”ಇಂದಿಗೂ ನೂರೆಂಟು ಹಳಹಳಿ -ಅವತ್ತು ಫೋನ್ ಮಾಡದೇ ಗಾಡಿ ಹಿಂದಿರುಗಿಸಲು ಹೇಳಬೇಕಿತ್ತು… ನಾನು ಅದೊಂದು ದಿಂಬನ್ನು ಎತ್ತಿ ನೋಡದೇ ಯಾಕೆ ತಡೆದೆ… ಪ್ರೀತಮ್ ಕೂಡಾ ಅವರೊಡನೆ ಶಾಮೀಲಾಗಿದ್ದನಾ… ಜೊತೆಯಲ್ಲಿದ್ದವರು ಅಷ್ಟು ನಿರ್ವಿಕಾರವಾಗಿ ಹೊರಟೇ ಬಿಟ್ಟರಲ್ಲ, ಅವರದ್ದಾಗಿದ್ದರೂ ಹೀಗೇ ಹೊರಡುತ್ತಿದ್ದರಾ… ಯೋಚಿಸಿ ಯೋಚಿಸಿ, ಒದ್ದಾಡಿ ಒದ್ದಾಡಿ ಕೊನೆ ಹಣ ತಾನೇ ಹೋಗಿದ್ದು, ಆರೋಗ್ಯವಲ್ಲ, ಜೀವವಲ್ಲ, ನೆಮ್ಮದಿಯಲ್ಲ ಅಂತ ಸಮಾಧಾನಿಸಿಕೊಂಡೆವು… ಬೇರೇನು ದಾರಿಯಿತ್ತು?”
ಬಿ.ವಿ.ಭಾರತಿ ಬರೆದ ಪ್ರವಾಸದ ಮರೆಗುಳಿತನ ಮತ್ತಿತರ ಪ್ರಸಂಗಗಳು.

 

ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋಗಿದ್ದಾಗ ಲೇಹ್ ನಿಂದ 150 ಕಿಲೋಮೀಟರ್ ದೂರದ ನೂಬ್ರಾ ಕಣಿವೆಗೆ ಹೋಗಿ ಒಂದು ದಿನ ಅಲ್ಲಿನ ಹೋಮ್ ಸ್ಟೇಯಲ್ಲಿ ಉಳಿದೆವು. ಎಲ್ಲರೂ ಟ್ವಿನ್ ಶೇರಿಂಗ್ ರೂಮ್ ನಲ್ಲಿದ್ದರೆ ನಾನೊಬ್ಬಳು ಮಾತ್ರ ಒಂದು ರೂಮಿನಲ್ಲಿ ಇರುತ್ತಿದ್ದೆ. ಅಲ್ಲಿ ಒಂದು ದಿನವಿದ್ದು ಎಲ್ಲ ನೋಡಿದ್ದಾಯಿತು. ಮರುದಿನ ಮುಂಜಾನೆಯೇ ಎದ್ದು ಒಂದೆರಡು ಕಿಲೋಮೀಟರ್ ನಡೆದಾಡಿದೆ. ಬರುವಷ್ಟರಲ್ಲಿ ಹೊರಡುವ ಸಮಯ ಹತ್ತಿರವಾಗಿತ್ತು. ಬೇಗನೇ ಸ್ನಾನ ಮುಗಿಸಿ, ಸಿದ್ಧಳಾಗಿ ಅಪ್ಪ-ಅಮ್ಮನ ರೂಮಿಗೆ ಬಂದೆ. ಅಪ್ಪ ಸಿದ್ಧವಾಗಿ ಕೂತಿದ್ದರು. ಅಮ್ಮ ಸರಭರ ಸಿದ್ಧವಾಗುತ್ತಿದ್ದಳು. ಎಲ್ಲ ಪ್ಯಾಕಿಂಗ್ ಮುಗಿಸಿದೆವು. ನಮ್ಮ ಮನೆಯ ಜನರೆಲ್ಲರಿಗೂ ಹೊರಡುವ ಮುನ್ನ ಏನನ್ನೂ ಬಿಟ್ಟಿಲ್ಲ ತಾನೇ ಎಂದು ಪದೇಪದೇ ರೂಮ್ ಚೆಕ್ ಮಾಡುವ ಚಟ. ನಾನೂ ಸುಮ್ಮನೆ ಕುಳಿತಿದ್ದೆನಲ್ಲ, ಹಾಗಾಗಿ ಬಾತ್ ರೂಮಿಗೆ ಹೋಗಿ ಬಗ್ಗಿ ನೋಡಿದೆ. ನಂತರ ಹಾಸಿಗೆಯ ಮೇಲಿನ ಬ್ಲ್ಯಾಂಕೆಟ್ ಒದರಿ ನೋಡಿ, ಅಪ್ಪನ ದಿಂಬನ್ನೆತ್ತಿ ನೋಡಿದೆ, ಏನೂ ಇರಲಿಲ್ಲ. ನಂತರ ಅಮ್ಮನ ದಿಂಬಿನೆಡೆಗೆ ಕೈ ಹಾಕಲು ಬಗ್ಗಿದವಳು ಕೊನೆಯ ಘಳಿಗೆಯಲ್ಲಿ ‘ಅಯ್ಯೋ ರಾಮನೇ! ಈ ಅಪ್ಪ ಅಮ್ಮ ಇಷ್ಟು ಹುಷಾರು. ಇವರ ರೂಮ್ ನಾನೆಂತ ಚೆಕ್ ಮಾಡುವುದು. ನನ್ನ ವಸ್ತು ನೆಟ್ಟಗೆ ಎತ್ತಿಟ್ಟುಕೊಂಡರೆ ಅದೇ ಅವರಿಗೆ ದೊಡ್ಡ ಉಪಕಾರ ಮಾಡಿದಂತೆ’ ಅನ್ನಿಸಿ ದಿಂಬು ತೆಗೆದು ನೋಡದೇ ಸುಮ್ಮನಾದೆ. ಅಷ್ಟರಲ್ಲಿ ರೂಮ್ ಬಾಯ್ ಲಗೇಜ್ ತೆಗೆದುಕೊಳ್ಳಲು ಬಂದ. ಅವನ ಜೊತೆ ಲಗೇಜ್ ಕಳಿಸಿ, ತಿಂಡಿ ತಿಂದು ಸ್ವರ್ಗದಂತ ನೂಬ್ರಾಗೆ ವಿದಾಯ ಹೇಳಿದೆವು.


