ದೇಶಬಂಧು ಡೋಗ್ರಾನೂತನ್ ಡೋಗ್ರಿ ಸಾಹಿತ್ಯದಲ್ಲಿ ಕೃಷಿ ಮಾಡಿದವರು. ಸಮಕಾಲೀನ ಆಗುಹೋಗುಗಳಿಗೆ ಪ್ರತಿಕ್ರಿಯಿಸುವವರೂ ಹೌದು. ಹಾಗಾಗಿ, ಭಾಷೆ ಮತ್ತು ರಾಜಕೀಯ ವಿಚಾರಗಳ ವಿಶ್ಲೇಷಣೆಗಳತ್ತ ಕೂಡ ಗಮನ ಹರಿಸಿದವರು. ಅವರ ಮನೆಯ ಚಾವಡಿ, ಸಾಹಿತ್ಯ ಚರ್ಚೆ, ಚಹಾಕೂಟಗಳಿಗೆ ಆಸರೆ. ದೇಶವಿಭಜನೆಯ ಸಂದರ್ಭವನ್ನು, ತುರ್ತುಪರಿಸ್ಥಿತಿ ಬಿಗುವನ್ನೂ, ಭಯೋತ್ಪಾದನೆಯ ಕರಾಳತೆಯನ್ನೂ ಕಂಡಿರುವ ಅವರ ಮಾತುಗಳು ಹೆಚ್ಚಾಗಿ ‘ಭಾಷೆ’ಯ ಸುತ್ತವೇ ಸುತ್ತುತ್ತವೆ.
ದೇಶಬಂಧು ಡೋಗ್ರಾ ನೂತನ್ ಕುರಿತು ಕೋಡಿಬೆಟ್ಟು ರಾಜಲಕ್ಷ್ಮಿ ಬರಹ

 

ಕಾಶ್ಮೀರದಿಂದ ಜಮ್ಮುವಿಗೆ ಬರುವ ದಾರಿಯಲ್ಲಿ, ಉಧಂಪುರ ಎಂಬುದು ಬೆಟ್ಟಗುಡ್ಡಗಳ ಸೆರಗಿನಲ್ಲಿರುವ ಸುಂದರವಾದ ಪ್ರದೇಶ. ಕಾಶ್ಮೀರದಿಂದ ಬರುವ ಮಿನಿ ಬಸ್ಸಿನಲ್ಲಿ ಬಂದು, ಉಧಂಪುರದಲ್ಲಿ ಇಳಿಯುವಷ್ಟರಲ್ಲಿ ಸಂಜೆಗಿನ್ನು ಸ್ವಲ್ಪ ದೂರ. ಪ್ರಯಾಣದ ಸಂದರ್ಭದಲ್ಲಿ ಆರು ಬಾರಿ ಪೋನ್ ಮಾಡಿದ ದೇಶಬಂಧು ಡೋಗ್ರಾ ನೂತನ್ ಅವರು, ‘ಜೋಪಾನ’ ಎಂದು ಸುಮಾರು ಹದಿನೈದು ಬಾರಿ ಹೇಳಿದ್ದರು.

ಒಬ್ಬಳೇ ಪ್ರಯಾಣಿಸುತ್ತಿದ್ದೇನೆ ಎಂದು ನನಗೆ ಕಾಳಜಿ ಹೇಳುತ್ತಿದ್ದಾರೆ. ಬಹುಶಃ ತುಂಬ ವಯಸ್ಸಾದವರಿರಬೇಕು ಎಂದು ಮನಸ್ಸಿನಲ್ಲಿಯೇ ಅಂದುಕೊಂಡೆ. ಆದರೆ ‘ಒಬ್ಬಳೇ ಪ್ರಯಾಣಿಸುವುದು ಅಷ್ಟು ಕ್ಷೇಮವಲ್ಲ’ ಎಂದು ಅಲ್ಲಿನವರು ಯಾಕೆ ಭಾವಿಸುತ್ತಾರೆ ಎಂಬುದು ನಂತರದ ದಿನಗಳಲ್ಲಿ ಅರಿವಾಯಿತು. ಆದರೆ ಆ ರಾಜ್ಯದ ಹಿನ್ನೆಲೆಯೇ ಹಾಗಿದೆ.

