ಗಿಬ್ರಾನ್‌ನಂತವರ ಬದುಕು ಉರಿವ ಮೇಣದ ಬತ್ತಿಯಂತೆ ಬೆಳಕನ್ನು ಕೊಡುತ್ತಲೇ ತನ್ನನ್ನು ತಾನು ಸುಟ್ಟುಕೊಳ್ಳುವ ನೋವನ್ನು ಒಡಲುಗೊಂಡಿರುವ ಜೀವನವಾಗಿದೆ. ಬದುಕು ಎಂದರೆ ಪ್ರೀತಿಯನ್ನು ಹುಡುಕಲು ಸಿಕ್ಕಿರುವ ಅಪರೂಪದ ಅವಕಾಶವೆಂಬುದು ಗಿಬ್ರಾನನ ನಂಬಿಕೆಯಾಗಿರುವಂತಿದೆ. ಆತ ಬರೆದಿರುವ ಆದಿಮವೂ ನಿತ್ಯ ನೂತನವೂ ಆಗಿರುವ ಪ್ರಾಫೆಟ್‌ ಕಾವ್ಯದ ಕಲ್ಪನೆಯು ಆತನ ಹದಿನಾಲ್ಕನೇ ವಯಸ್ಸಿಗೆ ಆರಂಭವಾಯಿತು ಎಂಬ ಸಂಗತಿ ಮಹದ್‌ಅಚ್ಚರಿಯ ವಿಷಯವಾಗಿದೆ.
ಸಂಧ್ಯಾರಾಣಿ ಅನುವಾದಿಸಿರುವ ಬಾರ್ಬರಾ ಯಂಗ್‌ ಬರೆದ ಖಲಿಲ್‌ ಗಿಬ್ರಾನ್‌ ಕುರಿತ ಪುಸ್ತಕ “ಇವ ಲೆಬನಾನಿನವ”ಕ್ಕೆ ಕೆ.ವೈ. ನಾರಾಯಣಸ್ವಾಮಿ ಬರೆದ ಮುನ್ನುಡಿ

 

ಇಹಪರದ ನಡುವಣ ಉಯ್ಯಾಲೆ: ಖಲೀಲ್‌ ಗಿಬ್ರಾನ್
ನೀರಿಲ್ಲದ ನೆರಳಿಲ್ಲದ ಬೇರಿಲ್ಲದ ಗಿಡವ
ತಲೆಯಿಲ್ಲದ ಮೃಗ ಬಂದು ಮೇಯಿತ್ತು
ಕಣ್ಣಿಲ್ಲದ ಕುರುಡ ಕಂಡನಾ ಮೃಗವ
ಕೈಯಿಲ್ಲದ ಬೇಡ ಎಚ್ಚನಾ ಮೃಗವ
ಕಿಚ್ಚಿಲ್ಲದ ನಾಡಿಗೊಯ್ದು ಸುಟ್ಟು ಬಾಣಸವ ಮಾಡೆ
ಲಿಂಗಕರ್ಪಿತವಾಯಿತ್ತು ಗುಹೇಶ್ವರಾ!

