”ಮುಖ ತಂತಾನೇ ಅರಳಿ ತುಟಿಗಳು ಹಿಗ್ಗಿ ಆನಂದದಲ್ಲಿ ನಾನು ಹೂವಾಗಿಹೋದೆ. ಓಡಿ ಸೀರೆಯ ತೆಳು ಪದರಗಳು ಮುಚ್ಚಿಟ್ಟಿದ್ದ ಅವಳ ಹಾಲುಬಿಳಿ ತೊಡೆಯ ಕೆಳಗಿನ ಮಂಡಿಚಿಪ್ಪುಗಳ ಮಧ್ಯೆ ನನ್ನತಲೆ ಅಡಗಿಸಿಟ್ಟು ಮುಖ ಮುಚ್ಚಿಕೊಂಡೆ. ಅವಳ ಸೀರೆಯ ಅತ್ತರಿನ ಆ ಮಾಮೂಲಿ ಹಳೇ ಘಮವು ನನ್ನ ತಬ್ಬಲಿತನವನ್ನು ಕ್ಷಣದಲ್ಲಿ ದೂರಾಗಿಸಿ ನೆತ್ತಿಗೇರಿತು. ನಾನು ಆಘ್ರಾಣಿಸುತ್ತಲೇ ಧ್ಯಾನಸ್ಥಳಾದೆ. ಅವಳ ಮೃದು ನೀಳ ಬೆರಳುಗಳ ಅಂಗೈ ನನ್ನ ಬೆನ್ನು ಬಳಸಿ ತಬ್ಬಿ ಹಿಡಿದಿತ್ತು. ಆ ಅಪ್ಪುಗೆ ಅಮ್ಮನ ಅಪ್ಪುಗೆಗಿಂತಲೂ ಸುಭದ್ರವಾಗಿಯೂ ಆಪ್ಯಾಯವಾಗಿಯೂ ಕಂಡಿತು”
ಸದ್ದು ಮಾಡಿ ಹ್ಯಾಂಗ ಹೇಳಲಿ?’ ಲೇಖಕಿ ಮಧುರಾಣಿ ಬರೆಯುವ ಹೆಣ್ಣೊಬ್ಬಳ ಅಂತರಂಗದ ಪುಟಗಳ ಮೂರನೆಯ ಕಂತು.

 

ನೀರವರಾತ್ರಿ ಕಳೆದು ಬೆಳಗಾಗಿತ್ತು. ಅಡುಗೆ ಮನೆಯಲ್ಲಿ ಏನೋ ಕಲರವ. ನೀನು ಬಂದಿರಬಹುದೆಂಬ ಊಹೆಗೇ ಪುಳಕಗೊಂಡು ಕಣ್ಣುಜ್ಜುತ್ತಾ ಓಡಿಬಂದೆ. ಉದುರುತ್ತಿದ್ದ ಚಡ್ಡಿಯನ್ನು ಎಡಗೈಲಿ ಎತ್ತಿಹಿಡಿದು ಒಂದು ಕೈಚಾಚಿ ‘ಅಮ್ಮಾ…’ ಅಂತ ಒಂದೇ ಸಮನೆ ಕೂಗಹತ್ತಿದೆ. ಕಟ್ಟೆ ಮುಂದೆ ಬಿಳಿಪಂಚೆಯನ್ನು ಎತ್ತಿಕಟ್ಟಿದ್ದ ಬೋಳು ಮೊಳಕಾಲುಗಳ ದರುಶನವಾಗಿ ಅಪ್ಪನೆಂದು ಅರ್ಥವಾಗಿ ಸುಮ್ಮಗೆ ಸದ್ದಿಲ್ಲದೇ ವಾಪಸ್ ಓಡಿಬಂದೆ. ಇನ್ನು ಬಚ್ಚಲು ನೋಡಿದ ಶಾಸ್ತ್ರ ಮಾಡದಿದ್ದರೆ ಅಜ್ಜನ ಬೈಗುಳದ ನೆನಪಾಗಿ ಓಡಿ ಬಚ್ಚಲು ಸೇರಿ ಬಾಗಿಲು ಹಾಕಿಕೊಂಡೆ. ನೆಮ್ಮದಿಯಾಗಿ ಆಕಳಿಸುತ್ತಾ ಕುಕ್ಕುರುಗಾಲಲ್ಲಿ ಕೂತೇ ಇದ್ದವಳಿಗೆ ಹಾಗೇ ಜೋಂಪು ಹತ್ತಿ ಬೀಳುವಂತಾಯಿತು.
“ಚುಮ್ಮೀ.. ಒಳಗಿದೀಯಾ ಕಂದಾ? ಓಮಾತಾ ಇದೀ..?”

