ರಶೀದ್ ಪುರೋಳನ್ನು ಹೊತ್ತೊಯ್ದು ಮದುವೆಯಾಗಿರುತ್ತಾನೆ ನಿಜ. ಆದರೆ ಅವಳನ್ನು ನಿಜಕ್ಕೂ ಪ್ರೀತಿಸಿರುತ್ತಾನೆ. ಅವಳೂ ಸಹ ಮೊದಮೊದಲಿಗೆ ಇದ್ದ ಬೇಸರವನ್ನು ಅವನ ಒಳ್ಳೆಯ ನಡತೆಯಿಂದಾಗಿ ಮರೆತು ಅವನಲ್ಲಿ ಒಬ್ಬ ಒಳ್ಳೆಯ ಗಂಡನನ್ನು ಕಂಡುಕೊಂಡಿರುತ್ತಾಳೆ. ಪುರೋಳ ಅಣ್ಣ ಒಮ್ಮೆ ರಶೀದನ ಹೊಲಕ್ಕೆ ದ್ವೇಷದಿಂದ ಬೆಂಕಿ ಹಾಕಿದಾಗ ರಶೀದನ ಸಂಬಂಧಿಗಳು ಅವನ ಮೇಲೆ ಕಂಪ್ಲೇಂಟ್ ಮಾಡಲು ಹೇಳುತ್ತಾರೆ. ಆಗ ರಶೀದ್ “ನಾನವನ ತಂಗಿಯನ್ನು ಹೊತ್ತು ತಂದಿರುವಾಗ ಅವನು ಮಾಡಿರೋದ್ರಲ್ಲಿ ತಪ್ಪೇನಿದೆ… ನಮ್ಮ ತಂಗಿಯನ್ನು ಅವರು ಹೊತ್ತೊಯ್ದಿದ್ದರೆ ನಾವು ಸುಮ್ಮನಿರುತ್ತಿದ್ದೆವಾ?” ಎಂದು ಕೇಳುತ್ತಾನೆ. ಇಲ್ಲಿ ಅವನಿಗೆ ತನ್ನ ತಪ್ಪಿನ ಬಗ್ಗೆ ಅರಿವಿದೆ ಎಂದು ತಿಳಿಯುತ್ತದೆ.
ಆಶಾ ಜಗದೀಶ್ ಅಂಕಣ

ಅಮೃತಾ ಪ್ರೀತಂ ರ ಪಿಂಜರ್ ಓದಿ ಸ್ಥಬ್ದಳಾಗಿ ಹೋಗಿದ್ದೆ. ಯಾವುದದು ತೀವ್ರ ಭಾವ, ಕೊರೆ ಹಿಂಡುತ್ತಿದ್ದ ಭಾವ, ಪುರೋ ಹೆಣ್ಣಾಗಿದ್ದದ್ದಷ್ಟೇ ಸಾಕಿತ್ತಾ ಅವಳ ಭಾವ ನನ್ನನ್ನಾವರಿಸಲಿಕ್ಕೆ… ಇಂತಹ ಅದೆಷ್ಟೋ ಪ್ರಶ್ನೆಗಳಿಗೆ ನಿಲುಕದಷ್ಟು ಕಣ್ಣೀರು ಸುರಿದು ಹೋಗಿತ್ತು. ಇದು ನನ್ನ ದೌರ್ಬಲ್ಯವಾ ಶಕ್ತಿಯಾ ಗೊತ್ತಿಲ್ಲ. ಒಂದು ಕಥೆ ನನ್ನೊಳಗೆ ಇಳಿಯುವುದೇ ಹೀಗೇ. ಅದರಲ್ಲೂ ‘ಪಿಂಜರ್’ ನಂತಹ ಕಥೆ ವಾರಗಟ್ಟಲೆ ನನ್ನನ್ನ ಕಾಡದೆ ಅದರ ಹ್ಯಾಂಗೋವರ್ ಇಳಿಯುವುದು ಹೇಗೆ ಸಾಧ್ಯವಿತ್ತು… ನಾ ಓದಿದ್ದದ್ದು ಅದರ ಕನ್ನಡ ಅನುವಾದ. ಅದನ್ನು ಕನ್ನಡಕ್ಕೆ ತಂದವರು ಎಲ್.ಸಿ. ಸುಮಿತ್ರಾರವರು.

