ಫೋನಿನಲ್ಲಿ ವಿನಯನ ಜತೆ ಮಾತಾಡುತ್ತಿದ್ದವನು ಅಲಿಶಾ ಉಸಿರಾಡುತ್ತಿದ್ದಾಳಾ? ಆಕೆ ಮಾತಾಡುತ್ತಿದ್ದಾಳಾ? ಮೂವತ್ತು ಸೆಕಂಡುಗಳ ಕಾಲ ಆಕೆಯ ಉಸಿರಾಟ ಮತ್ತು ನಾಡಿಬಡಿತ ನೋಡಿ ಹೇಳು ಎಂದು ಅವನ ಪ್ರೋಟೊಕಾಲಿನಲ್ಲಿದ್ದಂತೆ ವಿನಯನಿಗೆ ಹೇಳುತ್ತಿದ್ದ. ವಿನಯ ‘ನಾನೂ ಒಬ್ಬ ಡಾಕ್ಟರು. ನನ್ನ ಹೆಂಡತಿಯೂ ಡಾಕ್ಟರು. ಅವಳಿಗೇನೂ ಆಗಿಲ್ಲ. ಅವಳಿಗೆ ತಕ್ಷಣ ಹೆರಿಗೆಯಾಗಬೇಕು. ನೀನು ತಕ್ಷಣ ಆ್ಯಂಬುಲೆನ್ಸ್ ಕಳಿಸಲಿಲ್ಲ ಎಂದರೆ ನಾನೇ ಡ್ರೈವ್ ಮಾಡಿಕೊಂಡು ಆಸ್ಪತ್ರೆಗೆ ಹೋಗುತ್ತೇನೆ’…
ಗುರುಪ್ರಸಾದ್‌ ಕಾಗಿನೆಲೆ ಬರೆದ ನೀಳ್ಗತೆ “ಥ್ಯಾಂಕ್ಸ್‌ಗಿವಿಂಗ್”ನ ಏಳನೆಯ ಕಂತು ನಿಮ್ಮ ಓದಿಗಾಗಿ

ರಾತ್ರಿ ವಿಶೂಗೆ ಎಷ್ಟು ಹೊತ್ತಾದರೂ ನಿದ್ರೆ ಬಂದಿರಲಿಲ್ಲ. ಹಾಸಿಗೆಯಲ್ಲಿ ಹೊರಳಾಡುತ್ತಾ ಇದ್ದ. ಅಮ್ಮ, ಡ್ಯಾಡಿ ಏಕ್‌ದಂ ಹೀಗೆ ಮನೆಬಿಟ್ಟು ಇಂಡಿಯಾಕ್ಕೆ ಹೋಗಿಬಿಟ್ಟರೆ? ಏನಾಗಬಹುದು. ತಾನು ಚಿಕ್ಕಂದಿನಲ್ಲಿ ಕುಟುಂಬದೊಟ್ಟಿಗೆ ಭಾರತ ಪ್ರವಾಸ ಮುಗಿಸಿಕೊಂಡು ಬಂದ ತಕ್ಷಣ ಅಮ್ಮ, ಡ್ಯಾಡಿ ಇಬ್ಬರೂ ಕೇಳುತ್ತಿದ್ದರು, ‘ಮಕ್ಕಳಾ, ಇಂಡಿಯಾ ಹೇಗಿತ್ತು?’ ತಾವಿನ್ನೂ ಉತ್ತರ ಕೊಡುವ ಮುಂಚೆಯೇ ಅಮ್ಮ ‘ಬಹಳ ಚೆನ್ನಾಗಿತ್ತಲ್ವಾ. ನೀವೆಲ್ಲ ದೊಡ್ಡವರಾಗಿ ಒಂದು ಕಡೆ ಸೆಟಲ್ ಆದಮೇಲೆ ನಾವು ವಾಪಸ್ಸು ಇಂಡಿಯಾಕೆ ಹೋದರೆ ನೀವುಗಳು ಆಗಾಗ್ಗೆ ಬಂದು ನಮ್ಮನ್ನು ನೋಡ್ತೀರಲ್ವಾ? ಅಕಸ್ಮಾತ್ ನೀವು ಬರೊಲ್ಲ ಅಂದರೆ ನಾವು ಇಲ್ಲೇ ಎಲ್ಲಾದರೂ ವೃದ್ಧಾಶ್ರಮ ಹುಡಕ್ಕೋಬೇಕಾಗುತ್ತೆ.’ ವಿಶೂ, ವಿನಯ ಇಬ್ಬರೂ ತಪ್ಪದೇ ಹೇಳುತ್ತಿದ್ದರು. ‘ಅಮ್ಮ, ಡ್ಯಾಡಿ. ನೀವು ಇಂಡಿಯಾಕ್ಕೆ ಹೋಗದೇ ಇದ್ದರೆ ನಮಗೆ ಇಂಡಿಯಾದ ಸಂಬಂಧ ಪೂರಾ ಕಡಿದು ಹೋಗುತ್ತದೆ. ನೀವಲ್ಲಿದ್ದರೆ, ನಾವು ಆಗಾಗ್ಗೆ ಅಲ್ಲಿಗೆ ಬರುತ್ತಾ ಇರಬಹುದು.’

ಕೇವಲ ಹತ್ತು ವರ್ಷದಲ್ಲಿ ಎಲ್ಲವೂ ಬದಲಾಗಿ ಹೋಗಿದೆ. ಡ್ಯಾಡಿಯ ಬಿಸಿನೆಸ್ ಬೆಳೆದಿದೆ. ಮನೆ ದೊಡ್ಡದಾಗಿದೆ. ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳುವಂತೆ ವಿನಯನಿಗೆ ಅಲಿಶಾ ಸಿಕ್ಕಳು, ನನಗೆ ಸುಪ್ರೀತ ಸಿಕ್ಕ. ನಮ್ಮ ಮನೆಯನ್ನು, ಸಂಸಾರವನ್ನು ಯಾರು ನೋಡಿದರೂ ನಮ್ಮದು ಸ್ಥಿರವಾದ ಠಾವು, ಅದು ಇಲ್ಲಿಯೇ ಎಂದು ನಂಬುವವರೇ. ಅಂತದ್ದರಲ್ಲಿ ಡ್ಯಾಡಿ ಯಾವುದೋ ಸಂತನಂತೆ ಇಲ್ಲಿರುವ ಎಲ್ಲವನ್ನೂ ಬಿಟ್ಟು ಯಾವುದೋ ಆಶ್ರಮಕ್ಕೆ ಹೋಗುವ ಮಾತಾಡೋದು ಸರಿಯೇ? ಅಲಿಶಾ, ಅವಳ ಬಸಿರು, ಸುಪ್ರೀತ ಎಲ್ಲ ಒಮ್ಮೆಲೇ ನೋಡಿ ಡ್ಯಾಡಿಗೆ ಈ ಸಂಸಾರದ ಮೇಲೆಯೇ ವಿರಕ್ತಿ ಬರುವಷ್ಟು ತಲೆ ಕೆಟ್ಟಿತಾ? ಸಿಟ್ಟಿನ ಭರದಲ್ಲಿ ಮಾಡಿದ ನಿರ್ಧಾರ ಅಲ್ಲ ಇದು. ಎಲ್ಲದರ ಬಗ್ಗೆ ಬಹಳ ಯೋಚನೆ ಮಾಡಿದ್ದಾರೆ ಅನಿಸುತ್ತದೆ.

