ಕಣ್ಣಿಗೆ ಕಾಣುವ ಪ್ರಪಂಚದ ವಿಸ್ತಾರದೊಂದಿಗೆ ಗುರುತಿಸಿಕೊಳ್ಳುತ್ತಾ ನನ್ನ ಪ್ರಪಂಚವೇ ದೊಡ್ಡದೆಂದುಕೊಳ್ಳುವ ಭ್ರಾಮಕ ಸಮೂಹದ ಮುಂದೆ ಮನೆ ಕುಟುಂಬ ಎನ್ನುವ ಪುಟ್ಟ ಜಗತ್ತಿನ ಅಗಾಧ ಆಳ ವಿಸ್ತಾರದೊಂದಿಗೆ ಮುಖಾಮುಖಿಯಾಗುತ್ತಾ ಅದನ್ನು ತಮ್ಮ ಬರಹದಲ್ಲಿ ತಂದವರು ವೈದೇಹಿಯವರು. ಅವರಿಗೆ ತಾವು ಎಂಥದ್ದೋ ಸಾಧನೆ ಮಾಡಿರುವೆ ಎನ್ನುವ ಭ್ರಮೆಯಿಲ್ಲ. ತನಗೆ ತಿಳಿಯದ್ದೂ ಇಲ್ಲಿದೆ ಎನ್ನುವ ಸರಳತೆ ಅವರದ್ದು. ಪುಟ್ಟ ಪುಟ್ಟ ಸಂಬಂಧದ ಎಳೆಗಳು ಒಂದಾಗುತ್ತಾ ದಾರವಾಗುವ, ಹಗ್ಗವಾಗುವ ಸೂಕ್ಷ್ಮ ಹಂತಗಳು ಅವರ ಕೈಯಲ್ಲಿ ಸಲೀಸಾಗಿ ಕತೆಗಳಾಗಿಬಿಡುತ್ತವೆ. ಅವರೇ ಹೇಳುವಂತೆ ದೊಡ್ಡ ಕುಟುಂಬಕ್ಕೆ ಸೊಸೆಯಾಗಿ ಬಂದ ವೈದೇಹಿಯವರಿಗೆ ಅಲ್ಲಿನ ನೈಜಪಾತ್ರಗಳು, ಅವುಗಳ ನೋವು ನಲಿವುಗಳು…. ಇಂತಹ ಅವರನ್ನು ಕಾಡಿದ ಎಳೆಗಳೇ ಅವರ ಕಥೆಗಳಾದವು.
ಆಶಾ ಜಗದೀಶ್ ಅಂಕಣ

 

