ಈಗ ಪ್ರಪಂಚದಲ್ಲಿ ಕಾಣೆಯಾಗುತ್ತಿರುವ ನೈತಿಕತೆ ಎನ್ನುವುದನ್ನು ಪ್ರಮುಖ ಪರಿಶೋಧನೆಗೆ ತೊಡಗುತ್ತಾನೆ ಫರ್ಹಾದಿ. ಪರಮಶಾಂತಿ ಪರಿಹಾರ ತೆಗೆದುಕೊಳ್ಳುವುದು ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದಂತೆ ಇದನ್ನು ನೆರವೇರಿಸಲು ಅಲ್ಲಿನ ಕೌಟುಂಬಿಕ ವ್ಯವಸ್ಥೆಯೊಂದನ್ನು ರೂಪಿಸಿದ್ದಾನೆ. ಹಾಗೂ ಅದರಲ್ಲಿ ಸಾಮಾನ್ಯವಾಗಿ ಸಂಭವಿಸಬಹುದಾದ ಅಪರೂಪವೆನ್ನಿಸಿದ ಸಮಸ್ಯೆ ಇರುವಂತ, ಕಥಾವಸ್ತುವನ್ನು ಕಲ್ಪಿಸಿದ್ದಾನೆ. ನೈತಿಕ ವಿಷಯದ ವಿಸ್ತಾರ ಎಂಥವರನ್ನೂ ಬೆರಗುಗೊಳಿಸುವ ರೀತಿಯಲ್ಲಿ ವಿವಿಧ ರಂಗ ಹಾಗೂ ವಿಷಯಗಳಿಗೆ ಹಬ್ಬಿದೆ. ರಾಜಕೀಯ ಸಾಮಾಜಿಕ ಆರ್ಥಿಕ ಸಾರ್ವಜನಿಕ ಹೀಗೆ ಯಾವುದನ್ನು ಪರಿಗಣಿಸಿದರೂ ಪ್ರತ್ಯಕ್ಷವಾಗುತ್ತದೆ.
ಎ.ಎನ್.‌ ಪ್ರಸನ್ನ ಬರೆಯುವ ‘ಲೋಕ ಸಿನೆಮಾ ಟಾಕೀಸ್‌’ ಇನ್ನು ಮುಂದೆ ಪ್ರತಿ ಹದಿನೈದು ದಿನಗಳಿಗೊಮ್ಮೆ ಮಂಗಳವಾರ ಪ್ರಕಟವಾಗಲಿದೆ.

 

ಅಂಟಿದ ನಂಟಿನ ಪರಿ

ಇರಾನ್ ದೇಶದಲ್ಲಿ ರಾಜಕೀಯ ಕಾರಣಗಳಿಗಾಗಿ ಸಿನಿಮಾ ನಿರ್ಮಾಣ ಅನೇಕ ನಿರ್ಬಂಧಗಳಿಗೆ ಒಳಗಾಗಿತ್ತು ತನ್ನ ದೇಶದ ಇಸ್ಲಾಂ ಧರ್ಮಕ್ಕೆ ಮತ್ತು ಸಾಂಪ್ರದಾಯಿಕವಾಗಿ ಸಿದ್ಧವೆನಿಸಿದ್ದ ಚಿತ್ರಗಳಿಗೆ ಮಾತ್ರ ಪುರಸ್ಕಾರ ಸಿಗುತ್ತಿತ್ತು. ಇದರ ಪರಿಣಾಮವಾಗಿ ತುಂಬ ಸೀಮಿತ ಅವಕಾಶಗಳನ್ನು ನಿರ್ಮಾಪಕರಿಗೆ ಒದಗಿಸಿತ್ತು. ಇದು ೧೯೭೦ರ ಕ್ರಾಂತಿಗೆ ಮೊದಲು ಆ ದೇಶದಲ್ಲಿದ್ದ ಪರಿಸ್ಥಿತಿ. ಆದರೆ ೧೯೬೦ರಿಂದಲೇ ಹೊಸ ಅಲೆ ಎಂಬ ಪಂಥ ನಿರ್ಮಾಣವಾಗಿ ಹೊಸಬಗೆಯ ಚಿತ್ರಗಳನ್ನು ನಿರ್ಮಿಸುವ ಧೈರ್ಯ ಮತ್ತು ತಮ್ಮ ಅನಿಸಿಕೆಗಳನ್ನು ಹೊರಹಾಕುವ ಒತ್ತಡಕ್ಕೆ ಒಳಗಾಗಿ ಕೆಲವು ಚಿತ್ರಗಳು ನಿರ್ಮಾಣವಾದವು.

ಅವುಗಳಲ್ಲಿ ಬಹುಮುಖ್ಯವಾದ ಚಿತ್ರವೆಂದರೆ ದಾರಿಯುಸ್ ಮೆಹ್ರೂಜಿಯ ʻಕೌʼ. ಇದರಲ್ಲಿ ವಾಸ್ತವದ ನೆಲೆಗಟ್ಟಿನ ಮೇಲೆ ನಿರೂಪಿಸುವ ಇಟಲಿಯ ನವವಾಸ್ತವ ಮಾರ್ಗದ ಅಂಶಗಳು ಎದ್ದು ತೋರುತ್ತದೆ. ಮುಖ್ಯವಾಗಿ ಚಿತ್ರೀಕರಣಕ್ಕೆ ಸ್ಟುಡಿಯೋ ಉಪಯೋಗಿಸದೆ ಇರುವುದು. ಸಾಮಾನ್ಯವಾದ ನೇರವಾಗಿ ಬದುಕಿನಿಂದ ಆಯ್ದುಕೊಂಡ ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸುವ ಚಿತ್ರಗಳನ್ನು ಈ ಪಂಥದ ನಿರ್ಮಾಪಕರು ಪರಿಚಯಿಸಿದರು. ಮಾನವ ಸ್ವಭಾವದ ಮೂಲಗುಣಗಳನ್ನು ಯಾವುದೇ ಅತಿರೇಕವಿಲ್ಲದೆ ವೈಭವೀಕರಣವಿಲ್ಲದೆ ಪ್ರಸ್ತುತ ಪಡಿಸುವುದು ಈ ಪಂಥದ ಪ್ರಮುಖ ಲಕ್ಷಣ.

