ಮೂರು ದಶಕಗಳ ರಾಜಕೀಯ ಜೀವನದಲ್ಲಿ ದಾದಾಬಾಯಿ ನವರೋಜಿ ಏಳು ಬಾರಿ ಬ್ರಿಟನ್‌ಗೆ ಭೇಟಿ ನೀಡಿದರು, ಐದು ಬಾರಿ ಲಂಡನ್ ನ ಬೇರೆ ಬೇರೆ ವಿಳಾಸಗಳಲ್ಲಿ ಉಳಿದರು. ಭಾರತದಲ್ಲಿ ಬ್ರಿಟಿಷ್ ಆಡಳಿತದ ಬಗ್ಗೆ ಬ್ರಿಟನ್ನಿನ ಬೇರೆ ಬೇರೆ ಭಾಗಗಳಿಗೆ ತನ್ನ ಯೋಚನೆಗಳನ್ನು ತಿಳಿಸಲು ತಿರುಗಾಡಿದರು. 1906, ಎಂಭತ್ತರ ವಯಸ್ಸಿನಲ್ಲಿ ಮತ್ತೆ ಸಂಸತ್ತಿಗೆ ಮರಳುವ ಯತ್ನ ಮಾಡಿದರು. ಆದರೆ ಚುನಾವಣೆಯಲ್ಲಿ ಸೋತರು. ಲಂಡನ್‌ನ ಲಾಂಬೆತ್ ಪ್ರದೇಶದಲ್ಲಿ, ಒಂದು ಕಾಲಕ್ಕೆ ತಾವು ಸಮರ್ಥಿಸುತ್ತಿದ್ದ ಲಿಬರಲ್ ಪಕ್ಷದ ಅಭ್ಯರ್ಥಿಯ ಎದುರು ಅವರು ನಿಂತಿದ್ದರು.

ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ದಾದಾಬಾಯಿ ನವರೋಜಿ ಅವರ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಭಾರತದ ಜನಸಂಖ್ಯೆ ಸುಮಾರು ಇಪ್ಪತ್ತೈದು ಕೋಟಿ, ಇಡೀ ಬ್ರಿಟಿಷ್ ಚಕ್ರಾಧಿಪತ್ಯದ ಒಟ್ಟು ಜನಸಂಖ್ಯೆಯ ಮುಕ್ಕಾಲು ಭಾಗಕ್ಕಿಂತ ತುಸು ಹೆಚ್ಚು. ಹಾಗಂತ, ಲಂಡನ್ನಿನಲ್ಲಿರುವ ಬ್ರಿಟಿಷ್ ಸಂಸತ್ತಿನಲ್ಲಿ ಕನಿಷ್ಠ ಪ್ರಾತಿನಿಧ್ಯಕ್ಕಾದರೂ ಒಬ್ಬ ಭಾರತೀಯ ಜನಪ್ರತಿನಿಧಿಯೂ ಇರದ ನಿರಾಶಾದಾಯಕ ಕಾಲ ಸಂದರ್ಭ. ಆ ಸಮಯದಲ್ಲಿ ಅಂದರೆ ಕರಾರುವಾಕ್ಕಾಗಿ 1886ರಲ್ಲಿ ಭಾರತದ ರಾಜಕೀಯ ಭೂಮಿಕೆಯ ಜೊತೆಗೆ ವ್ಯಾಪಾರ ವ್ಯವಹಾರಗಳಲ್ಲಿಯೂ ಸಕ್ರಿಯನಾದ ಭಾರತೀಯ ಮುತ್ಸದ್ದಿ ಬ್ರಿಟನ್ನಿಗೆ ಮರಳಿ ಹೋಗಿದ್ದ. ಆತ ಲಂಡನ್ನಿಗೆ ವಾಪಸು ಬಂದಿದ್ದೆ ಭಾರತವನ್ನು ಆಳುತ್ತಿದ್ದ ಬ್ರಿಟನ್ನಿನ ರಾಜಕೀಯ ವ್ಯವಸ್ಥೆಯೊಳಗೆ ಔಪಚಾರಿಕವಾಗಿ ಪ್ರವೇಶಿಸಲು. ಆ ಕಾಲಕ್ಕೆ ಮಾತ್ರವಲ್ಲ, ಯಾವ ಕಾಲಕ್ಕೂ ಅಚ್ಚರಿ ಪಡುವಂತೆ ಹಲವು ಬಾರಿ ಸಂಸತ್ ಚುನಾವಣೆಗಳಲ್ಲಿ ಬ್ರಿಟನ್ನಿನ ಸ್ಥಳೀಯ ರಾಜಕೀಯ ಪಕ್ಷದಿಂದ ಸ್ಪರ್ಧಿಸಿದ. ಮತ್ತೆ ಆಂಗ್ಲ ಸಂಸ್ಕೃತಿ ಇತಿಹಾಸಗಳನ್ನು ಸ್ವಲ್ಪ ಬಲ್ಲ ಯಾರೂ ಊಹಿಸುವಂತೆ ನಿರಂತರವಾಗಿ ತಾರತಮ್ಯ ವರ್ಣಭೇದವನ್ನು ಇಂಗ್ಲೆಂಡ್ ನ ರಾಜಕೀಯ ಜೀವನದುದ್ದಕ್ಕೂ ಅನುಭವಿಸಿದ.

