ಈ ಪದ್ಯ ಓದಿದ ಎಷ್ಟೋ ವರ್ಷಗಳ ನಂತರ ಇದು ನನ್ನ ಜೀವನದಲ್ಲಿ ನನ್ನ ಅನುಭವಕ್ಕೆ ಬರುತ್ತದೆ ಎಂದು ನಾನು ತಿಳಿದಿರಲಿಲ್ಲ. ಕವಿಯೊಬ್ಬನ ಭಾವ ಓದುಗನ ಭಾವ ಆಗುವುದೇ ಒಂದು ಸಾಕ್ಷಾತ್ಕಾರ. ಇಷ್ಟಪಟ್ಟ ಹಲವಾರು ಕವಿತೆಗಳೊಂದಿಗೆ ನಾವು ಕನೆಕ್ಟ್ ಆಗುವುದೇ ಹಾಗೆ. ಯಾವುದನ್ನು ನಾವು ತೀವ್ರವಾಗಿ ಅನುಭವಿಸಿರುತ್ತೇವೆಯೋ ಅದೇ ಭಾವ ಪದಗಳಾಗಿ ನಮ್ಮ ಮುಂದೆ ನಿಂತಾಗ ನಮಗೆ ಸೋಲದೆ ವಿಧಿ ಇರುವುದಿಲ್ಲ.
ಆಶಾ ಜಗದೀಶ್ ಬರೆವ ಪಾಕ್ಷಿಕ ಅಂಕಣ.

 

ಒಂದು ಕವಿತೆ, ಒಂದು ಕತೆ ಅಥವಾ ಒಂದು ಪುಸ್ತಕ ಯಾವೆಲ್ಲಾ ಕಾರಣಕ್ಕೆ ಇಷ್ಟ ಆಗಬಹುದು ಅನ್ನುವುದೇ ಒಂದು ಸೋಜಿಗ. ಕೆಲವು ಪುಸ್ತಕಗಳ ಬಗ್ಗೆ ಬಂದ ಅಭಿಪ್ರಾಯ ನೋಡಿ, ಯಾರೋ ಚಂದ ಇದೆ ಎಂದದ್ದಕ್ಕೆ ತರಿಸಿಕೊಂಡು ಓದಲು ಶುರು ಮಾಡಿ, ಆಗದೆ, ಹರಸಾಹಸ ಪಟ್ಟು ಒಂದಷ್ಟು ಇಳಿಸಿಕೊಳ್ಳಲು ನೋಡಿ, ಸಾಧ್ಯವಾಗದೆ, ಪುಸ್ತಕ ಒಳ ಬರಲಾರೆನೆಂದು ಮೊಂಡಾಟ ಹಿಡಿದು ಮೂಲೆ ಸೇರಿದ ಸ್ಥಿತಿ ಬಹಳಷ್ಟು ಸಾರಿ ಎದುರಾದದ್ದಿದೆ. ಕೆಲ ದಿನಗಳ ವಿರಾಮದ ನಂತರ ಅವೇ ಪುಸ್ತಕಗಳು ಒಲಿದು ಬಂದದ್ದೂ ಇದೆ, ನಾನೇ ಬಳಿ ಸಾರಿದ್ದೂ ಇದೆ. ಆದರೆ ಅದೆಲ್ಲ ಅವಕಾಶಗಳಿಂದಲೂ ವಂಚಿತವಾಗಿ ಮೂಲೆ ಬಿಟ್ಟು ಈಚೆ ಬರದ ಒಂದಷ್ಟು ಪುಸ್ತಕಗಳು ಅಲ್ಲೇ ಮುನಿದು ಕೂತಿವೆ. ಅದು ನನ್ನ ವೈಯಕ್ತಿಕ ಮಿತಿಯೂ ಇರಬಹುದು.

ನನ್ನ ಮಗ ಆರು ತಿಂಗಳ ಕೂಸಾಗಿದ್ದಾಗ ಇನ್ನು ಅವನಿಗೆ ಆರೋಗ್ಯಕರ ಬೆಳವಣಿಗೆಗಾಗಿ ಹೆಚ್ಚಿನ ಆಹಾರದ ಅಗತ್ಯವಿದೆ ಎನ್ನುವ ಕಾರಣಕ್ಕೆ ಹಸುವಿನ ಹಾಲನ್ನು ಅಭ್ಯಾಸ ಮಾಡಿಸಲು ಪ್ರಯತ್ನ ಪಟ್ಟಿದ್ದೆ. ಆದರೆ ಅದೇನಾಗುತ್ತಿತ್ತೆಂದರೆ ಬರಿ ಒಂದೇ ಒಂದು ಚಮಚ ಹಾಲು ಕುಡಿಸಿದರೂ ಅವನಿಗೆ ಆ ದಿನ ಉಂಡದ್ದಷ್ಟೂ ವಾಂತಿಯಾಗಿಬಿಡುತ್ತಿತ್ತು. ಕೆಲವು ದಿನಗಳ ನಂತರವೂ ಪರಿಸ್ಥಿತಿ ಸುಧಾರಿಸಲಿಲ್ಲ. ಕೊನೆಗೆ ವೈದ್ಯರು ದಿನಾಲೂ ಒಂದೊಂದೇ ಹನಿ ಕುಡಿಸುತ್ತಾ ಬನ್ನಿ, ಅಭ್ಯಾಸವಾಗುತ್ತದೆ ಎಂದರು. ಸರಿ ಅದನ್ನೂ ಮಾಡಲು ತಯಾರಾದೆ. ಆದರೆ ಫಲಿತಾಂಶ ಮಾತ್ರ ಸೊನ್ನೆ. ಮತ್ತೆ ಅದೇ ರೀತಿ ಇಡೀ ದಿನ ತಿಂದದ್ದನ್ನು ಕಕ್ಕುವುದು ಮಾತ್ರ ತಪ್ಪಲಿಲ್ಲ. ನಂತರ ಆ ಪ್ರಯತ್ನವನ್ನೂ ನಿಲ್ಲಿಸಬೇಕಾಯಿತು. ಇವನದ್ದು ಪಿತ್ತ ಪ್ರಕೃತಿ, ಹಾಲು ಒಗ್ಗುವುದಿಲ್ಲ ಎನ್ನುವ ನಿರ್ಧಾರಕ್ಕೆ ಮನೆಯವರೆಲ್ಲ ಬಂದೆವು. ವೈದ್ಯರು ಸಹ ಅವನಿಗೆ ಒಗ್ಗುವ ಬೇರೆ ಎಲ್ಲ ಸಮತೋಲಿತ ಆಹಾರವನ್ನೂ ಕೊಡಿ. ಹಾಲು ಕೊಡದಿದ್ದರೂ ತೊಂದರೆ ಏನೂ ಇಲ್ಲ ಎಂದರು. ಅದಾದ ನಂತರ ಅವನಿಗೆ ಹಾಲು ಕುಡಿಸಬೇಕೆನ್ನುವ ಪ್ರಯತ್ನವನ್ನೇ ನಿಲ್ಲಿಸಿಬಿಟ್ಟೆ. ದೇಹಕ್ಕೆ ಅದು ಒಗ್ಗದಿದ್ದಾಗ, ದೇಹ ಅದನ್ನು ಸ್ವೀಕರಿಸುತ್ತಿಲ್ಲ ಎಂದ ಮೇಲೆ ಬಲವಂತವಾಗಿ ಹೇರಲಂತೂ ಸಾಧ್ಯವಿರಲಿಲ್ಲ. ಇಷ್ಟ ಪಡುವುದು ಬೇರೆ ಒಗ್ಗುವುದು ಬೇರೆ. ಎಲ್ಲವನ್ನೂ ಇಷ್ಟಪಡಬಹುದು. ಆದರೆ ಇಷ್ಟಪಟ್ಟದ್ದೆಲ್ಲವೂ ಒಗ್ಗಲಾರದು.

