ಹದಿಹರೆಯದ ಐನ್‌ಸ್ಟೈನನ ಮನದಲ್ಲಿ ಮೂಡಿದ ಎಲೆಕ್ಟ್ರೋ-ಮ್ಯಾಗ್ನೆಟಿಕ್ ಅಲೆಗಳ ಕುರಿತಾದ ಈ ಸೋಜಿಗ, ಹಾಗೆಯೇ ಮುಂದುವರೆಯಿತು. ಅವನು ಪೇಟೆಂಟ್ ಆಫೀಸಿನಲ್ಲಿ ಕೆಲಸಕ್ಕೆ ಸೇರಿದಮೇಲೆ, ಸಮಯ ದೊರೆತಾಗಲೆಲ್ಲಾ ಈ ವಿಷಯದ ಬಗೆಗೆ ಆಳವಾದ ಚಿಂತನೆ ನಡೆಸಲಾರಂಭಿಸಿದ. ಬೆಳಕಿನ ವೇಗ ಮತ್ತು ಈಥರ್‌ ನ ಒಗಟನ್ನು ಬಿಡಿಸಲು ಮನದಲ್ಲೇ ಪ್ರಯೋಗಗಳನ್ನು ನಡೆಸತೊಡಗಿದ.
ಶೇಷಾದ್ರಿ ಗಂಜೂರು ಬರೆಯುವ ಅಂಕಣ

 

ಡಿಸೆಂಬರ್ ೨, ೧೯೧೯ರ ನ್ಯೂಯಾರ್ಕ್ ಟೈಮ್ಸ್ ದಿನಪತ್ರಿಕೆಯಲ್ಲಿ ಐನ್‌ಸ್ಟೈನನ ಸಂದರ್ಶನವೊಂದು ಪ್ರಕಟವಾಗಿದೆ. ಆ ಸಂದರ್ಶನದಲ್ಲಿ, ಪತ್ರಿಕೆಯ ಸಂದರ್ಶನಕಾರ, ರಿಲೆಟಿವಿಟಿ ಥಿಯರಿ ಪ್ರಪಂಚದಲ್ಲಿ ಕೇವಲ ಹನ್ನೆರಡು ಜನರಿಗೆ ಮಾತ್ರ ಅರ್ಥವಾಗಿರುವುದರ ಕುರಿತು ಪ್ರಸ್ತಾಪಿಸುತ್ತಾನೆ. ಅದಕ್ಕೆ ಐನ್‌ಸ್ಟೈನ್ ನಗುತ್ತಾನೆ.

ರಿಲೆಟಿವಿಟಿ ಥಿಯರಿಯನ್ನು ಅರ್ಥಮಾಡಿಕೊಳ್ಳುವುದು ಸುಲಭವೇನಲ್ಲ. ಆದರೆ, ಅದರ ನಿಜವಾದ ಕಷ್ಟವಿರುವುದು ಅದು ಸತ್ಯವೆಂದು ಮನಸಾರೆ ಒಪ್ಪಿಕೊಳ್ಳಲು. ಏಕೆಂದರೆ, ಕಾಲ ಬಗ್ಗುವಂತಹ ವಿಷಯ ನಮ್ಮ ದೈನಂದಿನ ಅನುಭವಕ್ಕೆ, “ಕಾಮನ್ ಸೆನ್ಸ್”ಗೆ ದಕ್ಕುವಂತಹ ಸತ್ಯವಲ್ಲ. ಆದರೆ, ನಾವು ಒಪ್ಪಲಿ ಬಿಡಲಿ, ಇಂದು ನಾವು ಉಪಯೋಗಿಸುವ ಎಷ್ಟೋ ತಂತ್ರಜ್ಞಾನಗಳ ಹಿಂದೆ ಈ ಥಿಯರಿ ಕೆಲಸಮಾಡುತ್ತದೆ. ಉದಾಹರಣೆಗೆ, ಇಂದು ನಾವು ಪ್ರತಿ ನಿತ್ಯ ಬಳಸುವ ಜಿ.ಪಿ.ಎಸ್. ಕೆಲಸ ಮಾಡಲು ರಿಲೆಟಿವಿಟಿಯ ಗಣಿತ ಬೇಕೇ ಬೇಕು. ಹಾಗೆಯೇ, ನಾವು ಸರ್ವೇ ಸಾಮಾನ್ಯವೆಂದು ಪರಿಗಣಿಸುವ ಎಷ್ಟೋ ವಿಚಾರಗಳಿಗೆ ಈ ಥಿಯರಿ ವಿವರಣೆಯನ್ನು ನೀಡುತ್ತದೆ. ಉದಾಹರಣೆಗೆ, ಬೆಳಕಿನ ಇರುವಿಕೆಗೆ, ಚಿನ್ನದ ಹೊಂಬಣ್ಣಕ್ಕೆ, ಕೆಲವೊಂದು ಲೋಹಗಳು ತುಕ್ಕು ಹಿಡಿಯದೇ ಇರುವುದಕ್ಕೆ ರಿಲೆಟಿವಿಟಿ ಥಿಯರಿಯನ್ನು ಬಳಸಿ ವೈಜ್ಞಾನಿಕ ವಿವರಣೆ ನೀಡಬಹುದು.

