ಬರೀ ಅಲ್ಲಿನ ಆಡಂಬರ ಅಥವಾ ವೈಭವೋಪೇತ ನೋಟಗಳನ್ನಷ್ಟೇ ನಮಗೆ ಉಣಬಡಿಸಲು ಇಚ್ಚಿಸದ ಪ್ರಕಾಶ್‌ರವರು ತಮ್ಮ ಪ್ರವಾಸದುದ್ದಕ್ಕೂ ಆದ ಕೆಲವೊಂದು ಆಕಸ್ಮಿಕ ಅನುಭವಗಳನ್ನೂ ನಮಗೆ ತಿಳಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದು ಅವುಗಳಲ್ಲಿ ಪ್ರವಾಸಿಗಳಿಗೆ ವಸತಿ ಮಾಡಲು ಅನುಕೂಲವಾಗಿರುವ ಸ್ಟುಡಿಯೋ ಪ್ಲಾಟ್‌ಗಳ ಕುರಿತಾದ ಪರಿಚಯ ಬರಹ, ಬೆಲ್ಜಿಯಂನ ಬಸ್ಸುಗಳಲ್ಲಿನ ಶೌಚಾಲಯ ವ್ಯವಸ್ಥೆಯ ಬಗ್ಗೆ, ಚಾಕೊಲೇಟ್ ವಿಲೇಜ್‌ನಲ್ಲಿ ಸಿದ್ಧವಾಗುವ ಹೋಮ್ ಮೇಡ್ ಚಾಕೊಲೇಟ್‌ಗಳ ಸ್ವಾದದ ಬಗ್ಗೆ, ರುಚಿಯಾದ ಸಸ್ಯಾಹಾರಿ ತಿನಿಸು ಫಲಾಫೆಲ್ ಬಗ್ಗೆಯೂ ಬರೆಯುತ್ತಾರೆ.
ಪ್ರಕಾಶ್ ಕೆ ನಾಡಿಗ್ ಬರೆದ “ನಾ ಕಂಡ ಯುರೋಪ್ ಖಂಡ” ಪ್ರವಾಸ ಕಥನದ ಕುರಿತು ಪ.ನಾ. ಹಳ್ಳಿ ಹರೀಶ್‌ ಕುಮಾರ್‌ ಬರಹ

‘ದೇಶ ಸುತ್ತು ಕೋಶ ಓದು’ ಎಂಬುದೊಂದು ಬಹುಪ್ರಚಲಿತ ಮಾತು. ಅದನ್ನೇ ನಂಬಿ ಅನೇಕರು ಸುತ್ತಾಟಗಳಲ್ಲಿ ತೊಡಗಿದರೆ ಮತ್ತೂ ಹಲವರು ಸುತ್ತಾಡಿ ಬಂದವರ ಅನುಭವ ಕಥನಗಳನ್ನೇ ಕೇಳಿಯೋ ಅಥವಾ ಓದಿಯೋ ತಮ್ಮ ಭ್ರಮಾಲೋಕದಲ್ಲಿ ತಾವೂ ಪ್ರವಾಸದ ಅನುಭವ ಹೊಂದುತ್ತಾರೆ. ಈ ಮಾತನ್ನು ಪ್ರಸ್ತಾಪಿಸಲು ಕಾರಣ ನಮ್ಮ ಆತ್ಮೀಯ ಕವಿಮಿತ್ರ, ಪರಿಸರ ಪ್ರೇಮಿ, ಬರಹಗಾರ ಹಾಗೂ ವೃತ್ತಿಯಲ್ಲಿ ಫಾರ್ಮಾಸಿಸ್ಟ್ ಆಗಿರುವ ಪ್ರಕಾಶ್ ಕೆ ನಾಡಿಗ್ ರವರು ಮತ್ತೊಂದು ಸುತ್ತು ಯೂರೋಪ್ ಪ್ರವಾಸ ಮುಗಿಸಿ ಬಂದಿದ್ದಾರೆ. ಸ್ನೇಹಿತನ ಒತ್ತಾಸೆಗೆ ಹೋಗಿಬಂದೆನೆಂದು ಹೇಳಿಕೊಂಡಿದ್ದರೂ ಅವರೊಳಗೊಬ್ಬ ಹವ್ಯಾಸಿ ‘ಪ್ರವಾಸಿ’ ಇರುವುದನ್ನು ಗುರ್ತಿಸಬಹುದಾಗಿದೆ.

