ಹೀಗೆ ಹಲವು ಕಾಲ, ದೇಶ, ಸಂದರ್ಭಗಳಲ್ಲಿ ರೂಪಿತವಾದ ಕವಿತೆಗಳಲ್ಲಿ ಒಟ್ಟಿಗೆ ಆಕೃತಿ ಮತ್ತು ನಿರೂಪಣೆಯ ವಿಧಾನಗಳಲ್ಲಿ ಸಹಜವಾಗಿಯೇ ಅಂತರವಿರುತ್ತದೆ. ಕೆಲವು ಕವಿಗಳಿಗೆ ಹೇಳಬೇಕಾದ್ದನ್ನು ರೂಪಕಗಳಲ್ಲಿ, ಪ್ರತಿಮೆಗಳಲ್ಲಿ ಮುಚ್ಚಿಬರೆಯುವ ಅನಿವಾರ್ಯತೆಯಿರುತ್ತದೆ. ಏಕೆಂದರೆ ಅವುಗಳ ದಮನವು ಮುಂದುವರಿದಿರುತ್ತದೆ. ಅದರ ಜೊತೆಗೆ ನೇರವಾದ, ಭಾವನಾತ್ಮಕವಾದ ಭಾಷೆಯು ಭ್ರಷ್ಟವಾಗಿರುವುದರಿಂದಲೇ ನಿಗೂಢತೆಯು ಬೇಕಾಗುತ್ತದೆ. ಇಲ್ಲಿರುವ ಅಥವಾ ಹೀಗೆಯೇ ಬರೆದ ಜ್ವಿಗ್ನ್ಯೂ ಹರ್ಬರ್ಟ್, ವಾಸ್ಕೋ ಪೋಪ, ತೋಮಾಸ್ ಟ್ರಾನ್ಸ್ ಟೋಮರ್, ವಿಸ್ಲಾವ ಸಿಂಬೋಸ್ರ್ಕಾ ಮುಂತಾದವರು ಈ ಹಿನ್ನೆಲೆಯಲ್ಲಿ ಬರೆದವರು.
ಎನ್.‌ ಬಿ. ಚಂದ್ರಮೋಹನ್‌ ಅನುವಾದಿತ ಕವನ ಸಂಕಲನ ʼಪುಟ್ಟ ಪೆಟ್ಟಿಗೆ’ ಗೆ ಎಚ್‌.ಎಸ್.‌ ರಾಘವೇಂದ್ರರಾವ್ ಬರೆದ ಮುನ್ನುಡಿ‌ 

 

“…………………….. ಬೇರೇನಿದೆ ಕೊಡುಗೆ”

ಚಂದ್ರಮೋಹನ ನನ್ನ ಅತ್ಯಂತ ಹಳೆಯ, ಆತ್ಮೀಯ ಗೆಳೆಯ. ಐವತ್ತು ವರ್ಷಗಳನ್ನೂ ದಾಟಿ ಮುಂದುವರಿದಿರುವ ಈ ಗೆಳೆತನ ಅಂದಿನಿಂದ ಇಂದಿನವರೆಗೆ ಮುಗ್ಧತೆ, ಪ್ರಾಮಾಣಿಕತೆ, ಹಾಸ್ಯಪ್ರಜ್ಞೆ ಮತ್ತು ಕಾಳಜಿಗಳನ್ನು ಕಾಪಾಡಿಕೊಂಡು ಬಂದಿದೆ. ನಮ್ಮ ಹತೋಟಿಯನ್ನು ಮೀರಿದ ಸನ್ನಿವೇಶಗಳಿಂದ ಕೆಲ ತಿಂಗಳುಗಳು ಭಿನ್ನಮತ ತಳೆದಾಗಲೂ ನಮ್ಮಿಬ್ಬರ ಪ್ರೀತಿಯು ಮಾಸಿರಲಿಲ್ಲ. ಅದಕ್ಕೆ ಅವನ ತಾಳ್ಮೆ ಮತ್ತು ತತ್ವನಿಷ್ಠೆಗಳೇ ಕಾರಣವೆಂದು ನಾನು ಇಂದಿಗೂ ತಿಳಿದಿದ್ದೇನೆ. ಹುಡುಕಿಕೊಂಡು ಬಂದ ಸ್ಥಾನ-ಮಾನಗಳ ಜೊತೆಗೆ, ಕ್ಷಣ ಕಾಲ ಸರಸವಾಡಿದರೂ ಅವನಿಗೆ ಎಂದೂ ಮಹತ್ವಾಕಾಂಕ್ಷೆಯ ಗರ ಬಡಿದಿಲ್ಲ. ಬೇರೆಯವರನ್ನು ಏಣಿಗಳಾಗಿ ಬಳಸಿಕೊಳ್ಳುವ ಚಟವೂ ಇಲ್ಲ. ಹಾಗೆ ನೋಡಿದರೆ, ಪುಸ್ತಕ ಮತ್ತು ಸಿನಿಮಾಗಳನ್ನು ಸಂಗ್ರಹಿಸುವುದು ಬಿಟ್ಟರೆ ಬೇರೆ ಯಾವ ಚಟವೂ ಇಲ್ಲ. ಇದೆಲ್ಲದರ ಹಿಂದೆ ಆಕಾಶವಾಣಿಯ ಕಲಾವಿದರೂ ಆಗಿದ್ದ ಅವನ ತಂದೆ ಶ್ರೀ ಎನ್.ಡಿ. ಬಜ್ಜಣ್ಣನವರ ಪಾತ್ರವೂ ಇದೆಯೆಂದು ನಾನು ಬಲ್ಲೆ. ನಾನು ಮತ್ತು ಗೆಳೆಯ ಶ್ರೀನಿವಾಸರಾಜು ಅವರು ಇವನನ್ನು ಚ.ಮೋ. ಎಂದು ಕರೆದುಕೊಳ್ಳುತ್ತಿದ್ದೆವು. ಇಂದು ಮಿಂಚುತ್ತಿರುವ ನ.ಮೋ. ಅವರಿಗೂ ಈ ಚ.ಮೋ.ಗೂ ಬಾದರಾಯಣ ಸಂಬಂಧವೂ ಇಲ್ಲವೆನ್ನುವುದು ನಮ್ಮ ಗೆಳೆತನವನ್ನು ಇನ್ನಷ್ಟು ಬೆಳೆಸಿದೆ.

