ಉಮ್ಮತ್ತೂರಿನಲ್ಲಿರುವ ದೇವಾಲಯಗಳ ಸಂಖ್ಯೆಯಿಂದಲೇ ಸ್ಥಳೀಯ ಐತಿಹಾಸಿಕ ಮಹತ್ವವನ್ನು ಅಂದಾಜು ಮಾಡಬಹುದು. ರಂಗನಾಥ, ಭುಜಂಗೇಶ್ವರ, ಆಂಜನೇಯ, ಸಪ್ತಮಾತೃಕಾ, ವೀರಭದ್ರ ಗುಡಿಗಳಲ್ಲದೆ ಹದಿಮೂರನೆ ಶತಮಾನಕ್ಕೆ ಸೇರಿದ ವರ್ಧಮಾನ ಬಸದಿಯೂ ಇಲ್ಲಿ ಕಂಡುಬರುತ್ತವೆ. ಇಪ್ಪತ್ನಾಲ್ಕನೆ ತೀರ್ಥಂಕರನಾದ ವರ್ಧಮಾನ ಮಹಾವೀರನ ಸುಂದರವಾದ ಮೂರ್ತಿಯೊಂದು ಇಲ್ಲಿ ಪೂಜೆಗೊಳ್ಳುತ್ತಿದೆ. ಹಸನ್ಮುಖಿ ಜಿನಬಿಂಬ, ಸುಂದರವಾದ ಮಕರತೋರಣ, ಪಾದದೆಡೆಯ ದೇವದೇವಿಯರ ಸೊಗಸಾದ ಕೆತ್ತನೆಗಳಿಂದಾಗಿ ಈ ಪುರಾತನ ವಿಗ್ರಹವು ಮನಸೆಳೆಯುವಂತಿದೆ. ಈಚಿನ ವರ್ಷಗಳಲ್ಲಿ ಬಸದಿಯನ್ನು ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಜೀರ್ಣೋದ್ಧಾರ ಮಾಡಲಾಗಿದೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಮೂವತ್ಮೂರನೆಯ ಕಂತು

 

ನಮ್ಮ ನಾಡನ್ನು ಆಳಿದ ಪ್ರಸಿದ್ಧ ರಾಜವಂಶಗಳನ್ನು ಇತಿಹಾಸ ನೆನಪಿಸಿಕೊಳ್ಳುವ ಹಾಗೆ ಸ್ಥಳೀಯ ಸಾಮಂತರು, ಪಾಳೇಗಾರರನ್ನು ಸ್ಮರಿಸುವುದು ಅಪರೂಪ. ಅಂತಹ ಸ್ಥಳೀಯ ದೊರೆಗಳು ಎಷ್ಟೇ ಸಮರ್ಥರೂ ಧೀರರೂ ಆಗಿದ್ದರೂ ಸಂಸ್ಥಾನದ ಅರಸರನ್ನು ಇದಿರುಹಾಕಿಕೊಂಡು ಬೆಳೆಯುವಷ್ಟು ಶಕ್ತರಾಗುವುದೂ ನಾಡನ್ನು ವಿಸ್ತರಿಸಿ ರಾಜ್ಯಕಟ್ಟುವುದೂ ಅಸಾಧ್ಯವೇ ಸರಿ. ಇಂತಹ ಅಸಾಧಾರಣ ಸಾಹಸಕ್ಕೆ ಹೊರಟ ಪಾಳೇಗಾರರನ್ನು ಆಳರಸರು ಪುಂಡರೆಂದೇ ಪರಿಗಣಿಸಿ ತಮ್ಮ ಸೈನ್ಯಬಲದಿಂದ ಸುಲಭವಾಗಿ ಅಡಗಿಸಿಬಿಡುತ್ತಿದ್ದರು. ಉಮ್ಮತ್ತೂರು ಪಾಳೆಯಗಾರರ ವಿಷಯ ಹೇಳುವುದಕ್ಕಾಗಿ ಈ ಪೀಠಿಕೆ ಬೇಕಾಯಿತು.

