”ಲೋಕದ ಅಗ್ರಗಣ್ಯ ಪ್ರಣಯ ಕವಿಗಳ ಸಾಲಿನಲ್ಲಿ ಗುರುತಿಸಲ್ಪಡುವ ಕೀಟ್ಸ್, ಶರತ್ಕಾಲದ ಒಂದು ಸಂಜೆ ಇಂಗ್ಲೆಂಡ್ ನ ವಿಂಚೆಸ್ಟರ್ ಎಂಬ ಊರಿನಲ್ಲಿ ತೊರೆಯ ಬಳಿ ನಡೆದಾಡಿ, ಅಲ್ಲಿ ಪಡೆದ ಸ್ಪೂರ್ತಿಯಿಂದ ಬರೆದ ಕವನವೊಂದು ಜಗತ್ಪ್ರಸಿದ್ಧವಾಯಿತು. ತಾನು ಬಾಡಿಗೆಗೆ ಇದ್ದ ಮನೆಯೊಡತಿಯ ಮಗಳ ವಯೊಲಿನ್ ಅಭ್ಯಾಸ ಕರ್ಕಶವಾಗಿ ಕೇಳುತ್ತಿದ್ದಾಗ ತಪ್ಪಿಸಿಕೊಳ್ಳಲು ಹೀಗೆ ವಿಹಾರಕ್ಕೆ ಹೋಗುತ್ತಿದ್ದ ಕೀಟ್ಸ್ “ಟು ಆಟಮ್”ಎಂಬ ತಲೆಬರಹದಡಿ ಬರೆದ ಕವನ ಶರತ್ಕಾಲವನ್ನು ನೋಡದವರಿಗೂ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿತು”
ಯೋಗೀಂದ್ರ ಮರವಂತೆ ಬರೆದ ಕವಿತೆ ಮತ್ತು ಕಾಲದ ಅವಲೋಕನ.

 

ಆಂಗ್ಲರ ದೇಶದಲ್ಲಿ ವರುಷಕ್ಕೆ ನಾಲ್ಕು ಮಾಸಗಳಂತೆ. ಅವುಗಳಲ್ಲಿ ಪ್ರಕೃತಿಯಲ್ಲೂ ಮನುಷ್ಯರಲ್ಲೂ ಪ್ರಾಣಿ ಪಕ್ಷಿಗಳಲ್ಲೂ ಚಟುವಟಿಕೆ ತುಂಬುವ ವಸಂತ ವೈಶಾಖ ಮಾಸಗಳು ಈಗ ಮುಗಿದು ಹೋಗಿವೆ. ಸದ್ಯಕ್ಕೆ ನಾವು ಪ್ರವೇಶಿಸಿರುವುದು ಬಿಸಿಲ ಬೇಗೆಯಿಂದ ದೂರವಾದ ಚಳಿಯ ಸಾಮೀಪ್ಯದ ಜೊತೆ ಸರಸವಾಡುವ ಮಾಸವನ್ನು. ಇದನ್ನು ವಿಲಕ್ಷಣತೆಗಳ ಮಾಸ ಎಂದೂ ಆಂಗ್ಲರು ಹೇಳುವುದುಂಟು. ಬ್ರಿಟಿಷ್ ಇಂಗ್ಲಿಷ್ ಮಾಸಗಳ ಲೆಕ್ಕಾಚಾರದಲ್ಲಿ ಇದೀಗ “ಆಟಮ್” ಮತ್ತೆ ಅಮೆರಿಕದ ಇಂಗ್ಲಿಷಿನಲ್ಲಿ “ಫಾಲ್”. ಇನ್ನು ನಮ್ಮ ಕನ್ನಡದಲ್ಲಿ ಹೀಗೊಂದು ಕಾಲ ಮಾಸ ಶಬ್ದ “ಶರದೃತು” ಎಂದೆನಿಸಿಕೊಳ್ಳುತ್ತದೆ.

