ಯಾವ ಯಾವದೋ ಸಮಯದಲ್ಲಿ ಸೇವ್ ಮಾಡಿಕೊಂಡು ಎಂದೂ ಡೈಯಲ್ ಆಗದ ಅಪರೂಪದ ನಂಬರುಗಳಿವು. ಈಗ ಅವರೂ ಬಿಡುವಾಗಿದುದ್ದರಿಂದ ಮನಸಿಗೆ ತೃಪ್ತಿಕರವಾಗುವಷ್ಟು ಮಾತನಾಡಿ ನಾಗಾಲೋಟದ ಬದುಕಿನಲ್ಲಿ ಹೇಳದೇ ಉಳಿದ ಅಲ್ಲಲ್ಲಿ ತುಂಡಾದ ಮಾತುಗಳನ್ನು ಜೋಡಿಸಿ ಸಂಬಂಧಗಳಿಗೆ ಮತ್ತೆ ಬೇರು ಮೂಲದಿಂದ ಜೋಡಿಸಿದಂತೆ ಅನಿಸಿತು. ಎಲಾ ಕರುಣೆಯ ಕಾಲವೇ!!.. ಕರೋನಾವೊಂದು ಬರದೇ ಹೋಗಿದ್ದರೆ ನಾನು ಬದುಕಿನ ನಾಗಾಲೋಟದ ಬಲವಾದ ಎಸೆತಕ್ಕೆ ಎಲ್ಲಿಗೆ ಹೋಗಿ ಬಿದ್ದಿರುತ್ತಿದ್ದೆ.!? ಬದುಕಿನ ತಿರುಗುಣಿಯಲ್ಲಿ ಸಿಕ್ಕು ಎಲ್ಲೋ ದೂರ ಹೋಗಿ ಬಿದ್ದವರು ನಾವೆಲ್ಲಾ ಮೇಲೆ ಹಿಂತಿರುಗಿ ನೋಡದಷ್ಟು ಪುರುಸೊತ್ತಿಲ್ಲದ ದೈನಿಕದ ಜಂಜಡಗಳಲ್ಲಿ ಮುಳುಗಿದ್ದವರು….
ಡಾ. ಲಕ್ಷ್ಮಣ ವಿ.ಎ. ಅಂಕಣ

 

ಲಾಕ್ ಡೌನಿನ ಅವಧಿಯಲ್ಲಿ ಅಷ್ಟಾಗಿ ಕೆಲಸವಿಲ್ಲದ ನಾನು ಬಹಳ ದಿನಗಳ ನಂತರ ನಮ್ಮ ಬಂಧುಬಳಗ ದೂರದ ಸಂಬಂಧಿಗಳು, ಅಕ್ಕನ ಮಕ್ಕಳು, ಅಣ್ಣನ ಮಕ್ಕಳು ಎಸ್ಸೆಸ್ಸೆಲ್ಸಿ ಹಿಡಿದು ಕಾಲೇಜು ದಿನಗಳ ಡಿಗ್ರಿ ಓದುವಾಗಿನ ಎಲ್ಲ ಗೆಳೆಯರಿಗೆ ಅಚ್ಚರಿ ಎನ್ನುವಂತೆ ಕರೆ ಮಾಡಿ ಹಳೆಯ ನೋವು ನಲಿವು ಹಂಚಿಕೊಂಡೆ. ಯಾವ ಯಾವದೋ ಸಮಯದಲ್ಲಿ ಸೇವ್ ಮಾಡಿಕೊಂಡು ಎಂದೂ ಡೈಯಲ್ ಆಗದ ಅಪರೂಪದ ನಂಬರುಗಳಿವು. ಈಗ ಅವರೂ ಬಿಡುವಾಗಿದುದ್ದರಿಂದ ಮನಸಿಗೆ ತೃಪ್ತಿಕರವಾಗುವಷ್ಟು ಮಾತನಾಡಿ ಈ ನಾಗಾಲೋಟದ ಬದುಕಿನಲ್ಲಿ ಹೇಳದೇ ಉಳಿದ ಅಲ್ಲಲ್ಲಿ ತುಂಡಾದ ಮಾತುಗಳನ್ನು ಜೋಡಿಸಿ ಸಂಬಂಧಗಳಿಗೆ ಮತ್ತೆ ಬೇರು ಮೂಲದಿಂದ ಜೋಡಿಸಿದಂತೆ ಅನಿಸಿತು.