ಈ ʻಹೊಸ ಅಲೆʼಯ ಚಿತ್ರಗಳಿಂದ ಉಂಟಾದ ಅತ್ಯಂತ ಮುಖ್ಯವಾದ ಪ್ರಭಾವ ಹಾಗೂ ಉಪಯೋಗವೆಂದರೆ ಪಾಶ್ಚಿಮಾತ್ಯರಲ್ಲಿ ಇರಾನ್ ದೇಶದ ಬಗ್ಗೆ ಇದ್ದ ಪೂರ್ವಗ್ರಹಿಕೆಗಳನ್ನು ಬದಿಗಿಟ್ಟು ಹೊಸ ನೆಲೆಯಲ್ಲಿ ಯೋಚಿಸಬೇಕಾದ ಒತ್ತಡವನ್ನು ಉಂಟು ಮಾಡುವಂತಾಯಿತು. ಚಿತ್ರಗಳಲ್ಲಿ ಅಪೂರ್ವವಾದ ಮಾನವೀಯ ಮತ್ತು ಎಲ್ಲ ಕಾಲಕ್ಕೂ ಸಲ್ಲುವಂಥ ಸಾರ್ವತ್ರಿಕ ತಾತ್ವಿಕ ಮೌಲ್ಯಗಳನ್ನು ಬಿತ್ತರಿಸುವ ಚಿತ್ರಗಳನ್ನು ನಿರ್ಮಾಣ ಮಾಡಿದರು. ಹೀಗಾಗಿ ಜಗತ್ತಿನ ಚಲನಚಿತ್ರ ಕಲಾಸಕ್ತರ ಗಮನ ಸೆಳೆಯಲು ಕಾರಣವಾಯಿತು.

ನಿಯಮಿತ ಕಥಾಹಂದರವನ್ನು ಬಳಸುವ ವಾಸ್ತವ ಅಂಶಗಳ ಚಿತ್ರಗಳನ್ನು ನಿರ್ಮಿಸಿದ ಸಾಲಿಸ್ ನನ್ನು ಫ್ರಾನ್ಸ್‌ ನ ರಾಬರ್ಟ್ ಬ್ರೆಸೆನ್ ಹಾಗೂ ವಾಸ್ತವದೊಂದಿಗೆ ಅದ್ಭುತರಮ್ಯದ ಬೆರಕೆ ಮಾಡುವ ಕಿಮಾಯಾನಿಯನ್ನು ಗೊಡಾರ್ಡ್ ಗೂ ಹೋಲಿಸುವುದು ಸಾಮಾನ್ಯ. ಅವರಲ್ಲಿ ಮಜಿದ್ ಮಜಿದಿ ಫಾರೂಕ್‌ ಜದ್‌, ಸಿದ್ದಿಕ್ ಬರ್ಮಾಕ್ ಮುಂತಾದವರು ಹೊಸ ಪರಿಕಲ್ಪನೆ ಚಿತ್ರಗಳನ್ನು ನಿರ್ಮಿಸಿ ಜಗತ್ತಿನ ಚಿತ್ರೋತ್ಸವಗಳಲ್ಲಿ ತಮ್ಮ ಸ್ಥಾನವನ್ನು ಭದ್ರಗೊಳಿಸಿದರು. ಅಲ್ಲದೆ ಅನೇಕ ಪ್ರಶಸ್ತಿಗಳನ್ನು ಕೂಡ ಗಳಿಸಿದರು.

ಇವರೆಲ್ಲರಿಗಿಂತ ಭಿನ್ನ ದೃಷ್ಟಿಕೋನಗಳಿಂದ ಮತ್ತು ಅತ್ಯಲ್ಪ ಕಥನ ವಿಸ್ತಾರವಿರುವ ಅಸಾಂಪ್ರದಾಯಿಕ ನಿರೂಪಣಾ ವಿಧಾನಗಳನ್ನು ಅನುಸರಿಸಿದ ಅಬ್ಬಾಸ್ ಕಿಯರೋಸ್ತಮಿ ಬೇರೆಯಾಗಿಯೇ ಕಾಣುತ್ತಾನೆ. ಇರಾನ್ ದೇಶದ ದಂತಕಥೆ ಎನ್ನಿಸಿದ ಅವನು ನಿರ್ದೇಶಿಸಿದ ಚಿತ್ರಗಳಲ್ಲಿ ʻಥ್ರೂ ದಿ ಆಲೈವ್ ಟ್ರೀಸ್ʼ, ʻಟೇಸ್ಟ್ ಆಫ್ ಚೆರಿʼ, ʻದ ವಿಂಡ್ ವಿಲ್ ಕ್ಯಾರಿ ಅಸ್ʼ ಮುಂತಾದ ಅಸಾಂಪ್ರದಾಯಿಕ ನಿರೂಪಣಾ ವಿಧಾನದ ಚಿತ್ರಗಳು ಪ್ರಮುಖ. ಪ್ರೇಕ್ಷಕನ ಗ್ರಹಿಕೆಗೆ ಹಾಗೂ ಸೂಕ್ಷ್ಮತೆಗೆ ಸವಾಲು ಒಡ್ಡುವಂಥ ಚಿತ್ರಗಳಿಂದ ಅವನ ಸೃಷ್ಟ್ಯಾತ್ಮಕ ಶಕ್ತಿಯ ಪರಿಚಯವಾಗುತ್ತದೆ.

ಇದಲ್ಲದೆ ಅವನು ʻಕ್ಲೋಸ್ ಅಪ್ʼ ಎಂಬ ನೈಜ ಘಟನೆಯನ್ನು ಅವಲಂಬಿಸಿ ತೆಗೆದ ಚಿತ್ರ ಅಪಾರ ಖ್ಯಾತಿ ಗಳಿಸಿತು. ಚಲನಚಿತ್ರ ನಿರ್ಮಾಣದಲ್ಲಿ ಬದಲಾದ ಧೋರಣೆ ಇತ್ಯಾದಿಗಳನ್ನು ಮನಗಂಡು ಮನುಷ್ಯನ ಮೂಲಭೂತ ಗುಣಗಳನ್ನೇ ಬಂಡವಾಳವಾಗಿಸಿಕೊಂಡು ಚಿತ್ರಗಳ ನಿರ್ಮಾಣಕ್ಕೆ ಕೈ ಹಾಕಿದವರಲ್ಲಿ ಅಸ್ಗರ್ ಫರ್ಹಾದಿ ಪ್ರಮುಖನಾದವನು. ಅವನ ಚಿತ್ರಗಳಲ್ಲಿ ಅತ್ಯಂತ ಗಮನ ಸೆಳೆದದ್ದು ೨೦೧೧ರ ಆಸ್ಕರ್ ಪ್ರಶಸ್ತಿಯಲ್ಲದೆ ಅನೇಕ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ʻಎ ಸೆಪರೇಷನ್ʼ ಚಿತ್ರ. ಇದಲ್ಲದೆ ಈ ಚಿತ್ರದಲ್ಲಿ ಅಭಿನಯಿಸಿದ ನೆಡರ್‌ ಪಾತ್ರದ ನಟನಿಗೆ ಬರ್ಲಿನ್‌ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿತು. ಈ ಚಿತ್ರದಲ್ಲಿ ಅವನು ಯಾವುದೇ ಪಂಥ, ಧರ್ಮ, ಸಂಪ್ರದಾಯ ಇವುಗಳ ಪರ ವಿರೋಧಿ ನಿಲುವನ್ನು ಹೊಂದುವ ಗೋಜಿಗೆ ಹೋಗಿಲ್ಲ.

