ಅವನು ಓದಿನಲ್ಲಿ ಅಷ್ಟು ಮುಂದಿಲ್ಲ. ಬಹಳ ಕಷ್ಟಪಡುತಿದ್ದ. ಆದರೆ ನೆನಪು ಉಳಿಯುತ್ತಿರಲಿಲ್ಲ. ನಮ್ಮ ಗೆಳೆಯನೊಬ್ಬ ಅವನ ಹಣೆಯಲ್ಲಿನ ಈ ನರವೇ ದೇವರು ಹಣೆಬರಹದಲ್ಲಿನ ಬರೆದ ವಿದ್ಯೆಯನ್ನು ಮಸುಕಾಗುವಂತೆ ಮಾಡಿದೆ ಎಂದು ವಿವರಣೆ ನೀಡಿದ. ಏನಾದರೂ ಮಾಡಿ ಸರಿ ಮಾಡಿ ಎಂದು ಸತ್ಯ ದುಂಬಾಲು ಬಿದ್ದ. ಅಂದು ಮಧ್ಯಾಹ್ನ ಅವನ ಹಣೆಬರಹ ತಿದ್ದುವ ಕೆಲಸ ಶುರುವಾಯಿತು. ಇಬ್ಬರು ಬಲವಾದ ಹುಡುಗರು ಮರಳು ಮತ್ತು ಸೀಮೆಸುಣ್ಣದ ಪುಡಿ ಸೇರಿಸಿ ಅವನ ಹಣೆಯ ಮೇಲಿದ್ದ ಆ ನರವನ್ನು ತೀಡತೊಡಗಿದರು. ಅದು ಬಡ ಪೆಟ್ಟಿಗೆ ಹೋಗಲಿಲ್ಲ. ಇವರು ಬಿಡಲಿಲ್ಲ. ಇನ್ನೂ ಬಲವಾಗಿ ಉಜ್ಜಿದರು.
ಕೆಂಡಸಂಪಿಗೆಯಲ್ಲಿ ಸರಣಿಯಾಗಿ ಪ್ರಕಟವಾಗಿ, ಈಗ ಪುಸ್ತಕರೂಪದಲ್ಲಿ ಬಂದಿರುವ ಎಚ್. ಶೇಷಗಿರಿರಾಯರ ಆತ್ಮಕಥಾನಕದ ಕೆಲವು ಪುಟಗಳು.

ನಾನು ಮೊದಲು ಅಕ್ಷರ ಕಲಿತದ್ದು ನಮ್ಮೂರಿನ ದುರುಗಮ್ಮನ ಗುಡಿಯಲ್ಲಿ. ಅದಕ್ಕೆ ಕಾರಣ ದೇವತೆಯ ಸನ್ನಿಧಿಯಲ್ಲಿ ಅಕ್ಷರಾಭ್ಯಾಸ ಮಾಡಬೇಕು ಎಂದಲ್ಲ. ಆಗ ಕಲಿಕೆ ನಡೆಯುತ್ತಿದ್ದುದೇ ಗುಡಿಯಲ್ಲಿ. ಅದನ್ನು ನಾವು ಸಾಲಿಗುಡಿ ಎನ್ನುತ್ತಿದ್ದೆವು. ಅಲ್ಲಿ ಒಬ್ಬ ಅಯ್ಯನವರು ನಮಗೆ ಗುರುಗಳು. ಅಯ್ಯ ಎನ್ನುವುದು ವೃತ್ತಿ ವಾಚಕವೋ, ಜಾತಿ ಸೂಚಕವೋ ಎಂದು ಯೋಚಿಸುವ ವಯಸ್ಸು ಅದಲ್ಲ. ಎಲ್ಲರೂ ಅವರನ್ನು ಗೌರವಪೂರ್ವಕವಾಗಿ “ಅಯ್ಯನೋರೆ” ಎನ್ನುತ್ತಿದ್ದರು. ಅದೇನೂ ಸರಕಾರದಿಂದ ಮಂಜೂರಾತಿ ಪಡೆದ ಶಾಲೆಯಲ್ಲ. ಅಲ್ಲಿ ಇಂದಿನ ಹಾಗೆ ಹಲವು ಹತ್ತು ವಿಷಯಗಳಿರಲಿಲ್ಲ. ಭಾಷೆ ಮತ್ತು ಲೆಕ್ಕ, ಎರಡನ್ನು ಮಾತ್ರ ಮನದಲ್ಲಿ ಅಚ್ಚೊತ್ತುವಂತೆ ಕಲಿಸುತ್ತಿದ್ದರು. ಭಾಷೆ ಎಂದರೆ ಕನ್ನಡಮಾತ್ರ. ಅಕ್ಷರ ಕಲಿಯುವ ಮೊದಲು ಅಲ್ಲಿ ಪ್ರಭವ, ವಿಭವ ಇತ್ಯಾದಿ ಅರವತ್ತು ಸಂವತ್ಸರಗಳು, ಆರು ಋತುಗಳು, ಚೈತ್ರದಿಂದ ಶುರುವಾಗುವ ಹನ್ನೆರಡು ಮಾಸಗಳ ಹೆಸರುಗಳು, ಇಪ್ಪತ್ತನಾಲಕ್ಕು ಪಕ್ಷ, ಹದಿನೈದು ತಿಥಿ ಮತ್ತು ಅಶ್ವಿನಿ ಭರಣಿ ಮೊದಲಾದ ಇಪ್ಪತ್ತೇಳು ನಕ್ಷತ್ರಗಳು ಬಾಯಿ ಪಾಠವಾಗಬೇಕಿತ್ತು. ಅದರಲ್ಲೂ ಚೈತ್ರ ಶುದ್ಧ ದವನದ ಹುಣ್ಣಿಮೆ, ವೈಶಾಖ ಶುದ್ಧ ಆಗಿಹುಣ್ಣಿಮೆಯಿಂದ ಹಿಡಿದು ಪಾಲ್ಗುಣ ಶುದ್ಧ ಹೋಳಿ ಹುಣ್ಣಿಮೆಯವರೆಗೆ, ಅದೇ ರೀತಿ ಚೈತ್ರ ಬಹುಳಯುಗಾದಿ ಅಮವಾಸ್ಯೆಯಿಂದ ಹಿಡಿದು ಆಶ್ವೀಜದ ಬಹುಳದ ದೀಪಾವಳಿ ಅಮವಾಸ್ಯೆಯವರೆಗಿನ ಹನ್ನೆರಡು ಅಮವಾಸ್ಯೆಗಳ ಹೆಸರನ್ನು ಕೇಳಿದಲ್ಲಿ ಪಟ್ಟನೆ ಹೇಳದಿದ್ದರೆ ಛಡಿ ಏಟು ಬೀಳುತಿತ್ತು. ಅಲ್ಲಿ ಹೆಚ್ಚು ಕಲಿತವರು ಎಂದರೆ ಅಮರಕೋಶ ಹೇಳುವವರು. ರಾಜ, ಭೂಪ, ಅವನಿಪ, ಒಡೆಯ,ಅರಸ, ಭೂಪಾಲ ಹೀಗೆ ಒಂದು ಪದಕ್ಕೆ ಹತ್ತು ಹಲವಾರು ಪರ್ಯಾಯ ಪದಗಳು. ಪದ ಭಂಡಾರವೇ ಕಂಠಸ್ಥವಾಗಿರುತಿತ್ತು. ನಾಲಿಗೆಯ ಮೇಲೆ ಸರಸ್ವತಿಯ ನರ್ತನ. ಅಮರವನ್ನು ಅರಿತವರಿಗೆ ಶಬ್ಧ ದಾರಿದ್ರವಿರುತ್ತಿರಲಿಲ್ಲ. ಗದುಗಿನ ಭಾರತ ವಾಚನ ಮಾಡುವ ಹಂತಕ್ಕೆ ಬಂದರೆ ಪರವಾಗಿಲ್ಲ ಎಂದೂ, ಜೈಮಿನಿ ಭಾರತ ಓದಿ ಅರ್ಥ ವಿವರಣೆ ಕೊಡಬಲ್ಲವರಾದರೆ ಕಲಿತವರೆಂದೂ ಕರೆಯುತ್ತಿದ್ದರು. ಅಂಥವರು ವಿರಳಾತಿ ವಿರಳ.

