ವಿಮರ್ಶಾ ಕ್ಷೇತ್ರದಲ್ಲಿ ಕಣ್ಣನ್ನು ಸೆಳೆಯುವಂತಹ ಬೆಳವಣಿಗೆ ಆಗಿದೆ. ಸೃಜನಶೀಲ ಸಾಹಿತ್ಯದ ಹಿಂದೆಯೂ ಪ್ರಜ್ಞಾಪೂರ್ವಕ ಚಿಂತನೆ ಇರುವುದು ಅನಿವಾರ್ಯವಾದ ಯುಗದಲ್ಲಿ ಸಾಹಿತ್ಯ ವಿಮರ್ಶೆ ಬೆಳೆದಷ್ಟೂ ಸೃಜನಶೀಲ ಸಾಹಿತ್ಯಕ್ಕೂ ಲಾಭ. ಜಿ.ಎಚ್. ನಾಯಕ, ಕೆ.ವಿ. ನಾರಾಯಣ, ಎಚ್.ಎಸ್. ರಾಘವೇಂದ್ರರಾವ್, ರಾಜೇಂದ್ರ ಚನ್ನಿ, ಡಿ.ಆರ್. ನಾಗರಾಜ ಮೊದಲಾದವರ ವಿಮರ್ಶೆಯ ಬರಹಗಳನ್ನು ಓದಿದಾಗ ವಿಮರ್ಶೆಯ ಉಪಕರಣಗಳು ಎಷ್ಟು ಸೂಕ್ಷ್ಮವಾಗಿವೆ ಎನ್ನುವುದು ಸಂತೋಷವನ್ನುಂಟು ಮಾಡುತ್ತದೆ. ಹಲವೊಮ್ಮೆ ಈ ವಿಶ್ಲೇಷಣೆಯಲ್ಲಿ ಬೌದ್ಧಿಕ ಅಂಶ ತಾನೇತಾನಾಗಿ, ರಸಾ ಸ್ವಾದನೆ ಹಿಂದುಳಿಯುತ್ತಿದೆಯೋ ಎಂದು ಆತಂಕವಾಗುತ್ತದೆ.
ಪ್ರೊ. ಎಲ್.ಎಸ್. ಶೇಷಗಿರಿರಾವ್ ಬರೆದ “ಆಧುನಿಕ ಕನ್ನಡ ಸಾಹಿತ್ಯ” ಕೃತಿಯಿಂದ ಒಂದು ಲೇಖನ ನಿಮ್ಮ ಓದಿಗೆ

1980ರ ದಶಕದ ಸಾಹಿತ್ಯದ ಹಿಂದೆ ತುರ್ತು ಪರಿಸ್ಥಿತಿಯ ಅನುಭವವಿದೆ. ಸ್ವಾತಂತ್ರ್ಯದ ಹೋರಾಟದ ಸ್ಮರಣೆ ದೂರವಾಗುತ್ತ ಬಂದಿದ್ದು, ಬದುಕಿನ ಎಷ್ಟೋ ಮೌಲಿಕ ವರಗಳನ್ನು, `ಏನು ಮಹಾ, ಬದುಕಿಗೆ ಸಹಜವೇ’ ಎಂದು ಪರಿಗಣಿಸುವ ಪರಿಸ್ಥಿತಿಯಲ್ಲಿ ನಾವಿದ್ದೆವು- We took some of the most precious things in life for granted.. ಈ ದೇಶದ ಅತ್ಯುಚ್ಚ ನ್ಯಾಯಾಲಯ ತನ್ನ ಒಂದು ತೀರ್ಪಿನಲ್ಲಿ, ತುರ್ತು ಪರಿಸ್ಥಿತಿಯಲ್ಲಿ ಬದುಕಿರುವ ಸ್ವಾತಂತ್ರ್ಯ, ರೈಟ್ ಟು ಲೈಫ್ ಸಹ ಮೂಲಭೂತ ಹಕ್ಕಲ್ಲ ಎಂದು ಘೋಷಿಸಿತು. ನಾಗರಿಕ ಮಾನವನ ಬದುಕಿನ ಅತಿ ಬೆಲೆಬಾಳುವ ಅಂಶಗಳು ಎಷ್ಟು ಸುಲಭವಾಗಿ ಕೈ ಜಾರಿ ಹೋಗಬಹುದು ಎನ್ನುವುದು ಬೆಂಕಿಯ ಅಕ್ಷರಗಳಲ್ಲಿ ಮನಸ್ಸಿನ ಮೇಲೆ ದಾಖಲೆಯಾದದ್ದು, `ದಿ ಮಿಡ್‌ನೈಟ್ ನಾಕ್ ಆನ್ ದಿ ಡೋರ್’ ನಮಗೂ ವಾಸ್ತವವಾದದ್ದು ತುರ್ತು ಪರಿಸ್ಥಿತಿಯಲ್ಲಿ.