ಮಾನವ ಬುದ್ಧಿಮತ್ತೆಯ ಉತ್ತುಂಗವೆನಿಸುವಂತಹ ಈ ಥಿಯರಿಯನ್ನು ಕೊಂಚ ಮಟ್ಟಿಗಾದರೂ ಅರ್ಥಮಾಡಿಕೊಂಡರೆ ನಾವೂ ಸಹ ನ್ಯೂಯಾರ್ಕ್ ಟೈಮ್ಸ್‌ ನ “ಹನ್ನೆರಡು ಜನ” ಬುದ್ಧಿವಂತರಲ್ಲಿ ಒಬ್ಬರಾಗಬಹುದೇನೋ..

*****

ಈ ಲೇಖನಮಾಲೆಯ ಹಿಂದಿನ ಲೇಖನಗಳಲ್ಲಿ ತೋರಿಸಿದಂತೆ, ಜೇಮ್ಸ್ ಕ್ಲರ್ಕ್ ಮ್ಯಾಕ್ಸ್ವೆಲ್ ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದ ವೇಳೆಗೆ ತನ್ನ ಗಣಿತದ ಮೂಲಕ ಎಲೆಕ್ಟ್ರೋ-ಮ್ಯಾಗ್ನೆಟಿಕ್ ಅಲೆಗಳ ವೇಗದ ಮಿತಿಯನ್ನು ತೋರಿಸಿಕೊಟ್ಟಿದ್ದ. ಅಷ್ಟೇ ಅಲ್ಲ, ಬೆಳಕೆಂಬುದೂ ಎಲೆಕ್ಟ್ರೋ-ಮ್ಯಾಗ್ನೆಟಿಕ್ ಅಲೆಗಳೇ ಎಂದು ಪ್ರತಿಪಾದಿಸಿದ್ದ. ಇದು, ಈ ಅಲೆಗಳ ಸಂವಹನಕ್ಕೆ ಬೇಕಿರಬಹುದಾದ “ಈಥರ್”ನ ಹುಡುಕಾಟಕ್ಕೆ ಮತ್ತಷ್ಟು ಪುಷ್ಟಿ ನೀಡಿತು.

(ಐನ್‌ಸ್ಟೈನ್)

ಹತ್ತೊಂಬತ್ತನೆಯ ಶತಮಾನದ ಅಂತ್ಯದ ವೇಳೆಗೆ ಮಿಕೆಲ್ಸನ್-ಮೋರ್ಲಿ ದ್ವಯರು ಈಥರ್‌ ನ ಹುಡುಕಾಟದಲ್ಲಿ ಸೋತಿದ್ದರು; ಅವರು ಬೆಳಕಿನ ವೇಗವನ್ನು ಹೇಗೇ ಅಳೆದರೂ, ಅದರಲ್ಲಿ ಈಥರ್‌ ನಿಂದ ಆಗ ಬೇಕಿದ್ದ ಬದಲಾವಣೆಯೇ ಕಂಡಿರಲಿಲ್ಲ.

“ಬೆಳಕೆಂಬುದು ಅಲೆಗಳಾದರೆ, ಅವು ಸಂವಹಿಸಲು ಈಥರ್‌ ನಂತಹ ಮಾಧ್ಯಮವೊಂದು ಇರಬೇಕು. ಈಥರ್ ಎಂಬುದು ಇದ್ದರೆ, ಭೂಮಿಯೂ ಸೇರಿದಂತೆ ಆಕಾಶಕಾಯಗಳು ಅದರ ಮೂಲಕ ಸಂಚರಿಸುವಾಗ, ಬೆಳಕಿನ ವೇಗದಲ್ಲಿ ವ್ಯತ್ಯಾಸ ಕಾಣಬೇಕು.” ಇದು ಆ ಕಾಲದ ವಿಜ್ಞಾನಿಗಳ ಬಲವಾದ ನಂಬಿಕೆಯಾಗಿತ್ತು. ಆದರೆ, ಮ್ಯಾಕ್ಸ್‌ವೆಲ್‌ ನ ಗಣಿತ ಮತ್ತು ಮಿಕೆಲ್ಸನ್-ಮೋರ್ಲಿಯವರ ಪ್ರಯೋಗಗಳು ಬೆಳಕಿಗೆ ಇರುವುದು ಒಂದೇ ವೇಗ ಎನ್ನುತ್ತಿವೆ. ಇದು ಅಂದಿನ ಭೌತ ಶಾಸ್ತ್ರಜ್ಞರಿಗೆ ಬಿಡಿಸಲಾರದ ಒಗಟಾಯಿತು. ಅರ್ನ್ಸ್ಟ್ ಮಾಕ್, ಹೆನ್ರಿ ಪಯಿಂಕರೆಯಂತಹ ಖ್ಯಾತನಾಮರು ಈ ವಿಷಯದ ಕುರಿತು ತಮ್ಮ ಆಲೋಚನೆಗಳನ್ನು ಮಂಡಿಸತೊಡಗಿದರು. ಆ ವೇಳೆಗೆ ಇನ್ನೂ ಹದಿಹರೆಯದ ಬಾಲಕನಾಗಿದ್ದ ಐನ್‌ಸ್ಟೈನ್ ಸಹ ಈ ವಿಷಯದ ಕುರಿತು ಗಮನ ಹರಿಸಿದ.

