ಮಣ್ಣು ನಿರ್ಜೀವ ವಸ್ತು ಅಲ್ಲ ಅದು ಜೀವಂತ! ಅದರಲ್ಲಿ ಎಷ್ಟೋ ಕ್ರಿಮಿ ಕೀಟಗಳು, ಶಿಲೀಂದ್ರಗಳು, ಬಹುಮುಖ್ಯವಾಗಿ ಎರೆ ಹುಳುಗಳು ಇವೆಲ್ಲ ಇರಲೇಬೇಕು, ಅವುಗಳನ್ನು ಹೇಗೆ ಹೆಚ್ಚಿಸಬೇಕು, ಮಣ್ಣಿಗೆ ಹೊದಿಕೆ ಹೇಗೆ ಮಾಡಬೇಕು, ಸಸ್ಯಗಳನ್ನು ಸಹಜವಾಗಿ ಹೇಗೆ ಪೋಷಿಸಬೇಕು ಎಂಬೆಲ್ಲ ಹೊಸ ಹೊಸ ವಿಷಯಗಳ ಅರಿವು ನನಗೆ ಈ ಮಹಾನುಭಾವರು ಬರೆದ ಪುಸ್ತಕಗಳ ಮೂಲಕ ತಿಳಿದಿತ್ತು. ಇನ್ನೂ ಹಲವಾರು ಟಿಪ್ಪಣಿ ಮಾಡಿಟ್ಟುಕೊಂಡ ನನ್ನ ಹೊತ್ತಿಗೆಗಳು ಬೃಹದಾಕಾರವಾಗಿ ಬೆಳೆದಿದ್ದವು. ಈಗ ಗಿಡಗಳನ್ನು ಬೆಳೆಯುವ ಸಮಯ ಬಂದಿತ್ತು! ಇದು ಹೊಸದಾಗಿ ರೈತರಾಗುವವರಿಗೆ ಎದುರಾಗುವ ಇನ್ನೊಂದು ಸಮಸ್ಯೆ. ಸಿಕ್ಕಾಪಟ್ಟೆ ಮಾಹಿತಿಗಳು ತಲೆಯಲ್ಲಿ ತುಂಬಿ ತಬ್ಬಿಬ್ಬಾಗಿ ಬಿಡುತ್ತಾರೆ.  
ಗುರುಪ್ರಸಾದ್‌ ಕುರ್ತಕೋಟಿ ಬರೆಯುವ ಅಂಕಣ “ಗ್ರಾಮ ಡ್ರಾಮಾಯಣ”

ಐದು ವರ್ಷಗಳ ಹಿಂದೆ ಹೊಲ ಮಾಡಬೇಕು ಅನ್ನುವ ಹುಚ್ಚು ಹಿಡಿಸಿಕೊಂಡು ಕೆಲಸ ಬಿಟ್ಟಾದ ಬಳಿಕ ಕೃಷಿಯ ಕುರಿತು ಹಲವು ಪುಸ್ತಕಗಳನ್ನು ತರಿಸಿಕೊಂಡು ಓದುತ್ತಿದ್ದೆ. ಆಗ ಮತ್ತೇನಿತ್ತು ಕೆಲಸ!? ಆರಂಭದಲ್ಲಿ ಕೆಲಸ ಬಿಟ್ಟಾಗ ಒಂಥರಾ ಹುರುಪು. ಲಗಾಮು ಕಿತ್ತು ಬಿಸಾಡಿದ ಗೂಳಿಯಂತೆಯೇ ಆವೇಶ… ಇಷ್ಟು ದಿನ ಹಿಡಿದಿಟ್ಟಿದ್ದಿರಲ್ಲ..? ಈಗ ನೋಡಿ, ನನ್ನ ಸಾಮರ್ಥ್ಯ ಏನಂತ ಇಡೀ ಜಗತ್ತಿಗೆ ತಿಳಿಯುತ್ತೆ ಎಂಬ ವೀರಾವೇಶ! ಆಗ ತಾನೇ ಕೆಲಸ ಬಿಟ್ಟಿದ್ದಕ್ಕೆ ಒಂದಿಷ್ಟು ದುಡ್ಡು ಕೈಯಲ್ಲಿ ಇತ್ತು. ಬಹುಶಃ ಆವೇಶಕ್ಕೆ ಕಾರಣ ಅದೂ ಇರಬಹುದು. ನನ್ನಪ್ಪನಿಗೆ ಮಾತ್ರ ತುಂಬಾ ಚಿಂತೆ ಶುರುವಾಗಿತ್ತು. ನಾನು ಅಮೆರಿಕೆಯಲ್ಲಿದ್ದಾಗ, ಬೇಗ ಬಂದುಬಿಡು ಅನ್ನುತ್ತಿದ್ದ ಅವನು ಈಗ, ನೀನು ಅಲ್ಲೇ ಇದ್ದಿದ್ರ ಚೊಲೋ ಇತ್ತು, ಹಿಂಗ್ ಕೆಲಸ ಬಿಟ್ಟು ಹೊಲಾ ಮಾಡ್ತಿ ಅಂತ ಗೊತ್ತಿದ್ರ ನಿನಗ ಬಾ ಅಂತ ದೇವ್ರಾಣಿಗೂ ಹೇಳ್ತಿದ್ದಿಲ್ಲ… ಅಂತ ಕೊರಗುತ್ತಿದ್ದ.

