ಸಹೋದರನನ್ನು ಕಳೆದುಕೊಂಡ ಶೋಕ ದುಮ್ಮಾನ ಒಂದು ಕಡೆ, ಹೊಸ ಸ್ನೇಹ ಪ್ರೇಮಾಂಕುರಗಳ ಜೀವಸೆಲೆ ಇನ್ನೊಂದೆಡೆ, ಅವನ ಕವಿತೆಗಳು ಆ ಇಡೀ ವರ್ಷ ನೋವು ನಲಿವುಗಳ, ಖಿನ್ನತೆ ಉತ್ಸಾಹಗಳ ಉಯ್ಯಾಲೆಯಲ್ಲಿ ತೂಗಿ ತೇಲಿದವು. ವಾಸ್ತವದಲ್ಲಿ ಹರುಷ ಹಾಗು ವ್ಯಥೆಗಳು ಜೊತೆಜೊತೆಗೆ ಬದುಕಿ ಸಾಗುವುದನ್ನು ಪ್ರದರ್ಶಿಸಿದವು. ಬೇರೆಬೇರೆ ವಸ್ತುಗಳ ಪದ್ಯಗಳನ್ನು ಬೇರೆಬೇರೆ ಛಂಧಸ್ಸಿನಲ್ಲಿ ಬರೆಯುವ ಕೌಶಲ ಆತನಿಗಿತ್ತು. ಅವನ ಎಲ್ಲ ಕವಿತೆಗಳೂ ಪ್ರಕೃತಿಪ್ರೇಮ ಜೀವನಪ್ರೀತಿ ಮತ್ತೆ ಮನುಷ್ಯ ಕಲ್ಪನೆಯಲ್ಲಿ ಇದ್ದ ನಂಬಿಕೆಯನ್ನು ತೋರಿಸಿದವು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಕವಿ ಜಾನ್‌ ಕೀಟ್ಸ್‌ ಕುರಿತ ಬರೆದಿದ್ದಾರೆ ಯೋಗೀಂದ್ರ ಮರವಂತೆ

ಹುಟ್ಟಿದ್ದು ದಿನೇ ದಿನೇ ಬೆಳೆದು ಹಿಗ್ಗುತ್ತಿದ್ದ, ಈ ಕಾಲದಲ್ಲಿ ನಾವು ಪುರಾತನ ಎಂದು ಕರೆಯಬಹುದಾದ ಎರಡು ಶತಮಾನಗಳ ಹಿಂದಿನ ಲಂಡನ್ನಿನ ಅಂಚಿನ ಮೂರ್ ಗೇಟ್‌ನಲ್ಲಿ. ಕ್ರೈಸ್ತ ಶಿಷ್ಟಾಚಾರದಂತೆ ನಾಮಕರಣ ಪಡೆದದ್ದು 1795ರಲ್ಲಿ. ತಂದೆ, ಲಂಡನ್ ಪೇಟೆಯ ವಸತಿಗೃಹಗಳಲ್ಲಿ ಉಳಿಯಲು ಬರುತ್ತಿದ್ದವರ ಕುದುರೆಗಳನ್ನು ಕಟ್ಟಿ ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದವನು; ತಾಯಿ ಅದೇ ತಂಗುದಾಣದ ಕುದುರೆ ಲಾಯದ ಉಸ್ತುವಾರಿಯವನ ಮಗಳು. ಇಷ್ಟೇ ಹೇಳಿದರೆ, ಸಾಮಾನ್ಯ ಹಿನ್ನೆಲೆಯ ಅಪ್ಪ ಅಮ್ಮಂದಿರಿಗೆ ಆಗಷ್ಟೇ ಹುಟ್ಟಿ ಹೆಸರು ಪಡೆದಿದ್ದ ಮಗುವಿನ ಬಗ್ಗೆ ಯಾರು ಯಾಕೆ ಕುತೂಹಲ ಆಸಕ್ತಿ ತಳೆದಾರು? ಆಗಷ್ಟೇ ಹುಟ್ಟಿದ ಎಂದರೇನು, ಅಲ್ಪಾಯುಷ್ಯದ ಅಂತಿಮ ಹಂತದಲ್ಲೂ ಅಸಾದೃಶ್ಯ ಕಾವ್ಯಸೃಷ್ಟಿಯ ಹೊರತಾಗಿಯೂ ಜಗತ್ತಿನ ಅಸಡ್ಡೆ ಅಹಂನಿಂದಾಗಿ ಗುರುತಿಗೆ ಆಸ್ವಾದನೆಗೆ ನಿಲುಕದೇ ಹೋದವನು. ವಿಪರ್ಯಾಸ ಮತ್ತು ವ್ಯಂಗ್ಯ ಎಂದರೆ ಮರಣಾನಂತರದಲ್ಲಿ ಕಾವ್ಯ ಜಗತ್ತನ್ನು, ಬದುಕಿದ ಅಲ್ಪ ಅವಧಿಯಲ್ಲಿ ಬರೆದ ಕೆಲವೇ ಕವನಗಳಿಂದಲೇ ಸಮ್ಮೋಹಗೊಳಿಸಿ ಕಾವ್ಯಸಹೃದಯಿಗಳ ಎದೆಯಲ್ಲಿ ಖಾಯಂ ಬದುಕುತ್ತಿರುವವನು, ಜಾನ್ ಕೀಟ್ಸ್.