ಹದಿಹರೆಯದ ಐನ್‌ಸ್ಟೈನನ ಮನದಲ್ಲಿ ಮೂಡಿದ ಎಲೆಕ್ಟ್ರೋ-ಮ್ಯಾಗ್ನೆಟಿಕ್ ಅಲೆಗಳ ಕುರಿತಾದ ಈ ಸೋಜಿಗ, ಹಾಗೆಯೇ ಮುಂದುವರೆಯಿತು. ಅವನು ಪೇಟೆಂಟ್ ಆಫೀಸಿನಲ್ಲಿ ಕೆಲಸಕ್ಕೆ ಸೇರಿದಮೇಲೆ, ಸಮಯ ದೊರೆತಾಗಲೆಲ್ಲಾ ಈ ವಿಷಯದ ಬಗೆಗೆ ಆಳವಾದ ಚಿಂತನೆ ನಡೆಸಲಾರಂಭಿಸಿದ. ಬೆಳಕಿನ ವೇಗ ಮತ್ತು ಈಥರ್‌ ನ ಒಗಟನ್ನು ಬಿಡಿಸಲು ಮನದಲ್ಲೇ ಪ್ರಯೋಗಗಳನ್ನು ನಡೆಸತೊಡಗಿದ. (“Gedanken Experiments” ಎನ್ನುವ ಇಂತಹ ಪ್ರಯೋಗಗಳಿಗೆ ಕೆಲವು ಶತಮಾನಗಳ ಇತಿಹಾಸವೇ ಇದೆ. ಹಲವಾರು ಸುವಿಖ್ಯಾತ ವಿಜ್ಞಾನಿಗಳು ಇಂತಹ ಕಾಲ್ಪನಿಕ ಪ್ರಯೋಗಗಳನ್ನು ನಡೆಸಿದ್ದಾರೆ. ಇಂತಹ ಕೆಲವು ಪ್ರಯೋಗಗಳು ತಮ್ಮದೇ ಆದ ಕೀರ್ತಿಯನ್ನೂ ಪಡೆದಿವೆ. ಉದಾಹರಣೆಗೆ, ಕ್ವಾಂಟಂ ಫಿಸಿಕ್ಸ್‌ ಗೆ ಸಂಬಂಧಿಸಿದ “ಶ್ರೋಡಿಂಗರನ ಬೆಕ್ಕು” ಎಂದೇ ಪ್ರಸಿದ್ಧಿಯಾಗಿರುವ ಐನ್‌ಸ್ಟೈನ್ ಮತ್ತು ಇರ್ವಿನ್ ಶ್ರೋಡಿಂಗರ್ ಅವರ ಚರ್ಚೆಯಿಂದ ಉದ್ಭವಿಸಿದ ಕಲ್ಪನಾ ಪ್ರಯೋಗ)

(ಇರ್ವಿನ್ ಶ್ರೋಡಿಂಗರ್)

