ಸಂಸ್ಕರಿಸಿ ಪೊಟ್ಟಣವಾಗಿಸಿದ ಆಹಾರದಲ್ಲಿ ಒಪ್ಪಿತ ಮಟ್ಟದಲ್ಲಿ ಪ್ರಿಸರ್ವೇಟಿವ್, ಎಸ್ಸೆನ್ಸ್ ಅಥವಾ ರಾಸಾಯನಿಕ ಬಣ್ಣ ಇರುತ್ತದೆ. ಹೀಗೆ ಹಲವು ಪೊಟ್ಟಣಗಳಲ್ಲಿ ಹಲವು ರೀತಿಯಲ್ಲಿ ಇವುಗಳು ಇದ್ದೇ ಇರುತ್ತವೆ. ಒಟ್ಟಿನಲ್ಲಿ ಹತ್ತಾರು ವಿಧಗಳಲ್ಲಿ ಇವುಗಳೆಲ್ಲ ನಮ್ಮ ದೇಹವನ್ನು ಸೇರಿ ಘಾಸಿ ಮಾಡುತ್ತವೆ ಎಂಬ ಅಧ್ಯಯನಗಳನ್ನು ಓದುತ್ತ ನಾವು ಜಾಗೃತರಾಗಬೇಕು ಎಂದುಕೊಳ್ಳುತ್ತೇವೆ. ಸಾವಯವ ಬದುಕನ್ನು ಬಾಳಬೇಕು ಎಂದುಕೊಳ್ಳುತ್ತೇವೆ. ಆದರೆ ಮತ್ತೊಂದೆಡೆ ಬಹಳ ಸೌಜನ್ಯ ಮತ್ತು ಸಭ್ಯತೆಯಿಂದಲೇ ನಾವು ಗಿಡಗಳ ಮೇಲೆ ದಾಳಿ ಮಾಡುತ್ತೇವೆ. ಅವುಗಳ ಪಟ್ಟಿ ಮಾಡುತ್ತ ಹೋದರೆ ಅಚ್ಚರಿಯಾದೀತು. ಆದರೆ ಕೊರೊನಾ ಸಂದರ್ಭದಲ್ಲಿ ನೆಲನೆಲ್ಲಿ ಕುರಿತ ಕೆಲವು ಮಾತುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ.

 

ಜಾಗತಿಕ ಸೋಂಕು ಕೊರೊನಾ ಹರಡುವಿಕೆಯನ್ನು ತಡೆಯಲು ಕಳೆದ ವರ್ಷ ಲಾಕ್ ಡೌನ್ ಘೋಷಿಸಿದಾಗ, ಹೆಚ್ಚಿನ ಮನೆಗಳಲ್ಲಿ ಸಂತಸದ ವಾತಾವರಣವಿತ್ತು. ಜನರು ಓದು ಬರಹ, ಸಿನಿಮಾ, ಕಷಾಯ, ಆರೋಗ್ಯಕರ ಆಹಾರ ತಯಾರಿಸುವುದು- ಮುಂತಾಗಿ ಅನೇಕ ಖುಷಿಯ ವಿಚಾರಗಳನ್ನು ಹಂಚಿಕೊಳ್ಳುವ ಭರದಲ್ಲಿದ್ದರು. ಈ ಕಷಾಯಗಳ ಸಾಲಿನಲ್ಲಿ ಭಾರೀ ಮುನ್ನೆಲೆಗೆ ಬಂದ ಎರಡು ಗಿಡಗಳೆಂದರೆ ನೆಲ ನೆಲ್ಲಿ ಮತ್ತು ಅಮೃತಬಳ್ಳಿ. ಅಮೃತ ಬಳ್ಳಿಯ ಪರಿಚಯವಿಲ್ಲದವರು, ಅದು ಹೇಗಿರುತ್ತದೆ ಎಂದು ಅಜ್ಜ, ಅಜ್ಜಿಯೊಡನೆ ಕೇಳಲು ಶುರು ಮಾಡಿದರು. ಅಮೃತಬಳ್ಳಿಯಾದರೂ, ಒಂದು ಮಣ್ಣಿನ ಚಟ್ಟಿಯಲ್ಲಿ ಗಿಡ ನೆಟ್ಟು ಬೆಳೆಸಬಹುದು. ಹಲವರು ಹಾಗೆ ಬಳ್ಳಿಯನ್ನು ಬಾಲ್ಕನಿಗೆ ಹಬ್ಬಿಸಿ, ಆಗೀಗ ಕಷಾಯ ಕುಡಿದು ಕೊರೊನಾ ಸೋಂಕನ್ನು ಓಡಿಸಿದೆವು ಎಂಬ ನಂಬಿಕೆಯಲ್ಲಿದ್ದರು.