ತಂಗುದಾಣದ ಕುದುರೆಲಾಯದ ಉದ್ಯೋಗಿಗಳ ಹಿರಿಯ ಮಗ ಜಾನ್‌ನಿಗೆ ಮೂವರು ಸಹೋದರರು ಮತ್ತೆ ಒಬ್ಬಳು ತಂಗಿ. ಸಿರಿವಂತರಲ್ಲದ ಕುಟುಂಬವಾದರೂ ಜಾನ್‌ನನ್ನು ಉತ್ತಮ ಶಾಲೆಗೆ ಕಳುಹಿಸುವಷ್ಟು ಆರ್ಥಿಕ ಅನುಕೂಲ ತಂದೆತಾಯಿಗಳಿಗಿತ್ತು. ಎನ್ಫೀಲ್ಡ್‌ನ ಶಾಲೆಯಲ್ಲಿ ಬಾಲಕ ಕೀಟ್ಸ್‌ನ ವಿದ್ಯಾಭ್ಯಾಸ ಆರಂಭವಾಯಿತು. ಶಿಕ್ಷೆ ಕೊಡುತ್ತಲೇ ಶಿಕ್ಷಣ ನೀಡುವ ಶಾಲೆ ಅದಾಗಿರದೆ, ಮಕ್ಕಳ ಪರಿಶ್ರಮದ ಉತ್ತಮ ಕೆಲಸಗಳಿಗೆ ಬಹುಮಾನ ಕೊಡುವ ಪದ್ಧತಿ ಅಲ್ಲಿತ್ತು. ಶಾಲೆಯ ಉದಾರ ಶಿಕ್ಷಣ ಪದ್ಧತಿ ಆ ತನಕ ಹೊಡೆದಾಟಕ್ಕೆ ಹೆಸರಾಗಿದ್ದ ಬಾಲಕನನ್ನು ಕಾವ್ಯ ಹಾಗು ಸಾಹಿತ್ಯ ಪ್ರೇಮಿಯಾಗಿ ಬದಲಿಸುವಲ್ಲಿ ಸಹಕಾರಿಯಾಯಿತು. ಎಂಟು ವರ್ಷದವನಿದ್ದಾಗ ತಂದೆ ಅಪಘಾತದಲ್ಲಿ ಅಕಸ್ಮಾತ್ ಆಗಿ ತೀರಿಹೋದ. ಕೆಲವೇ ತಿಂಗಳಲ್ಲಿ ತಾಯಿ ಮರುಮದುವೆಯಾಗಿ ಮಕ್ಕಳನ್ನು ಅಜ್ಜ ಅಜ್ಜಿಯರಲ್ಲಿ ಬಿಟ್ಟಳು. ಆಮೇಲೆ ಐದು ವರ್ಷದ ನಂತರ ಅಸ್ವಸ್ಥಳಾಗಿ ಮಕ್ಕಳ ಬಳಿ ಮರಳಿದಳು. ಕೀಟ್ಸ್, ತಾಯಿಯ ಶುಶ್ರೂಷೆ ಮಾಡುತ್ತಾ ಪರಿಶ್ರಮದಿಂದ ಓದಿದ. ಆದರೆ ಶೀಘ್ರದಲ್ಲಿಯೇ ತಾಯಿಯೂ ತೀರಿಕೊಂಡಳು.

ಕೀಟ್ಸ್ ಕುಟುಂಬದ ಅನಾಥ ನಾಲ್ಕು ಮಕ್ಕಳು ಕಾನೂನಿನ ರೀತಿಯಲ್ಲಿ ಅಜ್ಜಿಯ ಪೋಷಣೆಯಲ್ಲಿ ಬೆಳೆದರು. ಆದರೆ ಅವರ ಪಿತ್ರಾರ್ಜಿತ ಆಸ್ತಿಯ ಹಕ್ಕನ್ನು ಪಡೆಯುವಲ್ಲಿ ವಿಫಲರಾದರು. ಹದಿನಾಲ್ಕು ವರ್ಷದ ಕೀಟ್ಸ್, ಶಾಲಾ ಶಿಕ್ಷಣ ಮುಗಿಸಿ ವೈದ್ಯಕೀಯ ತರಬೇತಿಗೆ ಭರ್ತಿಯಾದ. ಡಾ. ಥಾಮಸ್ ಹಮ್ಮೋನ್ಡ್ ಎನ್ನುವವರಲ್ಲಿ ರೋಗಲಕ್ಷಣ ಕಂಡುಹಿಡಿಯುವುದು, ಪರಿಹಾರ ಸೂಚಿಸುವುದು ಮತ್ತೆ ಸಣ್ಣಪುಟ್ಟ ಶಸ್ತ್ರಚಿಕಿತ್ಸೆಗಳ ಪಾಠ ಪಡೆದ. ಹಿರಿಯ ವೈದ್ಯರಿಂದ ಪ್ರಾಥಮಿಕ ಪಾಠ ಪಡೆದ ನಂತರ ಲಂಡನ್‌ನ ಆಸ್ಪತ್ರೆಯೊಂದರಲ್ಲಿ ವೈದ್ಯಕೀಯ ತರಬೇತಿ ಮುಂದುವರಿಸಿದ. ಅಧ್ಯಯನಶೀಲ ವಿದ್ಯಾರ್ಥಿಯಾಗಿದ್ದ ಕೀಟ್ಸ್ ತರಬೇತಿಯ ನಡುವೆ ಪ್ರಶಂಸೆ ಬಹುಮಾನಗಳನ್ನೂ ಪಡೆದಿದ್ದ. ಅರವಳಿಕೆ ಮತ್ತು ಸೂಕ್ಷ್ಮಾಣುನಾಶಕ ಔಷಧಗಳ ಬಳಕೆಗೆ ಬರುವ ಮೊದಲಿನ ಕಾಲದ ಯಾತನಾಮಯವಾದ ನರಳಿಕೆಯೇ ತುಂಬಿದ ಶಸ್ತ್ರಚಿಕಿತ್ಸೆಗಳನ್ನು ಹತ್ತಿರದಿಂದ ನೋಡಿದ್ದು ಮುಂದೆ ಅವನ ಕವಿತೆಗಳನ್ನು ಪ್ರಭಾವಿಸಿದವು ಎಂದು ಕೆಲವು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.

