ಚಿಕ್ಕಂದಿನಲ್ಲಿ ನಾನು ತೋಟದಲ್ಲಿ ಅಪರೂಪಕ್ಕೆ ಹೆಜ್ಜೇನಿನ ಗೂಡುಗಳನ್ನು ನೋಡಿದ್ದಿದೆ, ಆದರೆ ಅವುಗಳ ಜೇನನ್ನು ಇಳಿಸಬೇಕೆನ್ನುವ ವಿಚಾರ ಯಾರೂ ಮಾಡಿರಲಿಲ್ಲ. ಜನ ಹೆಜ್ಜೇನಿನ ತಂಟೆಗೆ ಹೋಗುತ್ತಿರಲಿಲ್ಲ ಎಂದು ಇದರರ್ಥ. ಇದರಿಂದ ಹೆಜ್ಜೇನಿಗೆ ಲಾಭವಾಯಿತೇ ಎಂದರೆ ಹೇಳುವುದು ಕಷ್ಟ. ಮನುಷ್ಯರ ಕೋನದಿಂದ ಜೇನಿನಲ್ಲಿ ಹೆಜ್ಜೇನು ‘ವೈಲ್ಡ್’, ಮನುಷ್ಯರ ಆಯ್ಕೆಗೆ ಒಳಗಾದುದಲ್ಲ. ಕೋಳಿಗಳಲ್ಲಿ ಕಾಡುಕೋಳಿ, ನಾಡುಕೋಳಿ ಇದ್ದಹಾಗೆ. ಮನುಷ್ಯರಿಂದ ಆಯ್ಕೆಗೆ ಒಳಗಾದ್ದು ನಾಡುಕೋಳಿ, ಅದು ಅಭಿವೃದ್ಧಿ ಹೊಂದುತ್ತದೆ. ಕಾಡುಕೋಳಿಗೆ ಆ ಅನುಕೂಲತೆಯಿಲ್ಲ. ಇದು ಜೇನ್ನೊಣಗಳ ವಿಷಯದಲ್ಲಿ ಅಷ್ಟೊಂದು ಸ್ಪಷ್ಟವಾಗದೆ ಇರಬಹುದು; ಆದರೆ ಹೆಜ್ಜೇನನ್ನು ತೊಡವೆ ಜತೆ ಹೋಲಿಸಿದಾಗ ಗೊತ್ತಾಗುತ್ತದೆ.
ಕೆ.ವಿ. ತಿರುಮಲೇಶ್ ಲೇಖನ

 

ಮೊಬೈಲ್ ಫೋನು ಬಂದ ಮೇಲೆ ಯುರೋಪಿನಲ್ಲಿ ಜೇನು ಉತ್ಪಾದನೆಯ ಪ್ರಮಾಣ ಗಣನೀಯವಾಗಿ ಇಳಿದಿದೆ ಎಂಬ ವರದಿಯೊಂದನ್ನು ಈಚೆಗೆ ಓದಿ ಬೆಚ್ಚಿಬಿದ್ದವರಲ್ಲಿ ನಾನೂ ಒಬ್ಬ. ನಾವು ಕನಸಿನಲ್ಲೂ ಊಹಿಸಲಾರದ ಹಲವು ಅನಪೇಕ್ಷಿತ ಸಂಗತಿಗಳು ಲೋಕದಲ್ಲಿ ನಡೆಯುತ್ತಲೇ ಇರುತ್ತವೆ. ಅದರಲ್ಲಿ ಈ ಮೊಬೈಲ್ ಫೋನುಗಳ ಹೆಚ್ಚಳದ ಕಾರಣದಿಂದ ಜೇನು ಉತ್ಪಾದನೆಯಲ್ಲಿ ಉಂಟಾದ ಇಳಿತವೂ ಒಂದು. ಏನು ಸಂಬಂಧ ಇವೆರಡಕ್ಕೆ ಎಂದರೆ ಮೊಬೈಲಿನ ಗೋಪುರಗಳು ನಿರಂತರ ಪಸರಿಸುವ ವಿದ್ಯುನ್ಮಾನ ತರಂಗಗಳು ಜೇನ್ನೊಣಗಳನ್ನು ಗಾಬರಿಗೊಳಿಸುತ್ತವಂತೆ. ಆದ್ದರಿಂದ ಈ ನೊಣಗಳು ಸಹಜವಾಗಿಯೆ ತಮ್ಮ ಕಾರ್ಯಕ್ಷಮತೆಯನ್ನು ಕಳೆದುಕೊಳ್ಳುತ್ತವೆ.

ಒಂದು ‘ಸೂಕ್ಷ್ಮಾಣು’ (ವಿದ್ಯುನ್ಮಾನ ತರಂಗ) ಇನ್ನೊಂದು ‘ಸೂಕ್ಷ್ಮ’ ಜೀವಿಗೆ (ಜೇನ್ನೊಣ) ಅಡ್ಡಬರುವ ವಿದ್ಯಮಾನವನ್ನು ನಾವಿಲ್ಲಿ ಕಾಣುತ್ತೇವೆ. ಆಧುನಿಕ ಮನುಷ್ಯರಿಗಾದರೆ ಇವೆರಡೂ ಬೇಕು! ಮನುಷ್ಯರು ವಿದ್ಯುನ್ಮಾನ ತರಂಗಗಳನ್ನು ಉತ್ಪಾದಿಸಲು ಮತ್ತು ತಕ್ಕ ಮಟ್ಟಿಗೆ ನಿಯಂತ್ರಿಸಲು ಕಲಿತುಕೊಂಡಿದ್ದಾರೆ, ಆದರೆ ಎಷ್ಟೇ ಯತ್ನಿಸಿದರೂ ಅವರು ಕೃತಕವಾಗಿ ಜೇನನ್ನು ಉತ್ಪಾದಿಸಲಾರರು. ಜೇನನ್ನು ಜೇನ್ನೊಣಗಳು ಮಾತ್ರವೇ ತಯಾರಿಸಬಲ್ಲುವು—ಜೇನುಗೂಡು ಎಂಬ ತಾವೇ ಕಟ್ಟುವ ಫ್ಯಾಕ್ಟರಿಯಲ್ಲಿ. ಹಾಗೂ ಜೇನ್ನೊಣಗಳು ನಮಗೆ ಬೇಕಾದ್ದು ಕೇವಲ ಜೇನು ಮತ್ತು ಅವು ಆನುಷಂಗಿಕವಾಗಿ ಸಿದ್ಧಪಡಿಸುವ ಮಯಣಕ್ಕೋಸ್ಕರ ಮಾತ್ರವೇ ಅಲ್ಲ, ನಮ್ಮ ಗೋಚರಕ್ಕೆ ಬರದ, ಆದರೆ ನಮಗೆಲ್ಲರಿಗೂ ಅಗತ್ಯವಾದ ‘ಪರಾಗ ಸ್ಪರ್ಶ’ ಎಂಬ ಕ್ರಿಯೆಗೂ ಅವು ಬೇಕು. ಅವೇನೂ ಬೇಕೆಂದೇ ಪರಾಗ ಸ್ಪರ್ಶ ಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ನಿಜ; ಅವಕ್ಕೆ ಬೇಕಾದುದು ಹೂವಿನಲ್ಲಿರುವ ಮಕರಂದ (‘ನೆಕ್ಟರ್’). ಅದನ್ನು ಬೇರೆ ಬೇರೆ ಹೂಗಳಿಂದ ಸಂಗ್ರಹಿಸುತ್ತ ಅವು ತಮಗೆ ಅರಿವಿಲ್ಲದೆಯೆ ಪರಾಗ ಸ್ಪರ್ಶವನ್ನೂ ಮಾಡುತ್ತವೆ.

ಈ ಪ್ರಕ್ರಿಯೆಯಲ್ಲಿ ನ್ಯೂನತೆ ಉಂಟಾದರೆ ನಮ್ಮ ಬೆಳೆಗಳ ಮೇಲೆ ಎಂತಹ ನಕಾರಾತ್ಮಕ ಪರಿಣಾಮ ಉಂಟಾಗಬಹುದು ಎನ್ನುವುದನ್ನು ಊಹಿಸಿಕೊಳ್ಳಬಹುದು. ಪ್ರಕೃತಿ ಯಾವುದೋ ಒಂದು ಅದ್ಭುತವಾದ ಸಮತೋಲದಲ್ಲಿದೆ. ಅದಕ್ಕೆ ತೊಂದರೆಯಾದರೆ ಹಗ್ಗದ ಮೇಲೆ ನಡೆಯುವ ಡೊಂಬರ ಹುಡುಗಿ ಬಿದ್ದುಬಿಡುತ್ತಾಳೆ. ಆದ್ದರಿಂದಲೇ ಚೈನಾದಲ್ಲಿ ಮಳೆಯಾದರೆ ನಾವಿಲ್ಲಿ ಸೀನುವುದು, ಆದ್ದರಿಂದಲೇ ಜಾನ್ ಡನ್ ಹೇಳಿದುದು: Any man’s death diminishes me, because I am involved in Mankind; and therefore never send to know for whom the bell tolls; It tolls for thee.

ಜೇನ್ನೊಣ ಒಂದು ವನ್ಯಜೀವಿ. ಮರದ ಕೊಂಬೆಗಳಲ್ಲಿ, ಪೊಟರೆಗಳಲ್ಲಿ ವಾಸಿಸುವ ಸಮೂಹಜೀವಿ. ಅದು ಕೆಲವು ಸಲ ಮನೆ ಮಾಡುಗಳಲ್ಲಿ, ಗೋಪುರಗಳಲ್ಲಿ ಗೂಡು ಕಟ್ಟಬಹುದು; ಆದರೆ ಅಷ್ಟಕ್ಕೆ ಜೇನ್ನೊಣ ಮನುಷ್ಯಾವಲಂಬಿ ಎನ್ನುವಂತಿಲ್ಲ. ಮನುಷ್ಯರ ರಗಳೆ ಇದ್ದಲ್ಲಿ ಅದು ಇರಬಯಸುವುದಿಲ್ಲ. ಬಹುಶಃ ಮನುಷ್ಯನಿರುವ ಮೊದಲಿಂದಲೇ ಅದು ಇದ್ದಿರಬಹುದು. ಆದರೆ ಮನುಷ್ಯ ಅದನ್ನು ಬಯಸಿದ, ಇರಗೊಟ್ಟ ಎನ್ನುವುದು ನಿಜ; ಆದ್ದರಿಂದ ಡಾರ್ವೀನಿಯನ್ ಥಿಯರಿ ಒಂದಷ್ಟು ಮಟ್ಟಿಗೆ ಇಲ್ಲಿ ಕೆಲಸ ಮಾಡಿದೆ ಎನ್ನಬಹುದು. ಆದರೆ ಜೇನ್ನೊಣ ಮನುಷ್ಯನನ್ನು ಬಯಸಿತೇ?! ಬಯಸದೆ (ಆಶ್ರಯಿಸದೆ) ಇದ್ದರೂ ಮನುಷ್ಯ ಮತ್ತು ಜೇನ್ನೊಣದ ಸಂಬಂಧ ಮನುಷ್ಯ ಮತ್ತು ಜೇನ್ನೊಣದ ದಾಯಾದಿಯಂತಿರುವ ಕಣಜದ ಹುಳದ (ಹವ್ಯಕ: ‘ಕಡಂದಲು’) ಸಂಬಂಧದಂತೆ ಅಲ್ಲ.
ಕಣಜದ ಗೂಡನ್ನು ಮನುಷ್ಯ ಹತ್ತಿರ ಎಲ್ಲೂ ಇರಗೊಡುವುದಿಲ್ಲ. ಕಣಜದ ಹುಳ ಕಡಿಯುತ್ತದೆ, ಜೇನು ಉತ್ಪಾದಿಸುವುದಿಲ್ಲ; ಜೇನಿನ ಹುಳವೂ ಕಡಿಯಬಹುದು, ಆದರೆ ಮನುಷ್ಯ ಬಯಸುವ ಜೇನನ್ನು ಉತ್ಪಾದಿಸುತ್ತದೆ. ಜೇನು ಉತ್ಪಾದನೆಯನ್ನು ಒಂದು ಕೃಷಿ ರೂಪದಲ್ಲಿ ಮನುಷ್ಯ ತೊಡಗಿಸಿದ್ದು ಇಪ್ಪತ್ತನೆಯ ಶತಮಾನದಿಂದ ಇರಬೇಕು. ನನಗೆ ಅರಿವು ಮೂಡಿದಾಗ ಅದಿನ್ನೂ ಕೃಷಿಯಾಗಿಯೋ ಉಪಕೃಷಿಯಾಗಿಯೋ ಬಳಕೆಗೆ ಬಂದಿರಲಿಲ್ಲ.

ಜೇನು ಯಾರಿಗೆ ತಾನೆಇಷ್ಟವಿಲ್ಲ? ಮಧುಮೇಹ ರೋಗಿಗಳನ್ನು ಬಿಟ್ಟು ಉಳಿದೆಲ್ಲರೂ ಅದನ್ನು ಇಷ್ಟ ಪಡುವವರೇ. ಪ್ರತಿ ದಿನ ಒಂದು ಚಮಚ ಜೇನು ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಅದನ್ನು ಪ್ರತ್ಯೇಕವಾಗಿ ತಿನ್ನುವುದು ಅಪರೂಪ; ದೋಸೆ, ರೊಟ್ಟಿ ಇತ್ಯಾದಿ ಇತರ ಆಹಾರ ಪದಾರ್ಥಗಳೊಂದಿಗೆ ತಿನ್ನುವುದು ಸಂಪ್ರದಾಯ. ಹಲಸಿನ ಹಣ್ಣಿನ ತೊಳೆಯ ಜೊತೆ ಅಥವಾ ಹಲಸಿನ ಕಾಯಿಯ ದೋಸೆಯೊಂದಿಗೆ ಜೇನು ಸ್ವಾದಿಷ್ಟ – ಅವು ಪರಸ್ಪರರಿಗಾಗಿ ಇವೆಯೇನೋ ಎಂಬಂತೆ ಅನ್ಯೋನ್ಯವೆನಿಸುತ್ತವೆ.

