ಒಮ್ಮೊಮ್ಮೆ ಯೋಚಿಸಿದರೆ ನಮ್ಮ ಅಳತೆಗಳನ್ನು ಯೋಜನೆಗಳನ್ನು ಮೀರಿ ಜೀವನದಲ್ಲಿ ಏನೋ ಘಟಿಸುತ್ತಿರುತ್ತದೆ. ಒಮ್ಮೊಮ್ಮೆ ಅದಕ್ಕೊಂದು ಅರ್ಥವೇ ಇರುವುದಿಲ್ಲ. ತರಗೆಲೆಯಂತೆ ತೂರಿ ಎತ್ತೆತ್ತಲೋ ಹಾರಿ ಮತ್ತೆಲ್ಲೋ ಮತ್ಯಾವುದೋ ಮಣ್ಣಿನಲ್ಲಿ ಸೇರಿ ಕೊಳೆತು ಹೋಗಿಬಿಡುವ ಹಾಗೆ ಅನಿಸುತ್ತದೆ. ಬದುಕೇ ಹಾಗೆ! ಹುಡುಕುವಾಗ ನಾವು ಹುಡುಕುತ್ತಿರುವುದು ಸಿಗುವುದಿಲ್ಲ. ಹುಡುಕುವುದನ್ನು ನಿಲ್ಲಿಸಿದಾಗ ಧುತ್ತೆಂದು ತಂದು ಎಸೆಯುತ್ತದೆ. ಈ ಬದುಕಿಗೆ ಅರ್ಥ ಎನ್ನುವುದು ಇದೆಯೇ? ಈ ಬದುಕು ಅರ್ಥಗಳ ಹಂಗನ್ನು ಮೀರಿಕೊಳ್ಳಲು ಪ್ರಯತ್ನಿಸುತ್ತಿರುವ ಕವಿತೆಯೇ?
ದಾದಾಪೀರ್ ಜೈಮನ್ ಬರೆಯುವ ‘ಜಂಕ್ಷನ್ ಪಾಯಿಂಟ್’ ಅಂಕಣ ಬರಹ

 

ಅಂದು ನನ್ನೊಬ್ಬ ರೂಮ್‌ಮೇಟ್‌ ರೂಮ್ ಖಾಲಿ ಮಾಡಿ ತನ್ನೂರಿಗೆ ಹೋಗುತ್ತಿದ್ದ. ಬೀಳ್ಕೊಟ್ಟು ಕೋಣೆಗೆ ಬಂದೆ. ಕೋಣೆ ಭಣಗುಡುತ್ತಿತ್ತು. ಕೋಣೆಯಲ್ಲಿ ಉಳಿದಿದ್ದು ನಾನು ಮತ್ತು ಅವರು. ಅವರು ನಮ್ಮ ಪೀಜಿಗೆ ಕೇವಲ ನಾಲ್ಕು ದಿನದ ಹಿಂದೆಯಷ್ಟೇ ಬಂದಿದ್ದರು. ಅವರ ಹೆಸರು ಸೋಮ. ಸೋಮ ಅಲಿಯಾಸ್ ಸೋಮಶೇಖರ. ಅವರು ಕೋಣೆಗೆ ಬಂದಾಗ ನಾನು ಅವರಲ್ಲಿ ಗಮನಿಸಿದ ಮೊದಲನೇ ಅಂಶವೆಂದರೆ ದೇವದಾಸನ ಹಾಗೆ ಅವರು ಬಿಟ್ಟಿದ್ದ ಗಡ್ಡ. ಕಟಿಂಗ್ ಶಾಪಿನ ದಾರಿ ಮರೆತು ಹೋಗಿ ಅದೆಷ್ಟು ತಿಂಗಳಾದವೋ ಅನ್ನುವ ಹಾಗೆ ಅಸಡ್ಡಾಳವಾಗಿ ಹರಡಿಕೊಂಡಿದ್ದ ಕೂದಲು. ಆಗ ಪ್ರೇಮವೈಫಲ್ಯ ಇದ್ದಿರಬಹುದು ಎನ್ನುವ ಸಾಮಾನ್ಯ ಊಹೆಯನ್ನು ಮಾಡಿದ್ದೆ. ನಾನೇ ನನ್ನ ಹೆಸರು ಹೇಳಿ ಪರಿಚಯಿಸಿಕೊಂಡಿದ್ದೆ, ಅವರು ತಮ್ಮ ಹೆಸರು ಹೇಳಿದರು. ‘ಜಾಬ್ ಮಾಡ್ತಿದೀರಾ? ಅಥವಾ?’ ಎಂದು ವಾಕ್ಯ ಮುಗಿಸುವ ಹೊತ್ತಿಗೆ ‘ನಾನು ಕಾರ್ಪೆಂಟರ್ ಬಾಸೂ!’ ಎಂದಿದ್ದರು. ನಾನು ಕೇವಲ ‘ನೈಸ್’ ಎಂದು ಹೇಳಿ ನನ್ನ ಕೆಲಸಗಳಲ್ಲಿ ನಿರತನಾಗಿದ್ದೆ. ಪೀಜಿಗಳು ತಂದೊಡ್ಡುವ ಒಂದು ಮುಖ್ಯ ಸವಾಲೆಂದರೆ ಮನುಷ್ಯರನ್ನು ಅವರ ಉದ್ಯೋಗದ ಜೊತೆಗೆ ಒಪ್ಪಿಕೊಳ್ಳುವಂತೆ ಮಾಡುವುದು. ನಾವು ಎಲ್ಲಾ ಕಡೆ ‘ಎಲ್ಲರೂ ಒಂದೇ’ ಎಂದು ಭಾಷಣ ಬಿಗಿಯುವುದು ಬೇರೆ ಆದರೆ ನಿಜವಾಗಲೂ ನಮ್ಮೆದುರಿಗೆ ಆ ಪ್ರಸಂಗ ಎದುರು ಬಂದಾಗ ನಾವೆಷ್ಟು ಉದಾರಿಗಳಾಗುತ್ತೇವೆ… ಅಂದರೆ ಮನುಷ್ಯರಾಗುತ್ತೇವೆ ಎನ್ನುವುದು ಗೊತ್ತಾಗುತ್ತದೆ. ನಾನು ಕಾರ್ಪೆಂಟರ್ ಒಬ್ಬರ ಜೊತೆ ನನ್ನನ್ನು ಗುರುತಿಸಿಕೊಳ್ಳುತ್ತೇನೆಯೇ? ಹೊಂದಿಕೊಳ್ಳುತ್ತೇನೆಯೇ? ಅದು ನನ್ನಿಂದ ಸಾಧ್ಯವೇ? ಎನ್ನುವ ವಿಚಾರಗಳೆಲ್ಲಾ ಆ ಕ್ಷಣಕ್ಕೆ ಬಂದು ಹೋಗಿದ್ದವು. ಆಮೇಲೆ ನನಗೆ ನಾನೇ ‘ನೀನ್ಯಾವ ಸೀಮೆ ಮಹಾರಾಜ ಅಂತ ಇಷ್ಟು ದೌಲತ್ತು ತೋರಿಸ್ತಾ ಇದ್ದಿ?’ ಎಂದು ನನಗೆ ನಾನೇ ಹೇಳಿಕೊಂಡು ಅದರಿಂದ ಹೊರಬಂದೆ. ಆದರೂ ಒಂದಷ್ಟು ದಿನಗಳು ನನ್ನನ್ನು ನಾನು ಗ್ರೌಂಡೆಡ್ ಆಗಿ ಮಾಡಿಕೊಳ್ಳಲು ಕೆಲವು ದಿನಗಳ ಮಾನಸಿಕ ಸಿದ್ಧತೆಯೇ ಬೇಕಾಯಿತು. ಯಾವತ್ತೋ ಒಂದು ದಿನ ಕೆಲವು ಕ್ಷಣಗಳವರೆಗೆ ಸಹಾನುಭೂತಿ ತೋರಿಸುವುದು ಬೇರೆ! ಆದರೆ ದೀರ್ಘಾವಧಿಯಲ್ಲಿ ಒಟ್ಟುಗೂಡಿ ಇರುವುದು ಬೇರೆ.’