ಯಾಕೋ ಸುಪ್ರೀತನ ಸಾನ್ನಿಧ್ಯ ಬೇಕೆನ್ನಿಸಿತು. ಪಾಪ, ಆತನಿಗೆ ಈ ವಾರಾಂತ್ಯ ಒಂದು ಖುಶಿಯಾದ, ಮೋಜಿನ ಅನುಭವವಾಗಿದ್ದಿರಬೇಕಿತ್ತು. ಎಲ್ಲ ಬಿಟ್ಟು ತಮ್ಮ ಜಂಜಡದಲ್ಲಿ ಆತನನ್ನು ಸಿಗಿಹಾಕಿಸಿದ್ದಾಯಿತು. ಏನಂದುಕೊಂಡಿದ್ದಾನೋ ಏನೋ, ಹೋಗಿ ಮಾತಾಡಿಸಿಕೊಂಡು ಬಂದುಬಿಡೋಣ ಎಂದು ಎದ್ದು ನಿಧಾನವಾಗಿ ಬೇಸ್‌ಮೆಂಟಿಗೆ ಬಂದ. ಸುಪ್ರೀತ ತನ್ನ ಐಪಾಡನ್ನು ಕಿವಿಗೆ ಸಿಕ್ಕಿಸಿ ಕಣ್ಣು ಮುಚ್ಚಿ ಯಾವುದೋ ಹಾಡು ಕೇಳುತ್ತಿದ್ದ.

ವಿಶೂ ಬಂದದ್ದು ನೋಡಿ ಒಂದು ಸೆಕೆಂಡು ಕಣ್ಣು ಬಿಟ್ಟಿನೋಡಿ ‘ಹಾಯ್’ ಎಂದು ಮತ್ತೆ ಕಣ್ಣು ಮುಚ್ಚಿಕೊಂಡ.

ವಿಶೂ ಬಂದು ಸುಪ್ರೀತನ ಕಂಫರ್ಟರಿನೊಳಗೆ ಸೇರಿದ. ನಿಧಾನವಾಗಿ ಆತನ ನುಣುಪಾದ ಎದೆಯಲ್ಲಿ ಬೆರಳಾಡಿಸತೊಡಗಿದ. ಸುಪ್ರೀತ ಯಾವ ರೀತಿಯೂ ಪ್ರತಿಕ್ರಿಯಿಸದಿದ್ದಾಗ ಅವನ ಕಿವಿಯಿಂದ ಇಯರ್ ಫೋನನ್ನು ತೆಗೆದು ‘ಸಾರಿ’ ಎಂದ.

ಸುಪ್ರೀತ ನಕ್ಕು ‘ಯಾಕೆ, ನನ್ನನ್ನು ಇಲ್ಲಿಗೆ ಕರಕೊಂಡು ಬಂದಿದ್ದಕ್ಕಾ, ಅಥವಾ ಈ ಬೇಸ್‌ಮೆಂಟಲ್ಲಿ ಮಲಗಿಸಿದ್ದಕ್ಕಾ?’ ಎಂದ.
ವಿಶೂ ‘ಸುಪ್ರೀತ, ಪ್ಲೀಸ್. ಮನನೋಯುವ ಹಾಗೆ ಮಾತಾಡಬೇಡ. ನಾನು ಇವ್ಯಾವುದನ್ನೂ ನಿರೀಕ್ಷಿಸಿರಲಿಲ್ಲ. ಅಮ್ಮ, ಡ್ಯಾಡಿಯ ಮನಸ್ಸಲ್ಲಿ ಈ ತರದ ಯೋಚನೆಯೊಂದಿದೆ ಎಂದೂ ನನಗೆ ಗೊತ್ತಿರಲಿಲ್ಲ.’

‘ಅವರು ಏನಾದರೂ ಮಾಡಲಿ, ವಿಶೂ. ಎಲ್ಲಿಗಾದರೂ ಹೋಗಲಿ. ನಮ್ಮಿಬ್ಬರ ಸಂಬಂಧದ ಬಗ್ಗೆ ನಿಮ್ಮನೆಯವರಿಗೆ ಒಂದು ಸಣ್ಣ ಕಲ್ಪನೆ, ಐಡಿಯಾ ಇದೆ ಅಂದುಕೊಂಡಿದ್ದೆ. ನನ್ನನ್ನು ಮನೆನಾಯಿಯ ತರ ಬೇಸ್‌ಮೆಂಟಲ್ಲಿ ಹಾಕ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ. ನಾವಿಬ್ಬರೂ ಒಂದೇ ಮನೆಯಲ್ಲಿ ಒಟ್ಟಿಗೇ ಇದ್ದೀವಿ ಅಂತ ಹೇಳಿದ್ದೀಯೋ ಇಲ್ಲವೋ, ನೀನು?’

‘ಸುಪ್ರೀತ, ಪ್ಲೀಸ್. ನಾನು ನಿನಗೆ ಈ ವಿಷಯದ ಬಗ್ಗೆ ಸೂಕ್ಷ್ಮವಾಗಿ ಬಹಳ ಬಾರಿ ಹೇಳಿದ್ದೆ. ಸ್ವಲ್ಪ ಅವರ ಪರಿಸ್ಥಿತೀನು ಅರ್ಥ ಮಾಡಿಕೋ. ಅವರಿಗೆ ಯಾವರೀತಿ ಪ್ರತಿಕ್ರಿಯಿಸಬೇಕು ಅಂತ ಗೊತ್ತಿಲ್ಲ ಅನಿಸುತ್ತೆ. ತಾನು ಬಹಳ ಲಿಬರಲ್ ಅಂದು ಪ್ರದರ್ಶಿಸೋ ಪಕ್ಕದ ಮನೆ ಬೆಟ್ಟೀ ಕೂಡ ನಮ್ಮ ಮದುವೆ ಬಗ್ಗೆ ಮಾತಾಡಿದ್ಲು. ಇನ್ನು, ಅಮ್ಮಂಗೆ ಅರವತ್ತೈದು ವರ್ಷ. ನಾನು ಹುಟ್ಟಿದಾಗ ಆಕೆಗೆ ನಲವತ್ತು ವರ್ಷ. ಆಕೆಯ ಗೆಳತಿಯರು ಎಷ್ಟೋ ಜನ ಆಗಲೇ ಅಜ್ಜಿ ಆಗಿದ್ದರು. ಶಿ ಮಿಸ್ಡ್ ಅ ಜನರೇಷನ್ ಇನ್ ಬಿಟ್ವೀನ್. ಪ್ಲೀಸ್, ನಮ್ಮನೆ ಸಮಸ್ಯೇನ ನಿಂದೇ ಸಮಸ್ಯೆ ಅಂತ ತಿಳಕೊಂಡು ಯೋಚಿಸು.’

