ಉಪಕಾರಸ್ಮರಣೆ ಈ ರೀತಿಯದ್ದಾಗಿರುತ್ತದೆ ಅಂತ ನಾ ತಿಳಿದಿರಲಿಲ್ಲ. ಒಂದೆರಡು ಸಲ ಮನೆಗೆ ಬಂದ ಪಾಟೀಲರ ಕಣ್ಣುಗಳೇ ಎಲ್ಲ ಹೇಳುತ್ತಿದ್ದವು. ಅಳುಕು ಮೊದಲು ಕಾಡಿತು ನಿಜ.. ಮುಖ್ಯವಾಗಿ ಸಂಬಂಧಕ್ಕೆ ಏನು ಹೆಸರಿಡುವುದು ಅಂತ.. ಅವರಿಗೆ ಮದುವೆಯಾಗಿತ್ತು ಮಕ್ಕಳಿದ್ದರು. ಆ ಸೆಳೆತ ಬಲವಾಗಿತ್ತು. ಕರಗಲು ಬಹಳ ಸಮಯ ಹಿಡಿಯಲಿಲ್ಲ. ಆದರೆ ಹಾಗೆ ಬೆರೆತಾಗ ಹೊಸ ಅನುಭೂತಿ ದೊರೆತದ್ದು ಸುಳ್ಳಲ್ಲ. ಹಳೆಯ ಗಂಡ ಸಿಗರೇಟಿನಿಂದ ಸುಟ್ಟ ಗಾಯಗಳ ಮೇಲೆ ಪಾಟೀಲರ ತುಟಿಗಳು ಆಡುವಾಗ ಹೊಸ ಅನುಭವ.
ಉಮೇಶ ದೇಸಾಯಿ ಬರೆದ ಕಥೆ ‘ಕ್ಷಮೆಯೊಂದಿರಲಿ…’ ನಿಮ್ಮ ಈ ಭಾನುವಾರದ ಓದಿಗೆ

 

ರಾತ್ರಿ ಮಲಗುವಾಗ ತಡವಾಗಿತ್ತು. ಹೀಗಾಗಿ ಏಳುವುದು ಕೂಡ ತಡ… ಬೆಳಗು ಹರಿದಿದ್ದು ನೋಡಿ ಗಡಿಬಿಡಿಯಿಂದ ಎದ್ದೆ. ಮನೆಯಲ್ಲಿ ಇವಳ ಸುಳಿವಿಲ್ಲ. ಅಡಿಗೆ ಮನೆಯ ಬೋರ್ಡಿಗೆ ಅಂಟಿಸಿದ ಚೀಟಿಯಲ್ಲಿ ತಿಂಡಿ ತಯಾರಿಸಿ ಇಟ್ಟಿರುವುದಾಗಿ ಬರೆದಿದ್ದಳು. ಎಬ್ಬಿಸಿದ್ದರೆ ರುಚಿಯಾಗಿ ಏನಾದರೂ ಮಾಡಿಕೊಡಬಹುದಿತ್ತು ಅಂದುಕೊಂಡೆ. ಅವಳು ಮಾಡಿದ ತಿಂಡಿ ರುಚಿಯಿರಲಿಲ್ಲ ಆದರೆ ಅಂತಃಕರಣ ಇತ್ತು.. ನಿನ್ನೆಯೂ ತಡವಾಗಿ ಬಂದಳು.. ಊಟ ಬೇಡ ಹಾಲು ಸಾಕು ಅಂದವಳಿಗೆ ಹಾಲುಕೊಟ್ಟಿದ್ದೆ. “ಅಮ್ಮ ಪ್ಲೀಸ್ ನಾಳೆ ಮಾತಾಡೋಣ” ಅಂದವಳ ಮಾತಿಗೆ ಎದುರಾಡದೆ ನಡೆದಿದ್ದೆ. ಈಗ ನೋಡಿದರೆ ಹೀಗೆ ಎಬ್ಬಿಸದೆ ಹೋಗಿದ್ದಾಳೆ. ಅದೆಂತಹ ಕೆಲಸದ ಹುಚ್ಚು ಇವಳದು.

ಮಾತು ಆಡಲೇಬೇಕಾದದ್ದು ಹಾಗೂ ಮುಖ್ಯವಾದದ್ದು ಕೂಡ. ಅವಳ ಜೀವನಕ್ಕೆ ಸಂಬಂಧಿಸಿದ್ದು ಆದರೆ ಈ ಹುಡುಗಿ ಯಾಕೆ ಅವಾಯ್ಡ್ ಮಾಡುತ್ತಾಳೋ. ಹುಡುಗ ಸಂದೀಪ ನನಗೂ ಇಷ್ಟವಾಗಿದ್ದ. ಇವಳ ಜೊತೆಗೇ ಕೆಲಸಮಾಡುವವ ಕೆಂಪುಕೆಂಪಾಗಿದ್ದ.. ಅನುರೂಪ ಜೋಡಿ ಅನಬಹುದು ಆದರೆ.. ಇವಳ ಹಟ ಬೇರೆಯೇ. ಎಲ್ಲ ತೆರೆದಿಡಬೇಕು ಏನೂ ಮುಚ್ಚಿಡುವುದು ಬ್ಯಾಡ ಅಂತ. ಬೇಡ ಅಂದರೆ ಕೇಳದ ಹಟ. ಇವಳಿಗಿಂತ ನನಗೆ ಅನುಭವ ಜಾಸ್ತಿ. ಹೀಗಾಗಿ ಹೇಳಿದ್ದೆ. ಆದರೆ ಆದರ್ಶವಾದಿ ಇವಳು. ನಾಳೆ ಗೊತ್ತಾಗಿ ರಂಪ ಬೇಡ,  ಅಪವಾದ ಬೇಡ ಎಂಬುದು ಇವಳ ವಾದ. ಆದರೆ ನನಗೆ ಹೆದರಿಕೆ. ಸತ್ಯ ಹೀಗಿದೆ ಬೇಕಾದರೆ ಒಪ್ಪಿಕೊಳ್ಳಿ -ಅಂತ ಹೇಳಲಾಗುತ್ತದೆಯೇ. ಅದೂ ಇಂತಹ ವಿಷಯಗಳನ್ನು !  ಏನೇನೋ ಮುಚ್ಚಿಟ್ಟು ಮದುವೆಯಾಗುತ್ತಾರೆ, ಅಂತಹುದರಲ್ಲಿ ಹರಿಶ್ಚಂದ್ರನ ಅಪರಾವತಾರದಂತೆ ಇವಳು ಎಲ್ಲ ಹೇಳುತ್ತೇನೆ ಅಂತ ಹಟ ಹಿಡಿದಿದ್ದಾಳೆ.

