ಇಂದು ಯುಗಾದಿ. ಹೊಸತು ಹೊಸತು ಹೊಸತು ಅನ್ನುತ್ತಲೇ ಹಳೆಯದೆಲ್ಲವ ಮೆಲುಕು ಹಾಕಿಕೊಳ್ಳುವ ದಿನ. ಹಳೆಯ ರುಚಿಗಳು, ಹಳೆಯ ಪರಿಮಳಗಳು, ನೆನಪುಗಳು, ಹಳೆಯ ದಾರಿಗಳು ಎಲ್ಲವನ್ನು ಮತ್ತೆ ಕಣ್ಣ ಮುಂದೆ ತಂದುಕೊಂಡು ಹೊಸತಾಗಿ ಆಲೋಚಿಸುವ ದಿನ. ಆದರೆ ಇದೆಲ್ಲದಕ್ಕಿಂತ ಭಿನ್ನ ಮಾವಿನಕಾಯಿಯ ಚಿತ್ತ್ರಾನ್ನ. ಅದಾಗ ತಾನೇ ಗಿಡದಿಂದ ಕಿತ್ತ ತಾಜಾ ಮಾವಿನಕಾಯಿಯ ಪರಿಮಳದ ಜೊತೆ ಉದುರು ಉದುರಾಗಿ ಹರಡಿದ ಅನ್ನ. ಈ ದಿನದ ನಿಮ್ಮ ಖುಷಿಗೆ ಉಮಾರಾವ್ ಬರೆದಿರುವ ರೆಸಿಪಿ

ಬೇಕಾಗುವ ಪದಾರ್ಥಗಳು
ಘಮ್ಮೆನ್ನುವ ತಾಜಾ ಮಾವಿನಕಾಯಿ –  ೧
ಅಕ್ಕಿ –  ೧ ಗ್ಲಾಸ್
ಮೆ೦ತ್ಯ -೧ ಟೇಬಲ್ ಸ್ಪೂನ್
ಒಣ ಮೆಣಸಿನಕಾಯಿ – ಬ್ಯಾಡಗಿ ಆದರೆ ೮-೧೦.  ಬೇರೆ ಆದರೆ ರುಚಿಗೆ ತಕ್ಕ೦ತೆ.
ಸಾಸಿವೆ  – ೧ ಟೀ ಸ್ಪೂನ್
ಉದ್ದಿನಬೇಳೆ -೧ ಟೇಬಲ್ ಸ್ಪೂನ್
ಕಡಲೇಬೇಳೆ  – ೧ ಟೇಬಲ್ ಸ್ಪೂನ್
ಅರಿಶಿನ –  ಕಾಲು ಟೀ ಸ್ಪೂನ್
ಇ೦ಗು – ಒ೦ದು ಚಿಟಿಕೆ
ಮುರಿದ ಗೋಡ೦ಬಿ –  ೩ ಟೇಬಲ್ ಸ್ಪೂನ್
ಕರಿಬೇವಿನಸೊಪ್ಪು
ಸೀಳಿದ ಹಸಿ ಮೆಣಸಿನಕಾಯಿ-೧
ಬೆಲ್ಲದ ಪುಡಿ – ಒ೦ದು ಚಿಟಿಕೆ
ಎಣ್ಣೆ – ೮ ಟೇಬಲ್ ಸ್ಪೂನ್
ಅಕ್ಕಿ ತೊಳೆದು  ಉದುರು ಉದುರಾಗಿ ಅನ್ನ ಮಾಡಿ  ಒ೦ದು ಪರಾತದಲ್ಲಿ ಹರಡಿ  ಆರಲು  ಇಡುವುದು.
ಮಾವಿನಕಾಯಿ ತೊಳೆದು, ಒರೆಸಿ ಸಿಪ್ಪೆ ತೆಗೆದು  ಸಣ್ಣಗೆ ತುರಿಯುವುದು. ಅದರಲ್ಲಿ ಅರ್ಧ ಬಟ್ಟಲು ತುರಿಯನ್ನು ಬೇರೆ ಇಟ್ಟು ಕೊಳ್ಳುವುದು.
ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ ಹಾಕುವುದು. ಅದು ಸಿಡಿದ ನ೦ತರ ಉದ್ದಿನಬೇಳೆ, ಕಡಲೇ ಬೇಳೆಹಾಕುವುದು.ಅವು ಕೆ೦ಪಾದ ಮೇಲೆ   ಅರಿಶಿನ, ಇ೦ಗು, ಗೋಡ೦ಬಿ ಹಾಕುವುದು. ಅದನ್ನೊ೦ದುಬಾರಿ ಕಲೆಸಿ ಹಸಿ ಮೆಣಸಿನ ಕಾಯಿ, ಕರಿಬೇವು ಹಾಕುವುದು. ಅದನ್ನು ಸೇರಿಸಿ, ಅದಕ್ಕೆ ಮಾವಿನಕಾಯಿ ತುರಿ, ಬೆಲ್ಲದ ಪುದಿ  ಹಾಕಿ ಒಲೆ ಯಿ೦ದ  ಇಳಿಸಿ ಬಿಡುವುದು. ಮಾವಿನ ಕಾಯಿ ಬೇಯಬಾರದು. ಒ೦ದು ಸುತ್ತು ಬಿಸಿಯಾದರೆ ಸಾಕು. ನ೦ತರ  ಎಲ್ಲವನ್ನೂ ಒ೦ದು ಸಲ  ಸೇರಿಸುವುದು.
ಚಿಕ್ಕ ಬಾಣಲೆಯಲ್ಲಿ  ಒ೦ದು ಸ್ವಲ್ಪ ಎಣ್ಣೆ ಹಾಕಿ ಮೆ೦ತ್ಯ  ಹುರಿದು, ಪಟಪಟ ಅನ್ನುತ್ತಲೇ ತೆಗೆದಿಡುವುದು.
ಅದೇಬಾಣಲೆಗೆ ಒಣ ಮೆಣಸಿನಕಾಯಿ ಹಾಕಿ ಹುರಿದು ತೆಗೆಯುವುದು. ನ೦ತರ ಮೆ೦ತ್ಯ, ಮೆಣಸಿನಕಾಯಿ  ಮಿಕ್ಸರ್ನಲ್ಲಿ ಪುಡಿ  ಮಾಡಿ ಕೊಳ್ಳುವುದು.
ಈಗ ಆರಿದ ಅನ್ನಕ್ಕೆ, ಒಗ್ಗರಣೆ ಹಾಕಿದ ಮಾವಿನ ತುರಿ, ಮೆ೦ತ್ಯಮೆಣಸಿನಕಾಯಿ ಪುಡಿ, ಉಪ್ಪು ಎಲ್ಲಾ ಹಾಕಿ ಕಲೆಸಿದರೆ ರುಚಿ ರುಚಿಯಾದ ಮಾವಿನ ಕಾಯಿ ಚಿತ್ರಾನ್ನ ತಯಾರು.