ಕೃಷಿ ಮಾಡಬೇಕು ಅಥವಾ ಏನಾದರೂ ಸ್ವಂತದ ದುಡಿಮೆ ಮಾಡಬೇಕು ಎಂದು ಕೆಲಸ ಬಿಟ್ಟು ಬರುವ ಎಷ್ಟೋ ಯುವಕರಿಗೆ ಇಂತಹ ಅನುಭವ ಆಗೇ ಆಗುತ್ತವೆ. ಮನೆಯಲ್ಲಿ ತಂದೆ-ತಾಯಿ ಅದಕ್ಕೆ ಯಾವಾಗಲೂ ಅಡ್ಡಿ ಮಾಡುತ್ತಾರೆ. ಅವರು ಸ್ವತಹ ರೈತರೇ ಆಗಿದ್ದರೂ ಕೂಡ. ಅದು ಹೇಗೆ ಅಂದರೆ ತಾಯಿ ತಾನೇ ಹೆಣ್ಣಾಗಿ ಹುಟ್ಟಿ ತನಗೆ ಹೆಣ್ಣು ಮಗು ಬೇಡ ಅಂದ ಹಾಗೆ. ಯಾಕಂದರೆ ಅಮ್ಮಂದಿರಿಗೆ ಹೆಣ್ಣಾಗಿ ತಾನು ಪಟ್ಟ ಕಷ್ಟ ತನ್ನ ಮಗಳು ಪಡುವುದು ಬೇಡ ಅಂತ ಅನಿಸುತ್ತೇನೋ.. ಅಪ್ಪನಿಗೆ ತನ್ನ ಮಗ ಫೇಲ್ ಆಗಿಬಿಟ್ಟರೆ ಎಂಬ ಭಯ ಇರುತ್ತದೇನೋ. ಅದೊಂದು ಸಹಜ ಕಾಳಜಿಯೇ ಇರಬಹುದು. ಆದರೂ “ಆಯ್ತು ಮಗನೆ ಒಂದ್ ಸಲ ಪ್ರಯತ್ನಿಸು, ನೀನು ಸೋತು ಬಿದ್ದರೆ ಎತ್ತುವುದಕ್ಕೆ ನಾನಿದ್ದೀನಿ” ಅಂತ ಒಂದು ಧೈರ್ಯದ ಮಾತು ಹೇಳಿಬಿಟ್ಟರೆ ಮಕ್ಕಳು ಏನೆಲ್ಲಾ ಸಾಧಿಸಿಬಿಡಬಲ್ಲರು ಅಲ್ಲವೇ? ಅಥವಾ ತಪ್ಪುಗಳ ಅರಿವಾಗಿ ಇದರ ಸಹವಾಸ ಬೇಡಾ ಅಂತ ಬಿಟ್ಟಾರು. ನಾನು ನನ್ನ ಮಗಳಿಗಾದರೂ ಹಾಗೆ ಧೈರ್ಯದಿಂದ ಮುನ್ನುಗ್ಗು ಅನ್ನಬೇಕು ಅಂದುಕೊಳ್ಳುತ್ತಿದ್ದೆ. ಮುಂದೆ ಅಂತಹ ಪರಿಸ್ಥಿತಿ ಬಂದಾಗ ಏನು ಮಾಡುತ್ತೀನೋ… ಗೊತ್ತಿಲ್ಲ…!

ಕೃಷಿ ವಿಚಾರದಲ್ಲಿ ಅಪ್ಪನ ವಿರೋಧ ಇದ್ದರೂ, ನನ್ನ ಆವೇಶಕ್ಕೆ ಎಣ್ಣೆ ಹಾಕಿ ಪೋಷಿಸುತ್ತಿದ್ದ ಆಶಾ ಇದ್ದಳಲ್ಲ. ಅವಳ, ನೀನು ಅಂದುಕೊಂಡಿದ್ದು ಮಾಡು, ನಾನಿದ್ದೇನೆ ಎಂಬ ಒಂದು ಮಾತು ನನಗೆ ತುಂಬಾ ಧೈರ್ಯ ಕೊಟ್ಟಿದ್ದಂತೂ ಹೌದು. ಅದೆಲ್ಲ ಸರಿ ದುಡ್ಡಿಗೇನು ಬೇರಿದೆಯೇ? ಗಿಡ ಬೆಳೆಸಿದಂತೆ ದುಡ್ಡನ್ನು ಬೆಳೆಸಲು ಆದೀತೆ! ಕೈಯಲ್ಲಿದ್ದ ಧನ ಕರಗಿದಂತೆಯೇ ಆವೇಶವೂ ಸೊರಗುತ್ತದೆ. ಹೀಗಾಗಿ ನನಗೆ ಆದಷ್ಟು ಬೇಗನೆ ಒಂದು action plan ಹಾಕಿಕೊಂಡು ಧುಮುಕಬೇಕಿತ್ತು.