ಕೂಗು ಕೇಳಿ ತಟಸ್ಥಳಾದೆ..! ಹೌದು… ಅದು ಅಬಚಿಯೇ…! ಒಳಗೆ ಏನೂ ಮಾಡದೇ ಸುಮ್ಮನೇ ಕೂತಿದ್ದೆನಾಗಿ ಧಡಕ್ಕನೆದ್ದು ಚಡ್ಡಿ ಏರಿಸಿಕೊಂಡು ದಡಬಡ ಕಾಲು ತೊಳೆದು ಚೊಂಬು ಬಕೀಟಿಗೆಸೆದು ಹಿಮ್ಮಡಿಯೆತ್ತಿ ಕಷ್ಟದಿಂದ ಚಿಲುಕ ಸಡಿಲಿಸಿದೆ. ಹೌದು, ನಿಜವಾಗಿಯೂ ಅವಳೇ..! ಮುಖ ತಂತಾನೇ ಅರಳಿ ತುಟಿಗಳು ಹಿಗ್ಗಿ ಆನಂದದಲ್ಲಿ ನಾನು ಹೂವಾಗಿಹೋದೆ. ಓಡಿ ಸೀರೆಯ ತೆಳು ಪದರಗಳು ಮುಚ್ಚಿಟ್ಟಿದ್ದ ಅವಳ ಹಾಲುಬಿಳಿ ತೊಡೆಯ ಕೆಳಗಿನ ಮಂಡಿಚಿಪ್ಪುಗಳ ಮಧ್ಯೆ ನನ್ನತಲೆ ಅಡಗಿಸಿಟ್ಟು ಮುಖ ಮುಚ್ಚಿಕೊಂಡೆ. ನನ್ನ ಕೈಗಳೆರಡೂ ಅವಳ ಮೊಳಕಾಲುಗಳನ್ನು ಸುತ್ತುವರೆದು ಗಟ್ಟಿ ಹಿಡಿದಿದ್ದವು. ಅವಳ ಸೀರೆಯ ಅತ್ತರಿನ ಆ ಮಾಮೂಲಿ ಹಳೇ ಘಮವು ನನ್ನ ತಬ್ಬಲಿತನವನ್ನು ಕ್ಷಣದಲ್ಲಿ ದೂರಾಗಿಸಿ ನೆತ್ತಿಗೇರಿತು. ನಾನು ಆಘ್ರಾಣಿಸುತ್ತಲೇ ಧ್ಯಾನಸ್ಥಳಾದೆ. ಅವಳ ಮೃದು ನೀಳ ಬೆರಳುಗಳ ಅಂಗೈ ನನ್ನ ಬೆನ್ನು ಬಳಸಿ ತಬ್ಬಿ ಹಿಡಿದಿತ್ತು. ಆ ಅಪ್ಪುಗೆ ಅಮ್ಮನ ಅಪ್ಪುಗೆಗಿಂತಲೂ ಸುಭದ್ರವಾಗಿಯೂ ಆಪ್ಯಾಯವಾಗಿಯೂ ಕಂಡಿತು.

ಅಬಚಿ (ನನ್ನ ಚಿಕ್ಕಿ, ಮಾತು ಸರಿಯಾಗಿ ಬರದಾಗ ಅಬಚಿ ಅನ್ನಲು ಸುರುವಾದದ್ದು, ನಂತರವೂ ಮುಂದುವರೆದಿತ್ತು.) ಅಮ್ಮನ ಸ್ವಂತ ತಂಗಿಯೇ ಆದರೂ ಅಮ್ಮನಿಗೂ ಇವಳಿಗೂ ಬಹಳಷ್ಟು ವ್ಯತ್ಯಾಸಗಳಿದ್ದವು. ಅಮ್ಮ ಯಾವಾಗಲೂ ಹುಚ್ಚು ಖೋಡಿ, ಸಿಕ್ಕಾಪಟ್ಟೆ ಎಮೋಷನಲ್ ಹಾಗೂ ಬಹಳ ಸಿಟ್ಟಿನವಳು, ಆದರೂ ಬೇಗ ತಣಿಯುವಳು ಕೂಡಾ. ಅಬಚಿ ಹಾಗಲ್ಲ, ಅವಳ ಮಾತು ಹೂವಿನಷ್ಟು ಮೃದು, ಆದರೆ ಹೃದಯ ಕಠೋರ, ಖಡ್ಗದಷ್ಟು ಹರಿತ. ಬೇಜಾರಾದರೋ, ಸಿಟ್ಟು ಬಂದರೋ ಎಂದೂ ಎದುರುಬದುರು ಯಾರನ್ನೂ ಬೈದವಳಲ್ಲ, ಅಂದವಳಲ್ಲ. ಬೇರೆಯವರೆದುರು ಅತ್ತವಳಂತೂ ಅಲ್ಲವೇಅಲ್ಲ. ಹಾಗೆಂದು ಮೃದು ಸ್ವಭಾವದ ಪಾಪದ ಹುಡುಗಿ ಎಂದು ತಪ್ಪೆಣಿಸಬೇಡಿ! ಅವಳನ್ನೇನಾದರೂ ಅಂದರವ ಮೇಲೆ ಸಿಟ್ಟು ತೀರಿಸಿಕೊಳ್ಳದೇ ಬಿಟ್ಟವಳೇ ಅಲ್ಲ ಅವಳು. ಒಂಥರಾ ನಾಗಿಣಿಯ ಹಾಗೆ! ಸೌಂದರ್ಯವೂ ಸಹಾ… ಅಪ್ರತಿಮ ಸುಂದರಿ. ಇಡೀಒಟ್ಟು ಮನೆಯಲ್ಲಿ ಅಜ್ಜನ ಮಾತಿಗೆ ಎದೆಸೆಟೆಸಿ ಎದುರೂ ಆಡದೇ, ತಲೆಯಾಡಿಸಿ ಒಪ್ಪಿಗೆಯೂ ಕೊಡದೇ ಮೌನವಾಗಿ ಪ್ರತಿಭಟಿಸಿ ಬೇಡವೆಂದರೂ ಕಾಲೇಜು ಸೇರಿದ್ದಳಂತೆ. ಸಂಜೆ ಮನೆಪಾಠ ಮಾಡಿ ದುಡ್ಡು ಹೊಂದಿಸಿ ಕಾಲೇಜು ಓದುತ್ತಿದ್ದಳಂತೆ. ಅಮ್ಮ ಅವಳನ್ನು ಯಾವಾಗಲೂ ‘ವಿನಯೋಲ್ಲಂಘನೆಯ ಕೂಸು’ ಅನ್ನುವಳು ಅಥವಾ ಮುದ್ದಿನಲ್ಲಿ ‘ನಮ್ಮನೆಯ ಹೆಣ್ಣು ಗಾಂಧಿ’ ಅಂತ ಕೆನ್ನೆತಟ್ಟಿ ನಗಾಡುವಳು. ಈಗ ನನಗೆ ಅವಳು ಬಂದದ್ದು ಹಿರಿದೇ ಬಲ ಬಂದಂತಾಗಿತ್ತು. ಹಲವೊಮ್ಮೆಅಮ್ಮನು ಎಷ್ಟೋ ಹೆದರಿ ನಡುಗುತ್ತಿದ್ದ ವಿಚಾರಗಳನ್ನು ಅಪ್ಪನ ಬಳಿ ಅವಳು ಏಕಾಏಕಿ “ಹೀಗಾದ್ರೆ ಹೇಗೆ ಭಾವಾ..?” ಅಂತ ನಮ್ಮ ಸಂಸಾರದ ವಿಷಯ ಮಾತಾಡುವಳು. ಅದಕ್ಕೆ ಅಪ್ಪನೂ ಅಮ್ಮನ ಬಳಿ ರೇಗುವಂತೆ ರೇಗದೇ, “ಏನು ಮಾಡೋದು ಪುಟ್ಟಾ, ಸಮಯ ಸಂದರ್ಭ ನೋಡಬೇಡವೇ ನಿಮ್ಮಕ್ಕಾ..? ” ಅಂತ ಅಮ್ಮನ್ನೇ ದೂರುವನಾದರೂ ಪುಂಗಿಯ ದನಿಗೆ ತಲೆಯಾಡಿಸುವ ಹಾವಿನಂತೆ ಮೆತ್ತಗೆ ಮಾತಾಡುತ್ತಾ ಮುಗುಳ್ನಗುತ್ತಿರುವನು. ಅಬಚಿ ಬಂದು ಹೋದ ಕೆಲದಿನ ಮನೆಯಲ್ಲಿ ಶಾಂತಿ ನೆಮ್ಮದಿ ನೆಲಸಿರುತ್ತಿತ್ತು. ಆಮೇಲಿನದು ಮಾಮೂಲಿ ರಾಗ.

ಒಳಗೆ ಏನೂ ಮಾಡದೇ ಸುಮ್ಮನೇ ಕೂತಿದ್ದೆನಾಗಿ ಧಡಕ್ಕನೆದ್ದು ಚಡ್ಡಿ ಏರಿಸಿಕೊಂಡು ದಡಬಡ ಕಾಲು ತೊಳೆದು ಚೊಂಬು ಬಕೀಟಿಗೆಸೆದು ಹಿಮ್ಮಡಿಯೆತ್ತಿ ಕಷ್ಟದಿಂದ ಚಿಲುಕ ಸಡಿಲಿಸಿದೆ. ಹೌದು, ನಿಜವಾಗಿಯೂ ಅವಳೇ..! ಮುಖ ತಂತಾನೇ ಅರಳಿ ತುಟಿಗಳು ಹಿಗ್ಗಿ ಆನಂದದಲ್ಲಿ ನಾನು ಹೂವಾಗಿಹೋದೆ. ಓಡಿ ಸೀರೆಯ ತೆಳು ಪದರಗಳು ಮುಚ್ಚಿಟ್ಟಿದ್ದ ಅವಳ ಹಾಲುಬಿಳಿ ತೊಡೆಯ ಕೆಳಗಿನ ಮಂಡಿಚಿಪ್ಪುಗಳ ಮಧ್ಯೆ ನನ್ನತಲೆ ಅಡಗಿಸಿಟ್ಟು ಮುಖ ಮುಚ್ಚಿಕೊಂಡೆ.

ಅಂದು ಅವಳು ಮೆಲ್ಲಗೆ ನನ್ನ ಕಂಕುಳಿಗೆ ಕೈಹಾಕಿ ಅನಾಮತ್ತು ಎತ್ತಿಕೊಂಡು ಕೆನ್ನೆಗೆ ಮುತ್ತಿಟ್ಟು ಸೊಂಟಕ್ಕೆತ್ತಿಕೊಂಡು ಹೊರನಡೆದಳು. ನಾನೂ ಹಾಗೇ ಅವಳ ಕೆನ್ನೆ ಸವರುತ್ತಾ ‘ಅಬಚೀ ಆವಾಗ ಬಂದೇ..?’ ಎಂದೆ.