ಬಹುಶಃ ಹೈಸ್ಕೂಲಿನಲ್ಲಿ ಎಂದು ಕಾಣುತ್ತದೆ. ನಾ ಅವರ ಅಡುಗೆ ಮನೆ ಹುಡುಗಿ ಕವಿತೆಯನ್ನು ಪಠ್ಯವಾಗಿ ಓದಿದ್ದು… ಆಡಿ ಓದಿಕೊಂಡಿರಬೇಕಾದ ಮುದ್ದು ಹುಡುಗಿ ಅಡುಗೆ ಮನೆಯೆಂಬ ಬಂದೀಖಾನೆಯ ಖೈದಿಯಾಗುಳಿದು ಅದರಿಂದ ತನ್ನನ್ನು ಹೊರತರುವ ಜಾದೂ ಒಂದೇನಾದರೂ ನಡೆಯಬಹುದೇನೋ ಎಂಬುದರ ಬಗ್ಗೆ ಕನಸುವ ರೀತಿ ನನ್ನನ್ನು ಬಹಳಾ ಕಾಡಿತ್ತು. ಪಾಪದ ಹುಡುಗಿಯನ್ನ ಅಡುಗೆ ಮನೆಯಲ್ಲಿ ಕೂಡಿಹಾಕುತ್ತಾರಾದರೂ ಯಾಕೋ… ಅವಳು ಅಡುಗೆಯೊಂದನ್ನು ಹೊರತು ಪಡಿಸಿ ಉಳಿದಿದ್ದೆಲ್ಲವನ್ನೂ ಏಕಾದರೂ ಬಿಡಬೇಕೋ ಎನ್ನುವ ಉತ್ತರವಿರದ ಪ್ರಶ್ನೆಗಳು ನನ್ನನ್ನಾಗ ಬಹಳ ಕಾಡಿದ್ದವು. ಅವಳ ಬಗ್ಗೆ ಮರುಗದ ದಿನವಿಲ್ಲ ಎನಿಸುವಷ್ಟು ಬಾರಿ ಹಳಹಳಿಸಿದ್ದಿದೆ. ಆಗ ಪುಸ್ತಕದಲ್ಲಿ ನಮೂದಿಸಿದ್ದ ಅವರ ವೈಯಕ್ತಿಕ ವಿವರಗಳ ಸಣ್ಣ ಟಿಪ್ಪಣಿಯಿಂದಾಗಿ ವೈದೇಹಿಯವರ ಪರಿಚಯವಾಗಿತ್ತಾದರೂ ಅವರ ಕ್ರೌಂಚ ಪಕ್ಷಿಗಳು ಕೇಂದ್ರಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದದ್ದು ಮತ್ತು ಅವರ ಗುಲಾಬಿ ಟಾಕೀಸು ಎನ್ನುವ ಕಥೆಯಾಧಾರಿತ ಚಲನ ಚಿತ್ರದ ಅಭಿನಯಕ್ಕೆ ಉಮಾಶ್ರೀಯವರು ರಾಷ್ಟ್ರಪ್ರಶಸ್ತಿ ಪಡೆದು ಮತ್ತೆ ಈ ಕಥೆ ರಾಷ್ಟ್ರಾದ್ಯಂತ ಚರ್ಚೆಗೆ ಬರುವಂತಾದಾಗ ಇನ್ನಷ್ಟು ಅವರನ್ನು ಓದುವುದು ಅರಿಯುವುದು ಸಾಧ್ಯವಾಗಿತ್ತು. ನಂತರ ಅವರ ಕವಿತೆಗಳು ಕಾಡಿದ್ದು ಮಾತ್ರ ಅನನ್ಯ.

“ಇರಬಹುದು ಈ ವಿಮಾನದೊಳಗೂ ಒಬ್ಬ
ಹಗಲು ವೇಷದ ಯಜಮಾನ
ಇರುವಂತೆ ಪ್ರತಿ ಪ್ರಾಣಿಗೂ ಕದಿಯುವ ಮತ್ತು
ಆಳುವ ಜಾಯಮಾನ
ಮತ್ತೆ ಬರಬಹುದು ಪುಷ್ಪಕದ ರೆಕ್ಕೆ ಬಡಿಯುತ್ತಾ
ಮಾಡನ್ನು ಸೀಳಿ
ಏಣಿ ಕೆಳಗಿಳಿಸಿ
ಸಾಂಬ್ರಾಣಿ ಸಿಪ್ಪೆ ಬಿಡಿಸುತ್ತಿರುವ ತನ್ನ
ಎತ್ತಿ ಒಯ್ದು ಸಾಮ್ರಾಜ್ಞಿ ಮಾಡಿ
ರಾಮ ರಾಮಾ! ಲಂಕೆಗೋ ಅಯೋಧ್ಯೆಗೋ?”
(ಅಡುಗೆ ಮನೆ ಹುಡುಗಿ)

ಇಲ್ಲಿ ಬಿಡುಗಡೆಯನ್ನು ಬಯಸುವ ಹುಡುಗಿಗೆ ಬೇಕಾದ ಬಿಡುಗಡೆ ಸಿಗಬೇಕಿರುವುದು ಇನ್ನಾರಿಂದಲೋ. ಹಾಗಾಗಿ ಅವಳಿಗದು ಲಂಕೆಗೋ ಅಯೋಧ್ಯೆಗೋ ಎನ್ನುವ ಅನುಮಾನ.. ಅವಳಿಗೆ ಬಂಧನವನ್ನು ಮೀರುವ ಶಕ್ತಿಯಿಲ್ಲ, ಆದರೆ ಪವಾಡ ಪುರುಷನಂತವನೊಬ್ಬ ತನಗಾಗೇ ಅವತರಿಸಿ ಬಂದು ಪ್ರತ್ಯಕ್ಷವಾಗಿ ತನ್ನನ್ನಿಲ್ಲಿಂದ ಬಿಡಿಸಿಕೊಂಡು ಹೋಗಬಹುದು ಎಂದು ಕಾಯುತ್ತಾಳೆ… ಅವಳ ಆಸೆ ನಿರೀಕ್ಷೆ ಕಾಯುವಿಕೆ ಎಲ್ಲವು ನಮ್ಮನ್ನು ಹೆಚ್ಚು ತಾಕುತ್ತವೆ.

