‘ತುಂಬೆಗಿಡ ಮತ್ತು ಹುಡುಗಿ’ ಸತ್ತು ಮಣ್ಣಾದ ಹುಡುಗಿಯೊಬ್ಬಳ ಸಮಾಧಿಮೇಲೆ ನೆಟ್ಟ ತುಂಬೆ ಗಿಡದ ವಿಷಯವಿರುವ ಕವಿತೆ. ಬದುಕಿನ ಉತ್ತರಗಳ ಹಂಗು ಹುಡುಗಿಗೂ, ತುಂಬೆಗಿಡಕ್ಕೂ ಇಲ್ಲ. ಬದುಕಿನ ನಶ್ವರತೆಗಳು, ಹುಟ್ಟು, ಸಾವಿನ ಕುರಿತು ಏಳುವ ಜಿಜ್ಞಾಸೆಗಳು ಕವಯತ್ರಿಯ ಭಾವಾತ್ಮಕತೆಯ ತೀವ್ರತರ ಹುಡುಕಾಟವನ್ನು ದರ್ಶಿಸುತ್ತವೆ. ‘ನೀನೆ ಒಂದು ಅಪೂರ್ಣ ಚಿತ್ರ’ ಕವಿತೆಯೂ ಬದುಕಿನ ಎಲ್ಲಾ ಕ್ಷಣಗಳಿಗೆ ಮುಖಾಮುಖಿಯಾಗಿ ಮುಪ್ಪಿನಲ್ಲಿ ಹಿಂದಿನ ಪುಟಗಳನ್ನು ತಿರುವಿಹಾಕುವ ವ್ಯಕ್ತಿಯೊಬ್ಬನ ಕುರಿತು ಬರೆದ ಕವಿತೆ.
ಅಭಿಷೇಕ್‌ ವೈ.ಎಸ್. ಬರೆಯುವ “ಕಾವ್ಯದ ಹೊಸ ಕಾಲ” ಅಂಕಣದಲ್ಲಿ ಸ್ಮಿತಾ ಮಾಕಳ್ಳಿ ಬರೆದ ‘ಒಂದು ಅಂಕ ಮುಗಿದು’ ಕವನ ಸಂಕಲನದ ಕುರಿತ ಬರಹ ಇಲ್ಲಿದೆ

ಹುಟ್ಟಿ ಬೆಳೆದ ಊರು ಸದಾ ಸ್ಮೃತಿ ಪೆಟ್ಟಿಗೆಯಲ್ಲಿ ನೆನಪುಗಳನ್ನು ಕಾಪಿಟ್ಟಿರುತ್ತದೆ. ಮಣ್ಣಿನ ಸೆಳೆತಕ್ಕೆ ಕಾಲದ ಹಂಗಿಲ್ಲ. ಸ್ಮಿತಾ ಮಾಕಳ್ಳಿಯವರ ಚೊಚ್ಚಲ ಕವನಸಂಕಲನ ‘ಒಂದು ಅಂಕ ಮುಗಿದು’ ಓದುವಾಗ ಹೀಗೆ ಅನ್ನಿಸಿತು. ಕಾವ್ಯವೂ ಒಂದು ಕಲೆ. ಕಸೂತಿಯ ಹಾಗೆ. ಧ್ಯಾನಸ್ಥ ಸ್ಥಿತಿಯ ಉಸಿರಾಟದ ಹಾಗೆ. ಎಲ್ಲ ಬಂಧಗಳಾಚೆಯ ಬಯಲಿನಲ್ಲಿ ಬರೆಸಿಕೊಂಡದ್ದು. ‘ಅವ್ವನ ಹೂ ಕಟ್ಟುವ ದಾರ’ ಎನ್ನುವ ಕವಿತೆಯು ಹಲವು ಆಯಾಮಗಳಿಂದ ವಿಶ್ಲೇಷಿಸಬಹುದಾದ ಒಳ್ಳೆಯ ಕವಿತೆ. ಇಲ್ಲಿ ಬಳಸಿರುವ ರೂಪಕಗಳು ವಿಶೇಷವೆನಿಸುತ್ತವೆ. ‘ವರ್ಣಮೀಮಾಂಸೆ’ಯ ಬಹುಮುಖಿ ನೆಲೆಯಲ್ಲಿ ಚಿಂತನೆಗೀಡುಮಾಡುತ್ತದೆ. ಕವಿತೆ ನಾಲ್ಕು ಭಾಗಗಳಾಗಿ ವಿಂಗಡಿಸಲ್ಪಟ್ಟಿದೆ. ಮೊದಲ ಭಾಗದಲ್ಲಿ ‘ನೂಲಿನ ಉಂಡೆಯ ಬಣ್ಣಗಳು’ ಮತ್ತು ‘ಮನುಷ್ಯರ ಕುರಿತು’ ಪ್ರಸ್ತಾಪಿಸಲಾಗಿದೆ. ಜಾತ್ರೆಯ ಚಿತ್ರ ಕಣ್ಣಿಗೆ ಕಟ್ಟುತ್ತದೆ. ಜಾತ್ರೆಯಲ್ಲಿ ಸೇರಿದ ನೂಲಿನ ಉಂಡೆಯ ಥರಾವರಿ ಬಣ್ಣಗಳು ಮಾತಾಡುತ್ತವೆ.

