ಲಂಡನ್‌ನಲ್ಲಿ ಮೊದಲ ಬಾರಿ ಕಳೆದದ್ದು ಒಂದು ವರ್ಷವಾದರೂ, ಉತ್ಸಾಹ ಪ್ರತಿಭೆ ಕೌಶಲಗಳಿಂದ ಬ್ರಿಟಿಷ್‌ ತಂತ್ರಜ್ಞರ ಗಮನ ಸೆಳೆದು, ಇಂಜಿನೀಯರುಗಳ ಸಮುದಾಯದಲ್ಲಿ ಅರ್ದೆಶೀರ್ ಪರಿಚಯ ಹೆಚ್ಚಿತು. ರಾಣಿ ವಿಕ್ಟೋರಿಯಾಳನ್ನು ಭೇಟಿ ಆಗುವ ಅವಕಾಶ ಒದಗಿಸಿತು. ಪ್ರಭಾವಿ ಪರಿಚಯಗಳೇ ಇನ್ಸ್ಟಿಟ್ಯೂಷನ್ ಆಫ್ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಅಸೋಸಿಯೇಟ್ ಹುದ್ದೆಗೆ ಆಯ್ಕೆಯಾಗಲೂ ಕಾರಣ ಆಯಿತು. ಲಂಡನ್‌ನ ಸಂಸತ್ತಿನಲ್ಲಿ, ಬ್ರಿಟಿಷ್ ಇಂಡಿಯಾ ಹಾಗು ಚೀನಾ ನಡುವೆ ಓಪಿಯಂ ಕಳ್ಳ ಸಾಗಾಣಿಕೆಯ ಬಗ್ಗೆ ಕಲೆಹಾಕಿದ್ದ ಬೇಹು ಮಾಹಿತಿಯನ್ನು ಹಂಚಿಕೊಳ್ಳಲು ಆಹ್ವಾನ ಸಿಕ್ಕಿತು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ಅರ್ದೆಶೀರ್ಕುರ್ ಸೆಟ್ ಜಿ ಜೀವನ ವೃತ್ತಾಂತದ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

ಇಂಗ್ಲೆಂಡ್‌ನಲ್ಲಿ ಉಗಿಯ ಬಳಕೆ ನವೀನ ಮತ್ತು ಪರಮೋಚ್ಚ ತಂತ್ರಜ್ಞಾನವಾಗಿ ಮೆರೆಯುತ್ತಿದ್ದ ಹದಿನೆಂಟು ಹತ್ತೊಂಭತ್ತನೆಯ ಶತಮಾನದ ಯಂತ್ರಗಳು ಬಂಡಿಗಳು ಈ ಕಾಲದ ಅತ್ಯುತ್ತಮ ವಿದ್ಯುತ್ ಚಾಲಿತ ವಾಹನ ಅಥವಾ ಕಾರ್ಬನ್ ಬಳಸದ ಎಂಜಿನ್‌ಗಳಿಗೆ ಸಮನಾಗಿದ್ದವು ಎಂದವರಿದ್ದಾರೆ. ಬ್ರಿಟಿಷ್ ಆಡಳಿತದ ಭಾರತದಲ್ಲಿಯೂ ಆ ಸಮಯಕ್ಕೆ, ಉಗಿ ತಂತ್ರಜ್ಞಾನವನ್ನು ಬಳಸಿ ಸಣ್ಣಪುಟ್ಟ ಯಂತ್ರಗಳನ್ನು ನಡೆಸುವ ಸಾಹಸಕ್ಕೆ ಒಬ್ಬ ಪಾರ್ಸಿ ಸಿವಿಲ್ ಇಂಜಿನೀಯರ್ ಕೈ ಹಾಕಿದ್ದ. ಆತನ ಪ್ರತಿಭೆ ಹಾಗು ಆಸಕ್ತಿಯನ್ನು ಗಮನಿಸಿದ ಭಾರತದ ಆಂಗ್ಲ ಅಧಿಕಾರಿಗಳು ಹೆಚ್ಚಿನ ಜ್ಞಾನಕ್ಕಾಗಿ ಇಂಗ್ಲೆಂಡ್‌ಗೆ ಕಳುಹಿಸುವ ವ್ಯವಸ್ಥೆ ಮಾಡಿದರು. ಪಾರ್ಸಿ ಇಂಜಿನಿಯರ್ ಮುಂಬಯಿಯಲ್ಲಿ ಹಡಗು ಏರಿ ಈಜಿಪ್ಟ್ ತಲುಪಿ, ಅಲ್ಲಿನ ಕೈರೋದಿಂದ ಅಲೆಕ್ಸಾಂಡ್ರಿಯಾ ತನಕದ ಪ್ರಯಾಣವನ್ನು ನೆಲಮಾರ್ಗದಲ್ಲಿ ಮುಂದುವರೆಸಿ ಮೆಡಿಟರೇನಿಯನ್ ಹಾದಿಯಾಗಿ ಲಂಡನ್ ತಲುಪಿದರು. 1839 ರಲ್ಲಿ ಇಂಗ್ಲೆಂಡ್ ಗೆ ಬಂದ, ಈ ಭಾರತೀಯ ಇಂಜಿನೀಯರನ ಹೆಸರು ಅರ್ದೆಶೀರ್ ಕುರ್ಸೆಟ್ಜಿ. ಲಂಡನ್ ವಾಸದಲ್ಲಿ, ಉಗಿಯಂತ್ರಗಳ ಬಗ್ಗೆ ಅಧ್ಯಯನ ನಡೆಸಿದರು, ಉಗಿಶಕ್ತಿಯಿಂದ ನೌಕೆಗಳನ್ನು ಚಲಾಯಿಸುವುದರ ಬಗ್ಗೆ ವಿಶೇಷ ಪರಿಣತಿ ಇದ್ದ ಜಾನ್ ಹಾಗು ಸ್ಯಾಮ್ಯುಯೆಲ್ ಸೀವರ್ಡ್‌ರ ಜೊತೆಗೂ ಕೆಲಸ ಮಾಡಿದರು.

ಲಂಡನ್‌ನಲ್ಲಿ ಮೊದಲ ಬಾರಿ ಕಳೆದದ್ದು ಒಂದು ವರ್ಷವಾದರೂ, ಉತ್ಸಾಹ ಪ್ರತಿಭೆ ಕೌಶಲಗಳಿಂದ ಬ್ರಿಟಿಷ್‌ ತಂತ್ರಜ್ಞರ ಗಮನ ಸೆಳೆದು, ಇಂಜಿನೀಯರುಗಳ ಸಮುದಾಯದಲ್ಲಿ ಅರ್ದೆಶೀರ್ ಪರಿಚಯ ಹೆಚ್ಚಿತು. ರಾಣಿ ವಿಕ್ಟೋರಿಯಾಳನ್ನು ಭೇಟಿ ಆಗುವ ಅವಕಾಶ ಒದಗಿಸಿತು. ಪ್ರಭಾವಿ ಪರಿಚಯಗಳೇ ಇನ್ಸ್ಟಿಟ್ಯೂಷನ್ ಆಫ್ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಅಸೋಸಿಯೇಟ್ ಹುದ್ದೆಗೆ ಆಯ್ಕೆಯಾಗಲೂ ಕಾರಣ ಆಯಿತು. ಲಂಡನ್‌ನ ಸಂಸತ್ತಿನಲ್ಲಿ, ಬ್ರಿಟಿಷ್ ಇಂಡಿಯಾ ಹಾಗು ಚೀನಾ ನಡುವೆ ಓಪಿಯಂ ಕಳ್ಳ ಸಾಗಾಣಿಕೆಯ ಬಗ್ಗೆ ಕಲೆಹಾಕಿದ್ದ ಬೇಹು ಮಾಹಿತಿಯನ್ನು ಹಂಚಿಕೊಳ್ಳಲು ಆಹ್ವಾನ ಸಿಕ್ಕಿತು. ಸಾಕ್ಷಿ ಸಮೇತ ಮಂಡಿಸಿದ ಗೌಪ್ಯ ವಿವರ ಬ್ರಿಟಿಷ್ ಸರಕಾರಕ್ಕೆ ರಾಜತಾಂತ್ರಿಕ ನೆಲೆಯಲ್ಲಿ ಒಂದು ಬೆಲೆಬಾಳುವ ವಿಷಯ ಆಗಿತ್ತು. ಅರ್ದೆಶೀರ್‌ಗೆ ಅದು ಮೊದಲ ಲಂಡನ್ ಪ್ರವಾಸ ಆಗಿದ್ದರೂ ಹತ್ತಿರದ ಬಂಧುಗಳು ಆಗಲೇ ಲಂಡನ್‌ಗೆ ಬಂದು