ನಮ್ಮಲ್ಲಿಯ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನಡುವಣ ಸಂಬಂಧಕ್ಕಿಂತ ಇಲ್ಲಿ ಕಾಣುವ ಅದೇ ಸಂಬಂಧ ತೀರಾ ವಿಭಿನ್ನ, ಕ್ಯಾಶುಯಲ್. ಹಾಗೆಂದು ಅಗೌರವ ತೋರುತ್ತಾರೆಂದೇನೂ ಅಲ್ಲ. ಇಲ್ಲಿನ ಶಿಕ್ಷಣದ ವಿಧಾನವೇ ಪೂರ್ತಿ ಬೇರೆ. ಶಿಕ್ಷಣದ ಸಿದ್ಧಾಂತವೂ ಬೇರೆ. ಅನುಭವ ಆಧಾರಿತ ಶಿಕ್ಷಣ. ಮಕ್ಕಳಿಗೆ ಹೇಳಿಕೊಟ್ಟು ಗಿಳಿಪಾಠ ಮಾಡಿಸಿ ಕಲಿಸುವುದಕ್ಕಿಂತ ಅವರೇ ಅನುಭವದ ಮೂಲಕ ಕಲಿಯುವಂತೆ ಪ್ರೇರೇಪಿಸುತ್ತಾರೆ. ಮಕ್ಕಳ ತೀರಾ ಚಿಕ್ಕ ಸಾಧನೆಯನ್ನೂ ದೊಡ್ಡದೆಂಬಂತೆ ಮಾಡಿ ಅವರನ್ನು ಪ್ರೋತ್ಸಾಹಿಸುತ್ತಾರೆ. ಆವಿಷ್ಕಾರದ ಕಡೆಗೆ ಅವರನ್ನು ಪ್ರೋತ್ಸಾಹಿಸುತ್ತಾರೆ. ಉತ್ಸಾಹಕ್ಕೆ ತಣ್ಣೀರೆರೆಚುವಿಕೆ ಯಾವತ್ತೂ ಇಲ್ಲ.
ಸೀಮಾ ಎಸ್. ಹೆಗಡೆ ಬರೆಯುವ ಆ್ಯಮ್ಸ್ಟರ್ ಡ್ಯಾಮ್ ಪತ್ರ.

ಸಪ್ಟೆಂಬರ್ ತಿಂಗಳು ಮುಗಿದೇ ಹೋಯಿತು. ಅಕ್ಟೋಬರ್ ಕೂಡ  ಮುಗಿಯುತ್ತಾ ಬಂತು. ಶಿಕ್ಷಕರ ದಿನ ಆಸುಪಾಸಿನಲ್ಲಿರುವಾಗಲೇ ಆ ಬಗ್ಗೆ ಬರೆಯೋಣವೆಂದುಕೊಂಡಿದ್ದೆ, ಆದರೆ ಏನೇನೋ ಜಂಜಾಟಗಳ ನಡುವೆ ಸಾಧ್ಯವಾಗಲೇ ಇಲ್ಲ. ಪ್ರಪಂಚದ ಎಲ್ಲೆಡೆ ಶಿಕ್ಷಕರನ್ನು ಗೌರವದಿಂದ, ಆದರದಿಂದ ಕಾಣುವ ಸಂಸ್ಕೃತಿ ಇದ್ದೇ ಇದೆ. ಭಾರತದಲ್ಲಂತೂ ಅದು ಪುರಾಣಗಳ ಕಾಲದಿಂದಲೂ ಇದೆ. ದುರದೃಷ್ಟವಶಾತ್ ಇತ್ತೀಚಿಗೆ ಶಿಕ್ಷಕರನ್ನು ಮಕ್ಕಳು ಕಡೆಗಣಿಸುವುದನ್ನು ಅಲ್ಲಲ್ಲಿ ಕಾಣುತ್ತೇವೆ.

ನಾನೂ ಕೆಲವರ್ಷಗಳ ಕಾಲ ಕಾಲೇಜೊಂದರಲ್ಲಿ ಶಿಕ್ಷಕಿಯಾಗಿ ಸೇವೆಸಲ್ಲಿಸಿದ್ದೇನೆ. ಮೊನ್ನೆ ಕಳೆದ ಶಿಕ್ಷಕರ ದಿನದಂದು ನನ್ನ ಕೆಲವು ಹಳೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಫೇಸ್ ಬುಕ್ ನಲ್ಲಿ ಮೆಸೇಜ್ ಮಾಡಿ ಶುಭಾಶಯ ಕೋರಿದ್ದರು. ತುಂಬಾ ಖುಷಿಯಾಯಿತು. ನನ್ನ ಹಲವಾರು ವಿದ್ಯಾರ್ಥಿಗಳು ಇಂದೂ ಕೂಡ ನನ್ನ ಸಂಪರ್ಕದಲ್ಲಿದ್ದಾರೆ. ಆದರೆ ಈ ಬಾರಿ ಕೆಲವು ವಿದ್ಯಾರ್ಥಿಗಳು ಮೊಟ್ಟಮೊದಲಬಾರಿಗೆ ಶುಭಾಶಯ ಕೋರಿದ್ದು ಹೆಚ್ಚಿನ ಸಂತೋಷ ಕೊಟ್ಟಿತ್ತು!

