ನೀವು ಯಾರೊಂದಿಗೆ ಮಾತಾಡದಿದ್ದರೂ ಪರವಾಗಿಲ್ಲ. ಚೆನ್ನಾಗಿ ಓದಿ ಒಳ್ಳೆಯ ಪದವಿ ಪಡೆಯಬೇಕು. ಊರ ಉಸಾಬರಿಗೆ ತಲೆಕೊಡುವುದು ಬಿಟ್ಟು ನಿನ್ನ ಜೀವನ ನೀನು ನೋಡಿಕೋ. ಅವರ ಮನೆಯಲ್ಲಿ ಸಾವಾಗಿದ್ದರೆ ಏನಂತೆ? ನಿನ್ನದೆಷ್ಟೋ ಅಷ್ಟರಲ್ಲಿರು. ಯಾವುದಕ್ಕೂ ಮುನ್ನುಗ್ಗಿ ತಲೆಕೊಡಬೇಡ. ಅಂಟಿಯೂ ಅಂಟದಂತೆ ಇರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಹೆಚ್ಚು ಮಾತಿಲ್ಲದೆ ನಾಜೂಕಾಗಿ ಪರಿಸ್ಥಿತಿಯಿಂದ ಬಿಡಿಸಿಕೊಳ್ಳಬೇಕು. ಹೀಗೆ ತಾನು ಮತ್ತು ತನ್ನ ಹಿತವನ್ನಷ್ಟೇ ಎಣಿಸಬೇಕೆಂಬ ತಲೆಮಾರೊಂದನ್ನು ಸೃಷ್ಟಿಸಿದ ಮೇಲೆ, ನಗರವಾದರೇನು? ಹಳ್ಳಿಯಾದರೇನು?
ಎಸ್. ನಾಗಶ್ರೀ‌ ಅಜಯ್‌ ಬರೆಯುವ “ಲೋಕ ಏಕಾಂತ” ಅಂಕಣದಲ್ಲಿ ಹೊಸ ಬರಹ

ನಮ್ಮನೆಯಲ್ಲಿ ಒಬ್ಬ ‘ಚಿಂಟು’ ಇದ್ದಾನೆ. ಗೋಲ್ಡನ್ ರಿಟ್ರೀವರ್ ನಾಯಿಮರಿ. ಮರಿ ಅಂತ ನಮ್ಮ ಪ್ರೀತಿಗೆ ಹೇಳಬೇಕು. ಅವನು ಈಗ ಮುವ್ವತ್ತೈದು ಕೆಜಿ ತೂಗುವ ಎರಡೂವರೆ ವರ್ಷದ ಮುದ್ದು ಜೀವ. ಬೆಳಿಗ್ಗೆ- ಸಂಜೆ ವಾಕಿಂಗ್, ದಿನಕ್ಕೆ ಮೂರು ನಾಲ್ಕು ಸಲ ಚೆಂಡಾಟ, ಮುದ್ದುಗರೆಯುವುದು ಬಿಟ್ಟರೆ ಅವನು ಅತಿಹೆಚ್ಚು ಇಷ್ಟಪಡುವುದು ನಮ್ಮ ರಸ್ತೆಯ ಪಿಜಿ ಹುಡುಗಿಯರೊಂದಿಗಿನ ಮಾತುಕತೆ‌. ಕರ್ನಾಟಕ, ಆಂಧ್ರ, ಕೇರಳ, ಉತ್ತರದ ರಾಜ್ಯಗಳಿಂದ ಬಂದ ಹೆಣ್ಣುಮಕ್ಕಳು ಬೆಳಿಗ್ಗೆ ಎಂಟೂವರೆ ಒಂಭತ್ತಕ್ಕೆ ಮುದ್ದಾಗಿ ಸಿದ್ಧವಾಗಿ ಅವಸರದಲ್ಲಿ ಕಾಲೇಜಿಗೆ ಓಡುವಾಗಲೂ, ಮಧ್ಯಾಹ್ನದ ಊಟಕ್ಕೆ ಬಂದಾಗಲೂ, ಸಂಜೆ ಉಸ್ಸೋ ಎಂದು ಕಾಲೆಳೆಯುತ್ತಾ ಬರುವಾಗಲೂ ಇವನು ಇಣುಕಿ ನೋಡುವುದು ತಪ್ಪಿಸುವುದಿಲ್ಲ. ಆಟದ ಮಧ್ಯದಲ್ಲಾದರೂ ಸರಿ. ಚೆಂಡನ್ನು ಬಾಯಲ್ಲಿ ಕಚ್ಚಿ ಹಿಡಿದೇ ಇಣುಕುವ ವಾಡಿಕೆ. ಹಾಗೆ ಇಣುಕಿದ ಇವನನ್ನು ಅವರು ಮಾತಾಡಿಸುತ್ತಾ, ತಲೆಸವರಿ ಮುದ್ದು ಮಾಡಿ ಕಳಿಸಿದರೆ ಪರಮಾನಂದ. ಜೊತೆಗೆ ನಡೆಯಲ್ಲಿ ಬಿಂಕ, ಬಿನ್ನಾಣವೂ ಬೆರೆತು ಹೋಗುತ್ತದೆ. ನಾಯಿಮರಿಗಳು ಥೇಟ್ ಮಕ್ಕಳ ಹಾಗೆ. ಅಪ್ಪ-ಅಮ್ಮ ಅದೆಷ್ಟೇ ಮುದ್ದಿನಿಂದ ನೋಡಿಕೊಂಡರೂ, ಹೊರಗಿನವರ ಹಿಡಿ ಪ್ರೀತಿಗೆ ಹಾತೊರೆಯುವುದು, ಅವರ ಮುಂದೆ ಅಯ್ಯೋ ಪಾಪದವರಂತೆ ಕಂಡು ನಮ್ಮನ್ನು ವಿಲನ್ ಮಾಡುವ ಅವಕಾಶವನ್ನು ಬಿಡುವುದಿಲ್ಲ. ಇವನ ದೆಸೆಯಿಂದ ಇಷ್ಟು ವರ್ಷ ಪಕ್ಕದ ಕಟ್ಟಡವಾಗಿ ಮಾತ್ರ ಕಂಡಿದ್ದ ಪಿಜಿಯ ಜೊತೆಗೊಂದು ಬಾಂಧವ್ಯ ತಾನೇತಾನಾಗಿ ಬೆಳೆಯುತ್ತಿದೆ.

ಇವನ ತುಂಟತನ, ಮುದ್ದಿನ ಸೆಳೆತಕ್ಕೆ ಸಿಕ್ಕ ಅವರು, ನಮ್ಮೊಂದಿಗೂ ಮಾತಿನ ನಂಟು ಬೆಸೆಯುತ್ತಾರೆ. ಎಷ್ಟು ಹೊತ್ತಾದರೂ ಮುಗಿಯದ ಕಾಲೇಜು, ಇಂಟರ್ನಲ್ಸಿನ ಒತ್ತಡ, ರುಚಿಯಿಲ್ಲದ ಕ್ಯಾಂಟೀನ್ ಊಟ, ರಾತ್ರಿಯೆಲ್ಲಾ ದೀಪವುರಿಸುವ ರೂಮ್ ಮೇಟ್, ತಿಂಗಳ ಕೊನೆಯಲ್ಲಿ ಆದ ಕೈಸಾಲಗಳ ಬಗ್ಗೆ ಹೇಳಿದಂತೆಯೇ ತಮ್ಮ ಊರಿನ ಮನೆ, ಕಿಲಾಡಿ ತಮ್ಮ, ಮನೆಯಲ್ಲಿನ ಸಾಕಿರುವ ದನ-ಬೆಕ್ಕು- ನಾಯಿ, ಅಮ್ಮನ ಅನಾರೋಗ್ಯ, ಅಜ್ಜಿಯ ವರಾತದ ಕುರಿತೂ ವರದಿಯೊಪ್ಪಿಸುವುದು ಇದೆ. “ನೀವೆಲ್ಲಾದರೂ ಹೊರಗೆ ಹೋಗುವುದಿದ್ದರೆ, ಚಿಂಟು ಬಗ್ಗೆ ಯೋಚಿಸಬೇಡಿ. ನಾವೆಲ್ಲಾ ಸೇರಿ ನೋಡಿಕೊಳ್ಳುತ್ತೇವೆ. ಅವನಿಗೆ ಇಡ್ಲಿ, ಚಪಾತಿ ಇಷ್ಟವೆಂದರೆ ಅದನ್ನೇ ತಂದು ತಿನ್ನಿಸುತ್ತೇವೆ. ವಾಕಿಂಗ್‌ಗೆ ನನ್ನ ಫ್ರೆಂಡ್ ಇದ್ದಾನೆ. ಅವನಿಗೆ ಹೇಳಿದರೆ ಮುಗೀತು. ನಾಯಿಗಳೆಂದರೆ ಪಂಚಪ್ರಾಣ. ದಿನವೆಲ್ಲಾ ಆಟಾಡಿಸುತ್ತಾನೆ. ನೀವು ಹೋಗಿ ಬನ್ನಿ” ಎನ್ನುತ್ತಾರೆ. ಮುಗ್ಧ ಜೀವವೊಂದು ಬೆಸೆಯುವ ಸ್ನೇಹದ ಪರಿಗೆ ಸೋಲದಿರುವುದು ಹೇಗೆ?

ಅಪರಿಚಿತ ವ್ಯಕ್ತಿಗಳೊಂದಿಗೆ ಅಂತರ ಕಾಯ್ದುಕೊಳ್ಳಿ. ಸರಗಳ್ಳರಿದ್ದಾರೆ ಎಚ್ಚರಿಕೆ. ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು. ಆನ್‌ಲೈನ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಎಚ್ಚರದಿಂದಿರಿ. ಎಂಬೆಲ್ಲಾ ಫಲಕಗಳನ್ನು ನಮ್ಮ ಹೃದಯಕ್ಕೇ ಮೊಳೆಹೊಡೆದು ನೇತುಹಾಕಿಕೊಂಡ ಮೇಲೆ, ಮನುಷ್ಯರನ್ನು ನಂಬುವುದಿರಲಿ, ಕಣ್ಣಲ್ಲಿ ಕಣ್ಣಿಟ್ಟು ನೋಡುವುದನ್ನೂ ಬಿಟ್ಟು ವರ್ಷಗಳೇ ಕಳೆದಿವೆ. ಹಾಗಾಗಿಯೇ, ಸಣ್ಣಪುಟ್ಟ ಊರುಗಳಿಂದ ಓದಿಗಾಗಿ ಇಲ್ಲಿ ಬಂದ ಹೆಣ್ಣುಮಕ್ಕಳು, ಮಹಾನಗರದ ನಾಗಾಲೋಟಕ್ಕೆ ಹೆದರಿದಂತೆ, ಚಿಪ್ಪಿನೊಳಗೆ ಸರಿದಂತೆ, ತಮ್ಮ ಊರಿನ ಬೆಚ್ಚನೆ ನೆನಪನ್ನು ಪದೇಪದೇ ಇಲ್ಲಿ ಕೆದಕುವಂತೆ ಕಂಡರೂ ನಿಧಾನಕ್ಕೆ ಇಲ್ಲಿನ ಜೀವನಕ್ಕೆ ಹೊಂದಿಕೊಳ್ಳುತ್ತಾರೆ. ಕ್ಯಾಂಟೀನಿನ ವಿಶ್ವಣ್ಣ, ಕೆಲಸದ ಕಮಲಮ್ಮ, ತಳ್ಳುಗಾಡಿಯ ಮುನಿಯಪ್ಪ, ಪಕ್ಕದ ಮನೆಯ ಲತಾ ಆಂಟಿ ಇವರ ಜೊತೆಗಿನ ಮಾತಿನಲ್ಲಿ ತಮ್ಮೂರಿನ ಆತ್ಮೀಯತೆಯನ್ನು ಬೆಸೆದು ಹಗುರಾಗುತ್ತಾರೆ. ಸಣ್ಣಪುಟ್ಟ ಊರುಗಳ ಸಂಸ್ಕೃತಿಯ ಸೌಂದರ್ಯವಿರುವುದೇ ಹೀಗೆ ಎಲ್ಲರೊಳಗೊಂದಾಗುವುದರಲ್ಲಿ.