“ಮೊನ್ನೆ ಅವನೆಂದದ್ದು ಕಿಟಕಿ ಎಂದು
ಅವಳು ತಿಳಕೊಂಡಂತೆ ಬಾಗಿಲು ಅಲ್ಲ!
ಗೋಡೆ ಅಂದರೆ ಆತ
ಬಯಲೆಂದುಕೊಂಡಳು
ಗೋಡೆ ಒಡೆದರೆ ಎಲ್ಲ ಬಯಲು ಎಂದೆ?”
(ಆಕೆ ಆತ ಭಾಷೆ)

ಗಂಡು ಹೆಣ್ಣು ಪರಸ್ಪರ ನೆಚ್ಚಿಕೊಳ್ಳುವ, ಹಚ್ಚಿಕೊಳ್ಳುವ, ಅರ್ಥೈಸಿಕೊಳ್ಳುವ ದಾರಿ ಯಾವಾಗಲೂ ಸಂಕೀರ್ಣವೇ. ಒಮ್ಮೊಮ್ಮೆ ಎಲ್ಲವೂ ಗೊತ್ತು ಎನಿಸುವ ವೇಳೆಯೇ ಏನೊಂದು ತಿಳಿಯದು ಎನಿಸಿಯೂ ಬಿಡುತ್ತದೆ. “ಆಕೆ ಆತ ಭಾಷೆ” ಎನ್ನುವ ಈ ಕವಿತೆ ಅದನ್ನು ಚಂದ ನಿರೂಪಿಸುತ್ತದೆ.

“ಚೀಲದೊಳಗಿನ ಲೋಕ ಮತ್ತು ಮನಸಿನ ಲೋಕ
ಒಂದೇ ಎಂದೀಗ ತೂಗಿ ನೋಡುವಿರೇನು?
ಬೆಪ್ಪು ಕಾಪುರುಷರೇ
ವ್ಯರ್ಥ ಕೈ ನೋವೇಕೆ?
ತೂಗಲಾರಿರಿ ತಪ್ಪು ಸಮೀಕರಣವನು
ಮನಸಿನೊಳಗಡೆ ಎಂದೂ
ಇಣುಕಲಾರಿರಿ ನೀವು….”
(ನೋಡಬಾರದು ಚೀಲದೊಳಗನು)

ವ್ಯಾನಿಟಿ ಬ್ಯಾಗು ಎನ್ನುವ ಅಪ್ಪಟ ಹೆಣ್ಣು ರೂಪಕವನ್ನಿಟ್ಟುಕೊಂಡ “ನೋಡಬಾರದು ಚೀಲದೊಳಗನು..” ಎನ್ನುವ ಈ ಕವಿತೆ ಬಹಳ ಸೊಗಸಾಗಿದೆ.

“ಇತ್ತು ಸಾರಿನ ಪಾತ್ರೆ ಮೂಲೆಯಲ್ಲಿ
ನಂಗದೆಯೂ ನಂಗದಂತಿದ್ದ
ಬೂದಿ ಮುಚ್ಚಿದ ಕೆಂಡದೊಲೆಯ ಮೇಲೆ
ಕಾಯುತ್ತಿದ್ದಂತೆ. ಕಾದರೇನು?
ನಂಗದೆಯೂ ನಂಗದಂತಿದ್ದ ಕೆಂಡದೊಲೆಯ ಮೇಲೆ
ಕುದಿಕುದಿದು ಬತ್ತಿ
ರಾತ್ರಿಯಾದರೂ ಹಳಸದೆ!
ಕ್ಷಮಿಸಿ, ಗೊತ್ತಿಲ್ಲ ಕಾವ್ಯ ನನಗೆ”
(ತಿಳಿದವರೇ ಹೇಳಿ)

ಕಾವ್ಯವೆಂದರೆ ಏನು, ತಿಳಿ ಸಾರು ಗೊತ್ತು ನನಗೆ ಎನ್ನುತ್ತಲೇ ಚಂದದೊಂದು ಕವಿತೆ ಕಟ್ಟಿ ಬದುಕಿನ ಸಾರವನ್ನು ಸಾರಿನ ಮೂಲಕ ಸಾರುವ ಕವಯಿತ್ರಿಯ ಕವಿತೆ ಕಟ್ಟುವ ಕಲೆ ಕಲೆಯಾಗಿ ಈ ಕವಿತೆಯಲ್ಲಿ ಅರಳಿಕೊಂಡಿದೆ.

