ಇಂಡಿಯನ್ ಹುಡುಗರನ್ನು ಮಗಿಂಗಿನಲ್ಲಿ ಹೊಡೆದು ಬಡೆದ ಸಂಬಂಧದಲ್ಲಿ ಆಸ್ಟ್ರೇಲಿಯದಲ್ಲಿರುವ ಇಂಡಿಯದ ಮುಖಂಡರ ಬಗ್ಗೆ ಹೋದ ಸಲ ಬರೆದಾಗ – ಅದು ಇಷ್ಟು ದೊಡ್ಡ ಹಗರಣವಾಗಬಹುದು ಅನಿಸಿರಲಿಲ್ಲ. ಈಗ “ರೇಸಿಸ್ಟ್ ಆಸ್ಟ್ರೇಲಿಯ” ಎಂಬುದರಿಂದ ಹಿಡಿದು “ಇಂಡಿಯನ್ ವಿಕ್ಟಿಮ್” ಎನ್ನುವವರೆಗೂ ನಡೆದಿರುವ ಟೀಕೆ ಟಿಪ್ಪಣಿಗಳನ್ನು ಓದಿ ಇದನ್ನು ಅರಗಿಸಿಕೊಳ್ಳಲು ಒಂದು ಚೌಕಟ್ಟಿನ ಅಗತ್ಯವಿದೆ ಅನಿಸಿತು. ಹಲವಾರು ವರ್ಷ ಆಸ್ಟ್ರೇಲಿಯದ ಸಿಡ್ನಿಯಲ್ಲಿ ವಾಸವಾಗಿರುವ ನಾನು ಕಂಡ ಮಿತಿಯಲ್ಲಿ, ಮುಜುಗರದಿಂದಲೇ, ಅದನ್ನು ಕೊಡಬೇಕು ಅನಿಸಿದೆ.

ಈಗಿನ ಆಸ್ಟ್ರೇಲಿಯವನ್ನು ಅಪಾರ್ಥೈಡಿನ ಸೌತ್ ಆಫ್ರಿಕಕ್ಕೆ ಹೋಲಿಸುವಲ್ಲಿಗೆ ಈ ಜಗ್ಗಾಟ ಬಂದು ನಿಂತಿದೆ. ಇಂಡಿಯನ್ನರ ಮೇಲೆಲ್ಲಾ “ಮರ್ಸಿಲೆಸ್ ಅಟ್ಯಾಕ್” ಆಗುತ್ತಿದೆ ಎಂಬ ಸುಳ್ಳಿನೊಂದಿಗೆ ಕರುಣೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಇದನ್ನೆಲ್ಲಾ ಅರ್ಥ ಮಾಡಿಕೊಳ್ಳಲು ಒಂದು ಹಿನ್ನೆಲೆ ಹಾಗು ಮನಸ್ಥಿತಿಯ ಅವಶ್ಯಕತೆ ಇದೆ. ಒಂದು ನಿಲುವನ್ನು ತಿರಸ್ಕರಿಸಿ ಮತ್ತೊಂದನ್ನು ಪುರಸ್ಕರಿಸುವಷ್ಟು ಕಪ್ಪುಬಿಳುಪಿನ ಮಾತಲ್ಲ ಇದು. ಬಹುಶಃ ಆಸ್ಟ್ರೇಲಿಯದಲ್ಲಿರುವ ಇಂಡಿಯನ್ನರಿಗೆಲ್ಲ ಇದು ಅನಿಸುತ್ತಿರಬಹುದು ಎಂದು ನನ್ನ ಗುಮಾನಿ.