ಇವನ ತುಂಟತನ, ಮುದ್ದಿನ ಸೆಳೆತಕ್ಕೆ ಸಿಕ್ಕ ಅವರು, ನಮ್ಮೊಂದಿಗೂ ಮಾತಿನ ನಂಟು ಬೆಸೆಯುತ್ತಾರೆ. ಎಷ್ಟು ಹೊತ್ತಾದರೂ ಮುಗಿಯದ ಕಾಲೇಜು, ಇಂಟರ್ನಲ್ಸಿನ ಒತ್ತಡ, ರುಚಿಯಿಲ್ಲದ ಕ್ಯಾಂಟೀನ್ ಊಟ, ರಾತ್ರಿಯೆಲ್ಲಾ ದೀಪವುರಿಸುವ ರೂಮ್ ಮೇಟ್, ತಿಂಗಳ ಕೊನೆಯಲ್ಲಿ ಆದ ಕೈಸಾಲಗಳ ಬಗ್ಗೆ ಹೇಳಿದಂತೆಯೇ ತಮ್ಮ ಊರಿನ ಮನೆ, ಕಿಲಾಡಿ ತಮ್ಮ, ಮನೆಯಲ್ಲಿನ ಸಾಕಿರುವ ದನ-ಬೆಕ್ಕು- ನಾಯಿ, ಅಮ್ಮನ ಅನಾರೋಗ್ಯ, ಅಜ್ಜಿಯ ವರಾತದ ಕುರಿತೂ ವರದಿಯೊಪ್ಪಿಸುವುದು ಇದೆ.

ನಮಗೆ ಅವರೆಕಾಯಿ, ತೊಗರಿಕಾಯಿ, ಹಸಿ ಅಲಸಂದೆ ಕಾಲವಿರಲಿ, ಹಪ್ಪಳ, ಸಂಡಿಗೆ, ಮೆಣಸಿನಪುಡಿ ಕೆಲಸವಿರಲಿ… ಸಂಕ್ರಾಂತಿಯ ಎಳ್ಳು, ಸಕ್ಕರೆ ಅಚ್ಚು, ಯುಗಾದಿಯ ಹೊಸಬಟ್ಟೆ, ಬೇಸಿಗೆ ಶಿಬಿರ, ಹತ್ತನೇ ತರಗತಿಯ ಪರೀಕ್ಷೆ ಯಾವುದಿದ್ದರೂ ಒಂಟೊಂಟಿಯಾಗಿ ತಯಾರಾದ ನೆನಪಿಲ್ಲ. ಅಮ್ಮನ ಕೈ ಬಿಡುವಿಲ್ಲದಿದ್ದರೆ, ಎದುರುಮನೆಯ ಅಜ್ಜಿಯ ಹತ್ತಿರ ಬಾಚಣಿಗೆ, ಕೊಬ್ಬರಿ ಎಣ್ಣೆ ಡಬ್ಬ ಇಟ್ಟು, “ಸ್ಕೂಲಿಗೆ ಹೊತ್ತಾಯ್ತು. ಬದನೆಕಾಯಿ ಜಡೆ ಹಾಕಿ ಕೊಡಜ್ಜಿ” ಎನ್ನುತ್ತಿದ್ದೆವು.

