ಯಾರದಾದರೂ ಹೊಲಮನೆಯನ್ನು ದೇಶಕ್ಕಾಗಿ ತೆಗೆದುಕೊಂಡ ತಕ್ಷಣ ಕೆಲವರು ಕಣ್ಣೀರು ಹರಿಸುವುದನ್ನು ನೋಡುವುದೇ ಒಂದು ತಮಾಷೆ ಸಂಗತಿ. ಹಾಗೆ ಅಳುವವರೆಲ್ಲಾ ಸಿಟಿಯಲ್ಲೇ ಇರುತ್ತಾರೆ ಎಂಬುದನ್ನು ಮರೆಯಬೇಡಿ. ಎಲ್ಲೋ ಕೆಲವರು ಹಳ್ಳಿಗ್ರಾಮಗಳವರೂ ಇರುತ್ತಾರೆ ಇಲ್ಲವೆಂದಲ್ಲ. ಆದರೆ ಅವರ ಲಗಾಮೆಲ್ಲಾ ಈ ಸೋ-ಕಾಲ್ಡ್ ಸಮಾಜ ಸುಧಾರಕರ ಕೈಯಲ್ಲಿ ಇರುತ್ತದೆ ಎಂಬುದನ್ನೂ ಗಮನಿಸಿ. ಇವರು ಪೇಪರಲ್ಲಿ ತಮ್ಮ ಮುಖ ಬಂದರೆ ಸಾಕು ಮಹತ್ಸಾಧನೆ ಮಾಡಿದವರಂತೆ ಬೀಗುತ್ತಾರೆ. ಇವರ ಸ್ವಾರ್ಥ ತುಂಬಿದ ತಾತ್ವಿಕತೆ ಬರೇ ಪೊಳ್ಳು ಎಂದು ಹೊಸದಾಗಿ ಹೇಳಬೇಕಾಗಿಲ್ಲ.

ಮೊನ್ನೆ ಹೀಗೆ ಆಯಿತಲ್ಲ. ಗ್ರೆಗರಿ ಪತ್ರಾವೊ ಎಂಬವರ ಮನೆ ಹೊಲ “ವಿಶೇಷ ಆರ್ಥಿಕ ವಲಯ”ಕ್ಕಾಗಿ ವಶಪಡಿಸಿಕೊಂಡಾಗ ಅವರು ಮಾಡಿದ ಗಲಾಟೆ ನೀವು ನೋಡಿಲ್ಲವೇ? ನಾವು ಹಳೇ ಪದ್ಧತಿಯಲ್ಲೇ ಬೇಸಾಯ ಮಾಡಿಕೊಂಡಿದ್ದರೆ ದೇಶ ಉದ್ಧಾರವಾಗುವುದಾದರೂ ಹೇಗೆ? ಹೊಸ ದಾರಿಗಳಿಗೆ, ಹೊಸ ಪದ್ಧತಿಗಳಿಗೆ ನಾವು ತೆರೆದು ಕೊಳ್ಳಬೇಕಲ್ಲವೆ? ಹೀಗೆ ತೆರೆದುಕೊಳ್ಳಲು ತಯಾರಿರದ ಜನ ಮಗುವಿನಂತೆ ಹಟ ಮಾಡಕೂಡದು. ನಿಜವಾಗಿಯೂ ದೇಶದ ಪ್ರಗತಿಗೆ ತಮ್ಮನ್ನು ತಾವು ಒಡ್ಡಿಕೊಳ್ಳುವುದನ್ನು ಹೆಮ್ಮೆಯಿಂದ ಮಾಡಬೇಕು. ಅದು ಬಿಟ್ಟು ನಡೆಯಬಾರದ್ದು ನಡೆದು ಬಿಟ್ಟಿದೆ ಅನ್ನುವ ಹಾಗೆ ರಾದ್ಧಾಂತ ಮಾಡುವುದು ಎಷ್ಟು ಸರಿ ಎಂದು ನಾವು ಕೇಳಿಕೊಳ್ಳಬೇಕು.