ನನಗಂತೂ ಪ್ರತೀ ವರ್ಷ ಸೆಪ್ಟೆಂಬರ್ 5 ಬಂತೆಂದರೆ ಬಾಲ್ಯದಲ್ಲಿ ಕಲಿಸಿದ ಎಷ್ಟೆಲ್ಲಾ ಶಿಕ್ಷಕ ಶಿಕ್ಷಕಿಯರ ನೆನಪು. ಅಪ್ಪ, ಅಮ್ಮನನ್ನು ಹೊರತುಪಡಿಸಿ ನನ್ನ ಬಾಲ್ಯದ ಮೊಟ್ಟಮೊದಲ ಗುರುವೆಂದರೆ ಶ್ರೀ ಎಂ ಕೆ ನಾಯ್ಕರು. ಅವರನ್ನು ನೆನಪಿಸಿಕೊಳ್ಳಲೇಬೇಕು! ಅವರ ಊರು ಮಳಲಗಾಂವ್; ಅಲ್ಲಿಂದ ನಮ್ಮೂರು ಹುಡೇಲಕೊಪ್ಪದ ಶಾಲೆಗೆ ದಿನಾಲೂ ಸೈಕಲ್ ನಲ್ಲಿ ಬರುತ್ತಿದ್ದರು. ತೆಳ್ಳಗಿನ ಜೀವ. ಅವರ ಊರಿಂದ ನಮ್ಮೂರಿನ ಶಾಲೆಗೆ ಸುಮಾರು ಮೂರೂವರೆ ಕಿಲೋಮೀಟರುಗಳಷ್ಟು ದೂರ. ನಾನು ಶಾಲೆಗೆ ಹೋಗಲು ಆರಂಭಿಸಿದ ಮೊದಲ ಕೆಲವರ್ಷಗಳು ಅವರೇ ನನ್ನನ್ನು ತಮ್ಮ ಜೊತೆ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದರು, ಹಿಂದಿರುಗಿ ಕರೆತರುತ್ತಿದ್ದರು. ಏಕೆಂದರೆ ನಮ್ಮ ಮನೆಯಿಂದ ಶಾಲೆಗೆ ಸುಮಾರು ಒಂದೂವರೆ ಕಿಲೋಮೀಟರುಗಳಷ್ಟು ದೂರ. ನನಗಾಗ ಆರು ವರ್ಷ. ಒಂದನೇ ಇಯತ್ತೆ. ಶಾಲೆಗೆ ಹೋಗಲು ಎರಡು ದಾರಿಗಳು- ಕಾಡಿನ ದಾರಿಯಲ್ಲಿ ಒಬ್ಬಳೇ ಹೋಗಲು ನನಗೆ ಭಯ; ವಾಹನಗಳು ಓಡಾಡುವ ರಸ್ತೆಯಲ್ಲಿ ಒಬ್ಬಳನ್ನೇ ಕಳುಹಿಸಲು ಅಪ್ಪ ಅಮ್ಮನಿಗೆ ಭಯ! ಅದಲ್ಲದೇ ಅವರಿಗೆ ಮನೆಯ ಕೆಲಸವಿದ್ದುದ್ದರಿಂದ ನನ್ನನ್ನು ಶಾಲೆಗೆ ಕಳುಹಿಸಲು, ಕರೆಯಲು ಬರಲು ಪುರಸೊತ್ತೇ ಇರಲಿಲ್ಲ. ಆದ್ದರಿಂದ ಅಪ್ಪ ನನ್ನ ಮಾಸ್ತರ ಬಳಿ ಮಾತನಾಡಿದರು. ಅವರು ಎರಡು ವಿಚಾರ ಸಹ ಮಾಡದೇ ನನ್ನನ್ನು ಕರೆದುಕೊಂಡು ಹೋಗಲು ಒಪ್ಪಿದರು.

(ಅಕ್ಟೋಬರ್ 5 ರಂದು ಮಕ್ಕಳೆಲ್ಲ ಸೇರಿ ಶಿಕ್ಷಕಿಗಿತ್ತ ಹೂಗಳು)

ಅಮ್ಮ ಬೆಳಿಗ್ಗೆ ನನ್ನನ್ನು ತಯಾರು ಮಾಡಿ ಗೇಟಿನ ಬಳಿ ನಿಲ್ಲಿಸಿರುತ್ತಿದ್ದಳು. ಮಾಸ್ತರು ತಮ್ಮ ಹರ್ಕ್ಯುಲಿಸ್ ಸೈಕಲ್ ನಲ್ಲಿ ಬಂದವರೇ ಟ್ರಿಣ್ ಟ್ರಿಣ್ ಎಂದು ಬೆಲ್ ಮಾಡುತ್ತಿದ್ದರು. ನಮ್ಮ ಮನೆಯ ಗೇಟಿನಿಂದ ಅವರು ನಿಂತ ರಸ್ತೆಗೆ ಸುಮಾರು 200 ಮೀಟರ್ ಗಳಷ್ಟು ದೂರ, ಗುಡ್ಡ. ನಾನು ಅವರ ಸೈಕಲ್ ಕಂಡು ಬೆಲ್ ಕೇಳಿದೊಡನೆಯೇ ಗುಡ್ಡ ಹತ್ತಿ ಓಡಲು ಶುರುಮಾಡಿದರೆ ರಸ್ತೆ ತಲುಪಿಯೇ ನಿಲ್ಲುತ್ತಿದ್ದೆ. ಮಾಸ್ತರಿಗೆ ನಮಸ್ಕಾರ ಹೇಳಬೇಕೆಂದೂ ತಿಳಿಯದ ವಯಸ್ಸು. ಅವರದೂ ಕೂಡ ಅಂಥ ಗೌರವವನ್ನು ನಿರೀಕ್ಷಿಸದ ದೊಡ್ಡಮನಸ್ಸು. ನಾನು ಅವರ ಬಳಿ ಹೋದೊಡನೆಯೇ ನನ್ನನ್ನು ಎತ್ತಿ ತಮ್ಮ ಸೈಕಲ್ ಕೆರಿಯರ್ ಮೇಲೆ ಕುಳ್ಳಿರಿಸುತ್ತಿದ್ದರು ಮತ್ತು ನನ್ನ ಬಳಿ ‘ಅಪ್ಪ ಏನು ಮಾಡುತ್ತಿದ್ದಾರೆ, ಅಮ್ಮ ಏನು ತಿಂಡಿ ಮಾಡಿದ್ದರು, ತಮ್ಮ ಮಲಗಿದ್ದಾನಾ’ ಇತ್ಯಾದಿ ಮಾತನಾಡಿಸುತ್ತಾ ಶಾಲೆಗೆ ತಂದು ಇಳಿಸುತ್ತಿದ್ದರು.

