ಕನ್ನಡದ ಹೊಸತಲೆಮಾರಿನಲ್ಲಿ ಬಹಳ ಚೆನ್ನಾಗಿ ಕವಿತೆ ಬರೆಯುತ್ತಿದ್ದ, ಬಹಳ ಆರೋಗ್ಯಕರವಾಗಿ ಆಲೋಚನೆ ಮಾಡುತ್ತಿದ್ದ, ಪ್ರತಿಭಾವಂತ ಕವಿ ಎನ್ಕೆ ಹನುಮಂತಯ್ಯ ತೀರಿಕೊಂಡಿದ್ದಾರೆ. ದು:ಖವಾಗುತ್ತಿರುವುದು ಅವರು ತೀರಿಕೊಂಡಿದ್ದಕ್ಕೆ ಮಾತ್ರವಲ್ಲ, ತೀರಿಕೊಂಡ ವಿಧಾನಕ್ಕೂ.  ವಿಷಪ್ರಾಶನ ಮಾಡಿಕೊಂಡು ಅವರು ತಮ್ಮನ್ನು ಕೊಂದು ಕಳೆದುಕೊಂಡಿದ್ದಾರೆ. ಬಾಳಿ ಬದುಕಿದ ಜೀವಗಳು ಸಹಜ ಸಾವನ್ನು ಪಡೆದರೆ, ದುಗುಡದಿಂದ ಗೌರವದಿಂದ ಬೀಳುಕೊಡಬಹುದು. ಆದರೆ ಇನ್ನೂ ಬಾಳಿ ಬದುಕಬೇಕಾದ ಜೀವಗಳು ಸರಿಯಾಗಿ ಒಗೆತನವನ್ನು ಮಾಡದೆ, ದುಡುಕಿ ಅನಾಹುತ ಮಾಡಿಕೊಂಡಾಗ, ತಮ್ಮ ಜತೆಗಿದ್ದವರನ್ನು ಅತಂತ್ರ ಮಾಡಿ ಹೋದಾಗ, ದು:ಖದ ಜತೆ ಕೋಪವೂ ಬರುತ್ತದೆ. ಬಾಳಿನ ಬಗ್ಗೆ ಆಳವಾಗಿ ಕಲಕುವಂತೆ ದಾರ್ಶನಿಕವಾಗಿ ಬರೆದು ನಮ್ಮಂತಹ ಓದುಗರನ್ನು ಸೂಕ್ಷ್ಮಗೊಳಿಸುವ ಲೇಖಕರೇ ಹೀಗೆ ದುಡುಕಿದರಲ್ಲ ಮನಸ್ಸು ಪ್ರಕ್ಷುಬ್ಧವಾಗುತ್ತದೆ. ಎನ್ಕೆ ಹೀಗೆ ಹಲವಾರು ಗೆಳೆಯರನ್ನು ಬೇಸರಿಸಿ, ಆಘಾತದಲ್ಲಿಕ್ಕಿ ತಣ್ಣಗೆ ಮಣ್ಣೊಳಗೆ ಹೋಗಿ ಮಲಗಿದ್ದಾರೆ.

