‘ದಿ ವೈಟ್ ಕ್ಯಾಸಲ್’ ಕಾದಂಬರಿ ಟರ್ಕಿಯ ಆಟಮನ್ ಸಾಮ್ರಾಜ್ಯದಲ್ಲಿ ಗುಲಾಮನಾಗಿರುವ ಇಟಲಿ ದೇಶದ ವಿದ್ಯಾರ್ಥಿಯೊಬ್ಬನ ಪ್ರವರ. ಇದು ಹದಿನೇಳನೆಯ ಶತಮಾನದ ಕತೆ. ಇಟಲಿಯ ವೆನಿಸ್ ನಗರದಿಂದ ನೇಪಲ್ಸ್ ನಗರಕ್ಕೆ ಹಡಗಿನಲ್ಲಿ ಪ್ರಯಾಣಿಸುತ್ತಿದ್ದಾಗ ಈತ ಟರ್ಕರ ಸೈನ್ಯಕ್ಕೆ ಸೆರೆ ಸಿಕ್ಕವನು. ಜೀವ ಹೋದರೂ ತಾನು ಹುಟ್ಟಿದ ಕ್ರಿಶ್ಚಿಯನ್ ಧರ್ಮವನ್ನು ಬಿಡಲಾರೆ ಎಂಬ ಪಣ ತೊಟ್ಟವನು. ತೊಟ್ಟ ಪಣವನ್ನು ಕಾಯ್ದುಕೊಳ್ಳುವುದು ಸುಲಭವೇ? ‘ಕಾವ್ಯಾ ಓದಿದ ಹೊತ್ತಿಗೆ’ಅಂಕಣದಲ್ಲಿ ಪಮುಕ್ ಕಾದಂಬರಿ ಕುರಿತು ಕಾವ್ಯಾ ಕಡಮೆ ಬರೆದಿದ್ದಾರೆ.

ಒರ್ಹಾನ್ ಪಮುಕ್ರ ‘ದಿ ವೈಟ್ ಕ್ಯಾಸಲ್ ಕಾದಂಬರಿ 1990ರಲ್ಲಿ ಮೊದಲ ಬಾರಿ ಇಂಗ್ಲೀಷಿನಲ್ಲಿ ಪ್ರಕಟವಾದಾಗ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಅವರ ಬಗ್ಗೆ A new star has risen in the east ಎಂದು ಮೆಚ್ಚಿ ಬರೆದಿತ್ತು. ‘ದಿ ವೈಟ್ ಕ್ಯಾಸಲ್ ಪಮುಕ್ರ ಮೂರನೆಯ ಕಾದಂಬರಿ. ಆದರೆ ಆ ಕಾಲಕ್ಕೆ ಇಂಗ್ಲೀಷಿನಲ್ಲಿ ಅನುವಾದಗೊಂಡ ಅವರ ಮೊದಲ ಕೃತಿಯಾಗಿತ್ತು. ಇಂಗ್ಲೀಷ್ ಭಾಷೆಯ ಮೂಲಕ ಇಡೀ ಜಗತ್ತಿನ ಸಾಹಿತ್ಯ ಲೋಕಕ್ಕೆ ಅವರನ್ನು ಪರಿಚಯಿಸಿದ ಕಾದಂಬರಿಯಿದು.

