ಅಂಗಳದಲ್ಲಿ ಒಬ್ಬನೇ ಕೂತು ಆಕಾಶ ನೋಡುತ್ತಿದ್ದ ಅವನ ಮುಖದಮೇಲೆ ನಿಧಾನವಾಗಿ ಹಾಲು ಮತ್ತು ಜೇನುಗಳ ಮಿಶ್ರ ಬಣ್ಣದಂತ ಕಾಂತಿ ಹರಡಿಕೊಂಡಿತು. ಅವನೂ ಸಹ ಇದ್ದಕ್ಕಿದ್ದಹಾಗೆ ತಣ್ಣನೆ ಕಿರಣಗಳು ಸೋಕಿದುದಕೆ ರೋಮಾಂಚಿತನಾಗಿ ಬಲಗಡೆ ತಿರುಗಿದ. ಅಂದು ಬುದ್ಧ ಪೂರ್ಣಿಮೆಯಾಗಿದ್ದುದರಿಂದ ಚಂದ್ರ ಹೊಳೆಯುತ್ತಿದ್ದ. ಆ ಕಡೆ ಮುಖ ಮಾಡಿ ಧ್ಯಾನಸ್ಥ ಭಂಗಿಯಲ್ಲಿ ಕೂತ. ಅರ್ಧ ಗಂಟೆ ಹಾಗೆ ಕೂತಿದ್ದ. ನಾಯಿ ಜೋರಾಗಿ ಬೊಗಳದಿದ್ದಿದ್ದರೆ ಒಂದು ಗಂಟೆಯಾದ್ರೂ ಹಾಗೆ ಕೂರುತ್ತಿದ್ದನೇನೋ. ನಿಧಾನ ಎದ್ದು ನಡೆದ.
ಎಚ್. ಆರ್. ರಮೇಶ್ ಬರೆದ ಈ ವಾರದ ಕಥೆ “ಅಲೆಗಳು”

 

ಮುತ್ತಯ್ಯ ವಿಶಾಲವಾಗಿ ಹರಡಿಕೊಂಡಿರುವ ತನ್ನ ಮನೆಯ ಅಂಗಳದಲ್ಲಿ ಒಬ್ಬನೆ ಕೂತು ಆಕಾಶ ನೋಡುತ್ತಾ, ಬಲಗೈಯ ಕಿರುಬೆರಳನ್ನು ಬಲಕಿವಿಯೊಳಗೆ ಇಟ್ಟುಕೊಂಡು ಜೋರಾಗಿ ಅಲುಗಾಡಿಸಿ ಪೂರ್ತಿ ಒಣಗಿಲ್ಲದ ಕುಗುಣೆಯನ್ನು ಎಡಗೈಯ ಹೆಬ್ಬೆರಳು ಮತ್ತು ತೋರುಬೆರಳಗಳ ನಡುವೆ ಇಟ್ಟು ಉಂಡೆ ಉಂಡೆ ಮಾಡಿ ಚಿಮ್ಮುತ್ತಿದ್ದ. ಅವನ ಮೂಗಿಗೆ ಮನೆಯಿಂದ ಸ್ವಲ್ಪದೂರದಲ್ಲಿಯೇ ಇದ್ದ ತನ್ನ ಒಂದೂವರೆ ಎಕರೆ ಎಲೆ ತೋಟದಿಂದ ಕಮ್ಮನೆ ವಾಸನೆ ಮೂಗಿಗೆ ಬಡಿಯುತ್ತಿತ್ತು. ಅದು ತನ್ನ ಉಸಿರಿನ ಒಂದು ಭಾಗವಾಗಿದ್ದುದರಿಂದಲೋ ಏನೋ ಅದನ್ನು ಅಷ್ಟಾಗಿ ಅನುಭವಿಸುತ್ತಿರುವಂತೆ ಕಾಣುತ್ತಿರಲಿಲ್ಲ. ಅಥವಾ ಆ ಕ್ಷಣದಲ್ಲಿ ಅವನ ತಲೆತುಂಬ ತನ್ನ ಮಗಳು ಸಾವಿತ್ರಿ ತುಂಬಿ ಹೋಗಿದ್ದಳು.

ಎರಡು ವರ್ಷಗಳ ಹಿಂದೆ ಮೈನೆರದಿದ್ದ ಅವಳನ್ನು ಸುತ್ರಾಮು ಕಾಲೇಜಿಗೆ ಕಳಿಸುವುದಕ್ಕೆ ಇಷ್ಟವಿಲ್ಲದಿದ್ದರೂ ತನ್ನ ಹೆಂಡತಿ ಸುಜಾತಳ ಒತ್ತಾಯಕ್ಕೆ ಮಣಿದು ಕಾಲೇಜಿಗೆ ಕಳುಹಿಸಿದ್ದ. ಆದರೆ ಸಾವಿತ್ರಿ ಡಿಸ್ಟಿಂಕ್ಷನ್ನಲ್ಲಿ ಪಾಸೂ ಆಗಿ ತನಗೆ ಹೇಳದೆ ಎಂಟ್ರೆನ್ಸ್ ಬರೆದು ಒಳ್ಳೆಯ ರ್ಯಾಂಕ್ ಗಿಟ್ಟಿಸಿಕೊಂಡು ತನ್ನ ಅಮ್ಮನ ಜೊತೆಗೆ ಏನೋ ಮಸಲತ್ತು ಮಾಡಿ ಎಂ.ಬಿ.ಬಿ.ಎಸ್.ಗೆ ಹೋಗಲು ಇವನಿಗೆ ಗೊತ್ತಾಗದೆ ತಯಾರಿ ನಡೆಸುತ್ತಿರುವುದು ಮುತ್ತಯ್ಯನನ್ನು ತುಂಬಾ ವಿಚಲಿತನನ್ನಾಗಿ ಮಾಡಿತ್ತು. ಇನ್ನೇನು ಕೌನ್ಸಿಲಿಂಗ್ ಮುಗಿದು ಜಾಯ್ನ್ ಆಗಬೇಕಿತ್ತಷ್ಟೆ. ಆದರೆ ಮಗಳನ್ನು ಯಾವುದೇ ಕಾರಣಕ್ಕೂ ಕಳುಹಿಸಲು ಒಪ್ಪದೆ ಅದರ ಸಲುವಾಗಿ ಸುಜಾತಳೊಂದಿಗೆ ಜಗಳ ಚರ್ಚೆಗಳಾಗಿ ವಿಫಲನಾಗಿದ್ದ. ಕಳುಹಿಸಬೇಕೋ ಬೇಡವೋ ಎನ್ನುವ ಗೊಂದಲ ಅವನ ಮನಸ್ಸನ್ನು ಹೊಕ್ಕು ಗುಂಗಾರಿ ಕೊರೆದ ಹಾಗೆ ಕೊರೆಯುತ್ತಿತ್ತು. ಒಬ್ಬಳೇ ಮಗಳಾಗಿದ್ದುದರಿಂದ ಒಂದುವರೆ ಎಕರೆ ಎಲೆ ತೋಟ, ಎರಡೆಕರೆ ಗದ್ದೆ, ಐದು ಎಕರೆ ಬೆದ್ದಲುನ್ನು ನೋಡಿಕೊಂಡು ತನ್ನ ಕಣ್ಣಮುಂದೆ ಇರಲಿ ಎಂದು ಬಯಸಿದ್ದ. ‘ಹೊಲ ಬೇಕಾದರೆ ಯಾರಿಗಾದರೂ ಕಂಟ್ರ್ಯಾಕ್ಟ್ ಕೊಡಿ; ಇಲ್ಲ ನಾನೇ ಬೇಕಾದರೆ ನನ್ನ ಕೈಲಾದಷ್ಟು ನೋಡಿಕೊಳ್ಳುತ್ತೀನಿ. ಸಾವಿ ಡಾಕ್ಟರ್ ಆಗಲೇ ಬೇಕು’ ಎಂದು ಕಡ್ಡಿ ತುಂಡು ಮಾಡಿದ ರೀತಿಯಲ್ಲಿ ಹೇಳಿರುವ ಸುಜಾತಳನ್ನು ಮನವೊಲಿಸಿ ಸೋತಿದ್ದ.

ಎಷ್ಟೋ ಸಲ ಅವನ ಕನಸಿನಲ್ಲಿ ಸಾವಿತ್ರಿ ಮನುಷ್ಯರ ಅಂಗಾಂಗಗಳನ್ನು ಕತ್ತರಿಸುತ್ತಿದ್ದುದ ಕಂಡು ಏನೇನೋ ಕನವರಿಸಿಕೊಳ್ಳುತ್ತಿದ್ದ ಹಾಗು ವಿಚಿತ್ರ ಧ್ವನಿಯಲ್ಲಿ ಚೀರಿಕೊಂಡು ಎದ್ದು ಕೂರುತ್ತಿದ್ದ. ಆಗೆಲ್ಲಾ ಸಾವಿತ್ರಿನೇ ಎದ್ದು ಹೋಗಿ ನೀರುಕುಡಿಸಿ ಚಿಕ್ಕ ಮಗುವಿನ ಥರ ಸಾವರಿಸಿ ಅಪ್ಪಿಕೊಂಡು ಮಲಗುತ್ತಿದ್ದಳು. ‘ಒಂದೈದು ವರ್ಷ ಆರಾಮಾಗಿ ಇರಬಾರದ ಪಪ್ಪಾ ಅಮ್ಮನ ಜೊತೆ. ಇಬ್ಬರೆ ಎಂಥ ಜಾಲಿಯಾಗಿ ಇರಬಹುದು. ನಿಮಗೆ ವಯಸ್ಸಾದ ಮೇಲೆ ನಿಮ್ಮ ಆರೋಗ್ಯವನ್ನು ನೋಡಿಕೋಳ್ಳುವುದಕ್ಕಾದರೂ ಎಂ.ಬಿ.ಬಿ.ಎಸ್. ಗೆ ಕಳುಹಿಸು. ಪ್ಲೀಸ್. ಕೋರ್ಸ್ ಕಂಪ್ಲೀಟ್ ಆದಮೇಲೆ ಯಾವ ಸಿಟಿಯಲ್ಲೂ ನೆಲೆಸದೆ; ನಮ್ಮೂರಲ್ಲೇ ಇರುತ್ತೇನೆ. ನನ್ನ ಜನಗಳ ಆರೋಗ್ಯವನ್ನ ನೋಡಿಕೊಳ್ಳುತ್ತೇನೆ. ತೋಟದ ಕೆಲಸದಲ್ಲಿ ನಿನಗೆ ಹೆಲ್ಪ್ ಮಾಡಿಕೊಂಡು ಇರುತ್ತೇನೆ’ ಎಂದು ಹೇಳಿದರೂ ಮುತ್ತಯ್ಯ ಮಾತ್ರ ಸುತ್ರಾಮ್ ಒಪ್ಪುತ್ತಿರಲಿಲ್ಲ. ‘ರೀ ನಿನ್ನ ಮಗಳಿಗೆ ನೀವು ಪಂಜರ ಆಗಬೇಡಿ. ಅವುಳನ್ನ ಅವಳ ಪಾಡಿಗೆ ಬಿಡಿ. ಗಿವ್ ಹರ್ ಫ್ರೀಡಂ. ಇಟ್ಸ್ ಹರ್ ಲೈಫ್. ಮತ್ತೆ ನೀವು ಎಂ.ಎ. ಇಂಗ್ಲಿಶ್ ಲಿಟರೇಚರ್ ಮಾಡಿ ಕೃಷಿ ಮಾಡ್ತಿಲ್ಲವಾ. ಅವಳೇನು ಬೆಂಗಳೂರೋ ಮುಂಬೈಲೋ ಸೆಟ್ಲ್ ಆಗೋಲ್ಲ. ಐ ವಾಂಟ್ ಮೈ ಡಾಟರ್ ಟು ಬಿ ಎ ಡಾಕ್ಟರ್ ಅಂಡ್ ಸರ್ವ್ ಮೈ ವಿಲೇಜ್ ಪೀಪಲ್’ ಎಂದು ತುಸು ಗಂಭೀರವಾಗಿಯೇ ಹೇಳಿದುದಕೆ ‘ನೀನೂ ಸಹ ನನಗೆ ಏನು ಮಾಡಬೇಡ ಅನ್ನುತ್ತಿದ್ದೀಯೋ ಅದನ್ನೇ ಮಾಡುತ್ತಿರುವುದು. ಐ ಮೀನ್ ನಿನ್ನ ಆಸೆಯನ್ನು ಅವಳ ಮೂಲಕ ಈಡೇರಿಸಿಕೊಳ್ಳುವ ಬಯಕೆ. ನೀನೂ ಸ್ವಾರ್ಥಿಯೇ’ ಎಂದು ಹೇಳಿ ಸುಮ್ಮನಾಗಿದ್ದ.