1980ರ ದಶಕದಲ್ಲಿನ ಹಲವು ಬೆಳವಣಿಗೆಗಳಲ್ಲಿ ಎರಡು-ಮೂರು ನನಗೆ ಈ ಹಿನ್ನೆಲೆಯಲ್ಲಿ ಅರ್ಥವತ್ತಾಗಿ ಕಂಡಿವೆ.

(ಪ್ರೊ. ಎಲ್.ಎಸ್. ಶೇಷಗಿರಿರಾವ್)

ನನ್ನ ದೃಷ್ಟಿಯಲ್ಲಿ, 80ರ ದಶಕದ ದೊಡ್ಡ ಸಾಧನೆ ಎಂದರೆ ಸಾಹಿತ್ಯದ ಸಹನೆಯ ಬೆಳವಣಿಗೆ. ಸುಮಾರು 1945 ರಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ಘರ್ಷಣೆ, ಒಂದು ಪಂಥದ ಕಟು ಟೀಕೆ, ನಿಜವಾದ ಸಾಹಿತ್ಯ ತಮ್ಮ ಪಂಥದ ಸರ್ವಮಾನ್ಯ ಎನ್ನುವ ಘೋಷಣೆ ಇವು ತುಂಬಿದ್ದು, ಈ ದಶಕದಲ್ಲಿ ಪಂಥಗಳು ತಮ್ಮ ತಾತ್ವಿಕ ನಿಲುವನ್ನು ಬಿಟ್ಟುಕೊಡದಿದ್ದರೂ ತಮ್ಮ ಪಂಥದಾಚೆಗಿನ ಸಾಹಿತಿಗಳನ್ನು, ಸಾಹಿತ್ಯ ಕೃತಿಗಳನ್ನು ಗುರುತಿಸುವ ಮನೋಧರ್ಮ ಬೆಳೆದದ್ದು ಅತ್ಯಂತ ಆರೋಗ್ಯಕರವಾದ ಬೆಳವಣಿಗೆ. ಮಾಸ್ತಿ, ಬೇಂದ್ರೆ, ಕಾರಂತ, ಕುವೆಂಪು, ಕೆ.ಎಸ್. ನರಸಿಂಹಸ್ವಾಮಿ, ತ.ರಾ.ಸು., ನಿರಂಜನ, ಚದುರಂಗ, ಗೋಪಾಲಕೃಷ್ಣ ಅಡಿಗ, ಅನಂತಮೂರ್ತಿ, ಶ್ರೀರಂಗ ಮೊದಲಾದವರನ್ನು ಕುರಿತು ಈ ದಶಕದಲ್ಲಿ ಬಂದಿರುವ ವಿಮರ್ಶಾ ಲೇಖನಗಳು, ಅವರಿಗೆ ಸಂಬಂಧಿಸಿದಂತೆ ಮುಖ್ಯ ಸಂದರ್ಭಗಳಲ್ಲಿ ಭಾಗವಹಿಸಿ ಮೆಚ್ಚಿಗೆಯ ಮಾತನ್ನಾಡಿದ ಸಾಹಿತಿಗಳು- ಈ ಅಂಶಗಳನ್ನು ಗಮನಿಸಿದಾಗ ಮೊದಲಿನ ಅಸಹನೆ ಕಡಮೆಯಾಗಿದೆ ಎನ್ನುವುದು ಸ್ಪಷ್ಟ.

ಒಂದು ಆಕಸ್ಮಿಕವೂ ಈ ಬೆಳವಣಿಗೆಗೆ ಕಾರಣವಾಗಿರಬಹುದು. ನವೋದಯದ ಶಿಲ್ಪಿಗಳಲ್ಲಿ ಹಲವರ ಜನ್ಮಶತಾಬ್ದಿಗಳು ಈ ದಶಕದಲ್ಲಿ ಬಂದವು. ಫ.ಗು. ಹಳಕಟ್ಟಿ, ಆಲೂರು ವೆಂಕಟರಾಯರು, ಉತ್ತಂಗಿ ಚೆನ್ನಪ್ಪ, ಗೋವಿಂದ ಪೈ, ನಾರಾಯಣರಾವ್ ಹುಯಿಲಗೋಳ, ಬಿ.ಎಂ.ಶ್ರೀ., ಟಿ.ಪಿ. ಕೈಲಾಸಂ, ತಳುಕಿನ ವೆಂಕಣ್ಣಯ್ಯ, ಮುಳಿಯ ತಿಮ್ಮಪ್ಪಯ್ಯ, ಸಾಲಿ ರಾಮಚಂದ್ರರಾಯ- ಹೀಗೆ ನಾಡಿನ ವಿವಿಧ ಭಾಗಗಳಲ್ಲಿ ಕನ್ನಡದ ಅಭಿಮಾನಕ್ಕೆ, ಸೃಜನ ಪ್ರತಿಭೆಗೆ ಉಸಿರು ನೀಡಿದವರ ಶತಮಾನೋತ್ಸವಗಳು ಈ ದಶಕದಲ್ಲಿ ಬಂದದ್ದು ಹಿಂದಿನ ತಲೆಮಾರುಗಳ ಸಾಧನೆಯನ್ನು ಗೌರವಪೂರ್ವಕವಾಗಿ ಪುನರ್‌ವಿಮರ್ಶಿಸುವ ಸಂದರ್ಭ ಒದಗಿತು.