ಎಲಾ ಕರುಣೆಯ ಕಾಲವೇ!!.. ಕರೋನಾವೊಂದು ಬರದೇ ಹೋಗಿದ್ದರೆ ನಾನು ಬದುಕಿನ ನಾಗಾಲೋಟದ ಬಲವಾದ ಎಸೆತಕ್ಕೆ ಎಲ್ಲಿಗೆ ಹೋಗಿ ಬಿದ್ದಿರುತ್ತಿದ್ದೆ.!? ಬದುಕಿನ ತಿರುಗುಣಿಯಲ್ಲಿ ಸಿಕ್ಕು ಎಲ್ಲೋ ದೂರ ಹೋಗಿ ಬಿದ್ದವರು ನಾವೆಲ್ಲಾ ಆ ಮೇಲೆ ಹಿಂತಿರುಗಿ ನೋಡದಷ್ಟು ಪುರುಸೊತ್ತಿಲ್ಲದ ದೈನಿಕದ ಜಂಜಡಗಳಲ್ಲಿ ಮುಳುಗಿದ್ದವರು…. ಕೊರೋನಾ ಈ ತಿರುಗುಣಿಯ ಚಕ್ರದೊಟ್ಟಿಗಿನ ಓಟದಿಂದ ತುಸು ನಿಲ್ಲಿಸಿ ಹಿಂತಿರುಗಿ ನೋಡುವಂತೆ ಮಾಡಿತು. ನೋಡುತ್ತಿದ್ದಂತೆ ಅಕ್ಕನ ಮಕ್ಕಳು ಬೆಳೆದು ಓದಿ ಒಬ್ಬರು ಜೈಲರು, ಇಬ್ಬರು ಟೀಚರ್, ಇನ್ನೊಬ್ಬರದು ಐ ಎ ಎಸ್ ತಯಾರಿ… ಗೆಳೆಯನ ಸಂಸಾರ, ಹತ್ತಿರದ ಸಾವುಗಳು ಯಾರ ಸಾವಿಗೂ, ಮದುವೆಗೂ, ಹೋಗದ ನನ್ನ ಅಸಹಾಯಕತೆ, ಪಾಪ ಪ್ರಜ್ಞೆ ಎಲ್ಲ ಮೂಡಿ ಅಕ್ಷರಶಃ ಕಣ್ಣೀರಾದೆ. ಹಾಗೆ ಕರೋನಾ ಕೊಟ್ಟ ಏಕಾಂತಕ್ಕೊಂದು ಪುಟ್ಟ ತ್ಯಾಂಕ್ಸ್ ಹೇಳಿದೆ.

ಹೀಗೆ ನನ್ನ ಇನ್ನೊಬ್ಬ ಹಳೆಯ ಗೆಳೆಯ ಈ ಹಿಂದೆ ನಾನು ವೈದ್ಯನಾಗಿ ಕೆಲಸ ನಿರ್ವಹಿಸುವಾಗ ಪರಿಚಿತನಾದ ಗೆಳೆಯ, ಕಾರಣಾಂತರಗಳಿಂದ ಭಯಂಕರ ಕುಡುಕನಾಗಿ ಬಿಟ್ಟಿದ್ದ. ಮೂವತ್ತನೇ ವಯಸ್ಸಿಗೆ ಬಿ.ಪಿ, ಶುಗರ್ರು, ಬಂದು ಕುಡಿತ ವಿಪರೀತವಾಗಿ ಒಂದು ಸಲ ಸಣ್ಣ ಸ್ಟ್ರೋಕ್ ಗೂ ಒಳಗಾಗಿ ನಾಲಿಗೆ ಶಕ್ತಿ ಕಳೆದುಕೊಂಡು ಈಗ ಕುಡಿಯದಿದ್ದರೂ ಕುಡಿದವರಂತೆ ಮಾತನಾಡುತ್ತ ಜೀವ ತೇಯುತ್ತಿದ್ದಾನೆ. ಆಸ್ಪತ್ರೆಯಿಂದ ಬಂದ ಮಾರನೆಗೇ ಮತ್ತೆ ತನ್ನ ಹಳೆಯ ಚಾಳಿ ಮುಂದುವರೆಸುತ್ತ ಕುಡಿಯುತ್ತ ತೊದಲುತ್ತ ಸಾಗಿರಲು ಈ ಕೊರೋನಾ ಬಂದು ಶರಾಬು ನಿಂತೋಯ್ತಲ್ಲ. ನನಗೆ ತಕ್ಷಣವೇ ಇವನ ನೆನಪಾಗಿ ಪ್ರತಿ ವಾರಕ್ಕೊಮ್ಮೆ ಹದಿನೈದು ದಿನಕ್ಕೊಮ್ಮೆ ಫೋನು ಮಾಡಿ ಇವನ ಮೇಲೊಂದು ಕಿವಿಯಿಟ್ಟು ಅವನ ನಡುವಳಿಕೆ ಗಮನಿಸುತ್ತ ವಿಚಾರಿಸಿಕೊಳ್ಳುತ್ತಿದ್ದೆ. ಅವನೂ ಸಹಜವಾಗಿ ಮಾತನಾಡುತ್ತಿದ್ದ.