ಅಂಗಳದಲ್ಲಿ ಒಬ್ಬನೇ ಕೂತು ಆಕಾಶ ನೋಡುತ್ತಿದ್ದ ಅವನ ಮುಖದಮೇಲೆ ನಿಧಾನವಾಗಿ ಹಾಲು ಮತ್ತು ಜೇನುಗಳ ಮಿಶ್ರ ಬಣ್ಣದಂತ ಕಾಂತಿ ಹರಡಿಕೊಂಡಿತು. ಅವನೂ ಸಹ ಇದ್ದಕ್ಕಿದ್ದಹಾಗೆ ತಣ್ಣನೆ ಕಿರಣಗಳು ಸೋಕಿದುದಕೆ ರೋಮಾಂಚಿತನಾಗಿ ಬಲಗಡೆ ತಿರುಗಿದ. ಅಂದು ಬುದ್ಧ ಪೂರ್ಣಿಮೆಯಾಗಿದ್ದುದರಿಂದ ಚಂದ್ರ ಹೊಳೆಯುತ್ತಿದ್ದ. ಆ ಕಡೆ ಮುಖ ಮಾಡಿ ಧ್ಯಾನಸ್ಥ ಭಂಗಿಯಲ್ಲಿ ಕೂತ. ಅರ್ಧ ಗಂಟೆ ಹಾಗೆ ಕೂತಿದ್ದ. ನಾಯಿ ಜೋರಾಗಿ ಬೊಗಳದಿದ್ದಿದ್ದರೆ ಒಂದು ಗಂಟೆಯಾದ್ರೂ ಹಾಗೆ ಕೂರುತ್ತಿದ್ದನೇನೋ. ನಿಧಾನ ಎದ್ದು ನಡೆದ. ಅವನ ಸ್ನೇಹಿತ ಕಾಂತರಾಜ್ ಆಲಮಟ್ಟಿ ಡ್ಯಾಂ ಪ್ರೊಜೆಕ್ಟ್ ನಲ್ಲಿ ಕೆಲಸ ಮಾಡುವಾಗ ತನ್ನ ಕೆಲಸ ನಿಮಿತ್ತ ಮುಧೋಳಿಗೆ ಹೋಗಿದ್ದಂತಹ ಸಂದರ್ಭದಲ್ಲಿ ಈ ನಾಯಿಯನ್ನು ಅವನಿಗೆಂದೇ ಅಲ್ಲಿಂದ ತಂದು ಕೊಟ್ಟಿದ್ದ. ಅಂದಿನಿಂದ ಅದು ಈ ಮನೆಯಲ್ಲಿ ಒಂದು ಸದಸ್ಯನಾಗಿಬಿಟ್ಟಿದೆ. ಅದರ ಕತ್ತ ಹಿಡಿದು ಮೈ ಸವರುತ್ತಾ ದೂರದಲ್ಲಿ ಯಾರೋ ಬರುತ್ತಿದ್ದಾರಲ್ಲಾ ಎಂದು ತನ್ನ ಮನೆಯ ಪಕ್ಕದಿಂದ ಊರೊಳಗೆ ಸೇರುವ ಹಾದಿಯನ್ನೇ ದಿಟ್ಟಿಸಿ ನೊಡುತ್ತ ನಿಂತ. ಇವನಷ್ಟೆ ಎತ್ತರದ ಮನುಷ್ಯಾಕೃತಿ ಹತ್ತಿರವಾಯ್ತು. ಹತ್ತಿರ ಹತ್ತಿರವಾದಂತೆಲ್ಲಾ ಆ ಮನುಷ್ಯನ ಮುಖ ತನ್ನ ಹೆಂಡತಿ ಸುಜಾತಳ ಕಾಲೇಜು ಆಲ್ಬಂ ಪುಟಗಳ ತೆರೆದಿಡಲಾರಂಭಿಸಿತು. ಹಾಗು, ಹತ್ತಿರ ಹತ್ತಿರ ಬಂದಂತೆ ಆ ಮುಖ ಇನ್ನಷ್ಟು ಪರಿಚಿತವಾಗತೊಡಗಿತು.

ತನ್ನ ಮಗಳು ಸಾವಿತ್ರಿ ಜೊತೆ ಇಂಟರ್ನೆಟ್ನಲ್ಲಿ ಹಾಗು, ಪತ್ರಿಕೆಗಳಲ್ಲಿ ನೋಡಿದ್ದಂತಹ ಮುಖ. ಬಂದ ವ್ಯಕ್ತಿ ತನ್ನನ್ನು ತಾನು ಪರಿಚಯಮಾಡಿಕೊಳ್ಳುವುದಕ್ಕೆ ಮುಂಚೆನೇ ‘ನೀವು ಡಾ. ಶಾಕ್ಯ ಅಲ್ಲವಾ?’ ಎಂದು ಅರ್ಧ ಮೇಲಕ್ಕೆ ಎತ್ತಿ ಕಟ್ಟಿಕೊಂಡಿದ್ದ ಅಚ್ಚ ಬಿಳಿ ಲುಂಗಿಯನ್ನು ಕೆಳಕ್ಕೆ ಇಳಿಬಿಟ್ಟು ಹಸ್ತ ಲಾಘವ ಮಾಡಿಕೊಂಡ. ಶಾಕ್ಯನಿಗೆ ತುಂಬಾ ಆಶ್ಚರ್ಯವಾಯ್ತು. ಇಬ್ಬರೂ ಪರಸ್ಪರ ಎಂದೂ ಭೇಟಿ ಆಗದಿದ್ದರೂ ಎಷ್ಟೋ ವರ್ಷಗಳ ಒಡನಾಟವೆಂಬಂತೆ ಆಡಿದ ಮಾತು ಶಾಕ್ಯನಲ್ಲಿ ಆಪ್ತತೆ ಮತ್ತು ಖುಷಿಯನ್ನು ಉಂಟುಮಾಡಿತ್ತು. ಅವನ ಪೂರ್ತಿ ಹೆಸರು ಶಾಕ್ಯ ಸಿದ್ಧಾರ್ಥ. ಪಿ.ಎಚ್.ಡಿ ಮುಗಿದ ನಂತರ ಡಾ. ಎನ್ನುವುದು ಅವನ ಹೆಸರಿನೊಟ್ಟಿಗೆ ಸೇರಿಕೊಂಡು, ಡಾ. ಶಾಕ್ಯ ಸಿದ್ಧಾರ್ಥ ಎಂದೇ ಪ್ರಸಿದ್ಧಿ. ಆದರೆ ಅವನಿಗೆ ಶಾಕ್ಯ ಎಂದು ಕರೆದರೆ ತುಂಬಾ ಇಷ್ಟ. ಯಾರಾದರೂ ಡಾ. ಶಾಕ್ಯ ಎಂದು ಕರೆದರೆ ‘ಅಯ್ಯೋ ಈ ಡಾಕ್ಟರ್ ಗೀಕ್ಟರ್ ಏನು ಬೇಡ, ನನ್ನ ಹೆಸರು ಕರೆಯಿರಿ ಸಾಕು’ ಎನ್ನುತ್ತಿದ್ದ.

ಪ್ರಪಂಚದಲ್ಲಿ ಎಲ್ಲೂ ಇರದ ಪೂರ್ಣಿಮೆ ಇಲ್ಲಿ ಮಾತ್ರ ಹರಡಿಕೊಂಡಿದೆ ಎಂದು ಭಾವಿಸಿ, ತನ್ನ ಜುಬ್ಬ, ಶಾಲು ಮತ್ತು ಲೆದರ್ ಬ್ಯಾಗ್ ಗಳನ್ನು ಅಂಗಳದಲ್ಲಿಯೇ ಬಿಸಾಡಿ ಪುಟ್ಟ ಹೈಕ್ಳು ಥರ ಕುಣಿಯತೊಡಗಿದ. ಮನೆಗೆ ಬಂದ ಹೊಸ ಅತಿಥಿ ಈ ರೀತಿ ವರ್ತಿಸುವುದ ಕಂಡು ಕ್ಷಣ ದಂಗು ಬಡಿದವನಂತೆ ನಿಂತು ನೋಡುತಿದ್ದ ಮುತ್ತಯ್ಯನೂ ಸಹ ಲುಂಗಿ ಮೇಲಕ್ಕೆತ್ತಿ ಕಟ್ಟಿಕೊಂಡು ಬಗಲಮೇಲಿದ್ದ ಟವಲನ್ನು ಚೆಂಡಿನ ಥರ ಮೇಲಕ್ಕೆ ಎಸೆದು ಕುಣಿಯಲಾರಂಭಿಸಿದ. ನಾಯಿ ಮೂಕ ಪ್ರೇಕ್ಷಕನಂತೆ ಸುಮ್ಮನೆ ನಿಂತು ನೋಡಿತು.

ಒಳಗಿಂದ ಸಾವಿತ್ರಿ ಮತ್ತು ಅವಳಮ್ಮ ಸುಜಾತ ಓಡಿಬಂದರು. ಸಾವಿತ್ರಿ ತನ್ನ ಮುಖದಲ್ಲಿ ಹರಿದಾಡುವ ಸಂತೋಷವ ಕಂಡು ತಾನೂ ಸಹ ತಲೆಯನ್ನು ಅಲುಗಾಡಿಸುತ್ತ ನಿಂತಲ್ಲೇ ಕುಣಿಯತೊಡಗಿದಳು. ಸುಜಾತ ತನ್ನ ಗಂಡನ ಜೊತೆ ಕುಣಿಯುತ್ತಿರುವ ಜಂಟಲ್ ಮ್ಯಾನ್ ಯಾರೆಂದು ಸಡನ್ನಾಗಿ ಗುರುತಿಸದೆ ಬೆಪ್ಪಾಗಿ ನಿಂತು ನೋಡಿದಳು. ಇಬ್ಬರ ಮುಖಗಳಲ್ಲೂ ಅಲ್ಲಲ್ಲಲ್ಲಿ ಬೆವರು ಮೂಡಿ ಬೆಳದಿಂಗಳ ಕಿರಣಗಳು ಮುಖಗಳ ಮೇಲೆ ಬಿದ್ದಿದ್ದರಿಂದ ತೆಳು ಬಂಗಾರಬಣ್ಣದ ರೇಷ್ಮೆವಸ್ತ್ರದ ರೀತಿ ಮಿನುಗುತ್ತಿತ್ತು.

ಸ್ವಲ್ಪ ಹೊತ್ತಿನ ಬಳಿಕ ಕುಣಿಯುವುದನ್ನು ನಿಲ್ಲಿಸಿ, ಮುತ್ತಯ್ಯನ ಕೈ ಹಿಡಿದು ‘ಸಾರಿ’ ಎಂದು, ಸ್ವಲ್ಪ ಸುಧಾರಿಸಿಕೊಂಡು, ‘ತುಂಬಾ ಎಮೋಷನಲ್ ಆದೆ ಅನ್ನಿಸುತ್ತೆ’ ಎಂದ. ಆಮೇಲೆ ಸುಜಾತ ಮತ್ತು ಸಾವಿತ್ರಿ ಕಡೆ ಮುಖಮಾಡಿ, ‘ಹಾಯ್ ಸೂಜಿ! ಆರ್ ಯು ಸರ್ಪ್ರೈಸ್ಡ್?’ ಅನ್ನುತ್ತಾ ಅವಳತ್ತ ನಡೆದು, ‘ವಾಟ್ ಎ ಬ್ಯೂಟಿಫುಲ್ ಡಾಟರ್ ಯು ಹ್ಯಾವ್! ಪ್ರೆಟಿ. ಗಾರ್ಜಿಯಸ್. ಕ್ಯೂಟ್’ ಎಂದ. ಸುಜಾತ ಒಂದು ಕ್ಷಣ ಮೂಕವಿಸ್ಮಿತಳಾಗಿ ನಿಂತು ಬಿಟ್ಟಳು, ಇಪ್ಪತ್ತು ವರ್ಷಗಳ ಬಳಿಕ ತನ್ನ ಸ್ನೇಹಿತನನ್ನು ನೋಡುತ್ತ.

‘ಓ ಗಾಡ್! ಶಾಕ್ಯ! ಸುಮಾರು ಇಪ್ಪತ್ತು ವರ್ಷಗಳು ಆದವು ಅಲ್ವಾ? ಅಮ್ಮಾ! ಒಂದು ಫೋನ್ ಮಾಡಬಾರದಿತ್ತಾ, ಹೇಗೆ ಬಂದೆ, ಯಾರು ದಾರಿ ತೋರಿಸಿದರು?!’ ಎಂದೆಲ್ಲಾ ಕೇಳುತ್ತಾ ಅವಳೂ ಸಹ ಕ್ಷಣಕಾಲ ಎಮೋಷನಲ್ ಆದಳು.

‘ಫೋನ್ ಮಾಡದೆ ನಿಮಗೆ ಸರ್ಪ್ರೈಸ್ ಕೊಡೋಣ ಅಂತಾನೆ ಹೀಗೆ ಬಂದೆ. ಮೊಬೈಲ್ ಆಫ್ ಮಾಡಿದ್ದೀನಿ. ಅದರ ತಂಟೆನೇ ಬೇಡವೆಂದು.’
‘ಎಲ್ಲಿಗೆ ಬಂದಿದ್ದೆ? ಏನು ಕತೆ?’ ರಾಗಿಣಿ ಚೆನ್ನಾಗಿದ್ದಾಳಾ? ಅವಳನ್ನೂ ಕರೆದುಕೊಂಡು ಬರಹುದಿತ್ತಲ್ಲೋ?’

ಮುತ್ತಯ್ಯ ಅವಳ ಮಾತಿಗೆ ಅಡ್ಡಬಂದು, ‘ಅದೆಲ್ಲಾ ಆಮೇಲೆ ಕೇಳುವಂತೆ. ಮೊದಲು ಇವರಿಗೆ ಬಿಸಿನೀರು ಕೊಡುಹೋಗು. ಫ್ರೆಶ್ ಆಗಲಿ. ತುಂಬಾ ದಣಿದಿರಬಹುದು. ಕಾಫಿ ಕುಡಿಯುತ್ತಾ ಹಾಯಾಗಿ ಬೆಳದಿಂಗಳ ಬೆಳಕಲ್ಲಿ ಕೂತು ಮಾತಾಡೋಣ’ ಎಂದ.