ಈಗ ಪ್ರಪಂಚದಲ್ಲಿ ಕಾಣೆಯಾಗುತ್ತಿರುವ ನೈತಿಕತೆಯ ಪರಿಶೋಧನೆಗೆ ತೊಡಗುತ್ತಾನೆ ಫರ್ಹಾದಿ. ಅವನು ತೆಗೆದುಕೊಳ್ಳುವುದು ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದಂತೆ. ಇದನ್ನು ನೆರವೇರಿಸಲು ಅಲ್ಲಿನ ಕೌಟುಂಬಿಕ ವ್ಯವಸ್ಥೆಯೊಂದನ್ನು ರೂಪಿಸಿದ್ದಾನೆ. ಹಾಗೂ ಅದರಲ್ಲಿ ಸಾಮಾನ್ಯವಾಗಿ ಸಂಭವಿಸಬಹುದಾದ ಸಮಸ್ಯೆ ಇರುವಂಥ ಕಥಾವಸ್ತುವನ್ನು ಕಲ್ಪಿಸಿದ್ದಾನೆ.

ನೈತಿಕ ವಿಷಯದ ವಿಸ್ತಾರ ಎಂಥವರನ್ನೂ ಬೆರಗುಗೊಳಿಸುವ ರೀತಿಯಲ್ಲಿ ವಿವಿಧ ರಂಗ ಹಾಗೂ ವಿಷಯಗಳಿಗೆ ಹಬ್ಬಿದೆ. ರಾಜಕೀಯ ಸಾಮಾಜಿಕ ಆರ್ಥಿಕ ಸಾರ್ವಜನಿಕ – ಹೀಗೆ ಯಾವುದನ್ನು ಪರಿಗಣಿಸಿದರೂ ಪ್ರತ್ಯಕ್ಷವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಈಗದು ಸಾಪೇಕ್ಷ ಎನ್ನುವ ಪರಿವೇಷವನ್ನು ತೊಟ್ಟಿದೆ. ಈ ನೈತಿಕತೆಯ ಸ್ವರೂಪವನ್ನು ಪರಿಕಲ್ಪಿಸಿಕೊಂಡು ಅದಕ್ಕೊಂದು ಕಥನದ ರೂಪ ಕೊಟ್ಟು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರದಲ್ಲಿ ನಿರೂಪಿಸಿದ್ದಾನೆ ಅಸ್ಗರ್ ಫರ್ಹಾದಿ.

ಈ ಚಿತ್ರ ನಿರ್ಮಿಸುವ ಮೊದಲು ನಾಲ್ಕು ಚಿತ್ರಗಳನ್ನು ನಿರ್ದೇಶಿಸಿದ್ದಾನೆ. ಅವುಗಳೆಂದರೆ ʻಡ್ಯಾನ್ಸಿಂಗ್ ಇನ್‌ ದ ಡಸ್ಟ್ʼ (2೦೦೩), ʻದಿ ಬ್ಯೂಟಿಫುಲ್ ಸಿಟಿʼ (2೦೦೪), ʻಫೈರ್‌ ವರ್ಕ್ಸ್ ವೆಡ್ನೆಸ್ ಡೇʼ(೨೦೦೬) ಮತ್ತು ʻಎಬೌಟ್ ಎಲಿʼ(2೦೦9). ಈ ಚಿತ್ರಗಳಲ್ಲದೆ ʻಎ ಸೆಪರೇಷನ್‌ʼ ನಂತರ ಕಾನ್‌ ನಲ್ಲಿ ಎಕುಮೆನಿಕಲ್‌ ಪ್ರಶಸ್ತಿ ಗಳಿಸಿದ ʻದ ಪಾಸ್ಟ್‌ʼ(೨೦೧೩), ಆಸ್ಕರ್‌ ಪ್ರಶಸ್ತಿ ಗಳಿಸಿದ ʻದ ಸೇಲ್ಸ್‌ ಮ್ಯಾನ್‌ʼ(೨೦೧೬) ಮತ್ತು ʻಎವೆರಿಬಡಿ ನೋಸ್‌ʼ(೨೦೧೮) ಚಿತ್ರಗಳನ್ನು ನಿರ್ದೇಶಿಸಿದ್ದಾನೆ. ಇವಲ್ಲದೆ ಕೇವಲ ಬರಹಗಾರನಾಗಿ ಇತರ ಐದು ಚಿತ್ರಗಳಲ್ಲೂ ಪಾಲ್ಗೊಂಡಿದ್ದಾನೆ.

ಫರ್ಹಾದಿ ಆಯ್ದುಕೊಳ್ಳುವ ಕಥನದ ಸ್ವರೂಪ ಸರಳವೆನಿಸಿದರೂ ತುಂಬಾ ಸಂಕೀರ್ಣದ ಒಳಗನ್ನು ಹೊಂದಿರುತ್ತದೆ. ಸಮಾಜದ ಒತ್ತಡದಲ್ಲಿ ಸಿಲುಕುವ ವೈಯಕ್ತಿಕ ವ್ಯಕ್ತಿಯ ಒಳಗನ್ನು ತೆರೆದು ತೋರಿಸುವ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದ್ದಾನೆ. ಇದೇ ನಿಲುವಿನಿಂದ ʻಎ ಸೆಫರೇಷನ್ʼ ಚಿತ್ರವನ್ನು ಪರಿಕಲ್ಪಿಸಿ ಚಿತ್ರಕತೆಯನ್ನು ಬರೆದಿದ್ದಾನೆ. ಈ ಚಿತ್ರದ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ವಿಶೇಷವಾದ ವಿಷಯವೊಂದಿದೆ. ಫರ್ಹಾದಿ ಅದನ್ನು ಅನುಸರಿಸಲು ಅವನಿಗೆ ರಂಗಭೂಮಿಯ ಅನುಭವವೇ ಹಿನ್ನಲೆ ಕಾರಣ. ಈ ಚಿತ್ರದಲ್ಲಿ ಪಾಲ್ಗೊಳ್ಳುವವರನ್ನು ರಂಗಭೂಮಿಯ ರೀತಿಯಲ್ಲಿ ಮುಂಚೆಯೇ ರಿಹರ್ಸಲ್ಗಳ ಮೂಲಕ ಸಿದ್ಧಗೊಳಿಸಿದ್ದಾನೆ. ಪಾತ್ರವರ್ಗದವರು ಸಂಭಾಷಣೆಯೂ ಸೇರಿದಂತೆ ಪಾತ್ರಗಳ ಭಾವನೆಲೆಯನ್ನು ಗ್ರಹಿಸಬೇಕೆಂದು ಈ ಕ್ರಮವನ್ನು ಕೈಗೊಂಡಿದ್ದಾನೆ. ಇಷ್ಟೆಲ್ಲ ತಯಾರಿಯ ಹೊರತಾಗಿಯೂ ಆಂತರಿಕ ರಾಜಕಾರಣದ ಪ್ರಯುಕ್ತ ಚಿತ್ರದ ನಿರ್ಮಾಣ ಒಂದಷ್ಟು ತಡವಾಯಿತು. ಇದಕ್ಕೆ ಫರ್ಹಾದಿ ತನ್ನ ದೇಶದವರೇ ಆದ ಮೊಯ್ಸಿನ್, ಮಕ್ಬಲ್ ಬಫ್ ಮತ್ತು ಜಾಫರ್ ಪನಾಹಿ ಅವರುಗಳು ಚಿತ್ರ ನಿರ್ಮಿಸುವುದಕ್ಕೆ ಬೆಂಬಲ ವ್ಯಕ್ತಪಡಿಸಿದ್ದು ರಾಜಕಾರಣದ ತಿರುವು ಪಡೆದದ್ದು ಕಾರಣ.