ಉಮ್ಮತ್ತೂರು ಈಗಿನ ಚಾಮರಾಜನಗರ ಜಿಲ್ಲೆಯಲ್ಲಿರುವ ಚಿಕ್ಕದೊಂದು ಊರು. ಜಿಲ್ಲಾಕೇಂದ್ರವಾದ ಚಾಮರಾಜನಗರದಿಂದ ಹದಿನಾರು ಕಿ.ಮೀ. ದೂರದಲ್ಲಿರುವ ಉಮ್ಮತ್ತೂರನ್ನು ಯಳಂದೂರಿನಿಂದ ತಲುಪಲು ಹದಿನಾಲ್ಕು ಕಿ.ಮೀ. ಕ್ರಮಿಸಬೇಕು.

ವಿಜಯನಗರ ಸಾಮ್ರಾಜ್ಯದ ಆಡಳಿತವಿದ್ದ ಕಾಲಕ್ಕೆ ಈ ಭಾಗವನ್ನು ಪಾಳೇಗಾರರು ಆಳುತ್ತಿದ್ದರು. ಹದಿನೈದನೆಯ ಶತಮಾನದ ಕೊನೆಯಿಂದ ಸುಮಾರು ನೂರು ವರುಷಗಳ ಕಾಲ ಈ ಪಾಳೇಗಾರರ ಆಳ್ವಿಕೆ ನಡೆದಿತ್ತೆಂದು ದಾಖಲಾಗಿದೆ. ಮೊದಲಿಗೆ ಇವರು ಎಷ್ಟು ಪ್ರಬಲರಾಗಿದ್ದರೆಂದರೆ, ಮೈಸೂರಿನ ದಕ್ಷಿಣಭಾಗವಲ್ಲದೆ ಕೊಯಮತ್ತೂರು ಪ್ರಾಂತ್ಯದ ಹಲವು ಭಾಗಗಳೂ ಇವರ ವಶವಾಗಿದ್ದವು. ಉಮ್ಮತ್ತೂರಿನಲ್ಲಿ ಪಾಳೇಗಾರರು ಕಟ್ಟಿದ ಕೋಟೆಯೂ ಇದ್ದಿತು. ಈ ಪಾಳೇಗಾರರಲ್ಲಿ ಪ್ರಬಲನಾಗಿದ್ದ ನಂಜರಾಜನೆಂಬುವನನ್ನು ನಿಗ್ರಹಿಸಲು ಸ್ವತಃ ಕೃಷ್ಣದೇವರಾಯನೇ ದಂಡೆತ್ತಿ ಬಂದಿದ್ದನೆಂದಮೇಲೆ ಹೇಳುವುದೇನು?

ಉಮ್ಮತ್ತೂರಿನಲ್ಲಿರುವ ದೇವಾಲಯಗಳ ಸಂಖ್ಯೆಯಿಂದಲೇ ಸ್ಥಳೀಯ ಐತಿಹಾಸಿಕ ಮಹತ್ವವನ್ನು ಅಂದಾಜು ಮಾಡಬಹುದು. ರಂಗನಾಥ, ಭುಜಂಗೇಶ್ವರ, ಆಂಜನೇಯ, ಸಪ್ತಮಾತೃಕಾ, ವೀರಭದ್ರ ಗುಡಿಗಳಲ್ಲದೆ ಹದಿಮೂರನೆ ಶತಮಾನಕ್ಕೆ ಸೇರಿದ ವರ್ಧಮಾನ ಬಸದಿಯೂ ಇಲ್ಲಿ ಕಂಡುಬರುತ್ತವೆ. ಇಪ್ಪತ್ನಾಲ್ಕನೆ ತೀರ್ಥಂಕರನಾದ ವರ್ಧಮಾನ ಮಹಾವೀರನ ಸುಂದರವಾದ ಮೂರ್ತಿಯೊಂದು ಇಲ್ಲಿ ಪೂಜೆಗೊಳ್ಳುತ್ತಿದೆ. ಹಸನ್ಮುಖಿ ಜಿನಬಿಂಬ, ಸುಂದರವಾದ ಮಕರತೋರಣ, ಪಾದದೆಡೆಯ ದೇವದೇವಿಯರ ಸೊಗಸಾದ ಕೆತ್ತನೆಗಳಿಂದಾಗಿ ಈ ಪುರಾತನ ವಿಗ್ರಹವು ಮನಸೆಳೆಯುವಂತಿದೆ. ಈಚಿನ ವರ್ಷಗಳಲ್ಲಿ ಬಸದಿಯನ್ನು ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಜೀರ್ಣೋದ್ಧಾರ ಮಾಡಲಾಗಿದೆ.