ಅಲ್ಲಿನ ಪರ್ವತ ಪ್ರದೇಶದಲ್ಲಿ ರಸ್ತೆಗಳು ತುಂಬ ಕಡಿದಾಗಿ, ಅಪಾಯಕಾರಿಯಾಗಿ ಇರುತ್ತವೆ. ಅವತ್ತಂತೂ ಅಸಾಧ್ಯ ಹಿಮಪಾತವಾಗಿ ಸುತ್ತಲಿದ್ದ ಪರ್ವತಗಳೆಲ್ಲ ಬೆಳ್ಳಗೆ ಹೊಳೆಯುತ್ತಿದ್ದವು. ರಸ್ತೆಗಳಂತೂ ಪೂರ್ತಿ ಹಿಮದಿಂದ ಮುಚ್ಚಲ್ಪಟ್ಟಿತ್ತು. ನಮ್ಮ ಸಾರಥಿ ಪ್ರೀತಮ್ ಎಂದಿನಂತೆ ಓಮ್ ಮಾಣಿ ಪದ್ಮೆ ಹಮ್ ಮಂತ್ರ ಹಾಕಿ ರಸ್ತೆಯ ಮೇಲೆ ಕಣ್ಣಿಟ್ಟಿದ್ದ.

ಸುಮಾರು 30 ಕಿಲೋಮೀಟರ್ ಹೋಗಿರಬೇಕು, ಇದ್ದಕ್ಕಿದ್ದಂತೆ ನನ್ನ ಅಮ್ಮ ‘ಅಯ್ಯೋ’ ಅಂತ ಹೃದಯ ವಿದ್ರಾವಕವಾಗಿ ಕೂಗಿದಳು. ಇಡೀ ತಂಡದವರಿಗೆ ಗಾಬರಿಯಾಗಿ ಅವಳತ್ತ ನೋಡಿದರೆ ವಿವರ್ಣವಾದ ಮುಖದಲ್ಲಿ ‘ನನ್ನ ಸರ’ ಎಂದು ತೊದಲಿದಳು. ನಾನು ವಿಷಯವೇ ಅರ್ಥವಾಗದೇ ಅಮ್ಮನ ಪಕ್ಕ ಹೋಗಿ ಕೂತು ‘ಏನಾಯ್ತು’ ಅಂದೆ. ಅಮ್ಮ ಬೋಳು ಕುತ್ತಿಗೆ ತೋರಿಸುತ್ತಾ ‘ನನ್ನ ಸರ ಅಲ್ಲೇ ದಿಂಬಿನಡಿಯಲ್ಲಿ ಬಿಟ್ಟು ಬಂದೆ’ ಅಂದಳು. ನನಗೆ ಆಘಾತವಾಯ್ತು. 60 ಗ್ರಾಂನ ತಾಳಿ ಸರ. ಸುಮಾರು ಒಂದೂವರೆ, ಎರಡು ಲಕ್ಷ ಬೆಲೆಯದ್ದು ಎಂದಾಗ ಬಸ್ಸಿನಲ್ಲಿ ಇದ್ದವರೆಲ್ಲ ಸ್ತಬ್ಧರಾದರು.

ಅಮ್ಮ ಅಳುಮುಖದಲ್ಲಿ ಕುಳಿತಿರುವಾಗಲೇ ಬಸ್ ನಲ್ಲಿದ್ದ ಜನ ‘ಇನ್ನೇನು ಮಾಡಕ್ಕಾಗತ್ತೆ, ಹೋಗಲಿ ಬಿಡಿ’ ಅಂತ ಬಿಟ್ಟಿ ಮಾತಾಡಲು ಶುರು ಮಾಡಿದರು. ಅದು ಹೇಗೆ ಹೋಗಲು ಬಿಟ್ಟು ಬಿಡುವುದು? ಅದೂ ಅಷ್ಟೊಂದು ಬೆಲೆಯುಳ್ಳದ್ದು? ಕಳೆದುಕೊಂಡವರ ಕಷ್ಟ ಸುತ್ತಲಿದ್ದವರಿಗೆ ಹೇಗೆ ಅರ್ಥವಾಗಬೇಕು? ಹಾಗಾಗಿ ಅವರು ಆ ವಿಷಯವನ್ನೇ ತಳ್ಳಿ ಹಾಕಿದವರಂತೆ ಮಾತನಾಡಲು ಶುರು ಮಾಡಿದಾಗ ಅಪ್ಪನಿಗೆ ರೇಗಿ ಹೋಗಿ ‘ಗಾಡಿ ನಿಲ್ಲಿಸಿ’ ಅಂತ ಕೂಗಿದರು. ಪ್ರೀತಮ್ ಅವನ ಪಾಡಿಗೆ ಗಾಡಿ ಓಡಿಸುತ್ತಲೇ ಇದ್ದ. ಅಪ್ಪ ಮೂರ್ನಾಲ್ಕು ಸಲ ಕೂಗಿದ ಮೇಲೆ ಗಾಡಿ ನಿಲ್ಲಿಸಿದ. ಹರಕುಮುರುಕು ಹಿಂದಿಯಲ್ಲಿ ಅವನಿಗೆ ವಿಷಯ ತಿಳಿಸಿದ್ದಾಯ್ತು. ಅವನು ಸ್ವಲ್ಪವೂ ಉದ್ವೇಗಗೊಳ್ಳದೇ ‘ಯೋಚಿಸಬೇಡಿ… ನಾನಿದ್ದೀನಿ. ಎಲ್ಲ ನೋಡ್ಕೊಳ್ತೀನಿ’ ಅಂತ ಆಶ್ವಾಸನೆ ಇತ್ತ. ಅಮ್ಮನ ಕಣ್ಣಲ್ಲಿ ಸಣ್ಣ ಬೆಳಕು.