ಅತ್ತ ಕಾಶ್ಮೀರ, ಇತ್ತ ಜಮ್ಮು ನಗರಗಳನ್ನು ಸಂಪರ್ಕಿಸುವ ಕೇಂದ್ರ ಸ್ಥಾನವೂ ಹೌದು. ಆದ್ದರಿಂದ ಇಲ್ಲಿ ಸೇನಾ ಚಟುವಟಿಕೆಗಳು ಹೆಚ್ಚು. ಸುತ್ತಮುತ್ತ ಬೆಟ್ಟಸಾಲುಗಳೇ ಪ್ರಧಾನವಾಗಿ ಕಂಡರೂ ಉಧಂಪುರ ನಗರ ಮಾತ್ರ ಸಮತಟ್ಟು ಜಾಗದಲ್ಲಿದೆ. ರಾಜಾ ಉಧಂಸಿಂಗ್ ಹೆಸರನ್ನೇ ಈ ನಗರಕ್ಕೆ ನಾಮಕರಣ ಮಾಡಲಾಗಿದೆ. ಡೋಗ್ರಾ ಸಮುದಾಯದ ಜನರು ಹೆಚ್ಚಿರುವ ಪ್ರದೇಶ ಮಾತ್ರವಲ್ಲ ಡೋಗ್ರಿ ಭಾಷೆಯ ಕುರಿತ ಚಟುವಟಿಕೆಗಳನ್ನು ಆಸ್ಥೆಯಿಂದ ಕೈಗೆತ್ತಿಕೊಳ್ಳುವ ಸಾಹಿತಿಗಳ, ಸಾಹಿತ್ಯ ಪರಿಚಾರಕರ ಸಮುದಾಯವೂ ಈ ಪ್ರದೇಶದಲ್ಲಿ ಹೆಚ್ಚಾಗಿತ್ತು. ಉಧಂಪುರದ ಇಂದ್ರಾನಗರದಲ್ಲಿರುವ ದೇಶಬಂಧು ಅವರ ಮನೆ ಹುಡುಕಿ ಹೊರಟೆ.

ಡೋಗ್ರಿ ಸಾಹಿತಿ ದೇಶಬಂಧು ಡೋಗ್ರಾನೂತನ್ ಡೋಗ್ರಿ ಸಾಹಿತ್ಯದಲ್ಲಿ ಕೃಷಿ ಮಾಡಿದವರು. ಸಮಕಾಲೀನ ಆಗುಹೋಗುಗಳಿಗೆ ಪ್ರತಿಕ್ರಿಯಿಸುವವರೂ ಹೌದು. ಹಾಗಾಗಿ, ಭಾಷೆ ಮತ್ತು ರಾಜಕೀಯ ವಿಚಾರಗಳ ವಿಶ್ಲೇಷಣೆಗಳತ್ತ ಕೂಡ ಗಮನ ಹರಿಸಿದವರು.

‘ನನ್ನ ಯೌವ್ವನದ ದಿನಗಳಲ್ಲಿ ಕಾರ್ಮಿಕ ಸಂಘಟನೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದರಿಂದ ನಾನು ಜೈಲು ಸೇರಬೇಕಾಯಿತು. ‘ಒಂದಾದ ಮೇಲೊಂದು ಜೈಲಿನಲ್ಲಿ ಇರಬೇಕಾಯಿತು. ಹಾಗಾಗಿ ಆ ಕಾಲಕ್ಕೆ ಅಂದರೆ, ಯೌವ್ವನದಲ್ಲಿ ಒಂದೆಡೆ ಕುಳಿತು ಬರೆಯುವುದಕ್ಕೆ ಅನುಕೂಲವಾಯಿತೆನ್ನಿ’ ಎಂದು ದೊಡ್ಡದಾಗಿ ನಗುತ್ತ ತಮ್ಮ ಸಾಹಿತ್ಯ ಪ್ರಯಾಣ ಸಾಗಿ ಬಂದ ದಾರಿಯನ್ನು ಹೇಳಿಕೊಂಡರು. ಅವರ ಶಿಷ್ಯ ಹಾಗೂ ಸ್ನೇಹಿತರೂ ಆದ ಪ್ರಕಾಶ್ ಪ್ರೇಮಿ ಕೂಡ ಜೊತೆಗಿದ್ದರು. ಪಕ್ಕದ ತಾಂಡಾ ಪದ್ದರ್ ಎಂಬಲ್ಲಿ ಪ್ರಕಾಶ್ ಪ್ರೇಮಿ ಮನೆಯಿತ್ತು. ಇಬ್ಬರೂ ಸಾಹಿತಿಗಳು ಡೋಗ್ರಿ ಮತ್ತು ಹಿಂದಿ ಭಾಷೆಯಲ್ಲಿ ಸಮರ್ಥವಾದ ಹಿಡಿತ ಹೊಂದಿದ್ದರಿಂದ, ಹಿಂದಿ ಭಾಷೆಯ ಕೃತಿಗಳನ್ನು ಡೋಗ್ರಿಗೆ ಅನುವಾದಿಸುವ ಹಾಗೂ ಡೋಗ್ರಿಯ ಕೃತಿಗಳನ್ನು ಹಿಂದಿಗೆ ಅನುವಾದಿಸುವ ಕೆಲಸಗಳನ್ನು ನಿರಂತರವಾಗಿ ಮಾಡುತ್ತ ಬಂದವರು. ಇಬ್ಬರೂ ಸಂಸ್ಕೃತ ಭಾಷೆಯನ್ನು ಚೆನ್ನಾಗಿ ಬಲ್ಲವರು.