1816ರಲ್ಲಿ, ತನ್ನ ಇಪ್ಪತ್ತನೆಯ ವಯಸ್ಸಿನಲ್ಲಿ ವೈದ್ಯಕೀಯ ಪರೀಕ್ಷೆಯನ್ನು ಪಾಸಾದ. ಆದರೆ ವೈದ್ಯನಾಗಿ ಕೆಲಸ ಮಾಡುವುದಕ್ಕಿಂತ ಕವಿಯಾಗುವ ಬಗ್ಗೆ ಆಸಕ್ತಿ ಹೆಚ್ಚಿತ್ತು. ಲಂಡನ್ ಆಸ್ಪತ್ರೆಯಲ್ಲಿ ತರಬೇತಿ ಪಡೆಯುತ್ತಿದ್ದಾಗ ಲೀ ಹಂಟ್ ಎನ್ನುವ ಪ್ರಭಾವಿ ಪತ್ರಕರ್ತನನ್ನು ಭೇಟಿಯಾಗಿದ್ದ. ಮುಂದೆ ಅವರಿಬ್ಬರು ಆತ್ಮೀಯ ಸ್ನೇಹಿತರೂ ಆದರು. ಕೀಟ್ಸ್‌ನ ಮೊದಲ ಕವಿತೆ “ಟು ಸಾಲಿಟ್ಯೂಡ್”ಅನ್ನು, ಹಂಟ್ ತನ್ನ ಪತ್ರಿಕೆಯಲ್ಲಿ ಪ್ರಕಟಿಸಿದ್ದ. ಎರಡು ಆಸಕ್ತಿ ಆಯಾಮಗಳನ್ನು ಜೊತೆಜೊತೆಗೆ ನಿಭಾಯಿಸಲಾಗದೇ ವೈದ್ಯಕೀಯ ವೃತ್ತಿಯನ್ನು ತಿರಸ್ಕರಿಸಿ ಪೂರ್ಣಾವಧಿ ಬರಹಗಾರನಾಗುವ ನಿರ್ಧಾರ ತೆಗೆದುಕೊಂಡಾಗ ಮನೆಯ ಹಿರಿಯರು ಆಘಾತಕ್ಕೊಳಗಾದರೂ, ಕವಿತೆಯ ಕಾರಣಗಳಿಗೇ ಹೊಸ ಸಂಪರ್ಕಗಳು ಸ್ನೇಹಗಳು ಬೆಸೆದು ಕೀಟ್ಸ್‌ನಿಗೆ ಆರಂಭಿಕ ಸಮಾಧಾನ ನೀಡಿದವು. ಲಂಡನ್‌ನ ಹಾಂಪ್ಸ್ಟೆಡ್ ಪ್ರದೇಶದಲ್ಲಿ ಕೆಲವು ಬರಹಗಾರ, ಕಲಾವಿದರ ಪರಿಚಯ ಮನ್ನಣೆಯೂ ಸಿಕ್ಕಿತು.

ಕೀಟ್ಸ್‌ನ ಸಹೋದರರು ಕೂಡ 1817ರಲ್ಲಿ ಹೆಚ್ಚು ಆರೋಗ್ಯಕರ ಎನಿಸಿದ ಹಾಂಪ್ಸ್ಟೆಡ್ ಪ್ರದೇಶಕ್ಕೆ ಬಂದು ನೆಲೆಸಿದರು. ಲಂಡನ್ನಿನಿಂದ ಎಂಟು ಮೈಲು ಹೊರಗಿದ್ದ ಹಾಂಪ್ಸ್ಟೆಡ್, ಆ ಕಾಲದಲ್ಲಿ ಸಣ್ಣ ಹಳ್ಳಿಯಾಗಿತ್ತು. ಲಂಡನ್ನಿಗರು ಭೇಟಿಮಾಡಬಯಸುವ ವಿಶಾಲ ಪ್ರಶಾಂತ ಬಯಲು ಪ್ರದೇಶದ ಅಂಚಿನ ಜನಪ್ರಿಯ ಪ್ರವಾಸಿತಾಣವಾಗಿತ್ತು. ಆಸುಪಾಸಿನಲ್ಲಿ ಕೆಲವು ಸಾಹಿತಿಗಳೂ ವಾಸಿಸುತ್ತಿದ್ದುದು ಕೀಟ್ಸ್‌ನಿಗೆ ಹಾಂಪ್ಸ್ಟೆಡ್ ಇಷ್ಟ ಆಗಲು ಇನ್ನೊಂದು ಕಾರಣವಾಗಿತ್ತು. ಸ್ನೇಹಿತ ಲೀ ಹಂಟ್ ಕೂಡ ಅಲ್ಲೇ ವಾಸಿಸುತ್ತಿದ್ದ. 1818ರಲ್ಲಿ ಕೀಟ್ಸ್‌ನ ಒಬ್ಬ ಸೋದರ ತೀರಿಕೊಂಡ. ತನ್ನ ಸ್ನೇಹಿತರಿಗೆ ವಿಷಯ ತಿಳಿಸಲು ಜಾನ್ ಕೀಟ್ಸ್ ನಡೆದುಕೊಂಡೇ ಹೋಗಿದ್ದನಂತೆ. ಹಾಂಪ್ಸ್ಟೆಡ್‌ನ ವೆಂಟ್ವರ್ತ್ ಪ್ಲೇಸ್‌ನಲ್ಲಿ ವಾಸಿಸುತ್ತಿದ್ದ ಗೆಳೆಯ ಚಾರ್ಲ್ಸ್ ಬ್ರೌನ್ ಸುದ್ದಿ ತಿಳಿದ ಮೇಲೆ, ಕೀಟ್ಸ್‌ನನ್ನು ತನ್ನೊಡನೆಯೇ ಇರುವಂತೆ ಆಹ್ವಾನಿಸಿದ. ಕೀಟ್ಸ್, ಗೆಳೆಯನ ಮನೆಯಲ್ಲಿ ವಾಸಿಸಲಾರಂಭಿಸಿದ. 1820ರ ತನಕವೂ ವೆಂಟ್ವರ್ತ್ ಪ್ಲೇಸ್‌ನಲ್ಲಿಯೇ ಇದ್ದ. ಇಲ್ಲಿ ಇದ್ದ ಕಾಲದ ಓದು ಹಾಗು ನೆರೆಹೊರೆಯ ಶಾಂತ ಸುಂದರ ಪರಿಸರಗಳಿಂದ ಸ್ಪೂರ್ತಿ ಪಡೆದು ಈಗ ಪ್ರಸಿದ್ಧವಾಗಿರುವ “ಕೀಟ್ಸ್ ಕವಿತೆ”ಗಳನ್ನು ರಚಿಸಿದ್ದ. ಸೃಜನಶೀಲ ಸಾಹಿತ್ಯಕ ವರ್ತುಲದಲ್ಲಿ ಕೀಟ್ಸ್‌ನ ಬರವಣಿಗೆಗಳಿಗೆ ವಿಶೇಷ ಪ್ರೋತ್ಸಾಹ ಸಿಕ್ಕಿತ್ತು. ಫ್ಯಾನಿ ಬ್ರಾವ್ನ್ ಎಂಬಾಕೆಯನ್ನು ಪ್ರೀತಿಸಿದ್ದು ಕೂಡ ವೆಂಟ್‌ವರ್ತ್ ಪ್ಲೇಸ್ ಮನೆಯಲ್ಲಿದ್ದ ಕಾಲದಲ್ಲಿಯೇ.