ಆತನ ಚುನಾವಣಾ ಪ್ರಚಾರಕ್ಕೆ ಫ್ಲೋರೆನ್ಸ್ ನೈಟಿಂಗೇಲ್ ಅಂತಹ ಪ್ರಸಿದ್ಧ ಶುಶ್ರೂಷಕಿ ಸುಧಾರಕಿ ಮತ್ತು ಮಹಿಳಾ ಮತದಾನದ ಪರ ಚಳವಳಿ ಮಾಡುತ್ತಿದ್ದ ಆಂಗ್ಲರ ಬೆಂಬಲದ ಇದ್ದೂ ಸೋಲನ್ನು ಕಂಡ. ೧೮೮೬ರಲ್ಲಿ ಲಿಬರಲ್ ಪಾರ್ಟಿಯ ಟಿಕೇಟಿನಲ್ಲಿ ಕನ್ಸರ್ವೇಟಿವ್ ಪಕ್ಷದ ಬಲಿಷ್ಠ ಕೋಟೆಯಾಗಿದ್ದ ಹೋಲ್ಬರ್ನ್ ಇಂದ ಸ್ಪರ್ಧಿಸಿದ, ಆಗಲೂ ಪರಾಭವ ಹೊಂದಿದ. ಸೋಲಿನ ನಂತರ ಆಗಿನ ಬ್ರಿಟಿಷ್ ಪ್ರಧಾನಿ ಲಾರ್ಡ್ ಸಾಲಿಸ್ಬರಿ, “ಆಂಗ್ಲ ಚುನಾವಣಾ ಕ್ಷೇತ್ರಗಳು ‘ಕಪ್ಪು ಮನುಷ್ಯ’ ನನ್ನು ಆರಿಸಲು ಇನ್ನೂ ಸಿದ್ಧವಿಲ್ಲ” ಎಂದು ಟಿಪ್ಪಣಿ ಮಾಡಿದ. ಆ ವಾಕ್ಯ ಭಾರತೀಯ ಮುತ್ಸದ್ದಿಗೆ ಬ್ರಿಟನ್ನಿನಲ್ಲಿ ಖ್ಯಾತಿಯನ್ನು ತಂದುಕೊಟ್ಟಿತು. ಸುದ್ದಿಗಳನ್ನು ನಾಟಕೀಯವಾಗಿ ಪ್ರಕಟಿಸುವ “ಪಂಚ್” ಪತ್ರಿಕೆ ತನ್ನ ಕಾರ್ಟೂನಿನಲ್ಲಿ, ಚುನಾವಣೆಯಲ್ಲಿ ಸೋತ ಭಾರತೀಯನನ್ನು ಶೇಕ್ಸ್‌ಪಿಯರ್‌ನ ಪ್ರಸಿದ್ಧ ನಾಟಕದ ಕಪ್ಪು ವರ್ಣದ ಒರಟು ನಾಯಕ ಒಥೆಲ್ಲೋ ಆಗಿಯೂ ಮತ್ತು ಆಂಗ್ಲ ಪ್ರಧಾನಿಯನ್ನು ಲಂಡನ್ ನ ಕೇಂದ್ರ ಸ್ಥಳ ವೆಸ್ಟ್‌ಮಿನಿಸ್ಟರ್‌ನ ಮುಖ್ಯ ಮ್ಯಾಜಿಸ್ಟ್ರೇಟ್ ನಂತೆಯೂ ಚಿತ್ರಿಸಿತು. ಆಂಗ್ಲ ಪ್ರಧಾನಿ, ಭಾರತೀಯನ ಚರ್ಮದ ಬಣ್ಣವನ್ನು ಉಲ್ಲೇಖಿಸಿ ಮಾಡಿದ ವ್ಯಂಗ್ಯ ಇತರ ಸುದ್ದಿ ಪತ್ರಿಕೆಗಳಲ್ಲಿಯೂ ವಿಭಿನ್ನ ಆಯಾಮಗಳಿಂದ ಪ್ರಚಾರ ಪಡೆಯಿತು. ಜನಾಂಗೀಯ ವಿರೋಧ ಮತ್ತು ಬ್ರಿಟಿಷ್ ವ್ಯಂಗ್ಯಗಳು ಸುದ್ದಿ ಮಾಧ್ಯಮಗಳನ್ನು ತುಂಬಿದವು. “ಬೆಂಕಿಯ ಅರ್ಚಕ” ಎಂದು ಒಂದು ಪತ್ರಿಕೆ ಹಾಸ್ಯ ಮಾಡಿತು. ಭಾರತೀಯನ ಪಾರ್ಸಿ ಹುಟ್ಟುನ್ನು, ಪಾರ್ಸಿಗಳ ಬೆಂಕಿ ಹಾಗು ನೀರನ್ನು ಆರಾಧಿಸುವ ಕ್ರಮವನ್ನು ಗುರಿಯಾಗಿಸಿದ ಅಪಹಾಸ್ಯ ಅದಾಗಿತ್ತು.