ಎಷ್ಟೇ ಅಡಚಣೆಗಳು ಬಂದರೂ ಮುಂದುವರಿದು ತನ್ನೆಲ್ಲ ಶಕ್ತಿಗಳನ್ನು ಒಗ್ಗೂಡಿಸಿ ಅಸ್ಗರ್‌ ಫರ್ಹಾದಿ ನಿರ್ಮಿಸಿದ ಚಿತ್ರ ʻಎ ಸೆಪರೇಶನ್ʼ. ಹೀಗೆ ಮಾಡುವ ಪ್ರಕ್ರಿಯೆಯಲ್ಲಿ ಅವನು ಯಾವುದೇ ಪಂಥದ, ಧಾರ್ಮಿಕ ಇತ್ಯಾದಿ ಯಾವುದೇ ಮಾರ್ಗಗಳಿಗೆ ಬೆಂಬಲ ವ್ಯಕ್ತಪಡಿಸದೆ ಕೇವಲ ಮನುಷ್ಯರ ಮೂಲಗುಣಗಳನ್ನು ಅಭಿವ್ಯಕ್ತಿಯ ಪರಿಕರಗಳನ್ನಾಗಿ ಉಪಯೋಗಿಸಿದ್ದಾನೆ. ಚಿತ್ರದ ಕಥಾವಸ್ತುವಿನ ಬುನಾದಿ ನಮ್ಮ ಸುತ್ತಮುತ್ತಲ ಪಟ್ಟಣವಾಸಿಗಳ ಯಾವುದೇ ಮಧ್ಯಮ ವರ್ಗದಲ್ಲಿ ಕುಟುಂಬದಲ್ಲಿ ಉಂಟಾಗಬಹುದಾದ ಸಮಸ್ಯೆಯನ್ನು ಹೊಂದಿದೆ. ಜೊತೆಗೆ ತೀರಾ ಸಮಕಾಲೀನ ಕೂಡ.

(ಅಸ್ಗರ್ ಫರ್ಹಾದಿ)

ಇರಾನಿನ ಮಧ್ಯಮ ವರ್ಗದ ಸಂಸಾರದಲ್ಲಿ ಹೆಂಡತಿ ಜೀವನವನ್ನು ಉತ್ತಮಪಡಿಸಿಕೊಳ್ಳುವುದಕ್ಕಾಗಿ ಮಗಳ ಜೊತೆ ಪರದೇಶಕ್ಕೆ ಹೋಗಲು ಅಪೇಕ್ಷಿಸುತ್ತಾಳೆ. ತನ್ನ ತಂದೆಯ ಅನಾರೋಗ್ಯದ ಕಾರಣ ಇದಕ್ಕೊಪ್ಪದ ಗಂಡನಿಗೆ ವಿಚ್ಛೇದನಕೊಡಲು ಬಯಸುತ್ತಾಳೆ. ರೋಗಗ್ರಸ್ಥನನ್ನು ನೋಡಿಕೊಳ್ಳುವುದಕ್ಕೆ ಹೆಂಗಸೊಬ್ಬಳನ್ನು ನೇಮಕ ಮಾಡುವುದರಿಂದ ಪರಿಸ್ಥಿತಿ ಉಲ್ಭಣಿಸುತ್ತದೆ. ಇದು ಚಿತ್ರದ ಕಥಾ ಸಾರಾಂಶ.
ಇದಕ್ಕಿರುವ ಕಥಾಹಂದರ ಹೀಗೆ: ಇರಾನ್‌ ಪಟ್ಟಣದಲ್ಲೊಂದು ಮಧ್ಯಮ ವರ್ಗದ ಸಂಸಾರ. ಪರದೇಶಕ್ಕೆ ಹೋಗಿ ಗಂಡ ನೆಡರ್ ಮತ್ತು ಹನ್ನೊಂದು ವರ್ಷದ ಮಗಳು‌ ಟರ್ಮೆ ಜೊತೆ ಸುಖ ಸಂಸಾರದ ಯೋಜನೆ ಮನೆಯಾಕೆ ಸಿಮನ್ಳದು. ಆದರೆ ತನ್ನ ಅಪ್ಪನ ಆರೋಗ್ಯ ಏನೂ ಸರಿಯಿಲ್ಲದ ಕಾರಣ‌ ನೆಡರ್ ಅವಳ ಮಾತಿಗೆ ಒಪ್ಪುವುದಿಲ್ಲ. ಇದು ಅತಿರೇಕಕ್ಕೆ ಹೋಗಿ ಸಿಮನ್ ವಿವಾಹ ವಿಚ್ಛೇದನಕ್ಕೆ ಪ್ರಯತ್ನಿಸುತ್ತಾಳೆ. ಅಪ್ಪನನ್ನು ಬಿಟ್ಟು ಅಮ್ಮನೊಂದಿಗೆ ಹೋಗುವುದರ ಬಗ್ಗೆ ಯಾವುದೇ ನಿರ್ಧಾರವನ್ನು ಮಗಳು ತೆಗೆದುಕೊಂಡಿರುವುದಿಲ್ಲ. ನೆಡರ್ ತನ್ನ ತಂದೆಯನ್ನು ನೋಡಿಕೊಳ್ಳುವುದಕ್ಕೆ ರಜಿ಼ಯಾಳನ್ನು ಗೊತ್ತುಮಾಡುತ್ತಾನೆ. ಬಸುರಿಯಾಗಿರುವ ಆಕೆಗೆ ನೆಡರ್ ನ ಮನೆಯಲ್ಲಿ ಕೆಲಸ ಮಾಡುವ ದಿನಗಳಲ್ಲಿ ಗರ್ಭಸ್ರಾವವಾಗುತ್ತದೆ. ಹೀಗಾದ್ದಕ್ಕೆ ನೆಡರ್ ನ ವರ್ತನೆ ಕಾರಣ ಎಂಬ ಆರೋಪ ಉಂಟಾಗುತ್ತದೆ. ಇದಕ್ಕಾಗಿ ರಾಜಿಮಾಡಿಕೊಳ್ಳಲು ನೆಡರ್ ಮತ್ತು ಸಿಮನ್ ದಂಪತಿಗಳು ದುಡ್ಡು ಕೊಡುವುದನ್ನು ನೈತಿಕ ದೃಷ್ಟಿಯ ಕಾರಣದಿಂದ ರಜಿ಼ಯಾ ನಿರಾಕರಿಸುತ್ತಾಳೆ. ಆದರೆ ಗಂಡ-ಹೆಂಡಿರ ವಿಚ್ಛೇದನ ಪ್ರಕ್ರಿಯೆ ಮುಂದುವರಿಯುತ್ತದೆ. ಅದು ತೆಗೆದುಕೊಳ್ಳುವ ಅಂತ್ಯ ಮಾತ್ರ ಎಲ್ಲರೂ ಒಪ್ಪುವಂತಹದ್ದು.