ಹೌದು,
ಇಲ್ಲಿ ಬಣ್ಣಗಳು ಮಾತನಾಡುತ್ತವೆ
ಹುಡುಕುತ್ತಿರುವಂತೆ
ಅವುಗಳಾಚೆಗಿನ ಭಾವಗಳ
ಮುಗ್ಧ ಕುತೂಹಲದ ಬೇರುಗಳ.
ಗೊತ್ತಿರಬಹುದೇನೋ
ಅವಕ್ಕೆ ಹಾಗೆ ಇರದೇ ಹೋದಲ್ಲಿ
ಉಳಿದುಬಿಡುವೆವು ನಾವು
ಜಾತ್ರೆಯ ಗುಡಾರದೊಳಗೆ
ಕಳೆದುಕೊಂಡು ಬಣ್ಣ ಅಥವಾ ಬರೀ ಬಣ್ಣಗಳಾಗಿ
(ಅವ್ವನ ಹೂಕಟ್ಟುವ ದಾರ)

(ಸ್ಮಿತಾ ಮಾಕಳ್ಳಿ)

‘ನೂಲಿನ ಅಸ್ತಿತ್ವ ಇರುವುದು ಬಣ್ಣದಲ್ಲಿಯೇ; ಬಣ್ಣಗಳ ಅಸ್ತಿತ್ವವಿರುವುದು ನೂಲಿನಲ್ಲಿಯೇ’ ಇವೆರಡರ ಸಂಬಂಧಗಳು ಇರದೇ ಇದ್ದರೆ ಅವು ಬರೀ ಬಣ್ಣಗಳು ಇಲ್ಲವೇ ಬರೀ ನೂಲಿನುಂಡೆಗಳು ಎನ್ನುತ್ತಾ ಮೊದಲ ಭಾಗ ಮುಕ್ತಾಯಗೊಳಿಸುತ್ತಾರೆ. ಕವಿತೆಯ ಎರಡನೆಯ ಭಾಗದಲ್ಲಿ ಗಾಳಿಪಟ ಹಾರಿಸಲು ‘ಪುಟ್ಟ’ ಹೊಸ ಅಂಗಿಯ ತೊಟ್ಟು ಅಣಿಯಾಗಿ ಅವ್ವನೊಂದಿಗೆ ಹೆಜ್ಜೆ ಇಡುತ್ತಿದ್ದಾನೆ. ಆತನಿಗೆ ಗಾಳಿಯ ಪಟ ಹಾರಿಸಲು ದಾರದ ಅವಶ್ಯಕತೆಯಿದೆ. ಆದರೆ ಪುಟ್ಟ ಬಣ್ಣಗಳ ಗೊಂದಲದಲ್ಲಿದ್ದಾನೆ. ಈ ಕವಿತೆಯು ಭಾರತದ ವರ್ತಮಾನದ ಯುವಜನರ ಸ್ಥಿತಿಯ ವ್ಯಂಗ್ಯ ಮಾಡುತ್ತಿದೆ. ಬಣ್ಣಗಳ ಗುತ್ತಿಗೆ ಹಿಡಿದ ಮತಾಂಧರು ತಮ್ಮ ತಮ್ಮ ಧರ್ಮದ ರಕ್ಷಣೆಗೆ ಅಮಾಯಕರ ಹೆಸರಿನಲ್ಲಿ ರಕ್ತಪಾತ ಹರಿಸುತ್ತಿದ್ದಾರೆ. ಅವರ ಅಸ್ತಿತ್ವಕ್ಕಾಗಿ ಬಣ್ಣಗಳನ್ನೂ ‘ಪೇಟೆಂಟ್’ ತೆಗೆದುಕೊಂಡವರಂತೆಯೇ ವರ್ತಿಸುತ್ತಿದ್ದಾರೆ. ಇಲ್ಲಿನ ಪ್ರಶ್ನೆ ಇವೆಲ್ಲವನ್ನೂ ಗಮನಿಸುತ್ತಿರುವ ಯುವ ಜನರದ್ದು. ಆಯ್ಕೆಯಲ್ಲಿ ಗೊಂದಲದಲ್ಲಿರುವ ಪ್ರತಿ ಯುವ ಮನಸ್ಸಿನ ತೊಳಲಾಟವೆಂದು ಗ್ರಹಿಸಲು ಸಾಧ್ಯವಿದೆ. ಮೂರನೆಯ ಭಾಗದಲ್ಲಿ ಬಣ್ಣಗಳೆಲ್ಲ ಒಂದಾಗುವ ಪ್ರಕ್ರಿಯೆ. ಇಲ್ಲಿ ಬಣ್ಣಗಳೆಲ್ಲ ಒಂದೇ ಆಗಿ ಕಡಲಾಗುತ್ತದೆ. ನಾಲ್ಕನೆಯ ಭಾಗದಲ್ಲಿ ಪಟಕ್ಕೆ ಅವ್ವನ ಹೂ ಕಟ್ಟುವ ದಾರವೇ ಸಾಕು ಎಂದು ನಿಟ್ಟುಸಿರುಯ್ಯುತ್ತಾನೆ ಪುಟ್ಟ. ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ಕವಿತೆ. ಆದರೆ ಇದರ ಒಳ ಅರ್ಥ ಸೋಜಿಗವೆನಿಸುತ್ತದೆ. ಇಲ್ಲಿ ‘ಅವ್ವ ಸಹಜ ಬದುಕಿನ ಪ್ರತಿನಿಧಿ’. ಆಕೆ ಹೂ ಕಟ್ಟುವ ದಾರವೇ ಸಾಕು ಎನ್ನುವಲ್ಲಿ ಸಮಾಜಘಾತುಕತನದ ಯಾವ ಚಹರೆಯೂ ತನಗೆ ಬೇಡವೆಂದು ಪರೋಕ್ಷವಾಗಿ ತಿರಸ್ಕರಿಸುತ್ತಾನೆ.