ಅವರ “ಅವಳ ಉಯಿಲು”, “ಗೆಳತಿಯ ಗುಟ್ಟು”.. ಕವಿತೆಗಳೂ ಸಹ ಅಷ್ಟೇ ಸುಂದರ ಕವಿತೆಗಳು. ಇಂತಹ ಚಂದದ ಕವಿತೆಗಳ ಒಡತಿ ವೈದೇಹಿ.

ಇಲ್ಲಿ ಬಿಡುಗಡೆಯನ್ನು ಬಯಸುವ ಹುಡುಗಿಗೆ ಬೇಕಾದ ಬಿಡುಗಡೆ ಸಿಗಬೇಕಿರುವುದು ಇನ್ನಾರಿಂದಲೋ. ಹಾಗಾಗಿ ಅವಳಿಗದು ಲಂಕೆಗೋ ಅಯೋಧ್ಯೆಗೋ ಎನ್ನುವ ಅನುಮಾನ.. ಅವಳಿಗೆ ಬಂಧನವನ್ನು ಮೀರುವ ಶಕ್ತಿಯಿಲ್ಲ, ಆದರೆ ಪವಾಡ ಪುರುಷನಂತವನೊಬ್ಬ ತನಗಾಗೇ ಅವತರಿಸಿ ಬಂದು ಪ್ರತ್ಯಕ್ಷವಾಗಿ ತನ್ನನ್ನಿಲ್ಲಿಂದ ಬಿಡಿಸಿಕೊಂಡು ಹೋಗಬಹುದು ಎಂದು ಕಾಯುತ್ತಾಳೆ.

ಕಣ್ಣಿಗೆ ಕಾಣುವ ಪ್ರಪಂಚದ ವಿಸ್ತಾರದೊಂದಿಗೆ ಗುರುತಿಸಿಕೊಳ್ಳುತ್ತಾ ನನ್ನ ಪ್ರಪಂಚವೇ ದೊಡ್ಡದೆಂದುಕೊಳ್ಳುವ ಭ್ರಾಮಕ ಸಮೂಹದ ಮುಂದೆ ಮನೆ ಕುಟುಂಬ ಎನ್ನುವ ಪುಟ್ಟ ಜಗತ್ತಿನ ಅಗಾಧ ಆಳ ವಿಸ್ತಾರದೊಂದಿಗೆ ಮುಖಾಮುಖಿಯಾಗುತ್ತಾ ಅದನ್ನು ತಮ್ಮ ಬರಹದಲ್ಲಿ ತಂದವರು ವೈದೇಹಿಯವರು. ಅವರಿಗೆ ತಾವು ಎಂಥದ್ದೋ ಸಾಧನೆ ಮಾಡಿರುವೆ ಎನ್ನುವ ಭ್ರಮೆಯಿಲ್ಲ. ತನಗೆ ತಿಳಿಯದ್ದೂ ಇಲ್ಲಿದೆ ಎನ್ನುವ ಸರಳತೆ ಅವರದ್ದು. ಪುಟ್ಟ ಪುಟ್ಟ ಸಂಬಂಧದ ಎಳೆಗಳು ಒಂದಾಗುತ್ತಾ ದಾರವಾಗುವ, ಹಗ್ಗವಾಗುವ ಸೂಕ್ಷ್ಮ ಹಂತಗಳು ಅವರ ಕೈಯಲ್ಲಿ ಸಲೀಸಾಗಿ ಕತೆಗಳಾಗಿಬಿಡುತ್ತವೆ.

