ಕನಸಿನ ವ್ಯಾಖ್ಯಾನ ಹೇಳಬಲ್ಲ ಪಂಡಿತರೆಲ್ಲ ಆಳಿಗೊಂದು ಕತೆ ಕಟ್ಟತೊಡಗಿದರು. ವರ್ಷಗಳು ಉರುಳಿದಂತೆ ಕನಸುಗಳು ನೆನಪಿನ ಯಾವುದೊ ಮೂಲೆಗೆ ಸೇರಿಬಿಡಬೇಕು. ಆದರೆ ನನ್ನ ಕತೆ ಹಾಗಾಗಲಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ನೆನಪಿನ ಮನೆಯ ಆ ಮೂಲೆಗೆ ಯಾರಾದರೂ ಬೆಳಕು ಹರಿಸುತ್ತಾರೆ. ಆಗ ಮತ್ತೆ ಕೆಲವು ದಿನಗಳು ಕೈ ಜಾರುತ್ತವೆ. ಕೈ ಜಾರುತ್ತವೆ ಎಂದರೆ ಮೋಸದ ಮಾತಾಗಬಹುದು. ಆ ದಿನಗಳಲ್ಲಿ ನನ್ನ ಚಟುವಟಿಕೆಗಳು ಬಹಳ ಚುರುಕಾಗಿರುತ್ತವೆ. ಪಟ್ಟಿಯಲ್ಲಿ ಬಾಕಿ ಉಳಿಸಿಕೊಂಡಿದ್ದ ಬೆಟ್ಟ ಗುಡ್ಡಗಳ ಸುತ್ತುವುದು. ರೈಲ್ವೇ ಸ್ಟೇಷನ್ ಗಳಲ್ಲಿ ರಾತ್ರಿ ನಿದ್ದೆ ಬಿಟ್ಟು ಪುಸ್ತಕ ಓದುವುದು. ಊರಿಂದೂರಿಗೆ ಅಲೆಯುವುದು.
ಸುನೈಫ್ ವಿಟ್ಲ ಬರೆದ ಕತೆ ಈ ಭಾನುವಾರದ ನಿಮ್ಮ ಓದಿಗೆ

 

ಅಮಾವಾಸ್ಯೆ ಕಳೆದ ಆ ಐದನೇ ದಿನ ಬಿದ್ದ ಕನಸು ಮೊದಲಿಗೆ ಭಯ ಹುಟ್ಟಿಸಲಿಲ್ಲ. ಬದಲಾಗಿ ಚಂದಿರನ ಕಂಡರೆ ಕುಣಿದು ಕುಪ್ಪಳಿಸುವ ಕಡಲಿನಂತೆ ಖುಷಿಯಿಂದ ತುಳುಕುತ್ತಿದ್ದೆ. ಕನಸಿನಲ್ಲಿ ಅದೇ ಆ ಬಾಲಚಂದ್ರ ಬಾನ ಇಳಿದು ಬಂದು ಹೆಗಲ ಏರಿ ಕೂತು ಬಿಟ್ಟಿದ್ದ. ಅಮ್ಮ ತುತ್ತು ತಿನ್ನಿಸುವಾಗ ಆಗಸಕ್ಕೆ ಬೆರಳು ನೀಡಿ ತೋರಿಸುತ್ತಿದ್ದ ನೆನಪು ಅದ್ಯಾವುದೋ ಮೂಲೆಯಿಂದ ಸುರುಳಿ ಬಿಚ್ಚಿತು. ಬಾಲಕಾಲದ ನೆನಪಿನಿಂದ ರೋಮಾಂಚನಗೊಂಡು ಮುಖ ಅರಳುತ್ತಿತ್ತು. ಅದನ್ನು ಅವನ ಕಿವಿಗೆ ಉಸುರಿದೆ. ಮುಗುಳ್ನಕ್ಕ. ಮತ್ತೆ ಸುಖ ದುಃಖ ಮಾತಾಡುತ್ತಾ ಕೂತ ನೆನಪು. ಅಷ್ಟರಲ್ಲಿ ನಿಧಾನಕ್ಕೆ ಗಂಟಲು ಗೀರಿದ ಅನುಭವ. ನೋವು ಎದೆಗಿಳಿಯಿತು. ಉಸಿರು ನಿಂತಿತು. ಮರು ಗಳಿಗೆ ಬೆನ್ನ ಹಿಂದೆ ಚೀರಿದ ಆ ಅಟ್ಟಹಾಸಕ್ಕೆ ಬೆಚ್ಚಿ ಎಚ್ಚರ ಆಗಿ ಅದೆಷ್ಟು ಕಾಲ ಕಳೆದರೂ ಆ ಕನಸು ಕಾಡುತ್ತಲೇ ಇತ್ತು. ಸಾಕ್ಷಾತ್ ಶಿವನೇ ಮುದ್ದಿಸಿ ಮುಡಿದ ಆ ಚಂದಿರ ಅದೇಕೆ ನನ್ನ ಕತ್ತು ಸೀಳಿ ಎದೆಗಿರಿದುಬಿಟ್ಟ! ಬೆನ್ನ ಹಿಂದೆ ಬೊಬ್ಬಿರಿದ ಆ ಧ್ವನಿ ಯಾರದ್ದು?