ಇನ್ನು ಲೆಕ್ಕ ಎಂದರೆ ಮಗ್ಗಿ ಕಲಿಯುವುದು. ಕನಿಷ್ಟ 20ರ ವರೆಗಿನ ಮಗ್ಗಿ ಕಡ್ಡಾಯ. ಅದರಮೇಲೆ ಚುರುಕಾದವರು ಎರಡ ಹತ್ತಲೆ ಇಪ್ಪತ್ತು ಎಂದು ಮುಗಿಸುತ್ತಿರಲಿಲ್ಲ. ಎರಡ ಹನ್ನೊಂದಲೆ ಇಪ್ಪತ್ತೆರಡು ಎಂದು ಶುರುಮಾಡಿ ಎರಡ ಇಪ್ಪತ್ತಲೆ ನಲವತ್ತು ಎಂದು ಹೇಳುವಷ್ಟು ಕಲಿತರೆ ಅಯ್ಯನವರು ಹುಡುಗ ಪರವಾಯಿಲ್ಲ ಎನ್ನುತ್ತಿದ್ದರು. ಇನ್ನೂ ಜಾಣರು ಮಗ್ಗಿಯನ್ನು ಬುಡದಿಂದ ಪ್ರಾರಂಭಿಸಿ ಮೊದಲವರೆಗೂ ಹೇಳುತ್ತಲಿದ್ದರು. ನನಗಂತೂ ಮೊದಲಿಂದ ಕೊನೆಯವರೆಗೆ ಹೇಳುವಾಗಲೇ ಸಾಕುಬೇಕಾಗುತ್ತಿತ್ತು. ಮಧ್ಯಾಹ್ನ ಮೂರುಗಂಟೆಯ ಮೇಲೆ ಗುಡಿಯು ಮಕ್ಕಳ ಮಗ್ಗಿಯ ಉದ್ಘೋಷದಿಂದ ಗದ್ಘಲಿಸುತಿತ್ತು. ಮೊದಲು ಸಾಮೂಹಿಕವಾಗಿ ಹೇಳಿ ನಂತರ ಒಬ್ಬೊಬ್ಬರಾಗಿ ಒಪ್ಪಿಸಬೇಕಿತ್ತು. ತಪ್ಪಿದರೆ ಪಕ್ಕದವನಿಗೆ ತಿದ್ದಲು ಅವಕಾಶ. ಅವನು ಸರಿಯಾಗಿ ಹೇಳಿ ತಪ್ಪಿದವನ ಮೂಗು ಹಿಡಿದು ಕೆನ್ನೆಗೆ ಎರಡು ಬಾರಿಸಬೇಕಿತ್ತು. ಅದೂ ಮುಟ್ಟಿದಂತೆ ಮಾಡಿದರೆ ಸಾಕಾಗುತ್ತಿರಲಿಲ್ಲ. “ಚಟೀರ್‌..” ಎಂದು ಶಬ್ದ ಕೇಳಿ ಬರುವಂತೆ ಹೊಡೆತ ಇರಬೇಕು. ಎಷ್ಟೋ ಸಲ ಸದಾ ಏಟುತಿನ್ನುವ ಹುಡುಗ ಹೊಂದಾಣಿಕೆ ಮಾಡಿಕೊಳ್ಳುವದೂ ಇತ್ತು, ಶಾಲೆ ಮುಗಿದ ಮೇಲೆ ಬೆಲ್ಲ, ಕಡಲೆ, ಬಾರಿ ಹಣ್ಣು, ಬುಕ್ಕಿ ಹಣ್ಣು, ಹುಣಿಸೆ ಕಾಯಿ, ಮಾವಿನ ಕಾಯಿ ಲಂಚದ ಆಮಿಷ ಒಡ್ಡಿ ಹೊಡೆತದ ಜೋರು ತುಸು ಕಡಿಮೆಯಾಗುವಂತೆ ಮಾಡಿಕೊಳ್ಳುತ್ತಿದ್ದವರೂ ಇದ್ದರು. ಆದರೆ ಅದು ಅಯ್ಯನವರ ಗಮನಕ್ಕೆ ಬಂದರೆ ಇಬ್ಬರಿಗೂ ಲತ್ತೆಯ ಮೇಲೆ ಲತ್ತೆ.

ಇನ್ನು ಬರಹಕ್ಕೆ ಪೆನ್ನು, ಪೆನ್ಸಿಲ್‌ ಇರಲೇ ಇರಲಿಲ್ಲ. ಮೊದಲಲ್ಲಿ ಸ್ಲೇಟೂ ಬಳಸುವ ಹಾಗಿಲ್ಲ. ಹೊಸದಾಗಿ ಸೇರಿದ ಪ್ರತಿ ಹುಡುಗರ ಮುಂದೂ ಮೂರು ಬೊಗಸೆ ನುಣ್ಣನೆ ಮರಳು. ಅದನ್ನು ಅವರೆ ತಂದುಕೊಳ್ಳಬೇಕಿತ್ತು. ಮುಗಿದ ಮೇಲೆ ಗುಡಿಯ ಮೂಲೆಯಲ್ಲಿ ಗುಡ್ಡೆ ಹಾಕಬೇಕಿತ್ತು. ಆ ಮರಳನ್ನು ಹರಡಿ ಅದರಲ್ಲಿ ತೀಡಬೇಕು. ಅದೂ ಒಂದು, ಎರಡು ದಿನವಲ್ಲ. ತಿಂಗಳು ಗಟ್ಟಲೆ. ಅ ನಿಂದ ಕ್ಷ ವರೆಗೆ ಸ್ಫುಟವಾಗಿ ಬರೆಯುವವರೆಗೆ ತೀಡಲೇಬೇಕು. ಕೊಕ್ಕೆ ಕೋರೆ ಬರೆಯುವ ಹಾಗಿಲ್ಲ. ಅಯ್ಯನವರು ಒಪ್ಪುವ ತನಕ ಅದು ಮುಂದುವರೆಯುತಿತ್ತು. ಎಷ್ಟೋ ಸಲ ಬೆರಳಿಗೆ ಪೋಟು ಬೀಳುತಿತ್ತು. ತುಸು ಸುಧಾರಿಸಿದ ಮೇಲೆ ಕಡ್ಡಿ ಹಿಡಿದು ಬರೆಯಬಹುದು. ಅಂತೂ ಬರವಣಿಗೆಯ ಬುನಾದಿ ಬಹು ಭದ್ರವಾಗಿ ಬೀಳುತಿತ್ತು. ಆ ನಂತರವೆ ಹಲಗೆ ಬಳಪದ ಬಳಕೆ.

ಶಾಲೆ ಪ್ರಾರಂಭವಾಗುತ್ತಿದ್ದುದು ರೈತರೆಲ್ಲ ಬದುಕಿಗೆ ಹೊಂಟಮೇಲೆ. ಬದುಕು ಎಂದರೆ ಹೊಲದ ಕೆಲಸ. ಸಾಲಿಯಲ್ಲಿಯ ಹಿರಿಯ ಹುಡುಗರಿಗೆ ಆಗ ಬಹು ಹುರುಪು. ಅವರು ಸಾಲಿ ತಪ್ಪಿಸುತ್ತಿದ್ದ ಹುಡುಗರನ್ನು ಹುಡುಕಿ ತರಬೇಕು. ಎಷ್ಟೋ ಹುಡುಗರು ಇಲ್ಲಿನ ಹೊಡೆತ ತಾಳದೆ ಹುಲ್ಲಿನ ಬಣವಿಯಲ್ಲೋ, ಸೊಪ್ಪೆಯ ಮೆದೆಯಲ್ಲೋ ಅಟ್ಟದಮೇಲೋ, ಅಡಕಲಕೋಣೆಯಲ್ಲೋ, ದನದ ಕೊಟ್ಟಿಗೆಯಲ್ಲೋ, ಅಜ್ಜಿಯ ಹಿಂದೋ ಅಡಗಿರುತ್ತಿದ್ದರು. ಅವರನ್ನು ಹುಡುಕಿ ಅಲ್ಲಿಯೇ ನಾಲಕ್ಕು ತದುಕಿ ಕರೆತರುತ್ತಿದ್ದರು. ಅದಕ್ಕೂ ಬಗ್ಗದಿದರೆ ಹೊತ್ತು ತಂದು ಗುಡಿಯಲ್ಲಿ ಕೆಡವುತ್ತಿದ್ದರು. ಅದಕ್ಕೆ ಪೋಷಕರ ಸಹಕಾರವೂ ಪೂರ್ತಿ ಇರುತ್ತಿತ್ತು. “ನಮ್ಮ ಹೈವಾನ, ಅಕ್ಕಿಅನ್ನ ಉಂಡು ಅಕ್ಷರ ಕಲಿಯೋ ಅಂದರೆ, ನವಣೆ ಬಾನ ಉಂಡು ನೇಗಿಲ ಹಿಡಿತಿನಿ ಅಂತಾನಲ್ಲ ಅಯ್ಯನೋರೆ, ನೀವೇ ಎಂಗಾನ ಮಾಡಿ ನಾಲಕಕ್ಷರ ಕಲಿಸಿ. ಕೊನೆಗೆ ಹೆಬ್ಬೆಟ್ಟು ಒತ್ತೋದು ಬಿಟ್ಟು ರುಜು ಹಾಕೋದು ಕಲಿತರೂ ಸಾಕು” ಎಂದು ಹಲುಬುತ್ತಿದ್ದರು.