‘ಕಳಚಿಬಿದ್ದ ಮೊಗ್ಗು’ ಕವಿತೆ ಏಕಾಂತದಲ್ಲಿದ್ದ ಸ್ತ್ರೀ ಪಾತ್ರದ ಹತಾಶೆ ಕಾಯುವಿಕೆಯಲ್ಲೇ ತೆವಳುತ್ತಿದೆ. ‘ಬಿಡು ದಾರಿ ಗೆಳೆಯಾ’ ಹೊಸತು-ಹಳತರ ಕುರಿತು ಚರ್ಚಿಸಿರುವ ಸಾಮಾನ್ಯ ಕವಿತೆ. ಕವಿತೆಯ ಕೊನೆಯಲ್ಲಿ ಕಾಲದ ಪ್ರಸ್ತಾಪವಿದೆ. ಗೆಳೆಯನೊಂದಿಗಿನ ಸಂಭಾಷಣೆರೂಪದ ಸಾಲುಗಳು ಸೆಳೆಯುತ್ತವೆ. ‘ಪ್ರತಿ ದಿನವೇ’ ಶೀರ್ಷಿಕೆಯಡಿಯಲ್ಲಿ ಬಿಡಿಬಿಡಿ ಆರು ಕವಿತೆಗಳಿವೆ. ವಿವಿಧ ವಿಷಯಗಳನ್ನು ಕುರಿತು ಕೆಲ ಸಾಲಿನ ಕವಿತೆಗಳನ್ನು ಬರೆಯಲಾಗಿದೆ. ಆಹಾರ ಸಂಸ್ಕೃತಿಯ ಸ್ವಾತಂತ್ರ್ಯದ ಕುರಿತು ಬರೆದ ಈ ಕವಿತೆ,
ಹತ್ತಿರದ ತರಕಾರಿ
ಅಂಗಡಿಯಲ್ಲಿ ಕೊಳ್ಳಲು ಬರುವ
ಒಬ್ಬರಿಗೆ ಕೊತ್ತಂಬರಿ, ಮತ್ತೊಬ್ಬರಿಗೆ ದಂಟು
ನನಗೆ ಮಾತ್ರ ಅಲ್ಲಿ ಥರಾವರಿ ಮೀನುಗಳು
ಕಾಣಬಾರದೇಕೆ!

ಎನ್ನುವಲ್ಲಿ ಬಹುತ್ವದ ಭಾರತದ ಆಶಯಗಳ ಸಾಕಾರಗೊಳಿಸುವಿಕೆಯ ಅದಮ್ಯ ಆಸೆಯಿದೆ.

ಇತ್ತೀಚೆಗೆ ನಮ್ಮ ಮನೆಯ
ಹಾದಿಯ ನಾಯಿಗಳು
ಎಲ್ಲಿಹೋದವೋ
ಅವುಗಳೋ ನೀರಸ ರಾತ್ರಿಯ ಬಂಧುಗಳು
ಎಂದು ಬರೆಯುವ ಕವಯತ್ರಿ ‘ನಾಯಿಗಳನ್ನೂ ನೀರಸ ರಾತ್ರಿಯ ಬಂಧುಗಳಾಗಿ’ ಕಂಡಿದ್ದಾರೆ.

ಕತ್ತಲ ಸೌಂದರ್ಯ ಮೀಮಾಂಸೆಯ ಕುರಿತು ‘ರೆಕ್ಕೆ ಬಲಿಸುವ ಚಂದಿರ ಕವಿತೆ’ ಪ್ರಸ್ತಾಪಿಸಿದೆ. ಇವರ ಕವಿಸಮಯದಲ್ಲಿ ಕತ್ತಲ ಬಣ್ಣ ಮಾಸುವ ಬಣ್ಣವಲ್ಲ. ಕತ್ತಲಲ್ಲೇ ಸೌಂದರ್ಯವಿರುವುದು ಎನ್ನುವುದನ್ನು ಒಪ್ಪಿದ್ದಾರೆ. ಸಾವರಿಸಿಕೊಂಡು ಬಂದೇ ಬರುತ್ತಾನೆ ಚಂದಿರ ಎನ್ನುವಲ್ಲಿ ಬದುಕಿನ ಕುರಿತು ಭರವಸೆಯಿದೆ. ಇಲ್ಲಿ ಏಕಾಂತತನದ ಭಟ್ಟಿಯೇನೋ ಎಂಬಂತೆ ಕವಯತ್ರಿ ಬಳಸುವ ರೂಪಕಗಳು ಮುಖ್ಯವೆನಿಸುತ್ತವೆ.