‘ನೋ.. ನೋ, ಬಡಿ. ಒಂದು ವಿಷಯ ಬಹಳ ಸ್ಪಷ್ಟವಾಗಿ ತಿಳಕೋ. ಇದು ನನ್ನ ನಿನ್ನ ಸಂಬಂಧ ಅಷ್ಟೇ. ನಾವು ಸಾಯೋತನಕ ಜತೇಗಿದ್ದರೂ ನಮ್ಮಗಳ ಮನೆಯವರು ಒಂದು ಲೆವೆಲ್ ಆದ ಮೇಲೆ ಒಳಗೆ ಬಿಟ್ಕೊಳಲ್ಲ. ಇಲ್ಲದೇ ಇದ್ದಿದ್ದರೆ, ನಾನು ಬೇಸ್‌ಮೆಂಟಲ್ಲಿ ಯಾಕೆ ಮಲಗಿರ್ತಾ ಇದ್ದೆ. ನಮ್ಮ ಕಷ್ಟಗಳು ನಮ್ಮದು ಮಾತ್ರ. ನನ್ನ ಸ್ನೇಹಿತ ಜಾನತನ್, ಕೆವಿನ್ ಹೋದ ವರ್ಷ ಶಿಕಾಗೋದಲ್ಲಿ ಮದುವೆ ಮಾಡ್ಕೊಂಡರು. ಆದರೆ ಅವರ ಮದುವೇನ ಯಾವ ಚರ್ಚೂ ಒಪ್ಪಿಕೊಳ್ಳಲಿಲ್ಲ. ಒಂಥರಾ ಬಹಿಷ್ಕಾರ ಹಾಕಿದ ಹಾಗೇ ಅಲ್ಲವಾ? ನಾವು ಎಷ್ಟು ದಿನ ಜತೇಗಿದ್ದರೂ ನಾನು ನಿನಗೆ, ನೀನು ನನಗೆ.. ಅಷ್ಟೇ ಈ ಸಂಬಂಧ. ಸಂಸಾರ, ಮಕ್ಕಳು, ದೇವಸ್ಥಾನ, ಗುರುದ್ವಾರ ಅಥವಾ ಚರ್ಚು ಇವೆಲ್ಲ ನಮಗೆ ಒದಗಿ ಬರೋದಲ್ಲ. ಇದರ ಮಧ್ಯೆ ಅದೇನೋ, ನಾವು ಬಹಳ ಜನ ಜತೇಗಿರೊಲ್ಲ. ಒಂದಲ್ಲ ಒಂದು ದಿನ ಬೇರೆಯಾಗೇ ಆಗ್ತೀವಿ ಅಂತ ಕಾಲಪುರುಷ ಹೇಳೋ ಹಾಗೆ ಹೇಳಿದೆ.’

‘ಸುಪ್ರೀತ.. ಅಮ್ಮ ನನ್ನನ್ನು ನಾನು ಅಂತ ಒಪ್ಕೊಂಡಿರೋದೇ ಕಷ್ಟ. ಇಂಥಾದ್ದು ಏನಾರ ಹೇಳಬೇಕಾಗುತ್ತೆ. ’

‘ವಿಶೂ.. ನನಗೆ ನಿನ್ನ ಮಾತು ಪೂರಾ ಅರ್ಥ ಆಗ್ತಾ ಇಲ್ಲ. ನಿಮ್ಮಮ್ಮಂಗೆ ನಿನ್ನ ಜೀವನ ಶೈಲಿ ಒಪ್ಪಿಗೆ, ಆದರೆ ಮನಾಗಮಸ್ ಸಂಬಂಧ ಇಷ್ಟ ಇಲ್ಲ ಅಂತಾನಾ? ಅಥವಾ ನಮ್ಮ ವಂಶಾವಳಿ ಸರೀ ಇಲ್ಲ ಅಂತಾನಾ? ಜಾತಿ, ಗೀತಿ ನೋಡ್ತೀರೇನೋ?’

‘ಓ ದೇವರೇ.. ನಾನು ನಿನಗೆ ಹೇಗೆ ಹೇಳಲಿ. ಅದು ತುಂಬಾ ಜಟಿಲವಾದದ್ದು. ಒಂದೇ ಬಾರಿಗೆ ಅಮ್ಮ, ಅಪ್ಪ ಇಬ್ಬರಿಗೂ ಒಂತರಾ ವಿಶ್ವರೂಪ ದರ್ಶನ ಆದ ಹಾಗಾಗಿದೆ. ವಿಶ್ವರೂಪ ದರ್ಶನ ಅಂದರೆ ಗೊತ್ತಾ ನಿನಗೆ?’

‘ಇಲ್ಲ. ಗೊತ್ತಿರಬೇಕೇನು?’

‘ನೋಡು. ನಿನಗೆ ಅರ್ಥ ಆಗೋ ಹಾಗೆ ಹೇಳೋದು ಕಷ್ಟ. ನಾನು, ನೀನು ಜತೆ ಇರೋದನ್ನು ಅಮ್ಮ ನೋಡಿರೋದು ಇದೇ ಮೊದಲಬಾರಿ. ಒಂದು ಸಣ್ಣ ಉದಾಹರಣೆ ಕೊಡ್ತೀನಿ. ನಮ್ಮ ಅಪಾರ್ಟ್‌ಮೆಂಟಲ್ಲೇ ಇನ್ನೊಂದು ರೂಮಲ್ಲಿ ನಮ್ಮಂತಹ ನಮ್ಮ ಮುಂದೆಯೇ ಈ ಲಿಬರೇಟೆಡ್ ಸೆಕ್ಷುಯಾಲಿಟಿಯ ಅಂದಾಜಿಗೂ ಬರದಂತ ಎಂಟುಜನರ ಆರ್ಜಿ ನಡೆದಿದೆ ಅಂತ ತಿಳಕೊ. ಅದಕ್ಕೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ಅಥವಾ ಪಕ್ಕದಲ್ಲಿಯೇ ಆರ್ಜಿಗಳು ನಡೆದರೂ ನಮಗೆ ಏನೂ ಅನ್ನಿಸೊಲ್ಲವಾ? ಒಂತರಾ ಆಶ್ಚರ್ಯ, ಬೆರಗುಗಳನ್ನು ಕಳೆದುಕೊಂಡು ಡಿಸೆನ್ಸಿಟೈಸ್‌ ಆಗಿಬಿಟ್ಟಿದ್ದೀವಿ. ಹಾಗಾಗಿ ಅವರ ಜಾಗದಲ್ಲಿದ್ದುಕೊಂಡು ನಮ್ಮನ್ನು ನಾವು ನೋಡಿಕೊಳ್ಳಲು ಸಾಧ್ಯವೇ ಇಲ್ಲ,’

‘ನೀನು ಆ ಕೆಲಸ ಮಾಡ್ತಾ ಇದ್ದೀಯಲ್ಲ, ಈಗ. ನೀನು ಎಲ್ಲ ಕಡೆಯಿಂದ ನನ್ನನ್ನು ಜಡ್ಜ್ ಮಾಡ್ತಾ ಇದ್ದೀಯೋ ಇಲ್ಲವೋ?’

