ರೈಲು ಹಳಿಯ ಮೇಲಿದ್ದ ಗೋಣಿ ಚೀಲದಲ್ಲಿನ ಶವ ಮಮ್ಮಿಫೈಡ್ ಸ್ಥಿತಿಯಲ್ಲಿತ್ತು. ತೆರೆದು ನೋಡುವಾಗ ಶರೀರದಲ್ಲಿ ಯಾವ ವಾಸನೆಯು ಕೂಡ ಇರಲಿಲ್ಲ. ಶರೀರದಲ್ಲಿ ಅಲ್ಲಲ್ಲಿ ಒಣಗಿದ ಮರಳು ಸಿಕ್ಕಿಕೊಂಡಿದ್ದು, ಶರೀರವನ್ನು ಕೆಲವು ದಿನಪತ್ರಿಕೆಗಳಿಂದ ಸುತ್ತಲಾಗಿತ್ತು. ಎಲ್ಲಾ ಬಿಡಿಸಿ ನೋಡುವಾಗ ಶವವು ಸಾಧಾರಣ ನಲವತ್ತರಿಂದ ಐವತ್ತು ವರ್ಷದ ಒಳಗಿನ ಒಬ್ಬ ಗಂಡಸಿನ ಶರೀರವಾಗಿತ್ತು. ಮೈಯ ಮೇಲೆ ಪೈಜಾಮ ಮತ್ತು ಕಮರಿ ಆಂಗ್ರಖಾ ಎನ್ನುವ ಬಟ್ಟೆಗಳು ಇದ್ದವು. ಆಂಗ್ರಖಾ ಎನ್ನುವುದು ರಾಜಸ್ಥಾನದ ಜನರು ಉಪಯೋಗಿಸುವ ಶರ್ಟಿನಂತಹ ಉಡುಗೆ.
 ‘ನೆನಪುಗಳ ಮೆರವಣಿಗೆ’ ಸರಣಿಯಲ್ಲಿ  ಡಾ. ಕೆ.ಬಿ. ಸೂರ್ಯಕುಮಾರ್ ಅವರ ಬರಹ ಇಲ್ಲಿದೆ. 

 

ಬೆಂಗಳೂರು ಒಂದು ವಿವಿಧ ಸಂಸ್ಕೃತಿಯ ಭಾಷಿಕರು ನೆಲೆಸಿರುವ ನಗರ. ಹಾಗಾಗಿ, ದೇಶದ ವಿವಿಧೆಡೆಗೆ ಇತ್ತಿಂದತ್ತ, ಅತ್ತಿಂದಿತ್ತ ವಾಯು ಹಾಗು ಭೂ ಸಾರಿಗೆ ಸಂಪರ್ಕದ ವ್ಯವಸ್ಥೆಯನ್ನು ಹೊಂದಿದೆ. ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ನಿತ್ಯವೂ ಸತತವಾಗಿ ನೂರಾರು ರೈಲುಗಳು ಓಡಾಡುತ್ತಿದ್ದು, ಅದರಿಂದ ಜನ ಜಂಗುಳಿಯಿಂದ ಕೂಡಿರುತ್ತದೆ.

ಬೆಂಗಳೂರಿನ ಹೊರಭಾಗದಲ್ಲಿ ಅನೇಕ ಹಳ್ಳಿಗಳು ಇದ್ದು, ಕೆಲವು ಗ್ರಾಮಗಳ ಮೂಲಕ ರೈಲ್ವೆ ಹಳಿಗಳು ಹಾದು ಹೋಗುತ್ತವೆ. ಹೀಗೆ ಯಾವುದೇ ಹಳಿಯ ಪಕ್ಕದಲ್ಲಿ ಯಾವುದೇ ದಾಯಿತ್ವವಿಲ್ಲದ ವಸ್ತುಗಳು ಕಂಡು ಬಂದಾಗ, ರೈಲ್ವೆ ವಿಭಾಗದ ಪೊಲೀಸರು ಅವನ್ನು ಪರೀಕ್ಷಿಸಿ ನೋಡುತ್ತಾರೆ. ಇದಕ್ಕೆಂದೇ ಬೇರೆಯೇ ಆದ ಠಾಣೆ ಕೂಡಾ ಇದೆ.