ಟರ್ಕಿ ದೇಶದ ಇಸ್ತಾಂಬುಲ್ ನಗರದ ಶ್ರೀಮಂತ ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದ ಒರ್ಹಾನ್ ಪಮುಕ್ ಚಿಕ್ಕ ವಯಸ್ಸಿನಲ್ಲಿಯೇ ಕಾದಂಬರಿಕಾರನಾಗುವ ಕನಸು ಕಂಡವರು. ಏನೇನೋ ಮಾಡಬಹುದಾದ ಜಗತ್ತಿನಲ್ಲಿ ಲೇಖಕನೊಬ್ಬ ಕಾದಂಬರಿ ಬರವಣಿಗೆಗೇ ತನ್ನನ್ನು ತಾನು ಏಕೆ ಕೊಟ್ಟುಕೊಳ್ಳುತ್ತಾನೆ ಎಂಬ ಪ್ರಶ್ನೆಯನ್ನು ಪ್ರಾಮಾಣಿಕವಾಗಿ ಕೇಳಿಕೊಂಡು ಅದಕ್ಕೆ ಉತ್ತರ ಹುಡುಕಲು ಪ್ರಯತ್ನಿಸಿದಂತೆ ಬರೆದವರು. ಪ್ರೊ ಓ.ಎಲ್. ನಾಗಭೂಷಣಸ್ವಾಮಿಯವರ ಅಪರೂಪದ ಅನುವಾದದೊಂದಿಗೆ ಅವರ ಎರಡು ಕೃತಿಗಳು ‘ಮುಗ್ಧ- ಪ್ರಬುದ್ಧ’, ‘ಕೆಂಪು ಮುಡಿಯ ಹೆಣ್ಣು’ಹೆಸರಿನಲ್ಲಿ ಕನ್ನಡಕ್ಕೂ ನಡೆದು ಬಂದಿವೆ.

‘ದಿ ವೈಟ್ ಕ್ಯಾಸಲ್’ ಕಾದಂಬರಿ ಟರ್ಕಿಯ ಆಟಮನ್ ಸಾಮ್ರಾಜ್ಯದಲ್ಲಿ ಗುಲಾಮನಾಗಿರುವ ಇಟಲಿ ದೇಶದ ವಿದ್ಯಾರ್ಥಿಯೊಬ್ಬನ ಪ್ರವರ. ಇದು ಹದಿನೇಳನೆಯ ಶತಮಾನದ ಕತೆ. ಇಟಲಿಯ ವೆನಿಸ್ ನಗರದಿಂದ ನೇಪಲ್ಸ್ ನಗರಕ್ಕೆ ಹಡಗಿನಲ್ಲಿ ಪ್ರಯಾಣಿಸುತ್ತಿದ್ದಾಗ ಈತ ಟರ್ಕರ ಸೈನ್ಯಕ್ಕೆ ಸೆರೆ ಸಿಕ್ಕವನು. ಜೀವ ಹೋದರೂ ತಾನು ಹುಟ್ಟಿದ ಕ್ರಿಶ್ಚಿಯನ್ ಧರ್ಮವನ್ನು ಬಿಡಲಾರೆ ಎಂಬ ಪಣ ತೊಟ್ಟವನು. ತನ್ನ ಜೊತೆ ಜೈಲಿನಲ್ಲಿ ಬಂಧಿಯಾದ ಇತರ ರೋಗಿಗಳಿಂದ ಹಿಡಿದು ಪಾಶಾನ ತನಕ ತನಗೆ ತಿಳಿದ ವೈದ್ಯಕೀಯ ಸೇವೆ ಸಲ್ಲಿಸುತ್ತ ಮುಂದೊಂದು ದಿನ ಸಿಗಲಿರುವ ಬಿಡುಗಡೆಯ ಕನಸಿನಲ್ಲಿ ಇದ್ದುದರಲ್ಲೇ ನೆಮ್ಮದಿ ಕಂಡುಕೊಳ್ಳಲು ಪ್ರಯತ್ನಿಸುತ್ತ ಇರುವಾತ. ತನ್ನ ನಾಡಿನ ವಿಶೇಷ ಪದ್ಧತಿಯಲ್ಲಿ ವೈದ್ಯವನ್ನು ಆಚರಿಸುತ್ತಾನಾದ್ದರಿಂದ ಅವನಿಗೆ ಸುತ್ತಲಿನವರ ಗೌರವವೂ, ವಿಶ್ವಾಸವೂ ದೊರಕಿದೆ.

