ಬಜ್ಪೆಯ ವಿಮಾನ ದುರಂತ ಭಾರತದಲ್ಲಿ “ರಾಷ್ಟ್ರೀಯ ಸುದ್ದಿಯಾಗಿ” ಬಿತ್ತರಗೊಳ್ಳುತ್ತ ಅಲ್ಲಿಯ ಹಲವರಿಗೆ ದೇಶ ಬಿಟ್ಟು ಹೋದವರ “ಹ್ಯೂಮನ್ ಸ್ಟೋರಿ”ಗಳ ತಿಳಿಸುತ್ತಿರುವುದಕ್ಕೆ ನೋವ ಪಡಬೇಕೊ, ಸಮಾಧಾನಪಡಬೇಕೊ ಗೊತ್ತಿಲ್ಲ. ಇದನ್ನು ಬರೆಯಲೇ ತೀವ್ರ ನೋವು ಮತ್ತು ಹಿಂಜರಿಕೆಯಾಗುತ್ತಿದೆ. ಟಿ.ವಿ ಮತ್ತು ಪತ್ರಿಕೆಗಳು ದಿನದಿನಕ್ಕೆ ಹೊಸಹೊಸ ವಿಷಯಗಳ ನೋಡುಗರಿಗೆ, ಓದುಗರಿಗೆ ಕೊಡುತ್ತಾ ಬರುತ್ತಿವೆ. ದುರ್ಮರಣ ಹೊಂದಿದವರ ಬದುಕಿನ ಎಳೆಗಳನ್ನು ನೀಡುತ್ತಾ ಪ್ರಜೆಗಳ ದನಿಯಾಗಿ ಕೆಲಸ ಮಾಡುತ್ತಿದ್ದೇವೆ ಅಂತ ದಿನ ಪತ್ರಿಕೆಗಳು ತೋರಿಸುತ್ತಿದ್ದುದು ನೋವಿನ ಗಳಿಗೆಯಲ್ಲೂ ನನಗೆ ನಗುವ ತರಿಸುತ್ತಿತ್ತು. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕೆಗಳು ಕಾರ್ಯಾಂಗ, ರಾಜ್ಯಾಂಗಗಳ ಫೋಟೊ ಪ್ರತಿಗಳಂತೆಯೆ ಕೆಲಸ ನಿರ್ವಹಿಸುವುದ ನೋಡಿ ತುಂಬಾ ಬೇಸರವಾಗುತ್ತದೆ. ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ ಈ ಘಟನೆಯಲ್ಲಿ ಮಡಿದವರ ಲಿಸ್ಟ್ ನೊಳಗೆ “ಸುಳ್ಳು ಪಾಸ್ ಪೋರ್ಟ್”ನಲ್ಲಿ ಸಂಚರಿಸಿದವರ ಪತ್ತೆ ಹಿಡಿದು ಕಾಲಂಗಳ ತುಂಬಿಸಿಕೊಂಡಿದ್ದು. ಇನ್ಯಾರದೋ ಹೆಸರಿನ ಪಾಸ್ ಪೋರ್ಟಲ್ಲಿ ಪರದೇಶಕ್ಕೆ ಹೋಗುವುದು, ಅಥವ ಬೇರೆ ಹೆಸರಲ್ಲಿ ಹೊಸದೊಂದು ಪಾಸ್ ಪೋರ್ಟ್ ಪಡೆದು ವಿಮಾನವತ್ತುವುದು, ಕಣ್ತಪ್ಪಿಸಿ ಎರಡೆರಡು ಪಾಸ್ ಪೋರ್ಟ್ ಇಟ್ಟುಕೊಳ್ಳುವ ವಿಚಾರ ಇಲ್ಲಿಯ ನಮ್ಮವರಿಗೆ ಸಾಮಾನ್ಯ. ಆದರೆ ಕಾನೂನಿನ ದೃಷ್ಟಿಯಲ್ಲಿ ಇದು ಅಪರಾಧ; ಶಿಕ್ಷೆ ಗ್ಯಾರಂಟಿ ಅಂತ ಗೊತ್ತಿದ್ದರೂ ವ್ಯಕ್ತಿಯೊಬ್ಬ ಯಾಕೆ ಸುಳ್ಳು ಪಾಸ್ ಪೋರ್ಟ್ ಬಳಸುತ್ತಾನೆ? ಇವರುಗಳಲ್ಲಿ ಹೆಚ್ಚಿನವರು ಬದುಕಿನ ಎಲ್ಲಾ ನೋವುಗಳ ಉಣ್ಣುತ್ತ ಬೆಳೆದವರು. ಹುಟ್ಟಿದ ಊರಲ್ಲಿ ಐದು ಸಾವಿರವೂ ದುಡಿಯಲಾಗದ ಅಥವ ದುಡಿಯಲು ಅವಕಾಶಗಳಿಲ್ಲದ ಅಥವ ಉಳಿಸಲಾಗದ ಪರಿಸರದಲ್ಲಿ ನರಳುವುದಕ್ಕಿಂತ ವಿದೇಶದಲ್ಲಿ ದಿನಾಪೂರಾ ದುಡಿಯುತ್ತ ಕೈ ತುಂಬ ಸಂಪಾದಿಸಬಹುದೆಂಬ ಕನಸಲ್ಲಿ ಮೀಯುತ್ತ ಪಾಸ್ ಪೋರ್ಟಿಗಾಗಿ ಅಲೆಯುತ್ತಿರುತ್ತಾರೆ. ತಂದೆಯಿಲ್ಲದ ಮನೆ, ಮೂರು ಅಕ್ಕ ತಂಗಿಯರ ಮದುವೆ, ಮನೆಯ ದಿನ ನಿತ್ಯದ ಖರ್ಚು… ಹೀಗೆ ಹಲವಾರು ವಿಷಯ, ಸತ್ಯ ವಾಸ್ತವಗಳು ವಿದೇಶ ಎಂಬ ಕನಸಿನ ಗಾಳಿಪಟವನ್ನು ಕೆಲವರೊಳಗೆಹಾರಿಸುತ್ತವೆ. ದೇಶದ ಮತ್ತು ರಾಜ್ಯದ ವಿತ್ತ ಮಂತ್ರಿಗಳು ಬಜೆಟನ್ನು ಮಂಡಿಸುತ್ತ ಜನರ ಅಭಿವೃದ್ಧಿಗಾಗಿ ಹತ್ತಾರು ಕಾರ್ಯಕ್ರಮಗಳ ಘೋಷಿಸುವ ದಿನ ಅದೆಷ್ಟು ತಳಮಟ್ಟದ ಜನ ತಮ್ಮ ಹರಿದ ಬಟ್ಟೆಗಳಲ್ಲಿ ವಿಮಾನವತ್ತುತ್ತಾರೊ…

ಇವರಲ್ಲಿ ಕೆಲವರು ಪಾಸ್ ಪೋರ್ಟ್ ಸಿಗದೆ ತಳಮಳಗೊಳ್ಳುತ್ತಾರೆ. ಯಾವುದೋ ಸಮಯದಲ್ಲಿ ಮಾಡಿದ್ದ ಗಲಾಟೆ ಈಗ ಪೋಲಿಸ್ ಸ್ಟೇಷನ್ ಗೆ ಹೋಗಿ ಭದ್ರವಾಗಿ ಲೆಡ್ಜರ್ ಗಳೊಳಗೆ ಕೂತು ಇವರುಗಳ “ಫಾರಿನ್” ಕನಸುಗಳ ನೋಡಿ ಕಿಲಕಿಲ ನಗುತ್ತಿರುತ್ತದೆ; ಅಥವ ಗಲ್ಫ್ ರಾಷ್ಟ್ರಗಳಿಗೆ ಹೋಗಲು ವಯಸ್ಸು ಸಾಲದೆಂದು ತಮ್ಮ ಪರಿಚಯಸ್ಥರಿಗೆ ಹಣ ನೀಡಿ ಅವರ ಹೆಸರಲ್ಲಿ ಪಾಸ್ ಪೋರ್ಟ್ ಪಡೆದು ವಿಮಾನವೇರುತ್ತಾರೆ. ಇದನ್ನು ಕೆಲವು ಏಜೆಂಟರುಗಳೆ ಏರ್ಪಾಟು ಮಾಡುವ ಜಾಲವೂ ಇದೆ. ಇಂಡಿಯಾದಲ್ಲಿ ಮಾತ್ರವಲ್ಲದೆ ನಮ್ಮವರು ಇಲ್ಲಿಯೂ ಸುಳ್ಳು ಪಾಸ್ ಪೋರ್ಟ್ ಮಾರುವ ಜಾಲವನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇವರುಗಳ ಬದುಕೂ ಬಿಸಿಲಲ್ಲಿ ಬೆವರ ಸುರಿಸುತ್ತ ದುಡಿವವರ ಬದುಕಿನಷ್ಟೆ ನೀರಿನ ಗುಳ್ಳೆಗಳಿಂದ ಕೂಡಿದ್ದು. ಕಷ್ಟದಲ್ಲಿ ಬರುವ ಮಂದಿಗೆ ಸಹಾಯ ನೀಡುವ ಹೆಸರಲ್ಲಿ ಇವರುಗಳು ಹಣ ಸಂಪಾದಿಸುತ್ತಿರುತ್ತಾರೆ. ಬದುಕಿನ ಮೊನೆಯಲ್ಲಿ ನಿಂತವರುಗಳಿಗೆ ಇಂತಹವರುಗಳು ಓಯಸಿಸ್ ನಂತೆ ಕಾಣುತ್ತಾರೆ. ಹೇಗಾದರೂ ಸರಿ ಊರ ತಲುಪಿದರೆ ಸಾಕು ಅಥವ ಫಾರಿನ್ ಗೆ ಹೋಗಿ ಕಷ್ಟ ಕಳೆದರೆ ಸಾಕು ಅನ್ನುವವರ ಕಂಗಳಲ್ಲಿ ಈ ಮಂದಿ ಆಸೆಯ ಮಿಣುಕು ದೀಪವಾಗಿ ಮಿನುಗುತ್ತಿರುತ್ತಾರೆ.