ಕನಸಿನ ವ್ಯಾಖ್ಯಾನ ಹೇಳಬಲ್ಲ ಪಂಡಿತರೆಲ್ಲ ಆಳಿಗೊಂದು ಕತೆ ಕಟ್ಟತೊಡಗಿದರು. ವರ್ಷಗಳು ಉರುಳಿದಂತೆ ಕನಸುಗಳು ನೆನಪಿನ ಯಾವುದೊ ಮೂಲೆಗೆ ಸೇರಿಬಿಡಬೇಕು. ಆದರೆ ನನ್ನ ಕತೆ ಹಾಗಾಗಲಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ನೆನಪಿನ ಮನೆಯ ಆ ಮೂಲೆಗೆ ಯಾರಾದರೂ ಬೆಳಕು ಹರಿಸುತ್ತಾರೆ. ಆಗ ಮತ್ತೆ ಕೆಲವು ದಿನಗಳು ಕೈ ಜಾರುತ್ತವೆ. ಕೈ ಜಾರುತ್ತವೆ ಎಂದರೆ ಮೋಸದ ಮಾತಾಗಬಹುದು. ಆ ದಿನಗಳಲ್ಲಿ ನನ್ನ ಚಟುವಟಿಕೆಗಳು ಬಹಳ ಚುರುಕಾಗಿರುತ್ತವೆ. ಪಟ್ಟಿಯಲ್ಲಿ ಬಾಕಿ ಉಳಿಸಿಕೊಂಡಿದ್ದ ಬೆಟ್ಟ ಗುಡ್ಡಗಳ ಸುತ್ತುವುದು. ರೈಲ್ವೇ ಸ್ಟೇಷನ್ ಗಳಲ್ಲಿ ರಾತ್ರಿ ನಿದ್ದೆ ಬಿಟ್ಟು ಪುಸ್ತಕ ಓದುವುದು. ಊರಿಂದೂರಿಗೆ ಅಲೆಯುವುದು. ಹೀಗೆ ದಿನಗಳು ಅನಾಯಾಸವಾಗಿ ಕಳೆಯುತ್ತವೆ. ಹೋದ ಊರಲ್ಲೆಲ್ಲ ಜನರು ಹುಡುಕಾಟದಲ್ಲಿ ತೊಡಗಿರುವುದು ಕಾಣಿಸುತ್ತದೆ. ಯಾಕೋ ಅವರ ಹುಡುಕಾಟದಲ್ಲಿ ನಾನು ಪಾಲುದಾರನಾಗುವುದಿಲ್ಲ. ಕಾಣೆಯಾದ ಆಟಿಕೆ ಹುಡುಕುವ ಮಗುವಿನಂತೆ ತುಟಿ ಮಡಚಿ ಬಿಕ್ಕಳಿಸುತ್ತಾ ನನ್ನದೇ ಹುಡುಕಾಟವನ್ನು ಮುಂದುವರಿಸುತ್ತೇನೆ; ಕಳೆದುಕೊಂಡದ್ದೇನು ಎಂಬುದರ ಪರಿವೆಯೇ ಇಲ್ಲದೆ!