ಮಿಣುಕು ಹುಳದ
ಅರೆನಿಮಿಷಗಳ
ಹುಣ್ಣಿಮೆ, ಅಮಾವಾಸ್ಯೆಗಳು
ಕಣ್ಣ ರೆಪ್ಪೆಯಿಂದ
ಕೈಯೊಳಗೆ ಕೂಡಿಟ್ಟ ಗುಟ್ಟಾಗಿ
ಮೆಲ್ಲನೆ ಕೊಸರಿ
ಒಡೆದು ಬಯಲ ಆಗಸವ
ಹೊಳೆಯಿಸುವಾಗ
ನಿಜದ
ಅಮವಾಸ್ಯೆಗಳು ಹುಟ್ಟುತ್ತಿರಲಿ
ಚಂದಿರನೂ ಬರುತ್ತಿರಲಿ
ಮನದ ಕತ್ತಲೆಯು ತೀರಿಹೋಗುತ್ತಲಿರಲಿ
(ರೆಕ್ಕೆ ಬಲಿಸುವ ಚಂದಿರ)

‘ಕತ್ತಲು ಮಾತನಾಡುವುದಿಲ್ಲ’ ಕವಿತೆಯಲ್ಲೂ ಕತ್ತಲು ರೂಪಕವಾಗಿರುವುದು ವಿಶೇಷ. ‘ಕತ್ತಲು’ ಇವರನ್ನು ಅತಿಯಾಗಿ ಕಾಡಿದೆ. ಹೆಣ್ಣೊಬ್ಬಳ ಸಂಕಟದ ಗೀತೆಯೇನೋ ಎನಿಸಿಬಿಡುತ್ತದೆ. ತ್ಯಕ್ತ ಹೆಣ್ಣಿನ ಬದುಕಿನ ಕಥೆಯೇ ಈ ಕವಿತೆಯಾಗಿದೆ.

‘ಘನ ಗಾಂಭೀರ್ಯದ ಕತ್ತಲು ಕದಲುವುದಿಲ್ಲ
ಮಾತನಾಡುವುದಿಲ್ಲ’
ಎನ್ನುತ್ತಾ ಕವಿತೆ ಕೊನೆಯಾಗುತ್ತದೆ.

‘ಆತ್ಮ’ದ ಅಸ್ತಿತ್ವದ ಶೋಧದ ಮಾದರಿಯಂತೆ ಆತ್ಮವಿಲ್ಲದ ಕಿಟಕಿ ಕವಿತೆಯು ಗೋಚರಿಸುತ್ತದೆ. ಆತ್ಮದ ಪ್ರಶ್ನೆಯೆದ್ದ ಹುಡುಗಿಯೊಬ್ಬಳ ಮನಸ್ಸಿನಲ್ಲಿ ಏಳುವ ಲೆಕ್ಕವಿಲ್ಲದ ಪ್ರಶ್ನೆಗಳಿಗೆ ಕೊನೆ ಮೊದಲಿಲ್ಲ. ಸ್ತ್ರೀ ಕಾವ್ಯ ಪರಂಪರೆಯಲ್ಲಿ ಅಕ್ಕನಿಂದ ಹಿಡಿದು ಇತ್ತೀಚೆಗೆ ಬರೆಯುತ್ತಿರುವ ಕವಯತ್ರಿಯರಿಗೂ ‘ಆತ್ಮ’ ಒಂದು ವಿಸ್ಮಯದಂತೆ ಕಂಡಿರುವುದು ವಿಶೇಷ.

ಮಿರಿಮಿರಿ ಮಿಂಚುತ್ತಾ
ಮತ್ತದೇ ಲೋಕದಲ್ಲಿ
ಮತ್ತೆಮತ್ತೆ
ಕಳೆದುಹೋಗುತ್ತಿರುವ ನಾನು
ಆತ್ಮವಿಲ್ಲದ ಕಿಟಕಿ
(ಆತ್ಮವಿಲ್ಲದ ಕಿಟಕಿ)

‘ಹೆಸರಿಲ್ಲದ ಹುಡುಗಿ’ ದೀರ್ಘ ಕವಿತೆ. ಹೆಣ್ಣೊಬ್ಬಳ ದುರಂತ ಅಂತ್ಯವಾಗುವ ದುಃಖಮಯ ಕವಿತೆ. ಕನ್ನಡದದಲ್ಲಿ ಇಂಥ ಕವಿತೆಗಳಿಗೆ ‘ಜಾನಪದ’ ವಸ್ತುವನ್ನು ಒದಗಿಸಿಕೊಟ್ಟಿದೆ. ಕಾಲ ಕ್ರಮೇಣ ಮಾದರಿಗಳು ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಾ, ಹೊಸತಾಗಿಸಿಕೊಳ್ಳುತ್ತಾ ಬಂದಿವೆ ಅಷ್ಟೆ. ಹೆಸರಿಲ್ಲದ ಹುಡುಗಿಯೂ ಕೊನೆಯಲ್ಲಿ ರೂಪಕವಾಗಿಬಿಡುತ್ತಾಳೆ. ಇದೊಂದು ಅಪರೂಪದ ವಿಶೇಷ ಕವಿತೆ. ತನ್ನ ನಿಸ್ವಾರ್ಥ ಗುಣದಿಂದಲೇ ಸರ್ವವನ್ನೂ ಕುಟುಂಬಕ್ಕೆ ಧಾರೆ ಎರೆಯುವ ಹೆಣ್ಣನ್ನು ಅನುಕಂಪದ ಗೆರೆಯೊಳಗೆ ಇಡುವುದು ಬೇಡ ಎನ್ನುವ ದಾಟಿಯನ್ನು ಹೊದ್ದಂತಿದೆ.
ಹುಲಿಯ ಪಾದದ
ಹುಣ್ಣಿನಂತೆ
ನೆಕ್ಕಿದಷ್ಟು
ಅಗಲವಾಗಿ
ಹಳತು ಹೊಸದು
ಸೇರಿ ಹೋಗಿ
ಅಕ್ಕನಂತೆ
ನೀರೊಳು
ಇರದೆ
ಮನೆಯಲ್ಲೇ ಉಳಿದಳಾ
ಈ ಹುಡುಗಿ.
(ಹೆಸರಿಲ್ಲದ ಹುಡುಗಿ)