ಬೆಳಕಿನ ಬಗೆಗೆ ಚಿಂತಿಸುವಾಗ, ಐನ್‌ಸ್ಟೈನ್ ತನ್ನ ಮನದಲ್ಲೇ ಮಾಡಿದ ಕಾಲ್ಪನಿಕ ಪ್ರಯೋಗ ಹೀಗಿತ್ತು: ರೈಲು ಗಾಡಿಯೊಂದು, ಒಂದು ಮರದೆಡೆಯಿಂದ ಇನ್ನೊಂದು ಮರದೆಡೆಗೆ ನೇರವಾಗಿ ಹಳಿಯ ಮೇಲೆ ಚಲಿಸುತ್ತಿದೆ. ಆ ರೈಲು ಗಾಡಿ ಆ ಎರಡೂ ಮರಗಳ ಮಧ್ಯದಲ್ಲಿದ್ದಾಗ, ಆ ಎರಡೂ ಮರಗಳಿಗೆ ಒಂದೇ ಸಮಯಕ್ಕೆ ಸಿಡಿಲು ಬಡಿಯುತ್ತದೆ. ಆದರೆ, ಆ ರೈಲು ಒಂದು ಮರದಿಂದ ಇನ್ನೊಂದು ಕಡೆಗೆ ಹೋಗುತ್ತಿರುವುದರಿಂದ ಆ ರೈಲಿನಲ್ಲಿ ಕುಳಿತಿರುವವನಿಗೆ ಎರಡನೆಯ ಮರಕ್ಕೆ ಬಡಿದ ಸಿಡಿಲು ಮೊದಲು ಕಂಡು ಎರಡನೆಯದು ಕ್ಷಣ-ನಂತರ ಕಾಣುತ್ತದೆ. ರೈಲು ಹಳಿಯ ಪಕ್ಕ ನಿಂತ ವೀಕ್ಷಕನಿಗೆ ಮಾತ್ರ ಎರಡೂ ಸಿಡಿಲುಗಳು ಒಟ್ಟಿಗೆ ಬಡಿದಂತೆ ಕಾಣುತ್ತವೆ.

ಈ ಪ್ರಯೋಗದ ಮೂಲಕ ಐನ್‌ಸ್ಟೈನ್ ಒಂದು ತೀರ್ಮಾನಕ್ಕೆ ಬಂದ. “ಏಕಕಾಲ” (“Simultaneity”) ಎನ್ನುವುದು ಸಾಪೇಕ್ಷವಾದದ್ದು (“Relative”); ಎರಡು ಸಂಗತಿಗಳು ಒಬ್ಬಳಿಗೆ ಏಕಕಾಲದಲ್ಲಿ ನಡೆದಂತೆ ಕಂಡರೂ, ಇನ್ನೊಬ್ಬಳಿಗೆ ಅವು ಬೇರೆ-ಬೇರೆಯೇ ಕಾಲದಲ್ಲಿ ನಡೆದಂತೆ ಕಾಣಬಹುದು. ಇದು ಅವನಲ್ಲಿ ಹೊಸದೊಂದು ಕ್ರಾಂತಿಕಾರಕ ಆಲೋಚನೆಗೆ ಕಾರಣವಾಯಿತು: ಕಾಲದ ಹರಿವು ನಮ್ಮ ಚಲನೆಯ ಮೇಲೆ ನಿಂತಿದೆ.

ಮ್ಯಾಕ್ಸ್‌ವೆಲ್‌ ನ ಗಣಿತ ಮತ್ತು ಮಿಕೆಲ್ಸನ್-ಮೋರ್ಲಿಯವರ ಪ್ರಯೋಗಗಳು ಬೆಳಕಿಗೆ ಇರುವುದು ಒಂದೇ ವೇಗ ಎನ್ನುತ್ತಿವೆ. ಇದು ಅಂದಿನ ಭೌತ ಶಾಸ್ತ್ರಜ್ಞರಿಗೆ ಬಿಡಿಸಲಾರದ ಒಗಟಾಯಿತು.

ನ್ಯೂಟನ್ನಿನಿಂದ ಹಿಡಿದು ಮ್ಯಾಕ್ಸ್ವೆಲ್, ಮಿಕೆಲ್ಸನ್ ಮತ್ತು ಪಯಿಂಕರೆಯವರೆಗೆ ಪ್ರತಿಯೊಬ್ಬರೂ ಈಥರ್ ಎನ್ನುವುದು ಇರಲೇ ಬೇಕೆಂದು ನಂಬಿದ್ದರು. ಐನ್‌ಸ್ಟೈನ್‌ ನ ಅಸಾಧಾರಣ ವೈಶಿಷ್ಟ್ಯವೆಂದರೆ, ಅವನು ಆ ಈಥರ್ ಅನ್ನು ಬದಿಗಿಟ್ಟ. ಎಲೆಕ್ಟ್ರೋ-ಮ್ಯಾಗ್ನೆಟಿಕ್ ಅಲೆಗಳಂತಹ ಅಲೆಗಳು ಯಾವುದೇ ಮಾಧ್ಯಮದ ಸಹಾಯವಿಲ್ಲದೆ ಶೂನ್ಯದಲ್ಲೂ ಸಂಚರಿಸಬಹುದೆಂದು ಪ್ರತಿಪಾದಿಸಿದ. ವಿಶ್ವದ ಈ ಅನಂತದಲ್ಲಿ, ಬೆಳಕಿನ ತರಹದ ಅಲೆಗಳ ವೇಗವಷ್ಟೇ ನಿಚ್ಚಳ, ಕಾಲ ಮತ್ತು “ಸ್ಪೇಸ್”ಗಳು (ಇಲ್ಲಿ ಸ್ಪೇಸ್ ಎಂದರೆ ಕೇವಲ ಆಕಾಶವೆಂದಷ್ಟೇ ಅರ್ಥವಲ್ಲ) ಸಾಪೇಕ್ಷವಾದದ್ದೆಂದು ತನ್ನ ಗಣಿತದ ಮೂಲಕ ತೋರಿಸಿಕೊಟ್ಟ. (ಅವನ ಈ ಆಲೋಚನೆಗೆ ಬೇರಾರ ಸಹಾಯ ಇತ್ತೋ ಇಲ್ಲವೋ ಎಂಬುದು ಚರ್ಚೆಯ ವಿಷಯ. ಆದರೆ, ಹಲವರು ವಿಜ್ಞಾನದ ಇತಿಹಾಸಕಾರರು ಹೇಳುವಂತೆ, ಅವನ ಆಲೋಚನೆಗೆ ಗಣಿತದ ಆಧಾರ ಒದಗಿಸುವಲ್ಲಿ ಐನ್‌ಸ್ಟೈನನ ಪತ್ನಿ ಮಿಲೇವಾಳ ಕೊಡುಗೆ ಇಲ್ಲದಿಲ್ಲ)