ಹಲವು ಸಂಗತಿಗಳಲ್ಲಿ ಶುದ್ಧವಾದ ಅಭಿರುಚಿ ಇವನ ನಿಜವಾದ ಸಂಪತ್ತು. ಒಂದು ಕಾಲದಲ್ಲಿ ಗರಿ ಮುದುರದ ಬಿಳಿ ಪೈಜಾಮ ಮತ್ತು ಸಿಲ್ಕು ಜುಬ್ಬಾ ಹಾಕಿಕೊಂಡು ಡಿಬೇಟುಗಳಿಗೆ ಬರುತ್ತಿದ್ದ ಇವನ ಬಗ್ಗೆ ಬರೆಯುತ್ತಾ ಹೋದರೆ, ಈ ಪುಸ್ತಕಕ್ಕಿಂತ ನನ್ನ ಮಾತುಗಳೇ ಜಾಸ್ತಿಯಾಗಿ ಬಿಡಬಹುದು.

ಇಂಥ ಚಂದ್ರಮೋಹನನ ಪುಸ್ತಕಕ್ಕೆ, ನನ್ನ ಪೀಳಿಗೆಯ ‘ಮುನ್ನುಡಿ ಸಾಮ್ರಾಟ’ನಾದ ನಾನಲ್ಲದೆ ಬೇರೆ ಯಾರು ಮುನ್ನುಡಿ ಬರೆಯಬೇಕು? ಒಂದು ರೀತಿಯಲ್ಲಿ ಇದು ಪಾಪದ ಪ್ರಾಯಶ್ಚಿತ್ತವೂ ಹೌದು. 1970ರಷ್ಟು ಹಿಂದೆ ಬೆಂಗಳೂರು ವಿಶ್ವವಿದ್ಯಾಲಯದ ಹಾಸ್ಟೆಲಿನ ಕೊಠಡಿಯಲ್ಲಿ, ನಮ್ಮಿಬ್ಬರ ಗೆಳೆಯನಾದ ಕೆ.ವಿ. ನಾರಾಯಣನ ಸಮಕ್ಷಮದಲ್ಲಿ, ಯಾವುದೋ ಮಾತಿನ ಭರಾಟೆಯಲ್ಲಿ, ಈ ಉದಯೋನ್ಮುಖ ಕವಿಯ ಸ್ವಂತ ಕವಿತೆಗಳನ್ನು ನಾನು ಪರಪರನೆ ಹರಿದು ಹಾಕಿದೆನೆಂಬ ಆಪಾದನೆಯನ್ನು ಈ ಪಾಪಿ ನನ್ನ ಮೇಲೆ ಮಾಡುತ್ತಲೇ ಬಂದಿದ್ದಾನೆ. ಆಮೇಲೆ ಇವನು ಮರಳಿ ಯತ್ನವನ್ನು ಮಾಡಲೇ ಇಲ್ಲ. ಇರಲಿ, ‘ಹರಿದ ಪಾಪ ಬರೆದು ಪರಿಹಾರ’ ಎಂದು ಈಗ ಮುನ್ನುಡಿಯನ್ನು ಬರೆಯುತ್ತಿದ್ದೇನೆ. ‘ಸೇಡಿಗೆ ಪ್ರತಿ ಸೇಡು’ ಎಂದು ಇವನು ಇದನ್ನು ಹರಿದುಹಾಕಿ ‘ಬೇ-ಮುನ್ನುಡಿ’ಯಾದ ಪುಸ್ತಕವನ್ನು ಪ್ರಕಟಿಸಿದರೆ ನಾನೇನು ಮಾಡಲಿ? ತಿಳಿಯದು.

(ಎನ್.‌ ಬಿ. ಚಂದ್ರಮೋಹನ್‌)

1965 ರಿಂದ 1975ರವರೆಗೆ ಕನ್ನಡ ಸಾಹಿತ್ಯವನ್ನು ಕಲಿತವರು ಕೆಲವು ವಿಶಿಷ್ಟವಾದ, ಪರಸ್ಪರ ವಿರುದ್ಧವಾದ ವಿದ್ಯಮಾನಗಳಿಗೆ, ವಿಚಾರಗಳಿಗೆ, ಚಳವಳಿಗಳಿಗೆ ಹಾಗೂ ಸಾಹಿತ್ಯಗಳಿಗೆ ಒಡ್ಡಿಕೊಂಡವರು. ಪಾಶ್ಚಾತ್ಯ ಸಾಹಿತ್ಯವನ್ನು ಕುರಿತ ಆಕರ್ಷಣೆ-ವಿಕರ್ಷಣೆಗಳ ದ್ವಂದ್ವವೂ ಇವುಗಳಲ್ಲಿ ಒಂದು. ನವ್ಯಸಾಹಿತ್ಯದ ಬಗೆಗಿನ ಆಕರ್ಷಣೆಯನ್ನು ಉಳಿಸಿಕೊಂಡೂ ಕುವೆಂಪು, ಬೇಂದ್ರೆ, ಮಾಸ್ತಿ, ಕಾರಂತರನ್ನು ಎದೆಯೊಳಗೆ ಕಾಪಾಡಿಕೊಳ್ಳುವ ಅಗ್ನಿದಿವ್ಯವನ್ನು ನಾವೆಲ್ಲರೂ ಎದುರಿಸಿದವರೇ. ಕುವೆಂಪು ಕವಿಯೇ ಅಲ್ಲ ಎನ್ನುವ ‘ರಭಸಮತಿಗಳ’ ಅಬ್ಬರದ ನಡುವೆಯೂ ನಮ್ಮ ‘ಎದೆಯ ದನಿ’ಯನ್ನು ನಿರಾಕರಿಸದೆ ಇರುವುದು ದೊಡ್ಡ ಸವಾಲಾಗಿತ್ತು. ಚಂದ್ರಮೋಹನ ಆ ವಿವೇಕವನ್ನು ಅಂದಿಗೂ ಇಂದಿಗೂ ಉಳಿಸಿಕೊಂಡಿದ್ದಾನೆ. ಹಾಗೆಯೇ ಅವನಿಗೆ ಪಾಶ್ಚಾತ್ಯ ಸಾಹಿತ್ಯವೆಂದರೆ ಕೇವಲ ಇಂಗ್ಲಿಷ್/ ಅಮೆರಿಕನ್ ಸಾಹಿತ್ಯವಾಗಿರಲಿಲ್ಲ. ಯೂರೋಪಿಯನ್ ಕವಿತೆಗೆ ಅದರ ಎಲ್ಲ ವೈವಿಧ್ಯದೊಂದಿಗೆ ಒಡ್ಡಿಕೊಂಡವನು, ಓದಿಕೊಂಡವನು ಅವನು. ಕನ್ನಡ ಎಂ.ಎ. ಓದಿದವರನ್ನು, ಅದೂ ಸೆಂಟ್ರಲ್ ಕಾಲೇಜಿನ ಕಾನ್ವೆಂಟ್ ಇಂಗ್ಲಿಷ್‍ ನ ಹೆದರಿಕೆ, ಬೆದರಿಕೆಗಳ ನಡುವೆ ಇದ್ದವರನ್ನು ಇಂಗ್ಲಿಷ್ ಕಾಡುತ್ತಿತ್ತು. ದೇವನೂರ ಮಹಾದೇವ ಹೇಳಿದಂತೆ ‘ವಾರಾಂಗನೆ’ಯಾಗಿ ಅಲ್ಲ, ‘ಪ್ರತಿದಿನಾಂಗನೆ’ಯಾಗಿ.