ಇನ್ನು ಹಸುಳೆಗಳಿಗೆ ಜೇನನ್ನು ಬೆರಳಲ್ಲಿ ಅದ್ದಿ ಚೀಪಿಸುವುದಿದೆ, ಹೆಚ್ಚಾಗಿ ಮಗುವನ್ನು ನೋಡಲು ಬಂದವರ ಕೈಯಲ್ಲಿ. ಆದರೆ ಮಗುವಿಗೆ ಒಂದು ವರ್ಷ ಆಗುವ ತನಕ ಹೀಗೆ ಮಾಡುವುದು ಸರಿಯಲ್ಲ ಎನ್ನುತ್ತಾರೆ ಈಗಿನ ಡಾಕ್ಟರರು: ಜೇನಿನಲ್ಲಿರುವ ಕೆಲವು ಬ್ಯಾಕ್ಟೀರಿಯಾಗಳನ್ನು ಎದುರಿಸುವ ಶಕ್ತಿ ಮಗುವಿಗೆ ಒಂದು ವರ್ಷ ಆಗುವವರೆಗೆ ಇರುವುದಿಲ್ಲವಂತೆ. ಅದರೆ ನಮಗೆ ಅದೊಂದೂ ಗೊತ್ತಿರಲಿಲ್ಲ.

ಜೇನಿನಲ್ಲಿರುವ ಔಷಧೀಯ ಗುಣ ನಮ್ಮ ಜನಕ್ಕೆ ಅನುಭವದ ಮೂಲಕ ಗೊತ್ತಿತ್ತು. ಜೇನು ‘ಮನೆಮದ್ದಿ’ನ (ಮತ್ತು ಅದರ ಪರಿಷ್ಕೃತ ವೈಜ್ಞಾನಿಕ ರೂಪವಾದ ಆಯುರ್ವೇದದ) ಒಂದು ಪ್ರಧಾನ ಅಂಗ. ಒಂದು ಚೂರಾದರೂ ಜೇನು ಮನೆಯಲ್ಲಿ ಇರಲೇಬೇಕು. ಜೇನು ಕಫಕ್ಕೆ ರಾಮಬಾಣ: ಈ ಮಾತಿನಲ್ಲಿ ಸ್ವಲ್ಪ ಉತ್ಪ್ರೇಕ್ಷೆಯಿದ್ದರೂ ಸ್ವಲ್ಪ ಸತ್ಯವೂ ಇದೆ. ಜೇನು ಕಫಹಾರಿ. ಮತ್ತು ಕಫವನ್ನು ತಡೆಯಬಲ್ಲ ಶುಂಠಿ, ಅಣಲೆ, ಅತಿಮಧುರ (ಹವ್ಯಕ: ‘ಎರಟಿ ಮಧುರ’) ಮುಂತಾದುವನ್ನು ನೀರಿನಲ್ಲಿ ಅರೆದು ಸೇರಿಸಲು, ಕರಿಮೆಣಸು, ತ್ರಿಫಲಾದಿಗಳ ಚೂರ್ಣವನ್ನು ಬೆರೆಸಲು ಜೇನು ಬೇಕಾಗುತ್ತದೆ. ಹಾಗೂ ಕೆಮ್ಮಿ ಬಿರುಸಾದ ಕಂಠನಾಳವನ್ನು ಶಮನಿಸಲು ಜೇನು ಸಹಕಾರಿ. ಇದೆಲ್ಲ ನನಗಿಂತ ಹೆಚ್ಚು ಗೊತ್ತಿರಲು ಯಾರಿಗೆ ಸಾಧ್ಯ? ಇಲ್ಲ, ನಾನೇನು ವೈದ್ಯಕೀಯ ಕಲಿತು (ಕಲಿತಿಲ್ಲ) ಈ ಮಾತು ಹೇಳುತ್ತಿಲ್ಲ, ಚಿಕ್ಕಂದಿನಿಂದಲೇ ಒಬ್ಬ ಕಫ ರೋಗಿಯಾಗಿ ಹೇಳುತ್ತಿದ್ದೇನೆ.

ಸ್ವಲ್ಪ ವಂಶ ಪಾರಂಪರ್ಯದಿಂದ, ಸ್ವಲ್ಪ ನಮ್ಮ ಊರಿನ ಮಳೆ ವಾತಾವರಣದಿಂದ ನನಗೆ ಕಫಸಂಬಂಧಿ ಕಾಯಿಲೆಗಳು (ಕೆಮ್ಮು, ದಮ್ಮು, ನೆಗಡಿ, ತಲೆನೋವು, ಕೆಲವೊಮ್ಮೆ ಜ್ವರ ಇತ್ಯಾದಿ) ಅಂಟಿಕೊಂಡುವು. ಈ ಕಾರಣಕ್ಕೆ ನಾನು ಆಗಾಗ ಮನೆಮದ್ದಿಗೆ ಗುರಿಯಾಗುತ್ತಿದ್ದೆ. ಆದ್ದರಿಂದ ನನ್ನ ಮನಸ್ಸಿನಲ್ಲಿ ಜೇನು ಎಲ್ಲರೂ ಬಯಸುವ ಒಂದು ಮಧುರ ವಸ್ತು ಎನ್ನುವುದಕ್ಕಿಂತ ಹೆಚ್ಚಾಗಿ ಒಂದು ಔಷಧಿಯ ರೂಪ ಪಡೆದಿದೆ. ಜೇನು ಕೆಲವು ಧಾರ್ಮಿಕ ಕ್ರಿಯೆಗಳಿಗೂ ಬೇಕು (ಮಧುಪರ್ಕ, ಪಂಚಾಮೃತ, ಅನ್ನ ಪ್ರಾಶನ) ಎನ್ನುವುದನ್ನು ಗಮನಿಸಿದರೆ ಅದು ಕಾಲಾಂತರದಿಂದಲೂ ಮನುಷ್ಯ ಸಂಸ್ಕೃತಿಯ ಜತೆ ಬಂದಿದೆ ಎನ್ನುವುದು ಸ್ಪಷ್ಟ.

ಮೂರು ವರ್ಗಗಳ ಜೇನು ನಮಗೆ ಪರಿಚಯವಿದ್ದುವು: ಹೆಜ್ಜೇನು, ತೊಡವೆ, ಮಜಂಟಿ. ಇವಕ್ಕೆ ಪ್ರಾದೇಶಿಕವಾಗಿ ಬೇರೆ ಹೆಸರುಗಳು ಇದ್ದರೂ ಇರಬಹುದು. ಹೆಜ್ಜೇನು ಹೆಸರೇ ಹೇಳುವಂತೆ ಎಲ್ಲ ರೀತಿಯಿಂದಲೂ ದೊಡ್ಡದು. ನೊಣಗಳ ಗಾತ್ರ, ಅವು ಕಟ್ಟುವ ಗೂಡು ದೊಡ್ಡವು, ಹಾಗೂ ಯಾರಿಗೂ ಸುಲಭದಲ್ಲಿ ಎಟುಕದಷ್ಟು ಎತ್ತರದಲ್ಲಿ ಕಟ್ಟುತ್ತವೆ. ಇಂಗ್ಲಿಷ್ ನಲ್ಲಿ ಇವನ್ನು ‘ಬಂಬ್ಲ್ ಬೀ’ ಎಂದು ಕರೆಯುತ್ತಾರೆ. ಇದೊಂದು ಮುದ್ದಾದ ಪದ; ‘ಬಂಬ್ಲ್’ ಎನ್ನುವುದು ‘ಹಂಬ್ಲ್’ (‘ಪಾಪದ’) ಎನ್ನುವ ಪದದೊಂದಿಗೆ ಪ್ರಾಸಬದ್ಧವಾಗಿದೆ. ಆದರೆ ಈ ಬಂಬ್ಲ್ ಬೀ ‘ಹೆಜ್ಜೇನು’ ಅಷ್ಟೇನೂ ಪಾಪದ್ದಲ್ಲ. ಇದು ಕಡಿದರೆ ಪ್ರಾಣಾಂತಿಕವಲ್ಲದಿದ್ದರೂ ತುಂಬಾ ನೋವಾಗುತ್ತದೆ.