(Nissim Ezekiel)

ಓದುವ ವಿಷಯವೂ ನನ್ನ ಮಟ್ಟಿಗೆ ಹಾಗೆ. ಮನಸಿಗೆ ಒಗ್ಗದ್ದನ್ನು ಇಳಿಸಿಕೊಳ್ಳುವುದು ಬಹಳವೇ ಕಷ್ಟ. ಒಂದಷ್ಟು ಬರಹಗಳು ಕೈಗೆ ಬಂದ ಕೆಲವೇ ಕ್ಷಣಗಳಲ್ಲಿ ಮನಸಿಗಿಳಿದುಬಿಡುತ್ತವೆ. ಒಂದಷ್ಟು ಬರಹಗಳು ನಿಧಾನವಾಗಿ ಹತ್ತಿರ ಬರುತ್ತವೆ. ಒಂದಷ್ಟು ಬರಹಗಳು ಮುನಿಸು ಮುರಿಯುವುದೇ ಇಲ್ಲ. ಅವಕ್ಕೂ ಒಂದು ಸಮಯವಂತ ಬರುತ್ತದೆಯೇನೋ. ಹಾಗೆ ಹತ್ತಿರ ಬಂದದ್ದಷ್ಟೇ ಅಲ್ಲದೆ ನೆಲೆನಿಂತು ಮನಸಿನಲ್ಲುಳಿದ ಬರಹಗಳ ದಂಡೇ ಇದೆ. ಸಾಹಿತ್ಯಕ್ಕೆ ಯಾವ ಭಾಷೆ ದೇಶಗಳ ಗಡಿರೇಖೆಗಳಿಲ್ಲ. ಮನುಷ್ಯನ ಭಾವಗಳಿಗೂ ಗಡಿರೇಖೆಗಳಿಲ್ಲ. ಹಾಗಾಗಿಯೇ ಇರಬೇಕು ಭಾಷೆಯನ್ನು ಮೀರಿದ ಭಾವವೊಂದು ನಮ್ಮದಾಗಿಬಿಡುವುದು…

ಕೆಲವೊಮ್ಮೆ ಓದಿನ ಹಸಿವು ಎಷ್ಟರ ಮಟ್ಟಿಗಿರುತ್ತಿತ್ತೆಂದರೆ ಕನ್ನಡದ ಪುಸ್ತಕಗಳು ಸಿಗದಿದ್ದಾಗ ಹಿಂದಿ ಇಂಗ್ಲೀಶ್ ಪುಸ್ತಕಗಳನ್ನೂ ಓದಿದ್ದಿದೆ. ಇನ್ನಷ್ಟು ಭಾಷೆಗಳು ಬರುತ್ತಿರುವಂತಿದ್ದಿದ್ದರೆ ಎಂದು ಹಪಹಪಿಸಿದ್ದಿದೆ. ಹಾಗೆ ಓದಿದ್ದ ಒಂದಷ್ಟು ಬರಹಗಳು ಮನಸನ್ನು ಕಲಕಿ ಅಲ್ಲೇ ಶಾಶ್ವತವಾಗಿ ಅಂಟಿಹೋದದ್ದೂ ಇದೆ. ಓದಿದ ಬರಹ ನಮ್ಮದೇ ಅನುಭವದಲ್ಲಿ ಹರಳುಗಟ್ಟಿದಾಗ ಆಗುವ ಸೋಜಿಗವೇ ಬೇರೆ. ಅನುಭವದ ಮೂಸೆಯಲ್ಲಿ ಓದಿದ ಬರಹಗಳನ್ನೊಂದಿಷ್ಟು ಹೊಸೆಯಲು ಇಲ್ಲಿ ಹೊರಟಿರುವೆ….