“ಆಯ್ ನನ್ನ ಮುದ್ದೂ.. ಮೊನ್ನೆ ಮೊನ್ನೆ ಊರಿಗೆ ಬಂದಾಗ ಅಬತೀ ಅಬತೀ ಅಂತಿದ್ದೋಳು ಈಗ ನೀಟಾಗಿ ಅಬಚಿ ಅಂತಿದ್ದೀ..? ಬಾಯಿ ಚೆನ್ನಾಗಿ ಹೊರಳ್ತಿದೆಯಾ ಕಂದಾ? ಎಷ್ಟು ದೊಡ್ಡೋಳಾದೆ! ಇನ್ನೇನು ಚಿಂತೆ ನಿನ್ನಮ್ಮನಿಗೆ.” ಅಂತೆಲ್ಲಾ ಏನೇನೋ ಹೇಳಿ ಮುದ್ದಿಸಿದಳು.

ಅವಳ ಕೊರಳಿಗೆ ಕೈ ಹಾರವಾಗಿಸಿ ಸ್ಮೈಲೋ ಸ್ಮೈಲು ನಂದು. ಹಣೆಗೆ ಹಣೆ ಕುಟ್ಟಿಸಿ ‘ಢೀಢೀಢಿಕ್ಕೀ..’ ಕೊಟ್ಟು ನಾನು ಬೆಳೆದು ದೊಡ್ಡೋಳಾಗಿರೋದನ್ನ ಇನ್ನಷ್ಟು ಪ್ರೂವ್ ಮಾಡಿದೆ. ಇಬ್ಬರೂ ಹಿತ್ತಿಲಿಗೆ ಹೋದೆವು. ಹಿತ್ತಿಲ ಸೀಬೇಮರ ಮೈತುಂಬಾ ಹಣ್ಣು ಬಿಟ್ಟು ನಾಚಿ ನಿಂತಿತ್ತು. ಅವಳಿಗೆ ನಮ್ಮ ಹಿತ್ತಿಲ ಚಂದ್ರಸೀಬೆಯೆಂದರೆ ಪಂಚಪ್ರಾಣ. ‘ಎತ್ತಿ ಹಿಡಿ ಅಬಚೀ, ಕಿತ್ಕೊತ್ತೀನೀ ನಿಂಗೇ…’ ಅಂದೆ. ಅವಳು ನಕ್ಕಳು. ನಗುವಿನಲ್ಲಿ ಯಾಕೋ ದೇವತೆಯ ಹಾಗೆ ಕಂಡಳು. ಅವಳ ಸುಂದರ ದಂತಪಂಕ್ತಿ, ತುಸು ಹೆಚ್ಚೇ ದಪ್ಪವಿದ್ದ ಕೆಂಪು ಕೆಳದುಟಿ, ಸಡಿಲಾಗಿಜಡೆ ಹಾಕಿದ್ದ ನೀಳ ದಪ್ಪಕಪ್ಪುಕೂದಲು, ಕೈಬೆರಳಿನ ಉಗುರಿಗೆ ಸದಾ ಹತ್ತಿರುತ್ತಿದ್ದ ಅವಳಿಷ್ಟದ ಈರುಳ್ಳಿ ಪೊರೆಯ ಬಣ್ಣದ ನೇಲ್ ಪಾಲಿಷ್, ಎಲ್ಲಕ್ಕೂ ಮಿಗಿಲಾದ ಅವಳ ಎತ್ತರದ ಸಣ್ಣ ಸುಳಿಸೊಂಟದ ಹಾಲಿನ ಬೊಂಬೆಯಂಥಾ ನಿಲುವು… ಇವೆಲ್ಲಾ ಸೇರಿ ನನ್ನ ಮನದಲ್ಲಿ ಅವಳೆಂದರೆ ಕಷ್ಟವೆಂದಾಗ ದೇವಲೋಕದಿಂದ ನನಗಾಗಿ ಧರೆಗಿಳಿವ ದೇವತೆಯೋ ಎಂದು ಭಾಸವಾಗುತ್ತಿತ್ತು. ಅಬಚಿ ಬಂದಳೆಂದರೆ ಒದಗಿದ್ದ ಎಲ್ಲ ಸಂಕಷ್ಟ ಪರಿಹಾರ ಎಂಬಂತಿತ್ತು.