ಹೀಗಿರುವಾಗ ಕೆಲ ದಿನಗಳ ಹಿಂದೆ ಒಬ್ಬ ದಾಯಿರದ ಮುದುಕನನ್ನು ಕಂಡೆ. ಆಗ ಮನಸ್ಸು ಮತ್ತೆ ಬುಗುರಿಯಾಗಿತ್ತು. ಊರ ಸಂತೆಯ ದೊಡ್ಡ ಮರದ ನೆರಳಿನಲ್ಲಿ ಅವ ನಿಂತು ಹಾಡುತ್ತಿದ್ದ. ಹತ್ತಿರ ಹೋಗಿ ಅವನ ಹಾಡಿನಲ್ಲಿ ಮೈಮರೆತು ನಿಂತು ಬಿಟ್ಟೆ. ಅಹದಾನವನೇ ಯಾ ಅಲ್ಲಾಹ್… ಸಮದನಾವನೆ ಯಾ ಅಲ್ಲಾಹ್.. ಅರಬ್ಬೀ ಮಿಶ್ರಿತ ತಮಿಳು ಹಾಡು ಮುಗಿದಾಗ ಎದೆಬುಗುರಿಯೂ ತಿರುಗುವುದ ಮರೆತು ಒಂದು ಕಡೆ ನಿಂತು ಬಿಟ್ಟಿತ್ತು. ದಣಿದ ಎದೆ ಏದುಸಿರು ಮುಗಿಸಿ ತಣಿಯುತ್ತಿತ್ತು. ಸೇರಿದ್ದ ಜನರು ಜೋಳಿಗೆಗೆ ಚಿಲ್ಲರೆ ಹಾಕಿದರು. ಹಿಂದೆಯೆಲ್ಲ ಮನೆ ಮನೆ ತಿರುಗಿ ಜೋಳಿಗೆ ತುಂಬಾ ಅಕ್ಕಿ ತುಂಬಿಸಿಕೊಳ್ಳುತ್ತಿದ್ದ ಈ ದರವೇಶಿಗಳು ಈಗ ಪುಡಿಗಾಸಿಗೆ ಹಾಡುತ್ತಾರಲ್ಲಾ ಎಂದೆನಿಸಿತು. ಸಂದಣಿ ಚದುರಿದ ಮೇಲೆ ಮೆಲ್ಲ ಅವನ ಹತ್ತಿರ ಹೋದೆ.

‘ಅಸ್ಸಲಾಂ ಅಲೈಕುಂ’. ತಲೆಯೆತ್ತಿ ಮುಖ ನೋಡಿದ. ಗಂಭೀರ ಮುಖಭಾವ ನಿಧಾನಕ್ಕೆ ಅರಳಿ ‘ವಅಲೈಕುಂ ಸಲಾಂ ಕಂದಾ’ ಎಂದ. “ಯಾವೂರು?” ಎಂದು ಕೇಳಬೇಕೆನಿಸಿತು. ದರವೇಶಿ ನಡೆದದ್ದೇ ದಾರಿ, ನಿಂತದ್ದೇ ಊರು ಎಂದು ನೆನಪಾಗಿ ಸುಮ್ಮನಾದೆ. ಈಗವನ ಮುಖದಲ್ಲಿ ಚಂದಿರ ಮೂಡಿದ್ದ. ‘ನಿನ್ನ ಚಿಂತೆ ನಾ ಬಲ್ಲೆ, ಬಾ ನನ್ನೊಂದಿಗೆ.’ ಎಂದು ಬಿರಬಿರನೆ ನಡೆದ. ಮಂತ್ರಮುಗ್ದನಂತೆ ಹಿಂಬಾಲಿಸಿದೆ. ಸುಮಾರು ಎರಡೂವರೆ ಕಿಲೋ ಮೀಟರ್. ಅವ ನಿಂತದ್ದು ಅರೆ ಬತ್ತಿದ ನದಿಯೊಂದರ ಬದಿಯಲ್ಲಿ.

‘ಈ ನದಿಯ ಕತೆ ಗೊತ್ತೇನು ನಿನಗೆ. ಮಳೆಗಾಲದಲ್ಲಿ ಮೈದುಂಬಿ ಹರಿಯುತ್ತದೆ. ಈಗ ನೋಡು, ಈ ನಡುಬೇಸಗೆಗೆ ಹೀಗೆ ಬಡಕಲಾಗುತ್ತದೆ. ಆದರೆ ಹರಿಯುತ್ತದೆ ನಿಧಾನಕ್ಕೆ.’ ಎಂದು ಹೇಳಿ ನನ್ನನ್ನೇ ನೋಡತೊಡಗಿದ. “ಇದನ್ನು ತೋರಿಸಲು ಇಷ್ಟು ದೂರ ನಡೆಸಿದನಾ ಈ ಮುದುಕ?” ಎಂದು ಅಂದುಕೊಳ್ಳುತ್ತಿರುವಾಗಲೇ ಅವ ಮಾತು ಮುಂದುವರಿಸಿದ.