ಆ ರಸ್ತೆಗಳು ಹೇಗಿರುತ್ತವೆಂದರೆ ಎರಡೂ ಬದಿಯಿಂದ ವಾಹನಗಳು ಎದುರಾದರೆ ಒಂದು ಗಾಡಿ ಪ್ರಪಾತಕ್ಕೆ ಉರುಳುವಂತೆ! ಹಾಗಾಗಿ ಪ್ರೀತಮ್ ಗಾಡಿ ನಿಲ್ಲಿಸಲು ಸ್ವಲ್ಪ ಅಗಲ ರಸ್ತೆ ಹುಡುಕುತ್ತಾ ಮತ್ತೆ 10-15 ಕಿಲೋಮೀಟರ್ ಓಡಿಸಿದ. ಎಲ್ಲೋ ತುಸು ಅಗಲದ ರಸ್ತೆ ಕಂಡಾಗ, ಗಾಡಿ ಪಾರ್ಕ್ ಮಾಡಿ ನಾವಿಳಿದುಕೊಂಡಿದ್ದ ಹೋಮ್ ಸ್ಟೇಗೆ ಫೋನ್ ಮಾಡಿದ. ನಾವು ಅವನನ್ನೇ ಆತಂಕದಿಂದ ನೋಡುತ್ತಾ ಕುಳಿತೆವು. ಅವನು ಹಿಂದಿಯಲ್ಲಿ ಏನೇನೋ ಮಾತನಾಡಿದ ನಂತರ ಫೋನ್ ಇಟ್ಟವ ‘ರೂಮ್ನಲ್ಲಿ ಚೆಕ್ ಮಾಡ್ತಾರಂತೆ. ಇನ್ನೂ ರೂಮು ಕ್ಲೀನ್ ಮಾಡಿಲ್ವಂತೆ. ಗಾಬರಿ ಬೇಡ. ಅವರೇ ಫೋನ್ ಮಾಡ್ತಾರಂತೆ’ ಎಂದ. ಅಸಹನೀಯ ಆತಂಕದ ನಡುವಲ್ಲೇ ಕಾದು ಕುಳಿತೆವು. ಸುಮಾರು 15 ನಿಮಿಷದ ನಂತರ ಕಾಲ್ ಬಂದಿತು. ಒಂದೈದು ನಿಮಿಷ ಮಾತಾಡಿ ಫೋನ್ ಕಾಲ್ ಮುಗಿಸಿ ತುಂಬ ತಣ್ಣಗೆ ‘ಪೂರ್ತಿ ಚೆಕ್ ಮಾಡಿದರಂತೆ. ಏನೂ ಇರಲಿಲ್ಲವಂತೆ’ ಎಂದ. ಅಮ್ಮ ಬಿಗಿದ ಕಂಠದಲ್ಲಿ ‘ಇಲ್ಲ, ಅಲ್ಲಿಯೇ ಬಿಟ್ಟಿದ್ದೇನೆ. ನನಗೆ ಗೊತ್ತು. ಅಲ್ಲಿಯೇ ಬಿಟ್ಟಿದ್ದೇನೆ. ಸರ ಹಾಕಿಯೇ ಮಲಗಿದ್ದೆ. ಸರಿ ರಾತ್ರಿಯಲ್ಲಿ ಕುತ್ತಿಗೆ ಯಾರೋ ಬಿಗಿಯುತ್ತಿದ್ದಾರೆ ಅನ್ನಿಸಿ ಉಸಿರುಗಟ್ಟಿದಂತಾಗಿ ಸರ ತೆಗೆದು ಪಕ್ಕಕ್ಕೆಸೆದ ನೆನಪು ಅಷ್ಟೇ… ಮತ್ತೆ ಈಗಲೇ ನೆನಪಾದದ್ದು…’ ಅಂತ ಬಡಬಡಿಸುತ್ತಲೇ ಇದ್ದಳು. ಗಾಡಿ ಮುಂದಕ್ಕೆ ಹೊರಟಿತು. ಅಷ್ಟಾದರೂ ನಮಗೆ ಅದೇನು ಮಂಕು ಬಡೆದಿತ್ತೋ ಗಾಡಿ ಹಿಂದಿರುಗಿಸಲು ಹೇಳಬೇಕೆಂದು ಹೊಳೆಯಲೇ ಇಲ್ಲ. ನಾವೇ ವಾಪಸ್ ಹೋಗೋಣ ಅಂದರೆ ಅಲ್ಲಿ ಸಾರ್ವಜನಿಕ ವಾಹನ ಸಂಚಾರವೇ ಇಲ್ಲ. ಹೇಗೆ ಹೋಗುವುದು? ಏನೂ ತೋಚದೇ ಮೌನವಾಗಿ ಉಳಿದೆವು. ಆಮೇಲೆ ಇಡೀ ಪ್ರವಾಸ ಅಮ್ಮ ಕೊರಗುತ್ತಲೇ ಕಳೆದಳು. ವಾಪಸ್ ಬಂದ ನಂತರವೂ ಆ ಆಘಾತ ಮರೆಯಲು ತುಂಬ ಸಮಯ ಬೇಕಾಯಿತು. ಇವತ್ತಿಗೂ ಮರೆತಿದ್ದಾಳೋ ಇಲ್ಲವೋ ಪಾಪ. ನಾವು ಮತ್ತೆಂದೂ ಅದರ ಬಗ್ಗೆ ಮಾತಾಡದೇ ಉಳಿದೆವು.