ಆದರೆ ನೆಲನೆಲ್ಲಿ(Phyllanthus amaras) ಗದ್ದೆ ಬದುಗಳಲ್ಲಿ, ತುಸು ತೇವಾಂಶ ಇರುವ ಪ್ರದೇಶಗಳಲ್ಲಿ ಹುಲ್ಲುಗಳ ರಾಶಿಯ ನಡುವೆ, ತಾನಾಯಿತು, ತನ್ನ ಪಾಡಾಯಿತು ಎಂದು ಜೀವಿಸುವ ಗಿಡ. ಚಟ್ಟಿಯಲ್ಲಿ ನೆಡುವ ಪರಿಪಾಠ ಕಡಿಮೆ. ವಿಕಿಪೀಡಿಯಾವಂತೂ ಒಂದೆಡೆ ಇದನ್ನು ಕಳೆಗಿಡ ಎಂದು ಹೇಳಿರುವುದರಿಂದ ಇದು ತಕ್ಕಮಟ್ಟಿಗೆ ಬಚಾವ್ ಆಗಿ ಎಲ್ಲೋ ಸುಧಾರಿಸಿಕೊಂಡು ಇದ್ದುಬಿಟ್ಟಿತ್ತು.

ಇಷ್ಟು ಕಾಲ ಮನುಷ್ಯರು ಇದರ ಗೊಡವೆಗೆ ಹೆಚ್ಚೇನೂ ಬಂದಿರಲಿಲ್ಲ. ಎಲ್ಲೋ ಅಪರೂಪಕ್ಕೆ ಯಾರಿಗಾದರೂ ಕಾಮಾಲೆ ಕಾಣಿಸಿಕೊಂಡಾಗ, ಹಳ್ಳಿಕಡೆ ಈ ಗಿಡವನ್ನು ಹುಡುಕಿ ಅಜ್ಜಿಯಂದಿರು ಕಷಾಯ ಮಾಡಿ ಕೊಡುತ್ತಿದ್ದರಷ್ಟೆ. ವೈದ್ಯರ ಔಷಧಿಗಳು ಲಭ್ಯವಾದ ಮೇಲೆ ಈ ಕಷಾಯಕ್ಕೂ ಬೇಡಿಕೆ ಕಡಿಮೆಯಾಗಿತ್ತು. ಆದರೆ ಕಳೆದ ವರ್ಷ ಇದ್ದಕ್ಕಿದ್ದಂತೆಯೇ ಮನುಷ್ಯರೆಲ್ಲ ಸಮರೋಪಾದಿಯಲ್ಲಿ ನೆಲನೆಲ್ಲಿಯ ಸಂತಾನವನ್ನೇ ನಾಶ ಮಾಡಲು ಪಣತೊಟ್ಟವರಂತೆ ಸಜ್ಜಾಗಿಬಿಟ್ಟಿದ್ದರು. ಲಾಕ್ ಡೌನ್ ಸಂದರ್ಭದಲ್ಲಿ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ದಂತಹ ಈ ಸಮರವನ್ನು ನೋಡುತ್ತ, ಮನುಷ್ಯರ ವಿವಿಧ ಸ್ವಭಾವಗಳ ಬಗೆಗಿನ ಭಯ ಮತ್ತಷ್ಟು ಹೆಚ್ಚಾಗುವಂತಾಯಿತು.