ಮತ್ತೆ ವಿಷಯಕ್ಕೆ ಬರೋಣ. ನಾನು ನನ್ನ ಹಳೆಯ ರೂಮ್‌ಮೇಟನ್ನು ಬೀಳ್ಕೊಟ್ಟು ಬಂದಾಗ ‘ಯಾಕ್ ಬಾಸು? ಬೇಜಾರಾಗ್ತಾ ಇದ್ಯಾ?’ ಎಂದರು. ‘ಹಾಗೇನಿಲ್ಲ ಇವರೆ. ಎಲ್ಲರೂ ಒಂದಲ್ಲ ಒಂದು ದಿನ ತಮ್ಮ ಮುಂದಿರುವ ಒಳ್ಳೆಯ ಭವಿಷ್ಯವನ್ನು ನೋಡಿಕೊಂಡು ಮುಂದಕ್ಕೆ ಹೋಗಲೇಬೇಕಲ್ಲಾ?’ ಎಂದೆ. ಅವರದಕ್ಕೆ ನೇರವಾಗಿ ‘ಆದ್ರೂ ಒಟ್ಟಿಗಿದ್ದದ್ದನ್ನೆಲ್ಲಾ ಅಷ್ಟ್ ಬೇಗ ಕೊಡವಿಕೊಳ್ಳಕ್ ಆಗಲ್ಲ ಆಲ್ವಾ ಬಾಸು.’ ಎಂದರು. ಅವರು ಹೇಳಿದ್ದರಲ್ಲಿ ನಿಜವಿತ್ತು. ಎಂತದೆ ಸಣ್ಣ ವಿದಾಯವೇ ಆದರೂ, ವಿದಾಯಗಳಲ್ಲಿ ನಾವೆಷ್ಟೇ ನುರಿತವರೇ ಆದರೂ ಪ್ರತಿ ವಿದಾಯವು ಒಂದು ಬೇಸರಿಕೆಯ ಎಳೆಯನ್ನು ನಮ್ಮಲ್ಲಿ ಉಳಿಸಿಯೇ ಹೋಗುತ್ತದೆ. ನಾನು ಕೊನೆಗೆ ಅವರನ್ನೇ ಗೆಲ್ಲಿಸಿ ‘ಹ್ಮ್ಮ್ಮ್ಮ್… ಅದೂ ನಿಜ’ ಎಂದೆ. ಕೆಲವೊಂದು ಸಲ ಈ ‘ಹ್ಮ್ಮ್ಮ್ಮ್ಮ್…’ ಗಳು ಅದೆಷ್ಟು ಸಂದರ್ಭಗಳನ್ನು ತಿಳಿಗೊಳಿಸಿಬಿಡುತ್ತದೆ ಎನಿಸುತ್ತದೆ. ಅವರು ಹ್ಮ್ಮ್ಮ್ಮ್ ಆದ ಮೇಲಿನ ಕೆಲವು ನಿಮಿಷಗಳ ಮೌನವನ್ನು ಮುರಿದು ‘ನಾನು ನಿಮಕೊಂದು ಕಥೆ ಹೇಳಬೇಕು’ ಎಂದು ಹೇಳಿದರು. ಅವರು ಹೇಳಿದ್ದ ಸಾಲಿನಲ್ಲಿ ‘ನಿಮಕೊಂದು’ ಎಂದು ಹೇಳಿದ್ದರ ಹಿಂದೆ ಬಹುಷಃ ಅವರು ತಮಿಳುನಾಡಿನಲ್ಲಿ ತುಂಬಾ ದಿನ ಇದ್ದಿರಬಹುದು ಮತ್ತು ಅದರ ಪ್ರಭಾವದಿಂದಾಗಿಯೇ ಅವರ ಸಾಲುಗಳಲ್ಲಿ ತಮಿಳು ಮಿಶ್ರಣವಾಗಿ ಅದರ ಭಾಷಾಗಂಧ ಚಹಾದಲ್ಲಿ ಹಾಕಿದ ಏಲಕ್ಕಿಯ ವಿಶಿಷ್ಟ ಘಮದೊಂದಿಗೆ ಮೂಗಿಗೆ ಬಡಿಯುತ್ತಿದ್ದಿರಬೇಕು ಅನಿಸುತ್ತದೆ. ಮತ್ತೆ ವಿಷಯಕ್ಕೆ ಬರೋಣ.