ಹೋದವರು. ಲಂಡನ್‌ನ ಜನನಿಬಿಡ ಬೀದಿ ವಾಹನ ದಟ್ಟಣೆಯ ರಸ್ತೆಗಳಿಂದ ಹಿಡಿದು ಕಟ್ಟಡಗಳ ಅದ್ಭುತ ವಿನ್ಯಾಸ ಅವರ ಮನಸ್ಸನ್ನು ತುಂಬಿದ್ದವು. ಇನ್ನು ಸಂಸತ್ತಿನಲ್ಲಿ ಆಲಸಿ ಜನಪ್ರತಿನಿಧಿಗಳ ನಿದ್ದೆಯೂ ಅರ್ದೆಶೀರ್ ನೋಡಿದ ಅಚ್ಚರಿಗಳಲ್ಲಿ ಒಂದಾಗಿತ್ತು. ಕೈಗಾರಿಕೆಯ ಹಿನ್ನೆಲೆಯಿಂದ ಬಂದ ಅರ್ದೆಶೀರ್ ಮತ್ತು ಬಂಧುಗಳಿಗೆ ಉಗಿ ತಂತ್ರಜ್ಞಾನದ ಉಯ್ಯಾಲೆ ಇಂಗ್ಲೆಂಡ್, ಹೊಸ ನೋಟ ಹಾಗು ಹೊಸ ಹೊಳಹುಗಳನ್ನು ನೀಡಿತು. ಇಂಗ್ಲೆಂಡ್‌ನ ಕೈಗಾರಿಕಾ ಬೆಳವಣಿಗೆ, ಮಿಲಿಟರಿ ಶಕ್ತಿ ಮತ್ತು ಆರ್ಥಿಕತೆಯ ಮುಖ್ಯ ಆಧಾರವಾಗಿ ಉಗಿ ತಂತ್ರಜ್ಞಾನ ದುಡಿಯುವುತ್ತಿರುವುದು ಕಾಣಿಸಿತು. ಸ್ಟೀಮ್, ಇಂಗ್ಲೆಂಡ್‌ನ ನಾಣ್ಯ, ಪುಸ್ತಕಾಲಯ, ಡ್ರಾಯಿಂಗ್ ಕೋಣೆ, ಊಟದ ಕೊಠಡಿ, ದೈನಿಕದ ಅತಿ ಸಾಮಾನ್ಯ ವಿಷಯಗಳಲ್ಲೂ ಉಪಸ್ಥಿತಿ ಪಡೆದಿತ್ತು. “ಇಂಗ್ಲೆಂಡ್‌ನಲ್ಲಿ ಉಗಿಯಲ್ಲಿ ಮಾಡಲಾಗದ್ದು ಏನಿದೆ?” ಎಂದು ಅರ್ದೆಶೀರ್ ಬಂಧುಗಳು ಕೇಳಿದ್ದಿದೆ. ತಮ್ಮ ಇಂಗ್ಲೆಂಡ್ ವಾಸದ ನೆನಪನ್ನು ಜರ್ನಲ್ ಒಂದರಲ್ಲಿ “ಕಬ್ಬಿಣದ ರೈಲಿನ ರಸ್ತೆಗಳಲ್ಲಿ ವೇಗದಿಂದ ಸಾಗುವ ಬಂಡಿಗಳು ಕಲ್ಲಿದ್ದಲು ಕಟ್ಟಿಗೆಗಳು ಬಿಸಿಯಾಗಿ ಹುಟ್ಟಿಸುವ ಉಗಿಯಿಂದ ಚಲಿಸುತ್ತವೆ, ಕಾದ ಕಬ್ಬಿಣವನ್ನು ಬಗೆಬಗೆಯ ಆಕಾರಕ್ಕೆ ತಂದು ಕೈಗಾರಿಕೆಗಳಲ್ಲಿ ಬಳಸುವಾಗಲೂ ಉಗಿಯೇ ಬೇಕು. ಶಕ್ತಿಶಾಲಿ ಯಂತ್ರಗಳು ನಡೆಯಲು, ನೀರಿನ ಪಂಪ್ ಚಾಲು ಆಗಲು ಸ್ಟೀಮ್ ಬೇಕು. ಬೆಣ್ಣೆ ತಯಾರಾಗಲೂ ಉಗಿಯೇ ಕಾರಣ. ಪುಸ್ತಕಗಳು ಅಚ್ಚು ಆಗುವುದು, ಹಣದ ಮುದ್ರಣ ಆಗುವುದು, ಸಮುದ್ರದಲ್ಲಿ ಹಡಗು ಕ್ರಮಿಸುವುದು, ಕೋವಿಗಳಿಂದ ಗುಂಡು ಹಾರುವುದು ಎಲ್ಲ ಉಗಿಯಿಂದಲೇ.