ನಮ್ಮೂರಲ್ಲಿ ನಡೆದ ಒಂದು ಪುಟ್ಟ ಪ್ರಕರಣವನ್ನು ಹೇಳಬೇಕಿಲ್ಲಿ. ನಮ್ಮ ಅಮ್ಮ ಔಷಧೀಯ ಗಿಡಗಳ ಬಗ್ಗೆ ತಕ್ಕಮಟ್ಟಿಗಿನ ಮಾಹಿತಿ ಹೊಂದಿದವರು. ತೋಟ, ಗದ್ದೆಬದುಗಳನ್ನು ಸ್ವಚ್ಛ ಮಾಡುವಾಗ, ಅವರು ಕೆಲಸದ ಆಳುಗಳಿಗೆ ಹಜ್ಜೆ ಹಜ್ಜೆಗೂ ಆದೇಶಗಳನ್ನು ಕೊಡುವುದು ವಾಡಿಕೆ. ‘ನೋಡು ಅದು ನೆಲನೆಲ್ಲಿ, ಅದನ್ನು ಬಿಟ್ಟುಬಿಡು. ಹುಲ್ಲು ಅಂತ ಕೆತ್ತಿಹಾಕಬೇಡ. ಅದು ನಾಮದ ಬೇರಿನ ಗಿಡ. ಕಾಣುವುದಿಲ್ಲವಾ ನಿಂಗೆ, ಅದರ ಎಲೆ ಮೇಲೆ ನಾಮ? ಅದನ್ನು ಕೀಳಬೇಡ. ಓ ಅದು ಶತಾವರಿ. ಬಾಣಂತಿಯರಿಗೆ ಬೇಕಾಗತ್ತೆ. ಅದನ್ನೂ ಹುಲ್ಲು ಅಂದುಕೊಬೇಡ..’ ಹೀಗೆ. ಕೆಲಸ ಮಾಡುವ ಆಳುಗಳಿಗೆ ಈ ಸರಣಿ ಆದೇಶಗಳನ್ನು ಕೇಳಿಸಿಕೊಂಡು ರೇಗಿಹೋಗುತ್ತಿತ್ತು.

ನಂತರದ ದಿನಗಳಲ್ಲಿ ಆಸುಪಾಸಿನ ಜಮೀನಿನ ಒಡೆಯರೆಲ್ಲ ಹುಲ್ಲು ಕೆತ್ತುವ ಯಂತ್ರಗಳನ್ನು ತರಿಸಿಕೊಂಡು, ‘ಟುರ್ ರ್ ರ್’ ಎಂದು ಅರ್ಧ ಗಂಟೆಯಲ್ಲಿ ಕೆಲಸ ಮುಗಿಸಿಬಿಡುತ್ತಿದ್ದರು. ಆ ಯಂತ್ರವು ನಿರ್ಲಿಪ್ತವಾಗಿ ಎಲ್ಲ ಗಿಡಗಳನ್ನು ತರಿದು ಹಾಕಿಬಿಡುತ್ತಿತ್ತು. ಆ ಯಂತ್ರವನ್ನು ನೋಡಿಯೇ ಅಮ್ಮನಿಗೆ ‘ಇದು ಕೆಟ್ಟ ಕಲಿಗಾಲ..’ ಅನ್ನಿಸಲು ಶುರುವಾಗಿತ್ತು. ಹುಲ್ಲು ಕೆತ್ತಬೇಕಾದ ಪ್ರಮಾಣ ನಮ್ಮಲ್ಲಿ ಕಡಿಮೆ ಇದ್ದುದರಿಂದ, ಆ ಯಂತ್ರ ತರುವುದು ಬೇಡ ಎಂದು ನಿರ್ಣಯಿಸಲಾಯಿತು. ಅದು ತಂಬುಳಿಗೆ ಬೇಕಾದ ತಿಮರೆ, ಹೊನೆಗೊನೆ, ಎಣೆಗೆ ಬೇಕಾದ ಗರ್ಗ.. ಎಲ್ಲವನ್ನೂ ಸವರಿಬಿಡುತ್ತದೆ. ಹಾಗಾಗಿ ಅದನ್ನು ಬಾಡಿಗೆಗೂ ತರಲಿಲ್ಲ. ಆದರೆ ಎಲ್ಲಿಯವರೆಗೆ ಹೀಗೆ ಪ್ರತಿಭಟನೆಯ ಮಾರ್ಗ ಅನುಸರಿಸಲು ಸಾಧ್ಯ? ಕೆಲಸದಾಳುಗಳ ಕೊರತೆ ಇದ್ದಾಗ, ಕೊನೆಗೆ ಅನಿವಾರ್ಯವಾಗಿ ಆ ಯಂತ್ರಕ್ಕೆ ಶರಣಾಗಬೇಕಾಯಿತು.