ಕೆಲವು ವರ್ಷಗಳ ಹಿಂದೆ ಒಮ್ಮೆ ಆ ಹಳ್ಳಿಯ ಜನರಿಗೆ ರೈಲ್ವೆ ಹಳಿಯ ಪಕ್ಕದಲ್ಲಿ ಒಂದು ಗೋಣಿ ಚೀಲದ ಕಟ್ಟು ಕಂಡು ಬಂದು, ವಿಷಯವನ್ನು ರೈಲ್ವೇ ಪೊಲೀಸರಿಗೆ ತಿಳಿಸಿದ್ದರು.

ಪೊಲೀಸರು ಸ್ಥಳಕ್ಕಾಗಮಿಸಿ ಹಳಿಯ ಪಕ್ಕದಲ್ಲಿದ್ದ ಗೋಣಿಯ ಚೀಲವನ್ನು ಬಿಡಿಸಿ ನೋಡುವಾಗ ಅವರಿಗೆ ಅದರ ಒಳಗಡೆ ಒಂದು ಶವ ಕಂಡು ಬಂದಿದೆ. ಅಲ್ಲಿ ಅವರು ಬರೀ ಮಹಜರ್ ಮಾತ್ರ ಮಾಡಿ, ಚೀಲ ಸಹಿತ ಶವವನ್ನು ಶವಾಗಾರಕ್ಕೆ ತೆಗೆದುಕೊಂಡು ಬಂದಿದ್ದಾರೆ. ಅಲ್ಲಿದ್ದ ವೈದ್ಯರ ಸಮ್ಮುಖದಲ್ಲಿ ಅದನ್ನು ಅವರು ಹೊರತೆಗೆಯಲು ಪ್ರಯತ್ನ ಪಟ್ಟಿದ್ದಾರೆ. ಆಗ ಅವರಿಗೆ ಗರ್ಭಸ್ಥ ಹೆಣ್ಣಿ‌ನ ಗರ್ಭಾಶಯದ ಒಳಗೆ ಮಗು ಇರುವ ರೀತಿಯಲ್ಲಿ ಕೈ ಕಾಲು ಮಡಚಿದ ಸಂಪೂರ್ಣ ಒಣಗಿದ ಒಂದು ಆಕೃತಿ ಕಂಡು ಬಂದಿದೆ. ಶವದ ಈ ಒಂದು ನಿರ್ದಿಷ್ಟ ಸ್ಥಿತಿಯನ್ನು ನಾವು ಮಮ್ಮಿ ಫೈಡ್ (mummyfied) ದೇಹ ಅನ್ನುತ್ತೇವೆ.

ಯಾವುದೇ ಮೃತ ವ್ಯಕ್ತಿಯ ಶರೀರದಲ್ಲಿ, ದಿನ ಕಳೆದಂತೆ ಕೆಲವು ಬದಲಾವಣೆಗಳು ಉಂಟಾಗುತ್ತವೆ. ಈ ಬದಲಾವಣೆಗಳ ಮೇಲೆ ವೈದ್ಯರು ಸಾವು ಎಷ್ಟು ದಿನದ ಹಿಂದೆ ಆಗಿರಬಹುದು ಎಂಬುದನ್ನು ನಿಶ್ಚಯಿಸುತ್ತಾರೆ.

ಇದರಲ್ಲಿ ಬೇರೆ ಬೇರೆ ಹಂತಗಳು ಇದೆ. ಮೃತರಾದವರ ಸ್ವಲ್ಪ ಸಮಯದವರೆಗೆ ಆಗುವ ಬದಲಾವಣೆಗಳನ್ನು ತಕ್ಷಣದ ಬದಲಾವಣೆಗಳು (immediate changes) ಎನ್ನುತ್ತಾರೆ. ಅಂದರೆ, ಮನುಷ್ಯ ಮರಣ ಹೊಂದಿದ ಕೆಲವು ಗಂಟೆಗಳ ಒಳಗೆ ನಡೆಯುವಂತಹ ಪ್ರಕ್ರಿಯೆಗಳು.

ನಂತರದ ಬದಲಾವಣೆಗಳನ್ನು ನಾವು, ವಿಳಂಬ ಬದಲಾವಣೆಗಳು (Delayed or Late changes) ಎನ್ನುತ್ತೇವೆ. ಇದರಲ್ಲಿ ಕೊಳೆಯುವಿಕೆ ( Decomposition) ಎಡಿಪೋಸೀರೆ (Adipocere ) ಮತ್ತು ಒಣಗುವಿಕೆ, ಮಮ್ಮಿಫೀಕೇಶನ್-(Mummification) ಸೇರಿವೆ.

ಮಮ್ಮಿಫಿಕೇಷನ್ನಿನಲ್ಲಿ, ಶರೀರ ಕೊಳೆಯದೆ ಒಣಗಿ ಗಟ್ಟಿಯಾಗಿ ಬರಿ ಮೂಳೆ, ಚಕ್ಕಳ ಆಗಿಹೋಗುತ್ತದೆ. ಅದರಲ್ಲಿದ್ದ ಕೊಬ್ಬಿನಾಂಶಗಳು ಒಣಗಿ ಬಿಟ್ಟಿರುತ್ತದೆ. ಮರಣ ಹೊಂದಿದ ಮೇಲೆ ಶವವನ್ನು ಯಾವುದಾದರೂ ಅತಿ ಉಷ್ಣಾಂಶ ಇರುವ, ನೀರಿನ ಅಂಶ ಇಲ್ಲದೆ ಇರುವ ಅಥವಾ ಮರಳಿನಂತ ಜಾಗದಲ್ಲಿ ಹೂತು ಹಾಕಿದ್ದರೆ, ಕೆಲವೊಮ್ಮೆ ಸರಿಯಾಗಿ, ಸಂಪೂರ್ಣ ಕೊಳೆಯದೆ ಒಣಗುವಿಕೆ ಸ್ಥಿತಿಗೆ ಹೋಗುತ್ತದೆ. ಆದರೆ ಇದಕ್ಕೆ ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ. ಆರು ತಿಂಗಳಿಂದ ಹಿಡಿದು ಕೆಲವು ವರ್ಷಗಳು ಬೇಕಾಗಬಹುದು. ಈಜಿಪ್ಟಿನ ಪಿರಮಿಡ್ಡಿನಲ್ಲಿ ಸಿಗುವ ಎಲ್ಲಾ ಶವಗಳು ಈ ರೀತಿ ಮಮ್ಮಿಫೈಡ್ ಸ್ಥಿತಿಯಲ್ಲಿ ಇರುತ್ತವೆ. ಹಾಗಾಗಿ ಮೂರು ಸಾವಿರ ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಹಾಳಾಗದೆ ಉಳಿದಿದೆ.

ಹಳಿಯ ಪಕ್ಕದಲ್ಲಿ ಯಾವುದೇ ದಾಯಿತ್ವವಿಲ್ಲದ ವಸ್ತುಗಳು ಕಂಡು ಬಂದಾಗ, ರೈಲ್ವೆ ವಿಭಾಗದ ಪೊಲೀಸರು ಅವನ್ನು ಪರೀಕ್ಷಿಸಿ ನೋಡುತ್ತಾರೆ. ಇದಕ್ಕೆಂದೇ ಬೇರೆಯೇ ಆದ ಠಾಣೆ ಕೂಡಾ ಇದೆ.

ಯಾವುದೇ ಪರಿಸ್ಥಿತಿಯಲ್ಲಿ ಅತೀ ಕಡಿಮೆ ಉಷ್ಣಾಂಶ ಇದ್ದಾಗ ಕೂಡಾ ಶರೀರವು ಕೆಡುವುದಿಲ್ಲ. ಹಿಮಾಲಯ ಪರ್ವತ ಹತ್ತುವಾಗ ಅಲ್ಲಿ ಬಿದ್ದು ಮೃತರಾದವರ ಶರೀರಗಳು ಇದ್ದ ಪರಿಸ್ಥಿತಿಯಲ್ಲಿಯೇ ಅನೇಕ ವರ್ಷಗಳ ನಂತರ, ಏನೊಂದೂ ಕೊಳೆತು ಹೋಗದೆ ಎಡಿಪೋಸೇರೆ ಎಂಬ ಸ್ಥಿತಿಯಲ್ಲೂ ಸಿಕ್ಕಿದೆ. ಈ ಪರಿಸ್ಥಿತಿಯಲ್ಲಿ ಶರೀರದಲ್ಲಿ ಇರುವ ಕೊಬ್ಬಿನ ಅಂಶ ಸೋಪ್ ನಂತೆ ಬದಲಾಗಿ (saponification) ಶರೀರಕ್ಕೆ ಒಂದು ಪದರಿನಂತೆ ಹೊಂದಿಕೊಂಡು, ಕೊಳೆಯುವುದಕ್ಕೆ ಬಿಡುವುದಿಲ್ಲ.