ಓದಿದ ಪುಸ್ತಕಗಳಲ್ಲಿ ನನ್ನ ಮೆಚ್ಚಿನವು ಇವು…
1. Make millions from Agriculture (C. Hariharan)
2. ಈ ಭೂಮಿ, ಈ ಸಸ್ಯ (ಡಾ. ಎಲ್. ನಾರಾಯಣ ರೆಡ್ಡಿ – ನಿರೂಪಣೆ: ಶ್ರೀ. ಬಂದಗದ್ದೆ ರಾಧಾಕೃಷ್ಣ)
3. ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ (ಶ್ರೀ. ಸುಭಾಷ ಪಾಲೇಕರ – ನಿರೂಪಣೆ: ಶ್ರೀ. ಶಂಕರಣ್ಣ ದೊಡ್ಡಣ್ಣವರ)
4. The One straw revolution (ಮುಸನೋಬು ಫುಕುವೋಕಾ)

ಬರಿ ಪುಸ್ತಕಗಳನ್ನು ಓದುವುದರಿಂದ ಸ್ಫೂರ್ತಿ ಸಿಕ್ಕೀತು, ಜ್ಞಾನ ವೃದ್ಧಿಯಾದೀತೆ ವಿನಃ ಕೃಷಿ ಮಾಡಲು ಆಗದು. ಅದನ್ನು ಮಾಡಿಯೇ ಕಲಿಯಬೇಕು. ಆದರೂ ಕೆಲವು basics ಅರ್ಥ ಮಾಡಿಕೊಳ್ಳಲು ಪುಸ್ತಕಗಳು ತುಂಬಾ ಸಹಾಯ ಮಾಡುತ್ತವೆ. ಅದರ ಜೊತೆಗೆ ಈಗಿನ YouTube ವೀಡಿಯೊಗಳು ಕೂಡ ತುಂಬಾ ಸಹಕಾರಿ. ಏನೇ ಆದರೂ ಕೆಲವು ಸಂಗತಿಗಳು ತಲೆಯೊಳಗೆ ಇಳಿಯುತ್ತಿರಲಿಲ್ಲ. ಪುಸ್ತಕಗಳಲ್ಲಿ ಓದಿದ್ದು, ತಿಳಿದುಕೊಂಡಿದ್ದು ಎಲ್ಲವನ್ನೂ ಈಗ ಅಳವಡಿಸಬೇಕಿತ್ತು.

ಅದರಲ್ಲಿ ನನಗೆ ತುಂಬಾ ಪ್ರಭಾವ ಬೀರಿದ್ದ ಮೊದಲ ವ್ಯಕ್ತಿ ನಮ್ಮ ಕರ್ನಾಟಕದ ಡಾ. ಎಲ್ ನಾರಾಯಣ ರೆಡ್ಡಿ. ಅವರ ಊರು ಮರಳೇನಹಳ್ಳಿ. ಈಗ ಅವರು ಇಲ್ಲ. ಅವರು ಕಲಿತಿದ್ದು ಬರಿ ಎಂಟನೆ ಕ್ಲಾಸು, ಆದರೆ ಕೃಷಿಯಲ್ಲಿ ಟಾಪ್ ಕ್ಲಾಸು! ಅವರ ಹೊಲಕ್ಕೆ ಹೋಗಿ ಅವರ ಬಳಿ ತರಬೇತಿ ಪಡೆಯುವ ವಿಚಾರ ಬಂತಾದರೂ, ಅದು ಆಗಲೇ ಇಲ್ಲ. ಅವರ ವಿಚಾರ ಧಾರೆಗಳು, ಅವರು ರಾಸಾಯನಿಕ ಬಳಕೆ ವಿರುದ್ಧ, ಕೆಲವು ರೈತರ ಮೈಗಳ್ಳತನಕ್ಕೆ ಬೈಯುವ ಪರಿ ಎಲ್ಲಾ ನನಗೆ ಇಷ್ಟ. ಅವರು ಪಕ್ಕಾ ಗಾಂಧಿ ವಾದಿ. ಅವರ ಜಮೀನು 4 ಎಕರೆ, ಅದರ ಬೆಲೆ 4 ಕೋಟಿಗೂ ಮಿಕ್ಕಿದ್ದೇನೋ, ಅಥವಾ ಅಮೂಲ್ಯವಾದದ್ದು. ಅಲ್ಲಿ ಅಷ್ಟು ಗಿಡಗಳನ್ನು ಅವರು ಬೆಳೆಸಿದ್ದಾರೆ. ಮಣ್ಣಿನಲ್ಲಿರುವ ಸಾವಯವ ಇಂಗಾಲದ ಮಹತ್ವ ಏನು ಅಂತ ಅವರಿಂದ ನನಗೆ ತಿಳಿದಿದ್ದು.