ಟರ್ಕಿ ದೇಶದ ಇಸ್ತಾಂಬುಲ್ ನಗರದ ಶ್ರೀಮಂತ ಕುಟುಂಬವೊಂದರಲ್ಲಿ ಹುಟ್ಟಿ ಬೆಳೆದ ಒರ್ಹಾನ್ ಪಮುಕ್ ಚಿಕ್ಕ ವಯಸ್ಸಿನಲ್ಲಿಯೇ ಕಾದಂಬರಿಕಾರನಾಗುವ ಕನಸು ಕಂಡವರು. ಏನೇನೋ ಮಾಡಬಹುದಾದ ಜಗತ್ತಿನಲ್ಲಿ ಲೇಖಕನೊಬ್ಬ ಕಾದಂಬರಿ ಬರವಣಿಗೆಗೇ ತನ್ನನ್ನು ತಾನು ಏಕೆ ಕೊಟ್ಟುಕೊಳ್ಳುತ್ತಾನೆ ಎಂಬ ಪ್ರಶ್ನೆಯನ್ನು ಪ್ರಾಮಾಣಿಕವಾಗಿ ಕೇಳಿಕೊಂಡು ಅದಕ್ಕೆ ಉತ್ತರ ಹುಡುಕಲು ಪ್ರಯತ್ನಿಸಿದಂತೆ ಬರೆದವರು.

ಹೀಗಿರುವಾಗ ಈತನಿಗೆ ಪಾಶಾನಿಂದ ಕರೆ ಬರುತ್ತದೆ. ಕೋಣೆ ಹೊಕ್ಕಾಗ ಅಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಕಾಣುತ್ತಾನೆ. ಪಾಶಾ ಆತನನ್ನು “ಇವರು ಹೋಜಾ. ಈ ನಾಡಿನ ವಿದ್ವಾಂಸರು” ಎಂದು ಪರಿಚಯಿಸುತ್ತಾನೆ. ಕಾದಂಬರಿಯ ನಿರೂಪಕನಾದ ಈ ಗುಲಾಮನಿಗೆ ಹೋಜಾನನ್ನು ನೋಡಿ ಅತ್ಯಾಶ್ಚರ್ಯವಾಗುತ್ತದೆ. ಈ ಹೋಜಾ ತನ್ನದೇ ತದ್ರೂಪ ಎನ್ನುವುದು ಯಾರಿಗೂ, ಸ್ವತಃ ಹೋಜಾನಿಗೂ ಗೊತ್ತಾಗುತ್ತಿಲ್ಲವಲ್ಲ ಎಂದು ಯೋಚಿಸಿದ್ದಾನೆ.

ಹೋಜಾ ಮತ್ತು ಈ ಗುಲಾಮ (ಪುಸ್ತಕದಲ್ಲಿ ಅವನಿಗೊಂದು ನಾಮಧೇಯವಿಲ್ಲ) ಇಬ್ಬರೂ ಸೇರಿ ತಮ್ಮ ಪ್ರತಿಭೆಯಿಂದ ಪಾಶಾನ ಮಗನ ಮದುವೆಯ ಸಂದರ್ಭದಲ್ಲಿ ಪಟಾಕಿಗಳ ವರ್ಣಮಯ ಪ್ರದರ್ಶನವನ್ನು ಏರ್ಪಡಿಸಿ ಸೈ ಎನ್ನಿಸಿಕೊಳ್ಳುತ್ತಾರೆ. ಈ ಕಾರ್ಯ ಯಶಸ್ವಿಯಾಗಿ ನಡೆಸಿಕೊಟ್ಟರೆ ಗುಲಾಮಗಿರಿಯಿಂದ ಬಿಡುಗಡೆಗೊಳಿಸುವುದಾಗಿ ಪಾಶಾ ಪ್ರಮಾಣ ಮಾಡಿರುತ್ತಾನೆ. ‘ಪುನಃ ತನ್ನ ಮಾತೃಭೂಮಿಯಾದ ಇಟಲಿಗೆ ಹೋಗುತ್ತೇನೆ, ತನ್ನ ತಂದೆ- ತಾಯಿಯರನ್ನು, ಪ್ರೇಯಸಿಯನ್ನು ಸೇರುತ್ತೇನೆ’ ಎಂದೇ ಈತ ಕನಸು ಕಾಣತೊಡಗುತ್ತಾನೆ. ಪಟಾಕಿಗಳ ಯಶಸ್ವಿ ಪ್ರದರ್ಶನದ ನಂತರ ಪಾಶಾ ಹೇಳಿದ ಸ್ವಾತಂತ್ರ್ಯ ಸಿಗುವುದು ಹಿಂತಿರುಗುವುದಕ್ಕಲ್ಲ, ಬದಲಾಗಿ ಧರ್ಮ ಬದಲಿಸಿಕೊಂಡು ಇಲ್ಲಿಯೇ, ಇಸ್ತಾಂಬುಲ್ನಲ್ಲಿಯೇ ಇರಲು ಎಂಬುದು ಈತನಿಗೆ ಗೊತ್ತಾಗುತ್ತದೆ. ತನ್ನ ಹಿಂದಿನ ಧರ್ಮವನ್ನು ಬಿಟ್ಟುಕೊಡಲು ಒಪ್ಪದ ಈತನನ್ನು ಪಾಶಾ ಹೋಜಾನಿಗೆ ಬಹುಮಾನವಾಗಿ ಕೊಡುತ್ತಾನೆ. ಅಂದಿನಿಂದ ಇವನು ತನ್ನ ತದ್ರೂಪನಾದ ಹೋಜಾನ ಗುಲಾಮನಾಗುತ್ತಾನೆ.