“ಪಿಂಜರ್” ಚಲನಚಿತ್ರವಾಗಿಯೂ ತೆರೆಗೆ ಬಂದಿದೆ. ಪುರೋ ಮತ್ತು ರಶೀದನ ಪಾತ್ರದಲ್ಲಿ ಊರ್ಮಿಳಾ ಮಾಟೋಂಡ್ಕರ್ ಮತ್ತು ಮನೋಜ್ ಭಾಜಪೇಯಿ ಅಕ್ಷರಶಃ ಜೀವ ತುಂಬಿದ್ದಾರೆ. ತನ್ನ ಆಸೆಗೆ ವಿರುದ್ಧವಾಗಿ ಅಪಹರಿಸಿ ಹೊತ್ತೊಯ್ದವನೊಂದಿಗೆ ಬದುಕಬೇಕಾಗಿ ಬಂದದ್ದು ಪುರೋ ಪಾಲಿನ ದುರಂತ. ಕೊನೆಗೊಮ್ಮೆ ಪುರೋ ಗೆ ತನ್ನವರನ್ನು ಮರಳಿ ಸೇರಿಕೊಳ್ಳುವ ಅವಕಾಶ ಸಿಗುತ್ತದೆ. ರಶೀದನೂ ತನ್ನ ತಪ್ಪಿಗೆ ಇದೇ ತಕ್ಕ ಶಾಸ್ತಿ ಎಂದು ಅವಳನ್ನು ಕಳಿಸಿಕೊಡಲು ತಯಾರಾಗುತ್ತಾನೆ. ಆದರೆ ಪುರೋ “ಈಗ ನೀನೇ ನನ್ನ ಪಾಲಿನ ಸತ್ಯ ಮತ್ತು ನಾನು ಈ ಸತ್ಯದೊಂದಿಗೇ ಬದುಕುತ್ತೇನೆ” ಎನ್ನುತ್ತಾಳೆ. ಪುರೋಳನ್ನು ಮದುವೆಯಾಗಬೇಕಿದ್ದ ರಾಮಚಂದ್ “ಅವಳನ್ನು ಅವಳ ಪಾಡಿಗೆ ಬಿಟ್ಟುಬಿಡಿ, ಮತ್ತೊಮ್ಮೆ ಅವಳನ್ನು ಅವಳ ಮನೆಯಿಂದ ದೂರ ಮಾಡುವುದು ಬೇಡ” ಅನ್ನುತ್ತಾನೆ.

ರಶೀದ್ ಪುರೋಳನ್ನು ಹೊತ್ತೊಯ್ದು ಮದುವೆಯಾಗಿರುತ್ತಾನೆ ನಿಜ. ಆದರೆ ಅವಳನ್ನು ನಿಜಕ್ಕೂ ಪ್ರೀತಿಸಿರುತ್ತಾನೆ. ಅವಳೂ ಸಹ ಮೊದಮೊದಲಿಗೆ ಇದ್ದ ಬೇಸರವನ್ನು ಅವನ ಒಳ್ಳೆಯ ನಡತೆಯಿಂದಾಗಿ ಮರೆತು ಅವನಲ್ಲಿ ಒಬ್ಬ ಒಳ್ಳೆಯ ಗಂಡನನ್ನು ಕಂಡುಕೊಂಡಿರುತ್ತಾಳೆ. ಪುರೋಳ ಅಣ್ಣ ಒಮ್ಮೆ ರಶೀದನ ಹೊಲಕ್ಕೆ ದ್ವೇಷದಿಂದ ಬೆಂಕಿ ಹಾಕಿದಾಗ ರಶೀದನ ಸಂಬಂಧಿಗಳು ಅವನ ಮೇಲೆ ಕಂಪ್ಲೇಂಟ್ ಮಾಡಲು ಹೇಳುತ್ತಾರೆ. ಆಗ ರಶೀದ್ “ನಾನವನ ತಂಗಿಯನ್ನು ಹೊತ್ತು ತಂದಿರುವಾಗ ಅವನು ಮಾಡಿರೋದ್ರಲ್ಲಿ ತಪ್ಪೇನಿದೆ… ನಮ್ಮ ತಂಗಿಯನ್ನು ಅವರು ಹೊತ್ತೊಯ್ದಿದ್ದರೆ ನಾವು ಸುಮ್ಮನಿರುತ್ತಿದ್ದೆವಾ?” ಎಂದು ಕೇಳುತ್ತಾನೆ. ಇಲ್ಲಿ ಅವನಿಗೆ ತನ್ನ ತಪ್ಪಿನ ಬಗ್ಗೆ ಅರಿವಿದೆ ಎಂದು ತಿಳಿಯುತ್ತದೆ. ಮನೆಗೆ ಬಂದಾಗ ಪುರೋಳಿಗೆ ಎಲ್ಲವನ್ನೂ ಹೇಳುತ್ತಾನೆ.

ಪುರೋ “ನನ್ನ ಮೇಲೆ ಕೋಪವಾ” ಎಂದು ಕೇಳುತ್ತಾಳೆ. ಆಗ ರಶೀದ “ಹೇ ಇಲ್ಲ.. ಮೊಟ್ಟ ಮೊದಲಬಾರಿಗೆ ಮನಸೆಲ್ಲ ಹಗುರ ಆದ ಹಾಗೆ ಅನಿಸ್ತಿದೆ…” ಎಂದು ನಿರುಮ್ಮಳವಾಗಿ ಮಲಗುತ್ತಾನೆ. ಇದು ಅವನಿಗೆ ತಾನು ಮಾಡಿದ್ದರ ಬಗ್ಗೆ ಪಶ್ಚಾತಾಪವಿರುವುದನ್ನು ತೋರಿಸುತ್ತದೆ. ಒಟ್ಟಾರೆ ಮೂಲ ಕಥೆಗೆ ಒಂಚೂರೂ ಧಕ್ಕೆಯಾಗದಂತೆ ಅಷ್ಟೇ ಸಮರ್ಥವಾಗಿ ತೆರೆಗೆ ತಂದಿದ್ದಾರೆ ಚಂದ್ರ ಪ್ರಕಾಶ ದ್ವಿವೇದಿಯವರು. ಈ ಚಿತ್ರವನ್ಯಾಕೋ ಮತ್ತೆ ಮತ್ತೆ ನೋಡಬೇಕೆನಿಸಿತು.

ಪಿಂಜರ್, ಸುಮಾರು 1936 ರ (ಸ್ವತಂತ್ರ ಪೂರ್ವ) ಆಸುಪಾಸಿನಲ್ಲಿ ಪಶ್ಚಿಮ ಪಂಜಾಬಿನಲ್ಲಿ ನಡೆಯುತ್ತಿದ್ದ ಹಿಂದೂ ಮುಸ್ಲಿಮ್ ಸಂಘರ್ಷಗಳ ನಡುವೆ ಸಿಕ್ಕು ನಲುಗಿದ ಹೆಣ್ಣಿನ ಚಿತ್ರಣ. ಈ ಸಂದರ್ಭದಲ್ಲಿ ಎರೆಡೂ ಧರ್ಮದ ಹೆಣ್ಣುಮಕ್ಕಳೂ ಅಪಹರಣಕ್ಕೆ ಗುರಿಯಾಗಿ ತಮ್ಮ ಜೀವ ಮತ್ತು ಜೀವನವನ್ನು ಕಳೆದುಕೊಂಡಿದ್ದ ಪರಿಸ್ಥಿತಿ. ಇಲ್ಲಿ ಹೆಣ್ಣು ಒಂದು ಪ್ರತಿಷ್ಠೆಯ ವಿಚಾರ. ಯಾರಾದರೂ ಯಾರಾದರ ಮಾನ ಕಳೆಯಬೇಕಿತ್ತೆಂದರೆ ಅವರ ಮನೆಯ ಹೆಣ್ಣುಮಕ್ಕಳಿಗೆ ಏನಾದರೂ ಮಾಡಿಬಿಟ್ಟರೆ ಸಾಕು ಎನ್ನುವ ತುಚ್ಛ ಮನಸ್ಥಿತಿ. ಅವಳನ್ನು ವ್ಯಕ್ತಿಯಾಗಿ ಅವಳ ಸ್ವಾತಂತ್ರ್ಯದ ಬಗ್ಗೆ ವಿಚಾರ ಮಾಡುವ ಬದಲಾಗಿ ಅವಳ ಇಷ್ಟಕ್ಕೆ ವಿರುದ್ಧವಾಗಿ ಏನನ್ನಾದರೂ ಮಾಡಲಾಗುತ್ತದೆ(ಇಂದಿಗೆ ಈ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ ಎನ್ನುವುದು ಸಮಾಧಾನದ ಸಂಗತಿ). ಹೀಗೇ ಅಪಹರಣಕ್ಕೊಳಗಾದ ಪುರೋಳ ಕಥೆಯೇ ಪಿಂಜರ್. ಪಿಂಜರ್ ಎಂದರೆ ಪಂಜರ. ಪುರೋಳನ್ನು ಹೊತ್ತೊಯ್ದು ಬಂಧನ(ಪಂಜರ)ದಲ್ಲಿಡಲಾಗುತ್ತದೆ. ಅಸ್ತಿಪಂಜರದೊಳಗಿನ ಅವಳು ಎನ್ನುವ ಹೆಣ್ಣನ್ನು ಹತ್ತಿಕ್ಕಲಾಗುತ್ತದೆ. ಅವಳು ಅನುಭವಿಸುವ ನೋವು ಸಂಕಟ ತಳಮಳವೇ ಇದರ ಕಥೆ. ಈ ಚಿತ್ರ ಇಷ್ಟೇ ಅಂತ ಹೇಳುವುದು ಬಹಳ ಕಷ್ಟ. ಕಾರಣ ಅದು ನಮ್ಮ ಮಾತು ಅನುಭವ ಮತ್ತು ಪದಗಳಿಗೆ ಮೀರಿದ ಅನುಭೂತಿಯನ್ನು ಉಂಟುಮಾಡುತ್ತದೆ.

ಇದು ಈ ವಿಚಿತ್ರ ಸಂದರ್ಭಕ್ಕೆ ಸಂದರ್ಭೋಚಿತವಾ…?! ಗೊತ್ತಿಲ್ಲ. ಜಗತ್ತಿಗೇ ಕೊರೋನಾ ಭೀತಿ ಆವರಿಸಿದೆ. ನಮ್ಮ ನಮ್ಮ ಮನೆಗಳೇ ಬಂಧೀಖಾನೆಯಾಗಿವೆ. ಇದೇ ಸಮಯ ಆ್ಯನ್ ಫ್ರ್ಯಾಂಕ್ ಸಹ ತೀವ್ರವಾಗಿ ನೆನಪಾದಳು ನನಗೆ. Story of a young girl ಅಥವಾ diary of a young girl ಎಂದೇ ವಿಶ್ವ ವಿಖ್ಯಾತವಾಗಿರುವ ಆ್ಯನ್ ಫ್ರ್ಯಾಂಕಳ ಡೈರಿ ಅಥವಾ ಆತ್ಮಚರಿತ್ರೆಯ ಕೆಲಭಾಗಗಳನ್ನು ಹಿಂದೊಮ್ಮೆ ಓದಿದ್ದೆ. ಮನೆಗಳಲ್ಲಿಯೇ ಬಂಧಿಯಾಗಿರಬೇಕಾಗಿ ಬಂದ ಈ ಸಂದರ್ಭದಲ್ಲಿ ಮತ್ತೊಮ್ಮೆ ಅದನ್ನು ಓದಬೇಕೆನಿಸಿತು.
ಅದು 1942. ಆ್ಯನ್ ಳ ತಂದೆ ಒಟ್ಟೊ ಫ್ರಾಂಕ್, ತಾಯಿ ಎಡಿತ್ ಫ್ರಾಂಕ್ ಮತ್ತು ಅಕ್ಕ ಮಾರ್ಗೋಟ್ ಫ್ರಾಂಕ್. ಎರಡನೇ ಮಹಾಯುದ್ಧ ನಡೆಯುತ್ತಿದ್ದ ಸಮಯವದು.