ನಾರಾಯಣ, ಚ.ಮೋ., ಚಿಂತಾಮಣಿ ಸತ್ಯ, ಕಿ.ರಂ., ನಾನು ಎಲ್ಲರೂ ಆ ಭಾಷೆಗೆ ಬಹಿಷ್ಕಾರ ಹಾಕಲಿಲ್ಲ. ಅದರಿಂದ ಪಡೆದುಕೊಂಡೆವು. ಹಾಗೆ ನೋಡಿದರೆ, ಸುಮಾರು ನಲವತ್ತು ವರ್ಷಗಳಿಂದ ಚಂದ್ರಮೋಹನ ಮಾಡುತ್ತಲೇ ಬಂದಿರುವ ಅನುವಾದಗಳು ಕೂಡ ಇಂಗ್ಲಿಷ್ ಕವಿತೆಯನ್ನು ಒಳಗುಮಾಡಿಕೊಳ್ಳುವ ಪ್ರಯತ್ನದ ಭಾಗಗಳೇ. ಕನ್ನಡಕ್ಕೆ ತರುವುದೆಂದರೆ ಎದೆಯೊಳಗೆ ತೆಗೆದುಕೊಳ್ಳುವುದು. ಹೊಸ ನುಡಿಗಟ್ಟುಗಳಲ್ಲಿ ಅದನ್ನು ಹೇಳುವ ಮೂಲಕವೇ ಭಾಷೆಯನ್ನು ಬೆಳೆಸುವುದು. ಈ ‘ಪುಟ್ಟ ಪೆಟ್ಟಿಗೆ’ಯಲ್ಲಿರುವ ಎಲ್ಲ ಕವಿತೆಗಳನ್ನು ಒಟ್ಟಿಗೆ ಕಟ್ಟುವ ಸೂತ್ರವೆಂದರೆ, ಮನುಷ್ಯನ ಅಂತರಂಗ, ಬಹಿರಂಗ, ಅವೆರಡರ ಸಂಬಂಧ, ಕಪ್ಪು-ಬಿಳಿ ಅಲ್ಲದ ಸಂಕೀರ್ಣ ಸತ್ಯಗಳು ಹಾಗೂ ಸರಳ ನಿರೂಪಣೆಗೆ ಒಗ್ಗದ ಒಗಟುಗಳ ಬಗೆಗಿನ ಕುತೂಹಲಗಳು. ಆದ್ದರಿಂದಲೇ ಇಲ್ಲಿನ ಬಹುಪಾಲು ಕವಿತೆಗಳು ಒಂದು ಓದಿಗೆ ಒಲಿಯುವುದಿಲ್ಲ. ಅವು ಕನ್ನಡ ಮನಸ್ಸಿನ ಅನುಭವದ ಸೀಮೆಗಳು ಮತ್ತು ಭಾಷಿಕ ಸಾಧ್ಯತೆಗಳನ್ನು ಹಿಗ್ಗಿಸಲು ಬಯಸುತ್ತವೆ.

ಒಂದು ಕಡೆ ಈ ಕವಿತೆಗಳು ಇಂದು ಮೆರೆಯುತ್ತಿರುವ ಮೂಲಭೂತವಾದವು ನಮ್ಮನ್ನು ಕರೆದೊಯ್ಯಬಹುದಾದ ನರಕಗಳ ಕಡೆ ಕೈಮಾಡಿ ತೋರಿಸುತ್ತವೆ. ಇನ್ನೊಂದು ಕಡೆ, ‘ಸಾಮಾಜಿಕ ಪ್ರಸ್ತುತತೆ’ಯು ಕವಿತೆಯಾಗಿ ಒಡಮೂಡುವ ಅನನ್ಯ ಮಾದರಿಗಳನ್ನೂ ಸೂಚಿಸುತ್ತವೆ. ಲೋಕವು ನಾಶಮಾಡುವ ‘ಒಳಬಗೆ’ಗಳನ್ನು ಕುರಿತ ಕಾಳಜಿ ಈ ಕವಿತೆಗಳ ಮುಖ್ಯ ನೆಲೆಗಳಲ್ಲಿ ಒಂದು.

ಇಲ್ಲಿ ಅನುವಾದಕ್ಕೆಂದು ಆರಿಸಿಕೊಂಡಿರುವ ಸುಮಾರು ನಲವತ್ತು ಕವಿತೆಗಳಲ್ಲಿ ಮೂರು ಬಗೆಗಳನ್ನು ಗುರುತಿಸಬಹುದು. ಮೊದಲನೆಯದು ಎರಡನೆಯ ಮಹಾಯುದ್ಧ, ಬೇರೆ ಬೇರೆ ಹೆಸರುಗಳಲ್ಲಿ ಮೆರೆದ ಸರ್ವಾಧಿಕಾರ, ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ಮುಂತಾದ ಲಕ್ಷಣಗಳನ್ನು ಹೊಂದಿರುವ ಯೂರೋಪಿನ ಅನುಭವಗಳೇ ಕೇಂದ್ರವಾದ ಕವಿತೆಗಳು.