(ಪ್ರಕಾಶ್ ಕೆ ನಾಡಿಗ್)

ಅದಾಗಲೇ ಒಂದು ಬಾರಿ ಯೂರೋಪ್ ಪ್ರವಾಸ ಹೋಗಿಬಂದು ತಾವು ನೋಡಿದ ಕೆಲವೇ ದೇಶಗಳ ಪರಿಚಯವನ್ನು ರಸವತ್ತಾಗಿ ಕಟ್ಟಿಕೊಟ್ಟು ಓದುಗ ಪ್ರಭುವಿಗೂ ಯೂರೋಪನ್ನು ಕುಳಿತಲ್ಲೇ ಪರಿಚಯಿಸಿದ್ದ ಪ್ರಕಾಶ್ ರವರು ಮತ್ತೊಮ್ಮೆ ಅಂಥಹದ್ದೇ ರಸಾನುಭವವನ್ನು ಕಟ್ಟಿಕೊಡುವಲ್ಲಿ ಹಿಂದೆಬಿದ್ದಿಲ್ಲ. ಹನ್ನೆರೆಡು ದಿನಗಳ ತಮ್ಮ ಪ್ರವಾಸದುದ್ದಕ್ಕೂ ಅವರು ಯೂರೋಪಿನ ಪ್ರಮುಖ ದೇಶಗಳಾದ ಜರ್ಮನಿ, ಬೆಲ್ಜಿಯಂ, ಸ್ವಿಡ್ಜರ್ಲ್ಯಾಂಡ್, ಹಾಲೆಂಡ್ (ನೆದರ್ಲ್ಯಾಂಡ್) ಮತ್ತು ಸ್ವೀಡನ್‌ನಲ್ಲಿನ ತಮ್ಮ ಪ್ರವಾಸಾನುಭವಗಳನ್ನು ಕಟ್ಟಿಕೊಟ್ಟಿದ್ದು. ಅಲ್ಲಿ ತಾವು ಕಂಡುಂಡ ಎಲ್ಲವನ್ನೂ ಕಣ್ಣಿಗೆ ಕಟ್ಟಿದ ಹಾಗೆ ವಿವರಿಸಿರುವುದು ಓದುಗನನ್ನು ಸ್ವತಃ ಯೂರೋಪಿಗೆ ಕರೆದೊಯ್ದ ಅನುಭವ ನೀಡುತ್ತದೆ.

ಪ್ರವಾಸ ಕಥನಗಳೆಂದರೆ ಕೇವಲ ಅಲ್ಲಿಗೆ ತೆರಳುವ ವಿಧಾನ, ಸಿದ್ಧತೆ, ಪ್ರಮುಖ ಆಕರ್ಷಣೀಯ ಸ್ಥಳಗಳು, ಅವುಗಳ ಒಂದಷ್ಟು ಫೋಟೋಗಳು ಇವಿಷ್ಟೇ ಎಂಬ ಭ್ರಮಾಲೋಕದಿಂದ ಹೊರಬರುವಂತೆ ತಮ್ಮ ಪ್ರವಾಸ ಕಥನವನ್ನು ಹಂತಹಂತವಾಗಿ ನಿರೂಪಿಸಿರುವ ಪ್ರಕಾಶ್ ಅವರು, ಪ್ರವಾಸಕ್ಕೆ ಹೊರಡಲು ಮಾಡಿಕೊಂಡ ಮುನ್ನೆಚ್ಚರಿಕಾ ಸಿದ್ಧತೆಗಳೊಂದಿಗೆ ಆರಂಭದಲ್ಲೇ ಉಂಟಾದ ಸ್ಪೈಸ್ ಜೆಟ್ ಏರ್ವೇಸ್‌ನ ಕಿರಿಕಿರಿಯಿಂದಿಡಿದು, ವಿಮಾನಯಾನದಲ್ಲಿನ ಸಹಪ್ರಯಾಣಿಕನ ಸಮಸ್ಯೆಗೆ ಮಾತ್ರೆ ನೀಡಿ ಸ್ಪಂದಿಸಿದ್ದು ಹಾಗೂ ಅಳುತ್ತಿದ್ದ ಮಗುವನ್ನು ಸಂತೈಸಿ, ಸಹ ಪ್ರಯಾಣಿಕರಿಗೆ ಮುದನೀಡಿದ್ದು ಹೀಗೆ ಎಲ್ಲವನ್ನೂ ಮುಕ್ತವಾಗಿ ಓದುಗನೊಂದಿಗೆ ಹಂಚಿಕೊಂಡಿದ್ದಾರೆ.