ಹನೀಫ್ ಪ್ರಕರಣ ನಡೆದ ಅಂದಿನ ಆಸ್ಟ್ರೇಲಿಯಕ್ಕೆ ಫಿಲಪೀನೊ ಮಹಿಳೆ ವಿವಿಯನ್ ಅಲ್ವಾರೆಜ್ ಹಾಗೂ ಜರ್ಮನ್ ಮಹಿಳೆಕಾರ್ನಿಲಿಯ ರಾಉ ಪ್ರಕರಣಗಳು ಒಂದು ಹಿನ್ನೆಲೆಯನ್ನು ಒದಗಿಸುತ್ತದೆ. ಆ ಹಿನ್ನೆಲೆಯಲ್ಲಿ ನೋಡಿದಾಗ, ಹನೀಫ್ ಪ್ರಕರಣ ಬರೇ ಆತಂಕವಾದದ ಸಂಗತಿಯಲ್ಲ ಎಂದು ಅರಿವಾಗುತ್ತದೆ. ಅಥವಾ ಹನೀಫನನ್ನು ವಿಕ್ಟಿಮೈಸ್ ಮಾಡುವುದೊಂದೇ ಕಾರಣವಾಗಿರಲಿಲ್ಲ ಎಂಬ ದಿಟ ತಿಳಿಯುತ್ತದೆ. ಅಂದಿನ ಸರ್ಕಾರ ಸೋಲಬೇಕಾಗಿದ್ದ ಚುನಾವಣೆಯಲ್ಲಿ ಗೆಲ್ಲಲು ಹನೀಫ್ ಪ್ರಕರಣ ಬಳಸಿಕೊಂಡಿದ್ದು ಈಗ ಇತಿಹಾಸ. ಅದಕ್ಕೂ ಹಿಂದಿನ ಚುನಾವಣೆಯಲ್ಲಿ ಅದೇ ಕನ್ಸರ್ವೆಟಿವ್ ಪಕ್ಷ ನಿರಾಶ್ರಿತರ ಬಗ್ಗೆ ಸುಳ್ಳು ಹೇಳಿ, ಅವರನ್ನು ಅಮಾನುಷರೆಂಬಂತೆ ಹೀಗಳೆದು ಚುನಾವಣೆ ಗೆದ್ದಿದ್ದು ಅದಕ್ಕೊಂದು ಹಿನ್ನೆಲೆಯಾಗಿ ದೊರಕುತ್ತದೆ.

ಈಗ ಮೆಲ್ಬರ್ನಿನಲ್ಲಿ ನಡೆದ ಮಗಿಂಗಳಿಗೆ ಈ ಬಗೆಯ ವಿಶಾಲವಾದ ಹಿನ್ನೆಲೆಯಿದೆಯೇ ಎಂದು ಪ್ರಶ್ನಿಸಿಕೊಳ್ಳುವುದು ಮುಖ್ಯ. ಹಾಗೊಂದು ಹಿನ್ನೆಲೆಯನ್ನು ತೋರಿಸಿ ನಂತರ ಸೌತ್ ಆಫ್ರಿಕದ ಅಪಾರ್ಥೈಡಿಗೆ ಹೋಲಿಸುವುದು ಸರಿಹೋದೀತು. ಇಲ್ಲದಿದ್ದರೆ ಅದು ಬರೇ ಬಾಯಿ ಮಾತಷ್ಟೇ ಆಗುತ್ತದೆ. ಇಷ್ಟು ಹೇಳಿ ಇದರ ಇನ್ನೊಂದು ಮುಖವನ್ನು ನೋಡದೇ ಇದ್ದರೂ ತಪ್ಪಾದೀತು. ಒಂದು ದೇಶದ ಬಗ್ಗೆ ಈ ಬಗೆಯ ಪ್ರತಿಕ್ರಿಯೆಗಳು ಉತ್ಪ್ರೇಕ್ಷೆಯಾದರೂ ಹೊತ್ತಿನ ಬಿಸಿಯಲ್ಲಿ ಹೊರಬರುತ್ತವೆ. ಅದರ ಸತ್ಯಾಸತ್ಯವೇನೇ ಇದ್ದರೂ ಕೂಡ ಅದನ್ನು ಹೊರಗೆಡಹುವ ಮನಸ್ಥಿತಿಯ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಬದುಕಿನಲ್ಲಿ ಆಗಿರಬಹುದಾದ ಸಣ್ಣಪುಟ್ಟ ಅವಮಾನಗಳು, ಸೋಲುಗಳು ಇಂತಹ ಸಂದರ್ಭದಲ್ಲಿ ಹೀಗೆಲ್ಲಾ ಹೊರಚೆಲ್ಲುವುದು ಸಹಜ. ಅದಕ್ಕೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ಆದರೆ ಅದೇ ಪೂರ್ಣಸತ್ಯವಂತೂ ಆಗುವುದಿಲ್ಲ.