ಅಲ್ಲಮ ಪ್ರಭುಗಳ ಈ ವಚನವು ಅನುಭವವನ್ನು ಗ್ರಹಿಸಲು ಮತ್ತು ಅಭಿವ್ಯಕ್ತಿಸಲು ಲೋಕ ಬಳಸುವ ಭಾಷೆಯ ಪ್ರಯೋಗ ಮತ್ತು ಅರ್ಥಗಳ ಪರಂಪರೆಯಿಂದ ಎದುರಾಗುವ ತೊಡಕನ್ನು ವಿವರಿಸುತ್ತಿದೆ. ಮಾನವ ಸಂವೇದನೆಯ ಪರಧಿಯ ಒಳಗೆ ಬರುವ ವಸ್ತು ಪ್ರಪಂಚದಿಂದ ಪಡೆಯುವ ಅನುಭವವು ಈಗಾಗಲೇ ವರ್ಣನೆಗೊಂಡ ಅರ್ಥಗಳನ್ನು ಪುನರ್ ಅಭಿನಯಿಸಿ ತೋರಿಸುವುದರಿಂದ ಲೋಕದ ನವೋನ್ಮೇಷಿಣಿಯಾದ ವರ್ತನೆಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ ಎಂಬ ಒಳನೋಟವನ್ನು ಈ ವಚನ ಮಂಡಿಸುತ್ತದೆ. ಇದು ಪ್ರತಿಯೊಬ್ಬ ನಿಜಕವಿ ಅಥವಾ ಸತ್ಯಶೋಧಕ ತತ್ವಜ್ಞಾನಿ ಇಬ್ಬರು ಏಕಕಾಲಕ್ಕೆ ಎದುರಿಸುತ್ತಿರುವ ಸವಾಲಾಗಿದೆ. ಗಿಡವೆಂದರೆ ಬೇರು ಇರಬೇಕು, ಪ್ರಾಣಿ ಎಂದರೆ ತಲೆ ಇರಬೇಕು ಎನ್ನುವ ಆಲೋಚನೆ ಮನುಷ್ಯನ ಇಂದ್ರಿಯಗಳು ಪಡೆಯುವ ಅನುಭವವನ್ನು ಹೇಗೆ ಭಾಷಾ ಪರಂಪರೆ ನಿಯಂತ್ರಿಸುತ್ತದೆ ಎಂಬುದನ್ನು ತೋರಿಸುವುದಲ್ಲದೆ ಹೊಸ ಭಾಷೆಯನ್ನು ಹಾಗೂ ಹಳೆಯ ಅರ್ಥಗಳನ್ನು ಪಲ್ಲಟಿಸುವ ಹೊಸ ಅರ್ಥವಲಯವನ್ನು ಸೃಷ್ಟಿಸಬೇಕಿರುವ ಅನಿವಾರ್ಯವನ್ನು ನಮಗೆ ಮನವರಿಕೆ ಮಾಡಿಕೊಡುತ್ತದೆ. ಇಂತಹ ಸಂಕಟವನ್ನೇ ನಮ್ಮ ಕಾಲದ ಶ್ರೇಷ್ಠಕವಿ ಗೋಪಾಲಕೃಷ್ಣ ಅಡಿಗರು ’ಅನ್ಯರೊರೆದುದನೆ ಬರೆಬರೆದು ಭಿನ್ನವಾಗಿದೆ ಮನವು’ ಎಂಬ ಅತೃಪ್ತಿಯನ್ನು ದಾಖಲಿಸಿರುವುದನ್ನು ನೆನೆಯಬಹುದು. ಖಲೀಲ್‌ ಗಿಬ್ರಾನ್ ಎಂಬ ದಾರ್ಶನಿಕ ಕವಿಯ ಕುರಿತಾಗಿ ಮಾತನಾಡುವ ಸಲುವಾಗಿ ಮೇಲಿನ ವಚನದ ಚರ್ಚೆಯನ್ನು ಎಳೆದು ತರಬೇಕಾಯಿತು. ಲೆಬನಾನಿನಂತಹ ಹಲವು ಧಾರ್ಮಿಕ ನಂಬಿಕಗಳ, ಹಲವು ಜೀವನ ಕ್ರಮಗಳ ಸಂಗಮ ಭೂಮಿಯಲ್ಲಿ ಮೈದೋರಿದ ಈ ಕವಿ, ಅಲ್ಲಮ ಪ್ರಭುಗಳು ನಿರೂಪಿಸಿರುವ ಕವಿ ಸಂಕಟದ ಕಂದಕವನ್ನು ಯಶಸ್ವಿಯಾಗಿ ದಾಟಿದ್ದೇ ನಮ್ಮಕಾಲದ ಬಹುದೊಡ್ಡ ಪವಾಡವಾಗಿದೆ. ಲೋಕ ಸಂವಾದಕ್ಕೆ ಗಿಬ್ರಾನ್ ಸಿದ್ಧಪಡಿಸಿದ ಮಾಧ್ಯಮಗಳು ಭಾಷೆ ಮಾತ್ರವಾಗಿರಲಿಲ್ಲ ಎಂಬ ಸಂಗತಿಯನ್ನು ಗಮನಿಸಿದರೆ ಆತ ತಾನು ಕಟ್ಟುತ್ತಿರುವ ಪದಲೋಕವನ್ನು ಪ್ರಾಣಘಾತಕವೆಂಬಂತೆ ಚಡಪಡಿಸಿದ್ದು ಆತನ ಬದುಕನ್ನು ಹತ್ತಿರದಿಂದ ಕಂಡ ಸಂಗಾತಿಗಳು ದಾಖಲಿಸಿರುವುದರಿಂದ ನಮಗೆ ತಿಳಿದುಬರುತ್ತದೆ.