ತಮ್ಮ ಪ್ರವಾಸ ಕಥನದುದ್ದಕ್ಕೂ ಯೂರೋಪಿನ ಸಂಸ್ಕೃತಿ, ಆಚಾರ ವಿಚಾರಗಳು, ಅಲ್ಲಿನ ವೈಭವೋಪೇತ ಜೀವನದತ್ತಲೇ ಗಮನಹರಿಸಿರುವ ಪ್ರಕಾಶ್‌ರವರು ತಾವು ಕಣ್ತುಂಬಿಕೊಂಡ ಕೋಪನ್ ಹೇಗನ್‌ನಲ್ಲಿನ ರೋಸ್ ಗಾರ್ಡನ್ ಅರಮನೆಯ ವೈಭವ, ಪ್ರವಾಸಿಗರ ಸ್ವರ್ಗ ಸ್ವಿಡ್ಜರ್ಲ್ಯಾಂಡ್‌ನ ಶೆಮೊನಿಕ್ಸ್‌ನಲ್ಲಿ ಹಿಮದಲ್ಲಿ ಹೊರಳಾಡಿದ್ದು, ಫ್ರಾನ್ಸ್ ಮತ್ತು ಸ್ವಿಡ್ಜೆ ರ್ಲ್ಯಾಂಡ್‌ಗಳೆರೆಡರಲ್ಲೂ ವ್ಯಾಪಿಸಿರುವ ಜಿನೀವಾ ಸರೋವರ, ಆಲ್ಫ್ಸ್ ಪರ್ವತ ಶ್ರೇಣಿ, ಕೆಥಡ್ರೆಲ್ ಚರ್ಚ್, ಪ್ಲವರ್ ಕ್ಲಾಕ್, ರಷ್ಯನ್ ಚರ್ಚ್, ಬೆಲ್ಜಿಯಂನ ರಾಯಲ್ ಅರಮನೆ, ಬ್ರೂಸೆಲ್ಸ್‌ನ ಆಟೋಮಿಯಂ, ಆನ್ ಫ್ರಾಂಕ್‌ಳ ಮನೆ, 32 ಹೆಕ್ಟೇರ್ ವಿಸ್ತಾರದ ಕ್ಯೂಕೆನ್ ಹಾಫ್ ಹೂದೋಟ, ಸ್ಕಿನ್ನೀ ಬ್ರಿಡ್ಜ್… ಹೀಗೆ ಹೇಳುತ್ತಾ ಹೋದರೆ ಒಂದೆರೆಡಲ್ಲಾ, ಅರ್ಧ ಯೂರೋಪನ್ನೇ ನಮಗೆ ಪರಿಚಯಿಸುವಲ್ಲಿ ಪ್ರಕಾಶ್‌ರವರು ಬಹುತೇಕ ಯಶಸ್ವಿಯಾಗಿದ್ದಾರೆ.

ಬರೀ ಅಲ್ಲಿನ ಆಡಂಬರ ಅಥವಾ ವೈಭವೋಪೇತ ನೋಟಗಳನ್ನಷ್ಟೇ ನಮಗೆ ಉಣಬಡಿಸಲು ಇಚ್ಚಿಸದ ಪ್ರಕಾಶ್‌ರವರು ತಮ್ಮ ಪ್ರವಾಸದುದ್ದಕ್ಕೂ ಆದ ಕೆಲವೊಂದು ಆಕಸ್ಮಿಕ ಅನುಭವಗಳನ್ನೂ ನಮಗೆ ತಿಳಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದು ಅವುಗಳಲ್ಲಿ ಪ್ರವಾಸಿಗಳಿಗೆ ವಸತಿ ಮಾಡಲು ಅನುಕೂಲವಾಗಿರುವ ಸ್ಟುಡಿಯೋ ಪ್ಲಾಟ್‌ಗಳ ಕುರಿತಾದ ಪರಿಚಯ ಬರಹ, ಬೆಲ್ಜಿಯಂನ ಬಸ್ಸುಗಳಲ್ಲಿನ ಶೌಚಾಲಯ ವ್ಯವಸ್ಥೆಯ ಬಗ್ಗೆ, ಚಾಕೊಲೇಟ್ ವಿಲೇಜ್‌ನಲ್ಲಿ ಸಿದ್ಧವಾಗುವ ಹೋಮ್ ಮೇಡ್ ಚಾಕೊಲೇಟ್‌ಗಳ ಸ್ವಾದದ ಬಗ್ಗೆ, ರುಚಿಯಾದ ಸಸ್ಯಾಹಾರಿ ತಿನಿಸು ಫಲಾಫೆಲ್ ಬಗ್ಗೆ, ಪಾರಿವಾಳಗಳಿಗೆ ಭಾರತದ ಪಾರ್ಲೇಜಿ ಬಿಸ್ಕೇಟ್ ತಿನ್ನಿಸಿ ರೋಮಾಂಚನಗೊಂಡಿದ್ದು, ಹಾಲೆಂಡಿನ ಸೈಕಲ್ ಪಥಗಳು ಹಾಗೂ ಸೈಕಲ್ ನಿಲ್ದಾಣಗಳ ಕುರಿತು, ಐಷಾರಾಮಿ ಕ್ರೂಸ್‌ನಲ್ಲಿನ ಪಯಣದ ಅನುಭವಗಳು ಮುಖ್ಯವಾದವುಗಳೆನಿಸಿಕೊಳ್ಳುತ್ತವೆ.