ಅವರದು ಸಂಪೂರ್ಣ ಸಾವಯವ ಪದ್ಧತಿ. ಯಾವುದೇ ರಸಗೊಬ್ಬರ, ಔಷಧಿಗಳನ್ನು ಬಳಸದೆ ಬಂಗಾರದ ಬೆಳೆ ತೆಗೆಯುವುದರಲ್ಲಿ ಅವರು ಸಿದ್ಧಹಸ್ತರು. ಮಹಾರಾಷ್ಟ್ರದಲ್ಲಿ ಹಸಿರು ಕ್ರಾಂತಿ ಮೂಡಿಸಿ, ರೈತರಿಗೆ ಸಾವಯವ ಕೃಷಿಯತ್ತ ಸೆಳೆದು ಅಥವಾ ಎಳೆದು ತರುತ್ತಿರುವ, ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮಿಜಿ ಅವರೂ ಕೂಡ ತುಂಬಾ ಮಾದರಿ ರೈತರು. ಅವರ ವಿಚಾರಧಾರೆಗಳಿಂದ ತುಂಬಾ ಪ್ರಭಾವಿತನಾಗಿದ್ದೇನೆ. ಅವರಿಗೆ ದಿ. ನಾರಾಯಣ ರೆಡ್ಡಿ ಅವರು ಇಲ್ಲಿಂದ ಅಲ್ಲಿಗೆ ರೈಲಿನಲ್ಲೇ ಪ್ರಯಾಣ ಮಾಡಿ, ಮಾರ್ಗದರ್ಶನ ನೀಡಿ ಬರುತ್ತಿದ್ದರು.

ಅದೇ ರೀತಿ ನನಗೊಂದು ದಿಕ್ಕು ತೋರಿಸಿಕೊಟ್ಟವರಲ್ಲಿ ಶ್ರೀ. ಸುಭಾಷ ಪಾಲೇಕರ ಅವರು ಕೂಡ ಒಬ್ಬರು. ಅವರು ಮಹಾರಾಷ್ಟ್ರದವರು. ಆದರೆ ಅವರ ಶಿಷ್ಯಂದಿರು ತುಂಬಾ ಜನ ಕರ್ನಾಟಕದವರೆ. ಅವರ ಬಗ್ಗೆ ತುಂಬಾ ಕೇಳಿದ್ದೆ. ಅವರ ಶಿಷ್ಯಂದಿರು ಕೈವಾರದ ಮಠದಲ್ಲಿ ನಡೆಸಿದ್ದ ಒಂದು ಕಾರ್ಯಾಗಾರಕ್ಕೆ ಹೋಗಿದ್ದೆ ಕೂಡ. ಅದು ನನ್ನ ಕಣ್ಣು ತೆರೆಸಿದ ಕಾರ್ಯಗಾರ. ಅದನ್ನು ನಡೆಸಿಕೊಟ್ಟಿದ್ದು ಶ್ರೀ. ಚಂದ್ರಶೇಖರ ಕದಡಿ ಹಾಗೂ ಶ್ರೀ. ಪ್ರಸನ್ನ ಕುಮಾರ್. ಈ ಪದ್ಧತಿಗೆ ಅವರಿತ್ತ ಹೆಸರು Zero Budget Natural Farming (ZBNF) ಅಥವಾ ಶೂನ್ಯ ಬಂಡವಾಳ ಕೃಷಿ ಅಂತ. ಈಗ ಅದಕ್ಕೆ SPNF (ಸುಭಾಶ್ ಪಾಲೇಕರ್ ನ್ಯಾಚುರಲ್ ಫಾರ್ಮಿಂಗ್) ಅಂತ ಮರುನಾಮಕರಣ ಮಾಡಿದ್ದಾರೆ. ಒಬ್ಬ ರೈತ ಒಂದು ನಾಟಿ ಹಸು ಸಾಕಿದರೆ ಸಾಕು, ಗೊಬ್ಬರವಿಲ್ಲದೆ ಬೆಳೆ ತೆಗೆಯಬಹುದು ಎಂಬ ವಿಚಾರವೇ ನನ್ನಲ್ಲಿನ ಉತ್ಸಾಹ ಇಮ್ಮಡಿಸಲು ಕಾರಣವಾಗಿತ್ತು.