ಅವರು ಕಥೆ ಹೇಳುತ್ತೇನೆ ಎಂದದ್ದಕ್ಕೆ ನನಗೆ ಖುಷಿಯೇ ಆಯಿತು. ಏಕೆಂದರೆ ಹೀಗೆ ಎಲ್ಲಾ ಸಮಯಗಳಲ್ಲೂ ಕಥೆಯೇ ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ. ಬದಲಾಗಿ ಕಥೆಯ ಪಾತ್ರಗಳನ್ನೇ ಕಥೆಗಾರ ಹುಡುಕಿಕೊಂಡು ಹೋಗುವುದೇ ಹೆಚ್ಚು! ವೆನ್ನೆಲಾ ದೊರೆಸಾನಿಯ ನಿರೂಪಕ ದೊರೆಸಾನಿಯ ಕಥೆಯ ಹಿಂದೆ ಹೊರಡುತ್ತಾನಲ್ಲಾ ಹಾಗೆ ಬಹುಪಾಲು ಕಥೆಗಾರರ ಪಾಡೂ ಅದೇ ಇರುತ್ತದೆ. ನಮ್ಮ ಮನೋಭಿತ್ತಿಯಲ್ಲಿ ಹುಡುಕಾಡುತ್ತಾ ಅಲೆಯುವುದು ಕೂಡ ನಾವು ಹುಡುಕುತ್ತಾ ಹೋಗುವುದರ ಭಾಗವೇ ಆಗಿದೆ ಎಂದು ಭಾವಿಸಿದ್ದೇನೆ. ಅವರ ಮಾತಿಗೆ ನಾನು ‘ಅದಕ್ಕೇನು? ಖಂಡಿತಾ ಹೇಳಿ. ನಾನು ಕೇಳಿಸಿಕೊಳ್ಳುತ್ತೇನೆ.’ ಎಂದೆ. ಅಲ್ಲಿಂದ ಕಥಾಶ್ರವಣ ಕಾರ್ಯಕ್ರಮ ಶುರುವಾಯಿತು.