ಇವಳು ಹೇಳಲು ಹೊರಟಿರುವ ವಿಷಯ ಅಂತಹುದೇ. ನನ್ನ ಅತೀತದ ಅಧ್ಯಾಯ -ಅದು ಮಗಳು ಇವಳು. ಅದರ ಛಾಯೆ ಬೀಳದೇ ಇದ್ದೀತೆ ಹೇಳಿ. ಬೇಡ ಅಂತ ಬೀಸಾಡಲು ಬರುವುದಿಲ್ಲ. ಈಗ ಹಿಂತಿರುಗಿ ನೋಡಿದರೆ ನನ್ನ ಪಾತ್ರ ಏನಿತ್ತು. ನಾನು ಬೇಡಿ ಬಯಸಿ ಅಂತಹ ಸ್ಥಿತಿ ತಂದುಕೊಂಡೆನೇ ಎಂದರೆ ಖಂಡಿತ ಇಲ್ಲ. ಹುಟ್ಟಿದ ಕೂಡಲೇ ಅಪ್ಪ ಅಮ್ಮನ ನುಂಗಿಕೊಂಡವಳು ಎಂಬ ಖ್ಯಾತಿ ಬೆನ್ನಿಗಂಟಿತ್ತು. ಅಪ್ಪ ಮಾಡಿದ ಆಸ್ತಿ ಕರಗುವವರೆಗೆ ಸೋದರ ಮಾವ ಸಾಕಿದ್ದ.  ಮಾಮಿಯ ಚುಚ್ಚು ನುಡಿ. ಅವರ ಮಕ್ಕಳ ತಾತ್ಸಾರದ ನಡುವೆ ಅದು ಹೇಗೋ ಟೀಚರ್ ಟ್ರೇನಿಂಗ್ ಮುಗಿಸಿಕೊಂಡಿದ್ದೆ. ಇನ್ನು ಒಂದು ಕೆಲಸ ಹುಡುಕಿ ಈ ನರಕದಿಂದ ಪಾರಾಗಬೇಕು ಅಂದುಕೊಂಡವಳಿಗೆ ಮಾಮಾ ಬೇರೆಯೇ ಪ್ರಸ್ತಾಪ ತಂದಿದ್ದ. ಅದೂ ಮದುವೆದು.. ಎರಡನೇ ಸಂಬಂಧದ ವರ. ನಾ ಚಾಲುವರೆದೆ ಆದರೆ ಕೇಳುವವರಾರಿದ್ದರು. ಗಂಡ ಅನಿಸಿಕೊಂಡವನಿಗೆ ಹದಿನಾರರ ಮಗನಿದ್ದ ಮೊದಲ ಹೆಂಡತಿಯಿಂದ. ಅವನಿಗೆ ನನ್ನ ನೆರಳು ಕಂಡರೂ ಆಗುತ್ತಿರಲಿಲ್ಲ. ಹಗಲು ದುಡಿದು ಬರುವ ಗಂಡ ರಾತ್ರಿ ಕೆರಳುತ್ತಿದ್ದ… ಅನೇಕ ದಿನಗಳ ನಂತರ ಅವನಿಗೆ ಹಸಿವಾಗಿತ್ತು.. ಉಣ್ಣಲು ನಾ ಇದ್ದೆ.. ಇಷ್ಟೇ ಆದರೆ ಅಡ್ಡಿ ಇರಲಿಲ್ಲ, ಅವನಿಗೆ ವಿಪರೀತ ಸಂಶಯ. ಕುಡಿತ, ಇಸ್ಪೀಟುಗಳ ಚಟ ಬೇರೆ. ಮಗನಿಗೂ ಇವನಿಗೂ ಆಗಾಗ ಕೈ ಕೈ ಮಿಲಾಯಿಸುತ್ತಿತ್ತು. ಇವ ಚೀರಾಡುತ್ತಿದ್ದ ಅವನಿಗೆ ಹೊಡೆಯಲು ಹೋಗುತ್ತಿದ್ದ ಎದೆ ಉದ್ದ ಬೆಳೆದ ಮಗನೂ ಕೈ ಎತ್ತುತ್ತಿದ್ದ. ಅಲ್ಲಿಯ ಹತಾಶೆಯ ನೋವು. ಇವ ನನ್ನ ಮೇಲೆ ತೀರಿಸಿಕೊಳ್ಳುತ್ತಿದ್ದ. ಸಿಗರೇಟಿನ ಬೆಂಕಿಯಿಂದ ದೇಹ ಸುಡುತ್ತಿದ್ದ ವಿಕೃತಿ ಮೆರೆಯುತಿದ್ದ.

ಅವನ ಮೊದಲ ಹೆಂಡತಿಯ ಅಣ್ಣ ಬಂದಿಳಿದು ತನ್ನ ಅಳಿಯನ ಮುಂದೆ ಓದಿಸುವುದಾಗಿ ಕರೆದೊಯ್ದ. ಇವನಿಗೆ ಅದೇ ಬೇಕಾಗಿತ್ತು.. ಹೋಗುವಾಗಲೂ ಅವ ಮಾತಾಡಲಿಲ್ಲ ನನ್ನ ಜೊತೆ. ಸರಕಾರಿ ಕೆಲಸ, ಸ್ವಂತದ ಮನೆ ಎಲ್ಲ ಸರಿ; ಆದರೆ ಗಂಡನದು ದುಡುಕು ಸ್ವಭಾವ, ವಿಪರೀತ ಸಿಟ್ಟು, ಅದೇ ಮುಳುವಾಯಿತು. ತನ್ನ ಮೇಲಧಿಕಾರಿಗೆ ಜಾತಿನಿಂದನೆ ಮಾಡಿದ. ಅಟ್ರಾಸಿಟಿ ಕೇಸು ದಾಖಲಾಗಿ ಜೈಲು ಪಾಲಾದ. ಮನೆಯಲ್ಲಿದ್ದ ಬಂಗಾರ ಆಸ್ತಿ ಮೇಲೆ ತೆಗೆದ ಸಾಲದ ದುಡ್ಡು ವಕೀಲರಿಗೆ ಸುರಿಯಲಾಯಿತು. ಕೇಸು ಜಟಿಲವಾಗಿದೆ ಅಂತ ಹೇಳುತ್ತಲೇ ದುಡ್ಡು ಪೀಕಿದರು. ಒಡಲಲ್ಲಿ ಕುಡಿಯೊಂದು ಸೆಲೆ ಒಡೆದಿತ್ತು. ಜೈಲಿಗೆ ಹೋಗಿ ಹೇಳಿದೆ.. ಶುಷ್ಟವಾಗಿ ನಕ್ಕ. ದಿನಗಳು ಉರುಳುತ್ತಿದ್ದವು. ಮಗನಿಗೆ ವಿಷಯ ಗೊತ್ತಿತ್ತು ಆದರೂ ಅವ ಬಂದಿರಲಿಲ್ಲ.

ನನಗೋ ಇವನ ಬಿಟ್ಟರೆ ಬೇರೆ ಯಾರ ಆಸರೆ. ದುಡ್ಡು ನಿಧಾನವಾಗಿ ಕರಗುತ್ತಿತ್ತು. ಸರಕಾರಿ ಆಸ್ಪತ್ರೆಗೆ ದಾಖಲಾದೆ. ಮಗಳು ಬಂದಿದ್ದಳು. ಕರೆದುಕೊಂಡು ಜೈಲಿಗೆ ಹೋದೆ.. ಅದೇ ಒಣಮುಖ ಅವನದು. ಗಡ್ಡಬಿಟ್ಟಿದ್ದ ಕಣ್ಣಲ್ಲಿ ಬೆಳಕಿರಲಿಲ್ಲ.