ಮಣ್ಣು ನಿರ್ಜೀವ ವಸ್ತು ಅಲ್ಲ ಅದು ಜೀವಂತ! ಅದರಲ್ಲಿ ಎಷ್ಟೋ ಕ್ರಿಮಿ ಕೀಟಗಳು, ಶಿಲೀಂದ್ರಗಳು, ಬಹುಮುಖ್ಯವಾಗಿ ಎರೆ ಹುಳುಗಳು ಇವೆಲ್ಲ ಇರಲೇಬೇಕು, ಅವುಗಳನ್ನು ಹೇಗೆ ಹೆಚ್ಚಿಸಬೇಕು, ಮಣ್ಣಿಗೆ ಹೊದಿಕೆ ಹೇಗೆ ಮಾಡಬೇಕು, ಸಸ್ಯಗಳನ್ನು ಸಹಜವಾಗಿ ಹೇಗೆ ಪೋಷಿಸಬೇಕು ಎಂಬೆಲ್ಲ ಹೊಸ ಹೊಸ ವಿಷಯಗಳ ಅರಿವು ನನಗೆ ಈ ಮಹಾನುಭಾವರಿಂದ ತಿಳಿದಿತ್ತು. ಇವೆಲ್ಲ ವಿಷಯಗಳ ಜೊತೆಗೆ ಇನ್ನೂ ಹಲವಾರು ಟಿಪ್ಪಣಿ ಮಾಡಿಟ್ಟುಕೊಂಡ ನನ್ನ ಹೊತ್ತಿಗೆಗಳು ಬೃಹದಾಕಾರವಾಗಿ ಬೆಳೆದಿದ್ದವು. ಈಗ ಗಿಡಗಳನ್ನು ಬೆಳೆಯುವ ಸಮಯ ಬಂದಿತ್ತು! ಇದು ಹೊಸದಾಗಿ ರೈತರಾಗುವವರ ಇನ್ನೊಂದು ಸಮಸ್ಯೆ. ಸಿಕ್ಕಾಪಟ್ಟೆ ಮಾಹಿತಿಗಳು ತಲೆಯಲ್ಲಿ ತುಂಬಿ ತುಳುಕಾಡುತ್ತಿರುತ್ತವೆ. ಆದರೆ ಅವುಗಳನ್ನು ಅಳವಡಿಸುವತನಕ ಅವು ಗೊತ್ತಾಗುವುದೇ ಇಲ್ಲ!

(ಡಾ. ಎಲ್. ನಾರಾಯಣ ರೆಡ್ಡಿ)

ಕೃಷಿ ಮಾಡಬೇಕು ಅಥವಾ ಏನಾದರೂ ಸ್ವಂತದ ದುಡಿಮೆ ಮಾಡಬೇಕು ಎಂದು ಕೆಲಸ ಬಿಟ್ಟು ಬರುವ ಎಷ್ಟೋ ಯುವಕರಿಗೆ ಇಂತಹ ಅನುಭವ ಆಗೇ ಆಗುತ್ತವೆ. ಮನೆಯಲ್ಲಿ ತಂದೆ-ತಾಯಿ ಅದಕ್ಕೆ ಯಾವಾಗಲೂ ಅಡ್ಡಿ ಮಾಡುತ್ತಾರೆ. ಅವರು ಸ್ವತಹ ರೈತರೇ ಆಗಿದ್ದರೂ ಕೂಡ. ಅದು ಹೇಗೆ ಅಂದರೆ ತಾಯಿ ತಾನೇ ಹೆಣ್ಣಾಗಿ ಹುಟ್ಟಿ ತನಗೆ ಹೆಣ್ಣು ಮಗು ಬೇಡ ಅಂದ ಹಾಗೆ.

ಛೇ ಇಷ್ಟು ಬೇಗ ಬೆಳಗಾಯ್ತೆ, ತಾನು ಎಲ್ಲಿರುವೆ ಎಂಬ ಹಲವಾರು confusion ಗಳಲ್ಲಿ ಮುಳುಗಿದ್ದ ನಾಗಣ್ಣನಿಗೆ ಒಂದು ಕಪ್ ಚಹಾ ಕೊಟ್ಟೆ. ಹೇಗಾದರೂ ಮಾಡಿ ಎಚ್ಚರಿಸಬೇಕಿತ್ತಲ್ಲ! ಅವರು ಸ್ವಲ್ಪ ಸುಧಾರಿಸಿಕೊಂಡ ಮೇಲೆ, ನನ್ನ ಡೈರಿಯಲ್ಲಿದ್ದ ರೇಖಾ ಚಿತ್ರ ಒಂದನ್ನು ತೋರಿಸುತ್ತ… ನೋಡಿ ಇದಕ್ಕೆ “ಪಂಚ ತರಂಗಿಣಿ” ಅಂತಾರೆ, ನಮ್ಮ ಹೊಲದಲ್ಲಿ ಇದೆ ರೀತಿಯಲ್ಲಿ ಬೆಳೆಯೋ ವಿಚಾರ ಇದೆ ಅಂತ ಒಂದು ಗೂಗ್ಲಿ ಎಸೆದೆ. ಅದನ್ನು ನೋಡಿ ಅವರು ತಲೆ ಆಡಿಸುತ್ತಿದ್ದರಾದರೂ ಅದು ಅವರಿಗೆ ಐತಿಹಾಸಿಕ ಸಿನೆಮಾದಲ್ಲಿ ತೋರಿಸುವ ವಿಚಿತ್ರ ನಕಾಶೆಯಂತೆ ಕಂಡಿತೇನೋ. “ಅರ್ಥ ಆಗ್ಲಿಲ್ಲ ಸರ್” ಅಂದರು. ನಮಗೆ ತಿಳಿದಿರುವ ಒಂದು ವಿಷಯ ಎದುರಿನವರಿಗೆ ಗೊತ್ತಿಲ್ಲದಾಗಲೇ ತಾನೆ ಮಜಾ. ನಾನು ಅದರ ವಿವರಣೆಗೆ ತೊಡಗಿದೆ.