ಸಂಜೆಯಾಯಿತೆಂದರೆ ಸಾಹಿತಿಗಳೂ, ಸಾಹಿತ್ಯಾಭಿಮಾನಿಗಳೂ ದೇಶಬಂಧು ಅವರ ಮನೆಯಲ್ಲಿ ಸೇರಿ ಮಾತಿನ ಕಟ್ಟೆಯೇರಿಬಿಡುತ್ತಿದ್ದರು. ಆ ಸಂಜೆ ನಾನೂ ಅಲ್ಲಿದ್ದುದರಿಂದ ಅವರೆಲ್ಲರ ಮಾತು, ಡೋಗ್ರಿ ಮತ್ತು ಹಿಂದಿಯಲ್ಲಿ ಸಾಗಿತು. ನಡುನಡುವೆ ಕೆಲವು ಪದಗಳನ್ನು ಮತ್ತೊಮ್ಮೆ ಉಚ್ಛರಿಸಿ, ಅದರ ಅರ್ಥವನ್ನು ಇಂಗ್ಲಿಷ್‌ನಲ್ಲಿ ಹೇಳುತ್ತಿದ್ದರು.

ಏಳೆಂಟು ಜನರ ಪುಟ್ಟ ಚಹಾಕೂಟದಂತಿದ್ದ ಆ ಮೀಟಿಂಗ್‌ನಲ್ಲಿ ಸಾಹಿತ್ಯ ಕ್ಷೇತ್ರದ ಹೊಸ ವಿಚಾರ, ರಾಜಕೀಯ ಕ್ಷೇತ್ರದ ಹಳೆ ವಿಚಾರಗಳ ಮಾತುಗಳು ರಂಗು ಪಡೆದುಕೊಳ್ಳತೊಡಗಿದವು. ಜಮ್ಮು ಜನರ ಮಾತಿ ಧಾಟಿ, ಪಂಜಾಬಿ ಕಡೆಯ ಮಾತಿನ ಧಾಟಿಯನ್ನು ಪರಸ್ಪರರು ಅನುಕರಿಸುತ್ತಾ ಅಲ್ಲಿ ನಗುವಿನ ಅಲೆಯೆದ್ದಿತು.

‘ಜಮ್ಮು ನಗರದವರು ಮಾತನಾಡುವ ಡೋಗ್ರಿ ಭಾಷೆಯೇ ಬೇರೆ. ಉಧಂಪುರದವರು ಮಾತನಾಡುವ ಡೋಗ್ರಿ ಭಾಷೆಯ ಶೈಲಿಯೇ ಬೇರೆಯಾಗಿದೆ. ಪಂಜಾಬ್‌ನ ಪ್ರಭಾವ, ಹಿಮಾಚಲ ಪ್ರದೇಶದ ಪ್ರಭಾವ, ಹಿಂದಿಯ ಪ್ರಭಾವದಿಂದ ಡೋಗ್ರಿಯಂತೂ ವಿವಿಧ ರೂಪುಗಳನ್ನು ಪಡೆದುಕೊಳ್ಳುವುದು ಸಾಧ್ಯವಾಗಿದೆ. ಭಾಷೆಯನ್ನು ಶುದ್ಧವಾಗಿಟ್ಟುಕೊಳ್ಳಬೇಕು ಎಂದು ಹೇಳಿದರೆ ಅದು ಹರಿವ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ – ಎಂಬ ಗಾದೆಯಂತಾದೀತು. ಆದರೆ ವಿವಿಧ ಪ್ರಭಾವಗಳಿಂದ ಡೋಗ್ರಿಯ ವೈವಿಧ್ಯವೂ ಹೆಚ್ಚಿದೆ. ಪ್ರಭಾವಗಳು ಭಾಷೆಯನ್ನು ವೃದ್ಧಿಸಬೇಕೇ ಹೊರತು, ಈಗ ನೋಡಿ, ಎಲ್ಲರೂ ಇಂಗ್ಲಿಷ್‌ಗೇ ಶರಣಾದಂತೆ ಒಂದು ಭಾಷೆಯು ಮತ್ತೊಂದನ್ನು ನುಂಗಿ ಹಾಕಬಾರದು’ ಎನ್ನುತ್ತ ದೇಶಬಂಧು ಡೋಗ್ರಿ ಭಾಷೆಗೆ ಸಂವಿಧಾನದಲ್ಲಿ ಸ್ಥಾನ ಸಿಗಬೇಕಾದರೆ ನಡೆದ ಹೋರಾಟವನ್ನು ಮತ್ತೊಂದು ಬಾರಿ ಹೇಳಿದರು.