‘ನಾನು ತುಂಬಾ ಚಿಕ್ಕವನಿರಬೇಕಾದರೆ ಕಳೆದುಹೋಗಿಬಿಟ್ಟಿದ್ದೆ. ಎರಡೊ ಮೂರೋ ಕಿಲಾಸ್ ಇರ್ಬೇಕು ಬಾಸು. ಒಮ್ಮೆ ಹೀಗೆ ಅಮ್ಮ ಏನೋ ತಗೋಬಾ ಅಂತ ಕಳಿಸಿದ್ರು. ನಾನು ಹೋಗ್ತಾ ಹೋಗ್ತಾ ಹೋಗ್ತಾ ನಡೀತಾನೇ ಇದ್ದೆ. ಕೊನೆಗೆ ದಾರಿ ತಪ್ಪಿ ಹೋಯ್ತು. ಯಾರೋ ಬಿಲ್ಡಿಂಗ್ ಕೆಲಸ ಮಾಡ್ತಾ ಇದ್ರು ಬಾಸು. ಅಲ್ಲಿದ್ದೆ. ನನಗಾಗ ನಮ್ಮ ಅಮ್ಮನ ಹೆಸರು ಗೊತ್ತಿಲ್ಲ. ನಾವಿದ್ದ ಏರಿಯಾ ಕೂಡ ನನಗೆ ಗೊತ್ತಿಲ್ಲ. ಆ ಜಾಗದಲ್ಲಿ ಕೆಲಸ ಮಾಡ್ತಿದ್ದ ಎಲ್ಲರೂ ಕೂಡ ಯಾರೋ ಬರ್ತಾರೆ. ಬಂದು ಕರೆದುಕೊಂಡು ಹೋಗ್ತಾರೆ ಅಂತ ಕಾದೆ ಕಾದರು. ಆದರೆ ಯಾರೂ ಬರಲಿಲ್ಲ. ಕಡೆಗೆ ಅಲ್ಲಿ ಕೆಲಸ ಮಾಡ್ತಿದ್ದ ಒಬ್ಬ ನಿಮ್ಮದೇ ಜನ, ಅದೇ ಮುಸ್ಲಿಂ ಜನ, ಬೇಲ್ದಾರ್ ಕೆಲಸ ಮಾಡ್ತಿದ್ರು. ಅವರು ಅಲ್ಲಿಂದ ನನ್ನನ್ನ ತಮಿಳುನಾಡಿಗೆ ಕರೆದುಕೊಂಡು ಹೋದ್ರು.’ ಎಂದು ಒಂದೇ ಉಸಿರಿನಲ್ಲಿ ಎಂಬಂತೆ ಹೇಳಿದರು. ಕಥೆಯನ್ನು ಯಾರಾದರೂ ಕೇಳಿಸಿಕೊಳ್ಳಲಿ ಎಂದು ಅದೆಷ್ಟು ವರ್ಷಗಳಿಂದ ಕಾಯುತ್ತಿದ್ದರೋ ಎಂದೆನಿಸಿತು. ಈ ಕಷ್ಟ ಕಾರ್ಪಣ್ಯಗಳೇ ಹಾಗೆ. ಕೆಂಡದ ಮೇಲೆ ನಡೆದವರು ಅದರ ಸುಡುವಿಕೆಯನ್ನು ಅದರ ನೆನಪನ್ನು ಆಗಾಗ ದಾಟಿಸಿದಾಗಲೇ ಅದರಿಂದ ಹೊರಬರಲು ಸಾಧ್ಯ ಎನ್ನುವಂತೆ ಹೇಳುತ್ತಾರೆ. ಸೋಮ ಅವರಲ್ಲಿ ಒಂದು ಪ್ರಾಮಾಣಿಕತೆ ಇದೆ ಎಂದು ಆ ಕ್ಷಣಕ್ಕೆ ಅನಿಸಿತ್ತು.

‘ನಿಮ್ಮನ್ನ ಅವರು ಚೆನ್ನಾಗಿ ನೋಡಿಕೊಂಡರಾ? ನಿಮ್ಮನ್ನ ಅವರು ಶಾಲೆಗೆ ಸೇರಿಸಿದರಾ? ಓದಿಸಿದರಾ?’ ಕೇಳಿದೆ.

‘ಹಾ. ನಾನು ನನ್ನ ಸ್ವಂತ ಅಮ್ಮನ ಜೊತೆ ಇರ್ಬೇಕಾದ್ರೆ ಕಾನ್ವೆಂಟಿಗೆ ಹೋಗ್ತಾ ಇದ್ದೆ. ನನ್ನನ್ನ ಜೊತೆಗೆ ಕರೆದುಕೊಂಡು ಹೋದವರು ಅಮ್ಮನಿಗಿಂತ ಬಡವರು. ಹಾಗಾಗಿ ಅಲ್ಲೇ ತಮಿಳು ಮೀಡಿಯಂ ಸರ್ಕಾರಿ ಶಾಲೆಗೆ ಹಾಕಿದ್ರು. ಆದ್ರೆ ಮಧ್ಯೆ ಏನೋ ಕಷ್ಟ ಬಂತು ಅಂತ ಶಾಲೆ ಬಿಡಬೇಕಾಯ್ತು ಬಾಸು. ನಾನು ಅಬ್ಬು ಹಿಂದೆ ಬೆಲ್ದಾರ್ ಕೆಲಸ, ಕಾರ್ಪೆಂಟರ್ ಕೆಲಸ, ಅದು ಇದು ಅನ್ನದೆ ಎಲ್ಲಾ ಕೆಲಸ ಮಾಡ್ತಾ ಇದ್ದೆ ಬಸೂ… ‘ ಎಂದರು. ಅವರು ಮಾತಿನಲ್ಲಿ ಹೇಳುವಾಗ ಬಾಸು ಎನ್ನುವುದು ಬಸೂ ಆಗಿಬಿಡುತ್ತಿತ್ತು.

ಪೀಜಿಗಳು ತಂದೊಡ್ಡುವ ಒಂದು ಮುಖ್ಯ ಸವಾಲೆಂದರೆ ಮನುಷ್ಯರನ್ನು ಅವರ ಉದ್ಯೋಗದ ಜೊತೆಗೆ ಒಪ್ಪಿಕೊಳ್ಳುವಂತೆ ಮಾಡುವುದು. ನಾವು ಎಲ್ಲಾ ಕಡೆ ‘ಎಲ್ಲರೂ ಒಂದೇ’ ಎಂದು ಭಾಷಣ ಬಿಗಿಯುವುದು ಬೇರೆ ಆದರೆ ನಿಜವಾಗಲೂ ನಮ್ಮೆದುರಿಗೆ ಆ ಪ್ರಸಂಗ ಎದುರು ಬಂದಾಗ ನಾವೆಷ್ಟು ಉದಾರಿಗಳಾಗುತ್ತೇವೆ… ಅಂದರೆ ಮನುಷ್ಯರಾಗುತ್ತೇವೆ ಎನ್ನುವುದು ಗೊತ್ತಾಗುತ್ತದೆ.