ಶಾಲೆಯಿಂದ ಹೊರಟಾಗಲೂ ಅಷ್ಟೇ- ನನ್ನನ್ನು ಕುಳ್ಳಿರಿಕೊಂಡು ಹೊರಟರೆಂದರೆ ಮನೆಯಬಳಿ ರಸ್ತೆಗೆ ತಲುಪಿಸಿಯೇ ಇಳಿಸುತ್ತಿದ್ದರು ಮತ್ತು ನಾನು ಮನೆಯ ಗೇಟಿನ ತನಕ ತಲುಪುವವರೆಗೂ ನಿಂತು ನೋಡಿ ನಂತರ ಹೊರಡುತ್ತಿದ್ದರು. ನಡುವೆ ಏರಿನ ರಸ್ತೆ ಸಿಕ್ಕಿ ತಾವು ಸೈಕಲ್ ನಿಂದ ಇಳಿದು ಸೈಕಲ್ ತಳ್ಳಿಕೊಂಡು ಬಂದರೂ ಒಂದು ದಿನವೂ ನನ್ನನ್ನು ಸೈಕಲ್ ಕೆರಿಯರ್ ನಿಂದ ಇಳಿಸಿದವರಲ್ಲ. ನನಗಿಂತ ಮೂರುವರ್ಷಗಳಷ್ಟು ಚಿಕ್ಕವನಾದ ನನ್ನ ತಮ್ಮ ಶಾಲೆಗೆ ನನ್ನೊಂದಿಗೆ ಬರತೊಡಗುವವರೆಗೂ ನನ್ನನ್ನು ಅವರ ಸೈಕಲ್ ಮೇಲೆ ಶಾಲೆಗೆ ಕೊಂಡೊಯ್ಯುತ್ತಿದ್ದರು. ಅಷ್ಟು ಪ್ರೀತಿಯಿಂದ ಕಂಡ ಶಿಕ್ಷಕರನ್ನು ಪಡೆದ ನಾನೇ ಅದೃಷ್ಟಶಾಲಿ! ಪ್ರಾಥಮಿಕ ಶಾಲೆಯಲ್ಲಿ ತಮ್ಮ ಬಳಿ ಏನೆಲ್ಲಾ ಸಾಧ್ಯವೋ ಎಲ್ಲವನ್ನೂ ನಮಗೆ ಧಾರೆಯೆರೆದರು, ಸಂಸ್ಕಾರವನ್ನು ಕಲಿಸಿದರು. ನನಗಷ್ಟೇ ಅಲ್ಲದೆ ಮುಂದೆ ನನ್ನ ತಮ್ಮನಿಗೂ ಅಕ್ಷರಾಭ್ಯಾಸ ಮಾಡಿಸಿದವರು. ಆ ಶಾಲೆಯಿಂದ ಹೊರಬಿದ್ದು ಹೈಸ್ಕೂಲ್, ಕಾಲೇಜ್, ಯೂನಿವರ್ಸಿಟಿ ಮೊದಲಾದ ಶಿಕ್ಷಣ ಮುಗಿಸುವವರೆಗೂ ಎಷ್ಟೆಲ್ಲಾ ಗುರುಗಳು ಏನೆಲ್ಲಾ ವಿದ್ಯೆಯನ್ನು ನನಗೆ ಧಾರೆಯೆರೆದಿದ್ದಾರೆ. ಆದರೆ ನನ್ನ ಮೊಟ್ಟಮೊದಲ ಗುರುವಿಗೆ ಮನಸಿನಲ್ಲಿ ಸ್ಥಾನವೇ ಬೇರೆ.

(ಕಳೆದಬಾರಿ ಶ್ರೀ ಎಂ ಕೆ ನಾಯ್ಕ ಮಾಸ್ತರೊಂದಿಗೆ ನನ್ನ ತಮ್ಮ ಮತ್ತು ನಾನು)

ಮುಂದೆಲ್ಲಾ ನಾನು ಶಿಕ್ಷಣದಲ್ಲಿ ಮುಳುಗಿಹೋದಂತೆಲ್ಲಾ ಎಂ ಕೆ ನಾಯ್ಕ ಮಾಸ್ತರು ಅಷ್ಟೆಲ್ಲಾ ನೆನಪಾಗಲೇ ಇಲ್ಲ. ಹಾಗೆಂದು ಮರೆತೆನೆಂದೇನೂ ಅಲ್ಲ. ಅವರೂ ಶಿಕ್ಷಕ ವೃತ್ತಿಯಿಂದ ನಿವೃತ್ತಿಹೊಂದಿ ವಿರಾಮದ ಜೀವನ ನಡೆಸತೊಡಗಿದರು. ನಾನೆಂದೂ ಅವರನ್ನು ಭೇಟಿಯಾಗಲು ಹೋಗಿರಲಿಲ್ಲ. ನಾನು PhD ಮಾಡುತ್ತಿದ್ದಾಗ ಧಾರವಾಡಕ್ಕೆ ಹೋಗಲು ಬಸ್ ಕಾಯುತ್ತಿದ್ದಾಗ ಒಮ್ಮೆ ಭೇಟಿಯಾಗಿದ್ದರು. ನಾನು ಅವರನ್ನು ಮಾತನಾಡಿಸಿದೆ. ನಾನು ಓದುತ್ತಿದ್ದುದನ್ನು ಕೇಳಿ ತುಂಬಾ ಖುಷಿಪಟ್ಟಿದ್ದರು. ಕಳೆದೆರಡು ವರ್ಷಗಳ ಹಿಂದೆ ಊರಿಗೆ ಹೋದಾಗ ನನ್ನ ತಮ್ಮ ಮತ್ತು ನಾನು ನಮ್ಮ ಪರಿವಾರದೊಡನೆ ಅವರ ಮನೆಗೆ ಹೋಗಿ ಅವರನ್ನು ಭೇಟಿಯಾಗಿ ಬಂದಿದ್ದೆವು. ಎಷ್ಟೋ ವರ್ಷಗಳ ನಂತರ ಅವರನ್ನು ನೋಡಿದ್ದೆವು, ತುಂಬಾ ಸಂತೋಷವಾಯಿತು. ನಮ್ಮ ಮನಸ್ಸಿನಲ್ಲಿದ್ದ ಅವರ ಚಿತ್ರಕ್ಕಿಂತ ವಾಸ್ತವದಲ್ಲಿ ಭಿನ್ನವಾಗಿ ಕಂಡರು, ವಯಸ್ಸಾಗಿದೆ ಅನಿಸಿತು. ಅವರಿಗೂ ಕೂಡ ತುಂಬಾ ಖುಷಿಯಾಗಿದ್ದು ಮೇಲ್ನೋಟಕ್ಕೇ ಕಾಣಿಸುತ್ತಿತ್ತು. ಅಂದು ನಾವು ಅವರೊಂದಿಗೆ ತೆಗೆಸಿಕೊಂಡ ಫೋಟೋ ಕಳಿಸಿಕೊಡುವಂತೆ ಹೇಳಿದ್ದರು– ‘ನಾವೆಲ್ಲಾ ಹಳೆಯ ಕಾಲದವರು, ನಿಮ್ಮ ತರಹ ಕಂಪ್ಯೂಟರ್ ನಲ್ಲಿ ಇಟ್ಟುಕೊಂಡು ನೋಡಲು ಬರುವುದಿಲ್ಲ, ಪ್ರಿಂಟ್ ಮಾಡಿ ಕಳಿಸು’ ಎಂದಿದ್ದರು.