ಇನ್ನು ಕಂಗಿನ ಗಿಡಗಳಿಗೆ ಕೊಳೆರೋಗದ ಭಯ ಎದುರಾಗಾಗ, ಅದಕ್ಕೆ ಔಷಧಿ ಸಿಂಪಡಿಸಬೇಕು ತಾನೇ. ಔಷಧಿ ಸಿಂಪಡಿಸಿದ ಮೇಲೆ, ಕಂಗಿನ ಗಿಡಗಳ ಬುಡದಲ್ಲಿದ್ದ ತಿಮರೆಯನ್ನು ಕೊಯ್ದು ತಂಬುಳಿ ಮಾಡುವುದಕ್ಕಾಗುತ್ತದೆಯೇ. ಒಟ್ಟಾರೆ, ನಾವು ನಂಬಿಕೊಂಡಿದ್ದ ತರ್ಕಗಳ ಬುಡವೆಲ್ಲ ಯಂತ್ರದೆದುರು ಕಿತ್ತು ಹೋದಂತಾಗಿ, ಹುಲ್ಲುಕೆತ್ತುವ ಆ ಯಂತ್ರ ಬಾಡಿಗೆಗೆ ತರಲು ಆರಂಭಿಸಿದ್ದಾಯಿತು. ಆದರೂ ನನ್ನ ತಮ್ಮ, ಮನೆಮುಂದಿನ ಗದ್ದೆಯಲ್ಲಿ ಮಾತ್ರ ಅದನ್ನು ಬಳಸದೇ, ತಾನೇ ಆಯ್ದು ಆಯ್ದು ಕಳೆಗಿಡಗಳನ್ನು ಮಾತ್ರ ಸ್ವಚ್ಛ ಮಾಡುತ್ತಿದ್ದ. ಅಲ್ಲಿರುವ ನೆಲನೆಲ್ಲಿ ಸೇರಿದಂತೆ ಅನೇಕ ಪುಟ್ಟ ಪುಟ್ಟ ಔಷಧ ಗಿಡ, ಹೂವಿನ ಗಿಡ, ತುಳಸಿ ವನ ಮುಂತಾದವುಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ.

ಎಲ್ಲೋ ಅಪರೂಪಕ್ಕೆ ಯಾರಿಗಾದರೂ ಕಾಮಾಲೆ ಕಾಣಿಸಿಕೊಂಡಾಗ, ಹಳ್ಳಿಕಡೆ ಈ ಗಿಡವನ್ನು ಹುಡುಕಿ ಅಜ್ಜಿಯಂದಿರು ಕಷಾಯ ಮಾಡಿ ಕೊಡುತ್ತಿದ್ದರಷ್ಟೆ. ವೈದ್ಯರ ಔಷಧಿಗಳು ಲಭ್ಯವಾದ ಮೇಲೆ ಈ ಕಷಾಯಕ್ಕೂ ಬೇಡಿಕೆ ಕಡಿಮೆಯಾಗಿತ್ತು.