ಭಾಷೆಯ ಕುರಿತು ಅಭಿಮಾನವಿದ್ದಂತೆಯೇ ದೇಶಬಂಧು ಅವರಿಗೆ ‘ಡೋಗ್ರಾ ಸಮುದಾಯ’ದ ಶಕ್ತಿ ಸಾಮರ್ಥ್ಯಗಳ ಕುರಿತೂ ಅಷ್ಟೇ ಅಭಿಮಾನವಿದೆ. ಹಾಗಾಗಿ ಅವರು ಇತಿಹಾಸದಲ್ಲಿ ಡೋಗ್ರಾ ಸಮುದಾಯದ ಉಲ್ಲೇಖಗಳನ್ನೆಲ್ಲ ಓದಿ ತಿಳಿದುಕೊಂಡವರು. ಸಂಪ್ರದಾಯಗಳು, ಮೂಢನಂಬಿಕೆಗಳಲ್ಲದೆ, ನಗರವಾಸಿಗಳ ತಿರಸ್ಕಾರವು ಕೂಡ ವ್ಯಕ್ತಿಯ ವಿಕಾಸಕ್ಕೆ ಹೇಗೆ ತೊಡಕಾಗುತ್ತದೆ ಎಂಬುದನ್ನು ಅವರು ಬರೆದ ‘ಖೈದಿ’ ಕಾದಂಬರಿ ವಿವರಿಸುತ್ತದೆ. ಭಾಗನ್ ಎಂಬಾಕೆ ಆ ಕಾದಂಬರಿಯ ಕಥಾ ನಾಯಕಿ. ‘ವೀರ್ ಜಸರಾತ್ ಖೋಖರ್’ ಎಂಬ ಐತಿಹಾಸಿಕ ಕಾದಂಬರಿಯ ವಸ್ತು ಯೋಧನೊಬ್ಬನ ಜೀವನ. ಕಾಶ್ಮೀರದ ರಾಜಕೀಯ ಕ್ಷೇತ್ರದಲ್ಲಿ ಹಿಂದೂ ಮುಸ್ಲಿಂ ಸಮುದಾಯದ ಪಾತ್ರವನ್ನು ವಿವರಿಸುವ ಕಾದಂಬರಿಯಿದು ಎನ್ನುವುದನ್ನು ಅಲ್ಲಿನ ಚರ್ಚೆಯಿಂದ ಅರ್ಥ ಮಾಡಿಕೊಳ್ಳುವುದು ಸಾಧ್ಯವಾಯಿತು.

1939ರಲ್ಲಿ ಹುಟ್ಟಿದ ದೇಶಬಂಧು ಅವರು ಸ್ವಾತಂತ್ರ್ಯ ಸಿಕ್ಕಿದ ಸಂದರ್ಭದಲ್ಲಿ ಬಾಲ್ಯ ಕಳೆದವರು. ಹಾಗಾಗಿ ದೇಶವಿಭಜನೆಯ ಹಸಿ ಹಸಿ ಕಥೆಗಳನ್ನು ಕೇಳಿ ಬೆಳೆದವರು. ವಿಭಜನೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರವು ಡೋಗ್ರಾ ಸಮುದಾಯದ ಮೇಲೆ ಪರಿಣಾಮ ಬೀರಿತು ಎಂಬುದನ್ನು ಮತ್ತೆ ಮತ್ತೆ ಓದಿಕೊಂಡವರು. ಪರಿಣಾಮಗಳ ನಂತರದ ಜೀವನವನ್ನು ಕಣ್ಣಾರೆ ಕಂಡವರು. ಬಹುಶಃ ಇವೇ ಘಟನೆಗಳು ಅವರನ್ನು ಇತಿಹಾಸದತ್ತ ಮುಖ ಮಾಡುವಂತೆ ಪ್ರೇರೇಪಿಸಿತು. ಇತಿಹಾಸದ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಬಳಿಕ ‘ಅರುಣಿಮಾ’ ಪ್ರಕಾಶಂ ಮೂಲಕ ಪ್ರಕಾಶನದ ಕೆಲಸ ಕೈಗೆತ್ತಿಕೊಂಡರು. ಡೋಗ್ರಿ ಭಾಷೆಯಲ್ಲಿ ಒಂಭತ್ತು ಕಾದಂಬರಿಗಳು, ಹಿಂದಿ ಭಾಷೆಯಲ್ಲಿ ಐದು ಕಾದಂಬರಿ ಬರೆದ ದೇಶಬಂಧು, ‘ಖೈದಿ’ ಎಂಬ ಕಾಂಬರಿಯನ್ನು ಡೋಗ್ರಿ ಮತ್ತು ಹಿಂದಿಯಲ್ಲಿಯೂ ಬರೆದು ಪ್ರಕಟಿಸಿದ್ದಾರೆ. ಅದು ಉರ್ದು ಭಾಷೆಗೂ ಅನುವಾದಗೊಂಡಿದೆ.

ಅವರ ಆಸಕ್ತಿಯ ಮತ್ತೊಂದು ಕ್ಷೇತ್ರ ರಂಗಭೂಮಿ. ಸಮುದಾಯ, ಭಾಷೆಯ ಕಡೆಗೆ ಇರುವ ಒಲವಿನ ದೆಸೆಯಿಂದಾಗಿ ಅವರು ಸಂಶೋಧನಾ ಬರಹಗಳನ್ನೂ ಬರೆದರು. ‘ಡೋಗ್ರಿ ಭಾಷಾ ತೆ ವ್ಯಾಕರಣ’ ಎಂಬ ಕೃತಿ, ಹೊಸತಲೆಮಾರಿನ ಜನರು ಡೋಗ್ರಿ ಭಾಷೆಯನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಅಭ್ಯಾಸ ಮಾಡಲು ನೆರವಾಯಿತು.

ಡೋಗ್ರಾ ಸಮುದಾಯದ ಜನರು ಹೆಚ್ಚಿರುವ ಪ್ರದೇಶ ಮಾತ್ರವಲ್ಲ ಡೋಗ್ರಿ ಭಾಷೆಯ ಕುರಿತ ಚಟುವಟಿಕೆಗಳನ್ನು ಆಸ್ಥೆಯಿಂದ ಕೈಗೆತ್ತಿಕೊಳ್ಳುವ ಸಾಹಿತಿಗಳ, ಸಾಹಿತ್ಯ ಪರಿಚಾರಕರ ಸಮುದಾಯವೂ ಈ ಪ್ರದೇಶದಲ್ಲಿ ಹೆಚ್ಚಾಗಿತ್ತು.

