ಈಗೀಗ ಮೂರು ಗಂಟೆಯ ನಮ್ಮ ಸಿನಿಮಾ ಎರಡು ಗಂಟೆಯವರೆಗೆ ಬಂದು ನಿಂತಿದೆ. ಆ ಎರಡು ಗಂಟೆಗಳ ಕಾಲವೂ ಪ್ರೇಕ್ಷಕನನ್ನ ಹಿಡಿದಿಡಲು ಒಂದು ತಂಡದ ಶ್ರಮ, ಪ್ರೀತಿ ಬಹಳವೇ ಇರುತ್ತದೆ. ಟಿವಿ, ಮೊಬೈಲ್, ಪೈರೆಸಿಗಳ ಪ್ರಭಾವದಿಂದಲೋ ಏನೋ ಮುಂಚೆ ಇದ್ದ ಪ್ರೆಕ್ಷಕರ ದಂಡು ಈಗ ಕ್ವೀಣಿಸಿರುವುದೂ ನಿಜ. ಇಂಥ ಸ್ಥಿತಿಯ ನಡುವೆಯೂ ಕೆಲವು ಸಿನಿಮಾಗಳು ಮತ್ತೆ ಹೊಸ ಪ್ರೆಕ್ಷಕರನ್ನು ಸಿನಿಮಾಮಂದಿರಕ್ಕೆ ಕರೆತರುತ್ತಿರುವುದು ನಿಜಕ್ಕೂ ಸಂತೋಷದ ವಿಷಯ.
ಕೃಷ್ಣ ದೇವಾಂಗಮಠ  ಬರೆವ ಪಾಕ್ಷಿಕ ಅಂಕಣ

 

ಕರ್ನಾಟಕದ ಮಾಯಾನಗರ ಬೆಂಗಳೂರು ಹೇಗೋ, ಹಾಗೆ ಕನ್ನಡದ ಮಾಯಾಬಜಾರ್ ಅಂದರೆ ಕನ್ನಡ ಚಿತ್ರರಂಗ. (ಸ್ಯಾಂಡಲವುಡ್) ಇಲ್ಲಿ ರೇಸ್ ಗೆ ಬಹಳ ಮಂದಿ ಬಂದರೂ ಹೆಸರು ಮಾಡುವವರ ಸಂಖ್ಯೆ ಬಹಳ ಕಡಿಮೆ. ನಿರ್ದೇಶಕ, ನಿರ್ಮಾಪಕ, ಸಂಭಾಷಣೆಕಾರ, ಛಾಯಾಗ್ರಾಹಕ, ಸಾಹಸ ನಿರ್ದೇಶಕ, ನಟ, ನಟಿ, ಸಂಗೀತ ನಿರ್ದೇಶಕ, ಹೀಗೆ ಏನೇನೋ ಆಗಿ ಮಿಂಚುವ ಹುಕಿ ಇಟ್ಟುಕೊಂಡು ದಿನಾ ಬಹಳಷ್ಟು ಮಂದಿ ಈಗಾಗಲೇ ಮಿಂಚುತ್ತಿರುವ ನಿರ್ದೇಶಕರ ನಿರ್ಮಾಪಕರ ಮನೆ, ಚಿತ್ರೀಕರಣದ ಸ್ಥಳಗಳಿಗೆ, ಅಲ್ಲದೆ ಇಡೀ ಗಾಂಧಿನಗರವನ್ನು ಸುತ್ತುತ್ತಲೇ ಇರುತ್ತಾರೆ. ಒಂದು ಸಿನಿಮಾ ಹಲವು ಕಲೆಗಳ ಸಂಕೀರ್ಣ ಮಾಧ್ಯಮ. ಎಲ್ಲ ಕಲೆಗಳಂತೆ ಸಿನಿಮಾ ಕೂಡ ತನ್ನಲ್ಲಿಗೆ ಎಲ್ಲರನ್ನೂ ಕೈ ಬೀಸಿ ಕರೆದರು, ಕೆಲವರನ್ನು ಮಾತ್ರ ತನ್ನಲ್ಲಿ ಉಳಿಸಿಕೊಳ್ಳುತ್ತದೆ.