1892ರಲ್ಲಿ ಮಧ್ಯಮ ವರ್ಗದ ವರ್ಕಿಂಗ್ ಕ್ಲಾಸ್ ಜನರಿರುವ ಸೆಂಟ್ರಲ್ ಫಿನ್ಸ್‌ಬರಿ ಕ್ಷೇತ್ರದಿಂದ ಲಿಬರಲ್ ಪಕ್ಷದ ಅಭ್ಯರ್ಥಿಯಾಗಿ ಮತ್ತೆ ಸ್ಪರ್ಧಿಸಿದ. ಆ ಕಾಲದ ರಂಗಮಂದಿರಗಳಲ್ಲಿ ಜನಪ್ರಿಯವಾಗಿದ್ದ ನೃತ್ಯಸಂಗೀತವೊಂದನ್ನು ಬಳಸಿಕೊಂಡು ನಡೆದ ಪ್ರಚಾರ, ಸುದ್ದಿ ಮಾಧ್ಯಮಗಳಲ್ಲಿ ಅಲ್ಲಿಯ ತನಕದ ಪ್ರಖ್ಯಾತಿ ಕುಖ್ಯಾತಿ ಎಲ್ಲವೂ ಸೇರಿ, ಐದು ವೋಟುಗಳ ಮುನ್ನಡೆಯಲ್ಲಿ ಜಯವನ್ನು ನೀಡಿತು (ಇನ್ನೊಂದು ದಾಖಲೆಯ ಪ್ರಕಾರ 3 ವೋಟುಗಳಿಂದ). ‘ಭಾರತದ ಹಿರಿಯಜ್ಜ’ ಎಂದು ಕರೆಯಲ್ಪಡುವ ದಾದಾಭಾಯಿ ನವರೋಜಿ ಹೀಗೆ ಬ್ರಿಟಿಷ್ ಸಂಸತ್ತನ್ನು ಪ್ರವೇಶಿಸಿದ ಮೊಟ್ಟಮೊದಲ ದೇಶಿಯ ಮಾತ್ರವಲ್ಲದೆ ಇಡೀ ಏಷ್ಯಾದ ಮೊದಲ ಜನಪ್ರತಿನಿಧಿಯೂ ಆದರೂ. ಪಾರ್ಸಿ ಮೂಲದ ನವರೋಜಿ, ಬೈಬಲ್ ನ ಬದಲು ಝೋರಾಷ್ಟ್ರಿಯನ್ ಗ್ರಂಥದ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನವರೋಜಿಯವರಿಗಿಂತ ಮೊದಲು ‘ಡೇವಿಡ್ ಓಕ್ಟ್ರ್ಲೋನಿ ಡೈಸ್ ಸೋಂಬ್ರೆ’ ಎನ್ನುವ ಆಂಗ್ಲೋ ಇಂಡಿಯನ್, ಲಿಬರಲ್ ನ ತೀವ್ರವಾದಿ ಗುಂಪಿನ ಟಿಕೇಟಿನಲ್ಲಿ ಸಡ್ಬರಿ ಕ್ಷೇತ್ರದಿಂದ 1841ರಲ್ಲಿ ಆಯ್ಕೆ ಆಗಿದ್ದ. ಆದರೆ ಲಂಚ ಭ್ರಷ್ಟಾಚಾರದ ಆರೋಪದಲ್ಲಿ ಆ ವಿಜಯವನ್ನು ಅಸಿಂಧುಗೊಳಿಸಲಾಗಿತ್ತು.

ನವರೋಜಿಯವರ ಗೆಲುವು ಅವರ ಇಂಡಿಯನ್ ಕಾಂಗ್ರೆಸ್ ಸ್ನೇಹಿತರ ಸಂತಸಕ್ಕೂ ಕಾರಣ ಆಯಿತು. “ಒಂದು ವೇಳೆ ನಾವು ಇಪ್ಪತ್ತೈದು ಕೋಟಿ ಭಾರತೀಯರು ಒಬ್ಬನನ್ನು ಬ್ರಿಟಿಷ್ ಸಂಸತ್ತಿನ ಸ್ಥಾನವನ್ನು ಅಲಂಕರಿಸಲು ಕಳುಹಿಸುವುದಿದ್ದರೂ ದಾದಾಭಾಯಿ ನವರೋಜಿಯವರನ್ನೇ ಆರಿಸುತ್ತಿದ್ದೆವು” ಎಂದು ಬಾಲಗಂಗಾಧರ ತಿಲಕರು ನವರೋಜಿಯವರ ಚಾರಿತ್ರಿಕ ಗೆಲುವನ್ನು ಸಂಭ್ರಮಿಸಿ ನುಡಿದಿದ್ದರು.

ಬ್ರಿಟಿಷ್ ಸಂಸತ್ತಿನಲ್ಲಿ ನವರೋಜಿಯವರ ಸಮಯ ಭಾರತದ ಪರಿಸ್ಥಿತಿಯನ್ನು ಸುಧಾರಿಸಲು ಅನುಕೂಲವಾಗುವ ಕ್ರಮಗಳ ಕುರಿತು ಚರ್ಚಿಸುವುದರಲ್ಲಿ, ಸ್ವಾತಂತ್ಯ್ರ ಆಂದೋಲನದಲ್ಲಿ ಪರೋಕ್ಷವಾಗಿ ಭಾಗಿಯಾಗುವ ಮೂಲಕ ಕಳೆಯಿತು. ಜೊತೆಗೆ, ಮಹಿಳೆಯರಿಗೆ ಮತದಾನಕ ಹಕ್ಕು, ಸಂಸತ್ತಿನಲ್ಲಿ ಮಹಿಳೆಯರಿಗೆ ಪ್ರವೇಶದ ಅವಕಾಶ, ಐರಿಶ್ ಹೋಮ್ ರೂಲ್ ಚಳವಳಿ, ಸಂಸತ್ತಿನ ಮೇಲ್ಮನೆಯನ್ನು (ಹೌಸ್ ಆ ಲಾರ್ಡ್ಸ್) ತೆಗೆಯುವ ಹೆಜ್ಜೆಗಳಿಗೆ ಅವರು ಮತ ಹಾಕಿದರು. ಮಹಮದ್ ಅಲಿ ಜಿನ್ನಾ ನವರೋಜಿಯವರ ಜನಪ್ರತಿನಿಧಿತ್ವದ ಕೆಲಸಗಳಲ್ಲಿ ಸಹಾಯಕರಾಗಿ ಕೆಲಕಾಲ ಒದಗಿದರು. ಸಂಸದೀಯ ಸ್ಥಾನ ಬಹುಕಾಲ ಉಳಿಯದೆ, 1895ರ ಮುಂದಿನ ಚುನಾವಣೆಯಲ್ಲಿ ಸೋತು ಸೀಟನ್ನು ಕಳೆದುಕೊಂಡರು.