ಕವಿಗಳು ಪೋಲೆಂಡ್, ಸರ್ಬಿಯಾ ಮತ್ತು ಸೋವಿಯತ್ ಒಕ್ಕೂಟದ ಹಲವು ರಾಜ್ಯಗಳಿಂದ ಬಂದಿರುವುದು ಆಕಸ್ಮಿಕವೆಂದು ನಾನು ತಿಳಿಯುವುದಿಲ್ಲ. ಇಲ್ಲಿರುವುದು ಕನ್ನಡ ಅನುವಾದಕರ ಸಮಸ್ಯೆಯಲ್ಲ. ಬದಲಾಗಿ ಅವರಿಗೆ ಇಂಗ್ಲಿಷ್ ಅನುವಾದದಲ್ಲಿ ಲಭ್ಯವಾಗಿರುವ ಕವಿತೆಗಳನ್ನು ಯಾರು, ಯಾರಿಂದ, ಯಾಕೆ ಅನುವಾದ ಮಾಡಿಸಿರುತ್ತಾರೆ ಎಂಬ ‘ಸಾಂಸ್ಕೃತಿಕ ರಾಜಕೀಯ’ದ ಪ್ರಶ್ನೆ. ಇಲ್ಲಿನ ಅನುಭವಗಳ ಸಾಚಾತನ ಮತ್ತು ಕವಿಗಳ ಪ್ರಾಮಾಣಿಕತೆಯನ್ನು ನಾನು ಪ್ರಶ್ನಿಸುತ್ತಿಲ್ಲ. ಜ್ವಿಗ್ನ್ಯೂ ಹರ್ಬರ್ಟ್, ಕ್ವಾಸಿಮೋಡೋ, ವಾಸ್ಕೋ ಪೋಪ ಮುಂತಾದವರು ನಿಜಕ್ಕೂ ದೊಡ್ಡ ಕವಿಗಳು. ಆದರೆ, ಇವರ ಕವಿತೆಗಳನ್ನು ಓದುವಾಗ ಪಾಶ್ಚಾತ್ಯ ದೇಶಗಳಲ್ಲಿಯೂ ನಡೆಯುವ ಇಂತಹುದೇ ದಮನವು ಹಿನ್ನೆಲೆಗೆ ಸರಿಯುತ್ತದೆ. ಚಾರ್ಲಿ ಚಾಪ್ಲಿನ್ ದೇಶಾಂತರ ಹೋಗಬೇಕಾಗುವುದು ಮರೆಯಬಾರದ ಸಂಗತಿ.

ಇಲ್ಲಿರುವ ಎರಡನೆಯ ಗುಂಪಿನ ಕವಿಗಳು ಇಂತಹುದೇ ಬವಣೆಯನ್ನು ಬೇರೆ ಕಾಲ ದೇಶಗಳಲ್ಲಿ ಅನುಭವಿಸಿದ ಆಫ್ರಿಕಾ, ಪ್ಯಾಲೆಸ್ಟೈನ್, ಮಧ್ಯಪ್ರಾಚ್ಯ, ಮುಂತಾದ ದೇಶಗಳಿಗೆ ಸೇರಿದವರು. ಇಲ್ಲಿಯೂ ಅಷ್ಟೆ. ಹಿಂಸೆ ಮತ್ತು ಯಾತನೆಗಳಿಗೆ ರಾಜಕೀಯ ಸಿದ್ಧಾಂತಗಳ ಮೇರೆಗಳಿಲ್ಲ. ಅಧಿಕಾರವು ಒಂದು ಬಗೆಯ ಜನರಲ್ಲಿ ಹಿಂಸಾರತಿಯನ್ನು ಮೂಡಿಸುತ್ತದೆ.

ಕುವೆಂಪು ಕವಿಯೇ ಅಲ್ಲ ಎನ್ನುವ ‘ರಭಸಮತಿಗಳ’ ಅಬ್ಬರದ ನಡುವೆಯೂ ನಮ್ಮ ‘ಎದೆಯ ದನಿ’ಯನ್ನು ನಿರಾಕರಿಸದೆ ಇರುವುದು ದೊಡ್ಡ ಸವಾಲಾಗಿತ್ತು. ಚಂದ್ರಮೋಹನ ಆ ವಿವೇಕವನ್ನು ಅಂದಿಗೂ ಇಂದಿಗೂ ಉಳಿಸಿಕೊಂಡಿದ್ದಾನೆ. ಹಾಗೆಯೇ ಅವನಿಗೆ ಪಾಶ್ಚಾತ್ಯ ಸಾಹಿತ್ಯವೆಂದರೆ ಕೇವಲ ಇಂಗ್ಲಿಷ್/ ಅಮೆರಿಕನ್ ಸಾಹಿತ್ಯವಾಗಿರಲಿಲ್ಲ.

ಶತ್ರುವನ್ನು ಅ-ಮಾನವೀಕರಣ ಮಾಡಿದ ಮರುಕ್ಷಣವೇ ಅವನನ್ನು ಕುರಿತ ಭಾವನೆಗಳು ಬತ್ತಿಹೋಗುತ್ತವೆ. ಅಮಾನವೀಯವಾದ ಹಿಂಸೆಗೆ ಒಳಗಾದ ಅಂದಿನ ಇಸ್ರೇಲಿಗು ಇಂದಿನ ಪ್ಯಾಲೆಸ್ಟೀನಿಯರ ಬಗ್ಗೆ ಅನುಕಂಪವನ್ನು ತೋರಿಸುವುದಿಲ್ಲ. ನಾಗರಿಕ ಸಮಾಜಗಳ ಒಡಲಿನಲ್ಲಿಯೂ ನಮ್ಮದೇ ‘ಪ್ರಜಾಪ್ರಭುತ್ವ’ದಲ್ಲಿಯೂ ಈ ಸಂವೇದನರಾಹಿತ್ಯವನ್ನು ಈಗಲೂ ನೋಡುತ್ತಿದ್ದೇವೆ. ಆದ್ದರಿಂದಲೇ ಚಂದ್ರಮೋಹನ ಅವರು ಆರಿಸಿಕೊಳ್ಳುವ ಮೂರನೆಯ ಗುಂಪಿನ ಕವಿಗಳು ನಮ್ಮ ನೆರೆನಾಡುಗಳಲ್ಲಿಂದ ಬಂದವರು. ಪಾಕಿಸ್ತಾನ, ಶ್ರೀಲಂಕಾ ಮುಂತಾದ ದೇಶಗಳ ಜನರು ಯಾತನೆಗೆ ಬಾಹಿರರಲ್ಲ. ಹೀಗೆ ಈ ಕವಿತೆಗಳನ್ನು ಒಟ್ಟುಗೂಡಿಸುವ ತಂತುವೆಂದರೆ ನೋವು, ಹಿಂಸೆ ಮತ್ತು ಒಂಟಿತನಗಳು. ವ್ಯಕ್ತಿಯ ನೆಲೆಯಿಂದ ಹೊರಟರೂ ಸಮುದಾಯಗಳನ್ನೇ ಆವರಿಸಿಕೊಂಡುಬಿಡುವ ಇಂಥ ಅನುಭವಗಳು ಈ ಕವಿತೆಗಳಲ್ಲಿ ಇಡಿಕಿರಿದಿವೆ. ಇಲ್ಲಿ ಹೋರಾಟದ ಏರುದನಿಗಳಿಗಿಂತ, ಹತಾಶೆಯ ಕ್ಷೀಣದನಿಗಳೇ ಜಾಸ್ತಿ. ಪ್ರಾಸಂಗಿಕವಾಗಿ ಅನುವಾದಿಸಿರುವ ಶೆಲ್ಲಿ, ಸ್ಪೆನ್ಸರ್ ಮುಂತಾದವರ ಕೆಲವೇ ಕೆಲವು ಕವಿತೆಗಳನ್ನು ಬಿಟ್ಟರೆ ಉಳಿದವು ಈ ಬಗೆಯವು. ಕೆಲವು ಬರಿ ಮನುಷ್ಯರ ನೋವನ್ನು ಹೇಳಲು ಪ್ರಾಣಿಗಳ ಮೂಕಯಾತನೆಗಳನ್ನು ಬಳಸಿಕೊಂಡಿರುವುದೂ ಇದೆ.