ತಲೆಯಿಂದ ಕಾಲಿನ ತನಕ ತೊಡುವ ಬಟ್ಟೆಬರೆ ಸಿದ್ಧವಾಗುವುದರಲ್ಲೂ ಉಗಿಯದೇ ಕಾರುಬಾರು” ಎಂದು ಬರೆದಿದ್ದರು. 1840ರ ನವೆಂಬರ್‌ನಲ್ಲಿ ಅರ್ದೆಶೀರ್ ಇಂಗ್ಲೆಂಡ್‌ನ ಉಗಿ ತಾಂತ್ರಿಕತೆಯ ಅನುಭವ ಕಲಿಕೆಗಳೊಡನೆ ಭಾರತಕ್ಕೆ ಮರಳಿದ ನಂತರ ಈಸ್ಟ್ ಇಂಡಿಯಾ ಕಂಪನಿಯ ಮುಂಬೈ ಸ್ಟೀಮ್ ಫ್ಯಾಕ್ಟರಿಯ ಪ್ರಧಾನ ಇಂಜಿನೀಯರ್ ಆಗಿ ನಿಯುಕ್ತಿಗೊಂಡರು. 1841 ರಲ್ಲಿ ಭಾರತೀಯ ನೌಕಾಪಡೆಯ ಉಗಿ ಶಾಖೆಯ ನಿರ್ವಹಣೆಯನ್ನೂ ವಹಿಸಿಕೊಂಡರು. ಯುರೋಪಿನವರಿಗಿಂತ ಮೇಲಿನ ದರ್ಜೆ ಪಡೆದ ಮೊದಲ ಭಾರತೀಯ ಎನ್ನುವ ಹೆಗ್ಗಳಿಕೆಯ ಹೊಣೆಗಾರಿಕೆ ಅದಾಗಿತ್ತು. ಅದೇ ವರ್ಷ ಇಂಗ್ಲೆಂಡ್‌ನ ಪ್ರತಿಷ್ಠಿತ ರಾಯಲ್ ಸೊಸೈಟಿ ಲಂಡನ್‌ನ ಸದಸ್ಯನಾಗಿಯೂ ಆಯ್ಕೆಯಾದರು.

ಅರ್ದೆಶೀರ್ 1808 ರಲ್ಲಿ ಮುಂಬಯಿಯಲ್ಲಿ ಹುಟ್ಟಿದ್ದು. ಕುರ್ಸೆಟ್ಜಿ ರುಸ್ತೋಮಜೀಯ ಬದುಕುಳಿದ ಏಕಮಾತ್ರ ಪುತ್ರ ಅವರು. ತಂದೆ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಮುಂಬೈ ಬಂದರಿನಲ್ಲಿ ಸಹಾಯಕರಾಗಿದ್ದವರು. ತನ್ನ ತಂದೆ ಹಾಗು ಮಾವನ ಹಾದಿಯಲ್ಲಿ ಸಾಗಿದ ಅರ್ದೆಶೀರ್ 1822 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಸೇವೆಯಲ್ಲಿ ತೊಡಗಿದರು. 14 ವರ್ಷ ಇರುವಾಗಲೇ ನೌಕೆ ಕಟ್ಟುವುದರಲ್ಲಿ ತರಬೇತಿ ಪಡೆದರು. ಹದಿನೆಂಟನೆಯ ಶತಮಾನದ ಶುರುವಿನಿಂದ ಹಡಗು ತಯಾರಿ ಅವರ ಕೌಟುಂಬಿಕ ಕೌಶಲ ಹಾಗು ವ್ಯವಹಾರ ಆಗಿತ್ತು. ಹಡಗು ತಯಾರಿಯ ಭಾರತೀಯ ಪರಂಪರೆಯ ಆರಂಭದ ಪುಟಗಳಲ್ಲಿ ಅರ್ದೆಶೀರ್‌ ಕುರ್ ಸೆಟ್ ಜಿ ಕುಟುಂಬದ ಹೆಸರಿದೆ. 