ಒಂದು ದಿನ ಪೋಲಿಸರು ಮನೆಬಾಗಿಲಿಗೆ ಬಂದಿದ್ದರು. ಸುದ್ದಿ ಹೇಳಿದರು… ಜೈಲಿನಲ್ಲಿ ಇವ ಬೇರೊಬ್ಬ ಕೈದಿಜೊತೆ ಜಗಳಾಡಿ ಜಖಂಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಮೈ ತುಂಬ ಗಾಯವಾಗಿ ನಿರ್ಜೀವವಾಗಿ ಮಲಗಿದ್ದ. ಡಾಕ್ಟರರು ತಲೆಯಾಡಿಸಿದರು. ಮಗನಿಗೆ ಸುದ್ದಿ ತಿಳಿಸಿದರೂ ಅವ ಬರಲಿಲ್ಲ. ಪರಿಚಯವಾದ ದೇಶಪಾಂಡೆ ವಕೀಲರೇ ಮುಂದಿನ ಕಾರ್ಯ ನೆರವೇರಿಸಿದರು. ಇರುವವರೆಗೆ ಉರಿದು ಉರಿದು ಮೆರೆದಿದ್ದ ಗಂಡ ಈಗ ಫೋಟೋದಲ್ಲಿ ಮೂಡಿದ್ದ.

ದೇಶಪಾಂಡೆ ವಕೀಲರ ಬಳಿ ಆಗಾಗ ಅವ ಬರುತ್ತಿದ್ದ. ಗದುಗಿನ ರಾಜಕಾರಣಿ-ಈಗ ಮಂತ್ರಿಯಾಗಿರುವ-ಯ ಖಾಸಾ ಬಲಗೈ ಭಂಟ. ಹೆಸರು ಪಾಟೀಲ ಅಂತ. ಎಲೆಅಡಿಕೆಯಿಂದ ಕೆಂಪಾದ ತುಟಿಗಳು, ಹೊಳೆಯುವ ಕಣ್ಣುಗಳು ಕಟ್ಟುಮಸ್ತಾದ ಹುರಿಗಟ್ಟಿದ ದೇಹ. ದೇಶಪಾಂಡೆಯವರು ನನ್ನ ಕತೆ ಹೇಳಿದರು. ನಾನು ಟಿಸಿಎಚ್‌ ಮಾಡಿರುವೆ ಅಂತ ಕೇಳಿದವರು ಚುರುಕಾದರು. ನನ್ನ ಕಡೆ ಅರ್ಜಿ ಬರೆಯಿಸಿದರು. ಒಂದಿಬ್ಬರ ಕಡೆ ಕರಕೊಂಡು ಹೋದರು. ವಿಧಿ ಹೊಸ ಪುಟ ತರೆದಿತ್ತು ಇದ್ದೂರಲ್ಲಿಯೇ ಸರಕಾರಿ ಸಾಲೆಯಲ್ಲಿ ಟೀಚರ ಕೆಲಸ.. ಮನಸ್ಸು ಅನೇಕ ಸಾಧ್ಯತೆಗಳ ಕನಸು ಕಂಡಿತ್ತು. ಮಗಳ ಬೆಳೆಸಬೇಕು ಚೆನ್ನಾಗಿ ಓದಿಸಬೇಕು ಎಂಬೆಲ್ಲ ಕನಸುಗಳಿಗೆ ಈ ಕೆಲಸ ಬಲ ಕೊಟ್ಟಿತ್ತು. ಮಗಳು ಏಳನೇಯತ್ತೆ ಕಲಿಯುತ್ತಿದ್ದಳು. ಮುಂದೆ ಅವಳಿಗೆ ಒಳ್ಳೆಯ ಸಾಲೆ ಸೇರಿಸಬೇಕು ಅಂದುಕೊಂಡೆ ಅದುವರೆಗೂ ಕಾಣಲು ಹಿಂಜರಿಯುತಿದ್ದ ಕನಸುಗಳು ಬೀಳತೊಡಗಿದವು.

ಉಪಕಾರಸ್ಮರಣೆ ಈ ರೀತಿಯದ್ದಾಗಿರುತ್ತದೆ ಅಂತ ನಾ ತಿಳಿದಿರಲಿಲ್ಲ. ಒಂದೆರಡು ಸಲ ಮನೆಗೆ ಬಂದ ಪಾಟೀಲರ ಕಣ್ಣುಗಳೇ ಎಲ್ಲ ಹೇಳುತ್ತಿದ್ದವು. ಅಳುಕು ಮೊದಲು ಕಾಡಿತು ನಿಜ.. ಮುಖ್ಯವಾಗಿ ಸಂಬಂಧಕ್ಕೆ ಏನು ಹೆಸರಿಡುವುದು ಅಂತ.. ಅವರಿಗೆ ಮದುವೆಯಾಗಿತ್ತು- ಮಕ್ಕಳಿದ್ದರು. ಅವರ ಸೆಳೆತ ಬಲವಾಗಿತ್ತು. ಕರಗಲು ಬಹಳ ಸಮಯ ಹಿಡಿಯಲಿಲ್ಲ. ಆದರೆ ಅವರೊಡನೆ ಬೆರೆತಾಗ ಹೊಸ ಅನುಭೂತಿ ದೊರೆತದ್ದು ಸುಳ್ಳಲ್ಲ. ಹಳೆಯ ಗಂಡ ಸಿಗರೇಟಿನಿಂದ ಸುಟ್ಟ ಗಾಯಗಳ ಮೇಲೆ ಪಾಟೀಲರ ತುಟಿಗಳು ಆಡುವಾಗ ಹೊಸ ಅನುಭವ. ಬಹುಷಃ ಪ್ರೇಮವೆಂದರೆ ಇದೇ ಇರಬೇಕು. ಹೆಂಗಸು ತನ್ನ ಸಂಪೂರ್ಣವಾಗಿ ಒಡ್ಡಿಕೊಳ್ಳುವ ಪರಿ ಇದೆಯಲ್ಲ ಅದು ಅಮೂಲ್ಯ.

ಕಾಲ ಸರಿಯುತ್ತಿತ್ತು. ಪಾಟೀಲ ಹಾಗೂ ನನ್ನ ನಡುವಿನ ಸಂಬಂಧ ಹಲವರ ಚುಚ್ಚುನೋಟ ಎದುರಿಸುತ್ತಿತ್ತು. ನಾವಿರುವ ಚಾಳಿನಲ್ಲಿ ಪಾಟೀಲ ಬಂದರೆ ಮುಗಿಯಿತು ಹಲವರ ಕುಹಕ ಮಾತುಗಳು ಬೆನ್ನು ಇರಿಯುತ್ತಿದ್ದವು. ಅಷ್ಟೇ ಅಲ್ಲ ಮಗಳಿಗೂ ಯಾರೂ ಸೇರಿಸಿಕೊಳ್ಳುತ್ತಿರಲಿಲ್ಲ.. ಮೇಲಾಗಿ ಅವಳ ತಿಳುವಳಿಕೆ ಮೀರಿದ ಕೆಲವು ಅಸಹ್ಯ ಪ್ರಶ್ನೆಗಳನ್ನು ಅವಳಿಗೆ ಚಾಳಿನ ಹೆಂಗಸರು ಕೇಳುತಿದ್ದರು.