ಮುಕ್ತ ಪ್ರತಿಭೆಯು ಸೃಷ್ಟಿಸಿದ ಸಂಪತ್ತು ಮತ್ತೆ ದೃಷ್ಟಿಸಿ ನೋಡಬೇಕಾದಂಥದು. `ಲಿರಿಕಲ್’ ಮನೋಧರ್ಮ ಮತ್ತೆ ಕಾವ್ಯದಲ್ಲಿ ಕಾಣಿಸಿಕೊಂಡದ್ದು ಒಂದು ಸಂತೋಷಕರ ಬೆಳವಣಿಗೆ. ಈ ದಶಕದ ಪ್ರಾರಂಭದಲ್ಲಿ ಪ್ರಕಟವಾದ ಬಾಲೂರಾಯರ `ಸೂರ್ಯ ಇವನೊಬ್ಬನೇ’ ಇಂತಹ `ಲಿರಿಕಲ್’ ಸ್ಪಂದನ ಸೃಷ್ಟಿಸಿದ ವಿಶಿಷ್ಟ ಕವನ ಸಂಕಲನ. ಭಾಷೆಯ ನಾದಭಾಗ್ಯವನ್ನು ಬಳಸಿಕೊಂಡು, ಕಾವ್ಯಕ್ಕೆ ಹೊಂದುವ ಗೇಯಾಂಶವನ್ನು ಬಳಸಿಕೊಳ್ಳುವುದು ಸಾಹಿತ್ಯಕ ಅಪರಾಧವಲ್ಲ ಎಂದು ಕೆಲವರಾದರೂ ಬಾಯಿಬಿಟ್ಟು ಹೇಳಿ, ಕವನಗಳನ್ನು ಬರೆದು ಹಾಡು ಸಹಜವಾಗಿ ತನ್ನ ನಾಲಿಗೆಯಲ್ಲಿ ಮೂಡುವ ಪ್ರತಿಭೆಗೆ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಕವಿಚೇತನಕ್ಕೆ ಮತ್ತೆ ಹಾಡುವ ಬಯಕೆ ಮೂಡಿದ್ದು ಒಂದು ಮುಖ್ಯ ಸಂಗತಿ. ಕೆ.ಎಸ್.ನ., ಎಸ್.ಆರ್. ಎಕ್ಕುಂಡಿಯವರು ಹಿರಿಯ ತಲೆಮಾರಿನವರು. ಎಚ್.ಎಸ್. ವೆಂಕಟೇಶಮೂರ್ತಿ, ಸುಮತೀಂದ್ರ ನಾಡಿಗರು ಮಧ್ಯದ ತಲೆಮಾರಿನವರು. `ಲಿರಿಕಲ್ ಇಂಪಲ್ಸ್’ಗೆ ದನಿ ಕೊಟ್ಟರು. `ದಾಂಪತ್ಯ ಗೀತೆ’ಯಂತೆ ಒಲವನ್ನು ಒಪ್ಪಿಕೊಂಡು ಅದರ ಮೂಲಕ ವ್ಯಕ್ತಿತ್ವ ಶೋಧನೆಗೆ ತೊಡಗುವ (`ಸಖೀಗೀತ’ದ ನೆನಪು ಕೊಡುವ) ಕೃತಿ ಬಂದಿತು. ಮತ್ತೆ ಲಲಿತಪ್ರಬಂಧ ಸಾಹಿತಿಗಳನ್ನು ಸೆಳೆಯುತ್ತಿದೆ. ಇದೆಲ್ಲ ಪಂಥಗಳ ಪಂಜರದಿಂದ ಹೊರಕ್ಕೆ ಬಂದು ಬದುಕಿಗೆ ಪ್ರೀತಿಯಿಂದ ಸ್ಪಂದಿಸುವ, ಭಾವ ಎಂದರೆ ನಾಚಿಕೊಳ್ಳಬೇಕಾಗಿಲ್ಲ ಎನ್ನುವುದನ್ನು ಗುರುತಿಸುವ ‘ಲಿರಿಕಲ್ ಇಂಪಲ್ಸ್’ನ ಅಭಿವ್ಯಕ್ತಿಗಳು.

ಎಂಬತ್ತರ ದಶಕದಲ್ಲಿ ಕಂಡ ಸಹನೆಯಿಂದಾಗಿ ಹಿಂದಿನ ಎಲ್ಲ ಪಂಥಗಳ ಸಾಧನೆ ಕನ್ನಡದಲ್ಲಿ ಫಲ ಕೊಡುತ್ತಿದೆ. ಉದಾಹರಣೆಗೆ, ಇಂದಿನ ಭಾವಗೀತೆ ನವೋದಯದ ನೆಲದಿಂದ ಬಂದದ್ದಾದರೂ ನವ್ಯದ ಗಾಳಿ, ಬೆಳಕುಗಳನ್ನು ಅರಗಿಸಿಕೊಂಡದ್ದು. ಛಂದಸ್ಸು, ಭಾಷೆ ಇದನ್ನು ಸಾರುತ್ತವೆ. `ಮುಕ್ತ’ ಕಾದಂಬರಿ, ಪಾತ್ರಗಳನ್ನು ವ್ಯಾವಹಾರಿಕ ಜಗತ್ತಿನಲ್ಲೂ ಒಂದು ನೆಲೆಗೆ ತಲುಪಿಸದೆ, `ಥೀಮ್’ನ ಶೋಧನೆಗೆ ಮುಡಿಪಾದ ಕಾದಂಬರಿ. ಸಮಾಜ ಜೀವಿಯಾದ ಮನುಷ್ಯ ಮತ್ತೆ ಸಾಹಿತ್ಯದ ಪ್ರಮುಖ ವಸ್ತುವಾಗುತ್ತಿದ್ದಾನೆ. ಪ್ರಗತಿಶೀಲ ಸಾಹಿತ್ಯ-ಸಾಹಿತಿಗಳಿಗೆ ಮತ್ತೆ ದೊರೆತ ಮನ್ನಣೆ ಸಮಾಜ ಜೀವಿಯಾದ ಮನುಷ್ಯನಲ್ಲಿ ಮರುಕಳಿಸಿದ ಆಸಕ್ತಿಯ ದ್ಯೋತಕ. ಬಂಡಾಯ ದಲಿತ ಪಂಥ ಈ ದಶಕದಲ್ಲಿ ಗರಿಗೂಡಿದ್ದು ಅತ್ಯಂತ ಸಹಜ. `ಆಧುನಿಕ’ರಾಗಿ `ಸಮಕಾಲೀನ ಪ್ರಸ್ತುತತೆ’ ಇರುವ ಸಾಹಿತ್ಯ ಸೃಷ್ಟಿ ಮಾಡಿ ಅನಾಥಪ್ರಜ್ಞೆಯ, ವ್ಯಕ್ತಿತ್ವದನ್ವೇಷಣೆಯ ಸಾಹಿತ್ಯವನ್ನು ಸೃಷ್ಟಿ ಮಾಡಿದವರು ವ್ಯಕ್ತಿ – ಸಮಾಜಗಳ ಸಂಬಂಧದತ್ತ ಕಲ್ಪನೆಯ ಕಣ್ಣನ್ನು ಹೊರಳಿಸಿದರು ಎನ್ನುವುದು ಕುತೂಹಲದ ಸಂಗತಿ. `ಬಿರುಕು’ ಬರೆದ ಲೇಖನಿ ‘ಮುಸ್ಸಂಜೆಯ ಕಥಾ ಪ್ರಸಂಗ’ವನ್ನು ಬರೆಯುತ್ತದೆ. ನವ್ಯ ಕಥೆಗಳನ್ನು ಕೊಟ್ಟ ಲೇಖನಿ `ಕಥೆಯಲ್ಲಿ ಬಂದಾತ ಮನೆಗೂ ಬಂದು ಬಾಗಿಲು ತಟ್ಟಿದ’ ಬರೆಯುತ್ತದೆ. ಪೂರ್ಣಚಂದ್ರ ತೇಜಸ್ವಿಯವರ ವೈಯಕ್ತಿಕ ಪ್ರತಿಭೆಯನ್ನು ಗುರುತಿಸಿಯೂ ಅವರು `ಕರ್ವಾಲೊ’ ಮತ್ತು `ಚಿದಂಬರ ರಹಸ್ಯ’ಗಳನ್ನು ಬರೆದದ್ದು