ಸಾವಿತ್ರಿಯ ಖುಷಿಗೆ ಮಿತಿಯೇ ಇರಲಿಲ್ಲ ತನ್ನ ಅಪ್ಪನ ಮುಖದಲ್ಲಿ ಹರಡಿರುವ ಸಂತಸವ ಕಂಡು. ಅವಳೇ ಹಂಡೆಯಲ್ಲಿ ಇರುವ ಬಿಸಿನೀರನ್ನು ಬಕೆಟ್ ಗೆ ಹಾಕಿ ಬಚ್ಚಲ ಹತ್ತಿರ ಇಟ್ಟು ಹೊಸ ಪಿಯರ್ಸ್ ಸೋಪು ಮತ್ತು ಟವಲ್ ಅಲ್ಲಿ ಇಟ್ಟಳು. ನಂತರ ಪಟ ಪಟ ಅಂತ ಓಡಿ ರೋಸ್ ವುಡ್ಡಿನ ಟೇಬಲ್ ಮತ್ತು ನಾಲ್ಕು ಚೇರುಗಳನ್ನು ಅಂಗಳದಲ್ಲಿ ಹಾಕಿದಳು. ಸುಜಾತ ಅಡುಗೆ ಮನೆಗೆ ಕಾಫಿಮಾಡಲು ಹೋದಳು. ಶಾಕ್ಯನ ಲೆದರ್ ಬ್ಯಾಗ್ ಮತ್ತು ಶಾಲನ್ನು ಮುತ್ತಯ್ಯ ಈಸುಕೊಂಡು ತನ್ನ ಸ್ಟಡಿರೂಂನಲ್ಲಿ ಇಡಲು ಹೋದ. ತನ್ನ ಸ್ಟಡಿ ರೂಂನಿಂದನೇ ‘ಸಾವಿ, ಸಾವಿ ಲುಂಗಿ, ಟವಲ್ ಕೊಡೋ ಅವರಿಗೆ’ ಎಂದದ್ದಕ್ಕೆ ಆಗಲೇ ಮುಖತೊಳೆಯುತ್ತಿದ್ದ ಶಾಕ್ಯ, ಲುಂಗಿಬೇಡ, ಸದ್ಯಕ್ಕೆ ಮುಖ ಮತ್ತು ಕಾಲಿಗೆ ನೀರು ಹಾಕಿಕೊಳ್ಳುತ್ತೇನೆ. ಮಲಗುವಾಗ ಹಾಕಿಕೊಳ್ಳುತ್ತೇನೆ. ಈಗ ಬೇಡ’ ಅಂದ. ಮುಖ, ಕೈ ಮತ್ತು ಪಾದಗಳನ್ನಷ್ಟೆ ತೊಳೆದುಕೊಂಡು ಟವಲ್ ನಲ್ಲಿ ಒರೆಸಿಕೊಳ್ಳುತ್ತಾ ನಡುಮನೆಯಲ್ಲಿ ಒಮ್ಮೆ ನಿಂತು ಇಡೀ ಮನೆಯ ಕ್ಷಣ ನೋಡಿದ. ಹಾಲ್ ತುಂಬಾ ವಿಶಾಲವಾಗಿತ್ತು. ಅಚ್ಚ ಬಿಳಿ ಬಣ್ಣವನ್ನು ಗೋಡೆಗಳಿಗೆ ಬಳಿದಿದ್ದರಿಂದ ಹಾಗು ಸಿಎಫೆಲ್ ಬಲ್ಬುಗಳ ಬೆಳಕಿನಲ್ಲಿ ಇಡೀ ಮನೆ ಶುಭ್ರವಾಗಿ ಹಾಲಲ್ಲಿ ತೊಳೆದಂತೆ ಇತ್ತು. ಹಾಲ್ ನಲ್ಲಿ ಜಾಸ್ತಿ ಫರ್ನಿಚರ್ ಗಳು ತುಂಬಿಲ್ಲದಿದ್ದುದರಿಂದ ಹಾಲ್ ನೊಳಗಿನ ಸ್ಪೇಸ್ ಮನಸ್ಸಿಗೆ ಮುದ ನೀಡುವಂತಿತ್ತು.

ಅವನು ನಿಂತುಕೊಂಡಿರುವ ಎದರುಗೋಡೆಯ ಹತ್ತಿರ ಸುಮಾರು ನೂರು ವರ್ಷಗಳಿಗೂ ಹಳೆಯದಾದ ತೇಗದ ಮರದ ಮೇಜಿನ ಮೇಲೆ ಲ್ಯಾಪ್ ಟಾಪ್, ಇಂಗ್ಲಿಷ್ ಮತ್ತು ಕನ್ನಡ ಜರ್ನಲ್ ಗಳು, ಪುಸ್ತಕಗಳು, ಸಿ.ಡಿಗಳು, ಚೆನ್ನಪಟ್ಟಣದ ಬಣ್ಣದ ಮರದ ಬೊಂಬೆಗಳು ಇದ್ದವು. ಹಾಲ್ ನ ಮೂಲೆಯೊಂದರಲ್ಲಿ ನುಣುಪು ನುಣುಪಾದ ದುಂಡನೆಯ ಬಿಳಿ ಬೆಣಚುಕಲ್ಲುಗಳನ್ನು ಒಂದರಮೇಲೆ ಒಂದರಂತೆ ಜೋಡಿಸಿ ಇಡಲಾಗಿತ್ತು. ಹಾಲ್ ನ ಬಲಗೋಡೆಗೆ ಹೊಂದಿಕೊಂಡಂತೆ ಒಂದು ಪುಟ್ಟ ಮರದ ದೀಪದ ಕಂಬವನ್ನು ಇಡಲಾಗಿದ್ದೂ ಮೇಲಿನ ತುದಿಯ ಸುತ್ತ ಹಂಸಗಳ ಚಿತ್ರವನ್ನು ಕೆತ್ತಲಾಗಿತ್ತು. ಹಂಸಗಳ ನಡುವೆ ಆಗಷ್ಟೇ ಹಚ್ಚಿರುವ ಪುಟ್ಟ ದೀಪ ಪ್ರಕಾಶಮಾನವಾಗಿ ಉರಿಯುತ್ತಿತ್ತು. ಮತ್ತೆ ಎಡಕ್ಕೆ ನೋಡಿದ. ಮೇಲಿನಿಂದ ಕೆಳಗೆ ಹಾಗು ಎಡದಿಂದ ಬಲಕ್ಕೆ ಅಡ್ಡವಾಗಿ ಗೋಡೆಯ ಮೇಲೆ ಅಂಬೇಡ್ಕರ್, ವಾಲ್ಮೀಕಿ, ಶೇಕ್ಸ್ಪಿಯರ್, ಗಾಂಧಿ, ಕಾರ್ಲ್ಮಾರ್ಕ್ಸ್, ದೇವನೂರು ಮಹಾದೇವ, ಅನಂತ ಮೂರ್ತಿ ಮತ್ತು ಲಂಕೇಶ್, ಅವರ ರೇಖಾಚಿತ್ರಗಳನ್ನು ಫ್ರೇಂ ಹಾಕಿಸಿ ಗೋಡೆಗೆ ನೇತುಹಾಕಿದ್ದರೂ ಫ್ರೇಂ ನಿಂದ ಹೊರಬರುವ ರೀತಿ ಭಾಸವಾಗುತ್ತಿರುವಂತೆ ಇದ್ದವು. ಅವುಗಳನ್ನು ಕುತೂಹಲದಿಂದ ನಿಂತು ನೋಡಿದ. ‘ಸೂಜಿ’ ಎಂದು ಬಾಯಿಬಿಡಬೇಕು ಅನ್ನುವಷ್ಟರಲ್ಲಿ ಅಡುಗೆ ಮನೆಗೆ ಹೋಗುವ ಕೋಣೆಯ ಗೋಡೆಯ ಮೇಲೆ ನೇತು ಹಾಕಿರುವ ಫೋಟೋ ಅವನ ಗಮನ ಸಳೆಯಿತು. ಅದರಲ್ಲಿ ಸಾವಿತ್ರಿ ಒಂದು ಕಲ್ಲ ಮೇಲೆ ಕೂತು ಏನನ್ನೋ ಬರೆಯುತ್ತಿದ್ದಾಳೆ. ಒಂದು ಕಾಲನ್ನು ಕಲ್ಲಿನ ಮೇಲೆ ಕೂತು ಮಡಿಚಿ ಇಟ್ಟುಕೊಂಡು, ಮತ್ತೊಂದನ್ನು ಇಳಿಬಿಟ್ಟಿದ್ದಾಳೆ. ಅವಳ ಆ ಪಾದವ ತೋಯಿಸಿಕೊಂಡು ನೀರು ಹರಿಯುತ್ತಿದೆ. ಇನ್ನೂ ಹತ್ತಿರ ಹತ್ತರ ಹೋಗಿ ಫೋಟೋವನ್ನು ದಿಟ್ಟಿಸತೊಡಗಿದ. ಸುಜಾತಳೂ ಸಹ ಪುಟ್ಟ ಹುಡುಗಿಯಾಗಿದ್ದಾಗ ಹೀಗೇ ಇದ್ದಳೇನೋ ಎಂದು ಕಲ್ಪಿಸಿಕೊಂಡ.

ನಂತರ ‘ಸೂಜಿ’ಎಂದು ಕೂಗಿದ

‘ಅಡಿಗೆ ಮನೆಯಲ್ಲಿದ್ದೇನೆ. ಇಲ್ಲೇ ಬಾರೋ’

‘ಆ ರೇಖಾಚಿತ್ರಗಳು ಯಾರು ಮಾಡಿದ್ದು. ಮಾರ್ವೆಲಸ್’

‘ನಮ್ಮ ಸಾವಿ ಕಣೋ. ಚೆನ್ನಾಗಿದ್ದಾವಾ. ಅವಳಿಗೆ ಕಾಂಪ್ಲಿಮೆಂಟ್ಸ್ ಹೇಳು ಖುಷಿ ಪಡುತ್ತಾಳೆ.’ ‘ಆ ಮೂಲೆಯಲ್ಲಿ ಪೆಬಲ್ಸ್ ಜೋಡಿಸಿ ಇಡಲಾಗಿದೆಯಲ್ಲಾ. ಯಾರು ಜೋಡಿಸಿದ್ದು? ನನಗಂತೂ ಅವು ಪುಟ್ಟ-ಪುಟ್ಟ ಮಕ್ಕಳು ಥರ ಕಾಣುತ್ತವೆ.’
‘ಮುತ್ತಯ್ಯ ಜೋಡಿಸಿರುವುದು ಹಾಗೆ. ಅಪ್ಪ ಮಗಳು ಸೇರಿಕೊಂಡರೆ ಮನೆ ಶಿಶುವಿಹಾರ. ಏನೇನೋ ಮಾಡ್ತಿರ್ತಾರೆ. ಅದನ್ನು ತೆಗೆದು ಇಲ್ಲಿ ಇಡೋದು. ಇದನ್ನು ತೆಗೆದು ಅಲ್ಲಿ ಇಡೋದು. ಆದರೆ ಹಿ ಈಸ್ ವೆರಿ ವಂಡರ್ ಫುಲ್ ಪರ್ಸನ್. ಐಮ್ ರಿಯಲಿ ಲಕ್ಕಿ ಟು ಹ್ಯಾವ್ ಸಚ್ ಹಸ್ಬೆಂಡ್ ಅಂಡ್ ಡಾಟರ್.’

‘ಮನೆ ವಾತಾವರಣವೇ ಹೇಳುತ್ತೆ. ನೀ ಹೇಳದಿದ್ದರೂ. ವೆರಿ ಪ್ಲಸೆಂಟ್’ ಎಂದು ಮಾತನ್ನು ಮುಂದವರೆಸಿ ‘ಸಾವಿ ಫೋಟೋ ಎಷ್ಟು ಚಂದ ಇದೆ ಅಲಾ? ನಾನು ಕ್ಷಣ ನೀನು ಚಿಕ್ಕವಳಿದ್ದಾಗ ತೆಗಿಸಿಕೊಂಡಿದ್ದೇನೋ ಅಂದುಕೊಂಡೆ’ ಅಂದ.

‘ಸಣ್ಣವರಿದ್ದಾಗ ಎಲ್ರೂ ಹೆಚ್ಚೂ ಕಡಿಮೆ ಒಂದೇ ಥರ. ತುಂಬಾ ಚೆನ್ನಾಗಿ ಕಾಣ್ತಾರೆ. ಬೆಳೀತಾ ಬೆಳೀತಾನೆ ಹೇಗೇಗೋ ಆಗೋದು. ಏನೇನೋ ಆಗೋದು’ ಎಂದಳು.

ಅವಳ ಮಾತನ್ನೇ ಕುತೂಹಲದಿಂದ ಕೇಳಿಸಿಕೊಳ್ಳುತ್ತ ನಿಂತ. ಅವಳನ್ನೇ ನೋಡುತ್ತಾ ‘ಇಪ್ಪತ್ತು ವರ್ಷಗಳು ಎಷ್ಟುಬೇಗ ಹೋದವು. ನನಗಂತೂ ನಿನ್ನೆನೋ ಮೊನ್ನೆನೋ ಪಿ.ಜಿ. ಮಾಡ್ತಿದ್ದೀವಿ ಅನ್ನಿಸುತ್ತೆ. ಆ ಲೇಟ್ ನೈಟ್ ಡಿಸ್ಕಶನ್, ಒಬ್ಬರಿಗೊಬ್ಬರು ಚುಡಾಯಿಸುತ್ತಿದ್ದದ್ದು, ಹಾಸ್ಟಲ್ ನಲ್ಲಿ ಎಲ್ರೂ ಗಂಭೀರವಾಗಿ ಓದುತ್ತಿರುವಾಗ ನಾನು, ನೀನು, ಗೌಡ, ಡಿ.ಜಿ., ಸುಷ್ಮ, ವೆಂಕಿ, ಡೈಸಿ ಸಿನಿಮಾದ ಬಗ್ಗೆ, ಸ್ಟಿಫನ್ ಹಾಕಿಂಗ್ ಬಗ್ಗೆ, ನಾಸಾ ವಿಜ್ಞಾನಿಗಳ ಹೊಸ ಹೊಸ ಡಿಸ್ಕವರಿಗಳ ಬಗ್ಗೆ, ಸಂಗೀತದ ಬಗ್ಗೆ ಮಾತಾಡುತ್ತಿದ್ದದ್ದು.. ಇನ್ನೊಂದು ಸಂಗತಿ ಈಗಲೂ ನನಗೆ ನೆನಪಿದೆ. ಅದು ಯಾವಾಗಲು ನೆನಪಾಗುತ್ತಿರುತ್ತೆ. ಭೀಮಸೇನ್ ಜೋಷಿ ವರ್ಸಸ್ ಗಂಗೂಬಾಯಿ ಹಾನಗಲ್ ಚರ್ಚೆ ಮಾಡುವಾಗ ಭೀಮಸೇನ್ ಜೋಷಿ ಕೆಲವು ಸಲ ಪ್ರೇಕ್ಷಕರನ್ನು ರಂಜಿಸುವುದಕ್ಕೆ ಹಾಡ್ತಾನೆ. ಆದರೆ ಗಂಗೂಬಾಯಿ ಹಾನಗಲ್ ಹಾಗಲ್ಲ. ರಂಜಿಸುವುದಕ್ಕೆ ಹಾಡುವುದಿಲ್ಲ; ಅವರದು ಮಳೆ ಸುರಿದಂತೆ. ನದಿಹರಿದಂತೆ. ಎಂದು ನಾನು ವಾದಮಾಡಿದ್ದು. ಗೌಡ ಭೀಮಸೇನ್ ಜೋಷಿಯನ್ನು ಸಮರ್ಥಿಸಿಕೊಂಡದ್ದು ನಾನು ಅವನನ್ನು ಇನ್ನಷ್ಟು ರೇಗಿಸಿದ್ದು. ಕೊನೆಗೆ ಅವನು ಚಪ್ಪಲಿ ತೆಗೆದುಕೊಂಡ ನನ್ನ ಕಡೆ ಬೀಸಿದ್ದು.. ಎಂದು ನಗುತ್ತಾ ‘ಆ ದಿನಗಳೆಲ್ಲಾ ಎಷ್ಟು ಬೇಗ ಉರಿದುಹೋದವು ಅಲಾ’ ಎಂದ. ತುಸು ಭಾವುಕನಾದಂತಿದ್ದ.