ಕೆಲವರು ತಮ್ಮ ಸಿನಿಮಾ ಬಂದು ಹೋದ ಕೆಲಕಾಲ ಚಾಲ್ತಿಯಲ್ಲಿದ್ದರೆ, ಇನ್ನು ಕೆಲವೇ ಕೆಲವರು ತಮ್ಮ ಇಲ್ಲದಿರುವಿಕೆಯಲ್ಲೂ ಜನರ ಹೃದಯದಲ್ಲಿ ಮತ್ತು ಚಿತ್ರರಂಗದ ಇತಿಹಾಸದಲ್ಲೂ ಉಳಿದು ಹೋಗುತ್ತಾರೆ. ನಾನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಿರುವುದು ಚಿತ್ರ ಭಗವಂತನ ಕುರಿತು ಅಂದರೆ ಎಲ್ಲರಿಗೂ ದಾರಿ ತೋರಿಸಿ ನಡೆಸುವ ತಾನೂ ಅದೇ ಹಾದಿಯಲ್ಲಿ ಎಲ್ಲರೊಟ್ಟಿಗೆ ನಡೆಯುವ ನಿರ್ದೇಶಕನ ಬಗ್ಗೆ.

ನಿರ್ದೇಶಕ ತನ್ನನ್ನೆಷ್ಟು ನಿರ್ದೇಶಿಸಿಕೊಳ್ಳಬಲ್ಲ?

ಪರದೆಯ ಮೇಲೆ ನಟಿಸುವವರು ಬಹಳ ಬೇಗ ಎಲ್ಲರಿಗೂ ಚಿರಪರಿಚಿತರಾಗುತ್ತಾರೆ. ಆದರೆ ತೆರೆಯ ಹಿಂದೆ ತಮ್ಮನ್ನು ಗುರುತಿಸಿಕೊಳ್ಳಲು ಬಹಳ ಕಾಲ ಬೇಕಾಗುತ್ತದೆ ಅಲ್ಲದೆ ಬಹುತೇಕರು ಗುರುತಿಸಿಕೊಳ್ಳದೆಯೇ ಹಾಗೆ ಉಳಿದುಬಿಡಬಹುದು. ಹೀಗೆ ಮುಂದೆಂದೋ ಒಂದು ದಿನ ನಿರ್ದೇಶಕರಾಗಿ ಮೊಹರು ಒತ್ತಬೇಕೆನ್ನುವವರು, ಸಹಾಯಕ, ಸಹ, ಅರೆಕಾಲಿಕ ನಿರ್ದೇಶಕರಾಗಿ ಸತತ ದುಡಿಮೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಸಿನಿಮಾದ ಎಲ್ಲ ವಿಭಾಗಗಳನ್ನು ಹೀಗೆ ತೊಡಗಿಸಿಕೊಳ್ಳುವಿಕೆಯಿಂದ ಅರಿಯುತ್ತಾ ಹೋಗುತ್ತಾರೆ. ಇದ್ಯಾವುದೂ ಇಲ್ಲದೆ ಏನನ್ನೂ ಕಲಿಯದೇ ನೇರ ನಿರ್ದೇಶಕರೆ ಆಗಬೇಕೆಂದು ಓಡಾಡುವವರೂ ಇದ್ದಾರೆ. ಒಂದು ಕಥೆ ಇದ್ದು ಬಿಟ್ಟರೆ ಸಿನಿಮಾ ಮಾಡಬಹುದು, ನಿರ್ಮಾಪಕ ಸಿಕ್ಕು ಬಿಟ್ಟರೆ ಹಾಗೆ ಸಿನಿಮಾ ಮಾಡಿಬಿಡ್ತೀನಿ ಹೀಗೆ ಮಾಡಿಬಿಡ್ತಿನಿ ಅನ್ನುವವರೂ ಕಡಿಮೆ ಜನ ಇಲ್ಲ. ಕರ್ನಾಟಕದ ಪ್ರತೀ ಭಾಗದವರು ಸಿನಿಮಾದಲ್ಲಿ ಕೆಲಸ ಅರಸಿ ಬರುತ್ತಾರೆ ಜೊತೆಗೆ ಈಗೀಗ ಬೇರೆ ರಾಜ್ಯಗಳಿಂದಲೂ ಬಂದವರು ಕನ್ನಡ ಚಿತ್ರರಂಗದದಲ್ಲಿ ದುಡಿಯುತ್ತಿದ್ದಾರೆ. ಇವರಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಲು ಇಚ್ಛಿಸುವ ಬಹುತೇಕರು ಬಡತನದ ಮೂಲದಿಂದಲೇ ಬಂದವರಾಗಿರುತ್ತಾರೆ. ಸೃಜನಶೀಲತೆ ಹೆಚ್ಚು ಅರ್ಥ ಪಡೆದುಕೊಳ್ಳುವುದು ಇಂಥ ಮೂಲದಿಂದ ಬಂದವರಲ್ಲಿಯೇ ಹಾಗೆಂದು ಶ್ರೀಮಂತ ಮೂಲದಿಂದ ಬಂದವರಿಗೆ ಸೃಜನಶೀಲತೆ ಕಡಿಮೆ ಎಂಬುದು ನನ್ನ ಅಭಿಪ್ರಾಯವಲ್ಲ. ಶ್ರೀಮಂತ ಕುಟುಂಬದ ನೆಲೆಯವರು ನಿರ್ಮಾಪಕ ಅಥವಾ ನಟರಾಗಲು ಇಚ್ಚಿಸುವುದೇ ಹೆಚ್ಚು ಅಂತ ಅಷ್ಟೇ.