ಸಾಲ ಸೋಲ ಮಾಡಿ ಅಥವ ಮನೆ, ಹೊಲ, ಗದ್ದೆಗಳ ಅಡವಿಟ್ಟು ಏಜೆಂಟನಿಗೆ ಲಕ್ಷ ಕೊಟ್ಟು ವೀಸಾ ಪಡೆದು ಸಂಪಾದನೆಯ ಕನಸಲ್ಲಿ ಹಾರಿ ಬಂದ ಎಷ್ಟೋ ಜೀವಗಳು ನಿಮಗಿಲ್ಲಿ ಅಡಿಗಡಿಗೆ ಸಿಗುತ್ತಾರೆ. ಏರ್ ಪೋರ್ಟಲ್ಲಿ ತಡಕಾಡುತ್ತ, ಗಲಿಬಿಲಿಗೊಳ್ಳುತ್ತ, ಹಾಕಿಕೊಂಡಿರುವ ಬಟ್ಟೆಗೆ ಅವಮಾನ ಪಡುತ್ತ ತಪ್ಪು ಮಾಡಿ ಸಿಕ್ಕಿ ಬಿದ್ದವರಂತೆ ಎಮಿಗ್ರೇಷನ್ ನ ಲೈನಿನಲ್ಲಿ ನಿಂತಿರುತ್ತಾರೆ. ವಿದೇಶಕ್ಕೆ ಬಂದು ಇಳಿದ ತಕ್ಷಣ ಭಯ ನೂರು ಪಟ್ಟು ಅಧಿಕಗೊಂಡು ಭಾಷೆ ಬಾರದೆ ತಬ್ಬಿಬ್ಬಾಗುತ್ತಿರುತ್ತಾರೆ. ಬಡತನದ ಬದುಕು ಮೂಡಿಸಿರುವ ಈ ಅನಾಮಿಕತೆಗೆ ಬೆಚ್ಚಿ ಮನದೊಳಗೆ ಮರುಗುತ್ತಿರುತ್ತಾರೆ. ಬೆಚ್ಚನೆಯ ಬದುಕಿಗಾಗಿ ಎಲ್ಲಾ ಅವಮಾನಗಳನ್ನು ಸಹಿಸಿಕೊಂಡ ಇತಿಹಾಸ ಇಲ್ಲೂ ಇವರ ಕೈ ಬಿಡುವುದಿಲ್ಲ. ಹೇಗೋ ನಿಭಾಯಿಸಿ ಹೊರ ಬಂದು ದೀರ್ಘ ನಿಟ್ಟುಸಿರಿಡುತ್ತಾರೆ. ಕನಸು ವಿದೇಶಿ ನೆಲದಲ್ಲಿ ಚಿಗುರಲು ಆರಂಭಿಸುತ್ತದೆ. ಆದರೆ ಈ ಕನಸುಗಳ ಸೋಲು-ಗೆಲುವುಗಳು ಇವರುಗಳನ್ನು ಕರೆಸಿಕೊಂಡ ಕಫೀಲ್ (ಸ್ಪಾನ್ಸರ್) ಮೇಲೆಯೇ ಅವಲಂಬಿತವಾಗಿರುತ್ತದೆ. ಮಜ್ರಾ (ತೋಟದ ಕೆಲಸಗಾರನ) ವೀಸಾದಲ್ಲಿ ಬರುವವರಲ್ಲಿ ಕೆಲವರಿಗೆ ಸಂಬಳ ತಿಂಗಳಿಗೆ ಸರಿಯಾಗಿ ಸಿಗುತ್ತಿರುತ್ತದೆ, ಹಲವರಿಗೆ ಅದು ಕೈಗೆ ಸಿಗದ ಚಂದಿರನ ಬೆಳಕಿನಂತೆ ಓಡುತ್ತಿರುತ್ತದೆ. ಯಾವತ್ತೋ ಒಂದು ದಿನ ಅದು ಪೂರ್ಣವಾಗಿ ಸಿಕ್ಕಿ ಬಿಡುವ ಧೈರ್ಯದಲ್ಲಿ ಅವರುಗಳು ದುಡಿಯುತ್ತಿರುತ್ತಾರೆ. ಕೆಲವರಂತೂ ಮರುಭೂಮಿ ಮಣ್ಣಿನ ವಾಸನೆಗೆ ಒಗ್ಗಿಕೊಳ್ಳದೆ ಚಡಪಡಿಸುತ್ತಿರುತ್ತಾರೆ. ಕೆಲವು ಕಫೀಲ್ ಗಳು ನೀಡುವ ಕಿರುಕುಳಗಳ ಸಹಿಸಿಕೊಳ್ಳಲಾಗದೆ ಮಜ್ರಾವ (ತೋಟವ) ಬಿಟ್ಟು ದೂರದ ಪಟ್ಟಣಕ್ಕೆ ಓಡಿ ಹೋಗುತ್ತಾರೆ. ಆ ಸಮಯದಲ್ಲಿ ಅವರಿಗೆ ಪಾಸ್ ಪೋರ್ಟಿನ ನೆನಪು ಬಂದರೂ ಅನುಭವಿಸುತ್ತಿರುವ ಕಷ್ಟದೆದುರು ಅದು ಸಾಮಾನ್ಯವಾಗಿ ಕಾಣುತ್ತದೆ. ಹೇಗೋ ಇಂಡಿಯಾ ತಲುಪಿ ಬಿಡುವ ಧೈರ್ಯದಲ್ಲಿ ಕಫೀಲ್ ಕಣ್ತಪ್ಪಿಸಿ ಎಸ್ಕೇಪ್ ಆಗುತ್ತಾರೆ. ಗಂಟೆಗಟ್ಟಲೆ ನಡೆದು ರಸ್ತೆ ಸಿಕ್ಕು ಬೆವರ ಹೊರೆಸಿಕೊಳ್ಳುವಾಗ ಊರಿನ ಸಾಲ ನೆನಪಾಗುತ್ತದೆ. ಮನಸ್ಸು ವಿಮಾನದ ಚಕ್ರಗಳಂತೆ ಎಲ್ಲಾ ಭಾರವನ್ನು ಹೊತ್ತುಕೊಂಡು ಚಲಿಸಲಾರಂಭಿಸುತ್ತದೆ, ದಿಕ್ಕು ದೆಸೆಯಿಲ್ಲದ ಹೊಸ ಕ್ಷಣಗಳಿಗೆ ತೆರೆದುಕೊಳ್ಳುತ್ತ ಮುದುಡಿ ಅರಳುತ್ತಿರುತ್ತದೆ. ಪೋಲಿಸರ ಕಣ್ತಪ್ಪಿಸಿ ಅಂಗಡಿಗಳೊಳಗೇ ವರ್ಷಗಳ ನೂಕಿ, ಸಾಲವ ತೀರಿಸುವಷ್ಟು ದುಡಿದು, ಸಾಕಪ್ಪ ಈ ಫಾರಿನ್ ಜೀವನ ಎಂದು ಹೊರಟವರು ಎಷ್ಟೋ ಮಂದಿ ಇದ್ದಾರೆ. ಸುಳ್ಳು ಪಾಸ್ ಪೋರ್ಟ್ ಮಾರುವ ಜಾಲದ ಸಹಾಯದಿಂದ ವಿಮಾನವತ್ತಿ ತಣ್ಣಗೆ ಕೂರುತ್ತಾರೆ. ಊರ ತಲುಪುವ, ತನ್ನವರ ನೋಡುವ ಧಾವಂತದಲಿ, ತವಕದಲಿ ಕುದಿಯುತ್ತಿರುತ್ತಾರೆ. ಹೀಗೆ ಬರುವ ನಮ್ಮ ಜನ ಕೆಲವರು ಕಳ್ಳ ಪಾಸ್ ಪೋರ್ಟಲ್ಲಿ ಬಂದ ಅಪರಾಧದಲ್ಲಿ ಪೋಲಿಸರ ಬಲೆಯಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ನೀರಿನಿಂದ ಹೊರ ಬಿದ್ದ ಮೀನಿನಂತೆ ನರಳುತ್ತಾ ನಿಂತಿರುವವರನ್ನು ನಮ್ಮ ಟಿ.ವಿ ಚಾನೆಲ್ ಗಳು ತಿಮಿಂಗಿಲಗಳ ತೋರಿಸುವಂತೆ ತೋರಿಸಿ ಕಾರ್ಯಾಂಗದ ಕಾರ್ಯವೈಖರಿಯನ್ನು ಕೊಂಡಾಡುತ್ತಿರುತ್ತವೆ. ನ್ಯಾಯಾಂಗ ಇವರುಗಳಿಗೆ ವಿಧಿಸಬಹುದಾದ ದಂಡನೆಯ ವಿವರಗಳ ನೀಡುತ್ತ ನೋಡುಗರ ಜನರಲ್ ನಾಲೆಜ್ ಅನ್ನು ಹೆಚ್ಚಿಸುತ್ತಿರುತ್ತವೆ.