ಅಮ್ಮ ಬೋಳು ಕುತ್ತಿಗೆ ತೋರಿಸುತ್ತಾ ‘ನನ್ನ ಸರ ಅಲ್ಲೇ ದಿಂಬಿನಡಿಯಲ್ಲಿ ಬಿಟ್ಟು ಬಂದೆ’ ಅಂದಳು. ನನಗೆ ಆಘಾತವಾಯ್ತು. 60 ಗ್ರಾಂನ ತಾಳಿ ಸರ. ಸುಮಾರು ಒಂದೂವರೆ, ಎರಡು ಲಕ್ಷ ಬೆಲೆಯದ್ದು ಎಂದಾಗ ಬಸ್ಸಿನಲ್ಲಿ ಇದ್ದವರೆಲ್ಲ ಸ್ತಬ್ಧರಾದರು.

ಇಂದಿಗೂ ನೂರೆಂಟು ಹಳಹಳಿ -ಅವತ್ತು ಫೋನ್ ಮಾಡದೇ ಗಾಡಿ ಹಿಂದಿರುಗಿಸಲು ಹೇಳಬೇಕಿತ್ತು… ನಾನು ಅದೊಂದು ದಿಂಬನ್ನು ಎತ್ತಿ ನೋಡದೇ ಯಾಕೆ ತಡೆದೆ… ಪ್ರೀತಮ್ ಕೂಡಾ ಅವರೊಡನೆ ಶಾಮೀಲಾಗಿದ್ದನಾ… ಜೊತೆಯಲ್ಲಿದ್ದವರು ಅಷ್ಟು ನಿರ್ವಿಕಾರವಾಗಿ ಹೊರಟೇ ಬಿಟ್ಟರಲ್ಲ, ಅವರದ್ದಾಗಿದ್ದರೂ ಹೀಗೇ ಹೊರಡುತ್ತಿದ್ದರಾ… ಯೋಚಿಸಿ ಯೋಚಿಸಿ, ಒದ್ದಾಡಿ ಒದ್ದಾಡಿ ಕೊನೆ ಹಣ ತಾನೇ ಹೋಗಿದ್ದು, ಆರೋಗ್ಯವಲ್ಲ, ಜೀವವಲ್ಲ, ನೆಮ್ಮದಿಯಲ್ಲ ಅಂತ ಸಮಾಧಾನಿಸಿಕೊಂಡೆವು… ಬೇರೇನು ದಾರಿಯಿತ್ತು?

***

ಸ್ವಿಟ್ಜರ್ಲೆಂಡ್ ಎನ್ನುವ ದೇಶದ ಬಗ್ಗೆ ಸ್ವರ್ಗ ಅನ್ನುವ ಮಾತು ಕೇಳಿದ್ದರೂ ‘ಅಯ್ಯೋ ಅದೇನಿದ್ದೀತು ಬಿಡು. ಫಳಫಳ ಹೊಳೆವ ದೇಶಗಳು ಶೋ ಕೇಸಿನಂತೆ… ಚರಿತ್ರೆ ಇರುವ ಊರು ಅಡಿಗೆಮನೆಯಂತೆ. ಅಡಿಗೆಮನೆಯಲ್ಲಿ ತಾನೇ ಎಣ್ಣೆ, ಮಸಾಲೆ ಎಲ್ಲವೂ, ಶೋ ಕೇಸ್ ಲಕಲಕಿಸದೇ ಏನು ಮಾಡುತ್ತದೆ?’ ಅನ್ನುವ ಅಸಡ್ಡೆ ನನಗೆ. ಆದರೆ ಇಟಲಿಯಿಂದ ಯೂರೋ ರೈಲಿನಲ್ಲಿ ಹೊರಟು ಸ್ವಿಟ್ಜರ್ಲೆಂಡ್ ಗೆ ಕಾಲಿಟ್ಟ ನಂತರ ಉಂಟಾದ ಆ ರೋಮಾಂಚನವನ್ನು ನಾನಿವತ್ತೂ ಮರೆತಿಲ್ಲ. ಗೆಳೆಯನೊಬ್ಬ ‘ಸ್ವಿಟ್ಜರ್ಲ್ಯಾಂಡ್ ನಲ್ಲಿ ಎಲ್ಲಿಯೇ ಕ್ಲಿಕ್ ಮಾಡಿದರೂ ಅದೊಂದು ಫ್ರೇಮ್ ಹಾಕಿಡುವಂತ ಚಿತ್ರ ಆಗಿಬಿಡುತ್ತದೆ’ ಅಂದಿದ್ದು ಸತ್ಯ! ಇಡೀ ದೇಶಕ್ಕೆ ದೇಶವೇ ಅಂಥ ಅದ್ಭುತ ಸೌಂದರ್ಯದಿಂದ ತುಂಬಿತ್ತು!