ನಡುವೊಂದು ದಿನ ನಾನು ಮಾತಿನ ಮಧ್ಯ ಅವನಿಗೆ ನೋವಾಗದಂತೆ ವಿಚಾರಿಸಿದೆ. “ಏನ್ರಿ… ಕಂಟ್ರೀ ಸಾರಾಯಿ ಜೋರಾ?” ಎಂದು ಕೇಳಿದೆ. ಈ ಗೆಳೆಯ ಹೇ.. ಹೇ ಇಲ್ಲಪ್ಪ ಕಂಟ್ರಿ ವಾಸನೇನೆ ಆಗಲ್ಲ ಅಂದ. ಇವನಿರುವ ಸುತ್ತ ಹಳ್ಳಿಯಲ್ಲಿ ಬುಡುಕಟ್ಟು ತಾಂಡಾಗಳಿವೆ. ಅವರು ಹೇಗೆಂದರೆ ಯಾವ ಸರಕಾರವೇ ಬರಲಿ, ಬೀಳಲಿ ಸಾಯಂಕಾಲಕ್ಕೆಂದೇ ತಮ್ಮ ಮನೆಯಲ್ಲಿ ಕಂಟ್ರಿ ಸಾರಾಯಿ ಮಾಡಿ ಕುಡಿದು ಉಳಿದರೆ ಮಾರುತ್ತಾರೆ. ನಾನು ಫೋನು ಮಾಡಿದ ಉದ್ದೇಶ ಇವನ ವ್ಯಸನ ವಿಮುಖತಾ ಲಕ್ಷಣಗಳನ್ನು (withdrawal symptoms) ತಿಳಿಯಬೇಕಿತ್ತು. ಒಂದು ಕಾಲಕ್ಕೆ ಕುಡಿತ ಚಟವಾಗಿ ಅಂಟಿಕೊಂಡರೆ ಅದರಿಂದ ಹೊರಬರುವುದು ಕಷ್ಟ. ಇದೊಂದು ವಿಷವರ್ತುಲ ಸಾಲ ಮಾಡಿ ಕುಡಿಯೋದು. ಸಾಲದಿಂದ ಮನೆಯ ನೆಮ್ಮದಿ ಹಾಳು, ಈ ನೆಮ್ಮದಿ ಹಾಳು ಮಾಡಿಕೊಂಡು ಕುಡಿಯಲಿಕ್ಕೆ ಇನ್ನಷ್ಟು ಸಾಲ ಮಾಡುವುದು… ಆದರೆ ನೀವು ನಂಬಿ ಈ ಗೆಳೆಯ ಕುಡಿತ ಅದ್ಹೇಗೋ ಮರೆತುಬಿಟ್ಟಿದ್ದ. ಈ ಶರಾಬು ಮಾರಾಟಕ್ಕೆ ಶುರುವಾದ ಮಾರನೆಗೇ ನಾನು ಮತ್ತೊಮ್ಮೆ ಕರೆ ಮಾಡಿ ಮಾತನಾಡಿದೆ. ಸಹಜವಾಗಿ ಮಾತನಾಡುವಾಗಲೂ ಅವನು ತೊದಲುವುದರಿಂದ ಅವನ ಪತ್ನಿಯ ಕೈಗೆ ಮೊಬೈಲ್ ಕೊಡಲು ಹೇಳಿ ‘ಹೇಗಮ್ಮ ನಿಮ್ಮ ಯಜಮಾನರು?’ ಎಂದು ಕೇಳಿದೆ. ಅವನು ಕುಡಿತವನ್ನು ಅಕ್ಷರಶಃ ಮರೆತೇ ಬಿಟ್ಟಿದ್ದ. ಕೆಲವೊಂದು ವೈದ್ಯಕೀಯ ಪ್ರಕರಣಗಳು ಸ್ವತಃ ವಿಜ್ಞಾನಕ್ಕೇ ಸವಾಲು ಎಸೆಯುತ್ತವೆ. ಹೀಗಾಗಿ ವೈದ್ಯಕೀಯ ಸೂತ್ರ ಇಲ್ಲಿ ವಿಫಲವಾಗುತ್ತದೆ, ಆದಕಾರಣದಿಂದಲೇ ಪರಿಣಿತ ವೈದ್ಯರೂ ನಿವೃತ್ತಿಹೊಂದುವ ತನಕ “ಪ್ರ್ಯಾಕ್ಟೀಸ್” ಮಾಡುತ್ತಲೇ ಇರುತ್ತಾರೆ.