‘ಸುಪ್ರೀತ್, ನಾನು ನೀನು ಬೆಳೆದು ಬಂದಿರೋದು ಬೇರೆ ಬೇರೆ ಹಿನ್ನೆಲೆಯಲ್ಲಿ. ನನ್ನ ಲೈಂಗಿಕ ಆಯ್ಕೆ ನನ್ನ ಬದುಕಿನಲ್ಲಿ ಬೇರೆ ಎಲ್ಲವನ್ನೂ ಬದಲಾಯಿಸೊಲ್ಲ. ಐ ಕೆನಾಟ್ ಪ್ಯಾಕ್ ಅಪ್ ಅಂಡ್ ಲೀವ್ ಆಲ್ ಅಟ್ ಒನ್ಸ್ ವಿತ್ ಯು’

‘ವಿಶೂ, ನಾನು ನಿನ್ನ ಮನಸಾರೆ ಪ್ರೀತಿಸ್ತೀನಿ. ಯಾವುದೇ ಕಾರಣ ಕೇಳದೇ. ನಾನು ನಿನ್ನಿಂದ ಅಪೇಕ್ಷಿಸೋದು ಕೊಂಚ ಕಮಿಟ್‌ಮೆಂಟನ್ನು. ಇಲ್ಲದೇ ಇದ್ದರೆ ಕಳೆದ ಆರು ತಿಂಗಳಿಂದ ಜತೆಗೆ ಯಾಕೆ ಇದ್ದೀವಿ? ನಿಮ್ಮಪ್ಪ, ಅಮ್ಮನ್ನ ಭೇಟಿ ಮಾಡಿಸೋಕೆ ಯಾಕೆ ಕರಕೊಂಡು ಬಂದಿದ್ದೀಯ? ಈಗ ನನ್ನ ರೂಮಿಗೆ ಯಾಕೆ ಬಂದಿ?’

‘ಹಾಗಲ್ಲ..’ ವಿಶೂಗೆ ಏನು ಮಾತಾಡಬೇಕೆಂದು ಗೊತ್ತಾಗಲಿಲ್ಲ. ತಾನು ಏನು ಮಾತಾಡಿದರೂ ಸುಪ್ರೀತನಿಗೆ ಅದು ಪಲಾಯನವಾದದಂತೆಯೇ ತೋರುತ್ತಿದೆ. ನಾನು ಸೊಂಟಕ್ಕೆ ಜನಿವಾರ ಕಟ್ಟಿಕೊಳ್ಳುವ, ಮಧ್ವನವಮಿಯ ದಿನ ಪ್ರವರ ಹೇಳಿಕೊಂಡು ಅಮ್ಮ, ಡ್ಯಾಡಿಗೆ ನಮಸ್ಕಾರ ಮಾಡುವ, ಥ್ಯಾಂಕ್ಸ್‌ಗಿವಿಂಗ್‌, ಕ್ರಿಸ್‌ಮಸ್‌ಗೆ, ಯುಗಾದಿ, ದೀಪಾವಳಿಗೆ ಅಮ್ಮನಿಂದ ಎಣ್ಣೆನೀರು ಹಾಕಿಸ್ಕೊಳ್ಳುವ ವಿಶ್ವೇಶ್ವರ ತೀರ್ಥ, ವಿಶೂ ಎರಡೂ ಆಗಿ ಉಳಿದೂ ಆತನ ಪ್ರೇಮಿಯಾಗಬಲ್ಲೆ ಎಂದು ಹೇಗೆ ಸ್ಪಷ್ಟಪಡಿಸುವುದು?

ಸುಪ್ರೀತ ಮಾತಾಡುತ್ತಲೇ ಇದ್ದ. ‘ವಿಶೂ, ನಾವಿಬ್ಬರೂ ಒಂದು ಸಂಬಂಧದಲ್ಲಿದ್ದೀವಿ ಅಂತ ನನಗೆ ಸ್ಪಷ್ಟವಾಗಬೇಕು. ಐ ಡೋಂಟ್ ವಾಂಟ್ ಟು ಬಿ ಯುವರ್ ಬಿಚ್. ಅಥವಾ ನಿನಗೆ ಬೇಸರವಾದಾಗ ಬಿಸಿಯಪ್ಪುಗೆಯಿಂದ ನಿನಗೆ ಸಾಂತ್ವನ ಕೊಡುವ ಬರೀ ದೇಹ ನಾನಾಗಲಾರೆ.’

‘ಸುಪ್ರೀತ್, ನಾನು ಬಹಳ ವಲ್ನರಬಲ್ ಸ್ಥಿತಿಯಲ್ಲಿದ್ದೀನಿ. ಈಗ ನಿನ್ನ ಕಳಕೋಬಾರದು ಅಂತ ಏನೇನೋ ಮನಸ್ಸಿನಲ್ಲಿಲ್ಲದ್ದು ಹೇಳಿದರೆ ಅದು ನಿಜ ಅಂತ ನಂಬುತ್ತೀಯಾ?’

‘ನೋ ವಿಶೂ, ನನಗೆ ಒಂದು ಸಣ್ಣ ಕಮಿಟ್‌ಮೆಂಟ್ ಸಾಕು. ಮದುವೆ ಮಾಡಿಕೋಬೇಕು ಅನ್ನೋ ಅಷ್ಟು ದೊಡ್ಡದಲ್ಲದಿದ್ದರೂ ಅರ್ಥವಿಲ್ಲದ ಸೆಕ್ಸಿಗಿಂತ ಕೊಂಚ ಜಾಸ್ತಿ ಅನ್ನೋ ಅಷ್ಟು. ಮತ್ತೆ ಮೊದಲಿಂದ ನಾನು ಸಂಬಂಧಗಳನ್ನು ಹುಡುಕಿಕೊಂಡು ಹೋಗಲಾರೆ.’ ಬಿಡಲಾರೆ ಎನ್ನುವಹಾಗೆ ಗಟ್ಟಿಯಾಗಿ ಅಪ್ಪಿಕೊಂಡ. ಆತನ ಕಣ್ಣಲ್ಲಿಯೂ ನೀರು ತುಂಬಿತ್ತು.

‘ಸುಪ್ರೀತ್.. ಐ ಲವ್ ಯು. ಅದು ನಿಜ. ಸ್ವಲ್ಪ ತಾಳ್ಮೆ ಇಟ್ಟುಕೋ.. ಎಲ್ಲ ಸರಿ ಹೋಗುತ್ತೆ.’ ಬೆನ್ನು ನೀವುತ್ತಾ ಹೇಳಿದ, ವಿಶೂ.

ಸುಕನ್ಯ ‘ವಿಶೂ ಎಲ್ಲಿ ಹೋಗಿದ್ದೀಯ. ಬೇಗ ಬಾ, ಕೊಂಚ ಎಮೆರ್ಜೆನ್ಸಿ. ಅಲಿಶಾಗೆ ಏನೋ ಆಗಿದೆ’ ಎಂದು ಮೇಲಿನಿಂದ ಕೂಗಿದಳು.
ವಿಶೂ ಧಡಕ್ಕನೆ ಹಾಸಿಗೆಯಿಂದ ಎದ್ದು ಟಿ ಶರಟನ್ನು ಹಾಕಿಕೊಂಡು ಮೇಲೆ ಹೊರಟ. ಅವನ ಹಿಂದೆ ಸುಪ್ರೀತನೂ ಹೊರಟಾಗ ವಿಶೂ ಆತನಿಗೆ ಕೈಮುಗಿದು ಕೆಳಗೆ ರೂಮಿನಲ್ಲಿಯೇ ಇರುವಂತೆ ಸಂಜ್ಞೆ ಮಾಡಿದ.

ಸುಪ್ರೀತನಿಗೆ ಮೈಯುರಿದು ಹೋಯಿತು. ‘ಗೋ, ಫಕ್ ಯುವರ್ಸೆಲ್ಫ್’ ಎಂದು ಹಾಸಿಗೆಯ ಮೇಲೆ ಧಪ್ ಎಂದು ಅಡ್ಡಾದ.