ಚಿಕ್ಕವರಿದ್ದ ಸಮಯದಲ್ಲಿ ಶಾಲಾ ದಿನಗಳಲ್ಲಿ ಪ್ರತಿವರ್ಷ ಶಿಕ್ಷಕರ ದಿನವನ್ನು ಮಾಸ್ತರರೇ ಆಚರಿಸಿದರೂ ನಮಗೆ ಅದು ಏಕೆ ಎಂಬ ಹೆಚ್ಚಿನ ಅರಿವಿರಲಿಲ್ಲ, ಅವರಾದರೋ ಡಾ. ಎಸ್ ರಾಧಾಕೃಷ್ಣನ್ ರ ಫೋಟೋ ಇಟ್ಟು, ಹೂವು ಹಾಕಿ ಪೂಜೆ ಮಾಡುತ್ತಿದ್ದರು. ಶಿಕ್ಷಕರ ದಿನಾಚರಣೆಯ ಹಿನ್ನೆಲೆ, ಡಾ. ರಾಧಾಕೃಷ್ಣನ್ ರ ಬಗ್ಗೆ ನಮಗೆ ನಮಗೆ ಪ್ರತಿವರ್ಷವೂ ವಿವರಿಸುತ್ತಿದ್ದರು, ಆದರೂ ಆಗಿನ ನಮ್ಮ ಬುದ್ಧಿಮಟ್ಟಕ್ಕೆ ಹೆಚ್ಚೇನೂ ತಿಳಿಯುತ್ತಿರಲಿಲ್ಲ. ಒಮ್ಮೆಯೂ ಶಿಕ್ಷಕರ ದಿನದಂದು ನಾವು ಅವರಿಗೆ ಶುಭಕೋರಿದ ನೆನಪಿಲ್ಲ. ಅವರದನ್ನೆಲ್ಲ ನಿರೀಕ್ಷಿಸಿದ್ದೂ ನೆನಪಿಲ್ಲ. ಆದರೆ ಮಕ್ಕಳ ದಿನದಂದು ಮಾತ್ರ ನಮಗೆಲ್ಲರಿಗೂ ನಿಂಬೆಹುಳಿ ಪೆಪ್ಪರ್ ಮೆಂಟ್ ತಪ್ಪದೇ ಕೊಡುತ್ತಿದ್ದರು. ನಮಗಂದು ಮಕ್ಕಳ ದಿನವೂ ಅರ್ಥವಾಗಿದ್ದು ಅಷ್ಟಕ್ಕಷ್ಟೇ, ನಮಗೆ ಅರ್ಥವಾಗುತ್ತಿದ್ದುದು ಪೆಪ್ಪರ್ ಮೆಂಟ್ ಮಾತ್ರ. ಶಿಕ್ಷಕರ ದಿನದಂದು ಯಾಕೆ ಪೆಪ್ಪರ್ ಮೆಂಟ್ ಸಿಗುವುದಿಲ್ಲವೆಂದು ನಾನು ಹಲವಾರು ಬಾರಿ ವಿಚಾರಮಾಡಿದ್ದುಂಟು ಆ ದಿನಗಳಲ್ಲಿ! ಒಮ್ಮೆಯಂತೂ ಕಾಟನ್ ಕ್ಯಾಂಡಿ (ನಮ್ಮೂರ ಕಡೆ ಅದನ್ನು ಬೊಂಬಾಯ್ ಮಿಠಾಯಿ ಎಂದು ಕರೆಯುತ್ತಾರೆ) ಮಾರುವವನು ಶಾಲೆಯ ಬಳಿ ಬಂದಾಗ ತಮ್ಮ ಸ್ವಂತ ಖರ್ಚಿನಲ್ಲಿ ಖರೀದಿಸಿ ಶಾಲೆಯ ಮಕ್ಕಳಿಗೆಲ್ಲಾ ಹಂಚಿದ್ದರು.

(ನೆದರ್ ಲ್ಯಾಂಡ್ಸ್ ನ ಶಾಲಾ ಕೊಠಡಿಯಲ್ಲಿ ಮಕ್ಕಳು ಶಿಕ್ಷಕಿಯೊಂದಿಗೆ)

ಮೊನ್ನೆ ಅಕ್ಟೋಬರ್ 5 ನೇ ತಾರೀಖಿನಂದು ಅಂತರರಾಷ್ಟ್ರೀಯ ಶಿಕ್ಷಕರ ದಿನದಂದು ನೆದರ್ ಲ್ಯಾಂಡ್ಸ್ ನಲ್ಲಿಯೂ ಶಾಲೆಗಳಲ್ಲಿ ಶಿಕ್ಷಕರ ದಿನವೆಂದು ಆಚರಿಸಲಾಯಿತು. ನಾಲ್ಕು ವರ್ಷದ ನನ್ನ ಮಗನ ಕ್ಲಾಸ್ ನಲ್ಲಿ ಪಾಲಕರೊಬ್ಬರು ಹೂವುಗಳನ್ನು ತಂದು ಎಲ್ಲಾ ಮಕ್ಕಳ ಕೈಗೂ ಒಂದೊಂದು ಹೂವನ್ನಿತ್ತು ಮಕ್ಕಳೆಲ್ಲರನ್ನೂ ವೃತ್ತಾಕಾರದಲ್ಲಿ ಕೂರಿಸಿ ಒಬ್ಬೊಬ್ಬರಾಗಿ ಶಿಕ್ಷಕಿಗೆ ಹೂವು ಕೊಡಿಸಿದ್ದು ನೋಡಲು ಮುದ್ದಾಗಿತ್ತು.

ನಮ್ಮಲ್ಲಿಯ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನಡುವಣ ಸಂಬಂಧಕ್ಕಿಂತ ಇಲ್ಲಿ ಕಾಣುವ ಅದೇ ಸಂಬಂಧ ತೀರಾ ವಿಭಿನ್ನ, ಕ್ಯಾಶುಯಲ್. ಹಾಗೆಂದು ಅಗೌರವ ತೋರುತ್ತಾರೆಂದೇನೂ ಅಲ್ಲ. ಇಲ್ಲಿನ ಶಿಕ್ಷಣದ ವಿಧಾನವೇ ಪೂರ್ತಿ ಬೇರೆ. ಶಿಕ್ಷಣದ ಸಿದ್ಧಾಂತವೂ ಬೇರೆ. ಅನುಭವ ಆಧಾರಿತ ಶಿಕ್ಷಣ. ಮಕ್ಕಳಿಗೆ ಹೇಳಿಕೊಟ್ಟು ಗಿಳಿಪಾಠ ಮಾಡಿಸಿ ಕಲಿಸುವುದಕ್ಕಿಂತ ಅವರೇ ಅನುಭವದ ಮೂಲಕ ಕಲಿಯುವಂತೆ ಪ್ರೇರೇಪಿಸುತ್ತಾರೆ. ಮಕ್ಕಳ ತೀರಾ ಚಿಕ್ಕ ಸಾಧನೆಯನ್ನೂ ದೊಡ್ಡದೆಂಬಂತೆ ಮಾಡಿ ಅವರನ್ನು ಪ್ರೋತ್ಸಾಹಿಸುತ್ತಾರೆ. ಆವಿಷ್ಕಾರದ ಕಡೆಗೆ ಅವರನ್ನು ಪ್ರೋತ್ಸಾಹಿಸುತ್ತಾರೆ. ಉತ್ಸಾಹಕ್ಕೆ ತಣ್ಣೀರೆರೆಚುವಿಕೆ ಯಾವತ್ತೂ ಇಲ್ಲ.