ಹಿಟ್ಲರನ ಆಜ್ಞೆಯ ಮೇರೆಗೆ ಜರ್ಮನ್ ಪಡೆ ಯಹೂದಿಗಳನ್ನು ಹುಡುಕಿ ಹುಡುಕಿ ಚಿತ್ರ ಹಿಂಸೆಕೊಟ್ಟು ಕೊಲ್ಲುತ್ತಿತ್ತು. ಆ ಸಂದರ್ಭದಲ್ಲಿ ಒಟ್ಟೊ ಫ್ರಾಂಕ್ ಇದರಿಂದ ಪಾರಾಗಲು ತನ್ನ ಕುಟುಂಬವನ್ನು ಅನೆಕ್ಸ್ ಎನ್ನುವ ಅಡಗುತಾಣಕ್ಕೆ ಕರೆತರುತ್ತಾನೆ. ಅವನ ಪ್ರಕಾರ ಹೀಗೆ ಅಡಗಿಕೊಳ್ಳುವುದು ತಮ್ಮ ಒಂದಷ್ಟು ಆಯುಷ್ಯವನ್ನು ಹೆಚ್ಚಿಸಿಕೊಳ್ಳುವ, ಸಾವನ್ನು ಒಂಚೂರು ಮುಂತಳ್ಳುವ ಕೆಲಸವಾಗಿತ್ತು. ಅಲ್ಲಿ ಅವರು 1942-1944 ರ ವರೆಗೆ ಸುಮಾರು ಎರೆಡು ವರ್ಷಗಳ ಕಾಲ, ಕಾಲ ಕಳೆಯುತ್ತಾರೆ. ಹೀಗೆ ಒಂದು ಸಣ್ಣ ಜಾಗದಲ್ಲಿ ಬಂಧಿಯಾಗಿ, ಪ್ರತಿಕ್ಷಣ ಸಾವಿಗೆ ಹೆದರುತ್ತಾ ಅಡಗಿ ಬದುಕುತ್ತಾರೆ.

(ಕೊರೋನಾಗೆ ಹೆದರಿ ಇಂದು ಇಡೀ ಜಗತ್ತೇ ಹೆದರಿ ಕೂತಿದೆಯಲ್ಲ ಹಾಗೇ… ಅಂದು ಯಹೂದಿಗಳು ಹಿಟ್ಲರನ ಕ್ರೂರತೆಗೆ ಬಲಿಯಾಗಿದ್ದರು. ಅವರ ಸಾವಿನ ಆಕ್ರಂದನ ಜಗತ್ತನ್ನು ಸುತ್ತಿಕೊಂಡಿತ್ತು. ಅವರನ್ನು ಕೊಂದವರ ಜೊತೆಗೆ ಅವರ ಸಾವನ್ನು ತಪ್ಪಿಸಲು ತಮ್ಮಿಂದಾಗಬಹುದಾದ ಪ್ರಯತ್ನವನ್ನು ಮಾಡದೆ ತಮ್ಮನ್ನು ತಾವು ಭದ್ರ ಮಾಡಿಕೊಂಡದ್ದಕ್ಕಾಗಿ ಇಂದು ಕೊರೋನಾ ಎನ್ನುವ ಈ ಕಾಯಿಲೆ ಹೀಗೆ ರೌದ್ರಾವತಾರದ ರೂಪದಲ್ಲಿ ಪ್ರಪಂಚಕ್ಕೆ ಎರಗಿರಬಹುದಾ…?! ಇತಿಹಾಸ ಏನು ಹೇಳುತ್ತದೋ ಗೊತ್ತಿಲ್ಲ… ಕಾರಣ ನನಗೆ ಇತಿಹಾಸ ಗೊತ್ತಿಲ್ಲ. ಆದರೆ ಆ್ಯನ್ ಳ ಡೈರಿಯನ್ನು ಓದುವಾಗ ಇಂತಹ ಅದೆಷ್ಟೋ ಮುಗ್ಧಮಕ್ಕಳ ಮಾರಣ ಹೋಮಕ್ಕೆ ಇಡೀ ಜಗತ್ತೇ ಹೊಣೆ ಅನಿಸಿಬಿಡುತ್ತದೆ ನನಗೆ…)