ಆಕಸ್ಮಿಕವೂ ಅಲ್ಲ, ವೈಯಕ್ತಿಕ ಒಲವು ಮಾತ್ರವೂ ಅಲ್ಲ ಎಂದು ನನಗೆ ತೋರುತ್ತದೆ. ಆಲನಹಳ್ಳಿ ಶ್ರೀಕೃಷ್ಣ `ಭುಜಂಗಯ್ಯನ ದಶಾವತಾರಗಳ’ನ್ನು ಬರೆದದ್ದೂ, ಸಮುದಾಯದ ಮಧ್ಯೆ ಇದ್ದೂ ಆ ಬದುಕಿನ ಸಿಹಿಯನ್ನುಂಡು ಅದೇ ಸಮುದಾಯದೊಂದಿಗೆ ಗುದ್ದಾಡಿ ಪರಿಣತಿಯ ಹಾದಿಯಲ್ಲಿ ಸಾಗುವ ಚೈತನ್ಯದ ಕಥೆಯನ್ನು ಹೇಳಿದ್ದೂ ಆಕಸ್ಮಿಕವಲ್ಲ. ಈ ದಶಕದಲ್ಲಿ ಅನುವಾದವಾದ ಸಾಹಿತ್ಯವನ್ನು ಗಮನಿಸಿದರೂ ಒಟ್ಟಿನಲ್ಲಿ ಕನ್ನಡ ಸಾಹಿತ್ಯದ ಒಲವು ಎತ್ತಕಡೆಗಿತ್ತು ಎನ್ನುವುದು ಸ್ಪಷ್ಟವಾಗುತ್ತದೆ. ಇಂಗ್ಲೆಂಡ್, ಅಮೆರಿಕ, ರಷ್ಯಗಳ ಸಾಹಿತ್ಯ ಕೃತಿಗಳೇ ಬಹುಮಟ್ಟಿಗೆ ಕನ್ನಡದಲ್ಲಿ ಅವತರಿಸಿದ್ದುದು ಹೋಗಿ ಆಫ್ರಿಕದ ಸಾಹಿತ್ಯ, ಲ್ಯಾಟಿನ್ ಅಮೆರಿಕದ ಸಾಹಿತ್ಯ, ಇಸ್ರೇಲಿನ ಸಾಹಿತ್ಯ ಇವುಗಳಿಂದಲೂ ಕೊಡುಗೆಗಳು ಬಂದವು. ಹೋರಾಟದ ಸಾಹಿತ್ಯ ಅನುವಾದಕರ ಕಣ್ಣನ್ನು ಸೆಳೆಯಿತು. ಸಾಹಿತ್ಯದ ವಸ್ತುಗಳಾಗಿ ವಸ್ತು ಮತ್ತು ಸಮಾಜಗಳ ಸಮತೋಲನವನ್ನು ಮತ್ತೆ ಸ್ಥಾಪಿಸಿದ್ದು ಒಂದು ಸಾಧನೆ ಎಂದು ನನಗೆ ತೋರುತ್ತದೆ.

ನಾಗರಿಕ ಮಾನವನ ಬದುಕಿನ ಅತಿ ಬೆಲೆಬಾಳುವ ಅಂಶಗಳು ಎಷ್ಟು ಸುಲಭವಾಗಿ ಕೈ ಜಾರಿ ಹೋಗಬಹುದು ಎನ್ನುವುದು ಬೆಂಕಿಯ ಅಕ್ಷರಗಳಲ್ಲಿ ಮನಸ್ಸಿನ ಮೇಲೆ ದಾಖಲೆಯಾದದ್ದು, `ದಿ ಮಿಡ್‌ನೈಟ್ ನಾಕ್ ಆನ್ ದಿ ಡೋರ್’ ನಮಗೂ ವಾಸ್ತವವಾದದ್ದು ತುರ್ತು ಪರಿಸ್ಥಿತಿಯಲ್ಲಿ. 1980ರ ದಶಕದಲ್ಲಿನ ಹಲವು ಬೆಳವಣಿಗೆಗಳಲ್ಲಿ ಎರಡು-ಮೂರು ನನಗೆ ಈ ಹಿನ್ನೆಲೆಯಲ್ಲಿ ಅರ್ಥವತ್ತಾಗಿ ಕಂಡಿವೆ.