ಮೇಲುನೋಟಕ್ಕೆ ಅತಿ ಸರಳ ಎನಿಸುವ ಈ ಕಥಾಹಂದರ ಸಹಜತೆಗೆ ಹತ್ತಿರವಾಗಿದೆ. ನೇರ ಕ್ರಮದಲ್ಲಿ ಜರುಗುವ ಘಟನೆಗಳಿಗೆ ಪೂರಕವಾಗಿ ಪಾತ್ರಗಳಿಗೆ ಪಾತ್ರ ಪೋಷಣೆ ಮತ್ತು ಅಗತ್ಯವಾದ ಸಂಭಾಷಣೆ ಮಾತ್ರ ಜತೆಗೂಡಿದೆ. ಚಿತ್ರದ ನೆಪವಾಗಿಟ್ಟುಕೊಂಡು ಬೇರೊಂದನ್ನು ಸೂಚಿಸುವುದಕ್ಕೆ ಅಸ್ಗರ್ ಗೆ ಆಸಕ್ತಿ ಇಲ್ಲವೆಂದು ತೋರುತ್ತದೆ. ಎಲ್ಲರಿಗೂ ಸಮ್ಮತವಾಗುವ ರೀತಿಯಲ್ಲಿ ನೇರ ನಡೆಯಲ್ಲಿ ಚಿತ್ರವನ್ನು ನಿರೂಪಿಸಿದ್ದಾನೆ. ಹೀಗೆ ಮಾಡುವ ಪ್ರಕ್ರಿಯೆಯಲ್ಲಿ ಪಾತ್ರಗಳ ಅಭಿನಯ ಸಾಮರ್ಥ್ಯದ ಜೊತೆಗೆ ಚಲನಚಿತ್ರದ ಇತರ ಅಂಶಗಳನ್ನು ಒಳಗೊಳ್ಳುವುದನ್ನು ನೋಡಿಕೊಂಡಿದ್ದಾನೆ.

ಚಿತ್ರ ತೆರೆದುದುಕೊಳ್ಳುವ ರೀತಿಯೇ ವಿಶೇಷವೆನಿಸುತ್ತದೆ. ಚಿತ್ರ ತಯಾರಿಕೆಯ ಹಿಂದೆ ಅದಕ್ಕೆ ಕೆಲಸ ಮಾಡಿರುವರ ಕಾರ್ಡುಗಳನ್ನು ತೋರಿಸುವುದು ಸಾಮಾನ್ಯವಾದ ಸಂಗತಿ. ಆದರೆ ಈ ಅವಧಿಯನ್ನು ಕೂಡ ಚಿತ್ರದ ಪ್ರಾರಂಭ ಎನ್ನುವಂತೆ ನಿರೂಪಿಸುತ್ತಾ ನೆಡರ್ ಮತ್ತು ಸಿಮನ್‌ರ ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಕೋರ್ಟಿನಲ್ಲಿ ಜರುಗುವುದನ್ನು ಅತ್ತಿತ್ತ ಚಲಿಸದ ಕ್ಯಾಮೆರಾದೊಂದಿಗೆ ನಿರ್ವಹಿಸುತ್ತಾನೆ. ಇಡೀ ಪ್ರೇಕ್ಷಕರ ಸಮೂಹವೇ ನ್ಯಾಯಾಧೀಶರೆಂದು ಬಿಂಬಿಸುವುದು ಇದರ ಉದ್ದೇಶ. ಈ ಬಗೆಯ ನಿರೂಪಣೆಯನ್ನು ಇರಾನಿನ ಇನ್ನೊಬ್ಬ ಪ್ರಸಿದ್ಧ ನಿರ್ದೇಶಕ ಅಬ್ಬಾಸ್ ಕಿಯರೋಸ್ತಮಿ ʻಕ್ಲೋಸ್‌ ಅಪ್‌ʼ ಚಿತ್ರದಲ್ಲಿ ಮಾಡಿರುವುದನ್ನು ನೆನಪು ಮಾಡಿಕೊಳ್ಳಬಹುದು. ಚಿತ್ರದಲ್ಲಿ ಆ ಗಂಡ-ಹೆಂಡಿರು ನ್ಯಾಯಾಧೀಶರ ಎದುರು ತಮ್ಮ ನಡುವೆ ಉಂಟಾದ ಸಮಸ್ಯೆಯನ್ನು ಕುರಿತು ವಾದ ಮಂಡಿಸುವುದನ್ನು ಚಿತ್ರಿಸುತ್ತಾ ನಿರ್ದೇಶಕರು ಚಿತ್ರದ ನಿರೂಪಣೆಯನ್ನು ಪ್ರಾರಂಭಿಸುತ್ತಾರೆ.

ಇರಾನಿನ ಮಧ್ಯಮ ವರ್ಗದ ಸಂಸಾರದಲ್ಲಿ ಹೆಂಡತಿ ಜೀವನವನ್ನು ಉತ್ತಮಪಡಿಸಿಕೊಳ್ಳುವುದಕ್ಕಾಗಿ ಮಗಳ ಜೊತೆ ಪರದೇಶಕ್ಕೆ ಹೋಗಲು ಅಪೇಕ್ಷಿಸುತ್ತಾಳೆ. ತನ್ನ ತಂದೆಯ ಅನಾರೋಗ್ಯದ ಕಾರಣ ಇದಕ್ಕೊಪ್ಪದ ಗಂಡನಿಗೆ ವಿಚ್ಛೇದನಕೊಡಲು ಬಯಸುತ್ತಾಳೆ.

