಬಿಟ್ಟಿ ಎಲ್ಲಾ”,
“ಏ ಪರ್ಶ್ಯಾ ಬಂದಾನ ಅವಂಗು ಒಂದ ಎಲಿ ಹಾಕರಿ ಅಂದ”. ಯಾವಾಗರ ಒಮ್ಮೆ ಹೋದರ ಹೆಂತಾ ಸ್ವಾಗತ ಸಿಕ್ಕತಪಾ ಅನ್ಕೊಂಡೆ. ನಾ ಅಂದೆ ನಂದ ಟಿಫಿನ್ ಆಗೇದ, ನೀವ ಮಾಡರಿ.

ಅಷ್ಟರಾಗ ನಮ್ಮ ಚಂದಕ್ಕ ಮೌಶಿ “ಏನಪಾ ಜೋಕಮಾರ, ಕೈ ಬಿಸಗೋಂಡ ಒಬ್ಬನ ಬಂದಿಯಲ್ಲಾ, ಹೆಂಡ್ತಿ ಮಗನ ಎಲ್ಲೆ ಬಿಟ್ಟಿ”? ಆಂದ್ಲು. ಬಂದವರನ್ನ ಬಿಟ್ಟ ಬರಲಾರದವರನ್ನ ಕೇಳೋದ ಎಲ್ಲಾರ ಮನ್ಯಾಗಿನ ಸಂಪ್ರದಾಯ ಆಗಿಬಿಟ್ಟದ. ಇಷ್ಟದಿವಸ ನಮ್ಮವ್ವಗ “ಏನವಾ ಸಿಂಧು, ನಿನ್ನ ಮಗಾ ಎನ್ ಎಲ್ಲೂ ಬರಂಗಿಲ್ಲೇನ್? ಭಾಳ ದೊಡ್ಡ ಮನಷ್ಯಾ ಆಗ್ಯಾನ ಬಿಡು” , “ಅವಂಗೇನ ಬಂಧು-ಬಳಗ ಯಾರು ಬ್ಯಾಡೇನು, ಮದುವಿಯಾದ್ ಮ್ಯಾಲೆ ಭಾಳ ಬದಲಾಗೇನ್ ಬಿಡ್ವಾ”

ಅಂತೇಲ್ಲಾ ಅನ್ನೋರು ಇವತ್ತ ನಾ ಬಂದ ಮುಂದ ನಿಂತರ “ನಿಮ್ಮವ್ವಾ ಯಾಕ್ ಬಂದಿಲ್ಲಾ, ನಿಮ್ಮಪ್ಪಾ ಯಾಕ್ ಬಂದಿಲ್ಲಾ, ನಿನ್ನ ಹೆಂಡ್ತಿಗೆಲ್ಲೆ ಬಿಟ್ಟಿ” ಅಂತೇಲ್ಲಾ ಕೇಳ್ತಾರ. ಹೆಂಡ್ತಿಗೇನ್ ಅಷ್ಟ ಸರಳ ಬಿಡಾಕ ಬರತದ ಏನ್? ಬರತಿದ್ದರ ಎಷ್ಟ ಮಂದಿ ಇಷ್ಟೋತ್ತಿಗೆ ಬಿಟ್ಟಿರತಿದ್ದರೋ? ನಾನ ಎಷ್ಟ ಸಲಾ ಬಿಟ್ಟಿರತಿದ್ದೇನೊ? ಆ ಸತ್ಯನಾರಾಯಣಗ ಗೊತ್ತ ಅನ್ಕೊಂಡೆ.

“ಲೇ ನಿನಗ ಕೇಳಲಿ ಕತ್ತೇನಿ, ಪ್ರೇರಣಾಗ ಯಾಕ ಕರಕೋಂಡ ಬಂದಿಲ್ಲಾ” ಅಂದ್ಲು.
“ಇಲ್ಲಾ ಮೌಶಿ ಅಕಿ ಬರೋಹಂಗ ಇದ್ದಿದ್ದಿಲ್ಲಾ” ಅಂತ ಅಂದೆ.