ಬೋರಿಸ್ ಸ್ಲಟ್ಸ್ಕಿ ಎಂಬ ರಷ್ಯನ್ ಕವಿಯ ‘ಸಾಗರದಲ್ಲಿ ಕುದುರೆಗಳು’ ಎಂಬ ಮನಸ್ಸು ಕರಗಿಸುವ ಕವನವನ್ನು ಗಮನಿಸಿ. ‘ಗ್ಲೋರಿಯಾ’ ಎಂಬ ಹಡಗನ್ನು ಶತ್ರುಗಳು ಸ್ಪೋಟಿಸಿದಾಗ ಅದರಲ್ಲಿದ್ದ ಒಂದು ಸಾವಿರ ಕುದುರೆಗಳು ಈಜು ಬಲ್ಲೆವೆಂದು ಆತ್ಮವಿಶ್ವಾಸದಿಂದ ಈಜತೊಡಗಿ, ಸಾಗರದ ವಿಸ್ತಾರವನ್ನು ಅರಿತ ಮೇಲೆ ಮುಳುಗಿಹೋಗುತ್ತವೆ. ಈ ಕುದುರೆಗಳು ಕೋಟಿಕೋಟಿ ಮನುಷ್ಯರನ್ನೂ ಪ್ರತಿನಿಧಿಸುತ್ತವೆ. ಈ ಸಂಕಲನದ ಹಲವು ಕವಿತೆಗಳು ನಮ್ಮ ಮನಸ್ಸನ್ನು ಅತ್ಯಂತ ಆಳದಲ್ಲಿ ಕಲಕುತ್ತವೆ.

ಹೀಗೆ ಹಲವು ಕಾಲ, ದೇಶ, ಸಂದರ್ಭಗಳಲ್ಲಿ ರೂಪಿತವಾದ ಕವಿತೆಗಳಲ್ಲಿ ಒಟ್ಟಿಗೆ ಆಕೃತಿ ಮತ್ತು ನಿರೂಪಣೆಯ ವಿಧಾನಗಳಲ್ಲಿ ಸಹಜವಾಗಿಯೇ ಅಂತರವಿರುತ್ತದೆ. ಕೆಲವು ಕವಿಗಳಿಗೆ ಹೇಳಬೇಕಾದ್ದನ್ನು ರೂಪಕಗಳಲ್ಲಿ, ಪ್ರತಿಮೆಗಳಲ್ಲಿ ಮುಚ್ಚಿಬರೆಯುವ ಅನಿವಾರ್ಯತೆಯಿರುತ್ತದೆ. ಏಕೆಂದರೆ ಅವುಗಳ ದಮನವು ಮುಂದುವರಿದಿರುತ್ತದೆ. ಅದರ ಜೊತೆಗೆ ನೇರವಾದ, ಭಾವನಾತ್ಮಕವಾದ ಭಾಷೆಯು ಭ್ರಷ್ಟವಾಗಿರುವುದರಿಂದಲೇ ನಿಗೂಢತೆಯು ಬೇಕಾಗುತ್ತದೆ. ಇಲ್ಲಿರುವ ಅಥವಾ ಹೀಗೆಯೇ ಬರೆದ ಜ್ವಿಗ್ನ್ಯೂ ಹರ್ಬರ್ಟ್, ವಾಸ್ಕೋ ಪೋಪ, ತೋಮಾಸ್ ಟ್ರಾನ್ಸ್ ಟೋಮರ್, ವಿಸ್ಲಾವ ಸಿಂಬೋಸ್ರ್ಕಾ ಮುಂತಾದವರು ಈ ಹಿನ್ನೆಲೆಯಲ್ಲಿ ಬರೆದವರು. ವಾಸ್ತವವನ್ನು ನೇರವಾಗಿ ಹೇಳುವುದು ಅವರಿಗೆ ಸಾಧ್ಯವಿರಲಿಲ್ಲ. ಹೋರಾಟದಲ್ಲಿ ತೊಡಗಿಕೊಂಡ ಅಥವಾ ಹೋರಾಟದ ಪರಿಣಾಮವಾಗಿಯೇ ದೇಶೋಚ್ಚಾಟಿತರಾಗಿರುವ ಕವಿಗಳ ಮಾತು ಬೇರೆ. ಅವರು ನೇರವಾಗಿ ಆದರೂ ಕಾವ್ಯಾತ್ಮಕವಾಗಿ ಬರೆಯಬಲ್ಲರು. ಅವರದು ನಮಗೆ ಪರಿಚಿತವಾದ, ಲೋಕಸಹಜವಾದ ಭಾಷೆ.