ಹೋಜಾನ ಆಸಕ್ತಿಯ ವಿಷಯಗಳು ಹಲವು. ಬಾಹ್ಯಾಕಾಶದಿಂದ ತತ್ವಶಾಸ್ತ್ರದ ತನಕ ಅವನ ಆಸಕ್ತಿಯ ವಿಸ್ತೀರ್ಣ. ಈ ಗುಲಾಮನನ್ನು ಮೇಜಿನ ಮೇಲೆ ತನಗೆ ಎದುರಾಗಿ ಕೂರಿಸಿಕೊಂಡು ಆತನ ಪೂರ್ವಾಶ್ರಮದ ಕತೆಯನ್ನು ಅಧ್ಯಾಯಗಳಲ್ಲಿ ಬರೆಸಿಕೊಳ್ಳುತ್ತಾನೆ. ತಾನೂ ಕುಳಿತು ತನ್ನ ಜೀವನದ ಕತೆಯನ್ನು ಬರೆಯುತ್ತಾನೆ. ನಂತರ ಇಬ್ಬರೂ ಪರಸ್ಪರರ ಬರಹಗಳನ್ನು ಓದುವ ಪರಿಪಾಠವಿಟ್ಟುಕೊಂಡಿದ್ದಾರೆ. ಹಲವಾರು ವರ್ಷ ಕೋಣೆಯ ಏಕಾಂತದಲ್ಲಿ ಈ ಪ್ರಕ್ರಿಯೆ ನಡೆಯುತ್ತದೆ. ಒಬ್ಬರ ಬಗ್ಗೆ ಇನ್ನೊಬ್ಬರಿಗೆ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳೂ ಗೊತ್ತಾದಾಗ ನಿರೂಪಕನಿಗೆ ತನಗೊಂದು ವ್ಯಕ್ತಿತ್ವವೇ ಉಳಿದಿಲ್ಲವಲ್ಲ ಎಂದು ಸಂಕಟವಾಗುತ್ತದೆ. ಆದರೂ ಹೋಜಾ ಬಿಡುವುದಿಲ್ಲ. ತನ್ನ ದಾಸನ ವ್ಯಕ್ತಿತ್ವವನ್ನು ಧರಿಸಲು ಬೇಕಾದ ಮಾಹಿತಿಯನ್ನು ಸದ್ದಿಲ್ಲದೇ ಶೇಖರಿಸುತ್ತಾನೆ.