ಹತ್ತು ವರ್ಷದ ಹಿಂದೆ ಕಪ್ಪನೆಯ ಜಾಲಿಮರದ ವಿಗ್ರಹದಂತಿದ್ದ ಈ ಹುಡುಗ, ಎಂಎ ಮುಗಿಸಿಕೊಂಡು, ಪಿಎಚ್.ಡಿ., ಮಾಡಲು ಕನ್ನಡ ವಿವಿಗೆ ಒಮ್ಮೆ ಬಂದರು. `ಗುರುಗಳೇ ನೀವೇ ಮಾರ್ಗದರ್ಶನ ಮಾಡಬೇಕು’ ಎಂದರು. ಜತೆಗೆ ಆತ ಆ ವರ್ಷ ಪರೀಕ್ಷೆಗೆ ಬಂದಿದ್ದ ನೂರಾರು ಜನರಲ್ಲಿ ಮೊದಲ ಸ್ಥಾನ ಪಡೆದಿದ್ದರು. ಇಂತಹ ವಿದ್ಯಾರ್ಥಿಗಳು ಸಿಕ್ಕರೆ ನಾವು ಕಲಿಸುವುದು ಹೆಚ್ಚಿಗೆ ಇರುವುದಿಲ್ಲ. ಕಲಿಯುವುದೇ ಇರುತ್ತದೆ. ಆದರೆ ಯಾಕೋ ಏನೋ, ಹನುಮಂತಯ್ಯ ಅಡ್ಮಿಶನ್ ಆಗಲೇ ಇಲ್ಲ. ಕಾರಣ ಕೂಡ ತಿಳಿಸಲಿಲ್ಲ. ಆಮೇಲೆ ಎಲ್ಲೊ ತಿಪಟೂರಿನಲ್ಲಿ ಕೆಲಸಕ್ಕೆ ಸೇರಿಕೊಂಡ ಸುದ್ದಿ ಬಂತು. ತಮ್ಮ ಸಹಪಾಠಿಯನ್ನು ಪ್ರೇಮಿಸಿ ಮದುವೆಯೂ ಆದ ಸುದ್ದಿ ಬಂತು. ಒಳ್ಳೆಯ ಕವನಗಳನ್ನು ಬರೆಯುತ್ತ ಖ್ಯಾತರಾದ ಎನ್ಕೆ ಅನೇಕ ಕಾರ್ಯಕ್ರಮದಲ್ಲಿ ಭೇಟಿಯಾಗುತ್ತಿದ್ದರು. ಅವರ `ಚಿತ್ರದಬೆನ್ನು’  ಕವನ ಸಂಕಲನ ಓದಿದಾಗ, ನಾನು ಅಲ್ಲಿನ ತಲ್ಲಣಗಳಿಗೆ ತತ್ತರಿಸಿಹೋದೆ. ಅಲ್ಲಿನ ಹೊಸತನಕ್ಕೆ ಬೆರಗಾಗಿ ಹೋದೆ. ಬಹಳ ದೊಡ್ಡ ಕವಿಯಾಗಿ ಬೆಳೆಯುವ ಪ್ರತಿಭೆಯಿದು ಎಂದು ಅನಿಸಿ ಸಂತೋಷವಾಗುತ್ತಿತ್ತು. ಅತ್ಯಂತ  ಸೂಕ್ಷ್ಮವಾಗಿ ದಿಟ್ಟತನದಿಂದ ಮಾತಾಡುತ್ತಿದ್ದ ಎನ್ಕೆಯದು ಮೂಲತಃ ಹೆಂಗರುಳಾಗಿತ್ತು. ಇಂತಹದೊಂದು ಮನಸ್ಸು, ನಮ್ಮ ಸಮಾಜವನ್ನು ಕಟ್ಟುವಲ್ಲಿ ಒಬ್ಬ ಸೈನಿಕ ಶಕ್ತಿಯಂತೆ ನನಗೆ ತೋರುತ್ತಿತ್ತು.