ಈ ಸಾವಯವ ಪ್ರೀತಿಯ ಜೀವನದ ಬಗ್ಗೆಯೂ ನಾಲ್ಕು ಮಾತು ಹೇಳಬೇಕು. ಅದು ಉಪನ್ಯಾಸಗಳಷ್ಟು ಸುಂದರವೂ ಸುಲಭವೂ ಆದ ಬದುಕಲ್ಲ. ಅದಕ್ಕೇ ಇರಬೇಕು, ಅಂತಹ ಜೀವನದ ಹಾದಿಗಳು ಉಪನ್ಯಾಸದಷ್ಟು ಜನಪ್ರಿಯವಾಗಿಲ್ಲ. ಉದಾಹರಣೆಗೆ ನಮ್ಮ ಬಳಗದ ಆಯುರ್ವೇದ ವೈದ್ಯರೊಬ್ಬರು ಸೊಳ್ಳೆ ಸಾಯಿಸುವ ಕೀಟನಾಶಕವಾಗಲೀ, ನೆಲಒರೆಸುವ ರಾಸಾಯನಿಕ ದ್ರಾವಣಗಳನ್ನಾಗಲೀ ಬಳಸುತ್ತಿರಲಿಲ್ಲ. ಮನೆ ಸುತ್ತ ನೆಟ್ಟಿದ್ದ ಔಷಧ ವನವು ಸೊಂಪಾಗಿ ಬೆಳೆದುಕೊಂಡಿತ್ತು. ಜೊತೆಗೆ ಸೊಳ್ಳೆಗಳು, ಹಲ್ಲಿಗಳು, ಕೀಟಗಳು, ಚೇರಂಟೆಗಳು ಅಲ್ಲಿ ತಮ್ಮ ತಮ್ಮ ಮನೆ-ಬಂಗಲೆಗಳನ್ನು ನಿರ್ಮಿಸಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದವು.

ಮನೆಯೊಳಗೆ ಪೆಸ್ಟ್ ಕಂಟ್ರೋಲ್ ನವರನ್ನು ಕರೆಸಿ ಚೊಕ್ಕ ಮಾಡುವುದನ್ನು ವಿರೋಧಿಸುವ ಒಬ್ಬರು ಸ್ನೇಹಿತರು, ನನ್ನೊಡನೆ ಒಂದೆರಡು ಮಾತು ಹಂಚಿಕೊಂಡರು. ‘ಅಕ್ಕ ಪಕ್ಕದ ಮನೆಯವರೆಲ್ಲ ಪೆಸ್ಟ್ ಕಂಟ್ರೋಲ್ ನವರನ್ನು ಕರೆಸಿದ ಮರುದಿನವೇ ಎಲ್ಲ ಕೀಟಗಳು, ಹಲ್ಲಿಗಳು ಗಂಟುಮೂಟೆ ಸಮೇತ ನಮ್ಮ ಮನೆಗೆ ದಾಳಿ ಇಟ್ಟ ಹಾಗಿದೆ. ಸೋಫಾದಲ್ಲಿ ಆರಾಮವಾಗಿ ಮಲಗೋಣವೆಂದರೆ, ಹಲ್ಲಿ ಬಂದು ‘ಹೋಗಲೇ ಆ ಕಡೆಗೆ..’ ಎಂಬಂತೆ ನನಗೇ ಲೊಚ ಲೊಚ ಅಂತ ಬೈಯ್ಯುತ್ತದೆ..’ ಇವು ತಮಾಷೆಯ ಮಾತುಗಳಂತೆ ಕಂಡರೂ, ಸಾವಯವ ಪ್ರೀತಿಯ ಬದುಕು ಸಾಮೂಹಿಕವಾಗಿದ್ದಾಗ, ಅದನ್ನು ತಾಳಿಕೊಳ್ಳುವುದು ಸಾಧ್ಯ ಅಲ್ಲವೇ. ಇಲ್ಲದಿದ್ದರೆ ದಾರಿ ಕಠಿಣ.