ಎಲ್ಲಾ ವರ್ಗಗಳ – ಹೆಜ್ಜೇನು, ತೊಡವೆ, ಮಜಂಟಿ – ಜೇನ್ನೊಣಗಳಿಗೂ ಒಂದು ವಿಶೇಷತೆಯಿದೆ: ಗಂಡಾಂತರದಲ್ಲಿರುವಾಗ ಅವು ಒಂದು ತರದ ರಾಸಾಯನಿಕ ದ್ರವವನ್ನು ಸ್ರವಿಸುತ್ತವೆ, ಇದರ ವಾಸನೆಯನ್ನು ಇತರ ಹುಳಗಳು ಗ್ರಹಿಸಬಲ್ಲವು. ಅವು ಸಾಮೂಹಿಕವಾಗಿ ವೈರಿಯ ಮೇಲೆ ಆಕ್ರಮಣ ನಡೆಸುವುದು ಆಗ. ಹೆಜ್ಜೇನು ಸಾಮೂಹಿಕವಾಗಿ ಮನುಷ್ಯರನ್ನು ಆಕ್ರಮಿಸಿದರೆ ಕಡಿಯಲ್ಪಟ್ಟವರಿಗೆ ಅಪಾಯವೇ ಸರಿ. ಕೆಲವು ಸಲ ಯಾರೋ ಕಲ್ಲೆಸೆದದ್ದಕ್ಕೆ ಅಲ್ಲಿರುವ ಇನ್ನು ಯಾರನ್ನೋ ಅವು ಆಕ್ರಮಿಸಲೂ ಬಹುದು.

ಮೂರು ವರ್ಗಗಳ ಜೇನು ನಮಗೆ ಪರಿಚಯವಿದ್ದುವು: ಹೆಜ್ಜೇನು, ತೊಡವೆ, ಮಜಂಟಿ. ಇವಕ್ಕೆ ಪ್ರಾದೇಶಿಕವಾಗಿ ಬೇರೆ ಹೆಸರುಗಳು ಇದ್ದರೂ ಇರಬಹುದು. ಹೆಜ್ಜೇನು ಹೆಸರೇ ಹೇಳುವಂತೆ ಎಲ್ಲ ರೀತಿಯಿಂದಲೂ ದೊಡ್ಡದು. ನೊಣಗಳ ಗಾತ್ರ, ಅವು ಕಟ್ಟುವ ಗೂಡು ದೊಡ್ಡವು, ಹಾಗೂ ಯಾರಿಗೂ ಸುಲಭದಲ್ಲಿ ಎಟುಕದಷ್ಟು ಎತ್ತರದಲ್ಲಿ ಕಟ್ಟುತ್ತವೆ.

ಹೆಜ್ಜೇನು ದೊಡ್ಡ ಮರಗಳಲ್ಲಿ, ಬೃಹತ್ ಕಟ್ಟಡಗಳ ಹೆಬ್ಬಾಗಿಲು ಕಿಟಿಕಿಗಳಲ್ಲಿ ಗೂಡು ಕಟ್ಟುವುದರಿಂದ ಅವಕ್ಕೆ ಮನುಷ್ಯರೆ ನೇರ ಸಂಪರ್ಕ ಕಡಿಮೆ. ಮನುಷ್ಯರೇ ಅವುಗಳನ್ನು ಕಂಡು ಓಡಿಸಲು ಪ್ರಯತ್ನಿಸುವುದು. ಆದರೆ ಯಾವ ಜೇನ್ನೊಣವೂ ಸುಮ್ಮಗೆ ಕಡಿಯುವುದಿಲ್ಲ. ಹೆಜ್ಜೇನಿನ ಜೇನು ಮನುಷ್ಯರಿಗೆ ಲಭ್ಯವಾಗುವುದು ಕಷ್ಟವಾದ ಕಾರಣ ಅವು ‘ಡೊಮೆಸ್ಟಿಕೇಟೆಡ್’ (ಗೃಹೀಕರಣ) ಆಗಿಲ್ಲ. ಚಿಕ್ಕಂದಿನಲ್ಲಿ ನಾನು ತೋಟದಲ್ಲಿ ಅಪರೂಪಕ್ಕೆ ಹೆಜ್ಜೇನಿನ ಗೂಡುಗಳನ್ನು ನೋಡಿದ್ದಿದೆ, ಆದರೆ ಅವುಗಳ ಜೇನನ್ನು ಇಳಿಸಬೇಕೆನ್ನುವ ವಿಚಾರ ಯಾರೂ ಮಾಡಿರಲಿಲ್ಲ. ಜನ ಹೆಜ್ಜೇನಿನ ತಂಟೆಗೆ ಹೋಗುತ್ತಿರಲಿಲ್ಲ ಎಂದು ಇದರರ್ಥ. ಇದರಿಂದ ಹೆಜ್ಜೇನಿಗೆ ಲಾಭವಾಯಿತೇ ಎಂದರೆ ಹೇಳುವುದು ಕಷ್ಟ. ಮನುಷ್ಯರ ಕೋನದಿಂದ ಜೇನಿನಲ್ಲಿ ಹೆಜ್ಜೇನು ‘ವೈಲ್ಡ್’, ಮನುಷ್ಯರ ಆಯ್ಕೆಗೆ ಒಳಗಾದುದಲ್ಲ. ಕೋಳಿಗಳಲ್ಲಿ ಕಾಡುಕೋಳಿ, ನಾಡುಕೋಳಿ ಇದ್ದಹಾಗೆ. ಮನುಷ್ಯರಿಂದ ಆಯ್ಕೆಗೆ ಒಳಗಾದ್ದು ನಾಡುಕೋಳಿ, ಅದು ಅಭಿವೃದ್ಧಿ ಹೊಂದುತ್ತದೆ. ಕಾಡುಕೋಳಿಗೆ ಆ ಅನುಕೂಲತೆಯಿಲ್ಲ. ಇದು ಜೇನ್ನೊಣಗಳ ವಿಷಯದಲ್ಲಿ ಅಷ್ಟೊಂದು ಸ್ಪಷ್ಟವಾಗದೆ ಇರಬಹುದು; ಆದರೆ ಹೆಜ್ಜೇನನ್ನು ತೊಡವೆ ಜತೆ ಹೋಲಿಸಿದಾಗ ಗೊತ್ತಾಗುತ್ತದೆ. (ಇದರ ಅರ್ಥ ಕಾಡಿನಲ್ಲೇ ಉಳಿದ ಜೀವಿಗಳಾಗಲಿ ಸಸ್ಯಗಳಾಗಲಿ ನಿಸರ್ಗಕ್ಕೆ ಬೇಡ ಎಂದಲ್ಲ. ನಿಸರ್ಗದ ಮಹಾಜಾಲದಲ್ಲಿ ಎಲ್ಲದಕ್ಕೂ ಅದರದೇ ಸ್ಥಾನವಿದೆ.ಅವು ತಾವು ಇದ್ದಲ್ಲೆ ಇದ್ದ ಹಾಗೆ ಸುಖವಾಗಿವೆ ಎನ್ನೋಣ. ಆದರೆ ಮನುಷ್ಯನ ಹಸ್ತಕ್ಷೇಪ ಬಲವಂತವಾದುದು!)