ಇಂಟರ್ ಲ್ಯಾಕನ್ ಅನ್ನುವ ಊರಂತೂ ಸ್ವರ್ಗದ ತುಣುಕು. ಎತ್ತ ನೋಡಿದರೂ ಬಣ್ಣಬಣ್ಣದ ಹೂ ಗಿಡಗಳು, ರಸ್ತೆಯಲ್ಲಿ ಅಲ್ಲಲ್ಲಿ ಬೆಳೆಸಿದ ಟ್ಯೂಲಿಪ್ ಹೂಗಳು, ಹೊಟೆಲ್ ಹಿಂದೆಯೇ ಹಿಮ ಮುಚ್ಚಿದ ಆಲ್ಪ್ಸ್ ಪರ್ವತ, ಒಂದಿಷ್ಟೂ ಗಜಿಬಿಜಿ ಇಲ್ಲದ ರಸ್ತೆಗಳು, ಎರಡು ನಿಮಿಷ ನಡೆದರೆ ಸಿಗುತ್ತಿದ್ದ ರೇಲ್ವೆ ಸ್ಟೇಷನ್, ಹೋಟೆಲ್ ಎದುರಿದ್ದ ಕೊಳ, ಅದರಲ್ಲಿ ನಿಂತಿದ್ದ ಒಂದು ಪುಟ್ಟ ಹಡಗು, ಎದುರಿದ್ದ ರಸ್ತೆ ದಾಟಿದರೆ ನಡೆಯಲೊಂದು ಅದ್ಭುತ ಕಾಲುದಾರಿ, ಪಕ್ಕದಲ್ಲೇ ಹಾದುಹೋಗುವ ರೈಲು! ನಾನು ಆ ಸ್ಥಳದೊಡನೆ ಮೋಹಕ್ಕೆ ಬಿದ್ದುಬಿಟ್ಟೆ!

ಎರಡು ದಿನ ಅಲ್ಲೆಲ್ಲ ಸುತ್ತಾಡಿದ ನಂತರ ಮುಂದಿನ ಊರಿಗೆ ಹೊರಟೆವು. ನಮ್ಮ ಸೂಟ್ಕೇಸ್ ಗಳನ್ನು ಎಳೆದುಕೊಂಡು ಸ್ಟೇಷನ್ ತಲುಪಿದೆವು. ಇಷ್ಟು ನಿಮಿಷ, ಇಷ್ಟು ಸೆಕೆಂಡಿನಲ್ಲಿ ರೈಲಿನ ಆಗಮನ ಅಂತ display board ಇತ್ತು. ಹೇಳಿದ ಸಮಯಕ್ಕೆ ರೈಲು ಬಂದುಬಿಟ್ಟಿತು! ಘಂಟೆಗೆ 200 ಕಿಲೋಮೀಟರ್ ವೇಗವಾಗಿ ಓಡುವ ರೈಲಿನಲ್ಲಿ ಕೂತೆವು. ದಾರಿಯುದ್ದಕ್ಕೂ ಅದೇ ಸೌಂದರ್ಯ. ರೆಪ್ಪೆ ಮಿಟುಕಿಸಿದರೆ ಏನು ಮಾಯವಾಗಿ ಬಿಡುತ್ತದೋ ಅನ್ನುವಂತೆ ಕಿಟಕಿಯಾಚೆ ನೋಡುತ್ತ ಕೂತಿದ್ದೆ.

ಸುಮಾರು ಹೊತ್ತು ಕಳೆದಿರಬೇಕು,

ಇದ್ದಕ್ಕಿದ್ದಂತೆ ಗಂಡನ ಮೊಬೈಲಿಗೆ ನಮ್ಮ ಬೆಂಗಳೂರಿನ ಟೂರ್ ಆಪರೇಟರ್ ಫೋನು ‘ಸರ್ ನಿಮ್ಮ ಟ್ಯಾಬ್ಲೆಟ್ ಅಲ್ಲೇ ಬಿಟ್ಟು ಬಂದಿದ್ದೀರಂತೆ’. ನನ್ನ ಗಂಡ ಅಪ್ಪನ ಕಡೆ ತಿರುಗಿ ‘ನಿಮ್ಮ ಟ್ಯಾಬ್ಲೆಟ್ಸ್ ಬಿಟ್ಟು ಬಂದಿದ್ದೀರಾ?’ ಎಂದ. ಅಪ್ಪ ಬ್ಯಾಗ್ ಎಲ್ಲ ಚೆಕ್ ಮಾಡಿ ‘ಇಲ್ಲವಲ್ಲ ನನ್ನ ಮಾತ್ರೆಗಳೆಲ್ಲ ತಂದಿದ್ದೇನಲ್ಲ’ ಅಂದರು. ನನ್ನ ಗಂಡ ಅತ್ತಕಡೆಯಿದ್ದವರಿಗೆ ‘ಇಲ್ಲ ಯಾವ ಟ್ಯಾಬ್ಲೆಟ್ಟೂ ಬಿಟ್ಟು ಬಂದಿಲ್ಲ…’ ಅನ್ನುವುದರಲ್ಲಿ ಆತ ‘ಸರ್ ಮಾತ್ರೆಯಲ್ಲ ಟ್ಯಾಬ್ …. ಟ್ಯಾಬ್…’ ಅಂದ. ಆಗ ನಮ್ಮ ಟ್ಯೂಬ್ ಲೈಟ್ ಹೊತ್ತಿಕೊಂಡಿತು! ಹೌಹಾರುತ್ತ ಮಗನ ಕಡೆ ನೋಡಿದರೆ ಅವನು ಮಳ್ಳನಂತೆ ಎದ್ದು ಬ್ಯಾಗ್ ತಡಕಾಡಿ ಸಣ್ಣ ದನಿಯಲ್ಲಿ ‘ಹೌದು, ರಾತ್ರಿ ದಿಂಬಿನಡಿ ಇಟ್ಟಿದ್ದು ಮರೆತು ಬಂದು ಬಿಟ್ಟಿದ್ದೇನೆ’ ಅಂದ!