ಈ ಕೊರೋನಾ ಸಾಂಕ್ರಾಮಿಕತೆಗಿಂತ ಹೆಚ್ಚು ಸಾವು ಮದ್ಯ ಮಾದಕ ವ್ಯಸನಿಗಳ ಆತ್ಮಹತ್ಯೆ ಆಗುತ್ತವೆ. ದಿನನಿತ್ಯ ಕೊಲ್ಲುವ ಡಯಾಬಿಟಿಸ್, ರಕ್ತದೊತ್ತಡ, ಆಧುನಿಕ ಜೀವನ ಶೈಲಿಯ ಒತ್ತಡಗಳಿಂದ ನಿಗದಿತ ವಯಸ್ಸಿನ ಮುಂಚೆ ವಕ್ಕರಿಸಿ ವೈದ್ಯವಿಜ್ಞಾನವನ್ನು ಬೆಚ್ಚಿ ಬೀಳಿಸುತ್ತಿವೆ. ಈ ಸಾಂಕ್ರಾಮಿಕ ರೋಗಗಳಿಗೆ ಸಿಕ್ಕಷ್ಟು ಸಾಮಾಜಿಕ ಪ್ರಚಾರ ಈ ನಾಲ್ಕು ಗೋಡೆಗಳ ಮಧ್ಯೆ ಜರುಗಿ ನಿತ್ಯ ನರಳುವಂತೆ ಮಾಡುವ ಅಸಾಂಕ್ರಾಮಿಕ ರೋಗಗಳು ಒಂಥರಾ ಒಳಗೊಳಗೇ ಹಿಂಸಿಸುವ ಕೌಟುಂಬಿಕ ದೌರ್ಜನ್ಯದಂತೆ ಜರುಗಿ ಯಾರ ಕಣ್ಣಿಗೂ ಕಾಣುವುದೂ ಇಲ್ಲ.