(ಎಚ್‌.ಶೇಷಗಿರಿರಾವ್)

ಇನ್ನು ಆಗಿನ ಶಿಕ್ಷಾ ವಿಧಾನವು ಬಹು ವೈವಿದ್ಯಮಯವಾಗಿತ್ತು. ಆಗ ಗುರುಗಳು ಹೆಚ್ಚು ದಂಡಿಸಿದರೆ ಮಕ್ಕಳು ಹೆಚ್ಚು ಕಲಿಯುವರು ಎಂಬ ನಂಬಿಕೆ ಬಲವಾಗಿತ್ತು. ತಂದೆ ತಾಯಿಯರೆ ಬಂದು “ಅವನಿಗೆ ನಾಲಕ್ಕು ಬಿಗಿದು, ಬುದ್ದಿ ಕಲಿಸಿ” ಎಂದು ಗೋಗರೆಯುತ್ತಿದ್ದರು. ಒಂಟಿಕಾಲಲ್ಲಿ ನಿಲ್ಲಿಸುವದು, ಇನ್ನೊಬ್ಬನನ್ನು ಹೊತ್ತು ನಿಲ್ಲುವುದು, ಮೊಣಕೈ ಸಂದಿಯಲ್ಲಿ ಕೈ ತೂರಿಸಿಕೊಂಡು ಎರಡೂ ಕಿವಿಯನ್ನು ಹಿಡಿದು ಕುಕ್ಕರಗಾಲಿನಲ್ಲಿ ಕೂಡುವುದೂ, ಹಳ್ಳು ಹಚ್ಚಿ ಕಿವಿ ಹಿಂಡುವುದು, ಆಗ ಚಾಲತಿಯಲ್ಲಿದ್ದ ದಂಡನೆಯ ವಿಧಾನಗಳು. ಅತಿ ಮೊಂಡರಿಗೆ ಕೈ ಕಾಲು ಕಟ್ಟಿ ಕೆಡವುತ್ತಿದ್ದರು. ಅದನ್ನು ಕೋದಂಡ ಹಾಕುವುದು ಎನ್ನುವ ವಾಡಿಕೆ ಇತ್ತು. ಅದು ಹೇಗೆ ಆ ರೀತಿ ಬಳಕೆಯಾಯಿತೋ ನನಗಂತೂ ಹೊಳೆದಿಲ್ಲ. ಬಹುಶಃ ಕೈ ಕಾಲು ಒಟ್ಟಿಗೆ ಕಟ್ಟಿದಾಗ ದೇಹ ಬಿಲ್ಲಿನಂತೆ ಬಾಗುವುದರಿಂದ ಆ ಹೆಸರು ಬಂದಿರಬಹುದು. ಆದರೆ ಅದು ಬಹುವಿರಳ. ಇದರ ಪರಿಣಾಮ ಒಂದೋ ಹುಡುಗ ಹಾದಿಗೆ ಬರುತ್ತಿದ್ದ, ಇಲ್ಲವೆ ಸಾಲಿ ಬಿಡುತ್ತಿದ್ದ. ಅಯ್ಯನವರಿಗೆ ಶಾಲಾಶುಲ್ಕ ಇಷ್ಟೇ ನೀಡಬೇಕೆಂಬ ನಿಗದಿಯಾದ ಕಟ್ಟುಪಾಡು ಇರಲಿಲ್ಲ.

ಅವರು ದೂರದ ಏಳಬಿಂಚಿ ಗ್ರಾಮದವರು. ಅವರಿಗೆ ನಮ್ಮೂರ ಹಿರಿಯ ರೈತನ ಹನ್ನೊಂದು ಅಂಕಣ ಮನೆಯ ಒಂದು ಕೋಣೆಯಲ್ಲಿ ಉಚಿತ ವಸತಿ. ಇನ್ನು ಊಟ, ಕರೆದವರ ಮನೆಯಲ್ಲಿ. ಅದಕ್ಕೆ ಬಿನ್ನ ಎನ್ನುತ್ತಿದ್ದರು. ಹೀಗಾಗಿ ಅವರು ಮನೆಗೆ ಊಟಕ್ಕೆ ಬರುವುದೆಂದರೆ ದೇವರೆ ಬಂದಂತೆ. ಆದರೆ ಅವರು ಬಹುತೇಕ ಜಂಗಮರಿರಬೇಕು. ಹಾಗಾಗಿ ಲಿಂಗಾಯಿತರೊಬ್ಬರ ಮನೆಯಲ್ಲಿ ಬಿನ್ನವಾಗುತಿತ್ತು. ಅವರ ಊಟದ ಪರಿಯೆ ಬಹುಚಂದ. ಅವರನ್ನು ಅಟವಾಳಿಗೆಯಲ್ಲಿ ಚಾಪೆ ಇಲ್ಲವೆ ಕಂಬಳಿಯ ಗದ್ದುಗೆಯ ಮೇಲೆ ಕೂಡಿಸುತ್ತಿದ್ದರು. ಅವರ ಎದುರಲ್ಲಿ ಒಂದೂವರೆ ಅಡಿ ಎತ್ತರ ಹಿತ್ತಾಳೆಯ ಮೂರು ಕಾಲಿನ ಸ್ಟೂಲು. ಅದನ್ನು ಅಡ್ಡಣಿಗೆ ಎನ್ನುವರು. ಅದರ ಮೇಲೆ ಕಂಚಿನ ಗಂಗಾಳ. ಪಕ್ಕದಲ್ಲೆ ಥಳಥಳ ಹೊಳೆಯುವ ಕಂಚಿನ ಚೊಂಬು ಮತ್ತು ವಾಟಗ. ಕುಳಿತ ಕೂಡಲೆ ವಿಭೂತಿ ಉಂಡೆ ಎದುರು ಬರುತಿತ್ತು. ಅದನ್ನು ಕೈನ ಮೂರೂ ಬೆರಳಿಗೆ ಗಾಢವಾಗಿ ಬಳಿದುಕೊಂಡು ಹಣೆಗೆ ಲೇಪಿಸಿಕೊಂಡರೆ ಬಡಿಸಲು ಸಂಕೇತ. ರೊಟ್ಟಿಯೋ, ಅನ್ನವೋ, ಹೋಳಿಗೆಯೋ, ಮಾದಲಿಯೋ ಏನು ಹಾಕಿದರೂ ಶಿವಾರ್ಪಣ ಎಂದು ಮೊದಲ ತುತ್ತು ಎತ್ತುತಿದ್ದರು. ಊಟ ಮಾಡುವಾಗ ಒಂದೇಒಂದು ಅಗಳೂ ಚೆಲ್ಲುತ್ತಿರಲಿಲ್ಲ. ಊಟವಾದ ಮೇಲೆ ಗಂಗಾಳದೊಳಗೆ ಕೈತೊಳೆದು ಆ ನೀರನ್ನೂ ಒಂದು ತೊಟ್ಟು ಬಿಡದೆ ಕುಡಿಯುತ್ತಿದ್ದರು. ಶಿವಾಯನಮಃ ಎಂದು ಎದ್ದರೆ ಊಟ ಮುಗಿದಂತೆ. ದಿನಕ್ಕೆ ಅವರದು ಎರಡು ಊಟವಾದರೆ ಮುಗಿಯಿತು. ನಂತರ ಏನನ್ನು ತಿನ್ನುತ್ತಿರಲಿಲ್ಲ.

ಹೊಸದಾಗಿ ಸೇರಿದ ಪ್ರತಿ ಹುಡುಗರ ಮುಂದೂ ಮೂರು ಬೊಗಸೆ ನುಣ್ಣನೆ ಮರಳು. ಅದನ್ನು ಅವರೆ ತಂದುಕೊಳ್ಳಬೇಕಿತ್ತು. ಮುಗಿದ ಮೇಲೆ ಗುಡಿಯ ಮೂಲೆಯಲ್ಲಿ ಗುಡ್ಡೆ ಹಾಕಬೇಕಿತ್ತು. ಆ ಮರಳನ್ನು ಹರಡಿ ಅದರಲ್ಲಿ ತೀಡಬೇಕು. ಅದೂ ಒಂದು, ಎರಡು ದಿನವಲ್ಲ. ತಿಂಗಳು ಗಟ್ಟಲೆ. ಅ ನಿಂದ ಕ್ಷ ವರೆಗೆ ಸ್ಫುಟವಾಗಿ ಬರೆಯುವವರೆಗೆ ತೀಡಲೇಬೇಕು. ಕೊಕ್ಕೆ ಕೋರೆ ಬರೆಯುವ ಹಾಗಿಲ್ಲ.