1828ರಲ್ಲಿ ಅರ್ದೆಶೀರ್ ಮಝಗಾಂವ್ ಬಂದರಿನ ಉಸ್ತುವಾರಿಗೆ ನಿಯೋಜಿಸಲ್ಪಟ್ಟರು. ಕಡಲ ಸಂಚಾರ ಹುರುಪು ಪಡೆಯುತ್ತಿದ್ದ ಆ ಸಮಯದಲ್ಲಿ ಹಲವು ಹಡಗುಗಳ ನಿರ್ಮಾಣ ಆಯಿತು. ಆದರೆ ಅರ್ದೆಶೀರ್‌ರ ಆಸಕ್ತಿ ಉಗಿಬಂಡಿಗಳ ಮೇಲೆ ಹೆಚ್ಚಿತ್ತು. 1831ರಲ್ಲಿ ಮುಂಬೈ ಮಿಂಟ್ (ನಾಣ್ಯ ತಯಾರಿ ಕಂಪನಿ) ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಆ ಸಮಯದಲ್ಲಿ ಒಂದು ಅಶ್ವಶಕ್ತಿಯ ಸಣ್ಣ ಸ್ಟೀಮ್ ಇಂಜಿನ್ ತಯಾರಿಸಿದ್ದರು. ಮುಂಬೈಯಲ್ಲಿ ನಿರ್ಮಾಣಗೊಂಡ ಮೊದಲ ಉಗಿಯಂತ್ರ ಎನ್ನುವ ಹಿರಿಮೆ ಆ ಕಿರುಯಂತ್ರದ್ದು. ಇತರ ಭಾರತೀಯರಿಗೆ, ಉಗಿ ಮತ್ತು ಅದರ ಸಾಮರ್ಥ್ಯದ ಕುರಿತು ಪ್ರಾತ್ಯಕ್ಷಿಕೆ ನೀಡುವುದು ಅವರಿಗೆ ಇಷ್ಟವಾಗಿತ್ತು. ಇಂಗ್ಲೆಂಡ್‌ನಲ್ಲಿ ತಯಾರಾದ ನೌಕಾ ಉಗಿ ಎಂಜಿನ್ ಅನ್ನು ತರಿಸಿಕೊಂಡು ತನ್ನದೇ ಹಡಗಾದ “ಇಂಡಸ್” ನಲ್ಲಿ ಬಳಸಿದ್ದರು. 1834 ರಲ್ಲಿ 26 ವರ್ಷದ ಅರ್ದೆಶೀರ್ ಮುಂಬೈಯ ಕತ್ತಲಲ್ಲಿ ಗ್ಯಾಸ್ ಲೈಟ್‌ಅನ್ನು ಮೊದಲ ಬಾರಿಗೆ ಪರಿಚಯಿಸಿದರು. ತನ್ನ ಮನೆ ಹಾಗು ಉದ್ಯಾನದಲ್ಲಿ ತೂಗು ಹಾಕಿದ್ದ ಗ್ಯಾಸ್ ದೀಪಗಳು, ಗ್ಯಾಸನ್ನು ಹೀಗೂ ಬಳಸಬಹುದು ಎಂದು ತೋರಿಸಿ ಕುತೂಹಲ ಹುಟ್ಟಿಸಿತ್ತು. ಮುಂಬೈ ಗವರ್ನರ್ ಇಂದ ಹಿಡಿದು ಹಲವು ಗಣ್ಯರು ಗ್ಯಾಸ್ ಲೈಟ್ ನೋಡಲೆಂದೇ ಅರ್ದೆಶೀರ್ ಮನೆಗೆ ಬಂದು ಹೋಗುತ್ತಿದ್ದರು. ಮುಂಬಯಿ ವಲಯದ ಆಂಗ್ಲ ಆಡಳಿತಶಾಹಿಯ ಕಣ್ಣಿಗೆ ಬಿದ್ದ ಅರ್ದೆಶೀರ್‌ರ ತಾಂತ್ರಿಕ ಪ್ರತಿಭೆ, ಲಂಡನ್ ತಿರುಗಾಟಕ್ಕೆ ಕಾರಣ ಆಯಿತು.