ಒಮ್ಮೆ ಕವಿ ಶಿವಪ್ರಕಾಶ್ ಅವರು ರೋಹಿತ್ ವೇಮುಲಾನ ಬಗ್ಗೆ ಬರೆದಿರುವ ‘ಬೆಳೆದು ನಿಂತ ಮಗನೊಬ್ಬ ಆತ್ಮಹತ್ಯೆ ಮಾಡಿಕೊಂಡಾಗ’ ಕವಿತೆಯನ್ನು ಜೋರಾಗಿ ಓದುತ್ತಿದ್ದೆ.

‘ಒಬ್ಬ ಯುವಕ ಆತ್ಮಹತ್ಯೆ ಮಾಡಿಕೊಂಡಾಗ
ಅವ್ವಂದಿರ ಅವ್ವ ನೆಲದವ್ವ
ತಿರುಗಿಸಿ ಇರುಸಿಕೊಳ್ಳುತ್ತಾಳೆ ಅವನನ್ನು ತನ್ನ ಬಸಿರಲ್ಲಿ;
ಅಥವಾ ಅಪ್ಪಂದಿರ ಅಪ್ಪ ಅಗ್ನಿ
ದಹಿಸಿಬಿಡುತ್ತಾನೆ ಅವನನ್ನು ಪೂರ್ತಿಯಾಗಿ
ಅವನು ತಲುಪುವ ಮುಂಚೆ ತನ್ನ ಗುರಿನಕ್ಷತ್ರವನ್ನು…’
– ಎಚ್. ಎಸ್. ಶಿವಪ್ರಕಾಶ್

(ರೋಹಿತ್ ವೇಮುಲಾ)

ಅದನ್ನವರು ಕೇಳಿಸಿಕೊಂಡು ಓದಿ ನಿಲ್ಲಿಸಿದ ತಕ್ಷಣ ‘ನೀವೇನೇ ಅನ್ನಿ ಬಾಸು. ಆ ಹುಡ್ಗ ಸಾಯಬಾರದಿತ್ತು. ನನಗೂ ಅದೆಂತಾ ಕಷ್ಟ ಬಂದಿತ್ತು. ಒಮ್ಮೆ ರೈಲ್ವೆ ಹಳಿಗೆ ತಲೆ ಕೊಟ್ಟು ಮಲಗಿ ಬಿಟ್ಟಿದ್ದೆ ಕೂಡ. ಅಷ್ಟು ಕಷ್ಟ ಬಂದಿತ್ತು. ಒಮ್ಮೊಮ್ಮೆ ಊಟ ಮಾಡಾಕೆ ಊಟಾನೇ ಇರ್ತಾ ಇರ್ಲಿಲ್ಲ. ಒಂದೊಂದು ದಿನ ಎರಡು ಮೂರು ದಿನದ ಹಳಸಿದ ಅನ್ನ ಕೂಡ ತಿಂದಿದೀನಿ ಗೊತ್ತಾ. ಇದ್ಯಾವುದು ಬೇಡ ಅಂತ ರೈಲ್ವೆ ಹಳಿಗೆ ಹೋಗಿದ್ದೆ. ಆದ್ರೆ ಸಾಯಕ್ಕಾಗಲಿಲ್ಲ ಬಾಸು… ಅದಕ್ಕೆ ಬದುಕಿಬಿಟ್ಟೆ!’ ಅಂದರು. ಆ ಹುಡುಗ ಸಾಯಬಾರದಿತ್ತು. ನನಗ್ಯಾಕೋ ಆ ಹುಡುಗ ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು ಎಂದು ಅಲವತ್ತುಕೊಂಡರು. ನಾನು ವೇಮುಲಾನನ್ನು ಆ ಸ್ಥಿತಿಗೆ ತಳ್ಳಿದ ಕಾರಣಗಳನ್ನು ವಿವರಿಸಲು ಹೋದೆನಾದರೂ ಅವರು ನಿಂತು ನೋಡುತ್ತಿರುವ ದೃಶ್ಯ ಬೇರೆ ಎಂದು ತಿಳಿದು ಅಹುದಹುದು ಎಂದು ಸುಮ್ಮನಾದೆ. ಅವರ ಬದುಕಿಯೇ ತೀರುವ ಛಲ ನನ್ನನ್ನು ಆಳವಾಗಿ ತಾಕಿತು. ಎಂತಹ ದುರ್ಭರ ಘಳಿಗೆಗಳು ಬಂದರೂ ಬದುಕಲೆ ಬೇಕೆಂದು ತಾಕೀತು ಮಾಡುವ ಹಾಗಿತ್ತು ಅವರ ಧ್ವನಿ.