ವ್ಯಕ್ತಿ-ಸಮಾಜಗಳ ಸಂಬಂಧದ ಸಾಹಿತ್ಯಕ ನಿರೂಪಣೆ ಹೆಚ್ಚು ಹೆಚ್ಚು ಸೂಕ್ಷ ್ಮ ವಾಗುತ್ತಿದೆ ಎಂದು ನನ್ನ ಭಾವನೆ. ಪಂಥಗಳ ಪಂಜರದಿಂದ ಪ್ರತಿಭೆ ಮುಕ್ತವಾದರೂ ಇದಕ್ಕೆ ಒಂದು ಕಾರಣ ಚಿತ್ತಾಲರ ಕಥೆಗಳು, ವ್ಯಾಸರಾಯ ಬಲ್ಲಾಳರ `ಬಂಡಾಯ’, ತೇಜಸ್ವಿಯವರ `ಚಿದಂಬರ ರಹಸ್ಯ’, ದೇವನೂರು ಮಹಾದೇವರ `ಒಡಲಾಳ’ ಇಂತಹ ಅನೇಕ ಕೃತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಮಾತನ್ನು ಹೇಳುತ್ತಿದ್ದೇನೆ. ಈ ಸಂಬಂಧದ ಸೂಕ್ಷ್ಮಾತಿಸೂಕ್ಷ್ಮಾತಿಗಳನ್ನು, ಯಾವುದೇ ಪೂರ್ವ ನಿರ್ಧಾರಿತ ಕೋನದಿಂದಲ್ಲದೆ, ನಿರ್ಲಿಪ್ತವಾಗಿ ಕಂಡುಕೊಳ್ಳುವ ಪ್ರಯತ್ನ ಈ ಕೃತಿಗಳ ಸಂಕೇತದ ಬಳಕೆ, ಪಾತ್ರಸೃಷ್ಟಿ, ನಿರೂಪಣೆಯ ದಾಟಿ, ಭಾವವನ್ನು ಬಿಡದೆ ಭಾವಾತಿರೇಕಕ್ಕೆ ಎಡೆಗೊಡದೆ ಅನುಭವವನ್ನು ಕಾಣುವ ರೀತಿ ಇವುಗಳಲ್ಲಿ ಕಾಣುತ್ತದೆ. ಪ್ರಗತಿಶೀಲ ಸಾಹಿತ್ಯದ ಕೃತಿಗಳು, ಬಂಡಾಯ-ದಲಿತ ಸಾಹಿತ್ಯದ ಪ್ರಾರಂಭದ ಕೃತಿಗಳೊಂದಿಗೆ ಇವನ್ನು ಹೋಲಿಸಿದಾಗ ಬರಹಗಾರ ಅನುಭವವನ್ನು ಸಾಕಷ್ಟು ದೂರ ಇಡುವುದರಲ್ಲಿ, ನಿರೂಪಣೆಯಲ್ಲಿ ಸಮಗ್ರ ದೃಷ್ಟಿಯನ್ನು ಬೆಳೆಸಿಕೊಳ್ಳುವುದರಲ್ಲಿ ಸಾಧಿಸಿರುವ ಯಶಸ್ಸು ಸ್ಪಷ್ಟವಾಗುತ್ತದೆ.

ವಿಮರ್ಶಾ ಕ್ಷೇತ್ರದಲ್ಲಿ ಕಣ್ಣನ್ನು ಸೆಳೆಯುವಂತಹ ಬೆಳವಣಿಗೆ ಆಗಿದೆ. ಸೃಜನಶೀಲ ಸಾಹಿತ್ಯದ ಹಿಂದೆಯೂ ಪ್ರಜ್ಞಾಪೂರ್ವಕ ಚಿಂತನೆ ಇರುವುದು ಅನಿವಾರ್ಯವಾದ ಯುಗದಲ್ಲಿ ಸಾಹಿತ್ಯ ವಿಮರ್ಶೆ ಬೆಳೆದಷ್ಟೂ ಸೃಜನಶೀಲ ಸಾಹಿತ್ಯಕ್ಕೂ ಲಾಭ. ಜಿ.ಎಚ್. ನಾಯಕ, ಕೆ.ವಿ. ನಾರಾಯಣ, ಎಚ್.ಎಸ್. ರಾಘವೇಂದ್ರರಾವ್, ರಾಜೇಂದ್ರ ಚನ್ನಿ, ಡಿ.ಆರ್. ನಾಗರಾಜ ಮೊದಲಾದವರ ವಿಮರ್ಶೆಯ ಬರಹಗಳನ್ನು ಓದಿದಾಗ ವಿಮರ್ಶೆಯ ಉಪಕರಣಗಳು ಎಷ್ಟು ಸೂಕ್ಷ್ಮವಾಗಿವೆ ಎನ್ನುವುದು ಸಂತೋಷವನ್ನುಂಟು ಮಾಡುತ್ತದೆ. ಹಲವೊಮ್ಮೆ ಈ ವಿಶ್ಲೇಷಣೆಯಲ್ಲಿ ಬೌದ್ಧಿಕ ಅಂಶ ತಾನೇತಾನಾಗಿ, ರಸಾ ಸ್ವಾದನೆ ಹಿಂದುಳಿಯುತ್ತಿದೆಯೋ ಎಂದು ಆತಂಕವಾಗುತ್ತದೆ. ಅತ್ಯುಚ್ಚ ಮಟ್ಟದ ಅತಿ ಸೂಕ್ಷ್ಮ ವಿಮರ್ಶೆ ಅನಿವಾರ್ಯವಾಗಿ ಕೆಲವರಿಗೆ ಸೀಮಿತವಾಗುತ್ತದೆ: ಇದು ಎಲ್ಲ ದೇಶ ಎಲ್ಲ ಯುಗಗಳಲ್ಲಿ ಅನಿವಾರ್ಯ. ಆದರೆ ಈ ವಿಮರ್ಶೆ ಒಂದು ವಾತಾವರಣವನ್ನು ನಿರ್ಮಿಸುತ್ತದೆ. ಕೆಲವು ವಿಚಾರ (ಐಡಿಯಾ) ಗಳನ್ನು ತೇಲಿಬಿಡುತ್ತದೆ. ಇವು ಸಾಕಷ್ಟು ಮಟ್ಟಿಗೆ ಸೃಜನ ಸಾಹಿತ್ಯವನ್ನು ಪ್ರಬಲವಾಗಿ ಪ್ರಭಾವಿಸುತ್ತವೆ. ಈ ದೃಷ್ಟಿಯಿಂದ ಉಚ್ಚ ವಿಮರ್ಶೆಯ `ಅಪ್ರೋಚ್’ ಮುಖ್ಯವಾಗುತ್ತದೆ. ಕಟ್ಟಕಡೆಯದಾಗಿ ಸಾಹಿತ್ಯದ ಓದು ಆನಂದಕರವಾದ ಅನುಭವವಾಗಬೇಕು. ಈ ಆನಂದ ಹೆಚ್ಚು ಹೆಚ್ಚು ಸುಸಂಸ್ಕೃತವಾಗುತ್ತ ಭಾವ-ಬುದ್ಧಿಗಳೆರಡನ್ನೂ ಒಳಗೊಳ್ಳುತ್ತ ಹೋಗಬೇಕೆಂಬುದು ನಿಜ. ಆದರೆ ಭಾವ ಬಿಟ್ಟು ಹೋಗಬಾರದು.