(ಸಂಧ್ಯಾರಾಣಿ)

ಖಲೀಲ್‌ ಗಿಬ್ರಾನ್‌ ಇಪ್ಪತ್ತನೆ ಶತಮಾನದ ಅಚ್ಚರಿ. ದೈವ ಸಾಕ್ಷಾತ್ಕಾರವನ್ನು ಗ್ರಹಿಸಿಲು ಮನುಷ್ಯನ ಕಲ್ಪಕತೆಯ ಸಂಪೂರ್ಣ ಸಾಮರ್ಥ್ಯ ಸಾಕಾಗುವುದಿಲ್ಲ ಎಂಬ ಸಂಗತಿ ನಮಗೆಲ್ಲ ತಿಳಿದಿರುವ ವಿಷಯವೇ ಆಗಿದೆ. ಖಲೀಲ್‌ ಗಿಬ್ರಾನ್ ಎಂಬ ಜಗದ ಕವಿ, ಕಥನಕಾರ, ಕಲಾವಿದ, ಅನುಭಾವಿಕ, ತತ್ವಜ್ಞಾನಿ ಹೀಗೆ ಯಾವ ವಿಶೇಷಣವೂ ಆತನ ಸಂಕೀರ್ಣವೂ ಅಪರಿಪೂರ್ಣವೂ ಆದ ಜೀವನವನ್ನು ಪರಿಚಯಿಸದು. ಮಾನವ ಜನಾಂಗ ಭಾಷೆಯನ್ನು ರೂಪಿಸಿಕೊಂಡು ಬಳಸಲು ಪ್ರಾರಂಭಿಸಿದ ಕಾಲದಿಂದ ಸಂಚಯಿತವಾದ ಜ್ಞಾನ ಸಾಮರ್ಥ್ಯವು ಕೂಡ ಗಿಬ್ರಾನ್ ಚಿತ್ರಿಸಿದ ಅನುಭೂತಿಗಳನ್ನು ವಿವರಿಸಲು ಅಸಮರ್ಥವಾಗಿದೆ. ಈತನ ಬದುಕನ್ನು ರೂಪಕದಲ್ಲಿ ಹೇಳುವುದಾದರೆ, ದಟ್ಟಕಾಡಿನಲ್ಲಿ ಅನೂಹ್ಯವಾಗಿ ಹರಿಯುವ ಗುಪ್ತ ಕಾಲಪ್ರವಾಹವೊಂದು ಸುಂದರ ಸರೋವರವಾಗಿ ಮೈದೋರಿ ಮತ್ತೆ ಭೂಮಿಯೊಳಗೆ ಹೊಕ್ಕು ಮಾಯವಾಗುವ ಬೆರಗಿನ ಅನುಭವವೇ ಗಿಬ್ರಾನನ ಬದುಕು. ಕಂಡದ್ದು ನಿಜವೇ ಎಂದರೆ ಕಂಡ ಕುರುಹಿಲ್ಲ. ಆದರೆ ಕಂಡ ಬೆಡಗಿನ ರೋಮಾಂಚನ ಮಾತ್ರ ಇನ್ನೂ ನವಿರಾಗಿ ನಮ್ಮ ಪ್ರಜ್ಞೆಯಲ್ಲಿಇದ್ದು, ಆ ಅನುಭವ ಮಾತ್ರ ಕಂಡಿದ್ದು ನಿಜವೆಂದು ಸಾಕ್ಷಿ ನುಡಿಯುತ್ತಿದೆ. ಗಿಬ್ರಾನ್‌ನ ಬಾಲ್ಯ, ಬದುಕು, ಆತನ ಸಾಹಿತ್ಯ ಸಾಧನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಮರಳಿನಲ್ಲಿ ನೀರು ಸುರಿದಂತಾಗುವುದು. ಗಿಬ್ರಾನ್ ಭೂಮಿಯ ಯಾವುದೋ ಒಂದು ಮೂಲೆಯಲ್ಲಿ ಸಾಮಾನ್ಯ ಮನುಷ್ಯನಂತೆ ಬಾಳಿ ಬದುಕಿದನೆಂದು ನಂಬಲು ಅಸಾಧ್ಯವೆಂಬಂತಿದೆ. ಆತನ ಜೀವನ ಪ್ರಯಾಣವು ಭಾರತೀಯ ಪುರಾಣಕಥನಗಳಲ್ಲಿ ಕಂಡು ಬರುವ ಯಕ್ಷನೋ ಗಂಧರ್ವನೋ ಶಾಪಗ್ರಸ್ಥನಾಗಿ ಭೂಮಿಗೆ ಅವತರಿಸಿ ವಿಮೋಚನೆಗಾಗಿ ಕಾಯುವಂತೆ ಇದೆ. ಪ್ರಾಫೆಟ್ ನಲ್ಲಿಯೂ ಕೂಡ ಈತ ಇಂತಹ ಮಾಯದ ಹಡಗು ತನ್ನನ್ನು ಕರೆದೊಯ್ಯಲು ಬರುವುದನ್ನು ಕಾಯುತ್ತಿರುವ ತವಕವನ್ನು ನೆನೆದರೆ ಈ ವಿಷಯ ಮತ್ತಷ್ಟು ಸ್ಪಷ್ಟವಾಗುತ್ತದೆ.

ಗಿಬ್ರಾನ್‌ನಂತವರ ಬದುಕು ಉರಿವ ಮೇಣದ ಬತ್ತಿಯಂತೆ ಬೆಳಕನ್ನು ಕೊಡುತ್ತಲೇ ತನ್ನನ್ನು ತಾನು ಸುಟ್ಟುಕೊಳ್ಳುವ ನೋವನ್ನು ಒಡಲುಗೊಂಡಿರುವ ಜೀವನವಾಗಿದೆ. ಬದುಕು ಎಂದರೆ ಪ್ರೀತಿಯನ್ನು ಹುಡುಕಲು ಸಿಕ್ಕಿರುವ ಅಪರೂಪದ ಅವಕಾಶವೆಂಬುದು ಗಿಬ್ರಾನನ ನಂಬಿಕೆಯಾಗಿರುವಂತಿದೆ. ಆತ ಬರೆದಿರುವ ಆದಿಮವೂ ನಿತ್ಯ ನೂತನವೂ ಆಗಿರುವ ಪ್ರಾಫೆಟ್‌ ಕಾವ್ಯದ ಕಲ್ಪನೆಯು ಆತನ ಹದಿನಾಲ್ಕನೇ ವಯಸ್ಸಿಗೆ ಆರಂಭವಾಯಿತು ಎಂಬ ಸಂಗತಿ ಮಹದ್‌ಅಚ್ಚರಿಯ ವಿಷಯವಾಗಿದೆ. ಇಸ್ಲಾಂ-ಕ್ರಿಶ್ಚಿಯನ್‌ ಧಾರ್ಮಿಕ ಉದಾರತೆಗಳಲ್ಲದೆ ಬುಡಕಟ್ಟುಗಳ ಶ್ರದ್ಧೆಗಳ ಆಳವಾದ ಪ್ರಭಾವಗಳು ಗಿಬ್ರಾನ್‌ನ ಮನೋಲೋಕವನ್ನು ರೂಪಿಸಿವೆ ಎಂದು ಆತನ ಕೃತಿಗಳ ಬಗ್ಗೆ ಬರೆದಿರುವ ವಿಮರ್ಶಕರ ಅಭಿಪ್ರಾಯವಾಗಿದೆ. ಮನುಕುಲ ಇರುವವರೆಗೂ ಯಾವ ಕಾವ್ಯ ಎಲ್ಲಾಕಾಲದ ಮನಸ್ಸುಗಳಿಗೆ ಹುಚ್ಚು ಹಿಡಿಸಬಲ್ಲದೋ, ಯಾವ ಕಾವ್ಯ ಇಹಪರಗಳ ಕೈ ಹಿಡಿದು ಉಯ್ಯಾಲೆ ಜೀಕಬಲ್ಲದೋ ಅಂತಹ ನಿತ್ಯ ತೇಜಸ್ಸಿನ ಕಾವ್ಯವಾದ ಪ್ರಾಫೆಟ್‌ ಅನ್ನು ಆತ ಕೇವಲ ಒಂದು ಜೀವನದಲ್ಲಿ ಪಡೆದ ವಿವೇಕದಿಂದ ಬರೆಯಲು ಸಾಧ್ಯವಿಲ್ಲ ಎನ್ನಿಸುತ್ತದೆ. ಬಹುಷಃ ಜಗತ್ತಿನ ಎಲ್ಲಾ ಭಾಷೆಗಳ ನುಡಿಗಟ್ಟುಗಳಲ್ಲಿ ಶೇಕ್ಸ್‌ಪಿಯರನಂತೆ ಗಿಬ್ರಾನನ ಕಾವ್ಯದ ಉಕ್ತಿಗಳು ಕೂಡ ಬೆರೆತು ಹೋಗಿರುವುದು ಜಗತ್ತು ಈ ಲೋಕೋತ್ತರವಾದ ಕವಿ ಪ್ರತಿಭೆಗೆ ತೋರುತ್ತಿರುವ ಮೆಚ್ಚುಗೆ ಎಂಬುದು ನನ್ನ ನಂಬಿಕೆ. ಗಿಬ್ರಾನ್‌ ಕವಿಯಾಗಿ ಕವಿತೆಯನ್ನು ಬರೆದವನಲ್ಲ, ಬದಲಿಗೆ ಕವಿತೆಯಾಗಿ ಬದುಕಿ ಕವಿಯಂತೆ ಲೋಕಕ್ಕೆ ಪರಿಚಿತನಾದವನು. ಆತನ ಬದುಕಿನ ವಿವರಗಳು ಭಾರತೀಯ ಮನೋಭೂಮಿಕೆಗೆ ಸರಿಹೊಂದುತ್ತವೆ. ಆತ ತನ್ನ ತಾಯಿಯ ಬಗೆಗೆ ತಳೆದಿದ್ದ ಗೌರವ ಭಾವಗಳು ತಾಯ್ನಾಡಿನ ಬಗೆಗಿನ ಆರಾಧನೆಯ ದೃಷ್ಟಿಕೋನ ಹಾಗೂ ಲೌಕಿಕದ ಅತ್ಯಂತಿಕ ತುದಿಯಾಗಿರುವ ಅಮೇರಿಕೆಯಲ್ಲಿ ಬದುಕಿಯೂ ಆತ ಮೈಗೂಡಿಸಿಕೊಂಡ ಸಂತನ ವ್ಯಕ್ತಿತ್ವ ಇವು ಗಿಬ್ರಾನನನ್ನು ನಮ್ಮ ಸಂಸ್ಕೃತಿಯ ಭಾಗವಾಗಿ ಮಾಡಿವೆ.