ನಾನು ದೊಡ್ಡವಳಾದ ಮೇಲೆ ಎಷ್ಟೋ ಬಾರಿ ಯೋಚಿಸಿದ್ದೇನೆ, ಒಂಭತ್ತು ಜನ ಸೋದರಮಾವಂದಿರಿದ್ದ ದೊಡ್ಡ ತವರು ನಿನ್ನದು. ಆಜಾನುಬಾಹು, ವೀರಾಗ್ರಣಿ, ಸುತ್ತ ಹತ್ತೂರು ‘ಸ್ವಾಮೋರಾ.. ಅಯ್ಯಾ..’ ಅನ್ನಿಸಿಕೊಳ್ಳುತ್ತಿದ್ದ ತಾತ- ಒಂದು ಪೆಟ್ಟು ಎರಡು ತುಂಡು ಎಂಬಂತೆ ನಿಜಾಯಿತಿಯಿಂದ ಬಾಳಿದವನು. ಆದರೂ ಯಾಕೆ ಏನಾದರೂ ವಿಶೇಷವಿದ್ದಲ್ಲಿ ತುಂಬಾ ಸ್ನಿಗ್ಧವಾಗಿ ಮಾತಾಡುವ ಆರನೇ ಮಾವನೂ, ಮುಗ್ಧಳಂತೆ ಕಂಡರೂ ಕಾಣುವಷ್ಟು ಮುಗ್ಧಳಲ್ಲದ ಈ ಅಬಚಿಯೂ ನಮ್ಮ ಮನೆಗೆ ಬರುವರು? ಮಿಕ್ಕವರು ಬರುವುದಿಲ್ಲ ಎಂದಲ್ಲ. ಆದರೆ ವಿಶೇಷ ಸಂದರ್ಭಗಳಲ್ಲಿ ಇವರಿಬ್ಬರು ಮಾತ್ರ ಬರುವರು. ಒಮ್ಮೊಮ್ಮೆ ಆರನೇ ಮಾವನ ಹೆಂಡತಿ ಸುಮತಿ ಅತ್ತೆಯೂ ಬರುವಳು. ಅವರೆಲ್ಲಾ ಅಜ್ಜನ ಮುಂದೆ ಅಪ್ಪನ ಮುಂದೆ ಕೈಕಟ್ಟಿ ನಿಂತು ಬೈಸಿಕೊಳ್ಳುವರು. ಅಜ್ಜನು –
“ಕರಕೊಂಡ್ಹೋಗಿ ನಿಮ್ಮ ಹುಡುಗೀನ. ಒಂಚೂರಾದರೂ ಒಪ್ಪವೇ ಓರಣವೇ… ಅದೇನೂಂತ ಸಾಕಿ ಬೆಳೆಸಿ ನಮ್ಮನೆ ಹಾಳು ಮಾಡೋಕೆ ಕಟ್ಟಿಕೊಟ್ರೋ…” ಹೀಗೇ ಏನೇನೋ ಹೇಳಿ ನಿನ್ನನ್ನು ಬೈಯ್ಯುವನು.

ನೀನು ಮರೆಯಲ್ಲಿ ನಿಂತು ಕಣ್ಣೀರು ಗರೆಯುವೆ. ನಾನು ಬೆಪ್ಪಾಗಿ ನಿಂತು ಇದೆಲ್ಲಾ ನೋಡುವೆ. ಆಗ ಮಾವನೂ ಅಬಚಿಯೂ ಏನೇನೋ ಹೇಳುವರು. ಏನೇನೋ ಮಾತಾಡಿ ಅಜ್ಜನನ್ನು ಸಮಾಧಾನಪಡಿಸುವರು. ಸುಮಾರು ದಿನಪೂರ್ತಿ ಈ ರಗಳೆಯೇ ಆಗಿ ಕಡೆಗೆ ಹೊತ್ತು ಮುಳುಗುವ ಹೊತ್ತಿಗೆ ಮತ್ತೆ ನೀನೇ ಎಲ್ಲರಿಗೂ ಕಾಫಿ ಕೊಡುವೆ. ಈ ಪುರಾಣ ಮುಗಿದರೆ ಮುಗೀತು ಇಲ್ಲದಿದ್ದರೆ ನಾಳೆಗೂ ಸಾಗಿತು. ಆದರೆ ಬಂದವರಿಬ್ಬರೂ ಇದೆಲ್ಲಾ ಮುಗಿಯೋವರೆಗೂ ಇದ್ದು ಹೊರಡುವರು. ಆಮೇಲಾಮೇಲೆ ನನಗೇ ಎಲ್ಲವೂ ತಿಳಿಯುವ ಹೊತ್ತಿಗೆ ವೀರಾಗ್ರಣಿತಾತನ ಅವಿವೇಕವೂ ಹಾಗೂ ದುಡುಕು ಸ್ವಭಾವವೂ, ದೊಡ್ಡ ಮಾವನ ಜಾಣತನವೂ ನಯಗಾರಿಕೆಯೂ ಅರಿವಾಗಿ ನಗು ಬರುತ್ತಿತ್ತು. ಇದನ್ನು ಆಮೇಲೆ ಮಾತಾಡುವ. ಇದೊಂದು ಸುವಿಶಾಲ ಹಾಗೂ ಒಗಟಿನಂತಹ ನಿಗೂಢ ವಿಚಾರ. ನಿನ್ನ ತವರೆಂಬ ಒಂದು ಅಚ್ಚರಿಯೇ ಇಂದಿಗೂ ನನ್ನ ಬದುಕಿನ ಬಹುದೊಡ್ಡ ದಂತಕಥೆಯಾಗಿ ಉಳಿದುಹೋಗಿದೆ.

ಅಂದು ಅವಳು ಮೆಲ್ಲಗೆ ನನ್ನ ಕಂಕುಳಿಗೆ ಕೈಹಾಕಿ ಅನಾಮತ್ತು ಎತ್ತಿಕೊಂಡು ಕೆನ್ನೆಗೆ ಮುತ್ತಿಟ್ಟು ಸೊಂಟಕ್ಕೆತ್ತಿಕೊಂಡು ಹೊರನಡೆದಳು. ನಾನೂ ಹಾಗೇ ಅವಳ ಕೆನ್ನೆ ಸವರುತ್ತಾ ‘ಅಬಚೀ ಆವಾಗ ಬಂದೇ..?’ ಎಂದೆ.