‘ಮಾರ್ಕ್ಸ್ ವಾದ ಮತ್ತು ಮಾವೋತ್ಸೆ ತುಂಗನ ಬಗ್ಗೆ ಬಹಳ ಅಭಿಮಾನ ಹೊಂದಿದ್ದರಿಂದ ನನಗೆ ಅವರ ವಿಚಾರಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಓದುವ ಹುಮ್ಮಸ್ಸು ಮೂಡಿತ್ತು. ಆದರೇನು ಮಾಡೋಣ, ನಂತರದ ದಿನಗಳಲ್ಲಿ ಜಮ್ಮುವಿನಲ್ಲಿ ಈ ಕಮ್ಯುನಿಸ್ಟ್ ಪಕ್ಷ ಇಬ್ಭಾಗವಾಗಿ ನಾವು ನಂಬಿಕೊಂಡಿದ್ದ ವಿಚಾರಗಳ ಬಗ್ಗೆ ನಮಗೇ ಗೊಂದಲ ಮೂಡುವಂತಾಯಿತು’ ಎನ್ನುವ ದೇಶಬಂಧು, ಜಮ್ಮು ಕಾಶ್ಮೀರದಲ್ಲಿ ಟ್ರೇಡ್ ಯೂನಿಯನ್ ಗಳ ಚಳವಳಿ ಕುರಿತು ಹಿಂದಿ ಮತ್ತು ಉರ್ದು ಭಾಷೆಯಲ್ಲಿ ಪುಸ್ತಕ ಬರೆದಿದ್ದಾರೆ. ‘ಜಮ್ಮು ಕ್ಷೇತ್ರ ಔರ್ ಕಾಶ್ಮೀರ್ ಕ್ಷೇತ್ರ, ಭೇದ ಔರ್ ಮತಭೇದ’ ಅವರು ಬರೆದ ಕೃತಿ. ‘On The Doctrine of Socialism in One Country’, India And Its Revolutions ಕೂಡ ಅವರ ರಾಜಕೀಯ ಅವಲೋಕನವನ್ನು ವಿವರಿಸುತ್ತದೆ. ಹೀಗೆ ತಮ್ಮ ಓದು ಮತ್ತು ಹೋರಾಟದ ಅನುಭವ ಸಾರ ಸಂಗ್ರಹವನ್ನು ಅವರು ಕೃತಿರೂಪಕ್ಕಿಳಿಸಿದ್ದಾರೆ.

ಅವರ ಈ ಎಲ್ಲ ಸಾಹಿತ್ಯ ಕೃಷಿಯ ಕೆಲಸಗಳಿಗೆ ಗೌರವಗಳು ಸಂದಿವೆ.  ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಮ್ಮು ಕಾಶ್ಮೀರ ಕಲೆ, ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ಸಂದಿವೆ. ಕೊಡಬೇಕಾದ ಸಮಯಕ್ಕೆ ಸಾಹಿತ್ಯ ಅಕಾಡೆಮಿಯು ತನಗೆ ಪ್ರಶಸ್ತಿ ಕೊಡಲಿಲ್ಲ ಎಂಬ ಸಿಟ್ಟಿನಲ್ಲಿ, ತಡವಾಗಿ ಬಂದ ಪ್ರಶಸ್ತಿಯನ್ನು ಸ್ವೀಕರಿಸಿ, ಅದೇ ವೇದಿಕೆಯಲ್ಲಿ ಪ್ರಶಸ್ತಿ ವಾಪಸ್ಸು ನೀಡಿ ಪ್ರತಿಭಟಿಸಿದ್ದರು.

ಡೋಗ್ರಿ ಭಾಷಾ ಬರಹಗಾರರ ಆ ಪುಟ್ಟ ಚಹಾಕೂಟದಲ್ಲಿ ಡೋಗ್ರಿ ಕವಿತೆಗಳ ವಾಚನ ನಡೆದಿತ್ತು. ಆದರೆ ಅವುಗಳೊಂದೂ ನನಗೆ ಅರ್ಥವಾಗುತ್ತಿರಲಿಲ್ಲ. ಡೋಗ್ರಿ ಭಾಷೆಯು ಬಹುವಾಗಿ ಹಿಂದಿ ಭಾಷೆಯನ್ನೇ ಹೋಲುತ್ತದೆ. ‘ಡೋಗ್ರಿಯಲ್ಲಿ ಪದಸಮೃದ್ಧಿ ಇದೆ. ಡೋಗ್ರಿಯ ಎಷ್ಟೋ ಪದಗಳಿಗೆ ಸಮನಾದ ಪದ, ಇಂಗ್ಲಿಷ್, ಹಿಂದಿ ಅಥವಾ ಸಂಸ್ಕೃತದಲ್ಲಿಯೂ ಸಿಗುವುದಿಲ್ಲ ಗೊತ್ತ ?’ ಎಂದು ಥೇಟ್ ತುಳುವರು ಹೇಳುವ ಹಾಗೆ ತಮ್ಮ ಮಾತೃಭಾಷೆಯ ಹಿರಿಮೆಯ ಬಗ್ಗೆ ಹೇಳಿಕೊಂಡರು.  ‘ನೀವು ಕರ್ನಾಟಕದವರು ಬಹಳ ಸಂಸ್ಕೃತ ಮಿಶ್ರಿತ ಹಿಂದಿ ಮಾತನಾಡುತ್ತೀರಿ. ಅದಕ್ಕೇ ನೀನು ತಪ್ಪು ತಪ್ಪಾಗಿ ಹಿಂದಿ ಮಾತನಾಡಿದರೂ, ಕೇಳಲು ಚೆನ್ನಾಗಿರುತ್ತದೆ’ ಎಂದು ಛೇಡಿಸಿದರು.