ಇಷ್ಟೆಲ್ಲಾ ಕೃತಜ್ಞತೆಯಿಂದ ನಾನು ಗೌರವ ಸಲ್ಲಿಸುತ್ತಿರುವ ಗಿಬ್ರಾನ್ ನನಗೆ ದಕ್ಕಿರುವುದು ಕನ್ನಡದ ಅನುವಾದಗಳಿಂದ. ಹಿರಿಯ ವಿದ್ವಾಂಸರಾದ ಪ್ರೊ.ಪ್ರಭುಶಂಕರ್‌ ಅವರಿಂದ ಮೊದಲಗೊಂಡು ನನ್ನ ವಾರಿಗೆಯವರಾದ ಬಂಜಗೆರೆ ಜಯಪ್ರಕಾಶ ಅವರವರೆಗೂ ಅನೇಕರು ಆತನ ಕೃತಿಗಳನ್ನು ಕನ್ನಡಿಸುವ ಸಾರ್ಥಕ ಪ್ರಯತ್ನಗಳನ್ನು ಮಾಡಿದ್ದಾರೆ. ಯಾವುದೇ ಭಾಷೆಯ ಸೃಜನಶೀಲ ಕೃತಿಗಳ ಅನುವಾದ ಅತ್ಯಂತ ಸವಾಲಿನದು ಎಂಬ ಸಂಗತಿ ಎಲ್ಲರು ತಿಳಿದಿರುವ ವಿಷಯವೇ ಆಗಿದೆ. ಆದರೆ ಗಿಬ್ರಾನ್‌ ದೈವತ್ವದಲ್ಲಿ ಆಳವಾದ ಶ್ರದ್ಧೆ ಇರುವಂತೆ ತೋರುತ್ತಲೇ, ದಾರ್ಶನಿಕ ಬಂಡಾಯಗಾರನಾಗಿ ಬರೆದ ಕೃತಿಗಳನ್ನು ಕನ್ನಡಿಸುವುದು ಎಷ್ಟು ಕಷ್ಟದ ಕೆಲಸವೆಂಬ ಕಲ್ಪನೆ ಇದ್ದೇ ಇಂತಹ ಪ್ರಯತ್ನಗಳನ್ನು ನಾವು ಪ್ರೀತಿಯಿಂದ ಅಭ್ಯಾಸ ಮಾಡಬೇಕಿದೆ.

ಗಿಬ್ರಾನ್ ಬದುಕು ಆತ ಬಿಟ್ಟು ಹೋಗಿರುವ ಸಾಹಿತ್ಯ ಕೃತಿಗಳಿಗಿಂತಲೂ ಹೆಚ್ಚು ಸಂಕೀರ್ಣವಾಗಿದೆ. ಆತನ ಕೌಟುಂಬಿಕ ಜೀವನ, ಅವನ ಪ್ರೇಮಗಳು, ಪ್ರೇಮಿಗಳೊಂದಿಗಿನ ಒಡನಾಟ, ಸಾಹಿತ್ಯ ಸಂಗಾತಿಗಳೊಂದಿಗೆ ನಡೆಸಿದ ಸಂವಾದಗಳು ಎಲ್ಲವೂ ಗಿಬ್ರಾನನ ಯಾಧೃಚ್ಚಿಕವಾದ ವರ್ತನೆಗಳನ್ನು ನಮಗೆ ಪರಿಚಯಿಸಿವೆ. ಕಾವ್ಯದಲ್ಲಿ ಸ್ವರ್ಗದ ಕನಸನ್ನು, ನರಕದ ನೋವನ್ನು ಚಿತ್ರಿಸಬಲ್ಲ ಕವಿಯ ಬದುಕಿನ ಬಗ್ಗೆ ತಿಳಿಯುವ ಕುತೂಹಲ ಎಲ್ಲರಲ್ಲೂ ಇರುವುದು ಸಹಜ. ಅನೇಕ ಬಾರಿ ಕವಿಯ ಜೀವನದ ಹಲವು ಜನಪದೀಯ ನಿರೂಪಣೆಗಳು ಅತಿಮಾನುಷವಾದ ಶಕ್ತಿಗಳನ್ನು ಅವರ ವ್ಯಕ್ತಿತ್ವಕ್ಕೆ ಅಂಟಿಸುವುದುಂಟು. ಗಿಬ್ರಾನ್‌ ಬದುಕಿನ ಕೊನೆಯ ವರ್ಷಗಳಲ್ಲಿ ಅವನ ಜೊತೆಗಿದ್ದು, ಕಲಿತು ಪ್ರಭಾವಗೊಂಡ ಬಾರ್ಬಾರಾ ಯಂಗ್ ಎನ್ನುವ ಕಲಾವಿಮರ್ಶಕಿ ಗಿಬ್ರಾನನ ಸಾವಿನ ನಂತರ ದಾಖಲಿಸಿರುವ ಸಂವಾದರೂಪ ಪುಸ್ತಕವೊಂದನ್ನು ‘ದಿಸ್ ಮ್ಯಾನ್ ಫ್ರಂ ಲೆಬೆನಾನ್’ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾಳೆ. ಇದೊಂದು ವಿಶಿಷ್ಟವಾದ ಸಂಯೋಜನೆಯ ಪುಸ್ತಕ. ಇಲ್ಲಿ ಆಕೆ ಗಿಬ್ರಾನನ ಜೀವನವನ್ನು ಘಟನೆಗಳ ಮೂಲಕ ಕಟ್ಟಿಕೊಡುವ ಬದಲಿಗೆ, ಆತನ ಕೃತಿರಚನೆಯ ಸಂದರ್ಭಗಳಲ್ಲಿ ಆತ ನಡೆಸುತ್ತಿದ್ದ ಸಂವಾದ, ವಿಲಕ್ಷಣ ವರ್ತನೆಗಳ ಮೂಲಕ ಗಿಬ್ರಾನನ ಅಂತರಂಗವನ್ನು ತೆರೆದು ತೋರುವ ಪ್ರಯತ್ನ ಮಾಡಿದ್ದಾಳೆ.