ಇಲ್ಲಿನ ಶರತ್ಕಾಲದ ಸತ್ಯಾಸತ್ಯತೆಗಳನ್ನು ಲಕ್ಷಣಗಳನ್ನು ಸೇರಿಸಿ ವಿಲಕ್ಷಣ ವಿಚಿತ್ರ ಎಂದೆಲ್ಲ ಕರೆಯುವುದು ಆಂಗ್ಲರ ವಿಡಂಬನೆಯೂ ಹೌದು ವಿಮರ್ಶೆಯೂ ಹೌದು. ಇಂತಹ ವಿಲಕ್ಷಣ ಮಾಸದ ಅನುಭೂತಿ ಸಿಗಬೇಕಿದ್ದರೆ ಭೂಮಧ್ಯ ರೇಖೆಯ ಹೆಚ್ಚು ಉತ್ತರಕ್ಕೂ ದಕ್ಷಿಣಕ್ಕೋ ಹೋಗಬೇಕು, ಹೋಗಿ ಇರಬೇಕು. ದಿನದ ಗಾತ್ರಗಳು ಬೇಸಿಗೆಯಲ್ಲಿ ಚಳಿಗಾಲದಲ್ಲಿ ತೀವ್ರವಾದ ವ್ಯತ್ಯಾಸ ಕಾಣುವುದು ಇಂತಹ ಭೂಪ್ರದೇಶಗಳಲ್ಲೇ. ಇಂತಹ ಹೊತ್ತಿಗೆ ಇಂತಿಂತಲ್ಲಿ, ಇಂತಹ ದಿನ ಇಂತಹ ಕಕ್ಷೆಯಲ್ಲಿ, ಇಷ್ಟೊತ್ತು ದಿನ ಇಷ್ಟೊತ್ತು ರಾತ್ರಿ ಅಷ್ಟುದ್ದ ಹಗಲು ಇಷ್ಟು ದೀರ್ಘ ಕಾರ್ಗತ್ತಲು ಎಂದೆಲ್ಲ ಪೂರ್ವನಿರ್ಧಾರಿತವಾಗಿ ತಿರುಗುವ ಹೊಣೆ ಹೊತ್ತ ಸೂರ್ಯ ಭೂಮಿಯಿಂದ ದೂರ ಸರಿಯುವುದು, ಶಾಖ ಕಮ್ಮಿ ಆಗುವುದು, ಹವಾಮಾನ ಬದಲಾಗಿ ಉತ್ತರ ಧ್ರುವದ “ಚುಂಬಕ ಗಾಳಿ ಬೀಸುವುದು”, ಆ ಹವೆಯ ಗಾಳಿಯ ಸುಳಿವು ಸಿಕ್ಕ ಗಿಡ ಮರಗಳು ಎಲೆಗಳ ಬಣ್ಣ ಬದಲಾಗುವುದು ಉದುರುವುದು ಬೋಳಾಗುವುದು ಶಿಶಿರದ ಸ್ವಾಗತಕ್ಕೆ ಸಜ್ಜಾಗುವುದು ಇವೆಲ್ಲ ಶರತ್ಕಾಲದ ಗುಣಗಳು. ಅಥವಾ ಆಂಗ್ಲರು ಇವನ್ನು ಅವಗುಣಗಳು ಎಂದೂ ಕರೆಯಬಹುದು.


ಮಳೆ ಚಳಿಗಳನ್ನು ಹೆಚ್ಚು ಟೀಕಿಸಿದವರಲ್ಲಿ ಆಂಗ್ಲರು ಮೊದಲ ಸಾಲಿನಲ್ಲಿ ನಿಲ್ಲುತ್ತಾರೇನೋ. ವರ್ಷದ ಹನ್ನೆರಡು ತಿಂಗಳುಗಳೂ ಒಣ ಹವೆ ಇರಲಿ, ಬಿಸಿಲು ಬರಲಿ ಎಂದು ಹಾರೈಸುವ ಆಂಗ್ಲರಿಗೆ ಮಳೆ ಚಳಿಗಾಲದ ಬಗ್ಗೆ ವಿಪರೀತ ಅಸಹನೆ. ತೆಳ್ಳಗಿನ ಕುಳ್ಳಗಿನ ಬಟ್ಟೆ ತೊಟ್ಟು ಬಯಲಲ್ಲಿ ಓಡಾಡಲು ಬಿಡದ, ಕೋಟು ಶಾಲು ಕೊಡೆ ಕೊಂಡೇ ಹೊರಗಿನ ತಿರುಗಾಟ ಮಾಡಲು ಒತ್ತಾಯಿಸುವ ಎಲ್ಲ ದಿನಗಳೂ ಇಲ್ಲಿ ಮೂದಲಿಕೆಗೆ ಒಳಗಾಗುತ್ತವೆ. ನಗರದಲ್ಲಿ ನಲ್ಲಿ ತಿರುಗಿಸಿ ನೀರುಪಡೆಯುವ, ಅಂಗಡಿಯಿಂದ ಬುಟ್ಟಿ ತುಂಬಾ ತರಕಾರಿ ಮೀನು ಹಣ್ಣು ಕೋಳಿ ಇನ್ನಿತರ ಅಡುಗೆಯ ವಸ್ತುಗಳನ್ನು ಖರೀದಿಸುವವರು ಉಳುವ ಬೆಳೆಯುವ ಅನಿವಾರ್ಯತೆ ಹೊಣೆ ಇಲ್ಲದವರು ಚಳಿ ಮಳೆಗಳನ್ನು ಕಂಡು ಸಹಜವಾಗಿಯೇ ಖಿನ್ನರಾಗುತ್ತಾರೇನೋ. ಬ್ರಿಟನ್ನಿನ ಹಳ್ಳಿಗಳಲ್ಲಿ ಬೇಸಾಯಗಾರರಾಗಿ ಆಲೂಗಡ್ಡೆ, ಓಟ್ಸ್, ಟೊಮೇಟೊ, ಆಪಲ್, ಸ್ಟ್ರಾಬೆರಿ ಬೆಳೆಸುವ ರೈತರು ನಗರವಾಸಿಗಳ ಈ ಗೊಣಗಾಟವನ್ನು ಒಪ್ಪಲಿಕ್ಕಿಲ್ಲ. ಎಲ್ಲ ದೇಶದ ರೈತರಂತೆ ಇಲ್ಲಿನ ರೈತರೂ ತೋಟಗಾರರೂ ಯಾವ ಯಾವ ಮಾಸ ಹೇಗೇಗೆ ಇರಬೇಕೋ ಯಾವಾಗ ಯಾವಾಗ ಬದಲಾಗಬೇಕೋ ಹಾಗೆ ಹಾಗೆಯೇ ಆಗಲಿ ಎಂದು ಹಾರೈಸುವವರು.

ಇಂಗ್ಲೆಂಡ್ ನಲ್ಲಿ ಹದಿನೈದನೆಯ ಶತಮಾನದವರೆಗೂ ಬೇಸಿಗೆಯ ತಿಂಗಳುಗಳು ಮುಗಿದು ಬಂದಿರುವ ಈಗಿನಂತಹ ಕಾಲವನ್ನು ಬೆಳೆಗಳ ಕೊಯ್ಲಿನ ಕಾಲ, ಕಟಾವಿನ ಸಮಯ ಎಂದೇ ಕರೆಯುತಿದ್ದರು. ಈ ದೇಶದಲ್ಲಿ ಬೇಸಾಯವೇ ಮುಖ್ಯ ಉದ್ಯೋಗವಾಗಿದ್ದ ಜೀವನವಾಗಿದ್ದ ಕಾಲವೊಂದರಲ್ಲಿ ಬಿತ್ತುವುದು ಉತ್ತುವುದು ಕೊಯ್ಯುವುದು ತಿನ್ನುವುದು ಮಾರಾಟಮಾಡುವುದೇ ಮುಖ್ಯ ಸಾಮಾಜಿಕ ಆರ್ಥಿಕ ಘಟನೆಗಳು ಪರಿವರ್ತನೆಗಳು ಆಗಿದ್ದ ಸಮಯದಲ್ಲಿ “ಆಟಮ್” ಎಂಬ ಶಬ್ದದ ಬಳಕೆಯೇ ಇಲ್ಲಿ ಇರಲಿಲ್ಲ. ಇಟಾಲಿಯನ್ ಮೂಲದ ಶಬ್ದ “ಆಟು” ಪುರತಾನ ರೋಮನ್ನರ ಪ್ರಭಾವ ಇದ್ದಲೆಲ್ಲ ಹರಡಿರಬಹುದೆಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. ಹಳೆಯ ಇಟಾಲಿಯನ್ ಭಾಷೆಯಲ್ಲಿ “ಮಾಸಗಳ ಬದಲಾವಣೆ” ಎಂಬ ಅರ್ಥದ “ಆಟು” ಯುರೋಪಿನಲ್ಲಿ ಹಬ್ಬಿ ಹರಡಿ ಹದಿನೆಂಟನೆಯ ಶತಮಾನದಲ್ಲಿ ಫ್ರೆಂಚರ ಮೂಲಕ ಆಟಮ್ ಆಗಿ ಇಂಗ್ಲೆಂಡ್ ಗೂ ಕಾಲಿಟ್ಟಿತು. ಇಂತಹ “ಆಟಮ್” ನ ಸ್ವಾಗತಕ್ಕೆ ಬಿಬಿಸಿ ರೇಡಿಯೋ ಮೊನ್ನೆ ಮೊನ್ನೆ ಶರತ್ಕಾಲದ ಆಕಾರ ವಿಕಾರಗಳು ಲಕ್ಷಣ ವಿಲಕ್ಷಣಗಳನ್ನು ಪಟ್ಟಿ ಮಾಡಿ ಹೇಳಿದೆ.

ಇಲ್ಲಿನ ಶರತ್ಕಾಲದ ಸತ್ಯಾಸತ್ಯತೆಗಳನ್ನು ಲಕ್ಷಣಗಳನ್ನು ಸೇರಿಸಿ ವಿಲಕ್ಷಣ ವಿಚಿತ್ರ ಎಂದೆಲ್ಲ ಕರೆಯುವುದು ಆಂಗ್ಲರ ವಿಡಂಬನೆಯೂ ಹೌದು ವಿಮರ್ಶೆಯೂ ಹೌದು. ಇಂತಹ ವಿಲಕ್ಷಣ ಮಾಸದ ಅನುಭೂತಿ ಸಿಗಬೇಕಿದ್ದರೆ ಭೂಮಧ್ಯ ರೇಖೆಯ ಹೆಚ್ಚು ಉತ್ತರಕ್ಕೂ ದಕ್ಷಿಣಕ್ಕೋ ಹೋಗಬೇಕು, ಹೋಗಿ ಇರಬೇಕು.

ಪ್ರಾಣಿಪಕ್ಷಿಗಳ ಪ್ರಪಂಚದ ಅತಿ ದೀರ್ಘ ವಲಸೆ ಎನ್ನುವ ಪ್ರಸಿದ್ಧಿಯ “ಆರ್ಟಿಕ್ ಟರ್ನ್” ಸಂತತಿಯ ಹಕ್ಕಿಗಳ ಹನ್ನೊಂದು ಸಾವಿರ ಮೈಲುಗಳ ಚಳಿಗಾಲದ ವಲಸೆ ಆರಂಭ ಆಗುವುದು ಈಗಲೇ. ಮರ ಗಿಡಗಳ ಎಲೆಗಳಲ್ಲಿ ಹುದುಗಿರುವ ಸಕ್ಕರೆಯ ಅಂಶದಿಂದಾಗಿ ಹಳದಿ ಕೆಂಪು ನೇರಳೆ ಬಣ್ಣಕ್ಕೆ ತಿರುಗುವ ಎಲೆಗಳು ಮನಮೋಹಕವಾಗಿ ಸಿಂಗಾರಗೊಳ್ಳುವುದು ಈ ಸಮಯದಲ್ಲೇ. ಲೈಂಗಿಕ ಕ್ರಿಯೆಗಳಿಗೆ ಕಾರಣವಾದ ಟೆಸ್ಟೋಸ್ಟೆರೋನ್ ಹಾರ್ಮೋನ್ ಗಂಡು ಹೆಣ್ಣುಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಇರುವುದು ಕೂಡ ಈ ಕಾಲದಲ್ಲಿಯೇ. ಹೆಣ್ಣುಮಕ್ಕಳ ಕೂದಲು ಕಡಿಮೆ ಉದುರುವುದು ಈ ಮಾಸದಲ್ಲೇ ; ಹೃದಯಾಘಾತಗಳ ಸಂಖ್ಯೆಯೂ ಆಟಮ್ ನಲ್ಲಿ ಕಡಿಮೆ ಎಂದು ಮಿಚಿಗನ್ ಯೂನಿವರ್ಸಿಟಿಯ ಸಂಶೋಧನೆಯೊಂದು ತಿಳಿಸುತ್ತದೆ. ಇಲ್ಲಿಯ ತನಕ ಆಸ್ಕರ್ ಪ್ರಶಸ್ತಿ ಪಡೆದ ಚಲನಚಿತ್ರಗಳನ್ನು ಗಮನಿಸಿದರೆ ವರ್ಷದ ನಾಲ್ಕು ಮಾಸಗಳಲ್ಲಿ ಮೂರು ಮಾಸಗಳ ಹೆಸರು ಹೊತ್ತ ಚಿತ್ರಗಳಿಗೆ ಪ್ರಶಸ್ತಿ ಲಭಿಸಿದ ದಾಖಲೆ ಇದೆ. ಆದರೆ “ಆಟಮ್ ” ಶಬ್ದವನ್ನು ಶೀರ್ಷಿಕೆಯಲ್ಲಿ ಪಡೆದ ಚಿತ್ರವೊಂದಕ್ಕೆ ಆಸ್ಕರ್ ಇನ್ನೂ ಸಿಕ್ಕಿಲ್ಲವಂತೆ. ಹೀಗೆಯೇ ಸಾಗುತ್ತದೆ ಶರದೃತುವಿನ ಲಕ್ಷಣಗಳ ಅಥವಾ ವಿಲಕ್ಷಣತೆಗಳ ಪಟ್ಟಿ.