ಪ್ರಕಾಶ್ ಪ್ರೇಮಿ ಕವನವನ್ನೇನೂ ಓದಲಿಲ್ಲ. ಲೋಕಾಭಿರಾಮ ವಿಚಾರಗಳನ್ನಷ್ಟೇ ಮಾತನಾಡಿದರು. ತಮ್ಮ ಸಾಹಿತ್ಯ ಮಾರ್ಗದಲ್ಲಿ ಗುರುಗಳೂ ಆಗಿರುವ ದೇಶಬಂಧು ಅವರೆದುರು ಪ್ರಕಾಶ್ ಪ್ರೇಮಿ ಹೆಚ್ಚು ಮಾತನಾಡಲೊಲ್ಲರು. ಕಥೆ, ವಿಮರ್ಶೆ ಮತ್ತು ಕಾವ್ಯ ಅವರು ಆಯ್ದುಕೊಂಡ ಕ್ಷೇತ್ರ. ಸಂಸ್ಕೃತವನ್ನು ಆರಾಮವಾಗಿ ಮಾತನಾಡಬಲ್ಲರು. ಹಿಂದಿ, ಸಂಸ್ಕೃತ ಮತ್ತು ಡೋಗ್ರಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಓದಿದ್ದರು. ಅವರು ಉಧಂಪುರದ ಕಸೂರಿ ಜಿಲ್ಲೆಯವರಾದರೂ ವೃತ್ತಿ ಸಂಬಂಧವಾಗಿ ಅವರು ಇತರೆಡೆಗಳಲ್ಲಿ ಇರಬೇಕಾಯಿತು. ಹಾಗಾಗಿ ಅವರು ದೇಶಬಂಧು ಅವರನ್ನು ಭೇಟಿಯಾಗುವ ವೇಳೆಗೆ ಶಿಕ್ಷಣ ಮುಗಿಸಿ ಉದ್ಯೋಗಸ್ಥರಾಗಿದ್ದರು. ‘ಆದರೆ ಮಾರ್ಕ್ಸ್, ಲೆನಿನ್ ಮತ್ತು ಮಾವೋತ್ಸೆ ತುಂಗ್ ಸಿದ್ಧಾಂತಗಳ, ಬರಹಗಳ ಅಧ್ಯಯನಕ್ಕೆ ತಮಗೆ ದೇಶಬಂಧುವೇ ಗುರು’ ಎಂದು ಹೇಳಿದರು.

(ಪ್ರಕಾಶ್ ಪ್ರೇಮಿ)

‘ಇಕ್ ಕೋಠಿ ದಾಸ್ ಡುವರ’, ‘ತ್ರುಂಬನ್, ಬೆಡ್ಡನ್ ಧರ್ತಿ ದಿ’, ‘ಲಲ್ಕಾರ್’ ಹೀಗೆ ಡೋಗ್ರಿಯಲ್ಲಿ ಅವರು ಕೃತಿಗಳನ್ನು ಬರೆದುದಲ್ಲದೆ, ಇತರ ಡೋಗ್ರಿ ಬರಹಗಾರರ ಕೃತಿಗಳನ್ನು ಹಿಂದಿಗೆ ಅನುವಾದಿಸಿದ್ದಾರೆ. ದೇಶಬಂಧು ಅವರ ‘ಉನ್ನೀಸೌ ಸಂತಾಲೀ’ ಕಾದಂಬರಿಯನ್ನೂ ಹಿಂದಿ ಭಾಷೆಗೆ ಅನುವಾದಿಸಿದ್ದಾರೆ. ಹಿಂದಿ ಸಾಹಿತ್ಯ ಲೋಕಕ್ಕೆ ಅನೇಕ ಡೋಗ್ರಿ ಬರಹಗಾರರನ್ನು ಪರಿಚಯಿಸಿದ್ದಾರೆ. ಪಂಜಾಬಿ ಕಾದಂಬರಿಕಾರ ಡಾ.ಗುರುದಯಾಳ್ ಸಿಂಗ್ ಅವರ ಕೃತಿಯನ್ನು ಡೋಗ್ರಿಗೆ ಅನುವಾದಿಸಿದ್ದಾರೆ. ‘ಮಣಿಪುರಿ ಕಹಾನಿಯಾ’ ಎಂಬ ಶೀರ್ಷಿಕೆಯಡಿ ಮಣಿಪುರಿ ಭಾಷೆಯ ಕಥೆಗಳನ್ನು ಡೋಗ್ರಿಗೆ ತಂದಿದ್ದಾರೆ. ಓದು ಜ್ಞಾನಾರ್ಜನೆಯ ಮೋಹಿಯಾಗಿರುವ ಪ್ರಕಾಶ್ ಪ್ರೇಮಿ, ಡೋಗ್ರಿ ಭಾಷೆಯನ್ನು ಶ್ರೀಮಂತಗೊಳಿಸುವಲ್ಲಿ, ಡೋಗ್ರಿ ಭಾಷೆಯ ಬಗ್ಗೆ ಇತರರು ತಿಳಿದುಕೊಳ್ಳುವಂತೆ ಮಾಡುವಲ್ಲಿ ಮಹತ್ವದ ಕೊಡುಗೆ ನೀಡಿದವರು.