ಈ ಬಗೆಯ ಕ್ರಿಮಿನಲ್ ದಾಳಿಗಳಿಗೆ ನಿರುದ್ಯೋಗ, ಬಡತನ, ದುರಾಸೆ, ದುಷ್ಚಟ ಎಂದೆಲ್ಲಾ ಕಾರಣ ಹುಡುಕುವುದು ಸೋಗಲಾಡಿತನವಾಗುತ್ತದೆ. ಎಲ್ಲ ದೇಶಗಳ, ಎಲ್ಲ ಊರಿನ ಎಲ್ಲ ಮಗ್ಗಿಂಗ್‌ಗಳಿಗೂ ಅಂತವೇ ಕಾರಣಗಳು ಇರುವಾಗ, ಅದನ್ನು ಇಲ್ಲಿ ದೊಡ್ಡ ಪಾಯಿಂಟು ಮಾಡಿ ಹೇಳುವುದು ಕೆಟ್ಟ ಸಮಜಾಯಿಷಿಯಂತೆ ಕಾಣುತ್ತದೆ. ಒಂದು ಸುರಕ್ಷಿತ ವಾತಾವರಣವನ್ನು ಕಟ್ಟುವುದಕ್ಕೆ ಇವೆಲ್ಲವನ್ನೂ ಒಳಗೊಂಡ ಪ್ರತಿಕ್ರಿಯೆ ಬೇಕೇ ಹೊರತು ಅವೇ ಮೊದಲು ಕಡೆಯಾಗುವುದಿಲ್ಲ. ಇಲ್ಲಿ ರೇಸ್ ಎಂಬ ಮತ್ತೊಂದು ಮಗ್ಗುಲು ಬಂದು ಸೇರಿಕೊಂಡಿರುವುದರಿಂದ ಚರ್ಚೆ ಹಾಗೂ ಪರಿಹಾರ ಜಟಿಲವಾಗುತ್ತದೆ. ಇದೂ ಆಸ್ಟ್ರೇಲಿಯಕ್ಕೆ ಹೊಸ ಸಂಗತಿಯೇನಲ್ಲ.

ವೈಟ್ ಆಸ್ಟ್ರೇಲಿಯ ಪಾಲಿಸಿಯಿಂದ ಹೊರಬಂದ ದೇಶದ ಬಗ್ಗೆ ಇಂದಿಗೂ “ಸಹಿಷ್ಣು” ಅಥವಾ “ರೇಸಿಸ್ಟ್” ಎಂಬ ಎರಡು ಧೃವದಲ್ಲಿ ಚರ್ಚೆ ಕೇಂದ್ರೀಕೃತವಾಗುತ್ತದೆ. ಆಸ್ಟ್ರೇಲಿಯ ಎಷ್ಟರ ಮಟ್ಟಿಗೆ ರೇಸಿಸ್ಟ್ ಅಥವಾ ಎಷ್ಟರ ಮಟ್ಟಿಗೆ ಸಹಿಷ್ಣು ಎಂಬ ಅಳೆಯುವಿಕೆ ಹಲವು ಬಗೆಗಳಲ್ಲಿ ಆಗುತ್ತಲೇ ಇರುತ್ತದೆ. ಹಲವು ಸಲ ರೇಸಿಸ್ಟ್ ಆಗಿಯೂ, ಹಲವು ಸಲ ಉದಾರವಾಗಿಯೂ ಈ ದೇಶ ನನಗೆ ಕಂಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ದೇಶ ತನ್ನನ್ನು ತಾನೇ ಆ ಚರ್ಚೆಗೆ ಸದಾ ಒಡ್ಡಿಕೊಳ್ಳುತ್ತಲೇ ಇದೆ. ಇದು ಬೇರೆ ದೇಶಗಳಷ್ಟೇ ಇಲ್ಲೂ ನಡೆದಿದೆ. ಹೆಚ್ಚೂ ಇಲ್ಲ ಕಡಿಮೆಯೂ ಇಲ್ಲ.