ಈ ವಿಲಕ್ಷಣತೆಗಳನೆಲ್ಲ ಬದಿಗಿಟ್ಟು, ಆಟಮ್ ಅನ್ನು ಟೀಕಿಸುವವರ ಬಗ್ಗೆ ಮೂಗುಮುರಿದು ಕೋಟು ತೊಟ್ಟು ಶಾಲು ಹೊದ್ದು ಇಂತಹ ಕಾಲವನ್ನೇ ಕಾದು ನಡೆಯಲು ತಿರುಗಾಡಲು ಹೋಗುವವರೂ ಇದ್ದಾರೆ. ಅದು ಕ್ಯಾಮೆರಾ ಹಿಡಿದೋ ಕೈಬೀಸಿಯೋ ಇರಬಹುದು. ಎಲೆಗಳನ್ನು ಉದುರಿಸಿ ಅಂತರ್ಮುಖಿಗಳಾಗುವ ಮರಗಳನ್ನು, ಹಸಿರು ಹುಲ್ಲಿನ ಮೇಲಿನ ಹಾಸಿದ ಮಂಜಿನ ಮಲ್ಲಿಗೆಯನ್ನು, ಕೆಂಪು ಹಳದಿ ನೇರಳೆಗೆ ಬದಲಾಗಿ ಎಲೆಗಳು ಆಡುವ ಬಣ್ಣದಾಟದ ಜಾಡನ್ನು.. ಅರಸಿ ಹುಡುಕಿ ಚಿತ್ರ ತೆಗೆಯುವವರೂ ಇದ್ದಾರೆ.

ಶರತ್ಕಾಲವೊಂದು ಹೇಗಿತ್ತು? ಹೇಗಿದೆ? ಎಂದು ಶಬ್ದಜೋಡಿಸಿ ಸಾಲುಪೋಣಿಸಿ ಬರೆಯುವವರೂ ಇದ್ದಾರೆ. ಆಂಗ್ಲ ಭಾಷೆಯ ಅಗ್ರಗಣ್ಯ ಪ್ರಣಯ ಕವಿಗಳ ಸಾಲಿನಲ್ಲಿ ಗುರುತಿಸಲ್ಪಡುವ ಕೀಟ್ಸ್ ಹೀಗೆ ಆಟಮ್ ಕಾಲದ ಸಂಜೆ ಇಂಗ್ಲೆಂಡ್ ನ ವಿಂಚೆಸ್ಟರ್ ಎಂಬ ಊರಿನಲ್ಲಿ ತೊರೆಯ ಬಳಿ ನಡೆದಾಡಿ, ಅಲ್ಲಿ ಪಡೆದ ಸ್ಪೂರ್ತಿಯಿಂದ ಬರೆದ ಕವನವೊಂದು ಜಗತ್ಪ್ರಸಿದ್ಧವಾಯಿತು. ತಾನು ಬಾಡಿಗೆಗೆ ಇದ್ದ ಮನೆಯೊಡತಿಯ ಮಗಳ ವಯೊಲಿನ್ ಅಭ್ಯಾಸ ಕರ್ಕಶವಾಗಿ ಕೇಳುತ್ತಿದ್ದಾಗ ತಪ್ಪಿಸಿಕೊಳ್ಳಲು ಹೀಗೆ ವಿಹಾರಕ್ಕೆ ಹೋಗುತ್ತಿದ್ದ ಕೀಟ್ಸ್ “ಟು ಆಟಮ್”(ಶರತ್ಕಾಲಕ್ಕೆ ) ಎಂಬ ತಲೆಬರಹದಡಿ ಬರೆದ ಕವನ ಶರತ್ಕಾಲವನ್ನು ನೋಡದವರಿಗೂ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿತು. ಶರದೃತುವಿನ ಬದಲಾವಣೆಗಳು ಆಗುಹೋಗುಗಳಿಂದ ಬಹುದೂರ ಇರುವವರೂ ಕೀಟ್ಸ್ ನ ಸಾಲುಗಳ ಮೂಲಕ ಹೀಗೊಂದು ಮಾಸದ ವರ್ಣನೆ ಅನುಭವ ಪಡೆಯುವಂತಾಯಿತು. ೧೮೧೯ರ ಸೆಪ್ಟೆಂಬರ್ ತಿಂಗಳಲ್ಲಿ ಬರೆದ ಈ ಕವನ ೧೮೨೦ರಲ್ಲಿ ಪ್ರಕಟವಾಯಿತು. ಈ ಕವನದ ಪ್ರಕಟಣೆಯ ಒಂದು ವರ್ಷದಲ್ಲಿ ಕೀಟ್ಸ್ ತೀರಿಹೋದ. ಕೀಟ್ಸ್ ನ ಬದುಕಿನ ಕೊನೆಯ ಸಾಲುಗಳಾಗಿ “ಟು ಆಟಮ್” ಗುರುತಿಸಲ್ಪಡುತ್ತದೆ ಮತ್ತು ಪ್ರತಿ ಆಟಮ್ ಅಲ್ಲೂ ನೆನಪಾಗುತ್ತವೆ.