ಆ್ಯನ್ ಳಿಗೆ ತಾವು ಎಲ್ಲಿಗೆ ಹೋಗುತ್ತಿದ್ದೇವೆ, ಏಕೆ ಹೋಗುತ್ತಿದ್ದೇವೆ ಎನ್ನುವುದು ಗೊತ್ತಿರುವುದಿಲ್ಲ. ಆಗ ಅವಳಿನ್ನು 12-13 ರ ಪುಟ್ಟ ಹುಡುಗಿ. ಜಗತ್ತಿನ ಬಗ್ಗೆ ಅಪಾರ ಕುತೂಹಲ ಹೊಂದಿದ್ದ ಅದಮ್ಯ ಚೈತನ್ಯದ ಚಿಲುಮೆ. ಅಂತಹ ಅತ್ಯಂತ ಕ್ರಿಯಾಶೀಲ ಮಗುವನ್ನು ಒಂದು ಕೋಣೆಯಲ್ಲಿ ಬಂಧಿಸಿಟ್ಟರೆ ಏನಾಗುತ್ತದೆ?! ಕತ್ತಲ ಕೋಣೆಯಲ್ಲಿ ಒಯ್ದಿಟ್ಟರೂ ಗಿಡವೊಂದು ಸಣ್ಣದೊಂದು ಕಿರಣದ ಜಾಡು ಹಿಡಿದು ಸೂರ್ಯನ ದಿಕ್ಕಿನೆಡೆಗೇ ಬೆಳೆಯತೊಡಗುತ್ತದೆ ಹೇಗೋ ಹಾಗೆ ಆ್ಯನ್ ತನ್ನೆಲ್ಲ ಮಾನಸಿಕ ತುಮುಲಗಳನ್ನು ಪ್ರತಿನಿತ್ಯ ಡೈರಿಯ ರೂಪದಲ್ಲಿ ದಾಖಲಿಸುತ್ತಾ ಹೋದಳು. ಅವಳಿಗೆ ಇದು ಗೊತ್ತಿರಲಿಲ್ಲ, ಮುಂದೆ ಈ ಬರಹ ಜಗದ್ವಿಖ್ಯಾತವಾಗುತ್ತದೆ ಎಂದು… ಅವಳಿಗೆ ಗೊತ್ತಿರಲಿಲ್ಲ ಮುಂದೆ ಅವಳ ಸಾವಿನ ಮುಂದೆ ಇಡೀ ಜಗತ್ತೇ ಮಂಡಿಯೂರುತ್ತದೆ ಎಂದು…. ಅವಳಿಗೆ ಗೊತ್ತಿರಲಿಲ್ಲ ಅವಳಿಗಾದ ಅನ್ಯಾಯಕ್ಕೆ ಜಗತ್ತೇ ಧ್ವನಿ ಕಳೆದುಕೊಳ್ಳುತ್ತದೆ ಎಂದು…. ಆದರೆ ಅವಳು ತನ್ನ ಸಣ್ಣ ಸಣ್ಣ ಅನುಭವಗಳನ್ನೂ ಬರೆದಿಟ್ಟಳು.

“Paper has more patience than people”

“I keep my ideals, because in spite of everything I still believe that people are really good at heart”

“Think of all the beauty still left around you and be happy”

“whoever is happy will make others happy too”

“No one has ever become poor by giving” ಎನ್ನುತ್ತಾಳೆ ಆ್ಯನ್.

ಇಲ್ಲಿ ಹೆಣ್ಣು ಒಂದು ಪ್ರತಿಷ್ಠೆಯ ವಿಚಾರ. ಯಾರಾದರೂ ಯಾರಾದರ ಮಾನ ಕಳೆಯಬೇಕಿತ್ತೆಂದರೆ ಅವರ ಮನೆಯ ಹೆಣ್ಣುಮಕ್ಕಳಿಗೆ ಏನಾದರೂ ಮಾಡಿಬಿಟ್ಟರೆ ಸಾಕು ಎನ್ನುವ ತುಚ್ಛ ಮನಸ್ಥಿತಿ. ಅವಳನ್ನು ವ್ಯಕ್ತಿಯಾಗಿ ಅವಳ ಸ್ವಾತಂತ್ರ್ಯದ ಬಗ್ಗೆ ವಿಚಾರ ಮಾಡುವ ಬದಲಾಗಿ ಅವಳ ಇಷ್ಟಕ್ಕೆ ವಿರುದ್ಧವಾಗಿ ಏನನ್ನಾದರೂ ಮಾಡಲಾಗುತ್ತದೆ.

ಒಂದು ಹದಿಮೂರು ವರ್ಷದ ಹುಡುಗಿ ಹೀಗೆಲ್ಲ ಬರೆಯುತ್ತಾಳೆ ಎಂದರೆ ಅವಳ ಗ್ರಹಿಕೆಯ ಬಗ್ಗೆ ಹೆಮ್ಮೆ ಅನಿಸುತ್ತದೆ. ಯುದ್ಧ ಎನ್ನುವುದು ನಮ್ಮಂಥ ದೊಡ್ಡವರೆನಿಸಿಕೊಂಡವರಿಗೆ. ಆದರೆ ಯುದ್ಧವೆಂದರೇನು?! ಎಂದು ಕೇಳುವ ಮಕ್ಕಳ ಮುಂದೆ ನಾವೆಲ್ಲ ಅಪರಾಧಿಗಳು…

ಒಂದು ವೇಳೆ ಒಂದು ಮಗು ನಮ್ಮೆದುರು ನಿಂತು ಕೊರೋನಾ ಎಂದರೆ ಏನು? ಅದು ಏಕೆ ಬಂತು? ಅದು ನನಗೇ ಏಕೆ…. ಎಂದೆಲ್ಲಾ ಕೇಳಿಬಿಟ್ಟರೆ ಹೇಗೆ ಉತ್ತರಿಸುವುದು? ಅದಕ್ಕೆ ಉತ್ತರಿಸಲಾಗದ ನಿರುತ್ತರಿಗಳು ನಾವು. ನಾವಿಲ್ಲಿಯವರೆಗೆ ಎಷ್ಟೆಲ್ಲಾ ಪರಿಸರ ನಾಶ ಮಾಡಿದ್ದೇವೋ ಅದೆಲ್ಲದರ ಪರಿಣಾಮ ಇದು. ನಮ್ಮ ಮಕ್ಕಳ ಮುಂದಿನ ಭವಿಷ್ಯವನ್ನು ಕತ್ತಲಿಗೆ ದೂಡಿಟ್ಟು ನಾವು ಮಾತ್ರ ಹಾಗೂ ಹೀಗೂ ನಮ್ಮ ಬದುಕನ್ನು ಮುಗಿಸಿ ಹೊರಟುಬಿಡುತ್ತೇವೆ, ನೀವು ಬೇಕಾದರೆ ಹೇಗಾದರೂ ಬದುಕಿಕೊಳ್ಳಿ ಎಂದು… ಇದರ ನೇರ ಹೊಣೆಗಾರರು ನಾವು.