ಇನ್ನು ಮೆಲ್ಬರ್ನ್ ಇಂಡಿಯನ್ ಹುಡುಗರ ಮೇಲಿನ ದಾಳಿಗೆ ರೇಸ್ ಮಗ್ಗುಲಿರುವುದು ದಿಟವೇ. ಆದರೆ ಅದು ಯಾವ ರೂಪದಲ್ಲಿದೆ ಎನ್ನುವುದು ಮುಖ್ಯವಾದ ವಿಷಯ. “ಹೇಟ್ ಕ್ರೈಮ್” ಎಂದು ಕರಕೊಳ್ಳುವ – ಒಂದು ಜನಾಂಗದವನನ್ನು ಆ ಕಾರಣಕ್ಕಾಗಿಯೇ ಹೊಡೆದು ಬಡೆದು ಓಡಿಹೋಗುವ ರೀತಿಯದಲ್ಲ ಇದು. ದುಡ್ಡಿಗಾಗಿ, ಸಿಗರೇಟಿಗಾಗಿ ನಡೆದಿರುವ ಮಗಿಂಗ್. ಹಾಗೆಯೇ ಬಿಳಿಯರೂ ಉಳಿದವರೂ ಮಗಿಂಗಿಗೆ ತುತ್ತಾಗಿರುವುದು ಹೇರಳವಾಗಿ ಅಂಕಿಅಂಶಗಳಲ್ಲಿವೆ. ಇರುಳಲ್ಲಿ ಒಂಟಿಯಾಗಿ ಓಡಾಡುವ ಇಂಡಿಯನ್ ಹುಡುಗರೇ ಹೆಚ್ಚು ದಾಳಿಗೆ ತುತ್ತಾಗುತ್ತಿರುವದರಿಂದ “ರೇಸ್” ಮಗ್ಗಲು ಕಾಣಿಸಿಕೊಂಡಿದೆ. ಯಾಕೆ ದಾಳಿಕೋರರಿಗೆ ಇಂಡಿಯನ್ ಹುಡುಗರು ದಾಳಿಯಿಡಲು ಆಕರ್ಷಕವಾಗಿ ಕಾಣುತ್ತಾರೆ ಎಂದು ಹುಡುಕಿಕೊಳ್ಳಬೇಕಿದೆ. ಯಾವುದೇ ಬಗೆಯ ದುಡುಕು ಕಾರಣಗಳೂ ಇಲ್ಲಿ ನೆರವಾಗುವುದಿಲ್ಲ. ಬಹುಶಃ ಪೋಲೀಸರು ಅದನ್ನೇ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವಂತಿದೆ. ಆದರೆ ಸಂಗತಿ ಎರಡು ದೇಶಗಳ ನಡುವಿನ ಸಂಗತಿಯಾಗಿ ಮಾರ್ಪಟ್ಟಿರುವದರಿಂದ ನಿಜವಾದ ಕೆಲಸಕ್ಕೆ ತೊಂದರೆಯೇ ಆಗಿರಬಹುದು.

ಇನ್ನು ಇಂಡಿಯದ ಮಾಧ್ಯಮ ಹುಚ್ಚುಚ್ಚಾಗಿ ಅರಚಾಡುತ್ತಿರುವುದು, ಆಸ್ಟ್ರೇಲಿಯದಲ್ಲಿರುವ ಎಲ್ಲ ಇಂಡಿಯನ್ನರು ದಾಳಿಗೀಡಾಗುತ್ತಿದ್ದಾರೆ ಎಂಬಂತೆ ಬಿಂಬಿಸುತ್ತಿರುವುದು ವಿಷಾದನೀಯ. ಹಲವಾರು ವರ್ಷಗಳಿಂದ ಸಮಾಜದ ಜತೆ ಶಾಂತಿ ಹಾಗು ಸಂಘರ್ಷದ ಸಮತೂಕದಲ್ಲಿ ಬದುಕುತ್ತಿರುವ ಇಂಡಿಯನ್ ಜನಾಂಗ ಇನ್ನಾದರೂ ಅವರ ಕಣ್ಣಿಗೆ ಕಾಣುತ್ತಾರೇನೋ. ಹಾಗೆಯೇ ಇಂಡಿಯಕ್ಕೆ ಓದಲು ಬರುವ ಆಫ್ರಿಕದ ಕರಿಯರ, ನೇಪಾಳಿಯರ, ಬಾಂಗ್ಲಾದೇಶಿಯರ, ಮಿಡ್ಲ್ ಈಸ್ಟಿನವರ ಅನುಭವಗಳಿಗೆ ಈ ಸಂದರ್ಭದಲ್ಲಿ ಕಿವಿಗೊಡಬೇಕೇನೋ. ಅಂತರ್ಜಾಲದಲ್ಲಿ ಅವರ ಕತೆಗಳೂ ಹಲವಿವೆ. ನಮ್ಮ ಮಾಧ್ಯಮಗಳಿಗೆ ಇನ್ನಾದರೂ ಅವರು ಕಣ್ಣಿಗೆ ಬೀಳಬಹುದೇನೋ.