ಯಾಕೋ ಸುಪ್ರೀತನ ಸಾನ್ನಿಧ್ಯ ಬೇಕೆನ್ನಿಸಿತು. ಪಾಪ, ಆತನಿಗೆ ಈ ವಾರಾಂತ್ಯ ಒಂದು ಖುಶಿಯಾದ, ಮೋಜಿನ ಅನುಭವವಾಗಿದ್ದಿರಬೇಕಿತ್ತು. ಎಲ್ಲ ಬಿಟ್ಟು ತಮ್ಮ ಜಂಜಡದಲ್ಲಿ ಆತನನ್ನು ಸಿಗಿಹಾಕಿಸಿದ್ದಾಯಿತು. ಏನಂದುಕೊಂಡಿದ್ದಾನೋ ಏನೋ, ಹೋಗಿ ಮಾತಾಡಿಸಿಕೊಂಡು ಬಂದುಬಿಡೋಣ ಎಂದು ಎದ್ದು ನಿಧಾನವಾಗಿ ಬೇಸ್‌ಮೆಂಟಿಗೆ ಬಂದ. ಸುಪ್ರೀತ ತನ್ನ ಐಪಾಡನ್ನು ಕಿವಿಗೆ ಸಿಕ್ಕಿಸಿ ಕಣ್ಣು ಮುಚ್ಚಿ ಯಾವುದೋ ಹಾಡು ಕೇಳುತ್ತಿದ್ದ.

ವಿಶೂ ಮೇಲೆ ಹೋದಾಗ ವಿನಯ ಎತ್ತರದ ಧ್ವನಿಯಲ್ಲಿ ಆ್ಯಂಬುಲೆನ್ಸ್‌ನವರೊಂದಿಗೆ ಮಾತಾಡುತ್ತಿದ್ದ. ಆ್ಯಂಬುಲೆನ್ಸ್ ಬರುವುದಕ್ಕೆ ಹತ್ತು ನಿಮಿಷವಾಗುತ್ತಂತೆ. ಫೋನಿನಲ್ಲಿ ವಿನಯನ ಜತೆ ಮಾತಾಡುತ್ತಿದ್ದವನು ಅಲಿಶಾ ಉಸಿರಾಡುತ್ತಿದ್ದಾಳಾ? ಆಕೆ ಮಾತಾಡುತ್ತಿದ್ದಾಳಾ? ಮೂವತ್ತು ಸೆಕಂಡುಗಳ ಕಾಲ ಆಕೆಯ ಉಸಿರಾಟ ಮತ್ತು ನಾಡಿಬಡಿತ ನೋಡಿ ಹೇಳು ಎಂದು ಅವನ ಪ್ರೋಟೊಕಾಲಿನಲ್ಲಿದ್ದಂತೆ ವಿನಯನಿಗೆ ಹೇಳುತ್ತಿದ್ದ. ವಿನಯ ‘ನಾನೂ ಒಬ್ಬ ಡಾಕ್ಟರು. ನನ್ನ ಹೆಂಡತಿಯೂ ಡಾಕ್ಟರು. ಅವಳಿಗೇನೂ ಆಗಿಲ್ಲ. ಅವಳಿಗೆ ತಕ್ಷಣ ಹೆರಿಗೆಯಾಗಬೇಕು. ನೀನು ತಕ್ಷಣ ಆ್ಯಂಬುಲೆನ್ಸ್ ಕಳಿಸಲಿಲ್ಲ ಎಂದರೆ ನಾನೇ ಡ್ರೈವ್ ಮಾಡಿಕೊಂಡು ಆಸ್ಪತ್ರೆಗೆ ಹೋಗುತ್ತೇನೆ’ ಎಂದು ಕೂಗಾಡುತ್ತಿದ್ದ. ಆತನ ಧ್ವನಿಯಲ್ಲಿ ಆತಂಕ ಎದ್ದು ಕಾಣುತ್ತಿತ್ತು.

ಅಲಿಶಾ ಅಲ್ಲಿಯೇ ಸೋಫಾದ ಮೇಲೆ ಬಿಳುಚಿಕೊಂಡು ಮಲಗಿದ್ದಳು. ಸುಕನ್ಯಾ ಅವಳ ತಲೆದೆಸೆಯಲ್ಲಿ ಕೂತು ಆಕೆಯ ತಲೆ ಸವರುತ್ತಿದ್ದಳು. ಅರವಿಂದ ವಿನಯನನ್ನೇ ನೋಡುತ್ತಾ ಆತನಿಗೆ ಏನಾದರೂ ಸಹಾಯ ಮಾಡಬೇಕೊ ಬೇಡವೋ ಗೊತ್ತಾಗದೇ ಕಕ್ಕಾಬಿಕ್ಕಿಯಾಗಿ ನಿಂತಿದ್ದ. ವಿಶೂ ಕೂಡ ಸುಮ್ಮನೆ ಅಪ್ಪನ ಬಳಿ ಬಂದು ನಿಂತ.

ವಿನಯ ಫೋನಿನಲ್ಲಿ ಮಾತಾಡಿದ್ದನ್ನು ಕೇಳಿಸಿಕೊಂಡ ವಿಶೂಗೆ ಗೊತ್ತಾದದ್ದು ಅಲಿಶಾಳಿಗೆ ಊಟ ಮುಗಿಸಿಕೊಂಡು ಬಂದ ತಕ್ಷಣ ಸಣ್ಣಗೆ ನೋವು ಶುರುವಾಗಿದ್ದು ಕ್ರಮೇಣ ಜಾಸ್ತಿಯಾಗುತ್ತಾ ಹೋಯಿತು. ಪದೇ ಪದೇ ಬಾತ್‌ರೂಮಿಗೆ ಹೋಗಬೇಕು ಎಂದನಿಸಿತ್ತು. ಬಾತ್‌ರೂಮಿನಲ್ಲಿ ನೀರು ಒಡಕೊಂಡಿತ್ತಂತೆ, ನಂತರ ಕೊಂಚ ರಕ್ತಸ್ರಾವವಾಗಿ ಮಗುವಿನ ಚಲನೆ ಏಕ್‌ದಂ ನಿಂತಂತೆ ಅನಿಸಿ, ಗಾಬರಿಯಾಗಿ ವಿನಯನನ್ನು ಎಬ್ಬಿಸಿದ್ದಳು. ವಿನಯ ಯಾವುದಕ್ಕೂ ತಡಮಾಡಬಾರದೆಂದು ತಕ್ಷಣ ಆ್ಯಂಬುಲೆನ್ಸನ್ನು ಕರೆದಿದ್ದ.

ಹತ್ತು ನಿಮಿಷದ ನಂತರ ಸುಪ್ರೀತನೂ ಮೇಲೆ ಬಂದು ವಿಶೂ ಮುಖ ನೋಡಿದಾಗ, ವಿಶೂ ಸುಮ್ಮನಿರು ಎಂದು ಸಂಜ್ಞೆ ಮಾಡಿದ. ಏನೋ ಸರಿ ಇಲ್ಲ ಎಂದನಿಸಿದ ಸುಪ್ರೀತ ಏನೂ ಮಾತಾಡದೇ ಅಲ್ಲಿಯೇ ಒಂದು ಖುರ್ಚಿಯ ಮೇಲೆ ಕೂತ.