“ನಮ್ಮನೆಯಲ್ಲಿ ನಾಳೆ ಹಿರಿಯರ ಕಾರ್ಯವಿದೆ. ತುರಿಮಣೆ ಕಳಿಸ್ರೀ. ನಮ್ಮನೆದು ಮೊಂಡುಬಿದ್ದು ಮೂರು ವರ್ಷ ಆಯ್ತು. ಇನ್ನೂ ಸಾಣೆ ಹಿಡಿಸಿಲ್ಲ. ಹತ್ತು ತೆಂಗಿನಕಾಯಿ ಅದರಲ್ಲಿ ತುರಿದು ಘಟ್ಟ ಮುಟ್ಟಿಸೋಕಾಗತ್ಯೇ? ನನ್ನ ಹೆಣ ಬಿದ್ದೋಗತ್ತೆ ಅಷ್ಟೇ.” ಅಂತ ಮೂಲೆ ಮನೆ ಪಂಕಜತ್ತೆ ಹೇಳಿದ್ರೆ, ನಮ್ಮನೆ ಈಳಿಗೆಮಣೆ, ತುರಿಮಣೆ, ಚಾಕು, ತರಕಾರಿ ಹೆಚ್ಚೋ ಮಣೆ, ಮೊರ, ಸೌಟು ಮತ್ತೊಂದು ಅಂತ ಅರ್ಧ ಅಡುಗೆಮನೆಯೇ ಅಲ್ಲಿಗೆ ಸಾಗಿಸುವ ಕೆಲಸವಾಗ್ತಿತ್ತು. “ಹತ್ತಿಪ್ಪತ್ತು ಜನರ ಅಡುಗೆಗೆ ಪಾತ್ರೆ ಯಾಕೆ ಬಾಡಿಗೆಗೆ ತರ್ತೀರಿ? ನಮ್ಮನೆ ಅಟ್ಟದ ಮೇಲೆ ಸಾಲಾಗಿ ಜೋಡಿಸಿದ್ದೀನಿ. ತೊಗೊಂಡು ಹೋಗಿ. ಆಮೇಲೆ ನಿಧಾನಕ್ಕೆ ಕೊಟ್ಟರಾಯ್ತು.” ಅನ್ನುವ ಸಹಬಾಳ್ವೆಯಿತ್ತು.

ಈ ಕಥೆಗಳನ್ನು ಹೇಳಿದರೆ, ಇಲ್ಲಿನವರು ಈಗ ಇಪ್ಪತ್ತು- ಮುವ್ವತ್ತು ವರ್ಷದ ಹಿಂದಿನ ನಮ್ಮ ನಗರ ಹಾಗೇ ಇತ್ತು ಎನ್ನುತ್ತಾರೆ. ಹಾಗಾದರೆ, ಸಂಬಂಧಿಕರಿಂದಲೂ ನೆರೆಹೊರೆಯವರೊಂದಿಗೂ ಕಡೆಗೆ ಮನೆಯಲ್ಲಿರುವ ಗಂಡ-ಹೆಂಡತಿ- ಮಕ್ಕಳೊಂದಿಗೂ ಅಂತರ ಕಾಯ್ದುಕೊಂಡು ಬದುಕುವ ಪದ್ಧತಿ ಬೆಳೆದಿದ್ದಾರೂ ಹೇಗೆಂದು ಚಿಂತೆಯಾಗುತ್ತದೆ.

ನೀವು ಯಾರೊಂದಿಗೆ ಮಾತಾಡದಿದ್ದರೂ ಪರವಾಗಿಲ್ಲ. ಚೆನ್ನಾಗಿ ಓದಿ ಒಳ್ಳೆಯ ಪದವಿ ಪಡೆಯಬೇಕು. ಊರ ಉಸಾಬರಿಗೆ ತಲೆಕೊಡುವುದು ಬಿಟ್ಟು ನಿನ್ನ ಜೀವನ ನೀನು ನೋಡಿಕೋ. ಅವರ ಮನೆಯಲ್ಲಿ ಸಾವಾಗಿದ್ದರೆ ಏನಂತೆ? ನಿನ್ನದೆಷ್ಟೋ ಅಷ್ಟರಲ್ಲಿರು. ಯಾವುದಕ್ಕೂ ಮುನ್ನುಗ್ಗಿ ತಲೆಕೊಡಬೇಡ. ಅಂಟಿಯೂ ಅಂಟದಂತೆ ಇರುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಹೆಚ್ಚು ಮಾತಿಲ್ಲದೆ ನಾಜೂಕಾಗಿ ಪರಿಸ್ಥಿತಿಯಿಂದ ಬಿಡಿಸಿಕೊಳ್ಳಬೇಕು. ಹೀಗೆ ತಾನು ಮತ್ತು ತನ್ನ ಹಿತವನ್ನಷ್ಟೇ ಎಣಿಸಬೇಕೆಂಬ ತಲೆಮಾರೊಂದನ್ನು ಸೃಷ್ಟಿಸಿದ ಮೇಲೆ, ನಗರವಾದರೇನು? ಹಳ್ಳಿಯಾದರೇನು? ಮನುಷ್ಯ ಒಂಟಿಯಾದ‌. ಒಂಟಿತನದ ಭಯವನ್ನು ಹತ್ತಿಕ್ಕಲು ಹೆಚ್ಚು ಹೆಚ್ಚು ಹಣ, ಅಧಿಕಾರ, ದರ್ಪವನ್ನು ಪೇರಿಸಿಕೊಳ್ಳುತ್ತಾ ಹುಸಿ ಭದ್ರತೆಯ ಭಾವದೊಳಗೆ ಕಳೆದುಹೋದ. ಇನ್ನು ಅವನನ್ನು ರಿಪೇರಿ ಮಾಡಲು ಸಾಧ್ಯವಿಲ್ಲ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಎನ್ನಿಸಲು ಶುರುವಾಯಿತು.