ನಾಲ್ಕನೆಯ ಭಾಗದಲ್ಲಿ ಪಟಕ್ಕೆ ಅವ್ವನ ಹೂ ಕಟ್ಟುವ ದಾರವೇ ಸಾಕು ಎಂದು ನಿಟ್ಟುಸಿರುಯ್ಯುತ್ತಾನೆ ಪುಟ್ಟ. ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ಕವಿತೆ. ಆದರೆ ಇದರ ಒಳ ಅರ್ಥ ಸೋಜಿಗವೆನಿಸುತ್ತದೆ. ಇಲ್ಲಿ ‘ಅವ್ವ ಸಹಜ ಬದುಕಿನ ಪ್ರತಿನಿಧಿ’. ಆಕೆ ಹೂ ಕಟ್ಟುವ ದಾರವೇ ಸಾಕು ಎನ್ನುವಲ್ಲಿ ಸಮಾಜಘಾತುಕತನದ ಯಾವ ಚಹರೆಯೂ ತನಗೆ ಬೇಡವೆಂದು ಪರೋಕ್ಷವಾಗಿ ತಿರಸ್ಕರಿಸುತ್ತಾನೆ.

‘ಅಕ್ಕ’ನ ಪ್ರಸ್ತಾಪಿಸುವ ಕವಯತ್ರಿಯ ಮೇಲೆ ಅನುಭಾವದ ಪ್ರಭಾವವಾಗಿಲೇಬೇಕು. ಸ್ತ್ರೀ ಸಂಕಥನದಲ್ಲಿ ‘ಅಕ್ಕ’ ಮಾದರಿಯಾಗಿದ್ದಾಳೆ. ಹುಲಿಯ ಪಾದದ ಹುಣ್ಣನ್ನೂ ಕಾವ್ಯದ ರೂಪಕಗಳಾಗಿ ಬಳಸಿರುವುದು ಕವಿತೆಯ ಶಕ್ತಿಯನ್ನು ಹೆಚ್ಚಿಸಿದೆ. ಇಂಥ ಸೂಕ್ಷ್ಮ ಸಂಗತಿಗಳನ್ನು ಕಾವ್ಯದಲ್ಲಿ ಹದವಾಗಿ ಬೆರೆಸಿರುವುದು ಕಾವ್ಯದ ತೂಕವನ್ನು ಹೆಚ್ಚಿಸುವುದರ ಮತ್ತು ಕವಯತ್ರಿಗಿರುವ ಸೃಜನಶೀಲತೆಯ ಆಸಕ್ತಿಗಳನ್ನು ತೋರಿಸುತ್ತದೆ.

‘ಬಿದಿರು ನಾನಾರಿಗಲ್ಲದವಳು’ ಮಾದರಿಯ ‘ಬುಟ್ಟಿ’ ಕವಿತೆ ಕಾಲಾಂತರದಲ್ಲಿ ಆದ ರೂಪಾಂತರಗಳನ್ನು ಕುರಿತು ಸೊಗಸಾಗಿ ಹೇಳುತ್ತದೆ. ಇಲ್ಲಿನ ಸಾಲುಗಳು ಕವಯತ್ರಿಯ ಅನುಭವವವೂ ಇರಬಹುದು. ಕವಿತೆ ಸಾರ್ವತ್ರೀಕರಣಗೊಳ್ಳುವುದು ಕೊನೆಯ ಸಾಲುಗಳಲ್ಲಿ…

ಆದರೂ
ಕಾಡ ನಡುವೆ
ಬೇರಿನಾಳದಲ್ಲಿ
ಹೊಸ ಹುಟ್ಟುಗಳ
ಪೊರೆ ಕಳಚುತ್ತಾ
ಇವಳ ಎದುರುಗೊಳ್ಳಲು
ಕಾಯುತ್ತಿರುವ
ಅದೆಷ್ಟೋ ಚಿಗುರುಗಳೊಳಗೆ
ಕುಸುರಿ ಕೈಯೊಳಗೆ
ಇವಳೇ
ತಿರುತಿರುಗಿ
ಬುಟ್ಟಿ.
(ಬುಟ್ಟಿ)