*****

ಅವರ ದೇವದಾಸನ ಗಡ್ಡದ ಬಗೆಗೂ ಹೇಳಿದರು. ಅವರು ಒಂದು ಹುಡುಗೀನ ಪ್ರೀತಿಸಿದ್ದಾಗಿಯೂ ಆ ಹುಡುಗಿ ಮದುವೆಯ ಹಿಂದಿನ ದಿನದಲ್ಲಿ ಅವರ ಅಪ್ಪನಿಗೆ ಹೆದರಿ ಕೈ ಕೊಟ್ಟಳೆಂದೂ, ಅವಳ ನೆನಪಿನಲ್ಲಿಯೇ ಇವರು ಗಡ್ಡ ಬಿಟ್ಟು ದೇವದಾಸನಂತೆ ಆಗಿರುವುದರ ಬಗ್ಗೆ ಹೇಳಿದರು. ‘ಹಾಗಿರಬೇಡಿ ಸೋಮ. ಬದುಕು ಮುಂದಕ್ಕೆ ಹೋಗ್ಬೇಕು. ನೀಟಾಗಿ ಕಟಿಂಗ್ ಗಿಟಿಂಗ್ ಮಾಡಿಸಿಕೊಂಡು ಆರಾಮಗಿರಿ.’ ಅಂದೆನಾದರೂ ಪ್ರೇಮಿಗಳು ಅದರಲ್ಲೂ ಪ್ರೇಮ ವೈಫಲ್ಯಕ್ಕೆ ತುತ್ತಾದವರು ಯಾರ ಮಾತನ್ನೂ ಕೂಡ ಕೇಳುವುದಿಲ್ಲವೆನ್ನುವುದು ನೆನಪಾಗಿ ಸುಮ್ಮನಾದೆ.

*****

‘ಕೆಲಸ ಮಾಡತಾ ಮಾಡ್ತಾ ಮತ್ತೆ ಬೆಂಗಳೂರಿಗೆ ಬಂದೆ. ಅಲ್ಲಿ ಯಾವುದೋ ಕಾರಣಕ್ಕೆ ನಾನು ಓದಿದ ಶಾಲೆ ಸಿಕ್ಕಿಬಿಡ್ತು. ಅರೆ ಇದು ನಾವಿದ್ದ ಮನೆ ಅಂತ ಗೊತ್ತಾಯ್ತು. ಅಲ್ಲಿಯೇ ನಿಂತಿದ್ದ ನನ್ನನ್ನು ಒಬ್ಬ ಹೆಣ್ಣುಮಗಳು ‘ಯಾಕಪಾ? ಅವಾಗಿಂದ ಈ ಮನಿಯನ್ನೇ ನೋಡಿಯೆ? ಯಾರ್ ಬೇಕು ನಿಂಗೆ?’ ಎಂದು ಗದರಿಸೋ ಹಾಗೆ ಕೇಳಿದಳು. ಆಗ ನಾನು ಈ ಮನೆಯಲ್ಲಿ ನಮ್ಮ ಅಮ್ಮ ಇದ್ರು. ನಾನು ಕಳೆದು ಹೋಗಿಬಿಟ್ಟಿದ್ದೆ. ನನಗೊಬ್ಬ ತಂಗಿ ಕೂಡ ಇದ್ದಳು. ಅದಕ್ಕವಳು ‘ಒಹ್ ಕಳೆದು ಹೋದವನು ನೀನೇನಾ?’ ಎಂದು ಹೇಳಿ ‘ನಿಮ್ಮಮ್ಮ ಬದುಕಿದ್ದಾರೆ.’ ಇರು ಫೋನ್ ಮಾಡ್ತೀನಿ ಎಂದರು. ಅವರು ಹುಡುಕುವುದನ್ನೇ ಬಿಟ್ಟು, ಮತ್ತೆ ಅಮ್ಮ ಸಿಗುತ್ತಾಳೆ ಎನ್ನುವ ಆಸೆಯನ್ನೇ ಬಿಟ್ಟುಬಿಟ್ಟಿದ್ದರು. ಹಾಗೆ ಬಿಟ್ಟು ಕುಳಿತ ಯಾವುದೋ ಘಳಿಗೆಯಲ್ಲಿ ಬದುಕು ಅವರು ಕಳೆದುಕೊಂಡದ್ದನ್ನೆಲ್ಲಾ ಬಾಚಿ ಬಾಚಿ ಕೊಟ್ಟುಬಿಟ್ಟಿತು. ಆ ಕ್ಷಣವನ್ನು ಹೊರಗಿನವನಾದ ನಾನು ಊಹಿಸಿಕೊಂಡಾಗಲೇ ರೋಮಾಂಚನವಾಗುತ್ತದೆ. ಅರೆ, ಸಿನಿಮಾ ಕಥೆಯೇ ನನ್ನ ಮುಂದೆ ನಡೆಯುತ್ತಿದೆಯಲ್ಲಾ ಎನಿಸಿತ್ತು. ನನ್ನ ಅನಿಸುವಿಕೆಯನ್ನು ಮತ್ತೊಂದು ಎತ್ತರದ ಸ್ತರಕ್ಕೆ ಕೊಂಡೊಯ್ಯುವಂತೆ ಮತ್ತೊಂದು ಸಿನಿಮೀಯ ದೃಶ್ಯವನ್ನು ಹೇಳಿದರು;

‘ನಮ್ಮಮ್ಮ ಬಂದಿರುವುದು ನಾನೇನಾ ಅಂತ ಸರಿ ಗುರ್ತು ಹಿಡೀತಾರೋ ಇಲ್ಲೋ ಅಂತ ಪರೀಕ್ಷೆ ಮಾಡ್ಬೇಕು ಅಂತೇಳಿ ಮತ್ತೊಬ್ಬ ಬೇರೆ ಹುಡುಗನ್ನ ನನ್ನ ಪಕ್ಕದಲ್ಲಿ ನಿಲ್ಲಿಸಿದ್ದರು… ಅಮ್ಮ ಸೀದಾ ಬಂದು ನಾನೇ ಅವರ ಮಗ ಅಂತ ಹೇಳಿಬಿಟ್ಟರು. ಕಳ್ಳು ಅನ್ನೋದು ಇದಕ್ಕೆ ಬಾಸು…’ ಅಂದರು.