“ಮೂಡಲ ಮನೆ” ಎನ್ನುವ ಅಪ್ಪಟ ಈ ನೆಲದ ಸೊಗಡಿನ ಧಾರಾವಾಹಿಯೊಂದು ಬರುತ್ತಿತ್ತು. “ಕತೆ ಕತೆ ಕಾರಣ, ಮುತ್ತಿನ ತೋರಣ ಸಂಭ್ರಮ ಕೋಲು ಕೋಲೆ… ರಂಗಾಗಿ ಪಡುವಣ, ಜಗವೆಲ್ಲ ರಂಗಸಾಲೆ…” ಎನ್ನುವ ಅದರ ಶೀರ್ಷಿಕೆ ಗೀತೆಯೇ ಒಂದು ಅದ್ಭುತವಾದ ಜಾನಪದ ಶೈಲಿಯ ಆಪ್ತಗೀತೆಯಾಗಿತ್ತು. ಯಾವ ಮೂಲೆಯಿಂದ ಈ ಹಾಡು ಕೇಳಿ ಬಂದರೂ ಕೂಡಲೇ ನಾವೆಲ್ಲ ಕೆಲಸ ಬೊಗಸೆ ಬಿಟ್ಟು ಟಿವಿ ಎದುರು ಬಂದು ಕೂತುಬಿಡುತ್ತಿದ್ದೆವು. ಇಷ್ಟೊಂದು ಚಂದದ ಗೀತೆಯನ್ನು ಬರೆದವರು ವೈದೇಹಿಯವರು ಎಂದು ತಿಳಿದಾಗ ಆದ ಸಂಭ್ರಮದ್ದೇ ಒಂದು ತೂಕ. ಅಲ್ಲಿಯವರೆಗೂ ನಾನದೊಂದು ಜಾನಪದ ಗೀತೆ ಎಂದೇ ತಿಳಿದಿದ್ದೆ…

ಅವರ “ತೊಟ್ಟಿಲ ತೂಗುವ ಹಾಡು” ಎನ್ನುವ ಕವಿತೆ ಹೈಸ್ಕೂಲಿನ ದ್ವಿತೀಯ ಭಾಷೆ ಕನ್ನಡ ಪುಸ್ತಕದ ಪಠ್ಯವಾಗಿತ್ತು. ಆ ಕವಿತೆ ನನಗೆ ಬಹಳ ಇಷ್ಟವಾಯ್ತು ಎಂದು ಹೇಳಲು ಮತ್ತು ಅದರ ಹಿನ್ನಲೆಯ ಬಗ್ಗೆ ಕೇಳಲು ಒಮ್ಮೆ ಅವರಿಗೆ ಕರೆ ಮಾಡಿದ್ದೆ. ಶಿಕ್ಷಕಿ ಎನ್ನುವುದನ್ನು ಬಿಟ್ಟರೆ ನಾ ಯಾರೆಂದೂ ಅವರಿಗೆ ಗೊತ್ತಿರಲಿಲ್ಲ. ಆದರೆ ಅಂದು ಅದೆಷ್ಟು ಸರಳವಾಗಿ ಮಾತನಾಡಿದ್ದರೆಂದರೆ ಇಂತಹಾ ಒಬ್ಬ ದೊಡ್ಡ ಲೇಖಕಿ ಇಷ್ಟೂ ಸರಳವಾಗಿರಬಹುದಾ ಎನ್ನುವ ವಿಚಾರವೇ ನನ್ನನ್ನು ವಿಸ್ಮಯಗೊಳಿಸಿತ್ತು. ನಂತರ ಅವರು, “ಈ ಕವಿತೆಯನ್ನು ನಾನು ನನ್ನ ಮಗಳಿಗೆ ಮಗುವಾದಾಗ ಬರೆದದ್ದು, ನಮಗೆ ಮಕ್ಕಳಾದಾಗ ನಾವು ಇಷ್ಟೊಂದು ಬಿಡುವಿನಲ್ಲಿ ಎಲ್ಲಿರುತ್ತೇವೆ… ನಮಗೆ ಇಂತಹ ಕವಿತೆ ಬರೆಯಲಿಕ್ಕೆ ಕಾರಣವೆಂತ ಇರುತ್ತದೆ ಹೇಳಿ… ಮಕ್ಕಳೇ ಹಾಗೆ ಅಲ್ಲವಾ, ಅವುಗಳ ಮುದ್ದು ಮುಖ, ಮೆತುವಿನ ಮೈ ನಮ್ಮಲ್ಲಿ ಎಂತಹಾ ಮಧುರಾನುಭೂತಿಯನ್ನು ಉಂಟುಮಾಡಿಬಿಡುತ್ತದೆ… ಬರೀ ಮಗು ಅಂತಲ್ಲ, ಯಾವುದೇ ಪ್ರಾಣಿ, ಪಶು, ಪಕ್ಷಿ, ಕೀಟವಾದರೂ ಸರಿ ಎಲ್ಲದರ ಮರಿಗಳೂ ಚಂದ, ಮರಿಗಳೇ ಚಂದ ಅಲ್ಲವಾ … ” ಅಂದಿದ್ದರು. ಇನ್ನೂ ಎಷ್ಟೊಂದು ದಾಖಲಿಸಲಾಗದ ಕಕ್ಕುಲಾತಿಯ ಮಾತುಗಳು ಹೃದಯದಲ್ಲಿ ದಾಖಲಾದದ್ದು… ಇಂದಿಗೂ ವೈದೇಹಿ ಎಂದಾಕ್ಷಣ ಮಮತೆಯ ಅಮ್ಮನೇ ನೆನಪಾಗುತ್ತಾರೆ.

