ಚಲಂ ಕವಿತೆಗಳ ಸಾಂಗತ್ಯ  ಕಡಲ ಮೇಲಿನ ಹಾದಿ. ಅನುಭಾವವನ್ನು ಹುಟ್ಟುಹಾಕುವ ನೀರ ಮೇಲಿನ ಪಯಣ. ಒಮ್ಮೆ ಇದು ಆರಂಭವಾದರೆ ದಿಕ್ಸೂಚಿಯಿಂದ ದಿಕ್ಕನ್ನು ತಿಳಿಯಬೇಕೆ ಹೊರತು ಕಣ್ಣಳತೆಗೆ ನಮಗೆ ಯಾವ ಮಾಹಿತಿಯೂ ದಕ್ಕುವುದಿಲ್ಲ. ಸ್ವಭಾವತಃ ವಾಚಾಳಿಯಲ್ಲದ ಚಲಂ ಅಷ್ಟೇನೂ ಔಟ್ಗೋಯಿಂಗ್ ಅಲ್ಲದ ಅಂತರ್ಮುಖಿ‌. ಅಂತೆಯೇ ಅವರ ಕವಿತೆಗಳೂ.ಕಡಲು ದಡಕ್ಕನೆ ತಂದು ಅಪ್ಪಳಿಸಿದ ಕಪ್ಪೆಚಿಪ್ಪುಗಳಲ್ಲ ಇಲ್ಲಿನ ಕವಿತೆಗಳು. ತಣ್ಣಗೆ ಹರಿವ ನದಿಯೊಳಗೆ ನುರಿದು ಅವಾಗೇ ನುಣ್ಣಗಾದ ನಯಸ್ಸು ಕಲ್ಲಿನಂತವು.
ಚಲಂ ಹಾಡ್ಲಹಳ್ಳಿಯವರ “ಈ ಮಳೆಗಾಲ ನಮ್ಮದಲ್ಲ” ಕವನ ಸಂಕಲನದ ಕುರಿತು ದಯಾ ಗಂಗನಘಟ್ಟ ಬರಹ

ನಾಕು ಅಕ್ಷರಗಳನ್ನು ಕೂಡಿಸಿ ಓದಲು ಕಲಿತ ವಯಸ್ಸಿನಿಂದಲೂ ಅದೇನೋ ಕಾಣೆ ಕಥೆಗಳ ಓದು ನನಗೆ ಖುಷಿ ಕೊಟ್ಟಷ್ಟು ಕವಿತೆಗಳು ಕೊಡುತ್ತಿರಲಿಲ್ಲ. ಹಳಗನ್ನಡ ಕಾವ್ಯಗಳಲ್ಲೂ ಕಂದ, ಪ್ರಾಸ, ಅಲಂಕಾರಗಳ ನಡುವೆಯೂ ಕಥೆಯನ್ನೇ ಹುಡುಕುತ್ತಿದ್ದೆ. ಹೊಸಗನ್ನಡ ಕವಿತೆಗಳು ಪ್ರೀತಿ ಪ್ರೇಮದಂತಾ ಸೂಕ್ಷ್ಮ ಭಾವನೆಗಳು ಎದೆಯಲ್ಲಿ ನವಿಲುಗರಿಯ ನವಿರು ಮೂಡಿಸುವ ವಯಸ್ಸಿನಲ್ಲಿ ನಿಧಾನಕ್ಕೆ ಎದೆಗೆ ಇಳಿಯತೊಡಗಿದ್ದವು. ಸಮ ವಯಸ್ಸಿನ ಕವಿಗಳಲ್ಲಿ ಹೀಗೆ ಇಷ್ಟವಾದ ಕವಿತೆಗಳಲ್ಲಿ ಚಲಂ ಹಾಡ್ಲಹಳ್ಳಿ ಅವರ ಕವಿತೆಗಳೂ ಇದ್ದವು. ಏನನ್ನಾದರೂ ಬರೆಯಲು ಕೂರುವ ಮೊದಲು ನನ್ನ ಅತ್ಯಂತ ಮೆಚ್ಚಿನ ಕಥೆಗಾರರ ಒಂದು ಕಥೆಯನ್ನೋ, ಕಾದಂಬರಿಯ ಕೆಲವು ಸಾಲುಗಳನ್ನೋ ಇಲ್ಲವೇ ಒಂದೆರಡು ಚಂದದ ಕವಿತೆಗಳನ್ನೋ ಓದುವುದು ನನ್ನ ರೂಢಿ. ಹೀಗೆ ಮೊನ್ನೆ ನಾನು ಓದಲು ಕೈಗಿತ್ತಿಕೊಂಡ ಪುಸ್ತಕಗಳಲ್ಲಿ ಚಲಂ ಇತ್ತೀಚೆಗೆ ಹೊರತಂದ ಕವನ ಸಂಕಲನವೂ ಇತ್ತು.