ತೊಡವೆಯೆನ್ನುವುದು ಒಂದು ಪ್ರೋಟೋಟಿಪಿಕಲ್ (‘ಮಾತೃಕಾ ರೂಪದ’) ಜೇನು. ಜೇನ್ನೊಣ ಎಂದೊಡನೆ ನಮ್ಮ ಕಣ್ಣಿನಲ್ಲಿ ಮೂಡುವುದು ತೊಡವೆ ನೊಣದ ಚಿತ್ರ, ಹಾಗೂ ಜೇನು ಎಂದೊಡನೆ ಮೂಡುವುದು ತೊಡವೆ ಜೇನಿನ ಚಿತ್ರ. ತಿನಿಸಿಗೆ ಮತ್ತು ಔಷಧಿಗೆ ಸಾಧಾರಣವಾಗಿ ಬಳಕೆಯಾಗುವುದು ತೊಡವೆಯೇ. ಹೆಜ್ಜೇನಿನಂತೆ ತೊಡವೆಯೂ ಮರದ ಕೊಂಬೆಯ ಕೆಳಭಾಗದಲ್ಲಿ ಅರ್ಧಚಂದ್ರಾಕಾರವಾಗಿ ತನ್ನ ಗೂಡನ್ನು ಕಟ್ಟಿಕೊಳ್ಳುತ್ತದೆ. ಇಲ್ಲಿ ನಾನು ಏಕವಚನವನ್ನು ಇಡೀ ವರ್ಗಕ್ಕೆ ಸಂಬಂಧಿಸಿ ಹೇಳುತ್ತಿದ್ದೇನೆ. ಯಾಕೆಂದರೆ ಜೇನ್ನೊಣ ಸಮೂಹಜೀವಿ; ಏಕಾಂಗಿಯಾಗಿ ಅದು ಬದುಕುವುದಿಲ್ಲ.

ಜೇನಿನ ಗೂಡು ಅಥವಾ ಹೊಟ್ಟು (ಹವ್ಯಕ: ‘ಪೋಳೆ’) ಹಲವಾರು ಜೇನ್ನೊಣಗಳು ತಮ್ಮ ದೇಹದ ಅಡಿಭಾಗದಿಂದ ಸುರಿಸಿದ ದ್ರವದಿಂದಲೇ ಮಾಡಿದುದು. ಪೋಳೆಯ ಎರಡೂ ಭಾಗಗಳು ಒಂದೇ ರೀತಿ ಷಟ್ಕೋಣದ ಮನೆಗಳಿಂದ (ಸೆಲ್ಲುಗಳಿಂದ) ತುಂಬಿರುತ್ತವೆ. ಕೆಲವು ಕಡೆ ಮೊಟ್ಟೆಗಳ ಮನೆ, ಕೆಲವು ಕಡೆ ಜೇನಿನ ಮನೆ. ಎರಡೂ ಮುಚ್ಚಿಕೊಂಡಿದ್ದರೂ ಜೇನು ತಜ್ಞರಿಗೆ ಗೊತ್ತಿರುತ್ತದೆ ಯಾವುದು ಮೊಟ್ಟೆಮನೆಗಳು, ಯಾವುದು ಮಧುಮನೆಗಳು ಎನ್ನುವುದು – ಅವುಗಳ ಮುಚ್ಚಳಗಳ ವ್ಯತ್ಯಾಸದಿಂದ. ಮರದಿಂದ ಜೇನು ತೆಗೆಯುವವರು ಇಡೀ ಪೋಳೆಯನ್ನು ಊದಿ ನೊಣಗಳನ್ನು ಓಡಿಸಿ ಬುಡದಿಂದ ಕತ್ತರಿಸಿ ತೆಗೆಯುತ್ತಾರೆ, ಹಾಗೂ ಜೇನಿರುವ ಭಾಗವನ್ನು ಪಾತ್ರೆಗೆ ಹಿಂಡಿ ಜೇನು ಇಳಿಸುತ್ತಾರೆ. ಮಯಣದ ಭಾಗವನ್ನು ಮೊಟ್ಟೆಗಳ ಸಮೇತ ಬಿಸಾಕುತ್ತಾರೆ, ಅಥವಾ ಮಯಣಕ್ಕೋಸ್ಕರ ಇರಿಸಿಕೊಳ್ಳಲೂ ಬಹುದು. ಹೀಗೆ ಮಾಡುವಾಗ ಜೇನ್ನೊಣಗಳು ಸುಮ್ಮನಿರುತ್ತವೆಯೇ? ಖಂಡಿತ ಇಲ್ಲ. ತಬ್ಬಿಬ್ಬಾಗಿ ಆಚೀಚೆ ಭುಂಯ್ ಗುಟ್ಟುತ್ತ ಹಾರಾಡುತ್ತಿರುತ್ತವೆ, ಆದರೆ ಅವಕ್ಕೆ ಬಹುಶಃ ಏನು ನಡೆಯುತ್ತಿದೆ ಎಂದೇ ತಿಳಿಯುವುದಿಲ್ಲ, ಯಾರೋ ಉಪದ್ರ ಕೊಡಲು ಬಂದಿದ್ದಾರೆ ಎಂದು ಮಾತ್ರ ಅರಿವಾಗುತ್ತದೆ. ಆದರೆ ಅವು ತಮಗೆ ದೈಹಿಕವಾಗಿ ನೋವಾಗದೆ ಯಾರನ್ನೂ ಕಡಿಯುವುದಿಲ್ಲ.