Nissim Ezekiel ರ Night of the scorpion ಪದ್ಯವನ್ನು ಮೊಟ್ಟ ಮೊದಲ ಬಾರಿ ಓದಿದ್ದಾಗ ಬಹಳ ಇಷ್ಟವಾಗಿಬಿಟ್ಟಿತ್ತು. ಕಾಡುವ ಕವಿತೆ ಅದು. ಅದರಲ್ಲಿ ಒಬ್ಬ ತಾಯಿಗೆ (ಮಹಿಳೆ ಎನ್ನುವುದಕ್ಕಿಂತ ತಾಯಿ ಎನ್ನುವುದೇ ಸೂಕ್ತವೇನೋ..) ಒಂದು ರಾತ್ರಿ ಚೇಳು ಕುಟುಕಿಬಿಟ್ಟಿರುತ್ತದೆ. ಚೇಳು ಮನೆಯೊಳಕ್ಕೆ ಬರಲಿಕ್ಕೂ ಕಾರಣವಿದೆ. ಆ ದಿನ ಜೋರು ಮಳೆಗಾಳಿ. ಅಡಗಲು ಜಾಗ ಸಿಗದೆ ಹುಳ ಹುಪ್ಪಟೆಗಳೆಲ್ಲ ಮನೆ ನುಗ್ಗುತ್ತಿವೆ. ಚೇಳೂ ಸಹ ಇದೇ ರೀತಿ ಒಳಬಂದದ್ದು. ಇತ್ತ ಆ ತಾಯಿಗೆ ಚೇಳಿನ ನಂಜು ಏರಿ ಮೈಯೆಲ್ಲಾ ವ್ಯಾಪಿಸಿದೆ. ಹೇಳಿಕೊಳ್ಳಲಾಗದ ಸಂಕಟ ಅವಳಿಗೆ. ಸಾಗರದೋಪಾದಿ ಜನ ಜೇನ್ನೊಣಗಳಂತೆ ಬಂದು ಅವಳನ್ನು ಸುತ್ತುವರಿದಿದ್ದಾರೆ. ಯಾವ ಜನ್ಮದಲ್ಲಿ ಏನು ಪಾಪ ಮಾಡಿದ್ದಳೋ ಈ ಜನ್ಮದಲ್ಲಿ ಇದನ್ನು ಅನುಭವಿಸುತ್ತಿದ್ದಾಳೆ ಎನ್ನುತ್ತಾರೆ ಯಾರೋ. ಮತ್ತೆ ಹೋಗಲಿ ಬಿಡು ಇದೊಂದು ಬಾರಿ ಅನುಭವಿಸಿಬಿಟ್ಟರೆ ಮುಂದಿನ ಜನ್ಮದಲ್ಲಿ ಸುಖವಾಗಿರುತ್ತಾಳೆ ಎನ್ನುತ್ತಾರೆ ಇನ್ಯಾರೋ. ಎಲ್ಲರೂ ತಲೆಗೊಂದರಂತೆ ತಿಳಿದೆಲ್ಲ ವೈದ್ಯವನ್ನೂ ಮಾಡುತ್ತಾರೆ. ಕೊನೆಗೂ ಬೆಳಕು ಹರಿಯುತ್ತದೆ. ಮಂಜು ಇಳಿದು ಸ್ವಲ್ಪ ಆರಾಮಾದ ತಾಯಿ ಒಂದು ಮಾತು ಹೇಳುತ್ತಾಳೆ. “ಸಧ್ಯ ಚೇಳು ಮಕ್ಕಳನ್ನು ಕಚ್ಚದೆ ನನ್ನನ್ನು ಕಚ್ಚಿತು” ಎಂದು. ಈ ಕೊನೆಯ ವಾಕ್ಯವೇ ಇಡೀ ಕವಿತೆಯ “ಪ್ರತಿಧ್ವನಿ”. ಅದಕ್ಕೆ ಅವಳನ್ನು ತಾಯಿ ಅಂದದ್ದು. ತಾಯಿಯಲ್ಲದೆ ಇನ್ಯಾರ ಬಾಯಲ್ಲಿ ಇಂತಹ ಮಾತು ಬರಲು ಸಾಧ್ಯ.

ಈ ಕವಿತೆ ಇಲ್ಲಿನ ತಾಯಿಯ ಕೊನೆಯ ಮಾತಿನಿಂದಾಗಿಯೇ ಬಹಷ್ಟು ಅರ್ಥಗಳನ್ನು ಹೊಳೆಸುತ್ತಾ ಕಾಡತೊಡಗುತ್ತದೆ. ಅವಳಿಗೆ ಸ್ವರ್ಗ ನರಕಗಳಾಗಲೀ, ಸುಖ ಸಂತೋಷಗಳಾಗಲೀ , ಸರಿಯಾದ ಚಿಕಿತ್ಸೆಯಾಗಲೀ, ಇತರರ ಕನಿಕರ, ಪ್ರೀತಿಯಾಗಲೀ ಆ ಕ್ಷಣ ಮುಖ್ಯವೇ ಆಗುವುದಿಲ್ಲ. ಅವಳ ಚಿಂತೆಯಷ್ಟೂ ಮಕ್ಕಳದ್ದೇ. ತನಗೆಷ್ಟೇ ತೊಂದರೆಯಾಗಲಿ ತನ್ನ ಮಕ್ಕಳಿಗೆ ಏನೂ ಆಗಬಾರದು. ಆದರೆ ಜನಕ್ಕೆ ಆ ಕ್ಷಣದ ಅವಳ ನೋವಿಗಿಂತಲೂ ಡೋಂಗಿ ಮಾತುಗಳೇ ಹೆಚ್ಚಾಗುತ್ತವೆ. ಮತ್ತೆ ಗಂಡನಿಗೆ ಹೆಂಡತಿ ಒಂದು ವೇಳೆ ಸತ್ತು ಹೋದರೆ ಕುಟುಂಬ ಮತ್ತು ಮಕ್ಕಳ ಗತಿ ಏನು ಎನ್ನುವ ಚಿಂತೆ. ಇದೆಲ್ಲದರ ನಡುವೆ ತಾಯಾದವಳ ನಿಷ್ಕಳಂಕ ನಿರ್ವ್ಯಾಜ್ಯ ಪ್ರೇಮ ಮಾತ್ರ ಎಲ್ಲರನ್ನು ಕಾಡತೊಡಗುತ್ತದೆ.

ಈ ಪದ್ಯ ಓದಿದ ಎಷ್ಟೋ ವರ್ಷಗಳ ನಂತರ ಇದು ನನ್ನ ಜೀವನದಲ್ಲಿ ನನ್ನ ಅನುಭವಕ್ಕೆ ಬರುತ್ತದೆ ಎಂದು ನಾನು ತಿಳಿದಿರಲಿಲ್ಲ. ಕವಿಯೊಬ್ಬನ ಭಾವ ಓದುಗನ ಭಾವ ಆಗುವುದೇ ಒಂದು ಸಾಕ್ಷಾತ್ಕಾರ. ಇಷ್ಟಪಟ್ಟ ಹಲವಾರು ಕವಿತೆಗಳೊಂದಿಗೆ ನಾವು ಕನೆಕ್ಟ್ ಆಗುವುದೇ ಹಾಗೆ. ಯಾವುದನ್ನು ನಾವು ತೀವ್ರವಾಗಿ ಅನುಭವಿಸಿರುತ್ತೇವೆಯೋ ಅದೇ ಭಾವ ಪದಗಳಾಗಿ ನಮ್ಮ ಮುಂದೆ ನಿಂತಾಗ ನಮಗೆ ಸೋಲದೆ ವಿಧಿ ಇರುವುದಿಲ್ಲ.