ಮಳೆಯ ಸ್ಪರ್ಶಕ್ಕೆ ತಾನಾಗೇ ಹರಡುವ ಮಣ್ಣ ಘಮಲಿನಂತಹಾ ಈ ಕವಿತೆಗಳಿಗೆ ಚಲಂ ಅದ್ಯಾಕೆ “ಈ ಮಳೆಗಾಲ ನಮ್ಮದಲ್ಲ” ಅಂತ ಹೆಸರಿಟ್ಟರೋ ಕಾಣೆ. ಬರೆದು ವರ್ಷವಾದರೂ ಇವರ ಪದ್ಯಗಳು ಈ ಕ್ಷಣಕ್ಕೂ ಸಲ್ಲುವಂತವೇ. ಈ ಸಾಲುಗಳ ಕಸುವು ನೋಡಿ!

(ದಯಾ ಗಂಗನಘಟ್ಟ)

“ಎಲ್ಲರ ಕೈಯ್ಯಲ್ಲೂ
ಖಡ್ಗ, ಬಡಿಗೆ, ಭರ್ಜಿ, ಬಂದೂಕ ತ್ರಿಶೂಲಗಳಿವೆ
ಹೀಗೆ ಎಂತೆಂತವೋ ಆಯುಧಗಳನಿಡಿದು
ಕಟ್ಟುವ ಮಾತನಾಡುತ್ತೇವೆ
ಆದರೆ
ಒಡೆಯುವ ಕೆಲಸಗಳಾಗುತ್ತಿವೆ
ಆ ಎಲ್ಲಾ ಕೈಗಳಿಗೂ
ನೇಗಿಲು, ಪುಸ್ತಕ, ಚರಕ, ತಕ್ಕಡಿ,
ಮಗ್ಗ, ಲೇಖನಿಗಳ ಕೊಡಬೇಕಾಗಿದೆ…..”

ಇವರ ಕವನಗಳಲ್ಲಿ ಒಂದು ಕಿಚ್ಚಿದೆ ಅದು ದಹಿಸುವ ಕಿಚ್ಚಲ್ಲ, ತುಂತುರು ಮಳೆಯ ನಡುವೆ ಬೀಸುವ ಶೀತಗಾಳಿಯ ಜೊತೆ ಕಂಡೂ ಕಾಣದಂತೆ ತಾಕುವ ಕಿಚ್ಚದು. ಎದೆಯೊಳಗೆ ಚುಳ್ ಎನ್ನುವಂತೆ ಮಾಡುವ ಈ ಸಂಕಲನದ ಕವಿತೆಗಳು ಅದೇ ಕ್ಷಣದಲ್ಲಿ ಮೆದುಳಲ್ಲೂ ಮಿಳ್ ಎನ್ನುತ್ತವೆ.

“ಈ ಮನೆ, ಈ ರಾತ್ರಿ, ಈ ಒಳಗು
ಯಾಕಿಷ್ಟು ಖಾಲಿ ಖಾಲಿಯಾಗಿವೆ..?
ಎಲ್ಲಾ ಮಲಗಿರುವಾಗ
ನಿಶ್ಯಬ್ದವಾಗಿ ಎಚ್ಚರವಿರುವ ನನ್ನನ್ನು
ಯಾಕೆ ಮಲಗಿಲ್ಲ ಎಂದು
ಇಲ್ಲಿ ಯಾರೂ ಕೇಳುವುದಿಲ್ಲ
ಬಹುಶಃ

ನಿನ್ನೂರಲ್ಲೂ ನಿಶ್ಯಬ್ದದ ಎಚ್ಚರವನ್ನು
ಯಾರೂ ಕೇಳದಿರಬಹುದು…”

ಈ ಸಾಲುಗಳನ್ನ ಓದಿದಾಗ ಮಿಡಿವ ಯಾವ ಹೃದಯವಾದರೂ ಮೆತ್ತನೆಯ ಹತ್ತಿಯನ್ನು ಕಚ್ಚಿ ಹಿಡಿವ ‘ವೆಲ್ಕ್ರೋ’ ದ ಚೂಪು ಕೊಕ್ಕೆಗಳಂತೆ ಭಾವವನ್ನು ಹಿಡಿದಿಟ್ಟುಕೊಳ್ಳುತ್ತದೆ.