“ಇಂಗ್ಲೆಂಡ್‌ನಲ್ಲಿ ಉಗಿಯಲ್ಲಿ ಮಾಡಲಾಗದ್ದು ಏನಿದೆ?” ಎಂದು ಅರ್ದೆಶೀರ್ ಬಂಧುಗಳು ಕೇಳಿದ್ದಿದೆ. ತಮ್ಮ ಇಂಗ್ಲೆಂಡ್ ವಾಸದ ನೆನಪನ್ನು ಜರ್ನಲ್ ಒಂದರಲ್ಲಿ “ಕಬ್ಬಿಣದ ರೈಲಿನ ರಸ್ತೆಗಳಲ್ಲಿ ವೇಗದಿಂದ ಸಾಗುವ ಬಂಡಿಗಳು ಕಲ್ಲಿದ್ದಲು ಕಟ್ಟಿಗೆಗಳು ಬಿಸಿಯಾಗಿ ಹುಟ್ಟಿಸುವ ಉಗಿಯಿಂದ ಚಲಿಸುತ್ತವೆ, ಕಾದ ಕಬ್ಬಿಣವನ್ನು ಬಗೆಬಗೆಯ ಆಕಾರಕ್ಕೆ ತಂದು ಕೈಗಾರಿಕೆಗಳಲ್ಲಿ ಬಳಸುವಾಗಲೂ ಉಗಿಯೇ ಬೇಕು. ಶಕ್ತಿಶಾಲಿ ಯಂತ್ರಗಳು ನಡೆಯಲು, ನೀರಿನ ಪಂಪ್ ಚಾಲು ಆಗಲು ಸ್ಟೀಮ್ ಬೇಕು. ಬೆಣ್ಣೆ ತಯಾರಾಗಲೂ ಉಗಿಯೇ ಕಾರಣ.

1851 ರ ಸೆಪ್ಟೆಂಬರ್‌ನಲ್ಲಿ ಅರ್ದೆಶೀರ್ ಎರಡನೆಯ ಬಾರಿಗೆ ಇಂಗ್ಲೆಂಡ್ ತೆರಳಿದ್ದು. ಈ ಪ್ರವಾಸ ಈಗಾಗಲೇ ಬಳಕೆಯಲ್ಲಿದ್ದ ಯಂತ್ರಗಳಲ್ಲಿ ಸುಧಾರಣೆ ತರುವುದನ್ನು ಕಂಡುಕೊಳ್ಳುವುದರ ಬಗ್ಗೆ ಆಗಿತ್ತು. ಈ ಬಾರಿ ಅಮೆರಿಕ ಮಾರ್ಗದಲ್ಲಿ ಸಾಗಿ ಇಂಗ್ಲೆಂಡ್‌ಗೆ ಪ್ರಯಾಣಿಸಿದ್ದರು. ಪಾರ್ಸಿಗಳ ಇತಿಹಾಸದಲ್ಲಿ ಇದು ಮೊಟ್ಟಮೊದಲ ಅಮೆರಿಕ ಭೇಟಿ ಎಂದು ಭಾವುಕ ಕೌಟುಂಬಿಕರು ಪಾರ್ಸಿ ಬಂಧುಗಳು ಘಟನೆಯನ್ನು ದಾಖಲಿಸಿದ್ದಾರೆ. ಎರಡನೆಯ ಯಶಸ್ವಿ ಇಂಗ್ಲೆಂಡ್ ಪ್ರಯಾಣದ ನಂತರ 1853ರಲ್ಲಿ ಭಾರತಕ್ಕೆ ಮರಳಿ 1857ರ ತನಕ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಕೆಲಸ ಮುಂದುವರೆಸಿದರು.

ಆಗಲೇ ಮುಂಬಯಿಯಲ್ಲಿ ಮದುವೆ ಆಗಿದ್ದ ಅರ್ದೆಶೀರ್‌ಗೆ ಲಂಡನ್ ವಾಸದ ಸಮಯದಲ್ಲಿ ಮೇರಿಯನ್ ಬಾರ್ಬರ್ ಎನ್ನುವಾಕೆಯ ಸಾಂಗತ್ಯ ಇತ್ತು. ಆಕೆಯನ್ನು ಮುಂಬಯಿಗೂ ಕರೆದುಕೊಂಡು ಹೋದರು.1853 ಮತ್ತು 56ರ ನಡುವೆ ಮುಂಬೈನಲ್ಲಿ ಆಕೆಯಿಂದ ಮಕ್ಕಳು ಹುಟ್ಟಿದರು. ಅಧೀಕೃತ ಹೆಂಡತಿ ಮುಂಬಯಿಯಲ್ಲಿ ಇರುವಾಗಲೇ ಆದ ಇನ್ನೊಂದು ಸಂಬಂಧ ಇದಾಗಿದ್ದು ಎರಡೂ ಕುಟುಂಬಗಳಿಗೆ ಆಸ್ತಿಯ ವಾರಿಸನ್ನು ಹಂಚಿ ಬರೆದಿದ್ದರು. ಈಸ್ಟ್ ಇಂಡಿಯಾ ಕಂಪನಿಯಿಂದ ನಿವೃತ್ತಿಯಾದ ನಂತರ ಅರ್ದೆಶೀರ್ ಕೆಲಕಾಲ ಕರಾಚಿಯಲ್ಲಿ ಮುಖ್ಯ ಇಂಜಿನಿಯರ್ ಆಗಿ ಕೆಲಸ ಮಾಡಿದರು. ಇಂಗ್ಲೆಂಡ್ ಮುಂಬಯಿ ಮಧ್ಯ ಹಲವು ಬಾರಿ ಓಡಾಡಿದ್ದರು.