ಒಮ್ಮೆ ನನ್ನ ಗಂಡ, ಮಗ ಮತ್ತು ನನ್ನ ಅಪ್ಪ ಸಂಜೆಯ ಏಳೂವರೆ ಸಮಯದಲ್ಲಿ ಪೇಟೆಗೆ ಹೋಗಿದ್ದರು. ಅಲ್ಲಿ ಅಂಗಡಿಯ ಮುಂದೆ ನಿಂತು ಏನನ್ನೋ ಕೊಳ್ಳುತ್ತಾ ನಿಂತಿದ್ದಾಗ ನನ್ನ ಗಂಡನಿಗೆ ಏನೋ ಕಚ್ಚಿದಂತಾಗಿದೆ. ತತ್ ಕ್ಷಣವೇ ನೋಡಿಕೊಂಡಿದ್ದಾರೆ. ಅದು ಚೇಳು ಅಂತ ಗೊತ್ತಾಗಿದೆ. ಚೇಳು ಕತ್ತಲೆಯಲ್ಲಿ ಮರೆಯಾಗಿದೆ. ನಂತರ ಅಲ್ಲಿಂದ ನೇರ ಆಸ್ಪತ್ರೆಗೆ ಹೋಗಿ ಇಂಜೆಕ್ಷನ್ ತೆಗೆದುಕೊಂಡು ಮನೆಗೆ ಬಂದಿದ್ದರು. ವಿಷಯ ತಿಳಿದ ನನಗೆ ಗಾಬರಿಯಾಗಿಬಿಟ್ಟಿತು. ಏನೋ ಆತಂಕ ನೋವು… ಕೊನೆಗೆ ಚಿಕಿತ್ಸೆ ಪಡೆದು ಬಂದಿದ್ದಾರೆ ಅಂತ ಸಮಾಧಾನಿಸಿಕೊಂಡೆ. ಒಂದು ಗಂಟೆ ಕಳೆದ ನಂತರ ಏನೂ ಆಗದಿದ್ದದ್ದು ನೋಡಿ ಸ್ವಲ್ಪ ಸಮಾಧಾನವಾಯಿತು. ನಂತರ ಚೇಳು ಎಲ್ಲಿತ್ತು, ಎಲ್ಲಿಂದ ಬಂತು, ಹೇಗೆ ಬಂತು, ಯಾಕೆ ಬಂತು, ಅದು ನಿಮ್ಮನ್ನೇ ಏಕೆ ಕಚ್ಚಬೇಕಿತ್ತು, ಬಹುಶಃ ಕತ್ತಲಲ್ಲಿ ಕಾಣದೆ ತುಳಿದಿರಬೇಕು…. ಹೀಗೆ ಬಹಳಷ್ಟು ಹೊತ್ತು ಮಾತನಾಡುತ್ತಾ ಕೂತಿದ್ದಾಗ ನಾನಂದೆ, “ಸಧ್ಯ ನಿಮಗೆ ಕಚ್ಚಿತು ಪರವಾಗಿಲ್ಲ, ಮಗನಿಗೇನಾದರೂ ಕಚ್ಚಿದ್ದರೆ ಅಥವಾ ಎಪ್ಪತ್ತರ ಆಸುಪಾಸಿನ ತಂದೆಗೇನಾದೂ ಕಚ್ಚಿದ್ದರೆ….. ಅಶಕ್ತರಾದ ಅವರಿಗೆ ಎಷ್ಟು ಬಾಧೆಯಾಗುತ್ತಿತ್ತು… ” ಎಂದೆ. ಎಲ್ಲರಿಗೂ ಆ ಕ್ಷಣ ಅದು ಸರಿ ಎನ್ನಿಸಿತು. ಗಂಡನಿಗೂ ಆ ರಾತ್ರಿ ಹೆಚ್ಚು ಕಷ್ಟವೇನೂ ಆಗಲಿಲ್ಲ. ಎಲ್ಲರೂ ಮರುದಿನ ನಿರಾಳರಾದೆವು. ಆದರೆ ಮಾನವ ಸಹಜ ಭಾವನೆಗಳು ಎಲ್ಲ ಕಾಲದಲ್ಲೂ ಒಂದೇ ರೀತಿ ಇವೆಯಲ್ಲ… ಇಲ್ಲವಾಗಿದ್ದರೆ ನಿಸ್ಸಿಮ್ ರ ಈ ಕವಿತೆಯ ಸತ್ಯ ನನ್ನ ಸತ್ಯವೂ ಆಗಿ ಹೀಗೆ ನನ್ನ ಬಾಯಿಂದಲೇ ಹೊರ ಬರುತ್ತಿರಲಿಲ್ಲ ಅನ್ನಿಸಿ ಜೀವನವೊಂದು ಚಕ್ರವೇ ಎನ್ನುವುದು ಖಾತ್ರಿಯಾಯಿತು.

ವ್ಯವಸ್ಥೆಯ ಪಿತೂರಿಯನ್ನು, ಮನುಷ್ಯನ ವಿಧ್ವಂಸಕ ಮನೋಭಾವವನ್ನು ತಣ್ಣಗೆ ವಿರೋಧಿಸುವ William Blake ರ ಕವಿತೆಗಳೂ ಸಹ ನನ್ನನ್ನು ಬಹಳಷ್ಟು ಕಾಡಿವೆ. ಅವರ The chimney sweeper ಅಂತೂ ಅದೆಷ್ಟು ನನ್ನನ್ನು ಕಲಕಿಬಿಟ್ಟಿತ್ತು ಎಂದರೆ, ಬಾಲ ಕಾರ್ಮಿಕ ವಿಷಯದ ಬಗ್ಗೆ ಮಕ್ಕಳಿಂದ ಮಾಡಿಸಿದ ಸಣ್ಣದೊಂದು ನಾಟಕದಲ್ಲಿ ಆ ಕವಿತೆಯನ್ನು ಬಳಸಿದ್ದೆ. ಅವರ ಮತ್ತೊಂದು ಅತ್ಯಂತ ಜನಪ್ರಿಯ ಕವಿತೆ “ಪಾಯಿಸನ್ ಟ್ರೀ” ಸಹ ನನ್ನನ್ನು ಬಹಳ ಪ್ರಭಾವಿಸಿದೆ. ನನಗೆ ಬಹಳಷ್ಟು ಸಲ ಬಹಳಷ್ಟು ಸಂದರ್ಭಗಳಲ್ಲಿ ನೆನಪಾಗುವ ಕವಿತೆ ಇದು. ಅದೆಷ್ಟೋ ಸರಿ ಮನುಷ್ಯ/ಮನುಷ್ಯತ್ವವಾ.. ಅಥವಾ ನನ್ನ ಅಹಮ್ಮಾ?! ಎನ್ನುವ ವಿಚಾರ ಬಂದಾಗಲೆಲ್ಲಾ ಕಣ್ಣೆದುರು ಬಂದು ನಿಂತಿದೆ ಈ ಕವಿತೆ. ಕ್ಷಣ ನಿಂತು ಯೋಚಿಸಿ ನಿರ್ಧಾರ ತೆಗೆದುಕೊಳ್ಳಲು ಕಾಣವಾಗಿದೆ. ಇದರಿಂದಾಗಿ ಒಂದಷ್ಟು ಸ್ನೇಹಿತರು ಇನ್ನೂ ನನ್ನವರಾಗಿ ಉಳಿದಿದ್ದಾರೆ. ಇದೇ ಒಂದು ಕವಿತೆಯ ನಿಜವಾದ ಯಶಸ್ಸು ಅಂತೆನಿಸುತ್ತದೆ ನನಗೆ.