ಫ್ಯಾನಿ ಹಾಗು ಕೀಟ್ಸ್ ಮೊದಲು ಭೇಟಿಯಾಗಿದ್ದು 1818ರಲ್ಲಿ. ಬ್ರಾವ್ನ್ ಕುಟುಂಬ ಸ್ಕಾಟ್ಲೆಂಡ್ ವಿಹಾರಕ್ಕೆಂದು ಕೀಟ್ಸ್ ಸ್ನೇಹಿತನ ಮನೆಯನ್ನು ಬೇಸಿಗೆಯಲ್ಲಿ ಬಾಡಿಗೆಗೆ ಪಡೆದಿತ್ತು. ಆಗ ಕೀಟ್ಸ್ ಮತ್ತವನ ಸ್ನೇಹಿತ ಕೂಡ ಅಲ್ಲೇ ಇದ್ದರು. ಮುಂದೆ ಬ್ರಾವ್ನ್ ಕುಟುಂಬ ಲಂಡನ್‌ನ ಕೀಟ್ಸ್ ಮನೆಯ ಪಕ್ಕವೇ ವಾಸಿಸಲಾರಂಭಿಸಿದರು. ಕೀಟ್ಸ್ ಹಾಗು ಬ್ರಾವ್ನ್‌ ನಡುವೆ ಇದ್ದುದು ಎರಡು ಮನೆಗಳ ನಡುವಿನ ಇಟ್ಟಿಗೆಯ ಗೋಡೆ ಮಾತ್ರ. ಇಬ್ಬರೂ ಪ್ರೀತಿಯಲ್ಲಿ ಸೆರೆಯಾದರು. ಅವರು ಮದುವೆಯಾಗುವುದೆಂದು ಎಂದು ನಿಶ್ಚಯಿಸಿದರೋ ಇಲ್ಲವೋ ಎನ್ನುವುದು ದಾಖಲಾಗಿಲ್ಲ, ಆದರೆ 1819 ಏಪ್ರಿಲ್ ಹಾಗು 1820 ಸೆಪ್ಟೆಂಬರ್ ನಡುವೆ ಕೀಟ್ಸ್ ಪ್ರೇಯಸಿಗೆ 39 ಪತ್ರಗಳನ್ನು ಬರೆದಿದ್ದ; ಪ್ರಣಯಕವಿಯ ನಿರಂತರ ಪ್ರೇಮನಿವೇದನೆಗಳು.

1819ರ ವಸಂತ ಹಾಗು ವೈಶಾಖಗಳು ಫ್ಯಾನಿಯ ಜೊತೆಗಿನ ಪ್ರೇಮಾಂಕುರವೂ ಸೇರಿ ಕವಿತೆಗಳು ಹುಲುಸಾಗಿ ಹೊರಹೊಮ್ಮಿದ ರಸಸಮಯ. ಆದರೆ ರಸನಿಮಿಷಗಳು ವಿಷಘಳಿಗೆಯಾಗಲು ಬಹಳ ಸಮಯವೇನೂ ತೆಗೆದುಕೊಳ್ಳಲಿಲ್ಲ. 1820ರ ಫೆಬ್ರವರಿಯಲ್ಲಿ ಕೀಟ್ಸ್ ಗಂಭೀರವಾಗಿ ಅಸ್ವಸ್ಥನಾದ, ಹಾಗಂತ ಫ್ಯಾನಿಗೆ ಪತ್ರ ಬರೆಯುವುದನ್ನು ಮುಂದುವರಿಸಿದ. ಮನಸ್ಸಿನ ಮೇಲೆ ಭಾರ ಹೆಚ್ಚಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದೆಂದು ವೈದ್ಯರು ಓದು ಬರವಣಿಗೆಗಳನ್ನು ನಿಲ್ಲಿಸಲು ಕೋರಿದ್ದರು. ಫ್ಯಾನಿಯನ್ನು ಕೀಟ್ಸ್ ಕೊನೆಯ ಬಾರಿ 1820ರ ಸೆಪ್ಟೆಂಬರ್‌ನಲ್ಲಿ ನೋಡಿದ್ದ. ನಂತರ ಇಟಲಿಯ ರೋಮ್‌ಗೆ ತೆರಳಿದ. ಆಕೆ ಅವನ ಲಂಡನ್ ಮನೆಯಲ್ಲಿಯೇ 1831ರ ತನಕ ವಾಸಿಸಿದಳು.

ಕೀಟ್ಸ್ ಆಂಗ್ಲ ಭಾಷೆಯ ಕೆಲವು ಅತ್ಯುತ್ತಮ ಕವನಗಳನ್ನು 1818ರ ಸೆಪ್ಟೆಂಬರ್ ಹಾಗು 1819ರ ಸೆಪ್ಟೆಂಬರ್ ನಡುವೆ ಬರೆದ, 23 ವರ್ಷದವನಾಗಿದ್ದಾಗ. ಕೌಟುಂಬಿಕ ದುರಂತಗಳು ಘಟಿಸುತ್ತಿರುವಾಗಲೂ, ಹಣಕಾಸಿನ ಸಮಸ್ಯೆ ಕಾಡುತ್ತಿದ್ದಾಗಲೂ, ಸಾಹಿತ್ಯ ವಿಮರ್ಶೆಗಳು ಅಣಕಿಸುತ್ತಿದ್ದಾಗಲೂ ಮಹಾನ್ ಪದ್ಯ “ಹೈಪೆರಿಯೋನ್” ಅನ್ನು ಬರೆಯಲಾರಂಭಿಸಿದ, ಪರಿಷ್ಕರಿಸಿದ. ಎರಡು ದೀರ್ಘ ಕಥನ ಕಾವ್ಯಗಳನ್ನು, ಸುನೀತಗಳನ್ನು, ಲಾವಣಿಯನ್ನು, ಒಂದು ನಾಟಕವನ್ನು ಮತ್ತೆ ಆರು ಅಪ್ರತಿಮ ಭಾವಗೀತೆಗಳನ್ನು ಬರೆದ.