ಆದರೆ ನೆಲನೆಲ್ಲಿ ಹೀಗೆ ಬೈಯ್ಯುವ ಅಥವಾ ಕಾಡಿಸುವ ಹಲ್ಲಿಗಳಷ್ಟು ಗಟ್ಟಿಮುಟ್ಟಾದ ಗಿಡವೇನೂ ಅಲ್ಲ. ಒಂದು ಅಡಿ ಅಥವಾ ಹೆಚ್ಚೆಂದರೆ ಎರಡು ಅಡಿಯಷ್ಟು ಬೆಳೆಯುವ ಈ ಗಿಡವು ‘ಶಿವಾ ನೀನು ಮಡಗಿದಂಗಿರು’ ಎನ್ನುವಂತೆ ಸುಮ್ಮನಿದ್ದುಬಿಡುತ್ತದೆ. ಕಳೆದ ವರ್ಷದ ಲಾಕ್ ಡೌನ್ ಸಂದರ್ಭದಲ್ಲಿ ಮನೆಗೆ ಸಾಲಾಗಿ ಜನರು ಬರಲಾರಂಭಿಸಿದರು. ‘ನಿಮ್ಮ ಬೆಟ್ಟುಗದ್ದೆಯಲ್ಲಿ ನೆಲನೆಲ್ಲಿ ಇದೆಯಂತೆ. ಯಾವುದದು. ನನಗೆ ಒಂದೆರಡು ಗಿಡ ಕೊಡಿ..’ ಎನ್ನುತ್ತಾ, ನಗುತ್ತ ಕೇಳುವರು. ಕೊರೊನಾ ಸೋಂಕಿಗೆ ಬೈಯ್ಯುತ್ತ, ಕೆಲವರು ಮೋದಿ ಸರ್ಕಾರವನ್ನು ಹೊಗಳುತ್ತ, ಮತ್ತೆ ಕೆಲವರು ಮೋದಿ ಸರ್ಕಾರವನ್ನು ಬೈಯ್ಯುತ್ತ ಹೋಗುವರು. ಹೀಗೆ ಗದ್ದೆಯಲ್ಲಿ ಸೊಂಪಾಗಿದ್ದ ನೆಲನೆಲ್ಲಿ ಗಿಡಗಳು ಖಾಲಿಯಾಗತೊಡಗಿದವು.

‘ಅಲ್ಲ, ದುಡ್ಡು ಉಳಿಸುವ ಆಸೆಯಿಂದ ಇವರ ಗದ್ದೆಗಳಲ್ಲಿದ್ದ ಗಿಡಗಳನ್ನೆಲ್ಲ ನಾಶ ನಷ್ಟ ಮಾಡಿ, ಈಗ ಯಾರೋ ಕಷ್ಟ ಪಟ್ಟು ಉಳಿಸಿಕೊಂಡ ಗಿಡಗಳ ಮೇಲೆ ದಾಳಿ ಮಾಡುತ್ತಾರಲ್ಲಾ, ಇದಕ್ಕೆ ಏನೆಂದು ಹೇಳುವುದು..’ ಎಂದು ಗೊಣಗುವುದಷ್ಟೇ ನಮ್ಮಿಂದ ಸಾಧ್ಯವಾಯಿತು.

ನಮ್ಮ ಹಿರಿಯ ತಲೆಮಾರಿನವರ ಬಳಿ “ಋಣ” ಎಂಬ ಮೌಲ್ಯವೊಂದು ಬಹಳ ಬಿಗಿಯಾಗಿತ್ತು. ಬೇರೆಯವರ ವಸ್ತುಗಳನ್ನು, ಬೇರೆಯವರ ನೆರವನ್ನು ಪಡೆಯುವುದೆಂದರೆ, ಅವರ ಋಣಭಾರ ನಮ್ಮ ಮೇಲಿರುತ್ತದೆ ಎಂಬ ಅಳುಕು ಅದು. ಮನುಷ್ಯ ‘ಸಂಘಜೀವಿ’ ಎಂದ ಮೇಲೆ ಋಣಭಾರವನ್ನು ಹೊರದೇ ಈ ಬದುಕನ್ನು ಸವೆಸುವುದು ಸಾಧ್ಯವೇ ಇಲ್ಲದ ಮಾತು. ಬದುಕೆಂದ ಮೇಲೆ ಒಬ್ಬರ ಸಹಾಯವನ್ನು ಒಬ್ಬರು ಪಡೆದುಕೊಂಡೇ ಅದನ್ನು ನಿರ್ವಹಿಸಬೇಕು. ಒಬ್ಬರಿಂದ ಪಡೆದ ಸಹಾಯದ ಋಣವನ್ನು ಕಡಿಮೆ ಮಾಡಿಕೊಳ್ಳಬೇಕಾದರೆ, ನಾವು ಕಷ್ಟದಲ್ಲಿರುವ ಇತರರಿಗೆ ಸಹಾಯ ಮಾಡುವುದಕ್ಕೆ ಸಿದ್ಧರಿರಬೇಕು. ಒಟ್ಟಿನಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಈ ಋಣದ ಹೊರೆಯನ್ನು ಕಡಿಮೆ ಮಾಡಿಕೊಳ್ಳುವುದೇ ಜೀವನ ಸಾಗಿಸುವ ಸಂದರ್ಭದಲ್ಲಿ ನೆನಪಿಟ್ಟುಕೊಳ್ಳಬೇಕಾದ ಮುಖ್ಯ ಸೂತ್ರವಾಗಿತ್ತು. ಆದರೂ ತಾಯಿ ಋಣ, ಉಪ್ಪಿನ ಋಣದಂತಹ ಕೆಲವು ಋಣಗಳ ಭಾರವನ್ನು ಹಗುರ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ ಎಂದು ಹಿರಿಯರು ನಂಬಿದ್ದರು. ಸಾಮಾಜಿಕ ಸಹಿಷ್ಣುತೆ ಮತ್ತು ಹೊಂದಾಣಿಕೆಯ ಜೀವನಕ್ಕೆ ಇದಕ್ಕಿಂತ ಉತ್ತಮ ಸೂತ್ರವನ್ನು ಮತ್ತೆಲ್ಲಿ ಕಾಣಲು ಸಾಧ್ಯ?