ಈಗ ನಾನು ಹೇಳುತ್ತಿದ್ದ ಗೋಣಿ ಚೀಲದಲ್ಲಿನ ಶವ ಮಮ್ಮಿಫೈಡ್ ಸ್ಥಿತಿಯಲ್ಲಿತ್ತು. ತೆರೆದು ನೋಡುವಾಗ ಶರೀರದಲ್ಲಿ ಯಾವ ವಾಸನೆಯು ಕೂಡ ಇರಲಿಲ್ಲ. ಶರೀರದಲ್ಲಿ ಅಲ್ಲಲ್ಲಿ ಒಣಗಿದ ಮರಳು ಸಿಕ್ಕಿಕೊಂಡಿದ್ದು, ಶರೀರವನ್ನು ಕೆಲವು ದಿನ ಪತ್ರಿಕೆಗಳಿಂದ ಸುತ್ತಲಾಗಿತ್ತು. ಎಲ್ಲಾ ಬಿಡಿಸಿ ನೋಡುವಾಗ ಶವವು ಸಾಧಾರಣ ನಲವತ್ತರಿಂದ ಐವತ್ತು ವರ್ಷದ ಒಳಗಿನ ಒಬ್ಬ ಗಂಡಸಿನ ಶರೀರವಾಗಿತ್ತು. ಮೈಯ ಮೇಲೆ ಪೈಜಾಮ ಮತ್ತು ಕಮರಿ ಆಂಗ್ರಖಾ ಎನ್ನುವ ಬಟ್ಟೆಗಳು ಇದ್ದವು. ಆಂಗ್ರಖಾ ಎನ್ನುವುದು ರಾಜಸ್ಥಾನದ ಜನರು ಉಪಯೋಗಿಸುವ ಶರ್ಟಿನಂತಹ ಉಡುಗೆ. ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದರ ಕತ್ತಿನ ಭಾಗದಲ್ಲಿ ದರ್ಜಿ ಹೊಲೆದ ಸಂತೋಷಿ ಟೈಲರ್, ಮಾಂಡವ ಎಂಬ ಪಟ್ಟಿ ಇತ್ತು.

ಕುತ್ತಿಗೆಯ ಮೇಲೆ ಹಗ್ಗದಿಂದ ಬಿಗಿದಂತಹ ಒಂದು ಆಳವಾದ ಗಾಯದ ಗುರುತು ಇತ್ತು. ಅಲ್ಲಿಗೆ ಸಾಧಾರಣ ಮಟ್ಟಿಗೆ ಸಾವು ಉಸಿರು ಕಟ್ಟುವಿಕೆಯಿಂದ ಆಗಿದೆ ಎನ್ನುವ ತೀರ್ಮಾನಕ್ಕೆ ಬಂದೆವು. ಇನ್ನು ಈ ವ್ಯಕ್ತಿ ಯಾರು, ಇಲ್ಲಿಗೆ ಈ ಶವ ಯಾಕೆ, ಹೇಗೆ ಬಂತು ಎನ್ನುವುದರ ಬಗ್ಗೆ ನಮಗೆ ಗೊತ್ತಾಗಿರಲಿಲ್ಲ. ಆಗ ಅಲ್ಲಿದ್ದ ನಮ್ಮಗಳ ಕಣ್ಣಿಗೆ ಬಿದ್ದದ್ದು ಶವದ ಮೈಯ್ಯಿಗೆ ಅಂಟಿಕೊಂಡಿದ್ದ, ಹರಿದ, ಕೆಲವು ಪೇಪರಿನ ತುಂಡುಗಳು. ನಿಧಾನಕ್ಕೆ ಪೇಪರನ್ನು ನಾವು ಭೂತ ಕನ್ನಡಿಯಲ್ಲಿ ನೋಡುವಾಗ, ಅದರಲ್ಲಿ ಇದ್ದ ಭಾಷೆ ರಾಜಸ್ಥಾನಿ. ಹಾಗೆಯೇ ಅಲ್ಲಿದ್ದ ಬಾಕಿ ತುಣುಕುಗಳನ್ನು ಹುಡುಕುತ್ತಾ ಹೋದಾಗ ನಮಗೆ ಒಂದು ತಾರೀಕು ಮತ್ತು ಆ ಪತ್ರಿಕೆಯನ್ನು ಪ್ರಕಟಿಸಿದ ಊರಿನ ಹೆಸರು ಸಿಕ್ಕಿತು.