ಅರವಳಿಕೆ ಮತ್ತು ಸೂಕ್ಷ್ಮಾಣುನಾಶಕ ಔಷಧಗಳ ಬಳಕೆಗೆ ಬರುವ ಮೊದಲಿನ ಕಾಲದ ಯಾತನಾಮಯವಾದ ನರಳಿಕೆಯೇ ತುಂಬಿದ ಶಸ್ತ್ರಚಿಕಿತ್ಸೆಗಳನ್ನು ಹತ್ತಿರದಿಂದ ನೋಡಿದ್ದು ಮುಂದೆ ಅವನ ಕವಿತೆಗಳನ್ನು ಪ್ರಭಾವಿಸಿದವು ಎಂದು ಕೆಲವು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ.

ಸಹೋದರನನ್ನು ಕಳೆದುಕೊಂಡ ಶೋಕ ದುಮ್ಮಾನ ಒಂದು ಕಡೆ, ಹೊಸ ಸ್ನೇಹ ಪ್ರೇಮಾಂಕುರಗಳ ಜೀವಸೆಲೆ ಇನ್ನೊಂದೆಡೆ, ಅವನ ಕವಿತೆಗಳು ಆ ಇಡೀ ವರ್ಷ ನೋವು ನಲಿವುಗಳ, ಖಿನ್ನತೆ ಉತ್ಸಾಹಗಳ ಉಯ್ಯಾಲೆಯಲ್ಲಿ ತೂಗಿ ತೇಲಿದವು. ವಾಸ್ತವದಲ್ಲಿ ಹರುಷ ಹಾಗು ವ್ಯಥೆಗಳು ಜೊತೆಜೊತೆಗೆ ಬದುಕಿ ಸಾಗುವುದನ್ನು ಪ್ರದರ್ಶಿಸಿದವು. ಬೇರೆಬೇರೆ ವಸ್ತುಗಳ ಪದ್ಯಗಳನ್ನು ಬೇರೆಬೇರೆ ಛಂಧಸ್ಸಿನಲ್ಲಿ ಬರೆಯುವ ಕೌಶಲ ಆತನಿಗಿತ್ತು. ಅವನ ಎಲ್ಲ ಕವಿತೆಗಳೂ ಪ್ರಕೃತಿಪ್ರೇಮ ಜೀವನಪ್ರೀತಿ ಮತ್ತೆ ಮನುಷ್ಯ ಕಲ್ಪನೆಯಲ್ಲಿ ಇದ್ದ ನಂಬಿಕೆಯನ್ನು ತೋರಿಸಿದವು. ಬದುಕಿನಲ್ಲಿ ಎಲ್ಲವೂ ನಶಿಸುವಾಗಲೂ ಯಾವುದೊ ಒಂದು ಚೆಲುವು ಉಳಿದಿರುತ್ತದೆ ಎನ್ನುವ ಕಲ್ಪನೆಯನ್ನು ತನ್ನ ಕವಿತೆಗಳಲ್ಲಿ “ಕೇಡುಬುದ್ಧಿಯ ಕನ್ಯೆ”ಯ ಮೂಲಕ ಅಥವಾ “ನೈಟಿಂಗೇಲ್‌ನ ಮಧುರ ಹಾಡಿನ” ಮೂಲಕ ಸ್ಥಾಪಿಸಿದನು. 1817 ಹಾಗು 1819ರ ನಡುವೆ ಕೀಟ್ಸ್ ಬರೆದ ಹಾಡುಗಳನ್ನು ಆ ಕಾಲದ ಸಂಪ್ರದಾಯಸ್ಥರು ಟೀಕಿಸಿದರು. ಲೀ ಹಂಟ್‌ನ ಮಿತ್ರನಾದ ಕಾರಣ ಅವನನ್ನು “ಕೋಕ್ನೆ ಪೊಯೆಟ್” ಎಂದೂ ಕರೆದರು. ಲಂಡನ್ ಕಡೆಯ ರೋಮ್ಯಾಂಟಿಕ್ ಕವಿಗಳಿಗೆ ಹೀಗೆ ಹೆಸರಿಟ್ಟು ತಮಾಷೆ ಮಾಡಿದ ಉದಾಹರಣೆಗಳಿವೆ.

ಕೀಟ್ಸ್ ಜೀವಿತಾವಧಿಯಲ್ಲಿ ಪ್ರಕಟಿಸಿದ್ದು ಮೂರೇ ಕವನ ಸಂಕಲನಗಳನ್ನು. ಮೊದಲ ಸಂಕಲನ “ಪೊಯೆಮ್ಸ್” 1817ರಲ್ಲಿ ಗಮನ ಸೆಳೆಯದೆ ಹೋಯಿತು, ಮುಂದಿನ ಸಂಕಲನ “ಎಂಡಿಮಿಯನ್” ಅನ್ನು ಮತ್ತು ಬರೆದ ಕವಿಯನ್ನು ವಿಮರ್ಶೆಗಳು ತೀವ್ರವಾಗಿ ದಾಳಿ ಮಾಡಿದವು. ಒಬ್ಬ ವಿಮರ್ಶಕನಂತೂ ಕೀಟ್ಸ್‌ನ ಹಿನ್ನೆಲೆಯ ವ್ಯಕ್ತಿ ಇಂತಹ ವಸ್ತುಗಳ ಮೇಲೆ ಕವಿತೆ ಬರೆಯಬಹುದೋ ಎಂದು ಪ್ರಶ್ನಿಸಿ, ಕವಿತೆ ಬರೆಯುವುದನ್ನೇ ಬಿಡಬೇಕೆಂದೂ ಕಡ್ಡಾಯವಾಗಿ ಆಗ್ರಹಿಸಿದ್ದ.