ಪ್ರತಿಯೊಬ್ಬ ಮಗುವೂ ವಿಭಿನ್ನ ಎಂಬ ಮೂಲಭೂತ ಅರಿವು ಎಲ್ಲಾ ಶಿಕ್ಷಕರಿಗೂ ಇರುತ್ತದೆ. ಮಕ್ಕಳನ್ನು ಒಬ್ಬರೊಂದಿಗೆ ಇನ್ನೊಬ್ಬರನ್ನು ಹೋಲಿಕೆ ಮಾಡುವುದು ಇಲ್ಲವೇ ಇಲ್ಲ. ಪ್ರತಿಯೊಬ್ಬ ಮಗುವಿಗೂ ತನ್ನನ್ನು ಶಿಕ್ಷಕರು ಪ್ರೀತಿಸುತ್ತಾರೆ, ತನಗೂ ಕೂಡ ಪ್ರಾಮುಖ್ಯತೆ ಇದೆ ಎಂಬ ಭಾವನೆ ಬರುವಂತೆ ನೋಡಿಕೊಳ್ಳುತ್ತಾರೆ. ಹಾಗಾಗಿ ಮಕ್ಕಳಿಗೆ ಒತ್ತಡದ ಅನುಭವವಾಗುವ ಪ್ರಶ್ನೆಯೇ ಇಲ್ಲ. ಮಕ್ಕಳು ಹೆಚ್ಚು ಆಟ ಮತ್ತು ಕ್ರಾಫ್ಟ್ ಗಳ ಮೂಲಕ ಬೇರೆ ಬೇರೆ ವಿಷಯಗಳನ್ನು ಕಲಿಯುತ್ತಾರೆ. ಮಕ್ಕಳು ಮಾಡಿದ ಅನೇಕ ಕ್ರಾಫ್ಟ್ ಗಳನ್ನು ತರಗತಿಯ ಕೊಠಡಿಯಲ್ಲಿ ಇಟ್ಟಿರುತ್ತಾರೆ, ಮಕ್ಕಳಿಗೆ ಅದನ್ನು ಮತ್ತೆ ಮತ್ತೆ ನೋಡುವುದೇ ಒಂದು ಸಂಭ್ರಮ! ಮನೆಗೆಲಸ ಎನ್ನುವ ಪರಿಕಲ್ಪನೆಯೇ ಇಲ್ಲ! ತರಗತಿಯ ಕೊಠಡಿಯ ತುಂಬೆಲ್ಲಾ ಆಟಿಕೆಗಳೇ ತುಂಬಿರುತ್ತವೆ. ಬಗೆಬಗೆಯ ಆಟಿಕೆಗಳು- ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಪುಟ್ಟ ಪುಟ್ಟ ಆಟಿಕೆಗಳು, ಅಡುಗೆ ಮನೆಯ ಆಟಿಕೆಗಳು, ಬಣ್ಣ, ಬ್ರಷ್ ಮತ್ತು ಬೋರ್ಡ್, ಕುಸುರಿ ಕೆಲಸದ ರೀತಿಯ ಆಟಿಕೆಗಳು, ಬಣ್ಣ-ಗಾತ್ರ ಹೋಲಿಕೆಯ ಆಟಿಕೆಗಳು ಇನ್ನೂ ಏನೇನೋ. ಪ್ರತಿಯೊಂದು ಆಟಿಕೆಯೂ ಒಂದೊಂದು ರೀತಿಯ ಕಲಿಯುವಿಕೆಯನ್ನು ಪ್ರಚೋದಿಸುವಂಥದು! ನನಗಂತೂ ಮೊಟ್ಟಮೊದಲ ಬಾರಿಗೆ ಇಂಥ ಆಟಿಕೆಗಳನ್ನು ಮತ್ತು ಇಷ್ಟೆಲ್ಲಾ ಆಟಿಕೆಗಳನ್ನು ನೋಡಿಯೇ ಆಶ್ಚರ್ಯವಾಗಿತ್ತು!

(ಮರಳಿನ ಮೇಲೆ ಬರೆಯುತ್ತಿರುವ ಮಕ್ಕಳು)

ಪ್ರತಿವಾರ, ತಿಂಗಳು ಒಂದೊಂದು ಥೀಮ್ (theme) ಆಧಾರವಾಗಿಟ್ಟುಕೊಂಡು ಕಲಿಸುತ್ತಾ ಹೋಗುತ್ತಾರೆ. ಉದಾಹರಣೆಗೆ ಒಂದು ವಾರದ ಥೀಮ್ ‘ಮನೆ’ ಎಂಬುದಾದರೆ ಆ ವಾರಪೂರ್ತಿ ಮನೆಗೆ ಸಂಬಂಧಿಸಿದಂತ ಕತೆ, ಪುಸ್ತಕಗಳು, ಆಟ, ಪೇಂಟಿಂಗ್, ಕ್ರಾಫ್ಟ್ ಹೀಗೆ ಹತ್ತು ಹಲವಾರು. ಇವೆಲ್ಲದರ ಜೊತೆಗೇ ಭಾಷೆ, ಗಣಿತ, ವಿಜ್ಞಾನ, ಸಮಾಜ ಪರಿಚಯವನ್ನೂ ಜೋಡಿಸಿಕೊಂಡು ಕಲಿಸಿಬಿಡುತ್ತಾರೆ! ಮುಂದಿನ ವಾರ ಇನ್ನೊಂದು ಥೀಮ್ – ಆರೋಗ್ಯ, ಕುಟುಂಬ ಮತ್ತು ಗೆಳೆಯರು, ನೀರು ಹೀಗೆಯೇ ಇನ್ನೂ ಹಲವು. ಅವರವರ ವಯಸ್ಸಿಗೆ ತಕ್ಕಂತೆ ವಾರದಲ್ಲಿ ಒಂದೆರಡು ಜಿಮ್ನ್ಯಾಸ್ಟಿಕ್ಸ್ ಪಾಠ, ಒಂದು ಸಂಗೀತ ಪಾಠ ಎಲ್ಲವೂ ಇರುವುದರಿಂದ ಮಕ್ಕಳಿಗೆ ತಮ್ಮ ಅಭಿರುಚಿಯನ್ನು ತಾವೇ ಕಂಡುಕೊಳ್ಳಲು ಸಹಾಯವಾಗುತ್ತದೆ. ಅಕ್ಷರಗಳನ್ನೂ ಅರ್ಥವಿಲ್ಲದೇ ಅಮೂರ್ತವಾಗಿ ಕಲಿಸುವುದಿಲ್ಲ. ನನ್ನ ಮಗನ ತರಗತಿಯಲ್ಲಿ ಅವನಿಗೆ ಮೊದಲು ಕಲಿಸಿದ ಅಕ್ಷರ ‘I’! ನನಗಂತೂ ನಂಬಲಾಗಿರಲಿಲ್ಲ! ಮಕ್ಕಳನ್ನು ನೆಲದ ಮೇಲೆ ಮಲಗಿಸಿ, ಅವರ ಆಕೃತಿಯನ್ನು ಬಿಡಿಸಿ, ಅವರಿಗೆ ಅದನ್ನು ಅದು ತನ್ನದೇ ಎಂದು ಅರ್ಥಮಾಡಿಸಿ, ಅದು ‘I’ (ಡಚ್ ಭಾಷೆಯಲ್ಲಿ ik) ಎಂದು ತಿಳಿಸಿ, ನಂತರ ಅದನ್ನು ಬರೆಯುವುದು ಹೇಗೆ ಎಂದು ಕಲಿಸಿದ್ದಾರೆ! ಆಟಕ್ಕೆ ಹೋದಾಗ ಮರಳಿನ ಮೇಲೆ ಬರೆಸುತ್ತಾರೆ. ಮಕ್ಕಳಿಗೆ ಅದೊಂದು ಮಜ, ಆಡುತ್ತಾ ಬೇಗ ಕಲಿತುಬಿಡುತ್ತಾರೆ.

ಸಾಮಾನ್ಯವಾಗಿ ಮಕ್ಕಳು ತಮ್ಮ ನಾಲ್ಕನೇ ವರ್ಷಕ್ಕೆ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸುತ್ತಾರಾದರೂ ಐದನೇ ವರ್ಷದಿಂದ ಹನ್ನೆರಡನೇ ವರ್ಷದವರೆಗೂ ಕಡ್ಡಾಯವಾಗಿ ಶಾಲೆಗೇ ಹೋಗಲೇಬೇಕು. ಹದಿನೆಂಟನೆಯ ವರ್ಷದವರೆಗೂ ಶಿಕ್ಷಣದ ಖರ್ಚನ್ನು ಪೂರ್ತಿಯಾಗಿ ಸರಕಾರವೇ ಭರಿಸುತ್ತದೆ. ಮಕ್ಕಳು ಪ್ರಾಥಮಿಕ ಶಿಕ್ಷಣವನ್ನು ಮುಗಿಸುವ ವರ್ಷ, ಅಂದರೆ 12ನೇ ವರ್ಷದಲ್ಲಿ ಒಂದು ಪರೀಕ್ಷೆಯನ್ನು ನಡೆಸಲಾಗುತ್ತದೆ. ಅದು ಆ್ಯಪ್ಟಿಟ್ಯೂಡ್ ಟೆಸ್ಟ್ (Aptitude test). ಅದರಲ್ಲಿ ಬೇರೆಬೇರೆ ವಿಷಯಗಳಲ್ಲಿ ಮಕ್ಕಳು ತೆಗೆಯುವ ಅಂಕಗಳ ಮೇಲೆ ಶಿಕ್ಷಕರು ಯಾವ ಮಕ್ಕಳು ಮುಂದೆ ಯಾವ ರೀತಿಯ ಕೋರ್ಸ್ ಗೆ ಹೋದರೆ ಉತ್ತಮ, ಯಾವುದರಲ್ಲಿ ಸಫಲರಾಗಬಲ್ಲರು ಎಂಬುದನ್ನು ನಿರ್ಧರಿಸುತ್ತಾರೆ. ವೃತ್ತಿಪರ ಶಿಕ್ಷಣಕ್ಕೆ ಹೋದರೆ ಒಳ್ಳೆಯದೋ, ಉನ್ನತ ವ್ಯಾಸಂಗ ಮಾಡಿದರೆ ಒಳ್ಳೆಯದೋ ಎಂಬುದನ್ನು ಶಿಕ್ಷಕರು ನಿರ್ಧರಿಸುತ್ತಾರೆ, ಏಕೆಂದರೆ ಅವರಿಗೆ ಮಕ್ಕಳನ್ನು ನಿತ್ಯವೂ ಶಾಲೆಯಲ್ಲಿ ನೋಡಿ ಅವರ ಸಾಮರ್ಥ್ಯದ ಬಗ್ಗೆ ಅರಿವಿರುತ್ತದೆ, ಅವರ ಆಸಕ್ತಿಗಳು ಯಾವುವು ಎಂಬುದು ಗೊತ್ತಾಗಿರುತ್ತದೆ. ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದರಲ್ಲೇ ಮುಂದುವರೆಯುವುದು ಉತ್ತಮ ಎಂಬುದು ಇಲ್ಲಿಯ ಶಿಕ್ಷಣದ ಕಲ್ಪನೆ.

(ತರಗತಿಯೊಂದಕ್ಕೆ ನಡೆಯುತ್ತಿರುವ ಸಂಗೀತ ಪಾಠ)