ಬ್ರಿಟನ್ನಿನ ಲೋಕಸಭಾ ಚುನಾವಣೆಗಳ ಸೋಲು ಗೆಲುವುಗಳಿಗಿಂತ ಬಹಳ ಮೊದಲು, 1825ರಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಭಾರತವನ್ನು ಆಳುತ್ತಿದ್ದಾಗ ಮುಂಬೈನಲ್ಲಿ ಜನಿಸಿದವರು ದಾದಾಭಾಯಿ ನವರೋಜಿ. ಬಾಲ್ಯ ವಿದ್ಯಾಭ್ಯಾಸ ರಾಜಕೀಯ ಚಟುವಟಿಕೆ ಉದ್ಯೋಗ ಪರ್ವಗಳನ್ನು ದಾಟಿ, ಮುಂಬೈ ಜೀವನದ ಮಹತ್ವದ ಮೈಲಿಗಲ್ಲಾಗಿ 1852ರಲ್ಲಿ “ಬಾಂಬೆ ಅಸೋಸಿಯೇಷನ್” ಎನ್ನುವ ಭಾರತದ ಪ್ರಪ್ರಥಮ ರಾಜಕೀಯ ಸಂಘಟನೆಯೊಂದನ್ನು ಕಟ್ಟಿದರು. ಸಮಕಾಲೀನ ಸ್ವಾತಂತ್ಯ್ರ ಸಂಗ್ರಾಮಕ್ಕೆ ಬುನಾದಿ ಹಾಕಿದರು. 1855ರಲ್ಲಿ ತಾವು ಪದವಿ ಪಡೆದ ಮುಂಬೈಯ ಎಲ್ಫಿನ್ಸ್ಟೋನ್ ಕಾಲೇಜಿನಲ್ಲಿ ಗಣಿತ ಹಾಗು ಪ್ರಾಕೃತ ತತ್ವಶಾಸ್ತ್ರದ ಪ್ರೊಫೆಸರ್ ಹುದ್ದೆಗೆ ಏರಿದರು. ಶೈಕ್ಷಣಿಕ ಕಾರಣಕ್ಕೆ ಅತ್ಯುನ್ನತ ಹುದ್ದೆ ಪಡೆದ ಮೊದಲ ಭಾರತೀಯರಾದ ಅವರನ್ನು ಸಹೋದ್ಯೋಗಿ ಪ್ರೊಫೆಸರ್ ಒಬ್ಬರು “ಭಾರತದ ಭರವಸೆ” ಎಂದು ಕರೆದಿದ್ದರು.

ಆಂಗ್ಲ ಪ್ರಧಾನಿ, ಭಾರತೀಯನ ಚರ್ಮದ ಬಣ್ಣವನ್ನು ಉಲ್ಲೇಖಿಸಿ ಮಾಡಿದ ವ್ಯಂಗ್ಯ ಇತರ ಸುದ್ದಿ ಪತ್ರಿಕೆಗಳಲ್ಲಿಯೂ ವಿಭಿನ್ನ ಆಯಾಮಗಳಿಂದ ಪ್ರಚಾರ ಪಡೆಯಿತು. ಜನಾಂಗೀಯ ವಿರೋಧ ಮತ್ತು ಬ್ರಿಟಿಷ್ ವ್ಯಂಗ್ಯಗಳು ಸುದ್ದಿ ಮಾಧ್ಯಮಗಳನ್ನು ತುಂಬಿದವು. “ಬೆಂಕಿಯ ಅರ್ಚಕ” ಎಂದು ಒಂದು ಪತ್ರಿಕೆ ಹಾಸ್ಯ ಮಾಡಿತು. ಭಾರತೀಯನ ಪಾರ್ಸಿ ಹುಟ್ಟುನ್ನು, ಪಾರ್ಸಿಗಳ ಬೆಂಕಿ ಹಾಗು ನೀರನ್ನು ಆರಾಧಿಸುವ ಕ್ರಮವನ್ನು ಗುರಿಯಾಗಿಸಿದ ಅಪಹಾಸ್ಯ ಅದಾಗಿತ್ತು.