ಚಂದ್ರಮೋಹನ ಅವರು ಅನುವಾದಕರಾಗಿ ತೊಡಗಿಕೊಂಡಾಗ ಎರಡು ಆಯ್ಕೆಗಳನ್ನು ಮಾಡಿಕೊಳ್ಳುವುದು ಬಹಳ ಕಷ್ಟ. ಆದರೆ, ಅದು ಅನಿವಾರ್ಯ. ಅವರು ಈ ಕವಿತೆಗಳನ್ನು ಸುಮಾರು ನಲವತ್ತು ವರ್ಷಗಳ ಅವಧಿಯಲ್ಲಿ ಮಾಡಿರುವುದರಿಂದ ಬೆಳೆಯುತ್ತಿರುವ ಕನ್ನಡ ಕಾವ್ಯಭಾಷೆಯ ಹಲವು ಮಜಲುಗಳನ್ನು ಕಂಡಿದ್ದಾರೆ. ಅವರು ಸ್ವತಃ ಕವಿತೆಗಳನ್ನು ಪ್ರಕಟಿಸಿಲ್ಲವಾದ್ದರಿಂದ ಸ್ವಂತ ಕಾವ್ಯದ ಭಾಷೆಯನ್ನು ಅನ್ಯರ ಕವಿತೆಗಳ ಮೇಲೆ ಹೇರುವ ಪ್ರಕ್ರಿಯೆ ಇಲ್ಲಿ ನಡೆದಿಲ್ಲ. ಆದ್ದರಿಂದ ಕವಿತೆಗೆ ತಕ್ಕ ಕನ್ನಡವನ್ನು ಕಂಡುಕೊಳ್ಳುವ ಅವಕಾಶ ಎರಡೂ ಇಲ್ಲಿವೆ.

ಸಂಸ್ಕೃತದ ಪದಗಳು ಮತ್ತು ಪದಪುಂಜಗಳನ್ನು ಅಂತೆಯೇ ಕೊಂಚ ಸವಕಳಿಯಾಗಿರುವ ನಡುಗನ್ನಡಕ್ಕೆ ನಿಕಟವಾದ ರೂಪಗಳನ್ನು ಅವರು ಬಳಸಿದ್ದಾರೆ. ಅದರ ಫಲವಾಗಿ ಕೆಲವು ಕಡೆ ಮೂಲ ಕವಿತೆಯ ನುಡಿಗಟ್ಟುಗಳಿಗೂ ಅನುವಾದಕರು ಆರಿಸಿಕೊಂಡಿರುವ ನುಡಿಗಟ್ಟುಗಳಿಗೂ ಹೊಂದಿಕೆಯಾದರೆ, ಕೆಲವೊಮ್ಮೆ ಹಾಗೆ ಆಗುವುದಿಲ್ಲ. ಕನ್ನಡದ ನವೋದಯ ಮತ್ತು ನವ್ಯಕಾವ್ಯದ ಲಯಗಳೆರಡೂ ಈ ಕವಿತೆಗಳಿಗೆ ಹೊಂದಿಕೊಳ್ಳುವುದಿಲ್ಲ. ಬಂಡಾಯ/ದಲಿತ ಕಾವ್ಯದ ಲಯಗಳೂ ಇಲ್ಲಿ ಅನುಪಯುಕ್ತವೇ. ಏಕೆಂದರೆ ಚಂದ್ರಮೋಹನ ಅಂಥ ಕವಿತೆಗಳನ್ನು ಆರಿಸಿಕೊಂಡಿಲ್ಲ. ಆದ್ದರಿಂದಲೇ ಈ ಕವಿತೆಗಳನ್ನು ಓದಲು ವ್ಯವಧಾನ ಬೇಕು. ವಾಗ್ಮಿತೆ ಮತ್ತು ಶಬ್ದಸೌಂದರ್ಯಗಳಿಂದಲೇ ನಮ್ಮನ್ನು ಸೆಳೆದುಬಿಡುವ ಮಾಂತ್ರಿಕಶಕ್ತಿ ಈ ಕವಿತೆಗಳ ಮೂಲ ಸ್ವರೂಪದಲ್ಲಿಯೇ ಇಲ್ಲ.

ಅನುವಾದಕರ ಕಾವ್ಯಾಭಿರುಚಿ ಮತ್ತು ಸಂಯಮಗಳು ಈ ಸಂಕಲನದ ಮುಖ್ಯ ಗುಣಗಳು. ಇಲ್ಲಿರುವ ಯಾವುದೇ ಕವಿತೆಯನ್ನು ಕಾವ್ಯವೇ ಅಲ್ಲವೆಂದು ನಿರಾಕರಿಸಲು ಸಾಧ್ಯವಿಲ್ಲ. ಇತರ ಯಾವುದೇ ಮಾನದಂಡಗಳು ಕವಿತೆಯ ಆಯ್ಕೆಯನ್ನು ನಿರ್ಧರಿಸಿಲ್ಲ. ಇದು ಸಾವಿರಾರು ಕವಿತೆಗಳ ಓದು, ಗ್ರಹಿಸುವಿಕೆ ಮತ್ತು ತೌಲನಿಕ ಪರಿಶೀಲನೆಯಿಂದ ಮೂಡಿರುವ ಸಂಕಲನ. ಚಂದ್ರಮೋಹನ ಅವರಿಗೆ ಸಿನೆಮಾ, ಚಿತ್ರಕಲೆ, ಸಂಗೀತ ಮುಂತಾದ ಕಲೆಗಳಲ್ಲಿ ಇರುವ ಆಸಕ್ತಿಯು ನನಗೆ ಗೊತ್ತು. ‘ಲೋಕೋದ್ಧಾರ ಭಂಗಿ’ಗಳನ್ನು ಆವಾಹಿಸಿಕೊಳ್ಳುವುದರಲ್ಲಿ ಅವರಿಗೆ ಆಸಕ್ತಿಯಿಲ್ಲ. ಇವೆಲ್ಲವೂ ಇಲ್ಲಿನ ಕವಿತೆಗಳ ಆಯ್ಕೆಯನ್ನು ಕಲುಷಿತವಾಗಿಸಿಲ್ಲ. ಬಳಸುವ ಭಾಷೆಯು ಭಾವುಕವಾಗದೆ ಭಾವನಾತ್ಮಕವಾಗುವಂತೆ ನೋಡಿಕೊಳ್ಳುವುದು, ಅಂತೆಯೇ ಭಾಷಣವಾಗದೆ ಸಂವಾದವಾಗುವಂತೆ ನೋಡಿಕೊಳ್ಳುವುದು ಅವರಿಗೆ ಸಾಧ್ಯವಾಗಿದೆ.