“ನಾಗಣ್ಣ, ಕಾಡಲ್ಲಿ ಹೇಗಿರುತ್ತೆ? ಒಂದೇ ತರದ ಗಿಡಗಳು ಇರ್ತಾವ ಅಥವಾ ಬೇರೆ ಬೇರೆ ರೀತಿಯ ಗಿಡಗಳು ಇರ್ತಾವ?” ಅನ್ನುವ ಭಾಋೀ ಕ್ಲಿಷ್ಟ ಪ್ರಶ್ನೆಯೊಂದಿಗೆ ಶುರು ಮಾಡಿದೆ!

“ಬೇರೆ ಬೇರೆ ಇರ್ತಾವೆ..” ಎರಡು ಗುಟುಕು ಚಹಾ ಸವಿದಿದ್ದ ನಾಗಣ್ಣ ಸ್ವಲ್ಪ ಚುರುಕಾಗಿದ್ದು ಕಂಡು ಬಂತು.

“Right… ಅಲ್ಲಿ ಒಂದು ತರಹದ ವೈವಿಧ್ಯತೆ ಇರುತ್ತಲ್ವ. ಕಾಡಲ್ಲಿ ಯಾರೂ ಗೊಬ್ಬರ ಹಾಕೋಲ್ಲ, ನೀರು ಬಿಡೋದಿಲ್ಲ, ಔಷಧಿ ಹೊಡಿಯೋದಿಲ್ಲ.. ಅವೇನೂ ಇಲ್ಲದೆ ಬೇಳೀತಾವಲ್ವ.. ಅದೇ ರೀತಿ ಸಹಜವಾಗಿ ಬೆಳೆಯುವಂತೆ ಮಾಡುವ ಪದ್ಧತಿ ಇದು. ಇದರಲ್ಲಿ ಐದು ಸ್ತರ/layer ಗಳು ಇರುತ್ತೆ. ತುಂಬಾ ದೊಡ್ಡ ಗಿಡಗಳು, ಅದಕ್ಕಿಂತ ಸಣ್ಣದು, ಇನ್ನೂ ಸಣ್ಣದು… ಹೀಗೆ ಒಂದಕ್ಕೊಂದು ಪೂರಕವಾಗಿ ಬೆಳೆಯುವಂತಹ ವ್ಯವಸ್ಥೆ ಇದು.”

“ಒಹೋ ಈಗ ಅರ್ಥ ಆಯ್ತು ಸರ್, ಒಂದ್ ನಿಮಿಷ…” ಅಂತ ತಮ್ಮ ನೋಟ್ ಬುಕ್ ಒಂದನ್ನು ತೆಗೆದರು. ನಾನು ಹೇಳಿದ್ದನ್ನು ಬರೆದುಕೊಳ್ಳುವ ವಿಧೇಯ ವಿದ್ಯಾರ್ಥಿಯಂತೆ!

“ಇದು ಕಾಡಿನ ರೀತಿಯಲ್ಲಿ ಬೆಳಿಯುತ್ತೆ ಅಂದ್ರಿ… ಹಾಗಾದ್ರೆ ಈ ರೀತಿಯಲ್ಲಿ ಬೆಳೆದರೆ ಗೊಬ್ಬರ ಹಾಕೋದೆ ಬೇಡ್ವಾ ಸರ್? fantastic!!” ಅಂತ ಇನ್ನೂ ಉತ್ಸಾಹಗೊಂಡರು.

“ಹೌದು.. ಆದರೆ ಅದು ಅಷ್ಟು ಸರಳ ಇಲ್ಲ… ಮೊದಲು ಜೀವಾಮೃತ ಹಾಕಿ ಮಣ್ಣಿಗೆ ಜೀವ ಬರಿಸಬೇಕು. ಅದನ್ನ ನಾಟಿ ಹಸುವಿನ ಸಗಣಿ ಹಾಗೂ ಗಂಜಲ ಬಳಸಿ ಮಾಡುತ್ತಾರೆ!”

ಬೆಳಿಗ್ಗೆ ಬೆಳಿಗ್ಗೆ ಹೊಸ ಹೊಸ ಶಬ್ಧಗಳನ್ನು ಹೇಳಿ ಹಿಂಸಿಸುತ್ತಿದ್ದ ಗುರುವನ್ನು ಏನು ಮಾಡಬೇಕು ಅಂತ ತೋಚದೆ, ಗೊಬ್ಬರವೆ ಬೇಡಾ ಅಂದ್ರಿ, ಸಗಣಿಯಲ್ಲಿ ಜೀವಾಮೃತ ಮಾಡಬೇಕು ಅಂತೀರಿ … ಅಂತ ನಾಗಣ್ಣ ತಮ್ಮ ಅಸಮಾಧಾನವನ್ನು ಹೊರಗೆಡಹಿದರು.

“ಮೊಸರಲ್ಲಿ ಏನಿರುತ್ತೆ ಹೇಳಿ?”

“ಬ್ಯಾಕ್ಟೀರಿಯಾಗಳು ಸರ್” ಮೈಕ್ರೋಬಯಾಲಜಿ ಓದಿದ್ದ ನಾಗಣ್ಣ, ಇದು ಒಂದು ಪ್ರಶ್ನೆಯೇ ಎಂಬಂತೆ ನನ್ನ ಕಡೆ ನೋಡಿದರು.