ಸಿಮನ್ನಳಿಗೆ ಮಗಳ ಜೊತೆ ಬೇರೆ ದೇಶಕ್ಕೆ ಹೋಗಿ ಜೀವಿಸಬೇಕೆನ್ನುವ ಅಪೇಕ್ಷೆ. ಆದರೆ ಅಪ್ಪನ ಮರೆವಿನ ಕಾಯಿಲೆಯ ಕಾರಣ ನೆಡರ್ ಅದಕ್ಕೆ ಒಪ್ಪದಿರುವುದೇ ಸಮಸ್ಯೆ. ಇದು ಮುಂದುವರಿದಂತೆ ಸಿಮನ್ ನೆಡರ್ ಗೆ ʻನೀವು ಮಗ ಎನ್ನುವುದು ಕೂಡ ನಿಮ್ಮ ತಂದೆಗೆ ಮರೆತುಹೋಗಿದೆʼ ಎನ್ನುತ್ತಾಳೆ. ಈ ಮಾತಿನ ಹಿಂದೆ ಮಾವನ ಬಗ್ಗೆ ಅವಳಿಗೆ ಇರುವ ನಿರ್ಲಕ್ಷ್ಯ ಮತ್ತು ಅಮಾನವೀಯ ಧೋರಣೆಗಿಂತ ಹೆಚ್ಚಾಗಿ ಯಾವ ಪರಿಸ್ಥಿತಿಯಲ್ಲಿ ಆಗಲೇ ತನ್ನ ಗಂಡ ಮಗಳೊಂದಿಗೆ ಪ್ರತ್ಯೇಕವಾಗಿ ಉನ್ನತ ಮಟ್ಟದ ಸುಖ ಬಯಸುವ ಅಪೇಕ್ಷೆ ಎನಿಸುತ್ತದೆ. ಆದರೆ ಇದು ಯಾವುದೇ ಮಧ್ಯಮ ವರ್ಗದ ಹೆಣ್ಣಿನಲ್ಲಿಯೂ ಉಂಟಾಗುವುದು ಸಹಜ ಎನ್ನುವುದು ಕೂಡ ನಿಜವೆ. ಇದರ ಹಿಂದೆ ಮನುಷ್ಯನ ಮೂಲಗುಣವಾದ ಸ್ವಾರ್ಥ ಕೂಡ ಇರುವುದು ತೀರಾ ಸ್ಪಷ್ಟ. ಅವಳ ಪ್ರಶ್ನೆಗೆ ನೆಡರ್ ʻನನ್ನಪ್ಪನಿಗೆ ಗೊತ್ತಾಗದಿರಬಹುದು. ಆದರೆ ಅವರು ನನ್ನ ತಂದೆ ಎನ್ನುವುದು ನನಗೆ ಗೊತ್ತುʼ ಎನ್ನುತ್ತಾನೆ. ಅವನ ಮಾತಿನಲ್ಲಿ ಅವನ ಧೋರಣೆಯನ್ನು ಹಾಗೂ ತಂದೆಯ ಬಗ್ಗೆ ಇರುವ ವಾತ್ಸಲ್ಯ ಮತ್ತು ಕಾಳಜಿಯನ್ನು ತೋರಿಸುತ್ತದೆ. ನಿರ್ದೇಶಕರು ಮಾನವ ಸಂಬಂಧಗಳಲ್ಲಿ ಮಾನವೀಯ, ಅಮಾನವೀಯ ಕುರಿತಂತೆ ಚಿತ್ರದ ನಿರೂಪಣೆ ಒಳಗೊಂಡಿದೆ ಎನ್ನುವುದನ್ನು ಮುಂಚಿತವಾಗಿಯೇ ಸೂಚಿಸುತ್ತಾರೆ.

ಸಿಮನ್ ಮಗಳೊಂದಿಗೆ ಪರದೇಶಕ್ಕೆ ಕೊಡಲು ನೆಡರ್ ನ ಒಪ್ಪಿಗೆ ಬೇಕು ಎನ್ನುವ ನ್ಯಾಯಾಧೀಶರ ಮಾತು ಇಡೀ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತದೆ. ಈ ಪರಿಸ್ಥಿತಿ ಉಂಟಾದಾಗ ಸಿಮನ್ ಅತ್ಯಂತ ವಿಪರೀತವೆನಿಸುವ ಬಗೆಯಲ್ಲಿ ಕ್ರೂರ ಎನಿಸುವ ನಿರ್ಧಾರವನ್ನು ತೆಗೆದುಕೊಳ್ಳುತ್ತಾಳೆ. ಅದೆಂದರೆ ಮಗಳ ಜೊತೆಗೆ ಪರದೇಶಕ್ಕೆ ಹೋಗಲು ಗಂಡನನ್ನು ತೊರೆಯಲು ಸಿದ್ಧಳಾಗಿ ವಿವಾಹ ವಿಚ್ಛೇದನಕ್ಕೆ ಪ್ರಯತ್ನಿಸುತ್ತಾಳೆ. ಅನಂತರ ಗಂಡ-ಹೆಂಡಿರು ರಿಜಿಸ್ಟರ್ ನಲ್ಲಿ ಅದರ ಬಗ್ಗೆ ಬರೆಯುತ್ತಾರೆ. ಈ ವೇಳೆಗೆ ಕೋರ್ಟ್‌ ನಲ್ಲಿ ನಡೆಯುವ ಪ್ರಕ್ರಿಯೆ ಮುಗಿಯುತ್ತದೆ. ಇಲ್ಲಿಗೆ ಟೈಟಲ್ ಕಾರ್ಡುಗಳು ಮುಗಿಯುತ್ತವೆ.