ಹಗಲಿನಶಾಲೆ ರಾತ್ರಿ ಭಜನಾ ಮಂದಿರ. ಯಾರೂ ಸಂಗೀತಗಾರರು ಇರಲಿಲ್ಲ. ಬಹುತೇಕ ಹಾಡುತಿದ್ದುದು ತತ್ವ ಪದಗಳು. ವಾದ್ಯ ಎಂದರೆ ಒಂದು ಏಕತಾರಿ. ಎರಡು ಮೂರು ಜತೆ ತಾಳಗಳು, ಚಿಟಿಕೆಗಳೂ. ದಪ್ಪಡಿ ಎಂದರೆ ಚಿಕ್ಕ ಕೈ ತಮಟೆಗಳು ಇರುತ್ತಿದ್ದವು. ನೇಕಾರ ಭರಮಪ್ಪ, ಕೆಲಸೇರ ಉದ್ದಾನಪ್ಪ, ಕುರುಬರ ಗೌಡಜ್ಜ, ಮಜ್ಜಿಗೆ ಬಸಪ್ಪ ಖಾಯಂ ಸದಸ್ಯರು. ಅಯ್ಯನವರದು ಮುಮ್ಮೇಳವಾದರೆ ಇವರೆಲ್ಲರದು ಹಿಮ್ಮೇಳ. ಅವರು ಹಾಡಿದ ಸಾಲನ್ನೇ ಮತ್ತೆ ಮತ್ತೆ ಒಟ್ಟಾಗಿ ಹಾಡುತ್ತಿದ್ದುದು ವಿಶೇಷ ಮೆರುಗು ಹಾಗೂ ಅರ್ಥವೈಶಾಲ್ಯವನ್ನು ಕೊಡುತ್ತಿದ್ದವು. ವಿಶೇಷ ಎಂದರೆ ಆಗ ಹೊತ್ತು ಕಂತುತಿದ್ದಂತೆ ಊಟ ಮುಗಿಯುತಿತ್ತು. ಭಜನೆ ಮಾಡಲು ಊಟವಾಗಿರಬಾರದೆಂದು ಕಡ್ಡಾಯವಿರಲಿಲ್ಲ. ಎಲ್ಲರೂ ಊಟ ಮುಗಿಸಿ ಸಾಲಿಗುಡಿಯಲ್ಲಿ ಸೇರುವರು ಗರ್ಭಗುಡಿಯ ಹೊಸ್ತಿಲ ಹೊರಗೆ ಆಚೆ ಈಚೆ ಸಾಲಾಗಿ ಕುಳಿತು ಸುಮಾರು ಎರಡು ತಾಸಿನವರೆಗೆ ಭಜನೆ ಮಾಡುವರು. ಕೆಲವರು ತಮ್ಮ ಕಟ್ಟೆಯ ಮೇಲೆ ಕುಳಿತೆ ಕಿವಿಗೊಡುತಿದ್ದರು. ನೀರವ ರಾತ್ರಿಯ ಮೌನದಲ್ಲಿ ಇವರ ಭಜನೆಯ ಸದ್ದು ದೂರದವರೆಗೆ ಕೇಳಿಸುತಿತ್ತು. ಮಂಗಳವಾರ, ಶುಕ್ರವಾರ ದೇವಿಗೆ ಊದು ಬತ್ತಿ ಬೆಳಗುತಿದ್ದರು. ಕಾರ್ತಿಕ ಮಾಸದಲ್ಲಿ ಮಾತ್ರ ಕೊಬ್ಬರಿ ಮಂಡಾಳಿನ ಚರಪು ಇರುತಿತ್ತು. ಆಗ ನಾವು ಹುಡುಗರೂ ಮುಕುರುತಿದ್ದೆವು.

ಕುರುಬ ಗಡ್ಡಿಯಲ್ಲಿ ಏನಾದರೂ ಪಂಚಾಯತಿ ಆಗಬೇಕೆಂದರೆ ಅಲ್ಲಿಯೇ ಆಗಬೇಕು. ನಮ್ಮ ಊರಲ್ಲಿ ಬಹುತೇಕ ಕುರುಬರೆ ಜಾಸ್ತಿ. ಅವರ ವಿಳೇವು, ಮದುವೆ ಮಾತುಕತೆ, ಉಡಿಕೆ, ಬಿಡುಗಡೆ, ಗಂಡ ಹೆಂಡಿರ ಜಗಳ, ಅಣ್ಣ ತಮ್ಮಂದಿರ ಪಾಲು. ಹೀಗೆ ಎಲ್ಲವನ್ನೂ ಕುಲಸ್ಥರು ಸೇರಿ ತಿರ್ಮಾನ ಮಾಡುವರು ಮತ್ತು ಬಹುತೇಕ ಅವರದೇ ಅಂತಿಮ ಮಾತು. ತಪ್ಪು ಮಾಡಿದವರಿಗೆ ದಂಡ ಹಾಕುವುದು, ನೊಂದವರಿಗೆ ಪರಿಹಾರ ನೀಡುವದು. ಕಿತ್ತಾಡಿದವರನ್ನು ರಾಜಿ ಮಾಡಿಸುವುದು ಹಿರಿಯರಾದ ಪಂಚಾಯತಿದಾರರ ಹೊಣೆ. ಅವರ ಕಟ್ಟಳೆ ಮೀರಿ ಯಾರೂ ನಡೆಯುವಂತಿಲ್ಲ. ಅಷ್ಟು ಅದಕ್ಕೆ ಗೌರವ, ಕೋರ್ಟು ಕಚೇರಿ ಪೊಲೀಸು ಊರಿಗೆ ಬಹುದೂರ. ಎಲ್ಲ ದೇವರ ಎದುರಲ್ಲೆ ಇತ್ಯರ್ಥವಾಗುವವು. ಗುಡಿ ಸಾಮಾಜಿಕ ನೆಮ್ಮದಿಯ ಕೇಂದ್ರವೂ ಆಗಿತ್ತು. ಅಯ್ಯನವರು ಗುಡಿಯಲ್ಲೆ ಇದ್ದರೂ ಊರ ಪಂಚಾಯತಿಯಲ್ಲಿ ಅವರು ಭಾಗವಹಿಸುವಂತಿರಲಿಲ್ಲ.

ಅಯ್ಯನವರು ಬಾಯಿಬಿಟ್ಟು ಕೇಳದಿದ್ದರೂ ಅವರಿಂದ ಯಾರೂ ಬಿಟ್ಟಿ ಪಾಠ ಹೇಳಿಸಿಕೊಳ್ಳುತ್ತಿಲಿಲ್ಲ. ಕೆಲವರು ವರ್ಷಕ್ಕೆ ಇಷ್ಟು ಎಂದು ಹಣ ನೀಡಿದರೆ ಇನ್ನುಳಿದವರು ದವಸ-ಧಾನ್ಯ, ಕಾಳು ಕಡಿ ಕೊಡುತ್ತಿದ್ದರು. ಅದೂ ಈಗಿನಂತೆ ತಿಂಗಳು ತಿಂಗಳಿಗೆ ಅಲ್ಲ. ಸುಗ್ಗಿಯ ಹಂಗಾಮಿನಲ್ಲಿ ಜೋಳ, ಭತ್ತ, ಶೇಂಗಾ ಅದು ಇದು ಸಂಗ್ರಹವಾಗುತಿತ್ತು. ಅದನ್ನು ಅವರು ಯಾರದಾದರೂ ಹಗೇವಲ್ಲಿ ಇಡುತ್ತಿದ್ದರು. ಉಳಿದವು ಊರ ಗೌಡರ ಕಣಜದಲ್ಲಿ, ಅವರ ಹೆಸರಲ್ಲಿ ಇರುತಿತ್ತು. ವರ್ಷಕ್ಕೋ ಆರು ತಿಂಗಳಿಗೋ ಒಂದು ಸಾರಿ ಅವರು ಊರಿಗೆ ಹೋಗುವಾಗ ಬಂಡಿ ಕಟ್ಟಿಕೊಡುತ್ತಿದ್ದರು. ಅದರಲ್ಲಿ ಅವರನ್ನು, ಅವರ ದವಸ ಧಾನ್ಯವನ್ನು ಅವರ ಊರಿಗೆ ತಲುಪಿಸುತಿದ್ದರು.