(ಕೆ.ವೈ. ನಾರಾಯಣಸ್ವಾಮಿ)

ಇಲ್ಲಿನ 19 ಅಧ್ಯಾಯಗಳ ಮೂಲಕ ನಮಗೆ ಪರಿಚಿತವಿದ್ದ ಗಿಬ್ರಾನನ ಅಪರಿಚಿತವಾದ ಸಂವೇದನೆಯ ಮುಖಗಳನ್ನು ಪರಿಚಯಿಸಿದ್ದಾಳೆ. ಈ ಚರ್ಚೆಗಳಲ್ಲಿ ಅನಾವರಣಗೊಂಡಿರುವ ವಾಸ್ತವದ ಬಗೆಗೆ ಆಕೆಗೆ ಅನುಮಾನವಿರುವಂತೆ ರಚನೆಯಾಗಿರುವುದು ಈ ಬರವಣಿಗೆಯ ಕಾವ್ಯಗುಣಕ್ಕೆ ಸಾಕ್ಷಿಯಾಗಿದೆ. ಈ ಹೊತ್ತಿಗೆ ಖಂಡಿವಾಗಿಯೂ ಗಿಬ್ರಾನ್ ಎಂಬ ವಿಸ್ಮಯವನ್ನು ನಮಗೆ ಪೂರ್ಣವಾಗಿ ಪರಿಚಯಿಸದೇ ಹೋದರೂ, ಗಿಬ್ರಾನ್ ಸೃಜನ ಪ್ರಕ್ರಿಯೆಯ ಅಂತರ್ ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು ನೆರವು ನೀಡುತ್ತಿರುವುದು ಸುಳ್ಳಲ್ಲ. ಈ ಪುಸ್ತಕವನ್ನು ಬಾರ್ಬರ, ಗಿಬ್ರಾನ್ ಎಂಬ ಮಾಯಕದ ಆವರಣದಿಂದ ಬಿಡಿಸಿಕೊಳ್ಳಲು ಬರೆದಿರುವಂತಿದೆ. ಆದ್ದರಿಂದಲೇ ಒಟ್ಟು ಈ ಪುಸ್ತಕ ಕಾವ್ಯ ಮತ್ತು ಹೃದಯ ಸಂವಾದಗಳಿಂದ ತುಂಬಿಕೊಂಡಿದೆ. ಸಂವಾದ ಗಿಬ್ರಾನನ ಕಾವ್ಯಸೃಷ್ಟಿಯ ಮಾಧ್ಯಮವಾಗಿರುವುದು ಆತ ಬರೆದ ಎಲ್ಲ ಬರವಣಿಗೆಯಲ್ಲಿ ಸ್ಥಾಯಿಯಾಗಿರುವುದನ್ನು ಗುರುತಿಸಬಹುದು.