ಕೆಲವು ಒರಟು ಮಂದಿ ಮನುಷ್ಯರು ಹೊಗೆ ಹಾಕಿ ಜೇನ್ನೊಣಗಳನ್ನು ಓಡಿಸುತ್ತಾರೆ; ಇದು ತಪ್ಪು, ಯಾಕೆಂದರೆ ಇದರಿಂದ ಈ ಜೀವಿಗಳು ಸಾಯುತ್ತವೆ. ಪರಿಣತ ಜೇನು ತಜ್ಞರು ಜೇನ್ನೊಣಗಳು ಸಾಯದಂತೆ ಜೇನು ತೆಗೆಯುತ್ತಾರೆ. ಹಾಗಿದ್ದರೂ ಪೋಳೆ ಸಮೇತ ಜೇನು ತೆಗೆಯುವ ಈ ಕ್ರಮದಿಂದ ಜೇನ್ನೊಣಗಳಿಗೆ ನಷ್ಟವೇ. ಅವು ಮತ್ತೆ ಆರಂಭದಿಂದ ಗೂಡು ಕಟ್ಟಬೇಕು. ಅದಕ್ಕೆ ಅವು ಹೆಚ್ಚಾಗಿ ಇನ್ನೊಂದು ಜಾಗವನ್ನು ಹುಡುಕುತ್ತವೆ. ಕುಂಬಾರಗೆ ವರುಷ, ದೊಣ್ಣೆಗೆ ನಿಮಿಷ. ಮನುಷ್ಯನ ಸ್ವಾರ್ಥಕ್ಕೆ ಏನೆನ್ನಲಿ? ಅದು ಯಾವ ಜೀವಗಳನ್ನೂ ಲೆಕ್ಕಿಸುವುದಿಲ್ಲ.

ಜೇನ್ನೊಣಗಳು ಆಕ್ರಮಿಗಳನ್ನು ಕಡಿದರೆ ಸಾಯುತ್ತವೆ ಎನ್ನುವುದು ನನ್ನ ನಂಬಿಕೆಯಾಗಿತ್ತು; ಕಡಿದು ಹಾರಲಾರದೆ ತೆವಳುವ ನೊಣಗಳನ್ನು ನಾನು ಕಂಡ ನೆನಪಿದೆ. ಆದರೆ ಕಡಿದ ಎಲ್ಲ ನೊಣಗಳೂ ಸಾಯುವುದಿಲ್ಲವಂತೆ, ಕಡಿತದಲ್ಲಿ ಅವುಗಳ ಕುಟುಕು ತಂತುಗಳು ಹರಿದು ಹೋದರೆ ಮಾತ್ರ ಅವು ಸಾಯುವುದು. ಹಾಗಾದರೆ ಇದೊಂದು ತರದ ಆತ್ಮಾಹುತಿಯೇ ಸರಿ. ತಮ್ಮ ಜನರನ್ನು ರಕ್ಷಿಸಲು ಅವು ಪ್ರಾಣ ನೀಡಲೂ ಅಳುಕುವುದಿಲ್ಲವೆಂದು ಇದರ ಅರ್ಥ.

ಜೇನು ಪೋಳೆಯ ವಿನ್ಯಾಸದ ಕುರಿತು ನಾನಿಲ್ಲಿ ಒಂದು ವಿಸ್ಮಯವನ್ನು ಹೇಳಲೇಬೇಕು. ಯಾಕೆ ಈ ಷಟ್ಕೋನದ ಮನೆಗಳು. ಎಂದರೆ ಈ ಷಟ್ಕೋನವೇ ಯಾಕೆ? ಅಥವಾ ಇದೊಂದು ‘ಸೀತಾಶೋಕವನ ನ್ಯಾಯ’ವೇ? ಏನಾದರೊಂದು ಇರಬೇಕಲ್ಲ ಎಂದು ಜೇನ್ನೊಣಗಳಿಗೋಸ್ಕರ ಪ್ರಕೃತಿ ಇದನ್ನು (ಚತುಷ್ಕೋಣ ಮನೆಯನ್ನು) ಆರಿಸಿಕೊಂಡಿತೇ? God does not play dice with the Universe ಎಂಬ ಐನ್ಸ್ಟೈನ್ನ ಮಾತನ್ನು ನೆನಪುಮಾಡಿಕೊಳ್ಳೋಣ. ಎಲ್ಲದಕ್ಕೂ ಏನಾದರೊಂದು ಕಾರಣವಿರುತ್ತದೆ ಎಂದು ಇದರ ಅರ್ಥ. ಈ ಷಟ್ಕೋನ ಮನೆಯ ಅರ್ಥ ಜೇನು ತುಂಬುವುದಕ್ಕೆ ಭದ್ರತೆ (ಒಂದಕ್ಕೆ ಒಂದು ಆಧಾರವಾಗಿರುವುದು) ಮತ್ತು ಜಾಗದ ಗರಿಷ್ಠತಮ ಉಪಯೋಗದ ದೃಷ್ಟಿಯಿಂದ ಇಂತಹ ಷಟ್ಕೋನ ವಿನ್ಯಾಸವೇ ಅತ್ಯಂತ ಲಾಭಕರವಾದ್ದು ಎಂದು ನಾನು ಓದಿದ್ದೇನೆ. ಈ ವಿನ್ಯಾಸವನ್ನು ಒಂದು ಕಾಗದದ ಮೇಲೆ ಪೆನ್ಸಿಲಿನಲ್ಲಿ ಮೂಡಿಸಬೇಕಾದರೆ ಎಷ್ಟೊಂದು ಕಷ್ಟಪಡಬೇಕಾಗಬಹುದು! ಆದರೆ ಜೇನ್ನೊಣಕ್ಕೆ ಅದು ಜನ್ಮದತ್ತವಾಗಿ ಬಂದಿರುವ ವಿದ್ಯೆ. ಹೇಗಾಯಿತು? ಇದರ ಹಿಂದೆ ಯಾವುದೇ ಮನಸ್ಸೊಂದು ಇರಲಿಲ್ಲವಲ್ಲ? ಪ್ರಕೃತಿಯಲ್ಲಿನ ಅನೇಕ ಸಂಗತಿಗಳು ಹಾಗೆಯೇ. ಜೇಡನ ಜಾಲ, ಇರುವೆಯ ಸಂವಹನ ವಿಧಾನ, ಗುಬ್ಬಿಯ ಗೂಡು ಇತ್ಯಾದಿ. ನಾವು ನೋಡುತ್ತೇವೆ, ಆದರೆ ಗಮನಿಸುವುದಿಲ್ಲ! ಆದರೆ ಒಂದು ವಿಷಯವನ್ನು ನಾವು ಅರಿತಿರಬೇಕು: ಪ್ರಕೃತಿಯಲ್ಲಿ ಅತಿಭೌತಿಕವಾದದ್ದು ಯಾವುದೂ ಇಲ್ಲ. ಎಲ್ಲವೂ ಭೂಮಿಯ ಗುರುತ್ವಾಕರ್ಷಣೆಗೆ ಒಳಗಾದವೇ. ಹಕ್ಕಿ ಹಾರುವುದು ಕೂಡ ಭೌತಿಕ ತತ್ವಗಳ ಆಧಾರದ ಮೇಲೆಯೇ. ಪ್ರಕೃತಿಯೆಂದರೇ ಭೌತಿಕ ತತ್ವಗಳ ಒಂದು ಸಂಕೀರ್ಣ. ಮನುಷ್ಯ ಅದನ್ನೆಲ್ಲ ಎಷ್ಟು ತಿಳಿದುಕೊಂಡರೂ ಜೀವವನ್ನು ಸೃಷ್ಟಿಸಲಾರ.