ಹೀಗೆ ಬಡತನದ ಶಾಪವನ್ನು ವರವಾಗಿಸಿಕೊಳ್ಳಲು ಇಲ್ಲಿ ಅವಕಾಶಗಳಿವೆ ಆದರೆ ಯಾವುದೇ ಗುರಿ ತಲುಪಬೇಕಾದರೂ ಅದು ತಾಳ್ಮೆ, ಶ್ರಮ, ವಿನಯವಂತಿಕೆ, ಬುದ್ಧಿಶಕ್ತಿ ಮತ್ತು ವ್ಯವಹಾರ ಜ್ಞಾನ ಇವೆಲ್ಲವನ್ನೂ ಬೇಡುತ್ತದೆ. ಇವು ಒಂದು ಕೆಲಸದಲ್ಲಿ ಸತತ ತೊಡಗಿಸಿಕೊಳ್ಳುವಿಕೆಯಿಂದಲೂ ಬರುವಂಥವು. ಒಬ್ಬ ಹುಡುಗ ನಿರ್ದೇಶಕನಾಗುವ ಮಹದಾಸೆ ಹೊತ್ತು ಬಂದ ಎಂದರೆ ಅಲ್ಲಿಂದ ಅವನ ಹೊಸ ಕಷ್ಟ ಸುಖಗಳು ತೆರೆದುಕೊಳ್ಳುತ್ತವೆ. ಅವನದೇ ಆದ ಸಿನಿಮಾ ಕುರಿತ ಹಳೇ ಜಗತ್ತು ಇಲ್ಲಿ ಕಾಣುವ ಹೊಸ ಜಗತ್ತು ಅವನನ್ನು ಮೊದಮೊದಲಿಗೆ ಗೊಂದಲಗಳಿಗೂ ಸಿಲುಕಿಸಬಹುದು. ನಂತರ ಒಂದರ ನಂತರ ಒಂದನ್ನು ಬಿಡಿಸಿಕೊಳ್ಳುತ್ತಾ ಸಾಗುತ್ತಾನೆ. ಬಿಡಿಸಿಕೊಳ್ಳಲು ಸಾಧ್ಯವಾಗದೆ ಕೆಲವರು ಬೇರೆ ಬೇರೆ ವಿಭಾಗದ ಸಿನಿಮಾ ಕೆಲಸಗಳಿಗೋ ಇಲ್ಲಾ ಸಿನಿಮಾವನ್ನೇ ತೊರೆದು ಆಚೆಗೋ ಸಾಗಿಬಿಡುತ್ತಾರೆ. ಒಂದು ದಿಟ್ಟ ನಿರ್ಧಾರದಿಂದ ಉಳಿದುಕೊಳ್ಳುವವರು ತಮ್ಮ ಮೊದಲ ಹೆಜ್ಜೆಗಳಲ್ಲಿ ಬಹಳಷ್ಟು ಏಟು, ನೋವು ತಿನ್ನುತ್ತಾರೆ. ಬಂದ ಹೊಸತರಲ್ಲಿ ಧಾರಾವಾಹಿಗಳಲ್ಲಿ ಅನುಭವ ಪಡೆದು ಸಿನಿಮಾಗೆ ಬರುವವರು ಜೊತೆಗೆ ನೇರ ಸಿನಿಮಾಗೆ ಬರುವವರು ಇದ್ದಾರೆ. ಇನ್ನೂ ಕೆಲವರು ಲೈಟ್ ಬಾಯ್ ಗಳಾದವರು, ಸೆಟ್ ಕೆಲಸ್ ಮಾಡಿದವರು, ಕ್ಯಾಮೆರಾ ಮ್ಯಾನ್ ಗಳಾದವರೂ ಕೂಡ ನಿರ್ದೇಶನಕ್ಕಿಳಿಯುತ್ತಾರೆ.