ಇನ್ನು ಕೊನೆಯ ಪುಸ್ತಕ “ಲಾಮಿಯಾ ಇಸಾಬೆಲ್ಲಾ, ದಿ ಈವ್ ಆಫ್ ಆಗ್ನೆಸ್ ಅಂಡ್ ಅಥರ್ಸ್” 1820ರಲ್ಲಿ ಪ್ರಕಟವಾದಾಗ ಸ್ವಲ್ಪ ಉತ್ತೇಜಕ ಪ್ರತಿಕ್ರಿಯೆ ಬಂದಿತ್ತು. ಗೌರವಾನ್ವಿತ ಪತ್ರಿಕೆ “ಎಡಿನ್ಬರ್ಗ್ ರಿವ್ಯೂ” ಸಂಕಲನದ ಕಲ್ಪನಾ ಶಕ್ತಿಯನ್ನು, ಅಭಿವ್ಯಕ್ತಿ ಸೌಂದರ್ಯವನ್ನು ಪ್ರಶಂಶಿಸಿತ್ತು. “ನ್ಯೂ ಟೈಮ್ಸ್” ಪತ್ರಿಕೆ ಕೀಟ್ಸ್‌ನನ್ನ ಡಾಂಟೆ, ಚೌಸೆರ್ ಹಾಗು ಸ್ಪೆನ್ಸರ್‌ರಂತಹ ಪ್ರಸಿದ್ಧರಿಗೆ ಹೋಲಿಸಿತ್ತು.

ಕೊನೆಯ ಪುಸ್ತಕ 1819ರಲ್ಲಿ ಬರೆದ ಅನೇಕ ಕವಿತೆಗಳನ್ನು ಒಳಗೊಂಡಿತ್ತು ಮತ್ತದು ಈ ತನಕ ಪ್ರಕಟವಾದ ಅತ್ಯಂತ ಸತ್ವಯುತ ಕವನ ಸಂಕಲನ ಎಂದೂ ಈ ಕಾಲದ ಕೆಲವು ವಿಮರ್ಶಕರಿಂದ ಕರೆಯಲ್ಪಡುತ್ತದೆ. ಭವಿಷ್ಯದಲ್ಲಿ ಆ ಕವಿತೆಗಳು ಅಸಂಖ್ಯ ಓದುಗರಿಗೆ ನೀಡಿದ ಸುಖಮುದಗಳ ಕಲ್ಪನೆ ದುರಾದೃಷ್ಟವಷಾತ್ ಕೀಟ್ಸ್‌ನಿಗೆ ಇರಲಿಲ್ಲ. ಆಗಿನ ಹೆಚ್ಚಿನ ವಿಮರ್ಶೆಗಳು ಉತ್ತೇಜಕವಾಗಿರದೆ ಜನಪ್ರಿಯತೆಯನ್ನೂ ತಂದಿರಲಿಲ್ಲ. ಮತ್ತೆ ಕ್ಷಯರೋಗ ಬಾಧೆಯಿಂದ 1820ರ ನಂತರ ಯಾವ ಕವಿತೆಯನ್ನೂ ಬರೆಯಲಿಲ್ಲ. ಕೀಟ್ಸ್‌ಗೆ ಟಿ.ಬಿ. ಇರುವುದು ಗೊತ್ತಾಗಿದ್ದು 1820ರಲ್ಲಿ. ಸರಿಯಾದ ಕಾರಣ ಗೊತ್ತಿಲ್ಲದಿದ್ದರೂ ಬಹಳ ಜನರು ಅದು ಆನುವಂಶಿಕ ಎಂದು ನಂಬಿದ್ದರು. ಇನ್ನು ಕೆಲವರು ಸೂಕ್ಷ್ಮ ಮತ್ತು ಸೃಜನಶೀಲ ವ್ಯಕ್ತಿಗಳನ್ನು ಟಿ.ಬಿ. ಕಾಯಿಲೆ ಕಾಡುತ್ತದೆ ಎಂದೂ ತಿಳಿದಿದ್ದರು. ಬಹುಷಃ ಕೀಟ್ಸ್ ಟಿ.ಬಿ. ಬಾಧಿತ ತಮ್ಮನನ್ನು ಆರೈಕೆ ಮಾಡುತ್ತಿರುವಾಗಲೇ ಸೋಂಕು ತಗುಲಿಸಿಕೊಂಡಿರಬಹುದು. ಆದರೆ ರೋಗ 1819ರಲ್ಲಿ ಕಾಣಿಸಿಕೊಳ್ಳದೆ ಪ್ರತಿಭಾನ್ವಿತ ಕವಿತೆಗಳು ಹೊಮ್ಮುವ ಅವಕಾಶವನ್ನು ಒದಗಿಸಿಕೊಟ್ಟಿದ್ದವು. 1820ರ ಫೆಬ್ರವರಿಯಿಂದ ಆರೋಗ್ಯ ಕ್ಷೀಣಿಸಲು ಶುರು ಆಗಿ ಭವಿಷ್ಯದ ಸಾಹಿತ್ಯಕ ಯಶಸ್ಸಿನ ಆಶಾವಾದ ನಾಶವಾಯಿತು.