ಮೈಯ ಮೇಲೆ ಇದ್ದ ಆಂಗ್ರಾಖಾ, ಪೈಜಾಮ, ಅದರಲ್ಲಿ ಇದ್ದ “ಮಾಂಡವ” ದರ್ಜಿ ಗುರುತು ಈ ಮೃತ ವ್ಯಕ್ತಿ ರಾಜಸ್ಥಾನದ ಮಾಂಡವ ಊರಿನ ಸಮೀಪದಲ್ಲಿ ಇರುವ ಯಾವುದೋ ಊರಿನವರು ಆಗಿರಬಹುದು ಎಂಬ ಸುಳಿವು ಕೊಟ್ಟಿತು. ಮೈ ಮುಚ್ಚಿದ್ದ ಪೇಪರಿನಲ್ಲಿ ಇದ್ದ ರಾಜಸ್ಥಾನಿ ಭಾಷೆ, ಅದನ್ನು ಮುದ್ರಿಸಿದ ಊರಿನ ಹೆಸರು ನಮ್ಮ ಗುಮಾನಿಯನ್ನು ಧೃಡಪಡಿಸಿತ್ತು.

ಒಂದಂತೂ ನಿಶ್ಚಯವಾಗಿತ್ತು. ಈ ವ್ಯಕ್ತಿಯ ಸಾವು ಪತ್ರಿಕೆಯಲ್ಲಿದ್ದ ದಿನಾಂಕದ ನಂತರ ಅಥವಾ ಅದೇ ದಿನ ಆಗಿದೆ, ಮತ್ತು ಪ್ರಕಟಿಸಿದ ಊರಿನ ಸಮೀಪದಲ್ಲಿ ಅಥವಾ ಮಾಂಡವಾ ಊರಿನ ಪಕ್ಕ ಎಲ್ಲೋ ಆಗಿರಬಹುದು.

ಇಷ್ಟು ವಿವರಗಳನ್ನು ನಾವು ಕೊಟ್ಟ ಮೇಲೆ ಪೋಲೀಸಿನವರು ತನಿಖೆ ಪ್ರಾರಂಭಿಸಿದರು. ಶವ ಸಿಕ್ಕಿದ ದಿನದಂದು ರಾಜಸ್ಥಾನದ ಕಡೆಯಿಂದ ಬೆಂಗಳೂರಿಗೆ ಬಂದದ್ದು ಒಂದು ಟ್ರೈನ್ ಮಾತ್ರ. ರಾಜಸ್ಥಾನದಲ್ಲಿ ಅದು ಕೆಲವೇ ಊರುಗಳಲ್ಲಿ ನಿಂತಿದ್ದು, ಅಲ್ಲಿನ ಪೋಲೀಸ್ ಸ್ಟೇಷನ್‌ಗಳಲ್ಲಿ ಆ ದಿನಾಂಕದಿಂದ ಹಿಂದೆ, ಈ ವ್ಯಕ್ತಿಯ ಚಹರೆ ಮತ್ತು ಇತರ ವಿವರಗಳನ್ನು ಹೋಲುವ ಗಂಡಸಿನ ಯಾವುದಾದರೂ ಮಿಸ್ಸಿಂಗ್ ಕಂಪ್ಲೇಂಟ್‌ಗಳು ಇದೆಯೇ ಎಂದು ವಿಚಾರಿಸಲಾಗಿತ್ತು. ಸ್ಪಲ್ಪ ದಿನಗಳಲ್ಲಿ ಅಲ್ಲಿನ ಪೋಲೀಸ್ ಈ ಕೊಲೆಯ ರಹಸ್ಯನ್ನು ಭೇದಿಸಿದರು ಎಂಬ ಸುದ್ದಿ ಬಂತು.