“ಸಿಟ್ಟಿನ ಕಾವು ಪೂರ್ತಿ ತಣಿದಿಲ್ಲ, ಆದರೆ ಶೋಕವಿಲ್ಲ! ಹಾಗಿತ್ತು ಸ್ವರ. ಬೇಕೆಂದೇ ಬೇಕಾದರೆ ಸ್ವರ ಕಳಕಿದೆ, ಕಣ್ಣಂಚಿನಲ್ಲಿ ನೀರು ತುಳುಕಿದೆ ಅಂತ ಕಟ್ಟಿ ಹೇಳಬೇಕು ಅಷ್ಟೆ. ಏಕಾಂತದಲ್ಲಿ ಚಿಂತಿಸಿ ಪಕ್ವವಾದವರ ಧ್ವನಿಯೆಲ್ಲ ಹೀಗೆಯೇ ಇರುತ್ತದೆಯೇನೋ. ಸೀತೆ ಶಕುಂತಲೆಯರಂತೆ, ನೆನಪುಗಳು ಖಾಲಿ ನೆನಪುಗಳಾಗಿ, ಸಿಹಿ ಕಹಿ ಪದರ ಕಳಚಿ, ಅವರದೇ ಭಾಷೆಯಲ್ಲಿ ‘ ಭ್ರಮಾಮಯ ಕಾಯ’ ಕಳಚಿ.”

ಹೀಗೊಂದು ಮಾತು ವೈದೇಹಿಯವರ “ಕ್ರೌಂಚಪಕ್ಷಿಗಳು” ಕಥೆಯಲ್ಲಿ ಬರುತ್ತದೆ. ಕಥಾನಾಯಕಿ ಲಕ್ಷ್ಮಿಯ ಬಗೆಗಿನ ಮಾತುಗಳಿವು. ಇಲ್ಲಿನ ಎಲ್ಲ ಹೆಣ್ಣು ಪಾತ್ರಗಳೂ ತಮ್ಮ ದಿಟ್ಟ ನಿಲುವುಗಳಿಂದ, ಆತ್ಮ ಶೋಧನಾತ್ಮಕ ಮಾತುಗಳಿಂದ ಅಂತರಂಗಕ್ಕಿಳಿಯುತ್ತವೆ. ಗಂಡುಮನಸ್ಥಿತಿಯ ಬಗ್ಗೆ ಜಿಗುಪ್ಸೆ ಹುಟ್ಟುವ ಹೊತ್ತಿನಲ್ಲೇ ಈ ಕಥೆ ಓದಿ ಮುಗಿಸಿದಾಗ ಸಮಾಜ ಗಂಡನ್ನೂ ಸಹ ಒಂದು ಬಗೆಯಲ್ಲಿ ಶೋಶಿಸುತ್ತಿದೆಯಾ ಅನಿಸಿಬಿಡುತ್ತದೆ. ಒಂದು ವೇಳೆ ಸಮಾಜದ ಭಯವಿಲ್ಲದಿದ್ದರೆ ಆಶ್ನಾರ್ಣ ಭಟ್ಟರೂ ಸಹ ಹೆಂಡತಿಯನ್ನು ಮರಳಿ ಸ್ವೀಕರಿಸುತ್ತಿದ್ದರಾ… ಅಷ್ಟೆಲ್ಲ ತಪ್ಪಿತಸ್ಥ ಭಾವನೆಯಲ್ಲಿ ಬೇಯುವುದರ ಬದಲಿಗೆ ಹೆಂಡತಿಯನ್ನು ಸ್ವೀಕರಿಸಿಬಿಡುತ್ತಿದ್ದರಾ… ಅನಿಸುತ್ತದೆ. ಆದರೆ ಬದುಕಿನ ನಗ್ನ ಗೋಜಲುಗಳು ಸಿಕ್ಕು ಸಿಕ್ಕು…. ಅವರ ಅಮ್ಮಚ್ಚಿಯೆಂಬ ನೆನಪು, ಅಕ್ಕು, ಗುಲಾಬಿ ಟಾಕೀಸು… ಎಲ್ಲವೂ ನನ್ನನ್ನು ಆವರಿಸಿಕೊಂಡ ಕಥೆಗಳೇ.