“ಆಯ್ ನನ್ನ ಮುದ್ದೂ.. ಮೊನ್ನೆ ಮೊನ್ನೆ ಊರಿಗೆ ಬಂದಾಗ ಅಬತೀ ಅಬತೀ ಅಂತಿದ್ದೋಳು ಈಗ ನೀಟಾಗಿ ಅಬಚಿ ಅಂತಿದ್ದೀ..? ಬಾಯಿ ಚೆನ್ನಾಗಿ ಹೊರಳ್ತಿದೆಯಾ ಕಂದಾ? ಎಷ್ಟು ದೊಡ್ಡೋಳಾದೆ! ಇನ್ನೇನು ಚಿಂತೆ ನಿನ್ನಮ್ಮನಿಗೆ.” ಅಂತೆಲ್ಲಾ ಏನೇನೋ ಹೇಳಿ ಮುದ್ದಿಸಿದಳು.

ಅಬಚಿಗೆ ಒಂದು ಹಣ್ಣು ಕಿತ್ತುಕೊಟ್ಟಾದ ಮೇಲೆ ಇಬ್ಬರೂ ಏನೇನೋ ಹರಟುತ್ತಾ ಒಳಬಂದೆವು. ಹಲ್ಲು, ಸ್ನಾನ ಎಲ್ಲ ಮುಗಿಸಿ ನನಗೆ ತಿಂಡಿ ತಿನ್ನಿಸಿ ಸ್ನಾನಕ್ಕೆ ಕಟ್ಟಿದ್ದ ‘ಸನ್ಯಾಸಿ ಕಟ್ಟು’ (ಮಗುವಿನ ಸ್ನಾನವಾದ ಮೇಲೆ ಮೈತುಂಬಾ ಬಟ್ಟೆ ಸುತ್ತಿ ಕುತ್ತಿಗೆ ಮೇಲೊಂದು ಗಂಟು ಬಿಗಿವ ರೀತಿ) ಬಿಚ್ಚಿ ಬಟ್ಟೆ ಹಾಕುವಾಗ ಅಬಚಿ ಮೆಲ್ಲನೆ ಹೇಳಿದಳು, “ಮುದ್ದೂ, ನಿಂಗೊತ್ತಾ ಅಮ್ಮ ಆಸ್ಪತ್ರೇಲಿದಾಳೆ. ಈಗ ನಾವು ಅವಳನ್ನ ನೋಡೋಕೆ ಹೋಗೋಣ.” ಅವಳು ‘ಮುದ್ದೂ’ ಎಂದು ರಾಗ ಮಾಡಿ ಹೇಳುವಾಗಲೇ ಇದೇನೋ ಅಮ್ಮನ ವಿಷಯ ಇರಬಹುದೆಂದು ಊಹಿಸಿ ಗಂಭೀರವಾದೆ. ಏನಾದರೂ ಮಾತಾಡುವಾಗ ತಮಾಷೆ ಯಾವುದು, ಗಹನವಾದ ವಿಚಾರ ಯಾವುದು ನನಗೆ ತಕ್ಷಣ ತಿಳಿದುಬಿಡುತ್ತಿತ್ತು. ಆಗ ನಾನು ಗಂಭೀರಳಾಗುತ್ತಿದ್ದೆ. ನನ್ನ ಈ ಗುಣವು ಅಬಚಿಗೆ ಬಹಳ ಇಷ್ಟವಾಗುತ್ತಿತ್ತು. ನಾನು ಬೆಳೆದು ಅವಳಂತೆಯೇ ಬುದ್ಧಿವಂತ ಹುಡುಗಿಯಾಗುವೆನೆಂದು ಅವಳು ಆಗಾಗ ನಿನ್ನ ಬಳಿ ಹೇಳುವುದೂ, ಆಗೆಲ್ಲಾ ನೀನು ಕಣ್ಣಂಚನ್ನು ಸೆರಗಲ್ಲಿ ಒರೆಸಿಕೊಳ್ಳುತ್ತಾ “ಏನೋ.. ನನ್ನ ಬದುಕಿನ ಹಾಗಾಗದಿದ್ರೆ ಸಾಕು ಕಣೇ.” ಅನ್ನುವುದೂ ನಡೆಯುತ್ತಲೇ ಇರುತ್ತಿತ್ತಲ್ಲಾ, ಆಗೆಲ್ಲಾ ನಾನು ಅಬಚಿಯಂತಾಗುವೆನೆಂಬ ಊಹೆಯೇ ನನ್ನನ್ನು ಪುಳಕಿತಗೊಳಿಸುತ್ತಿತ್ತು. ಈ ಬುದ್ಧಿಗಿದ್ಧಿಯ ವಿಚಾರ ಅರಗುವಷ್ಟು ದೊಡ್ಡವಳಲ್ಲದ ನನಗೆ ಅಬಚಿಯ ಕಾಂತಿ ಸೂಸುವ ಸೌಂದರ್ಯವೇ ಒಂದು ದೊಡ್ಡ ಅಚ್ಚರಿಯಾಗಿತ್ತು. ಅವಳು ಉಡುತ್ತಿದ್ದ ಗಾರ್ಡನ್ ವರೇಲಿಯ ದೊಡ್ಡದೊಡ್ಡ ಹೂಗಳ ಮೈಕಾಣದ, ಆದರೂ ತೆಳ್ಳನೆ ಮೈಗೇ ಕಚ್ಚಿಕೊಳ್ಳುವ ಸೀರೆಗಳೂ ನನ್ನ ಅಚ್ಚರಿಯ ಒಂದು ಭಾಗವಾಗಿದ್ದವೆಂದು ನನಗೆ ಇತ್ತೀಚೆಗೆ ತಿಳಿಯುತ್ತಿದೆ. ಇದಕ್ಕೆಲ್ಲಾ ಕಲಶವಿಟ್ಟಂತಿದ್ದ ಇಂಪಾದ ಅವಳ ಕಂಠಸಿರಿ! ಇಂತಿಪ್ಪ ಭೂಲೋಕದ ಸೌಂದರ್ಯ ಸಿರಿಗೆ ನಾನು ಉತ್ತರಾಧಿಕಾರಿಯೋ ಎಂಬ ಗರ್ವವೂ ತಲೆಗೆ ಹತ್ತಿದ್ದು ಸುಳ್ಳಲ್ಲ. ಅವಳೂ ಸಹಾ ಜತೆಗಿರುವ ಅರೆಗಳಿಗೆಯೂ ನನ್ನ ಬಿಟ್ಟಿರದೇ ಸೊಂಟಕ್ಕೆ ಹತ್ತಿಸಿಕೊಂಡೇ ಓಡಾಡುವಳು, ನಗುವಳು, ಮುದ್ದು ಮಾಡುವಳು. ಜೊತೆಗೆ ಹೊಸಹೊಸ ಬಟ್ಟೆಗಳು, ಶೂಗಳು, ಹೇರ್ ಬ್ಯಾಂಡ್ಗಳು-ಹೀಗೆ ನನ್ನ ಬಾಲ್ಯದ ಸಮಸ್ತ ಸಂತಸಗಳ ಜಾತ್ರೆಗೆ ಇವಳೇ ರೂವಾರಿಯಾಗಿದ್ದಳು.

ಅಂತಹ ಅಬಚಿಯೂ ಇಂದೇಕೋ ಸ್ವಲ್ಪಗಂಭೀರವಾಗಿಯೂ ಮೌನಿಯಾಗಿಯೂ ಇದ್ದಳು.ಆಸ್ಪತ್ರೆಗೆ ಹೊರಡುವ ಸಮಯ ಹತ್ತಿರವಾದಂತೆ ಅವಳ ಮುಖ ಇನ್ನಷ್ಟು ಮತ್ತಷ್ಟು ಬಿಗಿಯತೊಡಗಿತು. ಅವಳು ಇಂದು ಅಪ್ಪನೊಟ್ಟಿಗೂ ಹೆಚ್ಚು ಮಾತಾಡಲಿಲ್ಲ. ಅಜ್ಜನ ಬಳಿಯೂ ‘ಆಗಲಿ ಮಾವಾ, ಹಾಗೇ ಆಗಲಿ.’ ಅಂದದ್ದನ್ನು ಬಿಟ್ಟು ಹೆಚ್ಚು ವ್ಯವಹರಿಸಲಿಲ್ಲ. ಇಬ್ಬರೂ ಆಸ್ಪತ್ರೆಗೆ ಹೊರಟೆವು. ಆಟೋ ಹತ್ತಲೆಂದು ಹೊರಬಂದಾಗ ಸಂಧ್ಯಾ ಮಾಮಿ ಕಂಡು ಅಬಚಿಯೊಟ್ಟಿಗೆ ಗಹನವಾಗಿ ಏನನ್ನೊ ಮಾತಾಡಿದರು. ಮನೆಯಿಂದಲೇ ಇದನ್ನು ಗಮನಿಸಿದ ಅಪ್ಪ ದಡಬಡನೆ ಬಂದು-
“ಅಯ್ಯೋ, ಮಗು ಕರ್ಕೊಂಡು ಬಿಸಿಲಲ್ಲಿ ಒಬ್ಬಳೇ ಯಾಕೆ ಹೊರಟೆ? ಅವಳು ಇಲ್ಲಿರಲಿ. ನಾನೇ ಆಮೇಲೆ ಕರ್ಕೊಂಡು ಬರ್ತೀನಿ. ಹೇಗೂ ಮನೇಲಿ ಅಣ್ಣ ಇದಾರೆ, ಬಾ ನಿನ್ನ ಮೊದ್ಲು ಬಿಡ್ತೀನಿ ಆಸ್ಪತ್ರೆಗೆ.” ಅಂದು ಕಾರು ತೆಗೆದೇಬಿಟ್ಟರು. ನಿನಗಾಗಿ ಎಂದೂ ಕಾರು ತೆಗೆಯದ ಅಪ್ಪ ಅಬಚಿಯೋ ಮಾವನೋ ಬಂದಾಗ ಸರಾಗ ಕಾರು ತೆಗೆಯುತ್ತಿದ್ದುದು ಏಕೆಂದು ಇಂದಾದರೂ ಗೊತ್ತಾಗಿದೆಯೇ ಪೆದ್ದೀ ನಿನಗೆ..?