ನವರೋಜಿಯವರ, ಮೊದಲ ಇಂಗ್ಲೆಂಡ್ ಪ್ರಯಾಣ 1855ರಲ್ಲಿ “ಕಾಮಾ ಅಂಡ್ ಕೋ” ಕಂಪೆನಿಯ ಶಾಖೆಯನ್ನು ವಿಲಾಯತಿಯಲ್ಲಿ ಸ್ಥಾಪಿಸುವ ಕಾರಣಕ್ಕೆ ಆಯಿತು. ಲಿವರ್‌ಪೂಲ್ ಎನ್ನುವ ಬ್ರಿಟಿಷ್ ಕೈಗಾರಿಕಾ ನಗರದಲ್ಲಿ ಆರಂಭವಾದ ಶಾಖೆ, ಭಾರತೀಯ ವ್ಯಾಪಾರವೊಂದರ ಮೊಟ್ಟಮೊದಲ “ಆಂಗ್ಲ ಆವೃತ್ತಿ”ಯೂ ಹೌದು. ಮೂರು ವರ್ಷ ಅಲ್ಲಿ ಕೆಲಸ ಮಾಡಿ ನೈತಿಕ ಕಾರಣಕ್ಕೆ ರಾಜೀನಾಮೆ ನೀಡಿ, “ದಾದಾಭಾಯಿ ನವರೋಜಿ ಅಂಡ್ ಕೋ” ಎನ್ನುವ ಸ್ವಂತ ಹತ್ತಿ ವ್ಯಾಪಾರದ ಸಂಸ್ಥೆ ತೆರೆದರು. ಜೊತೆಯಲ್ಲಿಯೇ ಯೂನಿವರ್ಸಿಟಿ ಕಾಲೇಜಿನಲ್ಲಿ ಗುಜರಾತಿ ಭಾಷಾ ಶಿಕ್ಷಕ ನೌಕರಿಯೂ ಸಿಕ್ಕಿತು (1856-65). ದಾದಾಭಾಯಿ ಜೀವಿತದ ಬಹುಕಾಲವನ್ನು, ಭಾರತ ಹಾಗು ಬ್ರಿಟನ್ ದೇಶಗಳ ನಡುವೆ ಓಡಾಡುತ್ತ, ಅಲ್ಲಲ್ಲೇ ಕೆಲಕಾಲ ಬದುಕುತ್ತ ಕಳೆದವರು. “ಎರಡು ನೆಲಗಳನ್ನು ಜೋಡಿಸಿದವರು” ಎಂದು 1890ರಲ್ಲಿ ಪತ್ರಿಕೆಯೊಂದು ಸಚಿತ್ರವಾಗಿ ವರ್ಣಿಸಿತ್ತು. ಲಂಡನ್ ನಲ್ಲಿ ಹಲವು ಚಟುವಟಿಕೆಗಳಲ್ಲಿ ಅವರ ಪಾಲ್ಗೊಳ್ಳುವಿಕೆ ಇತ್ತು. ಭಾರತದಿಂದ ಬಂದವರಿಗೆ ಸಲಹೆ ಮಾರ್ಗದರ್ಶನ ನೀಡುವುದರಿಂದ ಲಂಡನ್ ಇಂಡಿಯಾ ಸೊಸೈಟಿಯನ್ನು ಮುನ್ನಡೆಸುವುದರವರೆಗೆ. ಈಸ್ಟ್ ಇಂಡಿಯಾ ಅಸೋಸಿಯೇಷನ್ ಅಲ್ಲಿ ಭಾಗವಹಿಸಿದರು. ಇಂಡಿಯನ್ ಕಾಂಗ್ರೆಸ್ ಸಂಘಟನೆಯ ಬ್ರಿಟಿಷ್ ಕಮಿಟಿಯಲ್ಲಿ ಸಕ್ರಿಯ ಪಾತ್ರ ವಹಿಸಿದರು. ಡಬ್ಲ್ಯೂ ಸಿ ಬೊನ್ನೆರ್ಜೀ ಸ್ಥಾಪಿಸಿದ ಭಾರತೀಯ ರಾಜಕೀಯ ಸಂಘದಲ್ಲೂ ಇದ್ದರು. ನವರೋಜಿ ಭಾರತದಲ್ಲೂ ಇಂಗ್ಲೆಂಡ್‌ನಲ್ಲೂ ಪ್ರಭಾವಿ ರಾಜಕೀಯ ಹಾಗು ಬೌದ್ಧಿಕ ಶಕ್ತಿಯಾಗಿದ್ದರು. ಲಂಡನ್‌ನಲ್ಲಿ ಕಳೆದ ಮೂವತ್ತು ವರ್ಷಗಳ ಅನುಭವ ಚಿಂತನೆ ಕೆಲಸಗಳು “ಡ್ರೈನ್ ಥಿಯರಿ” ಎನ್ನುವ ಸಿದ್ಧಾಂತದ ಮೂಲಕ ಪ್ರಚಾರ ಪಡೆಯಿತು. ಬ್ರಿಟಿಷರ ಆಡಳಿತಶಾಹಿಯಲ್ಲಿ ಭಾರತ ಹೇಗೆ ಬಡವಾಗಿ ಸೊರಗಿತು ಎಂದು ವಿವರಿಸಿದರು. ಬ್ರಿಟಿಷರಿಂದ ಭಾರತದಲ್ಲಾದ ಸುಧಾರಣೆಗಳು ಕೇವಲ ಆಕಸ್ಮಿಕ ಮತ್ತು ಅದಕ್ಕಾಗಿ ಭಾರತ ತೆತ್ತಬೆಲೆ ಬಲು ದೊಡ್ಡದು ಎಂದು ವಾದಿಸಿದರು. “ಡ್ರೈನ್ ಥಿಯರಿ” ಬ್ರಿಟಿಷ್ ವಸಾಹತಿನ ಭಾರತೀಯ ರಾಷ್ಟ್ರೀಯ ಪ್ರಜ್ಞೆಯ ನೋಟವನ್ನು ಧ್ವನಿಸಿತು ಮತ್ತು ಇಂದಿಗೂ ಅಂದಿನ ಗಟ್ಟಿ ಧ್ವನಿ ಮಾರ್ದನಿಯಾಗಿ ಕೇಳಿಸುತ್ತದೆ.