‘ಹೌದಲ್ವಾ!’ ಎಂದು ಭಾವುಕಳಾಗಿ ನಗುತ್ತಾ ಸಕ್ಕರೆ ಡಬ್ಬಕ್ಕೆ ಕೈ ಹಾಕಿದಳು.

ಸಾವಿ ಹುಟ್ಟಿದ ನಂತರ ಬದುಕಲ್ಲಿ ತುಸು ನೆಮ್ಮದಿ ಸಿಕ್ಕಂಗೆ ಆಯ್ತು. ಅವಳೂ ಅವಳಪ್ಪ ನನಗೀಗ ಬೆಸ್ಟ್ ಫ್ರೆಂಡ್ಸ್. ನಮ್ಮ ಮದುವೆಯಾದ ದಿನಗಳನ್ನು ನೆನೆಸಿಕೊಂಡರೆ ಹಾರಿಬಲ್. ನಿನ್ನ ಹತ್ತಿರ ಸಾಕಷ್ಟು ಮಾತಾಡಬೇಕು. ಹೇಗಿದ್ದರು ಒಂದು ವಾರ ಅಂತೂ ಇರುತ್ತೀಯಲ್ಲಾ?’ ಎಂದಳು.

‘ಒಂದು ವಾರ! ಸರಿ ಹೇಳ್ದೆ. ಇನ್ನೊಂದು ಸರ್ತಿ ಯಾವಾಗಾದರೂ ಬರುತ್ತೀನಿ. ಈಗ, ಓ ಗಾಡ್! ಆಗೋದಿಲ್ಲ. ಮಂಡೆ ಎಷ್ಟು ಹೊತ್ತಿದ್ದರೂ ಹೋಗಲೇ ಬೇಕು’.

‘ಒಂದು ವಾರ ಕ್ಲಾಸು, ಸೆಮಿನಾರು, ಲ್ಯಾಬು, ರೀಸರ್ಚ್, ಮರೆತು ಹಾಯಾಗಿ ಇರು. ಅದೆ ಇನ್ನೊಂದು ಸಲ ಅಂದರೆ-ಇನ್ನೊಂದು ಇಪ್ಪತ್ತು ವರ್ಷ ಆದಮೇಲೆ. ಅಷ್ಟು ಹೊತ್ತಿಗೆ ಮರಿಸಾವಿ ಬಂದಿರ್ತಾಳೆ. ಅವಳನ್ನು ನೋಡುವುದಕ್ಕೆ ಬಾ! ಸುಮ್ಮನೆ ಇರು. ಒಂದು ವಾರ ಅಂತೂ ಇರಲೇಬೇಕು. ಅಟ್ಲೀಸ್ಟ್ ಮೂರುದಿನ. ಮುತ್ತಯ್ಯ ಬಿಡಬೇಕಲ್ಲ ಅಷ್ಟಕ್ಕೂ’

‘ರಿಯಲಿ ಸಾರಿ. ಇಂಪಾಸಿಬಲ್. ಲ್ಯಾಬಲ್ಲಿ ಒಂದು ಕೆಮಿಕಲ್ ಅನ್ನು ಅಬ್ಸರ್ವೇಷನ್ ಗೆ ಇಟ್ಟಿದೆ. ಹೋಗಲೇಬೇಕು’.

‘ಅದೆಲ್ಲಾ ಕೇಳಲ್ಲ. ನೀನು ಇರುತ್ತೀಯಾ ಅಷ್ಟೆ’ ಸಾವಿತ್ರಿ ಅಡುಗೆಮನೆಗೆ ಓಡಿಬಂದು, ‘ಅಮ್ಮಾ.. ಪಪ್ಪಾ ಕಾಯ್ತಿದ್ದಾರೆ ಹೊರಗಡೆ. ಒಬ್ಬರೇ ಕೂತು’ ಎಂದಳು.

ನಾಲ್ಕು ಪಿಂಗಾಣಿ ಕಪ್ಪು, ಸಾಸರ್ ಗಳನ್ನು ಮತ್ತು ಬಿಸಿ ಕಾಫಿಯನ್ನು ಒಂದು ಜಗ್ಗಿನಂತಿರುವ ಪಿಂಗಾಣಿ ಬಟ್ಟಲಿನೊಳಗೆ ಸುರಿದು ಮುಚ್ಚಳದಿಂದ ಮುಚ್ಚಿ, ಪಿಂಗಾಣಿ ಟ್ರೇಯಲ್ಲಿ ಇಟ್ಟುಕೊಂಡು ಸುಜಾತ ಹೊರನಡೆದಳು. ಸಾವಿತ್ರಿ ಹಾಗು ಶಾಕ್ಯ ಅವಳನ್ನು ಹಿಂಬಾಲಿಸಿದರು. ಹೊರಗಡೆಹೋಗಿ ಟೇಬಲ್ಲಿನ ಸುತ್ತ ಕೂತರು. ಈ ಭೂಮಿಮೇಲೆ ಇನ್ನೆಲ್ಲೂ ಇರದೆ ಈ ಹುಣ್ಣಿಮೆಯ ಬೆಳದಿಂಗಳು ಇವರ ಅಂಗಳದಲ್ಲಿ ಅದರಲ್ಲೂ ಈ ನಾಲ್ವರ ಮುಖದಮೇಲೆ ಬಿದ್ದು ಮಿನುಗುವಂತಿತ್ತು. ಪಕ್ಕದಲ್ಲಿಯೇ ನಾಯಿ ತನ್ನ ಹಿಂಗಾಲುಗಳನ್ನು ನೆಲಕ್ಕೆ ಸಮನಾಂತರವಾಗಿ ಮಡಿಚಿಕೊಂಡು ಮುಂಗಾಲುಗಳನ್ನು ನೇರ ನಿಲ್ಲಿಸಿಕೊಂಡು ಬೆಳದಿಂಗಳ ನೋಡುತ್ತ ಧ್ಯಾನಿಸುತ್ತಿರುವಂತೆ ಕೂತಿತ್ತು. ಸಾವಿತ್ರಿ ನಿಧಾನ ಪಿಂಗಾಣಿ ಜಗ್ಗಿನ ಮುಚ್ಚಳವನ್ನು ತೆಗೆದು ನಾಲ್ಕೂ ಕಪ್ಪುಗಳಿಗೆ ಕಾಫಿಯನ್ನು ಸುರಿದಳು. ಕಾಫಿಯ ನೊರೆ ಬೆಳದಿಂಗಳಲಿ ಬೆರೆತು ಹೊಳೆಯುತ್ತಿತ್ತು.

‘ಊಟಕ್ಕೆ ಏನಾದ್ರೂ ಸ್ಪೆಷಲ್ ಮಾಡು. ನಾನ್ ವೆಜ್ ಆದರೆ ಪೀಟರ್ಗೆ ಫೋನ್ ಮಾಡ್ತೀನಿ. ತಂದು ಕೊಟ್ಟು ಹೋಗ್ತಾನೆ. ಗಂಟೆ ಏಳುವರೆ ಆಗುತ್ತಾ ಬಂತು. ಎಂಟುವರೆ ತನಕ ಇರುತ್ತಾನೆ’ ಎಂದು ಮುತ್ತಯ್ಯ ಹೇಳಿದ.

‘ಕಪ್ಪಿನ ಸುತ್ತ ಹುಲ್ಲ ಎಸಳಿನ ಭಿತ್ತಿಯನ್ನು ನೋಡುತ್ತಾ ಕಾಫಿ ಹೀರುತ್ತಿದ್ದ ಶಾಕ್ಯ ‘ಪ್ಲೀಸ್ ನಾನ್ ವೆಜ್ ಏನು ಬೇಡ. ನಾನ್ ವೆಜ್ ತಿಂದು ತಿಂದು ಸಾಕಾಗಿದೆ. ವೆಜ್ಜಲ್ಲೇ ಯಾವುದಾದರೂ ದೇಸಿ ಊಟ ಆದರೆ ಸಾಕು’ ಎಂದ.

‘ಎಲ್ಲಿಯಾದರು ಉಂಟಾ? ಮಿಲ್ಟ್ರಿ ಸ್ಕಾಚ್ ಬೇರೆ ಇದೆ. ಒಳ್ಳೆ ಬೆಳದಿಂಗಳು.’

‘ಪ್ಲೀಸ್ ಬೇಡ.’

‘ಸರಿ.’

‘ಅಮ್ಮ ಮಗಳಿಗೆ ಬಿಡಿ. ನಾವೇನೋ ಮಾಡ್ತೀವಿ; ನೀವಿಬ್ಬರು ಮಾತಾಡುತ್ತಾ ಕೂತಿರಿ’ ಎಂದು ಸಾವಿತ್ರಿಯನ್ನು ಕರೆದುಕೊಂಡು ಸುಜಾತ ಒಳಗೆ ಹೋದಳು.

‘ನಿಮ್ಮ ಬಗ್ಗೆ ಸೂಜಿ ಬಹಳ ಹೇಳ್ತಿರುತ್ತಾಳೆ. ನಿಮ್ಮ ಆರ್ಟಿಕಲ್ ಕೆಲವನ್ನು ಓದಿದ್ದೀನಿ. ಅರ್ಥ ಆಗಿಲ್ಲ. ಕೆಲವನ್ನು ಸುಜಾತ ವಿವರಿಸಿ ಹೇಳಿದ್ದಾಳೆ. ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ನಿಮ್ಮ ಹೆಸರು ಖ್ಯಾತಿ ಪಡೆದಿರುವುದನ್ನ ಕೇಳಿದರೆ ತುಂಬಾ ಖುಷಿ ಮತ್ತು ಹೆಮ್ಮೆ ಅನ್ನಿಸುತ್ತೆ’ ಎಂದು ಹೇಳಿದ.

‘ಹಾಗೇನಿಲ್ಲ. ನ್ಯಾನೋ ಟೆಕ್ನಾಲಜಿಯಲ್ಲಿ ಸ್ವಲ್ಪ ಕೆಲಸಮಾಡಿದ್ದೀನಿ. ಜರ್ಮನ್ ನ ಒಂದು ಸೈನ್ಸ್ ಆರ್ಗನೈಸೇಷನ್ ತುಂಬಾ ಮೆಚ್ಚಿಕೊಂಡು ಪೇಟೆಂಟ್ ಕೇಳ್ತಿದೆ. ಆದರೆ ನಮ್ಮ ಕಂಟ್ರಿಯಲ್ಲಿಯೇ ಇದು ಯೂಸ್ ಆಗಲಿ ಎಂದು ನನ್ನ ಆಸೆ. ಆದರೆ ಗೌರ್ನಮೆಂಟ್ ಇನ್ನೂ ಯಾವುದೇ ಅಭಿಪ್ರಾಯ ತಿಳಿಸಿಲ್ಲ. ಲೆಟರ್ ಕರೆಸ್ಪಾಂಡೆನ್ಸ್ ನಡಿತಿದೆ.’

‘ಹ್ಞಾ….’ ಎಂದು ಏನನ್ನೋ ನೆನೆಸಿಕೊಂಡು ಕೇಳುವವವನಂತೆ ಮುತ್ತಯ್ಯ, ‘ಅಲ್ಲದೆ ನಿಮ್ಮ ಕೆಲವು ಕವಿತೆಗಳನ್ನು ಋತುಮಾನ ನೆಟ್ ಮ್ಯಾಗಜಿನ್ನಲ್ಲಿ ಓದಿದ್ದೀನಿ. ರಿಯಲಿ ನ್ಯೂ ಕೈಂಡ್ ಆಫ್ ಪೊಯಟ್ರಿ. ತುಂಬಾ ಇಂಟರೆಸ್ಟಿಂಗ್ ಕವಿತೆ ಮತ್ತು ವಿಜ್ಞಾನ ಜೊತೆ ಜೊತೆಗೆ ಸಾಗುತ್ತಿರುವುದು.’ ಮತ್ತೆ ಮುಂದುವರೆಸಿ, ‘ನಿಮ್ಮ ಕವಿತೆಗಳಲ್ಲಿ ನಾನು ಗಮನಿಸಿರುವಂತೆ ಸಾವು, ಏಕಾಂತತೆ ಮತ್ತು ತಣ್ಣಗೆ ಹರಿವ ವಿಷಾದಗಳು ತುಂಬಾ ಚೆನ್ನಾಗಿ ಪೋಟ್ರೆ ಆಗಿದ್ದಾವೆ. ಪ್ರಕೃತಿಯಿಂದ ನೀವು ಹೆಕ್ಕಿಕೊಂಡಿರುವ ಇಮೇಜ್ ಗಳು ನಮ್ಮ ಮನಸ್ಸಿನೊಳಗೆ ಇಳಿದು ಹರಿದು ಹೋಗುತ್ತವೆ. ಬಟ್ ಬಹಳಷ್ಟು ಪದ್ಯಗಳು ಅತೃಪ್ತಿಯನ್ನು ಕುರಿತು ಹೇಳುತ್ತವೆ. ನಿಮ್ಮೊಳಗೊಬ್ಬ ಭಾವುಕನಿದ್ದಾನೆ. ಆದರೆ ನಿಮ್ಮನ್ನು ಬಾಹ್ಯವಾಗಿ ನೋಡಿದರೆ ಗೊತ್ತೇ ಆಗುವುದಿಲ್ಲ. ಅಲ್ಲ ಹೇಗೆ ಬ್ಯಾಲೆನ್ಸ್ ಮಾಡ್ತೀರ ನಿಮ್ಮ ರೀಸರ್ಚ್ ಮತ್ತು ಕವಿತೆಯನ್ನು?’

‘ಇದರ ಬಗ್ಗೆ ಲಿಟರೇಚರ್ ಓದಿಕೊಂಡಿರುವ ನಿಮಗೆ ನಾನು ಹೇಳುವುದು ಏನಿದೆ?’ ಎಂದು ಅಂಜಿಕೆಯಿಂದ ಹಾಗು ತುಸು ಭಾವುಕನಾಗಿ, ‘ನೇರವಾಗಿ ಹೇಗೆ ಹೇಳಬೇಕೆಂದು ನನಗೂ ಗೊತ್ತಾಗುತ್ತಿಲ್ಲ. ಆದರೆ ಕವಿತೆ ನನ್ನ ರೀಸರ್ಚ್ ಗೆ ದೊಡ್ಡ ಸ್ಪೂರ್ತಿ. ಬಹುಷಃ ಕವಿತೆ ಬರೆಯದಿದ್ದರೆ ನಾನ್ಯಾವತ್ತೋ ಸತ್ತು ಹೋಗುತ್ತಿದ್ದೆ ಅನ್ನಿಸುತ್ತೆ. ಪ್ರಕೃತಿಯೊಳಗೆ ನನ್ನನ್ನು ಬೆರೆಸಿರುವುದೇ ಕವಿತೆಗಳು. ನೋವನ್ನು ಮರೆಯಲು ಒಂದು ಪುಟ್ಟ ಹೂವು, ಮೆಲ್ಲ ಹರಿವ ಬಸವನಹುಳು, ಹರಿವ ನೀರ ನಿನಾದ ಹೀಗೆ ಅನೇಕ’ ಹೇಳಿದ.
‘ಎಂತಾ ಸ್ಟ್ರೇಂಜ್ ಅಲ್ಲವಾ?’ ಎಂದು ಹೊಳೆವ ಚಂದಿರನನ್ನೇ ನೋಡುತ್ತಾ, ‘ನಾನು ಎಂ.ಎ.ದಲ್ಲಿ ಲಿಟರೇಚರ್ ಓದಿದ್ದರೂ ಇವತ್ತಿಗೂ ಒಂದು ಕವಿತೆ ಬರೆಯುವುದಕ್ಕೇ ಆಗಿಲ್ಲಾ!’,

‘ಆದರೆ ನೀವು ನಿಜವಾದ ಕವಿತೆಯನ್ನೇ ಬರೆದಿದ್ದೀರಾ’ ಎಂದ ಶಾಕ್ಯನ ಮಾತಿಗೆ ‘ಅಂದರೆ!’ ಮುತ್ತಯ್ಯ ಕುತೂಹಲಗೊಂಡು, ‘ಮತ್ತೆ ನೀವು ಬರೆದಿರುವುದು ಹಾಗು ಬರೆಯುತ್ತಿರುವುದು ಸುಳ್ಳೋ!’ ಎಂದು ಮುತ್ತಯ್ಯ ತಮಾಷೆ ಮಾಡಿದ.

‘ಡೊಂಟ್ ಟೇಕ್ ಇಟ್ ಲಿಟರಲಿ’ ಎಂದು ಸ್ವಲ್ಪ ಬಿಡಿಸಿ ‘ಸಾವಿ ನೀವು ಬರೆದಿರುವ ನಿಜವಾದ ಕಾವ್ಯ’ ಎಂದ.
ಇದಕ್ಕೆ ಮುತ್ತಯ್ಯ ‘ನೀವು ತುಂಬಾ ಜೋಕ್ಸ್ ಸಹ ಮಾಡ್ತೀರಾ’ ಎಂದು ಹೇಳಿದ.

‘ಹೇಳಬೇಕೆಂದರೆ ನಿಮ್ಮಿಬ್ಬರದು ಗುಡ್ ಕಾಂಬಿನೇಷನ್. ನಿಮ್ಮದು ಲಿಟರೇಚರ್. ಸೂಜಿದು ಸೈನ್ಸ್. ಅಂದಹಾಗೆ ಮದುವೆ ಆದಮೇಲೆ ಯಾವತ್ತಾದರೂ ಟೀಚ್ ಮಾಡಬೇಕು ಎಂದು ಕೇಳಿದ್ದಳಾ?’

‘ನಾನೇ ಕೇಳಿದ್ದೆ. ನನಗಂತು ಇಷ್ಟವಿಲ್ಲ. ನೀನು ಹೋಗುತ್ತೀಯಾ ಅಂದರೆ ನನ್ನದೇನು ಅಭ್ಯಂತರ ಇಲ್ಲ ಎಂದಿದ್ದೆ. ಆದರೆ ಅವಳೇ ಬೇಡ, ನಿನ್ನ ಜೊತೆ ನಾನು ಕೃಷಿ ಮಾಡ್ತೀನಿ ಎಂದು ಈ ಇಪ್ಪತ್ತು ವರ್ಷದಿಂದ ನನ್ನೊಟ್ಟಿಗೇ ಕೃಷಿ, ಮನೆ ಕೆಲಸ, ಬಂದವರು ಹೋಗುವವರನ್ನು ಸುಧಾರಿಸುವುದು ಹೀಗೆ…’

‘ನಿಮ್ಮನ್ನು ಮುಖತಃ ಈ ಹಿಂದೆ ಭೇಟಿಯಾಗಿಲ್ಲದಿದ್ದರೂ ನನಗಂತೂ ನೀವು ಅಪರಿಚಿತರೆನ್ನುವ ಫೀಲೇ ಇಲ್ಲ.’

‘ನನಗೂ ಅಷ್ಟೇ ಯಾವುದೋ ಹಳೆಯ ಗೆಳೆಯನನ್ನು ಮತ್ತೆ ಎಷ್ಟೋ ವರ್ಷಗಳ ಬಳಿಕ ಭೇಟಿಯಾಗಿದ್ದೀನೇನೋ ಅನ್ನಿಸುತ್ತಿದೆ.’

ಒಂದು ಗಂಟೆಯೊಳಗೆ ಸುಜಾತ ಮತ್ತು ಸಾವಿತ್ರಿ, ಮುದ್ದೆ, ಅನ್ನ, ಒಣಮೀನ ಗೊಜ್ಜು, ನುಗ್ಗೇಸೊಪ್ಪಿನ ಉಪ್ಪೆಸರು, ಮೊಟ್ಟೆಗಳನ್ನು ಹಾಕಿ ಹುರಿದ ನುಗ್ಗೇ ಸೊಪ್ಪನ್ನ ತಯಾರಿಸಿ, ಮನೆಯಲ್ಲಿಯೇ ತಯಾರಿಸಿರುವ ಬಿಳಿ ಜೋಳದ ಹಪ್ಪಳಗಳನ್ನು ಕರಿದು ಎಲ್ಲವನ್ನು ಒಂದು ಹತ್ತಿರ ಇಟ್ಟರು.

‘ಸಾವಿ ಅಗೋ ಆ ಶೆಲ್ಫ್ ನಲ್ಲಿ ಅಜ್ಜಿ ಕಳುಹಿಸಿರುವ ಹುಣುಸೇ ಹಿಂಡಿ ಇದೆ. ಅದನ್ನು ಕೆಳಗೆ ಇಳಿಸಿಕೊಂಡು ಸ್ವಲ್ಪ ಆ ಬಟ್ಟಲಲ್ಲಿ ಹಾಕಿ ಇಡು. ಅವರನ್ನು ಕರೆದುಕೊಂಡು ಬರುತ್ತೇನೆ’ ಎಂದು ಹೊರನಡೆದಳು ಸುಜಾತಾ. ಸ್ವಲ್ಪ ಹೊತ್ತು ಕಾದು ಅವರು ಒಳಗೆ ಬರದಿದ್ದುದಕ್ಕೆ ಸಾವಿತ್ರಿ ಪಪ್ಪಾ.. ಅಮ್ಮಾ.. ಎಂದು ಕೂಗಿಕೊಂಡು ಹೊರಹೋದಳು. ‘ಸಾವಿ ನಿಮ್ಮ ಅಪ್ಪ ಮತ್ತು ಶಾಕ್ಯ ಕಾಣಿಸುತ್ತಿಲ್ಲ ಕಣೆ. ಬಾ ತೋಟದ ಕಡೆ ಏನಾದರೂ ಹೋಗಿರಬಹುದು. ನೋಡೋಣ’ ಎಂದು ಹೇಳಿ ಅವಳನ್ನು ಕರೆದುಕೊಂಡು ಆ ಕಡೆ ನಡೆದಳು.

‘ಪಪ್ಪಾ.. ಪಪ್ಪಾ..’ ಎಂದು ನಾಲ್ಕೈದು ಬಾರಿ ಸಾವಿತ್ರಿ ಕೂಗಿದಳು. ಆದರೆ ಯಾವುದೇ ಸದ್ದು ಕೇಳಿಸಲಿಲ್ಲ.

‘ಸಾವಿ ಈ ನಾಯಿನೂ ಕಾಣುತ್ತಿಲ್ಲವಲ್ಲೇ’

‘ಅದೂ ಅವರ ಜೊತೆ ಹೋಗಿರಬಹುದ ಅಮ್ಮಾ’ ಅಂದಳು ಸಾವಿತ್ರಿ.

ತೋಟದಲ್ಲಿ ಗಾಳಿ ಬೀಸುತ್ತಿದ್ದುದರಿಂದ ಎಲೆಗಳ ಸದ್ದು ಕೇಳಿಸುತ್ತಿತ್ತು. ಜೊತೆಗೆ ಜೀರುಂಡೆ, ಕಪ್ಪೆಗಳ ಸದ್ದು. ಸುಮಾರು ಸಲ ಕೂಗಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ‘ಎಲ್ಲಿಗೆ ಹೋದರಪ್ಪ ಇಷ್ಟು ಹೊತ್ತಿನಲ್ಲಿ’ ಎಂದು ಮಾತಾಡಿಕೊಳ್ಳುತ್ತಾ ಸಾವಿತ್ರಿ, ಸುಜಾತಾ ವಾಪಸ್ಸಾದರು. ವಾಪಸ್ಸುಬರುತ್ತಿರುವಾಗ ಮನೆಯ ಬಲಗಡೆಯ ಶೇಂಗಾ ಹೊಲದ ಕಡೆಯಿಂದ ಅವರಿಬ್ಬರು ಮಾತಾಡಿಕೊಂಡು ಬರುತ್ತಿರುವುದು ಕಾಣಿಸಿತು. ನಾಯಿ ಅವರ ಮುಂದೆ ನೆಲವನ್ನು ಮೂಸಿನೋಡಿಕೊಂಡು ಬರುತ್ತಿತ್ತು.

‘ಯಾವ ಕಡೆ ಹೋಗಿದ್ರಿ? ನಾವು ತೋಟದ ಕಡೆ ಹೋಗಿ ಕೂಗುತ್ತಿದ್ದೇವೆ.’

‘ಓ ಈಗ ಗೊತ್ತಾಯ್ತು ಕ್ವಾರಿ ಹತ್ತಿರ ಹೋಗಿದ್ದರೂ ಅನ್ನಿಸುತ್ತೆ.. ಅಲ್ವಾ ಪಪ್ಪಾ?’

‘ಹೋಗೋಣ ಅಂತ ಹೋದ್ವಿ. ಅರ್ಧ ದಾರಿಗೆ ಹೋಗಿ ಪುನಃ ವಾಪಸ್ಸು ಬಂದ್ವಿ, ನಾಳೆ ಬೆಳಗ್ಗೆ ಹೋದರೆ ಆಯ್ತು ಅಂಥ.’

‘ಸಾಯಲಿ ಬಿಡ್ರಿ. ನಮಗೆ ಯಾಕೆ’ ಅಂದಳು ಸುಜಾತಾ.

‘ಯಾಕೆ ಸೂಜಿ? ತುಂಬಾ ಡೆಸ್ಪರೇಟಾಗಿ ಮಾತಾಡ್ತಿ?’ ಶಾಕ್ಯ ಕೇಳಿದ.

ಒಂದು ಕಾಲನ್ನು ಕಲ್ಲಿನ ಮೇಲೆ ಕೂತು ಮಡಿಚಿ ಇಟ್ಟುಕೊಂಡು, ಮತ್ತೊಂದನ್ನು ಇಳಿಬಿಟ್ಟಿದ್ದಾಳೆ. ಅವಳ ಆ ಪಾದವ ತೋಯಿಸಿಕೊಂಡು ನೀರು ಹರಿಯುತ್ತಿದೆ. ಇನ್ನೂ ಹತ್ತಿರ ಹತ್ತರ ಹೋಗಿ ಫೋಟೋವನ್ನು ದಿಟ್ಟಿಸತೊಡಗಿದ. ಸುಜಾತಳೂ ಸಹ ಪುಟ್ಟ ಹುಡುಗಿಯಾಗಿದ್ದಾಗ ಹೀಗೇ ಇದ್ದಳೇನೋ ಎಂದು ಕಲ್ಪಿಸಿಕೊಂಡ.

‘ಮತ್ತಿನ್ನೇನು? ಆ ಕಂಪನಿಯವರು ನಮ್ಮಂಥವರ ಮಾತನ್ನೆಲ್ಲಾ ಕೇಳುತ್ತಾರ? ಈ ಊರಲ್ಲೂ ಅಷ್ಟೆ. ಅವರಪರವೇ ಜನ. ಎಂಥಹ ಅದ್ಭುತವಾದ ಕೋಟೆ. ಎಲ್ಲಾ ಹಾಳುಮಾಡಿದರು. ಈ ರಾಜ್ಯದ ಪ್ರಾಚೀನ ಶಾಸನಗಳಲ್ಲಿ ಒಂದು ಅಲ್ಲೇ ಇತ್ತಂತೆ. ಒಂದು ಊರಿಗೆ ನೆನಪೇ ಇಲ್ಲದಂತೆ ಮಾಡಿಬಿಟ್ಟರು. ಕಲ್ಲಿನ ಅರಮನೆ. ಏಕ ಶಿಲೆಯಲ್ಲಿಯೇ ಕೊರೆದ ಸಾವಿರದ ಒಂದು ದೇವತೆಗಳು. ಹೊಂಡ. ಥೂ ಎಲ್ಲಾ ಹಾಳುಮಾಡಿಬಿಟ್ಟರು. ಇಲ್ಲಿಯ ಕಲ್ಲುಗಳಿಗೆ ಹೊರದೇಶದಲ್ಲಿ ತುಂಬಾ ವ್ಯಾಲ್ಯೂ ಇದೆಯಂತೆ. ಈ ಊರಿನವರಿಗೇ ಮನೆಕಟ್ಟುವುದಕ್ಕೆ ಕಲ್ಲುಗಳಿಲ್ಲ. ಹೊರದೇಶದ ಮನೆಗಳಿಗೆ ನಮ್ಮ ದೇಶದ ಕಲ್ಲುಗಳ ಅಡಿಪಾಯ. ಸರ್ಕಾರಕ್ಕೆ ಡೆವಲಪ್ಮೆಂಟ್ ಅಂದರೆ ಇಲ್ಲಿಯ ಸಂಪತ್ತನ್ನ ಹೊರ ದೇಶಗಳಿಗೆ ಲಕ್ಷಗಳಿಗೆ ಕೋಟಿಗಳಿಗೆ ಮಾರಿಕೊಳ್ಳವುದು. ಥೂ ಸರ್ಕಾರದವರು ಹೊರಗೆ ರಾಷ್ಟ್ರಗೀತೆ ಹಾಡುತ್ತಾರೆ. ಒಳಗೊಳಗೆ ದೇಶವನ್ನು ಲೂಟಿ ಮಾಡುತ್ತಾರೆ. ಬನ್ನಿ ಬನ್ನಿ ನಮ್ಮ ಮಾತುಗಳೆಲ್ಲಾ ಜೋಗಪ್ಪರ ಮಾತುಗಳು ಇದ್ದಂಗೆ’ ಎಂದು ಬೇಸರದಿಂದ ಸಿಟ್ಟಿನಿಂದ ಹೇಳುತ್ತಾ ಒಳನಡೆದಳು.