ಯಾಕೋ ಅಬಚಿ ಏನೊಂದೂ ಮಾತಾಡದೇ ‘ಆಮೇಲೆ ಸಿಗ್ತೀನಿ ಸಂಧ್ಯಕ್ಕಾ..’ ಎಂದಷ್ಟೇ ನುಡಿದು “ನಡೀ ಬಂಗಾರ, ಮನೆಗೆ ಬಿಟ್ಟು ಬತ್ತೀನಿ. ಆಮೇಲೆ ಅಪ್ಪನ ಜೊತೆ ಬರುವಿಯಂತೆ.” ಎಂದು ಮನೆಯ ಕಡೆಗೆ ನಡೆಸಿದಳು. ಏನೂ ಅರಿಯದ ಆದರೆ ಅಮ್ಮ ಬೇಕೆಂಬ ಹಂಬಲವೊಂದೇ ಬಲವಾಗಿದ್ದ ಆ ಮುಗ್ಧ ಮನಸಿಗೆ ಅವತ್ತು ಆ ಪೆಟ್ಟು ಬಹು ದೊಡ್ಡದೇ ಆಗಿತ್ತು ಹಾಗೂ ಅಳುವಿಗೂ ಮೀರಿದ ಭಾವದ ಹಿಂದೆ ‘ಯಾಕೆ’ ಎಂಬ ಪದವೊಂದು ತಲೆಯೊಳಗೆ ಜೋರಾಗಿ ಸದ್ದು ಮಾಡುತ್ತಾ ನನ್ನ ಕಾಡಹತ್ತಿತು. ಹಾಗೆ ಎಲ್ಲರಿಗೂ ಇದ್ದಕ್ಕಿದ್ದಂತೆ ನಾನ್ಯಾಕೆ ಭಾರವಾಗಿಬಿಡುತ್ತಿದ್ದೆನೋ ತಿಳಿಯುತ್ತಿರಲಿಲ್ಲ. ಎಲ್ಲ ಸಮಯ ಹಾಳಾಗಿಹೋಗಲಿ, ಈಗ ನಿನ್ನ ನೋಡಲಾದರೂ ನನ್ನ ಕರೆದೊಯ್ಯಬಾರದೇ? ಇವರೆಲ್ಲರಿಗೂ ಅದೇನಾಗಿದೆಯೋ ದೇವರೇ.. ಅಂದುಕೊಳ್ಳುವಷ್ಟರಲ್ಲಿ ನನ್ನ ಮನೆಯೊಳಗೆ ಬಿಟ್ಟು ಅವರಿಬ್ಬರೂ ಹೊರಟಾಗಿತ್ತು. ಇನ್ನು ಅತ್ತು ಪ್ರಯೋಜನವಿಲ್ಲವೆಂದು ತಿಳಿದಿದ್ದರೂ ಕಣ್ಣು ನನ್ನ ಮಾತು ಕೇಳಲಿಲ್ಲ. ಅಜ್ಜನೆದುರು ಮತ್ತೆ ಅಳುವ ಮನಸಿರಲಿಲ್ಲ. ಅಜ್ಜನಿಗೆ ನನ್ನ ಓಲೈಸುವ ಸಹನೆಯಿರಲಿಲ್ಲ. ಓಡಿ ರೂಮಿಗೆ ಹೋಗಿ ಹಾಸಿಗೆಯ ಮೇಲೆ ಬೋರಲು ಬಿದ್ದೆ. ಎಲ್ಲರ ನಿರ್ಲಕ್ಷ್ಯಅಸಡ್ಡೆ ಸಾಕಾಗಿಹೋಗಿತ್ತು. ಇವತ್ತು ಅಬಚಿಯೂ ಯಾಕೆ ಇವರಂತೆಯೇ ಮಾಡಿಬಿಟ್ಟಳು ಎಂಬ ಪ್ರಶ್ನೆ ಬಹುವಾಗಿ ಮನಸಿಗೆ ನಾಟಿತ್ತು. ಇಲ್ಲ, ಹಾಗಿರಲಿಕ್ಕಿಲ್ಲ. ಅಬಚಿ ಅಂಥವಳಲ್ಲ ಎಂದು ನನ್ನನ್ನು ನಾನೇ ಸಮಾಧಾನಿಸುವ ಪ್ರಯತ್ನವೂ ನಡೆಯಿತು. ಕಡೆಗೆ ಈ ದ್ವಂದ್ವ ಸಾಕಾಗಿ ಮಂಪರು ತೂಗಿ ಮಲಗಿ ನಿದ್ರಿಸಿದ್ದು ನನಗೂ ತಿಳಿಯಲಿಲ್ಲ, ಜಗತ್ತೂ ಗಮನಿಸಲಿಲ್ಲ. ನನ್ನ ಬದುಕಿನ ನೀನಿಲ್ಲದ ಮತ್ತೊಂದು ದಿನದ ಸೂರ್ಯ ಪಡುವಣಕ್ಕೆ ರಥ ನಡೆಸಿದ್ದ. ಎದ್ದಾಗ ನೆರಳಿಲ್ಲದ ಬಂಗಾರದ ಬೆಳಕೊಂದು ಬುವಿಯನ್ನಾವರಿಸಿತ್ತು. ಅದನ್ನು ಈ ಜಗತ್ತು ‘ಸಂಜೆ’ ಎನ್ನುವುದು, ಆದರೆ ನಾನು ‘ಬೇಸರ’ ಎಂದು ಮರುನಾಮಕರಣ ಮಾಡಿಕೊಂಡಿದ್ದೆ.

(ಮುಂದುವರಿಯುವುದು)