ನಾವು ಯಾವಾಗಲೂ ಹೇಳುವುದೇ ಇದು – ತ್ಯಾಗವಿಲ್ಲದೆ ಪ್ರಗತಿಯ ಸಾಧ್ಯತೆ ಇಲ್ಲ. ಇಷ್ಟಾಗಿಯೂ ಇದು ನಾವೇ ಆರಿಸಿಕೊಂಡ ಮಾರ್ಗವಲ್ಲವೆ? ಬೇರೆಯವರು ತಂದು ಹೇರಿದ್ದಲ್ಲವಲ್ಲ? ನಾವಿಂದು ಅನುಭವಿಸುವ ಪ್ರಗತಿಗೆ ಅವಶ್ಯವಾದ ವಿದ್ಯುತ್ ಉತ್ಪಾದನೆಗಾಗಿ ಎಷ್ಟು ಹಳ್ಳಿಗಳು ಮುಳುಗಡೆಯಾಗಿವೆ ಗೊತ್ತೆ? ಎಷ್ಟು ಜನ ಮನೆ ಮಾರು ತ್ಯಾಗ ಮಾಡಿದ್ದಾರೆ ಗೊತ್ತೆ? ಈಗ ಆ ಎಲ್ಲ ಫಲವನ್ನು ಉಣ್ಣುವ ಸಮಯದಲ್ಲಿ ದೊಡ್ಡ ಅನಾಚಾರವಾದಂತೆ ಆಡಿದರೆ ಆ ಹಿಂದಿನವರ ತ್ಯಾಗಕ್ಕೆ ಅಪಚಾರ ಮಾಡಿದಂತೆ ಎಂದು ಇವರು ತಿಳಿದುಕೊಳ್ಳಬೇಕು.

ಇನ್ನು ದೇಶದ ಪ್ರಗತಿಗೆ ಹಳ್ಳಿ ಹಾಗು ಗುಡ್ಡಗಾಡು ಜನರೇ ಯಾಕೆ ತ್ಯಾಗ ಮಾಡಬೇಕು ಎಂದು ಕೇಳುವ ಪ್ರಶ್ನೆಯೇ ತಮಾಷೆಯದು. ಈ ಆರ್ಥಿಕ ವಲಯಗಳನ್ನು ಪಟ್ಟಣಗಳಲ್ಲಿ ಮಾಡಲು ಸಾಧ್ಯವೇ? ಅದಕ್ಕೆ ಎಷ್ಟು ಭೂಮಿ ಬೇಕು ಏನು ಕತೆ. ಅದನ್ನು ತಂದು ಅತಿ ಹೆಚ್ಚು ಜನರಿಗೆ ತೊಂದರೆ ಆಗುವಂತೆ ಮಾಡಿದರೆ ಏನು ಗಳಿಸಿದಂತಾಯಿತು? ಅತಿ ಕಡಿಮೆ ತೊಂದರೆ ಉಂಟಾಗುವ ಹಳ್ಳಿ ಹಾಗು ಗುಡ್ಡಗಾಡಿನಲ್ಲಿ ಇಂತವನ್ನು ಏರ್ಪಡಿಸದೆ ಜನನಿಬಿಡವಾದ ಪಟ್ಟಣದಲ್ಲಿ ಮಾಡಬೇಕು ಎಂಬ ವಾದಕ್ಕೆ ಯಾವುದೇ ಹುರುಳಿಲ್ಲ. ಅದೊಂದು ಕುಹಕ ವ್ಯಂಗ ಎಂದು ಪಕ್ಕಕ್ಕೆ ತಳ್ಳಬೇಕಷ್ಟೆ.

ಹಳ್ಳಿ ಹಾಗು ಗುಡ್ಡಗಾಡು ಜನರಿಗೆ ನೋವಾಗುತ್ತದೆ ಎಂದು ನಮ್ಮ ದೇಶ ಇನ್ನೂ ಹದಿನೆಂಟನೇ ಶತಮಾನದಲ್ಲೇ ಇರಬೇಕೆ? ಇಂತಹ ನೋವನ್ನು ಹಂಚಿಕೊಳ್ಳುವುದು ಸಾಧ್ಯವೇ ಇಲ್ಲ. ನೋಡಿ ನಿಮ್ಮ ವಾದ, ಕಾಲಿಗೆ ನೋವಾದರೆ ಕೈಗೂ ನೋವಾಗಬೇಕು ಎಂಬಂತಿದೆ. ಅವರವರು ತಮ್ಮ ಪಾಲಿನ ತ್ಯಾಗವನ್ನು ಮಾಡಲೇ ಬೇಕು. ದೇಶಗಳು ಇತಿಹಾಸದುದ್ದಕ್ಕೂ ಪ್ರಗತಿಹೊಂದಿರುವುದೇ ಹೀಗೆ. ಇದು ಈವತ್ತಿನ ಹೊಸ ಸಂಗತಿಯೇನೂ ಅಲ್ಲ. ಕೂಗಾಡುವವರು ಹಾಗೆ ತಿಳಿದುಕೊಂಡಿದ್ದಾರಷ್ಟೆ.