ಈ ಕೊರೋನಾ ಮಾಡಿದ ಉಪಕಾರದಲ್ಲಿ ಇದೂ ಒಂದು. ಮದ್ಯಪಾನ ನಿಷೇಧಕ್ಕೊಂದು ಅದ್ಭುತವಾದ ವೇದಿಕೆ ಸಿದ್ಧವಾಗಿತ್ತು. ಸರಕಾರ ಕೈಯಾರೆ ಹಾಳು ಮಾಡಿಕೊಂಡಿತು. ಅಬಕಾರಿ ಆದಾಯದಿಂದ ಸರಕಾರದ ಬೊಕ್ಕಸ ತುಂಬಬಹುದೆಂಬ ಮೂಢನಂಬಿಕೆಯೊಂದು ಆಳುವ ಪ್ರಭುತ್ವದಲ್ಲಿ ಬಲು ಆಳವಾಗಿ ಹೇಗೋ ಬೇರೂರಿ ಬಿಟ್ಟಿದೆ. ನಿಜ ಹೇಳಬೇಕೆಂದರೆ ಕುಡಿತದಿಂದಾಗುವ ಸಾಮಾಜಿಕ ನಷ್ಟ, ವೈಯಕ್ತಿಕ ಜೀವನದ ನೆಮ್ಮದಿ, ಅಕಾಲಿಕ ಸಾವುಗಳು ಮತ್ತು ಈ ಕುಟುಂಬಗಳನ್ನು ಪುನರ್ವಸತಿ ಮಾಡುವ ಖರ್ಚು ಇದಕ್ಕಿಂತ ಹೆಚ್ಚಿನ ನಷ್ಟ ಕುಡಿತದ ಸಾಮಾಜಿಕ ಕೌಟುಂಬಿಕ, ಹಣಕಾಸಿನ ನಷ್ಟವಾಗುತ್ತದೆ ಎಂಬುದನ್ನು ಅಂಕೆ ಸಂಖ್ಯೆಗಳ ಸಮೇತ ಸಾಬೀತುಪಡಿಸಿದ್ದಾರೆ. ಆದರೂ ಕೆಲ ಸರಕಾರಗಳು ಇದನ್ನು ಗಂಭೀರವಾಗಿ ಸಾಮಾಜಿಕ ಸಮಸ್ಯೆ ಎಂದು ಪರಿಗಣಿಸಿಲ್ಲ.

ಹೀಗೆ ಧಿಢೀರ್ ಅಂತ ಯಾವ ಅಮಲುಗಳನ್ನೂ ನಿಲ್ಲಿಸಲು ಅಸಾಧ್ಯವಾದರೂ ಈ ಕೊರೋನಾ ಕಾಲ ಇದಕ್ಕೊಂದು ಅವಕಾಶ ನೀಡಿತ್ತು. ಲಿಕ್ಕರ್ ಲಾಬಿ ಎಂದು ಮೇಲ್ನೋಟಕ್ಕೆ ಕಂಡರೂ ಇನ್ನೊಂಚೂರು ಆಳವಾಗಿ ನೋಡಿದರೆ ಪ್ರಭುತ್ವ ಯಾವಾಗಲೂ ಜನರನ್ನು ಅಮಲಿನಲ್ಲಿ ತೇಲಿಸಲು ಪ್ರಯತ್ನ ಪಡುತ್ತದೆ. ಈ ಅಮಲೆಂಬುದು ಧರ್ಮದ ಅಮಲು, ಯುದ್ಧದ ಅಮಲು, ಜಾತಿಯ ಅಮಲು ತಂತ್ರಜ್ಞಾನದ ಅಮಲು… ಹೀಗೆ ಜನ ಆಫೀಮು ತಿಂದು ತೇಲುವಾಗ ಇವರು ತಮ್ಮ ಅಜೆಂಡಾಗಳನ್ನೂ ವೈಯುಕ್ತಿಕ ಹಿತಾಸಕ್ತಿಗಳನ್ನೂ ಪ್ರಶ್ನಿಸಲು ಜನರಿಗೆ ಸಮಯವಿರುವುದಿಲ್ಲ. ಹೀಗಾಗಿ ಚುನಾವಣಾ ಸಮಯದಲ್ಲಿ ಅತಿ ಹೆಚ್ಚು ಹೆಂಡದ ಸಮಾರಾಧಾನೆಯಾಗುತ್ತದೆ.

ಈಗಾಗಲೇ ಮಾದಕ ದ್ರವ್ಯದ ವ್ಯಸನದಲ್ಲಿ ಮುಳುಗಿ ತೇಲುತ್ತಿರುವ “ಉಡತಾ ಪಂಜಾಬ್” ನ ಚುನಾವಣೆಗಳಲ್ಲಿ ಈಗ ಮದ್ಯದ ಬದಲು ಆಫೀಮು ಸರಬರಾಜಾಗುತ್ತದೆ.