‘ತುಂಬೆಗಿಡ ಮತ್ತು ಹುಡುಗಿ’ ಸತ್ತು ಮಣ್ಣಾದ ಹುಡುಗಿಯೊಬ್ಬಳ ಸಮಾಧಿಮೇಲೆ ನೆಟ್ಟ ತುಂಬೆ ಗಿಡದ ವಿಷಯವಿರುವ ಕವಿತೆ. ಬದುಕಿನ ಉತ್ತರಗಳ ಹಂಗು ಹುಡುಗಿಗೂ, ತುಂಬೆಗಿಡಕ್ಕೂ ಇಲ್ಲ. ಬದುಕಿನ ನಶ್ವರತೆಗಳು, ಹುಟ್ಟು, ಸಾವಿನ ಕುರಿತು ಏಳುವ ಜಿಜ್ಞಾಸೆಗಳು ಕವಯತ್ರಿಯ ಭಾವಾತ್ಮಕತೆಯ ತೀವ್ರತರ ಹುಡುಕಾಟವನ್ನು ದರ್ಶಿಸುತ್ತವೆ. ‘ನೀನೆ ಒಂದು ಅಪೂರ್ಣ ಚಿತ್ರ’ ಕವಿತೆಯೂ ಬದುಕಿನ ಎಲ್ಲಾ ಕ್ಷಣಗಳಿಗೆ ಮುಖಾಮುಖಿಯಾಗಿ ಮುಪ್ಪಿನಲ್ಲಿ ಹಿಂದಿನ ಪುಟಗಳನ್ನು ತಿರುವಿಹಾಕುವ ವ್ಯಕ್ತಿಯೊಬ್ಬನ ಕುರಿತು ಬರೆದ ಕವಿತೆ. ಪ್ರಾಯದಲ್ಲಿ, ಯೌವನದಲ್ಲಿನ ಬಲಿಷ್ಠ ದಿನಗಳು ಅಂತಿಮ ಘಟ್ಟದಲ್ಲಿ ನೆನಪಿಗೆ ಬರುತ್ತವೆ. ನಿಜವಾದ ಮನುಷ್ಯ ತನ್ನ ಗತದ ನೆನೆಪಿನ ಕುರಿತು‘ಪಾಪಪ್ರಜ್ಞೆ’ಯನ್ನು ಅನುಭವಿಸುವುದು ಬದುಕಿನ ಕೊನೆಯ ಘಟ್ಟದಲ್ಲಿ. ಮಾಗಿದ ಮನುಷ್ಯನಿಗೆ ‘ಹತಾಶೆ’ಯೂ ತಾನು ಹಗುರಾಗಲು ಒಂದು ಮಾರ್ಗವಾಗಿರುತ್ತದೆ. ತನ್ನನ್ನು ತಾನು ಅರ್ಥ ಮಾಡಿಕೊಳ್ಳುವುದರಲ್ಲೇ ಕಾಲ ಮುಗಿದಿರುತ್ತದೆ. ‘ನಾನು’ ಎಂಬುವುದು ಅಪೂರ್ಣ ಚಿತ್ರವೂ ಆಗಿರುತ್ತದೆ. ಪ್ಯಾಬ್ಲೋ ನೆರೂಡಾನ ಕವಿತೆಯ ಛಾಯೆ ‘ರೆಂಪುಝಲಳ ಬಂಗಾರದಂತಹ ಕೂದಲು ಮತ್ತು ನನ್ನ ಆತ್ಮವೂ’ ಕವಿತೆಯಮೇಲೆ ದಟ್ಟವಾಗಿ ಆಗಿದೆ.

‘ಚಿಗುರನ್ನು ಕತ್ತರಿಸಬಹುದು ಆದರೆ ವಸಂತ ಬರಲಾರದಂತೆ ನೀವು ತಡೆಯಲಾರಿರಿ’ ಎಂಬ ನೆರೂಡ ಕವಿತೆಯಂತೆ ಈ ಕವಿತೆಯೂ ಆರಂಭವಾಗುತ್ತದೆ.
ನನ್ನ ನಗುವನ್ನು
ನೀವು ಕಿತ್ತುಕೊಳ್ಳಬಹುದು
ಆದರೆ ನನ್ನ
ಇರುವಿಕೆಯನ್ನಲ್ಲ
ಏಕೆಂದರೆ
ಕಣ್ಣುಗಳು ಇಲ್ಲದೆಯೂ ನಗಬಲ್ಲೆ..
(ರೆಂಪುಝಲಳ ಬಂಗಾರದಂತಹ ಕೂದಲು ಮತ್ತು ನನ್ನ ಆತ್ಮವೂ)

ಕವಿತೆಯ ತುಂಬಾ ಭರವಸೆಯ ಮಾತುಗಳೇ ತುಂಬಿವೆ. ಬದುಕು ದೊಡ್ಡದು ಎಂಬ ಪ್ರಜ್ಞೆ ಕವಯತ್ರಿಯನ್ನು ಜಾಗೃತಗೊಳಿಸಿದೆ.

ನೀವು ನನಗಾಗಿ ಅಥವಾ ನಾನು
ನಿಮಗಾಗಿ ಕೊಟ್ಟ ಸಮಯಗಳ ಬಗ್ಗೆ
ಯಾವುದೇ ಮರುಕಗಳಿಲ್ಲ
ಸಾಧ್ಯವಾದರೆ ಅಲ್ಲೊಂದು
ಪಾರಿಜಾತವ ನೆಟ್ಟು
ಪರಿಮಳವ ಪಸರಿಸುತ್ತೇನೆ
ಅಲ್ಲದಿದ್ದಲ್ಲಿ
ಅದು ನನ್ನ ಕಥೆಯಾಗುವುದಿಲ್ಲ
(ರೆಂಪುಝಲಳ ಬಂಗಾರದಂತಹ ಕೂದಲು ಮತ್ತು ನನ್ನ ಆತ್ಮವೂ)