ಜೇನಿನಲ್ಲಿ ಅತಿ ಕಿರಿದಾದ ತಳಿ ಮಜಂಟಿ. ಈ ತಳಿಯ ನೊಣಗಳು ಚಿಕ್ಕವು, ಅವು ಕಟ್ಟುವ ಗೂಡು (ಪೋಳೆ) ಚಿಕ್ಕದು, ಶಾಲಾ ನಾಟಕಗಳಂತೆ ಒರಟು, ಮೊದ್ದು, ಮಿನಿಮಲಿಸ್ಟ್, ಯದ್ವಾ ತದ್ವಾ! ಮರದ ಪೊಟರೆಗಳಲ್ಲೋ, ಕಂಭಗಳಲ್ಲೋ, ಮಾಟೆಗಳಲ್ಲೋ ತಮ್ಮ ಗೂಡುಗಳನ್ನು ಕಟ್ಟಿಕೊಳ್ಳುತ್ತವೆ. ಮಂಜಟ್ಟಿ ಜೇನು ಹೆಚ್ಚು ಅರಸಿನ ಒತ್ತಿದ ಬಣ್ಣ, ಬಹಳ ಸಾಂದ್ರ, ಹಾಗೂ ಮೊತ್ತದಲ್ಲಿ ಕಡಿಮೆ. ಇದು ಔಷಧಿಯಾಗಿ ಬಳಕೆಯಾಗುತ್ತದೆ. ಮಜಂಟಿ ನೊಣಗಳು ಗಾತ್ರದಲ್ಲಿಸೊಳ್ಳೆಗಳಷ್ಟು ಕಿರಿದು, ಕಚ್ಚುತ್ತವೆ, ಆದರೆ ಹೆಚ್ಚು ನೋಯುವುದಿಲ್ಲ; ಇವು ಮುಖಕ್ಕೆ, ತಲೆಗೆ ಸಾಮೂಹಿಕವಾಗಿ ಮುತ್ತಿಗೆ ಹಾಕಿ ದರೋಡೆಕೋರರನ್ನು ಹಿಮ್ಮೆಟ್ಟಿಸಲು ಯತ್ನಿಸುತ್ತವೆ.

‘ಜೇನು ಪೆಟ್ಟಿಗೆ’ಯನ್ನು ನಾನು ಮೊದಲು ಕೇಳಿದ್ದು, ನೋಡಿದ್ದು ಯಾವಾಗ ಎಂದು ನೆನಪಿಲ್ಲ, ಬಹುಶಃ ನಾನು ಮಾವನ ಮನೆಯಲ್ಲಿದ್ದುಕೊಂಡು ಪ್ರೌಢಶಾಲೆಗೆ ಹೋಗುತ್ತಿರಬೇಕಾದರೆ. ನಮ್ಮ ಶಾಲೆಯ ಪಕ್ಕದ ಕಟ್ಟಡವೊಂದರ ಮಾಳಿಗೆಯಲ್ಲಿ ಒಂದು ಕೋಣೆ ಹಿಡಿದುಕೊಂಡು ಒಬ್ಬ ‘ಜೇನು ಭಟ್ಟರು’ ಇದ್ದರು. ‘ಜೇನು ಭಟ್ಟರು’ ಎನ್ನುವುದು ಒಂದು ವಿಚಿತ್ರ ಪದ ಅಲ್ಲವೇ? ಅವರು ಉತ್ತರ ಕನ್ನಡದ ಎಲ್ಲಿಂದಲೋ ಬಂದಿದ್ದರು, ಯುವಕರು, ಉತ್ಸಾಹಿಗಳು, ಯಾವುದೋ ಖಾದಿ ಗ್ರಾಮೋದ್ಯೋಗ ಸಂಸ್ಥೆಯಂಥ ಕಡೆಯಿಂದ ಜೇನು ಪ್ರಚಾರಕರಾಗಿ ಬಂದಿದ್ದರು, ಬಹುಶಃ ಬ್ರಾಹ್ಮಣ, ಆದ್ದರಿಂದ ‘ಜೇನು ಭಟ್ಟರು’. ಗ್ರಾಮಾಂತರ ಪ್ರದೇಶಗಳಲ್ಲಿ ಜೇನು ಕೃಷಿಯ ಬಗ್ಗೆ ಜನರಿಗೆ ತಿಳುವಳಿಕೆ ನೀಡುವುದು, ಜೇನು ಪೆಟ್ಟಿಗೆಗಳನ್ನು ತರಿಸಿ ಮಾರುವುದು, ಹೊಸ ಪದ್ಧತಿಯಲ್ಲಿ ಜೇನು ಸಾಕುವುದು ಹೇಗೆನ್ನುವುದನ್ನು ಪ್ರಾಯೋಗಿಕವಾಗಿ ಕಲಿಸುವುದು ಅವರ ಕೆಲಸವಾಗಿತ್ತು.

ಆ ಊರಲ್ಲಿ ಅವರು ಒಂದೆರಡು ವರ್ಷ ಇದ್ದರು ಎಂದು ಕಾಣುತ್ತದೆ. ಅವರಂಥ ಉತ್ಸಾಹಿಗಳ ಕಾರಣ ನಮ್ಮಲ್ಲಿ ಜೇನು ಸಾಕಣೆ ಒಂದು ವ್ಯವಸ್ಥಿತ ರೂಪದಲ್ಲಿ ಬೆಳೆದು ಬಂತು ಎನ್ನುವುದು ನಿಜ. ಹಾಗಿದ್ದರೂ ಅದೊಂದು ವೈಯಕ್ತಿಕ ಉಮೇದಿನ ಸಂಗತಿಯಾಗಿ ಉಳಿಯಿತೇ ವಿನಾ ಒಂದು ಸಂಘಟಿತ ಕಾರ್ಯಕ್ರಮವಾಗಿ ಬೆಳೆದು ಬರಲಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ಜೇನು ವ್ಯಯಸಾಯವನ್ನೊಂದು ಲಾಭದಾಯಕ ಉದ್ಯಮವಾಗಿ ಮಾಡುವ ‘ನೆಟ್ವರ್ಕ್’ (ವ್ಯವಹಾರ ವ್ಯವಸ್ಥೆ) ಮೂಡಿಬರದೆ ಇರುವುದು.