ಸುಕನ್ಯಾ ಅಲಿಶಾಳನ್ನು ಸಮಾಧಾನಮಾಡಲು ಪ್ರಯತ್ನಿಸುತ್ತಿದ್ದಳು. ‘ಏನೂ ಆಗಲ್ಲ, ಅಲಿಶಾ. ಈ ದಿನಗಳಲ್ಲಿ ವಾರಗಳಲ್ಲಿ ಇಂಥಾವೆಲ್ಲ ಬಹಳ ಸಾಮಾನ್ಯ. ಎಲ್ಲರಿಗೂ ಆಗತ್ತೆ. ನೀನು ಡಾಕ್ಟರಾಗಿ ನೀನೇ ಇಷ್ಟು ಹೆದರಿದರೆ ಹೇಗೆ?’ ಎಷ್ಟೇ ಸಮಾಧಾನಪಡಿಸಿದರೂ ಮಾತು ಮುಂದುವರೆಯಲಿಲ್ಲ. ಅಲಿಶಾಳ ಕೈ ಯಾಕೋ ತಣ್ಣಗಿದೆ ಎಂದನಿಸಿ ಕೈಯನ್ನು ತನ್ನ ಕೈಯಲ್ಲಿ ಇಟ್ಟು ಉಜ್ಜಿದಳು. ಅಲಿಶಾ ‘ನೀರು, ನೀರು’ ಎಂದಳು.

ಅರವಿಂದ ಅಲ್ಲಿಯೇ ಇದ್ದ ನೀರಿನ ಬಾಟಲನ್ನು ಸುಕನ್ಯಾಳಿಗೆ ಕೊಟ್ಟ. ಸುಕನ್ಯಾ ನೀರಿನ ಬಾಟಲಿನ ಮುಚ್ಚಳವನ್ನು ತೆಗೆಯುವಷ್ಟರಲ್ಲಿ ವಿನಯ ಫೋನಿನಲ್ಲಿ ಮಾತಾಡುತ್ತಿದ್ದವನು ಅಲ್ಲಿಗೆ ಓಡಿ ಬಂದು ‘ಅಮ್ಮ, ಏನು ಮಾಡ್ತಾ ಇದೀಯ? ಅಲಿಶಾ ನಿನಗೂ ಗೊತ್ತಾಗಲ್ವಾ? ಎಮರ್ಜನ್ಸಿ ಸಿಸೇರಿಯನ್ ಸೆಕ್ಷನ್ ಆಗಬೇಕೂ ಅಂತಾದ್ರೆ ಯಾವನಾದರೂ ಅನೆಸ್ತಿಟಿಸ್ಟ್ ನೀನು ಈಗ ನೀರು ಕುಡಿದಿದ್ದೀಯ, ಹೊಟ್ಟೆ ಖಾಲಿ ಇಲ್ಲ ಅಂತ ಸರ್ಜರಿ ಮುಂದಕ್ಕೆ ಹಾಕಿದರೆ ಏನು ಮಾಡುವುದು?’ ಎಂದು ನೀರಿನ ಬಾಟಲನ್ನು ಕಸಿದುಕೊಂಡೇ ಬಿಟ್ಟ.

ಅಲಿಶಾ ಆ ನೋವಿನಲ್ಲಿಯೂ ‘ವಿನಯ್, ಸ್ವಲ್ಪ ಸಮಾಧಾನದಿಂದ ಇರು. ಏನಾಗಬೇಕೋ ಅದನ್ನು ತಪ್ಪಿಸೋಕೆ ಯಾರಕೈಲೂ ಆಗಲ್ಲ.’ ಎಂದು ನಾಲಿಗೆಯಿಂದ ತುಟಿ ಸವರಿಕೊಂಡಳು.

‘ಈ ಜನಕ್ಕೆ ಎಮರ್ಜೆನ್ಸಿ ಅಂದರೆ ಏನು ಅಂತ ಗೊತ್ತಾಗೊಲ್ಲ. ನಾವಿರೋದು ಅಮೆರಿಕಾ. ಇಡೀ ಪ್ರಪಂಚಕ್ಕೇ ಮಾದರಿಯಾಗಿರಬೇಕು ನಮ್ಮ ದೇಶದ ಹೆಲ್ತ್ ಕೇರು. ಸರಿಯಾಗಿ ಒಂದು ಆ್ಯಂಬುಲೆನ್ಸೂ ಸಿಗಲ್ಲ’ ತಕಪಕ ಕುಣಿಯುತ್ತಿದ್ದ ವಿನಯನನ್ನು ನೋಡಿ ಸುಕನ್ಯಾ ‘ವಿನಯ, ಒಂದೇ ಒಂದು ನಿಮಿಷ ಬಾ ಇಲ್ಲಿ ಕೂತುಕೋ. ನಾನೀಗ ಬರ್ತೀನಿ’ ಎಂದು ಸೀದಾ ದೇವರ ಮನೆಗೆ ಹೋಗಿ ದೇವರಿಗೊಂದು ದೀಪ ಹಚ್ಚಿಟ್ಟು, ಅಕ್ಷತೆ ಕಾಳು ತೆಗೆದುಕೊಳ್ಳಲು ಹೋದಳು. ಪಂಚವಾಳ ಮುಟ್ಟುವಾಗ ತಾನು ಆ ರಾತ್ರಿ ವೈನು ಕುಡಿದಿರುವುದು ನೆನಪಿಗೆ ಬಂದು ಒಂದು ಕ್ಷಣ ಹಿಂದೆಗೆಯಾದರೂ ‘ರಾಘವೇಂದ್ರಾ, ನೀನೇ ಕಾಪಾಡಪ್ಪ’ ಎಂದು ಧೈರ್ಯ ಮಾಡಿ ತಂದು, ವಿನಯನ ಜೇಬಿನಲ್ಲಿಟ್ಟಳು.

ಒಂದೇ ಒಂದು ನಿಮಿಷದ ನಂತರ ಆ್ಯಂಬುಲೆನ್ಸು ಬಂತು. ವಿನಯ, ಅಲಿಶಾ ಇಬ್ಬರೂ ಆ್ಯಂಬುಲೆನ್ಸಿನಲ್ಲಿ ಹೊರಟರು. ಪ್ಯಾರಾ ಮೆಡಿಕ್‌ಗಳ ಜತೆಗೆ ತಡವಾದುದರಿಂದ ಹಿಡಿದು, ಡ್ರಿಪ್ ಶುರು ಮಾಡುವುದರ ತನಕ ಪ್ರತಿಯೊಂದಕ್ಕೂ ಕಿರಿಕಿರಿ ಮಾಡಿಕೊಂಡೇ ಆ್ಯಂಬುಲೆನ್ಸ್ ಹತ್ತಿದ, ವಿನಯ.

ಅರವಿಂದ, ಸುಕನ್ಯಾ ಕಾರಿನಲ್ಲಿ ಹಿಂಬಾಲಿಸಿದರು. ವಿಶೂ, ಸುಪ್ರೀತ ಹಿಂದೆಯೇ ಇನ್ನೊಂದು ಕಾರಿನಲ್ಲಿ ಬರುತ್ತೀವಿ ಎಂದು ಬಟ್ಟೆ ಬದಲಿಸಿಕೊಂಡು ಬರಲು ಹೋದರು. ಅಂಥ ಅವಸರದಲ್ಲಿಯೂ ಸುಪ್ರೀತ ಬೇಸ್‌ಮೆಂಟಿಗೆ ಹೋದಾಗ ಅವನನ್ನು ವಿಶೂ ಹಿಂಬಾಲಿಸುತ್ತಾನಾ ಎಂದು ಒಮ್ಮೆ ಸೂಕ್ಷ್ಮವಾಗಿ ಗಮನಿಸಿ ನೋಡಿದಳು, ಸುಕನ್ಯಾ. ಅರವಿಂದ ಆಕೆಯ ತೋಳು ತಟ್ಟಿ, ಹೊರಡೋಣ ಎಂದು ಸಂಜ್ಞೆ ಮಾಡಿದ.

ಅರವಿಂದ ಕಾರನ್ನು ಮೌನವಾಗಿ ಡ್ರೈವ್ ಮಾಡುತ್ತಿದ್ದ. ಸುಕನ್ಯಾ ಕಾರಿನ ಸೀಟನ್ನು ಹಾಗೆಯೇ ಹಿಂದೆ ಮಾಡಿ ಕಣ್ಣು ಮುಚ್ಚಿದಳು.

‘ಏನಾದರೂ ಮಾತಾಡು, ಸೂ. ಇಲ್ಲದಿದ್ದರೆ ನಾನೇನೋ ತಪ್ಪು ಮಾಡಿದೀನಿ ಅನ್ನಿಸುತ್ತೆ, ನನಗೆ.’ ಅರವಿಂದ ಕೇಳಿಕೊಂಡ.

‘ನಿಮಗ್ಯಾಕೆ ತಪ್ಪು ಮಾಡಿದ್ದೀನಿ ಅನ್ನಿಸಬೇಕ್ರೀ?’ ಕೇಳಿದಳು, ಸುಕನ್ಯಾ.

‘ನಾನು ಊರಿಗೆ ಹೋಗೋ ವಿಷಯ ಹೇಳಿದ್ನಲ್ಲ. ಆ ಶಾಕಿನಿಂದ ಈಕೆಗೆ ಏನಾದರೂ ಹಿಂಗಾಯಿತಾ?’

‘ನಿಮ್ಮ ತಲೆ. ಏನೇನೋ ಊಹೆ ಮಾಡ್ಕೊಬೇಡ್ರೀ. ರಸ್ತೆ ನೋಡಿಕೊಂಡು ಡ್ರೈವ್ ಮಾಡಿ. ನಾನು ರತ್ನಂಗೆ ಒಂದು ಫೋನು ಮಾಡಿ ಬೆಳಿಗ್ಗೆ ತಿಂಡಿ ಮಾಡಬೇಡ ಅಂತ ಹೇಳ್ತೀನಿ’ ಎಂದು ಮನೆಗೆ ಫೋನು ಡಯಲ್ ಮಾಡಿದಳು.

‘ಈ ಹೆಂಗಸರ ಬುದ್ಧೀನೇ ಅರ್ಥ ಆಗಲ್ಲ. ಈ ಸಮಯದಲ್ಲಿಯೂ ನಿನಗೆ ನಾಳೆ ಬೆಳಿಗ್ಗೆ ತಿಂಡಿ ಯೋಚನೇನಾ. ನಾಳೆ ತಿಂಡಿ ಮಾಡಿದ್ರೆ ಮಾಡತಾಳೆ, ಬಿಡು. ಇಷ್ಟೊತ್ತಲ್ಲಿ ಆಕೇನ ಯಾಕೆ ಎಬ್ಬಿಸ್ತೀಯ’

‘ಅಯ್ಯೋ ನಿಮಗೆ ಗೊತ್ತಾಗೊಲ್ಲ. ಓವನ್ ಅಲ್ಲಿ ದೋಸೆ ಹಿಟ್ಟಿಟ್ಟಿದೀನಿ. ಈ ಚಳೀಗೆ ಹುದುಗು ಬರಲ್ಲ ಅಂತ ಓವನ್ ಆನ್ ಮಾಡಿದೀನಿ. ದೋಸೆಹಿಟ್ಟನ್ನು ಬೆಳಗಿನ ಜಾವ ಓವನ್ನಿಂದ ತೆಗೆದು ಹೊರಗಿಡಲಿಲ್ಲ ಅಂದರೆ ದೋಸೆ ಹಿಟ್ಟು ಉಕ್ಕಿ ರಂಪ ಆಗುತ್ತೆ. ನಾಳೆ ನಾವು ಬರೋದು ಎಷ್ಟು ಹೊತ್ತಾಗುತ್ತೋ. ವಿನಯ ಹೇಳಿದ ಹಾಗೆ ಈಗಲೇ ಡೆಲಿವರಿ ಮಾಡೇ ಬಿಡ್ತಾರೇನ್ರೀ.. ನೀರೊಡಕೊಂಡಿದೆ ಅಂದರೆ ಮಾಡಲೇ ಬೇಕು.’ ಪ್ರಶ್ನೆ, ಉತ್ತರ ಎರಡನ್ನೂ ಆಕೆಯೇ ಕೊಟ್ಟುಕೊಂಡಳು.

ಅರವಿಂದ, ಸುಕನ್ಯಾ ಅಸ್ಪತ್ರೆ ಸೇರುವ ಹೊತ್ತಿಗೆ ಸುಪ್ರೀತ, ವಿಶೂ ತಲುಪಿದ್ದರು. ವಿಶೂ ‘ಅಮ್ಮ, ಅಲಿಶಾಳನ್ನು ಎಮೆರ್ಜೆನ್ಸಿ ಸಿಸೇರಿಯನ್‌ಗೆ ಕರಕೊಂಡು ಹೋಗಿದಾರೆ. ಮಗೂ ಹೃದಯದ ಬಡಿತದಲ್ಲಿ ಏರುಪೇರಾಗುತ್ತಿತ್ತಂತೆ. ನೀವ್ಯಾಕೆ ಇನ್ನೂ ಬಂದಿಲ್ಲಾಂತ ವಿನಯ ಕೂಗಾಡುತ್ತಿದ್ದ. ಅವನೂ ಒಳಗೆ ಹೋಗಿದಾನೆ. ಇನ್ನೇನು ಅರ್ಧಗಂಟೆಯೊಳಗೆ ಎಲ್ಲ ಸರಿಹೋಗಬಹುದು. ನಾನು ಡಾಕ್ಟರನ್ನು ಕೇಳಿದೆ, ಕಂಡಿಶನ್ ಹೇಗೆ ಅಂತ. ಅವರು ‘ಹೆದರಿಕೊಳ್ಳೋಕೆ ಕಾರಣಾನೇ ಇಲ್ಲ’ ಎಂದು ನಕ್ಕುಬಿಟ್ಟರು. ಈ ವಿನಯಾನೂ ಕೆಲವೊಮ್ಮೆ ಸುಮ್ಮನೆ ಹಾರಾಡ್ತಾನೆ. ತಾನೂ ಟೆನ್ಷನ್ ತಗೋಳೋ ಜತೆ ಉಳದವ್ರಿಗೂ ಕೈಕಾಲು ಆಡದ ಹಾಗೆ ಮಾಡಿಬಿಡ್ತಾನೆ’ ಎಂದ.