ಸಿನಿಮಾ ಶೂಟಿಂಗ್ ಇದ್ದ ದಿನಗಳಲ್ಲಿ ಹಸಿವಿನ ಸಮಸ್ಯೆಗಳು ಬಾಧಿಸುವುದಿಲ್ಲ. ಶೆಡ್ಯೂಲ್ ಬ್ರೆಕ್ ಗಳಿದ್ದಾಗ ಮತ್ತು ಒಂದು ಸಿನಿಮಾದ ನಂತರ ಇನ್ನೊಂದು ಸಿನಿಮಾ ಹಿಡಿಯುವ ಮಧ್ಯದ ದಿನಗಳಲ್ಲಿ ಬಹಳ ಬಾರಿ ಉಪವಾಸ, ಅರೆಹೊಟ್ಟೆ ಅಧವಾ ಟೀ ಬನ್ ಗಳಲ್ಲೇ ಕಾಲ ಕಳೆಯಬೇಕಾಗುತ್ತದೆ. ಕಡಿಮೆ ಬಜೆಟ್ ಸಿನಿಮಾಗಳಲ್ಲಿ ಕೆಲಸ ಮಾಡುವಾಗ ಕೆಲವೊಮ್ಮೆ ಕನಿಷ್ಠ ಸಂಬಳವೂ ಇಲ್ಲದೆ ಕೆಲಸ ನಿರ್ವಹಿಸಬೇಕಾಗುತ್ತದೆ. ಜೊತೆಗೆ ನಮ್ಮ ಕೆಲಸಗಳ ಜೊತೆ ಹಿಂಸೆ ಎನ್ನಿಸುವ ಕೆಲವು ಕೆಲಸಗಳನ್ನೂ ಅನಿವಾರ್ಯ ಮಾಡಲೇಬೇಕಾಗಿ ಬರಬಹುದು. ಒಳ್ಳೆಯ ಬಜೆಟ್ ಸಿನಿಮಾಗಳು ಅಥವಾ ಕಡಿಮೆ ಬಜೆಟ್ಟಿನದಾದರೂ ಒಳ್ಳೆಯ ನಿರ್ದೇಶಕರ ಬಳಿ ಇದ್ದರೆ ಇಂತಹ ಸಮಸ್ಯೆಗಳು ಸ್ವಲ್ಪ ಕಡಿಮೆಯೂ ಆಗಬಹುದು. ಕೆಲವು ನಿರ್ದೇಶಕರು ತಮ್ಮ ವಿಭಾಗದವರಿಗೆ ಕೆಟ್ಟದಾಗಿ ಬೈಯುವುದು, ನಡೆಸಿಕೊಳ್ಳುವುದೂ ಉಂಟು. ಇನ್ನೂ ಕೆಲವರ ಬಳಿ ಕೆಲಸ ಮಾಡುವಾಗ ಕೆಲಸ ಕಲಿಯಲೂ ಸಾಧ್ಯವಾಗುವುದಿಲ್ಲ. ಇವೆಲ್ಲವುಗಳ ಜೊತೆ ಇನ್ನೂ ವಿಚಿತ್ರವೆಂದರೆ ಮೊದಲ ಬಾರಿ ಕೆಲಸ ಕೇಳಿಕೊಂಡು ಹೋದಾಗ ಕೆಲವು ನಿರ್ದೇಶಕರು ಕೆಲಸ ತಿಳಿದಿದ್ದರೆ ಮಾತ್ರ ಸೇರಿಸಿಕೊಳ್ಳುತ್ತಾರೆ ಇಲ್ಲವೆ ಎಲ್ಲಾ ಹೇಳಿಕೊಟ್ಟು ಕೆಲಸ ಮಾಡಿಸಿಕೊಳ್ಳಲಾಗದು ಎಂದು ನೇರವಾಗೇ ಹೇಳುತ್ತಾರೆ. ಇವರಿಗಿಂತಾ ಒಂದು ಹೆಜ್ಜೆ ಮುಂದೆ ಎನ್ನುವಂತೆ ಅಲ್ಲೊಬ್ಬರು ಇಲ್ಲೊಬ್ಬರು ಸೌಜನ್ಯಕ್ಕೊಂದು ಮಾತೂ ಆಡದವರಿದ್ದಾರೆ ನಮ್ಮ ನಡುವೆ.