(ಎಚ್‌.ಎಸ್.‌ ರಾಘವೇಂದ್ರರಾವ್)

ಕನ್ನಡ ಕವಿತೆಗೆ ಹಾಗೂ ಭಾಷೆಗೆ ಸಹಜವಾದ ಲಯಗಳನ್ನು ಎಲ್ಲ ಕವಿತೆಗಳಲ್ಲಿಯೂ ತರುವುದು ಅನುವಾದಕರಿಗೆ ಕೊಂಚ ಕಷ್ಟವಾಗಿದೆ. ಏಕೆಂದರೆ ಈ ಆಗಂತುಕ ಕವಿತೆಗಳಿಗೆ ಸಂವಾದಿಲಯಗಳನ್ನು ಹುಡುಕುವುದು ಅಥವಾ ರೂಪಿಸುವುದು ಕಡುಕಷ್ಟದ ಕೆಲಸ. ಅದೂ ಅಲ್ಲದೆ ಬಹುಮಟ್ಟಿಗೆ ಇವರಿಗೆ ಸಿಕ್ಕಿರುವುದೇ ಅನುವಾದಿತ ಕವಿತೆ. ರಷ್ಯನ್, ಪೋಲಿಶ್, ಸರ್ಬಿಯನ್, ಟರ್ಕಿಶ್ ಮುಂತಾದ ಭಾಷೆಗಳಲ್ಲಿ ಇವು ಹೇಗೆ ನುಡಿಯುವವೋ ಯಾರಿಗೆ ಗೊತ್ತು? ಆದ್ದರಿಂದ ಕವಿತೆಗಳ ಓದು ಆಶಯ ಮತ್ತು ಆಕೃತಿಗಳ ಸಾವಧಾನದ ಓದನ್ನು ಬಯಸುತ್ತವೆ. ಉದಾಹರಣೆಗೆ ಸಂಕಲನಕ್ಕೆ ಹೆಸರು ಕೊಟ್ಟಿರುವ ವಾಸ್ಕೋ ಪೋಪಾನ ‘ಪುಟ್ಟ ಪೆಟ್ಟಿಗೆ’ ಎಂಬ ಕವಿತಾಗುಚ್ಛವನ್ನೇ ತೆಗೆದುಕೊಳ್ಳಿ.

ಆ ಗೊಂಚಲಿನ ಎಲ್ಲ ಕವಿತೆಗಳನ್ನೂ ಚಂದ್ರಮೋಹನ ಅನುವಾದಿಸಿಲ್ಲ. ಆದರೆ ಬಿಡಿಬಿಡಿಯಾಗಿ ಮತ್ತು ಇಡಿಯಾಗಿ ಈ ಕವಿತೆಗಳನ್ನು ಎಷ್ಟು ಬಾರಿ ಓದಿದರೂ ಹೊಸಹೊಸದನ್ನು ಹೊಳೆಯಿಸಬಲ್ಲ ಸಾಮರ್ಥ್ಯ ಈ ಕವಿತೆಗೆ ಇದೆ. ಇವು ಸುಲಭವಾಗಿ ಗುಟ್ಟು ಬಿಟ್ಟುಕೊಡುವುದಿಲ್ಲ. ಬಿಟ್ಟುಕೊಟ್ಟ ಗುಟ್ಟುಗಳೂ ಸರಿಯಲ್ಲವೆನಿಸಿ ಹೊಸ ಅರ್ಥವಲಯಗಳು ಹುಟ್ಟಿಕೊಳ್ಳುತ್ತವೆ. ನಿಜವಾದ ಕವಿತೆಯ ಗುಣ ಅಪಾರದರ್ಶಕತೆಯೆಂದೇ ನಾನು ತಿಳಿದಿದ್ದೇನೆ. ಅನುವಾದಗಳಲ್ಲಿ ಈ ಗುಣವು ಹಾಳಾಗಿಲ್ಲವೆನ್ನುವುದು ಸಂತೋಷದ ಸಂಗತಿ. ಇಂಥ ಹಲವು ಕವಿತೆಗಳು ಇಲ್ಲಿವೆ. ಇತ್ತ ಪಕ್ಷಿಯೂ ಅಲ್ಲದ ಅತ್ತ ಪ್ರಾಣಿಯೂ ಅಲ್ಲದ ಕೋಳಿಯ ಹತ್ತು ಹಲವು ಅಸಂಗತ ಗುಣಗಳನ್ನು ಪಟ್ಟಿಮಾಡಿ, ಕೊನೆಯಲ್ಲಿ ಕೋಳಿಯನ್ನು ನೋಡಿದರೆ ತನಗೆ ಕೆಲವು ಕವಿಗಳು ನೆನಪಿಗೆ ಬರುವರೆಂದು ಸ್ಫೋಟಿಸುವ ಜ್ವಿಗ್ನ್ಯೂ ಹರ್ಬರ್ಟ್‍ ನ ಕವಿತೆಯೂ ಮನಸ್ಸಿನಲ್ಲಿ ಉಳಿಯುತ್ತದೆ. ಇಂಥ ಕವಿತೆಗಳಿಗೆ ಸಮಾನಾಂತರವಾಗಿ ಉರಿಯುವ ಕೆಂಡಗಳಂತೆ ಇರುವ, ಸಂವಹನದ ತೊಡಕುಗಳನ್ನು ಹೊಂದಿಲ್ಲದ, ನಜೀಮ್ ಹಿಕ್ಮತ್, ಅಲಿ ಕರೀಂ ಮುಂತಾದ ಕವಿಗಳೂ ಇಲ್ಲಿದ್ದಾರೆ. ಇಲ್ಲಿರುವ ಕವಿಗಳಲ್ಲಿ ಮುಕ್ಕಾಲುಪಾಲು ಹೆಸರುಗಳನ್ನು ಕನ್ನಡ ಓದುಗರು ಕೇಳಿಯೇ ಇಲ್ಲವೆನ್ನುವುದು ಚಂದ್ರಮೋಹನ ಅವರ ಓದಿನ ಅಗಲ ಮತ್ತು ಆಳಗಳಿಗೆ ಸಾಕ್ಷಿ.