ಮಕ್ಕಳು ಮುಂದೆ ಯಾವ ವಿಧದ ಶಿಕ್ಷಣದಲ್ಲಿ ಮುಂದುವರಿಯಬೇಕು ಎಂಬುದನ್ನು ಶಿಕ್ಷಕರು ಮಕ್ಕಳ ಪಾಲಕರೊಂದಿಗೆ ವಿಚಾರವಿನಿಮಯದ ನಂತರವೇ ಅಂತಿಮ ತೀರ್ಪನ್ನು ನೀಡುತ್ತಾರೆ. ಒಂದುವೇಳೆ ಪಾಲಕರಿಗೆ ತಮ್ಮ ಮಕ್ಕಳು ವೃತ್ತಿಪರ ಶಿಕ್ಷಣಕ್ಕೆ ಹೋಗುವುದು ಬೇಡವೆನಿಸಿದಲ್ಲಿ ಅವರು ತಮ್ಮ ಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ಕಳುಹಿಸುವ ಅವಕಾಶವಿದೆ. ಕೆಲವು ಮಕ್ಕಳು ಉಳಿದವರಿಗಿಂತ ತಡವಾಗಿ ಬುದ್ಧಿ ವಿಕಸಿತಗೊಳ್ಳುವವರಿರುತ್ತಾರೆ, ಅವರು ಆಗಲೇ ವೃತ್ತಿಪರ ಶಿಕ್ಷಣಕ್ಕೆ ಸೇರ್ಪಡೆಯಾಗಿರುತ್ತಾರೆ. ಅಂಥವರು ಆ ನಂತರದಲ್ಲಿ ತಮ್ಮ ದಾರಿಯನ್ನು ಬದಲಾಯಿಸಿ ಉನ್ನತ ಶಿಕ್ಷಣಕ್ಕೆ ಬರುವ ಅವಕಾಶಗಳಿರುತ್ತವೆ. ಆದರೆ ಆ ಪರೀಕ್ಷೆ ಮತ್ತು ಶಿಕ್ಷಕರ ವೀಕ್ಷಣೆಯಿಂದ ಹೊರಬಂದ ಅಭಿಪ್ರಾಯ, ಈ ವಿಧಾನ ಶೇಕಡಾ 80 ಕ್ಕಿಂತಲೂ ಹೆಚ್ಚು ಬಾರಿ ಸರಿಯಾಗಿರುತ್ತದೆಯಂತೆ.

ಇಲ್ಲಿನ ಮಕ್ಕಳು ಬರಿದೆ ಆಟವಾಡುತ್ತಾ, ಕ್ರಾಫ್ಟ್ ಮಾಡುತ್ತಾ, ಗಿಡಗಳನ್ನು ಬೆಳೆಸುತ್ತಾ, ಶಾಲಾ ಆವರಣದಲ್ಲಿ ಕಳೆ ಕಿತ್ತು ಚೊಕ್ಕಟಗೊಳಿಸುತ್ತಾ ಸಂತೋಷದಿಂದಿರುವುದನ್ನು ನೋಡಿದಾಗೆಲ್ಲಾ ನನಗೆ ಮತ್ತೆ ನನ್ನ ಪ್ರಾಥಮಿಕ ಶಾಲೆಯ ನೆನಪಾಗುತ್ತದೆ. ನಮ್ಮ ಮಾಸ್ತರಂತೂ ನಮಗೆಂದೂ ತಲೆಯ ಮೇಲೆ ಮನೆಗೆಲಸದ ಭಾರ ಹೊರಿಸಲಿಲ್ಲ, ಹೂವು ಹಣ್ಣುಗಳ ಗಿಡಗಳನ್ನು ನೆಡುವುದು, ನೀರು ಹಾಕಿ ಅವುಗಳನ್ನು ಬೆಳೆಸುವುದು, ಶಾಲೆಯ ಆವರಣವನ್ನು ಚೊಕ್ಕಮಾಡುವುದು ಎಲ್ಲವನ್ನೂ ನಮಗೆ ಹೇಗೆಂದು ಕಲಿಸುತ್ತಿದ್ದರು. ನಮ್ಮೊಂದಿಗೆ ತಾವೂ ಬೆರೆತು ಆ ಕೆಲಸಗಳಲ್ಲಿ ಭಾಗವಹಿಸುತ್ತಿದ್ದರು. ನಾವಂತೂ ಮನೆಯಲ್ಲಿರುತ್ತಿದ್ದ ಸಮಯವೇ ಕಡಿಮೆ ಇರುತ್ತಿತ್ತು. ಶಾಲೆಗೆ ಹೋಗುವುದೆಂದರೆ ಎಲ್ಲಿಲ್ಲದ ಖುಷಿ ಇರುತ್ತಿತ್ತು. ಈಗಿನ ಮಕ್ಕಳು ಇದಕ್ಕೆಲ್ಲ ತದ್ವಿರುದ್ದ. ಅವರಿಗೆ ಯಾವಾಗ ನೋಡಿದರೂ ಮನೆಗೆಲಸದ ಹೊರೆಯೇ ಹೆಚ್ಚು. ಚಿಕ್ಕವರಿದ್ದಾಗಿನಿಂದಲೇ ರ್ಯಾಂಕ್ ಎಂಬ ಭೂತವನ್ನು ಅಪ್ಪ, ಅಮ್ಮಂದಿರು ಮಕ್ಕಳ ತಲೆಯಲ್ಲಿ ತುಂಬಿಬಿಟ್ಟಿರುತ್ತಾರೆ. ಆ ಮಕ್ಕಳು ಆಟವನ್ನೇ ಮರೆತಿರುತ್ತಾರೆ. ಗಿಡಗಳನ್ನು ನೆಟ್ಟು ಬೆಳೆಸುವುದರಲ್ಲಂತೂ ಆಸಕ್ತಿಯೇ ಇಲ್ಲ. ಜೀವನದಲ್ಲಿ ಒಂದೇ ಒಂದು ಗಿಡವನ್ನೂ ನೆಟ್ಟು ನೀರೆರೆಯದ ಜನರು ಎಷ್ಟಿಲ್ಲ ಹೇಳಿ? ಶಾಲೆಗಳೆಂದರೆ ಅಂತಹ ಒಂದು ಪೀಳಿಗೆಯನ್ನು ತಯಾರು ಮಾಡುವ ಕಾರ್ಖಾನೆಗಳಾಗಿವೆ. ಇನ್ನು ಶಾಲೆಯ ಆವರಣದ ಕಸಗುಡಿಸಲು, ಕಳೆ ಕೀಳಲು ಮಕ್ಕಳಿಗೇನಾದರೂ ಹೇಳಿದರೆ ತಂದೆ ತಾಯಂದಿರು ಶಾಲೆಗೇ ಬಂದು ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡುಬಿಡುತ್ತಾರೆ. ‘ಇಷ್ಟೆಲ್ಲಾ ಹಣ ಕೊಟ್ಟು ಶಾಲೆಗೆ ಕಳುಹಿಸಿದ್ದೇವೆ, ಮನೆಯಲ್ಲಿಯೇ ಇಂತಹ ಕೆಲಸಗಳನ್ನು ನಾವು ಮಕ್ಕಳ ಬಳಿ ಮಾಡಿಸುವುದಿಲ್ಲ, ಇಲ್ಲಿ ಹೇಗೆ ನೀವು ಮಾಡಿಸುತ್ತೀರಿ’ ಎಂಬ ಪುಕಾರುಗಳು ಬರುತ್ತವೆ ಎಂದು ನನ್ನ ಕೆಲವು ಶಿಕ್ಷಕ ಸ್ನೇಹಿತರು ಹೇಳುತ್ತಾರೆ.