ನನ್ನ ಒಡನಾಡಿಯಂತಿದ್ದ ಗೆಳತಿಯೊಬ್ಬಳು… ನಾವಿಬ್ಬರೂ ಬಹಳ ಕ್ಲೋಸ್ ಇದ್ದೆವು. ನಾವಿಬ್ಬರೂ ಬಹಳ ಜಗಳವನ್ನೂ ಆಡುತ್ತಿದ್ದೆವು. ಆದರೆ ಅಂತಹ ಜಗಳಗಳಿಗೆ ನಮ್ಮನ್ನು ಬೇರೆ ಮಾಡುವ ಶಕ್ತಿ ಇಲ್ಲ ಎಂದೇ ನಂಬಿದ್ದೆವು. ಆದರೆ ಕಹಿ, ಮನಸ್ಸನ್ನು ಹೇಗೆ ಸೇರಿತೋ ಗೊತ್ತಿಲ್ಲ… ಬರಬರುತ್ತಾ ಕ್ಷುಲ್ಲಕವೆನಿಸುತ್ತಿದ್ದ ಜಗಳಗಳೇ ನಮ್ಮನ್ನು ಆಳತೊಡಗಿದವು. ಮೊದಲೆಲ್ಲ ಜಗಳದ ಕಾರಣಗಳ ಬಗ್ಗೆ ಸಲೀಸಾಗಿ ಚರ್ಚಿಸುತ್ತಿದ್ದ ನಾವು, ದ್ವೇಷಕ್ಕೆ ತಿರುಗುತ್ತಿದ್ದ ಜಗಳಗಳ ಕಾರಣವಿರಲಿ ಪ್ರಸ್ತಾಪನ್ನೂ ಮಾಡದೆ ವಿಷದ ಮರವನ್ನು ಮನಸುಗಳಲ್ಲಿ ನಾಟಿಕೊಂಡು ಬೆಳೆಸಹತ್ತಿದ್ದೆವು. ಅದೊಂದು ದಿನ ಅವಳಿಗೆ ರಿಯಲೈಸ್ ಆಯಿತು. ಆದರೆ ನನಗೆ ಆಗಲೂ ರಿಯಲೈಸ್ ಆಗಲಿಲ್ಲ. ಆಗಲಿಕ್ಕೆ ಹೆಚ್ಚು ಸಮಯವೂ ಸಿಗಲಿಲ್ಲ. ನನಗೆ ರಿಯಲೈಸ್ ಆಗಿ ಅವಳ ಹತ್ತಿರ ಹೋಗುವ ಹೊತ್ತಿಗೆ ಅವಳು ನನ್ನನ್ನು ಬಿಟ್ಟು ಬಾರದಿರುವ ಲೋಕಕ್ಕೆ ಹೋಗಿಯಾಗಿತ್ತು. ಈಗ ರಿಯಲೈಸ್ ಆಗಿದೆ ನನಗೆ… ಅದರಿಂದೇನು ಉಪಯೋಗ…?!

ಈ ಕವಿತೆ ಇಲ್ಲಿನ ತಾಯಿಯ ಕೊನೆಯ ಮಾತಿನಿಂದಾಗಿಯೇ ಬಹಷ್ಟು ಅರ್ಥಗಳನ್ನು ಹೊಳೆಸುತ್ತಾ ಕಾಡತೊಡಗುತ್ತದೆ. ಅವಳಿಗೆ ಸ್ವರ್ಗ ನರಕಗಳಾಗಲೀ, ಸುಖ ಸಂತೋಷಗಳಾಗಲೀ , ಸರಿಯಾದ ಚಿಕಿತ್ಸೆಯಾಗಲೀ, ಇತರರ ಕನಿಕರ, ಪ್ರೀತಿಯಾಗಲೀ ಆ ಕ್ಷಣ ಮುಖ್ಯವೇ ಆಗುವುದಿಲ್ಲ.

(ವಿಲ್ಲಿಯಮ್ ಬ್ಲೇಕ್)