ನಮಗೆ ಒಂದು ಕಡೆ ಶಾಕ್, ಮತ್ತೊಂದು ಕಡೆ ಹೀಗೂ ಆಗಲು ಸಾಧ್ಯವಾ ಎನ್ನುವ ಅಚ್ಚರಿ. ನಾವು ಬಿಟ್ಟು ಬಂದದ್ದನ್ನು ತಾವಾಗಿಯೇ ಕರೆ ಮಾಡಿ ಯಾರಾದರೂ ಹೇಳುತ್ತಾರಾ ಅಂತ ದಿಗ್ಭ್ರಮೆ! ಅದೂ ಅಲ್ಲಿಂದ ಲೋಕಲ್ ಟೂರ್ ಆಪರೇಟರ್ಗೆ ಕರೆ ಮಾಡಿ, ಬೆಂಗಳೂರಿನ ಟೂರ್ ಆಪರೇಟರ್ ನಂಬರ್ ತೆಗೆದುಕೊಂಡು, ಅವರಿಗೆ ತಿಳಿಸಿ, ಅವರು ನಮಗೆ ಕರೆ ಮಾಡಿ ವಿಷಯ ತಿಳಿಸಿ… ನಂಬಲು ಅಸಾಧ್ಯವಾಗುವಷ್ಟು ಒಳ್ಳೆಯ ಜಗತ್ತನ್ನು ನಾವು ಕಾಣುತ್ತಿದ್ದೆವು!

ಮುಂದಿನ ಹದಿನೈದು ನಿಮಿಷದವರೆಗೆ ಬರೀ ಮಾತು ಮಾತು ಮಾತು. ನಾವು ಬಿಟ್ಟು ಬಂದ ವಸ್ತುವನ್ನು ಬಿಟ್ಟು ಬಿಡೋಣ ಅಂದರೆ ಕೊಂಡು ಮೂರು ತಿಂಗಳೂ ಆಗಿಲ್ಲ. ಈಗ ಮತ್ತೆ ಕಾಣದ ದೇಶದಲ್ಲಿ 30-40 ಕಿಲೋಮೀಟರ್ ವಾಪಸ್ ಹೋದರೆ ಸರಿಯಾಗುತ್ತದಾ? ಕೈ ಕೈ ಹಿಸುಕಿಕೊಳ್ಳುತ್ತಾ, ನಡುನಡುವೆ ಮಗನಿಗೆ ಬಯ್ಯುತ್ತಾ, ಕೊನೆಗೆ ಟಿಟಿಗೆ ಹೀಗಾಗಿದೆ ಅಂತ ವಿವರಿಸಿ ‘ಈಗೇನು ಮಾಡುವುದು’ ಅಂದೆವು. ಆತ ಆರಾಮವಾಗಿ ‘ಮುಂದಿನ ಸ್ಟೇಷನ್ನಲ್ಲಿ ಇಳಿದು ವಾಪಸ್ ಹೋಗಿ ತನ್ನಿ. ಆರಾಮವಾಗಿ ರೈಲುಗಳು ಸಿಗುತ್ತವೆ’ ಅಂದರು! ಇಷ್ಟು ಸುಲಭವಾ?! ನಮಗೆ ಒಂದೇ ಆಶ್ಚರ್ಯ.ಈಗ ಯಾರು ವಾಪಸ್ ಹೋಗಬೇಕು ಅನ್ನುವ ಚರ್ಚೆ ಶುರುವಾಯಿತು. ಗಂಡ, ಮಗ ಹೋದರೆ ಅಷ್ಟು ದೊಡ್ಡ ಸೂಟ್ಕೇಸ್ ಸಾಗಿಸಲು ನನ್ನಿಂದ, ಅಪ್ಪನಿಂದ ಸಾಧ್ಯವೇ ಇರಲಿಲ್ಲ. ಹಾಗಾಗಿ ತುಂಬ ಹೊತ್ತು ಯೋಚಿಸಿದ ನಂತರ ಲಗೇಜನ್ನು ಗಂಡ, ಮಗ ತೆಗೆದುಕೊಂಡು ಪ್ರಯಾಣ ಮುಂದುವರೆಸುವುದು ಮತ್ತು ನಾನು, ಅಪ್ಪ ಹಿಂದಿರುಗಿ ಹೋಗಿ ಟ್ಯಾಬ್ ತರುವುದು ಅಂತ ನಿಶ್ಚಯವಾಯಿತು.

ಅಷ್ಟರಲ್ಲಿ ಮುಂದಿನ ಸ್ಟೇಷನ್ ಬರುವ ಸಮಯವಾಗಿತ್ತು. ಆ ಸ್ಟೇಷನ್ ಎಂಥದ್ದೆಂದರೆ ರೈಲು ಆ ಮೂಲೆಯ ಊರನ್ನು ಮುಟ್ಟಲೆಂದೇ ಆ ಮಾರ್ಗವಾಗಿ ಹೋಗಿ, ಅಲ್ಲಿನ ಜನರನ್ನು ಹತ್ತಿಸಿಕೊಂಡು, ಇಳಿಸಿಬಿಟ್ಟು ಯು ಟರ್ನ್ ಮಾಡಿ ವಾಪಸ್ ಬಂದ ಮಾರ್ಗದಲ್ಲೇ ಒಂದಿಷ್ಟು ದೂರ ಹೋಗಿ ನಂತರ ಮೇನ್ ಲೈನಿಗೆ ಸೇರಿಕೊಳ್ಳುವಂಥದ್ದು. ಚಿಕ್ಕ ನಿಲ್ದಾಣ. ನಾನು, ಅಪ್ಪ ಅಲ್ಲಿ ಇಳಿದಾಗಲೂ

ನಾವು ಮೂರ್ಖ ಕೆಲಸ ಮಾಡುತ್ತಿದ್ದೇವಾ?
ಕಾಣದ ದೇಶದಲ್ಲಿ ಇದೆಲ್ಲ ಬೇಕಿತ್ತಾ?
ಸುಮ್ಮನೆ ಹೋಗಿಬಿಡಬಹುದಿತ್ತಲ್ಲವಾ?
ನಾನು, ಅಪ್ಪ ಇಬ್ಬರೂ ಉಳಿದವರಿಂದ ಬೇರ್ಪಟ್ಟು ಬಿಟ್ಟು ಹುಡುಕಲು ಕಷ್ಟವಾದರೆ? ಅಂತೆಲ್ಲ ನೂರೆಂಟು ಗೋಜಲುಗಳು.

ಆದರೂ ಇಳಿದೆವು, ನಮ್ಮ ರಾಮನಗರದಂಥ ಸಣ್ಣ ಜಾಗ ಅದು. ಈ ಡೆಡ್ ಎಂಡಿನ ಊರಿನಿಂದ ನಮಗೆ ರೈಲು ಸಿಗುತ್ತದಾ ಅಂತ ಒಂದೇ ಅನುಮಾನ. ಅಲ್ಲಿದ್ದ ಟಿಟಿಯನ್ನು ವಿಚಾರಿಸಿದರೆ ಆತ ಪಕ್ಕದ ಪ್ಲ್ಯಾಟ್ ಫಾರ್ಮ್ ಕಡೆ ತೋರಿಸಿ ‘ಬೇಗ ಹೋಗಿ! ಇನ್ನು ಒಂದೂವರೆ ನಿಮಿಷದಲ್ಲಿ ರೈಲು ಬರುತ್ತದೆ’ ಅಂದರು. ಎದ್ದು ಬಿದ್ದು ಓಡಿ ನಿಲ್ಲುವುದರಲ್ಲಿ ರೈಲು ಬಂದೇಬಿಟ್ಟಿತು. ಯೂರೋ ರೈಲ್ ಪಾಸ್ ಇದ್ದಿದ್ದರಿಂದ ಟಿಕೆಟ್ ತೆಗೆದುಕೊಳ್ಳುವ ಗಡಿಬಿಡಿ ಇಲ್ಲದೇ ಆರಾಮವಾಗಿ ಹತ್ತಿ ಕುಳಿತೆವು. ಮುಂದಿನ 20-25 ನಿಮಿಷಗಳಲ್ಲಿ ಇಂಟರ್ ಲ್ಯಾಕನ್ ತಲುಪಿದೆವು. ಚಿರಪರಿಚಿತ ಬೆಂಗಳೂರಿನ ರಸ್ತೆಯಲ್ಲಿ ನಡೆದಂತೆ ಇಬ್ಬರೂ ಹರಟುತ್ತಾ ಹೋಟೆಲ್ಗೆ ಹೋದೆವು. ನಾವು ಪರಿಚಯ ಮಾಡಿಕೊಳ್ಳುತ್ತ ವಿಷಯ ತಿಳಿಸುವುದರಲ್ಲಿ ಸ್ವಾಗತಕಾರಣಿ ಮುಖದ ತುಂಬ ನಗು ತುಂಬಿ ಅಲ್ಲಿಯೇ ಇಟ್ಟುಕೊಂಡಿದ್ದ ಟ್ಯಾಬ್ ನಮ್ಮ ಕೈಗಿತ್ತಳು…!

ಸ್ವಿಟ್ಜರ್ಲೆಂಡ್ ಎನ್ನುವ ದೇಶದ ಬಗ್ಗೆ ಸ್ವರ್ಗ ಅನ್ನುವ ಮಾತು ಕೇಳಿದ್ದರೂ ‘ಅಯ್ಯೋ ಅದೇನಿದ್ದೀತು ಬಿಡು. ಫಳಫಳ ಹೊಳೆವ ದೇಶಗಳು ಶೋ ಕೇಸಿನಂತೆ… ಚರಿತ್ರೆ ಇರುವ ಊರು ಅಡಿಗೆಮನೆಯಂತೆ. ಅಡಿಗೆಮನೆಯಲ್ಲಿ ತಾನೇ ಎಣ್ಣೆ, ಮಸಾಲೆ ಎಲ್ಲವೂ, ಶೋ ಕೇಸ್ ಲಕಲಕಿಸದೇ ಏನು ಮಾಡುತ್ತದೆ?’ ಅನ್ನುವ ಅಸಡ್ಡೆ ನನಗೆ.