ಮೇಲ್ನೋಟಕ್ಕೆ ಕೇವಲ‌ ಪ್ರೇಮ ಕವನಗಳೇನೋ ಎನಿಸುವ ಕೆಲ ಕವನಗಳು ಆಳದಲ್ಲಿ ತೀವ್ರ ಹತಾಷೆಯನ್ನೂ ಬಹುಶಃ ಅಸಹಾಯಕತೆಯನ್ನು ಧ್ವನಿಸುತ್ತವೆ ಎಂದು ನನಗೆ ಅನಿಸಿದ್ದಿದೆ. ಹೆಚ್ಚೆನಿಸಿದರೆ ನೀವೊಮ್ಮೆ ಓದಿಬಿಡಿ.

“ನಾನು ನನ್ನೊಳಗೇ..
ನೀನು ನಿನ್ನೊಳಗೇ..
ಏನೂ ಸೋಕದಂತೆ
ಇದೊಂದು ಮಳೆಗಾಲಕ್ಕೆ
ಸುಮ್ಮನಿದ್ದುಬಿಡೋಣ ಗೆಳತಿ
ಈ ಬಾರಿ
ಮಳೆಗಾಲದಲ್ಲಿ ಬದುಕುವುದು ಬೇಡ “

Me and life ಕಾನ್ಸೆಪ್ಟಿಗೆ ಒತ್ತುಕೊಡುವ ಕೆಲ ಕವನಗಳಲ್ಲಿ
“ಹೀಗೆ ಬಿಡುಗಡೆಯಿಂದ
ಬಿಡುಬೀಸಾಗಿ ಓಡಾಡಿದರೆ
ಯಾರೂ
ಬೆಲೆ ಕೊಡಲ್ಲವೆಂದು
ಸರಪಳಿ ಖರೀದಿಸಿ ಬಿಗಿದುಕೊಂಡೆ…”
ಎನ್ನುತ್ತಾ ನಮ್ಮನ್ನೂ ಅದೇ ಸರಪಳಿಯೊಳಕ್ಕೆ ಎಳೆದುಕೊಳ್ಳುತ್ತಾರೆ.

ಲೋಕದ ಸಮಸ್ಯೆಗಳೆಲ್ಲಾ ನನ್ನ ಬೆನ್ನಿಗೇ ಏರಿಬಿಟ್ಟಿವೆ ಎಂದುಕೊಳ್ಳುತ್ತಾ ಸಾಧ್ಯವಾದಷ್ಟೂ ನೋವಿನೊಳಗೇ ಸುಖಿಸ ಬಯಸುವ ನನ್ನಂತಾ ಹಲವರಿಗೆ ನೆಮ್ಮದಿಯ ಒರಗು ತೋಳಾಗುತ್ತವೆ ಕೆಳಗಿನ ಸಾಲುಗಳು.

“ಯಾರ ಸುಖವನ್ನಾದರೂ
ಯಾರಾದರೂ ಅನುಭವಿಸುವಂತಿದ್ದರೆ
ಯಾರ ದುಃಖಕ್ಕಾದರೂ
ಯಾರಾದರೂ ಸಾಂತ್ವನ ಕೊಡುತ್ತಿದ್ದರೇನೋ….”

ಕವನಗಳು ಹೀಗೇ ಇರಬೇಕೆಂಬ ಯಾವ ಸೈಂಟಿಫಿಕ್ ಫಾರ್ಮುಲಾ ವೂ ಇಲ್ಲ.Coleridge ಹೇಳುವಂತೆ “ Poetry is “the best words in the best order.” ಅಷ್ಟೇ. ಅಲ್ಲಲ್ಲಿ ontological ಅನ್ನಿಸುವ ಇವರ ಕವನಗಳಿಗೆ ಇಂತದೇ ಎಂಬ ಶೀರ್ಷಿಕೆಯೇ ಇಲ್ಲ! ನೀವೇನಾದರೂ rhyme, meter ಇತ್ಯಾದಿ Metrical composition ಗಳನ್ನು ಹುಡುಕಿ Tpcastt ವಿಮರ್ಶೆ ಮಾಡಹೊರಟರೆ

ಅವ್ಯಾವೂ ನಿಮಗೆ ಸಿಕ್ಕರೆ ಕೇಳಿ! ಆದರೆ ಕೆಳಗಿನಂತಹಾ ಸಾಲುಗಳನ್ನು ಓದಿದಾಗ ಇದೇ ಪ್ರಕಾರಕ್ಕೆ ಸೇರಿದ rhythm, scansion ಗಳು ಭರಪೂರ ಸಿಗುತ್ತವೆ.