“Exactly… ಅದೇ ರೀತಿ ಜೀವಾಮೃತವೂ ಒಂದು. ನಾಟಿ ಹಸುವಿನ ಸಗಣಿಯಲ್ಲಿ ಕೋಟಿಗಟ್ಟಲೆ ಜೀವಾಣುಗಳು ಇರುತ್ತವೆ. ಅವುಗಳನ್ನು ಇನ್ನಷ್ಟು ಸಂಖ್ಯೆಗಳಲ್ಲಿ ವೃದ್ಧಿಸಿ ಭೂಮಿಯಲ್ಲಿ ಅವುಗಳ ಸಂಖೆ ಹೆಚ್ಚಿಸುವುದೇ ಈ ವಿಧಾನದ ಮೂಲ ಧ್ಯೇಯ.” ನಾಗಣ್ಣ ತಿಳಿಯಿತು ಎಂಬಂತೆ ತಲೆ ಆಡಿಸಿ ಏನೇನೋ ಬರೆದುಕೊಂಡರು…

ಹಾಲಿಗೆ ಮೊಸರಿನ ಹನಿ ಹಾಕಿದರೂ ಇಡಿ ಹಾಲಿನಲ್ಲಿ ಜೀವಾಣುಗಳು ವೃದ್ಧಿಸಿ ಇಡಿ ಹಾಲು ಮೊಸರಾಗುವಂತೆಯೇ ಭೂಮಿಯಲ್ಲಿನ ಜೀವಾಣುಗಳನ್ನು ವೃಧ್ಧಿ ಮಾಡಲು ಈ ಜೀವಾಮೃತ ಸಾಕು. ಅದನ್ನು ಹೇಗೆ ಮಾಡಬೇಕು ಅಂತ ಗೊತ್ತಿತ್ತಾದರೂ ಅದನ್ನು ಮಾಡುವ ಸಂದರ್ಭ ಈಗ ಬಂದಿತ್ತು. ಅದನ್ನು ಮಾಡಲಿಕ್ಕೆ ನಾಟಿ ಹಸುವಿನ ಸಗಣಿ, ಗಂಜಲ ಬೇಕಿತ್ತು. ಹೆಗಡೆ ಮಾವನ ಕೊಟ್ಟಿಗೆಯಲ್ಲಿ ನಾಟಿ ಹಸುಗಳು ಇರಲಿಲ್ಲ. ಹಳ್ಳಿಯಲ್ಲಿ ಇಷ್ಟೊಂದು ಮನೆಗಳಿವೆ, ಎಲ್ಲೋ ಒಂದು ಕಡೆ ಸಗಣಿ ಸಂಗ್ರಹಿಸಿದರಾಯ್ತು ಎಂಬುದು ನನ್ನ ತರ್ಕ ಆಗಿತ್ತು…

*****

ಆಗಲೇ ಗಂಟೆ ಹತ್ತಾಗಿತ್ತು. ಬೇಗ ತಯಾರಾಗಿ ಹೊಲಕ್ಕೆ ಹೋಗಿ ಬರೋಣ ಅಂತ ಶಿಷ್ಯೋತ್ತಮನಿಗೆ ಹೇಳಿದೆ. ಈರುಳ್ಳಿ, ಟೊಮೆಟೊ, ಮೆಣಸಿನಕಾಯಿ ಹೆಚ್ಚಿ, ಉಪ್ಪಿಟ್ಟು ಮಾಡಿದೆ. ನಾಗಣ್ಣ ತಾನು ಒಳ್ಳೆಯ ಅಡುಗೆ ಮಾಡುತ್ತೇನೆ ಅಂತ ಹೇಳಿದ್ದರಾದರೂ ಮೊದಲನೇ ದಿನವಾಗಿದ್ದರಿಂದ ನಾನೇ ಮಾಡಿದೆ. ಅದೇನು ದೊಡ್ಡ ಕೆಲಸವೂ ಆಗಿರಲಿಲ್ಲ. ಬೆಂಗಳೂರಿನಿಂದ ಬರುವಾಗ ಆಶಾ ready-to-eat ಉಪ್ಪಿಟ್ಟಿನ ರವ ತಯಾರಿಸಿ ಕೊಟ್ಟಿದ್ದಳು. ಜೊತೆಗೆ ಹಚ್ಚಿದ ಅವಲಕ್ಕಿ ಕೂಡ. ಮೀಡಿಯಂ ಅವಲಕ್ಕಿಗೆ ವಗ್ಗರಣೆ, ಖಾರದ ಪುಡಿ ಹಾಗೂ ಮೆಂತ್ಯ ಹಿಟ್ಟು ಹಾಕಿ ಕಲಸಿದರೆ ನಮ್ಮ ಕಡೆ ಅದಕ್ಕೆ ಹಚ್ಚಿದ ಅವಲಕ್ಕಿ ಅಂತಾರೆ. ಅದಕ್ಕೆ ಮೊಸರು ಇಲ್ಲವೇ ಈರುಳ್ಳಿ ಟೊಮೇಟೊ ಸಣ್ಣಗೆ ಹೆಚ್ಚಿ ತಿಂದರೆ, ಅದರ ರುಚಿ ತಿಂದವರಿಗೆ ಗೊತ್ತು!