ಸಾವಿತ್ರಿ ಎರಡೂ ಅಂಗೈ ಬೆರಳುಗಳನ್ನು ಒಂದರ ನಡುವೆ ಒಂದನ್ನು ತೂರಿಸಿಕೊಂಡು ಎರಡೂ ತೋರುಬೆರಳುಗಳನ್ನು ಒಂದಕ್ಕೊಂದು ಒತ್ತಿಕೊಂಡು ತುಟಿಗೆ ಇಟ್ಟುಕೊಂಡು ಅಡುಗೆ ಮನೆ ಕಡೆ ತನ್ನ ಅಮ್ಮನನ್ನು ಹಿಂಬಾಲಿಸಿದಳು. ಮುತ್ತಯ್ಯ ಬಕೆಟ್ ಗೆ ನೀರನ್ನು ಸುರುವಿ ಶಾಕ್ಯನಿಗೆ ಮುಖತೊಳೆಯಲು ಹೇಳಿದ. ಶಾಕ್ಯ ಮುಖ ತೊಳೆದವನೇ ನೇರ ಹಾಲ್ ಗೆ ಬಂದು ‘ನೆಲದಲ್ಲಿ ಕೂತು ಊಟ ಮಾಡೋಣ್ವಾ?’ ಎಂದು ಅಡುಗೆ ಮನೆಯಲ್ಲಿ ಊಟಕ್ಕೆ ತಯಾರಿ ಮಾಡುತ್ತಿದ್ದ ಸುಜಾತಳಿಗೆ ಹೇಳಿದ. ತಕ್ಷಣಕ್ಕೆ ಸಾವಿತ್ರಿಗೆ ಹೇಳಿ ನಡುಮನೆಯ ಮಧ್ಯೆ ಜಮಖಾನ ಹಾಸಿಸಿದಳು.

‘ಯಾವುದೋ ಒಂದು ಐಟಂ ತುಂಬಾ ಘಮಘಮ ಪರಿಮಳ ಸೂಸುತ್ತಿದೆಯಲ್ಲಾ!’ ಎಂದ ಶಾಕ್ಯ.

ಅದಕ್ಕೆ ಸಾವಿತ್ರಿ, ‘ಅದಾ.. ಜೀರಿಗೆ ಸಣ್ಣ ಅಕ್ಕಿ. ನಮ್ಮ ಅಜ್ಜಿ ಮನೆದೂ. ಸಖತ್ತಾಗಿದೆಯಲಾ ಸ್ಮೆಲ್’ ಅಂದಳು.

‘ಚಪಾತಿ, ತಿಂದೂ ತಿಂದೂ ಸಾಕಾಗಿದೆ. ಜೊತೆಗೆ ಆ ಬಿ.ಟಿ.ರೈಸು. ನಾಲಗೆ ಸ್ವಾದವನ್ನೇ ಕಳೆದುಕೊಂಡಿದೆ. ಅಲ್ಲಾ ಇಷ್ಟೊಂದೆಲ್ಲಾ ಇಷ್ಟು ಬೇಗ ಹೇಗೆ ಪ್ರಿಪೇರ್ ಮಾಡಿದೆ?’ ಅಂದ.

’ಅವಳೊಬ್ಬಳ ಕೈಲಿ ಎಲ್ಲಿ ಆಗುತ್ತೆ? ನನ್ನ ಮಗಳು ಇಲ್ವಾ ದ ಗ್ರೇಟ್ ಸಾವಿತ್ರಿ!’ ಎಂದು ಮುತ್ತಯ್ಯ ಅಂದ. ‘ಒಟ್ಟು ನಿನ್ನ ಮಗಳು ಮುಂದೆ ಇರಬೇಕು ಯಾವಾಗಲು’ ಎಂದು ಛೇಡಿಸಿ, ‘ಇನ್ನು ಮುಂದೆ ನೋಡೋಣ… ಅವಳು ಎಂ.ಬಿ.ಬಿ.ಎಸ್.ಗೆ ಹೋದಾಗ’ ಅಂದಳು. ‘ಹೌದಾ ಸಾವಿ! ಎಂ.ಬಿ.ಬಿ.ಎಸ್. ಗೆ ಜಾಯ್ನ್ ಆಗುತ್ತಿದ್ದೀಯಾ? ಆಲ್ ದಿ ಬೆಸ್ಟ್. ರಿಯಲಿ ಯು ಹ್ಯಾವ್ ಚೂಸನ್ ಎ ಹೋಲಿ ಜಾಬ್. ರೋಗಿಯನ್ನು ಸರ್ವೀಸ್ ಮಾಡುವುದಿದೆಯಲ್ಲಾ ಗ್ರೇಟ್. ಆದರೆ ಅಂಥ ಹೋಲಿ ಜಾಬ್ ಇಂದು ಡೆವಿಲ್ ಗಳ ಕೈಯಲ್ಲಿದೆ.’ ಎಂದ ಶಾಕ್ಯ. ‘ಅಯ್ಯೋ ಅವಳು ಜಾಯ್ನ್ ಆಗುವತನಕ ಏನೇನು ರಾಣ ರಂಪೋ?’ ಎಂದಳು ಸುಜಾತ.

‘ಯಾಕೆ?’

‘ಅವರದೇ ದೊಡ್ಡ ತಕರಾರು. ಸುತ್ರಾಮ್ ಇಷ್ಟ ಇಲ್ಲ.’

‘ಮಗಳನ್ನು ಬಿಟ್ಟಿರಬೇಕಾಗುತ್ತಲ್ಲ ಅನ್ನುವ ಫೀಲಿಂಗ್. ಒಂಥರ ಪೊಸೆಸ್ಸಿವ್ನೆಸ್ಸ್. ಎಲ್ಲಾ ಸರಿಯಾಗುತ್ತೆ. ಹಿ ವಿಲ್ ಅಗ್ರಿ. ಡೊಂಟ್ ವರಿ’ ಎಂದ ಶಾಕ್ಯ.

‘ನೆನೆಸಿಕೊಂಡರೆ ಕರುಳು ಕಿವುಚಿದಂಗಾಗುತ್ತೆ. ಈ ಪುಟ್ಟ ಕೈಗಳಿಂದ ಎಂಥೆಂತಹವೋ ಹೆಣಗಳನ್ನೆಲ್ಲಾ ಕೊಯ್ಯಬೇಕಲ್ಲಪ್ಪಾ’ ಎಂದ ಮುತ್ತಯ್ಯ ನೀರುಕುಡಿದು, ಲೋಟವನ್ನು ಕೆಳಗಿಟ್ಟು, ಮಗಳ ಕೈಯನ್ನು ಒಮ್ಮೆ ಮುಟ್ಟಿ ಮರುಕದಿಂದ ಹೇಳಿದ.

‘ನೀವಂಥೂ ಜಗತ್ತಿನ ಅನೇಕ ಲೇಖಕರನ್ನು ಓದಿಕೊಂಡು ಹೀಗೆ ಇಂಪ್ರಾಕ್ಟಿಕಲ್ ಆಗಿ, ಇರ್ಯಾಷನಲ್ ಆಗಿ ಯೋಚಿಸುತ್ತೀರಲ್ರಿ. ವೈಚಾರಿಕತೆ, ವಿಮರ್ಶೆ ಅಂತೆಲ್ಲಾ ಮಾತಾಡ್ತೀರಾ. ಮಗಳ ವಿಷಯದಲ್ಲಿ ಮಾತ್ರ ಕನ್ಸರ್ವೇಟಿವ್ ಆಗಿ ಯೋಚಿಸುವುದು. ನೀವೇ ಹೇಳ್ತಾ ಇರ್ತೀರಾ ತನುವಿನೊಳಗನುದಿನಾ ವಿದ್ದೂ ಎನ್ನಾ ಮನಕೊಂದು ಮಾತಾ ಹೇಳದೇ ಹೋದೆ ಹಂಸಾ’ ಎಂದು ರೇಗಿಸಿದಳು.

‘ಊಟ ತುಂಬಾ ಚೆನ್ನಾಗಿದೆ. ನನಗಂತೂ ಇಂಥ ಊಟ ಮಾಡಿ ಎಷ್ಟೋ ವರ್ಷಗಳು ಆದ ಹಾಗೆ ಆಗಿದೆ.

‘ಆದರೆ’, ಮುತ್ತಯ್ಯನ ಮುಖ ನೋಡಿಕೊಡು, ‘ಒಬ್ಬರಿಗೆ ತುಂಬಾ ನಿರಾಸೆಯಾಗಿದೆ. ಸ್ಕಾಚ್ ಕುಡಿಯಲಿಲ್ಲವಲ್ಲಾ ಎಂದು; ಆದರೆ, ನನ್ನದೇನು ಅಬ್ಜಕ್ಷನ್ ಇಲ್ಲಪ್ಪ. ಕುಡಿಯಬಹುದು ಈಗಲೇ ಬೇಕಾದರೆ’ ಅಂದಳು.

‘ನೋ ನೋ. ಹಾಗೇನಿಲ್ಲ. ನೋಡೋಣ. ಅದಕ್ಕೆ ಎಂದು ಟೈಂ ಬರುತ್ತೆ’ ಅಂದ. ‘ಸ್ಕಾಚ್ ಹಳೆಯದಾದಷ್ಟು ಟೇಸ್ಟಂತೆ, ಅಲ್ವಾ ಪಪ್ಪಾ’ ಎಂದಳು ಸಾವಿತ್ರಿ. ಅದಕ್ಕೆ ಶಾಕ್ಯ ನಕ್ಕ.

ಊಟ ಆದ ಮೇಲೆ ಎಲ್ಲರೂ ಮತ್ತೆ ಬೆಳದಿಂಗಳ ಅಂಗಳಕ್ಕೆ ಹೋದರು. ಸಾವಿತ್ರಿ ಅನ್ನಕ್ಕೆ ಹಾಲನ್ನು ಬೆರೆಸಿಕೊಂಡು ಒಂದು ತಟ್ಟೆಯಲ್ಲಿ ಇಟ್ಟು ಬಂದು ಅವರನ್ನು ಸೇರಿಕೊಂಡಳು.

‘ಇಫ್ ಯು ಡೋಂಟ್ ಮೈಂಡ್ ಮೆ ಐ ಸ್ಮೋಕ್’ ಎಂದು, ಮುತ್ತಯ್ಯನಿಗೆ ಪ್ಯಾಕೆಟ್ ಹಿಡಿದು, ‘ಡು ಯು?’ ಅಂದ.

‘ಪಪ್ಪಾ ಇದನ್ನೇ ಕಾಯ್ತಾ ಇದ್ದರು’ ಎಂದಳು ಸಾವಿತ್ರಿ.

ಮುತ್ತಯ್ಯ ಸುಜಾತಳ ಕಡೆ ತಿರುಗಿದ.

‘ಯಾವಾಗಲೂ ಎಲ್ಲಾ ಕಡೆಯೂ ನನ್ನನ್ನೇ ಕೇಳ್ತೀರಾ?’ ಎಂದು ಛೇಡಿಸಿದಳು.

‘ಹಾಗೇನಿಲ್ಲಪ್ಪಾ. ಸುಮ್ಮನೆ ನಿನ್ನನ್ನು ನೋಡಬೇಕು ಅನ್ನಿಸಿತು ನೋಡ್ದೆ. ಬೆಳದಿಂಗಳ ಬೆಳಕಲ್ಲಿ ನೀನು ಹೇಗೆ ಕಾಣುತ್ತೀಯಾ ಎಂದು’ ಅಂದ.

‘ಆಹಾಹಾ… ನನಗೆ ಗೊತ್ತಿಲ್ಲವಾ ನಿಮ್ಮ ನಾಟಕ?’

ಶಾಕ್ಯ ಸಿಗರೇಟನ್ನು ಲೈಟರ್ನಲ್ಲಿ ಹಚ್ಚಿಕೊಂಡು, ಮುತ್ತಯ್ಯನ ಸಿಗರೇಟ್ ಗೆ ಹಿಡಿದ. ಒಂದು ಧಮ್ ಎಳೆದು ಹೊಗೆಯನ್ನು ಸುರುಳಿಯಾಗಿ ಬಿಡುತ್ತಾ ಬೆಳದಿಂಗಳನ್ನು ನೋಡುತ್ತಾ ಒಂದು ಕ್ಷಣ ಸುಜಾತಳ ಕಡೆ ನೋಡಿದ. ಆಗಷ್ಟೇ ಕಾಣಿಸಿಕೊಳ್ಳುತ್ತಾ ಇಣುಕಿ ನೋಡುತ್ತಿರುವ ಬಿಳಿ ಕೂದಲು. ಆದರೆ, ಕಣ್ಣುಗಳಿಗೆ ಮಾತ್ರ ವಯಸ್ಸಾಗದೆ ಇನ್ನಷ್ಟು ಹೊಳಪು ಬಂದು ಹೊಳೆಯುತ್ತಿದ್ದವು. ದುಂಡು ಮುಖ. ಸಪೂರ ದೇಹ. ಎಂತಹವರನ್ನು ಕರಗಿಸುವಂತಹ ಮಾತು.

ಅವನ ಮನಸ್ಸಿನ ದಡಕ್ಕೆ- ‘ರಾಗಿಣಿ’, ‘ಆಸ್ಪತ್ರೆ.’, ‘ಅವಳು ಬದುಕಬೇಕೆಂದರೆ ಅದನ್ನು ತೆಗೆಯಲೇಬೇಕು.’ ‘ನೋವೆ’. ‘ಬೆಟರ್ ಅಡಾಪ್ಟ್.’ ‘ಒಂದು ಸಲ ಟೆಸ್ಟ್ ಟ್ಯೂಬ್ ಟ್ರೈ ಮಾಡೋಣ್ವಾ?’…

‘ಸಾರಿ. ಹೀಗೆ ಆಗುವುದಕ್ಕೆ ಚಾನ್ಸೇ ಇಲ್ಲ. ಬಟ್. ಫೇಲ್ಯೂರ್ ಡ್ಯೂಟು ನೆಗ್ಲಿಜೆನ್ಸ್. ಟೆಂಪರೇಚರ್ ಮೇಂಟೇನ್ ಮಾಡುವುದರಲ್ಲಿ ಮಿಸ್ಸಾಗಿದೆ.’