ಆದರೆ ನಮ್ಮ ಬಗ್ಗೆ ನಮಗೆ ಅಪಾರ ಕನಿಕರ, ಅನುಕಂಪ. ಕೊರೋನಾ ನಮ್ಮ ಮನೆ ಬಾಗಿಲಿಗೆ ಬಂದು ಬಾಗಿಲು ತಟ್ಟುತ್ತಿರುವ ಈ ಸಂದರ್ಭದಲ್ಲಿ ನಮ್ಮ ಆತಂಕ ಅಷ್ಟಿಷ್ಟಲ್ಲ. ನಮ್ಮ ಪುಟ್ಟ ಪುಟ್ಟ ಕುಟುಂಬಗಳು ಬದುಕಿನ ಆಲದ ಮರದಲ್ಲಿ ಗೂಡು ಕಟ್ಟಿಕೊಂಡು, ಗೂಡಿಗೆ ತಕ್ಕಷ್ಟು ಕಾಲು ಚಾಚಿಕೊಂಡು ತಣ್ಣಗೆ ಬದುಕಿದ್ದವು. ಆದರೆ ಆ ಗೂಡುಗಳಿಗೆ ಕಲ್ಲು ಬೀಳುತ್ತದೆನ್ನುವ ಸಣ್ಣ ಆಲೋಚನೆಯು ನಮಗಿರಲಿಲ್ಲ. ವಿದೇಶದಲ್ಲೆಲ್ಲೋ ಕೊರೋನಾ ಎಂಬ ಮಾರಿ ಬಲಿತೆಗೆದುಕೊಳ್ಳುತ್ತಿದೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗುವಾಗ ನಾವಿನ್ನು ಬೆಳಗಿನ ನಿದ್ರೆಯಲ್ಲಿದ್ದೆವು. ತೀರಾ ಭಾರತಕ್ಕೂ ಅದು ಕಾಲಿಟ್ಟಿದೆ ಎಂದಾಗ ನಾವು ಹಾಸಿಗೆ ಮೇಲೆ ಕೂತು ಕಣ್ಣುಜ್ಜುತ್ತಾ ಆಕಳಿಸುತ್ತಿದ್ದೆವು. ತೀರಾ ಕಾಲು ಬುಡಕ್ಕೆ ಬಂತು ಕೊರೋನಾ ಎಂದಾಗ ಒಂದಷ್ಟು ವಿದ್ಯಾವಂತರು ಬಾಯಿಬಡಿದುಕೊಳ್ಳತೊಡಗಿದರು. ಅವಿದ್ಯಾವಂತರು, ವಿದ್ಯಾವಂತ ಧಡ್ಡರೊಂದಿಷ್ಟು ಆಗಲೂ “ಏ ಈ ನನ್ ಮಕ್ಳಿಗೆ ಮಾಡಕ್ ಕೆಲ್ಸಿಲ್ಲ…” ಎಂದು ಅಸಡ್ಡೆಯಿಂದಲೇ ಓಡಾಡಿಕೊಂಡಿದ್ದರು. ಪರಿಣಾಮ ಕಾಲಬುಡಕ್ಕೆ ಬಂದದ್ದು ಮೈಗೇರತೊಡಗಿತು. ಆಗ ತುಳಿತಕ್ಕೆ ಒಳಗಾದ ಇರುವೆ ಗುದ್ದಿನಂತೆ ಕೋಲಾಹಲ ಶುರುವಾಯಿತು.

ಮಾಧ್ಯಗಳ ಮಂದಿ ಹಗಲೂ ರಾತ್ರಿ ಬಾಯಿಬಡಕೊಳ್ಳತೊಡಗಿದರು. ಅವರು ಹೇಳುತ್ತಿದ್ದುದರಲ್ಲಿ ಸತ್ಯವಿತ್ತು. ಹಾಗಾಗಿ ಅವರ ಧ್ವನಿಗೆ ವಿಶೇಷ ಶಕ್ತಿ ಬಂದುಬಿಟ್ಟಿತ್ತು. ಅದರೆ ಒಂದಷ್ಟು ಅತಿಶಯೋಕ್ತಿ ಅವರ ಮಾತನ್ನು ಸೇರಿ ಜನರನ್ನು ಜಾಗೃತಗೊಳಿಸುವುದಕ್ಕಿಂತ ಭಯಭೀತರಾಗಿಸಿಬಿಟ್ಟಿತು. ಈದೇ ಹೊತ್ತಿನಲ್ಲಿ ದೇಶದ ಪ್ರಧಾನಿ ದಿನಕ್ಕೊಂದು ಭಾಷಣ ದಿನಕ್ಕೊಂದು ಕರೆ ಕೊಡುತ್ತಾ, ಹಗಲು ರಾತ್ರಿ ಒಂದೊಂದು ಕರೆ ಕೊಟ್ಟರು. “ಘರ್ ಮೆ ರಹೆ, ಘರ್ ಮೆ ರಹೆ, ಫಿರ್ ಏಕ್ ಹೀ ಕಾಮ್ ಕರೆ ಬಸ್ ಘರ್ ಮೆ ರಹೆ” ಜನತೆಯಲ್ಲಿ ಬೇಡಿಕೊಂಡರು. ನಮಗೆ ಮಾಡಲಿಕ್ಕೆ ಆಯ್ಕೆಯೂ ಇರಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಇದನ್ನು ಒಪ್ಪಿಕೊಂಡು ಮನೆಗೆ ಅಂಟಿಕೊಳ್ಳತೊಡಗಿದೆವು. ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗುಳೆ ಹೋದರು, ಕೆಲವರು ಮನೆಯಲ್ಲಿಯೇ ಇಲ್ಲದವರಂತೆ ಬಾಗಿಲು ಕಿಟಕಿಯನ್ನೂ ಮುಚ್ಚಿಕೊಂಡು ಇದ್ದುಬಿಟ್ಟರು.