ನಮ್ಮ ಶಾಲೆಯು ಎಮ್ಮದು

ಶಾಲೆ ಎಂದರೆ ನಮಗೆ ಮನೆಗಿಂತ ಮೇಲು. ಅದರ ಶುಚಿತ್ವ ನಮ್ಮ ಕೆಲಸ. ಜವಾನರು ಇರಲಿಲ್ಲ. ಕೂಲಿಕೆಲಸ ಮಾಡಿಸಲು ಹಣ ಇರಲಿಲ್ಲ. ತರಗತಿವಾರು ತಂಡ ರಚಿಸುತ್ತಿದ್ದರು, ಅದಕ್ಕಾಗಿ ಸರತಿಯ ಮೇಲೆ ಹೊಣೆ ವಹಿಸಬೇಕಿತ್ತು. ದಿನವೂ ಕಸವನ್ನೂ ಖುಷಿಯಿಂದ ಗುಡಿಸುತಿದ್ದೆವು. ವಾರಕೊಮ್ಮೆ ಕಡಪ ಬಂಡೆಗಳನ್ನು ಒರೆಸಬೇಕಿತ್ತು. ಆ ಶಾಲೆಯಲ್ಲಿಯೇ ನಮಗೆ ಕಪ್ಪುಹಲಗೆಯ ಹೆಚ್ಚಿನ ಬಳಕೆಯ ಬಗ್ಗೆ ಅರಿವಾದದ್ದು. ಅಲ್ಲಿನ ಲೆಕ್ಕದ ಮೇಷ್ಟರು ತಾವು ಲೆಕ್ಕ ಮಾಡಿ ತೋರಿಸುವುದಲ್ಲದೆ ವಿದ್ಯಾರ್ಥಿಗಳನ್ನು ಬೋರ್ಡಿನ ಮುಂದೆ ಬಂದು ಮಾಡಲು ಹೇಳುತ್ತಿದ್ದರು. ಅದರಿಂದ ಕಪ್ಪು ಹಲಗೆಯ ಬಳಕೆ ಬಹುವಾಗಿರುತ್ತಿತ್ತು. ಆದರೆ ಅದರ ಹೆಚ್ಚಾದ ಬಳಕೆಯಿಂದ ಬಣ್ಣ ಕಳೆದುಕೊಂಡು ಬರೆದಾಗ ಏನೂ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಆಗ ಶಾಲೆಗೆ ಬರುವ ಅನುದಾನವೂ ಕಡಿಮೆ. ಬರುವ ಹಣ ಸೀಮೆಸುಣ್ಣಕ್ಕೆ ಸಾಕಾಗುತ್ತಿರಲಿಲ್ಲ. ಅಂದಮೇಲೆ ಅದಕ್ಕೆ ಕರಿ ಪೇಂಟು ಹಚ್ಚುವರು ಯಾರು? ಅಲ್ಲದೆ ಪೇಂಟು ಅಷ್ಟು ಚಾಲತಿಯಲ್ಲೂ ಇರಲಿಲ್ಲ. ಕಪ್ಪುಹಲಗೆಯನ್ನು ನಿರ್ವಹಿಸುವ ಹೊಣೆ ನಮ್ಮದೆ ಆಗಿರುತಿತ್ತು. ಅದಕ್ಕೆ ನಮ್ಮದೆ ಆದ ಪರಿಹಾರವನ್ನು ನಾವು ಕಂಡುಕೊಂಡಿದ್ದೆವು. ಇದ್ದಿಲನ್ನು ಸಣ್ಣಗೆ ಪುಡಿ ಮಾಡಿ ಸೋಸಿ, ನಂತರ ತೊಂಡೆ ತೊಪ್ಪಲನ್ನು ತಂದು ಅದರ ರಸ ತೆಗೆದು ಅದಕ್ಕೆ ಇದ್ದಲ ಪುಡಿಯನ್ನು ಸೇರಿಸಿ ಮಿಶ್ರಣ ತಯಾರಿಸುತ್ತಿದ್ದೆವು. ಹರಕು ಬಟ್ಟೆಯೆ ನಮ್ಮ ಬ್ರಷ್‌. ಅದನ್ನು ಮಿಶ್ರಣದಲ್ಲಿ ಅದ್ದಿ ಬೋರ್ಡಿಗೆ ಹಚ್ಚುತಿದ್ದೆವು. ಸಾಧಾರಣವಾಗಿ ಬೋರ್ಡಿಗೆ ಬಣ್ಣ ಬಳಿಯುವ ಈ ಕೆಲಸವನ್ನು ಶನಿವಾರದಂದು ಶಾಲೆ ಬಿಡುವ ಮುನ್ನವೆ ಮಾಡುವುದು. ಮಾರನೆ ದಿನ ಭಾನುವಾರ ರಜೆ. ಅದರ ಮೇಲೆ ಏನೂ ಬರೆಯಬೇಕಾಗಿರಲಿಲ್ಲ. ಸೋಮವಾರ ಶಾಲೆ ಶುರುವಾಗುವ ಹೊತ್ತಿಗೆ ಅದು ಕಪ್ಪಗೆ ಮಿರಿ ಮಿರಿ ಮಿಂಚುತಿತ್ತು. ಅದರ ಮೇಲೆ ಬರೆದ ಅಕ್ಷರಗಳು ಸುಸ್ಪಷ್ಟವಾಗಿರುತಿದ್ದವು. ಈ ಹೊಳಪು ಕನಿಷ್ಠ ಮೂರು ತಿಂಗಳವರೆಗೆ ಇರುತಿತ್ತು. ನಂತರ ಮತ್ತೆ ಹೊಸದಾಗಿ ತೊಂಡಿ ತೊಪ್ಪಲ ಹರಿಯ ಹೊರಡುತಿದ್ದೆವು. ಇದು ತರಗತಿಯ ಮಾನಿಟರ್‌ ನ ಕೆಲಸ. ಅವನ ಜತೆಯಲ್ಲಿ ನಾಲ್ಕಾರು ಜನ ಈ ಕೆಲಸದ ತಂಡದಲ್ಲಿರುವರು. ಕಪ್ಪು ಹಲಗೆಯ ಮುಂದೆ ಬಹಳ ಸಲ ಹೋಗುವ ನಾನು ಈ ಕೆಲಸವನ್ನು ಉತ್ಸಾಹದಿಂದ ಮಾಡುತಿದ್ದೆ. ಈಗ ಅತ್ಯಾಧುನಿಕ ಬೋರ್ಡುಗಳು ಬಂದಿವೆ. ಮೈಕೈಗೆ ಸುಣ್ಣದ ಧೂಳು ಆಗುವುದಿಲ್ಲ. ಡಸ್ಟರ್‌ ಗೊಡವೆ ಇಲ್ಲ. ಆದರೆ ಶಾಲೆ ನಮ್ಮದು, ಬೋರ್ಡು ನಮ್ಮ ಶ್ರಮದಿಂದ ಬರೆಯುವಂತಾಗಿದೆ ಎಂಬ ಸಾರ್ಥಕ ಭಾವನೆ ಈಗಿನ ಮಕ್ಕಳಲ್ಲಿ ಕಾಣುವುದು ಕಷ್ಟ.