ಅದೇನೇ ಇರಲಿ, ಔಷಧಕ್ಕೆ ನೆಲನೆಲ್ಲಿ ಬೇಕೆಂದರೆ ಕೊಡೋಣ, ಈ ವೈರಸ್ ಓಡಿಸಲು ಈ ಗಿಡವನ್ನು ತರಿದು ಹಾಕುವುದು ಎಷ್ಟು ಸರಿ ಎಂದು ತಮ್ಮ ಆಗಾಗ ಪ್ರಶ್ನಿಸುತ್ತಲೇ ಇದ್ದಾಗ, ಲಾಕ್ ಡೌನ್ ಮುಕ್ತಾಯವಾಗಿ, ಎಲ್ಲರೂ ಈ ಪಾಪದ ನೆಲನೆಲ್ಲಿಯನ್ನು ಮರೆಯುವ ಕೃಪೆ ಮಾಡಿ, ತಮ್ಮ ಕೆಲಸಗಳಿಗೆ ತೆರಳಲು ಶುರು ಮಾಡಿದರು. ಎರಡನೇ ಅಲೆಯ ಕೊರೊನಾವಂತೂ, ಯಾವ ಗಿಡಗಳನ್ನು ಹುಡುಕುವಷ್ಟು ಪುರುಸೊತ್ತು ಕೊಡದೇ, ಅಪ್ಪಳಿಸಿ ಮನುಷ್ಯನನ್ನು ಕಂಗಾಲು ಮಾಡುತ್ತಿದೆ.

ಪ್ರಕೃತಿಯು ಸದಾ ಪ್ರಯೋಗಗಳನ್ನು ಮಾಡುತ್ತ ಕ್ರಿಯಾಶೀಲವಾಗಿರುತ್ತದೆ. ಸಮಷ್ಟಿಯನ್ನು ಒಪ್ಪದ ಯಾವುದೇ ಜೀವಿ ಪ್ರಬೇಧವನ್ನು ಅದು “ಟಕ್’’ ಅಂತ ಸಿಡಿಸಿ ಹೊರಹಾಕುತ್ತದೆ. ಪ್ರಕೃತಿಯನ್ನು ಮೀರುವ ಅಬ್ಬರದಲ್ಲಿ ಹೊರಟ ಮನುಷ್ಯ ವರ್ಗ ಈಗ ತಬ್ಬಿಬ್ಬಾಗಿದೆ. ಮನುಕುಲದ ಯೋಚನೆಗಳು ಬದಲಾಗುತ್ತವೆ ಎಂಬ ಭರವಸೆ ನಮ್ಮಲ್ಲಿ ಉಳಿದಿದೆಯೇ…