*****

ನಮ್ಮ ಜೀವನಾನುಭವ “ಸ್ಪೇಸ್” ಮತ್ತು “ಟೈಮ್”ಗಳನ್ನು ಒಂದಾಗಿಸಿ ನೋಡುವುದಿಲ್ಲ. ಐನ್‌ಸ್ಟೈನ್ ತನ್ನ ಥಿಯರಿಯನ್ನು ಮಂಡಿಸುವವರೆಗೂ ನ್ಯೂಟನ್‌ ನಂತಹ ವಿಜ್ಞಾನಿಗಳೂ ಸಹ ಇವೆರಡನ್ನೂ ಬೇರೆ-ಬೇರೆಯದೇ ಆದ “ನಿಚ್ಚಳ”ಗಳೆಂದೇ (Absolutes) ಬಗೆದಿದ್ದರು. ಆದರೆ, ಐನ್‌ಸ್ಟೈನ್ ಸ್ಪೇಸ್-ಟೈಮ್ ಎನ್ನುವುದು ಒಂದೇ ಅವಿರತತೆಯ (Continuum) ಆಯಾಮಗಳೆಂದು ತೋರಿಸಿಕೊಟ್ಟ.

ಐನ್‌ಸ್ಟೈನ್ ಹೇಳುವಂತೆ, ನೀವು “ಸ್ಪೇಸ್”ನಲ್ಲಿ ವೇಗವಾಗಿ ಚಲಿಸುತ್ತಾ ಈ ಜಾಗದಲ್ಲಿ/ಈ ಹೊತ್ತಿಗೆ ಆಯಿತೆಂದು ಗುರುತಿಸುವ ಸಂಗತಿಗಳು, ಬೇರೊಂದು ವೇಗದಲ್ಲಿ ಚಲಿಸುತ್ತಿರುವ ಇನ್ನೊಬ್ಬ ವ್ಯಕ್ತಿಗೆ ಬೇರೆಯೇ ತೆರನಾಗಿ ಕಾಣುತ್ತವೆ.

ಉದಾಹರಣೆಗೆ, ಕೆಳಗಿನ ಚಿತ್ರವನ್ನೇ ಗಮನಿಸಿ. ನೀವು ಬೆಳಕಿನ ವೇಗದ ಅರ್ಧದಷ್ಟು ವೇಗದಲ್ಲಿ ಚಲಿಸುವ ಗಗನ ನೌಕೆಯಲ್ಲಿ ಸಂಚರಿಸುತ್ತಾ, ಲೇಸರ್ ಕಿರಣವೊಂದನ್ನು ನೌಕೆಯ ಸೂರಿನಲ್ಲಿರುವ ಕನ್ನಡಿಯೊಂದಕ್ಕೆ ಗುರಿಯಾಗಿಸಿದರೆನ್ನಿ. ಅದು, ಆ ಕನ್ನಡಿಯಲ್ಲಿ ಪ್ರತಿಫಲಿತವಾಗಿ ಕೆಳಗಿನ ಸೆನ್ಸರ್‌ ಗೆ ಬಡಿಯುತ್ತದೆನ್ನಿ. ನಿಮ್ಮ ದೃಷ್ಟಿಯಲ್ಲಿ ನೌಕೆಯ ವೇಗ ನಿಮ್ಮ ಪ್ರಯೋಗದಲ್ಲಿ ಯಾವುದೇ ಬದಲಾವಣೆಗಳನ್ನು ತೋರುವುದಿಲ್ಲ. (ಆ ನೌಕೆ ಒಂದೇ ವೇಗದಲ್ಲಿ ಚಲಿಸುತ್ತಿದ್ದಾಗ, ನಿಮಗೆ ಚಲನೆಯ ಅನುಭವವೇ ಆಗುವುದಿಲ್ಲ – ಹೊರಗಡೆ ನೋಡದಿದ್ದರೆ.)