‘ಹೋಗಲಿ ಬಿಡು. ಅಡಾಪ್ಟ್ ಮಾಡಿಕೊಳ್ಳೋಣ.’- ಅಸ್ಪಷ್ಟ ಚಿತ್ರಗಳು ಅಲೆಅಲೆಯಾಗಿ ಬಡಿಯುತ್ತಿವೆ. ಕಣ್ಣು ಒದ್ದೆಯಾದವು. ತಕ್ಷಣಕ್ಕೆ ಅವರಿಗೆ ಅರಿವಾಗದೋಪಾದಿಯಲ್ಲಿ ಕಣ್ಣುಗಳನ್ನ ಒರೆಸಿಕೊಂಡು, ಸಾವಿತ್ರಿಯನ್ನು ನೋಡಿದ. ಅವಳು ನಾಯಿಯ ಕಡೆ ಮುಖಮಾಡಿ ನಾಯಿಯನ್ನು ಅಣಕಿಸುತ್ತಿದ್ದಾಳೆ.
ಅದು ನಾಲಗೆಯನ್ನು ಜೋತುಬೀಳಿಸಿಕೊಂಡು ಇವಳಕಡೆ ನೋಡುತ್ತಿದೆ. ಅದರ ನಾಲಗೆತುದಿಯಿಂದ ಒಂದೊಂದೇ ಹನಿ ಜೊಲ್ಲು ಮಳೆನೀರಿನಂತೆ ಶುಭ್ರವಾಗಿ ಬೀಳುತ್ತಿದೆ. ಮತ್ತೆ ಅಲೆಗಳು ಅವನ ಮನಸ್ಸಿನ ದಡಕ್ಕೆ ಬಡಿಯುತ್ತಿವೆ- ‘ಅವಳು ಸೈಕಿಕ್ ಆಗಿದ್ದಾಳೆ.’ ‘ಮಕ್ಕಳಿಲ್ಲ ಎನ್ನುವ ಕೊರಗು.’
‘ನೀನು ಬಿಟ್ಟರೆ ಬೇರೆಯಾರಿರಬಹುದು ಅವಳ ಹತ್ತಿರ.’ ‘ಒಂದು ವರ್ಷ ರಜೆಹಾಕಿ ಅವಳನ್ನು ಎಲ್ಲಿಗಾದರೂ ಕರೆದುಕೊಂಡು ಹೋಗು.’
‘ರೀಸರ್ಚ್, ಲ್ಯಾಬ್, ಸೆಮಿನಾರ್ ಗಳು, ತರಗತಿಗಳು, ಸ್ಟೂಡೆಂಟ್ಸ್. ಕ್ಯಾಂಪಸ್ಸು.’ ‘ಅದು ಹೇಗೆ ಸಾಧ್ಯ.’ ‘ಅರೆ ಇದೊಳ್ಳೆ ಕತೆ ಆಯ್ತಲ್ಲ. ನನ್ನ ಮಗಳ ಬಾಳು ಹಾಳಾಯ್ತು. ನನ್ನ ಗೌರವ. ಮರ್ಯಾದೆ. ಯಾಕೆ. ಯಾಕೆ. ಅಂಥ ಕೇಳ್ತಾರೆ. ಏನು ಹೇಳಲಿ ಅವರಿಗೆಲ್ಲಾ….’ ‘ಬದುಕಿಗಿಂತಾ ಓದೇ ಮುಖ್ಯನಾ? ಸಂಸಾರ ಅಂದರೆ ಸುಮ್ಮನೇನಾ? ಲ್ಯಾಬಲ್ಲಿ ಮಾಡುವ ಎಕ್ಸ್ಪೆರಿಮೆಂಟಾ?’, ‘ಯಾರು ಕಾರಣ ಇದಕ್ಕೆ?’ ‘ನೀನೇ…….’
‘ಹೌದು ಪೋಸ್ಟ್ ಪೋನ್ ಮಾಡದಿದ್ದರೆ ಹೀಗಾಗುತ್ತಿತ್ತಾ?’ ‘ಬೇಡ. ಬೇಡ ಎಂದು ಹೇಳಿದಿವಿ. ಕೇಳಿದ. ಕೊನೆಗೆ ನೋಡು ಗರ್ಭಕೋಶವನ್ನೇ ತೆಗೆಯಬೇಕಾಯಿತು.’ ‘ಕಾರಣಕ್ಕೆ ಕಾರಣಗಳು.’ ‘ನನಗೇನು ಇಷ್ಟವಿರಲಿಲ್ಲವಾ?’ ಯಾವುಯಾವುದಕ್ಕೆ ಆಯ್ತೋ?’ ‘ಜಗತ್ತಿನೊಳಗೆ ನಾನು ಏನೂ ಅಲ್ಲದಿದ್ದರೂ ನನ್ನೊಳಗೆ ಜಗತ್ತಿದೆ. ಹೂವಿದೆ. ಎಲೆಇದೆ. ನದಿಯಿದೆ. ನಕ್ಷತ್ರಗಳಿದ್ದಾವೆ. ಗುಡ್ಡಗಳಿದ್ದಾವೆ. ಸಿರಿಇದೆ. ದಟ್ಟ ದಾರಿದ್ರ್ಯವೂ ಇದೆ. ಮಕ್ಕಳಿದ್ದಾವೆ, ಹಾಲುಕೊಡೋ ಎದೆಯಿಲ್ಲ. ಹಾಲಿದೆ ಮಕ್ಕಳಿಲ್ಲ. ಅನಿರೀಕ್ಷಿತವಾದಂತಹ ಬದುಕಲ್ಲಿ ನಾವೇನು ಶಾಶ್ವತವಾಗಿ ಉಳಿಯುತ್ತೇವಾ…

ಎಂತೆಂತಹ ಸಮಸ್ಯೆಗಳಿದ್ದಾವೆ ಈ ಜಗತ್ತಿನಲ್ಲಿ. ಜಗದ ಮಕ್ಕಳನ್ನೇ ನಮ್ಮ ಮಕ್ಕಳೆಂದು ಭಾವಿಸಬೇಕು. ಎಲ್ಲವನ್ನೂ ಅಷ್ಟೆ ಭಾವಿಸುತ್ತಾ ಹೋಗುವುದು. ನಾವು ಯಾವುದನ್ನು ಭಾವಿಸದೇ ಹೋದರೆ ಯಾವುದು ನಮ್ಮದಲ್ಲ. ಈ ಜಗತ್ತೂ. ಹೀಗೆ ಇದ್ದುಕೊಂಡು ಹೋದರಾಯ್ತು..’ ‘ ನಿನ್ನಂಥ ಹುಚ್ಚನಿಗೆ ಕಟ್ಟಿ ನನ್ನ ಮಗಳು ಬಾಳು ಹಾಳಾಯ್ತು’.

ಮುತ್ತಯ್ಯ ಕೊನೆಯ ಪಫ್ ಅನ್ನು ಮಾತ್ರ ಉಳಿಸಿಕೊಂಡಿದ್ದ. ‘ಇವೊತ್ತು ಏನೋ ಒಂಥರ ಖುಷಿಯಾಗುತ್ತಿದೆ’ ಎಂದ.

‘ಹೀಗೆ ಧಡೀರಂತ ಬಂದೆ. ಒಂದು ಫೋನ್ ಇಲ್ಲ. ಏನೂ ಇಲ್ಲ. ರಾಗಿಣಿ ಹೇಗಿದ್ದಾಳೆ’ ಎಂದು ಮೌನವನ್ನು ಮುರಿದು ಕೇಳಿದಳು. ‘ನಮ್ಮನ್ನು ನೋಡಬೇಕು ಎಂದು ಅನ್ನಿಸಿದೆ. ಅದಕ್ಕೆ ಬಂದಿದ್ದಾರೆ. ನೀನಂತೂ ಕಣೆ ಮನೆಗೆ ಬಂದಿರುವ ಅಪರೂಪದ ಅತಿಥಿಯನ್ನು ಹೀಗಾ ಕೇಳುವುದು?’ ಎಂದು ಬೈಯುವ ದಾಟಿಯಲ್ಲಿ ಹೇಳಿದ.

‘ಛೇ ಹಾಗಲ್ಲ. ಯಾಕೆಂದರೆ ಇವನು ಯಾವಾಗಲು ಬ್ಯುಸಿ. ಸೆಮಿನಾರ್. ಕಾನ್ಫರೆನ್ಸ್. ರೀಸರ್ಚ್ ಅಂಥ. ಅದಕ್ಕೆ ಕೇಳಿದೆ.’
‘ನಿಮ್ಮ ಇಬ್ಬರ ಊಹೆನೂ ಸರಿ. ಕುವೆಂಪು ಯುನಿವರ್ಸಿಟಿಯಲ್ಲಿ ಪಿ.ಎಚ್.ಡಿ. ವೈ.ವಾ ಮತ್ತು ಪೇಪರ್ ಪ್ರೆಸೆಂಟೇಷನ್ ಇತ್ತು. ಆಮೇಲೆ ನಿಮ್ಮನ್ನು ನೋಡಬೇಕು ಅಂತ ಬಹಳ ವರ್ಷಗಳ ಆಸೆ. ನೀನು ಯೂನಿವರ್ಸಿಟಿ ಬಿಟ್ಟಾಗಿಂದ ನಿನ್ನನ್ನು ನೋಡುವುದಕ್ಕೇ ಆಗಿಲ್ಲ. ಅಲ್ಲದೆ ನಿಮ್ಮ ಮದುವೆಗೂ ಬರುವುದಕ್ಕೆ ಆಗಲಿಲ್ಲ’ ಎಂದು, ‘ಇಪ್ಪತ್ತು ವರ್ಷಗಳ ಹಿಂದೆ ಸುಜಾತ ಒಬ್ಬಳಾಗಿದ್ದಳು. ಈಗ ಮೂರುಜನ ಆಗಿದ್ದಾಳೆ’ ಎಂದು ನಕ್ಕ.

ಅದಕ್ಕೆ ಸುಜಾತ ‘ಎಲ್ರು ಅಷ್ಟೆ. ಏನೇನೋ ಆಗುತ್ತಾ ಹೋಗೋದು. ಯಾರ್ಯಾರೊ ಬರುತ್ತಾರೆ. ಏನೇನೋ ಘಟಿಸುತ್ತವೆ. ಸುಮ್ಮನೆ ಸಾಗುತ್ತಿರುವುದಪ್ಪ. ಬೈ ದ ವೇ ರಾಗಿಣಿನ ನೆಕ್ಸ್ಟೈಮ್ ಮಿಸ್ ಮಾಡದೆ ಕರೆದುಕೊಂಡು ಬರಬೇಕು’ ಎಂದಳು.

ಬೆಳದಿಂಗಳನ್ನೇ ದಿಟ್ಟಿಸುತ್ತಾ ತಲೆಆಡಿಸಿದ. ಮತ್ತೊಮ್ಮೆ ಸುಜಾತಳನ್ನು ನೋಡುತ್ತಾ ‘ಕೊನೆಗೂ ಎಂಥಹ ಕಷ್ಟಗಳ ನಡುವೆಯೂ ನೀನು ಇಷ್ಟಪಟ್ಟ ಮುತ್ತಯ್ಯನನ್ನೇ ಮದುವೆಯಾದೆ. ಗ್ರೇಟ್. ನಿನ್ನ ಧೈರ್ಯ ಮೆಚ್ಚಬೇಕು’ ಎಂದ.

ಬೆಳದಿಂಗಳು ಅಲೆಅಲೆಯಾಗಿ ಅವರ ಮುಖಗಳನ್ನು ಅಂಗಳವನ್ನು ಸವರುತ್ತಿರುವಂತೆ ಕಾಣುತ್ತಿತ್ತು. ನಿಟ್ಟುಸಿರು ಬಿಡುತ್ತಾ, ಮತ್ತು ತುಸು ಖುಷಿಯಿಂದ’ ಅದೆಲ್ಲಾ ಹೇಗೆ ನಡೆದುಹೋಯ್ತು. ನೆನೆಸಿಕೊಂಡರೆ ಜುಂ ಅನ್ನಿಸುತ್ತೆ. ಅದು ನಾವಾ! ನಮಗೆ ಅಷ್ಟೊಂದು ಧೈರ್ಯ ಎಲ್ಲಿಂದ ಬಂತೋ ಎಂದು ನೆನೆದರೆ..’ ಎಂದು ಹೇಳಿದಳು.

ಮುಂದವರೆದು, ‘ಥೂ ನಮ್ಮ ಅಪ್ಪ ಆಗ ಎಷ್ಟು ಕ್ರೂರವಾಗಿ ನಡೆದುಕೊಂಡರು ಅಲಾ….’ ಎಂದು ಮುತ್ತಯ್ಯನ ಮುಖನೋಡುತ್ತಾ ಅಂದಳು.

ಸಾವಿತ್ರಿ ಕೌತುಕದಿಂದ ಗಲ್ಲದಮೇಲೆ ಎರಡೂ ಕೈಗಳನ್ನು ಆಚೆಈಚೆ ಇಟ್ಟುಕೊಂಡು ಕೇಳುತ್ತಾ ಇದ್ದಳು. ಮುತ್ತಯ್ಯ ಅವಳ ಮುಖನೋಡಿ ನಗುತ್ತಿದ್ದ. ನಾಯಿ ಇವರು ಮಾತಾಡುವ ಪ್ರತಿ ಪದವನ್ನು ಎಚ್ಚರಿಕೆಯಿಂದ ಕೇಳಿಸಿಕೊಂಡು ಗಾಢವಾಗಿ ಆಲೋಚಿಸುವಂತೆ ಕುಳಿತಿತ್ತು. ‘ಆಕ್ಚುಯಲಿ ಆಗ ನಿನ್ನ ಹೆಲ್ಪ್ ಬೇಕಿತ್ತು. ಆದರೆ ರೀಸರ್ಚ್ ಗೆ ಟಾಪಿಕ್ ಫೈನಲ್ ಮಾಡ್ತಾಇದ್ದೆ ಅನ್ನಿಸುತ್ತೆ. ಅಥವಾ ಎಲ್ಲೋ ಹೋಗಿದ್ದೆ ಅನ್ನಿಸುತ್ತೆ’ ಅಂದಳು.