೧.
“ಇಬ್ಬನಿ ಹಾಸುವ ಹಾಗು ಪೈರು ಫಲವಾಗುವ ಈ ಮಾಸ
ಮಾಗಿದ ಸೂರ್ಯನ ಆಪ್ತಸ್ನೇಹಿಯೂ ಹೌದು
ಜೊತೆಗೂಡಿ ಇವರಿಬ್ಬರು ಹೂಡುತಿರುವರು ಸಂಚ
ಚಪ್ಪರಕೆ ಹಬ್ಬಿದ ಬಳ್ಳಿಗಳ
ಹೊರಿಸುವೆವು ಹರಸುವೆವು ದ್ರಾಕ್ಷಿ ಗೊಂಚಲುಗಳಿಂದ;
ಹಾವಸೆ ಕಟ್ಟಿದ ಮನೆಯ ತೋಟದ ಮರಗಳ
ಅದರಲಿ ಬಾಗಿ ತೂಗುವ ಸೇಬುಗಳ
ಹಣ್ಣುಗಳ ಒಳಗೆ ತುಂಬಿಸುವೆವು ಪಕ್ವ ಪಾಕವನಿಂದು;
ಕುಂಬಳಬಳ್ಳಿಗಳಲೂ ಉಬ್ಬಿ ಹಿಗ್ಗಿದ ಕಾಯಿಗಳು
ದಪ್ಪಗೆ ಕೊಬ್ಬಿದ ಹೆಝೆಲ್ ಚಿಪ್ಪುಗಳು
ಅವುಗಳೊಳಗೆ ಸಿಹಿ ಬೀಜವ ಸೇರಿಸಿ;
ಮತ್ತೆ ಮೊಗ್ಗಾಗಿ ಚಿಗಿತು
ನಂತರ ಹೂವಾಗಿ ಬಿರಿದು,
ಆಮೇಲೆ ಹೂಗಳು ಜೇನುನೊಣಗಳಿಗೆ ದೊರೆತು
ಬಿಸಿಲದಿನಗಳು ಎಂದೂ ಮುಗಿಯದೆಂಬ ಭ್ರಮೆಯಲಿ
ಗೂಡ ತುಂಬಾ ತುಂಬಿಸಿ ಜೇನು.

೨.
ಹಣ್ಣು ಕಾಯಿ ಹೂಗಳು ರಾಶಿ ರಾಶಿ ನೇತಾಡುವ ವಸಂತ ಮಾಸವ ಯಾರು ನೋಡಿಲ್ಲ?
ಸುತ್ತಾಡಿ ನೋಡಿ, ಕಾಳು ಧಾನ್ಯಗಳ ಕೂಡಿಟ್ಟ ಕಣಜ ಕಂಡರೆ ತಿಳಿಯಿರಿ ಬಂತು ಶರತ್ಕಾಲ
ಧಾನ್ಯಗಳ ಜೊಳ್ಳು ಸಿಪ್ಪೆಗಳ ತಂಗಾಳಿಯಲಿ ತೇಲಿ ತೂರಿ
ಅಲ್ಲೂ ಸಿಗದಿದ್ದರೆ ಅರೆ ಕೊಯ್ಲು ಮಾಡಿದ ಹೊಲದ ಹಿನ್ನೆಲೆಯಲ್ಲಿ ನೋಡಿ
ಅಲ್ಲೆಲ್ಲೋ ಮಲಗಿರಬಹುದು ಶರತ್ಕಾಲದ ಮೋಡಿ
ಕೊಯ್ಯದೆ ಬಿಟ್ಟ ಪೋಪಿ ಕುಸುಮಗಳ ಘಮಲ ಅಮಲಿನಲಿ
ಕುಡುಗೋಲ ಬಳಸದೆ ಉಳಿಸಿದ ಹೊಲಗಳ
ಕೆಲವೊಮ್ಮೆ ಬೇಸಾಯದ ಕಣದಲ್ಲಿ ಉದುರಿದ ಧಾನ್ಯಗಳ
ಹೆಕ್ಕುತ್ತಾ
ಬೆನ್ನ ಬಾಗಿಸಿ ಕೊನೆಗೆ ಅಳಿದುಳಿದ ಕಾಳುಕಸ ಹುಡುಕುತ್ತ
ಇನ್ನೂ ಹುಡುಕುವಿರಾದರೆ, ಸೇಬು ಹಣ್ಣುಗಳ ಹಿಂಡಿ ರಸ ತೆಗೆಯುವಾಗ
ಉಕ್ಕುವ ನೊರೆಗಳ ತಾಳ್ಮೆಯಿಂದ ನೋಡುವ ನೋಟದಲ್ಲಿ ದೊರಕೀತು ಶರತ್ಕಾಲ