1868ರಲ್ಲಿ ಲಂಡನ್‌ಗೆ ತೆರಳಿದ್ದು ಶಾಶ್ವತವಾಗಿ ನೆಲೆಸುವ ಉದ್ದೇಶದಿಂದ ಆಗಿತ್ತು. ಅವರ ಬದುಕಿನ ಕೊನೆಯ ಹತ್ತು ವರ್ಷಗಳು ಅಲ್ಲೇ ಕಳೆದವು. ಇಂಗ್ಲಿಷ್ ಸಂಗಾತಿ ಮತ್ತು ಮಕ್ಕಳೊಡನೆ ಲಂಡನ್‌ನ ರಿಚ್ಮಂಡ್ ಪ್ರದೇಶದ 55 ಶೀನ್ ರಸ್ತೆ, ಅಲ್ಲಿ ವಾಸಿಸಿದರು. ಈ ಮನೆಗೆ ಕುಟುಂಬದ ಹೆಸರಾದ “ಲೌಜೀ ಹೌಸ್” ಎಂದು ನಾಮಕರಣ ಮಾಡಿದರು. “ಲೌಜೀ ಹೌಸ್” ಮೂರು ವಿಶಾಲ ಮನಗೆಳು ಇರುವ ಮಹಾ ಬಂಗಲೆ. ಮೂರು ದೊಡ್ಡ ಹಾಲ್‌ಗಳು, ಏಳು ಬೆಡ್ ರೂಮ್‌ಗಳು, ಎರಡು ಮಾಳಿಗೆಯ ಇತರ ಕೋಣೆಗಳು ಮತ್ತೆ ಕುದುರೆ ಲಾಯ, ದೊಡ್ಡ ಉದ್ಯಾನ, ಕಾರಂಜಿ ಇದ್ದವೆಂದು ಭೇಟಿ ಮಾಡಿದವರು ವರ್ಣಿಸುತ್ತಾರೆ.

ಉಗಿ ಮತ್ತು ಎಂಜಿನೀಯರಿಂಗ್‌ಗಳಿಂದ ನಿವೃತ್ತಿ ಪಡೆದ ಮೇಲೆ “ಝೋರೊಆಸ್ಟ್ರಿಯನ್ ಟ್ರಸ್ಟ್ ಫಂಡ್ ಯುರೋಪ್‌ನ ಮೊದಲ ಹಿರಿಯ ಟ್ರಸ್ಟೀ ಆಗಿ ಕೆಲಸ ಮಾಡಿದರು, ವಿಶ್ವವ್ಯಾಪಿ ಪಾರ್ಸಿ ಸಂಘಟನೆಯ ಯೂರೋಪಿನ ಶಾಖೆ ಅದಾಗಿತ್ತು. 1873ರಲ್ಲಿ ಪಾರ್ಸಿಗಳ ನಿಯೋಗವನ್ನು ಲಂಡನ್ ಅರಮನೆಗೂ ಕೊಂಡೊಯ್ದರು. ಪರ್ಷಿಯಾ ಪ್ರಾಂತ್ಯದಲ್ಲಿ ನಡೆದ ಸಮಾಜ ಬಾಂಧವರ ಕಗ್ಗೊಲೆಗಳನ್ನು ಖಂಡಿಸಿ ಮನವಿ ನೀಡಿದರು. 1877ರ ನವೆಂಬರ್ 16ರಂದು 69 ವರ್ಷದ ಅರ್ದೆಶೀರ್ ಅಚಾನಕ್ ನಿಧನನಾದರು. 1969ರಲ್ಲಿ ಭಾರತೀಯ ಅಂಚೆ ಇಲಾಖೆಯ ಅರ್ದೆಶೀರ್ ಕುರ್ಸೆಟ್ಜಿ ಹೆಸರಲ್ಲಿ ಅಂಚೆಚೀಟಿ ಹೊರಡಿಸಿ ಗೌರವ ಸೂಚಿಸಿತ್ತು. ಮುಂಬಯಿ ಬಂದರು, ಹಡಗುಗಳ ಹಿನ್ನೆಲೆ ಇರುವ ಅಂಚೆಚೀಟಿ ಉಗಿಬಂಡಿ ಯುಗದ ಇಂಜಿನೀಯರ್ ಹಿರಿಯಜ್ಜನನ್ನು ಆತ್ಮೀಯವಾಗಿ ಸ್ಮರಿಸಿದೆ.