ಮೊದಮೊದಲು ಹೀಗೀಗೆ ಅವರು ಪ್ರಶ್ನೆ ಕೇಳಿದರು ಅಂತ ಹೇಳಿಕೋತಿದ್ದ ಮಗಳು ಬರಬರುತ್ತ ಸುಮ್ಮನಾದಳು. ಒಂದು ದಿನ ಅವಳಿಗೆ ಸಾಲೆಯಲ್ಲಿ ವಿಪರೀತ ಹೊಟ್ಟೆನೋವು.. ಮಧ್ಯಾಹ್ನ ಮನೆಗೆ ಬಂದಿದ್ದಾಳೆ. ಪಾಟೀಲ ಬಂದಿದ್ದರಿಂದ ನಾ ಅವರೊಡನೆ ಮನೆಯಲ್ಲಿದ್ದೆ. ಅವರೊಡನೆ ನಾ ಇರುವುದು ಮಗಳಿಗೆ ಗೊತ್ತಾಗಿದೆ, ನೋವು ನುಂಗಿಕೊಂಡು ಬಾಗಿಲಬಳಿಯೇ ಕುಳಿತಿದ್ದಾಳೆ ಅಳುತ್ತ.. ಅದೆಷ್ಟೋ ಹೊತ್ತಿನ ನಂತರ ಬಾಗಿಲು ತೆರೆದು ಪಾಟೀಲರು ಹೋದಾಗ ಇವಳು ಒಳಗೆ ಬಂದಳು. ಏನಾಯಿತು ಅಂತ ಅವಳು ಬಿಡಿಸಿ ಹೇಳಬೇಕಾಗಿರಲಿಲ್ಲ. ಎಂದೂ ಇಲ್ಲದ ಅಪರಾಧಿ ಭಾವ ನನಗೆ ಭಾದಿಸಿತು. ಅವಳೊಡನೆ ನೇರವಾಗಿ ಮಾತಾಡಲೂ ಆಗದ ಪರಿಸ್ಥಿತಿ..
ಒಂದೆರಡು ದಿನ ಇದೇ ಪರಿಸ್ಥಿತಿ. ಪಾಟೀಲರ ಜೊತೆ ಚರ್ಚಿಸಿದೆ. ಅವರು ಕೊಟ್ಟ ಸಲಹೆ ಒಪ್ಪಲೇಬೇಕಾದ ಅನಿವಾರ್ಯತೆ. ಸರಿ ಮನಸ್ಸು ಕಲ್ಲು ಮಾಡಿದೆ. ಮಗಳನ್ನು ಬೋರ್ಡಿಂಗ್ ಸಾಲೆಗೆ ಸೇರಿಸಿದೆ.. ನಾನು ವರ್ಗ ಕೋರಿ ರಜೆಹಾಕಿದೆ. ಶಿರಸಿಯ ಹತ್ತಿರದ ಒಂದು ಹಳ್ಳಿ.. ಪ್ರಶಾಂತ ವಾತಾವರಣಕ್ಕೆ ಹೊಂದಿಕೊಂಡೆ. ತಿಂಗಳಿಗೊಮ್ಮೆಯಾದರೂ ಮಗಳ ಭೇಟಿಗೆ ಹೋಗುತ್ತಿದ್ದೆ. ನಮ್ಮಿಬ್ಬರ ನಡುವೆ ಈಗ ಕೇವಲ ದೈಹಿಕವಾಗಲ್ಲದೇ ಮಾನಸಿಕವಾಗಿಯೂ ಅಂತರ ಬೆಳೆದಿತ್ತು. ಮೌನ ಅಸಹನೀಯವಾಗಿ ಬೆಳೆದು ನಿಂತಿತ್ತು. ಪಾಟೀಲರು ಹಾಗೂ ನನ್ನ ನಡುವಿನ ಸಂಬಂಧ ಜಗಜ್ಜಾಹೀರಾಗಿತ್ತು. ಇದೀಗ ಬೆಂಗಳೂರಿನಿಂದ ಹೊರಡುವ ಒಂದು ಟ್ಯಾಬಲಾಯ್ಡ್ ಪತ್ರಿಕೆ ನಮ್ಮಿಬ್ಬರ ನಡುವಿನ ಪ್ರೀತಿಯನ್ನು ಹಸಿಬಿಸಿ ಶಬ್ದಗಳಲ್ಲಿ ತೆರೆದಿಟ್ಟ ರೀತಿ ಅಸಹ್ಯವಾಗಿತ್ತು.

ಸ್ವತಃ ಪಾಟೀಲನಿಗೂ ಇದು ಹಿನ್ನಡೆ. ಅವನ ಗುರು ಗದುಗಿನ ರಾಜಕಾರಣಿ ಚುನಾವಣೆಯಲ್ಲಿ ಸೋತಿದ್ದೂ ಇದೇ ಕಾರಣಕ್ಕೆ ಅಂತ ಅವನ ಪಾರ್ಟಿಯವರೇ ಮಾತಾಡಿದರಂತೆ. ಮೊದಲಿನ ಕಿಚ್ಚು ನಂದಿಹೋಗಿತ್ತು. ಅವನೂ ಕುಗ್ಗಿದ್ದ. ನನಗೆ ಕೆಲಸ ಮಾಡುವಲ್ಲಿ ಬೇರೆ ಬೇರೆ ಮಾತು ಕೇಳಿಬಂದವು ಅವನಿಗೆ ಸರೆಗು ಹಾಸಿದವಳು ನಮಗೂ ತೆರೆದುಕೊಳ್ಳಲಿ ಅಂತ ಅನೇಕ ಗಂಡಸರ ಹಂಬಲವಾಗಿತ್ತು. ಈ ಎಲ್ಲವುಗಳ ನುಂಗಿಕೊಂಡು ಮಗಳಿಗಾಗಿ ಬಾಳುವ ಛಲ ಒಂದೇ ಗುರಿಯಾಗಿತ್ತು.

ಆದರೆ ಮಗಳ ಹಾಗೂ ನನ್ನ ನಡುವೆ ಒಂದು ಕುಲುಮೆ ಇತ್ತು. ಒಂದು ಕೊರಕಲು ಅದನ್ನು ದಾಟಲಾಗದ ನನ್ನ ಅಸಹಾಯಕತೆ ಅವಳಿಗೆ ಹತ್ತಿರ ಕೂಡಿಸಿಕೊಂಡು ಎಲ್ಲ ತೆರೆದಿಡಬೇಕು; ಹೀಗೀಗೆ ಆತು ಅಂತ ಹೇಳಬೇಕು ಎಂಬ ತುಡಿತ. ಆದರೆ ಮರುಕ್ಷಣವೇ ಅವಳು ಅದೆಲ್ಲ ಕೇಳಿ ದೂರಾದರೆ ಎಂಬ ಆತಂಕ ಕಾಡಿ ಆ ಹೆಜ್ಜೆ ಇಡಲೇ ಆಗಲಿಲ್ಲ. ಈ ನಡುವೆ ಅವಳಿಗೆ ಓದು ಒಲಿದು ಪಿಯುಸಿ ಮುಗಿಸಿ ದಾವಣಗೆರೆಯ ಇಂಜಿನೀಯರಿಂಗ್ ಕಾಲೇಜಿನಲ್ಲಿ ಸೀಟು ಸಿಕ್ಕಿತ್ತು. ಪಾಟೀಲರೂ ಕಾಲದ ಪ್ರವಾಹಕ್ಕೆ ಸಿಕ್ಕು ಸಾಕಷ್ಟು ಮೆತ್ತಗಾಗಿದ್ದರು. ವಯಸ್ಸು ಅವರ  ಮಾಗಿಸಿತ್ತು. ಮೇಲಾಗಿ ರಾಜಕೀಯ ಗುರು ಇದೀಗ ಚಲಾವಣೆಯಲ್ಲಿರದ ನಾಣ್ಯ ಆಗಿದ್ದು ಪಾಟೀಲರ ಹಿನ್ನೆಡೆಗೆ ಕಾರಣವಾಗಿತ್ತು. ಈ ನಡುವೆ ನಾನು ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕಿ ಅನಿಸಿಕೊಂಡಿದ್ದೆ.