ಇಂತಹ ಚಹಾಕೂಟಗಳು ಅರಿವಿನ ಗಡಿಯನ್ನು ವಿಸ್ತರಿಸುತ್ತವೆ ಎಂದು ಅವರು ಹೇಳುವಷ್ಟರಲ್ಲಿ ದೇಶಬಂಧು ಅವರು ತಮ್ಮ ‘ಪೂತನಾಗ್’ ಎಂಬ ಕವನದ ಇಂಗ್ಲಿಷ್ ಅನುವಾದವನ್ನು ತಂದರು. ಜಮ್ಮು ಕಾಶ್ಮೀರದ ಕಿಶ್ತ್ವಾರಾ ಜಿಲ್ಲೆಯಲ್ಲಿ ಪೂತನಾಗ್ ಎಂಬುದೊಂದು ಜಲಪಾತ. ‘ನಾಗ್’ ಎಂದರೆ ಜಲಪಾತ ಎಂಬರ್ಥ. ಪೂತ ಎಂದರೆ ‘ಪುತ್ರ’.  ‘ಡೋಗ್ರಿ ಅರಿವಾಗದ ನಿನ್ನ ಮುಂದೇ ನಾವೇ ಕವನವಾಚನ ಮಾಡಿಕೊಳ್ಳುವುದು ಸರಿಯಲ್ಲ. ಇದೊಂದು ಕವನ ನಿನಗಾಗಿ..’ ಎನ್ನುತ್ತ ದೀರ್ಘವಾದ ಕವನವೊಂದನ್ನು ಇಂಗ್ಲಿಷ್ ನಲ್ಲಿ ಓದಿದರು. ಅದರ ಕನ್ನಡ ಭಾವ ಇಲ್ಲಿದೆ:

ಪೂತನಾಗ್

ಈ ಪಶ್ಚಿಮದ ಕಿಟಕಿಯಿಂದ ನಾನು ಇಣುಕುತ್ತಿರುವೆ
ಕೇಸರಿ ರೇಶಿಮೆ ದಿರಿಸಿನಲ್ಲಿ ನಿನ್ನ ನರ್ತನವ
‘ಮಟ್ಟ’ದ ಕೇಸರಿ ಗದ್ದೆಗಳಲ್ಲಿ
ಘರ್ಜಿಸುವ ಪೂತನಾಗ್ ಝರಿಯ ನಡುವೆ ಸೃಷ್ಟಿಯಾದ
ಆಕರ್ಷಕ ಸಂಗೀತದಲೆಯ ನಡುವೆ

ಬೆಳ್ಳಿಯ ಝರಿಯೊ
ಪಚ್ಚೆ ಹೊದ್ದ ಬೆಟ್ಟ ಮಗಳು ಶುಚೀ ನಾಗಿಣಿಯಂತೆ
ಹಿಮಾಲಯ ಸಾಲುಬೆಟ್ಟಗಳ ರಾಜ ವಾಸುಕಿಯ
ಮಗಳಂತೆ..

*****

ಸ್ವಾತಂತ್ರ್ಯ ಪಡೆದ ಸಂದರ್ಭವನ್ನು, ತುರ್ತುಪರಿಸ್ಥಿತಿಯನ್ನು ಬಳಿಕ ಕಾಶ್ಮೀರ ಕಣಿವೆಯ ಭಯೋತ್ಪಾದನೆಯ ದಿನಗಳನ್ನೂ ನೋಡಿರುವ ದೇಶಬಂಧು ಡೋಗ್ರಾ ನೂತನ್, ಸ್ವಲ್ಪ ಜಾಸ್ತಿಯೇ ಮಾತುಗಾರರು. ತಮಗೆ ಸಲ್ಲಬೇಕಾದಷ್ಟು ಮನ್ನಣೆ ಸಲ್ಲಲಿಲ್ಲ ಎಂಬ ಮಾಮೂಲಿ ದೂರೊಂದು ಅವರ ಮಾತಿನಲ್ಲಿ ಅವಿತಿತ್ತು. ರಾಜಕೀಯ ವ್ಯವಸ್ಥೆಯ ಹುಳುಕುಗಳ ಬಗ್ಗೆ ತೀವ್ರ ಬೇಸರವಿತ್ತು.