ಗಿಬ್ರಾನನ ಕವಿತೆಗಳಿಗೆ ಮಾರು ಹೋಗಿರುವ ಸಂಧ್ಯಾರಾಣಿ ಬಾರ್ಬರ ಅವರ ಪುಸ್ತಕವನ್ನು ಕನ್ನಡಿಸಲು ಆಶಿಸಿರುವುದು ಕನ್ನಡಭಾಷೆಗೆ ಅವರು ಸಲ್ಲಿಸುತ್ತಿರುವ ಸಾರ್ಥಕ ಕಾಣಿಕೆ ಎಂದೇ ನಾನು ತಿಳಿದಿದ್ದೇನೆ. ಕವಿತೆಯಂತೆ ರಚಿತವಾಗಿರುವ ನಿರೂಪಣೆಯ ಬಿಗಿ ಮತ್ತು ಅರ್ಥ ಸ್ತರಗಳು ನಷ್ಟಗೊಳ್ಳದಂತೆ ಸಂಧ್ಯ ಅವರು ಅದನ್ನು ಮರುಕಟ್ಟಲು ಪ್ರಯತ್ನಿಸಿದ್ದಾರೆ. ಇದು ಪದಶಃ ಅನುವಾದವಾಗಿರದೆ ಬಾರ್ಬರ ಅವರ ಬರವಣಿಗೆಯ ಅಂತಃಧ್ವನಿಯನ್ನು ಅರಿತು ಕನ್ನಡದ ನುಡಿವರಸೆಯಲ್ಲಿ ನಿರೂಪಿಸಿದಂತೆ ತೋರುತ್ತಿದೆ. ಆದ್ದರಿಂದಲೇ ಈ ಬರವಣಿಗೆಯು ಲಲಿತವಾಗಿ ಓದಿಸಿಕೊಳ್ಳುತ್ತಲೇ ಗಿಬ್ರಾನ್‌ ಕಾವ್ಯದ ಸತ್ವವನ್ನು ಹಿಡಿದಿಡಲು ಪ್ರಯತ್ನಿಸಿದೆ. ಅನುವಾದದ ಯಶಸ್ಸನ್ನು ಅನುವಾದಗೊಂಡ ಭಾಷೆಯಲ್ಲಿ ಸ್ವತಂತ್ರ ಕೃತಿಯಂತೆ ಓದಿಸಿಕೊಳ್ಳುವ ಗುಣವನ್ನು ಆಧರಿಸಿ ನಿರ್ಣಯಿಸುವುದು ರೂಢಿಯಲ್ಲಿದೆ. ಈ ಅನುವಾದವು ಕಣ್ಣು ಗ್ರಹಿಸುವ ರಾಚನಿಕ ರೂಪಕ್ಕಿಂತ, ಕಿವಿ ಕೇಳಿಸಿಕೊಳ್ಳುವ ಶ್ರವಣರೂಪಕ್ಕೆ ಪದವಿಡುವ ಮಾರ್ಗವನ್ನು ಅನುಸರಿಸಿದೆ. ಇದು ಮತ್ತುಷ್ಟು ಸಹಜವೂ ಮತ್ತು ಸರಳವೂ ಆಗುವ ಸಾಧ್ಯತೆ ಇದ್ದೇಇದೆ. ಇಂತಹ ಕಾರ್ಯಕ್ಕೆ ಮಹೇಶ್ವರ ನಿಷ್ಠೆಯ ಕಾವ್ಯಪ್ರೀತಿಯೊಂದೇ ಕಾರಣವಾಗಿದೆ ಎಂಬುದು ನನ್ನ ತಿಳುವಳಿಕೆಯಾಗಿದೆ. ಗಿಬ್ರಾನ್ ನಂತಹ ಶ್ರೇಷ್ಠ ಕಾವ್ಯಜೀವನವನ್ನು ಕವಿತೆಯಂತೆ ನಿರೂಪಿಸಲು ಪ್ರಯತ್ನಿಸಿರುವ ಸಂಧ್ಯಾ ಅವರ ಎದೆಗಾರಿಕೆಯನ್ನು ಕನ್ನಡ ಕಾವ್ಯಲೋಕ ಅಷ್ಟೇ ಅನುರಕ್ತಿಯಿಂದ ಸ್ವಾಗತಿಸಲಿ ಎಂದು ಹಾರೈಸುತ್ತೇನೆ.

(ಕೃತಿ: ಇವ ಲೆಬನಾನಿನವ, ಮೂಲ: ಬಾರ್ಬರಾ ಯಂಗ್‌, ಕನ್ನಡಕ್ಕೆ: ಸಂಧ್ಯಾರಾಣಿ, ಪ್ರಕಾಶಕರು: ನುಡಿ ಪ್ರಕಾಶನ, ಬೆಲೆ: 200/-)