ನಾನು ರಾಜಸ್ಥಾನದಿಂದ ಬಹಳ ದೂರ ಇದ್ದುದರಿಂದ ಬಾಕಿ ವಿವರಗಳು ನನಗೆ ತಿಳಿದಿಲ್ಲ. ಆದರೂ ಈ ಕೇಸಿನಲ್ಲಿ ಕೆಲವು ಸಂಶಯಗಳು ನನ್ನನ್ನು ಸದಾ ಕಾಡುತ್ತಿರುತ್ತದೆ. ಆ ವ್ಯಕ್ತಿಯ ಕುತ್ತಿಗೆ ಬಿಗಿದು ಸಾಯಿಸಿ, ಶವವನ್ನು ಕೊಳೆಯುವ ಮೊದಲೇ ಬಿಸಿಯಾದ ಮರಳಿನಲ್ಲಿ ಹೂತು ಹಾಕಿದ್ದರೇ? ಪೇಪರ್ ಅನ್ನು ಯಾವ ಸಮಯದಲ್ಲಿ ಅವರ ಮೈ ಮುಚ್ಚಲು ಉಪಯೋಗಿಸಿದ್ದಾರೆ? ಅಲ್ಲಿಯೇ ಶವವನ್ನು ಎಲ್ಲಿಯಾದರೂ ಹೂತು ಹಾಕದೇ, ರಾಜಸ್ಥಾನದಿಂದ ಬೆಂಗಳೂರಿಗೆ ಇರುವ, ಅಷ್ಟು ದೂರದ ಮಧ್ಯೆ ಎಲ್ಲಿಯೂ ಗೋಣಿ ಚೀಲವನ್ನು ಹೊರಗೆಸೆಯದೆ, ನಗರದ ಹೊರವಲಯದಲ್ಲಿ ಯಾಕೆ ಅದನ್ನು ಬಿಸಾಕಿದ್ದಾರೆ ಎಂಬ ಯಾವ ಪ್ರಶ್ನೆಗಳಿಗೂ ನನ್ನ ಬಳಿ ಉತ್ತರ ಇಲ್ಲ. ಅಲ್ಲಿನ ಪೊಲೀಸ್ ಸ್ಟೇಷನ್ನಿನಲ್ಲಿ ಇದೆಲ್ಲಾ ವಿವರಗಳು ಇರಬಹುದು. ನಾನು ವೈದ್ಯ ಮಾತ್ರ, ಪತ್ತೇದಾರ ಅಲ್ಲ. ಆದುದರಿಂದ ಈ ವಿವರಗಳನ್ನು ಅಲ್ಲಿಗೆ ಬಿಟ್ಟಿದ್ದೆನೇ.


ಈ ವಿಷಯದಲ್ಲಿ ನನಗೆ ಮುಖ್ಯವಾಗಿ ಗೊತ್ತಾಗಿರುವುದು ಒಂದು ವಿಷಯ ಮಾತ್ರ. ಸಣ್ಣ ಪೇಪರ್‌ ತುಂಡು, ಟೇಲರ್ ಗಳು ಹಚ್ಚುವ ಚಿಕ್ಕ ಗುರುತಿನ ಚೀಟಿಯಿಂದ ಯಾವುದೋ ದೂರದ ಊರಿನ ಕೊಲೆಯನ್ನು ಭೇದಿಸಲಾಗಿತ್ತು ಎಂಬ ಮಾಹಿತಿ. ಕೊಲೆಗಾರ ಎಷ್ಟೇ ಬುದ್ಧಿವಂತನಾದರೂ, ಅವನು ಬಿಡುವಂತಹ ಚಿಕ್ಕ ಸುಳಿವುಗಳು ಕೂಡಾ ಅವನನ್ನು ಜೈಲಿಗೆ ಅಟ್ಟಲು ಸಾಕು ಎಂಬ ವಿಷಯ ಸಾಬೀತಾಗಿತ್ತು…! ಐಬಿಲ್ಲದ ಕೊಲೆ ಯಾವುದೂ ಇಲ್ಲ.