ಪರದೆಯ ಮೇಲೆ ನಟಿಸುವವರು ಬಹಳ ಬೇಗ ಎಲ್ಲರಿಗೂ ಚಿರಪರಿಚಿತರಾಗುತ್ತಾರೆ. ಆದರೆ ತೆರೆಯ ಹಿಂದೆ ತಮ್ಮನ್ನು ಗುರುತಿಸಿಕೊಳ್ಳಲು ಬಹಳ ಕಾಲ ಬೇಕಾಗುತ್ತದೆ ಅಲ್ಲದೆ ಬಹುತೇಕರು ಗುರುತಿಸಿಕೊಳ್ಳದೆಯೇ ಹಾಗೆ ಉಳಿದುಬಿಡಬಹುದು. ಹೀಗೆ ಮುಂದೆಂದೋ ಒಂದು ದಿನ ನಿರ್ದೇಶಕರಾಗಿ ಮೊಹರು ಒತ್ತಬೇಕೆನ್ನುವವರು, ಸಹಾಯಕ, ಸಹ, ಅರೆಕಾಲಿಕ ನಿರ್ದೇಶಕರಾಗಿ ಸತತ ದುಡಿಮೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.

ಇಂಥ ಎಷ್ಟೇ ಸಮಸ್ಯೆಗಳಿದ್ದರೂ ಸಹಕೆಲಸಗಾರರಿಂದ ಒಂದಷ್ಟು ನಿರಾಳತೆ, ಒಳ್ಳೆಯ ಮಾತು, ಸ್ನೇಹ ಸಿಗುತ್ತವೆ. ಒಬ್ಬ ನಟ ಅಥವಾ ನಟಿ ಯಾರೇ ಸಹಕಲಾವಿದರಾಗಿರಲಿ ಕೆಲವು ಬಾರಿ ಡೈಲಾಗ್ ಹೇಳುವಲ್ಲಿ ಸಮಯ ವ್ಯರ್ಥ ಮಾಡಿದರೆ, ತಡಬಡಿಸಿದರೆ, ಬಹಳ ಶಾಟ್ ಗಳನ್ನು ತೆಗೆದುಕೊಂಡರೆ ಅದಕ್ಕೂ ನಿರ್ದೇಶನ ವಿಭಾಗದವರನ್ನೇ ನೇರ ಹೊಣೆ ಮಾಡುತ್ತಾರೆ. ಶೂಟಿಂಗ್ ನಲ್ಲಿ ಕೆಲವೊಮ್ಮೆ ರಂಪ – ರಾಮಾಯಣವಾದರೆ ಪ್ಯಾಕಪ್ ನ ನಂತರ ಎಣ್ಣೆ ಹೊಡೆಯುವ ಸಮಯಕ್ಕೆ ಎಲ್ಲಾ ತಣ್ಣಗಾಗುತ್ತದೆ. ಇನ್ನು ಬೆಂಗಳೂರಿನಲ್ಲಿ ಯಾವಯಾವುದೋ ಭಾಗಗಳಲ್ಲಿ ಶೂಟಿಂಗ್ ನಡೆಯುತ್ತಿರುತ್ತದೆ. ಆಗ ಸಾರಿಗೆ ಸ್ವಲ್ಪ ಕಷ್ಟಕರವಾಗುತ್ತದೆ. ನಿರ್ದೇಶಕರೊಟ್ಟಿಗೆ ಒಂದೇ ರೂಮಿನಲ್ಲಿ ಇರುವುದಾದರೆ ಈ ತಾಪತ್ರಯಗಳೂ ಇರುವುದಿಲ್ಲ. ಯಾವುದೋ ಮೂಲೆಯಲ್ಲಿ ವಾಸವಿದ್ದು ಬೆಂಗಳೂರಿನಲ್ಲಿ ಬೆಳ್ಳಂಬೆಳಿಗ್ಗೆ ಶೂಟಿಂಗ್ ಸ್ಪಾಟ್ ಗೆ ಹೋಗುವುದು, ಪ್ಯಾಕಪ್ ನ ನಂತರ ತಡರಾತ್ರಿ ರೂಮು ಸೇರುವುದು ಒಂದು ಹೋರಾಟದ ಹಾಗೆ. ಊಟಕ್ಕಿದ್ದರೆ ಬಟ್ಟೆಗಿಲ್ಲಾ, ಬಟ್ಟೆಗಿದ್ದರೆ ಓಡಾಟಕ್ಕಿಲ್ಲಾ ಎನ್ನುವ ಸ್ಥಿತಿಗೆ ಬದುಕು ಸಾಗುವಾಗ ಸ್ವಂತ ವಾಹನ ಕೂಡಾ ಕನಸು. ಹಂಗೂ ಕೈಯಲ್ಲೊಂದು ಗಾಡಿ ಇದೆ ಅಂದಾದರೂ ನಿಮಗೆ ಗೊತ್ತಿರುವಂತೆ ಗಾಡಿಗೆ ಎಣ್ಣೆ ಕುಡಿಸುವ ಕೆಲಸ ಅಷ್ಟು ಸುಲಭದ್ದಂತೂ ಅಲ್ಲವೆ ಅಲ್ಲ. ಬಹಳ ಸಂತೋಷದ ವಿಷಯ ಎಂದರೆ ಈ ವಿಭಾಗಕ್ಕೆ ಮಹಿಳೆಯರೂ ಹೆಚ್ಚಾಗಿ ಸೇರುತ್ತಿರುವುದು ಮತ್ತು ಬೆಳೆಯುತ್ತಿರುವುದು. ಕಷ್ಟಗಳ ನಂತರವೇ ಸ್ವರ್ಗ ಸಿಗುವುದು ಆದರೆ ಬರೀ ಕಷ್ಟಗಳೇ ಬದುಕಿಗೆ, ಸಿನಿಮಾಗೆ ಬೇಡ.

ಎಲ್ಲಾ ಕಷ್ಟ ಸಂಕಷ್ಟಗಳ ನಂತರವೇ ಖುಷಿ ಇರುವುದು. ಬಹಳ ಸೋಲುಗಳ ನಂತರವೇ ಒಂದು ನಿರಂತರ ನಗು ಇರುವುದು ಸುಳ್ಳಲ್ಲ. ಈ ಘಟ್ಟಗಳ ನಂತರದ ಸಾಧನೆ ನಮಗೊಂದು ಕೀರ್ತಿ ತಂದುಕೊಡುತ್ತದೆ. ಆದರೆ ಸಧ್ಯದ ಪರಿಸ್ಥಿತಿಯಲ್ಲಿ ಸಿನಿಮಾ ಎಂದರೆ ಹಣ ಸುರಿಯುವುದು ಅಂತಲೂ ಆಗಿದೆ. ನಿರ್ಮಾಪಕರಿಗೆ ಯುವ ನಿರ್ದೇಶಕರ ಮೇಲೆ ನಂಬಿಕೆಯಿಲ್ಲ ಇದ್ದರೂ ಕೆಲವೊಮ್ಮೆ ಉಳಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಕೆಲವು ಕ್ರಿಯಾಶೀಲರಲ್ಲದ ನಿರ್ದೇಶಕರಿಗೆ ಒಳ್ಳೆಯ ನಿರ್ಮಾಪಕ ಸಿಕ್ಕು ತತ್ತರಿಸಿದರೆ ಕೆಲವೊಮ್ಮೆ ಇದರ ಉಲ್ಟಾ. ಇಷ್ಟೇ ಹೇಳಿ ನಿಲ್ಲಿಸಿದರೆ ತಪ್ಪಾಗುತ್ತದೆ. ಹೀಗೆ ಫಿಲಂ ಇಂಡಸ್ಟ್ರಿಗೆ ಬಂದವರು ಅದರಲ್ಲೂ ನಿರ್ದೇಶನ ವಿಭಾಗಕ್ಕೆ ಬಂದವರಲ್ಲಿ ಬಹಳ ಜನ ಕನ್ನಡವನ್ನು ಚೆನ್ನಾಗಿ ಓದಲು ಬರಿಯಲೂ ಬಾರದೇ ಇರುವವರನ್ನು ಕಂಡು ನಿರಾಸೆಯಾಗುತ್ತದೆ. ಒಂದಷ್ಟು ಸಾಹಿತ್ಯದ ಗಂಧ-ಗಾಳಿಯೂ ಇರುವುದಿಲ್ಲ ಅಂಥವರಿಗೆ. ಇನ್ನು ಕೆಲಸ ಕಲಿಸುವ ಕೆಲವು ನಿರ್ದೇಶಕರಿದ್ದರೂ ಸೋಮಾರಿಗಳಂತಿರುವ ಕೆಲಸಗಾರರನ್ನೂ ಕಂಡಿದ್ದೇನೆ. ಇಂಥವರಲ್ಲಿ ಶೋಕಿಗಾಗಿ ಬರುವವರೂ ಇದ್ದಾರೆ. ಸಿನಿಮಾದಲ್ಲಿ ಕೆಲಸ ಮಾಡುವುದಾಗಿ ಹೇಳಿಕೊಂಡು ತಿರುಗಾಡುವವರೂ ಇದ್ದಾರೆ. ಏನೋ ಒಂದಷ್ಟು ಕಲಿತಿದ್ದೆ ತಡ ನಿರ್ದೇಶಕರಾಗಲು ಕೈಯಲ್ಲಿ ಒಂದೆರಡು ಕಥೆಗಳನ್ನಿಟ್ಟುಕೊಂಡು ಓಡಾಡಲು ಶುರು ಮಾಡಿಬಿಡುತ್ತಾರೆ. ಕಥೆಯನ್ನು ಸಿನಿಮಾ ಆಗಿಸುವ ದೊಡ್ಡ ಕಾರ್ಯವನ್ನು ಅವರು ಲೆಕ್ಕಕ್ಕೆ ಪರಿಗಣಿಸುವುದೇ ಇಲ್ಲ.