1860 ಮತ್ತು 70ರ ನಡುವೆ ವಿಭಿನ್ನ ವಿಚಾರಗಳ ಹಲವು ಪ್ರಬಂಧಗಳನ್ನು ಮಂಡಿಸಿದರು. ಪಾರ್ಸಿಗಳ ಸಂಪ್ರದಾಯ ಆಚರಣೆಗಳ ಕುರಿತು ಲಿವರ್ಪೂಲ್‌ನಲ್ಲಿ, “ಭಾರತದಲ್ಲಿ ಇಂಗ್ಲೆಂಡ್ ನ ಕರ್ತವ್ಯಗಳು” ಎನ್ನುವ ಪ್ರಬಂಧವನ್ನು ಲಂಡನ್ ಅಲ್ಲಿ ತಾವೇ ಸ್ಥಾಪಿಸಿದ ಈಸ್ಟ್ ಇಂಡಿಯಾ ಅಸೋಸಿಯೇಷನ್‌ನಲ್ಲಿ ಮಂಡಿಸಿದರು. 1870ರ ಸಮಯದಲ್ಲಿ ಭಾರತದ ವಾಣಿಜ್ಯ ಸ್ಥಿತಿಗತಿಗಳು, ಬೇಡಿಕೆಗಳ ಬಗ್ಗೆ ಲಂಡನ್ ಆರ್ಟ್ಸ್ ಸೊಸೈಟಿಯಲ್ಲಿ ಉಪನ್ಯಾಸ ಮಾಡಿದರು. 1873ರಲ್ಲಿ ಈಸ್ಟ್ ಇಂಡಿಯಾ ಹಣಕಾಸು ವಿಭಾಗದ ಪಾರ್ಲಿಮೆಂಟರಿ ಸಮಿತಿಗೆ ಭಾರತದ ಬಡತನದ ಬಗ್ಗೆ ವರದಿ ಸಲ್ಲಿಸಿದರು. ಆದರೆ ಆ ಸಮಿತಿ ವರದಿಯನ್ನು ಪ್ರಕಟಿಸಲು ನಿರಾಕರಿಸಿತು, ಮುಂದೆ 1876ರಲ್ಲಿ “ಭಾರತದ ಬಡತನ” ಎನ್ನುವ ಹೆಸರಿನ ವರದಿಯನ್ನು ಮುಂಬೈಯಲ್ಲಿರುವ ಈಸ್ಟ್ ಇಂಡಿಯಾ ಶಾಖೆಗೆ ಸಲ್ಲಿಸಿದರು. 1885ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮೊದಲ ಅಧಿವೇಶನದಲ್ಲಿ ಭಾಗವಹಿಸಿ, ಬ್ರಿಟಿಷ್ ಸಂಸತ್ ಚುನಾವಣೆಗೆ ನಿಲ್ಲುವ ಆಕಾಂಕ್ಷೆಯಲ್ಲಿ 1886ರಲ್ಲಿ ಮುಂಬೈಯಿಂದ ಲಂಡನ್‌ಗೆ ಬಂದರು. ಲಿಬರಲ್ ಪಕ್ಷದ ಪದಾಧಿಕಾರಿಗಳ ಜೊತೆ ಸಭೆ ನಡೆಸಿದರು. ಲಂಡನ್‌ಗೆ ಆಗಲೇ ಕೆಲವು ಬಾರಿ ವಾಸಿಸಿ ಅಲ್ಲಿನ ಸಾಮಾಜಿಕ ರಿವಾಜುಗಳನ್ನು ತಿಳಿದಿದ್ದು, ಬ್ರಿಟಿಷ್ ಮತದಾರರನ್ನು ಓಲೈಸಲು ತಮ್ಮ ಪೋಷಾಕು, ಗುರುತನ್ನು ಬದಲಿಸಿಕೊಂಡರು. ಪಾರ್ಸಿ ಮುಂಡಾಸಿನ ಬದಲಿಗೆ ಇಂಗ್ಲಿಷ್ ಹ್ಯಾಟ್ ಧರಿಸಿದರು. ರಾಣಿಗೆ ದೃಢವಾದ ನಿಷ್ಠೆ ತೋರಿಸಿದರು. ನವರೋಜಿಯವರ ಈ ನಿಲುವುಗಳಿಂದ, ಬ್ರಿಟಿಷ್ ಪತ್ರಿಕೆಗಳು ಹಿಂದೆ ಭಾರತೀಯರು ಲಂಡನ್ನಿನಲ್ಲಿ ಚುನಾವಣಾ ಭಾಗವಹಿಸುವಿಕೆ, ಸಂಸತ್ ಪ್ರವೇಶದ ಪ್ರಯತ್ನಗಳಿಗೆ ಒಡ್ಡಿದ ಆಘಾತಕಾರಿ ಪ್ರತಿರೋಧದ ತೀವ್ರತೆಯನ್ನು ಕಡಿಮೆ ಮಾಡಿದವು. ಹೋಲ್ಬೋರ್ನ್ ಲಿಬರಲ್ ಅಸೋಸಿಯೇಷನ್ ಪಕ್ಷದ ಅಭ್ಯರ್ಥಿಯಾಗಿ ನವರೋಜಿ ಸರ್ವಾನುಮತದಲ್ಲಿ ಆಯ್ಕೆ ಆದರು. ಭಾರತೀಯನೊಬ್ಬ ಬ್ರಿಟನ್ನಿನಲ್ಲಿ ಯಶಸ್ವಿಯಾಗಿ ಸೆಣಸಿದ ಚುನಾವಣೆಯಲ್ಲಿ, ಗೆದ್ದ ಆಂಗ್ಲ ಕನ್ಸರ್ವೇಟಿವ್ ಅಭ್ಯರ್ಥಿ 3651 ಮತಗಳನ್ನು ಪಡೆದರೆ ನವರೋಜಿಯವರು 1950 ಮತಗಳನ್ನು ಪಡೆದಿದ್ದರು.