(ಮಕ್ಕಳು ತಮ್ಮ ಆಕೃತಿಯನ್ನು ತಾವೇ ಬಿಡಿಸಿರುವುದು)

ಶಿಕ್ಷಣದ ಉದ್ದೇಶವೇ ಪುಸ್ತಕದಲ್ಲಿದ್ದದ್ದನ್ನು ಉರುಹಾಕಿ ಬರೆಯುವುದು, ಅದರಿಂದ ಅಂಕಗಳಿಸಿ ಯಾವುದೋ ಒಂದು ಕಂಪನಿಯ ಹುದ್ದೆಯಲ್ಲಿ ಆಸೀನರಾಗುವುದು ಎಂಬಂತಾಗಿದೆ. ವ್ಯಕ್ತಿತ್ವದ ಬಹುಮುಖ ಬೆಳವಣಿಗೆ ಮೂಲೆಗುಂಪಾಗಿದೆ. ನೆದರ್ ಲ್ಯಾಂಡ್ಸ್ ವಿಪರೀತ ಹವಾಮಾನಕ್ಕೆ ಹೆಸರುವಾಸಿ. ಎಷ್ಟೇ ಪ್ರತಿಕೂಲ ಹವಾಮಾನವಿದ್ದರೂ ಶಿಕ್ಷಕರು ಮಕ್ಕಳನ್ನು ಹೊರಗೆ ಆಡಲು ಕರೆದುಕೊಂಡು ಹೋಗಿಯೇ ಹೋಗುತ್ತಾರೆ. ಹವಾಮಾನಕ್ಕೆ ತಕ್ಕಂತೆ ಮಕ್ಕಳಿಗೆ ಬಟ್ಟೆ ಹಾಕಿ ಕಳುಹಿಸಿ ಎಂದು ಪಾಲಕರಿಗೆ ಮೊದಲೇ ನಿರ್ದೇಶನವಿತ್ತಿರುತ್ತಾರೆ. ಮಕ್ಕಳು ಪ್ರತಿದಿನವೂ ಹೊರಗಡೆ ಆಡಿ ಬೆಳೆಯಬೇಕು ಎಂಬ ಸಿದ್ಧಾಂತ ಇಲ್ಲಿನವರದ್ದು. ನಮ್ಮ ದೇಶದ ಮಕ್ಕಳು ಭಾರದ ಸ್ಕೂಲ್ ಬ್ಯಾಗ್ ಬೆನ್ನಿಗೇರಿಸಿಕೊಂಡು, ಬೆನ್ನು ಗೂನಾಗಿಸಿಕೊಂಡು, ಸ್ಕೂಲ್ ಬಸ್ ನಲ್ಲಿ ತುರುಕಿಕೊಂಡು ಹೋಗಿ ಇಡೀ ದಿನ ಕೊಠಡಿಯೊಳಗೇ ಕುಳಿತು ಉರುಹೊಡೆದು ಪರೀಕ್ಷೆಗೆ ಸಿದ್ಧರಾಗಿ, ವಾರಕ್ಕೊಮ್ಮೆಯೋ ಎರಡು ಬಾರಿಯೋ ಶಾಲಾ ಮೈದಾನದಲ್ಲಿ ಆಡಲು ಸಿಗುವುದೇ ಅದೃಷ್ಟವೆಂದು ತಿಳಿದುಕೊಂಡು ತಮ್ಮ ಬಾಲ್ಯದಿಂದಲೇ ಒತ್ತಡದ ಜೀವನವನ್ನು ಎದುರಿಸಲು ಸಿದ್ಧರಾಗುವುದನ್ನು ನೋಡಿದಾಗ ಅಯ್ಯೋ ಎನಿಸುತ್ತದೆ. ವಿಪರ್ಯಾಸವೆಂದರೆ ಮನೆಗೆಲಸ ಕೊಡದಿದ್ದರೆ ಶಾಲೆಗೆ ಬಂದು ತಕರಾರು ಮಾಡುವ ಪಾಲಕರೂ ಕಡಿಮೆ ಸಂಖ್ಯೆಯಲ್ಲೇನಿಲ್ಲ! ಇವೆಲ್ಲವೂ ನಮ್ಮ ದೇಶದಲ್ಲಿ ತುಂಬಾ ಬದಲಾಗಬೇಕಾಗಿದೆ. ಕಲಿಸುವ ಪ್ರಕ್ರಿಯೆಯನ್ನು ಕುತೂಹಲಕಾರಿಯಾಗಿ, ಮಕ್ಕಳು ಅದನ್ನು ಆನಂದಿಸುವಂತೆ ಮಾಡುವುದು ಹೇಗೆ ಎಂಬುದನ್ನು ನಾವು ಕಲಿಯಬೇಕಿದೆ. ಆ ನಿಟ್ಟಿನಲ್ಲಿ ನಾವು ಪಾಶ್ಚಾತ್ಯ ದೇಶಗಳಿಂದ ಕಲಿಯುವುದು ಸಾಕಷ್ಟಿದೆ.


ಅದೃಷ್ಟವೆಂದರೆ ನಾನು ಚಿಕ್ಕವಳಿದ್ದ ಸಮಯದಲ್ಲಿ ಶಿಕ್ಷಣವೆಂದರೆ ಒತ್ತಡದ ಶಿಕ್ಷಣವಾಗಿರಲಿಲ್ಲ. ಶಾಲೆಯಲ್ಲಿ ಓದಿದ್ದಕ್ಕಿಂತ ಆಡಿದ್ದೇ ಜಾಸ್ತಿ ನೆನಪು ನನಗೆ. ಶಿಕ್ಷಣದ ಪದ್ಧತಿ ಎಲ್ಲಿ, ಹೇಗೆ, ಮತ್ತು ಯಾವಾಗ ಬದಲಾಯಿತೋ ತಿಳಿಯುತ್ತಿಲ್ಲ. ಈಗಿನ ಮಕ್ಕಳ ಸ್ಕೂಲ್ ಬ್ಯಾಗ್ ನೋಡಿದಾಗೆಲ್ಲ ಸದ್ಯ ನಾನು ಬಚಾವಾದೆ ಎಂಬ ಖುಷಿ ಒಂದು ಕಡೆಯಾದರೆ, ಇನ್ನೊಂದು ಕಡೆ ಊರಿಗೆ ಬಂದಮೇಲೆ ನನ್ನ ಮಗನನ್ನು ಇದರಿಂದ ಹೇಗೆ ಪಾರುಮಾಡುವುದು ಎಂದು ಚಿಂತೆಯಾಗುತ್ತದೆ.