ಆದರೆ, ನಿಮ್ಮ ಈ ಪ್ರಯೋಗವನ್ನು ನಿಮ್ಮ ನೌಕೆಯ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿರುವ ಇನ್ನೊಂದು ನೌಕೆಯಿಂದ ಬೇರೊಬ್ಬ ವ್ಯಕ್ತಿ ನೋಡಿದಳೆನ್ನಿ. ಆಕೆಗೆ ಕಾಣುವ ಸಂಗತಿಯೇ ಬೇರೆ. ಲೇಸರ್ ಕಿರಣ ನಿಮ್ಮ ಕೈಯಿಂದ ಹೊರಟು ನಿಮ್ಮ ನೌಕೆಯ ಸೂರಿನಲ್ಲಿರುವ ಕನ್ನಡಿಗೆ ಬಡಿದು ನೌಕೆಯ ನೆಲದಲ್ಲಿರುವ ಸೆನ್ಸರ್ ತಲುಪುವುದು ಕಾಣುವುದಾದರೂ, ಆ ಲೇಸರ್ ಕಿರಣದ ಹಾದಿ ಮಾತ್ರ ಬೇರೆಯದೇ ಆಗಿರುತ್ತದೆ. ಅಷ್ಟೇ ಅಲ್ಲ, ಆ ಹಾದಿಯ ಉದ್ದವೂ ಹೆಚ್ಚಿರುತ್ತದೆ.

ಮ್ಯಾಕ್ಸ್‌ವೆಲ್‌ ನ ಗಣಿತ ಹೇಳುವಂತೆ ಬೆಳಕಿನ ವೇಗ ಎಲ್ಲರಿಗೂ ಒಂದೇ ಆಗಿರುವುದರಿಂದ, ಹಾದಿಯ ಉದ್ದದಲ್ಲಿ ಆಗುವ ಬದಲಾವಣೆಯಿಂದ ಕಾಲದ ಪ್ರವಾಹದಲ್ಲೂ ಬದಲಾವಣೆಯಾಗುತ್ತದೆನ್ನುತ್ತಾನೆ ಐನ್‌ಸ್ಟೈನ್. ನಿಮ್ಮ ನೌಕೆಯಲ್ಲಿ ನೀವು ಅನುಭವಿಸುವ ಕಾಲದ ವೇಗಕ್ಕೂ, ಇನ್ನೊಂದು ನೌಕೆಯಲ್ಲಿ ಸಂಚರಿಸುತ್ತಿರುವ ಗಗನಯಾನಿ ಅನುಭವಿಸುವ ಕಾಲದ ವೇಗಕ್ಕೂ ವ್ಯತ್ಯಾಸವಿರುತ್ತದೆ ಎನ್ನುತ್ತದೆ ಅವನ ಥಿಯರಿ. ಇದನ್ನು “ಟೈಮ್ ಡೈಲೇಷನ್” ಎನ್ನುತ್ತಾರೆ. (“ಕಾಲದ ಕಿಸಿಯುವಿಕೆ”)

ಬೆಳಕಿನ ವೇಗ ಮುಟ್ಟುವುದು ನಮ್ಮ ಜೀವನದಲ್ಲಿ ಅಸಾಧ್ಯವಾದುದರಿಂದ, ಈ “ಟೈಮ್ ಡೈಲೇಷನ್” ನಮ್ಮ ಅನುಭವಕ್ಕೆ ಬರುವುದೇ ಇಲ್ಲ. ಹೀಗಾಗಿ, ನಮಗೆ ಏಕಕಾಲತೆ (simultaneity) ಒಂದು ಸಮಸ್ಯೆಯಾಗಿ ಕಾಣುವುದಿಲ್ಲ. ಅಷ್ಟೇ ಅಲ್ಲ, ಕಾಲ ಪ್ರವಾಹ ಎಲ್ಲರಿಗೂ ಒಂದೇ ಎಂದೆನ್ನಿಸುತ್ತದೆ.

ಆದರೆ, ಐನ್‌ಸ್ಟೈನನ ವಾದ ಸರಿಯೆಂದು, ಇಂದು ಹತ್ತು ಹಲವು ಪ್ರಯೋಗಗಳಿಂದ ನಿರೂಪಿತವಾಗಿದೆ. ಅಷ್ಟೇ ಅಲ್ಲ, ಜಿ.ಪಿ.ಎಸ್.ನಂತಹ ತಂತ್ರಜ್ಞಾನಗಳಲ್ಲಿ, ಅವನ ಗಣಿತದ ಲೆಕ್ಕಾಚಾರಗಳು ಕೆಲಸ ಮಾಡುತ್ತಿವೆ.