ಕಾಲ ಉರುಳಿತ್ತು. ಒಂದಿನ ಅಕಸ್ಮಾತಾಗಿ ಮಗಳು ಹಾಗೂ ಅವಳ ಗೆಳತಿ ಪೂಜಾ ಮೆಹತಾ ಮನೆಗೆ ಬಂದಿಳಿದರು. ಪೂಜಾ ಮಗಳ ಕ್ಲಾಸ್ಮೇಟ್. ಆಗೀಗ ಅವಳ ಜೊತೆ ಫೋನಿನಲ್ಲಿ ಮಾತಾಡುತ್ತಿದ್ದೆ. ಯಾಣದ ಪ್ರವಾಸ ಯೋಜನೆ ಮೊದಲೇ ಹಾಕಿಕೊಂಡು ಬಂದ ಅವರು ತಮ್ಮ ಜೊತೆಗೆ ನನ್ನನ್ನೂ ಹೊರಡಿಸಿದರು. ತಲೆಎತ್ತರ ಬೆಳೆದು ನಿಂತ ಕಾಡಿನ ಮರಗಳ ನಡುವೆ ಅಕ್ಷರಶಃ ನಲಿದಾಡಿದೆವು. ನನ್ನ ಹಾಗೂ ಮಗಳ ನಡುವಿನ ಬಿಗುಮಾನ ಎಲ್ಲ ಕಳಚಿ ನೀರಾಗಿತ್ತು. ಅದೇ ಯಾಣದ ಒಂದು ಮಜಲಿನಲ್ಲಿ ಮಗಳು ನನ್ನ ಮಡಿಲಲ್ಲಿ ತಲೆಇಟ್ಟು ಅತ್ತಾಗ ನಾ ಕರಗಿ ಹೋದೆ. ‘ಕ್ಷಮಿಸಿಬಿಡು’ ಎಂದು ಬೇಡಿದವಳ ಅಪ್ಪಿ ಮುದ್ದಾಡಿದ್ದೆ. ನಮ್ಮಿಬ್ಬರ ಈ ಮಿಲನಕ್ಕೆ ಸಾಕ್ಷಿಯಾದ ಹಾಗೂ ಕಾರಣೀಭೂತಳಾದ ಪೂಜಾಳ ಕಣ್ಣಲ್ಲು ನೀರಾಡಿತ್ತು. ಮಗಳು ಮರಳಿ ಸಿಕ್ಕಿದ್ದಳು.

ಜೈಲಿನಲ್ಲಿ ಇವ ಬೇರೊಬ್ಬ ಕೈದಿಜೊತೆ ಜಗಳಾಡಿ ಜಖಂಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಮೈ ತುಂಬ ಗಾಯ ನಿರ್ಜೀವವಾಗಿ ಮಲಗಿದ್ದ. ಡಾಕ್ಟರರು ತಲೆಯಾಡಿಸಿದರು. ಮಗನಿಗೆ ಸುದ್ದಿ ತಿಳಿಸಿದೆ ಅವ ಬರಲಿಲ್ಲ. ಪರಿಚಯವಾದ ದೇಶಪಾಂಡೆ ವಕೀಲರೇ ಮುಂದಿನ ಕಾರ್ಯ ನೆರವೇರಿಸಿದರು.

**

ನನಗೆ ಗೊತ್ತಿತ್ತು ಅಮ್ಮ ಕಾಯುತ್ತಿದ್ದಾಳೆ ಅಂತ. ಆದಷ್ಟು ಅವಾಯ್ಡ್ ಮಾಡಬೇಕು ಒಂದು ಧೈರ್ಯ ತಂದುಕೋಬೇಕು ಹೇಳಲು ಆವರೆಗಾದರೂ ಕಾಲಾವಕಾಶ ಬೇಕಿತ್ತು. ಹೀಗಾಗಿಯೇ ಸಂಜೆಯೂ ತಡವಾಗಿ ಬಂದೆ. ಬೆಳಿಗ್ಗೆ ಅವಳು ಏಳುವ ಮೊದಲೇ ಮನೆಬಿಟ್ಟಿದ್ದೆ. ಹೀಗೆ ಮಾಡುವುದರಿಂದ ಏನೂ ಸಾಧಿಸಿದಂತಾಗುವುದಿಲ್ಲ ಎಂಬ ಅರಿವು ಇದೆ ನನಗೆ. ಆದರೆ ಸತ್ಯದರ್ಶನ ಬಹಳಷ್ಟು ಸಲ ನೋವು ತರುತ್ತದೆ. ಅದೂ ಆತ್ಮೀಯರೊಡನೆ ಹೀಗಾದರೆ ಆ ನೋವು ಸಹನಾತೀತ.

ಅಮ್ಮನಿಗೆ ನೋವಾಗಬಾರದು ಎಂಬುದು ಉದ್ದೇಶ. ಒಂಥರದಲ್ಲಿ ಅಮ್ಮ ನನಗೆ ಮರಳಿ ಸಿಕ್ಕವಳು. ನಮ್ಮಿಬ್ಬರ ನಡುವೆ ಕಂದಕ ಬೆಳೆದು ನಿಂತಿತ್ತು. ಅಮ್ಮನನ್ನು ನಾನು ಮೊದಲು ನೋಡುತ್ತಿದ್ದ ರೀತಿಯೇ ಬೇರೆಯಾಗಿತ್ತು. ಬಹುಶಃ ನನ್ನ ಮೇಲೆ ಪ್ರಭಾವಬೀರಿದ್ದು ಚಾಳಿನವರ ಮಾತುಗಳು. ಅಮ್ಮ ಆ ಮಂದಿಯ ನಾಲಿಗೆಗೆ ಎಷ್ಟು ಸುಲಭದ ಆಹಾರವಾಗಿದ್ದಳು.. ಅವಳೊಡನೆ ನೇರವಾಗಿ ಕೇಳುತ್ತಿರಲಿಲ್ಲ ಯಾರೂ. ಆದರೆ ನನಗೆ ತಿನಿಸು ಕೊಡುವ ಪ್ರಲೋಭನೆ ತೋರಿಸಿ ಮನೆಯಲ್ಲಿ ಕರೆದು ಪ್ರಶ್ನೆ ಕೇಳುತ್ತಿದ್ದರು.. ನನಗೆ ತಿಳಿದ ಹಾಗೆ ಉತ್ತರ ಕೊಡುತ್ತಿದ್ದೆ. ಅಸಲು ನನಗೆ ಅಷ್ಟಾಗಿ ತಿಳಿಯುತ್ತಿರಲಿಲ್ಲ.. ಆದರೆ ಅವರು ಕೊಡುವ ತಿನಿಸಿನ ಮೋಹ ನನಗೆ ಉಪ್ಪುಖಾರ ಬಳಿದು ಹೇಳುವ ಹಾಗೆ ಮಾಡಿತ್ತು. ಅದು ಸರಿಯೋ ತಪ್ಪೋ ತಿಳಿಯದ ವಿಷಯ. ಆದರೆ ನನ್ನ ಹೇಳಿಕೆ ಕೇಳಿ ಅದಕ್ಕೆ ತಮ್ಮ ಮಸಾಲೆ ಬೆರೆಸಿ ಅಮ್ಮನ ಬಗ್ಗೆ ರಂಗುರಂಗಾದ ಕತೆ ಅವರು ತೇಲಿಬಿಡುತ್ತಿದ್ದರು. ಸಾಲೆಯಲ್ಲಿ ಕೆಲ ಟೀಚರಗಳದು ಇದೇ ಕೆಲಸ.. ಅಮ್ಮನ ಬಗ್ಗೆ ಅವರು ಕೇಳುತ್ತಿದ್ದ ಪ್ರಶ್ನೆಗಳಾದರೂ ಎಂತಹವು..!