ಉಪ್ಪಿಟ್ಟು ಮತ್ತು ಅವಲಕ್ಕಿಗಳು ನನ್ನ ಜೀವನದಲ್ಲಿ ಎಷ್ಟೊಂದು ಪ್ರಾಮುಖ್ಯತೆ ಪಡೆದಿವೆ ಎಂದರೆ, ಅವುಗಳಿಲ್ಲದ ಜೀವನ ಕಲ್ಪಿಸಿಕೊಳ್ಳುವುದು ಅಸಾಧ್ಯ ಎನಗೆ. ಅವೊಂದು ರೀತಿಯ ಆಪದ್ಬಾಂಧವಗಳು. ನನ್ನಮ್ಮ ಬೇಗನೆ ಹೋದಾಗ ನಮಗೆ ಆಸರೆಯಾಗಿದ್ದ ಉಪಹಾರ, ಎಷ್ಟೋ ಸಲ ಊಟ ಕೂಡ ಇವೆರಡೇ. ಅಡಿಗೆ ಮಾಡಿಕೊಳ್ಳಲು ಬೇಜಾರಾದಾಗ ಅಥವಾ ಮಾಡಿದ್ದ ಅಡಿಗೆ ಖಾಲಿಯಾಗಿ ಇನ್ನೂ ತಲೆಯಲ್ಲಿ (ಹೊಟ್ಟೆಯಲ್ಲಿ ಅಲ್ಲ!) ಹಸಿವೆಯಿದೆ ಅಂತನಿಸಿದಾಗ, ಒಬ್ಬರೇ ಇದ್ದಾಗ… ಹೀಗೆ ಹತ್ತು ಹಲವು ಕಾರಣಗಳಿದ್ದಾಗಲೆಲ್ಲ ನಾವು ಖುಷಿಯಿಂದ ತಿಂದಿದ್ದು ಅವಲಕ್ಕಿ. ಅದು ಬಿಟ್ಟರೆ ಉಪ್ಪಿಟ್ಟು. ಎಷ್ಟೇ ತಿಂದರೂ ನಾಲಿಗೆಗೆ ಮತ್ತೆ ಮತ್ತೆ ಬೇಕೇನಿಸುವ ಹಾಗೂ ಹೊಟ್ಟೆ ತುಂಬಿದರೂ ಮನಸ್ಸು ತುಂಬದ ಈ ಅವಲಕ್ಕಿಯ ಸೃಷ್ಟಿಕರ್ತನನ್ನು ನಾನು ಯಾವಾಗಲೂ ನೆನೆಸುತ್ತೇನೆ. ಈಗ ಕೂಡ ನನಗೆ ಮತ್ತೆ ಜೊತೆಯಾಗಿದ್ದು ಇವೆ ಅವಲಕ್ಕಿ ಉಪ್ಪಿಟ್ಟುಗಳು…

ಉಪ್ಪಿಟ್ಟು ತಿಂದು ತೇಗಿ, ಸ್ನಾನ ಆಮೇಲೆ ಮಾಡಿದರಾಯ್ತು ಬನ್ನಿ ಅಂತ ಗಡಿಬಿಡಿಸಿ ನಾಗಣ್ಣ ಅವರನ್ನು ಹೆಚ್ಚು ಕಡಿಮೆ ಎಳೆದುಕೊಂಡು ಹೊರಬಂದು ಮನೆಯ ಬೀಗ ಹಾಕಿದಾಗ ೧೨! ಹೆಗಡೇರು ಹೊರಗೆ ಕುಳಿತು ಕವಳ ಮೆಲ್ಲುತ್ತ ಏನೋ ಕೆಲಸದಲ್ಲಿದ್ದರು… ಎಲ್ಲಿಗೋ ಗುರು ಶಿಷ್ಯರ ಸವಾರಿ ಅಂತ ಕಾಲೆಳೆದರು… ಇಷ್ಟು ತಡವಾಗಿ ಹೊಲಕ್ಕೆ ಹೊರಟಿದ್ದೇವೆ ಎಂಬ ಪಾಪ ಪ್ರಜ್ಞೆಯಿಂದ ಬಳಲುತ್ತಿದ್ದ ನಾನು… ಹೊಲ ನೋಡಿಕೊಂಡು ಬರ್ತೀವಿ ಮಾವ ಅಂತ ಹೇಳಿ, ಕಾರನ್ನು ಶುರು ಮಾಡಿದೆ… ಕಾರಿನ ಹಿಂಬದಿಯಲ್ಲಿ, ಬೆಂಗಳೂರಿನಿಂದ ತಂದಿದ್ದ ಮೂರು ಸಸಿಗಳು “ಈಗಲಾದರೂ ನಮಗೊಂದು ನೆಲೆ ಕಲ್ಪಿಸು ಮಾರಾಯ” ಅಂತ ಅಣಕಿಸುತ್ತಿದ್ದಂತೆ ಕಂಡವು…

(ಮುಂದುವರಿಯುವುದು…)