“ವಟ್ಟ್ ಒಂದ ಏನರ ನೆವಾ ಮಾಡ್ತಾಳ್ ನೋಡ್ ನಿನ್ನ ಹೆಂಡ್ತಿ, ನಮ್ಮ ಮನ್ಯಾಗ ಫಂಕ್ಷನ್ ಇದ್ದಾಗ ಕುತಗೋಬೆಕಿತ್ತೇನ್ ಅಕಿಗೂ” ಅಂತ ಜೋರ್ ಮಾಡಿದ್ಲು. ‘ಅದೇನ್ ಅಕಿ ಕೈಯಾಗ ಇರತದ ಏನ್’ ಅನ್ನೋವ ಇದ್ದೆ, ಸುಮ್ಮನ ಯಾಕ ವರಟ ಹರಿಬೇಕ ಅಂತ ಬಿಟ್ಟೆ. ಬ್ಯಾರೇ ಎನರ ಕಾರಣ ಹೇಳ ಬಹುದಿತ್ತೇನೋ ಆದರ ವೈಷ್ಣವರ ಮನಿಗೆ ಇದ ವ್ಯಾಲಿಡ್ ರಿಸನ್ ಅನಸ್ತು. ಆರಾಮ್ ಇರಲಿಲ್ಲಾ ಅಂತನೂ ಹೇಳಬಹುದಿತ್ತು ಆದರ ಗುಂಡಕಲ್ಲನಂಗ ಗಟ್ಟಿ ಮುಟ್ಟ ಇರೊ ಹೆಂಡ್ತಿಗೆ ಹಂಗ ಹೇಳಲಿಕ್ಕೆ ಮನಸ್ಸಾದರು ಹೆಂಗ ಬರತದ.

ಇಷ್ಟಕ್ಕ ಮುಗಿಲಿಲ್ಲ, ಸಾಲಕ ಒಬ್ಬರಾದ ಮ್ಯಾಲೆ ಒಬ್ಬರಂತೆ ಎಲ್ಲಾರೂ ಕೇಳವರ  “ಅಕಿಯಾಕ್ ಬರಲಿಲ್ಲ” “ಅಕಿನ್ಯಾಕ್ ಬಿಟ್ಟ ಬಂದಿ”. ಎಲ್ಲಾರಿಗೂ ‘ಅಕೀ ಬರೋಹಂಗ ಇದ್ದಿದ್ದಿಲ್ಲಾ’ ಆಂಥ ಹೇಳಿ ಹೇಳಿ ಸಾಕಾಗಿ ಹೋತ. ಸನ್ನಿ-ಸೂಕ್ಷ್ಮ ತಿಳಿಲಾರದವರು ‘ಅಕಿ ಬರೋಹಂಗ ಇದ್ದಿದ್ದಿಲಾ’ ಅಂದಾಗ “ಯಾಕ ಅರಾಮ್ ಇಲ್ಲೇನು, ಡಾಕ್ಟರಗೇ ತೋರಿಶಿಯಿಲ್ಲೋ” ಅಂತನು ಕೇಳಿದರು. ಅಷ್ಟ ಮಂದಿ ಒಳಗ ಅಪ್ಪಿ-ತಪ್ಪಿ ಬಾಯಿ ಬಿಟ್ಟ ಒಬ್ಬರನು “ನೀ ಬಂದಿ ಭಾಳ್ ಛಲೋ ಆತ ನೋಡ ಪ್ರಶಾಂತಾ” ಅನ್ನಲಿಲ್ಲ. ಎಲ್ಲಾರು ಬರಲಾರದವರನ್ನ ಕೇಳೋರು. ಅಷ್ಟರಾಗ ಒಳಗ ಪವಮಾನ ಹೋಮಾ ಶುರು ಆಗಿ ಕಟ್ಟಿ ಆಚಾರ್ಯರ ಮಂತ್ರ ಹೋಮದ ಹೊಗಿ ಜೋತಿಗೆ ಎಲ್ಲಾ ರೂಮ್ ಒಳಗು ಹರದಾಡಲಿಕ್ಕೆ ಹತ್ತಿತ್ತು. ಕಣ್ಣಾಗ ನೀರ ಬರಲಿಕ್ಕೆ ಹತ್ತು ಅಂತ ಎದ್ದ ಹೊರಗ ಗ್ಯಾಲರಿ ಒಳಗ ಬಂದ ನಿಂತೆ, ಎದರಗಿಂದ ನಮ್ಮ ಬಾಬು ಮಾಮಾ ಬಂದಾ.