*****

ಬದುಕಿನಲ್ಲಿ ರೋಚಕತೆಗಳದ್ದೇನು ಕಥೆ? ಪ್ರತಿಯೊಬ್ಬರ ಬದುಕೂ ಕೂಡ ಒಂದೊಂದು ರೋಚಕ ಕಥೆಗಳ ಗುಚ್ಛವೇ ಆಗಿರುತ್ತವೆ. ನನಗೆ ಸೋಮ ಅವರ ಜೀವನ ನೆನೆಸಿಕೊಂಡಾಗಲೆಲ್ಲ ಕಾಡುವುದು ಅವರು ಇಡೀ ಜೀವನದ ತುಂಬಾ ಏನನ್ನೋ ಹುಡುಕುತ್ತಾ ಅಲೆದಿರಬಹುದಾದ ದೃಶ್ಯಗಳು. ಬದುಕು ಅವರನ್ನು ಪ್ರತಿ ಕ್ಷಣ ಒಂದೊಂದು ಹೊಸ ಸನ್ನಿವೇಶಗಳಿಗೆ ನೂಕಿದಾಗಲೆಲ್ಲ ಮತ್ತು ಆ ಸಂದರ್ಭಗಳಲ್ಲಿ ಒಳಗಡೆಯೇ ಕಾಡುವ ಒಂಟಿತನ ಅನಾಥಭಾವಗಳನ್ನು ಮೀರಿಕೊಂಡು ಬದುಕಿಯೇ ತೀರುವ ರೊಚ್ಚನ್ನು ಸದಾ ಜೀವಂತವಾಗಿರಿಸಿಕೊಳ್ಳುತ್ತಿದ್ದ ದೃಶ್ಯಗಳು… ಪ್ರೀತಿಸಿದ ಹುಡುಗಿಯಲ್ಲಿ ಅವರು ಹುಡುಕಿದ್ದೇನು? ಅವರನ್ನು ಸಾಯುವುದಕ್ಕೆ ರೈಲ್ವೆ ಹಳಿಯವರೆಗೂ ಹೋಗುವಂತೆ ಮಾಡಿದ್ದು ಯಾವುದು? ಮತ್ತೆ ಅದ್ಯಾವ ಮಾಯದಲ್ಲಿ ಬೆಂಗಳೂರಿಗೆ ಬಂದರು? ಅದು ಹೇಗೆ ಅವರು ಅಚಾನಕ್ ತಮ್ಮ ಮನೆಯನ್ನು ಗುರುತು ಹಿಡಿದರು? ಒಮ್ಮೊಮ್ಮೆ ಯೋಚಿಸಿದರೆ ನಮ್ಮ ಅಳತೆಗಳನ್ನು ಯೋಜನೆಗಳನ್ನು ಮೀರಿ ಜೀವನದಲ್ಲಿ ಏನೋ ಘಟಿಸುತ್ತಿರುತ್ತದೆ. ಒಮ್ಮೊಮ್ಮೆ ಅದಕ್ಕೊಂದು ಅರ್ಥವೇ ಇರುವುದಿಲ್ಲ. ತರಗೆಲೆಯಂತೆ ತೂರಿ ಎತ್ತೆತ್ತಲೋ ಹಾರಿ ಮತ್ತೆಲ್ಲೋ ಮತ್ಯಾವುದೋ ಮಣ್ಣಿನಲ್ಲಿ ಸೇರಿ ಕೊಳೆತು ಹೋಗಿಬಿಡುವ ಹಾಗೆ ಅನಿಸುತ್ತದೆ. ಬದುಕೇ ಹಾಗೆ! ಹುಡುಕುವಾಗ ನಾವು ಹುಡುಕುತ್ತಿರುವುದು ಸಿಗುವುದಿಲ್ಲ. ಹುಡುಕುವುದನ್ನು ನಿಲ್ಲಿಸಿದಾಗ ಧುತ್ತೆಂದು ತಂದು ಎಸೆಯುತ್ತದೆ. ಈ ಬದುಕಿಗೆ ಅರ್ಥ ಎನ್ನುವುದು ಇದೆಯೇ? ಈ ಬದುಕು ಅರ್ಥಗಳ ಹಂಗನ್ನು ಮೀರಿಕೊಳ್ಳಲು ಪ್ರಯತ್ನಿಸುತ್ತಿರುವ ಕವಿತೆಯೇ?