“ಕಳ್ಳ ಮನಸಿನ
ಹುಳ್ಳಹುಳ್ಳಗಿನ ಭಾವಗಳ
ಹೊಂಚಿ ಹಿಡಿದವಳೇ….
ಮಡಿಲಿಗೆ ಹಾಕಿ, ತಲೆ ನೇವರಿಸಿ
ಹಣೆಗೊಂದು ಸಣ್ಣ ಮುತ್ತನಿಟ್ಟು
ಹುಣ್ಣಿಮೆಯ ಹೊದಿಸಿ
ಅಮವಾಸ್ಯೆಗೆ ಬೆರಳದ್ದಿ
ದೃಷ್ಟಿಬೊಟ್ಟಿಡುತ್ತೀಯಾ….”.

ಚಲಂ ಕವಿತೆಗಳ ಸಂಗಾತ ಕಡಲ ಮೇಲಿನ ಹಾದಿ. ಅನುಭಾವವನ್ನು ಹುಟ್ಟುಹಾಕುವ ನೀರ ಮೇಲಿನ ಪಯಣ. ಒಮ್ಮೆ ಇದು ಆರಂಭವಾದರೆ ದಿಕ್ಸೂಚಿಯಿಂದ ದಿಕ್ಕನ್ನು ತಿಳಿಯಬೇಕೆ ಹೊರತು ಕಣ್ಣಳತೆಗೆ ನಮಗೆ ಯಾವ ಮಾಹಿತಿಯೂ ದಕ್ಕುವುದಿಲ್ಲ. ಸ್ವಭಾವತಃ ವಾಚಾಳಿಯಲ್ಲದ ಚಲಂ ಅಷ್ಟೇನೂ ಔಟ್ಗೋಯಿಂಗ್ ಅಲ್ಲದ ಅಂತರ್ಮುಖಿ‌. ಅಂತೆಯೇ ಅವರ ಕವಿತೆಗಳೂ.ಕಡಲು ದಡಕ್ಕನೆ ತಂದು ಅಪ್ಪಳಿಸಿದ ಕಪ್ಪೆಚಿಪ್ಪುಗಳಲ್ಲ ಇಲ್ಲಿನ ಕವಿತೆಗಳು. ತಣ್ಣಗೆ ಹರಿವ ನದಿಯೊಳಗೆ ನುರಿದು ಅವಾಗೇ ನುಣ್ಣಗಾದ ನಯಸ್ಸು ಕಲ್ಲಿನಂತವು.

“ನನಗೆ ಪ್ರಾಮಾಣಿಕತೆಯ ಖಾಯಿಲೆಯಿದೆ. ಕತೆ, ಕವನ ಹಾಗು ಸಾಹಿತ್ಯದ ಯಾವ ಪ್ರಕಾರದಲ್ಲಿ ಕೃಷಿ ಮಾಡುವವನು ತುಂಬಾ ಪ್ರಾಮಾಣಿಕನಾಗಿರಬೇಕು ಎಂದು ತೀವ್ರವಾಗಿ ನಂಬಿರುವ ತೀವ್ರವಾದಿ ನಾನು” ಎಂದು ಸ್ವತಃ ಹೇಳಿಕೊಳ್ಳುವ ಇವರು ಅಕ್ಷರವೆಂಬ ವಜ್ರಗಲ್ಲುಗಳನ್ನು ಅನುಭವದಲ್ಲಿ ಕಡೆದು ಹೊಳೆಯುವ ಹರಳಾಗಿಸುವ ಕುಶಲ ಕವಿ.

(ಕೃತಿ: ಈ ಮಳೆಗಾಲ ನಮ್ಮದಲ್ಲ (ಕವನ ಸಂಕಲನ), ಲೇಖಕರು: ಚಲಂ ಹಾಡ್ಲಹಳ್ಳಿ, ಪ್ರಕಾಶನ: ಹಾಡ್ಲಹಳ್ಳಿ ಪಬ್ಲಿಕೇಷನ್ಸ್‌, ಬೆಲೆ: 120/-)