ಅದರ ನಡುವೆಯೂ ಅಲ್ಲಲ್ಲಿ ದಿನನಿತ್ಯದ ವಸ್ತುಗಳನ್ನು ಅನುಮತಿಯ ಮೇರೆಗೆ ಮಾರತೊಡಗಿದರು. ಮನೆಯಲ್ಲಿ ಇರಲಾಗದವರು ಮುಸುಕು ತೊಟ್ಟು ಮಾರ್ಕೆಟ್ಟಿಗೆ ಹೋಗಿಬರುತ್ತಿದ್ದರು. ಪೋಲೀಸರದು ಸಂದಿಗ್ಧ ಪರಿಸ್ಥಿತಿ. ಜನರದ್ದು ಹಸಿವಿನ ತುರ್ತು. ಅದರ ಜೊತೆಗೇ rules are to violate ಅನ್ನುವ ಕೆಟ್ಟ ಮನಸ್ಥಿತಿ ಒಂದಿರುತ್ತದಲ್ಲ ಮನುಷ್ಯನಿಗೆ, ಬೇಡ ಎಂದು ಹತ್ತಿಕ್ಕಿದಷ್ಟೂ ಜನ ಕಾರಣ ಹುಡುಕಿಕೊಂಡು ಹೊರಹೋಗಿ ಬಂದರು. “ನಾವು ಮಾತ್ರ ಹೀಗೇ ಇರುತ್ತೇವೆ, ನೀವು ಎಲ್ಲ ಸರಿಮಾಡಬೇಕು” ಅನ್ನುವಂಥ ಧೋರಣೆಯಿಂದ ಯಾವ ಸಮಸ್ಯೆ ತೀರೀತು. ಪ್ರತಿಯೊಬ್ಬರೂ ಕೈ ಜೋಡಿಸಿದಾಗ ಮಾತ್ರ ಇಂತಹ ಸಮಸ್ಯೆಯನ್ನು ಎದುರಿಸಲು ಸಾಧ್ಯ ಅಲ್ಲವಾ… ಅಷ್ಟಕ್ಕೂ ಇದು ನಮ್ಮದೇ ಪ್ರಾಣದ ಪ್ರಶ್ನೆ ಬೇರಿನ್ನೇನೂ ಅಲ್ಲ…

ಮನೆಯೊಳಗೆ ಹೀಗೆ ದಿನಗಟ್ಟಲೆ ಬಾಗಿಲು ಮುಚ್ಚಿಕೊಂಡು ಕುಳಿತುಕೊಳ್ಳಬೇಕೆನ್ನುವುದು ನನ್ನ ಬಹುದಿನಗಳ ಆಸೆಯಾಗಿತ್ತು. ಆದರೆ ಈಗ ತಿಳಿಯುತ್ತಿದೆ ಇದು ಎಂತಹ ಶಿಕ್ಷೆ ಎಂದು. ಮನೆಯಲ್ಲಿರುವ ಕಾರಣ ದೈಹಿಕ ವ್ಯಾಯಾಮ ಇಲ್ಲದಾಗಿದೆ, ಸರಿಯಾದ ವೇಳೆಗೆ ಆಹಾರ ಸೇವಿಸುತ್ತಿಲ್ಲ. ಪರಿಣಾಮ ಗ್ಯಾಸ್ಟ್ರಿಕ್ ಮತ್ತು ಅಜೀರ್ಣ! ಹೊರಗೆ ಖಾಸಗಿ ಆಸ್ಪತ್ರೆಗಳೂ ಮುಚ್ಚಿವೆ. ಮತ್ತೆ ಆಸ್ಪತ್ರೆಗಳಿಗೆ ಹೋಗಲಿಕ್ಕೂ ಒಂಥರಾ ಭಯ. ಅಲ್ಲಿಯೂ ಕೊರೋನಾ ಸೋಂಕಿತರಿರಬಹುದೆನ್ನುವ ಕಾರಣಕ್ಕಾಗಿ. ದಿನವಿಡೀ ಕೋರೋನಾದ ಜುಟ್ಟು ಹಿಡಿದು ಜಾಲಾಡುತ್ತಿರುವ ನ್ಯೂಸ್ ಚ್ಯಾನೆಲ್ಲುಗಳು ಮತ್ತು ಅದನ್ನು ನೋಡುತ್ತಾ ನೋಡುತ್ತಾ ಖಿನ್ನತೆಗೆ ಜಾರುತ್ತಿರುವ ನಾವುಗಳು… ಹೇಳಿಕೊಳ್ಳಲಾಗದ ತಳಮಳ, ಏನು ಮಾಡಲೂ ಮನಸು ಬರುತ್ತಿಲ್ಲ, ಇಷ್ಟು ಬಿಡುವಾಗಿದ್ದರೂ ಆ ಸಮಯವನ್ನು ಬಳಸಿಕೊಳ್ಳಲಾಗುತ್ತಿಲ್ಲ… ಮಕ್ಕಳನ್ನು ನೆನೆಸಿಕೊಂಡರೆ ಇನ್ನೂ ಭಯ ಆತಂಕ… ಅವರ ಬಗ್ಗೆ ಕಂಡಿರುವ ನಮ್ಮ ಕನಸುಗಳು, ನಮ್ಮ ಆಸೆ ಆಕಾಂಕ್ಷೆಗಳು… ಅವೆಲ್ಲಕ್ಕೂ ಬೇಕಿರುವುದು ಒಂದೇ ಒಂದು ಅವಕಾಶ… ಕೊಟ್ಟುಬಿಡು ತಂದೆ… ನಮ್ಮ ಪ್ರಾರ್ಥನೆ ಮುಗಿಲು ಮುಟ್ಟುತ್ತದೆ. ನಮ್ಮ ಪ್ರಾರ್ಥನೆಯನ್ನು ದೇವರು ಕೇಳಿಸಿಕೊಳ್ಳಲೇಬೇಕು, ವರ ಕೊಡಲೇ ಬೇಕು ಅಷ್ಟೇ…!