ಸಾಹಿತಿ ತನ್ನ ಯುಗದ ಪ್ರಜ್ಞೆಯ ಅತ್ಯುಚ್ಚ ಬಿಂದುವಿನಲ್ಲಿರುತ್ತಾನೆ ಎನ್ನುವ ಮಾತಿದೆ. ಕನ್ನಡ ಸಾಹಿತ್ಯದ ಮಟ್ಟಿಗೆ ಇದು ನಿಜವೇ ಎನ್ನುವ ಸಂದೇಹ ನನ್ನನ್ನು ಆಗಾಗ ಕಾಡುತ್ತದೆ. ವಿಜ್ಞಾನ-ತಂತ್ರಜ್ಞಾನಗಳು ನಮ್ಮ ಬದುಕಿನ ಆವರಣವನ್ನು ವೇಗವಾಗಿ ಮಾರ್ಪಡಿಸುತ್ತಿರುವಾಗಲೇ ಭಾರತದಲ್ಲಿ ಬದುಕಿನ ಆವರಣವು ಹಿಂದೆಂದೂ ಇಲ್ಲದ ಮಟ್ಟಿಗೆ `ವಲ್ಗರೈಸೇಷನ್’ಗೆ ಒಳಗಾಗುತ್ತಿದೆ. ಒರಟುತನ ಎಂದರೆ ಸಾಲದು. ನಮ್ಮ ಸರ್ಕಾರ ರೂಪಿತ ಉತ್ಸವಗಳು, ನಾಯಕರ ಬದುಕಿನ ವೈಖರಿ, ಹೊಸವರ್ಷದ ಸ್ವಾಗತ ಮುಂತಾದ ಮನರಂಜನೆಯ ಸಂದರ್ಭಗಳು ಎಲ್ಲ 80ರ ದಶಕದಲ್ಲಿ ತೀರ ಅಸಂಸ್ಕೃತಗೊಂಡು, ಅಬ್ಬರಗೊಂಡು, ನಾಗರಿಕ ಜೀವನದ ಯಂತ್ರ ನಿರ್ಮಿತ ಹೊರ ಆವರಣ ಹೆಚ್ಚು ನಾಜೂಕುಗೊಳ್ಳುತ್ತಿರುವಂತೆಯೇ ಮನಸ್ಸನ್ನು ರೂಪಿಸುವ ಆವರಣ ಸೂಕ್ಷ್ಮತೆಗೆ, ಮಾನವೀಯ ಸ್ಪಂದನಕ್ಕೆ, ಸಂಯಮಕ್ಕೆ ಶತ್ರುವಾಗುತ್ತಿದೆ. ಹರಿಜನರ ಮನೆ ಗಳನ್ನು ಸೂರೆ ಮಾಡುವುದು, ವರದಕ್ಷಿಣೆಗಾಗಿ ಹೆಣ್ಣನ್ನು ಸುಡುವುದು, ಯಾವುದೇ ವೈರಕ್ಕಾಗಿ ಹೆಣ್ಣನ್ನು ಬತ್ತಲೆಗೊಳಿಸುವುದು, ಮಾಟ ಮಂತ್ರ ಮಾಡುವರೆಂದು ಅನುಮಾನ ಬಂದವರನ್ನು ಜೀವಂತ ಸುಡುವುದು ಇಂತಹ ಕೃತ್ಯಗಳ ಹಿಂದಿರುವ ಮನೋಧರ್ಮವೇ ಭ್ರಷ್ಟ ರಾಜಕಾರಣಿಗಳ ಕೃತ್ಯಗಳಿಗೂ ಏನಾದರೊಂದು ಜಾಣಮಾತಿನ ಮುಸುಕನ್ನೆಳೆದು ಅವರನ್ನು ಮೆರೆಸುವುದು, ರೌಡಿಗಳು ಮಾದಕ ದ್ರವ್ಯಗಳನ್ನು ಮಾರಿ ಜನತೆಯ ಜೀವನಕ್ಕೇ ಬೆಂಕಿ ಹಾಕುವವರು ಇಂತಹವರನ್ನು ಸ್ವಲಾಭಕ್ಕಾಗಿ ಕೊಬ್ಬಿಸುವುದು ಇಂಥದನ್ನೂ ಮಾಡುವುದು ಮನಸ್ಸಿನ ಸ್ವರೂಪವನ್ನೆ ಹೊಲಸುಗೆಡಿಸುವ, ಬದುಕಿನ ಗುಣಕ್ಕೆ ವಿಷವಿಡುವ ಶಕ್ತಿಗಳ ಆಟ, ಸಮಾಜಕ್ಕಿರುವ ಅಪಾಯ. ಇವನ್ನು ನಮ್ಮ ಸಾಹಿತ್ಯ ಯಾವ ಬಿಂದುವಿನಲ್ಲಿ ಮುಟ್ಟುತ್ತದೆ ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತೇನೆ. ಸಾಹಿತ್ಯದ ಸೃಷ್ಟಿ-ಅಧ್ಯಯನ ಗಳಿಗೇ ಅರ್ಥವಿಲ್ಲ, ಇದೆಲ್ಲ ಅವಾಸ್ತವಿಕ ಚಟುವಟಿಕೆಗಳು ಎನ್ನಿಸುವಂತಹ ವಾತಾವರಣ ದಲ್ಲಿ ನಾವು ಬದುಕುತ್ತಿದ್ದೇವೆ. ಬದುಕಿನ ಈ ದುರಂತವನ್ನು ಸಾಹಿತ್ಯದ ಅನುಭವವನ್ನಾಗಿ ಮಾಡಿಕೊಳ್ಳಬಲ್ಲ ಪ್ರತಿಭೆ ಬರಬೇಕಾಗಿದೆ.

ಈ ದಶಕದ ಎಲ್ಲ ಮಹತ್ವದ ಕೃತಿಗಳನ್ನೂ ಓದಿದ್ದೇನೆ ಎಂದು ಹೇಳಲಾರೆ. ನನ್ನ ಸೀಮಿತ ಓದಿನಲ್ಲಿ ಮಹತ್ವದ ಕೃತಿಗಳು ಎಂದು ಥಟ್ಟನೆ ನೆನಪು ಬರುವುವು ಅನಂತ ಮೂರ್ತಿಯವರ `ಆಕಾಶ ಮತ್ತು ಬೆಕ್ಕು’ ಕಥಾಸಂಗ್ರಹ, ತೇಜಸ್ವಿಯವರ `ಕರ್ವಾಲೊ’, ಡಾ. ವೆಂಕಟಾಚಲ ಶಾಸ್ತ್ರಿಗಳ `ಕನ್ನಡ ಚಿತ್ರಕಾವ್ಯ’, ತ.ಸು. ಶಾಮರಾಯರ `ಮೂರು ತಲೆಮಾರು’, ಶಾಂತಿನಾಥ ದೇಸಾಯಿಯವರ `ಬೀಜ’, ಗಂಗಾಧರ ಚಿತ್ತಾಲರ `ಸಂಪರ್ಕ’, ವೈದೇಹಿಯವರ `ಅಂತರಂಗದ ಪುಟಗಳು’, ಗೋಕಾಕರ `ಭಾರತ ಸಿಂಧು ರಶ್ಮಿ’, ಎಸ್. ದಿವಾಕರರ `ಕಥಾ ಜಗತ್ತು’, ಮೂರ್ತಿರಾಯರ `ಸಾಹಿತ್ಯ ಮತ್ತು ಸತ್ಯ’. ಸಿದ್ಧಲಿಂಗಯ್ಯನವರ `ಸಾವಿರಾರು ನದಿಗಳು’ 1979 ಅಥವಾ 80ರಲ್ಲಿ ಬಂದಿರಬೇಕು. ನನ್ನ ಮನಸ್ಸನ್ನು ಆಳವಾಗಿ ಹೊಕ್ಕ ಒಂದು ಕೃತಿ ಅದು. ಇವೆಲ್ಲ ಪರಿಪೂರ್ಣ ಕೃತಿಗಳೆಂದಲ್ಲ, ಆದರೆ ಬೇರೆ ಬೇರೆ ಕಾರಣಗಳಿಗಾಗಿ ಮುಖ್ಯ ಎಂದು ನನಗೆನ್ನಿಸಿದವು.

(ಕೃತಿ: ಆಧುನಿಕ ಕನ್ನಡ ಸಾಹಿತ್ಯ, ಲೇಖಕರು: ಪ್ರೊ. ಎಲ್.ಎಸ್. ಶೇಷಗಿರಿರಾವ್, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ: 295/-)