‘ಹೌದು ಆಗ ನಿಮ್ಮ ಜೊತೆ ಇರಬೇಕಿತ್ತು ಎಂದು ಬಹಳ ಸಲ ಅನ್ನಿಸಿದೆ. ಆದರೆ ಅಪ್ಪನಿಗೆ ಹುಷಾರಿರಲಿಲ್ಲವಲ್ಲಾ. ಬ್ರೈನ್ ಗೆ ಸ್ಟ್ರೋಕ್ ಆಗಿ ಆಸ್ಪತ್ರೆಗೆ ಹಾಕೊಂಡು ಹೋಗಿದ್ದೆ. ಆದರೆ ಅಪ್ಪ ಉಳಿಯಲಿಲ್ಲ’ ಎಂದ.

‘ಹ್ಞಾ .. ನಿಜ ನಿಜ. ಆಮೇಲೆ ಗೌಡ ಸಿಕ್ಕು ಹೇಳಿದ’ ಎಂದು, ಇಪ್ಪತ್ತು ವರ್ಷಗಳ ನೆನೆಪುಗಳನ್ನು ಹೇಳಲು ಮುಂದುವರೆಸಿದಳು.

‘ಮದುವೆಯಾಗಿ ಮೂರುತಿಂಗಳಾಗಿತ್ತು. ಎಲ್ಲೆಲ್ಲೋ ಅಲೆದು, ಆಮೇಲೆ ಪವಿತ್ರಳ ಫ್ರೆಂಡು ಒಬ್ಬರು ಹೈದ್ರಾಬಾದಲ್ಲಿದ್ದರು. ಅವಳೇ ಫೋನ್ ಮಾಡಿ ಹೈದರಾಬಾದ್ ಗೆ ಕಳುಹಿಸಿದ್ದಳು. ಅಪ್ಪ ಪವಿತ್ರಳನ್ನು ಕಾಂಟ್ಯಾಕ್ಟ್ ಮಾಡಿ, ಅವಳಿಂದನೇ ಫೋನ್ ಮಾಡಿಸಿ, ಜೊತೆಗೆ ತಾನೇ ಫೋನ್ ಮಾಡಿ ಇನ್ನೇನು ಆಗಿದ್ದು ಆಯ್ತು. ವಾಪಸ್ಸುಬನ್ನಿ. ಅಮ್ಮ ಊಟ ಬಿಟ್ಟು ಹಾಸಿಗೆ ಹಿಡಿದಿದ್ದಾಳೆ. ಆಮೇಲೆ, ನನ್ನ ಫ್ರೆಂಡ್ಸು ಮುಂದೆ ತಲೆ ಎತ್ತಿಕೊಂಡು ಓಡಾಡುವುದಕ್ಕೆ ಆಗುವುದಿಲ್ಲ. ನಿಮ್ಮ ಮದುವೆಯನ್ನು ಒಪ್ಪಿಕೊಂಡಿದ್ದೇನೆ. ಪ್ಲೀಸ್ ವಾಪಸ್ಸುಬನ್ನಿ ಎಂದು ಕರೆಸಿಕೊಂಡರು. ನಾವು ವಾಪಸ್ಸು ಬಂದೆವು. ಆದರೆ ಮನೆಯಲ್ಲಿ ಆಗಿದ್ದೇ ಬೇರೆ. ಈಗ ಹೇಗೆ ನಾವು ನಾಲ್ಕು ಜನ ಕೂತು ಮಾತಾಡುತ್ತಾ ಇದ್ದೇವೋ ಆದೇ ರೀತಿ ಅಪ್ಪ ನಮ್ಮನ್ನು ಕೂರಿಸಿಕೊಂಡು ಮಾತಾಡುತ್ತ ಮಾತಾಡುತ್ತ ಮುತ್ತಯ್ಯನನ್ನು ಅದು ಇದು ಕೇಳುತ್ತ ಅಪ್ಪ ನನ್ನ ತಾಳಿಯನ್ನೇ ಕಿತ್ತುಬಿಟ್ಟರು. ಅಮ್ಮಾ ಒಂದೂ ಮಾತಾಡದೆ ಸುಮ್ಮನೆ ಕೂತಿದ್ದರು. ನನಗೋ ಅಮ್ಮ ಏನು ಮಾಡಿಕೊಂಡರೋ ಏನೋ ಅಂಥಾ ದಿಗಿಲಾಗಿತ್ತು. ಆದರೆ ಎಲ್ಲಾ ಮೋಸ. ಆಮೇಲೆ ಕೆಲವು ಗೂಂಡಾಗಳನ್ನು ಕರೆಸಿ ಮುತ್ತಯ್ಯನನ್ನು ತುಂಬಾ ಹೊಡೆಸಿಬಿಟ್ಟರು. ನನಗಂತೂ ಈಗ ನೆನೆಸಿಕೊಂಡರೂ ಕಣ್ಣಲ್ಲಿ ನೀರು ಬಂದುಬಿಡುತ್ತೆ. ಹೊಡೆಸಿ, ಹೊರಗೆ ದಬ್ಬಿದರು.

ಎಂಥ ಅಮಾನುಷವಾಗಿತ್ತಂದರೆ ಆ ದೃಶ್ಯ…. ನೆನೆಸಿಕೊಂಡರೆ ಭಯ ಆಗುತ್ತೆ. ಈಗ ನೆನೆಸಿಕೊಂಡರೆ ಅದು ನಾವಾ ಅನ್ನುವ ಹಾಗೆ ಆಗುತ್ತೆ’ ಎಂದಳು ಶಾಕ್ಯನ ಮುಖವನ್ನು ನೋಡುತ್ತಾ. ಮುತ್ತಯ್ಯ ಅವಳ ಮಾತಿನ ಮಧ್ಯೆ ಶಾಕ್ಯನ ಮುಖ ನೋಡುತ್ತಾ, ‘ನನಗಂತೂ, ಶಾಕ್ಯ, ನಗುಬರುತ್ತೆ ಅದೆಲ್ಲಾ ನೆನೆಸಿಕೊಂಡರೆ. ಆದರೂ ಇವಳು ವಾಪಸ್ಸು ಬಂದೇ ಬರುತ್ತಾಳೆ ಎಂಬ ಹೋಪ್ಸ್ ಇದ್ದರೂ ಆ ಸಂದರ್ಭದಲ್ಲಿ ಅಂಥ ಲಕ್ಷಣಗಳು ಕಾಣದೆ ಕಂಗಾಲಾಗಿದ್ದೆ. ಆದರೂ ಇವಳ ಡೇರ್ ನೆಸ್ ಅನ್ನು ಮೆಚ್ಚಬೇಕು. ಒಂದು ವರ್ಷ…. ಅದೆಷ್ಟು ಅನುಭವಿಸಿದಳೋ ಯಾತನೆಯನ್ನು. ಆಮೇಲೆ ಒಂದು ಫೈನ್ ಡೇ ಓಡಿಬಂದಳು’ ಎಂದ. ಇವರ ಸಂಭಾಷಣೆಯನ್ನು ಆಲಿಸುತ್ತಿದ್ದ ಸಾವಿತ್ರಿ ನಗುತ್ತಿದ್ದಳು. ಆ ನಗುವಿನಲ್ಲಿ ತನ್ನ ಅಪ್ಪ ಅಮ್ಮನ ಮೇಲೆ ಒಂದು ರೀತಿಯ ಹೆಮ್ಮೆಯ ಭಾವವಿದ್ದಂತೆ ಕಾಣುತ್ತಿತ್ತು.

ಶಾಕ್ಯ ಥಟ್ಟನೆ ಏನನ್ನೋ ನೆನೆಸಿಕೊಂಡು ಸಾವಿ, ಪ್ಲೀಸ್ ನನ್ನ ಬ್ಯಾಗಲ್ಲಿ ಮೊಬೈಲ್ ಫೋನ್ ಇದೆ. ತೆಗೆದುಕೊಂಡು ಬರುತ್ತೀಯಾ? ಎಂದ. ತಕ್ಷಣಕ್ಕೆ ಅವಳು ಒಳಗೆ ಓಡಿಹೋದಳು. ನಾಯಿಯೂ ಅವಳನ್ನು ಹಿಂಬಾಲಿಸಿತು. ಲೆದರ್ ಬ್ಯಾಗ್ ಓಪನ್ ಮಾಡಿ ಮೊಬೈಲ್ ಗಾಗಿ ತಡಕಾಡಿದಳು. ಕಾನ್ಫರೆನ್ಸಿನ ನೋಟ್ ಪ್ಯಾಡ್, ಲ್ಯಾಪ್ ಟಾಪ್, ಜುಬ್ಬ, ಜೀನ್ಸ್ ಪ್ಯಾಂಟ್ ಇನ್ನೂ ಏನೇನೋ ಪುಸ್ತಕ ಕಾಗದಗಳ ನಡುವೆ ಮೊಬೈಲ್ ಫೋನನ್ನು ಹುಡುಕಿದಳು. ಅದು ತುಂಬಾ ದುಬಾರಿ ಸೆಟ್ ಆಗಿದ್ದೂ ಅದನ್ನು ಕಂಡು ವ್ಹಾವ್! ಎಷ್ಟು ಚೆಂದವಿದೆ ಎಂದು, ಅದನ್ನು ತೆಗೆದಕೊಂಡು ವಾಪಸ್ಸು ಬಂದಳು. ನಾಯಿ ಇವಳು ಹೊರಬರುವದನ್ನೇ ಕಾಯುತ್ತ ಕೂತಿದ್ದು, ಅವಳು ಹೊರಬಂದ ನಂತರ ಅವಳನ್ನು ಹಿಂಬಾಲಿಸಿಕೊಂಡು ಅಂಗಳದಲ್ಲಿ ಕೂತಿದ್ದ ಅವರ ಬಳಿ ಹೋಯ್ತು.

‘ಯಾಕೋ ಇಷ್ಟು ಹೊತ್ತಿನಲ್ಲಿ ಮೊಬೈಲ್? ಯಾರಿಗಾದರೂ ಫೋನ್ ಮಾಡಬೇಕಾ?’ ಎಂದು ಸುಜಾತ ಕೇಳಿದಳು.

‘ಇಲ್ಲಾ ಈ ಬೆಳದಿಂಗಳಲ್ಲಿ ಸಾವಿದು ಒಂದು ಫೋಟೋ ತೆಗೆಯೋಣ ಅನ್ನಿಸಿತು.’

‘ಡಿಮ್ ಲೈಟಲ್ಲಿ ಫೋಟೋ ಕ್ಲಿಯರ್ ಆಗಿ ಬರುವುದಿಲ್ಲ ಕಣೋ. ಬೆಳಿಗ್ಗೆ ತೆಗೆಯುವಂತೆ ಬಿಡು.’

‘ಇಲ್ಲಪ್ಪಾ ತುಂಬಾ ಅಡ್ವಾನ್ಸಡ್ ಸೆಟ್ ಇದು. ಲಾಸ್ಟ್ ಮಂಥ್ ಫ್ರಾನ್ಸ್ ಗೆ ಹೋದಾಗ ತಂದದ್ದು. ಒಂದು ಟ್ರೈ ಮಾಡೋಣ. ಹೇಗೆ ಬರುತ್ತೆ ನೋಡೋಣ’ ಎಂದು ಮೊಬೈಲ್ ಆನ್ ಮಾಡಿ ಸಾವಿತ್ರಿಯ ಮುಖಕ್ಕೆ ಹಿಡಿದು ಕ್ಲಿಕ್ಕಿಸಿದ. ತಕ್ಷಣಕ್ಕೆ ಪಲ್ಲವಿಅನುಪಲ್ಲವಿ ಚಿತ್ರದ ನಗೂ ಎಂದಿದೆ ಮಂಜಿನಾ ಬಿಂದು ಎನ್ನುವ ರಿಂಗ್ ಟೋನ್ ಕೇಳಿಸಿತು. ‘ಯಾವುದೋ ಲ್ಯಾಂಡ್ ನಂಬರ್ ನಿಂದ ಫೋನ್ ಬರುತ್ತಿದೆಯಲ್ಲಾ’ ಎಂದು ರಿಸೀವ್ ಮಾಡಿಕೊಂಡವನೆ, ‘ಹೌದಾ?.. ಯಾವಾಗ?..’ ಎಂದು ತುಂಬಾ ಗಾಬರಿಯಿಂದ ಆಚೆ ಬದಿಯಿಂದ ಮಾತಾಡುತ್ತಿರುವ ಧ್ವನಿಗೆ ಪ್ರತಿಕ್ರಿಯಿಸಿದ. ಒಂದು ರೀತಿಯಲ್ಲಿ ದುಃಖ, ಆತಂಕ ಅವನ ಮುಖದಲ್ಲಿ ಮೂಡಿದವು. ‘ಮುತ್ತಯ್ಯ ಶಾಕ್ಯನ ಎಡಗೈ ಹಸ್ತವನ್ನು ಬಿಗಿಯಾಗಿ ಹಿಡಿದುಕೊಂಡ. ಕೈ ನಡುಗುತ್ತಿತ್ತು. ಸುಜಾತಳ ಎದೆ ಜೋರಾಗಿ ಬಡಿದುಕೊಳ್ಳಲು ಆರಂಭಿಸಿತು. ‘ಯಾರದೋ ಫೋನು? ಏನಂತೆ?’ ಎಂದು ಕೇಳಿದಳು. ಫೋನ್ ಕಾಲ್ ಎಂಡ್ ಮಾಡಿದವನೆ ಸುಮ್ಮನೆ ಕೂತ. ಸುತ್ತ ಮೌನ ಆವರಿಸಿಕೊಂಡಿತು.

‘ಸೂಜಿ… ರಾಗಿಣಿ ಹೋದಳಂತೆ…’ ಎಂದು ಮುತ್ತಯ್ಯನ ಭುಜಕ್ಕೆ ಒರಗಿದ. ನಿಧಾನ ಕಣ್ಣೀರು ಹರಿಯತೊಡಗಿತು.

‘ಯಾಕೋ? ಏನಾಯ್ತು? ಹೇಗಂತೆ?’ ಎಂದು ಸುಜಾತಾ ಆತಂಕದಿಂದ ಕೇಳಿದಳು.
ಟೇಬಲ್ ಮೇಲೆ ಚೆಲ್ಲಿ ಹರಡಿಕೊಂಡಿರುವ ಬೆಳದಿಂಗಳು ಒದ್ದೆಯಾಗಿತ್ತು.