ಒಮ್ಮೆ ನಾಡಿನಲ್ಲಿ ಪ್ಲೇಗ್ ಹಾವಳಿ ಶುರುವಾಗಿ ಜನರಲ್ಲಿ ಸಾವು-ನೋವು ಮನೆ ಮಾಡಿದೆ. ಸೇವಕನಿಗೂ ತನ್ನ ಮಾತೃಭೂಮಿಗೆ ಮರಳದೇ ಎಲ್ಲಿ ಈ ಅಜ್ಞಾತ ನಾಡಿನಲ್ಲೇ ಸಾಯುತ್ತೇನೋ ಎಂದು ಭಯವಾಗಿದೆ. ಈ ಆತಂಕಕ್ಕೆ ನೀರೆರೆಯುವಂತೆ ಹೋಜಾ ಎಲ್ಲೆಲ್ಲೋ ಓಡಾಡಿಕೊಂಡು ಬಂದು ನಿರೂಪಕನಿಗೆ ಮಾನಸಿಕ ವ್ಯಾಧಿ ಕೊಡುತ್ತಾನೆ. ಯಾವುದೋ ಹುಳ ಕಚ್ಚಿ ಆದ ಗಾಯವನ್ನೇ ಪ್ಲೇಗ್ ಗಡ್ಡೆಯೆಂದು ಬಗೆದು ತನ್ನ ಬಟ್ಟೆಯನ್ನೆಲ್ಲ ಸೇವಕನಿಗೆ ತೊಡಿಸಿ ಸೇವಕನ ಬಟ್ಟೆಯನ್ನೂ, ವ್ಯಕ್ತಿತ್ವವನ್ನೂ ತಾನು ಧರಿಸಿ “ನೋಡು ಈಗ ಪ್ಲೇಗ್ನಿಂದ ಸಾಯೋದು ನೀನು, ಹೋಜಾ ಬದುಕಿರುತ್ತಾನೆ” ಎಂಬ ಮೈಂಡ್ ಗೇಮ್ಅನ್ನು ಸೇವಕನೊಂದಿಗೂ, ಓದುಗರೊಂದಿಗೂ ಆಡುತ್ತಾನೆ. ಸೇವಕನೂ ಇಂಚಿಂಚಾಗಿ ತನ್ನ ವ್ಯಕ್ತಿತ್ವ ಬಿಟ್ಟುಕೊಡುತ್ತ ಹೋಜಾ ಆಗುವ ಶಕ್ತಿ ಪಡೆಯುತ್ತಾನೆ. ಆದರೆ ಅದು ಪ್ಲೇಗ್ ಗಡ್ಡೆಯಲ್ಲ ಎಂದು ಗೊತ್ತಾದ ಮೇಲೆ ಇಬ್ಬರೂ ಮತ್ತೆ ತಮ್ಮ ಮೊದಲ ಹೆಸರುಗಳನ್ನೇ ಧರಿಸಿದ್ದಾರೆ.
ತನ್ನ ಸೇವಕನಿಂದಲೇ ಕಲಿತ ಜ್ಯೋತಿಷ್ಯಶಾಸ್ತ್ರವನ್ನು ರಾಜನ ಮೇಲೆ ಪ್ರಯೋಗಿಸಿ ಹೋಜಾ ಸುಲ್ತಾನನ ಪ್ರೀತಿಗೆ ಪಾತ್ರನಾಗಿದ್ದಾನೆ, ರಾಜನ ಆಸ್ಥಾನದಲ್ಲಿ ಜಾಗವನ್ನೂ ಪಡೆದಿದ್ದಾನೆ. ಕೊನೆಗೊಮ್ಮೆ ಹೋಜಾನಿಂದಲೇ ರಾಜನಿಗೆ ಮುಖಭಂಗವಾಗುವ ಸಂದರ್ಭ ಒದಗಿ ಅವನು ರಾತ್ರೋರಾತ್ರಿ ತನ್ನ ಸೇವಕನ ವ್ಯಕ್ತಿತ್ವ ಧರಿಸಿ ಇಟಲಿಗೆ ಪಲಾಯನ ಮಾಡುತ್ತಾನೆ. ಇಸ್ತಾಂಬುಲ್ನಲ್ಲೇ ಉಳಿದ ಸೇವಕ ಹೋಜಾನ ವ್ಯಕ್ತಿತ್ವ ಧರಿಸಬೇಕಾಗುತ್ತದೆ.