ಅಲ್ಲಿದ್ದಾಗ ನಾನು ಕಲಿತ ಇನ್ನೊಂದು ವಿದ್ಯೆಯೆಂದರೆ ಇಂಕು ತಯಾರಿಕೆ. ಅದೇ ತಾನೆ ಫೌಂಟೇನ್‌ ಪೆನ್ನು ಯುಗಕ್ಕೆ ನಾವು ಕಾಲಿಟ್ಟಿದ್ದೆವು. ಅದುವರೆಗೂ ಶಾಲೆಯಲ್ಲಿ ಮಸಿ ಕುಡಿಕೆ ಲೆಕ್ಕಣಿಕೆ ಬಳಕೆಯಲ್ಲಿತ್ತಂತೆ. ನಮ್ಮ ಶಾಲೆಯಲ್ಲಿ ಆರು, ಏಳನೆ ತರಗತಿಗೆ ಮಾತ್ರ ಪೀಠೋಪಕರಣ. ಉಳಿದವಕ್ಕೆ ಹಲಗೆಗಳು. ಆಗ ಇರುವವೆಲ್ಲ ಐದುಜನ ಕೂಡುವ ಉದ್ದನೆಯ ಬೆಂಚುಗಳು. ಮಡಚುವ ಬೆಂಚುಗಳು ಬಳಕೆಯಲ್ಲಿರಲಿಲ್ಲ. ಇಬ್ಬರು ಕೂಡಬಹುದಾದ ಡೆಸ್ಕ್ ಗಳಿದ್ದವು. ಅಲ್ಲಿ ನಮ್ಮ ಪುಸ್ತಕದ ಚೀಲಗಳನ್ನು ಇಟ್ಟುಕೊಳ್ಳಲು ಅವಕಾಶವೂ ಇತ್ತು. ಆದರೆ ಇಬ್ಬರು ಕೂಡುವಲ್ಲಿ ಮೂವರೂ ಕೂಡುತಿದ್ದೆವು. ಬರೆಯಲು ಅನುಕೂಲವಾಗಲೆಂದು ಮುಂದಿರುವ ಜಾರು ಮೇಜಿನ ಎರಡು ಕೊನೆಯಲ್ಲಿ ಮಸಿ ಕುಡಿಕೆ ಬೀಳದಂತೆ ಇಡಲು ದುಂಡನೆಯ ಗುಳಿಗಳಿದ್ದವು. ಅಲ್ಲದೆ ಜಾರಿ ಬೀಳದಂತೆ ಲೇಖನಿಯನ್ನಿಡಲು ಜಾಗವನ್ನು ಮಾಡಿರುತಿದ್ದರು. ಹುಡುಗ ಎಂಥ ವಿದ್ಯಾರ್ಥಿ ಎಂದು ಅವನ ಕೈ ನೋಡಿಯೆ ಹೇಳಬಹುದಿತ್ತು. ಅದೇನು ಹಸ್ತ ಸಾಮುದ್ರಿಕೆಯಲ್ಲ. ಹೆಚ್ಚು ಬರೆವ ಹುಡುಗರ ಕೈಗೆ ಮಸಿ ಅಂಟಿರುತಿತ್ತು. ಕಾರಣ ಫೌಂಟೆನ್ ಪೆನ್‌. ಆದರೆ ಅವು ಹೆಸರಿಗೆ ತಕ್ಕಂತೆ ಮಸಿಯ ಕಾರಂಜಿಗಳೆ. ಇಂಕು ಸೋರದ ಪೆನ್ನು ಅಪರೂಪ. ಎಂಟಾಣೆಗೆ, ರೂಪಾಯಿಗೆ ಪೆನ್ನು ಬರುತಿತ್ತು. ಫೈಲಟ್‌, ಪ್ಲೇಟೊ, ಹೀರೋ… ಅದು ಇದು ಎಂದು ಹತ್ತು ಹಲವು ಕಂಪನಿಯ ಪೆನ್ನು ಇದ್ದವು. ಪಾರ್ಕರ್‌ ಪೆನ್ನು ಮಾತ್ರ ವೈಭೋಗದ ವಸ್ತು. ಇನ್ನೆಲ್ಲವೂ ನಮ್ಮ ಕೈಗೆ ಬಂದರೆ ಅಳಲು ಶುರು ಮಾಡುತ್ತಿದ್ದವು. ಒಂದೊಂದು ಬಾರಿ ಅವು ಹುಡುಗಿಯರಿಗೂ ಮೀಸೆ ಮೂಡಿಸಿ ನೋಡುವವರ ಮೊಗದಲ್ಲಿ ನಗೆ ಅರಳಿಸುತಿದ್ದವು.

ಇದ್ದಿಲನ್ನು ಸಣ್ಣಗೆ ಪುಡಿ ಮಾಡಿ ಸೋಸಿ, ನಂತರ ತೊಂಡೆ ತೊಪ್ಪಲನ್ನು ತಂದು ಅದರ ರಸ ತೆಗೆದು ಅದಕ್ಕೆ ಇದ್ದಲ ಪುಡಿಯನ್ನು ಸೇರಿಸಿ ಮಿಶ್ರಣ ತಯಾರಿಸುತ್ತಿದ್ದೆವು. ಹರಕು ಬಟ್ಟೆಯೆ ನಮ್ಮ ಬ್ರಷ್‌. ಅದನ್ನು ಮಿಶ್ರಣದಲ್ಲಿ ಅದ್ದಿ ಬೋರ್ಡಿಗೆ ಹಚ್ಚುತಿದ್ದೆವು. ಸಾಧಾರಣವಾಗಿ ಬೋರ್ಡಿಗೆ ಬಣ್ಣ ಬಳಿಯುವ ಈ ಕೆಲಸವನ್ನು ಶನಿವಾರದಂದು ಶಾಲೆ ಬಿಡುವ ಮುನ್ನವೆ ಮಾಡುವುದು. ಮಾರನೆ ದಿನ ಭಾನುವಾರ ರಜೆ. ಅದರ ಮೇಲೆ ಏನೂ ಬರೆಯಬೇಕಾಗಿರಲಿಲ್ಲ. ಸೋಮವಾರ ಶಾಲೆ ಶುರುವಾಗುವ ಹೊತ್ತಿಗೆ ಅದು ಕಪ್ಪಗೆ ಮಿರಿ ಮಿರಿ ಮಿಂಚುತಿತ್ತು.

ಹಲವು ಸಾರಿ ಪುಸ್ತಕಕ್ಕಿಂತ ಇಂಕಿಗೆ ಹೆಚ್ಚು ಹಣ ಖರ್ಚು ಮಾಡಬೇಕಾಗುತಿತ್ತು. ಕಾರಣ ಪೆನ್ನಿಗೆ ಹಾಕುವಾಗ ಇಂಕು ಚೆಲ್ಲುವುದು ಸಾಮಾನ್ಯ. ಹಾಕಿದ ಮೇಲೆ ಇಂಕು ಬುಡ್ಡಿಯೇ ಉರುಳಿ ಬೀಳುವುದು ಸಾಮಾನ್ಯವಾಗಿತ್ತು. ಅನೇಕ ರೀತಿಯ ಮಸಿ ಸಿಗುತ್ತಿದ್ದವು. ಕಪ್ಪು, ನೀಲಿ, ಕೆಂಪು ಹಸಿರು, ನೇರಳೆ ಇತ್ಯಾದಿ ಬಣ್ಣಗಳಲ್ಲಿ ದೊರೆಯುತಿದ್ದವು. ನಾವು ಸಾಧಾರಣ ನೀಲಿ ಮತ್ತು ಕೆಂಪು ಇಂಕನ್ನು ಮಾತ್ರ ಬಳಸುತಿದ್ದೆವು. ಕೆಲವು ಸಲ ಸಿದ್ಧವಾದ ಇಂಕು ದುಬಾರಿಯೆಂದು ಮಸಿ ಗುಳಿಗೆ ತಂದು ಬಳಸುತಿದ್ದೆವು. ಆಗ ಇನ್ನೊಂದು ಸಮಸ್ಯೆ ಎದುರಾಗುವುದು. ಒಂದೋ ನೀರು ಹೆಚ್ಚಾಗಿ ಬರೆದರೂ ಕಾಣದಷ್ಟು ತಿಳಿ. ಇಲ್ಲವೆ ನಿಬ್ಬಿನಲ್ಲಿ ಇಳಿಯದಷ್ಟು ಗಟ್ಟಿ. ಆದರೂ ಹೆದರದೆ ಪ್ರಯೋಗ ಮಾಡುತಿದ್ದೆವು. ಒಂದು ಸಲ ಟೋಳಿ ನಮ್ಮ ಹಳ್ಳಿಗೆ ಹೋದಾಗ ಹೊಸ ಯೋಜನೆ ಹೂಡಿದೆವು. ನಮ್ಮ ಹಳ್ಳಿಯಲ್ಲಿ ಈಜಾಡಲು ಬಾವಿಗೆ ಹೋದಾಗ ಗೊಂಡೆ ಹೂವಿನಗಿಡ ಬೇಲಿಯಲ್ಲಿ ಬೆಳೆಯುವುದು. ಅದರ ಹೂವು ರುದ್ರಾಕ್ಷಿಯಂತೆ ಇರುತ್ತವೆ. ಅದರ ಹಣ್ಣು ಕವಳಿ ಹಣ್ಣಿನ ತರಹ ಕಪ್ಪಗೆ ಚಿಕ್ಕವು. ಅವು ಗೊಂಚಲು ಗೊಂಚಲಾಗಿ ಹರಡಿರುವುದು ಕಂಡಿತು. ಗಿಡದಹಣ್ಣಿನ ರಸದಿಂದ ಮಸಿ ಮಾಡಬಹುದೆಂದು ಯಾರೋ ಹೇಳಿದರು. ಸರಿ ಪ್ರಯೋಗಕ್ಕೆ ತಯಾರಾದೆವು. ನಾವು ಇಂಕು ಉಪಯೋಗಿಸಿ ಬರೆಯುವವರು ನಾಲಕ್ಕು ಜನ. ನಾವೆ ತಯಾರು ಮಾಡಿದರೆ ಬಹಳ ದುಡ್ಡು ಉಳಿಯುವುದು ಎಂಬ ಯೋಚನೆ ಬಂತು. ಸರಿ ನಮ್ಮ ಬೇಟೆ ಶುರುವಾಯಿತು. ಖುಷಿಯಿಂದ ರಾಶಿ ಹಣ್ಣು ಕಿತ್ತು ತಂದೆವು. ಅದರ ರಸ ತೆಗೆದೆವು. ಮುಕ್ಕಾಲು ಪಾಲುಬೀಜ ಮತ್ತು ಸಿಪ್ಪೆಯೆ ಬಂದವು. ಅನಂತರ ಅದನ್ನು ಬಿಳಿ ಬಟ್ಟೆಯಲ್ಲಿ ಸೋಸಿದೆವು. ಅದು ನೀಲಿಯಾಗೇನೋ ಇತ್ತು. ಆದರೆ ತುಂಬ ತಿಳಿಯಾಯಿತು. ಅದಕ್ಕೆ ಯಥಾರೀತಿ ನುಣುಪಾದ ಇದ್ದಲು ಪುಡಿ ಸೇರಿಸಿದೆವು. ನಮ್ಮ ಮನೆಯಲ್ಲಿ ಮಾಡಿದ ಇಂಕು ಸಿದ್ಧವಾಯಿತು. ಒಂದು ಚಿಮಣಿ ಎಣ್ಣೆ ಬಾಟಲಿಯಲ್ಲಿ ಅದನ್ನು ತುಂಬಿದೆವು. ಆದರೆ ಅದಕ್ಕೆ ಮುಚ್ಚಳ ಇಲ್ಲ. ಸರಿ ಕಾಗದವನ್ನೆ ಸುರುಳಿ ಸುತ್ತಿ ಬಿರಟೆ ಮಾಡಿದೆವು. ಹೇಗೂ ನಾವು ನಾಲಕ್ಕು ಜನರಿಗೆ ಒಂದು ವರ್ಷವಾದರೂ ಬರುವುದು ಎಂದುಕೊಂಡೆವು. ಒಂದು ವರ್ಷ ಬಳಸಿದರೂ ಎಷ್ಟೆ ಬರೆದರೂ ಮುಗಿಯದು ಎಂದು ಸಂಭ್ರಮಿಸಿದೆವು. ಅದನ್ನು ಬಳಸಿ ನಾವು ಪುಸ್ತಕದಲ್ಲಿ ಬರೆಯಬೇಕಿತ್ತು. ನಮ್ಮ ಖುಷಿ ವಾರದಲ್ಲೆ ಹುಸಿಯಾಯಿತು. ನಮ್ಮ ಪುಸ್ತಕಗಳೆಲ್ಲ ಮಸಿಮಯವಾದವು. ನಾವು ಅದನ್ನು ಪುಸ್ತಕಗಳ ಜತೆ ಗೂಡಿನಲ್ಲಿ ಇಟ್ಟಿದ್ದೆವು. ನಾವು ನಾಲಕು ಜನರೂ ಆಗಾಗ ಅದನ್ನು ಪೆನ್ನಿಗೆ ತುಂಬಿಕೊಳ್ಳುತ್ತಿದ್ದವು. ಅದರ ಕಾಗದದ ಬಿರಟೆಯು ನೆನೆದು ಸಡಿಲವಾಗಿ ಎಲ್ಲ ಮಸಿ ಚೆಲ್ಲಿ ಹೋಗಿತ್ತು. ಮಸಿಯ ಹಣ ಉಳಿಸಲು ಮಾಡಿದ ಸಾಹಸ ಪುಸ್ತಕಕ್ಕೆ ಹೆಚ್ಚಿನ ಹಣ ನೀಡುವಂತೆ ಮಾಡಿತು.