ಸುಳ್ಳು ಪಾಸ್ ಪೋರ್ಟ್ ಪಡೆಯುವಂತಾದ ಕಾರಣಗಳನ್ನು ತಿಳಿಸದೆ ಮತ್ತೊಂದು ಸುದ್ದಿಗೆ ಜಿಗಿಯುತ್ತವೆ. ಇನ್ನು ಕೆಲವರು ಭಾರತಕ್ಕೆ ಬಂದು ಸಿಕ್ಕಿ ಹಾಕಿಕೊಳ್ಳುವ ಮುಂಚೆಯೇ ಇಲ್ಲಿನ ಪೋಲಿಸರಿಗೆ ಸಿಕ್ಕಿ ಬಿದ್ದು ಜೈಲಿಗೆ ನೂಕಲ್ಪಡುತ್ತಾರೆ. ಕನಸ ಅರಸುತ್ತ ಬಂದ ದೇಶದಲ್ಲಿ ಸರಳುಗಳ ಹಿಂದೆ ಬದುಕಬೇಕಾಗಿರುವ ತಮ್ಮ ಸ್ಥಿತಿಗೆ ಕೊರಗುತ್ತ ತಾವೇ ತಮ್ಮನ್ನು ಸಮಾಧಾನಪಡಿಸಿಕೊಳ್ಳುತ್ತಿರುತ್ತಾರೆ. “ಇಂಡಿಯನ್ ಎಂಬಸಿಯ” ಅಧಿಕಾರಿಗಳ ಆಗಮನವ ಎದುರುನೋಡುತ್ತ ಅರಬ್ಬಿ ಪೋಲಿಸರು ನೀಡುವ ಕುಬ್ಸಾಗಳ ತಿನ್ನುತ್ತಿರುತ್ತಾರೆ. ಆ ಎಂಬಸಿ ದೇವರುಗಳು ಬರುವುದು ಸಾವಿನಂತೆ ನಿಗೂಢವಾದುದು. ಕೊನೆಗೊಂದು ದಿನ ಪ್ರತ್ಯಕ್ಷವಾಗಿ ಜೈಲು ಅಧಿಕಾರಿಗಳ ಮಾತುಕತೆ ನಡೆಸಿ, ಇವರುಗಳ ಜಾತಕವ ನೋಡಿ ಅಂತೂ ತಾತ್ಕಾಲಿಕ ಪಾಸ್ ಪೋರ್ಟ್ ನೀಡಿ ವಿಮಾನವತ್ತಿಸಿ ಓಡಿಸುತ್ತಾರೆ. ಹೀಗೆ ಓಡಿಸಲ್ಪಟ್ಟ ಅಥವ ಹಿಡಿಯಲ್ಪಟ್ಟ ಸುಳ್ಳು ಪಾಸ್ ಪೋರ್ಟಿಗರ ಒಳಗೆ ಹೆಚ್ಚಾಗಿ ನೋವು, ಹಿಂಸೆ, ಹಸಿವು, ಬಡತನ, ಸುಸ್ತುಗಳು ಡಬಲ್ ಮಂಚ ಹಾಕಿಕೊಂಡು ಗೊರಕೆ ಹೊಡೆಯುತ್ತಿರುತ್ತವೆ. ಪಾಸ್ ಪೋರ್ಟಿನ ಮೇಲಿರುವ ಕಾಗದದ ಸಿಂಹದ ಮುಖವೂ ಇವರುಗಳನ್ನು ಹೆದರಿಸಿ ಘರ್ಜಿಸುತ್ತಿರುತ್ತದೆ. ತಾನು ಹುಟ್ಟಿದ ದೇಶದೊಳಗೆ ವ್ಯಕ್ತಿಯೊಬ್ಬ ಸುಳ್ಳು ಪಾಸ್ ಪೋರ್ಟಲ್ಲಿ ಬರುವಂತಾಗಲು ಯಾರು ಕಾರಣ? ಆತನ ಬದುಕನ್ನು ನಿರ್ವಹಿಸಲು ಅವಕಾಶಗಳ ಸೃಷ್ಟಿಸದ ದೇಶ ಮತ್ತದರ ಪ್ರಭುತ್ವಗಳೆ ಇದಕ್ಕೆ ನೇರ ಹೊಣೆ. ವಂಚನೆ,ಕೊಲೆ,ಸುಲಿಗೆಗಳ ಮಾಡಿದ ಕ್ರಿಮಿನಲ್ ಗಳ ಹಿಡಿಯುವ ಭರದಲ್ಲಿ ಇಂತಹ ಅಸಹಾಯಕ ಮನಸ್ಸುಗಳನ್ನು ಬಂಧಿಸಿ ಅವರುಗಳ ಹರಿದ ಬದುಕನ್ನು ಮತ್ತಷ್ಟು ಹರಿದು ಪ್ರಭುತ್ವ ವಿಚಿತ್ರ ಸಂತೋಷ ಪಡುತ್ತಿದೆ. ಸುಲಿಗೆಗಳ ಹಿಂದಿನ ಕಾರಣಗಳಿಗೆ ಉತ್ತರ ಹುಡುಕದೆ ಉಳ್ಳವರ ಪರಮ ಸ್ನೇಹಿತನಾಗಿ ಕಾರ್ಯಾಂಗ, ರಾಜ್ಯಾಂಗಗಳು ಕಾರ್ಯ ನಿರ್ವಹಿಸುತ್ತಿವೆ. ಇದಕ್ಕೆ ಮಾಧ್ಯಮಗಳು ಪಕ್ಕವಾದ್ಯ ಬಾರಿಸುತ್ತಿವೆ. ಸುಳ್ಳು ಪಾಸ್ ಪೋರ್ಟಿನ ಈ ಜನ ಯಾರೂ ಸಾರ್ವಜನಿಕ ದುಡ್ಡನ್ನು ಕೊಳ್ಳೆ ಹೊಡೆದವರಲ್ಲ ಅಥವ ಹುಟ್ಟಿದ ಮಣ್ಣನ್ನು ಅಗೆದು ಸಂಪತ್ತನ್ನು ದೋಚುತ್ತ ಹೆಲಿಕಾಪ್ಟರಲ್ಲಿ ಅಡ್ಡಾಡುವವರಲ್ಲ. ತಮ್ಮ ಉತ್ಪನ್ನಗಳ ಮಾರಲು ನೂರಾರು ಸುಳ್ಳ ಹೆಣೆದು ಸಾಮಾನ್ಯರ ತಲೆಗಳ ಬೋಳಿಸುವವರಲ್ಲ ಈ ಬೇನಾಮಿಗಳು. ತನ್ನ ಮನೆಯವರ ಸುಖ, ನೆಮ್ಮದಿಗಳಿಗಾಗಿ ಸುಳ್ಳು ದಾಖಲೆಗಳ ಹಿಂದೆ ಓಡಿದವರು. ವಿದೇಶವೆಂಬುದು ಬಿಸಿಲ್ಗುದುರೆಯೆ ಅಥವ ನೀರಿನ ಒರತೆಯೆ ಎಂದರಿಯದ ಅನನುಭವಿಗಳು, ದೇಶ-ಕಾಲಗಳನ್ನೇ ಗೆದ್ದು ಬಿಡುವ ಹುಂಬರು.

ನನಗೆ ಪರಿಚಯವಿದ್ದ ಈತ ತಮಿಳುನಾಡಿನ ಪರಮಕುಡಿಯವನು. ಕಮಲ ಹಾಸನ್ ಊರಿನವನು ಎಂದು ಹಲವರಿಂದ ಕರೆಸಿಕೊಳ್ಳುತ್ತಿದ್ದ ಈ ಹುಡುಗ ಮುಸ್ಲಿಂ ಆಗಿ ಹುಟ್ಟಿ ಮತ್ತು ಬೆಳೆದು ಹಿಂದುವೊಬ್ಬನ ಹೆಸರಲ್ಲಿ ಪಾಸ್ ಪೋರ್ಟ್ ಪಡೆದು ಸೌದಿಯೊಳಕ್ಕೆ ಬಂದವನು. ಮನೆಯಲ್ಲಿ ಮುಗಿಯದ ಬಡತನ. ಅಕ್ಕ ತಂಗಿಯರ ಮದುವೆ, ಅಣ್ಣನ ಕೆಲಸ, ಹುಟ್ಟಿಸಿದವರ ಖರ್ಚು ಎಲ್ಲವಕ್ಕು ಅಂತ್ಯ ಹಾಡಲು ವಿಮಾನವತ್ತಿದವನು. ಇದ್ದ ಮನೆಯನ್ನು ಅಡ ಇಟ್ಟು ಸ್ವಲ್ಪ, ಸಾಲ ಮಾಡಿ ಸ್ವಲ್ಪ ಎಂದು ಕಾಸ ಕೂಡಿಸಿ, ಅದ ಏಜೆಂಟನಿಗೆ ತೆತ್ತು ಮಜ್ರಾ ವೀಸಾದಲ್ಲಿ ನಾಲ್ಕು ವರ್ಷದ ಹಿಂದೆ ರಿಯಾದ್ ಬಂದು ತಲುಪಿದ್ದಾನೆ. ಏರ್ ಪೋರ್ಟಿನಿಂದ ನೇರವಾಗಿ ಆತನನ್ನು ಮಜ್ರಾಕ್ಕೆ ಕರೆದುಕೊಂಡು ಹೋಗಲ್ಪಟ್ಟಿತು. ಅದು ಎಂಟು ಗಂಟೆಗಳ ಸುದೀರ್ಘ ಕಾರ್ ಪ್ರಯಾಣ. ಅತ್ತ ಇತ್ತ ಎಲ್ಲ ಕಡೆ ಮರಳು… ಮರಳು… ಆಗಾಗ ಉದ್ದನೆಯ ಊರುಗಳ ದಾಟಿ ಹಸಿರು ಕಣ್ಣಿಗೆ ಬಿತ್ತು. ಆತನ ಮನಸ್ಸು ದಣಿವಾರಿಸಿಕೊಳ್ಳುವಷ್ಟರಲ್ಲಿ ಕಾರ್ ವೇಗವಾಗಿ ಓಡುತ್ತ ಮರುಭೂಮಿಯ ಸೀಳಿ ಹಸಿರಿನ ತಾಣದಲ್ಲಿ ನಿಂತಿದೆ. ಅದು ಆತ ಕೆಲಸ ಮಾಡಬೇಕಾಗಿರುವ ವರ್ಕ್ ಸ್ಟೇಷನ್. ಅಕ್ಕಪಕ್ಕ ಊರುಗಳಿರಲಿ ಮನೆಗಳ ವಾಸನೆಯೇ ಇಲ್ಲ. ಖರ್ಜೂರ, ತರಕಾರಿ ಬೆಳಯಲ್ಪಡುವ ಭೂಮಿ. ಮರುಭೂಮಿಯ ನಡುವಲ್ಲಿ ನೀರು ಚಿಮ್ಮುತ್ತಿದ್ದ ತಾಣ. ತೋಟಕ್ಕಂಟಿಕೊಂಡಂತೆ ಒಂಟೆ, ಕುರಿ, ಹಸುಗಳ ಕಟ್ಟಿ ಹಾಕಿದ್ದ ಜಾಗ. ಫಾರಿನ್ ಕನಸಲ್ಲಿ ಬಂದ ಈ ಹುಡುಗ ಕೂಗಿಕೊಂಡು ಅಳುವಷ್ಟು ನಡುಗಿ ಹೋಗಿದ್ದಾನೆ. ಏಜೆಂಟ್ ಹೇಳುತ್ತಿದ್ದ ಮಾತುಗಳು ಕಿವಿಯೊಳಗೆ ಸುತ್ತುತ್ತ ಕೋಪವ ಹುಟ್ಟಿಸುತ್ತಿತ್ತು. ಅಲ್ಲಿ ನರ ಮನುಷ್ಯರೆಂದರೆ ಇಬ್ಬರೆ: ಇವನು ಮತ್ತು ಇವನಂತೆ ಕೆಲಸ ಮಾಡಲು ಬಂದಿದ್ದ ಈಜಿಪ್ಟ್ ದೇಶದ ವ್ಯಕ್ತಿ, ಇವರುಗಳಿಗೆ ವಾರಕ್ಕಾಗುವಷ್ಟು ಊಟವನ್ನು ನೀಡಿ ಹೋಗುತ್ತಿದ್ದ ಸೌದಿ ಕಫೀಲ್ ಮೂರನೆಯ ವ್ಯಕ್ತಿ.

ಮರುಭೂಮಿಯ ನಡುವಿನ ಆ ಕಾಡಲ್ಲಿ ಬದುಕಲಾರದೆ ಚಡಪಡಿಸಿ ಒಂದು ದಿನ ಈಜಿಪ್ಟ್ ನವನ ಸಹಾಯದಿಂದ ಲಾರಿ ಹತ್ತಿ ದೂರದ ಪಟ್ಟಣಕ್ಕೆ ಹೊರಟುಬಿಟ್ಟ. ತಿಂಗಳುಗಳಗಟ್ಟಲೆ ಸರಿಯಾಗಿ ಊಟ ಮಾಡದ, ತನ್ನ ನೋವನ್ನು ಹಂಚಿಕೊಳ್ಳಲಾಗದ ಅಸಹಾಯಕತೆಗಳೆದುರು ಕಫೀಲ್ ಬಳಿ ಇದ್ದ ತನ್ನ ಪಾಸ್ ಪೋರ್ಟ್ ದೊಡ್ಡದಾಗಿ ಕಾಣಲಿಲ್ಲ. ಸಾಲ ಸೋಲ ಮಾಡಿ ಬಂದ ನಿಮಿಷಗಳನ್ನು ಹೇಗೋ ಗೆದ್ದು ಬಿಡುವ ಧೈರ್ಯದಲ್ಲಿ ಈತ ವಿದೇಶದ ಮಣ್ಣಲ್ಲಿ ಬದುಕ ಒತ್ತೆಯಿಟ್ಟ. ಪೋಲಿಸರ ಕಣ್ತಪ್ಪಿಸಿ ಮೂರು ವರ್ಷ ಲಾಂಡ್ರಿಯಲ್ಲಿ ಕೆಲಸ ಮಾಡಿ ಸಾಲವ ತೀರಿಸುವಷ್ಟು ದುಡಿದು ಕಳ್ಳ ಪಾಸ್ ಪೋರ್ಟಲ್ಲಿ ಊರಿಗೆ ಹೋಗುವ ತಯಾರಿ ನಡೆಸುತ್ತಿದ್ದ. “ಸಾರ್, ಮುಂದಿನ ವರ್ಷ ದುಬಾಯಿಗೆ ಹೋಗಿಬಿಡುತ್ತೇನೆ. ದುಬಾಯಿ ದುಡಿಯೋರ ಸ್ವರ್ಗ ಸಾರ್, ಈ ಸೌದಿ ತರ ಅಲ್ಲ…” ಎಂದು ಲಗುಬಗೆಯಿಂದ ಓಡಾಡುತ್ತಿದ್ದ. “ದುಬಾಯಿಯಲ್ಲೂ ನಿನ್ನ ಥರ ನಲುಗಿದ ವ್ಯಕ್ತಿ ಖಂಡಿತ ಇರುತ್ತಾನೆ, ನಿನ್ನ ಥರ ಅವನು ಮಜ್ರಾದಲ್ಲಿ ಕಷ್ಟಪಡದಿದ್ದರೂ ಬೇರೆ ಥರ ನೋವ ಅನುಭವಿಸುತ್ತ ಸುಳ್ಳು ಪಾಸ್ ಪೋರ್ಟಲ್ಲಿ ಉಸಿರಾಡುತ್ತಿರುತ್ತಾನೆ, ಗೆಳಯ” ಎಂದಿದ್ದೆ. ಮೊನ್ನೆ ಬಜಪೆಯಲ್ಲಿ ಬಿದ್ದು ಸುಟ್ಟು ಹೋದ ವಿಮಾನದಲ್ಲಿ ಹೀಗೆ ಸುಳ್ಳು ಪಾಸ್ ಪೋರ್ಟಲ್ಲಿ ಸಂಚರಿಸಿದ ವ್ಯಕ್ತಿಗಳಿರುವುದ ಕೇಳಿ ತುಂಬಾ ನೋವಾಯ್ತು. ಈ ಒಂದು ಕಾರಣಕ್ಕೆ ಸುಳ್ಳು ಪಾಸ್ ಪೋರ್ಟಿಗರ ಮನೆಯವರು ಅನುಭವಿಸಲಿರುವ ಸಂಕಟ, ಅವಮಾನ, ನೋವುಗಳ ನೆನೆಸಿ ಕುಗ್ಗಿ ಹೋದೆ. ಆ ಅಪಘಾತದಲ್ಲಿ ಇತರರಂತೆ ಇವರೂ ಮಡಿದು ಹೋದರು. ಸುಳ್ಳು-ಸತ್ಯಗಳು ಸಾವಿನೆದುರು ಸಮಾನ. ಆದರೆ ಸತ್ತು ಹೋದವರ ಮನೆಯವರಿಗೆ ನೀಡುವ ಪರಿಹಾರದ ಹಣ ಈ ಸುಳ್ಳು ಪಾಸ್ ಪೋರ್ಟಿಗರಿಗೆ ಸಿಗುವುದೆ ಎಂಬ ಆತಂಕ ನನ್ನನ್ನು ಕಾಡುತ್ತಿದೆ. ಸತ್ತ ಸುಳ್ಳು ಪಾಸ್ ಪೋರ್ಟಿಗರಲ್ಲಿ ಹೆಚ್ಚಿನವರು ಖಂಡಿತ ಬದುಕ ನೂಕಲು ಸುಳ್ಳನ್ನು ಸೃಷ್ಟಿಸಿಕೊಂಡು ಉಸಿರಾಡುತ್ತದ್ದವರೇ ಆಗಿರುತ್ತಾರೆ ಎನ್ನುವುದರಲ್ಲಿ ನನಗೆ ಅನುಮಾನಗಳಿಲ್ಲ. ಬಡತನ, ಹಿಂಸೆ, ನೋವುಗಳ ಜಲಪಾತದಲಿ ದಿನನಿತ್ಯ ಮೀಯುವ ಜನ ಅವರು. ಕಾನೂನಿಗೆ ಇದು ಮನದಟ್ಟಾಗಿ ಅವರ ಮನೆಯವರುಗಳಿಗೂ ಪರಿಹಾರ ಸಿಗುವಂತಾಗಲಿ ಎಂಬುದು ನನ್ನಂತಹವನ ಆಸೆ ಮತ್ತು ಬೇಡಿಕೆ. ಇದನ್ನು ಓದಿದ ಕೆಲವರಾದರೂ ಆ ಮನೆಯವರುಗಳಿಗೆ ಸಹಕರಿಸುವಂತಾದರೆ ಈ ಬರಹ ಸಾರ್ಥಕವಾಗುತ್ತದೆ. ನನ್ನಿಂದ ಅದು ಆಗದಿರುವ ನನ್ನ ಅಸಹಾಯಕತೆಗೆ ತೀವ್ರ ಬೇಸರವಾಗುತ್ತಿದೆ.