“ಏನಲೇ ಎನ್ ಆಶ್ಚರ್ಯ ನೀ ಬಂದ ಬಿಟ್ಟಿ” ಅಂದ.
‘ಯಾಕ ಬರಬಾರದಾಗಿತ್ತೇನ’ ಅನ್ನೋವ ಇದ್ದೆ, ಅಷ್ಟರಾಗ “ಎಲ್ಲೇ ನಿನ್ನ ಹೆಂಡ್ತಿ, ಒಳಗಿದ್ದಾಳೇನ್”? ಅಂದ.
“ಇಲ್ಲಾ, ಅಕಿ ಹೋರಗ ಆಗ್ಯಾಳ” ಅಂದೆ. “ಹೌದಾ….ಛಲೋ ಆತ್ ಬಿಡು” ಅಂದ. ಅದರಾಗ ಎನ ಛಲೋ ಆತು ಅಂದೆ.

“ಅಲ್ಲಲೇ, ನೀನರ ಬಂದೇಲಾ, ಅದು ಭಾಳ ಛಲೋ ಆತು” ಅಂತ ನಕ್ಕಾ. ನಾ ಬಂದಿದ್ದಕ್ಕ ಒಬ್ಬರರ ಖುಶಿ ಪಟ್ಟರಲ್ಲಾ ಅಂತ ನನಗೂ ಸ್ವಲ್ಪ ಸಂತೋಷ ಆತ.  ಅಷ್ಟರಾಗ ಕಟ್ಟಿ ಆಚಾರ್ಯರು ಝಾಂಕಟಿ ಬಾರಿಸಿ ಎಲ್ಲಾರೂ ಪೂರ್ಣಾಹುತಿಗೆ ಬರ್ರಿ ನಾ ಲಗೂನ್ ಹೋಗಬೇಕು ಇನ್ನು ಎರಡ ಹೋಮ, ಮೂರ ಸತ್ಯನಾರಾಯಣ ಅವ ಅಂದರು. ಅವರಿಗೂ ಒಂದತರಹ ಶ್ರಾವಣ ಮಾಸ ಅಂದರ ಐ.ಪಿ.ಎಲ್ ಸೀಸನ್ ಇದ್ದಂಗ. ದಿನಕ್ಕ ಎರಡ ಮ್ಯಾಚ್, ನಾಲ್ಕ ಇನ್ನಿಂಗ್ಸ ಎಲ್ಲಾದಕ್ಕು ಇವರ ಥರ್ಡ ಅಂಪೈರ್. ಹೋಮಾ ಮುಗಿಸಿ ಶ್ರೀ ಸತ್ಯನಾರಾಯಣ ಪ್ರತಿಷ್ಟಾನ ಮಾಡಿ ಆಚಾರ್ಯರು ನಮ್ಮ ಕಾಕಾಗ ‘ನೀವ ಇನ್ನ ಕಥೆ ಓದರಿ,  ನಾ ಆಮಾಲೇ ಬಂದ ಪ್ರಸಾದ, ದಕ್ಷೀಣಾ ಒಯ್ತೇನಿ’ ಅಂತ ತಮ್ಮ ಮುಂದಿನ ವಿಸಿಟ್‌ಗೆ ಹೋದರು.

ಊಟಕ್ಕ ಕುತಗೊಂಡಾಗ ಮತ್ತ ಒಂದಿಬ್ಬರು ಅದನ್ನ ಕೇಳಿದರು ‘ಯಾಕ ಬಂದಿಲ್ಲಾ ನಿನ್ನ ಹೆಂಡ್ತಿ?’ ಹಾಡಿದ್ದ ಹಾಡ ಕಿಸ್‌ಬಾಯಿ ದಾಸ ಅಂದಂಗ ನಾನು ಹೇಳಿದ್ದ ಹೇಳಿದೆ. ಅಷ್ಟರಾಗ ನನ್ನ ಕಸೀನ್ ಒಬ್ಬವ  ಮತ್ತ  ‘ವೈನಿ ಯಾಕ್ ಬಂದಿಲ್ಲಾ’ ಅಂದ. ಅವಂಗ ‘ಅಕಿ ಬರೋಹಂಗ ಇದ್ದಿದ್ದಿಲ್ಲ’ ಅಂದದ್ದು ತಿಳಿದಿದ್ದಿಲ್ಲಾ. ಬಹುಷಃ ಇಂವಾ ಜಾಬಿನ್ ಸೈನ್ಸ್ ಕಾಲೇಜನಾಗ ಹಿಸ್ಟರಿ ಮೇಜರ ಮಾಡಿರಬೇಕು ಅನಕೊಂಡೆ. ಅವನ ಕಿವ್ಯಾಗ ಮಂತ್ರ ಹೇಳದಂಗ ಹೇಳಿದೆ  “ಶಿ ಇಸ್ ಹ್ಯಾವಿಂಗ್ ಪಿರೀಯಡ್ಸ್” ಅಂದೆ. “ಹೋ ಐ ಸಿ” ಅಂದ. ನನ್ನ ಪುಣ್ಯಾ ಯಾ ಪಿರಿಡ , ಎಷ್ಟನೇ ಪಿರಿಡು ಅಂತ ಕೇಳಲಿಲ್ಲ. ನನಗ ನನ್ನ ಹೆಂಡ್ತಿ ಮ್ಯಾಲೇ ಎಲ್ಲಾರದು ಕಣ್ಣು ಅನಸಲಿಕತ್ತು. ಅಂತು ಇಂತು ಉಟಾ ಮಾಡಿ ಬರಬೇಕಾರ ಅನಸ್ತು ಸುಮ್ಮನ ನಮ್ಮವ್ವನ,ನನ್ನ ಹೆಂಡತಿನ ಕಳಿಸಿದ್ರ ಎಷ್ಟ ಛಲೋ ಇತ್ತಲಾ ಅಂತ. ಅವಾಗ ಇದ ಮಂದಿ ಅವರ ಜೀವಾ ತಿಂತಿದ್ರು “ಯಾಕ…. ಪ್ರಶಾಂತ ಬಂದಿಲ್ಲಾ?” ಆದರ ಪಾಪ ನನ್ನ ಹೆಂಡತಿಗೆ ‘ಅವರು ಬರೋಹಂಗ ಇದ್ದಿದ್ದಿಲ್ಲರಿ’ ಅಂತ ಹೇಳಲಿಕ್ಕೂ ಬರತಿದ್ದಿಲ್ಲ.