ಅನಾರೋಗ್ಯ ಮೊದಲು ಕಾಣಿಸಿಕೊಂಡಾಗ ವಿಶ್ರಾಂತಿಯನ್ನು ಸೂಚಿಸಲಾಗಿತ್ತು, ಉಪವಾಸ, ರಕ್ತಸ್ರಾವನ್ನು ಮಾಡಿಸಿದ್ದು ದೈಹಿಕವಾಗಿ ಇನ್ನೂ ದುರ್ಬಲನಾಗುವಂತೆ ಆಯಿತು. ಓದು ಬರಹಗಳು ಉದ್ರೇಕಿಸಬಹುದು ಎನ್ನುವ ಕಾರಣಕ್ಕೆ ನಿಷೇಧ ಮಾಡಲಾಗಿತ್ತು. ಅಂದಿನ ಸಾಮಾನ್ಯ ಪದ್ಧತಿಯಂತೆ ಕೀಟ್ಸ್‌ನಿಗೂ ಚಳಿಯ ಇಂಗ್ಲೆಂಡ್‌ನಿಂದ ಬೆಚ್ಚಗಿರುವ ನೆರೆಯ ದೇಶಕ್ಕೆ ಹೋಗುವ ಸಲಹೆ ನೀಡಲಾಗಿತ್ತು. 1820ರ ಸೆಪ್ಟೆಂಬರ್‌ನಲ್ಲಿ ಕೀಟ್ಸ್ ಇಟಲಿಗೆ ಜಲಯಾನ ಮಾಡಿದ, ಚಳಿಗಾಲವನ್ನು ಬೆಚ್ಚನೆಯ ಊರಿನಲ್ಲಿ ಕಳೆಯುವ ಉದ್ದೇಶದಿಂದ. ಗೆಳೆಯ ಚಿತ್ರಕಾರ ಜೋಸೆಫ್ ಸೇವೆರ್ನ್ ಇಟಲಿ ಪ್ರಯಾಣದಲ್ಲಿ ಜೊತೆಗಿದ್ದ. ಹಡಗು ನಿಧಾನವಾಗಿ ಎಂಗ್ಲ್ಸಿಹ್ ಕಾಲುವೆಯನ್ನು ದಾಟಿತು. ರೌದ್ರ ಮಾರುತಗಳ ನಡುವೆ ಯಾತ್ರಿಗಳು ಸಮುದ್ರ ಪ್ರಯಾಣದ ಅಸ್ವಾಸ್ಥ್ಯವನ್ನು ಅನುಭವಿಸಬೇಕಾಯಿತು. ದಾರಿಯಲ್ಲೇ ಕೀಟ್ಸ್‌ನಿಗೆ ಮೆದುಳು ಆಘಾತವಾಯಿತು, ಜ್ವರ ಬಂದಿತು. ಅಕ್ಟೋಬರ್ 21ರಂದು ಅಂತೂ ಇಟಲಿಯ ನೇಪಲ್ಸ್ ಪ್ರಾಂತ್ಯದ ದಡವನ್ನು ಸೇರಿದಾಗ ಬಲವಂತವಾಗಿ ಹಡಗಿನ ಮೇಲೆಯೇ “ಸಂಪರ್ಕನಿಷೇಧ ವಾಸ” ಮಾಡಬೇಕಾಯಿತು. ಲಂಡನ್ ಅನ್ನು ಬಿಟ್ಟು ಆರು ವಾರಗಳಿಗಿಂತಲೂ ತಡವಾಗಿ ಅಕ್ಟೋಬರ್ 31ರಂದು ಇಟಲಿಯ ವಾಸ್ತವ್ಯವನ್ನು ದುರ್ಬಲ ಕೃಶ ಕೀಟ್ಸ್ ತಲುಪಿದ್ದ. ಅಂದು ಕೀಟ್ಸ್‌ನ 25ನೆಯ ಹುಟ್ಟು ಹಬ್ಬ. ಅಲ್ಲಿಂದ ಮುಂದೆ ಹೆಚ್ಚು ಕಾಲ ಬದುಕಲಾಗದೆ 1821ರ ಫೆಬ್ರವರಿ 23ರಂದು ಕೀಟ್ಸ್ ರೋಮ್‌ನಲ್ಲಿ ನಿಧನನಾದ. ನಾಲ್ಕು ದಿನಗಳ ನಂತರ ಮೃತಕವಿಯನ್ನು ಹೂಳಲಾಯಿತು. ಅವನದೇ ಸಾಲುಗಳನ್ನು ಸಮಾಧಿಯ ಮೇಲೆ ನಂತರ ಕೊರೆಯಲಾಯಿತು “ಇಲ್ಲಿದ್ದಾನೆ ನೀರಿನಲ್ಲಿ ಹೆಸರು ಕೆತ್ತಲಾದವನು”. ಮಹಾಕವಿಯಾಗುವ ಮಹತ್ವಾಕಾಂಕ್ಷೆಯಲ್ಲಿ ತಾನು ಸೋತೆ ಎಂದು ನಂಬಿದ್ದ ಕೀಟ್ಸ್ ಆ ಸಾಲನ್ನು ಹಿಂದೆಂದೋ ಹೇಳಿದ್ದ.

ಕೀಟ್ಸ್ ಜೀವಿತಾವಧಿಯಲ್ಲಿ ಪ್ರಕಟಿಸಿದ ಮೂರು ಪುಸ್ತಕಗಳ ಜೊತೆ ಯಥೇಚ್ಛವಾಗಿ ಪತ್ರಗಳನ್ನು ಬರೆದಿದ್ದ. ಅವುಗಳಲ್ಲಿ ಹೆಚ್ಚಿನವು ಅಂದಿನ ಜೀವನ ಮತ್ತು ಸಮಾಜದ ಬಗೆಗಿನ ಇಣುಕುನೋಟಗಳನ್ನು ಒದಗಿಸಲು ಇಂದಿಗೂ ಬದುಕುಳಿದಿವೆ. ಮಡಿದಾಗ ಸ್ನೇಹಿತರ ಮತ್ತೆ ಕೆಲವು ಬರಹಗಾರರ ಆವರಣದ ಹೊರಗೆ ಅವನ ಬರಹಗಳ ಪರಿಚಯ ಅಷ್ಟಾಗಿ ಇರಲಿಲ್ಲ. ಹಾಗಂತ ಆ ಎಲ್ಲ ಹಿತಚಿಂತಕ ಸ್ನೇಹಿತರ ಪ್ರೀತಿ ಮತ್ತು ಶ್ರದ್ಧೆಯ ಕಾರಣಕ್ಕೇ ಕವಿತೆಗಳ ಕರಡುಪ್ರತಿಗಳು ಇಂದಿಗೂ ಉಳಿದಿವೆ.