ಬಿಡಿಕವಿತೆಗಳನ್ನು, ಸಾಲುಗಳನ್ನು ತೆಗೆದುಕೊಂಡು ಮೂಲದೊಂದಿಗೆ ಹೋಲಿಸುವ ನಿರರ್ಥಕವಾದ ‘ಅಕಡೆಮಿಕ್’ ಕೆಲಸಕ್ಕೆ ನಾನು ತೊಡಗುವುದಿಲ್ಲ. ಬದಲಾಗಿ ಈ ಕವಿತೆಗಳನ್ನು ಓದಿ ನಾನು ಪಡೆದ ತವಕ, ತಲ್ಲಣಗಳು ನಿಮಗೂ ಸಿಗಲೆಂದು ಹಾರೈಸುತ್ತೇನೆ. ಅಂತೆಯೇ ನಿಮ್ಮಲ್ಲಿ ಕೆಲವರಿಗಾದರು ಭಾರತೀಯ ಭಾಷೆಗಳ ಹಾಗೆಯೇ ನಮ್ಮ ನಾಡಿನಾಚೆಯ ಭಾಷೆಗಳ ನಿಮಗೆ ಇಷ್ಟವಾದ ಕವಿತೆಗಳನ್ನು ಕನ್ನಡಕ್ಕೆ ತರುವ ಆಸೆ ಹುಟ್ಟಲಿ ಎಂದು ಹಂಬಲಿಸುತ್ತೇನೆ. ನನಗೆ ಈ ಅವಕಾಶವನ್ನು ಕೊಟ್ಟ ನನ್ನ ಪ್ರೀತಿಯ ಗೆಳೆಯ, ಚಂದ್ರಮೋಹನನಿಗೆ ಮತ್ತು ನಾನೂ ಸೇರಿದಂತೆ ಅವನ ಬಂಧುಮಿತ್ರರಿಗೆ ಒಳಿತಾಗಲಿ.

******

ಪುಟ್ಟ ಪೆಟ್ಟಿಗೆಯ ಯಜಮಾನ

ಪುಟ್ಟ ಪೆಟ್ಟಿಗೆಯನ್ನು ತೆಗೆಯಬೇಡ
ಚೆಲ್ಲಿ ಹೋದೀತು ಒಂದೆರಡು ಅಮೃತದ ಬಿಂದು
ಎಂದೆಂದಿಗೂ ಅದನ್ನು ಮುಚ್ಚಿ ಬಿಡಬೇಡ
ಮುರಿದು ಹೋದೀತದರ ಉದ್ದುದ್ದ ಕಾಲು
ಎತ್ತಿ ಕೆಳಗೆ ಎಸೆಯದಿರು
ಒಡೆದು ಹೋದೀತದರ ಸೂರ್ಯ ಭ್ರೂಣ
ಜೋರಿನಲಿ ತುಯ್ದಾಡದಿರು ಅದನು ಗಾಳಿಯೊಳಗೆ
ಮುರಿದು ಹೋದೀತದರ ಒಳಗಿರುವ ಧಾರಿಣಿಯ ಎಲುಬು
ಅಷ್ಟು ಬಲವಾಗಿ ಅದನು ಗಟ್ಟಿ ಹಿಡಿಯಬೇಡ
ಘಾಸಿಗೊಂಡೀತದರ ಒಳಗಿರುವ ತಾರೆಗಳ ಹೊಳಪು
ದೇವರಾಣೆಗೂ ಕೂಡ ನೀನು ಮಾಡುವುದರ ಬಗೆಗೆ ನಿನಗೆ
ಅರಿವಿದ್ದಲ್ಲಿ ನಿನ್ನ ಕಣ್ಣ ಪರಿಧಿಯಾಚೆಗೆ ಅದನು ದೂಡಬೇಡ

******

ಪುಟ್ಟ ಪೆಟ್ಟಿಗೆ

ಪುಟ್ಟ ಪೆಟ್ಟಿಗೆಗೆ ಬಂತು ಅದರ ಮೊದಲ ಹಲ್ಲು
ಬೆಳೆಯುತ್ತಿದೆ ಅದರ ಕಿರಿದಾದ ಉದ್ದ ಅಗಲಗಳು
ಬೆಳೆಯುತ್ತಿದೆ ಅದರ ಕಿರಿದು ವಿಸ್ತಾರ ಖಾಲಿತನ
ಮತ್ತೆ ಬೆಳೆಯುತ್ತಿದೆ ಅದರೊಳಗೆ ಇರುವುದೆಲ್ಲ
ಪುಟ್ಟ ಪೆಟ್ಟಿಗೆ ಬೆಳೆಯುತ್ತಲೇ ಇದೆ ಮತ್ತೆ ಮತ್ತೆ
ಈಗ ಅದರೊಳಗೊಂದು ಕಪಾಟು
ಅದರೊಳಗೇ ಇದು ಇದ್ದದ್ದು
ಪುಟ್ಟ ಪೆಟ್ಟಿಗೆ ಬೆಳೆಯುತ್ತಲೇ ಇದೆ ಮತ್ತೆ ಮತ್ತೆ
ಮತ್ತು ಈಗ ಅದರೊಳಗೊಂದು ಕೋಣೆ
ಮನೆ ಊರು ಭೂಮಿ
ಮತ್ತೆ ಜಗತ್ತು ಅದರಲ್ಲೆ ಹಿಂದೊಮ್ಮೆ ಅದು ಇದ್ದದ್ದು
ಪುಟ್ಟ ಪೆಟ್ಟಿಗೆಗೀಗ ಶೈಶವದ ಮರುಕಳಿಕೆ
ಭಾರಿ ಪ್ರಯಾಸದಿಂದ
ಪುಟ್ಟ ಪೆಟ್ಟಿಗೆ ಕಿರಿದಾಗಿದೆ ಮತ್ತೆ
ಈಗ ಪುಟ್ಟ ಪೆಟ್ಟಿಗೆಯೊಳಗೆ
ಒಂದು ಕೀಟಲೆ ಕೋಟಲೆ ಬದುಕು
ನೀನದನ್ನ ಸುಲಭದಲ್ಲಿ ನಿನ್ನ ಕಿಸೆಗೆ ಹಾಕಿಕೊಳ್ಳಬಹುದು
ಸುಲಭವಾಗಿ ನೀನದನ್ನ ಕದ್ದು ಬಿಡಬಹುದು
ಹಾಗೂ ಸುಲಭವಾಗಿಯೇ ಅದನ್ನ ಕಳೆದುಕೊಳ್ಳಲೂಬಹುದು
ಹುಶಾರಿನಲ್ಲಿರಬೇಕು ಪುಟ್ಟ ಪೆಟ್ಟಿಗೆ ಬಗೆಗೆ

******