ಇದ ಮುಗದ ಒಂದ ೧೫ ದಿವಸ ಆಗಿತ್ತೇನೊ ನಮ್ಮ ಕಾಕುನ ತಂಗಿ ಮಗಳದ ಎಂಗೇಜಮೆಂಟ್ ಫಿಕ್ಸ ಆತು. ಬೀಗರೊಂದ ೨೫ ಮಂದಿ ಬರ್ತಾರ ನಾವ ಒಂದ ೪೦ ಮಂದಿ, ನೀವ ಎಲ್ಲಾರೂ ಬರ್ರಿ ಅಂತ ಕರದಹೋದರು. ಅದರ ಅರ್ಥ ಮನಿಗೊಬ್ಬರ ಬರ್ರಿ ಅಂದಂಗ. ಇನ್ನ ಒಬ್ಬನ ಕೈ ಬೀಸ್ಗೋಂಡ ಹೋಗೊಂವಾ ಅಂದರ ನಮ್ಮ ಮನ್ಯಾಗ ನಾ ಒಬ್ಬನ ಅಲಾ, ನಾನ ಹೋದೆ. ಅಲ್ಲೆ ನೋಡಿದ್ರ ನಮ್ಮ ಚಂದಕ್ಕ ಮೌಶಿ,ಬಾಬು ಮಾಮಾ ಎಲ್ಲಾ ಬಂದಿದ್ರು ‘ಅರೇ ಎನ್ ನೀವು ಇಲ್ಲೆ’ ಅಂದೆ ಅವರು ಗಂಡಿನ ಕಡೆಯಿಂದ ಬಂದಿದ್ದರು ಅಂತ ಗೊತ್ತಾತು. ಬ್ರಾಹ್ಮಣರ  ಬಳಗ ಅಂದರ ಒಂಥರಾ ಕಿಲ್ಲೇದಾಗಿನ ಸಂಧಿ ಇದ್ದಂಗ ಯಾವದು ಎಲ್ಲೇ ಕೂಡತದ ಗೊತ್ತಾಗಂಗಿಲ್ಲ. ಅಷ್ಟರಾಗ ನಮ್ಮ ಕಾಕುನು ಅಲ್ಲೆ ಬಂದ ಹರಟಿ ಶುರು ಮಾಡಿದ್ಲು. ಅದು-ಇದು ಅಂತ ಎಲ್ಲಾರು ಸೇರಿ ಊರ ಉಸಾಬರಿ ಮಾಡಿದ್ರು. ಒಮ್ಮಿಂದೊಮ್ಮೇಲೆ ನಮ್ಮ ಕಾಕುಗ ಏನ್ ನೆನಪಾತೋ, ಯಾಕನೆನಪಾತೋ  “ಮತ್ತೇನಪಾ ಪ್ರಶಾಂತಾ ನಿನ್ನ ಹೆಂಡತಿದು ವಿಶೇಷ ಅಂತಲಾ” ಅಂದ್ಲು. ಒಂದಥರಾ ಬ್ರೆಕ್ಕಿಂಗ್ ನ್ಯೂಸ್ ಹೇಳ್ದಂಗ ಕೇಳಿದ್ಲು. ನಾ “ಹೌದಾ”? ಅನ್ನೋವ ಇದ್ದೆ, ಅಂದಿದ್ದರ ನನಗ ಗೋತ್ತಿಲ್ಲೇನಪಾ ಅನ್ನಸ್ತಿತ್ತು ಎಲ್ಲಾರಿಗು. ನಾ ಸುಮ್ಮನ ನಕ್ಕು ‘ಹೌದು’ ಅಂದೆ. ನಮ್ಮ ಮೌಶಿ, ನಮ್ಮ ಮಾಮಾ ಎಲ್ಲಾರು ನನ್ನ ಬೆನ್ನ ಚಪ್ಪರಿಸಿ “ಏನಲೇ ಮಗನ ನಮಗ ಹೇಳೇಲಾ, ಎಷ್ಟ ತಿಂಗಳಾತು?” ಅಂದ್ರು. ನಾ ಅಂದೆ ನನಗ ಗೋತ್ತಾಗಿ ಎಂಟ-ಹತ್ತ ದಿವಸ ಆತು, ಈಗ ಒಂದ ಮುಗದ ಎರಡರಾಗ ನಡಿಲಿಕತ್ತದ ಅಂದೆ. ಎಲ್ಲಾರು ಖುಶಿ ಪಟ್ಟರು, ಹೆಂಗಿದ್ರು ಇದು ಎರಡನೇದು ಅವರಗೇನ ಕುಬಸಾ ಮಾಡೋ ಟೆನ್ಶನ್ ಇರಲಿಲ್ಲ. ಪಾಪಾ ಟೆನ್ಶನ್ ಎನ ಇದ್ದರು ಅದು ನನ್ನ ಹೆಂಡತಿಗೆ ಒಬ್ಬಕಿಗೆ, ಯಾಕಂದರ ಹಡಿಯೋಕಿ ಅಕಿನ ಅಲಾ.

ಅಷ್ಟರಾಗ ನಮ್ಮ ಬಾಬು ಮಾಮಾಗ ಸಡನ್ ಆಗಿ ಏನೋ ಹೋಳಿತು. ಎಲ್ಲಾರ ಮುಂದನ “ಲೇ ನಿನ್ನ ಹೆಂಡತಿಗೆ ಎಷ್ಟ ತಿಂಗಳಾ ಅಂದಿ” ಅಂದಾ, ‘ಎರಡರಾಗ, ಯಾಕ ಏನಾತ’ ಅಂದೆ. “ಮಗನ ಹದಿನೈದ ದಿವಸದ ಹಿಂದ ಚಂದಕ್ಕನ ಮನಿಗೆ ಸತ್ಯನಾರಾಯಣ ಪೂಜಾಕ್ಕ ಬಂದಾಗ ನನ್ನ ಹೆಂಡತಿ ಮುಟ್ಟ ಆಗ್ಯಾಳ, ಬರೋಹಂಗ ಇದ್ದಿದ್ದಿಲ್ಲಾ ಅಂತೇಲ್ಲಾ ಹೇಳಿ ಈಗ ೧೫ ದಿವಸದಾಗ ಎರಡನೇ ತಿಂಗಳ ಶುರು ಆತೇನ? ಅಕೀದೇನ ಇಂಟೆಲ್ ಡ್ಯೂಲ್ ಕೊರ್ ಪ್ರೊಸೆಸ್ಸರಾ”? ಅಂತ ಒಂದ ಉಸರಿನಾಗ ಕೇಳಿದ.