ನಾಟಕದ ಮೂಲದಿಂದ ಬಂದವರು ಒಂದಷ್ಪು ಹೆಚ್ಚುಗಾರಿಕೆ ಸಾಧಿಸಿದ್ದನ್ನೂ ನಾನು ಕಂಡಿದ್ದೇನೆ. ಆದರೆ ಇತ್ತೀಚಿನ ನಿರ್ದೇಶಕರಲ್ಲಿ ಸಿನಿಮಾ ಗೀಳಿರುವಂತೆ ನಾಟಕದ ಕುರಿತು ತಾತ್ಸಾರ ಇದೆ. ಇಂಥ ಭಾವನೆ ಹೋಗಲಿ ಎಂದು ಆಶಿಸುತ್ತೇನೆ. ಈಗಿನ ನಿರ್ದೇಶಕರಿಗೆ ಸಿನಿಮಾ ಆಗಿಸಿದ ನಂತರದ ಮಾರ್ಕೇಟಿಂಗ್ ಪ್ರಪಂಚದ ಅರಿವೂ ತುಂಬಾ ಮುಖ್ಯ. ಇಷ್ಟೆಲ್ಲಾ ಹೇಳಿದ ನಂತರವೂ ಇನ್ನೂ ಹೇಳುವುದು ಉಳಿದೇ ಇರುತ್ತದೆ. ಆದರೆ ಒಂದು ಸಿನಿಮಾಗಾಗಿ ಕಾಲು ಎಳೆಯುವುದು, ಕಾಲು ಹಿಡಿಯುವುದು ಎಂಬಿತ್ಯಾದಿ ಕೆಲಸಗಳು ತಗ್ಗಲಿ ಎಂದು ಬಯಸುತ್ತೇನೆ.

ನಿರ್ದೇಶನ ಎಂದರೆ ಏನು? ಈ ಪ್ರಶ್ನೆಗೆ ಕೆಲವರ ಉತ್ತರವೇ ತಲೆ ಕೆಡಿಸುವಂಥದ್ದು. ಒಬ್ಬರು ನಿರ್ದೇಶನ ಎಂದರೆ ಶಾಟ್ ಇಡೋದು ಅಂತಾರೆ, ಇನ್ನೊಬ್ಬರು ಡೈಲಾಗ್ ಬರೆಯೋದು ಅಂತಾರೆ, ಮತ್ತೊಬ್ಬರು ತಮಾಷೆಗೆ ನಿರ್ಮಾಪಕರನ್ನ ಹುಡುಕೋದು ಅಂತಾರೆ. ಹೀಗೆಲ್ಲಾ ಇನ್ನೂ ವಿಚಿತ್ರಗಳಿವೆ. ಒಂದು ಸಿನಿಮಾ ನಿರ್ದೇಶಕನ ಕನಸು ಅದರ ಒಟ್ಟು ಜವಾಬ್ದಾರಿ ಕನಸು ಕಂಡವನದೇ ಆಗಿರುತ್ತದೆ ಎನ್ನುವುದನ್ನು ನಾವು ಮರೆಯಬಾರದು. ಈಗೀಗ ಮೂರು ಗಂಟೆಯ ನಮ್ಮ ಸಿನಿಮಾ ಎರಡು ಗಂಟೆಯವರೆಗೆ ಬಂದು ನಿಂತಿದೆ. ಆ ಎರಡು ಗಂಟೆಗಳ ಕಾಲವೂ ಪ್ರೇಕ್ಷಕನನ್ನ ಹಿಡಿದಿಡಲು ಒಂದು ತಂಡದ ಶ್ರಮ, ಪ್ರೀತಿ ಬಹಳವೇ ಇರುತ್ತದೆ. ಟಿವಿ, ಮೊಬೈಲ್, ಪೈರೆಸಿಗಳ ಪ್ರಭಾವದಿಂದಲೋ ಏನೋ ಮುಂಚೆ ಇದ್ದ ಪ್ರೆಕ್ಷಕರ ದಂಡು ಈಗ ಕ್ವೀಣಿಸಿರುವುದೂ ನಿಜ. ಇಂಥ ಸ್ಥಿತಿಯ ನಡುವೆಯೂ ಕೆಲವು ಸಿನಿಮಾಗಳು ಮತ್ತೆ ಹೊಸ ಪ್ರೆಕ್ಷಕರನ್ನು ಸಿನಿಮಾ ಮಂದಿರಕ್ಕೆ ಕರೆತರುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ಪ್ರೇಕ್ಷಕರು ವರ್ಗಗಳಾಗಿ ಹಲವು ರೀತಿಯಲ್ಲಿ ಹಂಚಿಹೋಗಿರುವುದು ಒಂದು ಸಿನಿಮಾಗೆ ಒಳಿತಾದರೆ ಇನ್ನೊಂದು ಸಿನಿಮಾಗೆ ಲಾಸ್. ನಾನು ಇಷ್ಟೊತ್ತು ಹೇಳಿದ್ದರಲ್ಲಿ ನಿರ್ದೇಶನ ವಿಭಾಗದ ಜೊತೆ ಎಲ್ಲಾ ವಿಭಾಗಗಳನ್ನು ಸ್ಪರ್ಶಿಸಿದ್ದೇನೆ ಎಂದುಕೊಂಡಿರುವೆ. ಸಿನಿಮಾದಲ್ಲಿ ನಿರ್ದೇಶನ ವಿಭಾಗದ ನೋವೆ ಎಲ್ಲರ ನೋವುಗಳೂ ಆಗಿವೆ ಎಂದು ಮತ್ತೆ ಹೇಳಲು ಬಯಸುತ್ತೇನೆ. ನಿರ್ದೇಶಕ ತನ್ನನ್ನೆಷ್ಟು ನಿರ್ದೇಶಿಸಿಕೊಳ್ಳಬಲ್ಲ ಅನ್ನುವುದರ ಮೇಲೆಯೇ ನಿರ್ದೇಶಕನ ಗೆಲುವು ನಿಂತಿದೆ ಅನ್ನುವುದು ವೈಯಕ್ತಿಕವಾಗಿ ನನ್ನ ನಂಬಿಕೆ.


ಇವು ನನ್ನ ಮೂಗಿನ ನೇರದ ಮಾತುಗಳೂ ಆಗಿರಬಹುದು. ನಾನು ಇನ್ನೂ ಕೇವಲ ಒಂದು ಮಗ್ಗಲನ್ನು ಮಾತ್ರವೇ ಸ್ಪರ್ಶಿಸಿರಬಹುದು. ನಿರ್ದೇಶಕ ‘ಕ್ಯಾಪ್ಟನ್ ಆಫ್ ದಿ ಶಿಪ್’ ಇದ್ದಂತೆ ಎನ್ನುವ ಮಾತಿದೆ. ನಿರ್ದೇಶಕರಾಗ ಬಯಸುವವರು ಭಾಷೆಯ ಹಂಗಿಲ್ಲದೆ ಸಿನಿಮಾ ನೋಡುವುದು, ಸೆಲೆಬ್ರೆಟಿ ಹಂಗಿಲ್ಲದೆ ಜನರೊಂದಿಗೆ ಬೆರೆಯುವುದು, ಪುಸ್ತಕ ಮತ್ತು ವಿಷಯಗಳ ಅಪಡೇಟ್ ಆಗುವುದು ತುಂಬಾ ಮುಖ್ಯ.ಇಷ್ಟು ಮಾತ್ರ ಹೇಳಬಲ್ಲೆ ಜನರನ್ನು ಮನರಂಜಿಸುವುದರ ಜೊತೆ ಜೊತೆಗೆ ಅಳಿಸುವುದಕ್ಕಿಂತ ಭಾವವನ್ನು ಮಡುಗಟ್ಟಿಸುವುದು ನಿರ್ದೇಶಕನ ಗಟ್ಟಿತನ.