“ನನ್ನನ್ನು ಕಥೆ, ಕವಿತೆಯೆಂದರೇನು ಎಂದು ಯಾರಾದರೂ ಕೇಳಿದರೆ ಹೇಳಲು ಬರುವುದಿಲ್ಲ, ಆದರೆ ಕಥೆ, ಕವಿತೆ ಬರೆಯುವುದಷ್ಟೇ ನನಗೆ ಗೊತ್ತು…” ಎಂದು ಸರಳವಾಗಿ ಹೇಳುವ ವೈದೇಹಿಯವರ ಎಲ್ಲ ಬರಹದಲ್ಲೂ ಆ ನಿಸ್ಪೃಹತೆ ಕಾಣಿಸುತ್ತದೆ. ಸ್ತ್ರೀವಾದವನ್ನು ಬೇರೆ ಬೇರೆ ನೆಲೆಗಳಲ್ಲಿ ಅಗ್ರೆಸೀವ್ ಆಗಿ ಅರ್ಥೈಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ, ‘ಇದು ಸ್ತ್ರೀವಾದ’ ಎನಿಸುವಂತೆ ಬರೆದ ವೈದೇಹಿಯವರ ಬರಹಗಳು ಹಲವು ಸಾಧ್ಯತೆಗಳನ್ನು ನಮ್ಮ ಮುಂದೆ ಇಟ್ಟಿವೆ.

ಅವರೇ ಹೇಳುವಂತೆ ದೊಡ್ಡ ಕುಟುಂಬಕ್ಕೆ ಸೊಸೆಯಾಗಿ ಬಂದ ವೈದೇಹಿಯವರಿಗೆ ಅಲ್ಲಿನ ನೈಜಪಾತ್ರಗಳು, ಅವುಗಳ ನೋವು ನಲಿವುಗಳು, ಕುಟುಂಬ ಮತ್ತು ಕೌಟುಂಬಿಕ ವ್ಯವಸ್ಥೆ, ಸಂಸಾರ, ಮೀರಲಾಗದ ಅಗೋಚರ ಚೌಕಟ್ಟುಗಳು… ಇಂತಹ ಅವರನ್ನು ಕಾಡಿದ ಎಳೆಗಳೇ ಅವರ ಕಥೆಗಳಾದವು. ಹಾಗಾಗಿಯೇ ಅವರ ಕತೆಗಳಿಗೆಲ್ಲವಕ್ಕೂ ಒಂದು ಕಡು ಆಪ್ತತೆ ತಾನಾಗೇ ಒದಗಿದೆ. ಹೊರಗಿನ ವೈಶಾಲ್ಯತೆಯ ಜೊತೆಗೆ ಒಳಗಿನ ಆಳಕ್ಕೆ ಇಳಿದವರು ವೈದೇಹಿ. ಅದು ಓದುಗರೊಳಗೂ ಇಳಿಯುವ ಸರಾಗತೆಯಿಂದ ಅನುಭವಕ್ಕೆ ದಕ್ಕುತ್ತದೆ…

ಇಂತಹ ವೈದೇಹಿಯವರಿಗೆ ಈಗ ಎಪ್ಪತ್ತೈದು ವರ್ಷ…ಅವರ ಈ ಸಂಭ್ರಮಗಳು ಮತ್ತಷ್ಟು ಹೆಚ್ಚಲಿ.. ಸದಾ ಅವರು ನಗುನಗುತ್ತಾ ನಮ್ಮೊಂದಿಗಿರಲಿ ಎನ್ನುವುದೊಂದೇ ಮನದ ಹಾರೈಕೆ…