೩.
ಎಲ್ಲಿವೆ ವಸಂತದ ಹಾಡುಗಳು? ಹಾಂ,ಎಲ್ಲಿವೆ?
ಯೋಚಿಸಲೂ ಬೇಡಿ ನನಗಂತೂ ಕೇಳಿಸದು
ಇಲ್ಲೀಗ ಮುಸ್ಸಂಜೆಯ ಆಕಾಶದಲ್ಲಿ ಮೋಡಗಳು ಬರೆದ ಚಿತ್ತಾರ
ಹೊಲದಲ್ಲಿ ಕೊಯ್ದು ಉಳಿದ ಬುಡಗಳ ಮೇಲೂ ಬಿದ್ದಿದೆ ಬಣ್ಣಗಳ ಆಕಾರ
ಕೀಟಗಳು ಕೂಡಿ ಗುಂಯ್ ಗುಟ್ಟಿವೆ ಮುಸ್ಸಂಜೆಯ ಶೋಕಗೀತ
ಬೆಳಕಿಗೆ ತೇಲಿ ಕತ್ತಲಿಗೆ ಮುಳುಗಿ ಶರತ್ಕಾಲದಲಿ ಕೇಳಿದೆ ಜೀವಗಾನ
ಬೆಳೆದ ಕುರಿಗಳ ಬಲವಾದ ಕೂಗು ಬೆಟ್ಟಗಳ ಸರಹದ್ದಿನಿಂದ
ಮಿಡತೆಗಳೂ ರೆಕ್ಕೆ ಬಡಿದಿವೆ ಮೃದು ತೀಕ್ಷ್ಣ ಧ್ವನಿಯಿಂದ
ಕೆಂಪು ಹಕ್ಕಿಗಳೂ ಶಿಳ್ಳೆ ಹಾಕಿವೆ ತೋಟದೊಳಗಿಂದ
ಚಿಲಿಪಿಲಿಯೂ ಕೇಳಿದೆ ಮುಸ್ಸಂಜೆಯ ನುಂಗುವ ಮುಗಿಲಿನಿಂದ ”

ಕೀಟ್ಸ್ ನ ಕವಿತೆ ವಸಂತ ಕಾಲದ ಮೇಲೆ ಧಾಳಿ ಮಾಡುತ್ತಾ, ಶರತ್ಕಾಲದ ಪ್ರತಿಮೆಗಳನ್ನು ಕಣ್ಣೆದುರು ಇಡುತ್ತ, ಚಿತ್ರಗಳನ್ನೂ ತೋರಿಸುತ್ತ ಶಬ್ದಗಳನ್ನೂ ಕೇಳಿಸುತ್ತಾ ಸಾಗುತ್ತದೆ. ಹೂವು, ಬಳ್ಳಿ, ಕೀಟ, ಹಕ್ಕಿ, ಮುಗಿಲು ಮೋಡಗಳಿಂದ ಹಾಡು ಹೇಳಿಸುತ್ತದೆ. ಹೇಳಬೇಕಾದ್ದೆಲ್ಲವನ್ನು ಹೇಳಿದನೋ ಇಲ್ಲವೋ, ಬರೆದಿದ್ದಕ್ಕಿಂತ ಬರೆಯದಿರುವುದೇ ಹೆಚ್ಚಿದೆಯೋ, ಕವನದ ಕೊನೆ ಹೀಗೇಕಾಯ್ತು ಎನ್ನುವ ಪ್ರಶ್ನೆಗಳನ್ನು ಹುಟ್ಟಿಸುತ್ತ ಕವನ ಮುಗಿದು ಹೋಗುತ್ತದೆ, ಮತ್ತೆ ಮತ್ತೆ ಓದಲು ಪ್ರೇರೇಪಿಸುತ್ತದೆ. ಈ ಮಾಸದ ಸಮ್ಮೋಹಕ ವಾತಾವರಣ ಮೂಡಿಸುವ ಅಚ್ಚರಿ, ಅಲ್ಲಿ ಕಾಣುವ ಸಂಕೀರ್ಣ ವಿವರಗಳು, ಜೀವವೈವಿಧ್ಯದ ಪರಿವರ್ತನೆಗಳು ಕೀಟ್ಸ್ ನ ಸಾಲುಗಳಲ್ಲಿ ಅಭಿವ್ಯಕ್ತಿಗೊಂಡಿವೆ. ೧೮ನೆಯ ಶತಮಾನದಲ್ಲಿನ ಇಂಗ್ಲೆಂಡ್ ಗೆ ಶರದೃತುವಿನ ಆಗಮನಕ್ಕೆ ಆಗುತ್ತಿದ್ದ ಪ್ರಾಕೃತಿಕ ಬದಲಾವಣೆಗಳು, ಸೂರ್ಯನೂ ಶರತ್ಕಾಲವೂ ಜೊತೆಯಾಗಿ ಹಣ್ಣುಗಳಲ್ಲಿ ಜೀವ ತುಂಬುವುದು, ಬೆಳೆಗಳು ಫಲಕೊಡುವುದು ಕೊಯ್ಲು ಮುಗಿದು ಕಣಜ ತುಂಬುವುದು, ಕುರಿಗಳ ಕೂಗು, ಮಿಡತೆ ಕೀಟಗಳ ರೆಕ್ಕೆಯ ಬಡಿತ ಎಲ್ಲವೂ “ಇಂಗ್ಲಿಷ್ ಆಟಮ್” ಗೆ ಜೀವ ತುಂಬುತ್ತವೆ. ತನ್ನ ಸುತ್ತಲಿನ ಸೂಕ್ಷ್ಮಾತಿಸೂಕ್ಷ್ಮ ವಸ್ತು ವಿಷಯಗಳಿಗೂ ಶರತ್ಕಾಲವನ್ನು ಬಣ್ಣಿಸುವ ಹೊಣೆ ನೀಡಿದ್ದಾನೆ ಕೀಟ್ಸ್.