ರಂಗನಾಥ ದೇವಾಲಯದ ಬಾಗಿಲಲ್ಲಿರುವ ಧ್ವಜಸ್ತಂಭದ ಮೇಲಿನ ಉಬ್ಬುಶಿಲ್ಪಗಳು ಸುಂದರವಾಗಿವೆ. ಕಂಬದ ನಾಲ್ಕು ಬದಿಗಳಲ್ಲಿ ಮಹಾವಿಷ್ಣು, ಹನುಮಂತ, ಗರುಡ ಹಾಗೂ ರಾಜಪುರುಷರನ್ನು ಚಿತ್ರಿಸಿರುವ ಪರಿ ಸೊಗಸಾಗಿದೆ. ಕೈಮುಗಿದು ನಿಂತ ರಾಜಪುರುಷ ಈ ದೇವಾಲಯವನ್ನು ಕಟ್ಟಿಸಿದ ಪಾಳೇಗಾರ ಅರಸನೇ ಇರಬಹುದೇನೋ. ಗುಡಿಯ ಒಳಮಂಟಪದ ಕಂಬಗಳ ಮೇಲೂ ಈ ಉಬ್ಬುಶಿಲ್ಪಗಳ ಸರಣಿ ಮುಂದುವರೆದಿದ್ದು ಇವೆಲ್ಲ ವಿಜಯನಗರ ಶೈಲಿಯ ಮಾದರಿಗಳನ್ನು ಅನುಕರಿಸಿವೆ.

ಗರ್ಭಗುಡಿಯ ಆಚೀಚೆಗೆ ಕೋಷ್ಠಗಳಲ್ಲಿ ಬಾಲಕೃಷ್ಣ ಹಾಗೂ ರಂಗನಾಯಕಿ ಅಮ್ಮನವರ ವಿಗ್ರಹಗಳಿವೆ. ಬಲಗೈಯಲ್ಲಿ ಬೆಣ್ಣೆಮುದ್ದೆ ಹಿಡಿದು ಅಂಬೆಗಾಲಿರಿಸಿರುವ ಕೃಷ್ಣನ ವಿಗ್ರಹ ಮುದ್ದಾಗಿದೆ. ಮುಖದ ಮಂದಹಾಸ, ಆಭರಣಗಳ ಅಲಂಕಾರ, ಕಮಲಾಕೃತಿಯ ಪೀಠ ಎಲ್ಲವೂ ವಿಗ್ರಹದ ಅನನ್ಯತೆಯನ್ನು ಎತ್ತಿ ತೋರುತ್ತವೆ. ಒಳಗುಡಿಯಲ್ಲಿ ಶೇಷಶಾಯಿಯಾಗಿರುವ ರಂಗನಾಥನ ವಿಗ್ರಹವೂ ಮನೋಹರವಾಗಿದೆ. ಅಂಗೈಯನ್ನು ದಿಂಬಾಗಿರಿಸಿ ಮಲಗಿದ ಸ್ವಾಮಿಯ ಪಾದದೆಡೆಯಲ್ಲಿ ಶ್ರೀದೇವಿ-ಭೂದೇವಿಯರಿದ್ದಾರೆ. ಹದಿನಾರನೇ ಶತಮಾನದಲ್ಲಿ ರಂಗನಾಯಕನೆಂಬುವನು ಈ ದೇವಾಲಯಕ್ಕೆ ದತ್ತಿನೀಡಿರುವ ಬಗೆಗೆ ಶಾಸನವು ಲಭ್ಯವಿದೆ.

ಭುಜಂಗೇಶ್ವರ ದೇವಾಲಯದ ಮುಖಮಂಟಪ ವಿಶಾಲವಾದುದು. ಅನೇಕ ಮೂಲೆಗಳುಳ್ಳ ಇಲ್ಲಿನ ಧ್ವಜಸ್ತಂಭದ ಮೇಲಿರುವ ಯೋಧ, ನರ್ತಕಿ ಮೊದಲಾದ ಶಿಲ್ಪಗಳೂ ವಿಶಿಷ್ಟವೆನ್ನಬಹುದು. ಈ ಕಂಬದ ಮೇಲೆ ಬೇತಾಳವೊಂದರ ಶಿಲ್ಪವೂ ಇದೆ. ಊರಿನ ಅರಸನು ತನ್ನನ್ನು ಕಾಡಿದ ಬೇತಾಳಕ್ಕೆ ಈ ಕಂಬದ ಮೇಲೆ ಸ್ಥಾನಕಲ್ಪಿಸಿ ಅದರಿಂದ ಬಿಡುಗಡೆ ಪಡೆದನೆಂಬ ಕಥೆಯೂ ಹುಟ್ಟಿಕೊಂಡಿದೆ.