ಅವರಿಬ್ಬರ ವ್ಯಕ್ತಿತ್ವ ಒಂದರೊಳಗೊಂದು ಎಷ್ಟು ಸೇರಿ ಹೋಗಿದೆಯೆಂದರೆ ಕೊನೆಯ ಅಧ್ಯಾಯದಲ್ಲಿ ಈ ಕಥನದ ನಿರೂಪಣೆ ಮಾಡುತ್ತಿರುವುದು ಸೇವಕನೋ ಅಥವಾ ಸೇವಕನ ಧ್ವನಿ ಧರಿಸಿದ ಹೋಜಾನೋ ಎಂಬುದೇ ಓದುಗರಿಗೆ ತಿಳಿಯದಷ್ಟು ಪ್ರತಿಭಾಪೂರ್ಣವಾಗಿ ಚಿತ್ರಿಸಿದ್ದಾರೆ ಪಮುಕ್. ಇಷ್ಟು ಪುಟ್ಟ ಕಾದಂಬರಿ ಉಳಿಸುವ ಕಂಪನಗಳು ಮ್ಯಾಜಿಕಲ್ ಆಗಿವೆ.

ಒಬ್ಬರೊಳಗೊಬ್ಬರು ಮಾಯವಾಗುವ ಸೋಜಿಗಕ್ಕೆ ಬಹಳಷ್ಟು ಲೇಖಕರು ತಮ್ಮ ಕಥನ ಶಕ್ತಿಯನ್ನು ಒಡ್ಡಿಕೊಂಡಿದ್ದಾರೆ. ಒಬ್ಬ ಮನುಷ್ಯ ಸಂಕಲ್ಪ ಮಾತ್ರದಿಂದಲೇ ಇನ್ನ್ಯಾರೋ ಆಗಿ ಬಿಡಬಹುದಾದ ಕಥಾವಸ್ತು ಬರಹಗಾರರ ಸೃಜನಶೀಲತೆಗೆ ಸವಾಲನ್ನು ಎಸೆಯುತ್ತಲೇ ಇದೆ. “Why I am what I am” ಎಂದು ಶುರುವಾಗಿ, ಅಲ್ಲಿಗೇ ಮುಗಿಯುವ ತತ್ವದ ಎಳೆಯ ಜಾಡು ಹಿಡಿದು ಪಮುಕ್ ಈ ಮನೋಜ್ಞ ಕತೆಯನ್ನು ಕಟ್ಟಿದ್ದು ತಮ್ಮ ಮೂವತ್ತೊಂಬತ್ತನೆಯ ವಯಸ್ಸಿನಲ್ಲಿ. ಅಲ್ಲಿಂದ ಮುಂದೆಯೂ ಅವರು ಮೈ ನೇಮ್ ಈಸ್ ರೆಡ್, ದಿ ಬ್ಲಾಕ್ ಬುಕ್, ಸ್ನೋ, ಸ್ಟ್ರೇಂಜ್ನೆಸ್ ಇನ್ ಮೈ ಮೈಂಡ್ ಮುಂತಾದ ಮುಖ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ. 2006ರಲ್ಲಿ ನೊಬೆಲ್ ಪ್ರಶಸ್ತಿ ಪಡೆದಿರುವ ಪಮುಕ್ ಇಂದಿಗೂ ಹೊಸ ಹೊಸ ಕಾದಂಬರಿಗಳನ್ನು ಪ್ರಕಟಿಸುತ್ತಲೇ ಇದ್ದಾರೆ. ಅವರ ಕೃತಿಗಳಿಂದಾಗಿ ಟರ್ಕಿಯ ಇಸ್ತಾಂಬುಲ್ ನಗರದ ಚಿತ್ರಗಳನ್ನು ಬೇರೆ ಬೇರೆ ಕೋನದಿಂದ, ವಿವಿಧ ಕಾಲಗಳಲ್ಲಿ ಕಾಣಲು ಅವರ ಓದುಗರಿಗೆ ಸಾಧ್ಯವಾಗುತ್ತಲೇ ಇದೆ.

ಒಂದೇ ಬಗೆಯಲ್ಲಿ ಕಾಣುವ ಇಬ್ಬರು ಮನುಷ್ಯರು ಮೇಜಿನ ಎರಡು ಬದಿಗಳಲ್ಲಿ ಕುಳಿತು ದೀಪದ ಬೆಳಕಿನಲ್ಲಿ ತಮ್ಮ ಬದುಕಿನ ಪ್ರವರ ಬರೆಯುವ ಚಿತ್ರವೊಂದು ಈ ಕಾದಂಬರಿಯ ಜೊತೆಗೆ ಮನಸ್ಸಿನಲ್ಲಿ ಉಳಿದೇ ಹೋಗುವುದು.