(ಫೋಟೋ ಕೃಪೆ : ಗಣೇಶ ಗಣಪತ್ ರಾವ್, ಬ್ರಿಸ್ಟಲ್)

ಆಂಗ್ಲ ಸಂಸ್ಕೃತಿಯ ಭಾಗವಾದ ದ್ರಾಕ್ಷಿಯ ತೋಟಗಳಲ್ಲಿ, ಕುಂಬಳ ಬಳ್ಳಿಗಳಲ್ಲಿ, ಸೇಬಿನ ಮರಗಳಲ್ಲಿ ಮತ್ತೆ ಬಲಿತ ಸೇಬುಗಳನ್ನು ಹಿಂಡಿ ರಸತೆಗೆದು ಮನೆಮನೆಗಳಲ್ಲಿ ಸೈಡರ್ ಎನ್ನುವ ಪಾನೀಯ ತಯಾರಿಸುವುದರಲ್ಲಿ ಈ ಮಾಸದ ಅನ್ವೇಷಣೆ ಇದೆ. ಕವನದ ಮೊದಲ ಭಾಗ ಬೆಳೆಗಳು ಫಲಕೊಡುವುದನ್ನು, ಎರಡನೆಯ ಭಾಗ ಬೇಸಾಯಗಾರರ ಶ್ರಮವನ್ನು ಮತ್ತು ಕೊನೆಯ ಭಾಗ ಶರತ್ಕಾಲ ಕ್ಷೀಣಿಸಿ ಚಳಿಗಾಲದ ಆಗಮನಕ್ಕೆ ಸಜ್ಜಾಗುವುದನ್ನು ತಿಳಿಸುತ್ತದೆ.

ಕೀಟ್ಸ್ ನ ಆಟಮ್ ಸಾಲುಗಳ ಓದು ಇದೀಗ ಮುಗಿದಿದೆ. ಇನ್ನೂ ಮುಂದುವರಿಯಬೇಕಿತ್ತು ಇನ್ನೇನೋ ಹೇಳಬೇಕಿತ್ತು ಎನ್ನುತ್ತಲೇ ಕೊನೆಗೊಂಡ ಕವನ ೧೮೧೯ರಲ್ಲಿ ಹಾಳೆಯಲ್ಲಿ ಅಂತ್ಯಗೊಂಡಿದ್ದರೂ ಇಂದಿಗೂ ಕುತೂಹಲ ಮೂಡಿಸುತ್ತದೆ, ಕಲ್ಪನೆ ಅರಳಿಸುತ್ತದೆ, ಶರತ್ಕಾಲದಲ್ಲಿ ಇಲ್ಲೇ ಎಲ್ಲೋ ನಮ್ಮ ಸುತ್ತ ಮುತ್ತ ಮತ್ತೊಂದು ಮಗದೊಂದು ಸಾಲನ್ನು ಜೋಡಿಸುತ್ತದೆ, ಒಂದಿಷ್ಟು ತಿಳಿಸಿ ಮತ್ತೊಂದಷ್ಟು ಹೇಳದೆ ಮತ್ತೆ ಚಳಿಗಾಲ ಬರುವ ಮೊದಲು ಜಾರಿ ಮಾಯ ಆಗುತ್ತದೆ.