ಮೂರು ದಶಕಗಳ ರಾಜಕೀಯ ಜೀವನದಲ್ಲಿ ನವರೋಜಿ ಏಳು ಬಾರಿ ಬ್ರಿಟನ್‌ಗೆ ಭೇಟಿ ನೀಡಿದರು, ಐದು ಬಾರಿ ಲಂಡನ್ ನ ಬೇರೆ ಬೇರೆ ವಿಳಾಸಗಳಲ್ಲಿ ಉಳಿದರು. ಭಾರತದಲ್ಲಿ ಬ್ರಿಟಿಷ್ ಆಡಳಿತದ ಬಗ್ಗೆ ಬ್ರಿಟನ್ನಿನ ಬೇರೆ ಬೇರೆ ಭಾಗಗಳಿಗೆ ತನ್ನ ಯೋಚನೆಗಳನ್ನು ತಿಳಿಸಲು ತಿರುಗಾಡಿದರು. 1906, ಎಂಭತ್ತರ ವಯಸ್ಸಿನಲ್ಲಿ ಮತ್ತೆ ಸಂಸತ್ತಿಗೆ ಮರಳುವ ಯತ್ನ ಮಾಡಿದರು. ಆದರೆ ಚುನಾವಣೆಯಲ್ಲಿ ಸೋತರು. ಲಂಡನ್‌ನ ಲಾಂಬೆತ್ ಪ್ರದೇಶದಲ್ಲಿ, ಒಂದು ಕಾಲಕ್ಕೆ ತಾವು ಸಮರ್ಥಿಸುತ್ತಿದ್ದ ಲಿಬರಲ್ ಪಕ್ಷದ ಅಭ್ಯರ್ಥಿಯ ಎದುರು ಅವರು ನಿಂತಿದ್ದರು. ಆ ಸಮಯಕ್ಕೆ ಅವರ ಚಿಂತನೆ ಒಲವುಗಳು ಎಡಪಂಥದ ಕಡೆಗೆ ಹೊರಳಿದ್ದವು, 1904ರಲ್ಲಿ ಸಮಾಜವಾದಿ ಸಂಕಿರಣದಲ್ಲಿ ಪಾಲ್ಗೊಂಡರು. ಲೇಬರ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿ ಕೆಲಸ ಮಾಡಿದರು. 1906ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ಗೆ ಮೂರನೆಯ ಬಾರಿ ಅಧ್ಯಕ್ಷರಾಗಲು ಕರೆ ಬಂದಾಗ ಭಾರತಕ್ಕೆ ಮರಳಿದರು. ತಿಲಕ್, ಗೋಖಲೆ ಹಾಗು ಗಾಂಧೀಜಿಯರಿಗೆ ಗುರುಸಮಾನರಾಗಿದ್ದ ನವರೋಜಿ, ಕಾಂಗ್ರೆಸ್‌ನ ತೀವ್ರವಾದಿ ಹಾಗು ಸೌಮ್ಯವಾದಿ ಗುಂಪುಗಳ ನಡುವಿನ ಸಮನ್ವಯಕಾರರು ಸಂಧಾನಕಾರರು ಆಗಿದ್ದರು. ಗಾಂಧೀಜಿ “ತಂದೆಯನ್ನು ಮಕ್ಕಳು ನೋಡುವ ಭಾವದಿಂದ ಭಾರತೀಯರು ನಿಮ್ಮನ್ನು ನೋಡುತ್ತಾರೆ” ಎಂದಿದ್ದರು.