ಇದ್ದ ಶ್ರಮವನ್ನೆಲ್ಲ ಹೆಚ್ಚಿನ ಜನ ವಾಣಿಜ್ಯ ಬೆಳೆಗಳಾದ ತೆಂಗು, ಕಂಗು, ಗೇರುವಿನ ಮೇಲೆ ಹಾಕುತ್ತಾರೆಯೇವಿನಾ ಇತರ ಉತ್ಪಾದನೆಗಳ ಮೇಲಲ್ಲ. ಈಚೆಗೆ ಹಳ್ಳಿಗಳಲ್ಲಿ ಹಾಲು ಉತ್ಪಾದನೆ ಸಹಕಾರಿ ನೆಲೆಯಲ್ಲಿ ಬೆಳೆದು ಬರುತ್ತಿದೆ. ಆದರೆ ಜೇನು ಇನ್ನೂ ಆ ಮಟ್ಟಿಗೆ ಬೆಳೆದಿಲ್ಲ. ಆದರೂ ಕೆಲವು ವರ್ಷಗಳ ಹಿಂದೆ ಕೆಲವು ಉತ್ಸಾಹಿಗಳು ನಮ್ಮ ಕಡೆ ಜೇನಿನ ಗಡ್ಡ ಬಿಟ್ಟುಕೊಂಡು ಓಡಾಡುತ್ತಿದ್ದರು. ‘ಜೇನಿನ ಗಡ್ಡ’ ಎಂದರೆ ಜೇನು ನೊಣಗಳನ್ನು ಗಡ್ಡದ ಹಾಗೆ ಕಾಣುವಂತೆ ಬಿಟ್ಟುಕೊಳ್ಳುವುದು. ಅದರ ಪ್ರದರ್ಶನಗಳನ್ನೂ ಅವರು ಕೊಡುತ್ತಿದ್ದರು. ಜೇನಿನ ಗಡ್ಡ ಕಪ್ಪಾಗಿ ಕಾಣಿಸುತ್ತಿರಲಿಲ್ಲ ನಿಜ, ಯಾಕೆಂದರೆ ಜೇನ್ನೊಣಗಳ (ಇದಕ್ಕೆ ಅವರು ಬಳಸಿಕೊಳ್ಳುತ್ತಿದ್ದುದು ತೊಡವೆಯನ್ನು) ಬಣ್ಣ ಕಂದು. ಜೇನ್ನೊಣಗಳಿಗೆ ಹೆದರಬೇಡಿ, ಅವು ತಮಗೆ ನೋವು ಮಾಡದೆ ಇದ್ದರೆ ಯಾರಿಗೂ ಕಡಿಯುವುದಿಲ್ಲ ಎಂದು ಸಂದೇಶ ಸಾರುವುದು, ಆ ಮೂಲಕ ಜೇನು ಸಾಕಣೆಯನ್ನು ಪ್ರೋತ್ಸಾಹಿಸುವುದು ಈ ಮಧುಮೋಹಿಗಳ ಉದ್ದೇಶವಾಗಿತ್ತು.

ಜೇನು ಪೆಟ್ಟಿಗೆಯನ್ನು ನಾನಿಲ್ಲಿ ವಿವರಿಸಲು ಹೋಗುವುದಿಲ್ಲ, ಅದು ಸಾಮಾನ್ಯವಾಗಿ ನೋಡಿಯಾದರೂ ಗೊತ್ತಿರುತ್ತದೆ. ಮರದ ಎರಡಂತಸ್ಥಿನ ಜೇನುಮನೆ ಇದು. ಒಂದೊಂದು ಅಂತಸ್ಥಿನಲ್ಲೂ ಆರೇಳು ಮರದ ಫ್ರೇಮುಗಳು ಅರ್ಥಾತ್ ಚೌಕಟ್ಟುಗಳಿರುತ್ತವೆ. ಜೇನು ನೊಣಗಳು ಗೂಡು (ಪೋಳೆ) ಕಟ್ಟುವುದು ಈ ಚೌಕಟ್ಟುಗಳಲ್ಲೇ. ಪೆಟ್ಟಿಗೆಯ ಬುಡದಲ್ಲಿ ಸರಿಗೆಯ ಗೇಟು ಇರುತ್ತದೆ. ಇದು ನೊಣಗಳು ಹೋಗಿ ಬರುವದನ್ನು ತಡೆಯುವುದಕ್ಕೆ ಅಲ್ಲ; ರಾಣಿ ನೊಣ ಹೊರಟು ಹೋಗದಿರುವುದಕ್ಕೆ, ಯಾಕೆಂದರೆ ಅದು ಗಾತ್ರದಲ್ಲಿ ದೊಡ್ಡದಿರುವುದರಿಂದ. ಆದರೂ ನೊಣಗಳು ಪಾಲಾಗುವ ಸಂದರ್ಭ ಬಂದಾಗ ಅದಕ್ಕೆ ಅನುವು ಮಾಡಿಕೊಡಬೇಕಾಗುತ್ತದೆ.

ಇದಕ್ಕೆಲ್ಲ ಸ್ವಲ್ಪ ಪರಿಣತಿ ಅಗತ್ಯವಿರುತ್ತದೆ. ಇಂಥ ಪೆಟ್ಟಿಗೆಗಳಿಂದ, ಇಡೀ ಗೂಡನ್ನು ಬಾಧಿಸದಂತೆ, ಜೇನು ತೆಗೆಯುವುದು ಸುಲಭ. ಸ್ವತಃ ಜೇನು ನೊಣಗಳಿಗೆ ತಿನ್ನಲು ಎಷ್ಟು ಬಿಡಬೇಕೆನ್ನುವುದು ಜೇನು ಪರಿಣತರಿಗೆ ಗೊತ್ತಿರುತ್ತದೆ. ನಾನು ಚಿಕ್ಕವನಿದ್ದಾಗ ಜೇನು ಹಿಂಡುವ ಯಂತ್ರಗಳು ಇನ್ನೂ ಆವಿಷ್ಕಾರವಾಗಿರಲಿಲ್ಲ. ಇಂಥ ಯಂತ್ರಗಳು ಪೋಳೆ ಹಾಳಾಗದಂತೆ ಜೇನು ಹಿಂಡುತ್ತವೆ ಎಂದು ಕೇಳಿದ್ದೇನೆ. ಆದ್ದರಿಂದ ಜೇನು ತೆಗೆದು ಪೋಳೆಯನ್ನು ಮತ್ತೆ ಒಂದೆರಡು ಸಲ ಮರುಬಳಕೆಗೆ ಚೌಕಟ್ಟಿನಲ್ಲಿ ಇರಿಸಬಹುದು. ಇದರಿಂದ ಜೇನು ನೊಣಗಳ ಪರಿಶ್ರಮ ಗಣನೀಯವಾಗಿ ಕಡಿಮೆಯಾಗುತ್ತದೆ.

ಜೇನು ಮಯಣದ (ಹವ್ಯಕ: ಮೇಣ) ಉಪಯೋಗದ ಕುರಿತು ನನಗೆ ಗೊತ್ತಿಲ್ಲ. ಬಹುಶಃ ಸಣ್ಣ ಸಣ್ಣ ಎರಕಗಳಲ್ಲಿ ಅದು ಬಳಕೆಯಾಗುತ್ತಿರಬಹುದು. ಆದರೆ ನನ್ನ ಅಮ್ಮ, ಅತ್ತಿಗೆ, ಅತ್ತೆ ಮುಂತಾದವರು ಕುಂಕುಮ ಬೊಟ್ಟನ್ನು ಹಾಕಿಕೊಳ್ಳಲು ಅಡಿ ಲೇಪವಾಗಿ ಕರಗಿಸಿದ ಜೇನು ಮಯಣವನ್ನು ಬಳಸುತ್ತಿದ್ದರು. ಆಗಿನ ಕಾಲದಲ್ಲಿ ಟಿಕ್ಲಿ ಬೊಟ್ಟುಗಳು ಇರಲಿಲ್ಲವಲ್ಲ.