ಇಂಡಿಯದಲ್ಲಿ ಇದು ದೊಡ್ಡ ಸುದ್ದಿ ಆದಂದಿನಿಂದ ಮನೆಯವರು ಫೋನು ಮಾಡಿ ನಾನೂ, ಮಕ್ಕಳು ಹುಷಾರಾಗಿದ್ದೇವೆಯೆ ಎಂದು ಆತಂಕದಿಂದ ಕೇಳುತ್ತಿದ್ದಾರೆ. ಅವರವರ ಮನೆಯವರಿಗೆ ಸಾಂತ್ವನ ಹೇಳುವ ಕೆಲಸ ಬಹುಶಃ ಎಲ್ಲ ಇಂಡಿಯನ್ನರೂ ಮಾಡುತ್ತಿದ್ದಾರೆ. “ಅಂತಹ ದೇಶದಲ್ಲಿ ಹೇಗಿರುತ್ತೀರೋ” ಎಂದು ಉದ್ಗಾರಗಳು ಕೇಳಿದಾಗ ನಗುಬರುತ್ತದೆ. ೨೧ನೇ ಶತಮಾನದ ಜಾಗತಿಕ ಪರಿಸ್ಥಿತಿಯಲ್ಲಿ ರೇಸಿಸಂ ಒಂದು ನಾಡಿನ ಗಡಿಯೊಳಗೇ ಸೀಮಿತವಾಗಿರುವುದಿಲ್ಲ. ನಾಡಿನ ಒಳಗೂ ಕೂಡ ಅದು ಕಾನೂನು ಹಾಗು ಸಾಮಾಜಿಕ ನಿಲುವುಗಳ ಮೂಲಕ ಎದುರೆದುರು ಕಾಣೆಯಾದರೂ, ಸೂಕ್ಷ್ಮ ಮಜಲುಗಳಿಗೆ ಸರಿಯುವುದೂ ಒಂದು ಸವಾಲೇ. ಜನರನ್ನು ಧೃವೀಕರಿಸುವ ಇಂತಹ ಕೂಗಾಟ ಕೆಲವು ಒಳ್ಳೆಯ ಕೆಲಸಕ್ಕೆ ಧಕ್ಕೆಯೇ ಆಗುತ್ತದೆ. ಇಷ್ಟೆಲ್ಲಾ ಅಲ್ಲದೆ, “ರೇಸಿಸ್ಟ್ ಆಸ್ಟ್ರೇಲಿಯದಿಂದ ಹಿಂದಿರುಗಿಬಿಡಿ” ಎಂದು ಹೇಳುವವರಿಗೆ, ಇಂಡಿಯದ ಜಾತೀಯತೆಯಿಂದ ತಪ್ಪಿಸಿಕೊಂಡು ಎಲ್ಲಿಗೆ ಹೋಗುವುದು ಎಂದು ಕೇಳುವಂತಾಗುತ್ತದೆ.

ನಾವಿರುವ ಎಡೆಯಲ್ಲೇ ಚೆಂದವನ್ನೂ, ತಪ್ಪುಗಳನ್ನೂ ವಿಮರ್ಶಿಸಿಕೊಂಡು, ಒಡನಾಡಿಕೊಂಡು, ಸಿಟ್ಟು ಮಾಡಿಕೊಂಡು, ನಕ್ಕು ನಗಿಸಿಕೊಂಡು, ಕೆಲವೊಮ್ಮೆ ಅಸಹನೆಯಿಂದ, ಕೆಲವೊಮ್ಮೆ ಉದಾರವಾಗಿ ಬದುಕುವುದು ಮುಖ್ಯವಾಗುತ್ತದೆ – ಅದು ಎಂತದೇ ದೇಶವಾಗಿದ್ದರೂ ಕೂಡ. ಹಾಗೆ ಬದುಕುವ ಅವಕಾಶವಂತೂ ಇಲ್ಲಿ ಇದ್ದೇ ಇದೆ.