ನಾನು, ಅಪ್ಪ ಹಿಂತಿರುಗಿ ಬರುವ ಹಾದಿಯುದ್ದಕ್ಕೂ ಸ್ವಿಟ್ಜರ್ಲೆಂಡ್ ದೇಶವನ್ನು ಹಾಡಿ ಹೊಗಳಿದೆವು. ನಮ್ಮ ದೇಶದಲ್ಲಾದ ಅನುಭವಕ್ಕೂ, ಇಲ್ಲಿನ ಪ್ರಾಮಾಣಿಕತೆಗೂ ಲಿಂಕ್ ಮಾಡುತ್ತ ಈ ದೇಶಗಳು ಯಾಕೆ ಅಷ್ಟು ಮುಂದುವರೆದಿವೆ ಅಂತ ಮೆಚ್ಚಿಕೊಂಡೆವು. ‘ಇಂಥ ಕಡೆ ಸೆಟಲ್ ಆಗಿಬಿಡಬೇಕಪ್ಪಾ’ ಅನ್ನುವವರೆಗೂ ಹೋಗಿ ಮನಸಿನಲ್ಲಿ ಮಂಡಿಗೆ ತಿಂದೆವು.

ಮತ್ತದೇ ಹಾದಿಯಲ್ಲಿ ಟ್ರೈನ್ ಹಿಡಿದು ಲೂಜ಼ರ್ನ್ ರೈಲ್ವೇ ಸ್ಟೇಷನ್ ಎದುರಿದ್ದ ಹೋಟೆಲ್ ತಲುಪಿದಾಗ ಬಿಸಿ ಬಿಸಿ ಬಿರಿಯಾನಿ ಕಾಯುತ್ತಿತ್ತು. ‘ಅರೆರೆ ಬಿರಿಯಾನಿ’ ಎನ್ನುತ್ತ ಪಟ್ಟರಿಸಿ ಕುಳಿತು ತಿನ್ನುವಾಗಲೇ ಮಗ ‘ಎಷ್ಟು ಹೇಳು ಅದಕ್ಕೆ?’ ಅಂದ. ಅನ್ನ ಕಾಣದವಳಂತೆ ನುಂಗುತ್ತ ‘ನೀನೇ ಹೇಳಪಾ ನಂಗೊತ್ತಿಲ್ಲ’ ಅಂದೆ.

ನಗುತ್ತಾ ‘ಮೂರು ಸಾವಿರ’ ಎಂದ.

ನಾನು ತಿನ್ನುವುದು ನಿಲ್ಲಿಸಿ ‘ಎಷ್ಟಕ್ಕೆ?’ ಎಂದೆ. ಅವನು ಗಹಗಹಿಸುತ್ತಾ ‘ಎಷ್ಟಕ್ಕೆ?! ಪರವಾಗಿಲ್ಲ ನೀನೂ! ಒಂದಕ್ಕೆ ಮೂರು ಸಾವಿರ’ ಎಂದ!!

ತಿನ್ನುತ್ತಿದ್ದ ಬಿರಿಯಾನಿ ಗಂಟಲಲ್ಲೇ ಸಿಕ್ಕಿಕೊಂಡಂತಾಯಿತು …

ಮೂರು ಸಾ…ವಿ…ರ…? ಒಂದು ಬಿರಿಯಾನಿಗೆ?!!!
‘ಏಯ್ ಸುಳ್ಳು ತಗೋ’ ಅಂತ ನಗುವುದರಲ್ಲಿ ಮಗ ನಾವು ಒಟ್ಟು ಎಂಟು ಜನರ ಬಿರಿಯಾನಿಗೆ 24 ಸಾವಿರ ಕೊಟ್ಟೆವು ಅಂದ!!
24 ಸಾವಿರ!
ನಮ್ಮ ದೇಶದಲ್ಲಿ ಒಂದಕ್ಕೆ 200 ರೂಪಾಯಿ ಅಂತ ಇಟ್ಟುಕೊಂಡರೂ 24 ಸಾವಿರ ರೂಪಾಯಿಗೆ 120 ಬಿರಿಯಾನಿ ಬರುತ್ತಿತ್ತು!

ಅದೇಕೋ ಥಟ್ಟನೆ ಬಿರಿಯಾನಿಯ ರುಚಿ ಕಡಿಮೆಯಾದಂತೆ ಭಾಸವಾಯಿತು! ಮತ್ತೆ ತಿನ್ನಬೇಕು ಅಂತಲೂ ಅನ್ನಿಸಲಿಲ್ಲ. ಡಬ್ಬಿಯಲ್ಲಿ ಉಳಿದಿದ್ದ ಎಂಟು ಹತ್ತು ಚಮಚ ಬಿರಿಯಾನಿಯನ್ನು ‘ಇಷ್ಟಕ್ಕೆ ಸುಮಾರು 400 ರೂಪಾಯಲ್ವಾ’ ಎನ್ನುತ್ತ ರಾತ್ರಿಗೆ ಆದೀತು ಎಂದು ಜೋಪಾನ ಮಾಡಿಟ್ಟವಳು ‘ಈ ದೇಶದಲ್ಲಿ ನಾನು ಇರುವುದಿಲ್ಲ! ನಮ್ಮೂರೇ ಸರಿ, ಹತ್ತಿಪ್ಪತ್ತು ರೂಪಾಯಿಗೆ ಒಂದು ಪ್ಲೇಟ್ ಚಿತ್ರಾನ್ನ ಸಿಕ್ಕಿಬಿಡುತ್ತದೆ’ ಎಂದುಕೊಂಡೆ, ಏನೋ ನಾನಲ್ಲೇ ಉಳಿಯಲು ಇಡೀ ಸ್ವಿಟ್ಜರ್ಲೆಂಡ್ ಪಾದಕ್ಕೆ ಬಿದ್ದು ಬೇಡಿಕೊಳ್ಳುತ್ತಿದೆಯೇನೋ ಎನ್ನುವಂತೆ!