ಊರ ಸಂತೆಯ ದೊಡ್ಡ ಮರದ ನೆರಳಿನಲ್ಲಿ ಅವ ನಿಂತು ಹಾಡುತ್ತಿದ್ದ. ಹತ್ತಿರ ಹೋಗಿ ಅವನ ಹಾಡಿನಲ್ಲಿ ಮೈಮರೆತು ನಿಂತು ಬಿಟ್ಟೆ. ಅಹದಾನವನೇ ಯಾ ಅಲ್ಲಾಹ್… ಸಮದನಾವನೆ ಯಾ ಅಲ್ಲಾಹ್.. ಅರಬ್ಬೀ ಮಿಶ್ರಿತ ತಮಿಳು ಹಾಡು ಮುಗಿದಾಗ ಎದೆಬುಗುರಿಯೂ ತಿರುಗುವುದ ಮರೆತು ಒಂದು ಕಡೆ ನಿಂತು ಬಿಟ್ಟಿತ್ತು.

‘ನಿನ್ನ ಕತೆ ಇದಕ್ಕಿಂತ ಭಿನ್ನವೆಂದು ಅನಿಸುತ್ತದೆಯೇ? ಎಂದೋ ಬಿದ್ದ ಕನಸೊಂದು ನೆನಪಾಗಿ ಮಳೆಗಾಲದ ನದಿಯಂತೆ ನೀನು ಭೋರ್ಗರೆಯುವೆ. ಅದು ಮರೆವಿನ ಪರದೆಯೊಳಗೆ ಮಾಯವಾದಾಗ ನಿನ್ನ ಮನಸು ಬತ್ತಿ ಹೋಗುತ್ತದೆ. ನಿನ್ನ ಮನಸ್ಸು ತಳಮಳಗೊಳ್ಳುವ ಆ ದಿನಗಳಲ್ಲಿ ನೀನು ಉತ್ಸಾಹದ ಚಿಲುಮೆಯಾಗಿರುವೆ. ಉಳಿದ ದಿನಗಳಲ್ಲಿ ತಿಂದುಂಡು ಬದುಕುವ ಬರಿಯ ಯುವಕನಾಗಿರುವೆ. ಈಗ ನೀನೇ ಹೇಳು. ಈ ಎರಡು ಅವಸ್ಥೆಗಳ ನಡುವೆ ನಿನ್ನ ನೆಮ್ಮದಿ ಯಾವುದರಲ್ಲಿದೆ?’

‘ಅಜ್ಜಾ, ನನ್ನ ಕನಸಿನ ಗುಟ್ಟು ನಿಮಗೆ ಹೇಗೆ ತಿಳಿಯಿತೆಂದು ನನಗೆ ಗೊತ್ತಿಲ್ಲ. ನನಗಿಷ್ಟು ಮಾತ್ರ ಹೇಳಿ ಸಾಕು. ಆ ಕನಸಿನ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವೇ?’ ಸಂತೆಯ ಮರದಡಿಯಲ್ಲಿ ಈ ಮುದುಕನನ್ನು ಕಂಡಾಗಿನಿಂದ ಒಳಗಡೆ ಕುದಿಯುತ್ತಿದ್ದ ಪ್ರಶ್ನೆ ಇದೊಂದೇ. ಆತನ ಉಳಿದ ಮಾತುಗಳೆಲ್ಲ ನನ್ನ ತಲೆಗೆ ಇಳಿಯಲೇ ಇಲ್ಲ.

‘ಇಲ್ಲಿ ಬಾ’ ಎಂದು ಹೆಗಲಿಗೆ ಕೈ ಹಾಕಿದ ಆ ದರ್ವೇಶಿ ನಿಡುಗಾಲದ ಗೆಳೆಯನೆಂಬಂತೆ ಮಾತು ಮುಂದುವರಿಸಿದ.