“ನಿಮ್ಮಮ್ಮ ತಿಂಗಳಾ ಕಡಿಗಿಯಾಗತಾಳೇನು..” “ಪಾಟೀಲ ತಿಂಗಳದಾಗ ಎಷ್ಟು ಸಲ ಮನಿಗೆ ಬರತಾನ”

“ರಾತ್ರಿ ಅವ ಬಂದರ ನೀ ಎಲ್ಲೆ ಮಲಕೋತಿ..”

ಹೀಗೆ ಅವರ ಪ್ರಶ್ನೆಗಳು. ಬರುಬರುತ್ತ ಅಮ್ಮನ ಬಗ್ಗೆ ಅವರ ಹಾಗೆಯೇ ನನಗೂ ಒಳಗೊಳಗೇ ಒಂದು ನಕಾರಾತ್ಮಕ ಭಾವನೆ ಮೂಡಿತು. ಅದು ತಪ್ಪೊ ಸರಿಯೋ ಅಂತ ಗೊಂದಲವಿತ್ತು. ಅದು ಇನ್ನೂ ಬಲವಾಗಿದ್ದು ಅಂದು ಹೊಟ್ಟೆನೋವು ಅಂತ ಮನೆಗೆ ಬಂದಾಗ. ಬಾಗಿಲಲ್ಲಿ ಪಾಟೀಲನ ಚಪ್ಪಲಿ ಕಂಡೆ. ಒಳಗಿನಿಂದ ರೇಡಿಯೋದ ಹಾಡು ಅಮ್ಮನ ನಗು ಎಲ್ಲ ಕೇಳುತ್ತಿತ್ತು. ಚಾಳಿನ ಮನೆಯವರು ನಾ ಅಳುತ್ತ ಹೊರಗೆ ಕೂತದ್ದನ್ನು ನೋಡಿ ಒಳಗಡೆ ಹೋದರು. ಬಾಗಿಲು ಬಡಿಯಲು ಮನಸ್ಸು ಒಪ್ಪಲಿಲ್ಲ. ಒಂದುರೀತಿಯ ಹ್ಯಾಂವ ಆವರಿಸಿತ್ತು. ಎಷ್ಟು ಹೊತ್ತು ಒಳಗಿರುತ್ತಾಳೆ- ಬಾಗಿಲು ತೆರೆಯುತ್ತಾಳೆ. ನಾ ಹೀಗೆ ನೋವು ತಿನ್ನುವುದು ಅವಳು ನೋಡಲಿ, ಅವಳ ಕಣ್ಣಲ್ಲಿಯೂ ನೀರಾಡಲಿ. ಈ ಭಾವನೆ ಬಂತು. ಆಗಿದ್ದು ಹಾಗೆಯೇ ಕೂಡ. ನಾ ಬಿಗಿಯಾಗುತ್ತ ಹೋದೆ. ಅಮ್ಮ ಬಿಕ್ಕಳಿಸಿ ಅತ್ತಿದ್ದಳು. ನಮ್ಮ ನಡುವೆ ಮೊದಲೇ ಹೊಗೆಯಾಡುತ್ತಿದ್ದ ಬೆಂಕಿ ಅಂದು ಉರಿದಿತ್ತು.

ಅದಾಗಿ ತಿಂಗಳು ಕಳೆದಿತ್ತು. ಸದಾ ಅಮ್ಮನ ಬಗ್ಗೆ ಪ್ರಶ್ನೆ ಕೇಳುತ್ತಿದ್ದ ಟೀಚರ ಒಬ್ಬರು ಮಾತಾಡುವುದಿದೆ ಬಾ ಅಂತ ಸ್ಟಾಫರೂಮಿಗೆ ಕರೆದರು. ಅವರ ಕೈಯಲ್ಲಿ ಒಂದು ಪತ್ರಿಕೆ, ಆ ಪತ್ರಿಕೆಯಲ್ಲಿ ಪಾಟೀಲ ಹಾಗೂ ಅಮ್ಮನ ಫೋಟೋ ಸಹಿತ ಬರೆದ ಉದ್ದನೆ ಲೇಖನ ಇತ್ತು.
“ನೋಡ ನಿಮ್ಮವ್ವನ ಕತಿ ಬರದಾರ ಇವರು…” ಅಂತ ಮಾರಿಗೆ ಹಿಡದರು. ಉಳಿದ ಟೀಚರುಗಳು ನಕ್ಕ ಸಪ್ಪಳ ಸ್ಪಷ್ಟವಾಗಿ ಕೇಳಿಸಿತು. ನಾ ಅಪಮಾನದಿಂದ ಕುದ್ದು ಹೋದೆ. ಅಮ್ಮನ ಮೇಲೆ ಇನ್ನಿಲ್ಲದ ಸಿಟ್ಟು ಬಂದಿತ್ತು. ಮುಂದೆ ನಾ ಊಹಿಸದ ಘಟನೆ ನಡೆದವು. ಬೋರ್ಡಿಂಗ್ ಸಾಲಿಯೊಳಗ ನನ್ನ ಅಡ್ಮಿಷನ್ನು, ಅಮ್ಮ ಶಿರಸಿಗೆ ವರ್ಗ ಮಾಡಿಸಿಕೊಂಡದ್ದು ತಿಂಗಳಿಗೊಮ್ಮೆ ಅಕಿಯ ಬರುವಿಕೆ.. ಇದೆಲ್ಲ ಸುಲಭವಾಗೆ ನಕಾರಾತ್ಮಕತೆ ತರಬಹುದಿತ್ತು. ಆದರೆ ನಾ ಮಗ್ಗಲು ಹೊರಳಿದೆ. ರಾಕ್ಷಸೀತನ ಹೊಕ್ಕಿತು. ಓದಿನಲ್ಲಿ ಮೊದಲಿಂದಲೂ ಮುಂದೆ ಇದ್ದೆ, ಈಗ ಅಮ್ಮನ ಮೇಲಿರುವ ಛಲ ಅದಕೊಂದು ಬಲ ಕೊಟ್ಟಿತು. ಪಿಯುಸಿಯಲ್ಲಿ ಛಲೊ ಮಾರ್ಕು ಬಂದವು. ದಾವಣಗೆರೆಯಲ್ಲಿ ಇಂಜಿನೀಯರಿಂಗ್ ಸೀಟು ಸಿಕ್ಕಿತು. ಅಲ್ಲಿ ಭೇಟಿಯಾದವಳೇ ಪೂಜಾ ಮೆಹತಾ. ಒಂದು ರೀತಿಯಲ್ಲಿ ಅವಳು ಗುರುವಾಗಿ ಬಂದಳು. ಅವಳೊಡನೆ ಮನಬಿಚ್ಚಿ ಮಾತಾಡುತ್ತಿದ್ದೆ‌, ಅಮ್ಮಳ ಬಗೆಗಿನ ಅನಿಸಿಕೆಗಳನ್ನೂ ಸಹ ಹೇಳಿಕೊಂಡೆ. ಅವಳಿಲ್ಲವಾಗಿದ್ದರೆ ಅಮ್ಮನೊಡನೆ ನಾ ಮತ್ತೆಂದೂ ಬೆರೆಯುತ್ತಲೇ ಇರಲಿಲ್ಲವೇನೋ.