‘ನನ್ನ ಕುಡಿತದ ಚಟದಿಂದ ಮನೇಲಿ ಅಮ್ಮನಿಗೆ ಮತ್ತೆ ಅಮ್ಮನ ಮನೇಲಿರೋ ಚಿಕ್ಕಪ್ಪನ ಮಗಳಿಗೆ ತೊಂದರೆ ಆಗಬಾರದು ಅಂತ ಇಲ್ಲಿ ಪೀಜಿಲಿರೋದು ಬಾಸು. ನಮ್ಮ ಅಮ್ಮ ಯಾರದೋ ಯಜಮಾನಿಯಾಗಿದ್ದೋರು. ಅವನು ಇಟ್ಟುಕೊಂಡು ಬಿಟ್ಟುಹೋದ. ನನ್ನ ಅಪ್ಪ ಯಾರಂತನೇ ನನಗೆ ಗೊತ್ತಿಲ್ಲ.’ ಎಂದು ಶಾಂತ ದನಿಯಲ್ಲಿಯೇ ಹೇಳಿದ್ದರು. ಅವರ ಧ್ವನಿಯಲ್ಲಿ ಇರುವುದನ್ನು ಇರುವ ಹಾಗೆ ಒಪ್ಪಿಕೊಂಡರೆ ಅದೆಷ್ಟು ಹಿತವಿದೆ ಎನ್ನುವ ಭಾವವಿತ್ತು ಎಂದು ಈಗ ಯೋಚಿಸಿದರೆ ಹೊಳೆಯುವುದು. ಅಮ್ಮ ಹೆಣ್ಣು ಹುಡುಕ್ತಾ ಇದಾರೆ. ಆದ್ರೆ ಹೋಗೋ ಮನೇಲಿ ವರದಕ್ಷಿಣೆ, ಜಾತಕ ಸರಿಬರಲಿಲ್ಲ. ಅದು ಸರಿಹೋಗಲ್ಲ. ಇದು ಸರಿಹೋಗಲ್ಲ ಅಂತ ಯಾವ ಹೆಣ್ಣೂ ಸಿಗ್ತಾ ಇಲ್ಲ. ನಾನೂ ತಲೆಕೆಟ್ಟು ‘ಮೊ, ನೀನು ಎಲ್ಲಕಡೆ ಏನಾದರೂ ಒಂದು ಕಮಿ ಹುಡುಕಿದ್ರೆ ನನಗೆ ಮದ್ವೆನೇ ಆಗಲ್ಲ ಅಂತ ಹೇಳಿಯೂ ಇದೀನಿ. ಆದ್ರೆ ಅಮ್ಮನ ಆಸೆಗೆ ಯಾಕ್ ಬೇಜಾರ್ ಮಾಡದು ಅಂತ ಸುಮ್ಮನಾಗಿದೀನಿ. ಮದ್ವೆಯಾದರೂ ನನ್ನ ತಲೇಲಿ ಇರೋದು ನಾನು ಪ್ರೀತಿಸಿದ ಹುಡುಗಿನೇ ಬಾಸು.’ ಎಂದು ಹೇಳುವುದನ್ನು ಮರೆಯಲಿಲ್ಲ. ಎರಡು ವಾರ ರೂಮಿನಲ್ಲಿ ಇದ್ದವರು ಒಂದು ದಿನ ನನಗೆ ಒಂದು ಕಡೆ ಕೆಲಸ ಬಂದಿದೆ. ಮೂರು ವಾರ ಅಲ್ಲೇ. ಆಮೇಲೆ ಮತ್ತೆ ಬರ್ತೀನಿ ಎಂದು ಹೋದವರು ಬರಲೇ ಇಲ್ಲ. ಫೋನ್ ಮಾಡಿದರೆ ಸ್ವಿಚ್ ಆಫ್ ಬರುತ್ತಿತ್ತು. ಓನರ್ ಕೇಳಿದ್ರೆ ತಮಗೂ ಗೊತ್ತಿಲ್ಲವೆಂದೇ ನುಣುಚಿಕೊಂಡರು. ಬೆಂಗಳೂರಿನ ವೇಗ ಅವರನ್ನು ಮರೆಯುವಂತೆ ಮಾಡಿದರೂ ಆಗಾಗ ನೆನಪಾದಾಗಲೆಲ್ಲ ಬದುಕು ಅದೆಷ್ಟು ವಿಚಿತ್ರ ಎನಿಸುತ್ತದೆ. ನಮ್ಮೊಂದಿಗೆ ಯಾರೋ ಜಿದ್ದಿಗೆ ಬಿದ್ದಿದ್ದಾರೆ ಮತ್ತು ನಮ್ಮ ಅಳತೆಗಳನ್ನು ಯೋಜನೆಗಳನ್ನು ಪ್ರತಿಬಾರಿ ಬುಡಮೇಲು ಮಾಡಿ ಮಜಾ ನೋಡುತ್ತಿದ್ದಾರೆ ಎನಿಸುತ್ತದೆ. ಹೀಗೆ ಮಿಂಚಿನಂತೆ ರೂಮಿಗೆ ಬಂದು ತಮ್ಮ ಕಥೆ ಹೇಳಿ ಮಾಯವಾದ ಸೋಮ ನನಗೆ ಮಿಸ್ಟಿರಿಯಸ್ ಸೋಮ ಎಂದೇ ಅನಿಸುತ್ತಾರೆ. ಅಂತೆಯೇ ಬದುಕು ಕೂಡ. ನಿಗೂಢ.