ಕೆಳಬದಿಗಳಲ್ಲಿ ಶೈವ ದ್ವಾರಪಾಲಕರನ್ನೂ ಲಲಾಟದಲ್ಲಿ ಗಜಲಕ್ಷ್ಮಿಯನ್ನೂ ಚಿತ್ರಿಸಿರುವ ಬಾಗಿಲವಾಡ ಅಂದವಾಗಿದೆ. ನಡುಮಂಟಪದಲ್ಲಿ ಇರಿಸಿದ ಸೂರ್ಯ, ನಾಗಶಿಲ್ಪ, ದಕ್ಷಿಣಾಮೂರ್ತಿ, ಕುಮಾರಸ್ವಾಮಿಯರ ವಿಗ್ರಹಗಳು ಗಮನಿಸತಕ್ಕವು. ಗರ್ಭಗುಡಿಯಲ್ಲಿ ಶಿವಲಿಂಗವಿದ್ದು ನಿತ್ಯಪೂಜೆ ಸಲ್ಲುತ್ತಿದೆ. ಮುಖ್ಯದೇವಾಲಯದ ಹಿಂಬದಿಯಲ್ಲಿ ಅನೇಕ ಗುಡಿಗಳಿದ್ದು ಅವುಗಳಲ್ಲಿ ಪ್ರತ್ಯೇಕ ಶಿವಲಿಂಗಗಳನ್ನು ನೆಲೆಗೊಳಿಸಿದೆ.

(ಚಿತ್ರಗಳು: ಟಿ.ಎಸ್. ಗೋಪಾಲ್)

ಇಂಥ ಗುಡಿಯೊಂದರಲ್ಲಿರುವ ಶಿವಲಿಂಗದ ಶಿರೋಭಾಗದಲ್ಲಿ ಗಂಗೆ ಕುಳಿತಿರುವಂತೆ ಚಿತ್ರಿಸಿರುವ ಪರಿ ಆಸಕ್ತಿಮೂಡಿಸುತ್ತದೆ. ಮಂಟಪದ ಕಂಬದ ಮೇಲಿರುವ ಉಬ್ಬುಶಿಲ್ಪಗಳಲ್ಲಿ ಕೈಮುಗಿದು ನಿಂತ ರಾಜರಾಣಿಯರೂ ಸೇರಿದ್ದಾರೆ. ಹದಿನಾರನೇ ಶತಮಾನದ ಶಾಸನಗಳಲ್ಲಿ ವಿಜಯನಗರದ ಸದಾಶಿವರಾಯ ಮತ್ತಿತರ ಅರಸರು ಭುಜಂಗೇಶ್ವರ ದೇವಾಲಯಕ್ಕೆ ದತ್ತಿನೀಡಿದ ಉಲ್ಲೇಖಗಳಿವೆ.

ಉಮ್ಮತ್ತೂರಿನಲ್ಲಿರುವ ಆಂಜನೇಯನಿಗೆ ಸುಮುಖನೆಂಬ ವಿಶೇಷಣವಿದೆ. ಅದಕ್ಕೆ ಅನ್ವರ್ಥವಾಗಿ ಹನುಮ ಮಂದಹಾಸದೊಡನೆ ಶೋಭಿಸುತ್ತಿದ್ದಾನೆ. ಈ ಶಿಲ್ಪವೂ ವ್ಯಾಸರಾಯರು ಸ್ಥಾಪಿಸಿದ ಪ್ರಾಣದೇವರ ಶಿಲ್ಪಸಂಪ್ರದಾಯವನ್ನನುಸರಿಸಿ ವೀರಹಸ್ತ, ಮೇಲೆತ್ತಿದ ಬಾಲ, ಎಡಗೈಯಲ್ಲಿ ಹಿಡಿದ ಮಾವಿನ ಗೊಂಚಲುಗಳೊಡನೆ ಚಿತ್ರಿತವಾಗಿದೆ.