ಮತ್ತೊಂದು ಘಟನೆ. ಅವರು ನನ್ನ ಸ್ನೇಹಿತೆ ಮತ್ತು ನನ್ನ ವಿದ್ಯಾರ್ಥಿಯ ತಾಯಿ. ಅವರ ಮಗನ ವಿಷಯಕ್ಕೆ ನನ್ನೊಂದಿಗೆ ಒಮ್ಮೆ ಕೋಪಿಸಿಕೊಂಡಿದ್ದರು. ನನಗೂ ಸಿಟ್ಟು ಬಂತು. ನಾನವರೊಂದಿಗೆ ಮಾತನಾಡುವುದನ್ನೇ ಬಿಟ್ಟುಬಿಟ್ಟೆ. ಆದರೆ ಅವರು ಆಗಾಗ ನೆನಪಾಗುತ್ತಿದ್ದರು. ಅವರೊಂದಿಗೆ ಕಳೆದ ಒಳ್ಳೆಯ ಕ್ಷಣಗಳು ಅವರನ್ನು ಮಾತನಾಡಿಸಲು ಪ್ರೇರೇಪಿಸುತ್ತಿದ್ದವು. ಆದರೆ ನನ್ನ ಅಹಂ ನನ್ನನ್ನು ಹಾಗೆ ಮಾಡಲು ಬಿಡಲಿಲ್ಲ. ಅವರೂ ಬಹಳ ಮರುಗುತ್ತಿದ್ದಾರೆ, ನನ್ನೊಂದಿಗೆ ಮಾತನಾಡಲು ಅವರೂ ಬಯಸುತ್ತಿದ್ದಾರೆ ಎಂದು ಅರ್ಥವಾದ ಮೇಲೂ ನನ್ನ ಬಿಗುಮಾನ ಮುರಿಯಲಿಲ್ಲ. ಆದರೆ ಹಾಗಾಗಬಹುದೆಂದು ನನಗೇನು ಗೊತ್ತು?! ಅವರೊಂದು ಸಣ್ಣ ಆ್ಯಕ್ಸಿಡೆಂಟ್ ನಲ್ಲೆ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲೇ…. ಇನ್ನು ಹೇಳಲಾರೆ. ನನ್ನ ಪಾಪಪ್ರಜ್ಞೆ ನನ್ನನ್ನು ನೆಮ್ಮದಿಯಾಗಿರಲು ಬಿಡಲಿಲ್ಲ. ಬಹಳ ಬಹಳ ಬಹಳ ಅತ್ತೆ… ಎಷ್ಟೊಂದು ವಿಷದ ಗಿಡಗಳನ್ನು ಬೆಳೆಸಿಕೊಂಡಿದ್ದೇವೆ ಮನಸಲ್ಲಿ… ಅವರ ಅಂತ್ಯಕ್ರಿಯೆಗೆ ಬೇಕಾಗಿಯೇ ಹೋದೆ. ಅವರ ನಿರ್ಜೀವ ದೇಹದ ಮುಂದೆ ನಿಂತು ಒಮ್ಮೆ ಕ್ಷಮಿಸಿದ್ದೇನೆ ಎಂದು ಹೇಳಿ ಹೋಗಿ ಪ್ಲೀಸ್… ಎಂದು ಬೇಡಿಕೊಂಡೆ. ಆದರೆ ಮೆರವಣಿಗೆಯಲ್ಲಿ ಸಾಗಿ ಹೋದ ಅವರಿಗದು ಕೇಳಿಸಲೇ ಇಲ್ಲ…

ಬ್ಲೇಕ್… ನೀವು ಇಂತಹ ಬೀಜ ಪಸರಿಸುವ ವಿಷದ ಗಿಡಗಳನ್ನು ನೋಡಿಯೇ ಕನಿಷ್ಟ ಯಾರಾದರೂ ಬುದ್ಧಿ ಕಲಿಯಲಿ ಎಂದು ಈ ಪದ್ಯವನ್ನು ಬರೆದಿರಾ..?!

ವಿಷದ ಗಿಡವನ್ನು ಬೆಳೆಸಿ ಅದರ ಹಣ್ಣನ್ನು ತನ್ನ ಶತ್ರು ತಿನ್ನಲಿ, ತಿಂದು ಸಾಯಲಿ ಎಂದು ಬಯಸುವುದು ಒಂದು ತೂಕದ ಕ್ರೌರ್ಯವಾದರೆ ತನ್ನ ಶತ್ರು ಬೆಳೆಸಿದ ಗಿಡದ ಫಲ ಎಂಥದ್ದಾದರೂ ಆಗಿರಲಿ ಕದ್ದು ತಿಂದು ಅವನಿಗೆ ನಷ್ಟ ಉಂಟು ಮಾಡಬೇಕೆಂದು ಬಯಸುವುದು ಇನ್ನೊಂದು ತೂಕದ ಕ್ರೌರ್ಯ… ಒಟ್ಟಾರೆ ಕ್ರೌರ್ಯ ಎನ್ನುವುದು ಮಾನವತೆಯ ಅಧಃಪತನವೇ ಸೈ… ಸತ್ತವನ ಬಗ್ಗೆಯಾಗಲಿ ಕೊಂದವನ ಬಗ್ಗೆಯಾಗಲೀ ಮರುಕಹುಟ್ಟುವುದಿಲ್ಲ ಎನ್ನುವಲ್ಲಿಗೆ ನಾವು ವಿಷದ ಗಿಡಗಳನ್ನು ಬೀಜ ಸಮೇತ ನಾಶ ಮಾಡದೆ ಮನುಷ್ಯರಾಗಲಾರೆವು ಎನಿಸಿಬಿಡುತ್ತದೆ….

ಸತ್ತ ಮೇಲೆ ನಮ್ಮ ಕ್ಷಮೆಗೆ, ಪಶ್ಚಾತಾಪದ ಉರಿಗೆ ಏನರ್ಥ?! ಬದುಕಿರುವಾಗ ಬಾಗದ ದೇಹ, ಸತ್ತಾಗ ಮುರಿದರೆ ಏನು ಫಲ?! ಎಲ್ಲವನ್ನೂ ಕಳೆದುಕೊಂಡು ಗೆಲ್ಲುವ ಅಹಮ್ಮಿನ ಗೆಲುವಿಗಿಂತಲೂ, ಸೋಲಿನಿಂದ ಸಿಗುವ ಗೆಲವು ಸತ್ತ ನಂತರವೂ ಉಳಿಯುತ್ತದೇನೋ ಅನಿಸಿತು ಕೊನೆಗೆ.

A.G.Gardiner ರ On saying please ಸಹ ನನ್ನಿಂದ ಓದಿಸಿಕೊಂಡ ಒಂದು ಅತ್ಯದ್ಭುತ ಪ್ರಬಂಧ. ನಮ್ಮ ಸಿಟ್ಟು ಹೇಗೆ ಒಂದು ಸರಪಳಿಯಾಗಿ ಎಷ್ಟೆಲ್ಲ ಜನರನ್ನು ಹಾಳುಗೆಡವುತ್ತದೆ ಎಂದು ಅದೆಷ್ಟು ಚಂದ ವಿವರಿಸುತ್ತಾ ಹೋಗುತ್ತಾರೆ A.G.Gardiner ಎಂದರೆ ಬದುಕಿನ ಸಣ್ಣ ಸಣ್ಣ ಸಂಗತಿಗಳನ್ನು ತೆಗೆದುಕೊಂಡು ಅದನ್ನು ಅನಲೈಸ್ ಮಾಡುವ ಅವರ ಶೈಲಿ ಮತ್ತು ಕಂಟೆಂಟ್ ಎರೆಡೂ ಸಹ ಮನಸ್ಸನ್ನು ಮುಟ್ಟುತ್ತವೆ ಮತ್ತು ತಟ್ಟುತ್ತದೆ. ಬಹುಶಃ ಒಂದು ಸಣ್ಣ ಸೂಜಿಮೊನೆಯ ಸೂಕ್ಷ್ಮ ಮೊನಚನ್ನು ಕಾಪಿಟ್ಟುಕೊಂಡರೂ ಸಾಕು ಸಾಧಾರಣ ಬದುಕನ್ನೂ ಅತ್ಯದ್ಭುತವಾಗಿ ಕಳೆಯಬಹುದು ಅನಿಸುತ್ತದೆ.

ಹಗೆ ಕೊಲ್ಲದ್ದನ್ನು ನಗೆ ಕೊಲ್ಲಬಲ್ಲದು. ಚೂರಿಯ ಹರಿತದಿಂದ ಸಾಧ್ಯವಾಗದ ಹತ್ಯೆ ಕೆಟ್ಟ ಮಾತು, ನಡವಳಿಕೆಗಳಿಂದ ಸಾಧ್ಯ. ನಮ್ಮ ನಡವಳಿಕೆಯನ್ನು ನಿಯಂತ್ರಿಸುವ ಶಾಸನಬದ್ಧ ಕಾನೂನು, ಶಿಕ್ಷೆಗಳ್ಯಾವೂ ಇಲ್ಲ. ಯಾವನೋ ನನ್ನನ್ನು ನೋಡಿ ಹುಬ್ಬು ಗಂಟಿಕ್ಕಿದ, ಕುಹುಕವಾಡಿದ, ಸೊಟ್ಟಗೆ ನಕ್ಕ, ಅವಾಚ್ಯ ಶಬ್ದಗಳಿಂದ ಬೈದ, ಚಾಡಿ ಹೇಳಿದ ಅಂತೆಲ್ಲ ಕಂಪ್ಲೇಂಟ್ ಮಾಡಿ ಶಿಕ್ಷೆ ಕೊಡಿಸಲು ಸಾಧ್ಯವಿಲ್ಲ. ದೈಹಿಕ ಪ್ರತೀಕಾರಕ್ಕಷ್ಟೆ ಇಲ್ಲಿ ಶಿಕ್ಷೆ. ಆದರೆ ನಮ್ಮ ದುರ್ವರ್ತನೆಯಿಂದ ಎಷ್ಟು ಜನಕ್ಕೆ ಹಾನಿಯಾಗಬಹುದು?! ಊಹಿಸಲಿಕ್ಕಾಗುವುದಿಲ್ಲ… ಹಾಗಾಗಿ ನಾವು ನಮ್ಮ ನಮ್ಮ ವರ್ತನೆಯನ್ನು ನಿಯಂತ್ರಣದಲ್ಲಿಟ್ಟರೂ ಸಾಕು ಅದೆಷ್ಟೋ ಶಾಂತಿ ಸಮಾಜದಲ್ಲಿ ನೆಲೆಸಿಬಿಡುತ್ತದೆ ಎನ್ನುತ್ತದೆ ಈ ಪ್ರಬಂಧ. ಇದು ನಾ ಓದಿದ ಅತ್ಯುತ್ತಮ ಪ್ರಬಂಧಗಳಲ್ಲೊಂದು. ಅಷ್ಟೇ ಪ್ರಭಾವಿಸಿದ ಮತ್ತೊಂದು ಬರಹವೆಂದರೆ H.A.Bates ಬರೆದ The goat and the stars ಎನ್ನುವ ಕತೆ. ಕತೆ ಹೀಗೆ ಸಾಗುತ್ತದೆ…

ಅದು ಕ್ರಿಸ್ಮಸ್ ಹಬ್ಬದ ಸಮಯ. ನಗರದ ಚರ್ಚಿನ ಮುಂದೆ ದೊಡ್ಡಕ್ಷರಗಳಲ್ಲಿ,

Help us to help others. No gift too large, None too small. Give generously.

THIS MEANS YOU!

(A.G.Gardiner)

ಅಂತ ಬೋರ್ಡಿನ ಮೇಲೆ ಬರೆದಿರುತ್ತದೆ. ದಿನಾಲೂ ತನ್ನ ಹಳ್ಳಿಯಿಂದ ನಗರಕ್ಕೆ ಬರುತ್ತಿದ್ದ ಒಂದು ಪುಟ್ಟ ಮುಗ್ಧ ಹುಡುಗ ಇದನ್ನು ಪ್ರತಿನಿತ್ಯವೂ ನೋಡುತ್ತಿರುತ್ತಾನೆ. ಬೋರ್ಡಿನ ಮೇಲೆ ಕೊನೆಯಲ್ಲಿ ದಪ್ಪಕ್ಷರಗಳಲ್ಲಿದ್ದ THIS MEANS YOU ಅವನನ್ನು ಬಹಳ ಡಿಸ್ಟರ್ಬ್ ಮಾಡುತ್ತಿರುತ್ತದೆ. ಅದು ತನಗೇ ಹೇಳುತ್ತಿರುವುದು ಎಂದನ್ನಿಸಿಬಿಟ್ಟಿರುತ್ತದೆ ಅವನಿಗೆ. ಹಬ್ಬ ಹತ್ತಿರತ್ತಿರವಾಗುತ್ತಾ ಅದು ಅವನನ್ನು ಸಾದ್ಯಂತ ಕಾಡತೊಡಗುತ್ತದೆ. ಕೊನೆಗವನು ಇದರಿಂದ ಮುಕ್ತಿ ಪಡೆಯಲಿಕ್ಕಾಗಿ ತಾನು ಅತಿ ಮುದ್ದಿನಿಂದ ಸಾಕಿದ್ದ ತನ್ನ ಪ್ರಾಣವೇ ಆಗಿದ್ದ ಪುಟ್ಟ ಮೇಕೆಯ ಮರಿಯನ್ನು ಚರ್ಚಿಗೆ ದಾನ ಮಾಡಲು ತಯಾರಾಗುತ್ತಾನೆ. ಅವನಲ್ಲಿ ಅದನ್ನು ಮೀರಿದ ಅತ್ಯಮೂಲ್ಯ ವಸ್ತು ಬೇರೆಂತದ್ದೂ ಇಲ್ಲ. ತಾನು ತನ್ನ ಪ್ರಾಣವನ್ನೇ ಚರ್ಚಿಗೆ ನೀಡುತ್ತಿದ್ದೇನೆ, ಹಾಗಾಗಿ ಇದೇ ಶ್ರೇಷ್ಠ ದಾನ ಎಂದು ಭಾವಿಸಿ ತನ್ನ ಅತಿ ಮುದ್ದಿನ ಮೇಕೆಯ ಮರಿಯನ್ನು ಅಗಲುವ ತೀವ್ರ ದುಃಖವನ್ನು ಸಹಿಸಿಕೊಂಡು ಚರ್ಚಿಗೆ ಅದನ್ನು ಕರೆತರುತ್ತಾನೆ.