‘ನೀನು ಈ ಕಾಲವೆಲ್ಲ ಪಟ್ಟ ಸಂಕಟ ನನಗೆ ತಿಳಿದಿದೆ. ನೀನು ಅದರಿಂದ ಮುಕ್ತಿ ಪಡೆಯಬೇಕೆಂದು ಇನ್ನಿಲ್ಲದ ಸಾಹಸವನ್ನೂ ಮಾಡಿರುವೆ. ಈಗ ನಿನಗೆ ತೃಪ್ತಿಯಾಗುವಂತಹ ಅರ್ಥವನ್ನು ಕಟ್ಟಿಕೊಡಲೂ ನನಗೆ ಸಾಧ್ಯವಿದೆ.’ ನನ್ನ ದೇಹ ಪೂರ್ತಿ ಕಿವಿಯಾದ ಕ್ಷಣವದು. ವರ್ಷಗಳ ಕಾಲದ ಹುಡುಕಾಟಕ್ಕೆ ಸಿಗುತ್ತಿರುವ ಬಹುಮಾನ. ಬೇಸಗೆಯ ಆ ನದಿಯಂತೆಯೇ ಆತನ ಮಾತುಗಳು ಸಾವಧಾನವಾಗಿ ಹರಿಯತೊಡಗಿತು.

‘ಆದರೆ ಮಗೂ, ಅದರ ನಂತರ ನೀನೇನಾಗುವೆ? ನಿನಗೆ ಬೇಕಾಗಿರುವುದನ್ನು ನನ್ನಿಂದ ನೀನು ಪಡೆದುಕೊಳ್ಳುವೆ ಎಂದಲ್ಲದೆ ನೀನು ನಿಜದಲ್ಲಿ ನಿನಗೆ ಬೇಕಾಗಿರುವುದನ್ನು ಗಳಿಸಿಕೊಳ್ಳುವುದಿಲ್ಲವಲ್ಲ. ನಾನು ಹೇಳಿದ್ದೇ ನಿಜವೆಂದು ನೀನು ನಂಬಿ ಬಿಡುತ್ತೀಯ ಎಂದಾದರೆ ನೀನೆಂತ ಮೈಗಳ್ಳನಾಗುತ್ತೀಯಾ!

ನಿನ್ನ ಸತ್ಯವನ್ನು ನೀನೇ ಕಂಡುಕೊಳ್ಳಬೇಕು. ಹುಲ್ಲಿನ ಬಣವೆಗೆ ಬಿದ್ದ ಬೆಂಕಿಯನ್ನು ಆರಿಸುವಂತ ಕೆಲಸ ಅದು. ಬೆಂಕಿ ಆರಿದ ಮೇಲೆ ಉಳಿದದ್ದು ನಿನ್ನ ಪಾಲು; ನಿನ್ನ ಬಾಳು.’

ಹೆಗಲ ಮೇಲಿದ್ದ ಕೈ ತಲೆ ನೇವರಿಸಿತು. ಮಾತುಗಳು ಕಿವಿಗೆ ಬೀಳುತ್ತಿದ್ದವು. ಆದರೆ ದೇಹ ದಣಿದಂತೆಣಿಸಿ ತಲೆ ಸುತ್ತು ಬಂದು ಕಣ್ಣು ಕತ್ತಲಾಗತೊಡಗಿತು. ಒಂದು ಕ್ಷಣ ನನಗೇನಾಗುತ್ತಿದೆ ಎಂದು ಯೋಚಿಸಲೂ ಆಗದಷ್ಟು ದಣಿವು. ಸುತ್ತಲೂ ಕತ್ತಲು. ನಿದ್ದೆ. ಕನಸು. ಚಂದಿರ. ತುಂಬಿ ಹರಿವ ನದಿ. ರಕ್ತ. ಬಡಕಲಾದ ನದಿ. ಆದರೂ ಹರಿಯುತ್ತಿದೆ. ನಿಧಾನಕ್ಕೆ. ಆವೇಶವಿಲ್ಲದೆ. ಉದ್ರೇಕವಿಲ್ಲದೆ. ಈಗ ಕಾಡುವ ಕನಸು ನನ್ನ ಮುಂದೆ ತಿಳಿಯಾಗಿ ಹರಿಯುತ್ತಿತ್ತು. ಬೊಬ್ಬಿರಿದ ಆ ಧ್ವನಿ ಮಮತೆಯಿಂದ ಎದೆ ಬಡಿತದೊಂದಿಗೆ ಮಿಂದಿತ್ತು.

ಎಚ್ಚರ ಆದಾಗ ನಾನಿನ್ನೂ ಆ ನದಿ ದಡದಲ್ಲೇ ನಿಂತಿದ್ದೆ. ಬಲಗೈಯಲ್ಲೊಂದು ದಾಯಿರವಿತ್ತು, ತೋಳಿನಲ್ಲೊಂದು ಜೋಳಿಗೆ ನೇತು ಬಿದ್ದಿತ್ತು. ಮುದಿ ದರ್ವೇಶಿ ಕಾಣೆಯಾಗಿದ್ದ.