ಜನಜೀವನದ ಜೊತೆಗೆ ಆಡಳಿತ ಯಂತ್ರವೂ ಅಸ್ತವ್ಯಸ್ತಗೊಂಡಿದೆ. ಎಲ್ಲರಿಗೂ ಈಗಿನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವುದರ ಜೊತೆಗೆ ಮುಂದಿನ ಪರಿಸ್ಥಿತಿಯ ಸಮತೋಲನವನ್ನು ಕಾಪಾಡಿಕೊಳ್ಳಬೇಕಿರುವುದೂ ಸಹ ಸವಾಲು. ಅದಕ್ಕಾಗಿಯೇ ಎಲ್ಲರೂ ಆತಂಕದಿಂದಿದ್ದಾರೆ. ಜನನಾಯಕರು ಪಕ್ಷಭೇದ ಮರೆತು ಕೆಲಸ ಮಾಡುತ್ತಿದ್ದಾರೆ. ಹೆಸರಾಂತ ವ್ಯಕ್ತಿಗಳೂ ಉದಾರವಾಗಿ ದಾನ ಮಾಡುತ್ತಿದ್ದಾರೆ. ಸಾಮಾನ್ಯ ಜನರೂ ಸಹ ತಮ್ಮ ಕೈಲಾದ ಸಹಾಯ, ಆಹಾರ ದಾನ ಮಾಡುತ್ತಿದ್ದಾರೆ. ಪಾಪದ ಪ್ರಾಣಿಗಳ ಬಗ್ಗೆಯೂ ಕನಿಕರ ತೋರುತ್ತಿದ್ದೇವೆ. ಹೆಚ್ಚೆಂದರೆ ಒಂದಷ್ಟು ಪ್ರಾಣಿಗಳಿಗೆ ಇದರ ಪ್ರಯೋಜನ ಸಿಕ್ಕಿರಬಹುದು.

ಭಿಕ್ಷುಕರನ್ನು ಎಂದೂ ಉತ್ತೇಜಿಸದ ನಾನು ಈ ಸಂದರ್ಭದಲ್ಲಿ ಅವರಿಗೊಂದಿಷ್ಟು ಆಹಾರ ಕೊಟ್ಟು, ದೇವರೇ ಇಂತವರಿಗೆ ಕೊರೋನಾ ಕೊಡಬೇಡಪ್ಪಾ ಎಂದು ಮನದಲ್ಲೇ ಬೇಡಿಕೊಂಡೆ. ಬೀದಿ ನಾಯಿಗಳಿಗೊಂದಿಷ್ಟು ಆಹಾರ ಹಾಕುತ್ತಿರುವೆ. ಇದನ್ನೆ ಸುಮಾರು ಜನ ಮಾಡುತ್ತಿರುವುದೂ ಕೊರೋನಾ ಎಫೆಕ್ಟೇ. ಮತ್ತೆ ಅಕ್ಕ ಪಕ್ಕದವರೆಲ್ಲ ತೀರಾ ಕಡಿಮೆ ಮಾತನ್ನು, ದೂರ ದೂರ ನಿಂತೇ ಮಾಸ್ಕು ಕಟ್ಟಿಕೊಂಡು ಆಡುತ್ತಿದ್ದೇವೆ. ಅದಷ್ಟೋ ಕೊರೋನಾ ಬಗ್ಗೆಯೇ ಅಂತ ವಿಶೇಷವಾಗಿ ಹೇಳಬೇಕಿಲ್ಲ. ಮತ್ತೆ ಒಬ್ಬರಿಗೊಬ್ಬರು ಅನುಕಂಪಿಸುತ್ತಾ ಪಾಪ ಎನ್ನುತ್ತಾ ಮನೆ ಬಾಗಿಲು ಎಳೆದುಕೊಳ್ಳುತ್ತಿದ್ದೇವೆ…

ಕೊನೆಗೂ ಮನುಷ್ಯನೇ ಮನುಷ್ಯನಿಗೆ ಆಗಿಬರುವುದು ತಾನೇ…