ಅದಿರಲಿ. ಕಡೇಪಕ್ಷ ಇಂದಿನ ಮಕ್ಕಳನ್ನಾದರೂ ಹತ್ತು ಜನರೊಂದಿಗೆ ಬೆರೆಯುವಂತೆ ಬೆಳೆಸುವ ಹೊಣೆಗಾರಿಕೆ ನಮ್ಮದಾಗಬೇಕಲ್ಲವೇ? ಚಿಂಟುವಿನಂತಹ ಮಾತು ಬಾರದ ಮುಗ್ಧ ಜೀವಕ್ಕೆ ನೂರಾರು ಜನರ ಸ್ನೇಹ ಸಂಪಾದಿಸಲು ಸಾಧ್ಯವಾಗಬೇಕಾದರೆ, ಮಾತು ಬರುವ, ಯೋಚಿಸಲು ಸಾಧ್ಯವಿರುವ, ಮಕ್ಕಳಿಂದ ಎಂತೆಂತಹ ಅದ್ಭುತಗಳು ಜರುಗಬಹುದು? ದಯವಿಟ್ಟು ನಿಮ್ಮ ಮಕ್ಕಳನ್ನು ಸಂಬಂಧಿಕರು, ನೆರೆಹೊರೆಯವರು, ಸಹಾಯಕರು, ತರಕಾರಿ-ಹಣ್ಣು ಗಾಡಿಯವರು, ಸ್ನೇಹಿತರು, ಓರಗೆಯವರು, ಸಹ ಪ್ರಯಾಣಿಕರು, ವಯಸ್ಸಾದವರೊಂದಿಗೆ ಸಹಜವಾಗಿ, ಮುಕ್ತವಾಗಿ ಮಾತನಾಡಲು ಬಿಡಿ. ತಪ್ಪುಗಳನ್ನು ತಿದ್ದಲು ಅವಕಾಶ ಕೊಡಿ. ಯಾರೊಂದಿಗೂ ಮಾತನಾಡದ, ಬೆರೆಯದ, ಸುತ್ತಲಿನ ವಿದ್ಯಮಾನಕ್ಕೆ ಸ್ಪಂದಿಸದ ಯಂತ್ರಮಾನವರ ಪೀಳಿಗೆಯಾಗಿಸದೆ, ಎಲ್ಲರೊಳಗೆ ಒಂದಾಗುವ ವಿಶ್ವಮಾನವರನ್ನು ಅರಳಿಸೋಣ. ವೈಯಕ್ತಿಕ ಸೋಲು-ಗೆಲುವನ್ನು ಹಂಚಿಕೊಳ್ಳುವ ಸಮಾಜವೊಂದನ್ನು ಮತ್ತೆ ನಿರ್ಮಿಸೋಣ. ನಂಬಿ. ಇದು ಖಂಡಿತ ಸಾಧ್ಯವಿದೆ.