ಸುಕನ್ಯಾಗೆ ಏನೂ ಮಾತನಾಡಲು ಗೊತ್ತಾಗಲಿಲ್ಲ. ಆಸ್ಪತ್ರೆಗೆ ಬರುವ ತನಕ ಅಲಿಶಾಗೆ ಇಂದೇ ಹೆರಿಗೆ ಆಗುವುದು ಖಚಿತ ಎಂದು ಅನಿಸುತ್ತಿದ್ದರೂ ಮನಸ್ಸು ಅಸ್ಪತ್ರೆಗೆ ಬಂದ ತಕ್ಷಣ ಡಾಕ್ಟರುಗಳು ‘ಇದು ಫಾಲ್ಸ್ ಲೇಬರು’ಎಂದು ಮನೆಗೆ ಕಳಿಸುತ್ತಾರೆ ಎಂದೇ ಬಯಸುತ್ತಿತ್ತು. ಡಿಸೆಂಬರ್ ಇಪ್ಪತ್ತಕ್ಕೆ ದಿನ ಅಂದರೆ ಇವತ್ತು ನವಂಬರ್ ಹದಿನೆಂಟು ದಾಟಿ ಹತ್ತೊಂಬತ್ತು. ಅಂದರೆ ಮಗೂ ಅಬ್ಬಬ್ಬ ಅಂದರೆ ಐದು ವಾರ ಮುಂಚೆ ಹುಟ್ಟಿದ ಹಾಗೆ ಲೆಕ್ಕ. ಈಗಿನ ಕಾಲದಲ್ಲಿ ಐದುವಾರ ಮುಂಚೆ ಹುಟ್ಟಿದರೆ ಪ್ರಿಮೆಚ್ಯುರ್ ಅಂಥಾನೂ ಅನ್ನಲ್ಲ, ಅನ್ನಿಸುತ್ತೆ. ಇವತ್ತು ಚೌತಿ, ಮಗೂ ವೃಶ್ಚಿಕ ರಾಶಿ… ಅರವಿಂದನ ಫೋನಿನಲ್ಲಿ ಕ್ಯಾಲೆಂಡರ್ ನೋಡತೊಡಗಿದಳು… ಸದ್ಯ ಮನೇಲಿದ್ದಾಗಲೇ ಆಯಿತಲ್ಲ, ಇದು. ಇನ್ನೆರಡು ದಿನ ಬಿಟ್ಟು ಏರೋಪ್ಲೇನಿನಲ್ಲಿ ಆಗಿದ್ದರೆ… ವಿನಯ ಪ್ಲಾನು ಮಾಡಿದ್ದೇ ಮಾಡಿದ್ದು, ಆ ಮಗೂ ಹಣೇಲಿ ಇಲ್ಲಿ ಮಿನಿಯಾಪೊಲಿಸ್‌ನಲ್ಲಿ ಅವರಜ್ಜೀ ಮನೇಲೇ ಹುಟ್ಟಬೇಕೂಂತ ಇತ್ತು.. ಒಂತರಾ ಒಳ್ಳೇದೇ ಆಯಿತು.. ಎಲ್ಲರೂ ಜತೆಗೇ ಇದೀವಿ.. ಒಟ್ಟು ಮಗೂ ಚೆನ್ನಾಗಿದ್ದುಬಿಟ್ಟರೆ ಸರಿ ಅಷ್ಟೇ..

ಕಣ್ಣೆಳೆದುಕೊಂಡು ಹೋದ ಹಾಗೆನ್ನಿಸಿತು. ಹಾಗೆಯೇ ಅರವಿಂದನ ಪಕ್ಕದಲ್ಲಿದ್ದ ರಿಕ್ಲೈನರ್ನಲ್ಲಿ ಅಡ್ಡಾದಳು.

ಅಲಿಶಾ ಇನ್ನು ಸ್ವಲ್ಪ ದಿನ ಇಲ್ಲಿಯೇ ಇರಬೇಕಾಗುತ್ತದೆ. ವಿನಯನೂ ಒಂದು ವಾರ ರಜಾ ಹಾಕಬಹುದೇನೋ? ಆಮೇಲೆ ಕೆಲಸಕ್ಕೆ ಹೋಗಲೇಬೇಕು. ಅಲಿಶಾನ ಇಲ್ಲಿಯೇ ಬಿಟ್ಟು ಹೋಗುತ್ತಾನೋ? ಇಲ್ಲಿ ನಮ್ಮನೆಯಲ್ಲಿ ಪಾಪೂಗೇಂತ ನಾವು ಒಂದೇ ಒಂದು ರೂಮನ್ನೂ ಸಜ್ಜು ಮಾಡಿಲ್ಲ. ಇಲ್ಲಿ ಹೆರಿಗೆ ಆಗುವ ಸಂಭವವೇ ಇಲ್ಲದಿದ್ದಾಗ ಹೇಗೆ ರೂಮು ಸಜ್ಜು ಮಾಡುವುದು? ಮೇಲಿನ ಗೆಸ್ಟ್ ರೂಮಲ್ಲೇ ಸದ್ಯಕ್ಕೆ ಅನುಸರಿಸಿಕೋ ಅನ್ನುವುದು. ಇಲ್ಲದಿದ್ದರೆ ಬೇಸ್‍ಮೆಂಟಿನಲ್ಲಿ? ಇಲ್ಲ.. ಬಾಣಂತಿ, ಕೆಳಗೇ ಮೇಲೆ ಹತ್ತೋದು ಕಷ್ಟ ಆಗುತ್ತದೆ. ಮೇನ್ ಫ್ಲೋರಲ್ಲಿನ ರೂಮುಗಳಲ್ಲಿಯೇ ಒಂದನ್ನು ರೆಡಿ ಮಾಡೋಣ. ಕೊಂಚ ಬೆಳಕಾಗಲಿ, ರತ್ನಂಗೆ ಫೋನು ಮಾಡಿ ಹೇಳಿ ಒಂದು ಸಣ್ಣ ಕ್ರಿಬ್ಬು ತರಿಸಿಡಬೇಕು.

ಅಲಿಶಾ ಇಲ್ಲಿ ಏನು ಮೂರು ನಾಲ್ಕು ತಿಂಗಳಿರ್ತಾಳಾ? ಹೆಚ್ಚೆಂದರೆ ಹದಿನೈದು ದಿನ ಅಥವಾ ಒಂದು ತಿಂಗಳು. ಆಮೇಲೆ ನಾನೇ ಹೋಗಬೇಕು.

ಶಾರದತ್ತೆಗೆ ಫೋನು ಮಾಡಿ ಹೇಳಬೇಕು, ಈಗ ತಕ್ಷಣಕ್ಕೆ ಬರೋಕಾಗಲ್ಲ ಅಂತ. ರತ್ನನ್ನ ಶಾರದತ್ತೆ ಹತ್ರ ಇದ್ದು ಬಾ ಎಂದು ಕಳಿಸಿದರೆ ಹೇಗೆ? ಬೇಡ. ಆಕೆ ತನಗೆ ಇಲ್ಲಿ ಜೊತೆಗಿರೋಕ್ಕೆ ಬೇಕಾಗುತ್ತೆ.

ಅರವಿಂದನ ರಮಾನಂದಾಶ್ರಮದ ಪ್ಲಾನು ಏನಾಗುತ್ತೋ?

(ಮುಂದುವರೆಯುವುದು…)