ಇನ್ನೊಂದು ಘಟನೆಯಂತೂ ಮರೆಯಲಾರದ್ದು; ಏಳನೆ ತರಗತಿಯಲ್ಲಿನ ಗೆಳೆಯನೊಬ್ಬನನ್ನು ನೋಡಿದ ಕೂಡಲೆ ಅಂದಿನ ಘಟನೆ ನೆನಪು ಮರುಕಳಿಸುವುದು. ನಮಗೆ ಸತ್ಯ ಎನ್ನುವ ಸಹಪಾಠಿ ಇದ್ದ. ಅವನು ಸೆಟ್ಟರ ಹುಡುಗ. ದಪ್ಪಗೆ ಕಪ್ಪಗೆ ಇದ್ದ. ಬಹು ಮುಗ್ಧ. ಜತೆಗೆ ತುಸು ಪೆದ್ದನಂತಿದ್ದ. ಒಂದು ಸಲ ಶಾಲೆಯಲ್ಲಿ ಆಟ ಆಡುತ್ತಿರುವಾಗ ಅವನ ಹಣೆಯಲ್ಲಿ ನಾಮ ಹಾಕಿದಂತೆ ನರ ಉಬ್ಬಿರುವುದು ಕಂಡಿತು. ಎಲ್ಲರೂ ಅದೇನು ಎಂದು ಅವನನ್ನು ಕೇಳುವವರೆ. ಮಾರನೆ ದಿನವೂ ಅದು ಇತ್ತು. ನಮ್ಮಲ್ಲಿ ಒಬ್ಬನು ಅದು ಅದೃಷ್ಟ ರೇಖೆಯನ್ನು ಅಳಿಸಿ ಬಿಡುವ ನರ. ಅದನ್ನು ಹಾಗೆಯೇ ಬಿಟ್ಟರೆ ದುರದೃಷ್ಟ ಉಂಟಾಗುವುದು ಎಂದು ಅಪರ ಪಂಡಿತನಂತೆ ಹೇಳಿದ. ಸತ್ಯನಿಗೆ ಪುಕ್ಕಲು ಶುರುವಾಯಿತು. ಅವನು ಓದಿನಲ್ಲಿ ಅಷ್ಟು ಮುಂದಿಲ್ಲ. ಬಹಳ ಕಷ್ಟಪಡುತಿದ್ದ. ಆದರೆ ನೆನಪು ಉಳಿಯುತ್ತಿರಲಿಲ್ಲ. ನಮ್ಮ ಗೆಳೆಯನೊಬ್ಬ ಅವನ ಹಣೆಯಲ್ಲಿನ ಈ ನರವೇ ದೇವರು ಹಣೆಬರಹದಲ್ಲಿನ ಬರೆದ ವಿದ್ಯೆಯನ್ನು ಮಸುಕಾಗುವಂತೆ ಮಾಡಿದೆ ಎಂದು ವಿವರಣೆ ನೀಡಿದ. ಏನಾದರೂ ಮಾಡಿ ಸರಿ ಮಾಡಿ ಎಂದು ಸತ್ಯ ದುಂಬಾಲು ಬಿದ್ದ. ಅಂದು ಮಧ್ಯಾಹ್ನ ಅವನ ಹಣೆಬರಹ ತಿದ್ದುವ ಕೆಲಸ ಶುರುವಾಯಿತು. ಇಬ್ಬರು ಬಲವಾದ ಹುಡುಗರು ಮರಳು ಮತ್ತು ಸೀಮೆಸುಣ್ಣದ ಪುಡಿ ಸೇರಿಸಿ ಅವನ ಹಣೆಯ ಮೇಲಿದ್ದ ಆ ನರವನ್ನು ತೀಡತೊಡಗಿದರು. ಅದು ಬಡ ಪೆಟ್ಟಿಗೆ ಹೋಗಲಿಲ್ಲ. ಇವರು ಬಿಡಲಿಲ್ಲ. ಇನ್ನೂ ಬಲವಾಗಿ ಉಜ್ಜಿದರು. ಹಣೆಯ ಆ ಭಾಗ ಕೆತ್ತಿದಂತಾಗಿ ರಕ್ತ ಬಂದಿತು. ಆದರೆ ಆ ನರ ಗಾಯದಲ್ಲಿ ಮರೆಯಾಯಿತು. ಅವನು ನೋವನ್ನು ನುಂಗಿಕೊಂಡು ಅದು ಹೋಯಿತಾ ಎಂದು ಕೇಳಿದ. ನಾವು ಪೂರ್ತಿ ಹೋಗಿಲ್ಲ, ಆದರೆ ಕೆಲವೆ ದಿನಗಳಲ್ಲಿ ಹೋಗುವುದು ಎಂದು ಸಮಾಧಾನ ಮಾಡಿದೆವು. ಗಾಯ ಒಂದು ವಾರದಲ್ಲೆ ಹಕ್ಕಳಿಕೆ ಗಟ್ಟಿ ನಂತರ ಉದುರಿ ಹೋಯಿತು. ನರದ ಬದಲಾಗಿ ನಾಮದಾಕಾರದ ಗಾಯದ ಗುರುತು ಅವನ ಹಣೆಯ ಮೇಲೆ ಶಾಶ್ವತವಾಗಿ ಉಳಿಯಿತು. ಅವನು ವೈಶ್ಯ. ತಿರುಪತಿ ವೆಂಕಟೇಶನ ಒಕ್ಕಲು. ಆಗೀಗ ಕೆಂಪನೆಯ ನಾಮ ಹಾಕಿಕೊಳ್ಳುತಿದ್ದ. ಹಿನ್ನೆಲೆ ಗೊತ್ತಿಲ್ಲದವರು ಅವನು ಅದೃಷ್ಟವಂತ, ಹುಟ್ಟುವಾಗಲೆ ದೇವರನಾಮ ಅವನ ಹಣೆಯ ಮೇಲಿದೆ ಎಂದು ಅನ್ನಲು ಶುರು ಮಾಡಿದರು. ಅವನು ಅಲ್ಲಗಳೆಯಲು ಹೋಗಲಿಲ್ಲ. ಹಾಗೂ ಹೀಗೂ ಆರನೆ ತರಗತಿ ಮುಗಿಸಿದ. ಕುಲ ವೃತ್ತಿಯಾದ ವ್ಯಾಪಾರ ಮಾಡಿಕೊಂಡು ನೆಮ್ಮದಿಯಾಗಿದ್ದಾನೆ. ಯಾವಾಗಲಾದರೂ ಕಂಡಾಗ ಬದಲಾದ ಅವನ ಅದೃಷ್ಟರೇಖೆಯನ್ನು ಕಂಡು ನಾವು ಮುಗುಳ್ನಗುತ್ತೇವೆ.