ಅಮ್ಮನ ಇನ್ನೊಂದು ಮಗ್ಗುಲನ್ನು ಅವಳು ತೆರೆದಿಟ್ಟಳು. ಅಮ್ಮ ಹಾಗೆ ಮಾಡಿದ ಅನಿವಾರ್ಯತೆಯ ಒಂದು ಚಿತ್ರ ಪೂಜಾ ತೆರೆದಿಟ್ಟಳು. ವಿಚಾರ ಮಾಡಿದಾಗ ಅಹುದು ಅನಿಸಿತು. ಅಮ್ಮ ನನಗೆ ಅದುವರೆಗೂ ಅರ್ಥವೇ ಆಗಿರಲಿಲ್ಲ ಅಂತ ಪೂಜಾಳಿಗೆ ಹೇಳಿದೆ. ಅವಳ ಹುರಿದುಂಬಿಸುವಿಕೆಯ ಫಲವೇ ಅವಳೊಡನೆ ಶಿರಸಿಗೆ ಹೋಗಿದ್ದು. ಯಾಣದ ಸುಂದರ ಪರಿಸರದಲ್ಲಿ ಅವಳ ಮಡಿಲಲ್ಲಿ ತಲೆಇಟ್ಟು ಬಿಕ್ಕಿ ನೀರಾಗಿದ್ದು. ಅಮ್ಮ ನನಗೆ ಮರಳಿ ಸಿಕ್ಕಿದ್ದಳು.

ಹೀಗೆ ಸಿಕ್ಕ ಅಮ್ಮಂಗೆ ನೋವಾಗಬಾರದು ಇದು ಸದಾ ಹಂಬಲವಾಗಿತ್ತು. ಒಂದುವೇಳೆ ವಾಸ್ತವ ತಿಳಿದರೆ ಅಮ್ಮ ನೊಂದುಕೊಳ್ಳುತ್ತಾಳೆ. ಅದು ಹಾಗಾಗಬಾರದು ಹಾಗಂತ ಎಲ್ಲ ಮುಚ್ಚಿಡುವುದು ಸರಿಯಲ್ಲ. ಸಂಬಂಧಗಳಲ್ಲಿ ಕ್ಲಾರಿಟಿ ಇರಬೇಕು ಎಂಬುದು ನನ್ನ ನಿಲುವು.

ಅಮ್ಮನದು ಒಂದೇ ಮಾತು. ಯಾಕೆ ಎಲ್ಲ ಹೇಳಬೇಕು? ಗೊತ್ತಾದರೆ ನಾಳೆ ಗೊತ್ತಾಗಲಿ.. ಇಷ್ಟಕ್ಕೂ ಅದು ಮುಗಿದುಹೋದ ಸಂಗತಿ. ಸಂದೀಪ ಈಗಿನ ಕಾಲದ ಹುಡುಗ, ಅವ ತಿಳಿದುಕೊಳ್ಳುತ್ತಾನೆ ಅಂತ. ಅವಳಿಗೆ ನಿರೀಕ್ಷೆ ಇವೆ.  ಆದರೆ ವಾಸ್ತವ ಬೇರೆಯೇ ಇದೆ. ಅಮ್ಮ ಇನ್ನೂ ಆದರ್ಶವಾದಿ ಜಗತ್ತಿನಲ್ಲಿಯೇ ಇದ್ದಾಳೆ. ಸಂದೀಪ ಕೊಲೀಗ್ ಅಷ್ಟೆ ಅಲ್ಲ; ನನಗೆ ಇಷ್ಟವಾದ ಹುಡುಗ ಕೂಡ. ಪ್ರಾಜೆಕ್ಟ್ ಕೆಲಸದ ಮೇಲೆ ಮಾರಿಷಸ್‌ಗೆ ಹೋದಾಗ ಇನ್ನೂ ಹತ್ತಿರವಾದೆವು. ಬಹುಶಃ ಪೂಜಾಳ ನಂತರ ಮನಸ್ಸು ಬಿಚ್ಚಿ ಮಾತಾಡಿದ್ದು ಇವನೊಡನೇ ಇರಬೇಕು.

ಮಾತಾಡಲು ಇಂತಹುದೇ ವಿಷಯ ಇರಲಿಲ್ಲ. ಕ್ರಿಕೆಟ್ಟು, ಸಿನೇಮಾಗಳು ಗಜಲುಗಳು ರಫಿಯ ಹಾಡುಗಳು. ಅದೆಷ್ಟು ಸಾಮ್ಯವಿತ್ತು ನಮ್ಮಿಬ್ಬರ ಸಂಭಾಷಣೆಗಳಲ್ಲಿ. ಈ ಸಾಮೀಪ್ಯ ಬೇಕೆನಿಸಿತ್ತು. ಪ್ರಾಜೆಕ್ಟ್ ಮಧ್ಯದಲ್ಲಿ ಬಂದ ಲಾಂಗ್ ವೀಕೆಂಡಿನಲ್ಲಿ ಅವ ಒಂದು ಬೀಚ್ ರೆಸಾರ್ಟ್ ಬುಕ್‌ ಮಾಡಿರುವೆ ಅಂದಾಗ ಒಪ್ಪಿಗೆ ಕೊಟ್ಟಿದ್ದೆ. ಎಲ್ಲ ಪ್ರಿಕಾಶನ್‌ ತಗೊಂಡಿರುವೆ ಅಂತ ತುಂಟತನದಿಂದ ಅವ ಹೇಳಿದಾಗ ನಾ ಅವನ ಬಾಹುಗಳಲ್ಲಿ ಕರಗಿದ್ದೆ. ಪರಸ್ಪರ ಒಪ್ಪಿ ನಡೆಸಿದ ಕ್ರಿಯೆ ಅದು ಹೊಸ ಅನುಭವ ಕೊಟ್ಟಿತ್ತು. ಆವೇಶದಲ್ಲಿ ಅವ ಪಿಸು ನುಡಿದಿದ್ದ ಮದುವೆ ಅಂತಾದರೆ ನಿನ್ನನ್ನೇ ಅಂತ. ನಾ ನಂಬಿದೆ. ನನ್ನ ಒಪ್ಪಿಸಿಕೊಂಡೆ.