ಇಷ್ಟಾಗಿಯೂ ಈ ವಲಯವನ್ನು ಏರ್ಪಪಡಿಸುವ ಪದ್ಧತಿ ಕ್ರಮಬದ್ಧವಾಗಿಯೇ ಇದೆಯಲ್ಲ. ತಮ್ಮ ಭೂಮಿ ಬಿಟ್ಟುಕೊಡಲು ಇಷ್ಟವಿಲ್ಲದವರು ಕೋರ್ಟಿಗೆ ಹೋಗಲು ಅನುವು ಇದ್ದೇ ಇದೆ. ಇದಕ್ಕಿಂತ ಹೆಚ್ಚಿನ ಯಾವ ಅನುಕೂಲ ಮಾಡಿಕೊಡಲು ಸಾಧ್ಯ? ಚೈನಾದಲ್ಲಿ ನಡೆದಂತೆ ಕಿತ್ತುಕೊಂಡು ಒದ್ದೋಡಿಸಿಲ್ಲವಲ್ಲ. ಕೋರ್ಟಿನಲ್ಲಿ ಕಾನೂನಿ ಪ್ರಕಾರ ಯಾರು ಸರಿ ಯಾರು ತಪ್ಪು ಎಂಬ ತೀರ್ಮಾನವೂ ಆಗುತ್ತದೆ. ಅಂದ ಮೇಲೆ ಅನ್ಯಾಯದ ಮಾತು ಎಲ್ಲಿಂದ ಬಂತು ಎಂದು ನೀವೇ ಯೋಚಿಸಿ.

ಆರ್ಥಿಕ ವಲಯದ ಕಾನೂನಿನಲ್ಲಿ ಎನ್ವಾಯಿರಂಟಿನ ಬಗ್ಗೆ, ನೆಲ ಹೊಲ ಕಳಕೊಳ್ಳುವವರ ಪರವಾಗಿ ಹೋಗಲಿ, ಅವರ ಬಗ್ಗೆಯೇ ಮಾತಿಲ್ಲ ಎಂಬ ನಿಮ್ಮ ತಕರಾರು ಎಷ್ಟು ಮುಗ್ಧವಾದುದು ಗೊತ್ತೆ? ಏನಾದರೂ ಅವುಗಳನ್ನು ಕಾನೂನಿನಲ್ಲಿ ಹಾಕಿಬಿಟ್ಟರೆ ಮುಗಿಯಿತು. ಒಂದೇ ಒಂದು ಆರ್ಥಿಕ ವಲಯವನ್ನೂ ಏರ್ಪಡಿಸಲು ಆ “ಸಮಾಜ ಸುಧಾರಕ”ರು ಬಿಡುವುದಿಲ್ಲ. ಜನ ಗೋಳಿನಲ್ಲೇ ಬಾಳಬೇಕೆಂಬುದು ಅವರ ಒತ್ತಾಸೆ – ಇದೂ ಎಲ್ಲರಿಗೂ ತಿಳಿದಿರುವ ವಿಷಯವೇ.

ಏನೇ ಆದರೂ, ಈ ಆರ್ಥಿಕ ವಲಯ ಏರ್ಪಟ್ಟೇ ತೀರುತ್ತದೆ. “ನಮಗೆ” ಒಳ್ಳೆಯದೇ ತರುತ್ತದೆ ಎಂಬುದರಲ್ಲಿ ನಮಗಂತೂ ಅನುಮಾನವಿಲ್ಲ.