ಆಗಸ್ಟ್ 1897ರಲ್ಲಿ ದಾದಾಭಾಯಿ ಲಂಡನ್‌ನಲ್ಲಿ ವಾಷಿಂಗ್ಟನ್ ಹೌಸ್, 72 ನಂಬ್ರದ ಅನೇರ್ಲಿ ಪಾರ್ಕ್‌ಗೆ ವಾಸ್ತವ್ಯ ಬದಲಿಸಿದರು. ಅವರ ಚಿಂತನೆ, ಭಾರತಕ್ಕೆ ಸಂಪೂರ್ಣ ಸ್ವಾತಂತ್ಯ್ರ ದೊರಕಿಸುವ ಕಡೆಗೆ ತಿರುಗಿದ್ದ ಕಾಲ ಅದು. ತಮ್ಮ ಹೆಚ್ಚಿನ ಸಮಯ ವೆಲ್ಬಿ ಕಮಿಷನ್ ಸದಸ್ಯನಾಗಿ ಕಳೆದರು, ಅದು ಬ್ರಿಟಿಷ್ ಸರಕಾರದಿಂದ ಭಾರತದಲ್ಲಿ ಪೋಲಾಗುತ್ತಿದ್ದ ವೆಚ್ಚಗಳ ಬಗ್ಗೆ ತನಿಖೆ ನಡೆಸಲು ಮಾಡಿದ್ದ ಸಮಿತಿಯಾಗಿತ್ತು. ನವರೋಜಿಯವರ “ಡ್ರೈನ್ ಥಿಯರಿ” ಸಿದ್ಧಾಂತವನ್ನು ಒಳಗೊಂಡಿದ್ದ ಮಹತ್ವದ ಪುಸ್ತಕವಾದ “Poverty and Un-British Rule in India” (1901) ಅದೇ ಮನೆಯಲ್ಲಿ ವಾಸಿಸುತ್ತಿದ್ದ ಕಾಲದಲ್ಲಿ ಪ್ರಕಟ ಆಯಿತು. ಬ್ರಿಟಿಷ್ ಆಡಳಿತಶಾಹಿ ಭಾರತವನ್ನು ಆರ್ಥಿಕವಾಗಿ ಸೂರೆ ಮಾಡಿ ದಾರಿದ್ಯ್ರಕ್ಕೆ ತಳ್ಳಿರುವುದನ್ನು ಉಪನ್ಯಾಸ, ಪ್ರಬಂಧಗಳ ಮೂಲಕ ವಿವರಿಸಿ ದಾಖಲಿಸಿದ ಅಧ್ಯಾಯಗಳ ಸಂಕಲನ ಅದು.

ವಾಷಿಂಗ್ಟನ್ ಹೌಸ್ ಲಂಡನ್‌ನ ಭಾರತೀಯ ಸಮುದಾಯದ ಕೇಂದ್ರವಾಗಿತ್ತು. ಲಂಡನ್‌ನಲ್ಲಿದ್ದ ಬಹಳ ಭಾರತೀಯರಿಗೆ ಅಲ್ಲಿಗೆ ಬರುವ ಆಹ್ವಾನ ಸಿಗುತ್ತಿತ್ತು. ಸಂಕಟ ಸಮಸ್ಯೆಯಲ್ಲಿರುವ ಭಾರತೀಯರು ಅಲ್ಲಿಗೆ ತಾವೇ ಹೋಗಿ ಪರಿಹಾರ ಕೇಳುತ್ತಿದ್ದರು. ಆ ಮನೆಯನ್ನು ಸಂದರ್ಶಿಸಿದ ಭಾರತೀಯನೊಬ್ಬ “ಮನೆಯ ಪ್ರತಿ ಕೋಣೆಯಲ್ಲೂ ಪುಸ್ತಕಗಳಿಂದ ತುಂಬಿದ ಕಪಾಟು ಇತ್ತು, ಗೋಡೆಗೆ ತಾಗಿ ರಾಶಿ ರಾಶಿ ಪುಸ್ತಕಗಳನ್ನು ಇಡಲಾಗಿತ್ತು” ಎಂದಿದ್ದ. ಸಮಕಾಲೀನ ಭಾರತೀಯ ದೇಶಪ್ರೇಮಿ ರಮೇಶ ಚಂದರ್ ದತ್, ಸಹೋದರಿ ನಿವೇದಿತಾ 72 ನಂಬ್ರದ ಮನೆಯ ಅತಿಥಿಗಳಾಗಿದ್ದರು. 1904-05ರಲ್ಲಿ ನವರೋಜಿ ದೀರ್ಘಕಾಲೀನ ಲಂಡನ್ ಮನೆಯನ್ನು ಬಿಟ್ಟರು, 1906 ರಲ್ಲಿ ಭಾರತಕ್ಕೆ ಮರಳಿದರು. 1917ರಲ್ಲಿ ಮುಂಬೈಯಲ್ಲಿ ಅವರ ಮರಣಾನಂತರ ಲಂಡನ್‌ನ ಟೈಮ್ ಪತ್ರಿಕೆ ಶ್ರದ್ಧಾಂಜಲಿ ವರದಿಯಲ್ಲಿ ನವರೋಜಿಯವರನ್ನು “ಭಾರತದ ರಾಷ್ಟ್ರವಾದಿ ಪಿತಾಮಹ” ಎಂದು ಬಣ್ಣಿಸಿತ್ತು.

ಈ ವರ್ಷ (2022), “ಭಾರತೀಯ ರಾಷ್ಟ್ರೀಯವಾದಿ ಹಾಗು ಸಂಸತ್ ಸದಸ್ಯ” ಎಂದು ಬರೆದ ನೆನಪಿನ ನೀಲಿ ಫಲಕವನ್ನು 72 ನಂಬ್ರದ ಅನೇರ್ಲಿ ಪಾರ್ಕ್ ಮನೆಯ ಮೇಲೆ ನೆಡಲಾಗಿದೆ.