ಅಲ್ಲಿ ನೋಡಿದುದು ಬಡವರು ಬಲ್ಲಿದರು ಎನ್ನುವ ಭೇದವಿಲ್ಲದೆ ಶ್ರಾವಣ ಶನಿವಾರ ತಿರುಪತಿ ಒಕ್ಕಲು ಅದ ಮನೆಯವರ ಮಕ್ಕಳು ಪಾತ್ರೆ ಹಿಡಿದು ಗೋಪಾಳ ಭಿಕ್ಷೆಗೆ ಬರುವರು. ಸಾಧಾರಣವಾಗಿ ಚಿಕ್ಕಮಕ್ಕಳು ಬಡವರ ಮನೆಯವರಾದರೆ ಹತ್ತಿಯ ಸಾದಾ ಪಂಚೆ ಉಟ್ಟುಕೊಂಡು ಕಂಚಿನ ತಂಬಿಗೆ ಹಿಡಿದು, ಸಿರಿವಂತರಾದರೆ ರೇಷ್ಮೆ ಮಡಿ ಉಟ್ಟುಕೊಂಡು ಬೆಳ್ಳಿಯ ತಂಬಿಗೆ ಕೈನಲ್ಲಿ ಹಿಡಿದು ನಾಮ ಹಾಕಿಕೊಂಡು ವೆಂಕಟರಮಣ ಗೋವಿಂದ ಗೋವಿಂದಾ ಎಂದು ಬರುವರು. ಸಾಧಾರಣ ಐದು ಮನೆಗೆ ಹೋಗುವುದು ವಾಡಿಕೆ. ಅವರಿಗೆ ಭಕ್ತಿಯಿಂದ ಅಕ್ಕಿ ಹಾಕುವರು. ಗೊತ್ತಿದ್ದವರ ಮನೆಯ ಹುಡುಗ ಬಾರದಿದ್ದರೆ, ಯಾಕೋ ಶನಿವಾರ ನಮ್ಮ ಮನೆಗೆ ಗೋಪಾಳಕ್ಕೆ ಬರಲಿಲ್ಲ ಎಂದು ವಿಚಾರಿಸುತಿದ್ದರು. ಗೋಪಾಳ ಬೇಡುವುದು ಮತ್ತು ಹಾಕುವುದು ಹೆಮ್ಮೆಯ ವಿಷಯವಾಗಿತ್ತು.

ಊರಿನ ವಿಶೇಷ ಆಕರ್ಷಣೆ ಎಂದರೆ ನವರಾತ್ರಿಯಲ್ಲಿ ನಡೆವ ಹರಿಕಥೆ. ಕುಕುನೂರಿನ ದಾಸರೊಬ್ಬರು ಪ್ರತಿವರ್ಷ ಅಲ್ಲಿ ಬಂದು ಹರಿಕಥೆ ಮಾಡುವರು. ಅವರಿಗೆ ಬಡಗೇರ ಮಾನಪ್ಪ ಹಾರ್ಮೋನೀಯಂ ಮತ್ತು ಕೆಲಸಿಗರ ವೀರಭದ್ರಪ್ಪ ತಬಲದಲ್ಲಿ ಜೊತೆ ನೀಡುವರು. ಅವರ ಉಡುಪು ಎದ್ದುಕಾಣುವಂತೆ ಇರುತಿತ್ತು. ತಿಳಿಹಳದಿ ಬಣ್ಣದ ರೇಶಿಮೆ ಜುಬ್ಬ, ಕೆಂಪು ಅಗಲದಂಚಿನ ಕಚ್ಚೆ ಪಂಚೆ, ಕೊರಳ ಸುತ್ತ ಶಲ್ಯ, ತಲೆಯ ಮೇಲೆ ಮರಾಠಿ ಶೈಲಿಯ ಪಾಗು, ಜತೆಗೆ ದಿನವೂ ಭಕ್ತರು ಹೆಣೆದು ಹಾಕುತಿದ್ದ ಹೂವಿನ ಹಾರ, ಕಾಲಿಗೆ ಕಿರುಗೆಜ್ಜೆ ಮತ್ತು ಬಲಗೈನಲ್ಲಿ ಚಿಟಿಕೆ ಸಂಗೀತ ಸಾಹಿತ್ಯ ಸೇರಿದ ಕಥೆ ಮಧ್ಯ ಮಧ್ಯ ಹಾಸ್ಯ ಪ್ರಸಂಗಗಳು ಇರುತಿದ್ದವು. ಅವರು ಹೇಳುವ ಕಥೆಗಳಿಗಿಂತ ಉಪ ಕಥೆಗಳು ನಮಗಂತೂ ಬಹಳ ಮಜಾ ಕೊಡುತ್ತಿದ್ದವು. ಆ ದಿನಗಳಲ್ಲಿ ನಗರೇಶ್ವರನ ಗುಡಿಯಲ್ಲಿ ಅರ್ಧ ಊರೇ ಸಂಜೆಗೆ ನೆರೆದಿರುತಿತ್ತು. ಅವರನ್ನು ದಿನಕ್ಕೊಬ್ಬರು ಊಟಕ್ಕೆ ಕರೆಯುತ್ತಿದ್ದರು. ಅದರಲ್ಲೂ ಮೇಲಾಟ. ದಿನನಿತ್ಯದ ಮಂಗಳಾರತಿ ತಟ್ಟೆಯಲ್ಲಿ ಬರುವ ದಕ್ಷಿಣೆಯ ಜೊತೆ ಕೊನೆಯ ದಿನ ಪಟ್ಟಿಹಾಕಿ ಸಂಭಾವನೆ ಕೊಡುತಿದ್ದರು. ಅವರಿಗೆ ಅದು ಆದಾಯದ ಮೂಲವಾಗಿರದೆ ಜೀವನದ ಆಚರಣೆಯ ಭಾಗವಾಗಿತ್ತು.

ಜನರಿಗೆ ಹರಿಕಥೆ ಹಬ್ಬದ ಅವಿಭಾಜ್ಯ ಅಂಗವಾಗಿತ್ತು. ಅದೊಂದು ಸಂಜೆಗೆ ಎಲ್ಲರೂ ಒಟ್ಟು ಸೇರುವ ಸಾಮಾಜಿಕ ಮತ್ತು ಧಾರ್ಮಿಕ ಸಮಾರಂಭವಾಗಿತ್ತು ಮಕ್ಕಳಿಗೆ ಸಂಗೀತ ಸಂಸ್ಕೃತಿಯ ಜತೆಜತೆಗೆ, ಉಪ ಕಥೆಗಳಿಂದ ಮನರಂಜಿಸುವ ಆಕರ್ಷಣೀಯ ಕೇಂದ್ರವಾಗಿತ್ತು. ತಂದೆ ತಾಯಿ, ಅಜ್ಜ-ಅಜ್ಜಿ, ನೆರೆಹೊರೆಯವರ ಜತೆ ಬೆರೆತು ಕಲಿಯುವ ತಾಣವಾಗಿತ್ತು.