ಎನ್ನುವಾಗ ಜೀವದ ಕುರಿತು ಕವಯತ್ರಿಗಿರುವ ಕಾಳಜಿ ಮತ್ತು ಗತದ ಅನಿರೀಕ್ಷಿತವೂ, ಅಮುಖ್ಯವೂ ಆಗಿರುವ ಸಂಗತಿಗಳ ಕುರಿತು ಉಡಾಫೆತನ ಗೋಚರವಾಗುತ್ತದೆ. ಯಾಂತ್ರೀಕೃತ ಬದುಕಿನ ಕುರಿತು ವಿಷಾದವೂ, ನಿರಾಸಕ್ತಿಯೂ ನಿಟ್ಟುಸಿರೂ ಇರುವ ‘ಮಾಸುತ್ತಿವೆ ಗೆರೆಗಳು’ ಕವಿತೆಯಲ್ಲಿ ಗುರುತಿಸಹುದು. ಇಲ್ಲಿ ಸದಾ ಗಡಿಬಿಡಿಯಲ್ಲಿರುವ ಇರುವೆಗಳ ಸಾಲು ಕೊನೆಯಿಲ್ಲದ ಬದುಕಿನ ಅನಿವಾರ್ಯತೆಯನ್ನು ಪಾಠ ಮಾಡುತ್ತಿವೆ. ಅಜ್ಜಿಯ ಒಲೆಯ ಮುಂದೆ ಕೂತು ಚಳಿಗಾಲವನ್ನು ಕಳೆಯುವ ಆಶಯ ವ್ಯಕ್ತಪಡಿಸುವ ಕವಯತ್ರಿ ‘ಚಳಿಗಾಲವ ಕಳೆದುಬಿಡುವ’ ಕವಿತೆಯು ಜಿ.ಎಸ್.ಎಸ್ ಅವರ ‘ಭೀಮಾಲಾಪ’ ಕವಿತೆಯನ್ನು ನೆನಪಿಗೆ ತರುತ್ತದೆ. ಒಲೆಯಮುಂದೆ ಕೂತು ನೆನಪು, ನಿಟ್ಟುಸಿರನ್ನು ಬೇಯಿಸುವುದು ಎಂಥಹ ರೂಪಕ!
ಹಸಿರು ಗೋಲಿಸೋಡಾಗಳ
ಉತ್ಕಟತೆಯ ಪಾಠ
ಇಂಗಿದಷ್ಟು ತೆರೆಯುವ
ಪುಟಗಳಿಗೆ ನಾಜೂಕಾಗಿ
ಗಡಿಯಾರದ ಹೂವಿನಂತೆ
ಮೂಲೆಯಲ್ಲಿ ಅಳಕುಗಳ ತುಂಬಿಕೊಂಡು ಅರಳುವಾಗ
ನನ್ನಜ್ಜಿಯ ಒಲೆ ಸಣ್ಣಗೆ
ನಗುವುದಂತೆ,
ಬಾ ಎಂದಿನಂತೆ ಅವರೆ ಸಿಪ್ಪೆಯ ಸುಲಿಯುತ್ತಾ
ಮಗ್ಗುಲಲ್ಲಿ ಬೆಂಕಿ ಕಾಯಿಸುತ್ತಾ
ಈ ಚಳಿಗಾಲವ ಕಳೆದುಬಿಡುವ.
(ಚಳಿಗಾಲವ ಕಳೆದುಬಿಡುವ)

‘ರಾತ್ರಿ ರಾಣಿ’ ಕವಿತೆಯಲ್ಲೂ ಯಾಂತ್ರಿಕತೆಯ ಕುರಿತು ಸಿಟ್ಟು ಸೆಡವು, ಆಕ್ರೋಶಗಳಿವೆ. ‘ರಾತ್ರಿ ರಾಣಿ’ ಹೂವನ್ನು ರೂಪಕವಾಗಿರಿಸಿಕೊಂಡೇ ಬದುಕಿನ ಸುಂದರ ಸಂಗತಿಗಳನ್ನು ಅನುಭವಿಸುವ ಸಾಧ್ಯತೆಗಳನ್ನು ತಿಳಿಸಿಬಿಡುತ್ತಾರೆ. ‘ಪೋರಿಯ ಕನವರಿಕೆ’ ಪುರುಷ ದೃಷ್ಟಿಯ ಕ್ರಮವನ್ನು ವಿರೋಧಿಸುವ ಕವಿತೆ. ‘ಪ್ರತಿಭಾ’ ಅವರ ‘ನಾವು ಹುಡುಗಿಯರೇ ಹೀಗೆ’ ಕವನವನ್ನು ಹೋಲುತ್ತದೆ. ಹೆಣ್ಣನ್ನು ಇಂದಿಗೂ ಸಂಸ್ಕೃತಿಯ ಕಟಕಟೆಯಲ್ಲಿ ಕಾಣಬಯಸುವ ಪುರುಷಕೇಂದ್ರಿತ ವ್ಯವಸ್ಥೆಯಮೇಲಿನ ಸಿಟ್ಟನ್ನು ಕವಯತ್ರಿ ಈ ಕವಿತೆಯಮೂಲಕ ವ್ಯಕ್ತಪಡಿಸಿದ್ದಾರೆ. ವ್ಯಂಗ್ಯ, ವಿಡಂಬನೆಯೂ ಇಲ್ಲಿ ಢಾಳಾಗಿ ಕಾಣುತ್ತದೆ. ಐಸಾಕ್ ಬಾಷಿವಿಸ್ ಸಿಂಗರ್‌ನ ‘‘Gimpel the Fool’’ ಕಥೆಯ ಒಂದು ಪಾತ್ರವಾದ ಗಿಂಪೆಲ್ ಹಾಗೂ ಇಟಲಿಯ ಬರಹಗಾರ ಕಾರ್ಲೋ ಕೊಲ್ಲೋಡಿಯ ಕಾದಂಬರಿಯಾದ ‘The Adventures of Pinochio’ ಪಾತ್ರವಾದ ಪಿನಾಕಿಯೋ ಕುರಿತ ಗಿಂಪೆಲ್ ಮತ್ತು ಪಿನೋಕಿಯೋ ಕವಿತೆಯಿದೆ. ‘ಒಂದು ಅಂಕ ಮುಗಿದು’ ಶೀರ್ಷಿಕೆಯ ಕವಿತೆಯೂ ಪ್ರೇಮಿಗಳಿಬ್ಬರ ಅನೂಹ್ಯ ಪ್ರೇಮದ ಕುರಿತು ಸರಳವಾಗಿ ವ್ಯಾಖ್ಯಾನಿಸಿದ್ದಾರೆ.