*****

ಐನ್‌ಸ್ಟೈನ್ ತನ್ನ ಸ್ಪೆಷಲ್ ಥಿಯರಿ ಆಫ್ ರಿಲೆಟಿವಿಟಿಯನ್ನು ೧೯೦೪ರಲ್ಲಿ ಪ್ರಕಟಿಸಿದಾಗ, ಅದರಲ್ಲಿ, ವಿಶ್ವದ ಅತ್ಯಂತ ಪ್ರಸಿದ್ಧ ಸಮೀಕರಣ ಎನ್ನಬಹುದಾದ E = mc2 ಇರಲಿಲ್ಲ. ಒಂದು ವರ್ಷದ ನಂತರ, ಅವನು ತನ್ನ ಅಧ್ಯಯನವನ್ನು ಮತ್ತಷ್ಟು ಮುಂದುವರೆಸಿ, ದ್ರವ್ಯರಾಶಿ (Mass) ಮತ್ತು ಚೈತನ್ಯದ (Energy) ನಡುವಿನ ಸಂಬಂಧವನ್ನು ಈ ಸಮೀಕರಣದ ಮೂಲಕ ಹಿಡಿದಿಟ್ಟ.
ಅವನು, ದ್ರವ್ಯರಾಶಿ ಮತ್ತು ಚೈತನ್ಯಗಳ ಈ ಸಂಬಂಧವನ್ನು ತೋರಿಸಿ ಕೊಡುವವರೆಗೆ, ಇವೆರಡೂ ಸಂಪೂರ್ಣವಾಗಿ ಬೇರೆ-ಬೇರೆಯೇ ಎಂಬ ಪರಿಕಲ್ಪನೆ ಇತ್ತು. ಅವನು ತನ್ನ ಥಿಯರಿಯ ಮೂಲಕ ದ್ರವ್ಯರಾಶಿ ಮತ್ತು ಚೈತನ್ಯಗಳು ಒಂದರಿಂದ ಇನ್ನೊಂದಕ್ಕೆ ಬದಲಾಗುವ ಸಾಧ್ಯತೆಗಳನ್ನು ತೋರಿಸಿಕೊಟ್ಟ.

ಅವನ ಸಿದ್ಧಾಂತವನ್ನು ಇನ್ನೊಂದು ರೀತಿಯಲ್ಲಿ – ದ್ರವ್ಯರಾಶಿ ಮತ್ತು ಚೈತನ್ಯಗಳ ಭಾಷೆಯಲ್ಲಿ – ಹೇಳಬಹುದು: ದ್ರವ್ಯರಾಶಿ ಇರದ ಎಲೆಕ್ಟ್ರೋ-ಮ್ಯಾಗ್ನೆಟಿಕ್ ಅಲೆಗಳಿಗಷ್ಟೇ ಬೆಳಕಿನ ವೇಗದಲ್ಲಿ ಸಂಚರಿಸುವುದು ಸಾಧ್ಯ. ಇನ್ನಾವುದೇ ವಸ್ತುವಿಗೆ, ಅದರ ವೇಗ ಹೆಚ್ಚಿದಷ್ಟೂ ಅದರ ದ್ರವ್ಯರಾಶಿ ಹೆಚ್ಚುತ್ತಲೇ ಇರುತ್ತದೆ. ಅದರ ವೇಗ ಬೆಳಕಿನ ವೇಗ ತಲುಪಿತೆನ್ನಿ, ಆಗ ಅದರ ದ್ರವ್ಯರಾಶಿ ಅಪರಿಮಿತ (Infinite) ಆಗಬೇಕಾಗುತ್ತದೆ. ವಸ್ತುವಿನ ತೂಕ ಹೆಚ್ಚಿದಷ್ಟೂ, ಅದರ ವೇಗ ಹೆಚ್ಚಿಸುವುದು ಕಷ್ಟ, ಹೀಗಾಗಿ, ಅಪರಿಮಿತ ತೂಕದ ವಸ್ತುವೊಂದು ಬೆಳಕಿನ ವೇಗ ತಲುಪುವುದು ಸಾಧ್ಯವಿಲ್ಲ.