ನನ್ನ ಮಾರಿ ಒಮ್ಮಿಂದ ಒಮ್ಮಲೇ ತಾಳಿಸಿದ್ದ ಬದನಿಕಾಯಿ ಆದಂಗ ಆತು. ರೆಡ್ ಹ್ಯಾಂಡ್‌ನಾಗ ನನ್ನ ಸುಳ್ಳು ಸಿಕ್ಕಬಿತ್ತು. ಬಸರಾಗಿದ್ದ ಸುಳ್ಳು ಅಂತ ಹೇಳಲಿಕ್ಕೆ ಈಗ ಅಂತೂ ಬರಂಗಿಲ್ಲಾ. ನಾ ಸಿಟ್ಟಿಗೆದ್ದ ಹೇಳಿದೆ “ನನ್ನ ಹೆಂಡ್ತೀದ ವಿಶೇಷ ಅಂತ ನನಗ ಗೊತ್ತಾಗೀದ್ದ ಎಂಟ ದಿವಸದ ಹಿಂದ, ಇಲ್ಲಾಂದರ ಅಕಿ ಬಸರಿದ್ದದ್ದ ಗೊತ್ತಿದ್ದರು ಕಡಿಗಾಗ್ಯಳ ಅಂತ ಆವಾಗ ಹಂಗ ಹೇಳಲಿಕ್ಕೆ ನನಗೇನ್ ಹುಚ್ಚ ಹಿಡದಿತ್ತೇನ್?”

“ಅಲ್ಲಾ ಅಕೀನರ ನನಗ ಒಂದ ಮಾತ ಹೇಳ್ಬೇಕೋ ಬ್ಯಾಡೋ?” ಅಂತ ಎಲ್ಲಾ ಸಿಟ್ಟು, ತಪ್ಪು ನನ್ನ ಹೆಂಡತಿ ಮ್ಯಾಲೇ ಹಾಕಲಿಕ್ಕೆ ಪ್ರಯತ್ನ ಮಾಡಿದೆ.

ಅವತ್ತ ನಮ್ಮವ್ವಾ ‘ನಿ ಒಬ್ಬನ ಗಾಡಿ ಮ್ಯಾಲೇ ಹೋಗಿ ಬಾ, ಅಕೀ ಎನ್ ಬರಂಗಿಲ್’ ಅಂದದ್ದನ್ನ ನಾ ‘ಆಕೀ ಬರೋಹಂಗ ಇದ್ದಿದ್ದಿಲ್ಲ’ ಅಂತ ಹೇಳಿ ಇಷ್ಟ ಗದ್ಲಾ ಮಾಡ್ಕೋಂಡಿದ್ದೆ. ನಮ್ಮ ಮೌಶಿ ಅಂದ್ಲು ಈಗ ಆಗಿದ್ದ ಆಗಿ ಹೋತು ಬಿಡ, ಭಾಳ ಶಾಣ್ಯಾ ಇದಿ “ನಮ್ಮ ಪುಣ್ಯಾ -ಇವತ್ತ ಯಾಕ ಹೆಂಡ್ತಿನ ಕರಕೊಂಡ ಬಂದಿಲ್ಲಾ ಅಂತ ಯಾರರ ಕೇಳಿದ್ದರ…. ಇಲ್ಲಾ…. ಅಕೀ ಬರೋಹಂಗ ಇದ್ದಿದ್ದಿಲ್ಲಾ ಅಂತ ಅನ್ಲಿಲ್ಲಲಾ” ಅಂತ ಹೇಳಿ ನನ್ನ ಮಾರಿ ತಿವದು ನಕ್ಕಳು. ನಾ ನಗಲಿಲ್ಲ.