ಆ ನಂತರ ಚಿತ್ರ ಮುಂದುವರಿದು ಕೋರ್ಟಿನಿಂದ ದೃಶ್ಯ ಮನೆಗೆ ಬದಲಾಗುತ್ತದೆ. ಅಲ್ಲಿ ನಿರುದ್ವಿಗ್ನ ನಿರಾತಂಕದ ತುದಿಯಲ್ಲಿರುವ ಸಿಮನ್ ನೆಡರ್ ಮತ್ತು ಟರ್ಮೆ ಅವರನ್ನು ಬಿಟ್ಟು ತವರಿಗೆ ಹೋಗಲು ಸಿದ್ಧತೆ ನಡೆಸಿರುತ್ತಾಳೆ. ಸಾಮಾನುಗಳನ್ನು ಸಾಗಿಸುವವರೆಗೆ ಸೂಚನೆಗಳನ್ನು ಕೊಡುವುದು ಇತ್ಯಾದಿಯನ್ನು ಕ್ಯಾಮೆರಾ ಹಿಡಿದು ಓಡಾಡುತ್ತಾ ಚಿತ್ರೀಕರಿಸಿವುದನ್ನು ಕಾಣುತ್ತೇವೆ. ಇದರಲ್ಲಿ ಕಡಿಮೆ ಅವಧಿಯ ಶಾಟ್‌ಗಳು ಮತ್ತು ಸಂಕಲನ ಕಾಣುತ್ತದೆ. ಹೀಗೆ ನಡೆಯುವ ಶೀಘ್ರಗತಿಯ ನಿರೂಪಣ ಕ್ರಮದಲ್ಲಿ ಮಗಳು ಟರ್ಮೆ ಮತ್ತು ತಂದೆ ಅವರನ್ನು ಪ್ರೇಕ್ಷಕರಿಗೆ ಪರಿಚಯ ಮಾಡಿಕೊಡುತ್ತಾನೆ ಅಸ್ಗರ್ ಫರ್ಹಾದಿ. ನೆಡರ್ ತಂದೆಯನ್ನು ನೋಡಿಕೊಳ್ಳಲು ರಜಿ಼ಯಾಳನ್ನು ನೇಮಿಸುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾನೆ.

ಅನಂತರ ಆಕೆ ನಾಲ್ಕೈದು ವರ್ಷದ ಮಗಳ ಜೊತೆ ಕೆಲಸ ವಹಿಸಿಕೊಳ್ಳುವುದಕ್ಕೆ ಬರುತ್ತಾಳೆ. ನೆಡರ್ ನ ಸುಮಾರು ಎಂಬತ್ತರ ವಯಸ್ಸಿನ ತಂದೆ ಆಕೆಯನ್ನು ಕೂಡ ಸಿಮನ್ ಎಂದೇ ಮೆಲುದನಿಯಲ್ಲಿ ಕರೆದು ಮಾತನಾಡುತ್ತಾನೆ ಹೀಗೆ ಮಾಡುವುದು ಅವನ ಮರೆವಿನ ಸ್ಥಿತಿ ಇತ್ಯಾದಿಯನ್ನು ಸೂಚಿಸುತ್ತದೆ.

ಮನೆಯಲ್ಲಿ ನೆಡರ್ ನ ತಂದೆಯನ್ನು ಬಿಟ್ಟರೆ ಇನ್ನು ಯಾರೂ ಇರುವುದಿಲ್ಲ. ಜತೆಗೆ ಅವರನ್ನು ನೋಡಿಕೊಳ್ಳುವ ಬಸುರಿ ಹೆಂಗಸು ರಜಿ಼ಯಾ ಮಾತ್ರ ಇರುತ್ತಾರೆ. ಬ್ಯಾಂಕ್ ನಲ್ಲಿ ನೆಡರ್ ನ ಉದ್ಯೋಗದ ಬಗ್ಗೆಯೂ ಇರುವ ಸಮಸ್ಯೆಯನ್ನು ಬಿಂಬಿಸುವುದರ ಮುಖಾಂತರ ಇರಾನ್‌ ನಲ್ಲಿ ದೇಶವ್ಯಾಪಿ ತಲೆದೋರಿರುವ ಉದ್ಯೋಗ ಸಂಬಂಧಿತ ಬಿಗುವಿನ ವಾತಾವರಣವನ್ನೂ ಮನಗಾಣಿಸುತ್ತಾನೆ.

ತಂದೆಯನ್ನು ನೋಡಿಕೊಳ್ಳುವುದಕ್ಕೆ ನೇಮಿಸಿರುವ ರಜಿ಼ಯಾ ಎದುರಿಸುವ ತೊಂದರೆಯಿಂದ ನಿರೂಪಣೆಯಲ್ಲಿ ತಿರುವುಗಳು ಶೀಘ್ರಗತಿಯಲ್ಲಿ ಉಂಟಾಗುವುದನ್ನು ಕಾಣುತ್ತೇವೆ. ತಾನು ಮುಸ್ಲಿಂ ಆಗಿರುವುದರಿಂದ ನೆಡರ್ ನ ತಂದೆ ಉಟ್ಟ ಬಟ್ಟೆಯಲ್ಲಿಯೇ ಉಚ್ಚೆ ಹೊಯ್ದುಕೊಂಡಿರುವುದನ್ನು ತೊಳೆದು ಶುಚಿಗೊಳಿಸಬಹುದು ಹೇಗೆ ಎಂಬ ಸಮಸ್ಯೆಯಾಗುತ್ತದೆ ರಜಿ಼ಯಾಳಿಗೆ. ಇದು ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ್ದು ಎಂದು ಅವಳ ಅಭಿಪ್ರಾಯ. ಈ ವಿಷಯವನ್ನು ತಿಳಿದವರಿಂದ ಅದನ್ನು ಕುರಿತು ಮಾಹಿತಿ ಪಡೆಯುತ್ತಾಳೆ. ಅನಂತರ ನೆಡರ್ ನ ತಂದೆ ಏಳದಿರುವಂತೆ ಕಟ್ಟಿ ಹಾಕಿ ಡಾಕ್ಟರನ್ನು ಕಾಣುವುದಕ್ಕೆ ಮನೆಯಿಂದ ಹೋಗುತ್ತಾಳೆ.

ನೆಡರ್ ಟೆರ್ಮೆ ಜೊತೆ ಮನೆಗೆ ಹಿಂತಿರುಗಿ ಬಂದಾಗ ತಂದೆ ಬಿದ್ದಿದ್ದನ್ನು ಕಂಡು ತೀವ್ರ ಉದ್ವೇಗಕ್ಕೆ ಒಳಗಾಗುತ್ತಾನೆ. ಇದನ್ನು ನಿಭಾಯಿಸುವ ಅವಧಿಯಲ್ಲಿ ಬರುವ ರಜಿ಼ಯಾಳ ಮೇಲೆ ಸಿಟ್ಟಾಗುತ್ತಾನೆ. ಗಂಡನಿಗೆ ಗೊತ್ತಿಲ್ಲದೆ ಮಾಡುತ್ತಿರುವ‌ ಕೆಲಸಕ್ಕೆ ಇನ್ನು ಮುಂದೆ ಬರುವುದಕ್ಕೆ ಆಗುವುದಿಲ್ಲ ಎನ್ನುತ್ತಾಳೆ. ಅನಂತರದ ತೀವ್ರತರ ಮಾತು-ನಡೆಯಲ್ಲಿ ನೆಡರ್ ಅವಳನ್ನು ಬಾಗಿಲಿಂದ ಆಚೆ ದೂಡುತ್ತಾನೆ. ಆಗ ಬಿದ್ದ ರಜಿ಼ಯಾಳಿಗೆ ಗರ್ಭಸ್ರಾವವಾಗಿ ಹೊಟ್ಟೆಯಲ್ಲಿದ್ದ ಮಗು ಸತ್ತು ಹೋಯಿತು ಎಂಬ ಆರೋಪದ ಕಾರಣದಿಂದ ಸಮಸ್ಯೆ ಮತ್ತೊಂದು ತಿರುವನ್ನು ಪಡೆಯುತ್ತದೆ. ರಜಿ಼ಯಾಳ ಗಂಡ ನೆಡರ್ ಮೇಲೆ ಹುಟ್ಟಲಿರುವ ತನ್ನ ಮಗುವಿನ ಸಾವಿಗೆ ಕಾರಣ ಎಂದು ಕೋರ್ಟಿನ ಮೊರೆ ಹೊಕ್ಕು ಶಿಕ್ಷೆ ವಿಧಿಸಬೇಕೆಂದು ಕೋರುತ್ತಾನೆ. ಈ ಘಟನೆಯಿಂದಾಗಿ ನೆಡರ್ -ಸಿಮನ್‌ ರ ವಿಚ್ಛೇದನ ಪ್ರಕರಣ ಸಂಪೂರ್ಣವಾಗಿ ಹಿನ್ನೆಲೆಗೆ ಹೋಗುತ್ತದೆ.