ಐನ್‌ಸ್ಟೈನ್ ತನ್ನ ಸ್ಪೆಷಲ್ ರಿಲೆಟಿವಿಟಿ ಸಿದ್ಧಾಂತ ಪ್ರಕಟಿಸಿದ ಕೂಡಲೇ ಅದಕ್ಕೆ ಸಿಗಬೇಕಿದ್ದ ಮಾನ್ಯತೆ ತಕ್ಷಣವೇ ದೊರಕಲಿಲ್ಲ. ಹತ್ತು ವರ್ಷಗಳ ನಂತರ ಅವನು ಅದನ್ನು ಮತ್ತಷ್ಟು ವಿಸ್ತರಿಸಿ, ಜೆನೆರಲ್ ಥಿಯರಿ ಆಫ್ ರಿಲೆಟಿವಿಟಿ ಪ್ರಕಟಿಸಿದ ನಂತರವೂ, ನೊಬೆಲ್ ಪ್ರಶಸ್ತಿ ವಿಜೇತರೂ ಸೇರಿದಂತೆ, ಹಲವಾರು ಪಂಡಿತರು ಅವನ ಪ್ರತಿಪಾದನೆಯನ್ನು ಖಂಡಿಸಿದರು. ಹಲವರು “ಈಥರ್ ವಾದವನ್ನು” ಬಿಟ್ಟುಕೊಡಲು ಸಿದ್ಧರಿರಲಿಲ್ಲವಾದರೆ, ಇನ್ನೂ ಕೆಲವರು ಅವನ ವಾದವನ್ನು “ಕಾಮನ್ ಸೆನ್ಸ್”ಗೆ ವಿರೋಧವಾಗಿದೆಯೆಂದರು.

ಇಪ್ಪತ್ತನೆಯ ಶತಮಾನದ ಆದಿಯ ವೇಳೆಗೆ ಯೂರೋಪಿನಲ್ಲಿ ಏರುತ್ತಿದ್ದ ರಾಜಕೀಯ ತಳಮಳಗಳು ಕೂಡ, ಐನ್‌ಸ್ಟೈನನ ಸಿದ್ಧಾಂತವನ್ನು ಒಪ್ಪಿಕೊಳ್ಳುವಲ್ಲಿ ಮುಳುವಾಗಿದ್ದವು. ಅವನು ಜರ್ಮನ್ ವಿಜ್ಞಾನಿಯಾಗಿದ್ದುದೇ, ಜರ್ಮನಿಯ ಹೊರಗಿನ ಹಲವರಿಗೆ ಅವನ ವಿಜ್ಞಾನವನ್ನು ತಿರಸ್ಕರಿಸಲು ಸಾಕಿತ್ತು. ಜರ್ಮನಿಯ ಹೊರಗಿನವರು ಅವನನ್ನು “ಜರ್ಮನ್”ನಾಗಿ ಕಂಡರೆ, ಜರ್ಮನಿಯ ಒಳಗೆ, ಅವನನ್ನು “ಯೆಹೂದ್ಯ”ನಾಗಿ ಕಾಣುತ್ತಿದ್ದರು. ಹಲವು ಜರ್ಮನ್ ವಿಜ್ಞಾನಿಗಳು, ಲೇಖಕರು, ಪತ್ರಕರ್ತರು, ಥಿಯರಿ ಆಫ್ ರಿಲೆಟಿವಿಟಿಯನ್ನು “ಯೆಹೂದಿ ಭೌತಶಾಸ್ತ್ರ”ವೆಂದು ಜರೆದರು. ೧೯೩೦ರ ಹೊತ್ತಿಗೆ, “ಐನ್‌ಸ್ಟೈನ್ ವಿರುದ್ಧ ನೂರು ಲೇಖಕರು” ಎಂಬ ಪುಸ್ತಕ ಸಹ ಜರ್ಮನಿಯಲ್ಲಿ ಪ್ರಕಟವಾಯಿತು.


ಮಾನವನನ್ನು ಉಳಿದ ಜೀವಿಗಳಿಂದ ಬೇರ್ಪಡಿಸುವುದು, ಅವನ ಬುದ್ಧಿಮತ್ತೆ. ನ್ಯೂಟನ್‌, ಚಾರ್ಲ್ಸ್ ಡಾರ್ವಿನ್, ಐನ್‌ಸ್ಟೈನ್ ಅಂತಹ ವಿಜ್ಞಾನಿಗಳು, ಈ ಬುದ್ಧಿಮತ್ತೆಯ ಉತ್ತುಂಗ ಶಿಖರಗಳು. ಅವರ ಪ್ರತಿಪಾದನೆಗಳು ನಿಲ್ಲುವುದು ಅವರು ನಮ್ಮ ಮುಂದೆ ತೆರೆದಿರಿಸುವ ಸತ್ಯಗಳ ಮೂಲಕ. ಆ ಸತ್ಯಗಳು ಕೆಲವೊಮ್ಮೆ ನಮ್ಮ “ಕಾಮನ್ ಸೆನ್ಸ್”ಗೆ ನಿಲುಕದಂತಿದ್ದರೂ.