ಆದರೆ ಕ್ರಮೇಣ ಹನುಮಂತಯ್ಯನವರಲ್ಲಿ ಸ್ವಭಾವ ಮತ್ತು ಜೀವನದಲ್ಲಿ ಒಂದು ಬಗೆಯ ಪರಿವರ್ತನೆ ಕಾಣತೊಡಗಿತು. ಜೀವನದಲ್ಲಿ ರೂಢಿಸಿಕೊಂಡ ಅಶಿಸ್ತಿನಿಂದಲೊ ಸಣ್ಣದನ್ನೂ ಬೃಹದಾಕಾರವಾಗಿ ಪರಿಭಾವಿಸಿ ಒದ್ದಾಡುವ ಅತಿಸೂಕ್ಷ್ಮತೆಯಿಂದಲೊ, ಚಿಕ್ಕಪ್ರಾಯದಲ್ಲೇ ಸಿಕ್ಕ ಕೀರ್ತಿ ಮತ್ತು ಸಾರ್ವಜನಿಕ ಮನ್ನಣೆಯಿಂದಲೊ, ಸಂಸಾರವನ್ನು ಚೊಕ್ಕವಾಗಿ ನಡೆಸಲಾಗದೆ ಮಾಡಿಕೊಂಡ ಎಡವಟ್ಟಿನಿಂದಲೊ ಈ ಪರಿವರ್ತನೆ ಬಂದಿತು. ಅವರ ಕಾವ್ಯದ ಬದ್ಧತೆ ಬದುಕಿನಲ್ಲಿ ಕಾಣಲಿಲ್ಲ. ಪ್ರೀತಿಸಿ ಲಗ್ನವಾದ ಹುಡುಗಿ ಶೈಲಜ ಅವರಿಗೆ ನೋವಾಗುವಂತೆ ಅವರು ಒಂದು  ಪ್ರೇಮಪ್ರಕರಣದಲ್ಲಿ ಸಿಲುಕಿಕೊಂಡರು. ಕುಡಿತ ಸಾಲ ಹೆಚ್ಚಾದವು. ಇದರಿಂದ ಅವರಿಗಾಗಿ ತನ್ನ ಜಾತಿಯನ್ನೂ ಮನೆಯನ್ನೂ ಬಿಟ್ಟು ಧೀಮಂತಿಕೆ ಪ್ರಕಟಿಸಿದ ಹೆಣ್ಣುಮಗಳಿಗೆ ನೋವಾಗತೊಡಗಿತು. ಅವರಿಗೆ ಕರೆದು ಬುದ್ದಿ ಹೇಳುವಷ್ಟು ನನಗೆ ಸಲುಗೆಯಿರಲಿಲ್ಲ.

ಹನುಮಂತಯ್ಯ ಕೂಡ ಯಾರ ಕೈಗೂ ಸಿಗದೆ ಫೋನಿಗೂ ನಿಲುಕದೆ ತಪ್ಪಿಸಿಕೊಂಡು ತಿರುಗತೊಡಗಿದ್ದರು. ತಿಪಟೂರಿಗೆ ಹೋದಾಗ, ಶೈಲಜರನ್ನು ಕಂಡು ನಾನೂ ನನ್ನ ಮಡದಿ, ನೈತಿಕ ಧೈರ್ಯ ಕೊಟ್ಟು, ನಿಮ್ಮ ಜತೆ ನಾವಿದ್ದೇವೆ ಎಂದು ಹೇಳಿದೆವು. ಆದರೆ ಅವರ ಮೂಲಕ  ಗಂಡನ ದುರ್ಬಲತೆ ಪಲಾಯನದ ಮಾತು ಸೋತನುಡಿಗಟ್ಟು ಕೇಳಿದಾಗ, ಹನುಮಂತಯ್ಯ ಸಾಯುವ ಹಾದಿಯಲ್ಲಿ ಸಾಗುತ್ತಿದ್ದಾರೆ ಅನಿಸಿ ಗಾಬರಿಯಾಯಿತು. ಹನುಮಂತಯ್ಯ ಬೆಳೆಸಿಕೊಂಡ ಹೊಸ ಸಂಬಂಧವನ್ನು ಭಾವನೆ ಪ್ರೇಮ ಇತ್ಯಾದಿ ಪರಿಭಾಷೆಯಲ್ಲಿ ಹೇಗೆ ವಿವರಿಸಿದರೂ, ಅದು ತನ್ನ ಸಂಗಾತಿಗೆ ಮಾಡಿದ ದ್ರೋಹವೂ ಆಗಿದ್ದು, ಅನೇಕ ನೈತಿಕ ಬಿಕ್ಕಟ್ಟುಗಳನ್ನು ಹುಟ್ಟುಹಾಕಿತು. ಆ ಬಿಕ್ಕಟ್ಟುಗಳಿಂದ ಪಾರಾಗಲು ಅವರು ನಾನು ಮಾಡಿದ್ದೇ ಸರಿ ಎಂಬ ಕೆಟ್ಟ ಧೈರ್ಯ ತಂದುಕೊಂಡು, `ನನ್ನ ಸುದ್ದಿಗೆ ಯಾರೂ ಬರಬೇಡಿ’ ಎಂದು ತನ್ನ ಸುತ್ತ ಒಂದು ವರ್ತುಲ ಬರೆದುಕೊಂಡು ಅದರೊಳಗೆ ಡಿಫೆನ್ಸಿವ್ ಆಗಿ ಉಳಿದರು. ಆದರೆ ತಾನು ಮಾಡಿದ್ದು ಸರಿಯಲ್ಲ ಎಂದು ಅಂತಃಸಾಕ್ಷಿ ಪೀಡಿಸತೊಡಗಿ ಅವರು ಒಳಗೊಳಗೇ ನರಳತೊಡಗಿದರು. ಅವರನ್ನು ಪ್ರೀತಿಸುವ ಎಲ್ಲರಲ್ಲೂ ಅವರ ಬಗ್ಗೆ ತಿರಸ್ಕಾರ ಮೂಡತೊಡಗಿತು. ಗೆಳೆಯರ ಕಠೋರ ಮೌನವು ಜರ್ಝರಿತ ಮಾಡತೊಡಗಿತು. ಮೂಲತಃ ದುರ್ಬಲ ಮತ್ತು ಅತಿಭಾವುಕ ಮನುಷ್ಯನಾದ ಅವರು ಅಳತೊಡಗಿದರು. ಸ್ವಹತ್ಯೆಯತ್ತ ಹೋಗತೊಡಗಿದರು. ಅವರು ಸಾವಿನ ಜತೆ ಹೋರಾಡುತ್ತಿರುವಾಗಲೂ, ಮರಳಿ ಬರಬಹುದು ಎಂದೇ ಆಸೆಯಿಟ್ಟಿದ್ದೆವು. ಆದರೆ ಹನುಮಂತಯ್ಯ ತನ್ನನ್ನು ಪ್ರೀತಿಸಿ ಬಂದ ಜೀವವನ್ನೂ ತನ್ನ ಕರುಳ ಕುಡಿಯನ್ನೂ ತಾನೇ ಮೇಲೆಬಿದ್ದು ಪ್ರೀತಿಸಿದ ಜೀವವನ್ನೂ ಏಕಕಾಲಕ್ಕೆ ಹೊಲಬುಗೆಡಿಸಿ ಹೊರಟುಬಿಟ್ಟರು.

ಯಾಕೆ ಇಷ್ಟು ಚಂದಾಗಿ ಪದ್ಯ ಬರೆಯುವ ಈ ಹುಡುಗ ಹೀಗೆ ಬಾಳಲು ಬಾರದಂತೆ ಭಗ್ನವಾಗಿ ಹೋದ? ಬರೆಹಕ್ಕಿಂತ ಬದುಕು ಮುಖ್ಯವೆಂದು ತಿಳಿಯದೇ ಹೋದ? ನಮ್ಮ ಹೊಸ ಲೇಖಕರ ಕಣ್ಮುಂದೆ ಸಾಮಾಜಿಕ ರಾಜಕೀಯವಾದ ಚಳುವಳಿಗಳು ಇಲ್ಲದಿರುವುದೇ ಹೀಗೆ ವೈಯಕ್ತಿಕ ನೋವನ್ನೇ ದೊಡ್ಡದು ಮಾಡಿಕೊಳ್ಳಲು ಕಾರಣವಾಯಿತೇ? ನಮ್ಮ ವೈಯಕ್ತಿಕ ಸಮಸ್ಯೆಗಿಂತ ದೊಡ್ಡ ಸಮಸ್ಯೆಗಳೂ ಒಟ್ಟು ಸಮುದಾಯಕ್ಕೆ ಸಂಬಂಧಿಸಿ ಇವೆ. ಅವಕ್ಕೆ ನಾನು ತೊಡಗಿಸಿಕೊಳ್ಳಬೇಕು ಎಂಬ ನೆದರಿದ್ದರೆ ಹೀಗೆ ಸಾವನ್ನು ಆಹ್ವಾನಿಸಿಕೊಳ್ಳಬೇಕು ಅನಿಸುತ್ತಿತ್ತೇ? ಅಥವಾ ಹನುಮಂತಯ್ಯನವರ ಒಳಗೇ ನಾಟಕಕಾರ ಸಂಸರಿಗಿದ್ದಂತೆ ನನ್ನನ್ನು ಯಾರೊ ಬೇಟೆಯಾಡುತ್ತಿದ್ದಾರೆ ಅವರಿಂದ ತಪ್ಪಿಸಿಕೊಳ್ಳಬೇಕು ಎಂಬ ಫೋಬಿಯಾ ಇದ್ದು ಅದುವೇ ಸ್ವಹತ್ಯೆಯತ್ತ ಕರೆದುಕೊಂಡು ಹೋಯಿತೇ? ಪಶ್ಚಿಮದ ಸಮಾಜದಲ್ಲಿ ಇದ್ದಂತೆ ನಾವು ಮಾಡಿದ ತಪ್ಪನ್ನು ಪ್ರಾಂಜಲವಾಗಿ ಒಪ್ಪಿಕೊಂಡು ಕ್ಷಮೆಕೇಳುವ ಗುಣವು ನಮ್ಮಲ್ಲಿ ಇಲ್ಲದಿರುವುದೇ ಹೀಗೆ ಕೆಟ್ಟಹಟಕ್ಕೆ ಕರೆದುಕೊಂಡು ಹೋಗುತ್ತದೆಯೇ? ಅಥವಾ ನಮಗೇ ಹನುಮಂತಯ್ಯನವರನ್ನು ಅರ್ಥಮಾಡಿಕೊಳ್ಳಲು ಆಗಲಿಲ್ಲವೇ?

ನಾನು ಒಮ್ಮೆ ತಿಪಟೂರಿಗೆ ಹೋದಾಗ, ಕಂಡ ಶೈಲಜರ ಬಾಡಿದ ಮುಖವೂ ಮತ್ತು ಅವರ ಮಗಳ ಕಂಗೆಟ್ಟ ಮುಖವೂ ನೆನಪಾಗುತ್ತಿದೆ. ಶೈಲಜ ನೇರನಡೆಯ ನೇರನುಡಿಯ ಹುಡುಗಿ. ಅವರ ಕಿಚ್ಚಿಲ್ಲದ ಬೇಗೆ ಎಂಬ ಆತ್ಮಕಥನ ಓದಿ ನಾನು ಅವರ ಧೀಮಂತಿಕೆಗೆ ಬೆರಗಾಗಿದ್ದೆ. ಅವರು “ನನಗೆ ನನ್ನ ಆ ಮೊದಲಿನ ಹನುಮಂತಯ್ಯ ಬೇಕು” ಎಂದು ಹಟ ಮಾಡಿದ ಕೇಳಿ, ಲಂಕೇಶರ `ಸಂಕ್ರಾಂತಿ’ ನಾಟಕ ನೆನಪಾಯಿತು. ಅದರಲ್ಲಿ ದಲಿತನಾದ ರುದ್ರನು ಬಸವಣ್ಣನ ಪ್ರಭಾವಕ್ಕೆ ಸಿಕ್ಕು ಶರಣನಾದ ಬಳಿಕ, ಅವನನ್ನು ಅವನ ದಲಿತತ್ವದ ಜತೆಗೇ ಕೇವಲ ಒಬ್ಬ ಗಂಡೆಂದು ಪರಿಭಾವಿಸಿ ಪ್ರೇಮಿಸಿದ್ದ ಉಷೆ ಹೇಳುವ ಮಾತು ನೆನಪಿಗೆ ಬಂತು. “ನನಗೆ ನನ್ನ ಮೊದಲಿನ ರುದ್ರಬೇಕು. ಈ ಶರಣ ರುದ್ರ ಬೇಡ”. ಆದರೆ ಶೈಲಜ ಅವರಿಗೆ ಮೊದಲಿನ ಪ್ರೇಮಿ ಹನುಮಂತಯ್ಯನೂ ಸಿಗಲಿಲ್ಲ. ಬದಲಾದ ಹನುಮಂತಯ್ಯನೂ ಉಳಿಯಲಿಲ್ಲ. ಅವರು ಕಿಚ್ಚಿಲ್ಲದ ಬೇಗೆಯಲ್ಲಿ ಬೇಯುವ ಸ್ಥಿತಿಯಲ್ಲೇ ಉಳಿದರು. `ಕಿಚ್ಚಿಲ್ಲದಬೇಗೆ’ -ಇದು ಅಕ್ಕಮಹಾದೇವಿಯಾಡಿದ ಮಾತು. ಶೈಲಜ ಅವರ ಹೋರಾಟಕ್ಕೆ ಸರಿಯಾದ ರೂಪಕ. ವ್ಯಂಗ್ಯವೆಂದರೆ ಸ್ವತಃ ಹನುಮಂತಯ್ಯ ಸಹ ಅಕ್ಕನಂತೆ ತೆರಣಿಯ ಹುಳು ತನ್ನ ನೂಲ ತಾನೇಸುತ್ತಿಸುತ್ತಿ ಸಾವತೆರನಂತೆ ಸಾವಿಗೆ ಸಂದು ಹೋಗಿದ್ದು. ಅವರು ಬದುಕಿದ್ದರೆ, ಹೀಗೆ ಮಾಡಬಹುದೇನೊ ಎಂದು ಝಂಕಿಸಿ ಕೇಳಬಹುದಿತ್ತು. ಆದರೆ ತನ್ನ ದುಡುಕಿಗೆ ಅಶಿಸ್ತಿಗೆ ವಿಹ್ವಲತೆಗೆ ತನ್ನನ್ನೇ ಬಲಿಗಂಬಕ್ಕೆ ಏರಿಸಿಕೊಂಡವರನ್ನು ಈಗ ಕಟಕಟೆಯಲ್ಲಿ ನಿಲ್ಲಿಸುವುದಾದರೂ ಹೇಗೆ? ಅದನ್ನು ನೈತಿಕವಾಗಿ  ಸರಿತಪ್ಪುಗಳ ಪರಿಭಾಷೆಯಲ್ಲಿ ನಿರ್ಧರಿಸುವುದು ಕಷ್ಟವಾಗಿದೆ. ಆದರೆ ಜೀವಬಿಡುವ ಮುನ್ನ ಅವರು ಪಟ್ಟಿರುವ ಸಂಕಟ ಮತ್ತು ಬದುಕಿರುವವರಿಗೆ ಕೊಟ್ಟಿರುವ ನೋವು ಎರಡೂ ಕಾಡಿಸುತ್ತಿವೆ. ಆಕ್ರೋಶ ತರಿಸುತ್ತಿವೆ. ಬಹಳ ದೊಡ್ಡ ಲೇಖಕನಾಗಿ ಬೆಳೆದು ನಾಡಿಗೆ ಕೀರ್ತಿ ತರುವ ಒಬ್ಬ ಕವಿ  ಇಲ್ಲವಾದನಲ್ಲ ಎಂದಲ್ಲ. ನಮಗೆಲ್ಲ ತನ್ನ ಬಾಳಿನಿಂದಲೂ ಚಿಂತನೆಯಿಂದಲೂ ಪ್ರೇರಿಸುವ ಶಕ್ತಿ ಮತ್ತು ಸಾಧ್ಯತೆಯಿದ್ದ ಒಬ್ಬ ಮನುಷ್ಯ ಸಂಯಮಗೆಟ್ಟು ಉಧ್ವಸ್ತನಾದನಲ್ಲಾ ಎಂದು.