ಪ್ರವಾಸದ ಪ್ರತೀ ಕ್ಷಣವನ್ನೂ ಸಾಕಷ್ಟು ಅನುಭವಿಸಿದವರಂತೆ ಕಂಡುಬರುವ ಲೇಖಕರು ಮೋಡಕವಿದ ವಾತಾವರಣದ ಸಂದರ್ಭದಲ್ಲಿ ಪ್ರವೇಶಕ್ಕೆ ಮೊದಲೇ ಸಾಂದರ್ಭಿಕ ಅಪ್ರಾಮುಖ್ಯತೆಯ ಬಗ್ಗೆ ಮಾಹಿತಿ ತಿಳಿಸುವ ಅಲ್ಲಿನ ಅಧಿಕಾರಿಗಳ ಪ್ರಾಮಾಣಿಕತೆಯನ್ನು, ಡಾಕ್ಟರ್ ಪ್ರಿಸ್ಕ್ರಿಪ್ಷನ್ ಇಲ್ಲದೇ ಔಷಧಿ ನಿರಾಕರಿಸಿದ ಫಾರ್ಮಾಸಿಸ್ಟ್‌ಳ ಕಾಳಜಿಯ ಕುರಿತು, ದುಬಾರಿ ನಗರದಲ್ಲಿ ಉಚಿತವಾಗಿ ಚಾಕೋಲೇಟ್ ನೀಡಿ “ದುಬಾರಿ ನಗರ ಕೇವಲ ಪ್ರವಾಸಿಗರಿಗೆ ಮಾತ್ರ, ಸ್ಥಳೀಯರಿಗಲ್ಲ” ಎಂದ ಅನಾಮಿಕ ಮಹಿಳೆಯ ಬಗ್ಗೆ, ಮೈಗೆ ಬಣ್ಣ ಬಳಿದುಕೊಂಡು ಸಂಗೀತೋಪಕರಣ ಕೈಲಿಡಿದು ನುಡಿಸುತ್ತಾ, ದಾರಿಹೋಕರಿಗೆ ಮುದ ನೀಡಿ ಭಿಕ್ಷೆ ಬೇಡುವ ಯೂರೋಪಿನ ಭಿಕ್ಷುಕರ ಬಗ್ಗೆ, ತನ್ನ ಮಾತೃಭೂಮಿ ಕರ್ನಾಟಕವನ್ನು ‘ಐಟಿ ರಾಜಧಾನಿ’ ಎಂದ ಚೆಕಿಂಗ್ ಅಧಿಕಾರಿಯ ಬಗ್ಗೆ ಹೇಳುತ್ತಾ ಓದುಗರಲ್ಲಿ ರೋಮಾಂಚಕ ಅನುಭವವನ್ನು ಉಂಟುಮಾಡಿದ್ದಾರೆ.

ಎಷ್ಟೆಲ್ಲಾ ಹಾರಾಡಿ, ಪ್ರಪಂಚವನ್ನೇ ಸುತ್ತಿ ಬಂದರೂ ತಮ್ಮೂರೇ ತಮಗೆ ಮೇಲು ಎಂಬಂತೆ ಮನೆಗೆ ಬಂದು ಹೆಂಡತಿ ಕೈರುಚಿಯ ಉಪ್ಪಿಟ್ಟು ತಿನ್ನುವವರೆಗೂ ಅವರ ಪ್ರವಾಸದ ಅನುಭವವನ್ನು ಯಾವುದೇ ಮುಜುಗರವಿಲ್ಲದೇ ಓದುಗರ ಮುಂದೆ ಅಕ್ಷರಗಳ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಮುಂದೆ ಯೂರೋಪಿನ ದೇಶಗಳಿಗೆ ಪ್ರವಾಸ ಹೋಗುವವರಿಗೆ ಈ ಕೃತಿಯು ಮಾರ್ಗದರ್ಶಿ ಕೈಪಿಡಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

(ಪುಸ್ತಕದ ಶೀರ್ಷಿಕೆ: ನಾ ಕಂಡ ಯುರೋಪ್ ಖಂಡ (ಪ್ರವಾಸ ಕಥನ), ಲೇಖಕರು: ಪ್ರಕಾಶ್ ಕೆ ನಾಡಿಗ್, ಪ್ರಕಾಶನ: ಅಭಯರಾಘವಿ ಪ್ರಕಾಶನ, ತುಮಕೂರು, ಪುಟಗಳು: 104, ಬೆಲೆ: 100ರೂ/-)