ಜೀವಿತದ ಬಹುಕಾಲ ಅರ್ದೆಶೀರ್ ಕುರ್ಸೆಟ್ಜಿ ಎಂದು ಕರೆಯಲ್ಪಡುತ್ತಿದ್ದುದು (ಕುರ್ ಸೆಟ್ ಜಿ ಅವರ ಮಗ ಅರ್ದೆಶೀರ್), ಪಾರ್ಸಿಗಳ ಹೆಸರಿಡುವ ಪದ್ಧತಿಗೆ ಅನುಗುಣವಾಗಿತ್ತು. 1870ರ ನಂತರ ಕುಟುಂಬ “ವಾಡಿಯಾ” ಎನ್ನುವ ಹೆಸರನ್ನು ಅಳವಡಿಸಿಕೊಂಡಿತು. ವಾಡಿಯಾ, ಹಡಗು ತಯಾರಕ ಪರಂಪರೆಯ ನೆನಪಾಗಿ ಅರ್ದೆಶೀರ್ ಹೆಸರಲ್ಲಿ ಸೇರಿತು. ಲಂಡನ್ ಮನೆಯ ಗೋಡೆಯನ್ನು ಏರಿರುವ ನೀಲಿ ಫಲಕ “ಅರ್ದೆಶೀರ್ ಕುರ್ ಸೆಟ್ ಜಿ ವಾಡಿಯಾ”, ಸಿವಿಲ್ ಇಂಜಿನಿಯರ್ ಎಂದು ಓದುತ್ತದೆ. “ಅರ್ದೆಶೀರ್ ಗತಿಸಿ ಒಂದೂವರೆ ಶತಮಾನ ಕಳೆದಿರಬಹುದು, ಅವರ ತಂತ್ರಜ್ಞಾನ ಪರಂಪರೆ ಈಗಲೂ ಬದುಕಿದೆ” ಎಂದು ಇಂಗ್ಲೆಂಡ್‌ನಲ್ಲಿರುವ ಮರಿ ಮರಿ ಮೊಮ್ಮಗ ಬ್ಲೇರ್ ಸ್ಯಾಂಡರ್ಸನ್ ತಿಳಿಯುತ್ತಾನೆ. ಸ್ವತಃ ಇಂಜಿನೀಯರ್ ಆಗಿರುವ ಸ್ಯಾಂಡರ್ಸನ್ “ಅರ್ದೆಶೀರ್ ಕುರ್ಸೆಟ್ಜಿ ಒಬ್ಬ ಪರಿವರ್ತಕ ಹಾಗು ನಿರ್ಮಾತ. ಭಾರತದ ಮನೆಗಳಲ್ಲಿ ಮೊಟ್ಟಮೊದಲು ಗ್ಯಾಸ್ ಲೈಟನ್ನು ಬಳಸಲು ಆರಂಭಿಸಿದವರು. ಉಗಿಚಾಲಿತ ಹಡಗುಗಳನ್ನು ತನ್ನ ಇಪ್ಪತ್ತರ ವಯಸ್ಸಿನಲ್ಲಿ ನಿರ್ಮಿಸಿದವರು. ಮುಂಬೈ ಛಾಯಾಗ್ರಹಣ ಸಮಾಜದ ಸ್ಥಾಪಕ ಸದಸ್ಯರು. ಒಬ್ಬ ಇಂಜಿನೀಯರ್ ಆಗಿ ನಾನು ಗೌರವಿಸುವ ಹಿರಿಯಜ್ಜ” ಎಂದೂ ನೆನಪಿಸುತ್ತಾನೆ.