ಅಮ್ಮನಿಗೆ ಅವನ ಬಗ್ಗೆ ಹೇಳಿದೆ. ನಿನಗೆ ಸರಿ ಅನಿಸಿದರೆ ಆತು ನನ್ನದು ಏನೂ ತಕರಾರಿಲ್ಲ ಅಂತ ಅವಳೆಂದಾಗ ಖುಶಿಯೂ ಆಗಿತ್ತು. ಸಮಸ್ಯೆ ಸುರು ಆಗಿದ್ದು ಸಂದೀಪನಿಂದಲೇ. ನನಗೊಂದು ಅತೀತವಿದೆ. ಅದು ನನ್ನ ಅಮ್ಮನೊಡನೆ ಹೊಂದಿಕೊಂಡಿದೆ. ಯಾವುದೂ ನಾ ಮುಚ್ಚಿಟ್ಟಿಲ್ಲ ನಾಳೆ ತೊಂದರೆಯಾಗಬಾರದು. ನಿನಗೆ ಹಾಗೂ ಮುಖ್ಯವಾಗಿ ನನಗೆ.. ಅದಕೆ ಎಲ್ಲ ಹೇಳಿರುವೆ ಅಂತ ಹೇಳಿದೆ. ತಕ್ಷಣದ ಪ್ರತಿಕ್ರಿಯೆ ನಾ ನಿರೀಕ್ಷಿಸಿರಲಿಲ್ಲ. ಆದರೂ ಮುಖ ಕಪ್ಪಿಟ್ಟಿತು ಅಂತ ಅನಿಸಿದ್ದು ಸುಳ್ಳಲ್ಲ. ಒಂದೆರಡು ದಿನ ಕಳೆದು ಮತ್ತೆ ಸಿಕ್ಕಿದ್ದ. ಆದರೆ ಯಾಕೋ ಅವ ಅವಾಯ್ಡ್ ಮಾಡುತ್ತಿರುವ ಅನಿಸಿತು. ಅಮ್ಮನದು ಗಡಿಬಿಡಿ. ನಾ ಬೇಕಾದರೆ ಬಂದು ಮಾತಾಡುವೆ ಅಂತ. ಆದರೆ ಅವಳು ಬಂದು ಸಂದೀಪನ ಮನೆಯವರು ಏನೇನೋ ಅಂದು ರಂಪ ಆಗುತ್ತದೆ. ಇದು ನನ್ನ ದಿಗಿಲು. ಈ ದ್ವಂದ್ವದಲ್ಲಿಯೇ ವಾರ ಕಳೆದಿತ್ತು.

ಬೇಸರಿಸಿ ಕೊನೆಗೆ ನಾನೇ ಸಂದೀಪನಿಗೆ ಕೇಳಿದೆ. ನೇರವಾಗಿ ಹೇಳು ಅಂತ. ಕಾಫಿಡೇಯ ಮೂಲೆಯಲ್ಲಿ ಎದಿರು‌ ಕುಳಿತವ ಅನ್ಯಮನಸ್ಕನಾಗಿದ್ದ. ಕೊನೆಗೂ ಬಾಯಿ ಬಿಟ್ಟ. ನಾ ನಿರೀಕ್ಷೆ ಮಾಡಿದ್ದೆ ಹೀಗಾಗಿ ಆಘಾತವಾಗಿರಲಿಲ್ಲ. ಇಂತಹ ಹಿನ್ನೆಲೆ ಇದ್ದೂ ಮದುವೆಯ ಪ್ರಸ್ತಾಪ ತಂದ ಅವನಿಗೆ ಅವನ ತಂದೆ ತಾಯಿ ಬೈದರು ಅಂದ. ಎಲ್ಲ ತಿಳಿದೂ ಹೇಗೆ ಒಪ್ಪುವುದು ಎಂಬುದು ಅವನ ಗೊಂದಲ. ನಾ ಸುಮ್ಮನೇ ಕೇಳುತ್ತಿದ್ದೆ. ಕೊನೆಗೆ ತಡೆಯದೇ ಕೇಳಿದೆ..

“ನೀ ನನ್ನ ಜೊತೆ ಮಲಗಿದ್ದೆ ಅಲ್ಲ, ಅವಾಗ ನಿನಗೆ ಇದು ಗೊತ್ತಿರಲಿಲ್ಲ ಓಕೆ, ಒಪ್ಪುವ. ಆದರೆ ಇದೇ ಹಿಂಜರಿತ ಅವಾಗಲೂ ನಿನಗೆ ಕಾಡುತ್ತಿತ್ತೇ? ಇದು ಸಂಶಯ.. ನೀ ನನ್ನ ಮದುವೆಯಾಗಿರಬೇಕಿರುವುದು. ನನಗೊಂದು ವ್ಯಕ್ತಿತ್ವವಿದೆ. ಅಮ್ಮ ನನ್ನ ಜೀವನದ ಒಂದು ಅಧ್ಯಾಯ. ಅವಳೂ ಅನಿವಾರ್ಯ. ಇರಲಿ ಸಂದೀಪ ನಿನ್ನೊಡನೆ ಮದುವೆ ಆಗುತ್ತಿಲ್ಲ ಅಂತ ನನಗೆ ಬೇಸರ ಇಲ್ಲ. ಆದರೆ ನಿನ್ನ ಬಗ್ಗೆ ಅನುಕಂಪ ಇದೆ. ಗುಡ್‌ಲಕ್‌ ನಿನಗೆ…” ಮಾತು ಮುಗಿಯಿತೆಂಬಂತೆ ಎದ್ದು ನಿಂತೆ. ಅವ ಏನೋ ಹೇಳಲು ಪ್ರಯತ್ನಿಸಿ ಕೊನೆಗೆ ತಲೆ ಕೆಳಗೆ ಹಾಕಿದ.

ಈಗ ಈ ಸಂಗತಿ ಅಮ್ಮನಿಗೆ ನೇರವಾಗಿ ಹೇಳಿದರೆ ಅವಳು ನೊಂದುಕೊಳ್ಳುತ್ತಾಳೆ ನಿಜ. ಅನಗತ್ಯವಾಗಿ ಅಪರಾಧೀಭಾವನೆ ಅವಳಿಗೆ ಆವರಿಸುತ್ತದೆ ಅನ್ನುವುದು ನಿಜ. ಆದರೆ ಹೇಳದೆ ಇರುವುದು ಹೇಗೆ.. ಸಂಜೆ ಅವಳಿಗೆ ಎದಿರು ಕೂಡಿಸಿಕೊಂಡೆ. ಸಂದೀಪ ಹಾಗೂ ನನ್ನ ನಡುವಿನ ಮಾತುಕತೆಯ ವಿವರವೆಲ್ಲ ಬಿಚ್ಚಿಟ್ಟೆ ಹಾಗೂ ನಾ ಈಗಲೂ ನಿನ್ನಪರ ಅಂತ ಒತ್ತಿ ಹೇಳಿದೆ.

ಅವಳಿಂದ ಬಂದ ಉತ್ತರ ನಿರೀಕ್ಷಿತವಾಗಿಯೇ ಇತ್ತು. ನನ್ನೆರಡು ಕೈ ತನ್‌ ಕೈಯಲ್ಲಿ ತಗೊಂಡು ಬಿಕ್ಕಿದಳು. ಬಾರಿ ಬಾರಿ ಅವಳು ಹೇಳುತ್ತಿದ್ದ ಮಾತು ಒಂದೇ “ಕ್ಷಮಿಸಿಬಿಡು ಮಗಳೇ” ಅಂತ. ನಾನೂ ಕರಗಿದೆ. ಅವಳ ತಬ್ಬಿ ಸಂತೈಸಿದೆ. ಇಬ್ಬರ ನಡುವೆ ಕಣ್ಣೀರು ಹೊಸ ಸಖ್ಯ ಬೆಸೆದಿತ್ತು.