ಹೀಗೆ ಸಿಕ್ಕಿದ್ದನ್ನೆಲ್ಲಾ
ಹೆಕ್ಕುವ ಕೋಳಿ ಮರಿಗಳ
ಸಂಭ್ರಮ
ಕಳೆಗಟ್ಟುವ
ಸೂರಿನಡಿಯಲಿ ನಡೆಯುವ
ಇಂತಹ ನೂರಾರು ಆಟಗಳ
ಕದ್ದು ನೋಡುತ್ತಲೇ ಇರಬಹುದಾದ
ಮೋಡಗಳ ಪೋಲಿತನಕ್ಕೆ
ಅಸೂಯೆ ಮೂಡುವಲ್ಲಿ
ಒಂದು ಅಂಕ ಮುಗಿದು
ಮತ್ತೊಂದು ಪರದೆಯ ಕೌತುಕಗಳು
ಬರಿದಾಗದೆ ಎಸಳಾಗಿ ಹೊಳೆಯುವ
ಎಲ್ಲರ ಬದುಕಿನಾಳಕ್ಕೆ
ಇರುವ ಕಣ್ಣ ಮಿಂಚು
ಈಗ ನಮ್ಮಲ್ಲೂ
(ಒಂದು ಅಂಕ ಮುಗಿದು)

ಸ್ಮಿತಾ ಮಾಕಳ್ಳಿಯವರ ಈ ಕವನಸಂಕಲನದ ಭಾಷೆ ಸುಲಭವಾಗಿಲ್ಲ. ನವ್ಯ ಕಾವ್ಯವನ್ನು ಓದುತ್ತಿರಬಹುದೆಂಬ ಅನುಭವವಾಗುತ್ತದೆ. ಕವಿತೆ ಪಡೆದುಕೊಳ್ಳಬಹುದಾದ ಅರ್ಥಗಳನ್ನು ತಲುಪುವುದಕ್ಕೆ ತುಸು ತಡವಾಗುತ್ತದೆ, ಆದರೆ ಖಂಡಿತವಾಗಿಯೂ ತಲುಪಬಹುದು. ಪ್ರೇಮದ ಕುರಿತು ವಿಶಿಷ್ಟವಾಗಿ ಕಟ್ಟಿಕೊಡುವ ಸ್ಮಿತಾ ಅವರ ಕವಿತೆಗಳು ಓದುಗರನ್ನು ಆಪ್ತರನ್ನಾಗಿಸುತ್ತದೆ. ಸಾಹಿತ್ಯವನ್ನು ಓದುತ್ತಿರುವ ಇವರ ಮೇಲೆ ಆದ ದಟ್ಟ ಬದುಕಿನ ಅನುಭವಗಳು ಮತ್ತು ಓದುವಿಕೆಯ ಸಂಗತಿಗಳು ಕವಿತೆಗಳ ವೈವಿಧ್ಯಪೂರ್ಣತೆಗೆ ಕಾರಣವಾಗಿವೆ. ಇಂಗ್ಲಿಷ್ ಸಾಹಿತ್ಯದ ಕೆಲವು ಕೃತಿಗಳ ಪಾತ್ರಗಳನ್ನೂ ಕನ್ನಡಕ್ಕೆ ಮುಖಾಮುಖಿಯಾಗಿಸಿ ನೋಡುವ ಕಲಾತ್ಮಕತೆಯನ್ನು ಇಂದಿನ ಕಾವ್ಯಸಂದರ್ಭ ಬಯಸುತ್ತದೆ. ಇಂದಿನ ಕಾಲಕ್ಕೆ ಹಿಂದಿನ ಅನುಭವವಗಳು ದಕ್ಕದಿದ್ದರೂ ದಕ್ಕಿದ ನೆನಪುಗಳನ್ನು ಮೆಲುಕುಹಾಕುವುದು ಮನುಷ್ಯನ ಧರ್ಮ ಮತ್ತು ಅನಿವಾರ್ಯತೆಯೂ ಆಗಿದೆ. ಇಂಥ ಸಂಕಲನಗಳನ್ನು ಓದಿದಾಗ ಕಾವ್ಯದ ಕುರಿತೂ ಭರವಸೆ ಹುಟ್ಟುತ್ತದೆ. ಹೊಸ ತಲೆಮಾರಿನ ಮೇಲೆ ನಂಬಿಕೆಗಳೂ ದಟ್ಟವಾಗುತ್ತದೆ. ಒಮ್ಮೆ ಓದಿ ಅನುಭಾವವನ್ನು ನಿಮ್ಮದಾಗಿಸಿಕೊಳ್ಳಿ..