ನೆಡರ್ ವಿರುದ್ಧ ದಾಖಲಾಗಿರುವ ಆರೋಪದ ನಿವಾರಣೆಯ ಚರ್ಚೆ ಹಾಗೂ ಉಪಾಯ ಹುಡುಕುವುದರಲ್ಲಿ ಸಿಮನ್ ಭಾಗಿಯಾಗುತ್ತಾಳೆ. ಇವೆಲ್ಲ ಘಟನಾವಳಿಗಳು ಅತಿ ಶೀಘ್ರಗತಿಯಲ್ಲಿ ನಿರೂಪಣೆಗೊಂಡಿರುವುದು ಕೊಂಚ ಅಸಮಾಧಾನವೆನಿಸಿದರೂ ತಪ್ಪಲ್ಲ. ಆದರೆ ಕುತೂಹಲವನ್ನು ಕಾಪಾಡಿಕೊಳ್ಳುವುದರಲ್ಲಿ ಸಫಲವಾಗುತ್ತವೆ.

ಚಿತ್ರದ ಪ್ರಮುಖ ಮತ್ತು ಎಲ್ಲ ಪೋಷಕ ಪಾತ್ರಗಳು ಈ ಘಟನೆಗಳಿಂದ ಉದ್ವೇಗಕ್ಕೆ ಒಳಗಾಗಿರುವಂತೆ ಕಂಡರೂ ಎಲ್ಲಿಯೂ ಅತಿರೇಕದ ಸೋಂಕಿಲ್ಲದೆ ಅತ್ಯಂತ ಸಹಜವಾಗಿ ಮತ್ತು ಭಾವಾವೇಶದ ಅಭಿನಯವಿಲ್ಲದೆ ಒಪ್ಪಿಗೆಯಾಗುವ ಅಭಿನಯದಿಂದ ತಮ್ಮ ಕರ್ತವ್ಯವನ್ನು ನೆರವೇರಿಸುತ್ತಾರೆ.

ರಜಿ಼ಯಾ ದಂಪತಿಗೆ ಉಂಟಾದ ಆಘಾತಕ್ಕೆ ಪರಿಹಾರ ರೂಪವಾಗಿ ದುಡ್ಡು ತೆಗೆದುಕೊಳ್ಳುವುದಕ್ಕೆ ಒಪ್ಪಿಸುವುದರಲ್ಲಿ ಸಿಮನ್ ಗೆಲ್ಲುತ್ತಾಳೆ. ಈಗ ಪಡೆಯುವ ತಿರುವು ಅತ್ಯಂತ ಪ್ರಮುಖ. ಅಂದರೆ ರಜಿ಼ಯಾಳಿಗೆ ಉಂಟಾದ ಗರ್ಭಸ್ರಾವಕ್ಕೆ ನೆಡರ್ ಅವಳನ್ನು ಹೊರದೂಡಿದಾಗ ಬಿದ್ದದ್ದು ಕಾರಣವಲ್ಲ, ಅವಳು ಹಿಂದಿನ ದಿನ ಕಾರ್‌ ಅಪಘಾತದಲ್ಲಿ ಸಿಲುಕಿದ್ದು ಕಾರಣ ಎಂದು ತಿಳಿದು ಬರುತ್ತದೆ. ಇದರಿಂದ ಹಣ ತೆಗೆದುಕೊಳ್ಳುವುದರ ಬಗ್ಗೆ ಉಂಟಾದ ಸಮಸ್ಯೆಯನ್ನು ನೈತಿಕತೆ ಮತ್ತು ಪಾಪಪ್ರಜ್ಞೆಯ ಕಾರಣದಿಂದ ರಜಿ಼ಯಾ ನಿರಾಕರಿಸುತ್ತಾಳೆ.

ಈ ಸಮಸ್ಯೆ ಬಗೆಹರಿದರೂ ಸಿಮನ್‌ ಮತ್ತು ನೆಡರ್ ನಡುವಿನ ಸಮಸ್ಯೆ ಕೋರ್ಟಿನಲ್ಲಿ ಮುಂದುವರಿಯುತ್ತದೆ. ನ್ಯಾಯಾಧೀಶರ ಎದುರು ತಂದೆ-ತಾಯಿಯ ವಿವಾಹ ವಿಚ್ಛೇದನವಾದರೆ ಯಾರ ಬಳಿ ಇರುತ್ತೇನೆಂದು ಟೆರ್ಮೆ ನಿರ್ಣಾಯಕವಾಗಿ ಹೇಳದಿರುವುದರಿಂದಲೇ ಅವರ ಸಂಸಾರದ ಬಂಧ ಒಡೆಯುವುದಿಲ್ಲ. ಹೀಗಾಗಿ ಚಿತ್ರದ ಪ್ರಾರಂಭದಲ್ಲಿ ಇದ್ದ ಸಮಸ್ಯೆ ಕೊನೆಗೂ ಹಾಗೆಯೇ ಉಳಿಯುತ್ತದೆ. ಕೋರ್ಟಿನಿಂದ ಪ್ರಾರಂಭವಾಗಿ ಕೋರ್ಟಿನಲ್ಲಿಯೇ ಮುಕ್ತಾಯವಾಗುತ್ತದೆ. ಇದರಿಂದಾಗಿ ಅದು ಚಕ್ರಾಕಾರದ ಮೋಟಿಫ್‌ (ಸರ್ಕುಲರ್‌ ಮೋಟಿಫ್) ಹೊಂದಿದೆ ಎನ್ನಿಸಿಕೊಳ್ಳುತ್ತದೆ.