ಸ್ವತಃ ನಾಸ್ತಿಕರಾದರೂ ಅವರ ಓದು ವಿಸ್ತಾರವಾದುದು. ಅದು ಡೋಗ್ರಿ, ಹಿಂದಿ ಭಾಷೆಗೆ ಸೀಮಿತವಾಗಿರಲಿಲ್ಲ. ಮಹಾವಿಷ್ಣುವಿನ ನರಸಿಂಹಾವತಾರದ ಕುರಿತು ತುಂಬ ಕುತೂಹಲಿಗರಾಗಿದ್ದರು. ದಕ್ಷಿಣ ಭಾರತದ ರಾಜ್ಯಗಳಲ್ಲಿ ನರಸಿಂಹಾವತಾರದ ಯಾವೆಲ್ಲಾ ರೂಪಗಳನ್ನು ಆರಾಧಿಸಲಾಗುತ್ತದೆ ಎಂಬ ಬಗ್ಗೆ ಪ್ರಶ್ನೆ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ‘ದೇವರನ್ನು ನಂಬುವ ವಿಷಯದಲ್ಲಿ ಮಾತ್ರ ನಾಸ್ತಿಕತೆ. ಆ ಬಗ್ಗೆ ಓದಿ ತಿಳಿಯುವುದಕ್ಕೇಕೆ ನಾಸ್ತಿಕತೆ ಅಡ್ಡ ಬರಬೇಕು..’ ಎನ್ನುವುದು ಅವರ ವಾದ.

‘ಜ್ವಾಲಾ ನರಸಿಂಹ ಅಥವಾ ಉಗ್ರನರಸಿಂಹ, ಯೋಗಾನರಸಿಂಹ, ಲಕ್ಷ್ಮೀ ನರಸಿಂಹ, ಪಂಚಮುಖಿ ನರಸಿಂಹ… ಹೀಗೆ ದೇಶವ್ಯಾಪಿ ಇರುವ ಪ್ರಮುಖ ನರಸಿಂಹ ಸ್ವಾಮಿ ದೇವಸ್ಥಾನಗಳ ಮಾಹಿತಿ ಸಂಗ್ರಹಿಸಿದ್ದರು. ಅವರ ಪ್ರಶ್ನೆ ಇಷ್ಟೇ, ‘ಹಳೆಬೀಡಿನಲ್ಲಿರುವ ‘ನರಸಿಂಹ ಸ್ವಾಮಿ ವಿಗ್ರವನ್ನು ನೋಡಿದ್ದೀರಾ…’ “ನೋಡಿದ್ದೇನೆ’’ ಎನ್ನುವ ಒಂದು ಪದಕ್ಕಿಂತ ಹೆಚ್ಚೇನೂ ನನಗೆ ಗೊತ್ತಿರಲಿಲ್ಲ. ಆ ಸಂದರ್ಭದಲ್ಲಿ ಅವರು ಕರ್ನೂಲಿನ ಜ್ವಾಲಾ ನರಸಿಂಹ ದೇವಸ್ಥಾನದ ಹಿನ್ನೆಲೆ, ಸ್ಥಳಪುರಾಣಗಳ ಕುರಿತು ಓದಲು ಪುಸ್ತಕಗಳನ್ನು ರಾಶಿ ಹಾಕಿಕೊಂಡಿದ್ದರು.

ಪುಸ್ತಕಗಳ ರಾಶಿಗಳ ಮಧ್ಯದಿಂದ ‘ಕನ್ನಡ ಸಾಹಿತ್ಯ ಕಾ ಇತಿಹಾಸ್’ ಎಂಬ ಪುಸ್ತಕ ತೆಗೆದು, ನೀನು ಬರುವ ಬಹಳ ವರ್ಷಗಳ ಮೊದಲೇ ಇದನ್ನು ಓದಿಟ್ಟಿರುವೆ ನೋಡು’ ಎನ್ನುತ್ತಾ, ‘ಈ ಪುಸ್ತಕದೊಂದಿಗೆ ನನ್ನ ಫೋಟೋ ಕ್ಲಿಕ್ಕಿಸು’ ಎಂದು ಪುಸ್ತಕದ ಶೀರ್ಷಿಕೆ ಕಾಣುವ ಹಾಗೆ ಕುಳಿತರು.

‘ನಿಮ್ಮಲ್ಲಿ ಚದುರಂಗರು ಬರೆದ ‘ಸರ್ವಮಂಗಳಾ’ ಕಾದಂಬರಿಯನ್ನು ಆಧರಿಸಿದ ಸಿನಿಮಾ ನೋಡಿದ್ದೇನೆ. ಆ ಕಾದಂಬರಿಯನ್ನು ಡೋಗ್ರಿ ಭಾಷೆಗೆ ಅನುವಾದಿಸಬೇಕೆಂದುಕೊಂಡಿದ್ದೇನೆ..’ ಎನ್ನುತ್ತಾ ಪುಸ್ತಕಗಳ ರಾಶಿಯೊಳಗೆ ಮತ್ತೆ ಮುಳುಗಿದರು.