ಅಲ್ಲಿ ನೋಡಿದರೆ ಎಲ್ಲರೂ ಧೂಪ, ಅಗರಬತ್ತಿ ಹಿಡಿದು ಸರತಿ ಸಾಲಿನಲ್ಲಿ ನಿಂತಿರುತ್ತಾರೆ ಮತ್ತು ಮೇಕೆಮರಿಯನ್ನು ಹೊತ್ತು ತಂದಿದ್ದ ಇವನನ್ನು ವಿಚಿತ್ರವಾಗಿ ನೋಡುತ್ತಾರೆ. ಇವನು ಆ ಮೇಕೆ ಮರಿಯನ್ನು ಚರ್ಚಿಗೆ ದಾನ ಮಾಡಲು ಬಂದಿದ್ದಾನೆ ಎಂದು ತಿಳಿದ ಅವರು “ನಿನ್ನ ಮೇಕೆಮರಿಯನ್ ತಗಂಡ್ ಅವ್ರೇನ್ ಮಾಡ್ತಾರೋ ಹುಚ್ಚಪ್ಪಾ…” ಎನ್ನುವ ಹಾಗೆ ನಗಾಡುತ್ತಾರೆ.

ಆಗ ಆ ಹುಡುಗನಿಗೆ ರಿಯಲೈಸ್ ಆಗುತ್ತದೆ, THIS MEANS YOU ವಾಕ್ಯದಲ್ಲಿದ್ದ YOU ತಾನಲ್ಲ, ಮತ್ತು ಅದು ತನ್ನಂತ ಪುಟ್ಟ ಮಕ್ಕಳಿಗಲ್ಲ ಎಂದು.

ಆಗ ಅವನ ಮನಸ್ಸು ನಿರಾಳವಾಗಿಬಿಡುತ್ತದೆ. ತಾನು ತನ್ನ ಮುದ್ದು ಮರಿಯನ್ನು ಚರ್ಚಿಗೆ ಕೊಡುವಷ್ಟಿಲ್ಲ ಎನ್ನುವ ಸಂತೋಷದಲ್ಲಿ ಅವನು ತೇಲುತ್ತಾನೆ. ನಂತರ ಅಲ್ಲಿಂದ ನೇರ ಆಡಿನ ಮರಿಯನ್ನು ಅವಚಿಕೊಂಡು ಮನೆಗೋಡುತ್ತಾನೆ. ದೊಡ್ಡವರ ಕೃತಕ ಡೋಂಗಿತನದ ವ್ಯವಹಾರಿಕ ಜಗತ್ತಿಗೂ ಪುಟ್ಟ ಮಕ್ಕಳ ಮುಗ್ಧ ಪ್ರಪಂಚಕ್ಕೂ ಎಷ್ಟೊಂದು ವ್ಯತ್ಯಾಸ… ಅವನ ನಿಸ್ಪೃಹ, ನಿಸ್ವಾರ್ಥ, ನಿರ್ವ್ಯಾಜ್ಯ ಭಗವಂತನ ಮೇಲಿನ, ದೀನದಲಿತರ ಮೇಲಿನ ಪ್ರೇಮ ಬಲಿತ ತಲೆಗಳಿಗೆ ಎಂದಿಗಾದರೂ ಬರಲು ಸಾಧ್ಯವಾ….

ಈ ಕತೆಯ ಪುಟ್ಟ ಹುಡುಗ ನಾನೇ ಇರಬಹುದೇನೋ…. ಆ YOU ಎನ್ನುವುದನ್ನು ನನಗೇ ಅನ್ವಯಿಸಿಕೊಳ್ಳುವ ಮುಗ್ಧತೆ ನನ್ನಲ್ಲೂ ಇತ್ತೇನೋ… ಅನಿಸುತ್ತಿರುತ್ತದೆ ನನಗೆ. ಕೆಲವೊಮ್ಮೆ ಯಾರೋ ಕೇಳುವ ಪ್ರಶ್ನೆಗೆ ನಾನೇ ಉತ್ತರಿಸಲು ಉದ್ಯುಕ್ತಳಾಗುವಾಗೆಲ್ಲ ನನ್ನನ್ನು ಇದೇ ಭಾವ ಆವರಿಸಿರುತ್ತದೆ. ನಂತರ ಕೊನೆಗೆ ಅದು ನನಗೆ ಕೇಳಿದುದಾಗಿರಲಿಲ್ಲ ಎಂದೆನಿಸುವಾಗ ಈ ಕತೆ ಎಷ್ಟೋ ಬಾರಿ ನೆನಪಾಗಿದೆ. ಮಡುವಿಗೆ ಬೀಳದಂತೆ ಹಿಡಿದು ನಿಲ್ಲಿಸಿದೆ. ಎಲ್ಲ ಪ್ರಶ್ನೆಗೂ ಉತ್ತರ ಬೇಕಿರುವುದಿಲ್ಲ. ಕೆಲ ಪ್ರಶ್ನೆಗಳಂತೂ ಬರೀ ಪ್ರಶ್ನೆಗಳಷ್ಟೇ. ಹೀಗಿರುವಾಗ ಸುಮ್ಮನೇ ಉತ್ತರಿಸುವ ದರ್ದನ್ನು ಮೈಮೇಲೆ ಏಕೆ ಎಳೆದುಕೊಳ್ಳಬೇಕು ಎನಿಸುತ್ತಿರುತ್ತದೆ.

ಹೀಗೆ ಬರಹವೊಂದು ಜೀರ್ಣವಾಗಿ ಮನೋಗತವಾಗುವ ಈ ಪ್ರಕ್ರಿಯೆ ನನಗಂತೂ ಬಹಳ ಆಪ್ತ… ಈ ಎಲ್ಲ ಭಾವಗಳೂ ಪರಮ ನಮ್ಮವೇ ಅನಿಸುವಾಗ ಭಾಷೆಯ ಚುಂಗು ಹಿಡಿದು ಏಕೆ ದೂರಲಿ… ತೆಕ್ಕೆ ಸೇರಿದ ಹಕ್ಕಿಗೆ ನನ್ನೆದೆ ಗೂಡಾಗಲಿ…