“ಸದ್ಯದಲ್ಲಿಯೇ ಶಾಂತ ಸಮಾಧಿಯನ್ನು ಸೇರಲಿರುವೆ
ಧನ್ಯವಾದ ದೇವರೇ ಈ ಶಾಂತ ಸಮಾಧಿಗೆ
ಓಹ್! ಅನುಭವಕ್ಕೆ ಬರುತ್ತಿವೆ ತಣ್ಣನೆಯ ಮಣ್ಣು ನನ್ನಮೇಲೆ
ಬೆಳೆಯಲಿರುವ ಹೂಲತೆಗಳು ಮೈಮೇಲೆ
ಈ ನಿಶ್ಯಬ್ದಕ್ಕೊಂದು ಓಹ್
ಇದು ನನ್ನ ಮೊದಲನೆಯದು”

ಹೀಗೆಂದು ಕೀಟ್ಸ್ ಸಾವಿಗೆ ಸಮೀಪ ಇರುವಾಗ ಹೇಳಿದ ಒಕ್ಕಣೆಯನ್ನು ಅವನ ಇಬ್ಬರ ಸ್ನೇಹಿತರು ತಮ್ಮ ನಡುವಿನ ಪತ್ರ ವ್ಯವಹಾರದಲ್ಲಿ ಬಳಸಿಕೊಂಡಿದ್ದರು. ಕೀಟ್ಸ್‌ನ ಮೊದಲ ಆತ್ಮಕಥನ 1848ರಲ್ಲಿ ಪ್ರಕಟವಾದ ನಂತರ ಇಂಗ್ಲೆಂಡ್ ನ ಚಿತ್ರಕಾರರು ಅವನ ಕವಿತೆಗಳ ಬಗ್ಗೆ ಆಸಕ್ತಿ ತಾಳಿದರು. ಕೀಟ್ಸ್‌ನ ಇಂದ್ರೀಯಗಮ್ಯ ಕಲ್ಪನೆಗಳು ಕಲಾವಿದರ ಚಿತ್ರಗಳ ಮೂಲಕ ಕವಿತೆಯ ಭಾವಾನುವಾದವಾಗಿ ವಿಸ್ತೃತ ಓದುಗರನ್ನು ತಲುಪಿದವು. 1880ರ ಹೊತ್ತಿಗೆ ಕೀಟ್ಸ್ ಕವನಗಳು ಜನಪ್ರಿಯವಾದವು, ಕವಿಯ ಹಾಂಪ್ಸ್ಟೆಡ್ ಮನೆಯನ್ನು ಕೆಲವರು ಹುಡುಕಲು ಆರಂಭಿಸಿದರು. ಹಾಂಪ್ಸ್ಟೆಡ್ ಮನೆಯ ಗೋಡೆಯ ಮೇಲೆ 1896ರಲ್ಲಿ ಸ್ಮರಣೆಯ ಫಲಕವನ್ನು ನೆಡಲಾಯಿತು; ಸಂಗ್ರಹಾಲಯವಾಗಿ ಕಾಪಿಡಲಾಯಿತು. 1920ರಲ್ಲಿ ಕವಿಮನೆಯನ್ನು ಕೆಡಹುವ ಅಪಾಯವನ್ನು ಮನೆಯ ಸಂಸ್ಮರಣಾ ನಿಧಿಯ ಹೆಸರಲ್ಲಿ ಒಟ್ಟಾದ ದೇಣಿಗೆಯನ್ನು ಬಳಸಿ ನಿವಾರಿಸಲಾಯಿತು. 1925ರ ಮೇ ತಿಂಗಳಿನಲ್ಲಿ ಕೀಟ್ಸ್ ಮನೆ ಸಾರ್ವಜನಿಕ ಭೇಟಿಗಾಗಿ ತೆರೆಯಿತು. ಲಂಡನ್ ನಗರ ಕಾರ್ಪೊರೇಷನ್‌ನ ಮೇಲ್ವಿಚಾರಣೆಯಲ್ಲಿ ಕವಿವಾಸ ಲಂಡನ್‌ ಮಾತ್ರವಲ್ಲದೆ ಯುನೈಟೆಡ್ ಕಿಂಗ್ಡಮ್‌ನ ಸಾಂಸ್ಕೃತಿಕ ಚರಿತ್ರೆಯ ಭಾಗವೂ ಆಗಿ ಉಳಿದಿದೆ.


ಸಾಹಿತ್ಯದ ರುಚಿ ಬಣ್ಣ ವಾಸನೆಗಳು ಕಳೆದ ಎರಡು ಶತಮಾನಗಳಲ್ಲಿ ಮತ್ತೆ ಮತ್ತೆ ಬದಲಾವಣೆ ಆಗಿದ್ದರೂ ಕೀಟ್ಸ್ ಕವಿತೆಗಳು ಈಗಲೂ ತಾಜಾ ಮತ್ತು ಅರ್ಥಪೂರ್ಣವಾಗಿ ಮಂದಹಾಸ ಬೀರುತ್ತಿವೆ; ತುಂಬುಪ್ರೇಮಿಗಳ ಭಗ್ನಹೃದಯಿಗಳ ಎದೆಯಲ್ಲಿ ಮಿಂಚು, ಕಿಚ್ಚು ಇಡುತ್ತಿವೆ. ಬದುಕು ಹೃಸ್ವ ಎನ್ನುವ ಪಾರಮಾರ್ಥಿಕ ನುಡಿಯನ್ನು ಅಕ್ಷರಶಃ ಪಾಲಿಸಿ ಪ್ರದರ್ಶಿಸಿ ಹೊರಟುಹೋದರೂ ಹುಟ್ಟಿಸಿದ ಕಲ್ಪನೆಗಳು ಸೃಜಿಸಿದ ಕವನಗಳು ಇಂಗ್ಲಿಷ್ ಭಾಷೆಯಲ್ಲಿ ದೀರ್ಘಕಾಲೀನವಾಗಿ ನಲಿದು ಕುಣಿಯುತ್ತಿವೆ. ನೀರಿನಲ್ಲಿ ಬರೆಯಲಾದ ಹೆಸರಿನಷ್ಟು ಅಲ್ಪಾಯುಷಿ ನಶ್ವರ ತನ್ನ ಕಾವ್ಯ ಎಂದು ಹತಾಶೆಯಲ್ಲಿ ಮರೆಯಾದವನನ್ನು ಸಾರ್ವಕಾಲಿಕ ಅತ್ಯುತ್ತಮ ಕವಿಗಳ ಸಾಲಿನಲ್ಲಿ ಸೇರಿಸಿದೆ.

(೨೦೧೮ರಲ್ಲಿ ಕೀಟ್ಸ್ ಕವಿಯ ಕುರಿತಾಗಿ ಕೆಂಡಸಂಪಿಗೆಯಲ್ಲಿ ಬರೆದಿದ್ದ ಅಂಕಣಬರಹ ಸಹಓದಿಗೆ)